ಅಂಬಿಕಾತನಯದತ್ತರ ಕಾವ್ಯದಲ್ಲಿ ಹೆಣ್ಣು ಅಂದರೆ ತಾಯಿ. ಅವರ ಅನೇಕ ಕವನಗಳು
ಹೆಣ್ಣನ್ನು ಗೌರವಿಸುವ ಪೂಜ್ಯ ಭಾವನೆಯ ಕವನಗಳೇ ಆಗಿವೆ. ಆದರೆ ಬೇಂದ್ರೆಯವರ ಬದುಕಿನಲ್ಲಿ, ಬದುಕಿನ
ಹೋರಾಟದಲ್ಲಿ, ದಾಂಪತ್ಯದ ಸರಸ-ವಿರಸಗಳಲ್ಲಿ ಹೆಣ್ಣಿನ ಪಾತ್ರವೇನು? ಹೆಂಡತಿಯನ್ನು ಬೇಂದ್ರೆಯವರು ಯಾವ
ದೃಷ್ಟಿಯಿಂದ ಕಂಡಿದ್ದಾರೆ? ಓರ್ವ ಸಂಪ್ರದಾಯಸ್ಥ ಗೃಹಸ್ಥನ ಹಾಗೆ ಅಥವಾ ಒಲವಿನ ಜೊತೆಗಾತಿಯ ಹಾಗೆ?
ಮಾಲಿನಿ ಗುರುಪ್ರಸನ್ನರು ತಮ್ಮ ಲೇಖನದಲ್ಲಿ ಈ ಒಗಟನ್ನು ವಿಶ್ಲೇಷಿಸಿದ್ದಾರೆ, ಒಂದು ಸಂತುಲಿತ ವ್ಯಾಖ್ಯಾನವನ್ನು
ನಮಗೆ ನೀಡಿದ್ದಾರೆ.
(ಈ ಲೇಖನವು ಮೊದಲು ‘ಚುಕುಬುಕು’ವಿನಲ್ಲಿ ಪ್ರಕಟವಾಗಿತ್ತು. ‘ಸಲ್ಲಾಪ’ದಲ್ಲಿ
ಮರುಪ್ರಕಟಣೆ ಮಾಡಲು ಮಾಲಿನಿಯವರು ಸಮ್ಮತಿಸಿದ್ದಾರೆ. ಅವರಿಗೆ ನನ್ನ ಕೃತಜ್ಞತೆಗಳು.)
............................................................................................................................................
ಪ್ರತೀ ಸಲವೂ ಗಮನವಿಟ್ಟು
ನೋಡುತ್ತಿರುತ್ತೇನೆ...ಬಹುತೇಕ ತೊಂಬತ್ತೊಂಬತ್ತರಷ್ಟು ಪ್ರತಿಶತ ಹೀಗೇ ನಡೆಯುತ್ತಿರುತ್ತದೆ.
ಬೆಳಗಿನಿಂದ ಸಂಭ್ರಮದಲ್ಲಿ ಮಿಂದೆದ್ದು ಮಧ್ಯಾಹ್ನ ಕಳೆಯುವ ಹೊತ್ತಿಗೆ ಸೂತಕದ ಛಾಯೆ
ಆವರಿಸಿರುತ್ತದೆ. ತುಸು ಬಾಡಿದ ನಾಚಿದ ತಲೆತಗ್ಗಿಸಿದ ಎಳೆ ಮೊಗ, ದುಗುಡವನ್ನೆಲ್ಲ
ಎದೆಯಲ್ಲಿಟ್ಟುಕೊಂಡೂ ಮೊಗದಲ್ಲಿ ಬಾರದ ನಗೆ ತುಳುಕಿಸುತ್ತಾ ಹೊರಡುತ್ತಿರುವ ನೆಂಟರಿಗೆ ವಿದಾಯ
ಹೇಳುತ್ತಾ ಓಡಾಡುತ್ತಿರುವ ಹಿರಿಯ ತಾಯಿ ಜೀವ. ಅವಳ ಕಣ್ಣಲ್ಲಿ ಇನ್ನೇನು ಹೊರಬಂದುಬಿಡುತ್ತೇನೆ
ಎಂದು ಹಟ ಹಿಡಿದು ನಿಂತ ಕಣ್ಣೀರು.....ಶುರುವಾಗುತ್ತದೆ ನೋಡಿ ಆ ಸಂದರ್ಭದಲ್ಲಿ ನಾನೆಂದೂ
ಕೇಳಬಯಸದ ಆ ಹಾಡು.....ಆ ಹಾಡಿಗೆ ಬಹುತೇಕ ಕಡೆ ರಾಗ, ತಾಳ, ಮಾಧುರ್ಯ ಯಾವುದೂ ಇರುವುದಿಲ್ಲ .....ಅದಕ್ಕಿರುವುದು ಆ ಸಂದರ್ಭದಲ್ಲಿ ಅಳಿಸುವ,
ನೋಯಿಸುವ ಶಕ್ತಿಯೊಂದೇ. ತಮ್ಮ ಹಾಡು ಸುತ್ತಲಿನವರನ್ನು ಎಷ್ಟು ಅಳಿಸುತ್ತಿದೆ
ಎಂದು ಅತ್ತಿತ್ತ ಕಣ್ಣು ಹಾಯಿಸುತ್ತಾ ಖಾತ್ರಿ ಪಡಿಸಿಕೊಳ್ಳುತ್ತಲೆ ಹಾಡುವ ಕೊರಳುಗಳು ನಂತರ ತಾವೂ
ಕಣ್ಣೊರೆಸಿಕೊಳ್ಳುತ್ತವೆ. ಆ ಕ್ಷಣಗಳು ನನಗೆಂದಿಗೂ ತವರಿನ ಪಾಲಿಗೆ ಆ ಹುಡುಗಿಯ ಅರ್ಧ ಸಾವು
ಎನ್ನಿಸಿಬಿಡುತ್ತದೆ.
