Tuesday, April 5, 2016

ಮೃಚ್ಛಕಟಿಕಮ್-೩ಉಜ್ಜಯಿನಿಯು ವಿಶಾಲವಾದ ಒಂದು ಸಾಮ್ರಾಜ್ಯದ ರಾಜಧಾನಿಯಾಗಿತ್ತು.  ಶ್ರೇಷ್ಠ ಕವಿಗಳು, ಪಂಡಿತರು, ಸಾಹಿತ್ಯರಸಿಕರು ಇದ್ದಂತಹ ನಗರವಿದು. ಒಂದು ಕಾಲಕ್ಕೆ ಕಾಲೀದಾಸನಂತಹ ಕವಿ ಹಾಗು ಭೋಜರಾಜನಂತಹ ಅರಸನಾಳಿದ ನಾಡಿದು. ನಮ್ಮ ನಾಟಕದ ನಾಯಕನಾದ, ಬಡತನದಲ್ಲಿಯೂ ಔದಾರ್ಯವನ್ನು ಮೆರೆಯುವ, ಕುಲೀನ ಹಾಗು ಗೌರವಸ್ಥನಾದ ಚಾರುದತ್ತನಂತಹ ಸದ್ಗೃಹಸ್ಥರ ಬೀಡಿದು.  ಶಕಾರನಂತಹ ರಾಜಸಂಬಂಧಿಗಳ ದುಂಡಾವರ್ತನೆಯು ಕಾಲಕ್ರಮೇಣ ಈ ನಗರದಲ್ಲಿ ತಲೆದೋರಿರಬೇಕು. ಇದು ಉಜ್ಜಯಿನಿಯ ಒಂದು ಮುಖ. ಈ ಮುಖದ ಪರಿಚಯ ನಮಗೆ ಮೊದಲನೆಯ ಅಂಕದಲ್ಲಿ ಆಯಿತು.

ಈ ನಗರಕ್ಕೆ ಇನ್ನೂ ಒಂದು ಮುಖವಿತ್ತು. ಹಾಡುಹಗಲೇ ಜೂಜಾಡುವ ನಾಗರಿಕರು, ಶಾಸನವನ್ನು ತಮ್ಮ ಕೈಯಲ್ಲೇ ತೆಗೆದುಕೊಳ್ಳುವ ಜೂಜುಕಟ್ಟೆಯ ಒಡೆಯರು ಇಂಥವರೂ ಈ ನಗರದಲ್ಲಿ ವಾಸಿಸುತ್ತಿದ್ದರು. ವೇಶ್ಯೆಯರಂತೂ ಈ ನಗರದ ಪ್ರಮುಖ ಆಕರ್ಷಣೆಯಾಗಿದ್ದರು. (ರಾಜ್ಯದ ಬೊಕ್ಕಸಕ್ಕೆ ವೇಶ್ಯೆಯರು ಸಹ  ತೆರಿಗೆಯನ್ನು ಕಟ್ಟುವ ಪದ್ಧತಿ ಆ ಕಾಲದಲ್ಲಿ ಇತ್ತು ಎನಿಸುತ್ತದೆ.)

