ಇಂದು ಶ್ರಾವಣಮಾಸ ಶುಕ್ಲಪಕ್ಷ ಪ್ರತಿಪದೆ. ಶ್ರಾವಣಮಾಸವು ಬೇಂದ್ರೆಯವರಿಗೆ ಹಿಗ್ಗು ಕೊಡುವ ಮಾಸ. ಈ ಮಾಸದಲ್ಲಿ ಪ್ರಕೃತಿಯು ಹಸಿರನ್ನು ಉಟ್ಟುಕೊಂಡು ಮೈದುಂಬಿ ಮೆರೆಯುವದನ್ನು ಅವರು ಬಣ್ಣಿಸುವುದು ಹೀಗೆ:
“ಹೂವ ಹಡಲಿಗೆಯನ್ನು ಹೊತ್ತ
ಭೂಮಿತಾಯಿ ಜೋಗಿತಿ
ಮೈsತುಂಬಿ ಕುಣಿಯುತಿಹಳ—
ನಂತ ಕಾಲವೀ ಗತಿ.”
(-ಶ್ರಾವಣದ ವೈಭವ, ಸಖೀಗೀತ)
ಜಗದ್ಗುರು ಶ್ರೀಕೃಷ್ಣ ಹಾಗು ಬೇಂದ್ರೆಯವರ ಆಧ್ಯಾತ್ಮಿಕ ಗುರು ಶ್ರೀ ಅರವಿಂದರು
ಹುಟ್ಟಿದ್ದೂ ಸಹ ಶ್ರಾವಣ ಮಾಸದಲ್ಲಿಯೇ. ಹೀಗಾಗಿ ಇದು ಅವರಿಗೆ ದೈವಿಕ ಮಾಸವೂ ಹೌದು. ಆದುದರಿಂದಲೇ
ಅವರು ತಮ್ಮ‘ಬಂದಿಕಾರಾ ಶ್ರಾವಣಾ’ ಕವನದಲ್ಲಿ, ‘ದುಂದು-ಕಂಸನ ಕೊಂದು, ತಂದೆ-ತಾಯ್ ಹೊರತಂದ / ಕಂದನ್ನ
ಕರೆ ಶ್ರಾವಣಾ’ ಎಂದು ಪ್ರಾರ್ಥಿಸುತ್ತಾರೆ. ನನಗೆ
ತಿಳಿದ ಮೇರೆಗೆ ಬೇಂದ್ರೆಯವರು ಹನ್ನೊಂದು ಶ್ರಾವಣ-ಕವನಗಳನ್ನು ರಚಿಸಿದ್ದಾರೆ. ಅವು ಹೀಗಿವೆ:
(೧) ಚಿತ್ತಿ ಮಳೆಯ ಸಂಜೆ (ಸಖೀಗೀತ….೧೯೩೨)
(೨) ಶ್ರಾವಣದ ವೈಭವ (ಸಖೀಗೀತ….೧೯೩೭)
(೩) ಅಗೋ ಅಲ್ಲಿ ದೂರದಲ್ಲಿ (ನಾದಲೀಲೆ…೧೯೩೮)
(೪) ಶ್ರಾವಣದ ಹಗಲು (ಉಯ್ಯಾಲೆ…೧೯೩೮)
(೫) ಬಂದಿಕಾರಾ ಶ್ರಾವಣಾ (ಗಂಗಾವತರಣ..೧೯೪೪)
(೬) ಶ್ರಾವಣಾ (ಕಾಮಕಸ್ತೂರಿ…೧೯೪೬)
(೭) ಪ್ರತಿ ವರ್ಷದಂತೆ ಬಂತು ಶ್ರಾವಣಾ (ಸೂರ್ಯಪಾನ…೧೯೫೭)
(೮) ಹುಬ್ಬಿ ಮಳೆ (ಸಂಚಯ…೧೯೫೯)
(೯) ಮತ್ತೆ ಶ್ರಾವಣಾ (ನಾಕು ತಂತಿ… ೧೯೬೪)
(೧೦) ಮತ್ತೆ ಶ್ರಾವಣಾ ಬಂದಾ (ನಾಕು ತಂತಿ…೧೯೬೪)
(೧೧) ನಮ್ಮ ಚಿತ್ತಾ (ಶತಮಾನ…ಅಪ್ರಕಟಿತ)
‘ಶ್ರಾವಣಾ’ ಕವನವು ಕೇವಲ ಓದುವ ಕವನವಲ್ಲ. ಶ್ರವಣ ಅಂದರೆ ಕೇಳುವುದು.
‘ಶ್ರಾವಣಾ’ ಕವನದಲ್ಲಿ ಬೇಂದ್ರೆಯವರು ಮಳೆಯ ಭೋರ್ಗರೆತವನ್ನು ನಮಗೆ ಕೇಳಿಸುತ್ತಾರೆ. ಕವನವನ್ನು ಓದುತ್ತಿರುವಂತೆಯೇ ಓದುಗನು ಈ ಮೊರೆತವನ್ನು ಸ್ವತಃ ಅನುಭವಿಸುತ್ತಾನೆ. ಕವನದ
ಪೂರ್ತಿಪಾಠ ಹೀಗಿದೆ:
ಶ್ರಾವಣಾ ಬಂತು ಕಾಡಿಗೆ | ಬಂತು ನಾಡಿಗೆ
ಬಂತು ಬೀಡಿಗೆ | ಶ್ರಾವಣಾ ಬಂತು ||ಪಲ್ಲ||
ಕಡಲಿಗೆ ಬಂತು ಶ್ರಾವಣಾ | ಕುಣಿದ್ಹಾಂಗ ರಾವಣಾ
ಕುಣಿದಾವ ಗಾಳಿ | ಭೈರವನೆ ರೂಪ ತಾಳಿ ||ಅನುಪಲ್ಲ||
೧
ಶ್ರಾವಣಾ ಬಂತು ಘಟ್ಟಕ್ಕ | ರಾಜ್ಯಪಟ್ಟಕ್ಕ
ಬಾನಮಟ್ಟಕ್ಕ
ಏರ್ಯಾವ ಮುಗಿಲು | ರವಿ ಕಾಣೆ ಹಾಡೆ ಹಗಲು |
ಶ್ರಾವಣಾ ಬಂತು ಹೊಳಿಗಳಿಗೆ | ಅದೇ ಶುಭಗಳಿಗೆ
ಹೊಳಿಗೆ
ಮತ್ತೆ ಮಳಿಗೆ
ಆಗ್ಯೇದ ಲಗ್ನ | ಅದರಾಗ ಭೂಮಿ ಮಗ್ನ
೨
ಶ್ರಾವಣಾ ಬಂತು ಊರಿಗೆ | ಕೇರಿ ಕೇರಿಗೆ
ಹೊಡೆದ ಝೂರಿಗೆ
ಜೋಕಾಲಿ ಏರಿ | ಆಡರ್ಯಾವ ಮರಕ ಹಾರಿ |
ಶ್ರಾವಣಾ ಬಂತು ಮನಿಮನಿಗೆ | ಕೂಡಿ ದನಿದನಿಗೆ
ಮನದ ನನಿಕೊನಿಗೆ
ಒಡೆದಾವ ಹಾಡೂ | ರಸ ಉಕ್ಕತಾವ ನೋಡು ||
ಶ್ರಾವಣಾ ಬಂತು.
