Monday, May 2, 2016

ಮೃಚ್ಛಕಟಿಕಮ್-೭



ಮೃಚ್ಛಕಟಿಕಮ್ ನಾಟಕದ ಆರನೆಯ ಅಂಕವನ್ನು ಪೂರ್ವಾರ್ಧ ಹಾಗು ಉತ್ತರಾರ್ಧ ಎಂದು ಎರಡು ಭಾಗಗಳನ್ನಾಗಿ ಮಾಡಲು ನಾನು ಇಚ್ಛಿಸುತ್ತೇನೆ. ಮೂಲನಾಟಕದಲ್ಲಿ ಈ ತರಹದ ಭಾಗಗಳಿಲ್ಲ. ಆದರೆ ಇದು ನಮ್ಮ ಅನುಕೂಲಕ್ಕಾಗಿ ಇಲ್ಲಿ ಮಾಡಿಕೊಳ್ಳುತ್ತಿರುವ ವಿಭಜನೆ ಅಷ್ಟೆ.

ಪೂರ್ವಾರ್ಧ:
ಐದನೆಯ ಅಂಕದಲ್ಲಿ ಚಾರುದತ್ತ ಹಾಗು ವಸಂತಸೇನೆಯರ ಪ್ರೇಮಸಮ್ಮಿಲನವಾಯಿತು. ಇದೀಗ ಬೆಳಗು ಹರಿದಿದೆ. ವಸಂತಸೇನೆ ಇನ್ನೂ ಎದ್ದಿಲ್ಲ. ಆರನೆಯ ಅಂಕವು ಓರ್ವ ದಾಸಿಯ ರಂಗಪ್ರವೇಶದಿಂದ ಪ್ರಾರಂಭವಾಗುತ್ತದೆ. ‘ಬೆಳಗಾದರೂ ಇನ್ನೂ ವಸಂತಸೇನೆ ಎದ್ದಿಲ್ಲವಲ್ಲ’ ಎಂದುಕೊಳ್ಳುತ್ತ ಈ ದಾಸಿಯು ರಂಗದಲ್ಲಿ ಬರುತ್ತಾಳೆ. ವಸಂತಸೇನೆಯನ್ನು ಈ ದಾಸಿ ಎಚ್ಚರಿಸಿದಾಗ, ಅವಳು ದಾಸಿಗೆ ಕೇಳುವ ಮೊದಲ ಪ್ರಶ್ನೆ: ‘ಚಾರುದತ್ತರು ಎಲ್ಲಿ?’

ಚಾರುದತ್ತನಾದರೊ ನಸುಗತ್ತಲೆ ಇರುವಾಗಲೇ ಎದ್ದು ಪುಷ್ಪಕರಂಡಕ ಉದ್ಯಾನಕ್ಕೆ ಹೋಗಿದ್ದಾನೆ. ಬೆಳಕು ಹರಿಯುವ ಮುನ್ನವೇ ವಸಂತಸೇನೆಯನ್ನು ಉದ್ಯಾನಕ್ಕೆ ಕರೆದುಕೊಂದು ಬರಲು, ತನ್ನ ಬಂಡಿಚಾಲಕನಾದ ವರ್ಧಮಾನಕನಿಗೆ ಹೇಳಿದ್ದಾನೆ. ವಸಂತಸೇನೆಯೊಡನೆ ಉದ್ಯಾನದಲ್ಲಿ ವಿಹರಿಸುವ ಉದ್ದೇಶ ಚಾರುದತ್ತನಿಗೆ ಇದ್ದಿರಬಹುದು.

