Tuesday, February 24, 2015

ಹುದುಗಲಾರದ ದುಃಖ............ಬೇಂದ್ರೆಹುದುಗಲಾರದ ದುಃಖ ಹುಗಿದಿರಿಸಿ ನಗೆಯಲ್ಲಿ
          ನಸುನಗುತ ಬಂದೆ ಇದಿರು;
ಇನಿತು ತಿಳಿಯದ ಮೂಢನೆಂದು ಬಗೆದೆಯೆ ನನ್ನ
          ಇದು ಯಾವ ಊರ ಚದುರು?

ಕೈಮುಟ್ಟಿ ಮೈಮುಟ್ಟಿ ನನ್ನ ಮನ ಸಂತೈಸ—
           ಲೆಂದು ಬಗೆವವಳು ನೀನು,
ನಾನದನೆ ಬಯಸುತಿಹ ಸೊಗಸುಗಾರಿಕೆಯವನೆ
           ನಾನೆದೆಯ ಕಟುಕನೇನು?

ಮುಗುಳುನಗೆಯರಳಿಸುತ ಕರಿಯಾಲಿ ಹೊರಳಿಸುತ
           ಸುಳ್ಳುಸುಖ ಮೆರೆಸಬಹುದೆ?
ಮಮತಾಜಳನು ಹುಗಿದು ತಾಜಮಹಲನು ಕಟ್ಟಿ
           ನಿಜದುಃಖ ಮರೆಸಬಹುದೆ?

ಎಲೆಲೆ ಜೀವದ ಗೆಳತಿ ! ನನ್ನೆದೆಯ ಗುಡಿಯಲ್ಲಿ
           ನೀನು ಅಟಮಟಿಸತಿರಲು
ನಿನ್ನ ನಗೆ ಸುಖದ ಹೂವೆಂದು ತಿಳಿಯಲಿ ಹೇಗೆ
           ಅಂತಿಂತು ನಟಿಸುತಿರಲು?
……………………………………………………………………….
ವರಕವಿ ಬೇಂದ್ರೆಯವರ ಜೀವನದಲ್ಲಿ ಬಂದ ಪರಿತಾಪಗಳು ಅಷ್ಟಿಷ್ಟಲ್ಲ. ಅವರ ಐದು ಮಕ್ಕಳು ಶಿಶುಮರಣವನ್ನಪ್ಪಿದರು. ಈ ಆಘಾತಗಳನ್ನು ಸಹಿಸುವುದು ಹೇಗೆ?  ಇಂತಹ ಸಂದರ್ಭದಲ್ಲಿ ಗಂಡಹೆಂಡಿರು ತಮ್ಮ ದುಃಖವನ್ನು ಮರೆಮಾಚುತ್ತ ಪರಸ್ಪರರನ್ನು ಸಂತೈಸುವ ಪ್ರಯತ್ನ ಮಾಡುವುದು ಸಹಜ. ಬೇಂದ್ರೆಯವರ ಹೆಂಡತಿಯು ತನ್ನ ದುಃಖವನ್ನು ಮರೆಮಾಚಿ, ತನ್ನ ಗಂಡನನ್ನು ಸಮಾಧಾನಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಕಣ್ಣಿಗೆ ಮರೆಯಾದದ್ದು ಹೃದಯಕ್ಕೆ ಕಾಣದಿದ್ದೀತೆ? ಅಂತೆಯೇ ಬೇಂದ್ರೆ ತಮ್ಮ ಹೆಂಡತಿಗೆ ಕೇಳುತ್ತಾರೆ:
ಹುದುಗಲಾರದ ದುಃಖ ಹುಗಿದಿರಿಸಿ ನಗೆಯಲ್ಲಿ
          ನಸುನಗುತ ಬಂದೆ ಇದಿರು;
ಇನಿತು ತಿಳಿಯದ ಮೂಢನೆಂದು ಬಗೆದೆಯೆ ನನ್ನ
          ಇದು ಯಾವ ಊರ ಚದುರು?
ಈ ದುಃಖ ಹುದುಗಲಾರದ್ದು; ಅಂದರೆ ಎಷ್ಟೇ ಪ್ರಯತ್ನಿಸಿದರೂ ಇದನ್ನು ಅದುಮಿ ಇಡಲು ಸಾಧ್ಯವಾಗದು. ಅಂತಹ ದುಃಖವನ್ನು ಬೇಂದ್ರೆಯವರ ಪತ್ನಿ ತನ್ನ ನಸುನಗುವಿನಲ್ಲಿ ಹುಗಿದು ಹಾಕಿ ತನ್ನ ಗಂಡನನ್ನು ಸ್ವಾಗತಿಸುತ್ತಿದ್ದಾರೆ. ಆದರೆ ಪತ್ನಿಯ ಅಂತರಂಗವನ್ನು ಅರಿಯದಷ್ಟು ಆತ ಪರಕೀಯನೆ ಅಥವಾ ಶತದಡ್ಡನೆ? ಆದುದರಿಂದಲೇ ಅವರು ತಮ್ಮ ಹೆಂಡತಿಗೆ ಕೇಳುತ್ತಾರೆ: ‘ಈ ಜಾಣತನವನ್ನು ಎಲ್ಲಿಂದ ಕಲಿತೆ?’