೩
ಬೆಟ್ಟ ತೊಟ್ಟಾವ ಕುತನಿಯ ಅಂಗಿ
ಹಸಿರು ನೋಡ ತಂಗಿ
ಹೊರಟಾವೆಲ್ಲೊ ಜಂಗಿ
ಜಾತ್ರಿಗೇನೋ | ನೆರದsದ ಇಲ್ಲೆ ತಾನೋ ||
ಬನ ಬನ ನೋಡು ಈಗ ಹ್ಯಾಂಗ
ಮದುವಿ ಮಗನ್ಹಾಂಗ
ತಲಿಗೆ ಬಾಸಿಂಗ
ಕಟ್ಟಿಕೊಂಡು | ನಿಂತಾವ ಹರ್ಷಗೊಂಡು
೪
ಹಸಿರುಟ್ಟ ಬಸುರಿಯ ಹಾಂಗ
ನೆಲಾ ಹೊಲಾ ಹ್ಯಾಂಗ
ಅರಿಷಿಣ ಒಡೆಧ್ಹಾಂಗ
ಹೊಮ್ಮುತಾವ | ಬಂಗಾರ ಚಿಮ್ಮತಾವ |
ಗುಡ್ಡ ಗುಡ್ಡ ಸ್ಥಾವರ ಲಿಂಗ
ಅವಕ ಅಭ್ಯಂಗ
ಎರಿತಾವನ್ನೊ ಹಾಂಗ
ಕೂಡ್ಯಾವ ಮೋಡ | ಸುತ್ತೆಲ್ಲ ನೋಡ ನೋಡ |
೫
ನಾಡೆಲ್ಲ ಏರಿಯ ವಾರಿ
ಹರಿತಾವ ಝರಿ
ಹಾಲಿನ ತೊರಿ
ಈಗ ಯಾಕs | ನೆಲಕೆಲ್ಲ ಕುಡಿಸಲಾಕ ||
ಶ್ರಾವಣಾ
ಬಂತು
ಜಗದ್ಗುರು ಹುಟ್ಟಿದ ಮಾಸ
ಕಟ್ಟಿ ನೂರು ವೇಷ
ಕೊಟ್ಟ ಸಂತೋಷ
ಕುಣಿತದ | ತಾನsನ ದಣಿತದ |
ಶ್ರಾವಣಾ ಬಂತು ಕಾಡಿಗೆ | ಬಂತು ನಾಡಿಗೆ
ಬಂತು ಬೀಡಿಗೆ | ಶ್ರಾವಣಾ ಬಂತು.
ಈ ಕವನವನ್ನು ಬರೆದವನು ಒಬ್ಬನೇ ಕವಿ. ಆದರೆ ಕವನದಲ್ಲಿ ಹಾಸುಹೊಕ್ಕಾದ ಭಾವನೆಗಳು
ಆ ಒಬ್ಬನೇ ಕವಿಯ ವಿವಿಧ ವಯೋಘಟ್ಟಗಳನ್ನು ಹಾಗು ವಿವಿಧ ಪ್ರಜ್ಞೆಗಳನ್ನು ಸೂಚಿಸುವುದು, ಈ ಕವನದ ಅಚ್ಚರಿಗಳಲ್ಲೊಂದು!
ಕವನದ ಮೊದಲಲ್ಲಿ ಇರುವ ಪಲ್ಲ ಹಾಗು ಅನುಪಲ್ಲಗಳು ಭಿರ್ರನೆ ಬೀಸುವ ಮಳೆಗಾಳಿಗೆ
ವಿಸ್ಮಯಗೊಳ್ಳುವ, ಭೀತನಾಗುವ ಬಾಲಮನೋಭಾವವನ್ನು ಪ್ರದರ್ಶಿಸುತ್ತವೆ.
ಶ್ರಾವಣಾ ಬಂತು ಕಾಡಿಗೆ | ಬಂತು ನಾಡಿಗೆ
ಬಂತು ಬೀಡಿಗೆ | ಶ್ರಾವಣಾ ಬಂತು ||ಪಲ್ಲ||
ಕಡಲಿಗೆ ಬಂತು ಶ್ರಾವಣಾ | ಕುಣಿದ್ಹಾಂಗ ರಾವಣಾ
ಕುಣಿದಾವ ಗಾಳಿ | ಭೈರವನೆ ರೂಪ ತಾಳಿ ||ಅನುಪಲ್ಲ||
ಶ್ರಾವಣದ ಈ ಮಳೆಗಾಳಿಯು
ರಾವಣನೇ ಕುಣಿಯುತ್ತಿರುವನೇನೊ ಎನ್ನುವಷ್ಟು ಭೀಕರವಾಗಿವೆ. (ರಾವಣನಿದ್ದದ್ದು ಭಾರತದ ದಕ್ಷಿಣದಲ್ಲಿದ್ದ
ಲಂಕೆಯಲ್ಲಿ; ಭಾರತಕ್ಕೆ ಮುಂಗಾರು ಮಳೆ ಬರುವುದೂ ಸಹ ದಕ್ಷಿಣ-ಪಶ್ಚಿಮದಿಂದಲೇ!) ಕಡಲಿನ ತೆರೆಗಳನ್ನು
ಅಲ್ಲೋಲ ಕಲ್ಲೋಲ ಮಾಡುವ ಶಕ್ತಿಶಾಲಿ ಗಾಳಿಯ ರೂಪವನ್ನು ‘ಕುಣಿದಾವ ಗಾಳಿ’ ಎನ್ನುವ ಎರಡೇ ಪದಗಳಲ್ಲಿ
ಬೇಂದ್ರೆ ಬಿಚ್ಚಿಟ್ಟಿದ್ದಾರೆ. ಆದರೆ ರಾವಣನಂತೆ ಈ ಮಳೆಗಾಳಿ ವಿನಾಶಕಾರಿಯಲ್ಲ. ರಾವಣನು ಪೂಜಿಸುತ್ತಿದ್ದ
ದೇವತೆಯಾದ ಶಿವನೇ ಅಂದರೆ ಭೈರವನೇ ಮಳೆಗಾಳಿಯ ರೂಪ ತಾಳಿ ಕಡಲಿನ ಮೇಲೆ ಕುಣಿಯುತ್ತಿರುವನೇನೊ ಎನ್ನುವ ವಿರಾಟ್ ದರ್ಶನವನ್ನು ಇಲ್ಲಿ ಬೇಂದ್ರೆ ತೋರಿಸುತ್ತಿದ್ದಾರೆ.
