ಗಾಯತ್ರೀ ಸೂಕ್ತ
೧
ಲಯದ ಬಸಿರ ಬಯಲಲ್ಲಿ ದೇವ-ಭವ
ಬೀಜ ಬಿತ್ತಿದಾಕೆ
ಮೂಕು ಮೊಗ್ಗೆ ಮುನ್ನೂಕಿ
ಬಂಡಿನಲಿ ತಲೆಯನೆತ್ತಿದಾಕೆ
ರಸವ ಮೀರಿ ತಾನಾರಿದಾತನಿಗೆ
ಹೇಗೊ ರುಚಿಸಿದಾಕೆ
ಸಾಕ್ಷಿಪುರುಷನಾ ಅಕ್ಷಿಯಲ್ಲೆ
ಪ್ರತ್ಯಕ್ಷ ರಚಿಸಿದಾಕೆ
೨
ಜಡದ ಪ್ರಾಣಗತಿ ಜಡಿದು
ಮಿಡಿದು ಸ್ವರಮೇಳ ಕೋದಿದಾಕೆ
ಕೋಟಿ ಚಿಕ್ಕೆ ಪುಟಕಿರುವ
ಬಯಲ ಹೊತ್ತಿಗೆಯನೋದಿದಾಕೆ
ಪಿಂಡಗಳನು ಬ್ರಹ್ಮಾಂಡಗಳನು
ಮಣಿಮಾಲೆ ಮಾಡಿದಾಕೆ
ನಿನ್ನ ತಾಳಗತಿಯಲ್ಲಿ
ವಿಶ್ವಗಳ ಗೀತೆ ಹಾಡಿದಾಕೆ
೩
ಕೀಟಕೀಟದಲಿ ಮಾಟ ಮಾಡಿ
ಹಲಚೆಲುವು ತೂರಿದಾಕೆ
ಪಶುವಿನಿದಿರು ಮರಿದೂಡಿ
ಮೋಡಿಯಲಿ ಒಲವ ಹೀರಿದಾಕೆ
ಹಾವಭಾವದಲಿ ಭೋಗ ಯೋಗದಲಿ
ನಲಿವ ತೋರಿದಾಕೆ
ಸಕಲ ವಿಕಲಗಳ ಕಲೆಯ ಜಾಲದಲಿ
ಬಲವ ಮೀರಿದಾಕೆ
೪
ಚತುರ್ಮುಖನ ನಾಲಗೆಯ ಹಾಸಿ
ತುಟಿದಿಂಬು ಮಾಡಿದಾಕೆ
ವತ್ಸಲಾಂಛನದ ಹೃದಯಕಮಲದಲಿ
ಮನೆಯ ಹೂಡಿದಾಕೆ
ಹರನ ಮೈಯನರೆದುಂಬಿ ಲೀಲೆಯಲಿ
ತಲೆಯನೇರಿದಾಕೆ
ಹೀಗೆ ಕುಣಿಯೆ ಆನಂದಲಹರಿ
ಈ ಜೀವ ಸೇರಿದಾಕೆ
೫
ಹಾಡಿದವನ ಕಾಪಾಡಲೆಂದು
ಕೈ ಹತ್ತು ಎತ್ತಿದಾಕೆ
ಎತ್ತ ಕಿವಿಯದಿರುವಿದರು
ಅತ್ತ ಐಮೊಗದಿ ಮುತ್ತಿದಾಕೆ
ತಮವು ಹಬ್ಬಿದತ್ತತ್ತ
ನಿನ್ನ ಸುಳಿಬೆಳಕು ಸುತ್ತಿದಾಕೆ
ಇರುಳ ಕೋಟಿ ಹೆಡೆ ಮೆಟ್ಟಿ
ಮಣಿಗಳೊಲು ಚಿಕ್ಕೆಯೊತ್ತಿದಾಕೆ
೬
ಮುತ್ತು ಹವಳ ಬಂಗಾರ ನೀಲಮಣಿ
ಸ್ಫಟಿಕ ಛಾಯೆಯಾಕೆ
ಕಣ್ಣ ನಡುವೆ ಒಳಗಣ್ಣ
ತೆರೆಯುವಾ ದಿವ್ಯಮಾಯೆಯಾಕೆ
ಬೆಳೆವ ಚಂದ್ರಕಳೆ ಮುಕುಟದವಳೆ
ತಂತನದ ಬಣ್ಣದಾಕೆ
ವರದ ಅಭಯ ಕರವಿರಲು ತಾಯಿ
ಬಾ ಬೇರೆ ಕರೆಯಬೇಕೆ?
…………………………………………………
ಗಾಯತ್ರೀ ಮಂತ್ರವು ಸನಾತನ
ಧರ್ಮದ ಪರಮೋಚ್ಚ ಮಂತ್ರವೆಂದು ಖ್ಯಾತಿ ಪಡೆದಿದೆ. ಇದರ ದೃಷ್ಟಾರನು ವಿಶ್ವಾಮಿತ್ರ ಋಷಿ. ಋಷಿಯು ಮಂತ್ರವನ್ನು
ರಚಿಸುವದಿಲ್ಲ, ‘ಕಾಣುತ್ತಾನೆ’. ಆದುದರಿಂದಲೇ ಅವನಿಗೆ ‘ದೃಷ್ಟಾರ’ ಎಂದು ಕರೆಯುತ್ತಾರೆ. ಪ್ರತಿ ಮಂತ್ರಕ್ಕೂ ಒಬ್ಬ
ದೇವತೆ ಇರುತ್ತಾನೆ, ಒಂದು ಮಂತ್ರಶರೀರವಿರುತ್ತದೆ. ಗಾಯತ್ರೀ ಮಂತ್ರದ ದೇವತೆ ಸೂರ್ಯ. ಈ ಮಂತ್ರದ
ಶರೀರವು ಗಾಯತ್ರೀ ಛಂದಸ್ಸು. ದೇವತೆಯಂತೆಯೇ ದೇವತಾಶರೀರವೂ ಸಹ ಸಶಕ್ತವಾದದ್ದು. ಈ ಮಂತ್ರದ ಶರೀರವಾದ
ಗಾಯತ್ರೀ ದೇವಿಯನ್ನು ಅನೇಕ ಸಾಧಕರು ಅನೇಕ ಬಗೆಗಳಲ್ಲಿ ವರ್ಣಿಸಿದ್ದಾರೆ. ಅಂಬಿಕಾತನಯದತ್ತರು ಗಾಯತ್ರೀದೇವಿಯ ಆ ರೂಪಗಳನ್ನು
ತಮ್ಮ ಚಿತ್ತದಲ್ಲಿ ರಸಗೊಳಿಸಿ ‘ಗಾಯತ್ರೀಸೂಕ್ತ’ವನ್ನು ರಚಿಸಿದ್ದಾರೆ.
ಮೊದಲನೆಯ ನುಡಿ:
ಲಯದ ಬಸಿರ ಬಯಲಲ್ಲಿ ದೇವ-ಭವ
ಬೀಜ ಬಿತ್ತಿದಾಕೆ
ಮೂಕು ಮೊಗ್ಗೆ ಮುನ್ನೂಕಿ
ಬಂಡಿನಲಿ ತಲೆಯನೆತ್ತಿದಾಕೆ
ರಸವ ಮೀರಿ ತಾನಾರಿದಾತನಿಗೆ
ಹೇಗೊ ರುಚಿಸಿದಾಕೆ
ಸಾಕ್ಷಿಪುರುಷನಾ ಅಕ್ಷಿಯಲ್ಲೆ
ಪ್ರತ್ಯಕ್ಷ ರಚಿಸಿದಾಕೆ
ಸೃಷ್ಟಿಯ ಆದಿಯಲ್ಲಿ ಇರುವ
ಚೈತನ್ಯವು ಸೃಷ್ಟಿಸುವ ಬಯಕೆಯಿಂದ ಶಿವ ಮತ್ತು ಶಕ್ತಿ ಎಂದು ಎರಡಾಯಿತು.
ಶಿವನಿಗೆ ಆತ್ಮ ಅಥವಾ ಪುರುಷ ಎಂದೂ ಕರೆಯುತ್ತಾರೆ. ಶಕ್ತಿ ಎಂದರೆ
ಪ್ರಕೃತಿ. ಶಿವನಿಗೆ ವಿವಿಧ ರೀತಿಯ ರೂಪಗಳನ್ನು ನೀಡಿ, ಅವನನ್ನು ಪ್ರಪಂಚದಲ್ಲಿ ಯೋಜಿಸುವಾಕೆಯೆ ಶಕ್ತಿ.
ಇವಳ ಸೃಷ್ಟಿಚಕ್ರವನ್ನು ಐದು ಹಂತಗಳಲ್ಲಿ ಹೇಳಲಾಗಿದೆ:
(೧) ಸೃಷ್ಟಿ, (೨) ಸ್ಥಿತಿ,
(೩) ಲಯ,
(೪) ತಿರೋಧಾನ,
(೫) ಅನುಗ್ರಹ.
