ಕನ್ನಡಿಗರು ನಿತ್ಯಜೀವನದಲ್ಲಿ ಬಳಸುವ ಪದಗಳನ್ನು ಪರೀಕ್ಷಿಸಿದಾಗ, ಇವರು ನಿಧಾನ
ಸ್ವಭಾವದವರು ಅಂತ ತೋರುತ್ತದೆ. ಏಕೆಂದರೆ ಕನ್ನಡ ಭಾಷೆಯಲ್ಲಿ fast ಅನ್ನುವ ಪದಕ್ಕೆ ಸಮಾನವಾದ ಕನ್ನಡ
ಮೂಲದ ಪದಗಳು ಇದ್ದಂತೆ ಕಾಣುವದಿಲ್ಲ. ‘ಬೇಗ’ ಎನ್ನುವ ಪದವು ಸಂಸ್ಕೃತದ ‘ವೇಗ’ ಪದದ ತದ್ಭವವಾಗಿದೆ.
‘ಲಗು’ ಎನ್ನುವ ಪದವು ‘ಲಘು’ ಎನ್ನುವ ಪದದ ರೂಪಾಂತರವಾಗಿದೆ. ‘ಜೋರ’ ಮತ್ತು ‘ದೌಡ’ ಎನ್ನುವ ಪದಗಳು
ಹಿಂದೀ ಪದಗಳಾಗಿವೆ. ಆದುದರಿಂದ ಕನ್ನಡಿಗರು ಸ್ವಭಾವತಃ fast ಅಲ್ಲ! ಇನ್ನು slow ಎನ್ನುವ
ಪದಕ್ಕೆ ಸಮಾನವಾದ ‘ಮೆಲ್ಲಗೆ’ ಎನ್ನುವ ಪದವು ಕನ್ನಡದಲ್ಲಿ
ಸಿಗುತ್ತದೆ. ಆದುದರಿಂದ ಕನ್ನಡಿಗರನ್ನು ನಿಧಾನಸ್ಥರೆಂದು ಕರೆಯುವುದೇ ಸರಿ.ಈಗ ಈ ವಿನೋದವನ್ನು ಬದಿಗಿರಿಸಿ
ಪರಾಮಱ್ಷಿಸಿದಾಗ ಹೊಳೆಯುವದೇನೆಂದರೆ ದೈನಂದಿನ ಕನ್ನಡಕ್ಕೆ ಸಂಸ್ಕೃತದಿಂದ ಅನೇಕ ಪದಗಳ ಆಯಾತವಾಗಿದೆ.
ವಾಸ್ತವದಲ್ಲಿ ಸಂಸ್ಕೃತದಿಂದ ಕನ್ನಡಕ್ಕೆ ಬಂದಷ್ಟೇ ಪದಗಳು, ಕನ್ನಡದಿಂದ ಸಂಸ್ಕೃತಕ್ಕೂ ಹೋಗಿವೆ. ಇದು
ಕನ್ನಡ ಹಾಗು ಸಂಸ್ಕೃತದ ಅನ್ಯೋನ್ಯ ಸಂಬಂಧವನ್ನು ತೋರಿಸುತ್ತದೆ. (ಈ ಮಾತು ಇತರ ಭಾರತೀಯ ಭಾಷೆಗಳಿಗೂ
ಅನ್ವಯಿಸುತ್ತದೆ, ಉಱ್ದು ಹಾಗು ಇಂಗ್ಲಿಶ್ ಹೊರತುಪಡಿಸಿ.)
‘ಸಂಸ್ಕೃತಮ್’ ಎನ್ನುವ ಪದದ ಅರ್ಥ: refined, processed, ಸಂಸ್ಕರಿಸಲ್ಪಟ್ಟದ್ದು
ಇತ್ಯಾದಿ. ಜನಸಾಮಾನ್ಯರು (ಅಂದರೆ ಆಱ್ಯ ಜನಸಾಮಾನ್ಯರು) ತಮ್ಮ ದೈನಂದಿನ ಮಾತುಕತೆಯಲ್ಲಿ ಇಂತಹ ವ್ಯಾಕರಣಬದ್ಧ‘ಸಂಸ್ಕೃತ’ವನ್ನು
ಬಳಸುತ್ತಿದ್ದಿಲ್ಲ. (ಯಾರು ಬಳಸುತ್ತಾರೆ, ಹೇಳಿ!) ಆದುದರಿಂದ ಆಱ್ಯಜನಾಂಗದ ಆಡುಭಾಷೆಗೆ ‘ಆಱ್ಯಭಾಷೆ’
ಎಂದಷ್ಟೇ ಕರೆಯುವುದು ಸಮಂಜಸವಾಗಿದೆ. ಆಱ್ಯರ ಆಡುಭಾಷೆಯನ್ನು ವ್ಯಾಕರಣದ ಚೌಕಟ್ಟಿಗೆ ಒಳಪಡಿಸಿ, ಸಂಸ್ಕರಿಸಿ
‘ಸಂಸ್ಕೃತ’ವನ್ನಾಗಿ ಪರಿವರ್ತಿಸಿದವರು ವೈಯಾಕರಣಿಗಳು. ಆಱ್ಯರು ಉತ್ತರ ಭಾರತವನ್ನು ಪ್ರವೇಶಿಸಿದಾಗ
ಅಲ್ಲಿ ವಾಸವಾಗಿದ್ದ ಮೂಲನಿವಾಸಿಗಳ ಜೊತೆಗೆ --(ಉದಾ: ಕನ್ನಡಿಗರು, ಕೋಲರು, ಗೊಂಡರು, ಮುಂಡರು ಇತ್ಯಾದಿ)--
ಮುಖ್ಯತಃ ಕನ್ನಡಿಗರ ಜೊತೆಗೆ ಆಱ್ಯರ ಮುಖಾಮುಖಿಯಾಯಿತು. ಇವರೀಱ್ವರ ಆಡುನುಡಿಗಳು ಬೆರೆತುಕೊಂಡು, ವಿವಿಧ
ಬಗೆಯ ಪ್ರಾಕೃತ ಭಾಷೆಗಳು ಹುಟ್ಟಿಕೊಂಡವು, ಉದಾಹರಣೆಗೆ ಶೂರಸೇನೀ, ಮಾಗಧೀ, ಮಹಾರಾಷ್ಟ್ರೀ ಇತ್ಯಾದಿ.
