Thursday, April 23, 2015

ಮತ್ತಿಷ್ಟು ಪದಗಳು


‘ಅಂತರ್ರಾಷ್ಟ್ರೀಯ’ ಎನ್ನುವ ಪದವು ಸರಿಯೊ ಅಥವಾ ‘ಅಂತರರಾಷ್ಟ್ರೀಯ’ ಎನ್ನುವ ಪದವು ಸರಿಯೋ ಎನ್ನುವ ಚರ್ಚೆಯು ಆಗಾಗ ನಡೆಯುತ್ತಿರುತ್ತದೆ. ಈ ಪದಗಳ ವ್ಯತ್ಯಾಸವನ್ನು ಅರಿತುಕೊಳ್ಳಲು, ‘ಅಂತಃ’ ಮತ್ತು ‘ಅಂತರ’ ಈ ಪದಗಳ ವ್ಯತ್ಯಾಸವನ್ನು ಪರಿಶೀಲಿಸಬೇಕು.

‘ಅಂತಃ’ ಪದದ ಅರ್ಥವು ‘ಒಳಗಿನ’ ಎಂದಾಗುತ್ತದೆ. ಉದಾಹರಣೆಗೆ ಅಂತಃಪುರ; ರಾಜವನಿತೆಯರಿಗಾಗಿ ಅರಮನೆಯ ಒಳಭಾಗದಲ್ಲಿ ಕಟ್ಟಲಾಗಿರುವ ಭಾಗವೇ ಅಂತಃಪುರ. ಇದರಂತೆ ಅಂತಃಕರಣ, ಅಂತಃಶತ್ರು ಇತ್ಯಾದಿ. Inland letter ಎನ್ನುವ ಆಂಗ್ಲ ಪದದ ಅರ್ಥವು ‘ಒಳನಾಡ ಅಂಚೆ’. ಇದರ ಸಂಸ್ಕೃತ ಅಥವಾ ಹಿಂದಿ ಅನುವಾದವು ‘ಅಂತಃ+ದೇಶೀಯ = ಅಂತರ್ದೇಶೀಯ’ ಎಂದಾಗುತ್ತದೆ. ಅದರಂತೆ ರಾಷ್ಟ್ರದ ಆಂತರಿಕ ಸಂದರ್ಭವನ್ನು ಸೂಚಿಸಲು, ‘ಅಂತಃ + ರಾಷ್ಟ್ರೀಯ = ಅಂತರ್ರಾಷ್ಟ್ರೀಯ’ ಎನ್ನುವ ಪದವನ್ನು ಬಳಸಬಹುದು. ಉದಾಹರಣೆಗೆ, ರಾಷ್ಟ್ರದ ಒಳಗಿನ ತುರ್ತು ಪರಿಸ್ಥಿತಿಗೆ ‘ಅಂತರ್ರಾಷ್ಟ್ರೀಯ ತುರ್ತು ಪರಿಸ್ಥಿತಿ’ ಎನ್ನಬಹುದು.

ಇನ್ನು ‘ಅಂತರ’ ಎನ್ನುವ ಪದವನ್ನು ಬಳಸಿದ ಸಂದರ್ಭಗಳನ್ನು ನೋಡಿರಿ:
ದೇಶಾಂತರಮ್ = ಅನ್ಯೋ ದೇಶಃ = ಬೇರೊಂದು ದೇಶ
ಕಾಲಾಂತರಮ್ = ಅನ್ಯೋ ಕಾಲಮ್ = ಬೇರೊಂದು ಕಾಲ

ಒಟ್ಟಿನಲ್ಲಿ,  ಬಾಹ್ಯ ಸಂಗತಿಯನ್ನು ಸೂಚಿಸಲು ‘ಅಂತರ’ ಪದವನ್ನು ಬಳಸುತ್ತಾರೆ ಎಂದು ಅರ್ಥೈಸಿಕೊಳ್ಳಬಹುದು. ಆದುದರಿಂದ ‘ವಿಭಿನ್ನ ರಾಷ್ಟ್ರಗಳ’ ನಡುವಿನ ಸಮಸ್ಯೆಯನ್ನು ಸೂಚಿಸಲು ‘ಅಂತರರಾಷ್ಟ್ರೀಯ ಸಮಸ್ಯೆ’ ಎಂದು  ಹೇಳುವುದು ಉಚಿತವಾಗಿದೆ. ಭಿನ್ನ ಜಾತಿಯ ಗಂಡು, ಹೆಣ್ಣುಗಳ ವಿವಾಹವನ್ನು ಅಂತರಜಾತೀಯ ಎಂದು ಹೇಳಬೇಕೇ ಹೊರತು, ಅಂತರ್ಜಾತೀಯ ಎಂದಲ್ಲ! (ಅಂತರ್ಜಾತೀಯ ಪದದ ಅರ್ಥವು ‘ಜಾತಿಯ ಒಳಗಿನ’ ಎಂದಾಗುತ್ತದೆ.) ಇದೇ ರೀತಿಯಲ್ಲಿ internet ಪದದ ಅನುವಾದವು  ‘ಅಂತರಜಾಲ’ ಎಂದು ಆಗುತ್ತದಯೆ ಹೊರತು ‘ಅಂತರ್‍ಜಾಲ’ ಎಂದಲ್ಲ. ‘ಅಂತರ್ಜಾಲ’ಕ್ಕೆ intranet ಎನ್ನುವ ಅರ್ಥ ಬರುತ್ತದೆ.
(ಖ್ಯಾತ ಸಾಹಿತಿ ಶ್ರೀರಂಗರು ‘ಗಂಡಾಂತರ’ ಪದವನ್ನು ‘ಅನ್ಯೋ ಗಂಡಃ (ಬೇರೊಬ್ಬರ ಗಂಡ) = ಗಂಡಾಂತರಮ್’ ಎಂದು ತಮಾಶೆ ಮಾಡುತ್ತಿದ್ದರು.)

ಆಧುನೀಕರಣ ಹಾಗು ಅಧುನಿಕೀಕರಣ ಪದಗಳ ನಡುವೆ ಇದೇ ತರಹದ ಸಂದಿಗ್ಧತೆಯನ್ನು ನೋಡುತ್ತೇವೆ. ‘ಆಧುನಿಕ’ ಪದವು ‘ಅಧುನಾ’ ಎನ್ನುವ ಸಂಸ್ಕೃತ ಪದದ ಮೂಲಕ ಬಂದಿದೆ. ಅಧುನಾ ಎಂದರೆ ಈಗ, ಈ ಕ್ಷಣದಲ್ಲಿ, ಸದ್ಯದಲ್ಲಿ ಇತ್ಯಾದಿ ಅರ್ಥಗಳನ್ನು ಕೊಡುತ್ತದೆ. ಹೀಗಾಗಿ ‘ಆಧುನಿಕ’ ಪದದ ಅರ್ಥವು ‘up to date person’, ಆದುದರಿಂದ ‘modern person’ ಎಂದಾಗುತ್ತದೆ. ಹೀಗಾಗಿ ‘updating ಅಥವಾ modernization’ ಎನ್ನುವ ಪದಗಳಿಗೆ ‘ಆಧುನೀಕರಣ’ ಎನ್ನುವುದೇ ಸಮಂಜಸವಾಗಿದೆ.

‘ಶಾಕ’ ಅಂದರೆ ಕಾಯಿಪಲ್ಲೆ. ‘ಶಾಕಾಹಾರ’ ಎಂದರೆ ‘ಸಸ್ಯಮೂಲ ಆಹಾರ = ಸಸ್ಯಾಹಾರ’. ಆದರೆ ಅನೇಕರು ಇದನ್ನು ‘ಶಾಖಾಹಾರ’ ಎಂದು ತಪ್ಪಾಗಿ ಬರೆಯುತ್ತಾರೆ. ‘ಶಾಖ’ ಎಂದರೆ ಬಿಸಿಯಾದದ್ದು. ಆದುದರಿಂದ ‘ಶಾಖಾಹಾರ’ ಇದರ ಅರ್ಥವು ‘ಬಿಸಿಯಾದ ಅಡುಗೆ’ ಎಂದಾಗುತ್ತದೆ!