ಮೃಚ್ಛಕಟಿಕಮ್ ನಾಟಕದ  ಎರಡನೆಯ ಅಂಕದಲ್ಲಿ ನಾಟಕಕಾರನು ನಮಗೆ ಉಜ್ಜಯಿನಿಯ ಈ ಅಪರಾಧೀ ಮುಖದ ಪರಿಚಯ ಮಾಡಿಸುತ್ತಾನೆ. ಆದರೆ ಎರಡನೆಯ ಅಂಕದ ಪ್ರಾರಂಭವನ್ನು ಮಾಡುವುದು ಹೇಗೆ? ನಾಟಕಕಾರನು ಮತ್ತೆ ಇಲ್ಲಿ ತನ್ನ ಕೌಶಲ್ಯವನ್ನು ತೋರಿಸಿದ್ದಾನೆ. ಶಕಾರನ ಏರಾಟವನ್ನು ಈಗ ತಾನೇ ನೋಡಿದ ಪ್ರೇಕ್ಷಕರಿಗೆ, ಅಪರಾಧೀ ದೃಶ್ಯಗಳನ್ನು ಪ್ರಾರಂಭದಲ್ಲಿಯೇ ತೋರಿಸುವುದು ಸಮಂಜಸವಲ್ಲ ಎನ್ನುವುದು ನಾಟಕಕಾರನ ಭಾವನೆಯಾಗಿರಬಹುದು. ಅದೂ ಅಲ್ಲದೆ, ಚಾರುದತ್ತನ ಬಗೆಗೆ ವಸಂತಸೇನೆಯಲ್ಲಿ ಮೊಳೆತ ಅನುರಾಗವು ಅಧಿಕಾಧಿಕವಾಗುತ್ತ ನಡೆದಿದೆ ಎನ್ನುವುದು ಪ್ರೇಕ್ಷಕನಿಗೆ ನಿಸ್ಸಂದೇಹವಾಗಿ ಅರಿವಾಗಬೇಕು. ವಸಂತಸೇನೆಯು ಅದನ್ನು ತನ್ನ ಆಪ್ತಸಖಿಯ ಎದುರಿಗೆ ಅರೆಲಜ್ಜೆಯೊಂದಿಗೆ ಆದರೆ ನಿಸ್ಸಂಕೋಚವಾಗಿ ವ್ಯಕ್ತಪಡಿಸಬೇಕು. ಆದುದರಿಂದ ಎರಡನೆಯ ಅಂಕವು ವಸಂತಸೇನೆಯ ಹಾಗು ಅವಳ ಆಪ್ತಸಖಿಯ ಸರಸಸಲ್ಲಾಪದೊಂದಿಗೆ ಪ್ರಾರಂಭವಾಗುತ್ತದೆ. ಆಪ್ತಸಖಿಯ ವಿನೋದದ ಮಾತುಗಳು ಪ್ರೇಕ್ಷಕರನ್ನು ರಂಜಿಸಲೂ ಸಹಾಯವಾಗುತ್ತವೆ. ವಸಂತಸೇನೆಯು ಚಾರುದತ್ತನಿಗೆ ಮರುಳಾಗಿರುವುದು ಈ ಆಪ್ತಸಲ್ಲಾಪದ ಮೂಲಕ ತಿಳಿಯುತ್ತದೆ. ಪ್ರೇಕ್ಷಕರು ಈ ರಂಜನೀಯ ದೃಶ್ಯದಲ್ಲಿ ಸುಖವಾಗಿ ಮುಳುಗಿರುವಾಗ, ಪರದೆಯ ಹಿಂದೆ ಗದ್ದಲದ ಸದ್ದು ಕೇಳಿ ಬರುತ್ತದೆ. ಅದರ ಜೊತೆಗೆ ಪರದೆಯ ಮುಂದೆ ಈ ದೃಶ್ಯವು ಕಾಣಿಸುತ್ತದೆ:

ಜೂಜುಖೋರನೊಬ್ಬನು (--ಆತನ ಹೆಸರು ಸಂವಾಹಕ--) ಜೂಜಿನಲ್ಲಿ ಸೋತು, ಜೂಜಿನ ಅಡ್ಡೆಯ ಒಡೆಯನಾದ ಮಾಥುರನಿಗೆ ಹಣ ಕೊಡಲಾಗದೆ, ಓಡಿ ಹೋಗುತ್ತಿರುತ್ತಾನೆ. ಮಾಥುರ ಹಾಗು ಮತ್ತೊಬ್ಬ ಜೂಜುಖೋರನು ಅವನನ್ನು ಅಟ್ಟಿಸಿಕೊಂಡು ಬಂದು ಹೊಡೆಯುತ್ತಿರುತ್ತಾರೆ. ಇದೆಲ್ಲವನ್ನೂ ನಾವು ಪಡದೆಯ ಮುಂದೆ ನೋಡುತ್ತೇವೆ.

