ವಾಗರ್ಥಾವಿವ ಸಂಪೃಕ್ತೌ ವಾಗರ್ಥ ಪ್ರತಿಪತ್ತಯೇ
ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ
(---ಕಾಲೀದಾಸ, ‘ಕುಮಾರಸಂಭವ’ದಲ್ಲಿ)
ಬೇಂದ್ರೆಯವರನ್ನು ಪದಭಾಂಡಾರದ ಕುಬೇರ ಎಂದು ಕರೆಯಬಹುದೇನೊ. ವಿವಿಧ ಭಾಷೆಗಳ ವಿವಿಧ ಪದಗಳನ್ನು ಅವರಷ್ಟು ಬಳಸಿದವರು ಕನ್ನಡದಲ್ಲಿ
ಮತ್ತಾರೂ ಇಲ್ಲ. ಒಂದು ಪದವನ್ನು ಬಳಸುವಾಗ, ಆ ಪದದ ಹಿಂದಿನ ಹಾಗು ವರ್ತಮಾನದ ಎಲ್ಲ ಅರ್ಥಗಳು
ಯಾರಿಗೆ ಹೊಳೆಯುವವೋ ಅವನೇ ನಿಜವಾದ ಕವಿ ಎಂದು ಒಬ್ಬ ಇಂಗ್ಲಿಶ್ ವಿಮರ್ಶಕ
ಹೇಳಿದ್ದಾನೆ.
ಬೇಂದ್ರೆಯವರಂತೂ ವರಕವಿಗಳು. ತಮ್ಮ ಕಾವ್ಯದಲ್ಲಿ ರಸನಿರ್ಮಾಣಕ್ಕಾಗಿ ಹಾಗು ಕಾವ್ಯೋದ್ದೀಪನಕ್ಕಾಗಿ
ಅವರು ಅನೇಕ ವಿಧಾನಗಳನ್ನು ಸಲೀಲವಾಗಿ ಬಳಸುತ್ತಿದ್ದರು.
ಮುಖ್ಯವಾಗಿ ಶ್ಲೇಷೆಯ ಮೂಲಕ ಪದಗಳಿಗೆ
ವಿವಿಧಾರ್ಥಗಳನ್ನು ನೀಡುವ ಹಾಗು ಪದವಿನ್ಯಾಸದ ಮೂಲಕ
ಕಾವ್ಯಕ್ಕೆ ಮೆರಗು ನೀಡುವ ವಿಶಿಷ್ಟ ಪ್ರತಿಭೆ ಬೇಂದ್ರೆಯವರದು. ಅವರ ಕವನಗಳಲ್ಲಿ ಬರುವ ಶ್ಲೇಷೆಯನ್ನು
ಅರಿತುಕೊಳ್ಳಲು ಕನ್ನಡದ ಜೊತೆಗೆ ಸಂಸ್ಕೃತ ಹಾಗು ಇಂಗ್ಲಿಶ್
ಅಲ್ಲದೆ, ಕೆಲವಾರು ಭಾರತೀಯ ಭಾಷೆಗಳ ಅರಿವೂ ಅನಿವಾರ್ಯವಾಗಿದೆ. ಅವರ ಈ ಪದಪ್ರತಿಭೆಯ ಒಂದು
ಝಲಕನ್ನು ನೋಡಲು ಅವರು ಬಳಸಿದ ಎರಡು ವಿಧಾನಗಳನ್ನು ಮಾತ್ರ ಅಂದರೆ ಶ್ಲೇಷಾಲಂಕಾರ ಹಾಗು ಪದವಿನ್ಯಾಸಗಳ
ಕೆಲವು ಉದಾಹರಣೆಗಳನ್ನು ನೋಡೋಣ.
ಶ್ಲೇಷಾಲಂಕಾರದ
ಉದಾಹರಣೆಗಳು :
ಕವನ : ಹೃದಯಸಮುದ್ರ :
‘ಅದು ನಮ್ಮ ಊರು ಇದು ನಿಮ್ಮ ಊರು ತಂತಮ್ಮ ಊರೊ ಧೀರಾ
ಅದರೊಳಗೆ ನಾವು ನಮ್ಮೊಳಗೆ ತಾವು / ಅದು ಇಲ್ಲವಣ್ಣ ದೂರಾ’
ಈ ಸಾಲಿನಲ್ಲಿ ಬರುವ ನಾವು ಹಾಗು ತಾವು ಎನ್ನುವ ಪದಗಳನ್ನು ಗಮನಿಸಿರಿ. ಪರಮಾತ್ಮನ ಹೃದಯಸಮುದ್ರದೊಳಗೆ ‘ನಾವು’ (ಎಂದರೆ ಭಕ್ತರು)
ಇದ್ದೇವೆ ಹಾಗು ನಮ್ಮ ಹೃದಯದಸಮುದ್ರದಲ್ಲಿ ‘ತಾವು’ ಎಂದರೆ ಪರಮಾತ್ಮನಿದ್ದಾನೆ. ಆದುದರಿಂದ ನಮ್ಮ ಗಮ್ಯವು
ದೂರವಿಲ್ಲ ಎನ್ನುವುದು ಮೇಲ್ನೋಟದ ಅರ್ಥವಾಗಿದೆ.
‘ನಾವು’ ಎಂದರೆ ದೋಣಿ; ‘ತಾವು’ ಅಂದರೆ ಠಾವು ಅರ್ಥಾತ್ ದೋಣಿ ನಿಲ್ಲುವ
ಬಂದರು. ಹೃದಯಸಮುದ್ರದೊಳಗೆ ದೋಣಿ ಇದೆ ಹಾಗು ನಮ್ಮ ಹೃದಯದಲ್ಲಿಯೇ ದೋಣಿ ನಿಲ್ಲುವ ಬಂದರು ಇದೆ ಎನ್ನುವುದು
ಎರಡನೆಯ ಅರ್ಥ.
ಈಗ ಮತ್ತೊಂದು ಉದಾಹರಣೆ:
ಕವನ : ಅಂಬಿಕಾತನಯದತ್ತ :
‘ನಿನ್ನ ಉದರದೊಂದ ಹೂವ ಸರಸ್ವತಿಗೆ ಸಲಿಸಿದೆ
ಚುಕ್ಕೆಯಾಗಿ ನೆಲೆಸಿದೆ
ಸಾವಿರದ ಮನೆಗಳಲ್ಲಿ ನನಗೆ ಮನೆಯ ಮಾಡಿದೆ
ತಾಯಿ ಆಟ ಹೂಡಿದೆ’
‘ಉದರದೊಂದ ಹೂವ’ ಎಂದರೆ ತಾಯಿಯ ಗರ್ಭದಿಂದ ಜನ್ಮ ಪಡೆದ ಕಂದ
ಎನ್ನುವುದು ಮೇಲ್ನೋಟದ ಅರ್ಥ. ಈ ಹೂವು ತಾಯಿಯಿಂದ ಉದರಿ ಬೇರ್ಪಡೆಯಾಗುವುದಿಲ್ಲ ಎನ್ನುವುದು ಎರಡನೆಯ
ಅರ್ಥ. ಇದು ಬೇಂದ್ರೆಯವರಿಗೆ ತಮ್ಮ ತಾಯಿಯ ಜೊತೆಗೆ ಇದ್ದ ಅನ್ಯೋನ್ಯ ಸಂಬಂಧವನ್ನು ತೋರಿಸುತ್ತದೆ.
ಅದರಂತೆ ‘ಸಾವಿರದ ಮನೆಗಳಲ್ಲಿ’ ಎನ್ನುವುದಕ್ಕೆ ಸಾವಿರಾರು ಮನೆಗಳಲ್ಲಿ ಎನ್ನುವ ಅರ್ಥದ ಜೊತೆಗೆ,
‘ಸಾವು ಇರದ’ ಎನ್ನುವ ಅರ್ಥವೂ ಕೂಡಿದೆ.
ತಮ್ಮ ‘ನೋss’ ಎನ್ನುವ ಕವನದಲ್ಲಿ ಬೇಂದ್ರೆಯವರು ‘ನೋ’ ಎನ್ನುವ ಪದವನ್ನು
ಇಂಗ್ಲಿಶ್ ಭಾಷೆಯ ಎರಡು ಅರ್ಥಗಳಲ್ಲಿ ಬಳಸಿದ್ದಾರೆ.