ಚಾರುದತ್ತನ ಉದ್ದೇಶ ಏನೇ ಇರಲಿ, ವಸಂತಸೇನೆಯು ತನ್ನ ನೈತಿಕ ಪಾಲನೆಗಳನ್ನು ಮರೆತು, ಅಲ್ಲಿಂದ ತನ್ನ ನಲ್ಲನೆಡೆಗೆ ಧಾವಿಸುವಂತಹ ಸ್ತ್ರೀಯಲ್ಲ. ಅವಳು ಚಾರುದತ್ತನಲ್ಲಿ ಇಟ್ಟಿದ್ದ ಆಭರಣಗಳು ಈಗಾಗಲೇ ಅವಳಿಗೆ ಮರಳಿ ಬಂದಿವೆ. ಆದರೆ ಚಾರುದತ್ತನ ಹೆಂಡತಿ ಧೂತಾದೇವಿಯು ಕಳುಹಿಸಿಕೊಟ್ಟಿದ್ದ ಮುತ್ತಿನ ಹಾರವು ಇನ್ನೂ ವಸಂತಸೇನೆಯ ಬಳಿಯಲ್ಲಿಯೇ ಇದೆ. ಅದನ್ನು ಧೂತಾದೇವಿಗೆ ಮರಳಿಸಬೇಕಲ್ಲವೆ? ಆದರೆ ಚಾರುದತ್ತನೊಡನೆ ಒಂದು ಇರುಳನ್ನು ಕಳಿದ ಬಳಿಕ, ಸ್ವತಃ ತಾನು ಧೂತಾದೇವಿಯ ಬಳಿಗೆ ಹೋಗುವುದು ತನಗಾಗಲೀ, ಧೂತಾದೇವಿಗಾಗಲೀ ಸಂಕೋಚ ಹಾಗು ಲಜ್ಜೆಯನ್ನು ತರುವ ಸಂಗತಿಯಾಗಿದೆ. ಆದುದರಿಂದ, ವಸಂತಸೇನೆಯು ಓರ್ವ ದಾಸಿಯ ಕೈಯಲ್ಲಿ ಮುತ್ತಿನ ಹಾರವನ್ನು ಕೊಟ್ಟು ಧೂತಾದೇವಿಗೆ ಮರಳಿಸಲು ಹೇಳುವಳು.

ಆದರೆ ಧೂತಾದೇವಿಯು ನೈತಿಕ ತಿಳಿವಳಿಕೆಯಲ್ಲಿ ಯಾರಿಗೂ ಕಡಿಮೆ ಇಲ್ಲ. ಅವಳು ಮುತ್ತಿನ ಹಾರವನ್ನು ತಿರಸ್ಕರಿಸುತ್ತ ‘ತನ್ನ ಗಂಡನೇ ತನಗೆ ಶ್ರೇಷ್ಠ ಆಭರಣ’ ಎಂದು ಹೇಳಿಕಳಿಸುತ್ತಾಳೆ. ಈ ತಿರಸ್ಕರಣೆಗೆ ಕಾರಣಗಳನ್ನು ಈ ರೀತಿಯಾಗಿ ಊಹಿಸಬಹುದು:
(೧) ಸ್ವಾಭಿಮಾನಿಯಾದ ಧೂತಾದೇವಿಯು ಒಮ್ಮೆ ಕೊಟ್ಟ ಆಭರಣವನ್ನು ಹೇಗೆ ಮರಳಿ ಪಡೆದಾಳು?
(೨) ಬದುಕಿನ ಅನೇಕ ಘಟ್ಟಗಳಲ್ಲಿ ಹಾಯ್ದು ಬಂದ ಅವಳಿಗೆ  ಆಭರಣಗಳ ಬಗೆಗೆ ಮೋಹ ಉಳಿದಿರಲಿಕ್ಕಿಲ್ಲ. 
(೩) ತನ್ನ ಗಂಡನ ‘ಎರಡನೆಯ ಹೆಣ್ಣು’ ಸ್ಪರ್ಶಿಸಿದ ಆಭರಣವನ್ನು ಧರಿಸಲು ಅವಳಿಗೆ ಮನಸ್ಸು ಆಗುತ್ತಿರಲಿಕ್ಕಿಲ್ಲ.
(೪) ತನ್ನ ಗಂಡನಿಗೆ ತಾನು ಕೊಟ್ಟ ಆಭರಣವನ್ನು, ಆತನೇ ಮರಳಿ ಕೊಟ್ಟರೆ ಮಾತ್ರ, ಸ್ವೀಕರಿಸುವುದು ಚೆನ್ನ; ಬೇರಾರೋ, (ವಿಶೇಷತಃ ಗಂಡನ ಪ್ರಣಯಿಯೊಬ್ಬಳು) ಅದನ್ನು ಮರಳಿಸಿದರೆ, ಧೂತಾದೇವಿ ಅದನ್ನು ಹೇಗೆ ಸ್ವೀಕರಿಸಿಯಾಳು?

