Saturday, March 19, 2016

ಶೂದ್ರಕನ ‘ಮೃಚ್ಛಕಟಿಕಮ್’-೧


ಶೂದ್ರಕನು ಸಂಸ್ಕೃತದಲ್ಲಿ ರಚಿಸಿದ ‘ಮೃಚ್ಛಕಟಿಕಮ್’ ಒಂದು ಅದ್ಭುತ ನಾಟಕ. ತೋರಿಕೆಗೆ ಇದು ಉಜ್ಜಯಿನಿಯ ಓರ್ವ ಬಡ ಬ್ರಾಹ್ಮಣ ಹಾಗು ಆ ನಗರದ ಓರ್ವ ಖ್ಯಾತ ಗಣಿಕೆ ಇವರ ನಡುವಿನ ಪ್ರಣಯದ ಕಥೆಯಾಗಿದೆ. ಈ ಕಥೆಯ ಮುಸುಕಿನಡಿಯಲ್ಲಿ ಶೂದ್ರಕನು ತನ್ನ ಕಾಲದ ಉಜ್ಜಯಿನಿಯ ಭ್ರಷ್ಟ ಸಮಾಜವ್ಯವಸ್ಥೆಯನ್ನು ಹಾಸ್ಯದ ಮೂಲಕ, ಅಪಹಾಸ್ಯದ ಮೂಲಕ, ವ್ಯಂಗ್ಯದ ಮೂಲಕ, ವಿಡಂಬನೆಯ ಮೂಲಕ ಬತ್ತಲಿಸಿದ್ದಾನೆ. ಇಷ್ಟೇ ಅಲ್ಲದೆ, ಸಮಾಜದ ಕೆಳವರ್ಗದ ಜನತೆಯು ವ್ಯವಸ್ಥೆಯ ವಿರುದ್ಧ ದಂಗೆ ಎದ್ದು ಪ್ರಭುತ್ವವನ್ನು ಕಿತ್ತೊಗೆಯುವ ಕತೆಯೂ (ಆಶಯವೂ) ಇಲ್ಲಿದೆ.

ಚಾರುದತ್ತನು ಉಜ್ಜಯಿನಿಯ ಓರ್ವ ಬ್ರಾಹ್ಮಣ. ಬ್ರಾಹ್ಮಣನಾದವನು ಅಧ್ಯಯನ, ಅಧ್ಯಾಪನ ಹಾಗು ಪೌರೋಹಿತ್ಯಗಳಲ್ಲಿ ತೊಡಗಿರಬೇಕಷ್ಟೆ?  ಈತನಾದರೊ ವಂಶಪಾರಂಪರಿಕವಾಗಿ ಬಂದ ವ್ಯಾಪಾರದಲ್ಲಿ ಅಂದರೆ ವೈಶ್ಯವೃತ್ತಿಯಲ್ಲಿ ತೊಡಗಿಸಿಕೊಂಡವನು. ಈತನ ಬಳಿಯಲ್ಲಿ ಹಣವಿದ್ದಾಗ, ಈತನ ಸುತ್ತಲು ಗೆಳೆಯರಿದ್ದರು. ಆದರೆ ಉದಾರಹೃದಯದವನೂ, ಸಚ್ಛೀಲನೂ ಆದ ಚಾರುದತ್ತನು ತನ್ನ ಸಂಪತ್ತನ್ನೆಲ್ಲ ಕಳೆದುಕೊಂಡು ದರಿದ್ರಾವಸ್ಥೆಗೆ ಇಳಿದಿದ್ದಾನೆ. ಕೇವಲ ಬೆರಳೆಣಿಕೆಯಷ್ಟು ಗೆಳೆಯರು ಈತನಲ್ಲಿ ನಿಷ್ಠೆಯ ಸ್ನೇಹವನ್ನು ಇರಿಸಿಕೊಂಡಿದ್ದಾರೆ. ಆದರೆ ಈತನ ಬಗೆಗೆ ಇಡೀ ಉಜ್ಜಯಿನಿಯ ಪ್ರಜೆಗಳಿಗೆ ಗೌರವವಿದೆ. ‘ಮೃಚ್ಛಕಟಿಕಮ್’ ನಾಟಕದ ನಾಯಕನೇ ವರ್ಣಾಶ್ರಮಧರ್ಮವನ್ನು ಉಲ್ಲಂಘಿಸಿ, ವೈಶ್ಯವೃತ್ತಿಯನ್ನು ಅವಲಂಬಿಸಿದ್ದಾನೆ ಎನ್ನುವುದನ್ನು ಗಮನಿಸಬೇಕು.