ನೋ ಎಂದರೆ know ಎಂದು ಆಗುವಂತೆಯೇ no ಎಂದೂ ಆಗಬಲ್ಲದು. ಈ ಕವನದ ಮೊದಲ ನುಡಿಯ ಮೂರು ಸಾಲುಗಳು
ಹೀಗಿವೆ:
‘ಅದು ಏsನೋ ಇತ್ತು
ನೋ, ನೋ, ನೋ ಎನುತಿತ್ತು
ಎನುತಲೆ ಇತ್ತು.’
ಅದು (ಭಗವತ್ಚೈತನ್ಯವು) ಏsನೋ
ಇತ್ತು. ಅಂದರೆ ನಮಗೆ ತಿಳಿಯಲು ಸಾಧ್ಯವಾಗದಂತೆ ಅದು ಇತ್ತು. ಅದು ಸಾಧಕರಿಗೆ Know, know, know ಎಂದು ಹೇಳುತ್ತಿತ್ತು ಅಂದರೆ ‘ನನ್ನನ್ನು
ತಿಳಿಯಿರಿ’ ಎಂದು ಅದು ಹೇಳುತ್ತಿತ್ತು. ಸಾಧಕನು ತಿಳಿಯಲು ಪ್ರಯತ್ನಿಸಿದಾಗ ಆ ಚೈತನ್ಯವು no,
no, no ಎಂದರೆ ‘ನೇತಿ, ನೇತಿ, ನೇತಿ (ಹಾಗಲ್ಲ, ಹಾಗಲ್ಲ, ಹಾಗಲ್ಲ)’ ಎನ್ನುವಂತೆ ಸಾಧಕನಿಗೆ ಭಾಸವಾಗುತ್ತಿತ್ತು.
ಒಂದು ಪದದ ಅರ್ಥವನ್ನು ಬದಲಿಸುವ ಅಥವಾ ಹಿಗ್ಗಿಸುವ ಪ್ರತಿಭೆಯನ್ನು ನಾವು
ಬೇಂದ್ರೆಯವರ ಅನೇಕ ಕವನಗಳಲ್ಲಿ ಕಾಣುತ್ತೇವೆ. ಇದರ ನಿದರ್ಶನವಾಗಿ ‘ಮನುವಿನ ಮಕ್ಕಳು’ ಎನ್ನುವ ಅವರ ಕವನದ ಈ ಸಾಲುಗಳನ್ನು ನೋಡಬಹುದು:
‘ಪ್ರಾಣತರಂಗಿಣಿ’ ತುಳುಕುವುಳು
ದಡಗಳ ದುಡುಕುವಳು’.
ತರಂಗಿಣಿ ಎಂದರೆ ತರಂಗಗಳನ್ನು ಉಳ್ಳವಳು ಅರ್ಥಾತ್ ನದಿ. ಇವಳು ಎಲ್ಲ ಜೀವಿಗಳಿಗೂ
ಪ್ರಾಣಶಕ್ತಿಯನ್ನು ಕೊಟ್ಟು ಪೋಷಿಸುವ ಪ್ರಾಣತರಂಗಿಣಿ. ಇವಳಿಗೆ ದಂಡೆಗಳನ್ನು ದಾಟಿ ಪ್ರವಹಿಸುವ ದುಡುಕುಬುದ್ಧಿ ಏಕೆ?
ಇವಳ ಈ ದುಡುಕಿಗೆ ಕಾರಣವೆಂದರೆ, ಎಲ್ಲ ಜೀವಿಗಳ ಪೋಷಣೆಗಾಗಿ ಅವರತ್ತ ಧಾವಿಸುವ ಇವಳ ಮಮತಾಭಾವ. ಈ ರೀತಿಯಾಗಿ
‘ದುಡುಕು’ ಪದದ ಹೀನ ಅರ್ಥವನ್ನು ಬೇಂದ್ರೆಯವರು ಇಲ್ಲಿ
ಸುಮಾನ-ಅರ್ಥಕ್ಕೆ ಹಿಗ್ಗಿಸಿದ್ದಾರೆ
!
ಇದಕ್ಕಿಂತಲೂ ಮಿಗಿಲಾದ ಮತ್ತೊಂದು ಉದಾಹರಣೆಯು ‘ಪಂಪನ ನೆನೆದು’ ಎನ್ನುವ
ಅವರ ಕವನದಲ್ಲಿದೆ:
‘ಮುಗಿಲ ಬಸಿರಿನಲ್ಲಿ ಈಗ ನಿಮ್ಮ ನುಡಿಯು ಅಡಗಿದೆ
ಭುಗಿಲು ಎಂದು ದಿಗಿಲು ಬಡಿಸಿ ಇಲ್ಲಿ ಏಳತೊಡಗಿದೆ.’
‘ಆದಿಕವಿ ಪಂಪನ ನುಡಿಯು ಆಕಾಶದಲ್ಲಿ ಅಡಗಿತು’ ಎನ್ನುವ ವಾಕ್ಯದ ಸಾಮಾನ್ಯ ಅರ್ಥವೆಂದರೆ
ಪಂಪನು ಸ್ವರ್ಗಸ್ಥನಾದನು ಎಂದಲ್ಲವೆ? ಬೇಂದ್ರೆಯವರು
ಆಕಾಶವನ್ನು ‘ಮುಗಿಲಬಸಿರು’ ಎಂದು ಕರೆಯುವ ಮೂಲಕ, ಪಂಪನ ಕಾವ್ಯವು ಮುಂದಿನ ಕಾವ್ಯಗಳಿಗೆ ಪ್ರೇರಣೆಯಾಗಿದೆ,
ತಾಯಿಯಾಗಿದೆ ಎಂದು ಸೂಚಿಸುತ್ತಾರೆ! ಪಂಪನ ಆದಿಕಾವ್ಯದಿಂದ ಪ್ರಾರಂಭಿಸಿ, ಕನ್ನಡಕಾವ್ಯದ ಈವರೆಗಿನ
ಎಲ್ಲ ಮಾದರಿಗಳವರೆಗೆ, ಪರಂಪರೆಯ ಸಾತತ್ಯವಿದೆ ಎನ್ನುವುದನ್ನೂ ಇದು ಸೂಚಿಸುತ್ತದೆ. ಈ ರೀತಿಯಾಗಿ ಒಂದು
ಪದಕ್ಕೆ ಅನೇಕ ಅರ್ಥಗಳನ್ನು ಕೊಡುವ ಪ್ರತಿಭೆಯನ್ನು ಬೇಂದ್ರೆಯವರ ಕವನಗಳಲ್ಲಿ ಕಾಣಬಹುದು. ಈ ಪ್ರತಿಭೆಗೆ
ನಿದರ್ಶನವಾಗಿ ‘ತಂಗಿ ಜಾನಕಮ್ಮ’ ಎನ್ನುವ ಮತ್ತೊಂದು ಕವನವನ್ನು ನೋಡೋಣ.
ಕವಯಿತ್ರಿ ಜಾನಕಮ್ಮ ಹಾಗು ಬೇಂದ್ರೆಯವರ ನಡುವೆ ಪತ್ರವ್ಯವಹಾರ ನಡೆದಿತ್ತು,
ಆದರೆ ಇವರೀರ್ವರ ಭೇಟಿಯಾಗಿರಲಿಲ್ಲ. ಬೇಂದ್ರೆಯವರು ತಮ್ಮ ಕವನದಲ್ಲಿ ಜಾನಕಮ್ಮನನ್ನು ಸಂಬೋಧಿಸುವುದು
ಹೀಗೆ:
‘ತಂಗಿ ಜಾನಕಿ ನಿನ್ನ
ವೈದೇಹದೊಲವಿನಲಿ
ಓಲೆ ಬಂದಿತು ಒಂದು ಇತ್ತ, ತೇಲಿ’
ಇಲ್ಲಿ ವೈದೇಹದೊಲವು ಪದಕ್ಕೆ ಇರುವ ಎರಡು ಅರ್ಥಗಳನ್ನು ನೋಡಿರಿ. ರಾಮಾಯಣದ
ಸೀತೆ ವಿದೇಹದ ರಾಜನಾದ ಜನಕನ ಮಗಳು. ಆದುದರಿಂದ ಜಾನಕಿ ಹಾಗು ವೈದೇಹಿ ಎನ್ನುವ ಹೆಸರುಗಳೂ ಇವಳಿಗಿವೆ.