ಭೈರವನೂ ಸಹ ಭಯಂಕರನೇ. ಆದರೆ ರಾವಣನಂತೆ ವಿನಾಶಕನಲ್ಲ. ಮುಂಗಾರು ಮಳೆಗಾಳಿಯ ಎರಡೂ ರೂಪಗಳನ್ನು ಬೇಂದ್ರೆಯವರು ಈ ಎರಡು ಪ್ರತಿಮೆಗಳ ಮೂಲಕ ತೋರಿಸುತ್ತಿದ್ದಾರೆ.
(‘ರುದ್ರವಿಲಾಸದ ಪರಿಯೇ
ಬೇರೆ / ಶಿವಕರುಣೆಯೆ ಹಿರಿದು’ ಎನ್ನುವ ಮತ್ತೊಂದು ಬೇಂದ್ರೆ-ಕವನದ ಸಾಲುಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು.)
ಎಂತಹ ಕಲ್ಪನಾವಿಲಾಸದಲ್ಲಿಯೂ
ಸಹ ಬೇಂದ್ರೆಯವರ ಕವನಗಳು ಕ್ರಮಬದ್ಧತೆಯನ್ನು ಕಾಯ್ದುಕೊಳ್ಳುತ್ತವೆ ಎನ್ನುವದಕ್ಕೆ ನಿದರ್ಶನವಾಗಿ,
ಈ ಸಾಲುಗಳನ್ನು ನೋಡಬಹುದು:
ಶ್ರಾವಣಾ ಬಂತು ಕಾಡಿಗೆ | ಬಂತು ನಾಡಿಗೆ
ಬಂತು ಬೀಡಿಗೆ | ಶ್ರಾವಣಾ ಬಂತು
ಮಳೆಗಾಳಿಯು ಕಡಲನ್ನು ದಾಟಿದ ಬಳಿಕ ಮೊದಲು ಪ್ರವೇಶಿಸುವುದು ಪಶ್ಚಿಮ ಘಟ್ಟದ
ಕಾಡನ್ನೇ ತಾನೆ? ಅನಂತರ ಅದು ವಿಶಾಲವಾದ ಜನಬಳಕೆಯ ನಾಡನ್ನು ಹಾಗು ಜನರು ವಾಸಿಸುವ ಬೀಡನ್ನು ತಲಪುತ್ತದೆ!
ಮುಂದಿನ ನುಡಿಯಲ್ಲಿ
ಅಂದರೆ ಒಂದನೆಯ ನುಡಿಯಲ್ಲಿ ಬೇಂದ್ರೆಯವರ ಬಾಲಮನೋಭಾವ ಕಡಿಮೆಯಾಗಿದೆ. ಆ ಸ್ಥಾನದಲ್ಲಿ ಪ್ರಬುದ್ಧ ಕವಿ
ಮನೋಭಾವ ಕಾಣುತ್ತಿದೆ:
ಶ್ರಾವಣಾ ಬಂತು ಘಟ್ಟಕ್ಕ | ರಾಜ್ಯಪಟ್ಟಕ್ಕ
ಬಾನಮಟ್ಟಕ್ಕ
ಏರ್ಯಾವ ಮುಗಿಲು | ರವಿ ಕಾಣೆ ಹಾಡೆ ಹಗಲು |
ಶ್ರಾವಣಾ ಬಂತು ಹೊಳಿಗಳಿಗೆ | ಅದೇ ಶುಭಗಳಿಗೆ
ಹೊಳಿಗೆ
ಮತ್ತೆ ಮಳಿಗೆ
ಆಗ್ಯೇದ ಲಗ್ನ | ಅದರಾಗ ಭೂಮಿ ಮಗ್ನ
ಘಟ್ಟಕ್ಕೆ ಢಿಕ್ಕಿ ಹೊಡೆಯುತ್ತಿದ್ದ
ಶ್ರಾವಣದ ಮೋಡಗಳು ಈಗ ಇನ್ನಿಷ್ಟು ಅಂದರೆ ಆಕಾಶದೆತ್ತರಕ್ಕೆ ಏರಿವೆ. ( ಈ ವರ್ಣನೆ ಕಾಳಿದಾಸನ ‘ಮೇಘದೂತ’ವನ್ನು
ನೆನಪಿಗೆ ತರುವದಲ್ಲವೆ?) ಆಕಾಶದೆತ್ತರಕ್ಕೆ ಏರಿದ
ಈ ಮೋಡಗಳು ತಮ್ಮ ಕೆಳಗಿನ ಭೂಮಿಯೆನ್ನೆಲ್ಲ ಕವಿದಿವೆ. ಇದನ್ನು ಕಂಡ ಸೂರ್ಯನು ಹಾಡುಹಗಲೆ ಕಾಣದಾಗಿದ್ದಾನೆ!
ಭೂಮಿಯ ಮೇಲೆ ಹರಡಿದ
ಈ ಮೋಡಗಳು ಅಲ್ಲಿ ಹರಿಯುತ್ತಿರುವ ಪ್ರವಾಹಗಳಿಗೆ ಮಳೆಯನ್ನು ಸುರಿಯುತ್ತಿವೆ. ಮೋಡ ಹಾಗು ಹೊಳೆ ಒಂದಾಗುತ್ತಿರುವ
ಈ ದೃಶ್ಯವು ಅವುಗಳ ಮಿಲನದಂತೆ ಕಾಣುತ್ತಿದೆ. (ಕನ್ನಡದಲ್ಲಿ ಲಗ್ನ ಎಂದರೆ ಮದುವೆ ಎನ್ನುವ ಅರ್ಥವೇನೋ
ಇದೆ. ಆದರೆ ಲಗ್ನದ ನಿಜವಾದ ಅರ್ಥವು ‘ಹತ್ತಿಕೊಂಡಿರು’ (ಹಿಂದೀ लगना) ಎಂದಾಗುತ್ತದೆ. ಈ ಒಂದು ಶುಭಮುಹೂರ್ತದಲ್ಲಿ
ಭೂಮಿ ಸಂತೋಷಭರಿತವಾಗಿದೆ.