ದರ್ದುರಕ ಎನ್ನುವ ಮತ್ತೊಬ್ಬ ಜೂಜುಖೋರನು ಆ ಸಮಯದಲ್ಲಿ ಅಲ್ಲಿಗೆ ಬಂದು ಸಂವಾಹಕನನ್ನು ರಕ್ಷಿಸುತ್ತಾನೆ. ದರ್ದುರಕ ಹಾಗು ಜೂಜುಖೋರರಿಗೆ ಹೊಡೆದಾಟ ನಡೆದಾಗ, ಸಂವಾಹಕನು ಕಣ್ಮರೆಯಾಗಿ, ಅಲ್ಲಿಯೇ ಇದ್ದ  ವಸಂತಸೇನೆಯ ಮನೆಯಲ್ಲಿ ನುಸುಳುತ್ತಾನೆ. ಜೂಜುಕಟ್ಟೆಯ ಒಡೆಯನಾದ ಮಾಥುರ ಹಾಗು ಅವನ ಜೊತೆಗಾರನು ಸಂವಾಹಕನಿಗಾಗಿ ಕಾಯುತ್ತ, ವಸಂತಸೇನೆಯ ಮನೆಯ ಬಾಗಿಲಲ್ಲಿ ಕಾಯುತ್ತ ನಿಲ್ಲುತ್ತಾರೆ.

ದರ್ದುರಕನ ಪ್ರವೇಶದಿಂದಾಗಿಯೇ, ಸಂವಾಹಕನಿಗೆ ತಪ್ಪಿಸಿಕೊಳ್ಳುವುದು ಸಾಧ್ಯವಾಯಿತು ಎನ್ನುವುದೇನೊ ನಿಜ.  ಆದರೆ ದರ್ದುರಕನು ಬಾರದಿದ್ದರೂ ಸಹ, ಸಂವಾಹಕನು, ಮಾಥುರನ ಕಣ್ಣು ತಪ್ಪಿಸಿ, ವಸಂತಸೇನೆಯ ಮನೆಯಲ್ಲಿ ನುಸಳಬಹುದಿತ್ತಲ್ಲ? ನಾಟಕಕಾರನು ದರ್ದುರಕನ ಪ್ರಸಂಗವನ್ನು ಸೃಷ್ಟಿಸಿದ್ದು ಏಕೆ? ಈ ಪ್ರಸಂಗಕ್ಕೆ ಒಂದು ಸಮಾಂತರ ಕಾರಣವಿದೆ.

ಉಜ್ಜಯಿನಿಯ ರಾಜನ ದುರಾಡಳಿತದಿಂದ ಸಾಮಾನ್ಯ ಪ್ರಜೆಗಳೆಲ್ಲ ಕ್ಷುಬ್ಧರಾಗಿದ್ದರು. ರಾಜನ ವಿರುದ್ಧ ದಂಗೆ ಏಳಲು ಅವರು ಸಿದ್ಧರಾಗುತ್ತಿದ್ದರು. ಆರ್ಯಕಎನ್ನುವ ಗೊಲ್ಲರ ಹುಡುಗನು ಇವರ ಮುಂದಾಳು. ಇದನ್ನು ಸಾಮಾನ್ಯ ಜನತೆಯ ಕ್ರಾಂತಿ (proletariat revolution) ಎನ್ನೋಣವೆ?

ಮಾಥುರನ ಜೊತೆಗೆ ತಾನು ಜಗಳವಾಡಿದ ಬಳಿಕ ಉಜ್ಜಯಿನಿಯಲ್ಲಿಇರುವದಕ್ಕಿಂತ  ಈ ಬಂಡುಗಾರ ಅರ್ಯಕನ  ಜೊತೆ ಸೇರುವುದು ಲೇಸೆಂದು ದರ್ದುರಕನು ಭಾವಿಸುತ್ತಾನೆ. ಈ ರೀತಿಯಲ್ಲಿ ರಾಜನ ವಿರುದ್ಧದ ಕ್ರಾಂತಿಗೆ ಸಾಮಾನ್ಯರ ಬೆಂಬಲ ಹೆಚ್ಚುತ್ತ ಹೋಗುವುದನ್ನು ನಾಟಕಕಾರನು ತೋರಿಸ ಬಯಸುತ್ತಾನೆ.