ಆದುದರಿಂದ ವೈದೇಹಿಯ
ಒಲವು ಎಂದರೆ ಜಾನಕಿಯ ಒಲವು. ವಿದೇಹ ಎಂದರೆ ದೇಹವಿಲ್ಲದಿರುವಿಕೆ ಎಂದೂ ಅರ್ಥವಾಗುತ್ತದೆ. ಆದುದರಿಂದ ವೈದೇಹದೊಲವು
ಪರಸ್ಪರರ ಭೇಟಿಯಿಲ್ಲದೆ ಮೂಡಿದ ಒಲವು.
ಈ ಮೇಲಿನ ಉದಾಹರಣೆಗಳಲ್ಲಿ ಒಂದು ಪದದ ಅರ್ಥವು ಹಿಗ್ಗುವುದನ್ನು ನಾವು ನೋಡಿದೆವು.
ಒಂದೇ ಪದದಲ್ಲಿ ವಿರುದ್ಧ ಸೂಚನೆಗಳನ್ನು ಕೊಡುವುದರ ಉದಾಹರಣೆಯಾಗಿ ‘ಕನಸಿನೊಳಗೊಂದು ಕಣಸು’ ಎನ್ನುವ
ಕವನವನ್ನು ನೋಡಬಹುದು. ಬೇಂದ್ರೆಯವರು ತಮ್ಮ ಕನಸಿನಲ್ಲಿ ಓರ್ವ ಗೌರವಸ್ಥ ಸ್ತ್ರೀಯನ್ನು
ಕಂಡು ಅವಳೊಡನೆ ಸಂಭಾಷಿಸುವ, ಅವಳನ್ನು ಪ್ರಶ್ನಿಸುವ ದೃಶ್ಯವು ಈ ಕವನದಲ್ಲಿದೆ. ಬೇಂದ್ರೆಯವರು
ಆ ಹೆಣ್ಣುಮಗಳಿಗೆ ಕೇಳುವ ಪ್ರಶ್ನೆ ಹಾಗು ಅವಳು ಕೊಡುವ ಉತ್ತರ ಹೀಗಿವೆ:
(ಕವಿ:) ‘ನೀನಾರ ಮನೆಯವಳು ಮುತ್ತೈದೆ ಹೇಳು’
(ಸ್ತ್ರೀ:) ‘ನಾನಾರ ಮನೆಯವಳು ಬಯಲನ್ನೆ ಕೇಳು’
ಈ ಮುತ್ತೈದೆಗೆ ಬಯಲೇ ಮನೆಯಾಗಿದೆ.
ಇದು ಅವಳ ಅನಾಥ ಸ್ಥಿತಿಯ ಸೂಚನೆಯಾಗಿದೆ. ಇದಕ್ಕೆ ಸಂಪೂರ್ಣ ವಿರುದ್ಧವಾದ
ಅರ್ಥವೆಂದರೆ ಈ ಬಯಲು, ಈ ವಿಸ್ತಾರವಾದ ಪ್ರದೇಶ ಇದೆಲ್ಲ ಅವಳದೇ ಮನೆ; ಯಾಕೆಂದರೆ ಇವಳು ಆ ನೆಲದ ಒಡತಿ,
ಇವಳು ಕನ್ನಡ ತಾಯಿ!
ಬೇಂದ್ರೆ-ಕವನಗಳಲ್ಲಿರುವ ಶ್ಲೇಷೆಗಳನ್ನು ಅರಿತುಕೊಳ್ಳಲು ಕೇವಲ ಭಾಷಾಜ್ಞಾನವೊಂದೇ
ಸಾಲದು. ಭಾರತೀಯ ಅಧ್ಯಾತ್ಮಸಾಧನಾಮಾರ್ಗಗಳ ತಿಳಿವೂ ಅವಶ್ಯವಾಗಿದೆ.
‘ಓ ತಾಯಿ, ಮಾಯಿ, ಶಿವಜಾಯಿ ಕಾಯಿ’ ಎನ್ನುವ ಅವರ ಕವನವೊಂದರಲ್ಲಿ, ಭಕ್ತನೋರ್ವನು ಐಹಿಕ ಕಾಮದಲ್ಲಿ ತಾನು ಸಿಲುಕಿರುವದಾಗಿ
ತಾಯಿಗೆ (ದೇವಿಗೆ) ನಿವೇದಿಸುತ್ತಾನೆ.
ತಾಯಿ (ದೇವಿ) ಅವನಿಗೆ ನೀಡುವ ಉತ್ತರ ಹೀಗಿದೆ :
‘ಹಾಂಗಲ್ಲೊ ಮಗನ ನೀ ಭೋಗ ಬೇಡಿದಲ್ಲಲ್ಲು ಬಾಗಿಲಾಗಿ
ತೆರಿತಾವ ಹಾದಿ, ಅದಕಂತ
ಕಾದಿ……………………’
ಭಕ್ತನು ತನ್ನ ಕಾಮಪೂರಣೆಗಾಗಿಯೇ ಕಾಯುತ್ತಿದ್ದ ; ಪ್ರಾರ್ಥನೆಯ
ಮೂಲಕ
ಅವನಿಗೆ ಪೂರಕ ಮಾರ್ಗಗಳು (ಹಾದಿ) ತೆರೆಯುತ್ತಿವೆ ಎನ್ನುವುದು
ಮೇಲುನೋಟದ ಅರ್ಥ. ಹಾದಿ ಹಾಗು ಕಾದಿ ಇವು ತಾಂತ್ರಿಕ ವಿದ್ಯೆಯ
ಎರಡು ಮಾರ್ಗಗಳು ಎನ್ನುವುದು ತಂತ್ರಸಾಧನೆಯ ಮಾಹಿತಿ ಇರುವವರಿಗೆ ಮಾತ್ರ ತಿಳಿದಿರುವ
ವಿಷಯ.
ಬೇಂದ್ರೆಯವರ ಕವನಗಳಲ್ಲಿ ಜೋಡುಪದಗಳ ಭಂಡಾರವೇ ಇದೆ. ನಾನು ನೋಡಿದ ಮಟ್ಟಿಗೆ
ಇವೆಲ್ಲ ಕನ್ನಡ ಪದಗಳೇ ಆಗಿರುವುದು ಬೇಂದ್ರೆಯವರ ಕನ್ನಡ ಪ್ರೇಮವನ್ನು ಹಾಗು ಪ್ರತಿಭೆಯನ್ನು ತೋರಿಸುತ್ತದೆ
ಎಂದು ಹೇಳಬಹುದು. ಅಂತಹ ಕೆಲವು ಉದಾಹರಣೆಗಳನ್ನು ನೋಡೋಣ:
ಕವನ : ‘ಅಹಹ ಸ್ವಾತಂತ್ರ್ಯದೇವೀ !’
‘ಜಿಂಕೆಯೊಲು ದೀಂಕಿಡುವ ಸೋಂಕು ಸೊಗವೇ
ಬಾರೆ ನಗೆಯೊಗಿಸಿ ನಗುವ ಮೊಗವೇ’
‘ಸೋಂಕುಸೊಗವು’ ಎನ್ನುವ ಈ ಜೋಡುಪದವು ಇಂಗ್ಲೀಶಿನ contagious joy ಎನ್ನುವುದರ
ಕನ್ನಡ ಸಂವಾದೀ ಪದ. (ಸೋಂಕು=contagious, ಸೊಗ=ಸುಖ=joy). ಆದರೆ ಇದು ಕನ್ನಡದ ಮೂಲಪದ ಎನ್ನುವಷ್ಟರ
ಮಟ್ಟಿಗೆ ಈ ಪದದಲ್ಲಿ ಕನ್ನಡತೆ ತುಂಬಿದೆ!
ಅಷ್ಟೇ ಏಕೆ, ಸಾಮಾನ್ಯ ಬಳಕೆಯಲ್ಲಿರುವ ಸಂಸ್ಕೃತ ಜೋಡುಪದಗಳ ಬದಲಾಗಿ ಕನ್ನಡ
ಜೋಡುಪದಗಳನ್ನು ಅದಕ್ಕೂ ಹೆಚ್ಚು ಪರಿಣಾಮಕಾರಿಯಾಗಿ ಬೇಂದ್ರೆ ಬಳಸುತ್ತಾರೆ. ಉದಾಹರಣೆಗೆ ‘ಸಾಹಿತ್ಯ-ಕೇಳಿ’
ಎನ್ನುವ ಅವರ ಕವನದ ಈ ಸಾಲುಗಳನ್ನು ನೋಡಿರಿ:
‘ತಂತಾನೆ ತಣಿವಿನಲ್ಲಿದ್ದ
ತಲ್ಲೀನತೆಯು
ನಿದ್ದೆ ತಿಳಿದೆದ್ದಾಗ
ಎನಿತೆನಿತು ಶಾಂತಿ !
ಬಾಯಿಲ್ಲದನುಭವದ
ನೆನವೆ ನನೆಕೊನೆಹೋಗಿ
ಕನಸೆ ನನಸಾಗಿರಲದಂಥ
ನವ ಕಾಂತಿ !’
‘ಅನಿರ್ವಚನೀಯ ಅನುಭವ’
ಎನ್ನುವ ಸಂಸ್ಕೃತ ಜೋಡುಪದವು ಸಾಕಷ್ಟು ಬಳಕೆಯಲ್ಲಿದ್ದರೂ ಸಹ, ಬೇಂದ್ರೆಯವರು ‘ಬಾಯಿಲ್ಲದನುಭವದ’ ಎನ್ನುವ
ಪದವನ್ನು ಟಂಕಿಸಿ, ಬಳಸಿ, ಇನ್ನೂ ಹೆಚ್ಚಿನ ಪರಿಣಾಮವನ್ನು ಪಡೆದಿದ್ದಾರೆ. ಇದರಂತೆಯೇ ‘ಏಳು ಕನ್ನಿಕೆಯರು’
ಎನ್ನುವ ಅವರ ಇನ್ನೊಂದು ಕವನವನ್ನು ನೋಡಬಹುದು:
‘ಅಯ್ಯೊ ಎಂದು ತಿಳಿಯದಾಗಿ
ಮೈಯೆ ಬಾಯಿಬಿಟ್ಟ ಹಾಗೆ
ಬೆವರು ಬಂದ ಮೈಯ ತುಂಬ
ನವಿರುಮುಳ್ಳು ನಿಂತಿತೋ—ನವಿರುಮುಳ್ಳು ನಿಂತಿತು.’
ವ್ಯವಹಾರದಲ್ಲಿ ಬಳಕೆಯಲ್ಲಿರುವ ‘ರೋಮಾಂಚನ’ಕ್ಕಿಂತ ಹೆಚ್ಚಿನ ಅರ್ಥವು
‘ನವಿರುಮುಳ್ಳು’ ಎನ್ನುವ ಪದದಲ್ಲಿ ಲಭ್ಯವಾಗುತ್ತದೆ.
ಇಂತಹದೇ ಇನ್ನೊಂದು ಉದಾಹರಣೆಯು ಅವರ ‘ಕಲ್ಪವೃಕ್ಷವೃಂದಾವನಗಳಲ್ಲಿ’ ಎನ್ನುವ
ಕವನದಲ್ಲಿದೆ:
‘ಹೊನ್ನಿ ಹುಳಗಳೊಲು ಓರೆ ನೋಟಗಳು
ಹಾರಿ ಮಿನುಗುತಿಹವು
ಬಳ್ಳಿಮಾಡಗಳು ಸನ್ನೆ ಮಾಡುತಿವೆ
ನನಗು ನಿನಗು ಬರಲು.’
‘ಲತಾಮಂಟಪ’ ಎನ್ನುವ ಅತಿ-ಬಳಸಲಾದ ಸಂಸ್ಕೃತ ಪದಕ್ಕಿಂತ ‘ಬಳ್ಳಿಮಾಡ’ವು
ನವೀನವೆನಿಸುತ್ತದೆ ಹಾಗು ಈ ಜೋಡುಪದವು ಈ ಗೀತೆಗೆ ಬೇಕಾದಂತಹ ಛಂದದಲ್ಲಿ ಸಲೀಸಾಗಿ ಹೊಂದಿಕೊಳ್ಳುತ್ತದೆ.
ಬೇಂದ್ರೆಯವರ ಕೆಲವು ಕವನಗಳಲ್ಲಿ ಹಳೆಗನ್ನಡದ ಅಥವಾ ನಡುಗನ್ನಡದ ಛಾಯೆ ಇದ್ದರೆ,
ಇನ್ನು ಕೆಲವು ಕವನಗಳಲ್ಲಿ ಸಂಸ್ಕೃತದ ವಿಶೇಷತೆ ಇದೆ. ಇನ್ನೂ ಕೆಲವು ಕವನಗಳು ಆಧುನಿಕ ಕಾಲದ ಅಚ್ಚ
ದೇಸೀಭಾಷೆಯಲ್ಲಿವೆ. ಈ ಕವನಗಳಲ್ಲಿ ಬಳಸಿದ ಜೋಡುಪದಗಳೂ ಸಹ ಇಂತಹದೇ ವೈಶಿಷ್ಟ್ಯವನ್ನು ಹೊಂದಿವೆ.
ನಡುಗನ್ನಡದ ಛಾಯೆಯ ಒಂದು ಕವನವನ್ನು ಈಗ ನೋಡೋಣ:
‘ಚೆನ್ನಕೇಶವನ ಕಣ್ಣಿದಿರು ಕುಣಿಕುಣಿವ
ನಲ್ಲರೂಹಿನ ಕಲ್ಲು !’
‘ನಲ್ಲ’ ಪದಕ್ಕೆ ‘ಒಳ್ಳೆಯ’ ಎನ್ನುವ ಅರ್ಥವಿದೆ. ಸಂಸ್ಕೃತದ ‘ರೂಪ’ವು ಕನ್ನಡದಲ್ಲಿ
ರೂಹು ಎನ್ನುವ ಪದವಾಗಿದೆ. ಇವೆರಡನ್ನೂ ಜೋಡಿಸಿ ‘ನಲ್ಲರೂಹು’ ಎನ್ನುವ ಜೋಡುಪದವನ್ನು ಬೇಂದ್ರೆ ಸೃಷ್ಟಿಸಿದ್ದಾರೆ.
ಈ ಪದವು ಬೇಲೂರಿನ ದೇವಾಲಯದ ನಿರ್ಮಾಣಕಾರ್ಯಯದ ಕಾಲಘಟ್ಟಕ್ಕೆ
ಹೊಂದಿಕೊಳ್ಳುವಂತಹ ಪದವಾಗಿದೆ ಎನ್ನುವುದನ್ನು ಗಮನಿಸಬೇಕು. ಇದೇ ಕವನದಲ್ಲಿ ‘ಕಲ್ನಾಟಿಸಿದ ವೀರರಾಡುಂಬೊಲವು’
ಎನ್ನುವ ಸಾಲು ಬರುತ್ತದೆ. ವೀರಗಲ್ಲುಗಳನ್ನು ಹಾಗು ಮಾಸತಿ ಕಲ್ಲುಗಳನ್ನು ಸ್ಥಾಪಿಸಲು ಕಾರಣರಾದ ವೀರಪುರುಷರನ್ನು
ಹಾಗು ಗರತಿಯರನ್ನು ಬೇಂದ್ರೆಯವರು ‘ಕಲ್ನಾಟಿಸಿದ’ ಎನ್ನುವ ಅಚ್ಚಕನ್ನಡ ವಿಶೇಷಣದಿಂದ ಗೌರವಿಸುತ್ತಾರೆ.
‘ವನಸುಮ’ ಕವನದಲ್ಲಿ ಸಂಸ್ಕೃತದ ಬಳಕೆಯನ್ನು ನೋಡಬಹುದು:
‘ಗಂಧಬಾಂಧವನು ಸ್ವಚ್ಛಂದ ಮಾರುತನು
ಈ ಸೌಸವವ ಮೂಸಿ ಉಸಿರಾಡಿಸುವನು.’
ಮನಬಂದಂತೆ ಹರಿದಾಡುವ ಹಾಗು ಹೂವುಗಳ ಕಂಪನ್ನು ಎಲ್ಲೆಡೆಗೆ ಹರಡುವ ಗಾಳಿಯನ್ನು
ಬೇಂದ್ರೆಯವರು ‘ಗಂಧಬಾಂಧವ’ ಎನ್ನುವ ಜೋಡುಪದದ ಮೂಲಕ ಬಣ್ಣಿಸುತ್ತಾರೆ.
‘ಸಿದ್ಧರಾಮರ ವಚನವನ್ನು ನೆನೆದು’ ಎನ್ನುವ ಕವನದಲ್ಲಿ ಸಂಸ್ಕೃತ ಜೋಡುಪದಗಳ
ಜೊತೆಜೊತೆಗೆ ಕನ್ನಡದ ಧಾತುಸಾಧಿತ ಪದಗಳೂ ದೊರೆಯುತ್ತವೆ:
‘ಆದರೇನೆಲ್ಲೆಲ್ಲು ಗುಂಭಮೌನವೆ ತುಂಬಿ
ಮೂಢನ ಸಮಾಧಿಯಲಿ ಕತ್ತಲಿಸಿದೆ
ವೈಭವಕೆ ಕಳೆಯಿಲ್ಲ ಜ್ಞಾನಕ್ಕೆ ಬೆಳೆಯಿಲ್ಲ
ಅಜ್ಞಾನವೇ ಸುತ್ತ ಬತ್ತಲಿಸಿದೆ’.
ಈ ನುಡಿಯಲ್ಲಿ ‘ಗುಂಭಮೌನ’ ಎನ್ನುವ ಸಂಸ್ಕೃತ ಜೋಡುಪದವನ್ನೂ, ಕತ್ತಲಿಸು
ಹಾಗು ಬತ್ತಲಿಸು ಎನ್ನುವ ಕನ್ನಡ ಧಾತುಸಾಧಿತ ಪದಗಳನ್ನೂ ಗಮನಿಸಬೇಕು.
ಪ್ರಸಕ್ತ ಕಾಲದ ಕನ್ನಡದ ದೇಸಿ ಪದಗಳನ್ನು ಜೋಡಿಸಿ ಬೇಂದ್ರೆಯವರು ಪಡೆದ
ಜೋಡುಪದಗಳು ಸಾಕಷ್ಟಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ನೋಡೋಣ:
‘ತೊಗಲ ಚೀಲಗಳಲ್ಲಿ ಬದುಕು ನಡೆದಿದೆ. ಹೊಟ್ಟೆ
ಹೊಸೆಯುವದೆ ಬಾಳುವೆಯು; ನಿದ್ದೆ ಹಿಗ್ಗು;’
‘ಬರಿದೊ ಬರಿದು ತೆರವೊ ತೆರವು
ಬಡವರ ಬಗ್ಗರ ತುತ್ತಿನ ಚೀಲ’
‘ಕೊನೆಬಿಕ್ಕು
ಬಂದಾಗ
ಇಡುಗಂಗೆ ತಂದಾಗ
ಹನಿಯೊಂದು ಕುಡಿಸಿದರೆ ಏನು ತಣಿವು?
ಸಾವಿನ ಅಂಚಿನಲ್ಲಿದ್ದ ವ್ಯಕ್ತಿಯ ಗೋಳನ್ನು ‘ ಕೊನೆಬಿಕ್ಕು’ ಎನ್ನುವ ಜೋಡುಪದವು
ಸಮರ್ಥವಾಗಿ
ವರ್ಣಿಸುತ್ತದೆ.
ಬೇಂದ್ರೆಯವರ ‘ನರಬಲಿ’ ಕವನವು ಅವರನ್ನು ಸೆರೆಮನೆಗೆ ತಳ್ಳಿತು. ಮಹಾಕಾಳಿಯನ್ನು
ಸಂಕೇತವಾಗಿ ಇಟ್ಟುಕೊಂಡು, ಜಾಗತಿಕ ಯುದ್ಧವನ್ನು ಟೀಕಿಸಿ ಬರೆದ ಈ ಕವನದಲ್ಲಿ ಅವರು ಅವಳ ಸ್ವಭಾವವನ್ನು
ವರ್ಣಿಸುವುದು ಹೀಗೆ:
‘ಜೀವ ತಿನ್ನುವಾ ಹಸಿವೆ ಮತ್ತೆ ಆ ನೆತ್ತರ ನೀರಡಿಕೆ’
‘ರಕ್ತಪಿಪಾಸು’
ಎನ್ನುವ ಸಂಸ್ಕೃತ ಸಮಾಸದ ಬದಲಾಗಿ ‘ನೆತ್ತರ ನೀರಡಿಕೆ’ ಎನ್ನುವ ಕನ್ನಡ ಜೋಡುಪದವನ್ನು ಬೇಂದ್ರೆ ಪರಿಣಾಮಕಾರಿಯಾಗಿ
ಬಳಸಿದ್ದಾರೆ.
ಇದೇ
ಕವನದಲ್ಲಿ ಗುಬ್ಬಿಮಾನವ, ಬೆವರಿನ ಬಳ್ಳಿ, ನೆತ್ತರ ಹೂವು, ಸಾವಿನ ಹಣ್ಣು, ಬಂಜೆಬೆಂಕಿ ಮೊದಲಾದ ಕನ್ನಡ
ಜೋಡುಪದಗಳು ಬಂದಿವೆ. ಇವುಗಳಲ್ಲಿ ‘ಬಂಜೆಬೆಂಕಿ’ ಎನ್ನುವುದು ಸ್ವಾರಸ್ಯಕರವಾದ ಜೋಡುಪದವಾಗಿದೆ.
‘ನೆಲದಗಲಕೆ
ಮುಗಿಲುದ್ದಕೆ ಹೊತ್ತಿಹ ಎಲೆಲೆ ಬಂಜೆಬೆಂಕಿ !
ಪ್ರಳಯಕಾಳಿ
ಏ ರುದ್ರಕಾಳಿ ಎಲೆ ಎಲೆಲೆ ಮಹಾಂಕಾಳಿ !’
‘ಬಂಜೆ
ಸಫಲಳಲ್ಲ. ಅದರಂತೆಯೇ ಈ ಯುದ್ಧವು ಒಳ್ಳೆಯದಾದ ಏನನ್ನೂ ಸಾಧಿಸುವುದಿಲ್ಲ, ಆದರೆ ಮಾನವಸಂತತಿಯನ್ನು
ಸುಟ್ಟುಹಾಕುತ್ತದೆ’ ಎನ್ನುವ ಭಾವವು ಈ ಪದದಲ್ಲಿದೆ. ನಾಲ್ಕಕ್ಕರದ ಒಂದು ಜೋಡುಪದವು ಎಷ್ಟೆಲ್ಲ ಅರ್ಥವನ್ನು
ಕೊಡಬಲ್ಲದು ಎನ್ನುವುದಕ್ಕೆ ‘ಬಂಜೆಬೆಂಕಿ’ ಸಾಕ್ಷಿಯಾಗಿದೆ. ಬಂಜೆಬೆಂಕಿ, ಬೆವರಿನ ಬಳ್ಳಿ, ನೆತ್ತರನೀರಡಿಕೆ ಮೊದಲಾದ
ಜೋಡುಪದಗಳಲ್ಲಿ ಬರುವ ಅನುರಣನವು ಆ ಪದಗಳ ಪರಿಣಾಮವನ್ನು ಹೆಚ್ಚಿಸಲು ಹೇಗೆ ಸಹಾಯ ಮಾಡುತ್ತವೆ ಎನ್ನುವುದನ್ನು
ಗಮನಿಸಬೇಕು.
ಗಂಡಿನಿಂದ ಸೋಲಿಸಲ್ಪಟ್ಟು, ಅವನಿಗೆ ಮರುಳಾಗಿ ಅವನನ್ನು ವಶಮಾಡಿಕೊಳ್ಳಲು
ಬಯಸುವ ಹೆಣ್ಣು ತನ್ನನ್ನೇ ಬಣ್ಣಿಸಿಕೊಳ್ಳುವ ಒಂದು ಬಗೆಯನ್ನು ‘ಮಾಯಾಕಿನ್ನರಿ’ ಎನ್ನುವ ಕವನದಲ್ಲಿ
ನೋಡಬಹುದು. ಮರುಳಸಿದ್ಧನೆನ್ನುವ ಯೋಗಿಯು ಮಾಯೆ ಎನ್ನುವ ಯೋಗಿನಿಯನ್ನು ಸೋಲಿಸಿ ಅವಳನ್ನು ಕಿನ್ನರಿ
ಎನ್ನುವ ಸಂಗೀತದ ಉಪಕರಣವನ್ನಾಗಿ ಮಾರ್ಪಡಿಸುತ್ತಾನೆ. ಅವನಿಗೆ ಮನಸೋತ ಮಾಯೆಯು
ಪ್ರಣಯಿನಿಯ ಛಲದಿಂದ ಹೇಳುವ ಹಾಡು ಹೀಗಿದೆ:
‘ಆಡುತಾಡುತ ಬಂದು ಸಿಂಗಾರಸೊಳ್ಳೀ ಹಾಂಗ
ಹಾಡಿಲೆ ಕಿವಿಗಲ್ಲ ಕಡಿದ್ಯೇನ’
‘ತಾನು ‘ಸಿಂಗಾರಸೊಳ್ಳಿ’ಯಂತೆ ಅವನ ಕಿವಿಯನ್ನು ಹೊಕ್ಕು ಗುಂಯ್ಗುಡುತ್ತೇನೆ;
ವಿಲಾಸದಿಂದ ಅವನ ಗಲ್ಲವನ್ನು ಕಡಿಯುತ್ತೇನೆ’ ಎಂದು ಹೇಳುವ ಮಾತಿದು. ಸಿಂಗಾರಸೊಳ್ಳಿ ಎನ್ನುವ ಅಪೂರ್ವವಾದ ಜೋಡುನುಡಿಯನ್ನು ಬೇಂದ್ರೆಯವರು
ಇಲ್ಲಿ ಸೃಷ್ಟಿಸುವ ಮೂಲಕ ‘ಮಾಯೆ’ಯ ಸ್ವಭಾವವನ್ನು ಒಂದೇ ಜೋಡುಪದದಲ್ಲಿ ವರ್ಣಿಸಿದ್ದಾರೆ
ಒಂದು ಸನ್ನಿವೇಶಕ್ಕೆ ಜೀವ ತುಂಬಲು ಬೇಂದ್ರೆಯವರ ಜೋಡುಪದಗಳು ತುಂಬ ಉಪಯುಕ್ತವಾಗಿವೆ.
ಅವರ ‘ಕೊಳಲನೂದಿದ’ ಕವನದಲ್ಲಿ ಕೃಷ್ಣನ ಕೊಳಲದನಿಯನ್ನು ಕೇಳಿದ ನದಿ, ಗಾಳಿ, ಕರು ಇವೆಲ್ಲ ಮಂತ್ರಮುಗ್ಧವಾಗುವದನ್ನು
ಚಿತ್ರಿಸಲು ಬೇಂದ್ರೆಯವರು ಜೋಡುಪದಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಂಡಿದ್ದಾರೆ:
ಕಳೆದ ಕರುವಿಗಾಗಿ ಗೋಪಿ
ನೆಲವ ಮೂಸಿ ಮೂಸಿ ಮೂಸಿ
ಹುಡುಕುವಂತೆ ಹುಚ್ಚುಗಾಳಿ
ತಡೆದು ತಡವುತಿಹುದು ಇನ್ನೂ
ಸುಗ್ಗಿಗೊರಳ ಕೋಗಿಲಂತೆ
ನುಗ್ಗಿ ದನಿಯು ಪಂಚಮದಲ್ಲಿ
ಮುಗ್ಗಿ ಬಿದ್ದು ಮುಗಿಯದsನ
ಮುತ್ತುವಂತೆ ಸುತ್ತುವಂತೆ
ತಿರುವುಗಿವಿಯ ಮಾಡಿ ಆವು
ನಿಂತವಕ್ಕ ನಿಂತಲ್ಲೇನs
ನೀನು ಕೂಡ ಬೀದಿಯಲ್ಲೆ
ನಡಿಯದsನ ತಡೆದು ನಿಂತಿ
ಈ ಕವನದಲ್ಲಿ ಜೋಡುಪದಗಳ ಮೂಲಕ ಮಂತ್ರಮುಗ್ಧವಾದ ಚರಾಚರ ಪ್ರಕೃತಿಯನ್ನು ಸುಲಭವಾಗಿ
ವರ್ಣಿಸಲಾಗಿದೆ. ಆದರೆ ಆ ಅದೃಶ್ಯ ಪರಮಾತ್ಮನನ್ನು ಸೂಚಿಸಲು ಅಸಾಮಾನ್ಯ ವಸ್ತುಗಳ ಜೋಡುಪದಗಳನ್ನು ಬಳಸಬೇಕಾಗುವದಲ್ಲವೆ?
ಬೇಂದ್ರೆಯವರ ‘ನಾದಲೀಲೆ’ ಕವನದಲ್ಲಿ ಪರಮಾತ್ಮನು ಎಲ್ಲವನ್ನು ಆಟವಾಡಿಸುವ ಸೂತ್ರಧಾರನು ಎನ್ನುವ ಅರ್ಥವನ್ನು
ಕೊಡುವ ಸಾಲುಗಳು ಹೀಗಿವೆ:
‘ಬೇಟೆಯಲ್ಲ; ಆಟವೆಲ್ಲ; ಬೇಟದ ಬಗೆ, ನಾರಿ,
ಮುಗಿಲಬಾಯ ಗಾಳಿಕೊಳಲ ಬೆಳಕಹಾಡ ಬೀರಿ’
ಎರಡನೆಯ ಸಾಲಿನಲ್ಲಿರುವ ಪದಗಳನ್ನು ಗಮನಿಸಿರಿ. ಮುಗಿಲು, ಗಾಳಿ, ಬೆಳಕು
ಇವು ಪಂಚಮಹಾಭೂತಗಳ ಪೈಕಿ ಮೂರು ಭೂತಗಳು. ಮುಗಿಲೇ ಬಾಯಾಗಿರುವ, ಗಾಳಿಯೇ ಕೊಳಲಾಗಿರುವ ಹಾಗು ಬೆಳಕೇ
ಹಾಡಾಗಿರುವ ವಿಶ್ವಚೈತನ್ಯನನ್ನು ವರ್ಣಿಸಲು ಮತ್ತೇನು ಬೇಕು?
ಬೇಂದ್ರೆಯವರು ಜೋಡುಪದಗಳನ್ನಲ್ಲದೇ ಕೂಡುಪದಗಳನ್ನೂ ಸೃಷ್ಟಿಸಿದ್ದಾರೆ.
ಉದಾಹರಣೆಗೆಂದು ಈ ಕೆಲವು ಪದಗಳನ್ನು ಹೇಳಬಹುದು:
ಹಿಂಜಾಪು = ದೀರ್ಘವಾದ ಹಿನ್ನಡೆತ (a long back-stride)
ಗಸಿಗಿಳಿಸು =ಸೋಸು
ಮಣಿಮಾಟ = ಮೈಯನ್ನು ಮಣಿಸುವ ಕುಶಲತೆ
ಮೇಗಿಲ್ಲದ = ಇದಕ್ಕೂ ಹೆಚ್ಚಿನದು ಇಲ್ಲದ
ಹಚ್ಚಂಗಿ = ಹಚ್ಚನೆಯ ಅಂಗಿ, ಹಸಿರು ಅಂಗಿ
ಉಕ್ಕಂದ = ಉಕ್ಕುವ ಅಂದ
ತಪ್ಪಡಿ =ತಪ್ಪುಹೆಜ್ಜೆ
ಹೊಕ್ಕರಣೆ = ಹೊಕ್ಕು ತುಂಬುವ ಪುಷ್ಕರಿಣಿ (ಹೊಂಡ)
ಒಕ್ಕುಡಿತೆ = ಒಕ್ಕಾಲು ಕುಡಿತಕ್ಕೆ ಮಾತ್ರ ಸಾಲುವಷ್ಟು
ಅರೆಮುಕ್ಕು = ಅರ್ಧ ಮುಕ್ಕಳಿಕೆಗೆ ಮಾತ್ರ ಸಾಲುವಷ್ಟು
ಸೊಗಸಿ-ಜೀವ =ಸ್ವಲ್ಪದರಲ್ಲಿಯೇ ಸುಖ ಪಡೆವ ಜೀವ
ಉಗುರುದಿಟ್ಟಿ = ಮುಖ ಕೆಳಗೆ ಮಾಡಿದ ನೋಟ
ಬೇಂದ್ರೆಯವರು ಕನ್ನಡ, ಸಂಸ್ಕೃತ, ಮರಾಠಿ ಹಾಗು ಇಂಗ್ಲಿಶ್ ಭಾಷೆಗಳಲ್ಲಿ
ವಿಸ್ತೃತವಾದ ಅಧ್ಯಯನವನ್ನು ಮಾಡಿದವರು. ಈ ಓದಿನ ಪ್ರಭಾವವನ್ನು ಅವರು ತಮ್ಮ ಸಾಹಿತ್ಯದಲ್ಲಿ ಸ್ಪಷ್ಟವಾಗಿ
ಹಾಗು ಸೋದ್ದಿಶ್ಯವಾಗಿ ತೋರಿಸುತ್ತಾರೆ.
‘ಒಡಲು’ ಎನ್ನುವ ಕವನದ ಈ ಸಾಲನ್ನು ನೋಡಿರಿ:
‘ಒಡಲ-ಒಡೆಯನು ತೀರಿಕೊಳಲು ಹುಟ್ಟಿದ ಮನೆಗೆ
ಬಂದ ಹೆಣ್ಣಿನ ಹಾಗೆ…….’
ಗಂಡ ತೀರಿಕೊಂಡಾಗ, ಒಬ್ಬ ಹೆಣ್ಣುಮಗಳು ತವರು ಮನೆಗೆ ಮರಳಿ ಬಂದಿರುವ ಸನ್ನಿವೇಶವಿದು.‘
ಗಂಡ’ ಎನ್ನುವ ಪದದ ಬದಲಾಗಿ ಬೇಂದ್ರೆಯವರು ‘ಒಡಲ-ಒಡೆಯ’ ಎನ್ನುವ ಪದವನ್ನು ಬಳಸಿದ್ದಾರೆ. ಕಾಲೀದಾಸನು
ತನ್ನ ‘ಕುಮಾರಸಂಭವ’ ಕಾವ್ಯದಲ್ಲಿ ಇಂತಹದೇ ಪದವನ್ನು ಬಳಸಿದ್ದಾನೆ. ಶಿವನ ಕೋಪಾಗ್ನಿಯಲ್ಲಿ ಮನ್ಮಥನು
ಸುಟ್ಟು ಬೂದಿಯಾದಾಗ, ಅವನನ್ನು ಹುಡುಕಿಕೊಂಡು ಬಂದ ರತಿಯು, ಈ ರೀತಿಯಾಗಿ ಕೇಳುತ್ತಾಳೆ:
‘ಅಯಿ ಜೀವಿತನಾಥ, ಜೀವಸಿ? (= ಬದುಕಿನೊಡೆಯಾ ಬದುಕಿರುವೆಯಾ?)
ಬೇಂದ್ರೆಯವರ ಕವನದಲ್ಲಿ ಜೀವಿತನಾಥನು ಒಡಲ-ಒಡೆಯನಾಗಿದ್ದಾನೆ.
ಬೇಂದ್ರೆಯವರು ಕಾಲೀದಾಸನನ್ನು ನೆನೆಸಿ, ಗೌರವಿಸುವ ಪರಿಯಿದು.
(ಇದಲ್ಲದೆ, ಒಡಲ-ಒಡೆಯ ಅಂದರೆ ಅವಳ ಸಂಪೂರ್ಣ ಯಜಮಾನ ಎನ್ನುವ ಅರ್ಥವೂ ಹೊಮ್ಮುತ್ತದೆ.)
ಇಂತಹದೇ ಮತ್ತೊಂದು ಗೌರವಸಮರ್ಪಣೆ ‘ಪಾರಿಜಾತ’
ಎನ್ನುವ ಕವನದಲ್ಲಿದೆ:
‘ಚಿಕ್ಕೆಯೊಡನೆ ಮೂಡು ಮುಳುಗು;
ಆಗದದಕೆ ಹಗಲು ಬೆಳಗು;
ಜ್ಞಾನಿಯ ಗತಿ, ಇರುಳೊಳಗತಿ
ನಿಜ ಜಾಗೃತಿ ಇರುವದು.
ಬೇಂದ್ರೆಯವರ ಕವನಗಳಲ್ಲಿ ಸಂದರ್ಭಾನುಸಾರವಾಗಿ ಕನ್ನಡದಲ್ಲಿ
ಬಳಕೆಯಲ್ಲಿರುವ, ಆದರೆ ಮೂಲತಃ ಕನ್ನಡದ್ದಲ್ಲದ ಅನೇಕ ಪದಗಳು ಬರುತ್ತವೆ. ಧಾರವಾಡವನ್ನು ಬಿಟ್ಟು ಹೋಗಬೇಕಾದ
ಸಂದರ್ಭದಲ್ಲಿ
‘ನಾವು ಬರತೇವಿನ್ನ’ ಎನ್ನುವ ಕವನವನ್ನು ಅವರು ರಚಿಸಿದರು. ಆ ಕವನದ ಒಂದು ನುಡಿ ಹೀಗಿದೆ:
‘ಜೋಲಿ- ಹೋದಾಗ ಆದಿರಿ ಕೋಲು
ಹಿಡಿದಿರಿ ನಮ್ಮ ತೋಲು
ಏನು ನಿಮ್ಮ ಮೋಲು-ಲೋಕದಾಗ
ನಾವು-ಮರತೇವದನ ಹ್ಯಾಂಗ? ’
ತೋಲು ಇದು ‘ತೋಲನಾ=ತೂಕ ಮಾಡು’ ಎನ್ನುವ ಅರ್ಥವುಳ್ಳ
ಹಿಂದೀ ಪದ. ಕನ್ನಡದಲ್ಲಿ ಇದಕ್ಕೆ ಜೋಲಿ ಹಿಡಿಯುವುದು ಎನ್ನುವ ಬೇರೆಯದೇ ಆದ ಅರ್ಥ
ಪ್ರಾಪ್ತವಾಗಿದೆ. ‘ಮೋಲು’ ಇದು ಮೌಲ್ಯ ಎನ್ನುವ ಸಂಸ್ಕೃತ ಪದದ ಪ್ರಾಕೃತೀಕರಣ.
ಬೇಂದ್ರೆಯವರ ಪದಸಂಪತ್ತು ಅಪಾರವಾದದ್ದು. ‘ಗರಿ’ ಕವನಸಂಕಲನದಲ್ಲಿ ಇರುವ ಒಟ್ಟು
೭೧೫೦ ಪದಗಳಲ್ಲಿ ೧೧೮೦ ಪದಗಳನ್ನು ಕೇವಲ ಒಂದೇ ಬಾರಿಗೆ ಬಳಸಲಾಗಿದೆ. ಅವರ ಕವನಗಳಲ್ಲಿ ಹಳೆಗನ್ನಡ,
ಹೊಸಗನ್ನಡ, ಪ್ರಾಕೃತ, ಸಂಸ್ಕೃತ, ಉರ್ದು ಹಾಗು ಇಂಗ್ಲಿಶ್ ಭಾಷೆಯ ಪದಗಳು ಕಾವ್ಯದ ತಿರುಳನ್ನು ಬೆಳಗಿಸಲು,
ಕಾವ್ಯದ ಸ್ವರೂಪವನ್ನು ನಿಶ್ಚಯಿಸಲು ಬಳಕೆಯಾಗಿವೆ. ಆ ಪದಸಾಗರವನ್ನು ಅಳೆಯಲು ನನ್ನಂತಹ ಸಾಮಾನ್ಯನಿಗೆ
ಸಾಧ್ಯವಿಲ್ಲ. ಇದು ಕೇವಲ ಒಂದು ಸಾಧಾರಣ ಪ್ರಯತ್ನವಷ್ಟೇ!
ಕಾಲೀದಾಸನು ತನ್ನ ಕಾವ್ಯದಲ್ಲಿ ವಾಕ್ ಮತ್ತು ಅರ್ಥಗಳು ಶಿವ-ಪಾರ್ವತಿಯರಂತೆ
ಬೆಸೆದುಕೊಂಡಿರಲಿ ಎಂದು ಪ್ರಾರ್ಥಿಸಿದ್ದಾನೆ. ಆ ಪ್ರಾರ್ಥನೆಯು ಬೇಂದ್ರೆ
ಕಾವ್ಯದಲ್ಲಿ ಸಫಲವಾಗಿದೆ ಎಂದು ಹೇಳಬಹುದು.
(ಈ ಲೇಖನವು ‘ಪದಾರ್ಥಚಿಂತಾಮಣಿ’ಯಿಂದ ಪ್ರಕಟವಾದ ‘ಪದಸಂಸ್ಮರಣ-೨೦೧೬’ರಲ್ಲಿ ಪ್ರಕಟವಾಗಿದೆ. ‘ಪದಾರ್ಥಚಿಂತಾಮಣಿ’ಗೆ ನಾನು ಕೃತಜ್ಞನಾಗಿದ್ದೇನೆ.)
(ಈ ಲೇಖನವು ‘ಪದಾರ್ಥಚಿಂತಾಮಣಿ’ಯಿಂದ ಪ್ರಕಟವಾದ ‘ಪದಸಂಸ್ಮರಣ-೨೦೧೬’ರಲ್ಲಿ ಪ್ರಕಟವಾಗಿದೆ. ‘ಪದಾರ್ಥಚಿಂತಾಮಣಿ’ಗೆ ನಾನು ಕೃತಜ್ಞನಾಗಿದ್ದೇನೆ.)
9 comments:
ಆ ಕ್ಷಣದಾಗ ಅವು ಅವರಿಗೆ ಹೆಂಗ ಹರದು ಬರ್ತಿದ್ದವೋ? ಬರುದು ಹೆಚ್ಚಿಂದಿರಲಿಕ್ಕಿಲ್ಲ ಆದರ ಅದನ್ನ ಬರಹದಾಗ ಹೆಂಗ ತರ್ತಿದ್ದ್ರೊ -ಅದು ಪವಾಡ.
ತಲ್ಯಾಗ ಇದ್ದದ್ದನ್ನ ಕೈಗೆ ತಂದು ಬರಿಯೋದ್ರೊಳೊಗ ಬೇಂದ್ರೆ ಅವರ ಜೋಡಿ ಬ್ಯಾರೆ ಯಾರ್ನೂ ತುಲನೆ ಮಾಡು ಹಂಗಿಲ್ಲ.
~ಅನಿಲ
ಧನ್ಯವಾದಗಳು, ಅನಿಲರೆ. ಒಬ್ಬ ಕವಿಯ ಬಗೆಗೆ ವಿಮರ್ಶಕನೊಬ್ಬನು ಹೇಳಿದ ಮಾತು ನೆನಪಾಗುತ್ತದೆ. ‘ಅವರು ಕವನವನ್ನು ಬರೆಯುವಾಗ, ಪದಗಳು ಅವರ ಎದುರಿಗೆ ಬಂದು ಕುಣಿದಾಡುತ್ತಿದ್ದವಂತೆ; ನನ್ನನ್ನು ಆರಿಸಿಕೊ, ನನ್ನನ್ನು ಆರಿಸಿಕೊ ಎಂದು.’ ಬೇಂದ್ರೆಯವರಂತೂ ವರಕವಿಗಳು!
ವ್ಹಾಹ್ ವ್ಹಾಹ್...ಸುಂದರ, ಅತಿ ಸುಂದರ....ನಿನ್ನ ಉದರದೊಂದ ಹೂವ, ನಾವು ತಾವು, ಬಳ್ಳಿ ಮಾಡಗಳಂಥವು ಅಂಡಯ್ಯನಿಗೂ ಹೊಳೆದಿರಲಿಕ್ಕಿಲ್ಲ
ಸಚಿನರೆ,
ಶ್ಲೇಷಾರ್ಥಗಳಲ್ಲಿ, ವಿರುದ್ಧಾರ್ಥಗಳಲ್ಲಿ ಬೇಂದ್ರೆಯವರನ್ನು ಮೀರಿಸುವವರು ಬಹುಶಃ ಯಾರೂ ಇಲ್ಲ ಎಂದೆನಿಸುತ್ತದೆ. ಆ ವರಕವಿಯ ಪ್ರತಿಭೆಯ ಕೆಲವು ಉದಾಹರಣೆಗಳನ್ನಷ್ಟೇ ನನಗೆ ಇಲ್ಲಿ ಕೊಡಲು ಸಾಧ್ಯವಾಗಿದೆ.
ನಮಸ್ತೆ ಕಾಕಾ ,
ಎಂಥಾ ಸುಂದರವಾದ ನಿರೂಪಣೆ. ಗಾರುಡಿಗನ ಶಬ್ಧದಾಟಗಳನ್ನು ವಿವರವಾಗಿ ತಿಳಿಯಲು, ಅರಿಯಲು ನಿಮ್ಮಂಥ ವಿವರಣೆಕಾರರು ನಮ್ಮ ಹಾದಿಯ ಬೆಳಕಾಗುತ್ತಿದ್ದೀರಿ.
ನಮಸ್ಕಾರಗಳೊಂದಿಗೆ
ಸ್ವರ್ಣಾ
ಸ್ವರ್ಣಾ,
ಪರಸ್ಪರರು ಅರಿವನ್ನು ಹೆಚ್ಚಿಸಿಕೊಳ್ಳುತ್ತ ಸಾಗೋಣ!
ಬಹಳ ಒಳ್ಳೆಯ. ಆತ್ಮೀಯ ಬೇಂದ್ರೆ ವಾಚಕರೆ ಹಾಗೂ ಅಭಿಮಾನಿಗಳೆ ತಮ್ಮ ಜೊತೆ ಒಂದು ವಿಚಾರ ಹಂಚಿಕೊಳ್ಳುತ್ತಿದ್ದೇನೆ. ಬೇಂದ್ರೆ ಸಾಹಿತ್ಯ ಕುರಿತು ಹೆಚ್ಚು ಮೌಲ್ಯಯುತ ಲೇಖನಗಳನ್ನು ಬರೆದವರು ಕೀರ್ತಿನಾಥ ಕುತ೯ಕೋಟಿ ಯವರು.ಅವರು ಬೇಂದ್ರೆಯವರನ್ನು ಕುರಿತು ಬರೆದ ಸಾಹಿತ್ಯವು "ವಾಗಥ೯"ಎಂಬ ಹೆಸರಿನ ಕೃತಿಯೊಂದು ಶೀಘ್ರದಲ್ಲಿ ವಾಚಕರ ಕೈ ಸೇರಲಿದೆ. ಸುಮಾರು 900 ಪುಟಗಳ ಪುಸ್ತಕ.
ತುಂಬ ಆಸಕ್ತಿಕರ ವಿಚಾರ. ಈ ಕೃತಿಯನ್ನು ಪಡೆಯುವುದು ಹೇಗೆ?
ತುಂಬು ಹೃದಯದ ಧನ್ಯವಾದಗಳು
ಸಂಪನ್ಮೂಲ ಘಟಕಕ್ಕೆ..
Post a Comment