ಹೊಳೆ, ಹಳ್ಳ, ಬಯಲು
ಪ್ರದೇಶ ಇವೆಲ್ಲವನ್ನು ದಾಟಿದ ಮಳೆಗಾಳಿ ಈಗ ಜನವಸತಿಗಳಿಗೆ ಬರಬೇಕಲ್ಲವೆ? ಇಲ್ಲಿ ಕವಿ ಕಾಣುವದೇನು?
ಶ್ರಾವಣಾ ಬಂತು ಊರಿಗೆ | ಕೇರಿ ಕೇರಿಗೆ
ಹೊಡೆದ ಝೂರಿಗೆ
ಜೋಕಾಲಿ ಏರಿ | ಆಡರ್ಯಾವ ಮರಕ ಹಾರಿ |
ಶ್ರಾವಣಾ ಬಂತು ಮನಿಮನಿಗೆ | ಕೂಡಿ ದನಿದನಿಗೆ
ಮನದ ನನಿಕೊನಿಗೆ
ಒಡೆದಾವ ಹಾಡೂ | ರಸ ಉಕ್ಕತಾವ ನೋಡು ||
ಶ್ರಾವಣಾ ಬಂತು.
ಶ್ರಾವಣಮಾಸವು ಹಬ್ಬಗಳ
ಮಾಸವೂ ಹೌದು. ಹಳ್ಳಿಗಳಲ್ಲಿ ಹುಡುಗ, ಹುಡುಗಿಯರು ಮರಕ್ಕೆ ಜೋಕಾಲಿ ಕಟ್ಟಿ ಜೋರುಜೋರಾಗಿ ‘ಝುರಿಕಿ’
(= taking swing) ಹಾಕುತ್ತ ಜೀಕುತ್ತಾರೆ. ಅದೇ ರೀತಿಯಲ್ಲಿ, ಈ ಮಳೆಗಾಳಿಯೂ ಸಹ ಜೋರಾಗಿ ಜೀಕುತ್ತ
ಮರಗಳಿಗೆ ಅಡರುತ್ತದೆ ಅಂದರೆ ತೆಕ್ಕೆ ಹಾಯುತ್ತದೆ. ಹುಡುಗರು ಮಳೆಗಾಳಿ ಎನ್ನದೆ ಹೊರಗೆ ಆಡುತ್ತಿದ್ದರೆ,
ಮನೆಯೊಳಗಿನ ಹಿರಿಯರು ಸಹ ಉತ್ಸಾಹದಲ್ಲಿ ಇರುತ್ತಾರೆ. ತಮ್ಮ ಊರಿಗೆ, ಹೊಲಗಳಿಗೆ ಮಳೆ ಬಂದ ಹುರುಪಿನಲ್ಲಿ
ಅವರು ದನಿಗೆ ದನಿ ಕೂಡಿಸಿ ಉಲಿಯುತ್ತಿದ್ದಾರೆ. ಅವರ ಪ್ರಸನ್ನಗೊಂಡ ಮನಸ್ಸೆಂಬ ರೆಂಬೆಯ ಚೆಲುವಾದ ಕೊನೆಯಲ್ಲಿ
(ಹೂವು ಅರಳುವಂತೆ) ಹಾಡು ಒಡೆದಿವೆ! ‘ಒಡೆದಿವೆ’ ಎನ್ನುವ ಕ್ರಿಯಾಪದವನ್ನು ಎಷ್ಟೆಲ್ಲ ಅರ್ಥಪೂರ್ಣವಾಗಿ
ಬೇಂದ್ರೆ ಬಳಸುತ್ತಿದ್ದಾರೆ, ನೋಡಿ! ‘ರಸ ಉಕ್ಕತಾವ’ ಅಂದರೆ ಸಂತೋಷರಸ ಉಕ್ಕುತ್ತಿದೆ ಎಂದರ್ಥ. ರಸ
ಅಂದರೆ ನೀರು, ದ್ರವ. ಮಳೆಯ ನೀರು ಈ ಹಳ್ಳಿಗರ ಹಾಡುಗಳಲ್ಲಿ ‘ಆನಂದದ್ರವ’ವನ್ನು ಉಕ್ಕಿಸುತ್ತದೆ. ಈ
ಸಂತೋಷವು ಅಭಿವ್ಯಕ್ತವಾಗುವುದು ‘ಶ್ರಾವಣಾ ಬಂತು’ ಎಂದು ಕೊನೆಯಲ್ಲಿ ಬರುವ ಉದ್ಗಾರದಲ್ಲಿ!
( ‘ಮನದ ನನಿಕೊನಿಗೆ’
ಎನ್ನುವಾಗ ಬೇಂದ್ರೆಯವರು ‘ಮನದ ಮಾಮರದ ಕೊನಿಗೆ’ ಎನ್ನುವ ತಮ್ಮದೇ ಸಾಲನ್ನು ಹಾಗು ‘ಕೋಗಿಲೆ, ಚೆಲ್ವ
ಕೋಗಿಲೆ’ ಎನ್ನುವ ನಿಜಗುಣಿ ಶಿವಯೋಗಿಗಳ ಕವನವನ್ನು ನೆನಪಿಸುತ್ತಾರೆ.)
ಈ ಶ್ರಾವಣವು ನಿಸರ್ಗದಲ್ಲಿ
ಮೂಡಿಸಿದ ಪರಿಣಾಮವೇನು? ಅದು ಮುಂದಿನ ನುಡಿಯಲ್ಲಿ
ವ್ಯಕ್ತವಾಗುತ್ತಿದೆ:
ಬೆಟ್ಟ ತೊಟ್ಟಾವ ಕುತನಿಯ ಅಂಗಿ
ಹಸಿರು ನೋಡ ತಂಗಿ
ಹೊರಟಾವೆಲ್ಲೊ ಜಂಗಿ
ಜಾತ್ರಿಗೇನೋ | ನೆರದsದ ಇಲ್ಲೆ ತಾನೋ ||
ಬನ ಬನ ನೋಡು ಈಗ ಹ್ಯಾಂಗ
ಮದುವಿ ಮಗನ್ಹಾಂಗ
ತಲಿಗೆ ಬಾಸಿಂಗ
ಕಟ್ಟಿಕೊಂಡು | ನಿಂತಾವ ಹರ್ಷಗೊಂಡು
ಕವಿಯ ನೋಟ ಇದೀಗ ಸುತ್ತಲಿನ
ಪರಿಸರದ ಮೇಲೆ ವಿಶಾಲವಾಗಿ ಹರಿಯುತ್ತದೆ. ಅಲ್ಲಿ ಕಾಣುವುದೇನು? ಮಳೆಗಾಲದ ಮೊದಲಲ್ಲಿ ಸ್ವೇಚ್ಛೆಯಾಗಿ
ಬೆಳೆದು, ಬೆಟ್ಟಗಳ ಮೇಲೆಲ್ಲ ವ್ಯಾಪಿಸಿದ ಹಸಿರು ಕಿರಿಹುಲ್ಲು. ಇದು ದೂರದಿಂದ ಕವಿಯ ಕಣ್ಣಿಗೆ ಕುತನಿಯ
(=velvet) ಅಂಗಿಯನ್ನು ತೊಟ್ಟ ಪುಟ್ಟ ಮಕ್ಕಳ ಹಾಗೆ ಕಾಣುತ್ತದೆ. ಈ ಪುಟ್ಟ ಮಕ್ಕಳು ಕುತನಿಯ ಅಂಗಿಯನ್ನು
ತೊಡುವುದು ಅಪರೂಪದ ಸಂದರ್ಭಗಳಲ್ಲಿ, ಅಂದರೆ ಹಬ್ಬಗಳಲ್ಲಿ ಜಾತ್ರೆಗೆ ಹೊರಡುವಾಗ. ಅವು ಹೊರಡುವುದು
ತುಂಬ ಉತ್ಸಾಹದಿಂದ (ಜಂಗಿ ಎನ್ನುವುದು ಜಂಗ್ ಎನ್ನುವ ಹಿಂದೀ ಪದದಿಂದ ಬಂದಿದೆ. ಇದರ ಅರ್ಥ ಕಾಳಗ.)
ಆ ಎಲ್ಲ ಬೆಟ್ಟಗಳು ನೆರೆದದ್ದು ಇಲ್ಲಿಯೇ: ಕವಿಯ ಸುತ್ತಲೂ! ಶ್ರಾವಣಮಾಸದ ಮೊದಲ ಹಬ್ಬ ನಾಗರಪಂಚಮಿ
ತಾನೆ? ಈ ಹಬ್ಬವು ಹೆಣ್ಣುಮಕ್ಕಳ ಹಬ್ಬ. ಅಣ್ಣ-ತಂಗಿಯರು ಕೂಡಿ ನಲಿಯುವ ಹಬ್ಬ. ಆದುದರಿಂದಲೇ. ಕವಿಯು
‘ನೋಡ ತಂಗಿ’ ಎಂದು ತನ್ನ ಮುದ್ದು ತಂಗಿಗೆ ಹೇಳುತ್ತಿದ್ದಾನೆ.
ದೂರದ ಬೆಟ್ಟಗಳು ಪುಟ್ಟ
ಮಕ್ಕಳಂತೆ ಕಂಡರೆ, ಹತ್ತಿರದ ಬನಗಳು ಕಾಣುವುದು ಹರೆಯದ ಮದುಮಕ್ಕಳ ಹಾಗೆ. ಬನದಲ್ಲಿರುವ ಮರಗಳ ಶಿರೋಭಾಗವು
ಹೊಸ ತಳಿರುಗಳಿಂದ ಚಿಗುರಿ, ಕವಿಯ ಕಣ್ಣಿಗೆ ಮದುಮಗನು ಧರಿಸಿದ ಬಾಸಿಂಗದ ಹಾಗೆ ಕಾಣುತ್ತದೆ. ಮದುಮಕ್ಕಳಲ್ಲಿ
ಉಕ್ಕುವ ಹರ್ಷವನ್ನು ಈ ಬನಗಳಲ್ಲಿಯೂ ಕಾಣಬಹುದು. ಈ ಹರ್ಷಕ್ಕೆ ಕಾರಣವೆಂದರೆ ಮತ್ತೆ ಮತ್ತೆ ಸೃಷ್ಟಿಸುವ
ಅವಕಾಶ!
ಪುಟ್ಟ ಮಕ್ಕಳನ್ನು ಹಾಗು
ಮದುಮಗನನ್ನು ಕಂಡ ಕವಿಯ ಕಣ್ಣು ಈಗ ಪ್ರಕೃತಿದೇವಿಯನ್ನು ನೋಡುತ್ತದೆ:
ಹಸಿರುಟ್ಟ ಬಸುರಿಯ ಹಾಂಗ
ನೆಲಾ ಹೊಲಾ ಹ್ಯಾಂಗ
ಅರಿಷಿಣ ಒಡೆಧ್ಹಾಂಗ
ಹೊಮ್ಮುತಾವ | ಬಂಗಾರ ಚಿಮ್ಮತಾವ |
ಪ್ರಕೃತಿಯು ಹಸಿರಿನಿಂದ ತುಂಬಿದೆ. ಹಸಿರು ಎಲ್ಲೆಡೆಗೂ ಬೆಳೆದು ನಿಂತಿದೆ. ಭೂತಾಯಿ ಈಗ ಬಸಿರಾಗಿದ್ದಾಳೆ.
ಬಸಿರು ಹೆಣ್ಣುಮಗಳು ಗಲ್ಲಗಳಿಗೆ ಅರಿಷಿಣ ಹಚ್ಚಿಕೊಳ್ಳುವಂತೆ, ನೆಲದ ಮೇಲೆ ಹರಡಿದ ಹಳದಿ ಕಿರುಸಸ್ಯಗಳು
ಭೂತಾಯಿಯ ಚೆಲುವನ್ನು ಹೆಚ್ಚಿಸಿವೆ. ಬಂಗಾರ ಬಣ್ಣದ ಸಸ್ಯಗಳು ಭೂತಾಯಿಯ ಒಡವೆಗಳಂತೆ ಕಾಣುತ್ತವೆ ಎನ್ನುವುದು
ಒಂದು ಅರ್ಥವಾದರೆ, ಸೃಷ್ಟಿಯ ಬಸಿರಿನಿಂದ ಬಂಗಾರದಂತಹ
ಫಲ ದೊರೆಯಲಿದೆ ಎನ್ನುವುದು ಮತ್ತೊಂದು ಅರ್ಥವಾಗುತ್ತದೆ.
ಮಳೆಯ ಅರ್ಭಟಕ್ಕೆ ಪುಟ್ಟ ಬಾಲಕನಂತೆ ಬೆರಗಾಗಿ ನಿಂತ ಕವಿ, ಪ್ರಬುದ್ಧ ಕವಿಯಾಗಿ
ತನ್ನ ಸುತ್ತಲಿನ ಪ್ರಕೃತಿಯ ಚೆಲುವನ್ನು ಕಂಡು ಆನಂದಿಸಿದನು. ಇದೀಗ ಅವನು ಪ್ರಕೃತಿಯ ದೈವಿಕತೆಯನ್ನು
ಅನುಭವಿಸುತ್ತಲಿದ್ದಾನೆ:
ಗುಡ್ಡ ಗುಡ್ಡ ಸ್ಥಾವರ ಲಿಂಗ
ಅವಕ ಅಭ್ಯಂಗ
ಎರಿತಾವನ್ನೊ ಹಾಂಗ
ಕೂಡ್ಯಾವ ಮೋಡ | ಸುತ್ತೆಲ್ಲ ನೋಡ ನೋಡ |
ಕುತನಿಯ ಅಂಗಿಯನ್ನು ತೊಟ್ಟ ಪುಟ್ಟ ಮಕ್ಕಳಂತೆ ಕಾಣುತ್ತಿದ್ದ ಬೆಟ್ಟಗಳು
ಈಗ ಅವನಿಗೆ ಸ್ಥಾವರಲಿಂಗದಂತೆ ಕಾಣುತ್ತಿವೆ. ದೇವಾಲಯಗಳಲ್ಲಿ ಇರುವ ಲಿಂಗಕ್ಕೆ ಅಭಿಷೇಕವಾಗುವುದು ಪೂಜಾರಿಯು
ಬಿಂದಿಗೆಯಲ್ಲಿ ತುಂಬಿ ತಂದ ಹೊಳೆಯ ಅಥವಾ ಬಾವಿಯ ನೀರಿನಿಂದ. ಬಯಲಲ್ಲಿ ಸ್ಥಾವರಲಿಂಗಗಳಂತೆ ತಲೆ ಎತ್ತಿ ನಿಂತಿರುವ ಈ ಬೆಟ್ಟಗಳಿಗೆ
ಅಭಿಷೇಕವಾಗುತ್ತಿರುವುದು ಮಳೆಯ ಸಹಜ ನೀರಿನಿಂದ. ಅಭಿಷೇಕಿಸುತ್ತಿರುವ ಭಕ್ತರು ಅಥವಾ ಪೂಜಾರಿಗಳೆಂದರೆ
ಮೋಡಗಳು. ಇದೊಂದು ಅದ್ಭುತ ಕಲ್ಪನೆ. ಈ ಕಲ್ಪನೆ ಲೌಕಿಕ
ಕವಿಗೆ ಸಾಧ್ಯವಾಗದು. ಇದು ಹೊಳೆಯುವುದು ಧ್ಯಾನಸ್ಥನಾದ ಅವಧೂತನಿಗೆ ಮಾತ್ರ. ಈ ಸಾಲುಗಳು ಬೇಂದ್ರೆಯವರ
ಮಾನಸದಲ್ಲಿ ಹೊಳೆದಾಗ ಅವರು ಅವಧೂತಪ್ರಜ್ಞೆಯಲ್ಲಿ ಇರಬೇಕು.
( ಅಭ್ಯಂಗಸ್ನಾನ ಮಾಡುವುದು ಯಜ್ಞಪೂರ್ವದಲ್ಲಿ. ಶ್ರಾವಣದ ಮಳೆ ದೈವಯಜ್ಞದಂತಿದೆ. ಈ ಹಿನ್ನೆಲೆಯಲ್ಲಿ ‘ಸಾಕ್ಷಿ’ (=ಆರ್.ಜಿ.ಕುಲಕರ್ಣಿ)ಯವರು ಹೇಳುವುದು ಹೀಗೆ: ‘ಪರ್ಜನ್ಯ ಒಂದು ಯಜ್ಞಕ್ರಮ.....ಅದು ಪುರುಷಾರ್ಥಪ್ರದಾಯಕವಾದದ್ದು...ಅದು ಕೇವಲ ಪ್ರಕೃತಿವಿಲಾಸವಲ್ಲ ಎನ್ನುವುದನ್ನು ಬೇಂದ್ರೆಯವರ ಕಾವ್ಯೋದ್ಯೋಗ ಕಂಡಿರಬೇಕು.)
(ಟಿಪ್ಪಣಿ : ‘ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ ’ ಎಂದು ಬಸವಣ್ಣನವರು
ಸಾರಿದರು. ಬೇಂದ್ರೆ ಇಲ್ಲಿ ನಿಸರ್ಗವನ್ನೇ ದೇವಾಲಯವನ್ನಾಗಿ ಮಾಡಿ, ಬೆಟ್ಟಗಳನ್ನೇ ಲಿಂಗಗಳನ್ನಾಗಿ
ಮಾಡಿ ಸ್ಥಾವರದ ವಿಭೂತಿಯನ್ನು ತೋರಿಸಿದ್ದಾರೆ.)
ಈ ಅವಧೂತಕವಿಗೆ ಮತ್ತೇನು ಕಾಣಿಸುತ್ತದೆ?
ನಾಡೆಲ್ಲ ಏರಿಯ ವಾರಿ
ಹರಿತಾವ ಝರಿ
ಹಾಲಿನ ತೊರಿ
ಈಗ ಯಾಕs | ನೆಲಕೆಲ್ಲ ಕುಡಿಸಲಾಕ ||
ಶ್ರಾವಣಾ
ಬಂತು
ಈ ಪರ್ಜನ್ಯಯಜ್ಞದ ಫಲಶ್ರುತಿಯೇನು?
ಶ್ರಾವಣ ಮಾಸ ಬರುವುದು ಸೃಷ್ಟಿಗೆ ಪೋಷಣೆ ಕೊಡುವುದಕ್ಕಾಗಿ. ನಾಡಿನ ಏರಿಗಳು
ಹಾಗು ಓರೆಗಳು (ವಾರಿಗೆ ಓರೆ ಎನ್ನುವ ಅರ್ಥವಿರುವಂತೆಯೇ ನೀರು ಎನ್ನುವ ಅರ್ಥವೂ ಇದೆ.) ನೀರಿನ ಝರಿಗಳಿಂದ
ತುಂಬಿ ಹರಿಯುತ್ತವೆ. ಇದು ಬರಿ ನೀರಲ್ಲ, ಇದು ಹಾಲಿನ ತೊರಿ. ಈ ಹಾಲನ್ನು ಶ್ರಾವಣವು ನೆಲಕ್ಕೆ ಕುಡಿಸುತ್ತದೆ. ಭೂತಾಯಿಗೇ ಶ್ರಾವಣವು ತಾಯಿಯಾಗಿದೆ!
ಶ್ರಾವಣದ ಈ ಆಟ, ಸೃಷ್ಟಿಯ ಈ ಆಟ ನಮ್ಮ ಅವಧೂತ ಕವಿಗೆ ಕೊಡುವ ದರ್ಶನ ಏನಿರಬಹುದು?
ಜಗದ್ಗುರು ಹುಟ್ಟಿದ ಮಾಸ
ಕಟ್ಟಿ ನೂರು ವೇಷ
ಕೊಟ್ಟ ಸಂತೋಷ
ಕುಣಿತದ | ತಾನsನ ದಣಿತದ |
ಶ್ರಾವಣಾ ಬಂತು ಕಾಡಿಗೆ | ಬಂತು ನಾಡಿಗೆ
ಬಂತು ಬೀಡಿಗೆ | ಶ್ರಾವಣಾ ಬಂತು.
ಶ್ರೀಕೃಷ್ಣ ಹಾಗು ಅರವಿಂದರು ಹುಟ್ಟಿದ್ದು ಶ್ರಾವಣ ಮಾಸದಲ್ಲಿ. ಇವರಿಬ್ಬರೂ
ಜಗದ್ಗುರುಗಳು. ಇವರು ತಮ್ಮ ಲೀಲೆಗಾಗಿ ನೂರು ವೇಷ ಕಟ್ಟುತ್ತಾರೆ, ಕುಣಿಯುತ್ತಾರೆ, ಕುಣಿಕುಣಿದು ದಣಿಯುತ್ತಾರೆ.
ಈ ಆಟವು ಅವರಿಗೂ ಸಂತೋಷವನ್ನು ಕೊಡುತ್ತದೆ, ನಮಗೂ ಸಂತೋಷವನ್ನು ಕೊಡುತ್ತದೆ. (ಪುರಂದರ ದಾಸರ ‘ಆಡ
ಪೋಗೋಣು ಬಾರೊ ರಂಗಾ, ಕೂಡಿ ಯಮುನೆ ತೀರದಲ್ಲಿ’ ಎನ್ನುವ ಗೀತೆಯನ್ನು ನೆನಪಿಸಿಕೊಳ್ಳಿರಿ.) ಈ ಸೃಷ್ಟಿಯ
ಚರಾಚರ ವಸ್ತುಗಳು, ಋತುಮಾನಗಳು ಎಲ್ಲವೂ ಆತನ ಆಟಿಕೆಗಳೇ! ಎಲ್ಲವೂ ಆತನ ಆನಂದಕ್ಕಾಗಿ! ಇದೇ ನಮ್ಮ ಅವಧೂತ ಕವಿ ಕಂಡ ಕಾಣ್ಕೆ.
(ಬೇಂದ್ರೆಯವರ ‘ಕುಣಿಯೋಣ ಬಾರಾ’ ಕವನದ ಕೊನೆಯ ಸಾಲುಗಳನ್ನು ನೆನಪಿಸಿಕೊಳ್ಳಿರಿ:
‘ಆ ಕ್ಷೀರಸಾಗರ / ದಾನಂದದಾಗರ / ತೆರಿ ತೆರಿ ತೆರದರ / ಕುಣಿಯೋಣ ಬಾ
ಹದಿನಾಲ್ಕು ಲೋಕಕ್ಕ / ಚಿಮ್ಮಲಿ ಈ ಸುಖ / ಹಿಗ್ಗಲಿ ಸಿರಿಮುಖ / ಕುಣಿಯೋಣ
ಬಾ’)
ಬೇಂದ್ರೆಯವರು ಕವನದ ಮೊದಲಿನಿಂದ ಕೊನೆಯವರೆಗೆ ಮೂರು ಬಗೆಯ ಪ್ರಜ್ಞೆಗಳಲ್ಲಿ
ಈ ಕವನವನ್ನು ರಚಿಸಿದ್ದಾರೆ:
(೧) ಬೆರಗಿನ ಬಾಲಭಾವ (೨) ಪ್ರಬುದ್ಧ ಕವಿಭಾವ (೩) ಅವಧೂತಭಾವ
ಕವನದ ನುಡಿಗಳೂ ಸಹ ಇದೇ ಕ್ರಮವನ್ನು ಅನುಸರಿಸಿವೆ.
ಈ ಮೂರು ಭಾವಗಳಲ್ಲಿಯ ಕಾಣ್ಕೆಗಳನ್ನು ಹೆಣೆದು ಬೇಂದ್ರೆಯವರು ರಸಸೃಷ್ಟಿಯನ್ನು
ಮಾಡಿದ್ದಾರೆ. ಸಂಗೀತದ ನಾದವನ್ನು ಕವನದಲ್ಲಿ ಹೊಮ್ಮಿಸಿದ್ದಾರೆ. ಪ್ರಕೃತಿಯ ಹಿಗ್ಗನ್ನು ತಾವು ಅನುಭವಿಸುತ್ತ,
ನಮಗೂ ಉದಾರವಾಗಿ ಹಂಚಿದ್ದಾರೆ.
(ಟಿಪ್ಪಣಿ: ಸುಮಾರು ನೂರು ವರ್ಷಗಳ ಹಿಂದೆ ಧಾರವಾಡದಲ್ಲಿ ನೂರು ಸೆಂಟಿಮೀಟರ
ವಾರ್ಷಿಕ ಮಳೆಯಾದ ದಾಖಲೆ ಇದೆ. ಇದೀಗ ೫೦-೬೦ ಸೆಂಟಿಮೀಟರ ಮಳೆಯಾದರೆ, ಅದನ್ನೇ ಅತಿವೃಷ್ಟಿ ಎನ್ನುವ
ಕಾಲ ಬಂದಿದೆ. ಆ ಕಾಲದ ಮಳೆಯನ್ನು ಅನುಭವಿಸಿದ, ಧಾರವಾಡದ ಜಾನಪದ ಕವಿಯೊಬ್ಬ ಹಾಡಿದ್ದು ಹೀಗೆ:
ಧಾರವಾಡದ ಮ್ಯಾಗ
ಏರಿ ಬಂದಾವ ಮೋಡ
ದೊರಿಯ ನೋಡಪ್ಪ, ಕಮಕಾಳ ಕಟ್ಟೀ ಮ್ಯಾಲ
ಭೋರ್ಯಾಡತಾನ ಮಳಿರಾಯ !)
(‘ಶ್ರಾವಣಾ’ ಕವನವು ‘ಕಾಮಕಸ್ತೂರಿ’ ಕವನಸಂಕಲನದಲ್ಲಿದೆ.)
(‘ಶ್ರಾವಣಾ’ ಕವನವು ‘ಕಾಮಕಸ್ತೂರಿ’ ಕವನಸಂಕಲನದಲ್ಲಿದೆ.)
17 comments:
ಓಹ್! ಎಷ್ಟು ಚಂದದ ವಿಶ್ಲೇಷಣೆ!
ಮೊದಲೇ ಚಂದದ ಕವನ, ನಿಮ್ಮ ವಿಶ್ಲೇಷಣೆ ಆ ಚಂದವನ್ನ ಹೆಚ್ಚಿಸಿದೆ..
ಶ್ರಾವಣ ಮಾಸಕ್ಕೆ ಒಳ್ಳೆಯ ಲೇಖನ . ಸಿ ಅಶ್ವಥ್ ಅವರ ಧ್ವನಿಯಲ್ಲಿ ಈ ಹಾಡನ್ನು ಎಷ್ಟು ಬಾರಿ ಕೇಳಿದ್ದೇನೋ . ಇದರ ಅರ್ಥವನ್ನು ಮನಸ್ಸಿಗೆ ತಟ್ಟುವ ಹಾಗೆ ನಿರೂಪಿಸಿದ್ದೀರಿ
ಹಾಗೆ ಶ್ರಾವಣದ ಬಗ್ಗೆ ಬೇಂದ್ರೆಯವರ ಇತರೆ ಕವನಗಳ ಬಗ್ಗೆ ಮಾಹಿತಿ ಕೊಟ್ಟಿದ್ದೀರಿ
ಅನುಶಾಂತಾ,
ಕವನವೇ ತುಂಬ ಚಂದವಾಗಿದೆ. ವಿಶ್ಲೇಷಣೆಯ ಬಗೆಗೆ ಅಷ್ಟೇನೂ ಹೇಳಲಾಗದು!
ಗಿರೀಶರೆ,
ಧನ್ಯವಾದಗಳು.
ವ್ಹಾ ಅದ್ಭುತ ವಿಶ್ಲೇಷಣೆ. ನಿಜಾರ್ಥದಲ್ಲಿ ಕನ್ನಡ ಸಾಹಿತ್ಯದ ಭೌಮಾಕಾಶವನ್ನೆಲ್ಲ ವ್ಯಾಪಿಸಿಕೊಂಡ ಜ್ಞಾನಪೀಠಿಗಳು ಇಬ್ಬರೇ ಇಬ್ಬರು. ಒಬ್ಬರು ಬೇಂದ್ರೆ, ಇನ್ನೊಬ್ಬರು ಕಾರಂತ.
ಸಚಿನರೆ,
ನೀವು ಹೇಳುವುದು ನೂರಕ್ಕೆ ನೂರು ಸತ್ಯ. ಬೇಂದ್ರೆ, ಕಾರಂತ ಇವರಿಬ್ಬರೇ ನಿಜವಾದ ಜ್ಞಾನಪೀಠಿಗಳು.
ತುಂಬಾ ಸೊಗಸಾಗಿದೆ ಹಾಡಿನ ಅರ್ಥ
ನಿಮ್ಮ ಕವನ ವಿಶ್ಲೇಷಣಾ ಅನುಭವ ನಿಜವಾಗಿಯೂ ತುಂಭಾ ಅದ್ಬುತವಾಗಿದೆ. ಈ ವಿವರಣೆಯಿಂದ ಅದ್ಭುತವಾದ ಕವನಕ್ಕೆ ಜೀವ ತುಂಬಿದಂತಾಗಿದೆ. ಮಾಹಿತಿ ನೀಡಿದ ನಿಮಗೆ ಅನಂತ ನಮನಗಳು
Unknownರೆ, ಕವನವೇ ಅದ್ಭುತವಾಗಿದೆ. ಕವನವನ್ನು ಹಾಡಿಕೊಳ್ಳುವಾಗ ಶ್ರಾವಣದ ಅನುಭವವಾಗುತ್ತದೆಯಲ್ಲಲವೆ?! ಸ್ಪಂದನೆಗಾಗಿ ಧನ್ಯವಾದಗಳು,
ತುಂಬಾ ಅದ್ಭುತವಾದಂತ ವಿಶ್ಲೇಷಣೆ
ಧನ್ಯವಾದಗಳು, Unknownರೆ.
Tq
ʻಶ್ರಾವಣʼ ಬೇಂದ್ರೆಯವರ ಮೆಚ್ಚಿನ ಮಾಸ. ಸುಮಾರು ೧೦ ಕವನಗಳನ್ನಾದರೂ ಬೇಂದ್ರೆ ಶ್ರಾವಣದ ಮೇಲೆ ಬರೆದಿದ್ದಾರೆ!
ಶ್ರಾವಣದ ವೈಭವದ ಬಗ್ಗೆ ಮಾಹಿತಿ ನೀಡಿ
Anonymusರೆ, ಬೇಂದ್ರೆಯವರೆ ತಮ್ಮ ಕವನದ ಮೂಲಕ ಶ್ರಾವಣದ ವೈಭವದ ಮಾಹಿತಿ ನೀಡಿಭಿಟ್ಟಿದ್ದಾರಲ್ಲ. ಇನ್ನು ನನಗೇನು ಉಳಿದಿದೆ!?
ಬೇಂದ್ರೆ ಎಂತಹ ಅದ್ಭುತ ಕವಿ!
ಅರ್ಥಗರ್ಭಿತ ಕವಿ!
ಅಲೌಕಿಕ ಕವಿ!
ಶ್ರಾವಣವನ್ನಿಟ್ಟುಕೊಂಡು ಬೇಂದ್ರೆಯವರನ್ನು ಅರ್ಥೈಸಿಕೊಳ್ವುವ ಪರಿ ಅದ್ವಿತೀಯ!ಶರಣು ಕವಿ ಮನಕ್ಕೆ
ಧನ್ಯವಾದಗಳು, Anonymous!
Post a Comment