ಪ್ರಾಕೃತ ಎಂದರೆ ಪ್ರಕೃತಿಸಹಜವಾದದ್ದು; ಸಂಸ್ಕೃತಮ್ ಎಂದರೆ ಸಂಸ್ಕರಿಸಲ್ಪಟ್ಟದ್ದು.
ಈ ಪ್ರಾಕೃತ ಭಾಷೆಗಳಿಗೆ ಕನ್ನಡದ ಕೊಡುಗೆ ಗಣನೀಯವಾಗಿದೆ. ಉದಾಹರಣೆಗೆ ಹಿಂದೀ
ಭಾಷೆಯ ‘ಪೌಧಾ’ ಎನ್ನುವ ಪದವು ಕನ್ನಡದ ‘ಪೊದೆ’ ಎನ್ನುವ ಪದದಿಂದ ಬಂದಿದೆ. ಮರಾಠಿಯ ‘ಚಾಂಗಲಾ’ ಪದವು
ಕನ್ನಡದ ‘ಚಾಂಗು’ ಪದದಿಂದ ಬಂದಿದೆ. ಉತ್ತರ ಭಾರತದಲ್ಲಿಇರುವ
ಅನೇಕ ಸ್ಥಳನಾಮಗಳು ಕನ್ನಡ ಹೆಸರುಗಳೇ ಆಗಿವೆ. ಮರಾಠೀ ಹಾಗು ಗುಜರಾತಿ ಭಾಷೆಗಳು ಕನ್ನಡ ಭಾಷೆಯ ತಳಪಾಯದ
ಮೇಲೆ ನಿಂತಿವೆ ಎನ್ನುವುದನ್ನು ಭಾಷಾತಜ್ಞರು ತೋರಿಸಿದ್ದಾರೆ.
ಆಱ್ಯಭಾಷೆಯನ್ನು ಸಂಸ್ಕರಿಸಿದ ವೈಯಾಕರಣಿಗಳಿಗೆ ಭಾರತೀಯರೆಲ್ಲರೂ ಕೃತಜ್ಞರಾಗಿರಬೇಕು.
ಸಂಸ್ಕೃತ ಭಾಷೆಯ ವ್ಯಾಕರಣದಂತಹ ಸುವ್ಯವಸ್ಥಿತ ವ್ಯಾಕರಣವನ್ನು ನಾವು ಜಗತ್ತಿನ ಯಾವ ಭಾಷೆಯಲ್ಲಿಯೂ
ಕಾಣುವದಿಲ್ಲ. ಈ ವೈಯಾಕರಣಿಗಳು ಧ್ವನಿಯ ಮೂಲವನ್ನು ಆಧರಿಸಿ, ಈ ಧ್ವನಿಗಳನ್ನು ‘ತಾಲವ್ಯ, ಕಂಠವ್ಯ,
ದಂತವ್ಯ,ಓಷ್ಠವ್ಯ,ಮೂರ್ಧನ್ಯ’ ಎಂದು ವಱ್ಗೀಕರಿಸಿದರು. ಒಂದು ಮೂಲಪದದಿಂದ ಅನೇಕ ಪದಗಳನ್ನು ಸೃಷ್ಟಿಸುವ
ಬಗೆಗಳನ್ನು ತೋರಿಸಿದರು. ಈ ವ್ಯಾಕರಣವನ್ನೇ ಎಲ್ಲ ಭಾರತೀಯ ಭಾಷೆಗಳು ಹೆಚ್ಚುಕಡಿಮೆ ಅನುಸರಿಸುತ್ತಿವೆ
(ಉರ್ದು ಹಾಗು ಇಂಗ್ಲಿಶ್ ಹೊರತುಪಡಿಸಿ!) ಹೀಗಾಗಿ ಈ ಎಲ್ಲ ಭಾರತೀಯ ಭಾಷೆಗಳಲ್ಲಿ ಒಂದು ಸಾಮ್ಯತೆ ಇದೆ.
ಕನ್ನಡದ ಕೆಲವು ವಿತಂಡವಾದಿಗಳು ‘ಕನ್ನಡದ ಜಾಯಮಾನವೇ ಬೇರೆ; ಆದುದರಿಂದ ಕನ್ನಡದ ವ್ಯಾಕರಣವೇ ಬೇರೆ’
ಎಂದು ವಾದಿಸುತ್ತಾರೆ. ಇವರ ವಾದದ ಒಂದು ಪ್ರಮುಖ ಗುರಿ ಎಂದರೆ ಅಲ್ಪಪ್ರಾಣ ಹಾಗು ಮಹಾಪ್ರಾಣಗಳು! ಮಹಾಪ್ರಾಣವನ್ನು
ಉಚ್ಚರಿಸಲಾರದಷ್ಟು ಮಂದಮತಿಗಳೇ ಕನ್ನಡಿಗರು? ಇಂಗ್ಲೀಶಿನ fast ಪದವನ್ನು ಇವರೇನು past ಎಂದು ಉಚ್ಚರಿಸುತ್ತಾರೆಯೆ?
ಅನೇಕ ಕನ್ನಡಿಗರು ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ; ಅಲ್ಲಿಯೇ ನೆಲಸಿಯೂ ಇದ್ದಾರೆ. ಇವರೆಲ್ಲ
ವಿದೇಶಗಳಲ್ಲಿ ಮಹಾಪ್ರಾಣ ಪದಗಳನ್ನು ಸರಿಯಾಗಿ ಉಚ್ಚರಿಸಬಲ್ಲರು; ಇಲ್ಲಿ ಬಂದ ತಕ್ಷಣ ಅಲ್ಪಪ್ರಾಣಿಗಳಾಗಿ
ಬದಲಾಗುತ್ತಾರೆಯೆ? ಇದನ್ನು ಗಮನಿಸಿದಾಗ, ಈ ‘ಜಾಯಮಾನ ಪ್ರಚಾರ’ವು ಕೆಲವು ವಿಶಿಷ್ಟ ಹಿತಾಸಕ್ತಿಗಳ ದುರುದ್ದೇಶಪೂರ್ಣ ತಿಪ್ಪರಲಾಗ
ಎಂದು ಭಾಸವಾಗುತ್ತದೆ. (ಲಾಗ ಎನ್ನುವ ಕನ್ನಡ ಪದವು ಲಾಘವ ಎನ್ನುವ ಸಂಸ್ಕೃತ ಪದದ ತದ್ಭವವಾಗಿದೆ.)
