Thursday, January 21, 2016

ಮಾಯಾನಗರಿಯ (ಸ್ಮಾರ್ಟ ಸಿಟಿಯ)ಕನಸುಗಳು ಹಾಗು ಸಮಸ್ಯೆಗಳುಕನಸುಗಳು:
ಸ್ಮಾರ್ಟ ಸಿಟಿ ಎನ್ನುವುದು ಅನೇಕ ಭಾರತೀಯ ನಾಗರಿಕರಿಗೆ ಒಂದು ಹಗಲುಕನಸಿನ ಮಾಯಾನಗರಿಯಾಗಿದೆ. ಕನ್ನಡದ ಖ್ಯಾತ ಕವಿ ಗೋಪಾಲಕೃಷ್ಣ ಅಡಿಗರು ಹಿಮಗಿರಿಯ ಕಂದರಎನ್ನುವ ತಮ್ಮ ಕವನವೊಂದರಲ್ಲಿ ಹೇಳಿದಂತೆ:
ಕಾಲನಿಟ್ಟಲ್ಲೆಲ್ಲ ಕೀಲುಗುದುರೆ ಸವಾರಿ
ಕೈಚಾಚಿದಲ್ಲೆಲ್ಲ ಸ್ವಿಚ್ಚು ಸ್ವಿಚ್ಚು
ಎಲ್ಲಿ ತಿರುವಿದರಲ್ಲಿ
ಅಮೃತ ಸೂಸುವ ನಲ್ಲಿ...

ನಮ್ಮ ನಾಗರಿಕರೂ ಸಹ, ಬೆರಳುಗಳ ತುದಿಯಲ್ಲಿಯೆ ಎಲ್ಲ ನಾಗರಿಕ ಸೌಲಭ್ಯಗಳೂ ದೊರೆಯುವ ಕನಸು ಕಾಣುತ್ತಿದ್ದಾರೆ. ನೀವು ನಿಮ್ಮ ಸ್ಮಾರ್ಟಫೋನಿನ ಒಂದು  ಬಟನ್ ಒತ್ತಿದರೆ ಸಾಕು, ನಿಮ್ಮ ಮನೆಯ ಎದುರಿಗೆ ಟ್ಯಾಕ್ಸಿ  ಹಾಜರ್; ಮತ್ತೊಂದು ಬಟನ್ ಒತ್ತಿದರೆ, ಮನೆಯಲ್ಲಿಯೇ ಕುಳಿತು ಸಿನೆಮಾ ಟಿಕೆಟ್ ಕಾಯ್ದಿರಿಸಬಹುದು, ಉಪಾಹಾರಗೃಹಗಳಿಂದ ತಿಂಡಿಗಳನ್ನು ತರಸಬಹುದು. ಅರ್ಥಾತ್ ನಿಮ್ಮ ಸ್ಮಾರ್ಟಫೋನ್ ಎನ್ನುವ ಕೈಗೊಂಬೆಯು ಅಲ್ಲಾಉದ್ದೀನನ ಮಾಯಾದೀಪದ ಹಾಗೆ ನಿಮಗೆ ಎಲ್ಲ ಸೌಕರ್ಯಗಳನ್ನು ತಂದುಕೊಡುವುದು. ಸ್ಮಾರ್ಟ ಸಿಟಿಯ ಈ ತಾಂತ್ರಿಕ ಸೌಕರ್ಯಗಳು ಸ್ಮಾರ್ಟ ನಾಗರಿಕರ ಕಣ್ಣೆದುರಿಗೆ ಮಾಯಾಜಾಲವನ್ನೇ ರಚಿಸಿವೆ!

ಇಂತಹ ವೈಯಕ್ತಿಕ ಸೇವಾಸೌಕರ್ಯಗಳ ಜೊತೆಜೊತೆಗೆ, ಸಾರ್ವಜನಿಕ ಸೌಲಭ್ಯಗಳು ಅಂದರೆ  ಸ್ಮಾರ್ಟ ಸಿಟಿಯ ಮೂಲ ಸೌಲಭ್ಯಗಳಾದ ವಿಶಾಲವಾದ ಉತ್ತಮ ರಸ್ತೆಗಳು, ಹೊತ್ತು ಹೊತ್ತಿಗೆ ಪ್ರಯಾಣಿಕರಿಗೆ ಅನುಕೂಲವಾಗುವಂತಹ ಸಾರಿಗೆ ಸೌಲಭ್ಯ, ಬೇಕಾದಾಗ ಬೇಕಾದಷ್ಟು ನೀರಿನ ಪೂರೈಕೆ, ಸ್ವಚ್ಛವಾದ ಪರಿಸರ, ಅಲ್ಲಲ್ಲಿ ಹಸಿರು ಉಪವನಗಳು  ಇವೆಲ್ಲ ಸ್ಮಾರ್ಟ ಸಿಟಿಗಾಗಿ ಹಂಬಲಿಸುವ ನಾಗರಿಕರ ಒಳಗಣ್ಣಿನ ಚಕ್ಷುಪಟಲದ ಮೇಲೆ  ಕುಣಿದಾಡುತ್ತಿವೆ. ಇದಲ್ಲದೆ, ಎಲ್ಲರ ಕೈಯಲ್ಲೂ ಸ್ಮಾರ್ಟಫೋನ್, ಎಲ್ಲೆಲ್ಲೂ ವೈ-ಫೈ ಸೌಕರ್ಯ ಇವೂ ಸಹ ಸ್ಮಾರ್ಟ ಸಿಟಿಯ ವಿಶೇಷ ಲಕ್ಷಣಗಳಾಗಿ ನಮ್ಮ ಕನಸಿಗ ನಾಗರಿಕರನ್ನು ಆಕರ್ಷಿಸುತ್ತಿವೆ.  ವಿದೇಶಗಳಲ್ಲಿ ಲಭ್ಯವಿರುವ ಇಪ್ಪತ್ತೊಂದನೆಯ ಶತಮಾನದ ಈ ಜೀವನಶೈಲಿ ಭಾರತೀಯರಿಗೆ ಏಕೆ ಲಭ್ಯವಾಗಬಾರದು? ನಾವಷ್ಟೇ ಏಕೆ ಇನ್ನೂ ಹದಿನೇಳನೆಯ ಶತಮಾನದಲ್ಲಿಯೇ ಬದುಕಬೇಕು?
ಬಹುಶಃ, ಈ ವಿಚಾರದಿಂದಲೇ, ನಮ್ಮ ಪ್ರಧಾನ ಮಂತ್ರಿಯವರು, ಸ್ಮಾರ್ಟ ಸಿಟಿಗಾಗಿ ಯೋಜನೆಗಳನ್ನು ರೂಪಿಸುತ್ತಿರಬಹುದು. ಖಂಡಿತವಾಗಿಯೂ ಇದು ಒಪ್ಪತಕ್ಕ ಮಾತೇ. ಆದರೆ, ನಮ್ಮ ನಗರಗಳಲ್ಲಿ ಹಾಗು ನಮ್ಮ ನಾಗರಿಕತೆಯಲ್ಲಿ ಈ ಬದಲಾವಣೆಗಳನ್ನು ತರುವುದು ಸಾಧ್ಯವೆ, ಈ ನಿಟ್ಟಿನಲ್ಲಿ ನಮಗಿರುವ ಸಮಸ್ಯೆಗಳೇನು ಎನ್ನುವುದರ ಕಡೆಗೆ ನಾವು ಗಮನ ಕೊಡುವುದು ಅಪೇಕ್ಷಣೀಯವಾಗಿದೆ.

ಸಮಸ್ಯೆಗಳು:
ಸ್ಮಾರ್ಟ ಸಿಟಿಯ ನಿರ್ಮಾಣದ ಸಮಸ್ಯೆಗಳು ಎರಡು ವಿಧವಾಗಿವೆ: (೧) ಸಾಮಾಜಿಕ ಹಾಗು (೨) ಭೌಗೋಲಿಕ
(ಅ) ಸಾಮಾಜಿಕ ಸಮಸ್ಯೆ:
ಮೇಲೆ ಹೇಳಿದ ಎಲ್ಲ ಸೌಕರ್ಯಗಳನ್ನು ಒದಗಿಸಿ ಒಂದು ಭಾರತೀಯ ನಗರಿಯನ್ನು ಸ್ಮಾರ್ಟ ಸಿಟಿಯನ್ನಾಗಿ ಮಾಡಲು
ಸಾಧ್ಯವೆ?    ಯಾಕೆ ಸಾಧ್ಯವಿಲ್ಲ? ಬಂಡವಾಳದ ಚಿಂತೆಯೆ? ವಿದೇಶಗಳಿಂದ ಸಾಲ ತಂದರಾಯಿತು, ನಮ್ಮ ನಗರಗಳನ್ನು ಸ್ಮಾರ್ಟ ಮಾಡಬಹುದು’, ಎನ್ನುವದು ಈ ಪ್ರಶ್ನೆಗೆ ದೊರಕುವ ಸುಲಭ ಉತ್ತರವಾಗಿರಬಹುದು.  ಹೌದು, ಎಲ್ಲಿಯದೋ ಬಂಡವಾಳದಿಂದ ನಾವು ಮೇಲೆ ಹೇಳಿದ ಎಲ್ಲ ಮೂಲಭೂತ ಸೌಲಭ್ಯಗಳನ್ನು, ಸೌಕರ್ಯಗಳನ್ನು ಒದಗಿಸಬಹುದು. ಆದರೂ ಸಹ, ಈ ಸೌಲಭ್ಯವು ಅಲ್ಪಕಾಲೀನವಾದದ್ದು. ಏಕೆಂದರೆ ಈ ಸೌಲಭ್ಯಗಳನ್ನು ನೋಡುನೋಡುತ್ತಿರುವಂತೆಯೇ ತೊಡೆದು ಹಾಕುವ, ತೊಳೆದು ಹಾಕುವ ಅನೇಕ ಸಮಸ್ಯೆಗಳು ಸ್ಮಾರ್ಟಸಿಟಿಯ ಗರ್ಭದಲ್ಲಿಯೇ ಅಡಗಿವೆ.