" ಹೆತ್ತವರ ಮನೆಗಿಂದು
ಹೊರಗಾದೆ ನೀ ಮಗಳೆ,
ಈ ಮನೆಯೇ ಈ ಇವರೇ ನಿನ್ನವರು ಮುಂದೆ,
ಇವರೇ ತಾಯ್ಗಳು ಸಖರು ಭಾಗ್ಯವನು ಬೆಳೆಸುವರು,
ಇವರ ದೇವರುಗಳೇ ನಿನ್ನ ದೇವರುಗಳು".
ಈ ಮನೆಯೇ ಈ ಇವರೇ ನಿನ್ನವರು ಮುಂದೆ,
ಇವರೇ ತಾಯ್ಗಳು ಸಖರು ಭಾಗ್ಯವನು ಬೆಳೆಸುವರು,
ಇವರ ದೇವರುಗಳೇ ನಿನ್ನ ದೇವರುಗಳು".
ಹುಟ್ಟಿಬೆಳೆದ ಪರಿಸರ, ಒಡನಾಟ, ಸುತ್ತಲಿನ ವಾತಾವರಣ, ತಂದೆ ತಾಯಿ , ಅಭಿರುಚಿ ಇವೆಲ್ಲವೂ ಸೇರಿ ಒಬ್ಬ ವ್ಯಕ್ತಿ ಬೆಳೆಯುತ್ತಾನೆ. ಪರಿಸ್ಥಿತಿ ಈಗ ಎಷ್ಟೋ
ಸುಧಾರಿಸಿದೆ ಎಂಬ ನೆಮ್ಮದಿಯಿದ್ದರೂ ಬಹತೇಕ ಮದುವೆಗಳಲ್ಲಿ ಒಂದು ಮನೆಯ ಹೆಣ್ಣುಮಗಳ ಅರ್ಧ ಸಾವು,
ಮತ್ತೊಂದು ಮನೆಯ ಪುಟ್ಟ ಗೃಹಿಣಿಯ ಜನನ ಸಂಭವಿಸುತ್ತಲೇ ಇರುತ್ತದೆ. ಗಮನವಿಟ್ಟು
ನೋಡಿ ಮೇಲಿನ ಸಾಲುಗಳನ್ನು. ಆ ಹೆಣ್ಣು ಮಗುವನ್ನು ಧಾರೆ ಎರೆದು ಕೊಟ್ಟ ಮರುಕ್ಷಣದಿಂದಲೇ ಅವಳು
ಹೆತ್ತವರ ಮನೆಗೆ ಹೊರಗಾಗಿಬಿಡುತ್ತಾಳೆ. ಮುಂದವಳ ತಾಯಿ, ತಂದೆ,
ಸಖ,ಸಖಿ ಎಲ್ಲ ಎಲ್ಲವೂ ಗಂಡನ ಮನೆಯವರೇ." ಕೊಟ್ಟ
ಹೆಣ್ಣು ಕುಲಕ್ಕೆ ಹೊರಗೆ !."
ಇದೆಷ್ಟರ ಮಟ್ಟಿಗೆಂದರೆ ಹುಟ್ಟಿನಿಂದ ಅವಳು
ಪ್ರಾರ್ಥಿಸುತ್ತಿದ್ದ, ಪೂಜಿಸುತ್ತಿದ್ದ ದೇವರೂ ಅವಳ ದೇವರಲ್ಲ. ಗೋತ್ರ, ಸೂತ್ರ
ಎಲ್ಲವೂ ಸತ್ತು ಮರುಹುಟ್ಟು ಪಡೆಯುವವಳಿಗೆ ಹೊಸ ಗೋತ್ರ, ಹೊಸ ಹುಟ್ಟು,
ಹೊಸ ಸೂತ್ರ!!!!! ಹೀಗೆ ಹುಟ್ಟುವ ಪುಟ್ಟ ಗೃಹಿಣಿಯೆಂಬ ಕೂಸಿಗೆ ಬೇಕಾಗುವುದು
ತಂದೆ ತಾಯಿಯಂತೆ ಲಾಲಿಸಬೇಕಾದ ಅತ್ತೆ-ಮಾವ, ಕೈ ಹಿಡಿದು ಜೊತೆ ನಡೆಯುವ
ಅಕ್ಷರಶ ಸಖನಾಗಬೇಕಾದ ಪತಿ, ಅವಳ ಆಸೆ ಆಕಾಂಕ್ಷೆ ಅಭಿರುಚಿ
ಹವ್ಯಾಸಗಳನ್ನು ಅರ್ಥೈಸಿಕೊಳ್ಳಬೇಕಾದ ಹೊಸ ಪರಿವಾರ. ದುರಂತವೆಂದರೆ ಹೆಚ್ಚಿನ ಕಡೆ ಇದಾವುದೂ
ಸಂಭವಿಸುವುದಿಲ್ಲ... ಹೆಂಡತಿಯನ್ನು ಗೆಳತಿಯನ್ನಾಗಿ ನೋಡುವ ಭಾವದ ಬಗ್ಗೆಯೇ ದ್ವಂದ್ವ, ಹೆಂಡತಿಯನ್ನು ಸರಿಸಮಾನ ಪರಿಗಣಿಸಲಾಗದ ಪರಂಪರಾನುಗತ ಪುರುಷ ಪ್ರಜ್ಞೆ...ಇಂದಿನ ಎಷ್ಟೋ
ಮುಂದುವರಿದ ಶಿಷ್ಟ ಪರಿವಾರಗಳಲ್ಲೂ ತನ್ನ ಹಾಜರಿ ಹಾಕುತ್ತಲೇ ಇದೆ. ಆಗೆಲ್ಲಾ ನನಗೆ ಸಖೀಗೀತ
ನೆನಪಾಗುತ್ತದೆ.... ನನ್ನೊಳಗೆ ಬೇಂದ್ರೆ ಕಾಡತೊಡಗುತ್ತಾರೆ....ಹಾಡತೊಡಗುತ್ತಾರೆ.