ಅದೂ ಅಲ್ಲದೆ, ‘ಜಾಯಮಾನಕ್ಕಿಂತ ಕಾಲಮಾನ ಹೆಚ್ಚಿನದು’ ಎನ್ನುವುದನ್ನು ನಾವು ಅರಿಯಬೇಕು. ಸಾವಿರಾರು ವಱ್ಷಗಳ ಹಿಂದೆ,
ಕನ್ನಡಿಗರು ದಂಡಕಾರಣ್ಯದಲ್ಲಿ ಮರಗಳ ಮೇಲೆ ಜಿಗಿದಾಡುತ್ತಿದ್ದರು, ಶಿಲಾಯುಧಗಳನ್ನು ಬಳಸುತ್ತಿದ್ದರು
ಹಾಗು ತೊಗಟೆಯನ್ನು ಸೊಂಟಕ್ಕೆ ಸುತ್ತಿಕೊಳ್ಳುತ್ತಿದ್ದರು. ಇದು ಕನ್ನಡಿಗರ ಜಾಯಮಾನವೆಂದು ಈಗಲೂ ಸಹ
ಅವೇ ಪದ್ಧತಿಗಳನ್ನು ನಾವು ಅನುಸರಿಸಬಹುದೆ? ಈ ತಿಳಿಗೇಡಿತನಕ್ಕೆ ನಾವು ಶರಣಾದರೆ, ಕನ್ನಡ ಭಾಷೆಯು
ಮಲೆತ ಮಡುವಾಗುತ್ತದೆ. ಕನ್ನಡಿಗರು ಆ ಮಲೆತ ಕೆಸರಿನಲ್ಲಿ ಕಿರಚುವ ಕಪ್ಪೆಗಳಾಗುತ್ತಾರೆ!
ಎಲ್ಲ ಭಾರತೀಯ
ಲಿಪಿಗಳಿಗೆ ಬ್ರಾಹ್ಮೀ ಲಿಪಿಯೇ ಮೂಲವಾಗಿದೆ. ಆದರೆ ಈ ಎಲ್ಲ ಸೋದರ ಲಿಪಿಗಳಲ್ಲಿ ಕನ್ನಡ ಲಿಪಿಯೇ ಶ್ರೇಷ್ಠವಾಗಿದೆ.
ಕನ್ನಡ ಲಿಪಿಯ ಶ್ರೇಷ್ಠತೆಯನ್ನು ಅರಿಯಲು ಭಾರತದ
ಇತರ ಭಾಷೆಗಳ ಲಿಪಿಗಳ ಜೊತೆಗೆ ಕನ್ನಡ ಲಿಪಿಯನ್ನು ಹೋಲಿಸಿ ಪರೀಕ್ಷಿಸಬೇಕು. ಉದಾಹರಣೆಗೆ ಬಂಗಾಲೀ
ಲಿಪಿಯಲ್ಲಿ ‘ವ್’ ಎನ್ನುವ ವ್ಯಂಜನವಿಲ್ಲ. ಹೀಗಾಗಿ ಬಂಗಾಲಿಗಳು ‘ವಂಗಹಾಳ’ವನ್ನು ‘ಬೊಂಗ್ಲಾ’ ಎಂದು
ಕರೆಯುತ್ತಾರೆ. ಬಂಗಾಲಿಯಲ್ಲಿ ತ್ ಹಾಗು ದ್ ವ್ಯಂಜನಗಳಿದ್ದಾಗೂ ಸಹ ‘ತುರಂತ’ ಪದಕ್ಕೆ ಇವರು ‘ದುರಂತೊ’
ಎಂದು ಯಾಕೆ ಅನ್ನುತ್ತಾರೊ, ದೇವರಿಗೇ ಗೊತ್ತು. ಹೀಗಾಗಿ ಮೊಮೊತಾ ಬಂದೋಪಾಧ್ಯಾಯರು (=ಮಮತಾ ಬ್ಯಾನಱ್ಜೀಯವರು)
ಕೇಂದ್ರದಲ್ಲಿ ರೇಲವೆ ಮಂತ್ರಿಗಳಾಗಿದ್ದಾಗ, ‘ದಿಲ್ಲಿ-ಕೋಲಕತ್ತಾ ಎಕ್ಸಪ್ರೆಸ್ಸಿ’ಗೆ ‘ತುರಂತ ಎಕ್ಸಪ್ರೆಸ್’ ಎನ್ನುವದರ ಬದಲಾಗಿ ‘ದುರಂತೊ ಎಕ್ಸಪ್ರೆಸ್’ ಎಂದು
ನಾಮಕರಣವನ್ನು ಮಾಡಿದರು. ಎಂತಹ ದುರಂತ, ಬಂಧುಗಳೆ!