ಮಾಥುರನಿಂದ ತಪ್ಪಿಸಿಕೊಂಡು ವಸಂತಸೇನೆಯ ಮನೆಯಲ್ಲಿ ನುಸುಳಿದ ಸಂವಾಹಕನು ಅವಳಲ್ಲಿ ಆಶ್ರಯ ಕೋರುತ್ತಾನೆ. ಈತನು ಒಂದು ಕಾಲದಲ್ಲಿ ಚಾರುದತ್ತನ ಸೇವಕನಾಗಿದ್ದನು ಎನ್ನುವುದನ್ನು ಕೇಳಿದ ವಸಂತಸೇನೆಯು, ಜೂಜುಕಟ್ಟೆಯ ಒಡೆಯನಾದ ಮಾಥುರನಿಗೆ ತನ್ನ ಆಭರಣವನ್ನು ಕೊಟ್ಟು ಸಂವಾಹಕನನ್ನು ಋಣಮುಕ್ತಗೊಳಿಸುತ್ತಾಳೆ.

ನೀವು ಒಂದು ವಸ್ತುವನ್ನು ಪ್ರೀತಿಸುತ್ತಿದ್ದರೆ ಅಥವಾ ದ್ವೇಷಿಸುತ್ತಿದ್ದರೆ, ಆ ವಸ್ತುವಿಗೆ ಸಂಬಂಧಿಸಿದ ಇತರ ವಸ್ತುಗಳನ್ನೂ ಅದೇ ಭಾವನೆಯಿಂದ ನೋಡುತ್ತೀರಿ ಎನ್ನುವುದು ಒಂದು ಮನಃಶಾಸ್ತ್ರೀಯ ಸತ್ಯ. ವಸಂತಸೇನೆಗೆ ಚಾರುದತ್ತನ ಮೇಲಿದ್ದ ಅಭಿಮಾನವು ಆತನ ಸೇವಕನಾಗಿದ್ದ ಸಂವಾಹಕನ ನೆರವಿಗೆ ಬರಲು ಪ್ರೇರೇಪಿಸುತ್ತದೆ ಎನ್ನುವುದನ್ನು ನಾವು ಈ ಕ್ರಿಯೆಯಲ್ಲಿ ನೋಡಬಹುದು.

ಸಂವಾಹಕನು ಸೇವಾಜೀವನ ಅಥವಾ ಜೂಜುಗಾರಿಕೆ ಇವೆರಡೂ ಕಷ್ಟಕರವೆಂದು ತಿಳಿಯುತ್ತಾನೊ ಏನೊ? ಯಾಕೆಂದರೆ, ತಾನು ಇನ್ನು ಮೇಲೆ ಬೌದ್ಧ ಭಿಕ್ಷುವಾಗುತ್ತೇನೆ ಎಂದು ಹೇಳಿ ಹೋಗುತ್ತಾನೆ. ಸೋಮಾರಿಗಳು ಭಿಕ್ಷಾಟನೆಯ ಸುಖಜೀವನವನ್ನು (!) ಆರಿಸಿಕೊಳ್ಳುತ್ತಿದ್ದರು ಎನ್ನುವುದು ನಾಟಕಕಾರನ ವ್ಯಂಗ್ಯ ಹೇಳಿಕೆಯಾಗಿರಬಹುದು! ಏನೇ ಆದರೂ ಈ ಸಂವಾಹಕನು ಮುಂದೊಮ್ಮೆ ವಸಂತಸೇನೆಯ ನೆರವಿಗೆ ಬಂದು ಅವಳ ಋಣವನ್ನು ತೀರಿಸುತ್ತಾನೆ. ಈ ರೀತಿಯಾಗಿ, ‘ಮೃಚ್ಛಕಟಿಕಮ್ನಾಟಕದಲ್ಲಿ ಬರುವ ಪ್ರತಿಯೊಂದು ಪಾತ್ರವು, ನಾಟಕವನ್ನು ಮುಂದುವರೆಸಲು, ನಾಟಕಕ್ಕೆ ತಿರುವು ಕೊಡಲು ಕಾರಣವಾಗುವುದು ನಾಟಕಕಾರನ ಅದ್ಭುತ ಪ್ರತಿಭೆಯನ್ನು ತೋರಿಸುತ್ತದೆ.