ಈತನಲ್ಲಿ ಅನುರಕ್ತಳಾದವಳು ಉಜ್ಜಯಿನಿಯ ಅತ್ಯಂತ ಬೇಡಿಕೆಯ ಗಣಿಕೆ ವಸಂತಸೇನೆ.  ಚಾರುದತ್ತನ ಔದಾರ್ಯ ಹಾಗು ಸುಶೀಲತೆಗೆ ಮರುಳಾದವಳು. ಒಂದು ಸಲ ಅಕಸ್ಮಾತ್ತಾಗಿ ಉಪವನವೊಂದರಲ್ಲಿ ಚಾರುದತ್ತನನ್ನು ನೋಡಿದಾಗಿನಿಂದ, ಅವನ ಮಿಲನಕ್ಕಾಗಿ ಕಾತರಿಸುತ್ತಿರುವವಳು.  ತನ್ನ ಮೇಲೆ ಚಿನ್ನವನ್ನು ಸುರಿಯಲು ಸಿದ್ಧನಾದ ರಾಜನ ಶ್ಯಾಲಕನನ್ನು (ಹೆಂಡತಿಯ ತಮ್ಮನನ್ನು) ತಿರಸ್ಕರಿಸಿ, ಇವಳು ಅವನ ಹಗೆಯನ್ನು ಕಟ್ಟಿಕೊಂಡಿದ್ದಾಳೆ. ಇದು ವೇಶ್ಯಾವೃತ್ತಿಗೆ ವಿರುದ್ಧವಾದ ಧರ್ಮವೆಂದೇ ಹೇಳಬೇಕು.

ರಾಜನ ಶ್ಯಾಲಕ ಶಕಾರನು ಹುಂಬ ಶಿರೋಮಣಿ. ವಸಂತಸೇನೆಯಿಂದ ತಿರಸ್ಕೃತನಾದ ಇವನು, ಚಾರುದತ್ತ ಹಾಗು ವಸಂತಸೇನೆಯ ಮೇಲೆ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ.  ಚಾರುದತ್ತನನ್ನು ಭೆಟ್ಟಿಯಾಗಲು, ವಸಂತಸೇನೆಯು ಉಪವನಕ್ಕೆ ಬಂದಾಗ, ಅವಳ ಕುತ್ತಿಗೆ ಹಿಚುಕುತ್ತಾನೆ. ಚಾರುದತ್ತನ ಮೇಲೆ ಕೊಲೆಯ ಆರೋಪವನ್ನು ಹೊರಿಸುತ್ತಾನೆ.

ನ್ಯಾಯದೇವತೆಯು ಹುಟ್ಟುಕುರುಡಿ ತಾನೆ? ಚಾರುದತ್ತನ ಮೇಲಿರುವ ಆರೋಪ ಸಿದ್ಧವಾಗುತ್ತದೆ. ಶಿಕ್ಷೆಯ ಪ್ರಮಾಣವನ್ನು ಮಹಾರಾಜನೇ ನಿರ್ಧರಿಸಬೇಕು. ಆತನು ಚಾರುದತ್ತನನ್ನು ಶೂಲಕ್ಕೇರಿಸುವ ನಿರ್ಣಯವನ್ನು ಹೇಳುತ್ತಾನೆ. ಚಾರುದತ್ತನನ್ನು ವಧಾಸ್ಥಾನಕ್ಕೆ ಕರೆದುಕೊಂಡು ಹೋಗುತ್ತಿರುವಾಗ, ಚಾರುದತ್ತನ ಹೆಂಡತಿ ಧೂತಾದೇವಿಯು ಅಗ್ನಿಪ್ರವೇಶ ಮಾಡಲು ಸಿದ್ಧಳಾಗುತ್ತಾಳೆ.