ಬ್ರಾಹ್ಮೀ ಲಿಪಿಯಿಂದ ಹುಟ್ಟಿದ ದೇವನಾಗರೀ, ಬಂಗಾಲೀ, ಗುಜರಾತೀ, ಮರಾಠೀ
ಇತ್ಯಾದಿ ಲಿಪಿಗಳಲ್ಲಿ ‘ಏ,ಓ’ ಎನ್ನುವ ದೀಱ್ಘ ಸ್ವರಗಳಿಲ್ಲ. ಹೀಗಾಗಿ ಈ ಭಾಷೆಗಳಲ್ಲಿ red ಹಾಗೂ
raid ಎರಡನ್ನೂ ‘ರೇಡ್’ ಎಂದೇ ಉಚ್ಚರಿಸುತ್ತಾರೆ. ಕನ್ನಡದ ‘ಕೊಡು’ ಹಾಗು ‘ಕೋಡು’ ಈ ಭಾಷೆಗಳಲ್ಲಿ
‘ಕೋಡು’ ಮಾತ್ರ ಆಗುತ್ತವೆ. ಈ ಧ್ವನಿಸಂಕೇತಗಳ ಕೊರತೆಯಿಂದಾಗಿ, ಈ ಭಾಷೆಗಳಲ್ಲಿ ಪದಸಂಪತ್ತು ಕಡಿಮೆಯಾಗುವುದು
ಸಹಜ. ತಮಿಳು ಭಾಷೆಯಂತೂ ಆಂಡವನಿಗೇ ಪ್ರೀತಿ. ಧ್ವನಿಸಂಕೇತಗಳ ಕೊರತೆ ಹಾಗು ವಿಚಿತ್ರ ಭಾಷಾರೂಢಿಯಿಂದಾಗಿ
‘ಗೋಕಱ್ಣದ ಗಣಪತಿ’ಯು ತಮಿಳಿನಲ್ಲಿ ‘ಕೋಗಱ್ಣದ ಕಣಪದಿ’ಯಾಗುತ್ತಾನೆ; ‘ಗಿಟಾರ್’ ಪದವು ‘ಕಿಟಾರ್’ ಎಂದು
ಕಿರಿಚಿಕೊಳ್ಳುತ್ತದೆ. ‘ಗಾಂಧೀ’ಯವರು ‘ಕಾಂದೀ’ ಆಗುತ್ತಾರೆ; ‘ಕಾಂತೀ’ ಸಹ ‘ಕಾಂದೀ’ ಆಗುತ್ತಾಳೆ.
(ಇದು ತಮಿಳಿನ ಜಾಯಮಾನ?!) ಬಂಗಾಲಿ ಹಾಗು ತಮಿಳು ಲಿಪಿಯಲ್ಲಿ ಕೆಲವು ಕಾಗುಣಿತಗಳು ಉಚ್ಚಾರವನ್ನು ಅನುಸರಿಸುವದಿಲ್ಲ.
ಉದಾಹರಣೆಗೆ ‘ಕೈ’ ಪದವನ್ನು ತಮಿಳಿನಲ್ಲಿ ‘ಕ್‍ಅಇ’ ಎಂದು ಸಂಯೋಜಿಸದೆ, ‘ಅಕ್‍ಇ’ ಎಂದು ಲೇಖಿಸುತ್ತಾರೆ.
ಬಂಗಾಲಿಯಲ್ಲಂತೂ ಈ ಸ್ವರಸಂಕೇತಗಳನ್ನು ಹಿಂದೆ ಅಥವಾ ಮುಂದೆ ಎಲ್ಲಾದರೂ ಬರೆಯಬಹುದಂತೆ! ಇದೆಲ್ಲವನ್ನು
ಗಮನಿಸಿದಾಗ ನಮ್ಮ ಕನ್ನಡ ಲಿಪಿಯು ಇವೆಲ್ಲ ಲಿಪಿಗಳಿಗಿಂತ ಎಷ್ಟೋ ಪಾಲು ಉತ್ತಮವಾಗಿದೆ ಹಾಗು ಸುಸಂಬದ್ಧ
ಲಿಪಿಯಾಗಿದೆ ಎನ್ನುವದರ ಅರಿವಾಗುತ್ತದೆ; ಕನ್ನಡ ಲಿಪಿಯ ಶ್ರೀಮಂತಿಕೆಯ ಬಗೆಗೆ ಹೆಮ್ಮೆಯಾಗುತ್ತದೆ.
ಆದರೆ ಕೆಲವರು ಕುಲಕುಠಾರರು ಕನ್ನಡದ ಬುಡಕ್ಕೇ ಕೊಡಲಿ ಏಟು ಹಾಕಲು ಬಯಸುತ್ತಿರುವುದು ವಿಷಾದದ ಸಂಗತಿಯಾಗಿದೆ.
ಕನ್ನಡಿಗರನ್ನು ತಪ್ಪು ದಾರಿಗೆ ಎಳೆಯುವ ದುರುದ್ದೇಶದಿಂದಲೇ ಒಬ್ಬ ಭಟ್ಟರು
ಭಾಷೆಯಲ್ಲಿ ರಾಜಕೀಯವನ್ನು ಮಾಡುತ್ತಿದ್ದಾರೆ. ಕನ್ನಡದ ಬರಹವು ಹಿಂದುಳಿದವರನ್ನು ಹಿಂದೆ ಉಳಿಸುವ ಸಲುವಾಗಿಯೇ
ಸಂಕೀಱ್ಣಗೊಳಿಸಲ್ಪಟ್ಟಿದೆ ಎನ್ನುವ ವಿಚಿತ್ರ ತಱ್ಕವನ್ನು ಇವರು ಅಮಾಯಕರ ಕಿವಿಯಲ್ಲಿ ಊದುತ್ತಿದ್ದಾರೆ.
ಈ ತಱ್ಕವನ್ನು ವಿಸ್ತರಿಸುತ್ತ, ಬಾಯಿಲೆಕ್ಕದ ಗಣಿತವು ಸಾಕಾಗುತ್ತಿದ್ದಾಗಲೂ ಸಹ, ಹಿಂದುಳಿದವರನ್ನು
ಹಿಂದೆ ಎಳೆಯುವ ಉದ್ದೇಶದಿಂದಲೇ ಬೀಜಗಣಿತ, ಭೂಮಿತಿ ಮೊದಲಾದ ಸಂಕೀಱ್ಣ ಗಣಿತವನ್ನು ಹೇರಲಾಯಿತು ಎಂದು
ಇವರು ಹೇಳಿಯಾರು! ಸಂಕೀಱ್ಣ ಗಣಿತ ಹಾಗು ಸಂಕೀಱ್ಣ ವಿಜ್ಞಾನದಲ್ಲಿ ಮೇಲ್ಮೆಯನ್ನು ಸಾಧಿಸಿದ ಅನೇಕ ಭಾರತೀಯರು
ತಥಾಕಥಿತ ಹಿಂದುಳಿದ ವಱ್ಗಗಳಿಂದ ಬಂದವರು ಎನ್ನುವುದನ್ನು ನೋಡಿದಾಗ ಭಟ್ಟರ ಬುಡುಬುಡಿಕೆ ಅಱ್ಥವಾಗದಿರದು.
ಅಷ್ಟೇ ಏಕೆ, ರಾಮಾಯಣ ಮೊದಲಾದ ಮಹಾಕಾವ್ಯಗಳನ್ನು
ರಚಿಸಿದವರು, ಅನೇಕ ಉಪನಿಷತ್ತುಗಳನ್ನು ರಚಿಸಿದವರು ತಥಾಕಥಿತ ಹಿಂದುಳಿದ ವಱ್ಗದವರೇ ಆಗಿದ್ದಾರೆ.
ಲಿಪಿಯ ಬಗೆಗೆ ನಾನು ಮಾಡಿದ
ಟೀಕೆಯನ್ನು ದಯವಿಟ್ಟು ಈ ಭಾಷೆಗಳ ಸಾಹಿತ್ಯಕ್ಕೆ ಅನ್ವಯಿಸಬಾರದೆಂದು ನಾನು ನಮ್ರತೆಯಿಂದ ಕೋರುತ್ತೇನೆ.
ತಮಿಳು,ತೆಲಗು, ಬಂಗಾಲಿ ಹಾಗು ಮರಾಠಿ ಭಾಷೆಯ ಸಾಹಿತ್ಯವನ್ನು ಕನ್ನಡ ಅನುವಾದದಲ್ಲಿ ಓದಿದ ನಾನು, ಆ
ಭಾಷೆಗಳ ಸಾಹಿತ್ಯವು ಶ್ರೇಷ್ಠವಾಗಿದೆ ಎಂದು ಅರಿತಿದ್ದೇನೆ. ಬೊಂಗ್ಲಾ ಭಾಷೆಯ ಲಿಪಿಯಲ್ಲಿ ಎಷ್ಟೇ ಕೊರತೆಗಳಿದ್ದರೂ
ಸಹ, ಭಾರತಕ್ಕೆ ‘ನೋಬೆಲ್ ಬಹುಮಾನ’ವನ್ನು ಗಳಿಸಿಕೊಟ್ಟದ್ದು ಇದೇ ಭಾಷೆ. ಲಿಪಿಯ ಕೊರತೆಯು ಸಾಹಿತ್ಯದ
ಕೊರತೆಯಲ್ಲ.
ಸಂಸ್ಕೃತ ಜ್ಞಾನವಿಲ್ಲದ ನಮ್ಮ ಪತ್ರಿಕಾಕಱ್ತರು ಕನ್ನಡದಲ್ಲಿ ಎಷ್ಟೆಲ್ಲ
ತಪ್ಪುಗಳನ್ನು ಮಾಡುತ್ತಾರೆ ಎನ್ನುವುದು ಓದುಗರೆಲ್ಲರಿಗೆ ಬಂದಂತಹ ಅನುಭವವಾಗಿದೆ. ಒಂದು ಉದಾಹರಣೆಯನ್ನು
ನೋಡೋಣ:
ದಿನಾಂಕ ೨-೧೧-೨೦೧೪ರಂದು ಪ್ರಕಟವಾದ ‘ಸಂಯುಕ್ತ ಕಱ್ನಾಟಕ’ ಪತ್ರಿಕೆಯಲ್ಲಿ
ಲಿಖಿತವಾದ ಐದು ಕಾ*ಲಮ್ಮುಗಳ
ಶೀಱ್ಷಿಕೆಯೊಂದು ಹೀಗಿದೆ:
‘ಗಡಿ ಸಮಸ್ಯೆ, ಜನಪ್ರತಿನಿಧಿಗಳಲ್ಲಿ ಇಚ್ಚಾಸಕ್ತಿ
ಕೊರತೆ’
ಈ ಶೀಱ್ಷಿಕೆ ಹೀಗಿರಬೇಕಿತ್ತು:
‘ಗಡಿ ಸಮಸ್ಯೆ: ಜನಪ್ರತಿನಿಧಿಗಳಲ್ಲಿ ಇಚ್ಛಾಶಕ್ತಿಯ
ಕೊರತೆ’
ಬಹುಶಃ ‘ಸಂಯುಕ್ತ ಕಱ್ನಾಟಕ’ದ ಪತ್ರಿಕಾವರದಿಗಾರರು ಅನಕ್ಷರಸ್ಥರಿರಬೇಕೆಂದು
ನನಗೆ ಭಾಸವಾಗುತ್ತದೆ. ಇನ್ನು ಸಂಪಾದಕರು? ಇಂತಹ ವರದಿಯನ್ನು ತಿದ್ದಲು ತಿಳಿಯದ ಸಂಪಾದಕರನ್ನು ಅಕ್ಷರಜ್ಞಾನಿಗಳು
ಎಂದು ಕರೆಯಬಹುದೆ? ಇಂತಹ ಪರಿಸ್ಥಿತಿಗೆ ಮೂಲ ಕಾರಣವೆಂದರೆ ನಮ್ಮ ಶಾಲೆಗಳಲ್ಲಿ ಸಂಸ್ಕೃತ ಬೋಧನೆಯನ್ನು ಅಲಕ್ಷಿಸುತ್ತಿರುವುದು.
ಸಂಸ್ಕೃತ ಹಾಗು ಭಾರತೀಯ ಭಾಷೆಗಳಿಗೆ (-ಉರ್ದು ಹಾಗು ಇಂಗ್ಲಿಶ್ ಹೊರತುಪಡಿಸಿ-)
ಅನ್ಯೋನ್ಯ ಸಂಬಂಧವಿದೆ. ಸಂಸ್ಕೃತದ ಸದ್ಬಳಕೆಯ ಮೂಲಕ ಕನ್ನಡವನ್ನು ಇನ್ನಷ್ಟು ಬಲಪಡಿಸಬಹುದು. ಆ ಕಾಱ್ಯಕ್ಕಾಗಿ
ನಾವು ಕಟಿಬದ್ಧರಾಗೋಣ.
14 comments:
ತುಳಿಲು,
’Fast'ಗೆ ಕನ್ನಡದ್ದೇ ಆದ ಪದ ಇದೆ. ಮಯ್ಸೂರು-ಮಂಡ್ಯ ಕಡೆ ಇದು ಬಳಕೆಯಲ್ಲೂ ಇದೆ.
biṟu hardness, firmness, roughness, rudeness, vehemence, **swiftness**
DED 5439 http://dsalsrv02.uchicago.edu/cgi-bin/philologic/getobject.pl?c.2:1:190.burrow.175680
and swiftness= fastness
ಬಳಕೆ ೧. ಮುಂದಕ್ಕೆ ಬಿರ್ ಬಿರ‍್ನೆ ನಡಿ
೨. ಬಿರ್ರನೆ ಬಾರಪ್ಪ
ಪ್ರಾಕೃತ ಮತ್ತು ಸಂಸ್ಕೃತದ ಅರ್ಥ ವಿಶ್ಲೇಷಣೆ ನನ್ನಂತಹ ಭಾಷೆಯ ಮೂಲವನ್ನು ಕೆದಕುವ ದಾಹಿಗಳಿಗೆ ಬಹು ಉಪಯುಕ್ತವಾಗಿದೆ.
ಹಾಗೆಯೇ, ಪ್ರಾಕೃತ ಭಾಷೆಗಳಿಗೆ ಕನ್ನಡದ ಕೊಡುಗೆ, ವೈಯಾಕರಣಿಗಳ ಬಗೆಗೆ, ಲಿಪಿಗೆ ಬ್ರಾಹ್ಮೀ ಲಿಪಿ ಮೂಲ ಎನ್ನುವ ವಿಚಾರ ನಮಗೆ ಬಹು ಉತ್ತಮ ಮಾಹಿತಿ.
ಸುಲಲಿತ, ಸುಲಭ ಕನ್ನಡ ಭಾಷೆಯು ಇತರ ಲಿಪಿಗಳಿಗೆ ಹೋಲಿಸಿದಾಗ ಉತ್ತಮವಾದ ನೋಟ ಹಾಗು ಸುಸಂಬದ್ಧ ಗ್ರಹಿಕೆ ಇದೆ ನಿಜ.
'ಲಿಪಿಯ ಕೊರತೆಯು ಸಾಹಿತ್ಯದ ಕೊರತೆಯಲ್ಲ' ಎಂಬ ತಮ್ಮ ಮಾತನ್ನು ನಾವೆಲ್ಲ ಒಪ್ಪುತ್ತೇವೆ.
ಇಂದು ನನ್ನಂತ ಎಳೆ ನಿಂಬೆ ಕಾಯಿ ಬರಹಗಾರರು, ಪತ್ರಿಕೆಗಳು, ವಾಹಿನಿಗಳು ಕನ್ನಡದ ಕಾಗುಣಿತ ಮತ್ತು ವ್ಯಾಕರಣದ ತಪ್ಪುಗಳನ್ನು ಮಾಡುತ್ತಲೆ ಬಂದಿವೆ.
ಸರಿ ಹೋಗಲೊಂದು ಸರಳ ಉಪಾಯ ತಾವೇ ಸೂಚಿಸಬೇಕಿದೆ!
shared at facebook 3K as Guest Post:
https://www.facebook.com/photo.php?fbid=946097885434661&set=gm.1563336117259204&type=1&theater
ಶ್ರೀಯುತ. ಭರತ್ ಕುಮಾರ್ ಅವರೇ ತಮ್ಮ ಬ್ಲಾಗ್ ವಿಳಾಸ ತಿಳಿಸಿರಿ.
ಭರತಕುಮಾರರೆ,
ತುಂಬ ಧನ್ಯವಾದಗಳು.
ಬದರಿನಾಥರೆ,
ತಮ್ಮ ಸ್ಪಂದನೆಗಾಗಿ ಧನ್ಯವಾದಗಳು.
ಸುನಾಥ್ ಕಾಕಾ,
ಕನ್ನಡದಿಂದ ಬೇರೆ ಭಾಷೆಗಳಿಗೆ ಹೋದ ಪದಗಳ ಬಗ್ಗೆ ಗೊತ್ತಿದ್ದಿಲ್ಲ. ಬಹು ಉಪಯುಕ್ತ ಲೇಖನ.
ಸಂ ಕಾ ಪತ್ರಿಕೆಯವರ ಬಗ್ಗೆ ಬಹುಷಃ ೫-೬ ಸಲ ನೀವು ಬರೆದಿರಬಹುದು.
ಎಂತಹ ದಿವ್ಯ ನಿರ್ಲಕ್ಷ ?
ಅಪ್ಪ-ಅಮ್ಮ,
ಭಾಷೆ-ಭಾಷೆಗಳ ನಡುವೆ ಪದವಿನಿಮಯವು ಅತ್ಯಂತ ಸಹಜವಾದ ಪ್ರಕ್ರಿಯೆ ಆಗಿದೆ. ಮಲೆಯಾಳಮ್ ಅತ್ಯಂತ ಹೆಚ್ಚು ಸಂಸ್ಕೃತೀಕರಣಗೊಂಡ ದ್ರಾವಿಡ ಭಾಷೆ ಎಂದು ಹೇಳುತ್ತಾರೆ. ನಾನು ಗಮನಿಸಿದ ಪ್ರಕಾರ ತೆಲುಗು ಭಾಷೆಯಲ್ಲಿಯೂ ಸಹ ಸಾಕಷ್ಟು ಸಂಸ್ಕೃತ ಪದಗಳಲ್ಲದೆ, ಉರ್ದು ಪದಗಳೂ ಸೇರಿಕೊಂಡಿವೆ. ಕೆಲವೊಮ್ಮೆ ನಮ್ಮ ಭಾಷೆಯಲ್ಲಿಯೇ ಪದಗಳು ಅಲಭ್ಯವಿರುವಾಗ ಬೇರೆ ಭಾಷೆಯ ಪದಗಳನ್ನು ಎರವಲು ಪಡೆಯುವುದು ಅನಿವಾರ್ಯ. ಉದಾಹರಣೆಗೆ plasma ಪದವನ್ನು ಇದೇ ರೀತಿಯಲ್ಲಿ ಉಳಿಸಿಕೊಳ್ಳಬಹುದು ಎಂದು ಕಾಣುತ್ತದೆ.
ಇನ್ನು ಸಂ.ಕ. ಪತ್ರಿಕೆಯ ಬಗೆಗೆ ಬರೆಯಲು ಏನೂ ಉಳಿದಿಲ್ಲ!
ಹಲವು ಕಾರಣಗಳಿಂದ ಬ್ಲಾಗ್ ಪ್ರಪಂಚದಲ್ಲಿ ನನ್ನ ಸಂಚಾರ ಮೊಟಕುಗೊಂಡಿತ್ತು. ಈಗ ಮತ್ತೆ ಸ್ವಲ್ಪಸ್ವಲ್ಪ ಸುತ್ತಾಟವನ್ನು ಆರಂಭಿಸಿದ್ದೇನೆ. ಬಹುದಿನದನಂತರ ನಿಮ್ಮ ಬ್ಲಾಗಿಗೆ ಭೇಟಿ ಕೊಟ್ಟಾಗ ಈ ಲೇಖನ ಕಂಡು ಖುಶಿಯಾಯಿತು. ಈ ಹಿಂದೆ ನಿಮ್ಮಲ್ಲಿ ಕಾಣದ ಹೊಸಪರಿಯೊಂದನ್ನು ಕಂಡೆ. ಕನ್ನಡಿಗರೇ ಮರೆತು ಕೈಬಿಟ್ಟಿದ್ದ ’ಱೞ’ಗಳನ್ನು ತಾವು ಉಪಯೋಗಿಸಲಾರಂಭಿಸಿರುವುದು ನನ್ನ ಕುತೂಹಲ ಹೆಚ್ಚಿಸಿತು. ಸಂತೋಷವೂ ಕೂಡ. ಈ ಬದಲಾವಣೆಗೆ ವಿಶಿಷ್ಟ ಕಾರಣ?
ಆದರೆ ಆರ್ಯ, ದೀರ್ಘ, ಸಂಕೀರ್ಣ, ತರ್ಕ, ಅರ್ಥ, ವರ್ಗ, ಶೀರ್ಷಿಕೆ, ಕಾರ್ಯ ಇತ್ಯಾದಿ ಸಂಸ್ಕೃತ/ಸಮಸಂಸ್ಕೃತ ಪದಗಳಿಗೂ ಕನ್ನಡದ ಱ ಅಕ್ಷರವನ್ನು ಬಳಸಿದ್ದೀರಿ; ಇದು ಅರ್ಥವಾಗಲಿಲ್ಲ. ಪದ ಸಂಸ್ಕೃತದ್ದಾದರೂ ಕನ್ನಡದ ಜಾಯಮಾನಕ್ಕೆ ತಕ್ಕಂತೆ ಬಳಸಬೇಕೆಂದುಕೊಂಡರೂ ಕನ್ನಡದ ಕನ್ನಡದ ಪದಗಳಲ್ಲೂ ರ/ಳ ಮತ್ತು ಱ/ೞಗಳನ್ನು ಯಾವಾಗ ಬಳಸಬೇಕೆನ್ನುವುದಕ್ಕಿ ನಿರ್ದಿಷ್ಟ ನಿಯಮಗಳಿದ್ದಂತಿಲ್ಲ - ಬಳಕೆಯ ಆಧಾರದ ಮೇಲೇ ಬಳಸಬೇಕಷ್ಟೇ. ಈಗಂತೂ ಅವು ಬಳಕೆಯಿಂದಲೇ ಹೊರಟುಹೋಗಿರುವುದರಿಂದ ಅವನ್ನು ಬಳಸಬೇಕೆಂದರೆ ನಮಗೆ ನಿಘಂಟುಗಳೇ ಶರಣು. ಕನ್ನಡಸಾಹಿತ್ಯಪರಿಷತ್ತಿನವರು ಇದೇ ಉದ್ದೇಶದಿಂದಲೇ ಱೞ-ಕ್ಷಳಕೋಶವನ್ನು ಹೊರತಂದಿದ್ದಾರೆ. ಆದ್ದರಿಂದ ಸಂಸ್ಕೃತ ಮೂಲದ ರ ಳ ಗಳನ್ನು ಹಾಗೆಯೇ ಉಳಿಸಿಕೊಳ್ಳುವುದು ಯುಕ್ತವೆಂಬುದು ನನ್ನ ಅನಿಸಿಕೆ.
ಮಂಜುನಾಥರೆ,
ನಿಮಗೆ ಸುಸ್ವಾಗತ. ನಾನು ‘ಆರ್ಯ’ ಬರೆಯುವ ಬದಲು ‘ಆಱ್ಯ’ ಎಂದು ಬರೆಯಲು ಒಂದು ವಿಶಿಷ್ಟ ಕಾರಣವಿದೆ. ನಮ್ಮ ಬರಹವು ನಮ್ಮ ಉಚ್ಚಾರವನ್ನು ಅನುಸರಿಸಬೇಕು ಎನ್ನುವುದು ನನ್ನ ಮನೀಷೆ. ಆದರೆ ‘ಆರ್ಯ’ ಎಂದು ಬರೆದಾಗ, ‘ರ’ಕಾರದ ಕಾಗುಣಿತವಾದ ೯ ಇದು ‘ಯ’ಕಾರದ ನಂತರ ಬರುವುದು ನನಗೆ ಬೇಸರವನ್ನು ತರುತ್ತಿತ್ತು. ಬರಹ unicode ಬಳಸುವಾಗ ಇದು ಅನಿವಾರ್ಯ! ಆದರೆ unicodeನಲ್ಲಿ ಹಳೆಗನ್ನಡದ ‘ಱ್’ ಬರೆದರೆ, ಅದಕ್ಕೆ ‘ಯ’ಕಾರದ ಒತ್ತನ್ನು ಕೊಡಬಹುದು. ಇದು ನಮ್ಮ ಉಚ್ಚಾರವನ್ನು ಅನುಸರಿಸುತ್ತಿದೆ. ಹೇಗಿದ್ದರೂ ಹಳೆಗನ್ನಡದ ‘ಱ, ೞ’ಗಳು ಈಗ ಮಾಯವಾಗಿವೆ. ಅವುಗಳನ್ನು ಬಳಸಿದರೆ, ವೈಯಾಕರಣಿಗಳು ನನ್ನ ಮೇಲೆ ದೋಷಾರೋಪಣೆ ಮಾಡಲಿಕ್ಕಿಲ್ಲ ಎನ್ನುವ ಹುಚ್ಚುಧೈಱ್ಯದಿಂದ ಹೀಗೆ ಮಾಡಿದೆ. ಆದರೆ ಇದು ಓದುಗರಲ್ಲಿ ಗೊಂದಲ ಹುಟ್ಟಿಸಬಹುದು ಎನ್ನುವ ಹೆದರಿಕೆ ನನ್ನಲ್ಲಿದೆ. ಆದುದರಿಂದ ಅರ್ಕಾವತ್ತನ್ನೇ (೯) ಉಪಯೋಗಿಸುವ ತಿಳಿವು ಇದೀಗ ನನ್ನಲ್ಲಿ ಮೂಡಿದೆ. ನಿಮ್ಮ ಅಭಿಪ್ರಾಯವೇನು?
ಸುನಾಥರೇ, ಈಗಷ್ಟೇ ಇದೇ ವಿಷಯಕ್ಕೆ ಸಂಬಂಧಿಸಿದ ನಿಮ್ಮ ಅಂಚೆಯನ್ನು ಪದಾರ್ಥಚಿಂತಾಮಣಿಯಲ್ಲೂ ನೋಡಿದೆ. ಮೊದಲು ಈ ಅರ್ಕಾವೊತ್ತಿನ ಸಮಸ್ಯೆ ನನ್ನನ್ನೂ ಕಾಡುತ್ತಿತ್ತು, ಆಮೇಲೆ ಅದಕ್ಕೆ ಸುಲಭ ಪರಿಹಾರ ಇದ್ದದ್ದು ತಿಳಿಯಿತು (ನಾನು ನನ್ನ ಲ್ಯಾಪ್ ಟಾಪಿನಲ್ಲಿ ಯೂನಿಕೋಡ್ ಬಳಸುತ್ತೇನೆ. ಮೊಬೈಲ್ ಅಥವ ಇತರ ತಾಂತ್ರಿಕತೆಯಾದರೆ ಈ ವಿಷಯ ನನಗೆ ತಿಳಿಯದು).
ಸೂರ್ಯ ಎನ್ನುವುದನ್ನು ಬರೆಯಬೇಕಾದರೆ sUrya ಎಂದು ಇಂಗ್ಲಿಷಿನಲ್ಲಿ ಬರೆಯುತ್ತೇವಲ್ಲವೇ, ಈ r ಬದಲಿಗೆ R ಬಳಸಿದರೆ ಅರ್ಕಾವೊತ್ತಿನ ಬದಲಿಗೆ ರ್ ಅಕ್ಷರ ಮೂಡುತ್ತದೆ. sUrya = ಸೂರ್ಯ; sURya = ಸೂರ‍್ಯ
ಮಂಜುನಾಥರೆ,
ನೀವು ಹೇಳಿದಂತೆ ಬರೆದಾಗ, ANSI(BRH ಕನ್ನಡ)ದಲ್ಲಿ ಮಾತ್ರ ಇದು ಸರಿಯಾಗಿ ಮೂಡಿತು. ಯುನಿಕೋಡಿನಲ್ಲಿ ಸಾಧ್ಯವಾಗಲಿಲ್ಲ!
ಇನ್ನು blogನಲ್ಲಿ ಬರೆಯುವಾಗ ANSI ಬಳಸಬಹುದಾದರೆ, ನಾನು ಯುನಿಕೋಡನ್ನು ಬಿಟ್ಟುಬಿಡುತ್ತೇನೆ.
ದಯವಿಟ್ಟು ತಿಳಿಸಿ.
ಸುನಾಥರೇ, ನಾನಿಲ್ಲಿ ಬರೆಯುತ್ತಿರುವುದು ಯೂನಿಕೋಡಿನಲ್ಲೇ. ನಾನು ಬರಹ ಡೈರೆಕ್ಟ್ ತಂತ್ರಾಂಶವನ್ನು ಬಳಸುತ್ತೇನೆ. ಅದನ್ನೊಮ್ಮೆ ನೀವೂ ಪ್ರಯತ್ನಿಸಬಹುದು.
ಅಣ್ಣ ಬಹಳ ವೈಚಾರಿಕ ಮತ್ತು ಪದ ಸಂಬಂಧಿತ ಲೇಖ್ಹನ. ಇದರ ತುಣುಕನ್ನು ಪದಾರ್ಥ ಚಿಂತಾಮಣಿಯಲ್ಲಿ ಹಂಚಿಕೊಂಡಿದ್ದೇನೆ. ಮಹಾ-ಅಲ್ಪಪ್ರಾಣಿಗಳ ಗಲಾಟೆ ಬೆಂಗಳೂರು ಮಂಡ್ಯಗಳಲ್ಲಿ ಹೆಚ್ಚಿದೆ...ಕಾರಣ ಗ್ರಾಮ್ಯದಲ್ಲಿ ಹಲವರು ಪಹಾಪ್ರಾಣದ ಉಚ್ಚಾರಣೆಯಲ್ಲಿ ಎಡವುತ್ತಾರೆ ಎನ್ನುವ ಕಾರಣಕ್ಕೆ ಎನ್ನುವುದು ಹೆಚ್ಚು ಜನಕೆ ಗೊತ್ತಿಲ್ಲ.
ಜಲನಯನ,
ಸ್ಪಂದನೆಗೆ ಧನ್ಯವಾದಗಳು. ಪದಾರ್ಥಚಿಂತಾಮಣಿಯಲ್ಲಿ ಭಾಗಶಃ ಹಂಚಿಕೊಂಡಿದ್ದಕ್ಕಾಗಿ ಮತ್ತೊಮ್ಮೆ ಧನ್ಯವಾದಗಳು.
Post a Comment