ಮಹಾನುಭಾವ, ಕವಿ, ಸಂತ, ಅನುಭಾವಿ ಏನೆಲ್ಲ ಹೆಸರುಗಳಿಂದ ಕರೆಯಬಹುದಾದ ಈ ರಸಋಷಿಯ
"ಕವಿ ಜೀವದ ಬ್ಯಾಸರ ಹರಿಸಾಕ
ಹಾಡ ನುಡಿಸಾಕ
ಹೆಚ್ಚಿಗೇನು ಬೇಕ?
ಒಂದು ಹೂತ ಹುಣಸಿಮರ ಸಾಕ"
ಆಡು ನುಡಿಗಳೇ ಲಯಬದ್ಧವಾಗಿ ನಾದಲೀಲೆಯಾಗಿ ಪದ್ಯವಾಗಿ
ಹೊರಹೊಮ್ಮುವ ಚಮತ್ಕಾರ ನನ್ನನ್ನು ಯಾವತ್ತೂ ಬೆರಗುಗೊಳಿಸುತ್ತದೆ. ವೈದಿಕದಲ್ಲಿ ಜಾನಪದವನ್ನು
ಹೇಳುವ, ಜಾನಪದದ
ಮೂಲಕ ವೈದಿಕಕ್ಕೆ ಲಗ್ಗೆ ಹಾಕುವ ಬಗೆ ಅಂಬಿಕಾತನಯರಿಗಷ್ಟೆ ಗೊತ್ತೇನೋ. 'ಗೋವತ್ಸ ಲೀಲೆಯಷ್ಟೇ ಸುಲಲಿತವಾಗಿ 'ಕುರುಡು ಕಾಂಚಾಣವನ್ನು'
ಬರೆಯಬಲ್ಲವರು ಮುಟ್ಟಬಲ್ಲವರು ಅವರು. ಅರವಿಂದರಿಂದ, ಜ್ಞಾನದೇವರಿಂದ
ಗಾಢವಾಗಿ ಪ್ರಭಾವಿತರಾಗಿದ್ದ ಬೇಂದ್ರೆಯವರು ಸಂಸಾರದಲ್ಲಿದ್ದೂ ವಿರಕ್ತ, ವಿರಕ್ತನಾಗಿದ್ದೂ ಅನುರಕ್ತ.
ಇಷ್ಟು ವರ್ಷಗಳಿಂದ ಬೇಂದ್ರೆಯವರ ಕಾವ್ಯವನ್ನು
ಅಭ್ಯಸಿಸುತ್ತಾ ಬಂದ ನನಗೆ ಅವರ ಕಾವ್ಯ ಮಾರ್ಗವನ್ನು, ಕಾವ್ಯದ ಕೇಂದ್ರ ಪ್ರಜ್ಞೆಯನ್ನು ಇಂದಿಗೂ
ಗುರುತಿಸಲಾಗುತ್ತಿಲ್ಲ. ಹುಡುಕ ಹೊರಡುವ ನನ್ನನ್ನು ಪ್ರತಿಬಾರಿಯೂ ದಿಕ್ಕಾಪಾಲಾಗಿ
ಎಳೆದೊಯ್ಯುತ್ತಾರೆ. ಒಮ್ಮೆ ಮುಗಿಲಿಗೆ ಮತ್ತೊಮ್ಮೆ ನೆಲಕ್ಕೆ, ಒಮ್ಮೆ
ಭಾವಕ್ಕೆ ಮತ್ತೊಮ್ಮೆ ಅನುಭಾವಕ್ಕೆ, ಒಮ್ಮೆ ವಿರಕ್ತಿಗೆ ಮತ್ತೊಮ್ಮೆ
ಅನುರಕ್ತಿಗೆ, ಒಮ್ಮೆ ಶೃಂಗಾರಕ್ಕೆ ಮತ್ತೊಮ್ಮೆ ಸಂಸಾರದ
ದಾರಿದ್ರ್ಯಕ್ಕೆ ಹೀಗೆ ನಿಷ್ಕರುಣೆಯಿಂದ ಕಟ್ಟಕಡೆಯದಾಗಿ ನನ್ನನ್ನು ಬಟ್ಟ ಬಯಲಿನಲ್ಲಿ, ಬಹು ದೊಡ್ಡ ಮೈದಾನದಲ್ಲಿ ನಿಲ್ಲಿಸಿಬಿಡುತ್ತಾರೆ. ಎತ್ತ ತಿರುಗಿದರೂ ಮಾರ್ಗಗಳಿಲ್ಲ,
ಅಥವಾ ಎತ್ತ ನೋಡಿದರೂ ಮಾರ್ಗಗಳೇ.!!!!
ಗಂಡು ಹೆಣ್ಣನ್ನು ಸೊತ್ತು ಎಂದು ಭಾವಿಸಿದ್ದ
ಕಾಲದಲ್ಲಿ, ಹೆಣ್ಣು ಗಂಡಿನ ತೊತ್ತಾಗಿದ್ದ ಕಾಲದಲ್ಲಿ, ಗಂಡ ಹೆಂಡಿರ
ನಡುವೆ ಮಾತೆ ನಿಷಿದ್ದವೆನಿಸಿದ್ದ ಕಾಲದಲ್ಲಿ ಹೆಂಡತಿಯನ್ನು ಸಖಿ ಎಂದು ಕರೆಯುವ ಸಂಪ್ರದಾಯಕ್ಕೆ
ನಾಂದಿ ಹಾಡಿದವರು ಬೇಂದ್ರೆ. ( ಮುದ್ದಣ ಮನೋರಮೆ ಹೊರತು ಪಡಿಸಿ). ಬೇಂದ್ರೆಯವರ ಜೀವನದ ಮೂಲ
ಧ್ಯೇಯವೇ ಗೆಳತನದ ತತ್ವ. ಮಧುರ ಚೆನ್ನರ ಜೊತೆಗೂಡಿ ಅವರು ಕಟ್ಟಿದ್ದು ಗೆಳೆಯರ ಗುಂಪು.
ಎಲ್ಲವನ್ನೂ ಗೆಳೆತನದ ನೆರಳಲ್ಲೇ ನೋಡುತ್ತಿದ್ದ ಬೇಂದ್ರೆಯವರಿಗೆ ಹೆಂಡತಿಯೂ ಗೆಳತಿಯಾಗಿ ಕಂಡಳೆ?