ಬಿಸಿಲು ಹೆಚ್ಚಾದಾಗ ನಮಗೆ ‘ಶಕೆ’ಯಾಗುವುದಲ್ಲವೆ? ಕನ್ನಡದ ‘ಶಕೆ’ ಎನ್ನುವ ಪದವು ಸಂಸ್ಕೃತದ ‘ಶಾಖ’ ಪದದ ತದ್ಭವವಾಗಿದೆ. ವೈಶಾಖ ಮಾಸದಲ್ಲಿ ಶಕೆ ಹೆಚ್ಚು. ನಮ್ಮ ‘ಬೇಸಿಗೆ’ ಪದವು ‘ವೈಶಾಖ’ ಪದದ ತದ್ಭವವಾಗಿದೆ. ಉತ್ತರ ಭಾರತೀಯರಿಗೆ ಸೂರ್ಯನು ವಿಶಾಖಾ ನಕ್ಷತ್ರದ ಸನಿಹದಲ್ಲಿದ್ದಾಗ  ವೈಶಾಖ ಮಾಸವು ಪ್ರಾರಂಭವಾಗುತ್ತದೆ. (ಉತ್ತರ ಭಾರತದಲ್ಲಿ ಮಾಸಗಳು ಕೃಷ್ಣ ಪ್ರತಿಪದೆಯಿಂದ ಪ್ರಾರಂಭವಾಗುತ್ತವೆ; ನಮ್ಮಲ್ಲಿ ಶುಕ್ಲ ಪ್ರತಿಪದೆಯಿಂದ ಪ್ರಾರಂಭವಾಗುತ್ತವೆ.) ವಿಶಾಖಾ ಎಂದರೆ ವಿಶೇಷವಾದ ಶಾಖವುಳ್ಳದ್ದು. ಜ್ಯೋತಿಷ್ಯ ಶಾಸ್ತ್ರದ ಮೇರೆಗೆ, ಅಗ್ನಿಯು ವಿಶಾಖಾ ನಕ್ಷತ್ರದ ಅಧಿಪತಿಯಾಗಿದ್ದಾನೆ!

14 comments:

hamsanandi said...

ಇಲ್ಲೊಂದು ತಪ್ಪು ನುಸುಳಿದೆ. ವೈಶಾಖ ಮಾಸವು ಸೂರ್ಯನು ವಿಶಾಖಾ ನಕ್ಷತ್ರದ ಬಳಿ ಕಂಡಾಗ ಇರುವುದಿಲ್ಲ. ಬದಲಿಗೆ, ಹುಣ್ಣಿಮೆಯ ಚಂದ್ರನು ವಿಶಾಖಾ ನಕ್ಷತ್ರದ ಬಳಿ ಇದ್ದಾಗ. ಸಾಮಾನ್ಯವಾಗಿ ಇದು ಏಪ್ರಿಲ್-ಮೇ ತಿಂಗಳಲ್ಲಿ ಬರುತ್ತೆ. ಸೂರ್ಯನು ವಿಶಾಖೆಯ ಬಳಿ ಬರುವುದು ನವೆಂಬರ್ ನಲ್ಲಿ (ಇನ್ನಾರು ತಿಂಗಳ ನಂತರ).

Sachin Bhat said...

ಅತ್ಯುತ್ತಮ ಮತ್ತು ಅತಿ ಪ್ರಸ್ತುತ ಲೇಖನ. ಹೀಗೆಯೇ ಪದಬಳಕೆಗಳ ಅವಾಂತರದ ಬಗ್ಗೆ ಕೊರ್ಗಿ ವೆಂಕಟೇಶ್ವರ ಉಪಾಧ್ಯಾಯರು ಕಸ್ತೂರಿಯಲ್ಲಿ ಬರೆದ ಲೇಖನಮಾಲೆಯನ್ನು ಓದಿದ ನೆನಪು.

Badarinath Palavalli said...

ಹೀಗೆಯೇ ಮತ್ತಷ್ಟು ಪದಗಳನ್ನು ಎತ್ತಿಕೊಡಿ, ಪದಗಳ ಬರಡುಬಿದ್ದ ನನ್ನ ಕಾವ್ಯಕೂ ಹೊಸ ನೀರು ಹರಿಸಿಬಿಡಿ. :-)

sunaath said...

