Sunday, May 29, 2016

ಮೃಚ್ಛಕಟಿಕಮ್-೧೦



ಅಂಕ ೯:
ಮೃಚ್ಛಕಟಿಕಮ್ ನಾಟಕದ ಮೊದಲಿನ ಎಂಟು ಅಂಕಗಳಲ್ಲಿ, ವಸಂತಸೇನೆ ಹಾಗು ಚಾರುದತ್ತರ ಪ್ರಣಯವು ಅರಳುವುದನ್ನು ನೋಡಿದೆವು. ಅದಕ್ಕೂ ಮುಖ್ಯವಾಗಿ, ಆ ಕಾಲದ ಉಜ್ಜಯಿನಿಯ ಸಾಮಾಜಿಕ ಸ್ಥಿತಿಗತಿಗಳನ್ನು ನೋಡಿದೆವು. ರಾಜನ ಸಂಬಂಧಿಗಳ ಏರಾಟವನ್ನು ಹಾಗು ಪ್ರಜೆಗಳ ಪ್ರತಿಭಟನೆಯ ಅಂಕುರವನ್ನು ಸಹ ಈ ಅಂಕಗಳಲ್ಲಿ ನೋಡಿದೆವು. ಒಂಬತ್ತನೆಯ ಅಂಕವು ಉಜ್ಜಯಿನಿಯಲ್ಲಿ ಆ ಸಮಯದಲ್ಲಿ ಪ್ರಚಲಿತವಿದ್ದ ನ್ಯಾಯವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುತ್ತದೆ.

ಉಜ್ಜಯಿನಿಯಲ್ಲಿ ನ್ಯಾಯವ್ಯವಸ್ಥೆಯು ಆಡಳಿತವ್ಯವಸ್ಥೆಯ ಅಂಗವಾಗಿರದೆ, ಸ್ವತಂತ್ರವ್ಯವಸ್ಥೆಯಾಗಿತ್ತು. ಸಾಕ್ಷಿಗಳು ಅಪರಾಧನಿರ್ಣಯದಲ್ಲಿ ಮಹತ್ವದ ಪಾತ್ರವನ್ನು ಆಡುತ್ತಿದ್ದರು. ಆದರೆ ಆಗಲೂ ಸಹ ದೊಡ್ಡ ಮನುಷ್ಯರು ನ್ಯಾಯಾಧೀಶರ ಮೇಲೆ ಪ್ರಭಾವವನ್ನು ಬೀರಲು ಶಕ್ತರಾಗಿದ್ದರು. ನ್ಯಾಯಾಲಯದಲ್ಲಿ ಅಪರಾಧಿ ಎಂದು ಸಿದ್ಧವಾದ ಬಳಿಕ ಯೋಗ್ಯವಾದ ಶಿಕ್ಷೆಯನ್ನು ಕೊಡುವುದು ರಾಜನ ಹೊಣೆಗಾರಿಕೆಯಾಗಿತ್ತು. ( ಈ ವ್ಯವಸ್ಥೆಯನ್ನು ಛತ್ರಪತಿ ಶಿವಾಜಿಯ ಕಾಲದಲ್ಲಿದ್ದ ಹಾಗು ತನ್ನಂತರ ಪೇಶವೆಯರ ಕಾಲದಲ್ಲಿದ್ದ ಮಹಾರಾಷ್ಟ್ರದ ನಿರ್ಭೀತ ಹಾಗು ನಿಷ್ಪಕ್ಷಪಾತ  ನ್ಯಾಯವ್ಯವಸ್ಥೆಗೆ ಹೋಲಿಸಿ ನೋಡಿರಿ. ಶಿವಾಜಿಯು ತನ್ನ ಮಗನಾದ ಸಂಭಾಜಿಗೆ ಸೆರೆಮನೆಯ ಶಿಕ್ಷೆಯನ್ನು ವಿಧಿಸಿದ್ದನು ಹಾಗು ಪೇಶವೆಯರ ಕಾಲದಲ್ಲಿದ್ದ ನ್ಯಾಯಮೂರ್ತಿ ರಾಮಾಶಾಸ್ತ್ರಿಯು ಆಳುವ ದೊರೆಯಾದ ಪೇಶವೆಗೆ ಮರಣದಂಡನೆಯನ್ನು ನೀಡಿದ್ದನು. )

ಒಂಬತ್ತನೆಯ ಅಂಕದ ಪ್ರಾರಂಭದಲ್ಲಿ, ಶೋಧನಕ ಎನ್ನುವ ನ್ಯಾಯಾಲಯದ ಸೇವಕನು ನ್ಯಾಯಾಲಯದಲ್ಲಿ ಪೀಠಗಳನ್ನು ಅಣಿ ಮಾಡುತ್ತಿರುವಾಗ, ಶಕಾರನು ಪ್ರವೇಶಿಸುತ್ತಾನೆ. ನ್ಯಾಯಾಧೀಶರು ಇನ್ನೂ ಬಂದಿಲ್ಲ. ಶಕಾರನು ನ್ಯಾಯಾಲಯದ ಹೊರಭಾಗದಲ್ಲಿ, ತನ್ನ ಯೋಜನೆಗಳನ್ನು ರೂಪಿಸಿಕೊಳ್ಳುತ್ತ, ಹಲ್ಲು ಕಡಿಯುತ್ತ, ಆತುರದಿಂದ ಕುಳಿತುಕೊಂಡಿದ್ದಾನೆ. ಆಷ್ಟರಲ್ಲಿ ನ್ಯಾಯಾಧೀಶರು ಹಾಗು ನ್ಯಾಯಾಲಯದ ಇತರ ಅಧಿಕಾರಿಗಳು ಪ್ರವೇಶಿಸುತ್ತಾರೆ.

ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ವಿಚಾರಣೆಯನ್ನು ಮೊದಲು ಕೈಗೆತ್ತಿಕೊಳ್ಳಲು ಬಯಸಿದ ನ್ಯಾಯಾಧೀಶರು. ಶಕಾರನಿಗೆ ಮರುದಿನ ಬರಲು ಹೇಳಿ ಕಳಿಸಿದರು. ಆದರೆ ಶಕಾರನು ಈ ನ್ಯಾಯಾಧೀಶರನ್ನೇ ಬದಲಾಯಿಸಿ ಬಿಡುತ್ತೇನೆ ಎನ್ನುವ ಬೆದರಿಕೆಯನ್ನು ಹಾಕಿದಾಗ, ಹೆದರಿದ ನ್ಯಾಯಾಧೀಶರು ಈತನ ದೂರನ್ನೇ ಮೊದಲು ವಿಚಾರಿಸಲು ಒಪ್ಪಿಕೊಂಡರು. (ಈಗಲೂ ಸಹ ಕಾರಣಾಂತರಗಳಿಂದ ಪ್ರಭಾವಿತರಾಗುವ ನ್ಯಾಯಾಧೀಶರನ್ನು ನಾವು ನೋಡುತ್ತೇವೆ.)

ಇದರಿಂದ ಪ್ರೋತ್ಸಾಹಿತನಾದ ಶಕಾರನು, ತಾನು ಪುಷ್ಪಕರಂಡಕ ಉದ್ಯಾನಕ್ಕೆ ಹೋದಾಗ, ಓರ್ವ ತರುಣಿಯ ಮೃತದೇಹವನ್ನು ಕಂಡಿದ್ದಾಗಿಯೂ, ಅದು ವಸಂತಸೇನೆ ಎನ್ನುವ ವೇಶ್ಯೆಯದು ಎಂದು ತಾನು ಗುರುತಿಸಿದ್ದಾಗಿಯೂ ಹೇಳುತ್ತಾನೆ. ಯಾವನೊ ಒಬ್ಬ ನೀಚನು ಅವಳ ಆಭರಣಗಳ ಆಸೆಗಾಗಿ ಅವಳನ್ನು ಕೊಲೆ ಮಾಡಿರುವದಾಗಿಯೂ ಸೂಚಿಸುತ್ತಾನೆ. ‘ಆದರೆ ಕೊಲೆಗಾರನು ನಾನಲ್ಲ, ನಾನಲ್ಲ’ ಎನ್ನುತ್ತಾನೆ. ‘ಕಳ್ಳನ ಜೀವ ಹುಳ್ಳುಳ್ಳೊಳಗೆ’ ಎನ್ನುವ ಕನ್ನಡದ ಗಾದೆಯೊಂದಿದೆ. ಶಕಾರನ ಸ್ಥಿತಿಯೂ ಹೀಗೇ ಆಗಿರಬಹುದು. ಅದಲ್ಲದೆ, ಅವನ ಬುದ್ಧಿವಂತಿಕೆಯೂ ಸಹ ಕೆಳಮಟ್ಟದ್ದೇ ತಾನೆ? ಹೀಗಾಗಿ ‘ಕೊಲೆಗಾರನು ತಾನಲ್ಲ’ ಎನ್ನುವ ಅತಿ ಜಾಣತನವನ್ನು ಆತನು ತೋರಿಸುತ್ತಿದ್ದಾನೆ.

ಮೃತದೇಹವು ವಸಂತಸೇನೆಯದು ಎಂದು ಶಕಾರನು ಹೇಳಿದ್ದರಿಂದ, ನ್ಯಾಯಾಧೀಶರು ವಸಂತಸೇನೆಯ ತಾಯಿಯನ್ನು ನ್ಯಾಯಾಲಯಕ್ಕೆ ಕರೆಸುತ್ತಾರೆ. ‘ಅವಳ ಮಗಳು ಎಲ್ಲಿದ್ದಾಳೆ ಹಾಗು ಆಕೆಯ ಸ್ನೇಹಿತನು ಯಾರು’ ಎಂದು ನ್ಯಾಯಾಲಯವು ವಸಂತಸೇನೆಯ ತಾಯಿಯನ್ನು ಪ್ರಶ್ನಿಸುತ್ತದೆ. ವಸಂತಸೇನೆಯ ತಾಯಿಗೂ ಸಹ ಚಾರುದತ್ತನ ಬಗೆಗೆ ಗೌರವವಿದೆ. ತನ್ನ ಮಗಳು ಚಾರುದತ್ತ ಎನ್ನುವ ಗೌರವಾನ್ವಿತ ವ್ಯಕ್ತಿಯ ಜೊತೆಗೆ ಇರುವಳು ಎಂದು ವಸಂತಸೇನೆಯ ತಾಯಿಯು ಹೇಳುತ್ತಾಳೆ.

ಚಾರುದತ್ತನನ್ನು ಕರೆತರಲು ನ್ಯಾಯಾಧೀಶರು ಶೋಧನಕನನ್ನು ಕಳುಹಿಸಿದರು ಹಾಗು ಚಾರುದತ್ತನ ಜೊತೆಗೆ ಗೌರವದಿಂದ ನಡೆದುಕೊಳ್ಳಬೇಕೆನ್ನುವ ಸೂಚನೆಯನ್ನು ಇತ್ತರು. ಚಾರುದತ್ತನು ನ್ಯಾಯಾಲಯಕ್ಕೆ ಬರುತ್ತಾನೆ. ವಸಂತಸೇನೆಯ ಜೊತೆಗೆ ಏನಾದರೂ ಸಂಬಂಧವಿದೆಯೆ ಎನ್ನುವ ನ್ಯಾಯಾಧೀಶರ ಪ್ರಶ್ನೆಗೆ ಅವನು ಸಂಕೋಚದಿಂದಲೇ ಒಪ್ಪಿಕೊಳ್ಳುತ್ತಾನೆ. ‘ವಸಂತಸೇನೆ ಎಲ್ಲಿರುವಳು?’ ಎನ್ನುವ ನ್ಯಾಯಾಧೀಶರ ಪ್ರಶ್ನೆಗೆ, ‘ಆಕೆ ತನ್ನ ಮನೆಗೆ ಹೋಗಿರುವಳು’ ಎಂದು ಹೇಳಲು ಮಾತ್ರ ಚಾರುದತ್ತನಿಗೆ ಸಾಧ್ಯವಾಗುತ್ತದೆ. ವಸಂತಸೇನೆಯ ತಾಯಿಯಂತೂ, ಬೆಲೆ ಬಾಳುವ ಮುತ್ತಿನ ಹಾರವನ್ನು ಕೊಟ್ಟಂತಹ ಚಾರುದತ್ತನು, ಆಭರಣಗಳ ಆಸೆಯಿಂದ ತನ್ನ ಮಗಳ ಕೊಲೆ ಮಾಡಲು ಸಾಧ್ಯವಿಲ್ಲ ಎಂದೇ ಹೇಳುತ್ತಾಳೆ. ಆದರ ಶಕಾರನು ಮಾತ್ರ ಚಾರುದತ್ತನೇ ಕೊಲೆಗಾರ ಎಂದು ಕೂಗಿಕೊಳ್ಳುತ್ತಲೇ ಇರುತ್ತಾನೆ.