ಹಾಗೆ ಕರೆದ ನಂತರವೂ ಅವರಲ್ಲಿ ದ್ವಂದ್ವ ಭಾವವಿತ್ತೇ?
ಅವರ ಮನದನ್ನೆ ಪದ್ಯವನ್ನು ನೋಡಿ.... ಮೊದಲಿಗೇ
ಹೇಳಿಬಿಡುತ್ತಾರೆ..." ಆಡದಿರು ಮನದನ್ನೆ ಎನಗೆ ಇದಿರಾಡದಿರು" . ನನಗೆ ಇದಿರಾಡ ಬೇಡ
ಎನ್ನುತ್ತಾ ಮುಂದುವರೆಯುವ ಕವಿ " ಹೇಳುತಿರೆ ಹೂಂ ಅನ್ನು", "ನಿನ್ನ ತಿಳಿವನು
ಹಣಿಸು" ಎನ್ನುತ್ತಾರೆ. ಅವಳ ಅರಿವನ್ನು ಬದಿಗಿಟ್ಟು ಹೂಂ ಎನ್ನು ಎನ್ನುವ ಭಾವ ಅಲ್ಲಿ
ಕಾಣುತ್ತದೆ.
" ಗಂಡು ದರ್ಪವ ಹರಿದು
ಬಿರುಸು ಬಿಂಕವ ತೊರೆದು
ತೋಳ ತೊಟ್ಟಿಲ ಮಗುವು ಆಗಿ ಬಂದೆ.
ಗೊಂಬೆಯಾಡಿಸಿದಂತೆ ಆಡಿಸೆಂದೆ.
ನಿನ್ನ ತಾಯ್ತನದ ಸೈರಣೆಯ ವಿತರಣೆ ಬೇಕು
ನಿನ್ನ ತಾಳ್ಮೆಯ ಸೈಪಿನೊಂದು ಕರುಣೆಯು ಸಾಕು"
ಬಿರುಸು ಬಿಂಕವ ತೊರೆದು
ತೋಳ ತೊಟ್ಟಿಲ ಮಗುವು ಆಗಿ ಬಂದೆ.
ಗೊಂಬೆಯಾಡಿಸಿದಂತೆ ಆಡಿಸೆಂದೆ.
ನಿನ್ನ ತಾಯ್ತನದ ಸೈರಣೆಯ ವಿತರಣೆ ಬೇಕು
ನಿನ್ನ ತಾಳ್ಮೆಯ ಸೈಪಿನೊಂದು ಕರುಣೆಯು ಸಾಕು"
ಓದುತ್ತಿದ್ದಂತೆಯೇ ಮನ ಆರ್ದ್ರವಾಗುತ್ತದೆ...ತನ್ನ
ಬಿರುಸು ಬಿಂಕ , ದರ್ಪ ತೊರೆದು ಮಗುವಾಗಿ ಬರುವವನ ಮಾತಿಗೆಲ್ಲಾ 'ಹೂಂ'
ಎಂದು ಸೋತು ಬಿಡುವ ಉತ್ಕಟ ಭಾವ ಆವರಿಸಿಬಿಡುತ್ತದೆ. ಗೊಂಬೆಯನ್ನು ನಾವು ಹೇಗೆ
ಬೇಕಾದರೂ ಆಡಿಸಬಹುದು....ಆಡಿಸುವಾಗ ಅದಕ್ಕೆ ಹಾನಿಯಾದರೂ ಅದು ಉಸಿರೆತ್ತುವುದಿಲ್ಲವೆಂಬ ಧೈರ್ಯ
ಆಡಿಸುವಾಕೆಯದು. ಮುಂದೆ ಓದಿ
" ಮಲಗಿರುವ ಹಾವನ್ನು
ಕೆಣಕಬೇಡ
ಕಚ್ಚಿ ವಿಷ ಕಾರಿದರೆ ತಿಣುಕಬೇಡ"
ಕಚ್ಚಿ ವಿಷ ಕಾರಿದರೆ ತಿಣುಕಬೇಡ"
ಮೊದಲು ಮೂಡಿದ ಉತ್ಕಟತೆ ಹಾಗೇ ಜರ್ರೆಂದು ಇಳಿದು
ಹೋಗುತ್ತದೆ. ಒಂದೊಮ್ಮೆ ನಿನ್ನ ತಾಯ್ತನದ ಸೈರಣೆಯ ವಿತರಣೆ ನನಗೆ ದೊರೆಯದಿದ್ದರೆ, ನೀನು ನಾನು ಹೇಳಿದ್ದಕ್ಕೆ ಹೂಂ
ಗುಡದಿದ್ದರೆ, ನಿನ್ನ ತಾಳ್ಮೆ ಇರದಿದ್ದರೆ ನಾನು ಮಲಗಿರುವ ಹಾವು
ನೆನಪಿರಲಿ , ಕಚ್ಚದಿರಲಾರೆ ಎಂದು ಎಚ್ಚರಿಸುತ್ತಾರೆ. ' ಬಾಳನ್ನು ಮಾಡದಿರು ಬೇಳೆಯಂತೆ ಎನ್ನುವ ಕವಿ ನಾವಿಬ್ಬರೂ ಸೇರಿ ಮಾಡದಿರೋಣ ಬಾಳನ್ನು ಬೇಳೆಯಂತೆ
ಎನ್ನುವುದಿಲ್ಲ... ಇಡಿಗಾಳು ಕೂಡಿರಲು ಇಬ್ಬರೂ ಬೇಕು ಎನ್ನುವುದಿಲ್ಲ. ಬಾಳನ್ನು ಹಸನು ಮಾಡುವುದು
ಅವಳ ಕೈಯಲ್ಲಿದೆ, ಅವಳು ಎದಿರಡಾದೇ ಇರುವಲ್ಲಿದೆ, ಸುಮ್ಮನೆ ಹೂಂ ಗುಟ್ಟುವುದರಲ್ಲಿದೆ. ಇದು ಬೇಂದ್ರೆಯವರ ಸಖೀ ಭಾವದ ದ್ವಂದ್ವಕ್ಕೆ ಹಿಡಿದ
ಸ್ಪಷ್ಟ ಕನ್ನಡಿಯಾಗಿದೆ. ಅವರ ಮೊದುಲ ದೀನತೆಯೂ ಸತ್ಯ, ನಂತರದ ದರ್ಪವೂ
ಸತ್ಯ...ಅಲ್ಲಿರುವುದು ದ್ವಂದ್ವ..
ಬರುವುದೇನೆ ನೆಪ್ಪಿಗೆಯಲ್ಲಿ ಕೂಡ ಮೊದಲು ಎದೆಗೆ
ಎದೆಯ ಅಪ್ಪಿಗೆ ಎನ್ನುವ ಕವಿ ನಂತರ ಕೂಡಿದೊಂದು ತಪ್ಪಿಗೆ ಎನ್ನುತ್ತಾರೆ, ಆಹಾ ಚೆಲುವ ಎಂದು ಕುಣಿದೆ ಮಿಕ್ಕ
ಸಂಜೆ ಮಬ್ಬಿಗೆ ಎನ್ನುತ್ತಾರೆ. ಮಿಕ್ಕ ಸಂಜೆಯ ಮಬ್ಬೆಂದರೆ ಕತ್ತಲಲ್ಲವೇ?
ಕತ್ತಲಲ್ಲಿ ಮಾತ್ರ ಚೆಲುವೆಯಾಗಿ ಕಂಡಳೆ ಮನದನ್ನೆ? ಮುಂದೆ
ಬರುವ ಸಖೀಗೀತ ಅವರ ದ್ವಂದ್ವ ಭಾವವನ್ನು ಮತ್ತಷ್ಟು ಸ್ಪಷ್ಟವಾಗಿ ತೋರಿಸುತ್ತದೆ. ಹಾಗೆಂದರೆ
ಅವರಲ್ಲಿ ಒಲವಿನ ಕೊರತೆ ಇದೆ ಎಂದಲ್ಲ, ಸಖೀ ಭಾವದ ಅನುಷ್ಟಾನದ
ಬಗ್ಗೆಯಷ್ಟೇ ಈಗಿರುವ ಪ್ರಶ್ನೆ.. ಅವರ ಒಲವಿನ ಗೆಳೆತನದ ಸಾಲುಗಳು ಹೀಗಿವೆ.
" ನೀನು ದೊಡ್ದವಳಾದೆ
ಮೈಸಲಿಗೆ ಬೆಳೆಸಿದೆ ಏಕಾಂತಕೆಳೆಸಿದೆ ಎಲೆ-ಕೆಳದಿಯೇ
ಏನು ಸಂಭ್ರಮವದು! ಹರೆಯದ ಹಬ್ಬವು ಕನಸು ಮನಸೂ ಹೆಣೆದು ಬೆಳೆಬೆಳೆದೆವೇ.
ಏನು ಸಂಭ್ರಮವದು! ಹರೆಯದ ಹಬ್ಬವು ಕನಸು ಮನಸೂ ಹೆಣೆದು ಬೆಳೆಬೆಳೆದೆವೇ.
ಹೆರಳಿನ ಮಾಲೆಯು ಕಣ್ಣಿನ ಕಾಡಿಗೆ ತುಟಿಯ ತಂಬುಲ
ಉಗುರ ಮದರಂಗಿಯೇ
ಕೊಳಲ ನುಡಿಸುತಿತ್ತು ರಾಗ ಮಿಗುತಲಿತ್ತು ನಿಂತ ನಿಲುವೆಲ್ಲವೂ ತ್ರಿಭಂಗಿಯೇ.
ಕೊಳಲ ನುಡಿಸುತಿತ್ತು ರಾಗ ಮಿಗುತಲಿತ್ತು ನಿಂತ ನಿಲುವೆಲ್ಲವೂ ತ್ರಿಭಂಗಿಯೇ.
ಕಿವಿಮಾತ ಸೊಗಸೇನು ಆಡಿದ್ದಾಡುವುದೇನು ಹಳೆಸದ
ಮುದ್ದಾಟ ಒಸಗುತಿರೆ
ಸವಿ ಬಂತು ಮುನಿಸಿಗೂ, ಕಳೆ ಬಂತು ಕನಸಿಗೂ ಮೋಹದ ಮಾಟವನೆಸಗುತಿರೆ"
ಸವಿ ಬಂತು ಮುನಿಸಿಗೂ, ಕಳೆ ಬಂತು ಕನಸಿಗೂ ಮೋಹದ ಮಾಟವನೆಸಗುತಿರೆ"
ಈ ಒಲವಿನ ಶೃಂಗಾರದ ಆಟದಲ್ಲಿ, ಬೇಟದಲ್ಲಿ ಸಖೀ ಭಾವ ಬಹಳ ಸುಲಭ.
ಒಬ್ಬರನ್ನೊಬ್ಬರು ಮೀರುವುದಿಲ್ಲ, ಮತ್ತೊಬ್ಬರನ್ನೊಬ್ಬರು
ಧಿಕ್ಕರಿಸುವುದಿಲ್ಲ. ಸಖ್ಯ ಭಾವ ತಂತಾನೇ ಪೊರೆದುಕೊಳ್ಳುತ್ತದೆ. ಇದರ ಸತ್ವ ಪರೀಕ್ಷೆಯಾಗುವುದು
ದುರ್ದಿನಗಳಲ್ಲೇ. ಮೋಹನದಾಸನ ಬಿರುಗಾಳಿ ದೇಶದಲ್ಲಷ್ಟೇ ಅಲ್ಲ ಇವರ ಮನೆಯಲ್ಲೂ ಬೀಸಿಬಿಡುತ್ತದೆ.