ಆದರೆ ವಸಂತಸೇನೆಯು ಮೂರ್ಛೆ ಹೋಗಿರುತ್ತಾಳೆಯೇ ಹೊರತು, ಸತ್ತಿರುವದಿಲ್ಲ. ಓರ್ವ ಬೌದ್ಧ ಭಿಕ್ಷುವು ಅವಳನ್ನು ಉಪಚರಿಸಿ, ಬದುಕಿಸುತ್ತಾನೆ. ಅವಳು ಧಾವಿಸಿ, ವಧಾಸ್ಥಾನಕ್ಕೆ ಬರುತ್ತಾಳೆ. ಶಕಾರನ ಕುಟಿಲತೆ ಬಯಲಿಗೆ ಬರುತ್ತದೆ. ಚಾರುದತ್ತನ ವಧೆಯು ತಪ್ಪುತ್ತದೆ.

ಈ ನಡುವೆ, ಮಹಾರಾಜನ ವಿರುದ್ಧ ಸಾಮಾನ್ಯ ಜನತೆ ದಂಗೆ ಏಳುತ್ತದೆ. ಮಹಾರಾಜನ ಕೊಲೆಯಾಗುತ್ತದೆ. ದಂಗೆಯ ನಾಯಕನು ಸಿಂಹಾಸನವನ್ನು ಏರುತ್ತಾನೆ. ಚಾರುದತ್ತನಿಗೆ ಮನ್ನಣೆ ಸಿಗುತ್ತದೆ. ವಸಂತಸೇನೆಗೆ ಗೌರವ ಪ್ರಾಪ್ತಿಯಾಗುತ್ತದೆ. ನಾಟಕವು ಸುಖಾಂತವಾಗುತ್ತದೆ.

ಇದಿಷ್ಟು ನಾಟಕದ ಅಸ್ಥಿಪಂಜರ. ಇಷ್ಟೇ ಹೇಳಿದರೆ, ಇದು ಒಂದು ‘ಪತ್ತೇದಾರಿ ನಾಟಕ’ದಂತೆ ಭಾಸವಾಗಬಹುದೇನೊ? ಈ ನಾಟಕಕ್ಕೆ ‘ಮೃಚ್ಛಕಟಿಕಮ್’ (ಮಣ್ಣಿನ ಆಟದ ಬಂಡಿ) ಎನ್ನುವ ಶೀರ್ಷಿಕೆಯನ್ನು ಕೊಟ್ಟಿರುವ ಸಮಂಜಸತೆಯೂ  ಗೊತ್ತಾಗುವದಿಲ್ಲ. ಈ ನಾಟಕದ ಪ್ರತಿಯೊಂದು ಅಂಕವನ್ನು ವಿಶ್ಲೇಷಿಸುತ್ತ ಹೋದರೆ ಮಾತ್ರ, ನಾಟಕದ ಶ್ರೇಷ್ಠತೆ ಅರಿವಿಗೆ ಬರುತ್ತದೆ!

‘ಮೃಚ್ಛಕಟಿಕಮ್’ ನಾಟಕ ಕೇವಲ ತನ್ನ ತಿರುಳಿನ ಕಾರಣಕ್ಕಾಗಿ ಮಾತ್ರವಲ್ಲ, ತನ್ನ ರಚನಾತಂತ್ರದ ಮೂಲಕವೂ ಅದ್ಭುತ ನಾಟಕವಾಗಿದೆ. ಇಲ್ಲಿ ಬರುವ ಅನೇಕ ಪಾತ್ರಗಳು ಹಾಗು ಆ ಪಾತ್ರಗಳ ಕ್ರಿಯೆಗಳು ಒಂದರಲ್ಲೊಂದು ಹಾಸುಹೊಕ್ಕಾಗಿರುವದನ್ನು ನೋಡಿದಾಗ,  ನಾಟಕವನ್ನು ಮುನ್ನಡೆಯಿಸುವದನ್ನು ಹಾಗು ನಾಟಕಕ್ಕೆ ತಿರುವು ಕೊಡುವುದನ್ನು ನೋಡಿದಾಗ, ಇಂತಹ ನಾಟಕ, ಬಹುಶಃ ಜಗತ್ತಿನ ಯಾವ ಭಾಷೆಯಲ್ಲಿಯೂ ಇರಲಿಕ್ಕಿಲ್ಲ ಎನಿಸುವುದು.