ವಿಧಿಯು ಚಾರುದತ್ತನ ವಿರೋಧಿಗಳನ್ನು ಹೇಗೆ ಒಂದುಗೂಡಿಸುತ್ತಿದೆ ಎನ್ನುವುದನ್ನು ನೋಡಿರಿ. ಈ ಸಂದರ್ಭದಲ್ಲಿ ವೀರಕನ ಪ್ರವೇಶವಾಗುತ್ತದೆ. ‘ತೆರೆಯಿಂದ ಮುಚ್ಚಲ್ಪಟ್ಟ ಒಂದು ಗಾಡಿಯು ದಾರಿಯಲ್ಲಿ ಹೋಗುತ್ತಿರುವಾಗ, ನಾನು ಅದನ್ನು ತಡೆದೆ. ಗಾಡಿಯ ಚಾಲಕನು ಇದು  ಚಾರುದತ್ತನ ಗಾಡಿ, ಇದರಲ್ಲಿ ವಸಂತಸೇನೆ ಇದ್ದಾಳೆ. ಇವಳನ್ನು ಚಾರುದತ್ತನೊಡನೆ ವಿಹರಿಸಲೆಂದು ಉದ್ಯಾನಕ್ಕೆ ಕರೆದೊಯ್ಯುತ್ತಿರುವೆ ಎಂದು ಹೇಳಿದನು’, ಎನ್ನುತ್ತಾನೆ. (ಅಂಕ ಆರನ್ನು ನೆನಪಿಸಿಕೊಳ್ಳಿರಿ. ವಾಸ್ತವದಲ್ಲಿ ಆ ಬಂಡಿಯಲ್ಲಿ ಇದ್ದವನು ಆರ್ಯಕ ಎನ್ನುವ ರಾಜವಿರೋಧೀ ಬಂಡುಖೋರ.)

ನ್ಯಾಯಾಧೀಶರಿಗೂ ಸಹ ಚಾರುದತ್ತನ ಮೇಲೆ ಗೌರವವಿದೆ. ಆದರೆ ಸಾಂದರ್ಭಿಕ ಸಾಕ್ಷಿಗಳು ಅವನ ವಿರುದ್ಧ ಹೋಗುತ್ತಿವೆ. ಇದರಿಂದಾಗಿ ಅವರೂ ಚಿಂತಿತರಾದರು. ಉದ್ಯಾನದಲ್ಲಿ ಸ್ತ್ರೀಯೊಬ್ಬಳ ಮೃತದೇಹ ಇರುವದೇ ಎಂದು ನೋಡಿ ಬಾ ಎಂದು ಅವರು ವೀರಕನಿಗೆ ಆದೇಶಿಸುತ್ತಾರೆ.

ವೀರಕನು ಹೋದಂತೆ ಮಾಡಿ, ತಿರುಗಿ ಬಂದು, ‘ನಾಯಿ ನರಿಗಳು ಎಳೆದಾಡುತ್ತಿರುವ ಒಂದು ಹೆಣ್ಣಿನ ದೇಹವನ್ನು ನೋಡಿದೆನು’ ಎಂದು ಸುಳ್ಳು ಹೇಳಿಕೆಯನ್ನು ಕೊಡುತ್ತಾನೆ. (‘ಸತ್ಯಮೇವ ಜಯತೇ’ ಎನ್ನುವ ನಮ್ಮ ನಾಡಿನಲ್ಲಿ ಸುಳ್ಳಿನ ತಾಂಡವ ನೃತ್ಯವನ್ನು ನೋಡಿದಿರಾ? ಆಗಿನಂತೆ ಈಗಲೂ ಸಹ ನ್ಯಾಯಾಲಯಗಳಲ್ಲಿ ಸುಳ್ಳು ಸಾಕ್ಷಿಗಳು ಪ್ರಕರಣಗಳನ್ನು ತಿರುಚುವದನ್ನು ನೋಡುತ್ತಲೇ ಇದ್ದೇವೆ.)

ವೀರಕನ ಸಾಕ್ಷಿಯಿಂದ ಪ್ರಭಾವಿತರಾದ ನ್ಯಾಯಾಧೀಶರು ಬಹಳ ಸಂತಾಪಗೊಂಡು, ನಿಜವನ್ನೇ ಹೇಳಲು ಚಾರುದತ್ತನಿಗೆ ಆಗ್ರಹ ಮಾಡುತ್ತಾರೆ. ಚಾರುದತ್ತನಾದರೊ ಈ ಆರೋಪವನ್ನು ನಿರಾಕರಿಸುತ್ತಲೇ ಇದ್ದಾನೆ. ಇತ್ತ ಖುಶಿಗೊಂಡ ಶಕಾರನು, ‘ನಾನು ಮಾಡಿದ ಪಾಪವನ್ನು ಎಷ್ಟು ಸರಳವಾಗಿ ಮತ್ತೊಬ್ಬನ ತಲೆಗೆ ಕಟ್ಟಿಬಿಟ್ಟೆ. ಚಾರುದತ್ತನೇ, ಈಗಲಾದರೂ ‘ನಾನೇ ಕೊಲೆಗಾರ’ ಎಂದು ಒಪ್ಪಿಕೊ’ ಎನ್ನುತ್ತಿದ್ದಾನೆ. ಈ ರೀತಿಯಾಗಿ ನ್ಯಾಯಾಲಯದಲ್ಲಿಯೂ ಸಹ ಶಕಾರನು ತನ್ನ ಹುಂಬತನವನ್ನು ಪ್ರದರ್ಶಿಸುತ್ತಿದ್ದಾನೆ.

ವಸಂತಸೇನೆಯು ತನ್ನ ಆಭರಣಗಳನ್ನು ಮಣ್ಣಿನ ಬಂಡಿಯಲ್ಲಿ ಹಾಕಿ ಚಾರುದತ್ತನ ಮಗನಾದ ರೋಹಸೇನನಿಗೆ ಕೊಟ್ಟಿದ್ದಳಷ್ಟೆ. ಆ ಒಡವೆಗಳನ್ನು ವಸಂತಸೇನೆಗೆ ಮರಳಿ ಕೊಡಲು, ಚಾರುದತ್ತನ ಗೆಳೆಯನಾದ ಮೈತ್ರೇಯನು ಹೊರಟಿದ್ದಾನೆ. ದಾರಿಯಲ್ಲಿ ಆತನಿಗೆ ಶರ್ವಿಲಕನ ಗೆಳೆಯನಾದ ರೇಭಿಲನ ಭೆಟ್ಟಿಯಾಗುತ್ತದೆ. ಆತನ ಮೂಲಕ, ಚಾರುದತ್ತನನ್ನು ನ್ಯಾಯಾಲಯಕ್ಕೆ ಎಳೆಯಲಾಗಿದೆ ಎನ್ನುವುದು ತಿಳಿದು ಬರುತ್ತದೆ. ಗಾಬರಿಗೊಂಡ ಮೈತ್ರೇಯನು ನ್ಯಾಯಾಲಯಕ್ಕೆ ಧಾವಿಸಿ ಬರುತ್ತಾನೆ.

ಅಲ್ಲಿ ಉದ್ರಿಕ್ತನಾದ ಮೈತ್ರೇಯನಿಗೂ ಶಕಾರನಿಗೂ ಜಗಳವಾಗುತ್ತದೆ. ಚಾರುದತ್ತನ ಪ್ರಾಣಸ್ನೇಹಿತನಾದ ಮೈತ್ರೇಯನಿಂದಲೇ, ಚಾರುದತ್ತನ ಪ್ರಾಣ ಹೋಗುವಂತಹ ಘಟನೆಯೊಂದು ಈಗ ಸಂಭವಿಸುತ್ತದೆ. ಮೈತ್ರೇಯ ಹಾಗು ಶಕಾರರ ಕಲಹದ ಸಂದರ್ಭದಲ್ಲಿ, ಮೈತ್ರೇಯನು ಹಿಡಿಕೊಂಡಿದ್ದ ವಸಂತಸೇನೆಯ ಆಭರಣಗಳ ಗಂಟು ಕೆಳಗೆ ಬಿದ್ದು, ಒಡವೆಗಳೆಲ್ಲ ಚೆಲ್ಲಾಪಿಲ್ಲಿಯಾಗುತ್ತವೆ. ಶಕಾರನು ‘ಇವೇ ನೋಡಿ, ವಸಂತಸೇನೆಯ ಆಭರಣಗಳು. ಇವುಗಳಿಗಾಗಿಯೇ ಚಾರುದತ್ತನು ಅವಳ ಕೊಲೆ ಮಾಡಿದ್ದಾನೆ’ ಎಂದು ಕೂಗಿಕೊಳ್ಳುತ್ತಾನೆ!

ಚಾರುದತ್ತನು ಕೊಲೆಗಾರನಾಗಲು ಸಾಧ್ಯವಿಲ್ಲ ಎಂದು ನಂಬಿದ ವಸಂತಸೇನೆಯ ತಾಯಿಯು ಅವನನ್ನು ರಕ್ಷಿಸಲು, ‘ಈ ಆಭರಣಗಳು ನನ್ನ ಮಗಳವಲ್ಲ’ ಎಂದು ಹೇಳುತ್ತಾಳೆ. ಆದರೆ ಚಾರುದತ್ತನು ಮಾತ್ರ, ‘ಈ ಆಭರಣಗಳು ವಸಂತಸೇನೆಯವೇ ಹೌದು’ ಎಂದು ಸ್ವತಃ ಘೋಷಿಸುತ್ತಾನೆ. (ನಾಲ್ಕನೆಯ ಅಂಕದಲ್ಲಿ ಮೈತ್ರೇಯನು ವಸಂತಸೇನೆಯ ತಾಯಿಯನ್ನು ಎಷ್ಟು ಹಾಸ್ಯಾಸ್ಪದವಾಗಿ ವರ್ಣಿಸಿದ್ದ ಎನ್ನುವುದನ್ನು ನೆನಪಿಸಿಕೊಳ್ಳಿ. ಅಂಥವಳೂ ಸಹ, ಇದೀಗ ತನ್ನ ಮಗಳ ಕೊಲೆಯ ಆರೋಪವನ್ನು ಹೊತ್ತ ಚಾರುದತ್ತನನ್ನು ರಕ್ಷಿಸಬಯಸುತ್ತಾಳೆ. ಇದು ಚಾರುದತ್ತನ ಘನತೆಯನ್ನು ತೋರಿಸುವದರ ಜೊತೆಗೆ, ಒಬ್ಬ ಗಣಿಕೆಯ ಘನತೆಯನ್ನೂ ತೋರಿಸುತ್ತದೆ.)

ಚಾರುದತ್ತನೇ ಹಾಗೆ ಹೇಳಿದ ಬಳಿಕ, ಶಕಾರನು ಸುಮ್ಮನಿದ್ದಾನೆಯೆ? ತಾನು ಮಾಡಿದ ತಪ್ಪನ್ನು ಒಬ್ಬ ನಿರಪರಾಧಿಯ ಮೇಲೆ ಹೊರಿಸಿ, ಅವನನ್ನು ದಂಡನೆಗೆ ಗುರಿ ಮಾಡಿದ ಶಕಾರನು, ಈ ಪರಿಸ್ಥಿತಿಯಲ್ಲಿಯೂ ಸಹ ಚಾರುದತ್ತನನ್ನು ಹೀಯಾಳಿಸುವ ರೀತಿಯನ್ನು ನೋಡಿರಿ: ‘ಈ ದರಿದ್ರ ಚಾರುದತ್ತನ ದೇಹಕ್ಕೆ ದಂಡನೆ ವಿಧಿಸೋಣವಾಗಲಿ.’

ಈ ಕ್ಷಣದಲ್ಲೂ ಸಹ ವಸಂತಸೇನೆಯ ತಾಯಿಯು ನ್ಯಾಯಾಧೀಶರಲ್ಲಿ ಬಿನ್ನವಿಸುತ್ತಾಳೆ: ‘ಸ್ವಾಮಿ, ದಯಮಾಡಿ ಪ್ರಸನ್ನರಾಗಿರಿ. ನನ್ನ ಮಗಳಂತೂ ಹೋಗಿ ಬಿಟ್ಟಳು. ಈ ಸಜ್ಜನನು ಬದುಕಿಕೊಳ್ಳಲಿ.’ ಬಹುಶಃ ನಮ್ಮ ನಾಟಕಕಾರನು ಸಮಾಜದಲ್ಲಿ ಉಚ್ಚ ತರಗತಿಯಲ್ಲಿ ಇರುವ ಹಾಗು ರಾಜಸಂಬಂಧಿಯಾದ ಶಕಾರನ ನಡತೆಯನ್ನು, ಸಾಮಾಜಿಕವಾಗಿ ಕೆಳಮಟ್ಟದಲ್ಲಿರುವ ಓರ್ವ ವೇಶ್ಯೆಯ ತಾಯಿಯ ನಡತೆಯೊಡನೆ ಹೋಲಿಸಿ ತೋರಿಸಲು ವಸಂತಸೇನೆಯ ತಾಯಿಯಿಂದ ಹೀಗೆ ಹೇಳಿಸಿರಬಹುದು.

ನ್ಯಾಯಾಧೀಶನು ಚಾರುದತ್ತನನ್ನು ದೋಷಿ ಎಂದು ನಿರ್ಣಯಿಸಿದ ಬಳಿಕ, ಶಿಕ್ಷೆಯನ್ನು ನಿರ್ಧರಿಸಲು ರಾಜನ ಬಳಿಗೆ ಕಳುಹಿಸುತ್ತಾನೆ. ರಾಜನು ಚಾರುದತ್ತನಿಗೆ ಮರಣಶಿಕ್ಷೆಯನ್ನು ವಿಧಿಸಿದನು: ‘ಪುಡಿಗಾಸಿನ ಆಸೆಗಾಗಿ ವಸಂತಸೇನೆಯನ್ನು ಕೊಂದ ಇವನ ಕುತ್ತಿಗೆಯ ಸುತ್ತ ಅದೇ ಆಭರಣಗಳನ್ನು ಬಿಗಿಯಿರಿ, ಡೋಲು ಬಾರಿಸುತ್ತ ಇವನನ್ನು ತೆಂಕಣ ದಿಕ್ಕಿನಲ್ಲಿರುವ ಮಸಣಕ್ಕೆ ಒಯ್ದು, ಶೂಲಕ್ಕೇರಿಸಿ.’

ಚಾರುದತ್ತನು ಯಾವುದೇ ತಪ್ಪು ಮಾಡಿರದಿದ್ದರೂ, ಶೂಲಕ್ಕೆ ಸಿದ್ಧನಾದನು. ಅದಕ್ಕೂ ಮೊದಲು ಮೈತ್ರೇಯನನ್ನು ಕರೆದು, ತನ್ನ ತಾಯಿಗೆ ತನ್ನ ಕೊನೆಯ ನಮಸ್ಕಾರವನ್ನು ಹೇಳುವಂತೆ ತಿಳಿಸಿದನು. ಕೊನೆಯ ಕ್ಷಣದಲ್ಲೂ ಸಹ, ಚಾರುದತ್ತನು ತನ್ನ ತಾಯಿಯನ್ನು ನೆನಪಿಸಿಕೊಳ್ಳುವುದು, ಅವಳಿಗೆ ಗೌರವ ಸಲ್ಲಿಸುವುದು ಇವು ಭಾರತೀಯ ಸಂಸ್ಕೃತಿಯ ಉಚ್ಚ ಲಕ್ಷಣಗಳಾಗಿವೆ. ಆನಂತರ ತನ್ನ ಮಗನಾದ ರೋಹಸೇನನನ್ನು ನೋಡಿಕೊಳ್ಳಲು ಮೈತ್ರೇಯನಿಗೆ ತಿಳಿಸಿದನು.

ಚಾರುದತ್ತನು ತನ್ನ ತಾಯಿ ಹಾಗು ಮಗನ ಬಗೆಗೆ ಮೈತ್ರೇಯನಿಗೆ  ತನ್ನ ಕೊನೆಯ ಮಾತುಗಳನ್ನು ಹೇಳಿದನು . ತನ್ನ ಪ್ರೇಯಸಿಯಾದ ವಸಂತಸೇನೆ ಸತ್ತಿರುವಳು ಎಂದೇ ಆತ ತಿಳಿದಿದ್ದಾನೆ. ಇನ್ನು ಆತನ ಕುಟುಂಬದಲ್ಲಿ ಉಳಿದಿರುವವರು ಯಾರು? ಆತನ ಧರ್ಮಪತ್ನಿ ಧೂತಾದೇವಿ ತಾನೆ? ಅವಳ ಬಗೆಗೆ ಆತನು ಮೈತ್ರೇಯನಿಗೆ ಯಾಕೆ ಏನೂ ಹೇಳುವುದಿಲ್ಲ? ಚಾರುದತ್ತನು ತನ್ನ ಸ್ವಯಂಕೃತಾಪರಾಧದಿಂದಾಗಿ, ಧೂತಾದೇವಿಯನ್ನು ಕೊನೆಯಿಲ್ಲದ ಸಂಕಟಕ್ಕೆ ಹಾಗು ಅಪಖ್ಯಾತಿಗೆ ನೂಕುತ್ತಿರುವಾಗ, ಹೇಳಲು ಆತನಿಗೆ ಉಳಿದಿರುವದಾದರೂ ಏನು, ಎನ್ನೋಣವೆ?

‘ನನ್ನನ್ನು ಕ್ಷಮಿಸು. ನಾನು ಬದುಕಿದ್ದಾಗ ನನ್ನ ಹುಚ್ಚುತನದಿಂದಾಗಿ ನಿನಗೆ ಅನೇಕ ದುಃಖಗಳನ್ನು ಕೊಟ್ಟೆ. ನನ್ನ ಹುಚ್ಚುತನದಿಂದಲೇ ನಾನೀಗ ಸಾಯುತ್ತಿರುವಾಗ ಸಹ, ನಿನಗೆ ದುಃಖವನ್ನು ಕೊಡುತ್ತಿದ್ದೇನೆ’ ಎಂದು ಚಾರುದತ್ತನು ಧೂತಾದೇವಿಗೆ ಹೇಳಬಹುದಾಗಿತ್ತಲ್ಲವೆ? ಅಥವಾ ಭಾರತೀಯ ಗಂಡಸರು ಯಾವ ಸಂವೇದನೆಗೂ ತಮ್ಮ ಹೆಂಡತಿಯರು ಅನರ್ಹರು ಎಂದು ಭಾವಿಸುತ್ತಿದ್ದರೊ? ಹಾಗಿಲ್ಲದೆ ಹೋಗಿದ್ದರೆ ನಮ್ಮ ನಾಟಕಕಾರನು ಮೃದುಹೃದಯಿಯಾದ ಚಾರುದತ್ತನ ಮುಖದಿಂದ ಒಂದು ಮಾತನ್ನಾದರೂ ಧೂತಾದೇವಿಯ ಬಗೆಗೆ ಹೇಳಿಸದೆ ಇರುತ್ತಿರಲಿಲ್ಲ!

ಚಾರುದತ್ತನಿಗೆ ರಾಜನ ನಿರ್ಣಯದ ಬಗೆಗೆ, ತನಗಾದ ಅನ್ಯಾಯದ ಬಗೆಗೆ ಅಸಮಾಧಾನ ಇರಲಿಲ್ಲ ಎಂದೇನಲ್ಲ. ರಂಗದಿಂದ ನಿರ್ಗಮಿಸುವಾಗ ಆತನು ರಾಜನ ಬಗೆಗೆ ನುಡಿಯುವ ಆಕ್ರೋಶಭರಿತ ಮಾತುಗಳನ್ನು ನೋಡಿ:
‘ಹಗೆಯಾದವನ ಮಾತನ್ನೆ ನಂಬಿ ನೀನು ನನ್ನನ್ನು ಕೊಲ್ಲಲು ಹೊರಟಿರುವೆ. ನೀನು, ನಿನ್ನ ಮಕ್ಕಳು ಹಾಗು ಮೊಮ್ಮಕ್ಕಳೊಡನೆ ನರಕದ ದಾರಿಯನ್ನು ತೆರೆದುಕೊಂಡಿರುವಿ.’

ಮೃತ್ಯುಮುಖದಲ್ಲಿದ್ದಾಗ ಚಾರುದತ್ತನಂತಹ ಸಂಯಮಿಗೂ ಉದ್ವೇಗದ ಕಟ್ಟೆ ಒಡೆಯಬಹುದು ಎನ್ನುವುದನ್ನು ಶೂದ್ರಕನು ಇಲ್ಲಿ ಸರಿಯಾಗಿಯೇ ತೋರಿಸಿದ್ದಾನೆ.  ಮುಂದಿನ ಅಂಕವೇ ಈ ನಾಟಕದ ಕೊನೆಯ ಅಂಕ. ಚಾರುದತ್ತನನ್ನು ವಧಾಸ್ಥಾನಕ್ಕೆ ಎಳೆದೊಯ್ಯುವ ದೃಶ್ಯವನ್ನು ಈ ಅಂಕದಲ್ಲಿ ಭೀಭತ್ಸವಾಗಿ ತೋರಿಸಲಾಗಿದೆ.

Friday, May 20, 2016

ಮೃಚ್ಛಕಟಿಕಮ್-೯

ಎಂಟನೆಯ ಅಂಕ:
ಏಳನೆಯ ಅಂಕದ ಕೊನೆಯಲ್ಲಿ ಚಾರುದತ್ತ ಹಾಗು ಮೈತ್ರೇಯರು ರಂಗದಿಂದ ನಿರ್ಗಮಿಸಿದ್ದನ್ನು ನೋಡಿದೆವು. ಓರ್ವ ಬೌದ್ಧ ಭಿಕ್ಷುವನ್ನು ನೋಡಿದ ಇವರು ಇದೊಂದು ಅಪಶಕುನಎಂದು ಭಾವಿಸಿ, ವಿರುದ್ಧ ದಿಕ್ಕಿನಲ್ಲಿ ನಡೆದು ಹೋದರು. ಒಂದು ವೇಳೆ ಇವರು ಭಿಕ್ಷುವು ಬರುವ ದಿಕ್ಕಿನಲ್ಲಿಯೇ ನಡೆದಿದ್ದರೆ, ಈ ಕಥೆಯು ಬೇರೇನೊ ಆಗುತ್ತಿತ್ತು.

ಎಂಟನೆಯ ಅಂಕವು  ಈ ಅಪಶಕುನದ ಬೌದ್ಧ ಭಿಕ್ಷುವಿನ ಪ್ರವೇಶದೊಂದಿಗೆ ಪ್ರಾರಂಭವಾಗುತ್ತದೆ. ಈತನು ಆ ಉದ್ಯಾನದಲ್ಲಿದ್ದ ಪುಷ್ಕರಿಣಿಯಲ್ಲಿ ತನ್ನ ಶಾಟಿಯನ್ನು ಒಗೆದುಕೊಳ್ಳಲು ಬರುತ್ತಿದ್ದಾನೆ. ಈ ಸಮಯದಲ್ಲಿ ಅಲ್ಲಿದ್ದ ಶಕಾರನು ಈತನನ್ನು ನೋಡುತ್ತಾನೆ. ಶಕಾರನು ಹುಂಬನಷ್ಟೇ ಅಲ್ಲ, ಹಿಂಸಾವಿನೋದಿಯೂ ಹೌದು. ಬೌದ್ಧ ಭಿಕ್ಷುವನ್ನು ಹೀಯಾಳಿಸುವುದು, ಆತನಿಗೆ ಹಿಂಸೆಯನ್ನು ಕೊಡುವುದು ಶಕಾರನಿಗೆ ಮನರಂಜನೆಯನ್ನು ನೀಡುತ್ತದೆ. ಬಹು ಕಷ್ಟದಿಂದ ಭಿಕ್ಷುವು ಅವನಿಂದ ತಪ್ಪಿಸಿಕೊಂಡು ಹೋಗುತ್ತಾನೆ. (ನಮ್ಮ ನಾಟಕಕಾರನು ಎಷ್ಟೆಲ್ಲ ಮನೋಪ್ರವೃತ್ತಿಯ ಪಾತ್ರಗಳನ್ನು ಸೃಷ್ಟಿಸಿದ್ದಾನೆ, ನೋಡಿ!)

ಹೊತ್ತು ಏರುತ್ತಿದೆ. ತನ್ನ ಗಾಡಿಯ ಚಾಲಕನು ಗಾಡಿಯೊಂದಿಗೆ ಇನ್ನೂ ಬಂದಿಲ್ಲವಲ್ಲಎಂದು ಶಕಾರನು ಯೋಚಿಸುತ್ತಿದ್ದಾನೆ. ಅಷ್ಟರಲ್ಲಿ ಗಾಡಿಯನ್ನು ವೇಗವಾಗಿ ಓಡಿಸುತ್ತ ಬರುವ ಸ್ಥಾವರಕನು ಕಾಣಿಸುತ್ತಾನೆ. ತಡವಾಗಿದ್ದಕ್ಕೆ ಎಲ್ಲಿ ಶಕಾರನಿಂದ ಏಟು ತಿನ್ನಬೇಕಾಗುವುದೊ ಎನ್ನುವುದು ಅವನ ಹೆದರಿಕೆ. ಆತ ತನ್ನ ಹೆದರಿಕೆಯನ್ನು ಪ್ರಕಾಶವಾಗಿಯೇ ಉಸುರುತ್ತಾನೆ. (ರಾಜನ ಮೈದುನ ಶಕಾರನು ನನ್ನ ಮೇಲೆ ಸಿಟ್ಟಾಗದಿದ್ದರೆ ಸಾಕು, ಆದುದರಿಂದ ಬೇಗನೇ ಗಾಡಿಯನ್ನು ಓಡಿಸುತ್ತೇನೆ’.) ಚಾಲಕನು ತನ್ನಲ್ಲಿಯೇ ಆಡಿಕೊಳ್ಳುವ ಈ ಮಾತುಗಳು ವಸಂತಸೇನೆಯ ಕಿವಿಗೆ ಬೀಳುತ್ತವೆ. ಅವಳಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಅವಳು ಭಯಗ್ರಸ್ತಳಾಗುತ್ತಾಳೆ. ಆದರೆ ಕಾಲ ಮಿಂಚಿ ಹೋಗಿದೆ.
           
ಶಕಾರನು ಗಾಡಿಯನ್ನು ಹತ್ತಲು ಹೋದಾಗ, ಒಳಗೆ ಇರುವ ವ್ಯಕ್ತಿಯನ್ನು ಅಚಾನಕ್ಕಾಗಿ ಕಂಡು ಬೆಚ್ಚುತ್ತಾನೆ. ಶಕಾರನ ಬುದ್ಧಿಯು ಸಾಮಾನ್ಯ ಮನುಷ್ಯನ ಬುದ್ಧಿಯಂತೆ ಓಡುವುದಿಲ್ಲ. ವಿಕೃತ ಮನಸ್ಸಿಗೆ, ಜಗವೆಲ್ಲ ವಿಕೃತವಾಗಿ ಕಾಣುವುದು ಸಹಜವಷ್ಟೇ. ಹಾಗಾಗಿ ಒಳಗೆ ಇರುವ ವಸಂತಸೇನೆಯು ಇವನಿಗೆ ಒಬ್ಬ ರಾಕ್ಷಸಿಯಂತೆ ಕಾಣುತ್ತಾಳೆ. ಅವನು ‘ರಾಕ್ಷಸಿ’ ಎಂದು ಚೀರಿಕೊಳ್ಳುತ್ತ ದೂರ ಸರಿಯುತ್ತಾನೆ. ಆದರೆ ಒಳಗೆ ಕುಳಿತಿರುವಳು ವಸಂತಸೇನೆ ಎಂದು ತಿಳಿದಾಗ, ಅವಳನ್ನು ಒಲಿಸಿಕೊಳ್ಳಲು ಅವಳ ಪಾದಗಳನ್ನು ಹಿಡಿಯುತ್ತಾನೆ. 

ಶಕಾರನ ಬಗೆಗೆ ವಸಂತಸೇನೆಗೆ ತೀವ್ರವಾದ  ತಾತ್ಸಾರವಿದೆ. ಅವನಿಂದ ಬಿಡಿಸಿಕೊಳ್ಳಲು ಆವಳು ತನ್ನ ಪಾದಗಳಿಂದ ಇವನಿಗೆ ಒದೆಯುತ್ತಾಳೆ. ಇದರಿಂದ ಕುಪಿತನಾದ ಶಕಾರನ ಪ್ರತಿಕ್ರಿಯೆ ಏನು? ವಿವೇಕಬುದ್ಧಿ ಇಲ್ಲದ ಶಕಾರನು ವಸಂತಸೇನೆಯನ್ನು ಕೊಲ್ಲಲು ತನ್ನ ಸಹಚರನಿಗೆ ಹೇಳುತ್ತಾನೆ. ಅವನು ಒಪ್ಪದಿದ್ದಾಗ, ತನ್ನ ಅನುಚರನಿಗೆ ಹೇಳುತ್ತಾನೆ. ಅವನೂ ಸಹ ಈ ಮಾತಿಗೆ ಒಪ್ಪುವದಿಲ್ಲ.  ಶಕಾರನ ಅನುಚರರಲ್ಲಿಯೂ ಸಹ ಸ್ವಲ್ಪವಾದರೂ ಧರ್ಮಬುದ್ಧಿಯಿದೆ ಎನ್ನುವುದನ್ನು ಇದು ತೋರಿಸುತ್ತದೆ. ಶಕಾರನ ಮಾತನ್ನು ತಿರಸ್ಕರಿಸುತ್ತ ಅವನ ಅನುಚರನು ಹೇಳುವುದನ್ನು ಕೇಳಿರಿ: ಅಯ್ಯಾ, ನೀನು ನನ್ನ ಶರೀರಕ್ಕೆ ಒಡೆಯನೇ ಹೊರತು, ನನ್ನ ಚಾರಿತ್ರ್ಯಕ್ಕಲ್ಲ. ನನಗೆ ಪರಲೋಕದ ಹೆದರಿಕೆ ಇದೆ.

ಶಕಾರನು ಹುಂಬನೂ, ಅಪರಾಧಿ ಪ್ರವೃತ್ತಿಯವನೂ ಆಗಿರಬಹುದು. ಆದರೆ ಇಂಥವರಲ್ಲಿಯೂ ಸಹ ಒಂದು ತರಹದ ವಿಚಿತ್ರ ಬುದ್ಧಿವಂತಿಕೆ ಇರುತ್ತದೆ. ಶಕಾರನು ತನ್ನ ಅನುಚರರನ್ನು ದೂರ ಕಳುಹಿಸಿ, ಮೊದಲಿಗೆ ವಸಂತಸೇನೆಯನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ವಸಂತಸೇನೆಯು ಇವನನ್ನೇ ನಿಂದಿಸುತ್ತಾಳೆ. ಸಭ್ಯತೆ ಹಾಗು ಸ್ವಾಭಿಮಾನ ಇರುವ ಯಾವ ಮನುಷ್ಯನಾದರೂ ಇಂತಹ ಸಂದರ್ಭದಲ್ಲಿ ಆ ಹೆಣ್ಣನ್ನು ತಿರುಗಿ ನೋಡದೆ ಹೋಗಿಯಾನು. ಆದರೆ ಶಕಾರನು ಮನುಷ್ಯ ರೂಪದಲ್ಲಿರುವ ವಿಕೃತ ಸ್ವಭಾವದ ಪಶು. ವಸಂತಸೇನೆಯ ತಿರಸ್ಕಾರದಿಂದ ಕುಪಿತನಾದ ಶಕಾರನು ಅವಳ ಮೇಲೆ ಕೈಯೆತ್ತಲು ಹೇಸುವದಿಲ್ಲ.  ಕೊನೆಗೊಮ್ಮೆ ಶಕಾರನು ಅವಳ ಕುತ್ತಿಗೆಯನ್ನು ಹಿಸುಕಿದಾಗ, ಅವಳು ಮೂರ್ಛಿತಳಾಗುತ್ತಾಳೆ. ವಸಂತಸೇನೆ ಸತ್ತಳು ಎಂದು ಭಾವಿಸಿದ ಶಕಾರನು, ‘ಸತ್ತು ಹೋಗು, ತೊತ್ತಿನ ಮಗಳೆ.ಎಂದು ಬೈಯುತ್ತ, ಅವಳ ಸಾವಿನಲ್ಲಿಯೂ ಸಹ ತನ್ನ ನೀಚತನದಲ್ಲಿ ವಿಜೃಂಭಿಸುತ್ತಾನೆ. 

ಶಕಾರನ ಸಹಚರ ಹಾಗು ಸೇವಕರು ಅಲ್ಲಿಗೆ ಮರಳಿ ಬಂದಾಗ, ವಸಂತಸೇನೆ ನಿಶ್ಚೇಷ್ಟಿತಳಾಗಿ ಬಿದ್ದುದ್ದನ್ನು ನೋಡಿದರು. ಶಕಾರನ ಸ್ವರಕ್ಷಣೆಯ ಬುದ್ಧಿವಂತಿಕೆಯನ್ನಷ್ಟು ನೋಡಿರಿ. ಈ ಕೊಲೆಯ ಹೊಣೆಯನ್ನು ಹೊತ್ತುಕೊಳ್ಳುವಂತೆ ಆತನು ತನ್ನ ಅನುಚರರನ್ನು ಕೇಳಿಕೊಳ್ಳುತ್ತಾನೆ. ಆದರೆ, ಇವನ ಮಾತಿಗೆ ಒಪ್ಪದ ಅವರು, ತಾವು ಶರ್ವಿಲಕ ಹಾಗು ಚಂದನಕರ ಜೊತೆಗೆ ಸೇರಿಕೊಳ್ಳುವುದಾಗಿ ಘೋಷಿಸಿ ಹೊರಟು ಬಿಡುತ್ತಾರೆ. ( ಈ ಕಾಲದಲ್ಲಿಯೂ ಸಹ ವಾಹನವನ್ನು ಯರ್ರಾಬಿರ್ರಿಯಾಗಿ ಚಲಾಯಿಸುತ್ತ, ಅಪಘಾತ ಹಾಗು ಮಾನವಹತ್ಯೆಗೆ ಕಾರಣರಾದ ಮಾಲಕರು, ಈ ಹೊಣೆಯನ್ನು ಹೊರಲು ತಮ್ಮ ವಾಹನಚಾಲಕರನ್ನು ಪುಸಲಾಯಿಸಿ, ತಾವು ಶಿಕ್ಷೆಯಿಂದ ಪಾರಾಗುವ ಘಟನೆಗಳನ್ನು ನೋಡುತ್ತಲೇ ಇದ್ದೇವೆ. ಇದೊಂದು ಸಾರ್ವಕಾಲಿಕ ವಾಸ್ತವವೆ?)

ಕೊಲೆಯ ಹೊಣೆಗಾರಿಕೆಯನ್ನು ಇನ್ನು ಯಾರಾದರೊಬ್ಬರ ಮೇಲೆ ಹೊರಿಸಿ, ತಾನು ತಪ್ಪಿಸಿಕೊಳ್ಳುವುದು ಇದೀಗ ಶಕಾರನ ತಂತ್ರವಾಗಿದೆ. ತನ್ನ ಸೇವಕನಿಗೆ ಆಭರಣಗಳನ್ನು ಕೊಡುವ ಆಸೆಯನ್ನು ತೋರಿಸಿ, ಬಂಡಿಯನ್ನು ಹೊಡೆದುಕೊಂಡು ಹೋಗು ಎಂದು ಅವನನ್ನು ಕಳಿಸಿ ಬಿಡುತ್ತಾನೆ. ತನ್ನಂತರ ಆ ಸೇವಕನನ್ನು ತನ್ನ ಅರಮನೆಯ ಒಂದು ಕೋಣೆಯಲ್ಲಿ ಬಂಧಿಸಿ ಇಡುವ ಉಪಾಯ ಶಕಾರನದು. ಈ ರೀತಿಯಾಗಿ ವಸಂತಸೇನೆಯ ಕೊಲೆಗೆ ಸಾಕ್ಷಿಯಾದ ತನ್ನ ಸೇವಕನನ್ನು ಮಾಯ ಮಾಡಿವಸಂತಸೇನೆಯನ್ನು ಅವಳ ಆಭರಣಗಳ ಆಸೆಗಾಗಿ ಚಾರುದತ್ತನೇ ಕೊಲೆಗೈದಿದ್ದಾನೆ ಎಂದು ನ್ಯಾಯಾಲಯದಲ್ಲಿ ದೂರು ಕೊಡಲು ನಿರ್ಧರಿಸುತ್ತಾನೆ. ವಸಂತಸೇನೆಯನ್ನು ತರಗೆಲೆಗಳಿಂದ ಮುಚ್ಚಿ ಅಲ್ಲಿಂದ ಹೊರಡುತ್ತಾನೆ. ಶೂದ್ರಕನ ಕಾಲದಲ್ಲಿಯೂ ಸಹ, ಅಪರಾಧ ಹಾಗು ಸಾಕ್ಷಿನಿರ್ಣಯಗಳು ನಮ್ಮ ಆಧುನಿಕ ಕಾಲದಲ್ಲಿ ನಡೆಯುತ್ತಿರುವಂತೆಯೇ ನಡೆಯುತ್ತಿದ್ದವಲ್ಲ ಎಂದು ಆಶ್ಚರ್ಯವಾಗದಿರದು.

ಶಕಾರನಿಂದ ಹೊಡೆಸಿಕೊಂಡು ಓಡಿ ಹೋಗಿದ್ದ ನಮ್ಮ ಬೌದ್ಧಭಿಕ್ಷುವು ಇದೀಗ ಮರಳಿ ರಂಗದ ಮೇಲೆ ಬರುತ್ತಾನೆ. ಅಲ್ಲಿ ತರಗೆಲೆಗಳ ಚಲನೆ ಹಾಗು ಒಂದು ಕೈಯನ್ನು ಕಂಡ ಭಿಕ್ಷುವು ಚಕಿತನಾಗಿ, ತರಗೆಲೆಗಳನ್ನು ಸರಿಸಿದಾಗ ವಸಂತಸೇನೆಯನ್ನು ಕಾಣುತ್ತಾನೆ. ಈ ಬೌದ್ಧ ಭಿಕ್ಷುವು ಮತ್ತಾರೂ ಅಲ್ಲ; ಜೂಜುಖೋರರ ದಾಳಿಯಿಂದ ತಪ್ಪಿಸಿಕೊಂಡು, ವಸಂತಸೇನೆಯಿಂದ  ರಕ್ಷಿಸಲ್ಪಟ್ಟ ಸಂವಾಹಕ ಎನ್ನುವವನು; ಒಂದು ಕಾಲದಲ್ಲಿ ಚಾರುದತ್ತನ ಸೇವಕನಾಗಿದ್ದವನು. (ಎರಡನೆಯ ಅಂಕವನ್ನು ನೋಡಿರಿ.) ಹಿಂದಿನ ಅಂಕದಲ್ಲಿ ಇದೇ ಬೌದ್ಧ ಭಿಕ್ಷುವನ್ನು ಅಪಶಕುನ ಎಂದು ಭಾವಿಸಿ, ಚಾರುದತ್ತ ಹಾಗು ಮೈತ್ರೇಯರು ಬೇರೊಂದು ದಿಕ್ಕಿನಲ್ಲಿ ಹೋಗಿರುತ್ತಾರೆ.

ಭಿಕ್ಷುವು ವಸಂತಸೇನೆಯನ್ನು ಉಪಚರಿಸುತ್ತಾನೆ.  ‘ನಿನಗೆ ಈ ಗತಿ ಏಕಾಯಿತಮ್ಮ?’ ಎಂದು ಆತನು ವಸಂತಸೇನೆಗೆ ಕೇಳುತ್ತಾನೆ. ‘ಸೂಳೆಯರಿಗೆ ಇದೇ ಗತಿ ಬರುತ್ತದೆ’ ಎನ್ನುವ ವಸಂತಸೇನೆಯ ಕರುಣಾಜನಕ ಉತ್ತರವು, ನಮ್ಮ ಸಮಾಜವ್ಯವಸ್ಥೆಯ ವಿಪರ್ಯಾಸವನ್ನು ತೋರಿಸುತ್ತದೆ. 

ಭಿಕ್ಷುವು ಅವಳನ್ನು ಸನ್ಯಾಸಿನಿಯೊಬ್ಬಳು ಇರುವ ವಿಹಾರಕ್ಕೆ ಕರೆದುಕೊಂಡು ಹೋಗುತ್ತಾನೆ. ವಸಂತಸೇನೆಯು ಅಲ್ಲಿ ತಾತ್ಪೂರ್ತಿಕವಾಗಿ ಆಸರೆಯನ್ನು ಪಡೆಯುತ್ತಾಳೆ. ಚಾರುದತ್ತನ ಮೇಲೆ ಕೊಲೆಯ ಆರೋಪವನ್ನು ಹೊರಿಸಲು ಇತ್ತ ಶಕಾರನು ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾನೆ. ಮರುದಿನದ ಬೆಳಗು ಚಾರುದತ್ತನ ಬದುಕು-ಸಾವುಗಳ ನಡುವಿನ ನಿರ್ಣಾಯಕ ದಿನವಾಗಿದೆ.


ಮೃಚ್ಛಕಟಿಕಮ್ ನಾಟಕವು ಈವರೆಗೆ ವಿನೋದ, ಶೃಂಗಾರ ಹಾಗು ಕರುಣಾರಸಗಳಿಂದ ಕೂಡಿದ ಕೋಮಲ ನಾಟಕವಾಗಿತ್ತು. ಇನ್ನು ಮುಂದಿನ ಎರಡು ಅಂಕಗಳಲ್ಲಿ ಈ ಕೋಮಲತೆ ಮಾಯವಾಗುತ್ತದೆ.  ಇದು ಪ್ರೇಕ್ಷಕನನ್ನು ಅಲ್ಲಾಡಿಸುವ  ಹಾಗು ಕಣ್ಣೀರಿಡಿಸುವ ನಾಟಕವಾಗುತ್ತದೆ. ವಾಸ್ತವ ಬದುಕಿನ ಕಠೋರತೆ ಹಾಗು ಸ್ವಾರ್ಥವನ್ನು ಇನ್ನು ಮುಂದೆ ನಾವು ನೋಡಲಿದ್ದೇವೆ.

Monday, May 9, 2016

ಮೃಚ್ಛಕಟಿಕಮ್-೮



ಅಂಕ ೬:
ಉತ್ತರಾರ್ಧ:
ಇಂಗ್ಲಿಶ್ ನಾಟಕಕಾರ ಶೇಕ್ಸಪಿಯರನ ‘Comedy of errors’ ಸಾಕಷ್ಟು ಪ್ರಸಿದ್ಧವಿದೆ. ಅದನ್ನು ಆಧರಿಸಿ, ಶ್ರೀ ಶಂಕರ ಮೊಕಾಶಿ-ಪುಣೇಕರರು ‘ವಿಪರ್ಯಾಸ ವಿನೋದ’ ಎನ್ನುವ ಪುಟ್ಟ ನಾಟಕವನ್ನು ಬರೆದಿದ್ದರು. ಒಂದು ಚಲನಚಿತ್ರವೂ ಸಹ ಇದೇ ಧಾಟಿಯಲ್ಲಿ ಕನ್ನಡದಲ್ಲಿ ನಿರ್ಮಿತವಾಗಿದೆ. ಮೃಚ್ಛಕಟಿಕಮ್ ನಾಟಕದಲ್ಲಿ ಈಗ ನಡೆಯಲಿರುವುದು ‘tragedy of errors’ ಅಥವಾ ದೈವೀದುರ್ವಿಪಾಕ.

ಆರನೆಯ ಅಂಕದ ಉತ್ತರಾರ್ಧವು ಚಾರುದತ್ತನ ಬಂಡಿಯ ಚಾಲಕನಾದ ವರ್ಧಮಾನಕನ ಪ್ರವೇಶದೊಂದಿಗೆ ಆಗುತ್ತದೆ. ‘ವಸಂತಸೇನೆಯನ್ನು ಬೇಗನೇ ಕರೆತರಲು ಚಾರುದತ್ತನು ತಿಳಿಸಿದ್ದಾನೆ’ ಎಂದು ವರ್ಧಮಾನಕನು ರದನಿಕೆಗೆ ಹೇಳುತ್ತಾನೆ. ವಸಂತಸೇನೆಯು ಸಿಂಗರಿಸಿಕೊಂಡು ಬರಲು ಒಳಗೆ ಹೋಗುತ್ತಾಳೆ. ಗಾಡಿಯಲ್ಲಿ ಹಾಸಬೇಕಾಗಿದ್ದ ಕಂಬಳಿಯನ್ನು ಮರೆತಿದ್ದ ವರ್ಧಮಾನಕನು ಕಂಬಳಿಯನ್ನು ತರಲು ಮನೆಯ ಒಳಗೆ ಹೋಗುತ್ತಾನೆ.

ಇದೇ ಸಮಯದಲ್ಲಿ ಶಕಾರನ ಬಂಡಿಯ ಚಾಲಕನಾದ ಸ್ಥಾವರಕನು ಬಂಡಿಯೊಂದಿಗೆ ಅಲ್ಲಿಗೆ ಬರುತ್ತಾನೆ. ವಾಹನಗಳ ದಟ್ಟಣೆಯು ಅತಿಯಾದದ್ದರಿಂದ, ಆತನು ತನ್ನ ಬಂಡಿಯನ್ನು ಅಲ್ಲಿಯೇ ಅಂದರೆ ಚಾರುದತ್ತನ ಮನೆಯ ಎದುರಿಗೆ ನಿಲ್ಲಿಸಬೇಕಾಗುತ್ತದೆ. ಶಕಾರನು ಸಹ ಪುಷ್ಪಕರಂಡಕ ಉದ್ಯಾನದಲ್ಲಿಯೇ ಇದ್ದಾನೆ. ಬಂಡಿಯ ಸಪ್ಪಳವನ್ನು ಕೇಳಿದ ವಸಂತಸೇನೆಯ ಚೇಟಿಯು ‘ಬಂಡಿಯು ಬಂದಿದೆ’ ಎಂದು ವಸಂತಸೇನೆಗೆ ತಿಳಿಸುತ್ತಾಳೆ. ವಸಂತಸೇನೆಯು ಶಕಾರನ ಬಂಡಿಯನ್ನೇ ಚಾರುದತ್ತನ ಬಂಡಿ ಎಂದು ತಪ್ಪಾಗಿ ಭಾವಿಸಿ, ಶಕಾರನ ಬಂಡಿಯನ್ನು ಏರುತ್ತಾಳೆ.

ವಿಧಿವೈಪರೀತ್ಯವನ್ನು ನೋಡಿದಿರಾ? ಹುಲಿಯ ಗವಿಯ ಬಾಗಿಲಿಗೆ ಜಿಂಕೆ ತಾನಾಗಿ ಹೋದಂತಾಯಿತಲ್ಲವೆ? ಪ್ರೇಕ್ಷಕನಿಗೆ ಇಲ್ಲಿ ಒಂದು ಪುಟ್ಟ ಸಂದೇಹ ಬರುವುದು ಸ್ವಾಭಾವಿಕ. ವಸಂತಸೇನೆ ಕುಳಿತಿದ್ದು ಬಂಡಿಯ ಚಾಲಕನಾದ ಸ್ಥಾವರಕನಿಗೆ ತಿಳಿಯಲಿಲ್ಲವೆ? ಈ ಅನುಮಾನ ಸರಿಯಾಗಿಯೇ ಇದೆ. ಇದನ್ನು ಸರಿಪಡಿಸಲು ನಮ್ಮ ನಾಟಕಕಾರನಾದ ಶೂದ್ರಕನು ಒಂದು ಉಪಾಯವನ್ನು ಹುಡುಕಿದ್ದಾನೆ. ಬಂಡಿಯು ನಿಂತಾಗ, ಚಾಲಕನು ಅದರ ಚಕ್ರವನ್ನು ಎಳೆದು ಮುನ್ನೂಕಿದ್ದಾನೆ. ಆ ಶ್ರಮದಿಂದಾಗಿ ತನಗೆ ಬಂಡಿಯು ಭಾರವಾಗಿ ಭಾಸವಾಗಿರಬಹುದು ಎಂದು ಸ್ಥಾವರಕನು ಭಾವಿಸಿ, ಬಂಡಿಯನ್ನು ಹೊಡೆದುಕೊಂಡು ಹೋಗುತ್ತಾನೆ. ಬಂಡಿಗಳನ್ನು ಬದಲಾಯಿಸಿದ ವಿಧಿಯು ವಸಂತಸೇನೆಯನ್ನು ಎಲ್ಲಿಗೆ ಕರೆದೊಯ್ಯುತ್ತಿದೆ ಎನ್ನುವುದನ್ನು ಮುಂದೆ ನೋಡೋಣ.

ಇತ್ತ ರಾಜಭಟರು ಡಂಗುರವನ್ನು ಸಾರುತ್ತ ಬರುತ್ತಿದ್ದಾರೆ. ಸೆರೆಯಲ್ಲಿ ಇಡಲ್ಪಟ್ಟ ಆರ್ಯಕ ಎನ್ನುವ ಸೆರೆಯಾಳು ಕಾರಾಗೃಹದಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಸೈನಿಕರು ಎಲ್ಲೆಡೆಗೂ ಅವನನ್ನು ಶೋಧಿಸುತ್ತಿದ್ದಾರೆ. ಜನಗಳೆಲ್ಲ ಎಚ್ಚರದಿಂದ ಇರಬೇಕು ಎನ್ನುವುದು ಅವರ ಡಂಗುರದ ಸಾರವಾಗಿದೆ.

ಇದೀಗ ತಪ್ಪಿಸಿಕೊಂಡು ಓಡಿ ಹೋದ ಆರ್ಯಕನ ಪ್ರವೇಶವು ರಂಗದಲ್ಲಿ ಆಗುತ್ತದೆ. ಆತನು ಕೈಬೇಡಿಗಳನ್ನು ತುಂಡರಿಸಿಕೊಂಡಿದ್ದಾನೆ. ಆದರೆ ಕಾಲುಬೇಡಿಗಳು ಹಾಗೆಯೇ ಇವೆ. (ಕಾಲುಬೇಡಿಗಳು ಹಾಗೆಯೇ ಇರುವದರ ಮಹತ್ವವನ್ನು ಸ್ವಲ್ಪದರಲ್ಲಿ ನಾವು ತಿಳಿಯುತ್ತೇವೆ.) ಶರ್ವಿಲಕನ ಸಹಾಯದಿಂದ ಆತನು ಹೇಗೆ ಪಾರಾದನು ಎನ್ನುವುದು ಆರ್ಯಕನ ಸ್ವಗತದಿಂದ ಪ್ರೇಕ್ಷಕರಿಗೆ ತಿಳಿಯುತ್ತದೆ. (ಶರ್ವಿಲಕನು ವಸಂತಸೇನೆಯ ದಾಸಿಯಾಗಿದ್ದ ಮದನಿಕೆಯ ಪ್ರಿಯಕರ ಎನ್ನುವುದನ್ನು ನೆನಪಿಸಿಕೊಳ್ಳಿರಿ. ನಾಲ್ಕನೆಯ ಅಂಕದಲ್ಲಿ ಈತನು ಮದನಿಕೆಯನ್ನು ಬಿಡಿಸಿಕೊಳ್ಳಲು, ವಸಂತಸೇನೆಯ ಬಳಿಗೆ ಹೋಗಿದ್ದನು.)

ರಾಜಭಟರಿಂದ ತಪ್ಪಿಸಿಕೊಳ್ಳಲು ಆರ್ಯಕನು ಅಲ್ಲಿಯೇ ನಿಂತಿದ್ದ ಚಾರುದತ್ತನ ಬಂಡಿಯೊಳಗೆ ಥಟ್ಟನೇ ನುಸಳಿಕೊಳ್ಳುತ್ತಾನೆ. ಕಾಲುಕೋಳಗಳ ಕಿಳಿಕಿಳಿಯನ್ನು ಗೆಜ್ಜೆಗಳ ನಾದ ಎಂದು ಭ್ರಮಿಸಿದ ಚಾರುದತ್ತನ ಚಾಲಕನು ವಸಂತಸೇನೆಯೇ ಕುಳಿತುಕೊಂಡಳು ಎಂದು ಭಾವಿಸಿ, ‘ಆರ್ಯೇ, ಸಾವಕಾಶವಾಗಿ ಹಿಂಬದಿಯಿಂದಲೇ ಹತ್ತವ್ವ’ ಎಂದು ಹೇಳುತ್ತ ಬಂಡಿಯನ್ನು ಹೊಡೆದುಕೊಂಡು ಹೋಗುತ್ತಾನೆ.

ಇಂತಹ ಅದಲು ಬದಲಾಟಗಳನ್ನು ನಾವು ಅನೇಕ ನಾಟಕಗಳಲ್ಲಿ ಹಾಗು ಚಲನಚಿತ್ರಗಳಲ್ಲಿ ನೋಡಿದ್ದೇವೆ. ಶ್ರೀ ರಬೀಂದ್ರನಾಥ ಠಾಕೂರರು ಬರೆದ ‘ನೌಕಾಡುಬಿ’ ಎನ್ನುವ ಕಾದಂಬರಿಯಲ್ಲೂ ಸಹ (೧೯೦೬) ಈರ್ವರು ವರಕನ್ಯೆಗಳ  ಅದಲುಬದಲಾಟ ನಡೆದಿದೆ. ಇವೆಲ್ಲವುಗಳ ಮೂಲರೂಪವು ಮೃಚ್ಛಕಟಿಕಮ್ ನಾಟಕ ಎನ್ನಬಹುದು.

ಆರ್ಯಕನನ್ನು ಹುಡುಕಲು ರಾಜಭಟರು ಎಲ್ಲೆಲ್ಲೂ ಶೋಧನಾಕಾರ್ಯವನ್ನು ಮಾಡುತ್ತಿದ್ದಾರೆ. ವೀರಕ ಎನ್ನುವ ಸೈನ್ಯಾಧಿಕಾರಿಯು ತನ್ನ ಸೈನಿಕರಿಗೆ ಶೋಧನೆಯ ಸೂಚನೆಗಳನ್ನು ನೀಡುತ್ತಾನೆ  ಹಾಗು ಚಂದನಕ ಎನ್ನುವ ಸೈನಿಕನೊಡನೆ ಪ್ರಾಗಾರದ ಮೇಲೆ ನಿಂತುಕೊಂಡು ವೀಕ್ಷಿಸುತ್ತಿದ್ದಾನೆ. ಆ ಸಮಯದಲ್ಲಿ ತೆರೆಯಿಂದ ಮುಚ್ಚಲ್ಪಟ್ಟ ಬಂಡಿಯೊಂದು ಅಲ್ಲಿ ಬರುತ್ತಿರುವುದನ್ನು ಅವರೀರ್ವರೂ ನೋಡುತ್ತಾರೆ. ಬಂಡಿಯ ಚಾಲಕನು ‘ಇದು ಚಾರುದತ್ತನ ಬಂಡಿ; ತಾನು ವಸಂತಸೇನೆಯನ್ನು ಪುಷ್ಪಕರಂಡಕ ಉದ್ಯಾನಕ್ಕೆ ಕರೆದೊಯ್ಯುತ್ತಿರುವದಾಗಿ ಹೇಳುತ್ತಾನೆ.’ ಚಂದನಕನು ಆ ಗಾಡಿಯನ್ನು ಬಿಡಲು ಸಮ್ಮತಿಸಿದನು, ಆದರೆ ವೀರಕನು ಒಪ್ಪಲಿಲ್ಲ. ಚಂದನಕನು ಗಾಡಿಯನ್ನು ಪರೀಕ್ಷಿಸುತ್ತಾನೆ. ಒಳಗೆ ಆರ್ಯಕನಿರುವುದನ್ನು ನೋಡುತ್ತಾನೆ. ಅವನ ಪ್ರಾರ್ಥನೆಯಂತೆ ಅವನನ್ನು ಪಾರು ಮಾಡುವ ಉದ್ದೇಶದಿಂದ, ‘ಒಳಗಿರುವವಳು ವಸಂತಸೇನೆಯೇ’ ಎಂದು ವೀರಕನಿಗೆ ಹೇಳುತ್ತಾನೆ.  

ಚಂದನಕನ ಮಾತಿನಲ್ಲಿ ವೀರಕನಿಗೆ ನಂಬಿಕೆ ಬರುವುದಿಲ್ಲ. ಸ್ವತಃ ತಾನೇ ಪರೀಕ್ಷಿಸಲು ಹೊರಡುತ್ತಾನೆ. ಆರ್ಯಕನನ್ನು ರಕ್ಷಿಸುವ ಉದ್ದೇಶದಿಂದ ಚಂದನಕನು ಅವನೊಡನೆ ಜಗಳ ಪ್ರಾರಂಭಿಸುತ್ತಾನೆ. ವೀರಕನನ್ನು ಕೆಳಗೆ ಬೀಳಿಸಿ, ಕಾಲಿನಿಂದ ಒದೆಯುತ್ತಾನೆ. ಆಬಳಿಕ ಬಂಡಿಯಲ್ಲಿ ಇದ್ದ ವ್ಯಕ್ತಿ ವಸಂತಸೇನೆಯೇ ಎನ್ನುವಂತೆ, ‘ವಸಂತಸೇನೆಯೆ, ಯಾರಾದರೂ ಕೇಳಿದರೆ, ಚಂದನಕ ಹಾಗು ವೀರಕರು ಈ ಗಾಡಿಯನ್ನು ಪರೀಕ್ಷಿಸಿದ್ದಾರೆ ಎಂದು ತಿಳಿಸು. ನನ್ನ ಗುರುತಿಗಾಗಿ ಇದೊಂದು ನಿನ್ನ ಬಳಿ ಇರಲಿ’ ಎಂದು ಹೇಳುತ್ತ ತನ್ನ ಖಡ್ಗವನ್ನು ಕೊಡುತ್ತಾನೆ. ‘ಆರ್ಯೇ, ಈ ವಿಶ್ವಾಸಕ್ಕೆ ಪ್ರತಿಯಾಗಿ ನನ್ನ ನೆನಪು ನಿನ್ನಲ್ಲಿ ಇರಲಿ’ ಎಂದು ಗುಪ್ತ ಸೂಚನೆ ಕೊಡುತ್ತಾನೆ.

ರಾಜನ ಸೈನ್ಯಾಧಿಕಾರಿಯಾದ ವೀರಕನೊಡನೆ ಜಗಳವಾಡಿ, ಆರ್ಯಕನನ್ನು ಈ ರೀತಿಯಾಗಿ ಬೀಳ್ಕೊಟ್ಟ ಚಂದನಕನು ಇನ್ನು ಇಲ್ಲಿ ಇರುವುದು ಸರಿಯಲ್ಲ ಎಂದು ಭಾವಿಸಿ, ತನ್ನ ಬಂಧು, ಮಕ್ಕಳೊಡನೆ ಆರ್ಯಕನ ಗುಂಪಿಗೆ ಸೇರಲು ಹೊರಟು ಹೋಗುತ್ತಾನೆ. ( ರಾಜನ ವಿರೋಧಿಯಾದ ಆರ್ಯಕನ ತಂಡವು ಸಾಮಾನ್ಯ ಜನರಿಂದ ಬೆಳೆಯುತ್ತಿರುವ ಪರಿಯನ್ನು ಗಮನಿಸಿರಿ.)

ಆರನೆಯ ಅಂಕದ ಪುರ್ವಾರ್ಧದಲ್ಲಿ ವಿನೋದ,ಕರುಣೆ ಹಾಗು ಶೃಂಗಾರಗಳಿಂದ ತುಂಬಿದ ಈ ನಾಟಕವು, ಆರನೆಯ ಅಂಕದ ಉತ್ತರಾರ್ಧದಲ್ಲಿ ರಂಗಸ್ಥಳದ ಮೇಲೆ ಕೋಲಾಹಲವನ್ನು ತೋರಿಸುತ್ತದೆ, ಪ್ರೇಕ್ಷಕನನ್ನು ಬೆಚ್ಚಿ ಬೀಳಿಸುತ್ತದೆ. ಮುಂದೆನಾದೀತು ಎನ್ನುವ ಕುತೂಹಲವನ್ನು ಪ್ರೇಕ್ಷಕನಲ್ಲಿ ಹುಟ್ಟಿಸುತ್ತದೆ.

ಏಳನೆಯ ಅಂಕ:
ಚಾರುದತ್ತ ಹಾಗು ಮೈತ್ರೇಯರು ಪುಷ್ಪಕರಂಡಕ ಉದ್ಯಾನದಲ್ಲಿ ವಸಂತಸೇನೆಯನ್ನು ನಿರೀಕ್ಷಿಸುತ್ತಿರುವ ದೃಶ್ಯದಿಂದ ಏಳನೆಯ ಅಂಕವು ಪ್ರಾರಂಭವಾಗುತ್ತದೆ. ವರ್ಧಮಾನಕನು ಎಷ್ಟು ತಡಮಾಡಿದನಲ್ಲ, ಏನು ಕಾರಣವಿರಬಹುದು ಎಂದು ಇವರೀರ್ವರು ಆಲೋಚಿಸುತ್ತಿರುವಾಗಲೇ, ವರ್ಧಮಾನಕನು ಬಂದು, ತಡವಾದದ್ದಕ್ಕೆ ಕ್ಷಮೆ ಕೇಳುತ್ತಾನೆ. ಚಾರುದತ್ತನ ಸೂಚನೆಯಂತೆ ಮೈತ್ರೇಯನು ವಸಂತಸೇನೆಗೆ ಇಳಿಯಲು ಸಹಾಯ ಮಾಡಲೆಂದು ಹೋದವನು, ಅಲ್ಲಿ ಪುರುಷನೊಬ್ಬನನ್ನು ಕಂಡು ಬೆಚ್ಚಿ ಬೀಳುತ್ತಾನೆ.

ಚಾರುದತ್ತನು ತಾನೇ ಅಲ್ಲಿ ಹೋಗಿ ನೋಡಿದಾಗ, ಅಲ್ಲಿದ್ದ ಆರ್ಯಕನು ಚಾರುದತ್ತನಿಂದ ರಕ್ಷಣೆಯನ್ನು ಕೋರುತ್ತಾನೆ. ಚಾರುದತ್ತನು ಆರ್ಯಕನಿಗೆ ರಕ್ಷಣೆಯ ಭರವಸೆಯನ್ನು ನೀಡುತ್ತಾನೆ. ಈ ಸಂದರ್ಭದಲ್ಲಿ ವಸಂತಸೇನೆ ಏನಾದಳು ಎನ್ನುವ ಚಿಂತೆ ಇದ್ದರೂ ಸಹ, ಚಾರುದತ್ತನು ಧೈರ್ಯ ಹಾಗು ಗಾಂಭೀರ್ಯದಿಂದ ನಡೆದುಕೊಳ್ಳುವ ರೀತಿಯು ಆತನ ಸಂಭಾಷಣೆಯಲ್ಲಿ ವ್ಯಕ್ತವಾಗುತ್ತದೆ.

ಚಾರುದತ್ತನು ಆರ್ಯಕನಿಗೆ ಹೇಳುವ ಮಾತು: ‘ದೈವವೇ ನಿನ್ನನ್ನು ಈ ಕಡೆಗೆ ಕರೆ ತಂದಿತು. ನಿನ್ನನ್ನು ಕಂಡದ್ದು ತುಂಬ ಸಂತೋಷ. ಶರಣಾದ ನಿನ್ನನ್ನು ಕೈ ಬಿಡುವುದರ ಬದಲು ನನ್ನ ಪ್ರಾಣವನ್ನೇ ಕೊಡುವೆನು. ವರ್ಧಮಾನಕ, ಆತನ ಕಾಲಿನ ಸಂಕೋಲೆಯನ್ನು ಬಿಡಿಸಿ ತೆಗೆ’. (ಆರ್ಯಕನ ಕಾಲುಕೋಳಗಳನ್ನು ಬಿಡಿಸಿ, ಆತನು ಸ್ವಾತಂತ್ರ್ಯವನ್ನು ಪಡೆಯಲು ಚಾರುದತ್ತನು ಈ ರೀತಿಯಲ್ಲಿ ಕಾರಣೀಭೂತನಾದನು.)

ಇಷ್ಟೇ ಅಲ್ಲದೆ, ‘ಈ ಪ್ರದೇಶದಲ್ಲಿ ಸಾಕಷ್ಟು ಜನ ಓಡಾಡುತ್ತಿರುವರು. ಗಾಡಿಯಲ್ಲಿ ಹೋದರೆ ನಿನ್ನನ್ನು ಯಾರೂ ನೋಡಲಾರರು. ಆದುದರಿಂದ ಗಾಡಿಯಲ್ಲಿಯೇ ಹೋಗು’ ಎಂದು ತನ್ನ ಗಾಡಿಯನ್ನೂ ಸಹ ಚಾರುದತ್ತನು ಆರ್ಯಕನಿಗೆ ಕೊಡುತ್ತಾನೆ. ಆರ್ಯಕನ ಸಂಕೋಲೆಗಳನ್ನು ಹಾಳು ಬಾವಿಯಲ್ಲಿ ಬಿಸಾಡಲು ಮೈತ್ರೆಯನಿಗೆ ಹೇಳುವುದು ಚಾರುದತ್ತನ ಎಚ್ಚರಿಕೆಯ ಸ್ವಭಾವವನ್ನೂ ತೋರಿಸುತ್ತದೆ.

‘ದೈವವೇ ನಿನ್ನನ್ನು ಈ ಕಡೆಗೆ ಕರೆ ತಂದಿತು.’ ಎಂದು ಚಾರುದತ್ತನು ಆರ್ಯಕನಿಗೆ ಹೇಳುವ ಮಾತಿನಲ್ಲಿ ಅಡಗಿರುವ ವ್ಯಂಗ್ಯವನ್ನು ಗಮನಿಸಿರಿ. ಈ ವ್ಯಂಗ್ಯವು ಪ್ರೇಕ್ಷಕರಿಗೆ ಸ್ಪಷ್ಟವಾಗಿ ಕಾಣುತ್ತಿದೆ, ಅದರೆ ಸ್ವತಃ ಚಾರುದತ್ತನಿಗೆ ಅದು ಕಂಡಿಲ್ಲ! ಯಾವ ದೈವವು ಆರ್ಯಕನ ಬೆಂಬಲಕ್ಕೆ ನಿಂತಿತೊ, ಅದೇ ದೈವವು ವಸಂತಸೇನೆಗೆ ಅವಳ ಜೀವನದ ದೊಡ್ಡ ಆಘಾತವನ್ನು ನೀಡಲು ಸಿದ್ಧವಾಗುತ್ತಿದೆ. ಇದಕ್ಕೇ ‘ಅದೃಷ್ಟ’ (=ಕಾಣದೇ ಇರುವದು) ಎನ್ನುತ್ತಾರಲ್ಲವೆ?


ಆರ್ಯಕನ ಕಾಲುಕೋಳಗಳು ವಹಿಸಿದ ಪಾತ್ರವನ್ನು ಇಲ್ಲಿ ಗಮನಿಸಬೇಕು. ಈ ಕೋಳಗಳ ನಾದವನ್ನು, ಬಂಡಿಯ ಚಾಲಕನಾದ ವರ್ಧಮಾನಕನು ಗೆಜ್ಜೆಯ ಧ್ವನಿ ಎಂದು ಭ್ರಮಿಸಿ, ಆರ್ಯಕನನ್ನೇ ವಸಂತಸೇನೆ ಎಂದು ಕಲ್ಪಿಸಿಕೊಂಡನು. ಇದೀಗ ಆರ್ಯಕನ ಕೋಳಗಳನ್ನು ತೆಗೆಯಿಸುವ ಮೂಲಕ, ಆತನನ್ನು ಸ್ವತಂತ್ರನನ್ನಾಗಿ ಮಾಡಲು ಚಾರುದತ್ತನು ಕಾರಣೀಭೂತನಾದನು. ಚಾರುದತ್ತನ ಉಪಕಾರಕ್ಕೆ ಪ್ರತ್ಯುಪಕಾರವನ್ನು ಮಾಡಲು ಆರ್ಯಕನಿಗೆ ಸಾಧ್ಯವಾಗುವುದೋ ಹೇಗೆ ಎನ್ನುವುದನ್ನು ಕೊನೆಯ ಅಂಕದಲ್ಲಿ ನೋಡೋಣ.

ಆರ್ಯಕನು ಗಾಡಿಯಲ್ಲಿ ಹೋದ ಬಳಿಕ, ಚಾರುದತ್ತ ಹಾಗು ಮೈತ್ರೇಯರು ತಾವೂ ತೆರಳುತ್ತಾರೆ.  ಅಷ್ಟರಲ್ಲಿ ಓರ್ವ ಬೌದ್ಧ ಭಿಕ್ಷು ಅಲ್ಲಿಗೆ ಬರುವುದನ್ನು ನೋಡಿದ ಅವರು, ‘ಇದು ಅಪಶಕುನ’ ಎಂದು ಭಾವಿಸಿ, ಬೇರೊಂದು ದಿಕ್ಕನ್ನು ಹಿಡಿಯುತ್ತಾರೆ. ನಮ್ಮ ನಾಟಕಕಾರನು ಮತ್ತೊಮ್ಮೆ ಬೌದ್ಧ ಭಿಕ್ಷುಗಳ ಲೇವಡಿ ಮಾಡುವುದನ್ನು ಇಲ್ಲಿ ಕಾಣಬಹುದು.

ಚಾರುದತ್ತನು ಅಪಶಕುನ ಎಂದು ಭಾವಿಸಿದ ಭಿಕ್ಷುವೇ, ಈ ನಾಟಕದಲ್ಲಿ ಮತ್ತೊಂದು ಮಹತ್ವದ ಪಾತ್ರವನ್ನಾಡುತ್ತಾನೆ.  ಮೊದಲೊಮ್ಮೆ ಚಾರುದತ್ತನಲ್ಲಿ ಸೇವಕನಾಗಿದ್ದ ಸಂವಾಹಕ ಎನ್ನುವವನನ್ನು ವಸಂತಸೇನೆಯು ಜೂಜುಖೋರರಿಂದ ರಕ್ಷಿಸಿದ್ದಳು, (ಎರಡನೆಯ ಅಂಕದಲ್ಲಿ). ಆತ ತನ್ನಂತರ ಬೌದ್ಧ ಭಿಕ್ಷುವಾಗಿದ್ದ. ಈ ಭಿಕ್ಷುವಿನ ಪಾತ್ರವನ್ನು ಮುಂದಿನ ಅಂಕದಲ್ಲಿ ನೋಡೋಣ.

Monday, May 2, 2016

ಮೃಚ್ಛಕಟಿಕಮ್-೭



ಮೃಚ್ಛಕಟಿಕಮ್ ನಾಟಕದ ಆರನೆಯ ಅಂಕವನ್ನು ಪೂರ್ವಾರ್ಧ ಹಾಗು ಉತ್ತರಾರ್ಧ ಎಂದು ಎರಡು ಭಾಗಗಳನ್ನಾಗಿ ಮಾಡಲು ನಾನು ಇಚ್ಛಿಸುತ್ತೇನೆ. ಮೂಲನಾಟಕದಲ್ಲಿ ಈ ತರಹದ ಭಾಗಗಳಿಲ್ಲ. ಆದರೆ ಇದು ನಮ್ಮ ಅನುಕೂಲಕ್ಕಾಗಿ ಇಲ್ಲಿ ಮಾಡಿಕೊಳ್ಳುತ್ತಿರುವ ವಿಭಜನೆ ಅಷ್ಟೆ.

ಪೂರ್ವಾರ್ಧ:
ಐದನೆಯ ಅಂಕದಲ್ಲಿ ಚಾರುದತ್ತ ಹಾಗು ವಸಂತಸೇನೆಯರ ಪ್ರೇಮಸಮ್ಮಿಲನವಾಯಿತು. ಇದೀಗ ಬೆಳಗು ಹರಿದಿದೆ. ವಸಂತಸೇನೆ ಇನ್ನೂ ಎದ್ದಿಲ್ಲ. ಆರನೆಯ ಅಂಕವು ಓರ್ವ ದಾಸಿಯ ರಂಗಪ್ರವೇಶದಿಂದ ಪ್ರಾರಂಭವಾಗುತ್ತದೆ. ‘ಬೆಳಗಾದರೂ ಇನ್ನೂ ವಸಂತಸೇನೆ ಎದ್ದಿಲ್ಲವಲ್ಲ’ ಎಂದುಕೊಳ್ಳುತ್ತ ಈ ದಾಸಿಯು ರಂಗದಲ್ಲಿ ಬರುತ್ತಾಳೆ. ವಸಂತಸೇನೆಯನ್ನು ಈ ದಾಸಿ ಎಚ್ಚರಿಸಿದಾಗ, ಅವಳು ದಾಸಿಗೆ ಕೇಳುವ ಮೊದಲ ಪ್ರಶ್ನೆ: ‘ಚಾರುದತ್ತರು ಎಲ್ಲಿ?’

ಚಾರುದತ್ತನಾದರೊ ನಸುಗತ್ತಲೆ ಇರುವಾಗಲೇ ಎದ್ದು ಪುಷ್ಪಕರಂಡಕ ಉದ್ಯಾನಕ್ಕೆ ಹೋಗಿದ್ದಾನೆ. ಬೆಳಕು ಹರಿಯುವ ಮುನ್ನವೇ ವಸಂತಸೇನೆಯನ್ನು ಉದ್ಯಾನಕ್ಕೆ ಕರೆದುಕೊಂದು ಬರಲು, ತನ್ನ ಬಂಡಿಚಾಲಕನಾದ ವರ್ಧಮಾನಕನಿಗೆ ಹೇಳಿದ್ದಾನೆ. ವಸಂತಸೇನೆಯೊಡನೆ ಉದ್ಯಾನದಲ್ಲಿ ವಿಹರಿಸುವ ಉದ್ದೇಶ ಚಾರುದತ್ತನಿಗೆ ಇದ್ದಿರಬಹುದು.

ಚಾರುದತ್ತನ ಉದ್ದೇಶ ಏನೇ ಇರಲಿ, ವಸಂತಸೇನೆಯು ತನ್ನ ನೈತಿಕ ಪಾಲನೆಗಳನ್ನು ಮರೆತು, ಅಲ್ಲಿಂದ ತನ್ನ ನಲ್ಲನೆಡೆಗೆ ಧಾವಿಸುವಂತಹ ಸ್ತ್ರೀಯಲ್ಲ. ಅವಳು ಚಾರುದತ್ತನಲ್ಲಿ ಇಟ್ಟಿದ್ದ ಆಭರಣಗಳು ಈಗಾಗಲೇ ಅವಳಿಗೆ ಮರಳಿ ಬಂದಿವೆ. ಆದರೆ ಚಾರುದತ್ತನ ಹೆಂಡತಿ ಧೂತಾದೇವಿಯು ಕಳುಹಿಸಿಕೊಟ್ಟಿದ್ದ ಮುತ್ತಿನ ಹಾರವು ಇನ್ನೂ ವಸಂತಸೇನೆಯ ಬಳಿಯಲ್ಲಿಯೇ ಇದೆ. ಅದನ್ನು ಧೂತಾದೇವಿಗೆ ಮರಳಿಸಬೇಕಲ್ಲವೆ? ಆದರೆ ಚಾರುದತ್ತನೊಡನೆ ಒಂದು ಇರುಳನ್ನು ಕಳಿದ ಬಳಿಕ, ಸ್ವತಃ ತಾನು ಧೂತಾದೇವಿಯ ಬಳಿಗೆ ಹೋಗುವುದು ತನಗಾಗಲೀ, ಧೂತಾದೇವಿಗಾಗಲೀ ಸಂಕೋಚ ಹಾಗು ಲಜ್ಜೆಯನ್ನು ತರುವ ಸಂಗತಿಯಾಗಿದೆ. ಆದುದರಿಂದ, ವಸಂತಸೇನೆಯು ಓರ್ವ ದಾಸಿಯ ಕೈಯಲ್ಲಿ ಮುತ್ತಿನ ಹಾರವನ್ನು ಕೊಟ್ಟು ಧೂತಾದೇವಿಗೆ ಮರಳಿಸಲು ಹೇಳುವಳು.

ಆದರೆ ಧೂತಾದೇವಿಯು ನೈತಿಕ ತಿಳಿವಳಿಕೆಯಲ್ಲಿ ಯಾರಿಗೂ ಕಡಿಮೆ ಇಲ್ಲ. ಅವಳು ಮುತ್ತಿನ ಹಾರವನ್ನು ತಿರಸ್ಕರಿಸುತ್ತ ‘ತನ್ನ ಗಂಡನೇ ತನಗೆ ಶ್ರೇಷ್ಠ ಆಭರಣ’ ಎಂದು ಹೇಳಿಕಳಿಸುತ್ತಾಳೆ. ಈ ತಿರಸ್ಕರಣೆಗೆ ಕಾರಣಗಳನ್ನು ಈ ರೀತಿಯಾಗಿ ಊಹಿಸಬಹುದು:
(೧) ಸ್ವಾಭಿಮಾನಿಯಾದ ಧೂತಾದೇವಿಯು ಒಮ್ಮೆ ಕೊಟ್ಟ ಆಭರಣವನ್ನು ಹೇಗೆ ಮರಳಿ ಪಡೆದಾಳು?
(೨) ಬದುಕಿನ ಅನೇಕ ಘಟ್ಟಗಳಲ್ಲಿ ಹಾಯ್ದು ಬಂದ ಅವಳಿಗೆ  ಆಭರಣಗಳ ಬಗೆಗೆ ಮೋಹ ಉಳಿದಿರಲಿಕ್ಕಿಲ್ಲ. 
(೩) ತನ್ನ ಗಂಡನ ‘ಎರಡನೆಯ ಹೆಣ್ಣು’ ಸ್ಪರ್ಶಿಸಿದ ಆಭರಣವನ್ನು ಧರಿಸಲು ಅವಳಿಗೆ ಮನಸ್ಸು ಆಗುತ್ತಿರಲಿಕ್ಕಿಲ್ಲ.
(೪) ತನ್ನ ಗಂಡನಿಗೆ ತಾನು ಕೊಟ್ಟ ಆಭರಣವನ್ನು, ಆತನೇ ಮರಳಿ ಕೊಟ್ಟರೆ ಮಾತ್ರ, ಸ್ವೀಕರಿಸುವುದು ಚೆನ್ನ; ಬೇರಾರೋ, (ವಿಶೇಷತಃ ಗಂಡನ ಪ್ರಣಯಿಯೊಬ್ಬಳು) ಅದನ್ನು ಮರಳಿಸಿದರೆ, ಧೂತಾದೇವಿ ಅದನ್ನು ಹೇಗೆ ಸ್ವೀಕರಿಸಿಯಾಳು?

‘ತನ್ನ ಗಂಡನೇ ತನಗೆ ಶ್ರೇಷ್ಠ ಆಭರಣ’ ಎಂದು ಹೇಳುವ ಮೂಲಕ, ಧೂತಾದೇವಿಯು ವಸಂತಸೇನೆಗೆ ಒಂದು ಸಂದೇಶವನ್ನು ನೀಡುತ್ತಿರಬಹುದು: ‘ಚಾರುದತ್ತನು ನಿನ್ನ ಪ್ರಣಯಿಯಾಗಿರಬಹುದು. ಆತ ನಿನಗೆ ಆಭರಣಗಳನ್ನು ಕೊಡಲೂ ಬಹುದು. ಆದರೆ ಆತ ಅಗ್ನಿಸಾಕ್ಷಿಯಾಗಿ ನನ್ನವನು. ಆತನ ಮೇಲೆ ಮೊದಲ ಹಾಗು ಕೊನೆಯ ಅಧಿಕಾರ ನನ್ನದೇ ಆಗಿದೆ.’

ಇಲ್ಲಿ ವಸಂತಸೇನೆ ಹಾಗು ಧೂತಾದೇವಿಯರ ಪರಸ್ಪರ ಮುಖಾಮುಖಿ ಆಗುತ್ತಿಲ್ಲ ಎನ್ನುವುದನ್ನು ಗಮನಿಸಬೇಕು. ಇವರ ಸಂಪರ್ಕ ಕೇವಲ ದಾಸಿಯ ಮುಖಾಂತರವಾಗಿ ಆಗುತ್ತಿದೆ. ಇವರೀರ್ವರಿಗೂ ತಮ್ಮ ಸ್ಥಾನಗಳ ಅರಿವಿದೆ. (ಧೂತಾದೇವಿಯನ್ನು ಪ್ರೇಕ್ಷಕನು ನೋಡುವುದು ಕೊನೆಯ ಅಂಕದಲ್ಲಿ ಮಾತ್ರ.)

ಬೆಳಗಿನ ಜಾವದಲ್ಲಿ ಮನೆಯ ಹೊರಗೆ ಆಡುತ್ತಿರುವ, ಚಾರುದತ್ತನ ಮಗನಾದ ರೋಹಸೇನನೊಂದಿಗೆ, ಚಾರುದತ್ತನ ಸೇವಿಕೆಯಾದ ರದನಿಕೆಯು ಇದೀಗ ಪ್ರವೇಶಿಸುತ್ತಾಳೆ. (ರೋಹಸೇನನ ಜೊತೆಗೆ ಆಡುತ್ತಿರುವ ಬಾಲಕನ ಬಳಿಯಲ್ಲಿ ಬಂಗಾರದ ಆಟಿಕೆಯ ಬಂಡಿಯಿದೆ. ರೋಹಸೇನನು ನೆರೆಮನೆಯ ಹುಡುಗನ ಹಾಗೆ ತನಗೂ ಚಿನ್ನದ ಬಂಡಿ ಬೇಕು ಎಂದು ಅಳುತ್ತಿದ್ದಾನೆ. ರೋಹಸೇನನನ್ನು ಸಮಾಧಾನ ಪಡಿಸಲು, ರದನಿಕೆಯು ಸದ್ಯಕ್ಕೆ ನಿನಗೆ ಮಣ್ಣಿನ ಬಂಡಿಯನ್ನು ಮಾಡಿಕೊಡುವೆ, ಅದರೊಂದಿಗೆ ಆಟವಾಡು ಎಂದು ಹೇಳುತ್ತಿದ್ದಾಳೆ.) ಆದರೆ ಮಗುವು ತನಗೆ ಬಂಗಾರದ ಆಟಿಕೆಯ ಬಂಡಿಯೇ ಬೇಕು ಎಂದು ಹಟ ಮಾಡುತ್ತಿದೆ.

ಈ ಸಮಯದಲ್ಲಿ ಮನೆಯಿಂದ ಹೊರಬಂದ ವಸಂತಸೇನೆಯು ರೋಹಸೇನನನ್ನು ನೋಡುತ್ತಾಳೆ.  ಮಗುವಿಗೂ ಚಾರುದತ್ತನಿಗೂ ಹೋಲಿಕೆ ಇರುವದರಿಂದ, ಇವನು ಚಾರುದತ್ತನ ಮಗನೇ ಎಂದು ತಿಳಿದು ಅವಳಲ್ಲಿ ವಾತ್ಸಲ್ಯ ಉಕ್ಕಿ ಬರುತ್ತದೆ. ಅಳುತ್ತಿರುವ ಮಗುವನ್ನು ಸಮಾಧಾನ ಪಡಿಸುವ ಉದ್ದೇಶದಿಂದ, ವಸಂತಸೇನೆಯು, ‘ಅಳಬೇಡ ಮಗು. ನಾನು ನಿನಗೆ ಬಂಗಾರದ ಬಂಡಿಯನ್ನು ಕೊಡಿಸುತ್ತೇನೆ’ ಎಂದು ಹೇಳುತ್ತಾಳೆ.

ಇವಳನ್ನು ಮೊದಲು ನೋಡಿರದ ಆ ಮಗುವು ವಸಂತಸೇನೆಗೆ ನೀನು ಯಾರು?’ ಎಂದು ಕೇಳುತ್ತದೆ. ನನ್ನನ್ನು ನಿನ್ನ ತಾಯಿಯೆಂದೇ ತಿಳಿಎಂದು ವಸಂತಸೇನೆಯು ಹೇಳುತ್ತಾಳೆ. ಈ ಮಾತಿಗೆ ಅಚ್ಚರಿಪಟ್ಟ ಆ ಮಗುವು, ‘ಅದು ಹೇಗೆ ಸಾಧ್ಯ? ನನ್ನ ತಾಯಿಯು ನಿನ್ನಂತೆ ಆಭರಣಗಳನ್ನು ಧರಿಸುವದಿಲ್ಲಎನ್ನುತ್ತದೆ!

ಆ ಕ್ಷಣವೇ ವಸಂತಸೇನೆಯು ತನ್ನೆಲ್ಲ ಆಭರಣಗಳನ್ನು ತೆಗೆದು, ಆ ಮಣ್ಣಿನ ಆಟಿಕೆಯ ಬಂಡಿಯಲ್ಲಿ ತುಂಬುವಳು. ನಿರಾಭರಣೆಯಾದ ವಸಂತಸೇನೆಯು, ‘ಮಗು, ನಾನೀಗ ನಿನಗೆ ತಾಯಿಯಾದೆನಲ್ಲವೆ?’ ಎಂದು ಕೇಳುವಳು. ‘ಈ ಆಭರಣಗಳಿಂದ ನೀನು ಬಂಗಾರದ ಬಂಡಿಯನ್ನು ಮಾಡಿಸಿಕೊ’ ಎಂದು ಹೇಳುವಳು. ಚಾರುದತ್ತನಲ್ಲಿ ಇರುವ ಅವಳ ಪ್ರೇಮವು ಆತನ ಮಗುವಿನೆಡೆಗೂ ಹರಿದರೆ ಅಚ್ಚರಿಯಿಲ್ಲ. ಚಾರುದತ್ತನ ಬಡತನಕ್ಕಾಗಿಯೋ, ಧೂತಾದೇವಿಯ ಸ್ವಾಭಿಮಾನ ಹಾಗು ಸುಶೀಲತೆಗಾಗಿಯೋ, ರೋಹಸೇನನ ಮುಗ್ಧತೆಗಾಗಿಯೊ ತಿಳಿಯದು, ಈ ಸಮಯದಲ್ಲಿ ವಸಂತಸೇನೆಯ ಕಣ್ಣಲ್ಲಿ ನೀರು ಬರುವುದು.

ರೋಹಸೇನನು ಆಟದ ವಯಸ್ಸಿನ ಬಾಲಕನಿರಬಹುದು. ಆದರೆ ಅವನು ಚಾರುದತ್ತನ ಮಗನಲ್ಲವೆ? ಅಳುತ್ತಿರುವ ವಸಂತಸೇನೆಯಿಂದ ಏನನ್ನಾದರೂ ಇಸಿದುಕೊಳ್ಳಲು ಆತ ಸಿದ್ಧನಾದಾನೆಯೆ?  ವಸಂತಸೇನೆಯು ತನ್ನ ಕಣ್ಣೀರನ್ನು ಒರೆಸಿಕೊಂಡು, ‘ಮಗು, ನಾನು ಅಳುವುದಿಲ್ಲ, ಬಂಗಾರದ ಬಂಡಿಯನ್ನು ಮಾಡಿಸಿಕೊ, ಆಟವಾಡುಎಂದು ಹೇಳಿದ ನಂತರವೇ, ಆ ಬಾಲನು ಬಂಗಾರದ ಆಭರಣಗಳನ್ನು ತುಂಬಿದ ಆ ಮಣ್ಣಿನ ಬಂಡಿಯನ್ನು ತೆಗೆದುಕೊಂಡು ಆಡಲು ತೊಡಗುತ್ತಾನೆ.

ರೋಹಸೇನ ಹಾಗು ವಸಂತಸೇನೆಯರ ನಡುವೆ ನಡೆದ ಈ ಕೆಲವೇ ಮಾತುಗಳು, ಇಡೀ ನಾಟಕದಲ್ಲಿಯ ಅತ್ಯಂತ ಹೃದಯವೇಧಕ ಸಂಭಾಷಣೆಗಳಾಗಿವೆ. ಈ ನಾಟಕಕ್ಕೆ ಮೃಚ್ಛಕಟಿಕಮ್ಎನ್ನುವ ಹೆಸರನ್ನು ಕೊಡಲು ಈ ಪ್ರಸಂಗವೇ ಕಾರಣವಾಗಿದೆ.

ಬಂಗಾರದ ಆಭರಣಗಳನ್ನು ಹಾಕಿಕೊಳ್ಳುವವಳು ತನ್ನ ತಾಯಿ ಹೇಗಾದಾಳುಎನ್ನುವ ಬಾಲಕನ ಅಚ್ಚರಿಯ ಮಾತು ಪ್ರೇಕ್ಷಕನಲ್ಲಿ ಕಣ್ಣೀರು ತರಿಸಲಾರದೆ ಇರಲಾರದು. ಈ ಮಾತಿಗೆ ಸ್ಪಂದಿಸುವ ವಸಂತಸೇನೆಯು ತನ್ನ ಬಂಗಾರದ ಆಭರಣಗಳನ್ನು ತಕ್ಷಣವೇ ತ್ಯಜಿಸುವುದು, ಅವಳಲ್ಲಿರುವ ಪ್ರೇಮಭಾವನೆಯನ್ನು ತೋರಿಸುತ್ತದೆ. ಅಲ್ಲದೆ, ‘ನಾನು ನಿನ್ನ ತಾಯಿಯಾದೆನಲ್ಲವೆ?’ ಎನ್ನುವ ಮಾತಿನಲ್ಲಿ ಅಡಗಿರುವ ವಸಂತಸೇನೆಯ ಅಂತರಾಳದ ಅಪೇಕ್ಷೆಯನ್ನು ಗಮನಿಸಿರಿ. ಚಾರುದತ್ತನ ಹೆಂಡತಿಯಾಗದೆ, ಅವಳು ಚಾರುದತ್ತನ ಮಗನಿಗೆ ತಾಯಿ ಹೇಗಾದಾಳು?

ಈ ಬದುಕೇ ಒಂದು ಆಟಿಕೆಯ ಬಂಡಿ. ಇದು ಯಾವಾಗಲೂ ಮಣ್ಣಿನ ಬಂಡಿಯೇ ಹೌದು, ಬಂಗಾರದ ಬಂಡಿಯಲ್ಲ. ಇದನ್ನು ಬಂಗಾರದ ಬಂಡಿಯನ್ನಾಗಿ ಮಾಡಿಕೊಳ್ಳುವುದು ನಮ್ಮನ್ನೇ ಕೂಡಿದೆ; ಬದುಕಿನಲ್ಲಿ ಪ್ರೀತಿ ಮುಖ್ಯ, ವೈಭೋಗವಲ್ಲ ಎನ್ನುವ ನಾಟಕದ ಸಂದೇಶವನ್ನು  ಮೃಚ್ಛಕಟಿಕಮ್’ (ಮಣ್ಣಿನ ಆಟಿಕೆಯ ಬಂಡಿ) ಹೇಳುತ್ತದೆ. ಇನ್ನು ಮುಂದೆ ಬರುವ ಪ್ರಸಂಗಗಳೂ ಸಹ ಬದುಕಿನಲ್ಲಿ ಎಂತೆಂತಹ ತಿರುವುಗಳು ಬಂದಾವು, ಬದುಕು ಏನೆಲ್ಲ ಆದೀತು ಎನ್ನುವದನ್ನು ತೋರಿಸುತ್ತವೆ.

ಈ ಸಂದರ್ಭದಲ್ಲಿ ವರಕವಿ ಬೇಂದ್ರೆಯವರು ಬರೆದ ಒಂದು ಕವನದ ಕೆಲವು ಸಾಲುಗಳು ನೆನಪಿಗೆ ಬರುತ್ತವೆ:
ಮುತ್ತು, ರತನ, ಹೊನ್ನು ಎಲ್ಲ
                              ಕಲ್ಲು ಮಣ್ಣ ವೈಭವಾ,  
                        ಎಲವೊ ಹುಚ್ಚು ಮಾನವಾ,
ಬರಿಯ ಶೋಕು--- ಬರಿಯ ಝೋಕು,
                               ಬದುಕಿನೊಂದು ಜಂಬವು
                               ಒಲವೆ ಮೂಲ ಬಿಂಬವು!

ಬೇಂದ್ರೆಯವರ  ಬದುಕು ಮಣ್ಣಿನ ಬಂಡಿಯಾಗಿತ್ತು; ಅವರ ಕಾವ್ಯ ಮಾತ್ರ ಬಂಗಾರದ ಬಂಡಿಯಾಗಿತ್ತು. ನಮ್ಮ ನಾಟಕಕಾರ ಶೂದ್ರಕನು ಒಬ್ಬ ರಾಜನಾಗಿದ್ದನು ಎಂದು ಹೇಳಲಾಗುತ್ತಿದೆ. ತಳವರ್ಗದ ಜನರ ಬದುಕನ್ನು ಇಷ್ಟು ಚೆನ್ನಾಗಿ ಬಲ್ಲ, ಬಡತನದ ಬವಣೆಯನ್ನು ಈ ರೀತಿಯಲ್ಲಿ ವರ್ಣಿಸಬಲ್ಲ, ಲೇಖಕನು ರಾಜನಾಗಿರಲು ಸಾಧ್ಯವೆ? ಇವನು ಏನೇ ಆಗಿರಲಿ, ಗೌರವಸ್ಥ ಬದುಕಿನ ಮೌಲ್ಯಗಳನ್ನು ತಿಳಿದ, ತಿಳಿಸಿದ ಇವನಿಗೆ ನನ್ನ ಶತಕೋಟಿ ಪ್ರಣಾಮಗಳು.

ಆರನೆಯ ಅಂಕದ ಪೂರ್ವಾರ್ಧವಿದು. ಉತ್ತರಾರ್ಧದಲ್ಲಿ ವಸಂತಸೇನೆಯ ಬದುಕಿನ ಬಂಡಿಯು ಕುಸಿದು ಕಪ್ಪರಿಸುವದನ್ನು ನೋಡುತ್ತೇವೆ. ಇರುಳು ಕಳೆದ ಮೇಲೆ ಬೆಳಗು ಬರುತ್ತದೆ ಎಂದು ಹೇಳುತ್ತಾರೆ. ದುಃಖದ ದಿನಗಳ ನಂತರ ಸುಖದ ದಿನಗಳು ಬರುತ್ತವೆ ಎಂದು ಇದರ ಅರ್ಥವಲ್ಲವೆ? ವಸಂತಸೇನೆಯ ಬದುಕಿನಲ್ಲಿ ಅತ್ಯಂತ ಸುಖದ ಒಂದು ಇರುಳು ಕಳೆಯಿತು. ಇದೀಗ ಬೆಳಗಾಯಿತು. ಈ ಬೆಳಗು ಅವಳ ಬದುಕಿನಲ್ಲಿ ಏನೇನು ತರಲಿದೆ ಎನ್ನುವುದನ್ನು ಆರನೆಯ ಅಂಕದ ಉತ್ತರಾರ್ಧದಲ್ಲಿ ನೋಡೋಣ.