ವಸಂತಸೇನೆಯು ಒಂದು ಆನೆಯನ್ನು ಸಾಕಿರುತ್ತಾಳೆ. ಆನೆಯನ್ನು ಸಾಕಲು ಅರ್ಹತೆ ಉಳ್ಳವರು ಯಾರು? ರಾಜರು, ಮಠಾಧೀಶರು ಹಾಗು ಶ್ರೀಮಂತರು. ಓರ್ವ ಗಣಿಕೆ ಸಹ ಆನೆಯನ್ನು ಸಾಕಬೇಕಾದರೆ, ಉಜ್ಜಯಿನಿಯಲ್ಲಿ ವೇಶ್ಯೆಯರ ಗಳಿಕೆ ಸಾಕಷ್ಟಿತ್ತು ಎನ್ನಬಹುದೆ ಅಥವಾ ವಸಂತಸೇನೆಯು ಸಿರಿವಂತಳಾದ ಗಣಿಕೆಯಾಗಿದ್ದಳು ಎನ್ನಬೇಕೆ?

ಈ ಆನೆಯು ಮದಿಸಿ, ರಾಜಬೀದಿಯಲ್ಲಿ ಧಾಂಧಲೆ ಹಾಕುತ್ತ ಸಾಗಿದಾಗ, ಅಲ್ಲಿದ್ದ ಓರ್ವ ಬೌದ್ಧ ಭಿಕ್ಷುವನ್ನು ಎಳೆದಾಡುತ್ತದೆ. ಕರ್ಣಪೂರಕ ಎನ್ನುವ ವ್ಯಕ್ತಿಯೊಬ್ಬನು ಆ ಆನೆಯನ್ನು ನಿಯಂತ್ರಿಸಿ, ಭಿಕ್ಷುವನ್ನು ಪಾರು ಮಾಡುತ್ತಾನೆ. ಆ ಸಮಯದಲ್ಲಿ, ಅಲ್ಲಿ ಹೋಗುತ್ತಿರುವ ಚಾರುದತ್ತನು ಕರ್ಣಪೂರಕನ ಸಾಹಸವನ್ನು ಮೆಚ್ಚಿ , ಅವನಿಗೆ ಏನಾದರೂ ಬಹುಮಾನವನ್ನು ಕೊಡಬೇಕೆಂದು ನೋಡುತ್ತಾನೆ. ಆದರೆ ತನ್ನ ಹತ್ತಿರ ಏನೂ ಇರದೇ ಇದ್ದುದರಿಂದ, ತಾನು ಹೊತ್ತುಕೊಂಡ ಶಾಲನ್ನೇ ಅವನ ಮೇಲೆ ಎಸೆಯುತ್ತಾನೆ. ಈ ಶಾಲಿನ ಮೇಲೆ ಚಾರುದತ್ತನ ಹೆಸರಿದೆ. (ಈ ಪ್ರಸಂಗವನ್ನು ನಾವು ರಂಗದ ಮೇಲೆ ನೋಡುವುದಿಲ್ಲ.) ಇದೆಲ್ಲವನ್ನೂ ಕರ್ಣಪೂರಕನಿಂದ ಕೇಳಿದ ವಸಂತಸೇನೆಯು, ಆತನಿಂದ ಶಾಲನ್ನು ಇಸಿದುಕೊಂಡು, ಆತನಿಗೆ ಆಭರಣಗಳನ್ನು ಬಹುಮಾನವಾಗಿ ಕೊಡುತ್ತಾಳೆ. ನಾವು ಮೇಲೆ ನೋಡಿದ ಮನಃಶಾಸ್ತ್ರೀಯ ಸತ್ಯದ ಮತ್ತೊಂದು ಉದಾಹರಣೆಯನ್ನು ಇಲ್ಲಿ ಮತ್ತೊಮ್ಮೆ ಕಾಣಬಹುದು. ಆದರೆ, ನಾಟಕಕಾರನು ಈ ಪ್ರಸಂಗವನ್ನು ಕೇವಲ ಮನಃಶಾಸ್ತ್ರೀಯ ಸತ್ಯವನ್ನು ತೋರಿಸಲು ಸೇರಿಸಿಲ್ಲ. ಈ ದೃಶ್ಯಗಳನ್ನು ನೋಡುತ್ತಿದ್ದಂತೆ ಚಾರುದತ್ತನ ಬಗೆಗೆ ವಸಂತಸೇನೆಗೆ ಇರುವ ನವಿರಾದ ಪ್ರೇಮಭಾವವನ್ನು ತೋರಿಸಲು ಸೃಜಿಸಲಾಗಿದೆ. ವಸಂತಸೇನೆಯ ಅನುರಾಗವು ಮಲ್ಲಿಗೆಯ ಹೂವಿನಂತಹ ಅನುರಾಗವು. ನವಿರಾದ ಪರಿಮಳವೇ ಈ ಅನುರಾಗದ ಲಕ್ಷಣ. ಇನ್ನು ಚಾರುದತ್ತನಿಗೆ ವಸಂತಸೇನೆಯ ಬಗೆಗಿರುವ ಅನುರಾಗವು ಸುಶೀಲವಾದ ಅನುರಾಗ. ಇದು ಅವನ ಗೌರವಯುತವಾದ, ಗಂಭೀರವಾದ ಮಾತುಗಳಲ್ಲಿ ಮುಂದೆ ವ್ಯಕ್ತವಾಗುತ್ತದೆ.

