ಕರ್ನಾಟಕದಲ್ಲಿಯೇ ಆಗಲಿ ಅಥವಾ ಭಾರತದೇಶದಲ್ಲಿ ಬೇರೆಲ್ಲಿಯೇ ಆಗಲಿ, ವರ್ಷ ವರ್ಷವೂ
ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಲೇ ಇದ್ದಾರೆ. ಇದರ ಕಾರಣಗಳನ್ನು ಅರಿತುಕೊಳ್ಳಲು, ಜಾಣತನ ಬೇಕಾಗಿಲ್ಲ.
ಆದರೆ ನಮ್ಮ ಸರಕಾರಗಳು ‘ರೈತರ ಆತ್ಮಹತ್ಯಾ-ಆಯೋಗ’ವನ್ನು ನಿಯಮಿಸಿ ಕೈ ತೊಳೆದುಕೊಳ್ಳುತ್ತಿವೆ. ಮಠಾಧೀಶರಿಂದ
ಹಾಗು ಬುದ್ಧಿಜೀವಿಗಳಿಂದ ತತ್ವಜ್ಞಾನವನ್ನು ಹೇಳಿಸುತ್ತವೆ. ಇವರೆಲ್ಲರೂ ‘ಅನ್ನದಾತಾ, ನೀನು ಆತ್ಮಹತ್ಯೆಯನ್ನು
ಮಾಡಿಕೊಳ್ಳಬೇಡ; ನಿನ್ನ ಬೆನ್ನು ಹಿಂದೆ ನಾವಿದ್ದೇವೆ (ಚೂರಿ ಹಾಕಲು!)’ ಎಂದು ಒಕ್ಕೊರಲಿನಿಂದ ಕೂಗು
ಹಾಕುತ್ತಿದ್ದಾರೆ. ಇದರಂತಹ ದುರಂತ ಹಾಗು ವ್ಯಂಗ್ಯ
ಮತ್ತೊಂದಿಲ್ಲ. ಈ ಸಂದರ್ಭದಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದಂತೆ, ರೈತರ ಅಂಕಿ ಸಂಖ್ಯೆಗಳನ್ನಷ್ಟು ಗಮನಿಸೋಣ:
(೧) ನಗಣ್ಯ ರೈತ ಕುಟುಂಬಗಳ ಸಂಖ್ಯೆ: = ೩೮.೪೯ ಲಕ್ಷ ;
ಹಿಡುವಳಿ = ೧೮೫೦೯೪೬ ಹೆಕ್ಟೇರುಗಳು
ಹಿಡುವಳಿ = ೧೮೫೦೯೪೬ ಹೆಕ್ಟೇರುಗಳು
(೨) ಸಣ್ಣ ರೈತ ಕುಟುಂಬಗಳ ಸಂಖ್ಯೆ: = ೨೧.೩೮ ಲಕ್ಷ ;
ಹಿಡುವಳಿ = ೩೦೨೦೦೦೨ ಹೆಕ್ಟೇರುಗಳು
ಹಿಡುವಳಿ = ೩೦೨೦೦೦೨ ಹೆಕ್ಟೇರುಗಳು
(೩) ಸಾಧಾರಣ ಮಧ್ಯಮ ರೈತ ಕುಟುಂಬಗಳ ಸಂಖ್ಯೆ: = ೧೨.೬೭ ಲಕ್ಷ ;
ಹಿಡುವಳಿ = ೩೩೯೩೦೩೬ ಹೆಕ್ಟೇರುಗಳು
ಹಿಡುವಳಿ = ೩೩೯೩೦೩೬ ಹೆಕ್ಟೇರುಗಳು
(೪) ಮಧ್ಯಮ ರೈತ ಕುಟುಂಬಗಳ ಸಂಖ್ಯೆ: = ೫.೧೧ ಲಕ್ಷ ;
ಹಿಡುವಳಿ = ೨೯೦೩೬೮೭ ಹೆಕ್ಟೇರುಗಳು
ಹಿಡುವಳಿ = ೨೯೦೩೬೮೭ ಹೆಕ್ಟೇರುಗಳು
(೫) ದೊಡ್ಡ ರೈತ ಕುಟುಂಬಗಳ ಸಂಖ್ಯೆ : = ೦.೬೮ ಲಕ್ಷ ;
ಹಿಡುವಳಿ = ೯೯೩೭೮೬ ಹೆಕ್ಟೇರುಗಳು
ಹಿಡುವಳಿ = ೯೯೩೭೮೬ ಹೆಕ್ಟೇರುಗಳು
ಒಟ್ಟು ರೈತ ಕುಟುಂಬಗಳ ಸಂಖ್ಯೆ = ೭೮.೩೨ ಲಕ್ಷ
ಒಟ್ಟು ಹಿಡುವಳಿ = ೧೨೧೬೧೪೫೭ ಹೆಕ್ಟೇರುಗಳು
ಒಟ್ಟು ಹಿಡುವಳಿ = ೧೨೧೬೧೪೫೭ ಹೆಕ್ಟೇರುಗಳು
(ಕರ್ನಾಟಕ ಸರಕಾರದ ಕೃಷಿ ಇಲಾಖೆಯ ೨೦೧೧ರ ಗಣತಿಯ ಆಧಾರ)
ಕರ್ನಾಟಕದ ರೈತರಲ್ಲಿ ೭೨.೪೪ ಲಕ್ಷ ರೈತ ಕುಟುಂಬಗಳು ಮಧ್ಯಮ ದರ್ಜೆಗಿಂತಲೂ
ಕೆಳಗಿವೆ. ಅಂದರೆ ಪ್ರತಿಶತ ೯೨.೫೦ ರೈತಕುಟುಂಬಗಳು ಈ ವರ್ಗದಲ್ಲಿ ಬರುತ್ತವೆ. ಇವರ ಒಟ್ಟು ಹಿಡುವಳಿ
= ೮೨೬೩೯೮೪ ಹೆಕ್ಟೇರುಗಳು ಅರ್ಥಾತ್ ಒಂದು ರೈತ ಕುಟುಂಬದ ಸರಾಸರಿ ಹಿಡುವಳಿ = ೧.೧೪ ಹೆಕ್ಟೇರುಗಳು
ಅಥವಾ ೨.೫ ಎಕರೆಯಷ್ಟು. ಒಂದು ರೈತ ಕುಟುಂಬದಲ್ಲಿ ೫ ಸದಸ್ಯರು ಇರುವರು ಎಂದು ಭಾವಿಸಿದರೆ ೧.೧೪ ಹೆಕ್ಟೇರು
ಜಮೀನಿನ ಮೇಲೆ ಬದುಕುವ ಜನರ ಸಂಖ್ಯೆ ಸುಮಾರು ೩.೬ ಕೋಟಿಯಷ್ಟಾಗುತ್ತದೆ. ಇವರು ಕರ್ನಾಟಕದ ಒಟ್ಟು ಜನಸಂಖ್ಯೆಯ
(ಸುಮಾರು ೬.೧೧ ಕೋಟಿ) ೫೯% ಆಗುತ್ತಾರೆ. ಅಂದರೆ ನಮ್ಮ ರಾಜ್ಯದ ೫೯% ಜನರು ೧.೧೪ರಷ್ಟು ಕಡಿಮೆ ಜಮೀನಿನಲ್ಲಿ
ಬದುಕು ಸಾಗಿಸುತ್ತಾರೆ. ಈ ಸಂಖ್ಯೆಗೆ ಕಾರ್ಮಿಕರ ಸಂಖ್ಯೆಯನ್ನು ಸೇರಿಸಿದರೆ, ಬಹುಶಃ ಕರ್ನಾಟಕದಲ್ಲಿ
೮೫% ಜನರು ಬಡತನದ ರೇಖೆಯ ಕೆಳಗೆ ಬದುಕುತ್ತಿರಬಹುದು ಎಂದೆನಿಸುತ್ತದೆ.
ಮುಂಗಾರು ಹಂಗಾಮಿನಲ್ಲಿ ಹೊಲ ಉತ್ತಿದ ಬಳಿಕ, ನಮ್ಮ ಬಡ ರೈತರು ಬಿತ್ತಲು
ಬೀಜಗಳನ್ನು ಎಲ್ಲಿಂದ ತರುತ್ತಾರೆ? ಸಾಲ ಮಾಡದೆ ಬೀಜಗಳನ್ನು ಕೊಳ್ಳಲು ಇವರ ಬಳಿ ದುಡ್ಡು ಇದೆಯೆ? ಇವರು
ಕೊಂಡುಕೊಂಡ ಬೀಜಗಳು ಕಳಪೆ ಗುಣಮಟ್ಟದ್ದಾಗಿವೆಯೆ? ಜಮೀನಿಗೆ ನೀರು ಹಾಯಿಸಲು ನೀರಾವರಿ ಸೌಲಭ್ಯ ಇದೆಯೆ?
(ಕರ್ನಾಟಕದಲ್ಲಿ ಎಲ್ಲ ಮೂಲಗಳಿಂದ ನೀರಾವರಿಗೆ ಒಳಪಟ್ಟಿರುವ ಜಮೀನಿನ ಪ್ರಮಾಣ ಕೇವಲ ೨೧ ಪ್ರತಿಶತದಷ್ಟಿದೆ
!) ನೀರು ಎತ್ತಲು ವಿದ್ಯುತ್ ಸೌಲಭ್ಯ ಇದೆಯೆ? ನೀರಾವರಿ ಇಲ್ಲದಲ್ಲಿ ಸಕಾಲಿಕ ಮಳೆ ಆಗಿದೆಯೆ? ಇವುಗಳಲ್ಲಿ
ಒಂದೇ ಅನುಕೂಲತೆ ತಪ್ಪಿದರೂ ಸಹ ರೈತನ ವರ್ಷದ ಶ್ರಮವೆಲ್ಲ ವ್ಯರ್ಥ. ಸಾಲದ ಶೂಲಕ್ಕೆ ಸಿಲುಕಿದ ರೈತ
ನೇಣಿಗೆ ಶರಣಾಗುವದೇ ಉತ್ತಮ ಪರಿಹಾರ ಎಂದು ಭಾವಿಸುತ್ತಾನೆ. ಇನ್ನು ಇವೆಲ್ಲ ಅನುಕೂಲಗಳು ದೊರೆತರೆ,
ಒಳ್ಳೆಯ ಬೆಳೆ ಬಂದು ರೈತನು ಖುಶಿಯಾಗುತ್ತಾನೆ. ಆದರೆ ಎಚ್ಚರಿಕೆ, ಇದು ರೈತನ ಆತ್ಮಹತ್ಯೆಗೆ ತೆರೆದುಕೊಂಡ
ಎರಡನೆಯ ದಾರಿ! ಏಕೆಂದರೆ ಒಳ್ಳೆಯ ಬೆಳೆ ಬಂದ ಹಂಗಾಮಿನಲ್ಲಿ, ದಲ್ಲಾಳಿಗಳು ರೈತನಿಗೆ ಕೊಡಬೇಕಾದ ಬೆಲೆಯನ್ನು
ಪಾತಾಳಕ್ಕೆ ಇಳಿಸುತ್ತಾರೆ. ಆ ದುಡ್ಡಿನಲ್ಲಿ ಸಾಗಾಣಿಕೆಯ ಖರ್ಚೂ ಗಿಟ್ಟುವುದಿಲ್ಲವೆಂದು ಹತಾಶನಾದ
ರೈತ, ಬೆಳೆಯನ್ನೆಲ್ಲ ರಸ್ತೆಗೆ ಚೆಲ್ಲಿ, ತನ್ನ ಹಳ್ಳಿಗೆ ಮರಳಿದ್ದುಂಟು.
ಇಷ್ಟೆಲ್ಲ ಬಡಿದಾಡಿ ಹೈರಾಣಾದ ರೈತ ಮನೆಗೆ ಬಂದಾಗ ನೋಡುವುದೇನು?--- ಹಸಿವೆಯಿಂದ
ಮೋರೆ ಒಣಗಿಸಿಕೊಂಡು ನಿಂತಂತಹ ಹೆಂಡತಿ ಮಕ್ಕಳು. ಇವರ ಹೊಟ್ಟೆಗೆ ಹಾಕಲಾರದ ಸಂಕಟಕ್ಕಿಂತ, ಅವಮಾನಕ್ಕಿಂತ, ಸಾಯುವುದೇ
ಮೇಲು ಎಂದು ಭಾವಿಸಿದ ರೈತ ಉರುಲು ಹಾಕಿಕೊಂಡರೆ ಆಶ್ಚರ್ಯವಿಲ್ಲ. ಆದರೆ, ಇವನಿಗೆ ನಿಜವಾಗಿ ಉರುಲು
ಹಾಕುವವರು, ಲಾಭದ ದುರಾಸೆಗೆ ಒಳಗಾದ ದಲ್ಲಾಳಿಗಳು ಹಾಗು ಸರಕಾರ. ‘ಅವ್ಯವಹಾರವೇ ನಮ್ಮ ವ್ಯವಹಾರ’ ಎನ್ನುವುದಂತೂ
ವ್ಯಾಪಾರಿಗಳ ಸಂವಿಧಾನವೇ ಆಗಿದೆ. ಆದರೆ, ಸರಕಾರವೂ ಸಹ ‘ರೈತರ ಆತ್ಮಹತ್ಯೆಗೆ ರೈತರೇ ಕಾರಣ’ ಎನ್ನುವ
ಸಬೂಬುಗಳನ್ನು ನೀಡುವುದು ದಿಗಿಲು ಹುಟ್ಟಿಸುತ್ತಿದೆ.
‘ರೈತನು ತನ್ನ ಜಮೀನಿಗಾಗಿ ಸಾಲ ಮಾಡಿಲ್ಲ, ತನ್ನ ಮಕ್ಕಳ ಮದುವೆಗಾಗಿ ಸಾಲ
ಮಾಡಿದ್ದಾನೆ; ಅವನಿಗೇಕೆ ಬೇಕು ಆಡಂಬರದ ಮದುವೆ?’ ಎನ್ನುವಂತಹ ವಿಕೃತ ಮಾತುಗಳನ್ನಷ್ಟು ನೋಡಿರಿ. ಸರಕಾರದ
ಯಾ ಖಾಸಗಿ ಸಂಸ್ಥೆಗಳ ನೌಕರರು ಮನೆ ಕಟ್ಟಲು, ವಾಹನ ಕೊಳ್ಳಲು ಹಾಗು ಮಕ್ಕಳ ಶಿಕ್ಷಣಕ್ಕಾಗಿ ಸಾಲ ಮಾಡುತ್ತಾರೆ.
ಅವರ ಮಾಸಿಕ ವೇತನದಲ್ಲಿ ನಿಶ್ಚಿತರೂಪದ ಕಡಿತವಿರುವುದರಿಂದ, ಈ ಎಲ್ಲ ಸಾಲಗಳು ಅವರ ನಿವೃತ್ತಿಯ ಸಮಯದವರೆಗೆ
ತೀರಿ ಹೋಗುತ್ತವೆ. ನಿವೃತ್ತಿಯ ನಂತರ ದೊಡ್ಡ ಮೊತ್ತದ ಕ್ಷೇಮನಿಧಿಯನ್ನು ಪಡೆದುಕೊಂಡು ಈ ನೌಕರರು ಸುಖವಾಗಿ
ಜೀವಿಸುತ್ತಾರೆ. ಆದರೆ, ನಮ್ಮ ಬಡ ರೈತನು ಯಾವುದೇ ಕಾರಣಕ್ಕೆ ಸಾಲ ಮಾಡಿರಲಿ, ಅದರ ತೀರುವಳಿಗೆ ಅವನಿಗೆ
ನಿಶ್ಚಿತ ಆದಾಯವಿದೆಯೆ? ದೇವರ ದಯೆಯನ್ನೇ ಅವಲಂಬಿಸಿದ ಬೆಳೆ ಹಾಗು ವ್ಯಾಪಾರಿಗಳ ದಯೆಯನ್ನೆ ಅವಲಂಬಿಸಿದ
ಆದಾಯ! ಹೀಗಿರಲು ಅವನು ಮಾಡಿದ ಸಾಲ ತೀರಲು ಹೇಗೆ ಸಾಧ್ಯ?
ಈ ಸಮಸ್ಯೆಗಳಿಗೆ ಪರಿಹಾರವೇನು ? ಮೊದಲನೆಯದಾಗಿ ಸರಿಯಾದ ಬೆಳೆ ಬರಬೇಕಾದರೆ,
ರೈತನಿಗೆ ಈ ಮೂಲಸೌಲಭ್ಯಗಳು ದೊರೆಯಬೇಕು:
(೧) ಜಮೀನಿಗೆ ನೀರಾವರಿ (ಅವಶ್ಯವಿದ್ದಲ್ಲಿ ವಿದ್ಯುತ್ ಶಕ್ತಿಯ ಅನುಕೂಲ)
(೨) ಒಳ್ಳೆಯ ಬೀಜಗಳ ಸುಲಭ ಪೂರೈಕೆ
(೩) ಕೃಷಿಗೆ ಅವಶ್ಯವಿರುವ ಉಪಕರಣಗಳ ಸುಲಭ ಪೂರೈಕೆ
ಈ ಮೇಲಿನ ಸೌಕರ್ಯಗಳ ಜೊತೆಗೆ, ಅತಿ ಮುಖ್ಯವಾದದ್ದು ಎಂದರೆ ಹಣಕಾಸಿನ ಸೌಕರ್ಯ.
ಹಣಕಾಸಿನ ಸಂಸ್ಥೆಗಳು ರೈತನಿಗೆ ಸಾಲವನ್ನು ಕೊಡಬಹುದು. ಆದರೆ ದಲ್ಲಾಳಿಗಳ ಕಪಿಮುಷ್ಟಿಯಿಂದ ರೈತರನ್ನು ಬಿಡಿಸದಿದ್ದರೆ,
ರೈತನಿಗೆ ಸಾಲದ ಶೂಲದಿಂದ ಪಾರಾಗಲು ಸಾಧ್ಯವಾಗಲಾರದು. ಈ ಉದ್ದೇಶ ನೆರವೇರಲು ಎರಡು ಕೆಲಸಗಳನ್ನು ಮಾಡಬೇಕಾಗುವುದು:
(೧) ಬೆಳೆಗಳ ಸಂಗ್ರಹಸೌಲಭ್ಯ
(೨) ಬೆಳೆಯ ಮಾರುಕಟ್ಟೆಯ ಬೆಲೆಯ ಸಮಂಜಸ ನಿರ್ಧಾರ
ಸದ್ಯಕ್ಕೆ ಎರಡೂ ಸೌಲಭ್ಯಗಳು ದಲ್ಲಾಳಿಗಳ ಕೈಯಲ್ಲಿವೆ! ಇವು ರೈತನ ಕೈಗೆ
ಬರುವ ತನಕ ಆತನ ಆತ್ಮಹತ್ಯೆ ತಪ್ಪಲಾರದು. ಬರಗಾಲ ಅಥವಾ ಅತಿವೃಷ್ಟಿಯಿಂದ ಬೆಳೆ ಹಾಳಾದಾಗ, ಸರಕಾರವು
ಆ ಬೆಳೆಗ ಬರಬಹುದಾಗಿದ್ದ ಸಂಪೂರ್ಣ ಮೊತ್ತವನ್ನು ಸರಕಾರೀ ಖಜಾನೆಯಿಂದ ರೈತನಿಗೆ ನೀಡಬೇಕು. ‘ಅನ್ನದಾತನೇ ಆತ್ಮಹತ್ಯೆ ಮಾಡಿಕೊಳ್ಳಬೇಡ, ನಿನ್ನ ಹಿಂದೆ
ನಾವಿದ್ದೇವೆ’ ಎಂದು ಬೊಬ್ಬೆ ಹಾಕುವ ಬದಲು, ಸರಕಾರವು ಇಷ್ಟು ಮಾಡಿದರೆ ಸಾಕು, ಅನ್ನದಾತನೂ ಬದುಕುತ್ತಾನೆ,
ಪ್ರಜೆಗಳೂ ಬದುಕುತ್ತಾರೆ, ಸರಕಾರವೂ ಬದುಕುತ್ತದೆ.
ಆದರೆ ರಾಜಕಾರಣಿಗಳು ಮಾಡುತ್ತಿರುವುದೇನು? ರಾಜಕೀಯದ ಚದುರಂಗದಲ್ಲಿ ರಾಜಕಾರಣಿಗಳು
ರೈತನನ್ನು ದಾಳವಾಗಿ ಬಳಸುತ್ತಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಮಹಾದಾಯಿ ನದಿಯ ತಿರುವಿನ
ಸಮಸ್ಯೆ. ಇದು ಕರ್ನಾಟಕಕ್ಕೆ ಜೀವನ್ಮರಣದ ಪ್ರಶ್ನೆಯಾಗಿದೆ. ಆದರೆ, ನ್ಯಾಯಾಧಿಕರಣದಲ್ಲಿ ಕೊಳೆಯುತ್ತಿರುವ
ಈ ಸಮಸ್ಯೆಗೆ ರಾಜಕೀಯ ಪರಿಹಾರ ಇದೆಯೆ? ಈ ಸಮಸ್ಯೆಗೆ ಸಂಬಂಧಿಸಿದ ಮೂರೂ ರಾಜ್ಯಗಳಲ್ಲಿ ಹಾಗು ಕೇಂದ್ರದಲ್ಲಿ
ಒಂದೇ ಪಕ್ಷದ ಸರಕಾರವಿದ್ದರೂ ಸಹ, ರಾಜಕೀಯ ಪರಿಹಾರ ಸಾಧ್ಯವಿಲ್ಲ. ಏಕೆಂದರೆ ಆಯಾ ರಾಜ್ಯಗಳಲ್ಲಿ ಆ
ಸಮಯದಲ್ಲಿ ಇರುವ ವಿರೋಧ ಪಕ್ಷಗಳು, ಇಂತಹ ಪರಿಹಾರದ ವಿರುದ್ಧ ತಮ್ಮ ರಾಜ್ಯಗಳ ಜನರ ಭಾವನೆಗಳನ್ನು ಕೆರಳಿಸಿ,
ಗಲಾಟೆ ಮಾಡದೆ ಬಿಡಲಾರವು. ಇದು ಆ ಪಕ್ಷಗಳಿಗೆ ಸುವರ್ಣಾವಕಾಶ. ಇದನ್ನು ತಿಳಿದೇ, ಕರ್ನಾಟಕದ ಚಾಣಾಕ್ಷ
ಮುಖ್ಯ ಮಂತ್ರಿಗಳು ಸರ್ವಪಕ್ಷನಿಯೋಗವನ್ನು ಪ್ರಧಾನ ಮಂತ್ರಿಗಳ ಬಳಿಗೆ ಕರೆದೊಯ್ದದ್ದು. ಪ್ರಧಾನ ಮಂತ್ರಿಗಳೂ
ಸಹ ರಾಜಕೀಯ ಚತುರರೇ. ‘ಉಳಿದೆರಡು ರಾಜ್ಯಗಳ ವಿರೋಧ ಪಕ್ಷಗಳು ನಿಮ್ಮವೇ ಆಗಿವೆ, ಆ ಪಕ್ಷಗಳ ಮನ ಒಲಿಸಿರಿ’
ಎಂದು ಹೇಳಿ ಇವರನ್ನು ಸಾಗ ಹಾಕಿದರು. ಆದರೆ, ಕರ್ನಾಟಕದ ಮುಖ್ಯ ಮಂತ್ರಿಗಳು ಇನ್ನೂ ಹೆಚ್ಚಿನ ಜಾಣತನವನ್ನು
ತೋರಿಸಿದರು; ಪ್ರಧಾನ ಮಂತ್ರಿಗಳ ತಲೆಯ ಮೇಲೆ ಗೂಬೆ ಕೂರಿಸುವದರಲ್ಲಿ ಸಫಲರಾದರು! ಇವೆಲ್ಲದರ ಪರಿಣಾಮವಾಗಿ
ಹಾಗು ರಾಜ್ಯದ ಎಲ್ಲ ಪಕ್ಷಗಳ ಪ್ರೋತ್ಸಾಹದಿಂದಾಗಿ, ಮಹಾದಾಯಿ ಚಳುವಳಿಯು ಈಗ ತಾರಕಕ್ಕೇರಿದೆ. ರೈತರು
ಮನೆಮಠಗಳತ್ತ ನೋಡದೆ, ಪ್ರತಿ ದಿನವೂ ಚಳುವಳಿಯನ್ನು ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಮಾಡುವ ಚಳುವಳಿಗಳಿಂದ,
ಗೋವಾದಲ್ಲಿ ತಳಮಳ ಏಳುವುದಿಲ್ಲ. ನಮ್ಮ ಬದುಕು ಅಸ್ತವ್ಯಸ್ತವಾಗುವುದೇ ಹೊರತು, ಅಲ್ಲಿಯ ಜೀವನ ಎಂದಿನಂತೆ
ಸರಾಗವಾಗಿ ಸಾಗುತ್ತಿರುತ್ತದೆ. ಇದನ್ನರಿತಿದ್ದರಿಂದಲೇ ಒಬ್ಬ ರಾಜಕಾರಣಿಯು, ‘ಗೋವಾಕ್ಕೆ ಕಾಯಿಪಲ್ಲೆ
ಕಳಿಸುವುದನ್ನು ಬಂದ್ ಮಾಡಬೇಕು’ ಎಂದು ವೀರಾವೇಶದಿಂದ ಗರ್ಜಿಸಿದರು. ಕಾಯಿಪಲ್ಲೆ ಸಿಗದಿದ್ದರೆ, ಗೋವಾದ
ಜನ ಮೀನು ತಿಂದು ಬದುಕುತ್ತಾರೆ. ಲುಕ್ಸಾನು ಆಗುವುದು ನಮ್ಮ ವ್ಯಾಪಾರಸ್ಥರಿಗೆ ಎನ್ನುವ ಕಠೋರ ಸತ್ಯ
ಅವರಿಗೆ ಹೊಳೆದಂತೆ ಕಾಣುವುದಿಲ್ಲ.
ಹಾಗಿದ್ದರೆ, ದಾರಿ ಯಾವುದಯ್ಯಾ ಮಹಾದಾಯಿಗೆ? ನ್ಯಾಯಾಧಿಕರಣದಲ್ಲಿಯೇ ಇದಕ್ಕೆ
ಪರಿಹಾರ ದೊರೆಯಬೇಕು. ಆ ಸಾಧ್ಯತೆಗಾಗಿ ನಮ್ಮ ಸರಕಾರ ಹಾಗು ನಮ್ಮ ರಾಜಕೀಯ ಪಕ್ಷಗಳು ತೀವ್ರ ಪ್ರಯತ್ನ
ಮಾಡಬೇಕು. ಅನ್ಯಥಾ ಮಾರ್ಗವಿಲ್ಲ. ಆದರೆ, ‘ರೋಮ್ ಉರಿಯುತ್ತಿರುವಾಗ, ನೀರೋ ಪಿಟೀಲು ಬಾರಿಸುತ್ತಿದ್ದ’
ಎನ್ನುವಂತೆ, ನಮ್ಮ ರಾಜಕಾರಣಿಗಳು ‘ರೆಜಾರ್ಟ ರಾಜಕೀಯ’ದಲ್ಲಿ ನಿರತವಾಗಿವೆ, ಕೋಟಿಗಟ್ಟಲೆ ದುಡ್ಡು
ಖರ್ಚು ಮಾಡುತ್ತಿವೆ. ಇಷ್ಟೆಲ್ಲ ಹಣ ಈ ಪಕ್ಷಗಳಿಗೆ ಹಾಗು ಈ ರಾಜಕಾರಣಿಗಳಿಗೆ ಎಲ್ಲಿಂದ ಬಂದಿರಬಹುದು?
ಬಹುಶಃ ಕಪ್ಪುಹಣ ಇಟ್ಟುಕೊಂಡಿರುವ ವ್ಯಾಪಾರಿಗಳಿಂದ ಬಂದಿರಬಹುದೆ? ಈ ವ್ಯಾಪಾರಿಗಳು ಈ ಭಾರೀ ಮೊತ್ತವನ್ನು
ಎಲ್ಲಿಂದ ತಂದಿರಬಹುದು? ಬಡ ರೈತರ ಶೋಷಣೆಯಿಂದಲೇ ಅಲ್ಲವೆ? ಇಂತಹ ರೈತರ ಉಪಕಾರವನ್ನು ಸ್ಮರಿಸಲು, ನಮ್ಮ
ಪ್ರತಿಯೊಬ್ಬ ರಾಜಕಾರಣಿಯೂ ತನ್ನ ಆದಾಯದ ಒಂದು ಭಾಗವನ್ನು ರೈತರ ಸಾಲ ತೀರಿಸಲು ಏಕೆ ದಾನವಾಗಿ ನೀಡಬಾರದು?
ಇದರಂದ ಅವರಿಗೆ ಇಹಲೋಕದಲ್ಲಿ ರಾಜಕೀಯ ಲಾಭ ಹಾಗು ಪರಲೋಕಕ್ಕಾಗಿ ಪುಣ್ಯ ಎರಡೂ ಲಭಿಸುತ್ತವೆ!