ಇದರ ಕಾರಣಗಳು ಹೀಗಿವೆ:
(೧) ಸ್ಮಾರ್ಟ ಸಿಟಿಯ ಎಲ್ಲ ತಾಂತ್ರಿಕ ಸೌಕರ್ಯಗಳು ದೊರಕುವುದು ಸ್ಮಾರ್ಟ ಸಿಟಿಯ ಮಧ್ಯಮ ಹಾಗು ಮೇಲ್ವರ್ಗದವರಿಗೆ ಮಾತ್ರ. ಸ್ಮಾರ್ಟ ಸಿಟಿಯ ಕೆಳವರ್ಗದವರಿಗೆ, ಮುಖ್ಯವಾಗಿ ಕೊಳೆಗೇರಿಗಳಲ್ಲಿ ವಾಸಿಸುವವರಿಗೆ ಕೊಳಚೆಯಲ್ಲಿಯೇ ಬದುಕು ಕಟ್ಟಿಕೊಳ್ಳುವವರಿಗೆ ಈ ತಾಂತ್ರಿಕ ಸೌಕರ್ಯಗಳು ಲಭ್ಯವಾಗಬಹುದೆ?
ಏಕೆಂದರೆ, ಅಪಾರ ಬಂಡವಾಳ ಹಾಕಿದ ಹಾಗು ದುಬಾರಿ ನಿರ್ವಹಣೆಯು ಅನಿವಾರ್ಯವಾಗಿರುವ, ಸ್ಮಾರ್ಟ ಸೌಲಭ್ಯಗಳನ್ನು ದೊರಕಿಸಿಕೊಳ್ಳುವ ನಾಗರಿಕನು, ಈ ಸೌಕರ್ಯಗಳಿಗಾಗಿ ಹೆಚ್ಚಿಗೆ ದುಡ್ಡು ತೆತ್ತಬೇಕಾಗುತ್ತದೆ. ಮೇಲ್ವರ್ಗದ ಜನಸಮುದಾಯವು ಈ ಹೊರೆಯನ್ನು ಹೇಗಾದರೂ ಹೊತ್ತೀತು. ಮಧ್ಯಮ ಹಾಗು ಕೆಳವರ್ಗದವರಿಗೆ ಹೆಚ್ಚಿನ ಹೊರೆಯನ್ನು ಹೊರುವುದು ಸಾಧ್ಯವಾದೀತೆ? ಇಲ್ಲವಾದರೆ, ಇವರಿಗಾಗಿ ಸರಕಾರವು ಸವಲತ್ತಿನ ದರಗಳಲ್ಲಿ ಸೌಕರ್ಯಗಳನ್ನು ಕೊಡಲು ಸಿದ್ಧವಿದೆಯೆ? ಇನ್ನೂ ಒಂದು ಮೂಲಭೂತ ಪ್ರಶ್ನೆಯನ್ನು ಇಲ್ಲಿ ಕೇಳುವುದು ತಪ್ಪಾಗಲಾರದು. ಸ್ಮಾರ್ಟ ಸಿಟಿಯ ಮೂಲಸೌಲಭ್ಯಗಳ ನಿರ್ಮಾಣ ಹಾಗು ನಿರ್ವಹಣೆಗಾಗಿ ಅಪಾರ ವೆಚ್ಚವಾಗುವುದಷ್ಟೆ? ಈ ಮೊತ್ತವನ್ನು ಸ್ಮಾರ್ಟ ಸಿಟಿಯ ನಿವಾಸಿಗಳೇ ಹೊರಬೇಕೆಂದರೆ, ಅದು ದುಸ್ಸಾಧ್ಯವಾದ ಮಾತು. ಅಂತಹ ಸಮಯದಲ್ಲಿ ಸರಕಾರವು ಪ್ರತ್ಯಕ್ಷ ಹಾಗು ಅಪ್ರತ್ಯಕ್ಷ್ಯ ತೆರಿಗೆಗಳನ್ನು ಹೆಚ್ಚಿಸುವ ಮೂಲಕ ಸ್ಮಾರ್ಟ ಸಿಟಿಗಳ ಹೆಚ್ಚುವರಿ ವೆಚ್ಚವನ್ನು ನೀಗಿಸಲು ಪ್ರಯತ್ನಿಸುವುದು ಸಹಜವಾಗಿದೆ.  ಈ ಪ್ರತ್ಯಕ್ಷ ಹಾಗು ಅಪ್ರತ್ಯಕ್ಷ ತೆರಿಗೆಗಳು ಸ್ಮಾರ್ಟ ಸಿಟಿಯ ನಿವಾಸಿಗಳಲ್ಲದವರ ಮೇಲೂ ಸಹ, ಅಂದರೆ ಇತರ ನಿರ್ಭಾಗ್ಯ ಜನರ ಮೇಲೂ ಸಹ ಬೀಳುವುವು. ಸ್ಮಾರ್ಟ ಸಿಟಿಯ ನಿವಾಸಿಯ ಸೌಕರ್ಯಗಳಿಗಾಗಿ, ಕಗ್ಗ ಕೊಂಪೆ ಬಡ ಬೋರೇಗೌಡನು ಹೆಚ್ಚಿಗೆ ತೆರಿಗೆಯನ್ನು ಏತಕ್ಕೆ ಕೊಡಬೇಕು ಎನ್ನುವುದು ಧರ್ಮಸೂಕ್ಷ್ಮದ ಪ್ರಶ್ನೆಯಾಗಿದೆ. ಹಾಗಾದರೆ, ಸ್ಮಾರ್ಟ ಸಿಟಿಯ ನಿವಾಸಿಗಳಿಗೆ ಮಾತ್ರ ಸ್ಮಾರ್ಟ ತೆರಿಗೆ’ಯನ್ನು ಹಾಕಬಹುದಲ್ಲ! ಆದರೆ ಈ ಹೆಚ್ಚುವರಿ ತೆರಿಗೆಯನ್ನು ಕೊಡಲು ಸಾಮಾನ್ಯರಿಗೆ ಸಾಧ್ಯವಾದೀತೆ?

ಎರಡನೆಯದಾಗಿ, ಸ್ಮಾರ್ಟ ಸಿಟಿಗಳಲ್ಲಿ ಇರುವಂತಹ ಸೌಕರ್ಯಗಳನ್ನು ಬಳಸಲು ಅಲ್ಲಿಯ ನಿವಾಸಿಗಳಿಗೆ ಕನಿಷ್ಠ ಪ್ರಮಾಣದ ತಾಂತ್ರಿಕ ಕೌಶಲ್ಯವಾದರೂ ಅವಶ್ಯವಿದೆ.  ನಮ್ಮ ಬಸ್ ನಿಲ್ದಾಣಗಳಲ್ಲಿ ಹಾಗು ರೇಲವೇ ನಿಲ್ದಾಣಗಳಲ್ಲಿ ಸ್ಮಾರ್ಟ ವ್ಯವಸ್ಥೆಯನ್ನು ಅಳವಡಿಸಿದರೆ, ಕುಶಲ ನಾಗರಿಕನು ಮಾತ್ರ ಈ ಸ್ಮಾರ್ಟ ವ್ಯವಸ್ಥೆಗೆ ಸುಲಭವಾಗಿ ಹೊಂದಿಕೊಳ್ಳಬಹುದು. ಈ ತಾಂತ್ರಿಕ ಕೌಶಲ್ಯವು ಸ್ಮಾರ್ಟ ಸಿಟಿಗೆ ವಿವಿಧ ಕಾರಣಗಳಿಗಾಗಿ ಆಗಮಿಸುವ ನಮ್ಮ ಹಳ್ಳಿಗರಿಗೆ ಸಾಧ್ಯವಾದೀತೆ? ವಾಸ್ತವ ದೃಷ್ಟಿಯಿಂದ ನೋಡಿದರೆ, ಸ್ಮಾರ್ಟ ವ್ಯವಸ್ಥೆಯನ್ನು ಒದಗಿಸುವುದು ನಮ್ಮ ಸಾರಿಗೆ ಅಧಿಕಾರಿಗಳಿಗೂ ಸಾಧ್ಯವಾಗಲಿಕ್ಕಿಲ್ಲ. ಏಕೆಂದರೆ ಸ್ಮಾರ್ಟ ಬಸ್ ಅಥವಾ ರೇಲವೆಯಲ್ಲಿ, ಒಂದು ಮಿತಿಗೆ ಒಳಪಟ್ಟ ಪ್ರಯಾಣಿಕರು ಮಾತ್ರ ಪ್ರಯಾಣಿಸಲು ಸಾಧ್ಯ. ಹೆಚ್ಚುವರಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವುದು ಸ್ಮಾರ್ಟ ಸಾರಿಗೆಯಲ್ಲಿ ಸಾಧ್ಯವಾಗಲಾರದು. ಸದ್ಯದ ಪರಿಸ್ಥಿತಿಯಲ್ಲಿ ಬಸ್ಸು ಅಥವಾ ರೇಲವೇಗಳಲ್ಲಿ ದನಗಳಂತೆ ನುಗ್ಗುವ ಜನಸಾಮಾನ್ಯರನ್ನು ಸ್ಮಾರ್ಟ ವ್ಯವಸ್ಥೆಗೆ ಒಗ್ಗಿಸುವುದು ಸಾಧ್ಯವಾಗಲಿಕ್ಕಿಲ್ಲ. ಈ ಜನಸಮೂಹಕ್ಕೆ ಇಂತಹ ವ್ಯವಸ್ಥೆಯಲ್ಲಿ ಬಳಸಬೇಕಾಗುವ ಸ್ಮಾರ್ಟ ಕೌಶಲ್ಯಗಳನ್ನು ಕಲಿಸುವುದೂ ಕಷ್ಟಕರವೇ! ಹಾಗೆಂದು ಸ್ಮಾರ್ಟ ಸಿಟಿಗೆ ಈ ಆಗಮಿಕ ಜನಸಮೂಹದ ಪ್ರವೇಶವನ್ನು ನಿರ್ಬಂಧಿಸುವುದು ಅಸಾಧ್ಯ. ಏಕೆಂದರೆ ದಿನನಿತ್ಯದ ಅನೇಕ ವ್ಯವಹಾರಗಳಿಗಾಗಿ - (ಇದು ಆಡಳಿತವಿರಬಹುದು, ವ್ಯವಹಾರವಿರಬಹುದು, ಶೈಕ್ಷಣಿಕವಿರಬಹುದು, ಆರೋಗ್ಯೋಪಚಾರವಿರಬಹುದು) ಹಳ್ಳಿಗರು ಪಟ್ಟಣಕ್ಕೆ ಬರಲೇ ಬೇಕಲ್ಲವೆ?