ಇಲ್ಲಿಯವರೆಗೂ ಚಾರುದತ್ತನು ಅವಳಲ್ಲಿ ತನಗೆ ಮೊಳೆತ ಅನುರಾಗವನ್ನು ಬಹಿರಂಗವಾಗಿ ವ್ಯಕ್ತ ಪಡಿಸಿಲ್ಲ, ಕೊನೆಯವರೆಗೂ ಪ್ರಕಟಿಸುವುದೂ ಇಲ್ಲ. ಚಾರುದತ್ತನ ಸುಶೀಲ ಸ್ವಭಾವವನ್ನು ನಾಟಕಕಾರನು ಈ ರೀತಿಯಾಗಿ ಪ್ರೇಕ್ಷಕರಿಗೆ ತೋರಿಸುತ್ತಾನೆ.

ಈ ಅಂಕದಲ್ಲಿ ನಾಟಕಕಾರನು ಉಜ್ಜಯಿನಿಯ ಆಪರಾಧೀ ಜೀವನದ ಒಂದು ನೋಟವನ್ನು ನಮ್ಮೆದುರಿಗೆ ಇಟ್ಟಿದ್ದಾನೆ. ವಸಂತಸೇನೆಗೆ ಚಾರುದತ್ತನಲ್ಲಿ ಇರುವ ಕೋಮಲ ಅನುರಾಗವನ್ನು ತೋರಿಸಿದ್ದಾನೆ. ರಾಜನ ವಿರುದ್ಧ ಬಲಗೊಳ್ಳುತ್ತಿರುವ ಕ್ರಾಂತಿಯ ಮುನ್ನೋಟವನ್ನು ನೀಡಿದ್ದಾನೆ. ಅಲ್ಲದೆ ಬೌದ್ಧ ಭಿಕ್ಷುಗಳ ಲೇವಡಿಯನ್ನೂ ಮಾಡಿದ್ದಾನೆ. ಈ ನಾಟಕಕಾರನು ಯಾವುದೇ ಪಾತ್ರವನ್ನು ಹಾಗು ಪ್ರಸಂಗವನ್ನು ಅನವಶ್ಯಕವಾಗಿ ನಾಟಕದಲ್ಲಿ ಸೇರಿಸುವದಿಲ್ಲವೆಂದು  ಮೊದಲೇ ಅಂದುಕೊಂಡಿದ್ದೇವೆ. ಬೌದ್ಧ ಭಿಕ್ಷುವಾದ ಸಂವಾಹಕನು ನಾಟಕದ ಎಂಟನೆಯ ಅಂಕದಲ್ಲಿ ಮಹತ್ತರವಾದ ಭೂಮಿಕೆಯೊಂದನ್ನು ನಿರ್ವಹಿದ್ದಾನೆ. ಅದಕ್ಕಾಗಿ ಎಂಟನೆಯ ಅಂಕದವರೆಗೆ ಕಾಯೋಣ. ಇದೀಗ ಎರಡನೆಯ ಅಂಕವು ಮುಗಿಯಿತು.

