Tuesday, March 31, 2015

ಭಾಷೆಯ ಕೊಲೆಗಡುಕರು


ನಮ್ಮ ಕನ್ನಡ ಟೀವಿ ಚಾನೆಲ್‍ಗಳಿಗೆ ಏನಾಗಿದೆ? ಅಶುದ್ಧ ಉಚ್ಚಾರ, ಅಶುದ್ಧ ಬರಹ ಹಾಗು ಅಶುದ್ಧ ವ್ಯಾಕರಣಗಳು ಈ ಚಾನೆಲ್‍ಗಳಲ್ಲಿ ಮಾಮೂಲು ಸಂಗತಿಯಾಗಿವೆ. ಈಗೀಗ ಅಶುದ್ಧ ಪದಪ್ರಯೋಗಗಳನ್ನೂ ಈ ಚಾನೆಲ್‍ಗಳು ಧಾರಾಳವಾಗಿ ಮಾಡುತ್ತಿವೆ. ನನ್ನ ಕಣ್ಣಿಗೆ ಬಿದ್ದ ಒಂದು ಉದಾಹರಣೆಯನ್ನು ಇಲ್ಲಿ ಕೊಡುತ್ತಿದ್ದೇನೆ:

ಇತ್ತೀಚೆಗೆ ಅಸ್ವಾಭಾವಿಕವಾಗಿ ನಿಧನರಾದ, ಭಾರತೀಯ ಆಡಳಿತ ಸೇವೆಯ ಶ್ರೀ ರವಿ ಇವರ ಪ್ರಕರಣವನ್ನು ಸಿ.ಬಿ.ಆಯ್.ಗೆ ಒಪ್ಪಿಸಬೇಕೆನ್ನುವ ಬೇಡಿಕೆಯನ್ನು ವಿರೋಧಪಕ್ಷದ ಶಾಸಕರು ವಿಧಾನಸಭೆಯಲ್ಲಿ ಮಂಡಿಸಿದಾಗ, ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳಾದ ಸಿದ್ಧರಾಮಯ್ಯನವರು ಈ ಬೇಡಿಕೆಯನ್ನು ಒಪ್ಪಿಕೊಳ್ಳಲಿಲ್ಲ. ಕನ್ನಡದ ಒಂದು ಟೀವಿ ಚಾನೆಲ್ ಈ ಸಮಾಚಾರಕ್ಕೆ ಕೊಟ್ಟ ಅಡಿಬರಹ ಹೀಗಿತ್ತು: ‘ಸಿದ್ದರಾಮಯ್ಯನವರು  ಸಿ.ಬಿ.ಆಯ್  ಬೇಡಿಕೆಯನ್ನು ನಿರಾಕರಿಸಿದರು.’

ವಾಸ್ತವದಲ್ಲಿ, ಮುಖ್ಯ ಮಂತ್ರಿಗಳು ಏನನ್ನೂ ನಿರಾಕರಿಸಿಲ್ಲ. ಅವರು ಸಿ.ಬಿ.ಆಯ್‍ಗೆ ರವಿ-ಪ್ರಕರಣವನ್ನು ಒಪ್ಪಿಸಬೇಕೆನ್ನುವ ಬೇಡಿಕೆಯನ್ನು ತಿರಸ್ಕರಿಸಿದ್ದಾರೆ, ಅಷ್ಟೇ! ಈ ಚಾನೆಲ್‍ಗೆ ನಿರಾಕರಣೆ ಹಾಗು ತಿರಸ್ಕಾರ ಈ ಎರಡು ಪದಗಳ ಅರ್ಥವ್ಯತ್ಯಾಸ ತಿಳಿಯದು. ನಿರಾಕರಿಸುವುದು ಅಂದರೆ denying; ತಿರಸ್ಕರಿಸುವುದು ಎಂದರೆ rejecting. ಇದನ್ನು ಸ್ಪಷ್ಟ ಪಡಿಸಲು ಒಂದು ಕಾಲ್ಪನಿಕ ಉದಾಹರಣೆಯನ್ನು ನೋಡೋಣ:

ನ್ಯಾಯಾಲಯದಲ್ಲಿ ನ್ಯಾಯಾಧೀಶರು ಆರೋಪಿಯನ್ನು ಕೇಳುತ್ತಿದ್ದಾರೆ:
“ನಿಮ್ಮ ಮೇಲಿನ ಕಳ್ಳತನದ ಆರೋಪವನ್ನು ನೀವು ಒಪ್ಪಿಕೊಳ್ಳುತ್ತೀರಾ?”
ಆರೋಪಿತ: “ನಾನು ಕಳ್ಳತನದ ಆರೋಪವನ್ನು ನಿರಾಕರಿಸುತ್ತೇನೆ.” (I deny the charges of theft).
ನ್ಯಾಯಾಧೀಶರು ವಕೀಲರಿಗೆ:  “ I reject your argument.”
(ನಾನು ನಿಮ್ಮ ವಾದವನ್ನು ತಿರಸ್ಕರಿಸುತ್ತೇನೆ.)