‘ತನ್ನ ಗಂಡನೇ ತನಗೆ ಶ್ರೇಷ್ಠ ಆಭರಣ’ ಎಂದು ಹೇಳುವ ಮೂಲಕ, ಧೂತಾದೇವಿಯು ವಸಂತಸೇನೆಗೆ ಒಂದು ಸಂದೇಶವನ್ನು ನೀಡುತ್ತಿರಬಹುದು: ‘ಚಾರುದತ್ತನು ನಿನ್ನ ಪ್ರಣಯಿಯಾಗಿರಬಹುದು. ಆತ ನಿನಗೆ ಆಭರಣಗಳನ್ನು ಕೊಡಲೂ ಬಹುದು. ಆದರೆ ಆತ ಅಗ್ನಿಸಾಕ್ಷಿಯಾಗಿ ನನ್ನವನು. ಆತನ ಮೇಲೆ ಮೊದಲ ಹಾಗು ಕೊನೆಯ ಅಧಿಕಾರ ನನ್ನದೇ ಆಗಿದೆ.’

ಇಲ್ಲಿ ವಸಂತಸೇನೆ ಹಾಗು ಧೂತಾದೇವಿಯರ ಪರಸ್ಪರ ಮುಖಾಮುಖಿ ಆಗುತ್ತಿಲ್ಲ ಎನ್ನುವುದನ್ನು ಗಮನಿಸಬೇಕು. ಇವರ ಸಂಪರ್ಕ ಕೇವಲ ದಾಸಿಯ ಮುಖಾಂತರವಾಗಿ ಆಗುತ್ತಿದೆ. ಇವರೀರ್ವರಿಗೂ ತಮ್ಮ ಸ್ಥಾನಗಳ ಅರಿವಿದೆ. (ಧೂತಾದೇವಿಯನ್ನು ಪ್ರೇಕ್ಷಕನು ನೋಡುವುದು ಕೊನೆಯ ಅಂಕದಲ್ಲಿ ಮಾತ್ರ.)

ಬೆಳಗಿನ ಜಾವದಲ್ಲಿ ಮನೆಯ ಹೊರಗೆ ಆಡುತ್ತಿರುವ, ಚಾರುದತ್ತನ ಮಗನಾದ ರೋಹಸೇನನೊಂದಿಗೆ, ಚಾರುದತ್ತನ ಸೇವಿಕೆಯಾದ ರದನಿಕೆಯು ಇದೀಗ ಪ್ರವೇಶಿಸುತ್ತಾಳೆ. (ರೋಹಸೇನನ ಜೊತೆಗೆ ಆಡುತ್ತಿರುವ ಬಾಲಕನ ಬಳಿಯಲ್ಲಿ ಬಂಗಾರದ ಆಟಿಕೆಯ ಬಂಡಿಯಿದೆ. ರೋಹಸೇನನು ನೆರೆಮನೆಯ ಹುಡುಗನ ಹಾಗೆ ತನಗೂ ಚಿನ್ನದ ಬಂಡಿ ಬೇಕು ಎಂದು ಅಳುತ್ತಿದ್ದಾನೆ. ರೋಹಸೇನನನ್ನು ಸಮಾಧಾನ ಪಡಿಸಲು, ರದನಿಕೆಯು ಸದ್ಯಕ್ಕೆ ನಿನಗೆ ಮಣ್ಣಿನ ಬಂಡಿಯನ್ನು ಮಾಡಿಕೊಡುವೆ, ಅದರೊಂದಿಗೆ ಆಟವಾಡು ಎಂದು ಹೇಳುತ್ತಿದ್ದಾಳೆ.) ಆದರೆ ಮಗುವು ತನಗೆ ಬಂಗಾರದ ಆಟಿಕೆಯ ಬಂಡಿಯೇ ಬೇಕು ಎಂದು ಹಟ ಮಾಡುತ್ತಿದೆ.