6 comments:

ಚುಕ್ಕಿಚಿತ್ತಾರ said...

ಕಾಕ ..
ಮೃಚ್ಚಕಟಿಕದ ಅಸ್ತಿಪಂಜರ ತೋರಿಸಿ ಅದರ ಚರ್ಮ ಮಾಂಸದ ಆಸೆಯನ್ನೂ ಹುಟ್ಟಿಸಿದ್ದೀರಿ.ನಾನು ಸಿನಿಮ ನೋಡಿದ್ದರೂ ಕಥೆ ಪೂರ ನೆನಪಿಲ್ಲ.. ಚಿಕ್ಕ ಚೊಕ್ಕ ವಿವರಣೆಗೆ ಧನ್ಯವಾದಗಳು.

sunaath said...

ಚುಕ್ಕಿ, ಧನ್ಯವಾದಗಳು.
ನೀವು ಕಾರ್ನಾಡರ ನಿರ್ದೇಶನದ ‘ಉತ್ಸವ’ ಹಿಂದೀ ಚಿತ್ರವನ್ನು ನೋಡಿರಬಹುದು. ಮೃಚ್ಛಕಟಿಕಮ್ ನಾಟಕವನ್ನು ಪೂರಾ ಕೆಡಿಸಿ ಹಾಕಿದ್ದಾರೆ ಕಾರ್ನಾಡರು.

ರಾಘವೇಂದ್ರ ಜೋಶಿ said...

ಸರ್,
ತುಂಬ ವರುಷಗಳ ಹಿಂದೆ ಕೇಳಿ, ಮರೆತೂ ಹೋಗಿದ್ದ ಕತೆಯಿದು.
ಇಷ್ಟರಲ್ಲೇ ಮುಗಿಸಿಬಿಟ್ಟಿರಾ ಅಂತ ಬೇಸರವಾಗಿತ್ತು. ಭಾಗ-೧ ಅಂತ ಬರೆದಿದ್ದನ್ನು ನೋಡಿ ಖುಷಿಯಾಯಿತು. ಇದನ್ನೆಲ್ಲ ನಿಮ್ಮ ಬರಹದಲ್ಲಿ ಓದುವದೇ ಒಂದು ಸಂತಸ. ಮುಂದಿನ ಭಾಗಗಳನ್ನೂ ನೋಡುವೆ. :-)
-Rj

prabhamani nagaraja said...

ಎ೦ದೋ ಕೇಳಿ ತಿಳಿದಿದ್ದ, ಕಾಲೇಜಿನಲ್ಲಿದ್ದಾಗ ಆ ನಾಟಕವನ್ನು ನೋಡಿ ಆನ೦ದಿಸಿದ್ದ ನೆನಪುಗಳನ್ನು ಮರುಕಳಿಸಿದ್ದೀರಿ ಸರ್, ನಿಮ್ಮ ಶೈಲಿಯೇ ಬಹಳ ಚೆನ್ನ! ಮು೦ದಿನ ಭಾಗಕ್ಕಾಗಿ ಕಾಯುತ್ತೇನೆ.

sunaath said...

RJ,
ಮೃಚ್ಛಕಟಿಕಮ್ ನಾಟಕದ ಚೆಲುವಿನ ವಿಶ್ಲೇಷಣೆಯನ್ನು ಮಾಡುವುದು ನನಗೆ ಕಷ್ಟದ ಕೆಲಸವೇ ಸೈ. ಆದರೂ ಪ್ರಯತ್ನಿಸುತ್ತಿದ್ದೇನೆ.

sunaath said...

ಪ್ರಭಾಮಣಿಯವರೆ,
ಧನ್ಯವಾದಗಳು. ಈ ನಾಟಕವನ್ನು ನೀವು ನೋಡಿದ್ದೀರಿ ಎಂದು ತಿಳಿಯಿತು. ಕಾಲೇಜು ನಾಟಕವೆಂದ ಮೇಲೆ, ಬಹುಶಃ ಸಂಕ್ಷೇಪಿಸಿ ಆಡಿರಬಹುದು. ಪೂರ್ಣ ನಾಟಕವು ಮನರಂಜನೀಯವಾಗಿದೆ.