ಲಯದ ಬಸಿರ ಬಯಲಲ್ಲಿ ದೇವ-ಭವ
ಬೀಜ ಬಿತ್ತಿದಾಕೆ:
ಸೃಷ್ಟಿಯೆಲ್ಲ ಲಯವಾದ
ಬಳಿಕ ಉಳಿಯುವುದು ಏನು?.........ಬಯಲು! ಆದರೆ ಇದು ಶೂನ್ಯವಲ್ಲ. ಏನೂ ಇಲ್ಲದ ಈ ಸ್ಥಿತಿಯಲ್ಲಿ ಮುಂದಿನ ಸೃಷ್ಟಿಯ
ಗರ್ಭವಿದೆ. ಅಲ್ಲಮ ಪ್ರಭುಗಳು ಇದನ್ನು ‘ನಿರ್ಬಯಲು’ ಎಂದು ಹೇಳುತ್ತಾರೆ.
ಅಂಬಿಕಾತನಯದತ್ತರು ಇದನ್ನೇ
‘ಲಯದ ಬಸಿರ ಬಯಲಲ್ಲಿ..’
ಎಂದು ಹೇಳುತ್ತಾರೆ. ಈ
ಬಸಿರಲ್ಲಿ ಹೊಸ ಸೃಷ್ಟಿಯ ಬೀಜವನ್ನು ಆರೋಪಿಸುವಳು ಗಾಯತ್ರೀದೇವಿ. ಈ ಸೃಷ್ಟಿಯು ಸತ್ ಹಾಗು ಅಸತ್ ಎಂದು
ಎರಡು ಬಗೆಯಾಗಿದೆ.
(ಸರ್ವಾಧಾರಾ, ಸುಪ್ರತಿಷ್ಠಾ, ಸದಸದ್ರೂಪಧಾರಿಣೀ—ಲಲಿತಾಸಹಸ್ರನಾಮ)
ಇದನ್ನೇ ಅಂಬಿಕಾತನಯದತ್ತರು
ದೇವ(ಸತ್) ಹಾಗು ಭವ (ಅಸತ್) ಇವುಗಳ ಬೀಜಗಳು ಎಂದು ಹೇಳುತ್ತಿದ್ದಾರೆ. ಇಲ್ಲಿ
ಲಯ ಹಾಗು ಸೃಷ್ಟಿ ಇವೆರಡರನ್ನು ಮಾತ್ರ ಉಲ್ಲೇಖಿಸಿದ್ದರೂ, ಉಳಿದ ಮೂರು ಕಾರ್ಯಗಳಾದ ಸ್ಥಿತಿ,ತಿರೋಧಾನ
ಹಾಗು ಅನುಗ್ರಹ ಇವು ಗೃಹೀತವಾಗಿವೆ.
ಮೂಕು ಮೊಗ್ಗೆ ಮುನ್ನೂಕಿ
ಬಂಡಿನಲಿ ತಲೆಯನೆತ್ತಿದಾಕೆ:
ದೇವೀಗರ್ಭವೇ ಆ ಬಯಲು.
ಅಲ್ಲಿ ಅವಳು ಬೀಜಾರೋಪಣೆಯನ್ನೇನೊ ಮಾಡುತ್ತಾಳೆ. ಆದರೆ ಆ ಗರ್ಭವು ಇನ್ನೂ ಮೂಕಸ್ಥಿತಿಯಲ್ಲಿ ಇರುತ್ತದೆ;
ಅದರಲ್ಲಿ ಯಾವುದೇ ಚಲನೆ
ಇರುವುದಿಲ್ಲ. ಅದು ಇನ್ನೂ ಅರಳದ ಒಂದು ಮೊಗ್ಗು ಮಾತ್ರ. ಈ ಗರ್ಭಸ್ಥ ಶಿಶುವನ್ನು ದೇವಿಯು ಮುನ್ನೂಕಿ ಪ್ರಸವಿಸುತ್ತಾಳೆ. ಈ ಶಿಶುವು ೮೪ ಲಕ್ಷ
ಯೋನಿಗಳ ಪೈಕಿ ಒಂದರಲ್ಲಿ ಜನ್ಮ ತಾಳುತ್ತದೆ. ಆ ಯೋನಿಯ ಪ್ರಕೃತಿಧರ್ಮವನ್ನು ಅದು ಆಚರಿಸುತ್ತ ಬೆಳೆಯುತ್ತದೆ.
ಈ ಪ್ರಕೃತಿಧರ್ಮವು ಅದರ ವ್ಯಕ್ತಸ್ಥಿತಿ. ಆದರೆ ಇಂತಹ ವ್ಯಕ್ತಸ್ಥಿತಿಯಲ್ಲದೆ,
ಆ ಶಿಶುವಿನಲ್ಲಿ ಒಂದು
ಅವ್ಯಕ್ತಸ್ಥಿತಿಯೂ ಇದೆ, ಹೂವಿನಲ್ಲಿ ‘ಬಂಡು’ (ಹೂವಿನ ರಸ) ಇರುವ ಹಾಗೆ. ಈ ಅವ್ಯಕ್ತ ಸ್ಥಿತಿಯ ಪರಮೋಚ್ಚ ಬಿಂದುವೇ
ಶಿವ ಮತ್ತು ಶಕ್ತಿಯರ ಸಂಗಮಸ್ಥಾನ, ಪರಮಾನಂದದ ಸ್ಥಾನ. ಅಲ್ಲಿ ಆ ಸ್ಥಾನದಲ್ಲಿ ದೇವಿಯು ‘ತಲೆಯನೆತ್ತಿದಾಕೆ’.
ಪ್ರತಿಯೊಂದು ಜೀವಿಗೂ
ವಿವಿಧ ಪ್ರಜ್ಞಾಕೇಂದ್ರಗಳಿವೆ. ಇವುಗಳನ್ನು ಮೂಲಾಧಾರ, ಸ್ವಾಧಿಷ್ಠಾನ,
ಮಣಿಪೂರ,
ಅನಾಹತ,
ವಿಶುದ್ಧಿ ಹಾಗು ಆಜ್ಞಾಚಕ್ರಗಳೆಂದು
ಯೋಗಶಾಸ್ತ್ರದಲ್ಲಿ ಹೇಳಲಾಗಿದೆ. ಈ ಚಕ್ರಗಳು ಶಕ್ತಿಕೇಂದ್ರಗಳೇನೋ ಹೌದು;
ಆದರೆ ಅದಕ್ಕೂ ಮುಖ್ಯವಾಗಿ
ಇವು ಪ್ರಜ್ಞಾಕೇಂದ್ರಗಳು ಎನ್ನುವುದನ್ನು ನಾವು ಅರಿಯಬೇಕು. ಮೂಲಾಧಾರದಲ್ಲಿ ಸರ್ಪದಂತೆ ಸುತ್ತಿಕೊಂಡು ನಿದ್ರಿಸುತ್ತಿರುವ ದೇವಿಯು (ಕುಂಡಲಿನಿ),
ಜಾಗೃತಳಾದಾಗ ಆಜ್ಞಾಚಕ್ರವನ್ನೂ
ದಾಟಿ, ಸಹಸ್ರದಲ ಪದ್ಮದಲ್ಲಿ
ತಲೆಯೆತ್ತಿ ನಿಲ್ಲುತ್ತಾಳೆ. ಇದು ಶಿವ-ಶಕ್ತಿಯರ ಸಂಗಮಸ್ಥಾನ.
ರಸವ ಮೀರಿ ತಾನಾರಿದಾತನಿಗೆ
ಹೇಗೊ ರುಚಿಸಿದಾಕೆ:
ಆದರೆ ಯೋಗೇಶ್ವರನಾದ ಶಿವನು ಸೃಷ್ಟಿವಿಮುಖನು. ಆತನು ಶಕ್ತಿಯು ಸೃಷ್ಟಿಸುವ ಎಲ್ಲ ರಸಗಳನ್ನು (=ಭೋಗಗಳನ್ನು,
ಚೆಲುವನ್ನು) ಮೀರಿ ನಿಂತಿದ್ದಾನೆ.
‘ತಾನಾರಿದಾತನಿಗೆ’
ಎನ್ನುವ ಪದವನ್ನು ಗಮನಿಸಿ.