ಈ ಸಮಯದಲ್ಲಿ ಮನೆಯಿಂದ ಹೊರಬಂದ ವಸಂತಸೇನೆಯು ರೋಹಸೇನನನ್ನು ನೋಡುತ್ತಾಳೆ.  ಮಗುವಿಗೂ ಚಾರುದತ್ತನಿಗೂ ಹೋಲಿಕೆ ಇರುವದರಿಂದ, ಇವನು ಚಾರುದತ್ತನ ಮಗನೇ ಎಂದು ತಿಳಿದು ಅವಳಲ್ಲಿ ವಾತ್ಸಲ್ಯ ಉಕ್ಕಿ ಬರುತ್ತದೆ. ಅಳುತ್ತಿರುವ ಮಗುವನ್ನು ಸಮಾಧಾನ ಪಡಿಸುವ ಉದ್ದೇಶದಿಂದ, ವಸಂತಸೇನೆಯು, ‘ಅಳಬೇಡ ಮಗು. ನಾನು ನಿನಗೆ ಬಂಗಾರದ ಬಂಡಿಯನ್ನು ಕೊಡಿಸುತ್ತೇನೆ’ ಎಂದು ಹೇಳುತ್ತಾಳೆ.

ಇವಳನ್ನು ಮೊದಲು ನೋಡಿರದ ಆ ಮಗುವು ವಸಂತಸೇನೆಗೆ ನೀನು ಯಾರು?’ ಎಂದು ಕೇಳುತ್ತದೆ. ನನ್ನನ್ನು ನಿನ್ನ ತಾಯಿಯೆಂದೇ ತಿಳಿಎಂದು ವಸಂತಸೇನೆಯು ಹೇಳುತ್ತಾಳೆ. ಈ ಮಾತಿಗೆ ಅಚ್ಚರಿಪಟ್ಟ ಆ ಮಗುವು, ‘ಅದು ಹೇಗೆ ಸಾಧ್ಯ? ನನ್ನ ತಾಯಿಯು ನಿನ್ನಂತೆ ಆಭರಣಗಳನ್ನು ಧರಿಸುವದಿಲ್ಲಎನ್ನುತ್ತದೆ!

ಆ ಕ್ಷಣವೇ ವಸಂತಸೇನೆಯು ತನ್ನೆಲ್ಲ ಆಭರಣಗಳನ್ನು ತೆಗೆದು, ಆ ಮಣ್ಣಿನ ಆಟಿಕೆಯ ಬಂಡಿಯಲ್ಲಿ ತುಂಬುವಳು. ನಿರಾಭರಣೆಯಾದ ವಸಂತಸೇನೆಯು, ‘ಮಗು, ನಾನೀಗ ನಿನಗೆ ತಾಯಿಯಾದೆನಲ್ಲವೆ?’ ಎಂದು ಕೇಳುವಳು. ‘ಈ ಆಭರಣಗಳಿಂದ ನೀನು ಬಂಗಾರದ ಬಂಡಿಯನ್ನು ಮಾಡಿಸಿಕೊ’ ಎಂದು ಹೇಳುವಳು. ಚಾರುದತ್ತನಲ್ಲಿ ಇರುವ ಅವಳ ಪ್ರೇಮವು ಆತನ ಮಗುವಿನೆಡೆಗೂ ಹರಿದರೆ ಅಚ್ಚರಿಯಿಲ್ಲ. ಚಾರುದತ್ತನ ಬಡತನಕ್ಕಾಗಿಯೋ, ಧೂತಾದೇವಿಯ ಸ್ವಾಭಿಮಾನ ಹಾಗು ಸುಶೀಲತೆಗಾಗಿಯೋ, ರೋಹಸೇನನ ಮುಗ್ಧತೆಗಾಗಿಯೊ ತಿಳಿಯದು, ಈ ಸಮಯದಲ್ಲಿ ವಸಂತಸೇನೆಯ ಕಣ್ಣಲ್ಲಿ ನೀರು ಬರುವುದು.

ರೋಹಸೇನನು ಆಟದ ವಯಸ್ಸಿನ ಬಾಲಕನಿರಬಹುದು. ಆದರೆ ಅವನು ಚಾರುದತ್ತನ ಮಗನಲ್ಲವೆ? ಅಳುತ್ತಿರುವ ವಸಂತಸೇನೆಯಿಂದ ಏನನ್ನಾದರೂ ಇಸಿದುಕೊಳ್ಳಲು ಆತ ಸಿದ್ಧನಾದಾನೆಯೆ?  ವಸಂತಸೇನೆಯು ತನ್ನ ಕಣ್ಣೀರನ್ನು ಒರೆಸಿಕೊಂಡು, ‘ಮಗು, ನಾನು ಅಳುವುದಿಲ್ಲ, ಬಂಗಾರದ ಬಂಡಿಯನ್ನು ಮಾಡಿಸಿಕೊ, ಆಟವಾಡುಎಂದು ಹೇಳಿದ ನಂತರವೇ, ಆ ಬಾಲನು ಬಂಗಾರದ ಆಭರಣಗಳನ್ನು ತುಂಬಿದ ಆ ಮಣ್ಣಿನ ಬಂಡಿಯನ್ನು ತೆಗೆದುಕೊಂಡು ಆಡಲು ತೊಡಗುತ್ತಾನೆ.

ರೋಹಸೇನ ಹಾಗು ವಸಂತಸೇನೆಯರ ನಡುವೆ ನಡೆದ ಈ ಕೆಲವೇ ಮಾತುಗಳು, ಇಡೀ ನಾಟಕದಲ್ಲಿಯ ಅತ್ಯಂತ ಹೃದಯವೇಧಕ ಸಂಭಾಷಣೆಗಳಾಗಿವೆ. ಈ ನಾಟಕಕ್ಕೆ ಮೃಚ್ಛಕಟಿಕಮ್ಎನ್ನುವ ಹೆಸರನ್ನು ಕೊಡಲು ಈ ಪ್ರಸಂಗವೇ ಕಾರಣವಾಗಿದೆ.

ಬಂಗಾರದ ಆಭರಣಗಳನ್ನು ಹಾಕಿಕೊಳ್ಳುವವಳು ತನ್ನ ತಾಯಿ ಹೇಗಾದಾಳುಎನ್ನುವ ಬಾಲಕನ ಅಚ್ಚರಿಯ ಮಾತು ಪ್ರೇಕ್ಷಕನಲ್ಲಿ ಕಣ್ಣೀರು ತರಿಸಲಾರದೆ ಇರಲಾರದು. ಈ ಮಾತಿಗೆ ಸ್ಪಂದಿಸುವ ವಸಂತಸೇನೆಯು ತನ್ನ ಬಂಗಾರದ ಆಭರಣಗಳನ್ನು ತಕ್ಷಣವೇ ತ್ಯಜಿಸುವುದು, ಅವಳಲ್ಲಿರುವ ಪ್ರೇಮಭಾವನೆಯನ್ನು ತೋರಿಸುತ್ತದೆ. ಅಲ್ಲದೆ, ‘ನಾನು ನಿನ್ನ ತಾಯಿಯಾದೆನಲ್ಲವೆ?’ ಎನ್ನುವ ಮಾತಿನಲ್ಲಿ ಅಡಗಿರುವ ವಸಂತಸೇನೆಯ ಅಂತರಾಳದ ಅಪೇಕ್ಷೆಯನ್ನು ಗಮನಿಸಿರಿ. ಚಾರುದತ್ತನ ಹೆಂಡತಿಯಾಗದೆ, ಅವಳು ಚಾರುದತ್ತನ ಮಗನಿಗೆ ತಾಯಿ ಹೇಗಾದಾಳು?

ಈ ಬದುಕೇ ಒಂದು ಆಟಿಕೆಯ ಬಂಡಿ. ಇದು ಯಾವಾಗಲೂ ಮಣ್ಣಿನ ಬಂಡಿಯೇ ಹೌದು, ಬಂಗಾರದ ಬಂಡಿಯಲ್ಲ. ಇದನ್ನು ಬಂಗಾರದ ಬಂಡಿಯನ್ನಾಗಿ ಮಾಡಿಕೊಳ್ಳುವುದು ನಮ್ಮನ್ನೇ ಕೂಡಿದೆ; ಬದುಕಿನಲ್ಲಿ ಪ್ರೀತಿ ಮುಖ್ಯ, ವೈಭೋಗವಲ್ಲ ಎನ್ನುವ ನಾಟಕದ ಸಂದೇಶವನ್ನು  ಮೃಚ್ಛಕಟಿಕಮ್’ (ಮಣ್ಣಿನ ಆಟಿಕೆಯ ಬಂಡಿ) ಹೇಳುತ್ತದೆ. ಇನ್ನು ಮುಂದೆ ಬರುವ ಪ್ರಸಂಗಗಳೂ ಸಹ ಬದುಕಿನಲ್ಲಿ ಎಂತೆಂತಹ ತಿರುವುಗಳು ಬಂದಾವು, ಬದುಕು ಏನೆಲ್ಲ ಆದೀತು ಎನ್ನುವದನ್ನು ತೋರಿಸುತ್ತವೆ.