ಕನ್ನಡದಲ್ಲೇ ಇಂತಹ ತಪ್ಪುಗಳನ್ನು ಮಾಡುವವರು ಇಂಗ್ಲೀಶಿನಲ್ಲಿ ಮಾಡದಿರುತ್ತಾರೆಯೆ? ಇಂಗ್ಲೀಶಿನ suspect ಹಾಗು doubt ಪದಗಳನ್ನು ಕನ್ನಡಿಗರು ಬೇಕಾಬಿಟ್ಟಿಯಾಗಿ ಬಳಸುವ ಒಂದು ಉದಾಹರಣೆಯನ್ನು ಇಲ್ಲಿ ಕೊಡುವುದು ಅಪ್ರಸ್ತುತವಾಗಲಾರದು.

ಕನ್ನಡಿಗ: ಈತನೇ ಕಳ್ಳತನ ಮಾಡಿದ್ದಾನೆ. ಈತನ ಮೇಲೆ ನನಗೆ full doubt ಇದೆ.
ವಾಸ್ತವದಲ್ಲಿ ನಮ್ಮ ಕನ್ನಡಿಗನಿಗೆ ಇದ್ದದ್ದು suspicionಏ ಹೊರತು doubt ಅಲ್ಲ. ಕನ್ನಡದಲ್ಲಿ suspicion ಹಾಗು doubt ಎರಡಕ್ಕೂ ಸಂಶಯ ಎನ್ನುವ ಪದವನ್ನೇ ಬಳಸುವುದರಿಂದ ನಮ್ಮ ಕನ್ನಡಿಗನು ಇಂತಹ ತಪ್ಪು ಪ್ರಯೋಗಗಳನ್ನು ಮಾಡುತ್ತಾನೆ. ಈತನ ಮಾತನ್ನು ಕೇಳುತ್ತಿರುವ ಇಂಗ್ಲೀಶರವನಿಗೆ ಅನೇಕ doubts ಬರುವುದು ಸಹಜ!

(ಶ್ರೀ ಶಿವಪ್ರಕಾಶರು doubt ಎನ್ನುವ ಪದಕ್ಕೆ ‘ಸಂದೇಹ’ ಎನ್ನುವುದು ಸರಿಯಾದ ಪದ ಎಂದು ಸೂಚಿಸಿದ್ದಾರೆ. ಇದು doubt ಎನ್ನುವ ಪದದ ಮತ್ತೊಂದು ಅರ್ಥವಾಗುತ್ತಿದ್ದು, ಈ ವಿವರಣೆಗಾಗಿ ನಾನು ಶ್ರೀ ಶಿವಪ್ರಕಾಶರಿಗೆ ಕೃತಜ್ಞನಾಗಿದ್ದೇನೆ. Doubt ಪದವನ್ನು ಈ ಅರ್ಥದಲ್ಲಿ ಬಳಸುವ ಸಂದರ್ಭದ ಉದಾಹರಣೆ:
ಅಧ್ಯಾಪಕರು: Any doubts? = ಏನಾದರೂ ಸಂದೇಹಗಳು ಇವೆಯೆ?)

ಇಂಗ್ಲೀಶಿನ ಇನ್ನೂ ಕೆಲವು ಪದಗಳನ್ನು ಕನ್ನಡಿಗರು ಬೇಕಾಬಿಟ್ಟಿಯಾಗಿ ಬಳಸುತ್ತಾರೆ. ಉದಾಹರಣೆಗೆ beside ಮತ್ತು besides. Beside ಎಂದರೆ ಪಕ್ಕದಲ್ಲಿ ಅನ್ನುವ ಅರ್ಥ. ಉದಾಹರಣೆಗೆ There is a tree beside the temple. ಇನ್ನು besides ಎಂದರೆ ‘ಅದೂ ಅಲ್ಲದೆ’ ಎನ್ನುವ ಅರ್ಥವನ್ನು ಕೊಡುತ್ತದೆ. ಉದಾಹರಣೆಗೆ He is a gambler. Besides he is an alcoholic!

Be ಎನ್ನುವುದು ಒಂದು ಪ್ರತ್ಯಯ. Beside ಎಂದರೆ by the side of ಎಂದಾಗುತ್ತದೆ. ಇದರಂತೆಯೆ, behind ಎಂದರೆ by the hind of, before ಎಂದರೆ by the fore of, beneath ಎಂದರೆ by the neath of ಎಂದೆಲ್ಲ ಪದಗಳ ಹೃಸ್ವೀಕರಣವು ಇಂಗ್ಲೀಶಿನಲ್ಲಿ ಆಗಿದೆ.

ಇಂಗ್ಲೀಶಿನ truth ಹಾಗು reality ಪದಗಳನ್ನು ಕನ್ನಡಿಗರು ತಿರುವು ಮುರುವಾಗಿ ಉಪಯೋಗಿಸಿದ ಸಂದರ್ಭಗಳನ್ನು ನಾನು ನೋಡಿದ್ದೇನೆ. Truth ಎಂದರೆ ಸತ್ಯ. Reality ಎಂದರೆ ವಾಸ್ತವತೆ. ಈ ಪದಗಳ ಉದಾಹರಣೆಗಳು ಹೀಗಿವೆ:
God’s existence is truth; we can not see him is reality.

ಅನುಮಾನ ಎನ್ನುವ ಪದದ ಅರ್ಥ ತರ್ಕಸಿದ್ಧ ಎಂದಾಗುತ್ತದೆ. ಉದಾಹರಣೆಗೆ ‘ಹೊಗೆ ಇದ್ದಲ್ಲಿ ಬೆಂಕಿ ಇರುತ್ತದೆ’ ಎನ್ನುವುದು ಅನುಮಾನ ಅರ್ಥಾತ್ ತರ್ಕ. ಆದರೆ ಈ ಪದವನ್ನು ಅನೇಕರು ಋಣಾತ್ಮಕವಾಗಿ, ಸಂಶಯಾತ್ಮಕವಾಗಿ ಬಳಸುತ್ತಾರೆ. ಉದಾಹರಣೆಗೆ, ‘ಆತ ಹೊತ್ತಿಗೆ ಸರಿಯಾಗಿ ಬರುತ್ತಾನೆ ಎನ್ನೋದು ನನಗೇನೋ ಅನುಮಾನ ಕಣಯ್ಯ!’ ಇದು ತಪ್ಪು ಪ್ರಯೋಗ.

ಇದರಂತೆ ಭೇದ ಹಾಗು ಬೇಧ ಎನ್ನುವ ಪದಗಳ ವ್ಯತ್ಯಾಸವನ್ನು ಪರೀಕ್ಷಿಸೋಣ. ವಾಸ್ತವದಲ್ಲಿ ಬೇಧ ಎನ್ನುವ ಪದವು ಸಂಸ್ಕೃತದಲ್ಲಿ ಇಲ್ಲ; ಭೇದ ಎನ್ನುವ ಪದ ಇದೆ. ಭೇದ ಪದದ ಅರ್ಥವು ಬೇರ್ಪಡಿಸು, ಭಿನ್ನತೆ, penetrate ಎಂದೆಲ್ಲ ಆಗುತ್ತದೆ. ಆದರೆ ಸಂಸ್ಕೃತದಲ್ಲಿ ವೇಧ ಎನ್ನುವ ಪದವಿದ್ದು, ಇದರ ಅರ್ಥವೂ ಸಹ penetrate ಎಂದೇ ಆಗುತ್ತದೆ. ಇದೀಗ ನಾವು ‘ಕರ್ಣಭೇದ ಹಾಗು ಕರ್ಣವೇಧ’ ಎನ್ನುವ ಪದಗಳನ್ನು ಪರೀಕ್ಷಿಸೋಣ. ಪಾಂಡವರು ವಾಸ್ತವದಲ್ಲಿ ಕರ್ಣನ ಸಹೋದರರು ಎನ್ನುವ ಸತ್ಯವನ್ನು ಶ್ರೀಕೃಷ್ಣನು ಕರ್ಣನಿಗೆ ತಿಳಿಸುವ ಮೂಲಕ ಆತನಲ್ಲಿ ಭೇದಭಾವವನ್ನು ಹುಟ್ಟಿಸಲು ಪ್ರಯತ್ನ ಪಡುತ್ತಾನೆ. ಇದು ‘ಕರ್ಣಭೇದ’.

ಕೂಸಿನ ಕಿವಿಯನ್ನು ಅಂದರೆ ಕರ್ಣವನ್ನು ಚುಚ್ಚುವುದಕ್ಕೆ ‘ಕರ್ಣವೇಧ’ ಎನ್ನುತ್ತಾರೆ. ಅದರಂತೆಯೇ ‘ಶಬ್ದವೇಧಿ’ ಎನ್ನುವ ಪದ. ಈ ವೇಧ ಪದವನ್ನು ಕನ್ನಡಿಗರು ‘ಬೇಧ’ ಎಂದು ಬಳಸಿದರೆ ತಪ್ಪಿಲ್ಲ. ಯಾಕೆಂದರೆ ‘ವ’ಕಾರವು ಕನ್ನಡದಲ್ಲಿ ‘ಬ’ಕಾರವಾಗುವ ರೂಢಿ ಇದೆ. ಉದಾಹರಣೆಗೆ ‘ವಾಣಸಿಗ’ ಎನ್ನುವ ಮೂಲ ಪದವು ಕನ್ನಡದಲ್ಲಿ ‘ಬಾಣಸಿಗ’ ಆಗಿದೆ; ವಾಯಿಲ್ ಎನ್ನುವ ಪದವು ಬಾಗಿಲು ಎಂದಾಗಿದೆ. ಆದುದರಿಂದ ‘ಭೇದ’ ಹಾಗು ‘ಬೇಧ’ ಎನ್ನುವ ಎರಡೂ ಪದಗಳನ್ನು penetration ಎನ್ನುವ ಅರ್ಥದಲ್ಲಿ ಬಳಸಿದರೆ ತಪ್ಪಿಲ್ಲ. ಈಗಲೂ ಸಹ loose motion ಎನ್ನುವ ಪದಕ್ಕೆ ಕೆಲವು ಪ್ರದೇಶಗಳಲ್ಲಿ ‘ಬೇಧಿ’ ಎನ್ನುವ ಪದವನ್ನು ಬಳಸುತ್ತಾರೆ. ಬೀchiಯವರು ತಮ್ಮ ಒಂದು ಪುಸ್ತಕದಲ್ಲಿ laxative ಎನ್ನುವ ಪದಕ್ಕೆ ‘ಸುಖಬೇಧಿ’ ಎನ್ನುವ ಕನ್ನಡ ಪದವನ್ನು ಟಂಕಿಸಿ ಬಳಸಿದ್ದಾರೆ.

ಕನ್ನಡಿಗರು ಒಂದು ದಿನದಲ್ಲಿ ಬಳಸುವ ವಿವಿಧ ಪದಗಳ ಸಂಖ್ಯೆ ತುಂಬಾ ಕಮ್ಮಿ ಎಂದು ಅನ್ನಿಸುತ್ತದೆ. ಕೆಲವೊಂದು ವಿಶೇಷ ಸಂದರ್ಭಗಳಲ್ಲಿಯೂ ಸಹ ವಿಭಿನ್ನ ಪದಗಳನ್ನು ಬಳಸದೇ, ಒಂದೇ ಸಾಮಾನ್ಯ ಪದವನ್ನು ಉಪಯೋಗಿಸುವುದು ಕನ್ನಡಿಗರಲ್ಲಿ ರೂಢಿಯಾಗಿದೆ. ಉದಾಹರಣೆಗೆ ‘ಕನ್ಯಾಪರೀಕ್ಷೆಯ (!)’ ಒಂದು ಸಂದರ್ಭವನ್ನು ನೋಡೋಣ:

ತಾಯಿ ಮಗನಿಗೆ: ಹುಡುಗಿ ಹ್ಯಾಂಗಿದ್ದಾಳೊ?
ಮಗ: ಛಲೋ ಇದ್ದಾಳಮ್ಮ.
ತಾಯಿ: ಉಪ್ಪಿಟ್ಟು ಹ್ಯಾಂಗಾಗಿತ್ತೊ?
ಮಗ: ಛಲೋ ಆಗಿತ್ತಮ್ಮ.
ತಾಯಿ: ಹುಡುಗಿ ಹೆಂಗ ಹಾಡಿದಳೊ?
ಮಗ: ಛಲೋ ಹಾಡಿದಳಮ್ಮ.
ಈ ಹುಡುಗನಿಗೆ ಚೆಲುವೆ, ರುಚಿ ಹಾಗು ಇಂಪು ಎನ್ನುವ ಪದಗಳು ಗೊತ್ತಿಲ್ಲವೇನೊ? ಎಲ್ಲದಕ್ಕೂ ಛಲೋ ಎನ್ನುವ ಒಂದೇ ಪದವನ್ನು ಈತ ಬಳಸುತ್ತಾನೆ. ಇನ್ನು ಕನ್ನಡ ಬದಲು ಇಂಗ್ಲೀಶ ಬಳಸುವ ಹುಡುಗನ ಉತ್ತರ ಹೇಗಿರಬಹುದು?

ತಾಯಿ ಮಗನಿಗೆ: ಹುಡುಗಿ ಹ್ಯಾಂಗಿದ್ದಾಳೊ?
ಮಗ: Awesome, mummy!
ತಾಯಿ: ಉಪ್ಪಿಟ್ಟು ಹ್ಯಾಂಗಾಗಿತ್ತೊ?
ಮಗ: Awesome, mummy!
ತಾಯಿ: ಹುಡುಗಿ ಹಾಡು ಹೆಂಗ ಹಾಡಿದಳೊ?
ಮಗ: Awesome, mummy!

ಕನ್ನಡಿಗರೇ ಕನ್ನಡವನ್ನು ಮರೆಯುತ್ತಿರುವ ಹಾಗು ತಪ್ಪಾಗಿ ಬಳಸುವ ಈ ಕಾಲದಲ್ಲಿ, ನಮ್ಮ ಸಮಾಚಾರ ಪತ್ರಿಕೆಗಳು ಕನ್ನಡದ ಕೊಲೆಗೆ ಕೈ ಎತ್ತಿ ನಿಂತಿವೆ. ಸಂಯುಕ್ತ ಕರ್ನಾಟಕ ಪತ್ರಿಕೆಯ ಅಪದ್ಧ ಪ್ರಯೋಗಗಳನ್ನು ಈಗಾಗಲೇ ಇಲ್ಲಿ ನೋಡಿದ್ದೇವೆ. ಆ ಪತ್ರಿಕೆಯು ಕೆಲ ಕಾಲದ ಹಿಂದೆ ಪ್ರಕಟಿಸಿದ ಒಂದು ತಲೆಬರಹವನ್ನು ಇಲ್ಲಿ ಕೊಡುತ್ತಿದ್ದೇನೆ:
“ಸವಿತಾ ಕೊಂದ ವೈದ್ಯರು”
ಈ ತಲೆಬರಹದ ಅರ್ಥವೇನು? ಸವಿತಾ(ಳು) ಕೆಲವು ವೈದ್ಯರನ್ನು ಕೊಂದಳು ಎಂದೆ, ಅಥವಾ ಸವಿತಾ(ಳನ್ನು) ಕೊಂದಂತಹ ವೈದ್ಯರು ಎಂದೆ? ‘ಳನ್ನು’ ಎನ್ನುವ ವಿಭಕ್ತಿ ಪ್ರತ್ಯಯವನ್ನು ಸೇರಿಸಿದರೆ ಸಂಯುಕ್ತ ಕರ್ನಾಟಕಕ್ಕೆ ಅಪಾರ ನಷ್ಟವಾಗುತ್ತದೆಯೆ?
ಬಹುಶಃ ನಮ್ಮ ಪತ್ರಿಕೆಗಳು ಹಾಗು ಟೀವಿ ಚಾನೆಲ್‍ಗಳು ಭಾಷೆಯ ಕೊಲೆಗಡುಕರಿಂದ ತುಂಬಿಕೊಂಡಿವೆ ಎನಿಸುತ್ತದೆ.

28 comments:

Anonymous said...

It is the wish of the common people to use THEIR language however they want.

You do not own Kannada language. I do not find any problem in the usage of "niraakarisu" instead of "tirsakarisu" both are non-Kannada loan words that have been forced into Kannada language by some Pundits.

I would like our channels to use the English words instead of these Sanskrit ones. "CM CPI investigation reject maadidaru" :)

ಸಂಧ್ಯಾ ಶ್ರೀಧರ್ ಭಟ್ said...

ಕಾಕ ...
ಈ ವಿಷಯದ ಬಗ್ಗೆ ಶ್ರೀವತ್ಸ ಜೋಷಿಯವರು ಮೊನ್ನೆ ಬೆಳಕು ಚೆಲ್ಲಿದ್ದರು ... ಇಂಗ್ಲೀಷ್ ಗ್ರಾಮರ್ ಬಗ್ಗೆ ಪಾಠ ನಿಮ್ಮ ಬಳಿಯಲ್ಲಿ ಕಲಿಯಬೇಕು ಅನಿಸುತ್ತಿದೆ . ತುಂಬಾ ಚೆನ್ನಾಗಿದೆ



Sanputta...:)

sunaath said...

Anonymousರೆ,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

sunaath said...

ಸಣ್‍ಪುಟ್ಟಾ,
ಇಂಗ್ಲೀಶ ವ್ಯಾಕರಣವನ್ನು ನಾನು ಕಲಿತವನಲ್ಲ. ಅಷ್ಟೋ ಇಷ್ಟೋ ಎಲ್ಲಿಂದಲೋ ತಿಳಿದುಕೊಂಡದ್ದು ಅಷ್ಟೇ ಇದು!

Ramakant Hegde said...

Nice analysis! Nevertheless, could you kindly permit me to trim an example that you gave:
IthanE kaLLathana "mADirabEku", ivana mEle nanage suspicion ide

Ramakant Hegde said...

PS

IthanE kaLLathana mADirabEku, nanage pUrthi A bhAvane ide!!!

or

IthanEnU kaLLathana mADiralikkilla, nanage A naMbike ide

Ramakant Hegde said...

Sorry,

My first regret is that I failed to complete my input (of 3 trimmings) in a single comment!

My second regret is that my second trimming is incorrect & a misuse! It should have been "IthanE kallatana mADiddAne, hAge nanage bhAvane ide".

Sorry again!!!

Ramakant Hegde said...

Oops!
Why did I use "kaLLatana" instead of "kaLLathana"???

One more regret & sorry!!

Instead, should I say "One more regret or sorry??? well, I DO NOT KNOW!!!!

All this simply proves the amazing capacity of our ancestors for their incomparable talent of TOTAL ACCURACY and no compromise for anything less. If one looks into the manthras written by our manthradrishTaaras, we will easily notice their excellent use of language!!

sunaath said...

ರಮಾಕಾಂತ ಹೆಗಡೆಯವರೆ,
ನೀವು sorry ಹೇಳಬೇಕಾದ ಅಗತ್ಯವೇ ಇಲ್ಲ. ನೀವು ಸೂಚಿಸಿದ ಪರ್ಯಾಯಗಳು ಖಂಡಿತವಾಗಿಯೂ ಉತ್ತಮವಾಗಿವೆ. ನಿಮಗೆ ಧನ್ಯವಾದಗಳು.

ಶಿವಪ್ರಕಾಶ್ said...

ಸುನಾಥ್ ಸರ್,
ನೀವು ಹೇಳಿದ್ದು ನಿಜ. ಇಂತಹ ತಪ್ಪುಗಳು ನಮ್ಮಲ್ಲಿ ಬೆರೆತುಹೋಗಿವೆ. ನಮ್ಮನ್ನು ತಿದ್ದಬೇಕಾದ ಮಾಧ್ಯಮಗಳು ತಪ್ಪು ಮಾಡಿದರೆ ನಮ್ಮನ್ನು ಕಾಪಾಡುವವರು ಯಾರು ???

ಈ ಕೆಳಗಿನ ಅರ್ಥಗಳು ಸರಿಯಲ್ಲವೇ ?
suspicion = ಸಂಶಯ
doubt = ಸಂದೇಹ

Thanks

sunaath said...

ಶಿವಪ್ರಕಾಶರೆ,
ನೀವು ಹೇಳಿದ್ದು ಸರಿಯಾಗಿದೆ. ನಾನು doubt ಎನ್ನುವ ಪದದ ಒಂದು ಅರ್ಥವನ್ನು ಮಾತ್ರ ಈ ಲೇಖನದಲ್ಲಿ ಬಳಸಿದ್ದೇನೆ. ನೀವು ಹೇಳುವ ಎರಡನೆಯ ಅರ್ಥದಲ್ಲೂ ಸಹ doubt ಪದದ ಬಳಕೆಯಾಗುತ್ತದೆ. ಆದುದರಿಂದ doubt ಎನ್ನುವುದಕ್ಕೆ ಸಂದೇಹ ಎನ್ನುವುದು ಮತ್ತೊಂದು ಸರಿಯಾದ ಪದವಾಗಿದೆ. suspicion ಎನ್ನುವುದಕ್ಕೆ ಸಂಶಯ ಎನ್ನುವುದೇ ಸರಿಯಾದ ಪದ. ಅನುಮಾನ ಎನ್ನುವುದಕ್ಕೆ inference ಎಂದು ಹೇಳಬಹುದು. ನಿಮ್ಮ ವಿವರಣೆಯನ್ನು ಇದೀಗ ಲೇಖನದಲ್ಲಿ ಅಳವಡಿಸಿದ್ದೇನೆ. ನಿಮಗೆ ಧನ್ಯವಾದಗಳು.

ಶಿವಪ್ರಕಾಶ್ said...

ಧನ್ಯವಾದಗಳು ಸುನಾಥ್ ಸರ್.

ಕೆಲವು ಕಡೆ ಸಂಶಯ ಹಾಗು ಸಂದೇಹ ಪದಗಳನ್ನು ಜೊತೆ-ಜೊತೆಯಾಗಿ ಉಪಯೋಗಿಸುವುದನ್ನು ಕೇಳಿದ್ದೇನೆ. ಅದು ಸರಿಯೇ ?? ಉದಾಹರಣೆಗೆ "ನಿಮಗೆ ಯಾವುದೇ ಸಂಶಯ ಅಥವಾ ಸಂದೇಹಗಳು ಇದ್ದರೆ, ಈಗಲೇ ನನ್ನ ಕೇಳಿ ಪರಿಹರಿಸಿಕೊಳ್ಳಿ"

ಮನಸು said...

ತುಂಬಾ ಉಪಯುಕ್ತ ಮಾಹಿತಿ ಕಾಕ, ನಾವು ಎಲ್ಲಿ ತಪ್ಪು ಮಾಡುತ್ತೇವೆ ಎಂಬುದು ಅರ್ಥವಾಯಿತು... ತಿದ್ದಿಕೊಳ್ಳಬೇಕು

Badarinath Palavalli said...

ವಾಹಿನಿಗಳ ಅಸಲಿ ಸಮಸ್ಯೆ ಎಂದರೆ ಚಿತ್ರೀಕರಣ ಮಾಡಿಕೊಂಡು ಬರುವ ವರದಿಗಾರನ ವರದಿಯ ಕಥನಕ್ಕೂ, ಅದನ್ನು ಸಂಪಾದಕ ಸ್ವೀಕರಿಸಿ ಅದನ್ನು ದೃಶ್ಯಕ್ಕೆ ತಕ್ಕಂತೆ ಬಳಸಿಕೊಳ್ಳುವಾಗ ಪುನರ್ ಕಥನವನ್ನು ಬರೆಯುವಾಗ ಇಲ್ಲದಿರುವ ಪರಸ್ಪರ ಹೊಂದಾಣಿಕೆ!

ವರದಿಗಾರ ತಪ್ಪು ಬರೆದು ಕೊಟ್ಟರೂ ಸಂಪಾದಕ ಅದನ್ನು ತಿದ್ದದೆ cut & paste ಸುಲಭ ವಿಧಾನಕ್ಕೆ ಒಗ್ಗಿದಾಗಲೇ ಇಂತಹ ಮಹಾಪರಾಧಗಳು ಸಂಭವಿಸುವುದು!

೨. ಆಂಗ್ಲ ಟಿಪ್ಪಣಿಯನ್ನ ಭಾಷಾಂತರ ಮಾಡುವಾಗಿನ ಅನುಭವ ಕೊರತೆ.

೩. ಭಾಷೆಯ ಬಗ್ಗೆ ನಿರಭಿಮಾನ, ವಾಹಿನಿಗಳಲ್ಲಿ ಕೆಳವರ್ಗದ ಬೆರಳಚ್ಚು ನೌಕರರ ಗಿಂಡಿಮಾಣಿತನ!
.

sunaath said...

ಶಿವಪ್ರಕಾಶರೆ,
ಕನ್ನಡದಲ್ಲಿ ಸಂಶಯ ಹಾಗು ಸಂದೇಹಗಳನ್ನು ಒಂದೇ ರೀತಿಯಾಗಿ ಬಳಸುವುದು ರೂಢಿಯಾಗಿದೆ. ಇವುಗಳಲ್ಲಿ ಅರ್ಥವ್ಯತ್ಯಾಸವಿದ್ದರೂ ಸಹ, ಈ ದೀರ್ಘಕಾಲೀನ ರೂಢಿಯನ್ನು ನಾವು ಸಹಿಸಿಕೊಳ್ಳಬಹುದು; ತಪ್ಪೇನಿಲ್ಲ. ಆದರೆ ನಾವು ಮಾತ್ರ ಸಂಶಯವನ್ನು suspicion ಎಂದೂ, ಸಂದೇಹವನ್ನು doubt ಎಂದೂ ಬಳಸುವುದು ಒಳ್ಳೆಯದು.

sunaath said...

ಮನಸು,
ಧನ್ಯವಾದಗಳು.

sunaath said...

ಬದರಿನಾಥರೆ,
ವಾಹಿನಿಗಳ ಕಾರ್ಯವಿಧಾನದಲ್ಲಿ ಅನುಭವವಿರುವ ನೀವು ಸಮಂಜಸವಾದ ವಿವರಣೆ ನೀಡಿರುವಿರಿ. ಧನ್ಯವಾದಗಳು.

ಜಲನಯನ said...

ಸುನಾಥಣ್ಣ ಪದಾರ್ಥ ಚಿಂತಾಮಣಿಯಲ್ಲಿ ಇಂತಹ ಪದ ವ್ಯತ್ಯಯಗಳ ಬಗ್ಗೆ ಚರ್ಚೆಯಾಗಬೇಕು. ಒಮ್ಮೆ ಭೇದ ಮತ್ತು ಬೇಧ ಇವುಗಳ ನಡುವಿನ ಅಂತರದ ಚರ್ಚೆ ಆಗಿತ್ತು...
ಇನ್ನು ಪ್ರತ್ಯಯಗಳನ್ನೇ ನುಂಗಿ ವರದಿ ಮಾಡುವ ಪತ್ರಿಕೆಗಳ ಬಗ್ಗೆ ಹೇಳಲೇಬೇಕಿಲ್ಲ...
ಚನ್ನಾಗಿದೆ ಅಣ್ಣ..

sunaath said...

ಜಲನಯನ,
ನಾನು ಪದಾರ್ಥಚಿಂತಾಮಣಿಯಲ್ಲಿ ಒಂದು ಪದವನ್ನು ನೋಡು ನೋಡುತ್ತಿರುವಂತೆಯೇ, ಅದರ ಬಗೆಗೆ ಅನೇಕ ಉತ್ತಮ ಪ್ರತಿಕ್ರಿಯೆಗಳು ಬಂದು ಬಿಡುತ್ತವೆ. ಹೀಗಾಗಿ ನಾನು ಹೇಳುವುದರಲ್ಲಿ ಹಿಂದೆ ಉಳಿದು ಬಿಡುತ್ತೇನೆ. ಆದುದರಿಂದ ಕೆಲವೊಂದು ಪದಗಳ ಬಗೆಗೆ, ಬ್ಲಾಗಿನಲ್ಲಿಯೇ ಬರೆಯುವುದು ಅನಿವಾರ್ಯವಾಗುತ್ತದೆ. ಕ್ಷಮೆ ಇರಲಿ.

sunaath said...

ಜಲನಯನ,
ಪದಾರ್ಥ ಚಿಂತಾಮಣಿಯಲ್ಲಿ ಒಂದು ಪದದ ಬಗೆಗೆ ಚರ್ಚೆ ಪ್ರಾರಂಭಿಸಲು ಏನು ಮಾಡಬೇಕು ಎನ್ನುವುದು ನನಗೆ ತಿಳಿಯದು. ದಯವಿಟ್ಟು ವಿವರಿಸಲು ಕೋರುತ್ತೇನೆ.

ದುರಹಂಕಾರಿ said...

"WHEN SHANKAR NAG COMES ASKING" , "ಶಂಕರ್ ನಾಗ್ ಕೇಳ್ಕೊಂಡ್ ಬಂದಾಗ" (www.facebook.com/whenshankarnagcomesasking) ಅನ್ನುವ ಡಾಕ್ಯುಮೆಂಟರಿಯ ಕನ್ನಡ ಮತ್ತು ಆಂಗ್ಲ ಶೀರ್ಶಿಕೆಗಳೆರಡೂ ಅಸಂಬದ್ಧವಾಗಿ ಕಂಡಿದ್ದು ನನಗೆ ಮಾತ್ರವಾ ಅಂತನ್ನುವ ಸಂಶಯದ ಎಳೆಯೊಂದು ನನ್ನನ್ನು ವರ್ಷಗಳಿಂದ ಕಾಡಿಸುತ್ತಿದೆ!

sunaath said...

ದುರಹಂಕಾರಿಯವರೆ,
ಈ ಶಂಕರನಾಗ documentaryಯ ಇಂಗ್ಲಿಶ್ ಹಾಗು ಕನ್ನಡ ಟೈಟಲ್‍ಗಳ ಅರ್ಥ ನನಗೆ ಆಗುತ್ತಿಲ್ಲ! ನಾನೂ ನಿಮ್ಮ ಜೊತೆಗೆ ಇದ್ದೇನೆ.

Archu said...