ಇನ್ನು ಮುಂದಿನ ಮೂರನೆಯ ಅಂಕವು ಒಂದು ಮಹತ್ವದ ಅಂಕ. ನಾಟಕಕ್ಕೆ ಅನಿರೀಕ್ಷಿತ ತಿರುವು ಸಿಗುವುದು ಈ ಅಂಕದಲ್ಲಿಯೇ. ಅಂಕವು ಪ್ರಾರಂಭವಾಗುವುದು ವಿನೋದ ಹಾಗು ರಂಜನೆಯ ಸ್ವಗತ ಸಂಭಾಷಣೆಯೊಂದಿಗೆ. ಈ ರಂಜನೆಯ ಪಾತ್ರಧಾರಿಯು ಮಾತ್ರ ಒಬ್ಬ ಕಳ್ಳನು!
...........................................................................................
ಆಂಗ್ಲ ನಾಟಕಕಾರ ಬರ್ನಾಡ್ ಶಾ^ ಹಾಗು ಕನ್ನಡದ ಖ್ಯಾತ ನಾಟಕಕಾರ ಶ್ರೀರಂಗ ಇವರ ನಾಟಕಗಳನ್ನು ಕೆಲವು ವಿಮರ್ಶಕರು ಬೈಠಕಶಾಲೆಯ ನಾಟಕಗಳು ಎಂದು ಕರೆಯುತ್ತಿದ್ದರು. ಇವರ ವೈಚಾರಿಕ ನಾಟಕಗಳಲ್ಲಿ  ಕೃತಿಗಿಂತ ಹೆಚ್ಚಾಗಿ ಮಾತುಗಳೇ ಇರುತ್ತಿದ್ದವು ಎನ್ನುವುದು ಇದಕ್ಕೆ ಕಾರಣವಾಗಿತ್ತು. ಶೂದ್ರಕನ ಮೃಚ್ಛಕಟಿಕಮ್ ನಾಟಕದಲ್ಲಿ ಕೃತಿ, ಉದ್ವೇಗ, ಹೊಡೆದಾಟ, ಭಯ, ಭೀಭತ್ಸ, ಕರುಣಾರಸ, ಕೊಲೆ, ಅನಿಶ್ಚಿತ ವಾತಾವರಣ ಇವೆಲ್ಲವೂ ತುಂಬಿವೆ. ಜೊತೆಜೊತೆಗೇ ಸರಸ ಸಂಭಾಷಣೆಗಳು, ಹಾಗು ಸಾಕಷ್ಟು ಗೀತೆಗಳೂ ಇವೆ. ಈ ನಾಟಕದಲ್ಲಿ ಕೆಳ ತರಗತಿಯಪಾತ್ರಗಳು ಮಾತನಾಡುವುದು ಪ್ರಾಕೃತ ಭಾಷೆಗಳಲ್ಲಿ, ಅವರು ಗೀತೆಗಳನ್ನು ಹಾಡುವುದೂ ಸಹ ಪ್ರಾಕೃತ ಭಾಷೆಯಲ್ಲಿಯೇ.

ಈ ನಾಟಕದಲ್ಲಿ ಎಂಟು ಬಗೆಯ ಪ್ರಾಕೃತಗಳನ್ನು ನಾಟಕಕಾರನು ಬಳಸಿದ್ದಾನೆ ಎಂದು ಮೂಲನಾಟಕವನ್ನು ಓದಿದವರು ಹೇಳುತ್ತಾರೆ. ಉಜ್ಜಯಿನಿಯು ಒಂದು ಕಾಲದಲ್ಲಿ ಅತ್ಯಂತ ಶ್ರೀಮಂತವಾದ ನಗರವಾಗಿದ್ದರಿಂದ, ಉಳ್ಳವರು, ಇಲ್ಲದವರು, ಪಂಡಿತರು, ಪಾಮರರು ಎಲ್ಲರೂ ಉಜ್ಜಯಿನಿಯೆಡೆಗೆ  ಸಾಗುತ್ತಿದ್ದರೆ ಆಶ್ಚರ್ಯವಿಲ್ಲ. ಆದುದರಿಂದ ಇಷ್ಟೆಲ್ಲ ಪ್ರಾಕೃತ ನುಡಿಗಳನ್ನು ಇಲ್ಲಿ ಬಳಸಲಾಗಿದೆ ಎಂದು ಊಹಿಸಬಹುದು.