ಈ ಸಂದರ್ಭದಲ್ಲಿ ವರಕವಿ ಬೇಂದ್ರೆಯವರು ಬರೆದ ಒಂದು ಕವನದ ಕೆಲವು ಸಾಲುಗಳು ನೆನಪಿಗೆ ಬರುತ್ತವೆ:
ಮುತ್ತು, ರತನ, ಹೊನ್ನು ಎಲ್ಲ
                              ಕಲ್ಲು ಮಣ್ಣ ವೈಭವಾ,  
                        ಎಲವೊ ಹುಚ್ಚು ಮಾನವಾ,
ಬರಿಯ ಶೋಕು--- ಬರಿಯ ಝೋಕು,
                               ಬದುಕಿನೊಂದು ಜಂಬವು
                               ಒಲವೆ ಮೂಲ ಬಿಂಬವು!

ಬೇಂದ್ರೆಯವರ  ಬದುಕು ಮಣ್ಣಿನ ಬಂಡಿಯಾಗಿತ್ತು; ಅವರ ಕಾವ್ಯ ಮಾತ್ರ ಬಂಗಾರದ ಬಂಡಿಯಾಗಿತ್ತು. ನಮ್ಮ ನಾಟಕಕಾರ ಶೂದ್ರಕನು ಒಬ್ಬ ರಾಜನಾಗಿದ್ದನು ಎಂದು ಹೇಳಲಾಗುತ್ತಿದೆ. ತಳವರ್ಗದ ಜನರ ಬದುಕನ್ನು ಇಷ್ಟು ಚೆನ್ನಾಗಿ ಬಲ್ಲ, ಬಡತನದ ಬವಣೆಯನ್ನು ಈ ರೀತಿಯಲ್ಲಿ ವರ್ಣಿಸಬಲ್ಲ, ಲೇಖಕನು ರಾಜನಾಗಿರಲು ಸಾಧ್ಯವೆ? ಇವನು ಏನೇ ಆಗಿರಲಿ, ಗೌರವಸ್ಥ ಬದುಕಿನ ಮೌಲ್ಯಗಳನ್ನು ತಿಳಿದ, ತಿಳಿಸಿದ ಇವನಿಗೆ ನನ್ನ ಶತಕೋಟಿ ಪ್ರಣಾಮಗಳು.

ಆರನೆಯ ಅಂಕದ ಪೂರ್ವಾರ್ಧವಿದು. ಉತ್ತರಾರ್ಧದಲ್ಲಿ ವಸಂತಸೇನೆಯ ಬದುಕಿನ ಬಂಡಿಯು ಕುಸಿದು ಕಪ್ಪರಿಸುವದನ್ನು ನೋಡುತ್ತೇವೆ. ಇರುಳು ಕಳೆದ ಮೇಲೆ ಬೆಳಗು ಬರುತ್ತದೆ ಎಂದು ಹೇಳುತ್ತಾರೆ. ದುಃಖದ ದಿನಗಳ ನಂತರ ಸುಖದ ದಿನಗಳು ಬರುತ್ತವೆ ಎಂದು ಇದರ ಅರ್ಥವಲ್ಲವೆ? ವಸಂತಸೇನೆಯ ಬದುಕಿನಲ್ಲಿ ಅತ್ಯಂತ ಸುಖದ ಒಂದು ಇರುಳು ಕಳೆಯಿತು. ಇದೀಗ ಬೆಳಗಾಯಿತು. ಈ ಬೆಳಗು ಅವಳ ಬದುಕಿನಲ್ಲಿ ಏನೇನು ತರಲಿದೆ ಎನ್ನುವುದನ್ನು ಆರನೆಯ ಅಂಕದ ಉತ್ತರಾರ್ಧದಲ್ಲಿ ನೋಡೋಣ.

6 comments:

ರಾಘವೇಂದ್ರ ಜೋಶಿ said...