ಈ ಪದವನ್ನು ‘ತಾನು+ಆರಿದಾತನು’ ಎಂದು ವಿಗ್ರಹಿಸಬಹುದು. ಅಂದರೆ,
ಈತನು ಆರಿದ್ದಾನೆ,
ಭೋಗವಿಮುಖನಾಗಿದ್ದಾನೆ
ಎಂದು ತಿಳಿಯಬಹುದು. ಇದೇ ಪದವನ್ನು ‘ತಾ+ನಾರಿದಾತನು’ ಎಂದೂ ಗ್ರಹಿಸಬಹುದು. ಆ ಸಂದರ್ಭದಲ್ಲಿ ಈತನು ಶಕ್ತಿಗೆ
ಸುಮುಖನಾಗಿದ್ದಾನೆ ಎಂದು ತಿಳಿಯಬಹುದು. ಮೂರನೆಯ ಒಂದರ್ಥವೂ ಇದೆ. ‘ತಾನ’ ಎಂದರೆ ಇಂದ್ರಿಯಸುಖದ ವಿಷಯ. ಇಂದ್ರಿಯ ಸುಖಗಳ ‘ಅರಿ’ ಅಂದರೆ ಶತ್ರು,
ಶಿವನು ಕಾಮನ ಶತ್ರು.
ಹೀಗಿದ್ದರೂ ಸಹ, ಆತನಿಗೆ ಪಾರ್ವತಿಯನ್ನು, ಶಕ್ತಿದೇವಿಯನ್ನು ಬಿಟ್ಟಿರಲು ಆಗದು. ಆಗ ಈ ‘ತಾನಾರಿ’ ಶಿವನು ಕಾಮನಿಗೆ ‘ದಾತ’ನಾಗಿ
‘ತಾನಾರಿದಾತ’ನಾಗುತ್ತಾನೆ.
‘ಸೌಂದರ್ಯಲಹರೀ’ಯಲ್ಲಿ ಶಂಕರಾಚಾರ್ಯರು,
‘ಶಿವನು ಪಾರ್ವತಿಗೆ ಸೋತಾಗ,
ಅವಳ ಕಾಲ್ಗೆಜ್ಜೆಗಳ ನಿನಾದವು
ಕಾಮನ ನಗುವಿನಂತೆ ಭಾಸವಾಗುತ್ತದೆ’ ಎಂದು ಹೇಳಿದ್ದಾರೆ.
(‘ಚಿರಾದಂತಃಶಲ್ಯಂ ದಹನಕೃತಮುನ್ಮೀಲಿತವತಾ
ತುಲಾಕೋಟಿಕ್ವಾಣೈಃ ಕಿಲಿಕಿಲಿತಮೀಶಾನ
ರಿಪುಣಾ’—ಸೌಂದರ್ಯಲಹರೀ.)
ಸಾಕ್ಷಿಪುರುಷನಾ ಅಕ್ಷಿಯಲ್ಲೆ
ಪ್ರತ್ಯಕ್ಷ ರಚಿಸಿದಾಕೆ:
ಶಕ್ತಿದೇವಿಯ ಸೃಷ್ಟಿಚಕ್ರಕ್ಕೆ
ಶಿವನೇ ಸಾಕ್ಷಿಪುರುಷ. ಮಹಾಪ್ರಲಯದ ಕಾಲದಲ್ಲಿ ಎಲ್ಲ ದೇವತೆಗಳೂ ನಾಶವಾಗುತ್ತಾರೆ. ಆದರೆ ಶಿವನೊಬ್ಬನೇ
ಉಳಿದುಕೊಂಡು, ಈ ಪ್ರಲಯಕ್ಕೆ ಸಾಕ್ಷಿಯಾಗುತ್ತಾನೆ.
(ಮಹಾಸಂಹಾರೇಸ್ಮಿನ್ ವಿಹರತಿ ಸತಿ ತ್ವತ್ಪತಿರಸೌ
----ಸೌಂದರ್ಯಲಹರೀ)
ಈ ಶಿವನೋ ಸೃಷ್ಟಿವಿಮುಖನಾದ
ಅಂತರ್ಮುಖಿ. ಈತನ ಕಣ್ಣಿಗೆ ಕಾಣುವುದು ಕೇವಲ ‘ಯೋಗ’ ಮಾತ್ರ. ಆ ಕಣ್ಣಿನಲ್ಲಿ ಶಕ್ತಿಯು ಮತ್ತೊಂದು ಅಕ್ಷವನ್ನು,
ಪ್ರತಿ ಅಕ್ಷವನ್ನು ರಚಿಸುತ್ತಾಳೆ.
ಕೇವಲ ಒಳಗಣ್ಣನ್ನು ಹೊಂದಿದ ಶಿವನಿಗೆ ಹೊರಗಣ್ಣನ್ನು ಅನುಗ್ರಹಿಸಿ,
ಅವನಿಗೆ ಸೃಷ್ಟಿಯನ್ನು
ತೋರಿಸುವವಳು ಈ ದೇವಿ.
‘ಪ್ರತ್ಯಕ್ಷ’ಕ್ಕೆ ವ್ಯಕ್ತ ಎನ್ನುವ ಅರ್ಥವಿದೆ. ವ್ಯಕ್ತ (ಅಂದರೆ
manifest) ಸೃಷ್ಟಿಯನ್ನು ನೋಡಲು ಆತನಿಗೆ ‘ಪ್ರತ್ಯಕ್ಷ ದೃಷ್ಟಿ’ ಬೇಕಲ್ಲವೆ? ಅದು ದೇವಿಯ ಕೊಡುಗೆ!
ಎರಡನೆಯ ನುಡಿ:
ಜಡದ ಪ್ರಾಣಗತಿ ಜಡಿದು
ಮಿಡಿದು ಸ್ವರಮೇಳ ಕೋದಿದಾಕೆ
ಕೋಟಿ ಚಿಕ್ಕೆ ಪುಟಕಿರುವ
ಬಯಲ ಹೊತ್ತಿಗೆಯನೋದಿದಾಕೆ
ಪಿಂಡಗಳನು ಬ್ರಹ್ಮಾಂಡಗಳನು
ಮಣಿಮಾಲೆ ಮಾಡಿದಾಕೆ
ನಿನ್ನ ತಾಳಗತಿಯಲ್ಲಿ
ವಿಶ್ವಗಳ ಗೀತೆ ಹಾಡಿದಾಕೆ
ಜಡದ ಪ್ರಾಣಗತಿ ಜಡಿದು
ಮಿಡಿದು ಸ್ವರಮೇಳ ಕೋದಿದಾಕೆ:
ದೇವಿಯ ಈ ಸೃಷ್ಟಿಯು ‘ಜಡ’ ಹಾಗು ‘ಚೈತನ್ಯಪೂರ್ಣ’
ಎಂದು ಎರಡು ವಿಧವಾಗಿದೆ.
ಎರಡರೊಳಗೂ ಇರುವವಳು ಇವಳೇ. (‘ಚಿಚ್ಛಕ್ತಿಶ್ಚೇತನಾರೂಪಾ,
ಜಡಶಕ್ತಿರ್ಜಡಾತ್ಮಿಕಾ’---ಲಲಿತಾಸಹಸ್ರನಾಮ). ಅಂಬಿಕಾತನಯದತ್ತರು ಎರಡನೆಯ ನುಡಿಯಲ್ಲಿ ದೇವಿಯು
ಈ ಜಡರೂಪೀ ಸೃಷ್ಟಿಯನ್ನು ರೂಪಿಸಿದ ವಿಧಾನವನ್ನು ಹೇಳುತ್ತಿದ್ದಾರೆ.
ದೇವಿಯು ಜಡವಸ್ತುವಿನ
ಪ್ರಾಣಗತಿಯನ್ನು ಜಡಿಯುತ್ತಾಳೆ. ಜಡವಸ್ತುವಿಗೆ ‘ಪ್ರಾಣಗತಿ’ ಇರಲು ಸಾಧ್ಯವೆ ಎಂದು ಕೇಳಬಹುದು. ಈ ಸೃಷ್ಟಿಯಲ್ಲಿ
ಯಾವ ವಸ್ತುವೂ ನಿಜವಾಗಿ ಜಡವಲ್ಲ. ಇದು ತೋರಿಕೆಯ ಜಾಡ್ಯ ಮಾತ್ರ. ಜಡವಸ್ತುವು ದೇವಿಯ ರೂಪವೇ ಆಗಿರುವದರಿಂದ,
ಅಲ್ಲಿರುವ ಪ್ರಾಣಗತಿ
ಅವಳೇ ಆಗಿದ್ದಾಳೆ.
(‘ಮನಸ್ತ್ವಂ ವ್ಯೋಮತ್ವಂ ಮರುದಸಿ ಮರುತ್ಸಾರಥಿರಸಿ
ತ್ವಮಾಪಸ್ತ್ವಂ ಭೂಮಿಃ
ತ್ವಯಿ ಪರಿಣತಾಯಾಂ ನಹಿ ಪರಮ್’….ಸೌಂದರ್ಯಲಹರೀ).