ಇನ್ನು, ಸ್ಮಾರ್ಟ ಸಿಟಿಯ ಪೌರಸೌಲಭ್ಯಗಳನ್ನಷ್ಟು ಗಮನಿಸೋಣ. ಈ ಸೌಲಭ್ಯಗಳು  ಕೇವಲ ಉತ್ತಮ ರಸ್ತೆ, ನೀರು ಪೂರೈಕೆ, ಸಾರಿಗೆ, ತ್ಯಾಜ್ಯನಿರ್ವಹಣೆಗೆ ಮಾತ್ರ ಸೀಮಿತವಾದರೆ ಸಾಲದು, ಉತ್ತಮ ವಸತಿ ಸೌಲಭ್ಯವು ಎಲ್ಲರಿಗೂ (ಅಂದರೆ ಕೊಳಚೆ ನಿವಾಸಿಗಳಿಗೂ ಸಹ) ಲಭ್ಯವಾಗಬೇಕು. ಈ ಕೊಳಚೆನಿವಾಸಿಗಳ ದೈನಂದಿನ ಹೋರೆಯು ಸ್ಮಾರ್ಟ ಸಿಟಿಗೆ ಸಮಸ್ಯೆಗಳನ್ನೇ ತಂದೊಡ್ಡಬಹುದು. ಉದಾಹರಣೆಗೆ ಎಮ್ಮೆಗಳನ್ನು ಸಾಕಿಕೊಂಡು, ಹಾಲು ಮಾರುವ ಸಮುದಾಯಗಳು ಅನೇಕ ನಗರಗಳಲ್ಲಿವೆ. ಮೊದಮೊದಲು ಊರ ಹೊರಗೆ ಇರುವ ಈ ಸಮುದಾಯಗಳು, ಊರು ವಿಸ್ತರಿಸಿ, ಸಿಟಿಯಾದಂತೆ, ಸಿಟಿಯ ನಡುವೇ ಬಂದು ಬಿಟ್ಟಿವೆ. ತಮ್ಮ ಎಮ್ಮೆಗಳನ್ನು ಸಿಟಿಯ ಹೊರಗಿರುವ ಹುಲ್ಲುಗಾವಲುಗಳಿಗೆ (-ಅವು ಉಳಿದಿದ್ದರೆ-), ಗೌಳಿಗರು ಕರೆದೊಯ್ಯುತ್ತಾರೆ.  ಈ ಎಮ್ಮೆಗಳ ದೊಡ್ಡ ಸಮೂಹಗಳು ರಸ್ತೆಗಳಲ್ಲಿ ಹೋಗುತ್ತಿರುವಾಗ, ಸಾರಿಗೆ ವ್ಯವಸ್ಥೆಗೆ ಹಾಗು ವಾಹನಗಳಿಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಿದಂತಾಗುತ್ತದೆ. ಇದನ್ನು ತಪ್ಪಿಸಲು, ಈ ಎಮ್ಮೆಗಳು ಹುಲ್ಲುಗಾವಲುಗಳಿಗೆ ಹೋಗಲೆಂದೇ ಒಂದು ಮಹಿಷಮಾರ್ಗವನ್ನು ನಿರ್ಮಿಸಬೇಕಾಗುತ್ತದೆ. ನಿಮಗೆ ಸ್ಮಾರ್ಟ ಸಿಟಿ ಬೇಕೆಂದರೆ, ಒಂದೋ ಎಮ್ಮೆಗಳನ್ನು ಹೊರಹಾಕಿರಿ, ಇಲ್ಲವೆ ಅವುಗಳಿಗಾಗಿ ಮಹಿಷಮಾರ್ಗಗಳನ್ನು (buffalo corridor !) ನಿರ್ಮಿಸಿರಿ!

ಈ ಎಮ್ಮೆಗಳ ಪಾಲಕರು ಸದ್ಯಕ್ಕಂತೂ ತಮ್ಮ ವಸತಿಸ್ಥಾನಗಳಲ್ಲಿಯೇ ಅವುಗಳನ್ನು ತೊಳೆಯುವುದು, ತಿಕ್ಕುವುದು, ಸಗಣಿ ತೆಗೆಯುವುದು ಮೊದಲಾದ ಕೆಲಸಗಳನ್ನು ಮಾಡುತ್ತಿರುವುದನ್ನು ನೋಡಬಹುದು. ಇದು ಅವರ ವಸತಿಸ್ಥಾನಗಳನ್ನು ಕೊಳಚೆಗುಂಡಿಗಳನ್ನಾಗಿ ಮಾಡಿದೆ. ಸ್ಮಾರ್ಟ ಸಿಟಿಯಲ್ಲಿ ಇಂತಹ ಒಂದು ಕೊಳಚೆದ್ವೀಪವು ನಿರ್ಮಾಣವಾಗುವುದನ್ನು ಸಹಿಸಬಹುದೆ? ಇವುಗಳ ನಿರ್ವಹಣೆಗಾಗಿ ವಿಶೇಷ ಶೆಡ್ಡುಗಳನ್ನು ನಿರ್ಮಿಸಿ ಕೊಡಬೇಕಾಗುತ್ತದೆ. ಅಥವಾ ಇಂತಹ ಗೌಳಿ ಮೊದಲಾದ ಸಮುದಾಯಕ್ಕಾಗಿ ಸಿಟಿಯ ಹೊರಗೆ ಒಂದು ಉಪನಗರವನ್ನು ನಿರ್ಮಿಸಿ ಕೊಡಬೇಕಾದೀತು! ಕೆಳವರ್ಗದ ಜನರ ಇಂತಹ ವಿಶೇಷ ಸಮಸ್ಯೆಗಳಿಗೆ ಪರಿಹಾರ ಹುಡುಕಿ ಕೊಡುವುದು, ಸ್ಮಾರ್ಟ ಸಿಟಿಯ ಮೊಟ್ಟ ಮೊದಲ ಕಾರ್ಯವಾಗಿದೆ.