ಇನ್ನು ತನ್ನನ್ನು ಶೂದ್ರಕ ಎಂದು ಕರೆದುಕೊಂಡ ನಾಟಕಕಾರನು, ಬಂಡಾಯದ ಮುಂದಾಳುವಾದ ಗೊಲ್ಲರ ಹುಡುಗನಿಗೆ ಆರ್ಯಕಎಂದು ಹೆಸರಿಸಿದ್ದಾನೆ. ಇದರಲ್ಲಿ ಏನಾದರೂ ವ್ಯಂಗ್ಯವಿದೆಯೆ ಅಥವಾ ವಿಶೇಷ ಅರ್ಥವಿದೆಯೆ?

ಉಜ್ಜಯಿನಿಯ ಬಗೆಗೆ ಮತ್ತೊಂದು ಮಾತು. ಭಾರತದ ಖಗೋಲಶಾಸ್ತ್ರಜ್ಞರು ಉಜ್ಜಯಿನಿಯ ರೇಖಾಂಶವನ್ನು ಶೂನ್ಯ ರೇಖಾಂಶ ಎಂದು ಗ್ರಹಿಸಿ, ಗ್ರಹಗಳ ಚಲನೆಯನ್ನು ನಿರ್ಧರಿಸುತ್ತಿದ್ದರು. (ಈಗ ನಾವು ಇಂಗ್ಲಂಡದ ಗ್ರೀನಿಚ್ ಮೀನ್ ಟೈಮ್ ಹಿಡಿದಂತೆ.) ಅದರಂತೆ ಲಂಕೆಯ ಅಕ್ಷಾಂಶವು ಭಾರತೀಯ ಖಗೋಲಜ್ಞರಿಗೆ ಶೂನ್ಯ ಅಕ್ಷಾಂಶವಾಗಿತ್ತು.
ಉಜ್ಜಯಿನಿಯು ಕೇವಲ ಸಾಹಿತ್ಯ ಹಾಗು ಲಲಿತ ಕಲೆಗಳಲ್ಲಿ ಮಾತ್ರವಲ್ಲ, ವಿಜ್ಞಾನದಲ್ಲೂ ಸಹ ಮುಂದುವರೆದಿತ್ತು ಎನ್ನುವುದನ್ನು ಇದು ತೋರಿಸುತ್ತದೆ.

(ಶತಾವಧಾನಿ ಗಣೇಶರು ಮೃಚ್ಛಕಟಿಕಮ್ದ ಬಗೆಗೆ ನೀಡಿದ ಉಪನ್ಯಾಸಮಾಲಿಕೆಯ ಅಂತರ್ಜಾಲ ಕೊಂಡಿಯನ್ನು ಶ್ರೀ ರಾಮಪ್ರಸಾದರು ಕಳುಹಿಸಿದ್ದಾರೆ. ವಿದ್ವತ್ಪೂರ್ಣವಾದ ಉಪನ್ಯಾಸಮಾಲಿಕೆಯನ್ನು ಕೇಳುವಂತಹ ಅವಕಾಶವನ್ನು ದೊರಕಿಸಿ ಕೊಟ್ಟದ್ದಕ್ಕಾಗಿ ಶ್ರೀ ರಾಮಪ್ರಸಾದರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಕೊಂಡಿಗಳು ಕೆಳಗಿನಂತಿವೆ:
https://www.youtube.com/watch?v=jJMaOMPP_yM
Part 2: https://www.youtube.com/watch?v=RFlGUx1nN7w
Part 3: https://www.youtube.com/watch?v=VlYGRKOqNhw))

No comments: