Sunday, September 6, 2015

ಭೂಮಿತಾಯಿಯ ಚೊಚ್ಚಿಲ ಮಗ................ಬೇಂದ್ರೆಭೂಮಿತಾಯಿಯಾ
ಚೊಚ್ಚಿಲ ಮಗನನು
ಕಣ್ತೆರೆದೊಮ್ಮೆ
ನೋಡಿಹಿರೇನು?
*       *       *

ಮುಗಿಲೆಂಬುವುದು
ಕಿಸಿದಿತು ಹಲ್ಲು !
ಬಂದಾ ಬೆಳೆಯು
ಮಿಡಿಚಿಯ ಮೇವು;
ಬಿತ್ತಿದ್ದಾಯಿತು
ಉತ್ತಿಹ ಮಣ್ಣು !
ದಿನವೂ ಸಂಜೆಗೆ
ಬೆವರಿನ ಜಳಕ,
ಉಸಿರಿನ ಕೂಳಿಗೆ
ಕಂಬನಿ ನೀರು !
ಹೊಟ್ಟೆಯು ಹತ್ತಿತು
ಬೆನ್ನಿನ ಬೆನ್ನು !
ಎದೆಯ ಗೂಡಿನೊಳು
ಚಿಂತೆಯ ಗೂಗಿ !
ಮಿದುಳಿನ ಮೂಲೆಗೆ
ಲೊಟ ಲೊಟ ಹಲ್ಲಿ !
ಮೋರೆಯು ಸಾವನು
ಅಣಕಿಸುತಿಹುದು !
ಕೊರಳಿಗೆ ಹತ್ತಿದೆ
ಸಾಲದ ಶೂಲ !
ಆದರು ಬರದೋ
ಯಮನಿಗೆ ಕರುಣ
ಉಸಿರಿಗೆ ಒಮ್ಮೆ
ಜನನಾ ಮರಣಾ.
*       *       *
ನರಗಳ ನೂಲಿನ
ಪರೆ ಪರೆ ಚೀಲಾ
ತೆರೆ ತೆರೆಯಾಗಿದೆ
ಜಿರಿಜಿರಿಯಾಗಿದೆ;
ಅದರೊಳಗೊಂದು
ಎಲುಬಿನ ಬಲೆಯು !
ಟುಕು ಟುಕು ಡುಗು ಡುಗು
ಉಲಿಯುವ ನರಳುವ
ಜೀವದ ಜಂತುವು
ಹೊರಳುತ ಉರುಳುತ;
ಜನುಮವೆಂಬುವಾ
ಕತ್ತಲೆಯಲ್ಲಿ
ಬಿದ್ದಿದೆ ಒಳಗೆ
ಹೇಗೊ ಬಂದು !
ಸಾವಿನ ಬೆಳಕದು
ಕಾಣುವದೆಂದು ?
ಎಂದೋ ಎಂದೋ
ಎಂದೋ ಎಂದು
ಕನವರಿಸುವದು
ತಳಮಳಿಸುವದು !
* * * * * * * * * * * * * * * * * * *
ಕರ್ನಾಟಕದಲ್ಲಿ ಈ ವರ್ಷ ಮುಂಗಾರು ಮಳೆಯು ಕೈ ಕೊಟ್ಟಿತು. ಬಿತ್ತನೆಗೆ ಹೋಗಲಿ, ಕುಡಿಯಲು ಸಹ ನೀರಿಲ್ಲದಂತಹ ಪರಿಸ್ಥಿತಿ ಉದ್ಭವಿಸಿದೆ. ಈ ಸಂದರ್ಭದಲ್ಲಿ ಬೇಂದ್ರೆಯವರು ರಚಿಸಿದ ಒಂದು ಕವನ ನೆನಪಿಗೆ ಬರುತ್ತದೆ. ‘ಭೂಮಿತಾಯಿಯ ಚೊಚ್ಚಿಲ ಮಗನು’ ಎನ್ನುವ ಈ ಕವನವು ‘ನಾದಲೀಲೆ’ ಸಂಕಲನದಲ್ಲಿ ಅಡಕವಾಗಿದೆ. ‘ನಾದಲೀಲೆ’ ಪ್ರಕಟವಾಗಿದ್ದು ೧೯೩೮ರಲ್ಲಿ.

ಕವನದ ಪ್ರಾಸ್ತಾವಿಕ ನುಡಿಯನ್ನು ನೋಡಿರಿ:
ಭೂಮಿತಾಯಿಯಾ
ಚೊಚ್ಚಿಲ ಮಗನನು
ಕಣ್ತೆರೆದೊಮ್ಮೆ
ನೋಡಿಹಿರೇನು?

ರೈತನಿಗೆ ‘ಭೂಮಿತಾಯಿಯ ಚೊಚ್ಚಿಲ ಮಗ’ ಎನ್ನುತ್ತಾರೆ.  ಸಕಲ ಜೀವಜಂತುಗಳಿಗೆ ಆಹಾರವನ್ನು ಒದಗಿಸುವವಳೇ ಭೂಮಿತಾಯಿ. ಆದುದರಿಂದ ಭೂಮಿಯಿಂದ ಬೆಳೆ ತೆಗೆಯುವ ಒಕ್ಕಲಿಗನು ಭೂಮಿತಾಯಿಯ ಚೊಚ್ಚಿಲ ಮಗನೇ ಹೌದು. ಚೊಚ್ಚಿಲ ಮಗನಿಗೆ ತನ್ನ ಕುಟುಂಬದಲ್ಲಿ ಕೆಲವೊಂದು ಹಕ್ಕುಗಳು ಹಾಗು ಕರ್ತವ್ಯಗಳು ಇರುತ್ತವೆ. ಒಕ್ಕಲಿಗನಿಗೆ ಯಾವ ಹಕ್ಕೂ ಇಲ್ಲ, ಆದರೆ ಕರ್ತವ್ಯ ಮಾತ್ರ ಸಾಕಷ್ಟಿದೆ. ಇತರರಿಗಾಗಿ ಆತ ಶ್ರಮ ಪಡಬೇಕು ಎನ್ನುತ್ತೇವೆಯೆ ಹೊರತು ಆತನ ಸಂಕಷ್ಟಗಳನ್ನು ನಾವು ಕಣ್ಣೆತ್ತಿ ನೋಡುವುದಿಲ್ಲ. ನಾವೆಲ್ಲರೂ ಆತನ ಬಗೆಗೆ ಉದಾಸೀನ ಭಾವನೆಯನ್ನು ತಳೆದಿದ್ದೇವೆ. ಆದುದರಿಂದಲೇ ಬೇಂದ್ರೆಯವರು, ಕವನದ ಪ್ರಾಸ್ತಾವಿಕ ನುಡಿಯಲ್ಲಿ ‘ಭೂಮಿತಾಯಿಯಾ  ಚೊಚ್ಚಿಲ ಮಗನನು ಕಣ್ತೆರೆದೊಮ್ಮೆ ನೋಡಿಹಿರೇನು?’ ಎಂದು ಕೇಳುತ್ತಿದ್ದಾರೆ ! ಸರಿ, ಕಣ್ತೆರೆದು ನೋಡಿದಾಗ ಕಾಣುವುದೇನು ?

 ಮುಗಿಲೆಂಬುವುದು
ಕಿಸಿದಿತು ಹಲ್ಲು !
ಬಂದಾ ಬೆಳೆಯು
ಮಿಡಿಚಿಯ ಮೇವು;
ಬಿತ್ತಿದ್ದಾಯಿತು
ಉತ್ತಿಹ ಮಣ್ಣು !
ಭೂತಾಯಿಯ ಚೊಚ್ಚಿಲ ಮಗನ ಮೊದಲ ಕೆಲಸವೇನು? ಹೊಲವನ್ನು ಉತ್ತಲು ಹಾಗು ಬಿತ್ತಲು, ಮುಂಗಾರು ಮಳೆಯ ಪ್ರತೀಕ್ಷೆಯನ್ನು ಮಾಡುವುದು ! ಆದುದರಿಂದ ಭೂಮಿತಾಯಿಯ ಚೊಚ್ಚಿಲ ಮಗನು, ಮುಗಿಲನ್ನು ದಿಟ್ಟಿಸಿ ನೋಡುತ್ತಿದ್ದಾನೆ. ಆದರೆ, ಮುಗಿಲು ‘ಕಿಸಿದಿತು ಹಲ್ಲು’ ಎಂದರೆ ಒಕ್ಕಲಿಗನನ್ನು ಮುಗಿಲು ಅಣಕಿಸುತ್ತಿದೆ!  ಒಮ್ಮೆ ಮಳೆ ಆದೀತು ಎನ್ನುವ ಆಶಾಭಾವ ತೋರಿದರೆ, ಮರುಕ್ಷಣದಲ್ಲಿ ಕಾಣುವುದು ನಿಗಿ ನಿಗಿ ಮುಗಿಲು ! ಮುಂಗಾರು ಮಳೆಯ ನಾಲ್ಕು ಹನಿ ಬಿದ್ದರೆ ಸಾಕು, ಒಕ್ಕಲಿಗ ಉತ್ಸಾಹದಿಂದ ತನ್ನ ಹೊಲವನ್ನು ಉತ್ತಲು ಪ್ರಾರಂಭಿಸುತ್ತಾನೆ. ಹೋಗಲಿ, ಅಷ್ಟಿಷ್ಟು ಮಳೆಯಾಗಿ, ಅಷ್ಟಿಷ್ಟು ಬೆಳೆಯಾದರೂ ಬಂದಿತಲ್ಲ ಎನ್ನುವ ಸಮಾಧಾನವನ್ನು ತಳೆಯುವುದೂ ಅವನಿಗೆ ಸಾಧ್ಯವಿಲ್ಲ. ಏಕೆಂದರೆ, ‘ಬಂದಾ ಬೆಳೆಯು ಮಿಡಚಿಯ ಮೇವು’ ! ಅವನ ಬೆಳೆಯಲ್ಲಿ ಆಗ ಆತನಿಗೆ ಉಳಿಯುವುದು: ಉತ್ತಿದ ಮಣ್ಣು !

ದಿನವೂ ಸಂಜೆಗೆ
ಬೆವರಿನ ಜಳಕ,
ಉಸಿರಿನ ಕೂಳಿಗೆ
ಕಂಬನಿ ನೀರು !
ಹೊಟ್ಟೆಯು ಹತ್ತಿತು
ಬೆನ್ನಿನ ಬೆನ್ನು !
ನಮ್ಮ ರೈತನನ್ನು ವಿದೇಶೀ ರೈತರಿಗೆ ಅಥವಾ ಕೆಲಸಗಾರರಿಗೆ ಹೋಲಿಸಿ ಒಂದು ಮಾತನ್ನು ಹೇಳುವುದು ಫ್ಯಾಶನ್ ಆಗಿದೆ: ‘ನಮ್ಮ ರೈತರ ಉತ್ಪಾದನಾಸಾಮರ್ಥ್ಯ ಕಡಿಮೆ!’ ನಮ್ಮ ಒಕ್ಕಲಿಗನು ಹಗಲು ಹನ್ನೆರಡು ತಾಸು ತನ್ನ ಹೊಲದಲ್ಲಿ ಎತ್ತುಗಳ ಜೊತೆಗೆ ಎತ್ತಿನಂತೆಯೇ ದುಡಿಯುತ್ತಾನೆ. ಆದರೆ ವಿದೇಶಿ ರೈತನು ಯಂತ್ರಗಳನ್ನು ಬಳಸಿ ಇವನು ಮಾಡುವಷ್ಟೇ ಕೆಲಸವನ್ನು ಇವನಿಗಿಂತ ಚೆನ್ನಾಗಿ ಅಲ್ಪ ಕಾಲದಲ್ಲಿಯೇ ಮಾಡಿ ಮುಗಿಸುತ್ತಾನೆ. ಆದುದರಿಂದ ವಿದೇಶೀ ಕೆಲಸಗಾರನ ಉತ್ಪಾದನಾಸಾಮರ್ಥ್ಯ ನಮ್ಮ ರೈತನಿಗಿಂತ ಹೆಚ್ಚು! ನಮ್ಮ ರೈತನ ದುಡಿಮೆಗೆ ಬೆಲೆ ಇಲ್ಲ ! ಅದಕ್ಕೆಂದೇ ಬೇಂದ್ರೆಯವರು, ‘ದಿನವೂ ಸಂಜೆಗೆ ಬೆವರಿನ ಜಳಕ’ ಎನ್ನುತ್ತಾರೆ. ಇಷ್ಟೆಲ್ಲ ಶ್ರಮಪಟ್ಟ ರೈತನಿಗೆ ಸಂಜೆಯ ಹೊತ್ತಿಗೆ ಶ್ರಮದ ಪ್ರತಿಫಲವಾಗಿ ಒಂದಿಷ್ಟು ಕೂಳು ಸಿಗುತ್ತದೆ ಎನ್ನುವಂತಿಲ್ಲ. ಏಕೆಂದರೆ, ಬೆಳೆ ಬಂದ ನಂತರ ಹೊಲದ ಮಾಲೀಕನಿಗೆ ಅವನ ಪಾಲು ಕೊಟ್ಟ ನಂತರವೇ, ಇವನಿಗೆ ತನ್ನ ಭಾಗ ಸಿಗುವುದು. ಆದುದರಿಂದ ಅಲ್ಲಿಯವರೆಗೆ  ‘ಇವನ ಉಚ್ಛ್ವಾಸವೇ  ಇವನಿಗೆ ಕೂಳು, ಇವನ ಕಂಬನಿಯೇ ಇವನಿಗೆ ಕುಡಿಯಲು ಸಿಗುವ ನೀರು.’ ಉಸಿರಿನ ಕೂಳನ್ನು ಹಾಗು ಕಣ್ಣೀರ ನೀರನ್ನೇ ಕುಡಿದು ಬದುಕಬೇಕಾದ ರೈತನ ಹೊಟ್ಟೆ ತನ್ನ ಬೆನ್ನಿನ ಬೆನ್ನಿಗೇ(!) ಹತ್ತಿಕೊಳ್ಳುವುದರಲ್ಲಿ ಆಶ್ಚರ್ಯವಿಲ್ಲ.

ಇಂತಹ ರೈತನ ಮನಸ್ಸು ಎಂತಹ ಸಂಕಟದಲ್ಲಿರಬಹುದು?
ಎದೆಯ ಗೂಡಿನೊಳು
ಚಿಂತೆಯ ಗೂಗಿ !
ಮಿದುಳಿನ ಮೂಲೆಗೆ
ಲೊಟ ಲೊಟ ಹಲ್ಲಿ !
ರೈತನ ಎದೆಯಾಳವನ್ನು ಬೇಂದ್ರೆ ಎದೆಯ ಗೂಡು ಎಂದು ವ್ಯಂಗ್ಯದಿಂದ ಬಣ್ಣಿಸುತ್ತಾರೆ. ಗೂಗಿ ಅಪಶಕುನದ ಹಕ್ಕಿ. ಯಾರೊಡನೆಯೂ ಬೆರೆಯದ ನಿಶಾಚರ ಪ್ರಾಣಿ. ಎದೆಯ ಗೂಡಿನೊಳು ಅಂದರೆ ರೈತನ ಎದೆಯಾಳವನ್ನು ಚಿಂತೆ ಎನ್ನುವ ಗೂಗಿ ಆಕ್ರಮಿಸಿಕೊಂಡಿದೆ. ಹಗಲಿನಲ್ಲಿ ಗೂಗಿ ಎಲ್ಲೂ ಹೊರಬೀಳುವುದಿಲ್ಲ, ನಮ್ಮ ರೈತನಂತೆ; ಇರುಳಿನಲ್ಲಿ ತನ್ನ ಚಿಂತೆಯಲ್ಲಿ ತಾನಿರುತ್ತದೆ. ಅದರಂತೆಯೇ ನಮ್ಮ ರೈತನೂ ಸಹ ಯಾರನ್ನೂ ನೋಡಬಯಸುವುದಿಲ್ಲ, ಯಾರೊಡನೆಯೂ ಮಾತನಾಡ ಬಯಸುವುದಿಲ್ಲ, ಎಲ್ಲರಿಂದಲೂ ಮುಖ ಮುಚ್ಚಿಕೊಂಡು ತಿರುಗುತ್ತಾನೆ.

ಹೃದಯದ ಮಾತು ಹೇಗಾದರೂ ಇರಲಿ, ಆತನ ಬುದ್ಧಿ ಆತನಿಗೆ ಏನು ಹೇಳುತ್ತದೆ? ಮಿದುಳಿನ ಮೂಲೆಯಲ್ಲಿರುವ ಅಪಶಕುನದ ಹಲ್ಲಿಯೊಂದು, ಪದೇ ಪದೇ ಆತನಿಗೆ ಹೇಳುತ್ತಲೇ ಇದೆ:  ‘ಇದು ತೀರಾ ಕೆಟ್ಟ ಪರಿಸ್ಥಿತಿ, ಇದು ಬದಲಾಗುವುದು ಸಾಧ್ಯವಿಲ್ಲ !’ (ಇದು ಅಂತ್ಯವಾಗುವುದು ರೈತನ ಅಂತ್ಯದೊಡನೆಯೇ. ಆದುದರಿಂದಲೇ ನಮ್ಮ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.)

ಮೋರೆಯು ಸಾವನು
ಅಣಕಿಸುತಿಹುದು !
ಕೊರಳಿಗೆ ಹತ್ತಿದೆ
ಸಾಲದ ಶೂಲ !
ಆತನ ಕಳಾಹೀನ ಮುಖವು ಸಾವನ್ನೇ ಅಣಕಿಸುವಷ್ಟು ನಿರ್ಜೀವವಾಗಿದೆ. ಮುಖವನ್ನು ಎತ್ತಿಹಿಡಿಯಬೇಕಾದ ಕೊರಳಿಗೆ ಸಾಲದ ಶೂಲವು ಸಿಲುಕಿರುವುದರಿಂದ ಆತ ಮುಖ ಕೆಳಗೆ ಜೋತಿದೆ. ಆತ ತನ್ನ ಮುಖವನ್ನು ಎತ್ತಿಕೊಂಡು ತಿರುಗಲು ಸಾಧ್ಯವಾಗುತ್ತಿಲ್ಲ.

ಆದರು ಬರದೋ
ಯಮನಿಗೆ ಕರುಣ
ಉಸಿರಿಗೆ ಒಮ್ಮೆ
ಜನನಾ ಮರಣಾ.
ಇಂತಹ ನಿರ್ಜೀವ ಪ್ರಾಣಿಯು ಸತ್ತಾದರೂ ಹೋದರೆ, ತನ್ನ ಸಂಕಟಗಳಿಂದ ಮುಕ್ತನಾಗಬಹುದು. ಆದರೆ
ಯಮನಿಗೂ ಸಹ ಈತನ ಮೇಲೆ ಕರುಣೆ ಬರುತ್ತಿಲ್ಲ., ನಿಟ್ಟುಸಿರು ಬಿಟ್ಟಾಗೊಮ್ಮೆ ಪ್ರಾಣ ಹಾರುತ್ತದೆ, ಉಸಿರು ಎಳೆದುಕೊಂಡಾಗೊಮ್ಮೆ ಈತನಲ್ಲಿ ಪ್ರಾಣ ಮತ್ತೆ ಮಿಸುಕಾಡುತ್ತದೆ !
* * * * * * * * * * * * * * * * * * * * *
ಇಂತಹ ದುರ್ಧರ ಪರಿಸ್ಥಿತಿಯಲ್ಲಿ ಸಿಲುಕಿ ಬೆಂಡಾಗಿರುವ ಒಕ್ಕಲಿಗ ಹೇಗೆ ಕಾಣಿಸುತ್ತಾನೆ ಎನ್ನುವ ದೃಶ್ಯವನ್ನು  ಬೇಂದ್ರೆ ಈಗ ನಮಗೆ ತೋರಿಸುತ್ತಾರೆ:

ನರಗಳ ನೂಲಿನ
ಪರೆ ಪರೆ ಚೀಲಾ
ತೆರೆ ತೆರೆಯಾಗಿದೆ
ಜಿರಿಜಿರಿಯಾಗಿದೆ;
ಅದರೊಳಗೊಂದು
ಎಲುಬಿನ ಬಲೆಯು !
ಚೀಲವನ್ನು ಹೆಣೆಯಲು ನೂಲು ಬೇಕಷ್ಟೆ. ಈ ಒಕ್ಕಲಿಗನ ದೇಹದ ಚೀಲಕ್ಕೆ ನರಗಳೇ ನೂಲಾಗಿವೆ. ಅಂದರೆ ಅಷ್ಟು ಸಣಕಲಾಗಿವೆ. ಅದರಿಂದ ತಯಾರಾಗುವ ಚೀಲವೂ ಸಹ ಪರೆ, ಪರೆ, ತೆರೆ, ತೆರೆಯಾಗಿದೆ. ಅಂದರೆ ಚರ್ಮವೆಲ್ಲ ಸುಕ್ಕುಗಟ್ಟಿ ಜೋತು ಬಿದ್ದು ಜೀರ್ಣವಾಗಿದೆ. ಆ ದೇಹದ ಚೀಲದಲ್ಲಿ ಎಲುಬಿನ ಬಲೆಯೊಂದಿದೆ. ಒಕ್ಕಲಿಗನ ಅಸ್ಥಿಪಂಜರವು ಬಲೆಯಂತೆ ಕಾಣಬೇಕಾದರೆ, ಎಷ್ಟು ಶಿಥಿಲವಾಗಿರಬೇಡ! ಅಥವಾ ಈ ಬಡಪಾಯಿಯ ಜೀವವನ್ನು ಹಿಡಿದಿಡುವ ಬಲೆಯೆ ಇದು?

ಟುಕು ಟುಕು ಡುಗು ಡುಗು
ಉಲಿಯುವ ನರಳುವ
ಜೀವದ ಜಂತುವು
ಹೊರಳುತ ಉರುಳುತ;
ಜನುಮವೆಂಬುವಾ
ಕತ್ತಲೆಯಲ್ಲಿ
ಬಿದ್ದಿದೆ ಒಳಗೆ
ಹೇಗೊ ಬಂದು !
ಜೀವ ಹೋಗುತ್ತಿರುವ ಪ್ರಾಣಿಯ ಹೃದಯವು ಹೇಗೆ ಸಾವಕಾಶವಾಗಿ ‘ಟುಕು ಟುಕು ಡುಗು ಡುಗು’ ಎಂದು ಬಡಿದುಕೊಳ್ಳುವುದೋ, ಅದೇ ರೀತಿಯಲ್ಲಿ ನಮ್ಮ ಒಕ್ಕಲಿಗನ ಹೃದಯವೂ ಸಾವಕಾಶವಾಗಿ ಬಡಿದುಕೊಳ್ಳುತ್ತ, ನರಳುತ್ತ ಬದುಕಿದೆ ! ಹರಿದಾಡುವ ಕೀಟವೊಂದನ್ನು ನೋಡಿರುವಿರಲ್ಲವೆ?  ಅದಕ್ಕೆ ಆಘಾತ ಮಾಡಿದಾಗ,ಅದು ಹೊರಳುತ್ತ, ಉರುಳುತ್ತ ಜೀವ ಹಿಡಿದುಕೊಳ್ಳಲು ಪ್ರಯತ್ನಿಸುವುದನ್ನು ನೋಡಿರುವಿರಲ್ಲವೆ? ಈ ನಮ್ಮ ಅಸಹಾಯಕ ಜಂತು ಸಹ ಹೇಗೋ ಹೇಗೋ ಹೊರಳುತ್ತ, ಉರುಳುತ್ತ ಬಂದು ‘ಜನ್ಮ’ ಎನ್ನುವ ಕತ್ತಲೆಯ ಗುಹೆಯೊಳಗೆ ಬಂದು ಬಿದ್ದಿದೆ. ಅರ್ಥಾತ್ ಜನ್ಮವೇ ಕಾರ್ಗತ್ತಲೆ; ಸಾವೇ ಬೆಳಕು!

ಸಾವಿನ ಬೆಳಕದು
ಕಾಣುವದೆಂದು ?
ಎಂದೋ ಎಂದೋ
ಎಂದೋ ಎಂದು
ಕನವರಿಸುವದು
ತಳಮಳಿಸುವದು !
ಆದರೆ ಸಾವು ಎನ್ನುವ ಬೆಳಕು ಅದಕ್ಕೆ ಎಂದಾದರೂ ಕಂಡೀತೆ? ‘ದೇವರೆ, ಎಂದು ನನ್ನನ್ನು ಮುಕ್ತಗೊಳಿಸುವೆ, ತಂದೆ?’ ಎಂದು ಹಂಬಲಿಸುತ್ತ, ತಳಮಳಗೊಳ್ಳುತ್ತ ಒಕ್ಕಲಿಗನ ಜೀವ ಮಿಡುಕುತ್ತಿದೆ.

ಬೇಂದ್ರೆಯವರ ಈ ಕವನವೂ ಈಗಲೂ ಸಹ ನಮ್ಮ ರಾಜ್ಯದ ರೈತರ ಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ ಎನ್ನಬಹುದು.
ಇತ್ತೀಚೆಗೆ, ಕರ್ನಾಟಕದಲ್ಲಿನಡೆಯುತ್ತಿರುವ ರೈತರ ಆತ್ಮಹತ್ಯೆಗಳನ್ನು ನೊಡಿದರೆ, ಒಕ್ಕಲಿಗನು ದೇವರ ಕೃಪೆಗಾಗಿ ಕಾಯದೆ, ತಾನೇ ತನ್ನನ್ನು ಮುಕ್ತಗೊಳಿಸಿಕೊಳ್ಳುತ್ತಿದ್ದಾನೆ ಎಂದು ಅನಿಸುವುದು!

4 comments:

prabhamani nagaraja said...

ಒಬ್ಬ ಸಾಮಾನ್ಯ ರೈತನ ಪರಿಸ್ಥಿತಿಯನ್ನು ಬಹಳ ಚೆನ್ನಾಗಿ ತೆರೆದಿಟ್ಟಿರುವ ಬೇ೦ದ್ರೆಯವರ ಈ ಕವನ ಇ೦ದಿಗೂ ಪ್ರಸ್ತುತವೆನಿಸುವ೦ತಿದೆ. ಈ ಕವನವನ್ನು ಹ೦ಚಿಕೊ೦ಡದ್ದಕ್ಕಾಗಿ ಧನ್ಯವಾದಗಳು ಸರ್.

sunaath said...

ಪ್ರಭಾಮಣಿಯವರೆ,
ರೈತನ ಅಂದಿನ ಹಾಗು ಇಂದಿನ ಸ್ಥಿತಿಗಳಲ್ಲಿ ಏನೇನೂ ಬದಲಾವಣೆ ಆಗಿಲ್ಲ.
ಸ್ಪಂದನೆಗೆ ಧನ್ಯವಾದಗಳು.

ಅಪ್ಪ-ಅಮ್ಮ(Appa-Amma) said...

ಚೊಚ್ಚಲ ಮಗನ ಬಾವಣೆ ಇನ್ನೂ ಮುಗಿದಿಲ್ಲ..

ಮನ ಕಲಕುವ ಸಾಲುಗಳು ..ಕೇವಲ ಒಬ್ಬ ಬೇಂದ್ರೆಯಜ್ಜನಿಂದ ಮಾತ್ರ ಸಾಧ್ಯ

sunaath said...

ಚೊಚ್ಚಲ ಮಗನ ಬವಣೆ ಇನ್ನೂ ಹೆಚ್ಚುತ್ತಲೇ ಇದೆ!