(೨) ಸ್ಮಾರ್ಟಸಿಟಿಗೆ ಪೂರೈಕೆಯಾಗುವ ಎಲ್ಲ ವಸ್ತುಗಳು ಸುತ್ತಲಿನ ಊರುಗಳಿಂದ, ಹಳ್ಳಿಗಳಿಂದ ಬರಬೇಕು. ಮುಖ್ಯತಃ  ಇದು ಕಾಯಿಪಲ್ಲೆ ಅಥವಾ ಕೃಷಿ ಉತ್ಪನ್ನವಾಗಿರಬಹುದು. ಈ ಸಾಮಗ್ರಿಗಳನ್ನು ಹೊತ್ತುಕೊಂಡು ಮಾರಾಟ ಮಾಡಲು ಬರುವ ಅಲ್ಪ ಗಳಿಕೆಯ ದಿನಗೂಲಿ ಜನರಿಗೆ ಸ್ಮಾರ್ಟ ಸಿಟಿಯಲ್ಲಿ ತಿನ್ನುಣ್ಣುವದಕ್ಕಾಗಿ, ನೈಸರ್ಗಿಕ ಬಾಧೆಗಳ ಪರಿಹಾರಕ್ಕಾಗಿ ಸ್ಮಾರ್ಟ ವ್ಯವಸ್ಥೆ  ಏನಾದರೂ ಇದೆಯೆ? ಅಲ್ಲದೆ, ಸ್ಮಾರ್ಟ ಸಿಟಿಯಲ್ಲಿ ಮನೆಗೆಲಸಕ್ಕಾಗಿ, ಚಿಕ್ಕಪುಟ್ಟ ಕೂಲಿಗಾಗಿ ಹೊರಗಿನಿಂದ ಬರುವ ಅಸಂಖ್ಯ ಕೂಲಿಯಾಳುಗಳಿಗೆ ಈ ಮಾಯಾನಗರಿಯಲ್ಲಿ ಯಾವ ಸೌಕರ್ಯಗಳಿವೆ? ಇದಲ್ಲದೆ, ಸ್ಮಾರ್ಟ ಸಿಟಿಯಲ್ಲಿ ಉದ್ಯೋಗ ಅಥವಾ ನೌಕರಿ ಮಾಡಲು ಹತ್ತಿರದ ಊರುಗಳಿಂದ ಪ್ರತಿ ದಿನವೂ ಪ್ರಯಾಣಿಸುವ ಜನರೂ ಇರುತ್ತಾರೆ. (ಈಗೀಗ ನೂರು ಕಿಲೋಮೀಟರುಗಳ ದೂರವೂ ಸಹ ಹತ್ತಿರವೇ ಆಗಿದೆ!) ಈ ತೇಲುವ ಜನಸಮೂಹಕ್ಕೆ ಅಥವಾ ಆಗಮಿಕ ಜನಸಮೂಹಕ್ಕೆ  ಸ್ಮಾರ್ಟ ಸಿಟಿಯಲ್ಲಿ ಏನು ಸೌಕರ್ಯ ಇದೆ? ಇಂತಹ ಜನಸಂಖ್ಯೆಯು ಸ್ಮಾರ್ಟಸಿಟಿಯ ಮೂಲಜನಸಂಖ್ಯೆಯ ಶೇಕಡಾ ಹತ್ತರಷ್ಟಾದರೂ ಇದ್ದೀತು. ಸದ್ಯಕ್ಕೆ ಈ ಆಗಮಿಕ ಜನಸಮೂಹಕ್ಕೆ ನಮ್ಮ ನಗರಗಳಲ್ಲಿ ತಿನ್ನುಣ್ಣುವ ವ್ಯವಸ್ಥೆಯನ್ನು ಸ್ವಸಹಾಯ ದರ್ಶಿನಿಹೊಟೆಲ್ಲುಗಳು ಅಥವಾ ರಸ್ತೆಯ ಬದಿಯಲ್ಲಿ ಮಿರ್ಚಿ, ಭಜಿ, ರೊಟ್ಟಿ, ಚಟ್ನಿ ಮೊದಲಾದ ತಿನಿಸುಗಳನ್ನು ತಯಾರಿಸಿ ಮಾರಾಟ ಮಾಡುವ ಅತಿ ಚಿಕ್ಕ ಮಾರಾಟಗಾರರು ಮಾಡುತ್ತಿದ್ದಾರೆ. ಕೆಳವರ್ಗದ ಈ ಪೂರೈಕೆದಾರರು ತಮ್ಮ ಗಿರಾಕಿಗಳಿಗೆ ಪೂರೈಸುವ ತಿನಿಸುಗಳು, ಎಲ್ಲರಿಗೂ ಗೊತ್ತೇ ಇರುವಂತೆ, ಅತ್ಯಂತ ಅಶುದ್ಧವಾದ ತಿನಿಸುಗಳು. ದಿನದಿನವೂ ಇವನ್ನೇ ತಿಂದು, ಅಷ್ಟೇ ಹೊಲಸು ನೀರನ್ನು ಕುಡಿದು, ಇನ್ನೂ ಬದುಕಿರುವ ನಮ್ಮ ಆಗಂತುಕ ಪ್ರಜೆಗಳ ಬಗೆಗೆ ನಾವು ಅಭಿಮಾನ ಪಟ್ಟುಕೊಳ್ಳಬೇಕು!

ಹೊಟ್ಟೆ ಹಸಿವೆಯೊಂದೇ ಈ ಆಗಂತುಕರ ಸಮಸ್ಯೆಯಲ್ಲ. ಇಡೀ ದಿನವನ್ನು ಇಲ್ಲಿಯೇ ಕಳೆಯಬೇಕಾದ ಈ ಆಗಂತುಕರಿಗೆ ಜಲಬಾಧೆಯ ಸಮಸ್ಯೆ ಇರುವುದಿಲ್ಲವೆ? ಭಾರತೀಯ ಗಂಡಸರೇನೊ ಮರಗಳ ಮರೆಯಲ್ಲಿಯೊ, ಸಂದಿಗೊಂದಿಗಳಲ್ಲಿಯೋ ಜಲಬಾಧೆಯನ್ನು ತೀರಿಸಿಕೊಂಡಾರು, ಹೆಣ್ಣುಮಕ್ಕಳು ಏನು ಮಾಡಬೇಕು? ಈ ಆಗಂತುಕ ಜನಸಂಖ್ಯೆಯನ್ನು ಒಂದು ಲಕ್ಷ ಎಂದು ಇಟ್ಟುಕೊಂಡರೆ, ಹಾಗು ಓರ್ವ ವ್ಯಕ್ತಿಯ ಅರ್ಧದೈನಿಕ ಮೂತ್ರವಿಸರ್ಜನೆ ಒಂದು ಲಿಟರ ಮಾತ್ರ ಎಂದಿಟ್ಟಕೊಂಡರೂ ಸಹ, ಒಂದು ಲಕ್ಷ ಲಿಟರ ಮೂತ್ರವು ಅಂದರೆ ಸುಮಾರು ಒಂಬತ್ತು ಪೆಟ್ರೋಲ ಟ್ಯಾಂಕಗಳಲ್ಲಿ ಸಾಗಿಸಬಹುದಾದಷ್ಟು ಮೂತ್ರವು ಸ್ಮಾರ್ಟ ಸಿಟಿಗೆ ಪ್ರತಿದಿನವೂ ಹೆಚ್ಚುವರಿಯಾಗಿ ಸೇರಿಕೊಳ್ಳುತ್ತದೆ!  ಈ ಆಗಂತುಕರು ತಿಂದು ಚೆಲ್ಲುವ ತಿನಿಸುಗಳು ಹಾಗು ತ್ಯಾಜ್ಯ ವಸ್ತುಗಳ ಪರಿಮಾಣ ಎಷ್ಟಾಗಬಹುದು ಎನ್ನುವುದನ್ನು ಗಣಿತಜ್ಞರೇ ಲೆಕ್ಕ ಹಾಕಿಕೊಂಡು ನೋಡಬೇಕು!

ಇನ್ನು ಬರಗಾಲದಂತಹ ವಿಶೇಷ ಸಂದರ್ಭಗಳಲ್ಲಿ ಗುಳೆ ಹೊರಟು ಬರುವ ಜನಸಮುದಾಯಕ್ಕಂತೂ, ಸ್ಮಾರ್ಟ ಸಿಟಿಗಳಲ್ಲಿ ಯಾವ ಸೌಲಭ್ಯಗಳನ್ನು ನೀಡಲು ಸಾಧ್ಯವಾದೀತು? ಅಥವಾ ಅವರನ್ನು ನಿರ್ದಾಕ್ಷಿಣ್ಯವಾಗಿ ಹೊರ ದಬ್ಬಬೇಕೆ?

(೩) ಸ್ಮಾರ್ಟ ಸಿಟಿಯನ್ನು ರೂಪಿಸಲು ಪೌರಸೌಲಭ್ಯಗಳು ಮಾತ್ರವಲ್ಲ, ಪೌರನಿಯಂತ್ರಣಗಳು ಸಹ ಅವಶ್ಯವಾಗಿವೆ. ಉದಾಹರಣೆಗೆ ಸ್ಮಾರ್ಟ ಸಿಟಿಯ ಮಾಲಿನ್ಯನಿಯಂತ್ರಣವನ್ನು ಪರಿಶೀಲಿಸೋಣ:
ವೈಯಕ್ತಿಕ ಯಾಂತ್ರಿಕ ವಾಹನಗಳು ಹೆಚ್ಚಾದಂತೆಲ್ಲ, ವಾಯುಮಾಲಿನ್ಯವು ಹೆಚ್ಚಾಗುತ್ತಿದೆ. ದಿಲ್ಲಿಯಂತಹ ನಗರಗಳಲ್ಲಿ, ಮಾಲಿನ್ಯನಿಯಂತ್ರಣಕ್ಕಾಗಿ ಸರಕಾರವು ಹಾಗು ಜನತೆಯು ಒದ್ದಾಡುತ್ತಿರುವುದನ್ನು ನೋಡಬಹುದು. ಇದರಂತೆ ಹಸಿ ಕಸ, ಒಣಕಸಗಳ ವಿಂಗಡಣೆ ಸಹ ಪ್ರತಿಯೋರ್ವ ನಾಗರಿಕನ ಆದ್ಯ ಕರ್ತವ್ಯವಾಗಿದೆ. ಮುಖ್ಯವಾಗಿ ನಮ್ಮ ನಾಗರಿಕರು ತಮ್ಮ ಸಾಮುದಾಯಿಕ  ನಾಗರಿಕ ಕರ್ತವ್ಯಗಳಲ್ಲಿ ಸ್ಮಾರ್ಟ ಆದರೆ ಮಾತ್ರ, ಇವರ ನಗರವೂ ಸಹ ಸ್ಮಾರ್ಟ ಆದೀತು.