ಜಡವಸ್ತುವನ್ನು ಜಡಿದು
ಒಂದು ರೂಪವನ್ನು ಕೊಟ್ಟ ದೇವಿಯು, ಅದು ಸುಸ್ವರವನ್ನು ಹೊರಡಿಸಲು ಅದನ್ನು ಮಿಡಿಯುತ್ತಾಳೆ. ಸಂಗೀತವಾದ್ಯಗಳು
ಸುನಾದವನ್ನು ಹೊರಡಿಸಲು ಉಪಕರಣಗಳನ್ನು ತಯಾರಿಸುವವರು ಮಾಡುವ ಪ್ರಯತ್ನಗಳನ್ನು ಇಲ್ಲಿ ನೆನೆಯಬಹುದು.
ವಿವಿಧ ರೂಪಗಳಲ್ಲಿರುವ ಈ ಜಡವಸ್ತುಗಳು ಒಂದೇ ಸ್ವರಮೇಳದಲ್ಲಿ ನುಡಿಯುವಂತೆ ಮಾಡಲು,
ದೇವಿಯು ಅವಳನ್ನು ಸಂಯೋಜಿಸುತ್ತಾಳೆ. ಅಂಬಿಕಾತನಯದತ್ತರು ‘ಕೋದಿದಾಕೆ’ ಎನ್ನುವ ಪದವನ್ನು ಬಳಸಿದ್ದಾರೆ. ‘ಕೋದುವುದು’ ಎಂದರೆ ಹೂವುಗಳನ್ನು ಮಾಲೆಯಲ್ಲಿ ಪೋಣಿಸುವುದು.
ಜಡಸೃಷ್ಟಿಯು ಕೇವಲ ಮಧುರ ಸ್ವರಮೇಳವಲ್ಲ, ಅದೊಂದು ಸುಂದರವಾದ,
ಉದ್ದೇಶಪೂರ್ಣವಾಗಿ ಸೃಷ್ಟಿಸಿದ
ಹೂವಿನ ಮಾಲೆ ಎಂದು ಅಂಬಿಕಾತನಯಾದತ್ತರು ಹೇಳಬಯಸುತ್ತಾರೆ.
ಕೋಟಿ ಚಿಕ್ಕೆ ಪುಟಕಿರುವ
ಬಯಲ ಹೊತ್ತಿಗೆಯನೋದಿದಾಕೆ:
ಈ ಜಡವಸ್ತುವು ನಮ್ಮ ಕಣ್ಣಿನ
ಅಳತೆಯ ಒಂದು ಕಲ್ಲು ತುಂಡಲ್ಲ. ಅನೇಕ ಕೋಟಿ ಬ್ರಹ್ಮಾಂಡಗಳನ್ನು ಒಳಗೊಂಡ ಮಹಾನ್ ಸೃಷ್ಟಿ ಇದು. (‘ಅನೇಕಕೋಟಿಬ್ರಹ್ಮಾಂಡಜನನೀ ದಿವ್ಯವಿಗ್ರಹಾ’---ಲಲಿತಾಸಹಸ್ರನಾಮ). ಈ ಸೃಷ್ಟಿಯನ್ನು ಒಂದು ಹೊತ್ತಿಗೆಗೆ ಅಂದರೆ ಮಹಾನ್
ಗ್ರಂಥಕ್ಕೆ ಹೋಲಿಸುತ್ತಾರೆ ಅಂಬಿಕಾತನಯದತ್ತರು. ಇದರ ಪ್ರತಿ ಪುಟದಲ್ಲೂ ಕೋಟಿ ಕೋಟಿ ಚಿಕ್ಕೆಗಳಿವೆ!
ಇಂತಹ ಹೊತ್ತಿಗೆಯನ್ನು ರಚಿಸಿದಾಕೆ, ಪಠಿಸುತ್ತಿರುವಾಕೆ ಈ ದೇವಿ.
ಪಿಂಡಗಳನು ಬ್ರಹ್ಮಾಂಡಗಳನು
ಮಣಿಮಾಲೆ ಮಾಡಿದಾಕೆ:
ನಮ್ಮ ಕಣ್ಣಿನ ಅಳತೆಯನ್ನು
ಮೀರಿದ ಎಲ್ಲ ಬ್ರಹ್ಮಾಂಡಗಳನ್ನು ಹಾಗು ನಮ್ಮ ಕಣ್ಣಿಗೆ ಕಾಣಿಸಲಾರದ ಅನೇಕ ಪಿಂಡಾಂಡಗಳನ್ನು ದೇವಿಯು
ತನ್ನ ಕೊರಳಿನ ಮಣಿಮಾಲೆಯನ್ನಾಗಿ ಮಾಡಿಕೊಂಡಿದ್ದಾಳೆ. ಈ ಭೌತಿಕ ಜಗತ್ತು ಅವಳಿಗೆ ಆಭರಣವಾಗಿ ಶೋಭಿಸುತ್ತಿದೆ.
(‘ಆಹಾರ್ಯಂ ಚಂದ್ರತಾರಾದಿ ತಂ ವಂದೇ ಸಾತ್ವಿಕಂ ಶಿವಮ್’).
(ಈ ಸಂದರ್ಭದಲ್ಲಿ ಬೇರೊಂದು ಶ್ಲೋಕವು ನೆನಪಿಗೆ ಬರುತ್ತದೆ:
‘ತವರ್ಕ್ಷ್ಣಯೋಃ ಅಣುರಂಶುಮಾಲೀ
ತವೈವ ಮಂದಸ್ಮಿತ ಬಿಂದುರಿಂದು’.
ಈ ಶ್ಲೋಕದಲ್ಲಿ ಭಕ್ತನು
ದೇವಿಗೆ ಹೀಗೆ ಹೇಳುತ್ತಿದ್ದಾನೆ:
‘ದೇವಿ, ಸಹಸ್ರಕಿರಣಗಳನ್ನು ಹೊಂದಿದ ಸೂರ್ಯನು ನಿನ್ನ ಕಣ್ಣಿನ
ಒಂದು ಅಣು ಮಾತ್ರ.
ನಿನ್ನ ಮಂದಹಾಸದ ಒಂದು ಬಿಂದುವೇ ಚಂದ್ರನಾಗಿದೆ.)
ನಿನ್ನ ತಾಳಗತಿಯಲ್ಲಿ
ವಿಶ್ವಗಳ ಗೀತೆ ಹಾಡಿದಾಕೆ :
ಈ ಅನಂತವಾದ ಸೃಷ್ಟಿಚಕ್ರವು
ಕಾಲಬದ್ಧ ಗತಿಯಲ್ಲಿ ಉರುಳುತ್ತಿದೆ. ಈ ಕಾಲಬದ್ಧ ಗತಿಯನ್ನು ನಿಯಮಿಸುವವರು ಯಾರು?
ಇಲ್ಲಿ ಎರಡು ಸಾಧ್ಯತೆಗಳಿವೆ.
ಒಂದು, ಶ್ರೀದೇವಿಯೇ ಈ ಗತಿನಿಯಾಮಕಿ.
ಎರಡನೆಯ ಸಾಧ್ಯತೆ ಎಂದರೆ ಶಿವನ ತಾಂಡವ ನೃತ್ಯವೇ ಈ ಕಾಲಗತಿ ಅಥವಾ ತಾಳಗತಿ. ಇದು ಅನಾದಿ,
ಅನಂತವಾದದ್ದು. ಕೋಟಿ
ಕೋಟಿ ವಿಶ್ವಗಳು ಈ ತಾಳಗತಿಗೆ ಅನುಸಾರವಾಗಿ ಹುಟ್ಟಿವೆ ಹಾಗು ಲೀನವಾಗಿವೆ.
ಈ ನಾಲ್ಕು ಸಾಲುಗಳಲ್ಲಿ
ಬರುವ ‘ಸ್ವರಮೇಳ,
ಹೊತ್ತಿಗೆ,
ಮಣಿಮಾಲೆ ಹಾಗು ತಾಳಗತಿ’
ಎನ್ನುವ ಪದಗಳನ್ನು ಗಮನಿಸಿರಿ.
ಇವು ಸಂಗೀತ, ಸಾಹಿತ್ಯ ಹಾಗು ನೃತ್ಯಗಳನ್ನು ಸೂಚಿಸುತ್ತವೆ. ಇವೆಲ್ಲಕ್ಕೂ
ದೇವಿಯೇ ಅಧಿಷ್ಠಾತ್ರಿ ಎನ್ನುವುದು ಸಹಜ ಹಾಗು ಸ್ಪಷ್ಟ.
ಮೂರನೆಯ ನುಡಿ:
ಕೀಟಕೀಟದಲಿ ಮಾಟ ಮಾಡಿ
ಹಲಚೆಲುವು ತೂರಿದಾಕೆ
ಪಶುವಿನಿದಿರು ಮರಿದೂಡಿ
ಮೋಡಿಯಲಿ ಒಲವ ಹೀರಿದಾಕೆ
ಹಾವಭಾವದಲಿ ಭೋಗ ಯೋಗದಲಿ
ನಲಿವ ತೋರಿದಾಕೆ
ಸಕಲ ವಿಕಲಗಳ ಕಲೆಯ ಜಾಲದಲಿ
ಬಲವ ಮೀರಿದಾಕೆ
ಜಡಸೃಷ್ಟಿಯ ನಿರ್ಮಾಣವನ್ನು
ಹೇಳಿದ ಬಳಿಕ, ಅಂಬಿಕಾತನಯದತ್ತರು ಸಚೇತನ ಸೃಷ್ಟಿಯ ನಿರ್ಮಾಣವನ್ನು ವರ್ಣಿಸುತ್ತಾರೆ. ಕಲ್ಪನೆಯ ಪಾರವನ್ನು ದಾಟಿದಂತಹ ಬ್ರಹ್ಮಾಂಡಗಳನ್ನು ನಿರ್ಮಿಸಿದ ದೇವಿಯು ಸೂಕ್ಷ್ಮಾತಿಸೂಕ್ಷ್ಮವಾದ
ಜೀವಿಗಳನ್ನೂ ಸೃಷ್ಟಿಸಿರುವಳು.ಮೊದಲ ಸಾಲಿನಲ್ಲಿ ಸೂಕ್ಷ್ಮ ಕೀಟಗಳನ್ನು ಹೇಳಿದ ಕವಿ, ಎರಡನೆಯ ಸಾಲಿನಲ್ಲಿ, ಅದಕ್ಕೂ ಹೆಚ್ಚು ಉತ್ಕ್ರಾಂತವಾದ, ಹೆಚ್ಚು ದೊಡ್ಡದಾದ ಸಸ್ತನ ಪ್ರಾಣಿಗಳ ಬಗೆಗೆ ಹೇಳುತ್ತಾರೆ. ಮೂರನೆಯ ಸಾಲಿನಲ್ಲಿ, ಹೆಚ್ಚಿನ ಪ್ರಜ್ಞೆಯ, ಯೋಗವನ್ನು ಅರಿತ ಮಾನವನ ಬಗೆಗೆ ಹೇಳಿದರೆ, ಕೊನೆಯ ಸಾಲಿನಲ್ಲಿ ‘ಪರಮ ಪುರುಷ’ನ ಬಗೆಗೆ ಹೇಳುತ್ತಾರೆ.
ಕೀಟಕೀಟದಲಿ ಮಾಟ ಮಾಡಿ
ಹಲಚೆಲುವು ತೂರಿದಾಕೆ:
ದೇವಿಗೆ ಎಷ್ಟು ವಿಧದಲ್ಲಿ
ಸೃಷ್ಟಿಸಿದರೂ ತೃಪ್ತಿ ಇಲ್ಲ. ಈ ಅನೇಕ ರೂಪಗಳು ಅವಳಿಗೆ ಆಟಿಕೆಗಳೂ ಹೌದು. ಆದುದರಿಂದಲೇ ಅವಳು ಈ ಅನೇಕ
ಆಟಿಕೆಗಳಲ್ಲಿ ಚೆಲುವನ್ನು ತುಂಬಿ ತೂರಿದ್ದಾಳೆ. ‘ಮಾಟ ಮಾಡಿ’ ಎನ್ನುವ ಪದವನ್ನು ಗಮನಿಸಿ. ‘ಮಾಡು’ ಎನ್ನುವ ಧಾತುವಿನಿಂದಲೇ ‘ಮಾಟ’ ಎನ್ನುವ ನಾಮಪದ ಬಂದಿದೆ. ಮಾಟ ಪದಕ್ಕೆ ‘ಚೆಲುವಾದ’ ಎನ್ನುವ ಅರ್ಥವಿರುವಂತೆಯೇ ‘ಜಾದೂ’ ಎನ್ನುವ ಅರ್ಥವೂ ಇದೆ. ಈ ಜಾದೂ ಕ್ರಿಯೆಯಲ್ಲಿಯೇ
ಅವಳಿಗೆ ಒಂದು ಸೊಗವಿದೆ.
(‘ತಿರೆಯನ್ನು ತಿರುಗುವೊಲು, ತಿರುಗುವದು ನಿಲ್ಲುವೊಲು
ಮಾಡಬಲ್ಲ ಅವಗೆ,
ಯಾವುದಿದೆ ಬಿಗಿ? ಎಲ್ಲ ಆಟ,
ಮಾಟ,
ನಗಿ!’
-----------------ಬೇಂದ್ರೆ)
ಪಶುವಿನಿದಿರು ಮರಿದೂಡಿ
ಮೋಡಿಯಲಿ ಒಲವ ಹೀರಿದಾಕೆ :
ಈ ಸಚೇತನ ಸಂಸಾರ ನಡೆಯುವುದು
ಹೇಗೆ? ‘ಮಾಯಾಬಂಧನ’ದಿಂದ ಮಾತ್ರ ಇದು ಸಾಧ್ಯ. ಗೋವು ತನ್ನ ಮರಿಗೆ ಹಾಲೂಡಿಸುವುದು ಈ ಮಾಯಾಬಂಧನದಿಂದಲೇ.
ಅದನ್ನೇ ಅಂಬಿಕಾತನಯದತ್ತರು ‘ಮೋಡಿಯಲಿ’ ಎಂದು ಹೇಳುತ್ತಾರೆ. ಗೋವು ಮತ್ತು ಕರು ಇವುಗಳ ನಡುವಿನ ಬಂಧವು ಆ ದೇವಿಗೆ
ತನ್ನ ಸೃಷ್ಟಿಯೊಡನೆ ಇರುವ ಬಂಧವೇ ಆಗಿದೆ. ಜೀವಿ ಜೀವಿಗಳ ನಡುವಿನ ಒಲವನ್ನು ಅನುಭವಿಸುವವಳು ಅವಳೇ.
(ತ್ವಮೇವ ಸ್ವಾತ್ಮಾನಂ ಪರಿಣಮಿಯಿತುಂ ವಿಶ್ವವಪುಶಾ
ಚಿದಾನಂದಾಕಾರಂ ಶಿವಯುವತಿ
ಭಾವೇನ ಬಿಭ್ರಷೇ
--ಸೌಂದರ್ಯಲಹರೀ)
ಹಾವಭಾವದಲಿ ಭೋಗ ಯೋಗದಲಿ
ನಲಿವ ತೋರಿದಾಕೆ:
ಒಲವು ಹಾಗು ನಲಿವು ಇವು ಪ್ರಪಂಚದ ಮುಖ್ಯ ಸೂತ್ರಗಳಾಗಿವೆ. ಜೀವಿ ಜೀವಿಯಲ್ಲಿ
ಪರಸ್ಪರ ಒಲವು ಮೂಡಿದಾಗಲೇ ಪ್ರಪಂಚವು ಮುನ್ನಡೆಯುವುದು. ನಲಿವೇ ಈ ಚಲನೆಯ ಅಂತಿಮ ಫಲಿತವಾಗಿದೆ. ಈ
ನಲಿವನ್ನು ಪಡೆಯಲು ದೇವಿಯು ಅನೇಕ ಹಾವಭಾವಗಳನ್ನು ಸೃಷ್ಟಿಸುತ್ತಾಳೆ, ಭೋಗವನ್ನು ಸೃಷ್ಟಿಸುತ್ತಾಳೆ.
ಆದರೆ ಇವು ಮಿಥ್ಯಾಪ್ರಪಂಚಕ್ಕೆ ಸೇರಿದ ವಿಷಯಗಳಾಗಿವೆ. ನಿಜವಾದ ನಲಿವು ‘ಯೋಗ’ದಲ್ಲಿ ಅಂದರೆ ಜೀವ ಹಾಗು
ಪರಮಾತ್ಮನ ಸಂಯೋಗದಲ್ಲಿ ಮಾತ್ರ ಸಿಗಬಹುದು. ಆ ನಲಿವನ್ನು ಜೀವಿಗಳಿಗೆ ಅನುಗ್ರಹಿಸುವವಳೂ ಈ ದೇವಿಯೇ.
ಸಕಲ ವಿಕಲಗಳ ಕಲೆಯ ಜಾಲದಲಿ
ಬಲವ ಮೀರಿದಾಕೆ :
ಕೇವಲಬ್ರಹ್ಮನು ನಿರ್ಗುಣನು. ಆತನಲ್ಲಿ ಗುಣಗಳನ್ನು ಪ್ರೇರಿಸಿ, ಪ್ರಪಂಚದ ಬಲೆಯಲ್ಲಿ, ಸಂಸಾರಜಾಲದಲ್ಲಿ ಬಂಧಿಸುವವಳೇ ದೇವಿ. ಆದುದರಿಂದ
ದೇವಿಯು ಸಗುಣಳು. ದೇವಿಯ ವಿವಿಧ ಗುಣಾಂಶಗಳಿಗೆ ‘ಕಲೆ’ ಎಂದು ಕರೆಯಬಹುದು. ಆದುದರಿಂದ ಅವಳು ‘ಸಕಲಾ’.