ಇವರು ಬರೆದ ನರಬಲಿ ಪದ್ಯ ಉದ್ಯೋಗವನ್ನೇ ಬಲಿ ಪಡೆಯುತ್ತದೆ. ತಮ್ಮ ಸಂಸಾರ ಪರಾಶ್ರಯದಲ್ಲಿ
ಬದುಕಬೇಕಾದ ಸ್ಥಿತಿ. ಸ್ವಾಭಿಮಾನಿ ಬೇಂದ್ರೆಯ ಜೀವನ ರೀತಿಯನ್ನೇ ಬದಲಿಸಿ ಬಿಡುತ್ತದೆ.
ಸಂಸಾರವನ್ನು ಪೊರೆಯಲಶಕ್ತರಾದ ಬೇಂದ್ರೆ ಪತ್ನಿಯ ಕಣ್ಣು ತಪ್ಪಿಸಲಾರಂಭಿಸಿದರೇ?
ಪತಿಯ ರೀತಿಯಿಂದ ಕಂಗೆಟ್ಟ ಪತ್ನಿ ಪ್ರಶ್ನಿಸುವ ಪರಿ
ನೋಡಿ.
" ನಿಮ್ಮ ಜೀವನ ಧ್ಯೇಯ ಗೌರೀಶಂಕರದಂತೆ ಶಿಖರವನೆತ್ತಿದೆ ಮುಗಿಲಿನೆಡೆ
ನನ್ನೆದೆ ತಿರುಗಿದೆ ಗಂಗೆಯು ಹರಿದಂತೆ ಜನರೀತಿಯಂತೆಯೇ ನೆಲದ ಕಡೆ.
" ನಿಮ್ಮ ಜೀವನ ಧ್ಯೇಯ ಗೌರೀಶಂಕರದಂತೆ ಶಿಖರವನೆತ್ತಿದೆ ಮುಗಿಲಿನೆಡೆ
ನನ್ನೆದೆ ತಿರುಗಿದೆ ಗಂಗೆಯು ಹರಿದಂತೆ ಜನರೀತಿಯಂತೆಯೇ ನೆಲದ ಕಡೆ.
ನಿಮ್ಮೆದೆ ಕರಗಿದರೆ ನನಗೆ ನೀರೆರೆವುದು ಚಳಿಗಾಳಿ
ಬಂದಂತೆ ಕಲ್ಲಾಗಲು
ನಾ ತಣ್ಣಗಾಗುತ ನಡುಗುತ ಅಡಗಲು ಓದುವೆ ದಿಗ್ಡೇಶಕೆಲ್ಲಾದರೂ
ನಾ ತಣ್ಣಗಾಗುತ ನಡುಗುತ ಅಡಗಲು ಓದುವೆ ದಿಗ್ಡೇಶಕೆಲ್ಲಾದರೂ
ನಿಮ್ಮೆದೆ ಎತ್ತರಕೆ ನಾವೇನು ಬಂದೇವು ಕಲಿತವರ
ಬೆಡಗಿಲ್ಲ ನಮ್ಮ ಕಡೆ
ನಿಮ್ಮ ಕಣ್ಮುಂದೆಯೇ ಕಣ್ಮುಚ್ಚಿದರೆ ಸಾಕು ಗೆದ್ದೆವು' ಎಂದೆ ನೀ ಕಣ್ಮುಚ್ಚಿಯೇ"
ನಿಮ್ಮ ಕಣ್ಮುಂದೆಯೇ ಕಣ್ಮುಚ್ಚಿದರೆ ಸಾಕು ಗೆದ್ದೆವು' ಎಂದೆ ನೀ ಕಣ್ಮುಚ್ಚಿಯೇ"
ಇಲ್ಲಿ ಸಖಿಯಾದವಳಿಗೆ ತಾನು ಸಖಿಯೆಂಬ
ಭಾವವಿದ್ದಿದ್ದರೆ ಕಣ್ಮುಚ್ಚಿ ಒಂದೇ ಉಸುರಿಗೆ ಹೇಳಬೇಕಾದ ಅವಶ್ಯಕತೆಯೇ ಬರುತ್ತಿರಲಿಲ್ಲ.
ಕಣ್ಣಲ್ಲಿ ಕಣ್ಣಿಟ್ಟು ಕೇಳಬಹುದಿತ್ತು. ಮುಂದೆ ನೋಡಿ
"ಗೆಳೆಯರ ಕೂಡಾಡಿ ಬಂದಾಗ,
ನಾ ನಿಮ್ಮ ಮುಖದಲುಕ್ಕುವ ಗೆಲುವ ಕಂಡಿಲ್ಲವೇ !
ಮನೆ ಬೆಳಕು ಮುಂದಿರೆ ಆ ಕಣ್ಣು ಕುಂದಿರೆ ನಾನೊಳಗೆ ನೊಂದಿರೇ ನೀವರಿಯರೇ.
ಮನೆ ಬೆಳಕು ಮುಂದಿರೆ ಆ ಕಣ್ಣು ಕುಂದಿರೆ ನಾನೊಳಗೆ ನೊಂದಿರೇ ನೀವರಿಯರೇ.
ಏಕೆಂದು ಸಾಕೆಂದು ಬೇಕೆಂದು ನೂಕೆಂದು
ರಮಿಸಾಡಿದಿರಲ್ಲ ನೀವು ನಿಮ್ಮಷ್ಟಕ್ಕೆ
ಗಂಗೆಯ ಕಷ್ಟವು ಗೌರಿಗೆ ತಿಳಿಯದು ಹೆಂಗಸಿನ ಕಷ್ಟವು ಗಂಡಸಿಗೆ.
ಗಂಗೆಯ ಕಷ್ಟವು ಗೌರಿಗೆ ತಿಳಿಯದು ಹೆಂಗಸಿನ ಕಷ್ಟವು ಗಂಡಸಿಗೆ.
ಎಂದಿಗೂ ತಿಳಿಯದು ಏತಕೆ ತಿಳಿಯೋದು ದು:ಖವು ನಮ್ಮದು
ನಮಗೆ ಇದೆ"
ಇದು ಪತ್ನಿ ಶೋಕಿಸುವ ಪರಿ. ಇಲ್ಲೊಂದು ಅಂಶ
ನೆನಪಿಡಲೇ ಬೇಕು, ಸಖೀ ಗೀತವನ್ನು ಬರೆದದ್ದು ಅವರ ಪತ್ನಿಯಲ್ಲ, ಸಾಕ್ಷಾತ್
ಬೇಂದ್ರೆಯೇ. ಅಂದರೆ ಆ ತೊಳಲಾಟಗಳು .... ಸಖಿಯೆಂಬ ಭಾವದ ನಿರ್ವಚನ ಅವರನ್ನೂ ಕಾಡಿತ್ತೆ?
ಸಖಿಯೆಂಬ ಭಾವ ಕರೆಯುವವನಿಗಷ್ಟೆ ಇದ್ದರೆ ಸಾಲದು, ಆ ಸಖಿಯ
ಮನದಲ್ಲೂ ತಾನು ಸಖಿಯೆಂಬ ಭಾವದ ಅನಾವರಣವಾಗಬೇಕು . ಅದಾಗದ ತೀವ್ರತೆ ಬೇಂದ್ರೆಯವರನ್ನೂ
ತಟ್ಟಿರಬಹುದೇ? ಪರಂಪರಾನುಗತ ಪುರುಷಾಹಾಂಕಾರದ ಶೃಂಖಲೆ
ಬೇಂದ್ರೆಯವರಿಂದಲೂ ಬಿಡಿಸಿಕೊಳ್ಳಲಾಗಲಿಲ್ಲವೇ? ಅಥವಾ ಹೆಂಡತಿಯನ್ನು
ಸಖಿ ಎಂದು ಕರೆದದ್ದೇ ಆತ್ಮವಂಚನೆಯೇ, ಎಲ್ಲೂ ಹಾಗೆನ್ನಿಸುವುದಿಲ್ಲ,
ಒಂದು ವೇಳೆ ಹೆಂಡತಿಯನ್ನು ದಾಸಿ ಎಂದು ಕರೆಯ ಬೇಕೆನಿಸಿದ್ದರೂ ಹಾಗೆ
ಕರೆಯಬಹುದಾಗಿದ್ದ ನಿರ್ಭೀತ ವ್ಯಕ್ತಿತ್ವ , ಮನಸ್ಥಿತಿ
ಬೇಂದ್ರೆಗಿತ್ತು. ಇಲ್ಲಿ ಪ್ರಾಮಾಣಿಕತೆಯ ಕೊರತೆಯೋ, ಒಲವಿನ ಅಭಾವವೋ
ಎಂದೂ ನನಗೆ ಕಂಡಿಲ್ಲ. ಪರಂಪರಾನುಗತ ಗಂಡಿನ ಮನೋಭಾವವನ್ನು ಒಂದು ಮಟ್ಟಿಗಷ್ಟೇ ಮೀರಲು ಬೇಂದ್ರೆ
ಶಕ್ತರಾದರಾ? ಇಲ್ಲಿ ನನಗೆ ಕಾಣಿಸುತ್ತಿರುವುದು ಅಪ್ಪಟ ದ್ವಂದ್ವ
ಮನಸ್ಥಿತಿ.
ಹೆಣ್ಣಿಗೇನು ಬೇಕೆಂದು ಬೇಂದ್ರೆಯವರಿಗೆ ಚೆನ್ನಾಗಿಯೇ
ಗೊತ್ತಿತ್ತು, ಹೆಣ್ಣಾಗಿ ಬರೆದ " ನಾನು ಬಡವಿ" ಅದಕ್ಕೊಂದು ಸುಂದರ ಉದಾಹರಣೆ.
" ಆತ ಕೊಟ್ಟ ವಸ್ತು ಒಡವೆ
ನನಗೆ ಅವಗೆ ಗೊತ್ತು,
ತೋಳುಗಳಿಗೆ ತೋಳ ಬಂಧಿ ಕೆನ್ನೆ ತುಂಬ ಮುತ್ತು.
ಕುಂದುಕೊರತೆ ತೋರಲಿಲ್ಲ ಬೇಕು ಹೆಚ್ಚಿಗೇನು
ಹೊಟ್ಟೆಗಿತ್ತ ಜೀವ ಫಲವ ತುಟಿಗೆ ಹಾಲುಜೇನು"
ತೋಳುಗಳಿಗೆ ತೋಳ ಬಂಧಿ ಕೆನ್ನೆ ತುಂಬ ಮುತ್ತು.
ಕುಂದುಕೊರತೆ ತೋರಲಿಲ್ಲ ಬೇಕು ಹೆಚ್ಚಿಗೇನು
ಹೊಟ್ಟೆಗಿತ್ತ ಜೀವ ಫಲವ ತುಟಿಗೆ ಹಾಲುಜೇನು"
ಕಡೆಯ ಸಾಲಿನಲ್ಲಿ ಸಾಕ್ಷಾತ್ ರಸಋಷಿಯೆ ಆಗಿ
ವಿಜೃಂಭಿಸಿ ಬಿಡುವ, ಈ ಭಾವಗಳನ್ನು ಇಷ್ಟು ತೀವ್ರವಾಗಿ ಹೇಳಿದ ಕವಿಯನ್ನೂ ಕಾಡುತ್ತಿದ್ದ ಈ ದ್ವಂದ್ವ ಆ ಕಾಲದ
ಜನರ ನಡಾವಳಿಗಳಿಂದ ಹುಟ್ಟಿದ್ದಾ? ಹೆಂಡತಿಯನ್ನು ಸಖಿಯೆಂದು
ಕರೆಯಬೇಕೆಂಬ , ಸಖಿಯನ್ನಾಗಿಸಿ ಬಾಳ ಸಾಗಿಸುವ ಹಂಬಲ... ಹೆಣ್ಣನ್ನು ಆಳದಿದ್ದರೆ
ತಮ್ಮ ಗಂಡುತನದ ಬಗ್ಗೆ ಅಂದಿನ ಸಂಪ್ರದಾಯಸ್ಥ ಸಮಾಜ ತೋರಿಸಬಹುದಿದ್ದ ತಿರಸ್ಕಾರ ಬೇಂದ್ರೆಯವರನ್ನು
ಈ ದ್ವಂದ್ವಕ್ಕೆ ದೂಡಿತ್ತಾ? ಅದೇನೇ ಇದ್ದರೂ ಪತ್ನಿಯನ್ನು ಸಖಿಯೆಂದು
ಕರೆಯುವ ಸಂಪ್ರದಾಯಕ್ಕೆ ನಾಂದಿ ಹಾಡಿದವರು ಕನ್ನಡದ ಕಾವ್ಯ ಪರಂಪರೆಯಲ್ಲಿ ಬೇಂದ್ರೆ ಎಂಬುದನ್ನು
ಮರೆಯಲಾಗದು.
ಸಂಪ್ರದಾಯ ಬಿಡದ, ಎಲ್ಲೆಯನ್ನು ಮೀರದ, ಹಾಗೆಂದು
ಶೃಂಗಾರವನ್ನು ಕಡೆಗಣಿಸಿ ಬರಡು ಬದುಕು ಸಾಗಿಸದ, ಆತ್ಮ ವಂಚನೆ
ಮಾಡಿಕೊಳ್ಳದ, ಹಾಗೆಂದು ಯಾರೂ ಕೇಳುವವರಿಲ್ಲವೆಂದು ಸ್ವೈರವೂ ಇಲ್ಲದ
ಅಪ್ಪಟ ನಾದಮೂಲದ ಬೇಂದ್ರೆಯವರ ಕಾವ್ಯ ಈ ಎಲ್ಲ ದ್ವಂದ್ವಗಳನ್ನೂ ಮೀರಿ ನನ್ನೆದೆಯಲ್ಲಿ ಭದ್ರವಾಗಿ
ಬೇರು ಬಿಟ್ಟಿದೆ....ಯಾವಾಗಲೋ ಒಮ್ಮೊಮ್ಮೆ ಬೇಸತ್ತು ಕುಳಿತಾಗ ಅಲ್ಲೆಲ್ಲೋ ದೂರದಲ್ಲಿ ಬೇಂದ್ರೆ
ಹಾಡುತ್ತಿರುತ್ತಾರೆ.
"ಹುಸಿನಗುತ ಬಂದೇವ, ನಸುನಗುತ ಬಾಳೋಣ, ತುಸು ನಗುತ ತೆರಳೋಣ
ಬಡನೂರು ವರುಷಾನ ಹರುಷಾದಿ ಕಳೆಯೋಣ ಯಾಕಾರೆ ಕೆರಳೋಣ"
ಬಡನೂರು ವರುಷಾನ ಹರುಷಾದಿ ಕಳೆಯೋಣ ಯಾಕಾರೆ ಕೆರಳೋಣ"
ನನ್ನ ತುಟಿಯಂಚಿನಲ್ಲಾಗ ನಸುನಗೆ..............
--ಮಾಲಿನಿ ಗುರುಪ್ರಸನ್ನ
10 comments:
ಈ ಬರಹವನ್ನು ಮತ್ತೆ ಓಡಿಸಿದ್ದಿಕ್ಕಾಗಿ ನಿಮಗೆ ಧನ್ಯವಾದಗಳು ಕಾಕಾ .
ಮಾಲಿನಿಯವರ ಗಾಢ ಶೈಲಿ ಇಷ್ಟವಾಗುತ್ತದೆ .
ವಂದನೆಗಳೊಂದಿಗೆ
ಸ್ವರ್ಣಾ
ಧನ್ಯವಾದಗಳು, ಸ್ವರ್ಣಾ. ಮಾಲಿನಿಯವರ ವಿಶ್ಲೇಷಣೆ ಸೊಗಸಾಗಿದೆ.
ಮಾಲಿನಿ ಗುರುಪ್ರಸನ್ನ ಅವರ ಸಾ೦ದ್ರ ಲೇಖನವನ್ನು ನೀಡಿದ್ದಕ್ಕಾಗಿ ಹಾಗೂ ಬೆ೦ದ್ರೆಯವರ ಬಗ್ಗೆ ಮತ್ತಷ್ಟು ತಿಳಿಯುವ೦ತೆ ಸಹಕರಿಸಿದ್ದಕ್ಕಾಗಿ ಧನ್ಯವಾದಗಳು ಸರ್.
ಪ್ರಭಾಮಣಿಯವರೆ,
ನಿಮ್ಮ ಧನ್ಯವಾದಗಳನ್ನು ಮಾಲಿನಿಯವರಿಗೆ ಅರ್ಪಿಸುತ್ತಿದ್ದೇನೆ!
ಕಾಕಾ.....ನಿಮ್ಮ ಪ್ರೀತಿಗೆ ಮನಸ್ಸು ಮೂಕವಾಗಿದೆ...ಬರೀ ಧನ್ಯವಾದಗ.ಳೆಂಬ ಪದದ ಹೊರತಾಗಿ ಇನ್ನೇನು ಹೇಳಬಲ್ಲೆ?...
ಮಾಲಿನಿ,
ಚುಕುಬುಕುವಿನಲ್ಲಿ ಘಮಘಮಿಸುತ್ತಿದ್ದ ಮಲ್ಲಿಗೆಯನ್ನು ಸಲ್ಲಾಪದಲ್ಲಿಯೂ ಕಂಪು ನೀಡಲು ಅನುಮತಿಸಿದ ನಿಮಗೆ ನಾನು ಧನ್ಯವಾದ ಹೇಳಬೇಕಷ್ಟೆ!
Nimagibbariguu dhanyavadagalu sallalebeku sunath sir
ಓದಿಸಿಕೊಂಡು ಹೋಗುತ್ತದೆ. ಚುಕುಬುಕುವಿನಲ್ಲಿ ಓದಿರಲಿಲ್ಲ ಧನ್ಯವಾದಗಳು ಕಾಕ
ಕಲಾವತಿಯವರೆ,
ಧನ್ಯವಾದಗಳು.
ಸುಗುಣಾ,
ನಿಮಗೆ ಧನ್ಯವಾದಗಳು.
Post a Comment