ಆದರೆ ನಮ್ಮ ನಾಗರಿಕರು ವೈಯಕ್ತಿಕ ಆರೋಗ್ಯಪ್ರಜ್ಞೆಯನ್ನು ಮಾತ್ರ ಹೊಂದಿದ್ದಾರೆ,  ಸಾಮುದಾಯಕ ಪ್ರಜ್ಞೆಯನ್ನಲ್ಲ.
ದಿನವೂ ಬೆಳಿಗ್ಗೆ ಅಥವಾ ಸಾಯಂಕಾಲದಲ್ಲಿ, ಸಾಕುನಾಯಿಗೊಂದು ಕೊರಳಪಟ್ಟಿಯನ್ನು ಕಟ್ಟಿಕೊಂಡು, ‘ವಾಕಿಂಗ್ಮಾಡುವ ಗಂಡು, ಹೆಣ್ಣುಗಳು ಇತ್ತೀಚೆಗೆ ಎಲ್ಲೆಲ್ಲೂ ಕಂಡು ಬರುತ್ತಿದ್ದಾರೆ. ಈ ಆಧುನಿಕ, ಆರೋಗ್ಯಪ್ರಜ್ಞೆಯ  ನವನಾಗರಿಕರು ತಮ್ಮ ನಾಯಿಗಳು ಮಲಮೂತ್ರ ವಿಸರ್ಜಿಸಲು ಎಲ್ಲಿ ಕೂಡುವವೊ, ಅಲ್ಲಿಯೇ ಕೂಡಲು ಬಿಡುವುದನ್ನು ನೋಡಬಹುದು. ಒಬ್ಬ ಅತ್ಯಾಧುನಿಕ ನವನಾಗರಿಕನಂತೂ ಕೂಡುರಸ್ತೆಯ ಮಧ್ಯದಲ್ಲಿಯೇ, ಬೆಳ್ಳಂಬೆಳಗ್ಗೆ ತನ್ನ ನಾಯಿಯನ್ನು ಕೂಡಿಸಿರುವುದನ್ನು ನೋಡಿ, ನಾನು ತುಂಬಾ ಅಸಹ್ಯಪಟ್ಟುಕೊಂಡಿದ್ದೆ. ಈತನಿಗೆ ಎಷ್ಟು ಸ್ಮಾರ್ಟ ಸೌಲಭ್ಯಗಳನ್ನು ಕೊಟ್ಟರೂ ಏನು ಪ್ರಯೋಜನವಾದೀತು? ಇದರಂತೆಯೇ, ತಂಬಾಕು ಹಾಕಿಕೊಂಡು ಎಲ್ಲಿ ಬೇಕಾದರಲ್ಲಿ ಉಗುಳುವ ನಾಗರಿಕರನ್ನು ಎಲ್ಲೆಡೆಯೂ ಕಾಣಬಹುದು. ತಮ್ಮ ಎಂಜಲು ಬೇರೆಯವರಿಗೆ ಸಿಡಿದೀತು ಎನ್ನುವ ಕಾಳಜಿ ಇವರಿಗೆ ಇರುವುದಿಲ್ಲ. ಇಂಥವರನ್ನು ನಿಯಂತ್ರಿಸಲು ಸ್ಮಾರ್ಟ ಸಿಟಿಗೆ ಆರೋಗ್ಯ ಪೋಲೀಸ್ಎನ್ನುವ ಹೊಸ ಪಡೆಯೇ ಬೇಕಾದೀತು. ದಿನದ ಇಪ್ಪತ್ನಾಲ್ಕು ತಾಸುಗಳಲ್ಲಿ, ಈ ಪಡೆಯು ನಗರದಲ್ಲೆಲ್ಲ ತಿರುಗುತ್ತ, ಇಂಥ ಖಬರಗೇಡಿ, ಅನಾಗರಿಕ ಜನತೆಗೆ ದಂಡ ಹಾಕುತ್ತ ತಿರುಗಿದರೆ ಮಾತ್ರ, ಒಂದು ನಗರವು ನಿಜವಾಗಿಯೂ ಸ್ಮಾರ್ಟ ಆದೀತು. ಇಲ್ಲವಾದರೆ, ಸ್ಮಾರ್ಟ ಸಿಟಿಯ ಮೇಲೆ ಮಾಡುವ ಖರ್ಚೆಲ್ಲ ವ್ಯರ್ಥವೇ ಸೈ.

ನಾಗರಿಕ ಪ್ರಜ್ಞೆ ಇಲ್ಲದವರ ಮತ್ತೊಂದು ಉದಾಹರಣೆ ಎಂದರೆ, ಸರತಿಯ ಸಾಲಿನಲ್ಲಿ ನಿಲ್ಲಲು ನಿರಾಕರಿಸುವ ಗುಂಡಾ ವರ್ತನೆಯ ಜನರು. ಬಸ್ ನಿಲ್ದಾಣಗಳಲ್ಲಿಯೇ ಆಗಲಿ, ಬ್ಯಾಂಕುಗಳಲ್ಲಿಯೇ ಆಗಲಿ, ಅಂಗಡಿಗಳಲ್ಲಿಯೇ ಆಗಲಿ, ಈ ಸ್ಮಾರ್ಟ ಜನ ಸರತಿಯ ಪಾಳಿಯನ್ನು ನಾಚಿಕೆ ಇಲ್ಲದೆ ಉಲ್ಲಂಘಿಸಿ, ‘ಗೂಂಡಾ ಪ್ರವೃತ್ತಿಯನ್ನು ಮೆರೆಯುತ್ತಾರೆ. ದ್ವಿಚಕ್ರವಾಹನ ಸವಾರರಂತೂ ಎರ್ರಾಬಿರ್ರಿಯಾಗಿ ವಾಹನ ಚಲಾಯಿಸುತ್ತಾರೆ. ತಮಗೆ ಯಾವ ಕಾನೂನೂ ಅನ್ವಯಿಸುವದಿಲ್ಲ ಎನ್ನುವುದು ಇವರ ಸಿದ್ಧಾಂತವಾಗಿದೆ. ಇಂಥವರು ಸ್ಮಾರ್ಟ ಸಿಟಿಯ ನಾಗರಿಕತೆಗೆ ಯೋಗ್ಯರೆ? ಇಂಥವರ ನಿರ್ವಹಣೆಯನ್ನು ಸ್ಮಾರ್ಟ ಸಿಟಿಯಲ್ಲಿ ಮಾಡುವುದು ಹೇಗೆ?

ನಾಗರಿಕ ಪ್ರಜ್ಞೆಯ ಅಭಾವದ ಅತಿ ಘೋರ ಉದಾಹರಣೆ ಎಂದರೆ ಮುಂಜಾವು, ಸಂಜೆ ಎನ್ನದೆ. ದಶದಿಕ್ಕುಗಳಲ್ಲಿ ಧ್ವನಿವರ್ಧಕಗಳನ್ನು ಹಚ್ಚಿಕೊಂಡು ಧಾರ್ಮಿಕ ಪ್ರಾರ್ಥನೆ ಮಾಡುವುದು; ರಸ್ತೆಗಳಲ್ಲಿ ಹಾಗು ಬೀದಿಗಳಲ್ಲಿ ಭಯಂಕರ ಸಂಗೀತ(?)ದೊಡನೆ ಮೆರವಣಿಗೆಯನ್ನು ತೆಗೆಯುತ್ತ, ಆ ರಸ್ತೆಗಳ ಅಥವಾ ಬೀದಿಗಳ ಬಳಕೆದಾರರನ್ನು ಅಪಾರ ತೊಂದರೆಗೆ ಈಡು ಮಾಡುವುದು. ಈ ಸಂವೇದನಾರಹಿತರು ಕೆಲವೊಮ್ಮೆ ಅಪರಾತ್ರಿಯಲ್ಲಿ ಮೆರವಣಿಗೆ
ಮಾಡುತ್ತ, ಸಂಗೀತವೆಂದು ಕರೆಯುವ ಗದ್ದಲದಿಂದ, ಅಕ್ಕಪಕ್ಕದ ಮನೆಯವರನ್ನು ಹಾಗು ವಿದ್ಯಾರ್ಥಿಗಳನ್ನು ನರಕಸಂಕಟಕ್ಕೆ ನೂಕುತ್ತಾರೆ. ಸ್ಮಾರ್ಟ ಸಿಟಿಯಲ್ಲಿ ಇಂತಹದು ಆಗತಕ್ಕದ್ದಲ್ಲ. ಪೌರ ಕಿರಿಕಿರಿಯು ಕಾನೂನಿನ ಮೇರೆಗೆ ಅಪರಾಧವೆನ್ನುವುದು ಇವರಿಗೆ ಗೊತ್ತಿರಲಿಕ್ಕಿಲ್ಲ. ಈ ಕಿರಿಕಿರಿಯ ಪ್ರತಿಬಂಧವನ್ನು ವೈಯಕ್ತಿಕ ಸ್ವಾತಂತ್ರ್ಯದ ಹರಣವೆಂದು ಭಾವಿಸುವವರು ಸ್ಮಾರ್ಟ ಸಿಟಿಯಲ್ಲಿ ಇರಬೇಕಾದದ್ದಿಲ್ಲ! 

 (೪) ಕೊನೆಯದಾದ ಆದರೆ ಅತ್ಯಂತ ಮಹತ್ವದ್ದಾದ ಐಟೆಮ್ ಒಂದಿದೆ. ಸ್ಮಾರ್ಟಸಿಟಿಯಲ್ಲಿ ಇರುವ ಪೌರಕಾರ್ಯಾಲಯಗಳ ಸಿಬ್ಬಂದಿಯು ಸದ್ಯಕ್ಕೆ ಅತ್ಯಂತ ಬೇಜವಾಬುದಾರಿ ನೌಕರವರ್ಗವಾಗಿದೆ. ನಗರಸಭೆಯ ಕಾರ್ಯಾಲಯವೇ ಆಗಲಿ, ತಹಸೀಲದಾರ ಕಚೇರಿಯೇ ಆಗಲಿ ಅಥವಾ ರಜಿಸ್ಟ್ರಾರ ಕಚೇರಿಯೇ ಆಗಲಿ, ಈ ಎಲ್ಲ ಕಾರ್ಯಾಲಯಗಳು ಪ್ರಜೆಗಳ ಶೋಷಣೆಯನ್ನೇ ತಮ್ಮ ಗುರಿಯಾಗಿಸಿಕೊಂಡಂತಿದೆ. ಆ ಉದ್ದೇಶಸಾಧನೆಗಾಗಿ, ಇವರು ಗ್ರಾಹಕನ ಕಡತಗಳನ್ನು ತಿರುಚುವದನ್ನೂ ನಾನು ನೋಡಿದ್ದೇನೆ. ಇದನ್ನು ತಪ್ಪಿಸಬೇಕಾದರೆ, ಈ ಕಾರ್ಯಾಲಯಗಳ ಪ್ರತಿಯೊಂದು ಕಡತವೂ ಗಣಕೀಕರಣವಾಗಬೇಕು. ಓರ್ವ ಪೌರನು, ಯಾವುದೋ ಒಂದು ಕಾರ್ಯಕ್ಕಾಗಿ, ಅರ್ಜಿಯನ್ನು ಕೊಟ್ಟ ತಕ್ಷಣವೇ, ಆ ಅರ್ಜಿಯು ಗಣಕಯಂತ್ರದಲ್ಲಿ ದಾಖಲಾಗಬೇಕು. ಆ ಅರ್ಜಿಯ ಕಾಲಬದ್ಧ ಚಲನವಲವು ಗಣಕಯಂತ್ರದಲ್ಲಿ ಲಿಖಿತವಾಗಬೇಕು.  ಅರ್ಜಿಯ ವಿಲೇವಾರಿಯಲ್ಲಿ ನಿಷ್ಕಾರಣವಾಗಿ ವಿಲಂಬವಾದರೆ, ಸಂಬಂಧಿಸಿದ ಸಿಬ್ಬಂದಿಯು ದಂಡ ನೀಡುವಂತಾಗಬೇಕು. ಇದೇ ನಿಜವಾದ ಸ್ಮಾರ್ಟ ಸಿಟಿಯ ಲಕ್ಷಣ.

 (ಆ) ಭೌಗೋಲಿಕ ಸಮಸ್ಯೆ:
ಈಗಾಗಲೇ ಇರುವ ಸಿಟಿಯನ್ನು ಸ್ಮಾರ್ಟ ಮಾಡುವುದಕ್ಕಿಂತ, ಹೊಸ ಸ್ಮಾರ್ಟ ಸಿಟಿಯನ್ನು ಕಟ್ಟುವುದು ಸುಲಭ ಎನಿಸುತ್ತದೆ. ನಮ್ಮ ಸದ್ಯದ ಮಹಾನಗರಗಳನ್ನು ನೋಡಿರಿ. ಇದು ಮುಂಬಯಿ ಅಥವಾ ಚೆನ್ನೈದಂತಹ ರಾಜಧಾನಿ ನಗರವೇ ಆಗಿರಬಹುದು ಅಥವಾ ಹುಬ್ಬಳ್ಳಿ-ಧಾರವಾಡದಂತಹ ಸಾಧಾರಣ ನಗರವೇ ಆಗಿರಬಹುದು. ಈ ಮಹಾನಗರಗಳಲ್ಲಿ ವಸತಿನಿರ್ಮಾಣಕ್ಕಾಗಿ, ಗುಡ್ಡಗಳನ್ನು ಕಡಿದು, ಕೆರೆಗಳನ್ನು ತುಂಬಿ, ನೈಸರ್ಗಿಕ ನೀರುದಾರಿಯನ್ನು ಬಂದು ಮಾಡಲಾಗಿದೆ. ವಿಶೇಷವಾಗಿ, ಧಾರವಾಡದಲ್ಲಿ ಮೊದಲು ಏಳು ಗುಡ್ಡಗಳು ಹಾಗು ಏಳು ಕೆರೆಗಳು ಇದ್ದವೆಂದು
ಹೇಳಲಾಗುತ್ತಿತ್ತು. ಈಗ ಅವೆಲ್ಲ ವಸತಿನಿರ್ಮಾಣಕ್ಕಾಗಿ ನಾಶವಾಗಿವೆ. ಇದರ ಪರಿಣಾಮವೆಂದರೆ, ಮಳೆನೀರಿಗೆ ಹರಿದು ಹೋಗಲು ನೈಸರ್ಗಿಕ ದಾರಿ ಇಲ್ಲದಂತಾಗುವುದು ಹಾಗು ಹೆಚ್ಚು ಮಳೆ ಬಿದ್ದಾಗ, ಇಡೀ ನಗರವೆಲ್ಲ ನೀರಿನಲ್ಲಿ ಮುಳುಗಿ ಹೋಗುವುದು. ಧಾರವಾಡದಲ್ಲಿ ಮುಚ್ಚಲಾದ ಮೊದಲ ಕೆರೆ ಎಂದರೆ, ಹಾಲಗೆರೆ ಎನ್ನುವ ದೊಡ್ಡ ಕೆರೆ. ಇದನ್ನು ಮುಚ್ಚಿಸಿದ ಬೃಹಸ್ಪತಿಗಳೆಂದರೆ, ಧಾರವಾಡ ಮುನಿಸಿಪಾಲಿಟಿಯವರು. ಕೆರೆ ಇದ್ದಲ್ಲಿ ಕಾಯಿಪಲ್ಲೆ ಮಾರ್ಕೆಟ್ ಮಾಡಿದ್ದರಿಂದ, ಅತ್ತ ಕೆರೆಯೂ ಹೋಯಿತು, ಇತ್ತ ಮಾರ್ಕೆಟ್ ಸಹ ಕೊಳಚೆಯಲ್ಲಿ ಮುಳುಗೇಳುವಂತಾಯಿತು!
ಆದುದರಿಂದ ಸ್ಮಾರ್ಟ ಸಿಟಿಯು ಮಳೆಗಾಲದಲ್ಲಿ ಕೊಚ್ಚಿ ಹೋಗಬಾರದು ಎನ್ನುವಂತಿದ್ದರೆ, ಗೃಹನಿರ್ಮಾಣವನ್ನು ನಿಯಂತ್ರಿಸಬೇಕು. ಹೊಸ ನಿವೇಶನಗಳ ನಿರ್ಮಾಣಕ್ಕಿಂತ ಮೊದಲು, ನೈಸರ್ಗಿಕ ನೀರುದಾರಿಗೆ ಅಡ್ಡಿಯಾದೀತೆ ಎನ್ನುವುದನ್ನು ಪರೀಕ್ಷಿಸಬೇಕು. ಸ್ಮಾರ್ಟ ಸಿಟಿಯಲ್ಲಿಯ ಎಲ್ಲ ಕೆರೆಗಳನ್ನೂ ರಕ್ಷಿಸಬೇಕು. ಯಾವ ಕೆರೆಯನ್ನೂ ವಸತಿಗಾಗಿ ಅಥವಾ ಕಟ್ಟಡನಿರ್ಮಾಣಕ್ಕಾಗಿ ಉಪಯೋಗಿಸಲು ಅವಕಾಶ ಮಾಡಕೂಡದು. ಈ ಕೆರೆಗಳ ಸುತ್ತಲೂ ಮರಗಳನ್ನು ನೆಟ್ಟು, ಸ್ಮಾರ್ಟ ನಾಗರಿಕರಿಗೆ ವಿಶ್ರಾಂತಿಗಾಗಿ ಅನುಕೂಲ ಮಾಡಿಕೊಡಬೇಕು.

ಒಂದು ನಗರದ ಸ್ಮಾರ್ಟ ನಿರ್ವಹಣೆ ಆಗಬೇಕಾದರೆ, ಅದರ ವಿಸ್ತಾರಕ್ಕೆ ಒಂದು ಪರಿಮಿತಿ ಬೇಕು. ಅಳತೆ ಮೀರಿ ಬೆಳೆದ ನಗರಗಳು ಬಕಾಸುರನಂತಾಗುತ್ತವೆ.  ಅವುಗಳ  ನಿರ್ವಹಣೆ ಕಷ್ಟಕರವಾಗುತ್ತದೆ ಅಥವಾ ಅಸಾಧ್ಯವೇ ಆಗುತ್ತದೆ. ಬೆಂಗಳೂರು ನಗರದ ನೀರು ಪೂರೈಕೆ ಹಾಗು ತ್ಯಾಜ್ಯ ನಿರ್ವಹಣೆಗಾಗಿ ಸರಕಾರವು ಪಡುತ್ತಿರುವ ಪಾಡನ್ನು ನೋಡಿದರೆ ಇದು ಸ್ಪಷ್ಟವಾದೀತು. ಆದುದರಿಂದ ಸ್ಮಾರ್ಟ ಸಿಟಿಯೇ ಆಗಲಿ, ಸಾದಾ ಸಿಟಿಯೇ ಆಗಲಿ, ಒಂದು ನಿರ್ವಹಣಾಸಾಧ್ಯ ಮಿತಿಗೆ ಒಳಪಡಬೇಕು. ಒಂದು ನಗರದ ವಿಸ್ತೀರ್ಣವು ೨೦೦ ಚದುರ ಕಿಲೋಮೀಟರುಗಳಿಗಿಂತ ಜಾಸ್ತಿಯಾಗಿರಕೂಡದು. ಈ ನಗರದ ಸುತ್ತಲೂ ಇಪ್ಪತ್ತು ಕಿಲೊಮೀಟರುಗಳವರೆಗೆ ಕೃಷಿಭೂಮಿ ಮಾತ್ರ ಇರತಕ್ಕದ್ದು. ನಗರದ ಜನಸಾಂದ್ರತೆ ಪ್ರತಿ ಚದುರ ಕಿಲೋಮೀಟರಿಗೆ ೨೫೦೦ಕ್ಕಿಂತ ಜಾಸ್ತಿ ಆಗಕೂಡದು. ನಗರದಲ್ಲಿ ಸ್ಥಾಪಿಸಬಹುದಾದ, ಉದ್ದಿಮೆಗಳಿಗೆ ಹಾಗು ಶೈಕ್ಷಣಿಕ ಸಂಸ್ಥೆಗಳಿಗೆ ಒಂದು ಮಿತಿ ಇರಬೇಕು. ನಗರದಲ್ಲಿ ವಿವಿಧ ತರಹದ ವಾಹನಗಳ ಸಂಖ್ಯೆಗೆ ಮಿತಿ ಇರಬೇಕು. ಇದೆಲ್ಲ ಸಾಧ್ಯವಾಗಬೇಕಾದರೆ, ಮುಖ್ಯವಾಗಿ ನಮ್ಮ ಜನಸಂಖ್ಯೆಗೆ ಮಿತಿ ಬೇಕು.   ಹೀಗೆ ಮಿತಿಯನ್ನು ಹಾಕುವುದಕ್ಕೆ, ಅನೇಕ ಹಿತಾಸಕ್ತಿಗಳು (ಉದಾಹರಣೆಗೆ: ರೀಯಲ್ ಇಸ್ಟೇಟ್ ಡೆವಲಪರ್ಸ್, ರಾಜಕಾರಣಿಗಳು) ಅಡ್ಡ ಬರುವುದು ಸಹಜ. ಆದುದರಿಂದ ಯಾವ ರಾಜಕಾರಣಿಯೂ ಜನಸಂಖ್ಯೆಯ ನಿಯಂತ್ರಣದ ಬಗೆಗೆ ಮಾತನಾಡಲು ಸಿದ್ಧನಾಗಲಾರ ಹಾಗು ನಗರಗಳ ವಿಸ್ತೀರ್ಣಕ್ಕೆ ಮಿತಿ ಹಾಕಲು ಸಿದ್ಧನಿಲ್ಲ. ಹಾಗಿದ್ದಾಗ, ನಮ್ಮ ಕನಸಿನ ನಗರಿಯು ಕನಸಾಗಿಯೇ ಉಳಿಯುವುದು!  ಸ್ಮಾರ್ಟ ಸಿಟಿಯ ಈ ಸಮಸ್ಯೆಗಳನ್ನು ಪರಿಹರಿಸುವುದು ಅಸಾಧ್ಯವೇನಲ್ಲ. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕಷ್ಟೆ. ಅಲ್ಲಿಯವರೆಗೂ ಸ್ಮಾರ್ಟ ಸಿಟಿಯ ಕನಸುಗಳನ್ನು ಕಾಣೋಣ, ತಪ್ಪೇನಿಲ್ಲ!

7 comments:

ಶಾನಿ said...

ಎಷ್ಟು ಚೆನ್ನಾಗಿ ವಿಶ್ಲೇಷಿಸಿದ್ದೀರಿ ಕಾಕ! ಆದರೆ ಇದು ದಪ್ಪಚರ್ಮವನ್ನು ಹಾಯುವುದು ಹೇಗೆ?

sunaath said...

ರಾಜಕಾರಣಿಗಳ ಚರ್ಮದ ಬಗೆಗೆ ಹೇಳುತ್ತಿದ್ದೀರಲ್ಲವೆ, ಶಾನಿ?!

ಶಾನಿ said...

ಹೌದು ಕಾಕಾ...

ರಾಘವೇಂದ್ರ ಜೋಶಿ said...

ಸರ್,
ಸ್ಮಾರ್ಟ್ ಸಿಟಿಯ ಕಲ್ಪನೆಯೇನೋ ಸ್ವಾಗತಾರ್ಹ. ಇದು ಮನುಷ್ಯನ ಸಮಯ, ಶಕ್ತಿಯನ್ನು ಉಳಿಸುವದರ ಜೊತೆಗೆ ಒಂದಿಷ್ಟು ಹಿತಾನುಭವ ನೀಡುವ ಕಲ್ಪನೆಯೂ ಹೌದು. ಜೊತೆಗೆ ಆಡಳಿತದಲ್ಲಿ ವೇಗ ಮತ್ತು ಪಾರದರ್ಶಕತೆಯನ್ನು ತರುವಂಥದ್ದೂ ಹೌದು. ಆದರೆ ಸದ್ಯದ ಭಾರತೀಯ ಸಮಾಜದ ಲಕ್ಷಣಗಳು ನೀವು ಹೇಳಿದಂತೆ ಸ್ಮಾರ್ಟ್ ಸಿಟಿಗೆ ಪೂರಕವಾಗಿರುವಂತೆ ಕಾಣಿಸುತ್ತಿಲ್ಲ.

ಸ್ಮಾರ್ಟ್ ಸಿಟಿಯನ್ನು ಕಟ್ಟುವದಕ್ಕಿಂತ ಮುಂಚೆ ಜನತೆಯನ್ನು ಅದಕ್ಕೆಂದು ಸಜ್ಜುಗೊಳಿಸಬೇಕಿದೆ. ಅದರ ಮುಂದುವರೆದ ಭಾಗವೆಂದರೆ, ನಾಗರಿಕರ ಮನಸ್ಥಿತಿಯನ್ನು ಬದಲಾಯಿಸುವದು. ಆಡಳಿತವು ಇದನ್ನೆಲ್ಲ ಪ್ರೀತಿಯಿಂದಲೋ, ದಂಡದಿಂದಲೋ, ಸಮಾಧಾನದಿಂದಲೋ ಮಾಡಲೇಬೇಕಿದೆ. "ನನ್ನ ಮನೆ, ಬಿಲ್ ಕಟ್ಟುವವನು ನಾನು, ಹಗಲಾದರೇನು ರಾತ್ರಿಯಾದರೇನು-ದೀಪ ಉರಿಸಿಯೇ ಉರಿಸುತ್ತೇನೆ. ಸೌಂಡ್ ಮಾಡಿಯೇ ಮಾಡುತ್ತೇನೆ.." ಅಂತನ್ನುವ ಧಿಮಾಕಿನ ಮನಸ್ಥಿತಿಯನ್ನು ಬದಲಾಯಿಸಬೇಕಿದೆ. ಎಲ್ಲರ ಅನುಕೂಲಕ್ಕೆಂದು ವಿತರಿಸುವ ವಿದ್ಯುತ್ತನ್ನು ಅನಾವಶ್ಯಕವಾಗಿ ಪೋಲು ಮಾಡಿ, ಇನ್ಯಾವುದೋ ಹಳ್ಳಿಯ ಲೋಡ್ ಶೆಡ್ಡಿಂಗ್ ಗೆ ನಾನು ಕಾರಣವಾಗಬಾರದು ಅಂತನ್ನುವ ಮನಸ್ಥಿತಿಯನ್ನು ಬೆಳೆಸಬೇಕಿದೆ.

ಇಂಥ ಮನಸ್ಥಿತಿಗಳ ಉದಾಹರಣೆ ನೂರಾರಿವೆ. ಹೊಸದಾಗಿ ಅಚ್ಚುಕಟ್ಟಾಗಿ ನಿರ್ಮಿಸಿದ ರಸ್ತೆಯನ್ನು ಅಗೆದು, ಅಲ್ಲೊಂದು ಶಾಮಿಯಾನ ಹಾಕಿ ರಸ್ತೆ ಬಂದ್ ಮಾಡುತ್ತೇವೆ. ಕರ್ಣಪಟಲ ಒಡೆದುಹೋಗುವಂತೆ ಹಾಡು ಹಾಕಿ ರಾಜ್ಯೋತ್ಸವ ಆಚರಿಸುತ್ತೇವೆ. ಅಲಂಕಾರಕ್ಕೆಂದು ನೂರಾರು ಮೀಟರ್ ಅಂತರದಲ್ಲಿ ನೂರಾರು ಬಲ್ಬ್ ಗಳನ್ನು ಝಗಝಗ ಅನಿಸುತ್ತೇವೆ. ವಿದ್ಯುತ್ತನ್ನು ರಸ್ತೆ ಪಕ್ಕದ ಕಂಬದಿಂದಲೇ ಪಡೆಯುತ್ತೇವೆ!
ಯಾವ ಪುರುಷಾರ್ಥಕ್ಕಾಗಿ ಇದೆಲ್ಲ?

ಕನ್ನಡ ಭಾಷೆಯ ಅಭಿಮಾನ ಒಳ್ಳೆಯದು. ಆದರೆ ನನ್ನ ಪಾಲಿಗೆ ಒಬ್ಬ ಒಳ್ಳೆಯ ನಾಗರಿಕನಾಗುವದು, ಇಂಥ ಒಳ್ಳೆಯ ಕನ್ನಡಾಭಿಮಾನಿಯಾಗುವದಕ್ಕಿಂದ ಒಳ್ಳೆಯದು. ಕಾರ್ಯಕ್ರಮ ಮುಗಿದ ಮೇಲೆ ಅಗೆದ ರಸ್ತೆಯನ್ನು ಅಚ್ಚುಕಟ್ಟಾಗಿ ಮೊದಲಿನಂತೆ ನಿರ್ಮಿಸಲಾಗದಿದ್ದರೆ, ಅಂಥದೊಂದು ಸಂವೇದನೆ ನಮ್ಮಲ್ಲಿ ಹುಟ್ಟದೇ ಹೋದರೆ, ನನ್ನ ಕನ್ನಡಾಭಿಮಾನಕ್ಕೆ ಬೆಲೆ ಬರದು.

ಇನ್ನು ನೀವು ಹೇಳಿದಂತೆ, ಎಮ್ಮೆಗಳ ವಿಚಾರ ನಿಜಕ್ಕೂ ಗಂಭೀರವಾದದ್ದು. ನಾವು ಟ್ರಾಫಿಕ್ ಸಿಗ್ನಲ್ಲುಗಳನ್ನು ಬೆರಳುಗಳ ಮೂಲಕ ನಿಯಂತ್ರಿಸಬಹುದು. ಆದರೆ ಹಾಲನ್ನು ಬಟನ್ನುಗಳ ಮೂಲಕ, ತಂತ್ರಾಂಶಗಳ ಮೂಲಕ ಉತ್ಪಾದಿಸುವದು ಸಾಧ್ಯವಿಲ್ಲ ಅಂತ ಅರಿಯಬೇಕಿದೆ. ಪುಕ್ಕಟೆಯಾಗಿ ದೊರೆಯಬಲ್ಲ ಶಕ್ತಿಯನ್ನು ಪೂರ್ತಿಯಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಮೊದಲು ನಾವು ಯೋಚಿಸಬೇಕಿದೆ. ಉದಾಹರಣೆಗೆ, ಸೋಲಾರ್ ಪ್ಯಾನಲ್ಲುಗಳನ್ನು ಬಳಸುವಂತೆ ಜನರನ್ನು ಉತ್ತೇಜಿಸಬೇಕು. ಅದು ಆಗಬೇಕಾದರೆ, ಸೋಲಾರ್ ಪ್ಯಾನೆಲ್ಲುಗಳ ಟ್ಯಾಕ್ಸ್ ಫ್ರೀ (ಅಥವಾ ಆದಷ್ಟು ಕಡಿಮೆ) ಮಾಡಿ ಅದರ ತಂತ್ರಜ್ಞಾನವನ್ನು ಸುಲಭವಾಗಿ ಜನರ ಕೈಗೆ ಸಿಗುವಂತೆ ಮಾಡಬೇಕು. ಇಲ್ಲವಾದಲ್ಲಿ ಸುಖಾಸುಮ್ಮನೇ ಯಾರು ಯಾಕೆ ಮಾತು ಆಲಿಸುತ್ತಾರೆ?

ಸರ್ಕಾರ ಕೂಡ ಎಲ್ಲೆಲ್ಲಿ ಸಾಧ್ಯವಿದೆಯೋ ಅಲ್ಲಲ್ಲಿ ಸೋಲಾರ್ ಅಳವಡಿಸಬೇಕು. ಯೂರೋಪಿನ ಒಂದು ಪಾರ್ಕಿನಲ್ಲಿ ಸುಮ್ಮನೇ ಕೂತು ಆನಂದಿಸುತ್ತಿದ್ದೆ. ಸ್ವಲ್ಪ ಹೊತ್ತಿನಲ್ಲಿ ಕೂತ ಬೆಂಚ್ ನಿಂದ ಎದ್ದು ಹೊರಡುವಾಗ ನಾನು ಗಮನಿಸಿದ್ದು: ನಾನು ಕೂತಿದ್ದು ಸೋಲಾರ್ ಪ್ಯಾನಲ್ಲಿಂದ ಮಾಡಿದ ಬೆಂಚಿನ ಮೇಲೆ! ಹಾಗೊಂದು ವೇಳೆ ಯಾರಾದರೂ ವಿಶ್ರಾಂತಿ ಬಯಸಿದರೆ ಅದು ಬೆಂಚ್ ಆಗಬೇಕು, ಯಾರೂ ಇಲ್ಲವೆಂದ ಸಮಯದಲ್ಲಿ ಅದು ಸೋಲಾರ್ ಪ್ಯಾನಲ್ಲಿನಂತೆ ಬಳಕೆಯಾಗಿ ಪಕ್ಕದಲ್ಲಿದ್ದ ಲೈಟ್ ಕಂಬವನ್ನು ರಾತ್ರಿ ಉರಿಸುವಂತಿರಬೇಕು. ಇದೇ ಥರ ಅಲ್ಲಿನ ಹೈವೇಗಳಲ್ಲಿ ನಮ್ಮಲ್ಲಿ ಇರುವಂತೆಯೇ ರಸ್ತೆ ಇಕ್ಕೆಲಗಳಲ್ಲಿ ಫೆನ್ಸಿಂಗ್ ಕೂಡ ಮಾಡಿದ್ದರು. ಆದರೆ ಕಬ್ಬಿಣದ/ತಂತಿಯ ಫೆನ್ಸಿಂಗ್ ಬದಲಾಗಿ ಹೈವೇಯುದ್ದಕ್ಕೂ ಸೋಲಾರ್ ಪ್ಯಾನಲ್ ಅಳವಡಿಸಲಾಗಿತ್ತು..

ಇಲ್ಲಿ, ವಿಧಾನಸೌದದ ಟೆರೇಸ್ಸನ್ನು ಸೋಲಾರ್ ಪ್ಯಾನಲ್ಲಿಗಾಗಿ ಬಳಬೇಕೆಂದರೆ ನೂರಾರು ಟೇಬಲ್ ಸುತ್ತಬೇಕೆನ್ನುವ ಪರಿಸ್ಥಿತಿ.
ಇಂಥ ಹತ್ತಾರು ವಿಷಯಗಳಿವೆ. ಆದರೆ ಇಚ್ಛಾಶಕ್ತಿ ಬೇಕು..

(ಸಾರಿ ಸರ್, ಹೇಳುತ್ತ ಹೇಳುತ್ತ ಇಷ್ಟು ದೊಡ್ಡದಾಗುತ್ತದೆ ಅಂತ ಗೊತ್ತಿರಲಿಲ್ಲ.)
-Rj

sunaath said...

RJ,
ಸೋಲಾರ್ ಪ್ಯಾನಲ್ cum ಬೆಂಚ್ ಅಥವಾ ಬೇಲಿ ಓದಿ ಆಶ್ಚರ್ಯವಾಯಿತು. ನಿಮ್ಮ ವಿದೇಶಪ್ರವಾಸದಲ್ಲಿ ನೀವು ಕಂಡ ಇಂತಹ ವಿಶೇಷತೆಗಳ ಬಗೆಗೆ ಮಾಯಾಲಾಂದ್ರದಲ್ಲಿ ಬರೆದರೆ, ಅದು ನಮ್ಮ ಜನಗಳಿಗೆ ಉತ್ತಮ ತಿಳಿವಳಿಕೆಯನ್ನು ಕೊಟ್ಟೀತು.

Subrahmanya said...

ಕಾಕಾ,
ಸ್ಮಾರ್ಟ್ ಸಿಟಿಯ ಆಗುಹೋಗುಗಳ ಬಗ್ಗೆ ವಿಸ್ತಾರವಾಗಿ ತಿಳಿಸಿದಿರಿ. ಇನ್ನು ಸಕಾFರಿ ಕಚೇರಿಗಳಲ್ಲಿ ಶ್ರೀಸಾಮಾನ್ಯ ನೀಡುವ ಅಜಿF ಗಣಕಯಂತ್ರದಲ್ಲಿ ದಾಖಲಾಗುವ ಕಾಲ 'ಸಕಾಲ' ಯೋಜನೆಯೊಂದಿಗೆ ಜಾರಿಗೆ ಬಂದಿದೆ. ಆದರೆ, ಲಂಚ ಕೊಡದಿದ್ದರೆ ಸಕಾಲದ ಅಜಿFಯಲ್ಲೂ ಲೂಪ್ ಹೋಲ್ ಹುಡುಕಿ ಮತ್ತೊಂದು ತಿಂಗಳು ಮುಂದೂಡುವ ಅಧಿಕಾರಿಗಳಿದ್ದಾರೆ. ಇದಕ್ಕೆ ಚುನಾಯಿತ ಜನಪ್ರತಿನಿಧಿಗಳ ಕಮೀಷನ್ ಒತ್ತಡವೂ ಕಾರಣವಾಗಿರುತ್ತದೆ ಎನ್ನುವುದು ನಿಮಗೆ ತಿಳಿದಿರುವ ವಿಷಯ. ನಮ್ಮ ಆಸ್ತಿಯನ್ನು ಇ-ಖಾತೆ ಮಾಡಿಸಿಕೊಳ್ಳಲು ಕೊಡುವ ಅಜಿFಗೆ ೪೫ ದಿನ ಸಮಯವಿರುತ್ತದೆ. ಎಲ್ಲ ಮಾಹಿತಿಯೂ ಗಣಕಯಂತ್ರದಲ್ಲಿ ದಾಖಲಾಗುತ್ತದೆ. ಆದರೂ ಲಂಚ ಕೊಡದೆ ಇ-ಖಾತೆ ಪೇಪರ್ ನಮಗೆ ಸಿಗೋದಿಲ್ಲ. ಎಂಥಾ ಸೋಜಿಗ ನೋಡಿ !.

sunaath said...

ಸುಬ್ರಹ್ಮಣ್ಯರೆ,
ಸ್ಮಾರ್ಟ ಸಿಟಿಯಲ್ಲಿ ಸ್ಮಾರ್ಟ ಲಂಚಿಗರು ಹುಟ್ಟಿಕೊಳ್ಳುತ್ತಾರೆ!