ತುಂಬಾ ಉಪಯುಕ್ತ ಮಾಹಿತಿ..ಟಿ.ವಿ.ಯಲ್ಲಿ ಬರುವ ಕನ್ನಡವೋ , ಅದರ ಉಚ್ಚಾರಣೆಯೋ..ದೇವರೇ ಗತಿ..

sunaath said...

ಅಱ್ಚು,
ಧನ್ಯವಾದಗಳು.

Manjunatha Kollegala said...

"ಪದನರಿತು ನುಡಿಯಲುಂ ನುಡಿದುದನರಿದಾರಯ್ಯಲುಂ" ಬಲ್ಲವರೆಂದು ಕವಿರಾಜಮಾರ್ಗಕಾರನು ಕನ್ನಡಿಗರನ್ನು ಹೊಗಳಿ ಅಟ್ಟಕ್ಕೇರಿಸಿದ್ದಾನೆ. ಅಟ್ಟದಮೇಲೆ ಕೂರುವ ಇರಿಸುಮುರಿಸಿಗೋ ಏನೋ ನಮ್ಮವರು ಆ ಅಟ್ಟವನ್ನಿಳಿದುಬಂದು ನೆಲಕಚ್ಚಿ ಬಹುಕಾಲವಾಯಿತು.

ವಿಭಕ್ತಿಯನ್ನು ಬಿಟ್ಟು ಬರೆಯುವ ಅನಿಷ್ಟಪದ್ದತಿಯನ್ನು ನಾನು ಮೊದಲು ಕಂಡಿದ್ದು ನನ್ನ ಪ್ರಿಯ ಲೇಖಕ ಪೂರ್ಣಚಂದ್ರತೇಜಸ್ವಿಯವರಲ್ಲಿ:

ಪ್ಯಾರ ಕಿವಿ ಕರೆಯುತ್ತಾ ಓಡಿದ
ಕಿವಿ ಚೂಬಿಟ್ಟ ಪ್ಯಾರನಿಗೆ ಉಗಿದೆ
... ಹೀಗೆ.

ಆದರೂ ಆಪ್ತ ಬರಹದ ಶೈಲಿಯಲ್ಲಿ ಸಹ್ಯವಾಗಿದ್ದ ಇಂಥಾ ಪ್ರಯೋಗಗಳು ಇವತ್ತಿನ ದಿನಗಳಲ್ಲಿ, ಅದೂ ಪತ್ರಿಕೆಯಂಥಾ ಗಂಭೀರವಾಗಿರಬೇಕಾದ ಸಾಹಿತ್ಯಪ್ರಕಾರದಲ್ಲಿ ತೀರ ಅಸಹ್ಯವನ್ನುಂಟುಮಾಡುತ್ತಿದೆ.

sunaath said...

ಮಂಜುನಾಥರೆ,
ಸಾಹಿತ್ಯದ ಬರವಣಿಗೆಯಲ್ಲಿ ವ್ಯಾಕರಣಕ್ಕೆ ವಿಚ್ಛೇದನ ಕೊಟ್ಟರೆ, ಅದನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ ಪತ್ರಿಕೆ, ದೂರದರ್ಶನ ಮುಂತಾದ ಸಾರ್ವಜನಿಕ ಮಾಧ್ಯಮಗಳಲ್ಲಿ ವ್ಯಾಕರಣಕ್ಕೆ ನೂರಕ್ಕೆ ನೂರರಷ್ಟು ಬದ್ಧರಾಗಿರುವುದು ಅವಶ್ಯ. ಇಲ್ಲವಾದರೆ, ವಿದ್ಯಾರ್ಥಿಗಳು ಹಾಗು ಕಿರಿಯ ಜನಾಂಗದವರು ಅಶುದ್ಧ ಪ್ರಯೋಗಗಳನ್ನೇ ಸರಿ ಎಂದು ನಂಬುತ್ತಾರೆ!

Manjunatha Kollegala said...

ನಿಮ್ಮ ಮಾತು ನೂರಕ್ಕೆ ನೂರು ನಿಜ. ಮಾಧ್ಯಮಗಳಲ್ಲಿ ಭಾಷೆಯನ್ನು ತಪ್ಪಾಗಿ ಉಪಯೋಗಿಸುವುದು ಅಕ್ಷಮ್ಯ.

ಸಾಹಿತ್ಯದಲ್ಲೂ ಒಂದೊಂದು ಪ್ರಕಾರದ ಗೌರವ ಒಂದೊಂದಕ್ಕೆ. ಗದ್ಯದಲ್ಲಿ - ನಿರ್ದಿಷ್ಟ ಸಾಹಿತ್ಯಕ ಉದ್ದೇಶ/ಪ್ರಯೋಜನವಿಲ್ಲದಿದ್ದರೆ - ಕೂಡಿದಷ್ಟೂ ಭಾಷೆಯು ಸಹಜವಾಗಿ, ನಿಯಮಗಳನ್ನು ಅನುಸರಿಸಿಕೊಂಡಿರಬೇಕೆಂಬುದು ನನ್ನ ನಿಲುವು.

sunaath said...

ಮಂಜುನಾಥರೆ,
ಧನ್ಯವಾದಗಳು.