ನಿರ್ಗುಣ ಬ್ರಹ್ಮನು ವಿಕಲನು ಅಥವಾ ಕಲಾತೀತನು. ಈ
ಸಗುಣಶೀಲೆಯ ಹಾಗು ನಿರ್ಗುಣಬ್ರಹ್ಮನ ‘ಕಲೆ’ಯುವದರಿಂದಲೇ ಅಂದರೆ ಮಿಲನದಿಂದಲೇ ಪ್ರಪಂಚದ ಸೃಷ್ಟಿಯಾಗುವುದು.
ಇದು ದೇವಿಗೆ ಸಿದ್ಧಿಸಿದ ಕಲೆ! ಈ ಸೃಷ್ಟಿಕಾರ್ಯದಲ್ಲಿ ಶಕ್ತಿಯು ನಿರ್ಗುಣ ಬ್ರಹ್ಮನನ್ನು ಮೀರಿ ನಿಲ್ಲುತ್ತಾಳೆ.
ಬ್ರಹ್ಮಾಂಡ ಹಾಗು ಪಿಂಡಾಂಡಗಳನ್ನು
ಒಳಗೊಂಡ ಸಮಗ್ರ ವಿಶ್ವವೇ ತಾಂತ್ರಿಕರು ವರ್ಣಿಸುವ ಶ್ರೀಚಕ್ರ. ಶಿವನ ನಾಲ್ಕು ಹಾಗು ಶಕ್ತಿಯ ಐದು ತ್ರಿಕೋಣಗಳಿಂದ
ಈ ಚಕ್ರದ ನಿರ್ಮಾಣವಾಗಿದೆ. ಆದುದರಿಂದ ಶ್ರೀಚಕ್ರವು ಶಕ್ತಿಪ್ರಧಾನವಾಗಿದೆ.
(‘ಚತುರ್ಭಿಃ ಶ್ರೀಕಂಠೈಃ ಶಿವಯುವತಿಭಿ: ಪಂಚಭಿರಪಿ
ಪ್ರಭಿನ್ನಾಭಿಃ ಶಂಭೋರ್ನವಭಿರಪಿ ಮೂಲಪ್ರಕೃತಿಭಿಃ
ಚತುಶ್ಚತ್ವಾರಿಂಶತ್ ವಸುದಲಕಲಾಶ್ರಯತ್ರಿವಲಯ-
ತ್ರಿರೇಖಾಭಿಃ ಸಾರ್ಧಂ ತವ ಚರಣಕೋಣಾಃ ಪರಿಣತಾಃ
--ಸೌಂದರ್ಯಲಹರೀ)
ನಾಲ್ಕನೆಯ ನುಡಿ:
ಚತುರ್ಮುಖನ ನಾಲಗೆಯ ಹಾಸಿ
ತುಟಿದಿಂಬು ಮಾಡಿದಾಕೆ
ವತ್ಸಲಾಂಛನದ ಹೃದಯಕಮಲದಲಿ
ಮನೆಯ ಹೂಡಿದಾಕೆ
ಹರನ ಮೈಯನರೆದುಂಬಿ ಲೀಲೆಯಲಿ
ತಲೆಯನೇರಿದಾಕೆ
ಹೀಗೆ ಕುಣಿಯೆ ಆನಂದಲಹರಿ
ಈ ಜೀವ ಸೇರಿದಾಕೆ
ದೇವಿಯು ಹೇಗೆ ತ್ರಿರೂಪಿಯಾಗಿದ್ದಾಳೆ ಹಾಗು ಪ್ರಪಂಚವನ್ನು ಆ ಮೂಲಕ ಅನುಗ್ರಹಿಸುತ್ತಿದ್ದಾಳೆ
ಎನ್ನುವುದನ್ನು ಈ ನುಡಿಯು ವಿವರಿಸುತ್ತದೆ.
ಚತುರ್ಮುಖನ ನಾಲಗೆಯ ಹಾಸಿ
ತುಟಿದಿಂಬು ಮಾಡಿದಾಕೆ :
ಬ್ರಹ್ಮನು ಚತುರ್ಮುಖನು. ಈತನ ನಾಲ್ಕು ಮುಖಗಳು ನಾಲ್ಕು ವೇದಗಳನ್ನು ಸಾರುತ್ತಿವೆ.
ಈ ವೇದಪಠಣದ ಉಪಕರಣಗಳಾದ ನಾಲಿಗೆ ಹಾಗು ತುಟಿಗಳನ್ನು ದೇವಿಯು ಹಾಸಿಗೆ ಹಾಗು ತಲೆದಿಂಬು ಮಾಡಿಕೊಂಡು
ಪವಡಿಸಿದ್ದಾಳೆ. ದೇವಿಯು ಇಲ್ಲಿ ಸರಸ್ವತಿಯ ಸ್ವರೂಪದಲ್ಲಿ ಇರುವಳು. ವಿಶುದ್ಧಿಚಕ್ರವು ಕಂಠಭಾಗದಲ್ಲಿ
ಇರುತ್ತದೆ. ನಾಲಿಗೆ ಹಾಗು ತುಟಿಗಳು ಮುಖಭಾಗದಲ್ಲಿ ಇದ್ದರೂ ಸಹ, ಇದನ್ನೇ ವಿಶುದ್ಧಿಚಕ್ರ ಎಂದು ಭಾವಿಸಬಹುದು.
ವತ್ಸಲಾಂಛನದ ಹೃದಯಕಮಲದಲಿ
ಮನೆಯ ಹೂಡಿದಾಕೆ :
ವಿಷ್ಣುವು ತನ್ನ ಎದೆಯ ಮೇಲೆ ಶ್ರೀವತ್ಸವನ್ನು ಧರಿಸಿದ್ದಾನೆ. ಆದುದರಿಂದ
ಈತನು ವತ್ಸಲಾಂಛನನು. ಶಾಸ್ತ್ರಾದಿಗಳು ಹೇಳುವಂತೆ, ಲಕ್ಷ್ಮಿಯು ವಿಷ್ಣುವಿನ ಹೃದಯಕಮಲದಲ್ಲಿ ಅನವರತವೂ
ವಾಸಿಸುತ್ತಾಳೆ. ಹೃದಯಕಮಲವೆಂದರೆ ‘ಅನಾಹತ ಚಕ್ರ’ ಎನ್ನುವ ಅರ್ಥವೂ ಆಗುತ್ತದೆ.
ಹರನ ಮೈಯನರೆದುಂಬಿ ಲೀಲೆಯಲಿ
ತಲೆಯನೇರಿದಾಕೆ :
ಶಕ್ತಿದೇವಿಯು ಶಿವನ ಅರ್ಧಾಂಗಿನಿ. ಅವನ ಅರ್ಧ ಶರೀರವನ್ನು ಅವಳು ಆಕ್ರಮಿಸಿದ್ದಾಳೆ.
ಆದುದರಿಂದ ಅಂಬಿಕಾತನಯದತ್ತರು ‘ಮೈಯನರೆದುಂಬಿ (=ಮೈಯನ್ನು+ಅರೆ ತುಂಬಿ) ಎಂದು ವರ್ಣಿಸಿದ್ದಾರೆ. ಇಷ್ಟೇ
ಸಾಲದು ಎನ್ನುವಂತೆ, ಅವನ ತಲೆಯನ್ನು ಏರಿ ಕುಳಿತಿದ್ದಾಳೆ. (ಗಂಗಾದೇವಿಯು ಶಿವನ ಜಡೆಯನ್ನು ಆಶ್ರಯಿಸಿದ್ದಾಳೆ.)
ಶಿರೋಭಾಗದಲ್ಲಿ ಸಹಸ್ರದಲಪದ್ಮವಿರುತ್ತದೆ. ಅದು ಕೊನೆಯ ಸ್ಥಾನ. ಮೂಲಾಧಾರದಲ್ಲಿ
ಸುಷುಪ್ತಳಾಗಿ ಇರುವ ದೇವಿಯು ಸ್ವಾಧಿಷ್ಠಾನ, ಮಣಿಪೂರ, ಅನಾಹತ, ವಿಶುದ್ಧಿ ಹಾಗು ಆಜ್ಞಾಚಕ್ರಗಳನ್ನು
ದಾಟಿ ಸಹಸ್ರದಲಪದ್ಮದಲ್ಲಿ ಶಿವನೊಡನೆ ಒಂದಾಗುತ್ತಾಳೆ.
ಈ ರೀತಿಯಾಗಿ ಲಕ್ಷ್ಮೀ, ಸರಸ್ವತೀ ಹಾಗು ಪಾರ್ವತೀ ದೇವಿಯರು ಪರಮಾತ್ಮರೂಪರಾದ
ತ್ರಿಮೂರ್ತಿಗಳ ಜೊತೆ ಪ್ರಪಂಚವನ್ನು ಮುಂದುವರೆಸುತ್ತಿದ್ದಾರೆ. ಲಕ್ಷ್ಮಿಯು ಸಂಪತ್ತನ್ನು, ಸರಸ್ವತಿಯು
ಜ್ಞಾನವನ್ನು ಹಾಗು ಪಾರ್ವತಿಯು ಶಕ್ತಿಯನ್ನು ಅನುಗ್ರಹಿಸುತ್ತಿದ್ದಾರೆ.
ಹೀಗೆ ಕುಣಿಯೆ ಆನಂದಲಹರಿ
ಈ ಜೀವ ಸೇರಿದಾಕೆ:
ಅಂಬಿಕಾತನಯದತ್ತರು ದೇವಿಯ ಈ ಯಾನವನ್ನು ಕುಣಿತಕ್ಕೆ ಹೋಲಿಸುತ್ತಾರೆ. ಬ್ರಹ್ಮಾಂಡವೂ
ಅವಳ ನೃತ್ಯಸ್ಥಳವೇ ಆಗಿದೆ, ಪಿಂಡಾಂಡವೂ ಸಹ ಅವಳ ನೃತ್ಯಸ್ಥಳವೇ ಆಗಿದೆ. ಇದರಿಂದ ಹುಟ್ಟುವ ಆನಂದಲಹರಿಯಿಂದ
ಜೀವವು ಆನಂದಮಯವಾಗುತ್ತದೆ.
‘ಆನಂದಲಹರೀ’ ಎನ್ನುವುದು ಶಂಕರಾಚಾರ್ಯರು ವಿರಚಿಸಿದ ‘ಸೌಂದರ್ಯಲಹರೀ’
ಕೃತಿಯ ಮೊದಲ ವಿಭಾಗ. ೪೧ ಶ್ಲೋಕಗಳನ್ನು ಒಳಗೊಂಡ ಮೊದಲ ಭಾಗದಲ್ಲಿ ಪಿಂಡಾಂಡವನ್ನು ಹಾಗು ಯೋಗಸಾಧನೆಯನ್ನು
ವರ್ಣಿಸುವ ಶ್ಲೋಕಗಳಿವೆ. ಯೋಗಸಾಧಕನನ್ನು ಆನಂದದಲ್ಲಿ ಮುಳುಗಿಸುವ ಸಾಧನೆಗಳು ಇದರಲ್ಲಿ ಇರುವದರಿಂದ,
ಈ ಭಾಗವನ್ನು ‘ಆನಂದಲಹರೀ’ ಎಂದು ಕರೆದಿದ್ದಾರೆ. ಎರಡನೆಯ ಭಾಗದಲ್ಲಿರುವ ೫೯ ಶ್ಲೋಕಗಳು ಬ್ರಹ್ಮಾಂಡವನ್ನು
ಹಾಗು ದೇವೀಶರೀರವನ್ನು ವರ್ಣಿಸುತ್ತವೆ. ಈ ಎರಡೂ ಭಾಗಗಳನ್ನು ಒಟ್ಟಿಗೆ ‘ಸೌಂದರ್ಯಲಹರೀ’ ಎಂದು ಕರೆಯಲಾಗಿದೆ.
ಐದನೆಯ ನುಡಿ:
ಹಾಡಿದವನ ಕಾಪಾಡಲೆಂದು
ಕೈ ಹತ್ತು ಎತ್ತಿದಾಕೆ
ಎತ್ತ ಕಿವಿಯದಿರುವಿದರು
ಅತ್ತ ಐಮೊಗದಿ ಮುತ್ತಿದಾಕೆ
ತಮವು ಹಬ್ಬಿದತ್ತತ್ತ
ನಿನ್ನ ಸುಳಿಬೆಳಕು ಸುತ್ತಿದಾಕೆ
ಇರುಳ ಕೋಟಿ ಹೆಡೆ ಮೆಟ್ಟಿ
ಮಣಿಗಳೊಲು ಚಿಕ್ಕೆಯೊತ್ತಿದಾಕೆ
ಹಾಡಿದವನ ಕಾಪಾಡಲೆಂದು
ಕೈ ಹತ್ತು ಎತ್ತಿದಾಕೆ:
‘ಗಾಯಂತಂ ತ್ರಾಯತಿ’ ಅಂದರೆ ‘ಹಾಡುವವನನ್ನು’ (ಭಜಿಸುವವನನ್ನು) ರಕ್ಷಿಸುತ್ತಾಳೆ’ ಇದು ಗಾಯತ್ರೀ
ಪದದ ಅರ್ಥ. ಗಾಯತ್ರೀ ದೇವಿಗೆ ಐದು ಮುಖಗಳು ಹಾಗು ಹತ್ತು ಕೈಗಳು ಇವೆ. ಆ ಹತ್ತು ಕೈಗಳು ಇರುವುದು
ಭಜಕನ ರಕ್ಷಣೆಗೆ ಎಂದು ಅಂಬಿಕಾತನಯದತ್ತರು ಹೇಳುತ್ತಾರೆ.
ಎತ್ತ ಕಿವಿಯದಿರುವಿದರು
ಅತ್ತ ಐಮೊಗದಿ ಮುತ್ತಿದಾಕೆ:
ಭಕ್ತನ ಮನಸ್ಸು ಚಂಚಲವಾಗಿರುತ್ತದೆ. ಅತ್ತಿಂದಿತ್ತ, ಇತ್ತಿಂದತ್ತ ಅದು
ಹಾರಾಡುತ್ತಿರುತ್ತದೆ. ವಿಷಯಗಳ ಕಡೆಗೆ ಪಂಚೇಂದ್ರಿಯಗಳು ಆಕರ್ಷಿತವಾಗುತ್ತವೆ. ಆದರೆ ದೇವಿಯು ಭಕ್ತನ
ಮನಸ್ಸನ್ನು ಗ್ರಹಿಸಬಲ್ಲಳು. ತನ್ನ ಐದೂ ಮುಖಗಳಿಂದ ಅವಳು ಭಕ್ತನನ್ನು ನೋಡುತ್ತಲೇ ಇರುತ್ತಾಳೆ ಹಾಗು
ಅವನನ್ನು ಪ್ರೀತಿಯಿಂದ ಮುತ್ತಿಕೊಂಡು, ಸರಿ ದಾರಿಗೆ ಎಳೆದು ತರುತ್ತಾಳೆ. ಇದನ್ನು ‘ಎತ್ತ ಕಿವಿಯದಿರುವಿದರು ಅತ್ತ
ಐಮೊಗದಿ ಮುತ್ತಿದಾಕೆ’ ಎಂದು ಅಂಬಿಕಾತನಯದತ್ತರು ಹೇಳುತ್ತಾರೆ. ಪಂಚ ಇಂದ್ರಿಯಗಳನ್ನು ನಿಯಂತ್ರಿಸಲು ಪಂಚ ಮುಖಗಳೇ ಬೇಕಲ್ಲವೆ? ‘ಮುತ್ತಿದಾಕೆ’ ಎನ್ನುವದನ್ನು ‘ಮುತ್ತು ಕೊಡುವಾಕೆ’ ಎಂದೂ ಅರ್ಥೈಸಬಹುದು. ದೇವಿಗೆ ಭಕ್ತನಲ್ಲಿ ಇರುವ ವಾತ್ಸಲ್ಯವನ್ನು ಇದು ಸೂಚಿಸುತ್ತದೆ.
ತಮವು ಹಬ್ಬಿದತ್ತತ್ತ
ನಿನ್ನ ಸುಳಿಬೆಳಕು ಸುತ್ತಿದಾಕೆ :
ಗಾಯತ್ರೀದೇವಿಯು ಜ್ಞಾನದ ಅಧಿಷ್ಠಾತ್ರಿ ದೇವಿ. ‘ಧಿಯೋ ಯೋ ನಃ ಪ್ರಚೋದಯಾತ್’
ಎಂದು ಬೇಡಿಕೊಳ್ಳುವುದು ಗಾಯತ್ರೀದೇವಿಗೆ ಮಾತ್ರ. ಭಕ್ತನು ತಮಸ್ಸಿನಲ್ಲಿ ಮುಳುಗಿದಾಗ ಅವನನ್ನು ಎಚ್ಚರಿಸುವವಳು
ಇವಳು. ಈ ತಮಸ್ಸು ವಾಸ್ತವದಲ್ಲಿ ಒಳಗಿನ ಅಂಧಕಾರವಾಗಿದೆ. ಆದುದರಿಂದಲೇ ‘ನಮ್ಮ ಅರಿವಿನ ಶಕ್ತಿಯನ್ನು
ಪ್ರಚೋದಿಸು (ಧಿಯೋ ಯೋ ನಃ ಪ್ರಚೋದಯಾತ್’ ಎಂದು ಇವಳಲ್ಲಿ ಬೇಡಿಕೊಳ್ಳುವದಾಗಿದೆ.
ಸುಳಿಗಾಳಿ ಎನ್ನುವುದನ್ನು ನಾವು ಕೇಳಿದ್ದೇವೆ. ಸುಳಿಗಾಳಿಯು ನಮ್ಮನ್ನು
ಎಲ್ಲೆಡೆಯಿಂದಲೂ ಮೆಲ್ಲಗೆ ಸುತ್ತಿಕೊಳ್ಳುತ್ತದೆ ಹಾಗು ಹಿತಾನುಭವವನ್ನು ಕೊಡುತ್ತದೆ. ದೇವಿಯ ಬೆಳಕೂ
ಸಹ ಸುಳಿಗಾಳಿಯಂತೆ ನಮ್ಮನ್ನು ಎಲ್ಲೆಡೆಯಿಂದಲೂ ಆವರಿಸಿಕೊಂಡು ಸುಖವನ್ನು ನೀಡುತ್ತದೆ. ಈ ಸುಖವು ಜ್ಞಾನದ
ಸುಖ.
ಇರುಳ ಕೋಟಿ ಹೆಡೆ ಮೆಟ್ಟಿ
ಮಣಿಗಳೊಲು ಚಿಕ್ಕೆಯೊತ್ತಿದಾಕೆ :
ಭಕ್ತನ ಮನಸ್ಸು ಎಂತಹದೇ ಗಾಢಾಂಧಕಾರದಲ್ಲಿದ್ದರೂ ಸಹ ಅದು ದೇವೀಶಕ್ತಿಗೆ
ನಗಣ್ಯ. ಏಕೆಂದರೆ ಇವಳು ಇರುಳನ್ನು ತನ್ನ ಕೋಟಿ ಹೆಡೆಗಳಿಂದ ಮೆಟ್ಟುವವಳು. ಈ ಕೋಟಿ ಹೆಡೆಗಳಲ್ಲಿ ಇರುವ
ಮಣಿರತ್ನಗಳು ಯಾವವೆಂದರೆ ಬಾನಿನಲ್ಲಿರುವ ಚಿಕ್ಕೆಗಳು! ಬ್ರಹ್ಮಾಂಡದಲ್ಲಿರುವ ಅಂಧಕಾರವನ್ನೇ ಚಿಕ್ಕೆಗಳ
ಬೆಳಕಿನ ಮೂಲಕ ನಾಶ ಮಾಡುವ ಶಕ್ತಿ ಈ ದೇವಿಗಿದೆ ಎಂದು
ಅಂಬಿಕಾತನಯದತ್ತರು ಹೇಳುತ್ತಾರೆ.(ಪಿಂಡಾಂಡದಲ್ಲಿರುವ ದೇವಿಯನ್ನು ಸರ್ಪರೂಪದ ಕುಂಡಲಿನಿಗೆ ಹೋಲಿಸುತ್ತಾರೆ ಎನ್ನುವುದನ್ನು ಗಮನಿಸಬೇಕು.)
ಅಥವಾ ಅಂಧಕಾರವು ಪ್ರಬಲವಾದದ್ದು. ಇದಕ್ಕೆ ಕೋಟಿ ಹೆಡೆಗಳಿವೆ. ಆ ಎಲ್ಲ ಹೆಡೆಗಳನ್ನು
ದೇವಿ ಮೆಟ್ಟಿ ನಿಲ್ಲುತ್ತಾಳೆ ಎಂದೂ ಅರ್ಥೈಸಬಹುದು.
(ಈ ಸಂದರ್ಭದಲ್ಲಿ ‘ತಮಂಧ ಘನ, ಜ್ಯೋತಿ ಕಿರಿದೆನ್ನಬಹುದೆ? ’ ಎನ್ನುವ
ಬಸವಣ್ಣನವರ ವಚನವೊಂದು ನೆನಪಿಗೆ ಬಾರದೆ ಇರದು)
ಆರನೆಯ ನುಡಿ :
ಮುತ್ತು ಹವಳ ಬಂಗಾರ ನೀಲಮಣಿ
ಸ್ಫಟಿಕ ಛಾಯೆಯಾಕೆ
ಕಣ್ಣ ನಡುವೆ ಒಳಗಣ್ಣ
ತೆರೆಯುವಾ ದಿವ್ಯಮಾಯೆಯಾಕೆ
ಬೆಳೆವ ಚಂದ್ರಕಳೆ ಮುಕುಟದವಳೆ
ತಂತನದ ಬಣ್ಣದಾಕೆ
ವರದ ಅಭಯ ಕರವಿರಲು ತಾಯಿ
ಬಾ ಬೇರೆ ಕರೆಯಬೇಕೆ?
ಆರನೆಯ ನುಡಿಯಲ್ಲಿ ಅಂಬಿಕಾತನಯದತ್ತರು ಗಾಯತ್ರೀಸ್ವರೂಪವನ್ನು ನೆನೆಯುತ್ತಾರೆ.
ಇದು ಶಾಸ್ತ್ರಗಳಲ್ಲಿ ಹೇಳಲಾದ ಗಾಯತ್ರೀ ಸ್ವರೂಪ.
( ಮುಕ್ತಾ ವಿದ್ರುಮ ಹೇಮ ನೀಲ ಧವಲಚ್ಛಾಯೈರ್ಮುಖೈಸ್ತ್ರೀಕ್ಷಣೈಃ
ಯುಕ್ತಾಮಿಂದು ನಿಬದ್ಧರತ್ನಮುಕುಟಾಂ ತತ್ವಾರ್ಥವರ್ಣಾತ್ಮಿಕಾಮ್
ಗಾಯತ್ರೀಂ ವರದಾಭಯಾಂಕುಶಕಶೈಃ ಶುಭ್ರೈರ್ಕಪಾಲಂ ಗುಣಮ್
ಶಂಖಂ ಚಕ್ರಮಥಾರವಿಂದ ಯುಗಲಾಂ ಹಸ್ತೈರ್ವಹಂತೀಂ ಭಜೇ).
ಗಾಯತ್ರೀದೇವಿಗೆ ಇರುವ ಐದು ಮುಖಗಳು ಐದು ವರ್ಣಗಳಿಂದಾಗಿವೆ: ಮುತ್ತು,
ಹವಳ, ಬಂಗಾರ, ನೀಲ ಹಾಗು ಸ್ಫಟಿಕ. ಇವಳ ರತ್ನಮುಕುಟದಲ್ಲಿ ಶುಕ್ಲಪಕ್ಷದ ಚಂದ್ರ ಶೋಭಿಸುತ್ತಿದ್ದಾನೆ.
ಮೂಲಶ್ಲೋಕದಲ್ಲಿ, ತತ್ವಗಳ ಅರ್ಥವೇ ತನ್ನ ವರ್ಣಗಳಾಗಿ ಇರುವಂಥವಳು ಎನ್ನುವುದನ್ನು ಅಂಬಿಕಾತನಯದತ್ತರು,
‘ತಂತನದ ಬಣ್ಣದಾಕೆ’ ಎಂದು ಹೇಳಿದ್ದಾರೆ. ಗಾಯತ್ರೀದೇವಿಯ ಬಲಗೈಯು ಅಭಯಹಸ್ತವಾಗಿದೆ ಹಾಗು ಎಡಗೈ ವರಗಳನ್ನು
ನೀಡುವ ವರದ ಹಸ್ತವಾಗಿದೆ.
‘ಗಾಯತ್ರೀ ದೇವಿ, ನೀನು ನಮ್ಮ ತಾಯಿ; ನಿನಗೆ ನಾವು ಬಾರಮ್ಮ’ ಎಂದು ಕರೆಯುವ
ಅವಶ್ಯಕತೆ ಇಲ್ಲ ಎಂದು ಅಂಬಿಕಾತನಯದತ್ತರು ಉದ್ಗರಿಸುತ್ತಾರೆ.
ವಿವಿಧ ಗ್ರಂಥಗಳಲ್ಲಿ ಇರುವ ದೇವಿ ಸ್ವರೂಪವನ್ನು ಅಂಬಿಕಾತನಯದತ್ತರು ತಮ್ಮ
ಹೃದಯದಲ್ಲಿ ಬೆಳಗಿಸಿಕೊಂಡಿದ್ದಾರೆ. ಅವರ ಚಿತ್ತದಲ್ಲಿ ಹುತ್ತಾಗಿ, ಹೂವಾಗಿ ಕನ್ನಡದಲ್ಲಿ ರೂಪತಾಳಿದೆ
ಈ ಸೂಕ್ತ.
(ಗಾಯತ್ರೀಸೂಕ್ತವು ‘ಕಾಮಕಸ್ತೂರಿ’ ಕವನಸಂಕಲನದಲ್ಲಿ ಅಡಕವಾಗಿದೆ.)
(ಅಂಬಿಕಾತನಯದತ್ತರು ೧೮೯೬ ಜನೇವರಿ ೩೧ರಂದು
ಜನಿಸಿದರು. ತನ್ನಿಮಿತ್ತ ಈ ಲೇಖನ.)