ಬರಿಯ ಮಾತಿನಿಂದ ತನ್ನ ಗಂಡನನ್ನು ಸಮಾಧಾನಗೊಳಿಸಲು ಸಾಧ್ಯವಿಲ್ಲ ಎನ್ನುವುದನ್ನು ಅರಿತ ಹೆಂಡತಿಯು, ಆತನ ಹತ್ತಿರ ಹೋಗಿ, ಆತನ ಮೈ-ಕೈ ಮುಟ್ಟಿ ಸಾಂತ್ವನಗೊಳಿಸುವುದು ಸಹಜವಷ್ಟೇ? ಕೆಲವು ಗಂಡಸರು ಸ್ತ್ರೀಸ್ಪರ್ಶದಿಂದ ಕರಗಿ ಹೋಗುತ್ತಾರೆ. ಆದರೆ ಸ್ತ್ರೀಸಾಮೀಪ್ಯವು ತನ್ನ ಸಂಕಟವನ್ನು ಕರಗಿಸಲು ಬೇಂದ್ರೆಯವರು ‘ಸೊಗಸುಗಾರ ಪುಟ್ಟಸ್ವಾಮಿ’ ಅಲ್ಲವಲ್ಲ! ಅವರು ತಮ್ಮ ಹೆಂಡತಿಯ ಅಳಲಿಗೆ ಮಿಡಿಯುವ ಅಂತಃಕರಣಮಯಿ ಗಂಡನಲ್ಲವೆ? ಅದನ್ನು ಅವರು ಹೇಳುವುದು ಹೀಗೆ:
ಕೈಮುಟ್ಟಿ ಮೈಮುಟ್ಟಿ ನನ್ನ ಮನ ಸಂತೈಸ—
        ಲೆಂದು ಬಗೆವವಳು ನೀನು,
ನಾನದನೆ ಬಯಸುತಿಹ ಸೊಗಸುಗಾರಿಕೆಯವನೆ
        ನಾನೆದೆಯ ಕಟುಕನೇನು?

ತಮಗೊಂದು ಕೂಸು ಇದ್ದದ್ದು ಕೇವಲ ಒಂದು ಕನಸು; ತನಗೆ  ಪುತ್ರಶೋಕವು ಆಗಿಯೇ ಇಲ್ಲ ಎನ್ನುವ ಭ್ರಮೆಯನ್ನು ಹುಟ್ಟಿಸುವಂತೆ, ಬೇಂದ್ರೆಯವರ ಹೆಂಡತಿ ಅಭಿನಯ ಮಾಡುತ್ತಾರೆ. ಮುಖದ ಮೇಲೆ ಮಂದಹಾಸ ತರುತ್ತಾರೆ, ತಮ್ಮ ಬಟ್ಟಲುಗಣ್ಣುಗಳನ್ನು ಓಲಾಡಿಸುತ್ತಾರೆ.

(ಬೇಂದ್ರೆಯವರ ಹೆಂಡತಿಗೆ ವಿಶಾಲವಾದ ಕಪ್ಪು ಕಣ್ಣುಗಳು ಇದ್ದವೇನೊ? ಅವರ ಮತ್ತೊಂದು ಕವನ ‘ನೀ ಹೀಂಗ ನೋಡಬ್ಯಾಡ ನನ್ನ’ ಕವನದಲ್ಲೂ ಸಹ ಅವರು ತಮ್ಮ ಹೆಂಡತಿಯ ಕಣ್ಣುಗಳನ್ನು ಹೀಗೆ ವರ್ಣಿಸಿದ್ದಾರೆ:
‘ಇಬ್ಬನ್ನಿ ತೊಳೆದರೂ ಹಾಲು ಮೆತ್ತಿದಾ ಕವಳಿಕಂಟಿಯಾ ಹಣ್ಣು
ಹೊಳೆಹೊಳೆವ ಹಾಂಗ ಕಣ್ಣಿರುವ ಹೆಣ್ಣ, ಹೇಳು ನಿನ್ನವೇನ ಈ ಕಣ್ಣು?’)

ಆದರೆ ಈ ನಟನೆಯ ಹಿಂದಿನ ಸಂಕಟ ಬೇಂದ್ರೆಯವರಿಗೆ ಅರ್ಥವಾಗದಿದ್ದೀತೆ?  ಆ ಸಮಯದಲ್ಲಿ ಅವರ ಹೃದಯದಿಂದ ಬಂದ ನುಡಿಯೊಂದು ಕನ್ನಡ ಕಾವ್ಯದ ಶ್ರೇಷ್ಠ ಉಪಮೆಯಾಗಿ ಹೊರಹೊಮ್ಮಿದೆ:
ಮುಗುಳುನಗೆಯರಳಿಸುತ ಕರಿಯಾಲಿ ಹೊರಳಿಸುತ
        ಸುಳ್ಳುಸುಖ ಮೆರೆಸಬಹುದೆ?
ಮಮತಾಜಳನು ಹುಗಿದು ತಾಜಮಹಲನು ಕಟ್ಟಿ
        ನಿಜದುಃಖ ಮರೆಸಬಹುದೆ?

‘ಉಪಮಾ ಕಾಲಿದಾಸಸ್ಯ’ ಎಂದು ಹೇಳುತ್ತಾರೆ. ಕಾಲೀದಾಸನು ಒಂದು ವಸ್ತುವನ್ನು ಮತ್ತೊಂದು ವಸ್ತುವಿಗೆ ಹೋಲಿಸುವಾಗ ಸಮುಚಿತವಾದ ಉಪಮೆಗಳನ್ನು ಕೊಟ್ಟಿರಬಹುದು. ಆದರೆ ಬೇಂದ್ರೆಯವರ ಈ ಉಪಮೆಯಲ್ಲಿ ಕೇವಲ ಹೋಲಿಕೆ ಇಲ್ಲ; ಇಲ್ಲಿರುವುದು ಅಳಲಿನ ಆಕ್ರಂದ. ಉಪಮೆಯನ್ನು ಭಾವಾಭಿವ್ಯಕ್ತಿಯ ಮಾಧ್ಯಮವನ್ನಾಗಿ ಬಳಸುವ ಈ ಪ್ರತಿಭೆ ಬೇಂದ್ರೆಯವರಲ್ಲಿ ಮಾತ್ರ ಕಾಣಲು ಸಾಧ್ಯ.
[ಅವರ ಮತ್ತೊಂದು ಕವನ ಚಿಗರಿಗಂಗಳಚೆಲುವಿಯಲ್ಲಿಯೂ ಇಂತಹದೇ ಸಾಮರ್ಥ್ಯವನ್ನು ನೋಡಬಹುದು:
ಆಳುಗಳ ಹೋರಾಟ
ಆಳುವವರಿಗೆ ಆಟ
ಗಾಳಕ್ಕ ಸಿಕ್ಕ ಮೀನದ ಗೋಳಾಟೊ
ಗೆಣೆಯಾ ಗೋಳಾಟೋ
ಗೆದ್ದವರ ಇದ್ದವರ ಹಾರಾಟ;
ಅರೆಸತ್ತ ಜೀವಾ ಕೊಳೆತಾsವೊ
ಹುಳತಾsವೊ
ಅಳತಾsವೋ
ಹಸುಗೂಸು ತಿರುಗಿ ಹೊಟ್ಟ್ಯಾಗ ಹುಗಿಧ್ಹಾಂಗ
ಕೊನೆಯ ಸಾಲಿನಲ್ಲಿ ಇರುವ ಈ ಉಪಮೆಯನ್ನು ನೋಡಿರಿ. ಈ ಉಪಮೆಯೂ ಸಹ ಒಂದು ಕ್ರಿಯೆಯನ್ನು ಸೂಚಿಸುತ್ತ, ಕವನದ ಭಾವಕ್ಕೆ ಮಾಧ್ಯಮವಾಗಿದೆ.]

ಬೇಂದ್ರೆಯವರ ಹೆಂಡತಿಗೆ ಅವರ ಅಂತರಂಗದಲ್ಲಿ ಅತ್ಯುಚ್ಚ ಸ್ಥಾನವಿದೆ. ಅವಳು ಅವರಿಗೆ ಜೀವದ ಗೆಳತಿ; ಅವಳು ಅವರ ಗೃಹಲಕ್ಷ್ಮಿ; ಅವಳ ಸ್ಥಾನವು ದೇವರಿಗೆ ಹತ್ತಿರವಾದ ಸ್ಥಾನ. ಅಂದ ಮೇಲೆ ತಮ್ಮ ಹೃದಯದಲ್ಲಿ ನೆಲೆ ನಿಂತ ಅವಳ ಅಳಲು ಅವರಿಗೆ ತಿಳಿಯದಿದ್ದೀತೆ?
ಎಲೆಲೆ ಜೀವದ ಗೆಳತಿ ! ನನ್ನೆದೆಯ ಗುಡಿಯಲ್ಲಿ
        ನೀನು ಅಟಮಟಿಸತಿರಲು
ನಿನ್ನ ನಗೆ ಸುಖದ ಹೂವೆಂದು ತಿಳಿಯಲಿ ಹೇಗೆ
        ಅಂತಿಂತು ನಟಿಸುತಿರಲು?
‘ನಿನ್ನ ನಗೆ ಕೇವಲ ವೇಷಧಾರಿ, ಅದು ಸುಖದಲ್ಲಿ ಅರಳಿದ ಹೂವಲ್ಲ’ ಎಂದು ಬೇಂದ್ರೆ ತಮ್ಮ ಹೆಂಡತಿಯು ತಮಗಾಗಿ  ಮಾಡುತ್ತಿರುವ ನಟನೆಗಾಗಿ ಮರಗುತ್ತಾರೆ. ಇಲ್ಲಿ ‘ಅಂತಿಂತು’ ಎನ್ನುವ ಪದವನ್ನು ಗಮನಿಸಬೇಕು. ‘ಅನೇಕ ವಿಧಗಳಲ್ಲಿ ಆದರೆ ನಿರರ್ಥಕವಾದ’ ಎನ್ನುವ ವಿಸ್ತಾರಿತ ಅರ್ಥವನ್ನು ಈ ಪದವು ಇಲ್ಲಿ ನೀಡುತ್ತದೆ. ಸಾಮಾನ್ಯ ಪದಗಳನ್ನು ಬಳಸುತ್ತಲೇ ಅಸಾಮಾನ್ಯ ಅರ್ಥವನ್ನು ಹೊಮ್ಮಿಸುವ ಬೇಂದ್ರೆ-ಪ್ರತಿಭೆ ಇದು. ಇಂತಹ ಪದಗಳನ್ನು ಬೇಂದ್ರೆಯವರ ಕವನಗಳಲ್ಲಿ ನಾವು ಸಾಮಾನ್ಯವಾಗಿ ಕಾಣುತ್ತಲೇ ಇರುತ್ತೇವೆ.
ಈ ಕವನದ ನಾಲ್ಕೂ ನುಡಿಗಳು ಪ್ರಶ್ನೆಗಳಲ್ಲಿ ಕೊನೆಗೊಳ್ಳುವುದನ್ನು ಗಮನಿಸಬೇಕು.
‘ಹುದುಗಲಾರದ ದುಃಖ’ ಕವನವು  ಬೇಂದ್ರೆಯವರ ‘ಗರಿ’ ಕವನಸಂಕಲನದಲ್ಲಿ ಅಡಕವಾಗಿದೆ.
………………………………………………………………………….
ತಮ್ಮ ತಾಪ, ಸಂತಾಪಗಳನ್ನೆಲ್ಲ ಬೇಂದ್ರೆ ಕಾವ್ಯವಾಗಿ ಪರಿವರ್ತಿಸಿದರು. ತಮ್ಮ ‘ಸಖೀಗೀತ’ದಲ್ಲಿ ಬೇಂದ್ರೆ ಹೀಗೆ ಹಾಡಿದ್ದಾರೆ:
ಇರುಳು-ತಾರೆಗಳಂತೆ ಬೆಳಕೊಂದು ಮಿನುಗುವುದು
ಕಳೆದ ದುಃಖಗಳಲ್ಲಿ ನೆನೆದಂತೆಯೆ
ಪಟ್ಟ ಪಾಡೆಲ್ಲವು ಹುಟ್ಟು-ಹಾಡಾಗುತ
ಹೊಸವಾಗಿ ರಸವಾಗಿ ಹರಿಯುತಿವೆ

ತಮ್ಮ ಕಾವ್ಯವನ್ನು ಆಸ್ವಾದಿಸುವ ಸಹೃದಯರಿಂದ ಬೇಂದ್ರೆ ಕೇಳುವುದು ಇಷ್ಟೇ:
ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ
ನೀಡುವೆನು ರಸಿಕ ನಿನಗೆ
ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ
ಆ ಸವಿಯ ಹಣಿಸು ನನಗೆ.

20 comments:

Unknown said...

Nice one...!!!


Could you please once go through ammanahaadugalu.blogspot.com and share your suggestions.

Thanks in Advance

sunaath said...

Thank you, Hegde Sir. I visited the blog ammana hadugau and found it interesting. Please publish more poems.

Badarinath Palavalli said...

ಮನಸು ಕಾಳುಕಿ ಹಾಕಿದ ಬೇಂದ್ರೆ ಅವರ ಕವನವಿದು.
ಒಂದಲ್ಲ ಎರಡಲ್ಲ ಐದು ಶಿಶು ಮರಣಗಳನ್ನು ತಾಳಿಕೊಂಡ ಆ ದಂಪತಿಗಳ
ಮನೋಧೈರ್ಯಕ್ಕೆ ನಮ್ಮ ಶರಣು.
ಇಲ್ಲಿನ ಪ್ರತಿ ಸಾಲಿನಲ್ಲೂ ಅನನ್ಯ ದಾಂಪತ್ಯದ ಪರಮ ಬೋಧನೆ ಕಾಣುವುದು.
ಉಪಮೆ ಬಳಕೆಯ ಒಳ್ಳೆಯ ಉದಾಹರಣೆಯೂ ಈ ಕವಿತೆ.

ಸಿಂಧು sindhu said...

ಪ್ರಿಯ ಕಾಕಾ
ಈ ಕವಿತೆ ತುಂಬ ಕಲಕುತ್ತದೆ.
ಹಳೀಬಂಡಿಯವರ ದನಿಯಲ್ಲಿ ಈ ಹಾಡು ಕೂಡಾ ಕೇಳಿರುವೆ. ಚುರ್ರನಿಸುತ್ತದೆ ಕೇಳಿದಾಗ.
ತನ್ನ ಹಾಗೆಯೇ ನೊಂದ ಸಂಗಾತಿ ಮತ್ತೆ ನೋಯದಿರಲಿ ಎಂದು ಸೋಗು ಹೊದ್ದು ನಗುವ ಹೆಂಡತಿ
ಅವಳ ನಗೆಯ ಅಂತರಾಳ ಗೊತ್ತಿದ್ದೇ ಸಮಾಧಾನಿಸುವ ಪತಿ.. ಈ ದಾಂಪತ್ಯ ಸಹಯೋಗದ ಚಿತ್ರಣ ಇಲ್ಲಿ ಕಣ್ಣು ಕಟ್ಟುವ ಹಾಗೆ ಬಂದಿದೆ.
ಆ ಪತಿ ಕವಿಯಾದ್ದರಿಂದ, ಅದರಲ್ಲೂ ವರಕವಿಯಾದ್ದರಿಂದ ಈ ಚಿತ್ರಣ ಗಾಢವೂ ಕಲಕುವಂತದೂ ಆಗಿ ಮೂಡಿದೆ.
ನಮ್ಮ ಸಮಾಜದ ಸಹೃದಯ ದಾಂಪತ್ಯಗಳ ಪ್ರತಿಫಲನ ಇಲ್ಲಿದೆ.
ಈ ಕವಿತೆಯ ಬಗ್ಗೆ ಬರೆದದ್ದಕ್ಕೆ ವಂದನೆಗಳು.
ಪ್ರೀತಿಯಿಂದ, ಸಿಂಧು

ಮಂಜುಳಾದೇವಿ said...

ದಾಂಪತ್ಯ ಜೀವನದಲ್ಲಿ ಗಂಡ - ಹೆಂಡಿರ ನಡುವೆ ಈ ರೀತಿಯ ನಾಟಕಗಳು ಕೆಲವೊಮ್ಮೆ ಅನಿವಾರ್ಯ . ..! ಆದರೆ ತನ್ನ ಸಂಗಾತಿಗೆ ನಿಜದ ಅರಿವಿದೆ ಎಂಬುದೂ ಸಹ ಆಕೆಗೆ ತಿಳಿದಿದೆ. ಅರ್ಥಪೂರ್ಣ ಕವಿತೆ ...ಧನ್ಯವಾದಗಳು ಸಾರ್...

sunaath said...

ಬದರಿನಾಥರೆ,
ಐದು ಶಿಶುಗಳನ್ನಲ್ಲದೆ, ಇಪ್ಪತ್ತು ವರ್ಷ ತುಂಬಿದ ಒಬ್ಬ ಮಗನನ್ನೂ ಬೇಂದ್ರೆ ದಂಪತಿಗಳು ಕಳೆದುಕೊಂಡಿದ್ದಾರೆ. ಉಳಿದವರು ಮೂರು ಮಾತ್ರ.

sunaath said...

ಸಿಂಧು,
ದುಃಖವು ದಾಂಪತ್ಯದ ಬೆಸುಗೆಯನ್ನು ಗಟ್ಟಿಗೊಳಿಸುತ್ತದೆ ಏನೋ! ತಮ್ಮ ಪತ್ನಿ ತೀರಿಕೊಂಡಾಗ ಬೇಂದ್ರೆಯವರು ಬರೆದ ‘ಹೋದ ಬುಧವಾರಾ ಬರsವಲ್ದು’ ಕವನವು, ಬೇಂದ್ರೆಯವರಿಗೆ ತಮ್ಮ ಪತ್ನಿಯ ಬಗೆಗಿದ್ದ ಗಾಢ ಪ್ರೇಮವನ್ನು ದರ್ಶಿಸುತ್ತದೆ.

sunaath said...

ಮಂಜುಳಾದೇವಿಯವರೆ,
ದಾಂಪತ್ಯವೇ ಒಂದು ನಾಟಕ! ನಾಟಕ ಸುಖಾಂತವಾಗಲಿ ಎನ್ನುವುದಷ್ಟೇ ನಮ್ಮ ಹಾರೈಕೆ!

Badarinath Palavalli said...

ದೇವರೇ! :-(

Swarna said...

ಕಾಕಾ ,
'ಹುದುಗಲಾರದ ದುಃಖ' ಶೀರ್ಷಿಕೆಯಲ್ಲಿಯೇ ಗಾಢವಾದ ವಿಷಾದವಿದೆ.'ಸುಳ್ಳುಸುಖ ಮೆರೆಸಬಹುದೆ?... ' 'ನಿಜದುಃಖ ಮರೆಸಬಹುದೆ..' ಎಂಥಾ ಸಾಲುಗಳು ! ತಿಳಿಸಿಕೊಟ್ಟದ್ದಕ್ಕಾಗಿ ವಂದನೆಗಳು
ಸ್ವರ್ಣಾ

sunaath said...

ಸ್ವರ್ಣಾ,
ಇಡೀ ಕವನವೇ ಒಂದು ದೀರ್ಘವಾದ ಬಿಸಿಯುಸಿರಾಗಿದೆ.
ಆ ದಂಪತಿಗಳ ಮನಸ್ಸು ಹೇಗೆ ತಂಪಾಗುತ್ತಿತ್ತೊ? ಕಾಲವೇ ಇದಕ್ಕೆ ಮದ್ದು.

ಅಪ್ಪ-ಅಮ್ಮ(Appa-Amma) said...

ಸುನಾಥ್ ಕಾಕಾ,

ಬೇಂದ್ರೆಯವರ ಮತ್ತೊಂದು ಅಮೋಘ ಕವನದ ಆಳವಾದ ವಿವರಣೆಗೆ ಧನ್ಯವಾದಗಳು.

ಸುಖ ಮತ್ತು ದುಃಖದ ಗಳಿಗೆಗಳನ್ನು ಬೇಂದ್ರೆ ಅಜ್ಜನ ರೀತಿ ಕವನದ ರೂಪಕ್ಕೆ ತಂದಿದ್ದು ಬೇರೆ ಭಾಷೆಗಳಲ್ಲಿ ಕಂಡಿದ್ದು ಅಪರೂಪ. ಅದಕ್ಕೆ ಅವರು ನಮ್ಮ ಹೆಮ್ಮೆಯ ವರಕವಿ.

sunaath said...

ಅಪ್ಪ-ಅಮ್ಮ,
ಬೇಂದ್ರೆಯವರ ಸುಖ ಹಾಗು ದುಃಖಗಳು ನಮಗೆ ಕಾವ್ಯವನ್ನು ಕೊಟ್ಟರೆ, ಸ್ವತಃ ಅವರಿಗೆ ಬದುಕಿನ ತತ್ವಜ್ಞಾನವನ್ನು ನೀಡಿತು. ಅಂತೆಯೇ ಅವರು ಹೇಳುತ್ತಾರೆ:
‘ಸುಖ, ದುಃಖ ಸಂಗಮವಾದ ಹೃದ್ರಂಗವು ಪಾವನವೆಂಬೆನೆ ಯಾವಾಗಲೂ.’

Kalavatimadhisudan said...

kaavya dande kaavya vimarsheyu manakalakuvudu.sunaath sir.

sunaath said...

ಕಲಾವತಿಯವರೆ,
ನಿಮ್ಮ ಸ್ಪಂದನಕ್ಕಾಗಿ ಧನ್ಯವಾದಗಳು.

avyaktalakshana said...

ಅಳು ನುಂಗಿ ನಗುವ ಆಕೆ, ಅವಳ ನಗುವಿನಾಳದ ನೋವ ಬಲ್ಲ ಈತ...ಅದು ಬರಿಯ ಕಾಟಾಚಾರದ ದಾಂಪತ್ಯವಲ್ಲ. ದಾಂಪತ್ಯಸ್ನೇಹ. ಬೇಂದ್ರೆಯವರ ಕಾವ್ಯಸಮುದ್ರ ಬಗೆದಷ್ಟೂ ಆಳ, ಆದರೆ ನಿಮ್ಮ ನಿರೂಪಣೆಯೊಂದಿಗೆ ಸರಳ, ಸುಲಲಿತ. ಧನ್ಯವಾದಗಳು ಸರ್. ಪ್ರಜ್ಞಾ

sunaath said...

ಪ್ರಜ್ಞಾ,
ನಿಮಗೂ ಧನ್ಯವಾದಗಳು.

Unknown said...

ಧನ್ಯಾವದಗಳು

VISHWANATH MALLANNA said...

ಧನ್ಯವಾದಗಳೊಂದಿಗೆ , ನಿಮಗೆ ಕೋಟಿ ಕೋಟಿ ನಮಸ್ಕಾರಗಳು, ಬೇಂದ್ರೆಯವರಿಗೆ ಬೇಂದ್ರೆಯವರೆ ಸಾಟಿಯಾಗಬಲ್ಲರು.

sunaath said...

ಧನ್ಯವಾದಗಳು, ವಿಶ್ವನಾಥರೆ.