ರಾಮಪ್ರಸಾದರೆ,
ದೋಷವನ್ನು ತಿಳಿಸಿದ್ದಕ್ಕಾಗಿ ಧನ್ಯವಾದಗಳು. ನೀವು ಸೂಚಿಸಿದಂತೆ, ಲೇಖನದಲ್ಲಿ ಸರಿಪಡಿಸಿದ್ದೇನೆ. ಧನ್ಯವಾದಗಳು.

sunaath said...

ಸಚಿನರೆ,
ನಾನೂ ಸಹ ವೆಂಕಟೇಶ್ವರ ಉಪಾಧ್ಯಾಯರ ಲೇಖನಮಾಲೆಯನ್ನು ಓದಿದ್ದೇನೆ, ಮೆಚ್ಚಿಕೊಂಡಿದ್ದೇನೆ ಹಾಗು ಧನ್ಯನಾಗಿದ್ದೇನೆ! ನಿಮ್ಮ ಸ್ಪಂದನೆಗಾಗಿ ಧನ್ಯವಾದಗಳು.

sunaath said...

ಬದರಿನಾಥರೆ,
ಪದವಿನ್ಯಾಸವು ನಿಮ್ಮ ಕವನಗಳ ಒಂದು ವಿಶೇಷತೆ. ನೀವೇ ಸಾಕಷ್ಟು ಪದಗಳನ್ನು ಟಂಕಿಸಿ, ಓದುಗರನ್ನು ರೋಮಾಂಚನಗೊಳಿಸಿದ್ದೀರಿ!

Ramakant Hegde said...

ಸುನಾಥರೇ, ಶ್ರೀರಂಗರ ತಮಾಶೆಯ ಪದ "ಅನ್ಯೋ + ಗಂಡಃ" ಯಾಕೋ ಸರಿ ಅನಿಸುತ್ತಿಲ್ಲ!
"ಗಂಡ" ಹೇಗೆ "ಅನ್ಯ"ನೆನಿಸಬಹುದು, ತಾವೇ ಹೇಳಿ!!
ಮೂಲತಹಾ ಎರಡು ಬೇರೆ ಭಾಷೆಗಳಿಂದ ಎರಡು ಪದಗಳನ್ನು ಒಂದೆಡೆ ಮೇಳೈಸಿದರೆ ಯಾವಾಗಲೂ ಹೀಗೆಯೇ ಆಗುತ್ತೆ!!!!
ಬದಲಾಗಿ "ಅನ್ಯೋಃ + ಗಂಡಃ" ಅನ್ನುತ್ತಿದ್ದರೇನೊ? ಛೆಛೇ, ಇದೂ ಸರಿಯಲ್ಲ!!!!!
ಅಥವಾ "ಅನ್ಯೋಃ + ಗಂಡೋಃ" ಅನ್ನುತ್ತಿದ್ದರೇನೋ?
ಇಲ್ಲವೇ "ಅನ್ಯೋಃ + ಗಂಡೋ" ಅನ್ನುತ್ತಿದ್ದರೇನೋ? ವಾಹ್, ಇದೇ ಹೆಚ್ಚು ಸರಿ ಅನಿಸುತ್ತೆ!!!!!!
ವ್ಯಾಕರಣ ಬಲ್ಲ ತಮಗೆ ಈ ಬಗ್ಗೆ ಹೆಚ್ಚಿಗೆ ಇನ್ನೇನನ್ನೂ ಹೇಳುವ ಅಗತ್ಯ ಕಾಣುತ್ತಿಲ್ಲ!!!!!!!

Ramakant Hegde said...

ಡಾ. ಶಂಕರ "ಬಟ್ಟ"ರು ಟಂಕಿಸಿದ ಇಂಥ ಪದಗಳನ್ನು ತಾವು ಒಮ್ಮೆ ವಿಮರ್ಶಿಸಿ ಬರೆಯಬಹುದೇ?

sunaath said...

ರಮಾಕಾಂತರೆ,
ಶ್ರೀರಂಗರು ಸಾದರಪಡಿಸಿದ ಸಮಾಸವು ಕೇವಲ ವಿನೋದಕ್ಕಾಗಿ. ಸಂಸ್ಕೃತ ವ್ಯಾಕರಣವನ್ನು ಶತಶಃ ಪಾಲಿಸಿದರೆ, ಸಂಸ್ಕೃತದ ತಿಳಿವು ಇಲ್ಲದವರಿಗೆ, ವಿನೋದ ಬಹುಶಃ ಅರ್ಥವಾಗಲಿಕ್ಕಿಲ್ಲ ಎನ್ನುವ ಉದ್ದೇಶದಿಂದ ಅವರು ವ್ಯಾಕರಣಲಂಘನವನ್ನು ಮಾಡಿರಬಹುದೇನೊ?
ಏನೆ ಆದರೂ, ನೀವು ಸೂಕ್ಷ್ಮಸಮೀಕ್ಷಣೆಯನ್ನು ಮಾಡಿ ತಿಳಿಸುವದರಿಂದ, ಅದರದೇ ಆದ ಲಾಭಗಳಿವೆ. ಧನ್ಯವಾದಗಳು.

sunaath said...

ರಮಾಕಾಂತರೆ,
‘ಬಟ್ಟ’ರು ಹಾರುವ ಎತ್ತರಕ್ಕೆ ನನ್ನಂತಹ ಮನುಷ್ಯಮಾತ್ರರು ಹಾರಬಲ್ಲರೆ?

ರಾಘವೇಂದ್ರ ಜೋಶಿ said...

ಸರ್,
ಅಂತರ್ಜಾಲ ಮತ್ತು ಅಂತರಜಾಲ ಎಂಬೆರೆಡು ಪದಗಳ ಬಗ್ಗೆ ನೀವು ನೀಡಿರುವ ಮಾಹಿತಿ ಅತ್ಯಂತ ಸೂಕ್ತವಾಗಿದೆ. ಕೆಲದಿನಗಳ ಹಿಂದೆ ಇದು ನನಗೂ ಕಾಡಿತ್ತು.

ಅಂತರಜಾಲ- internet
ಅಂತರ್'ಜಾಲ ಅಥವಾ ಅಂತರ್ಜಾಲ- intranet

ಇವು ಆಂಗ್ಲದ ಸರಿಯಾದ ಅರ್ಥದಲ್ಲಿ ಅನುವಾದಗೊಂಡಂಥವುಗಳು. ವಿಪರ್ಯಾಸವೆಂದರೆ, ಇವತ್ತು ಅಂತರ್ಜಾಲ ಮತ್ತು ಅಂತರಜಾಲ ಎರಡೂ ಒಂದೇ ಎನ್ನುವ ರೀತಿಯಲ್ಲಿ ಬಳಕೆಯಾಗುತ್ತಲಿದೆ. ವಿಶೇಷವಾಗಿ, ನಮ್ಮ ಮಾಧ್ಯಮಗಳು ಇದರತ್ತ ಗಮನ ಹರಿಸಬೇಕಿದೆ..
-Rj

KalavathiMadhusudan said...

sunaath sir padagala nighantanne namma munde terediduttiruvudakkaagi dhanyavaadagalu.

sunaath said...

RJ,
ಅಂತರ ಮತ್ತು ಅಂತರ್ ಇವುಗಳ ಬಳಕೆ ಬೇಕಾಬಿಟ್ಟಿಯಾಗಿ ನಡೆಯುತ್ತಿದೆ. ಭಾಷಾತಜ್ಞರು ಮಾಧ್ಯಮದವರಿಗೆ ಸೂಕ್ತ ಸಲಹೆಗಳನ್ನು ಕೊಡಬೇಕು ಹಾಗು ಮಾಧ್ಯಮಪ್ರಭುಗಳು ಆ ಸಲಹೆಗಳನ್ನು ಸ್ವೀಕರಿಸಬೇಕು. ಆದರೆ ಇದು ಆದೀತೆ?!

sunaath said...

ಕಲಾವತಿಯವರೆ,
ಪದಗಳ ಪ್ರಪಂಚ ತುಂಬ ಸ್ವಾರಸ್ಯಕರವಾಗಿದೆ! ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.