ಅಂತೂ ಇಂತೂ ಈ ನಾಟಕದ ಹೆಸರು 'ಮೃಚ್ಛಕಟಿಕಮ್' ಅಂತ ಯಾಕೆ ಬಂತು ಅಂತ ತಿಳಿದಂತಾಯ್ತು. ಸುಮ್ಮನೇ ಕುತೂಹಲಕ್ಕೆಂದು ಗೂಗಲಿಸಿ ನೋಡಲಾಗಿ, The little clay cart ಅನ್ನುವ ಅರ್ಥ ಸಿಕ್ಕಿತು.
ಚಿಕ್ಕವರಿದ್ದಾಗ ನಾವೆಲ್ಲ ದಂಟಿನ ಸಿಬಿರಿನಿಂದ ಚಕ್ಕಡಿ ಮಾಡಿಕೊಂಡು ಆಟವಾಡುತ್ತಿದ್ದುದು ನೆನಪಿಗೆ ಬಂತು. :-)
-Rj

sunaath said...

RJ, ಶೂದ್ರಕನು ಈ ನಾಟಕಕ್ಕೆ ‘ವಸಂತಸೇನಾ’ ಎನ್ನುವ ಹೆಸರನ್ನು ಕೊಡಬಹುದಾಗಿತ್ತು. (ಭಾಸನು ತಾನು ಬರೆದ ನಾಲ್ಕಂಕಗಳ ನಾಟಕಕ್ಕೆ ‘ಚಾರುದತ್ತ’ ಎನ್ನುವ ಹೆಸರನ್ನು ಕೊಟ್ಟಿದ್ದಾನಂತೆ.) ಆದರೆ, ಶೂದ್ರಕನು ‘ಮೃಚ್ಛಕಟಿಕಮ್’ ಹೆಸರಿನ ಮೂಲಕ, ಪ್ರೇಕ್ಷಕರಿಗೆ ಒಂದು ಸಂದೇಶವನ್ನು ಕೊಡಲು ಬಯಸುತ್ತಿದ್ದಾನೆ, ಅಲ್ಲವೆ?

hamsanandi said...

ಸುನಾಥರೆ,

>> ನಮ್ಮ ನಾಟಕಕಾರ ಶೂದ್ರಕನು ಒಬ್ಬ ರಾಜನಾಗಿದ್ದನು ಎಂದು ಹೇಳಲಾಗುತ್ತಿದೆ. ತಳವರ್ಗದ ಜನರ ಬದುಕನ್ನು ಇಷ್ಟು ಚೆನ್ನಾಗಿ ಬಲ್ಲ,
>> ಬಡತನದ ಬವಣೆಯನ್ನು ಈ ರೀತಿಯಲ್ಲಿ ವರ್ಣಿಸಬಲ್ಲ, ಲೇಖಕನು ರಾಜನಾಗಿರಲು ಸಾಧ್ಯವೆ? ಇವನು ಏನೇ ಆಗಿರಲಿ, ಗೌರವಸ್ಥ ಬದುಕಿನ
>> ಮೌಲ್ಯಗಳನ್ನು ತಿಳಿದ, ತಿಳಿಸಿದ ಇವನಿಗೆ ನನ್ನ ಶತಕೋಟಿ ಪ್ರಣಾಮಗಳು.

ಹೀಗೆನ್ನುವುದು ಪೂರ್ವಗ್ರಹವಾಗದೇ?

ರಾಜನಾದಮಾತ್ರಕ್ಕೆ ಬೇರೆಯವರ ಬದುಕು ಗೊತ್ತಿರಬಾರೆದೆಂದು ಎಲ್ಲಿದೆ! ಹಿಂದಿನ ಅನೇಖ ರಾಜರು ಉತ್ತಮ ಸಾಹಿತಿಗಳೂ ಆಗಿದ್ದ ವಿಷಯ ತಿಳಿದದ್ದೇ. ಕ್ರಿ.ಪೂ ೨ನೇ ಶತಮಾನದಲ್ಲಿ ಗಾಹಾ ಸತ್ತಸಯಿಯನ್ನು ಸಂಕಲಿಸಿದ ಸಾತವಾಹನ ಹಾಲನಿಂದ ಹಿಡಿದು, ೭ನೇ ಶತಮಾನದ ಹರ್ಷವರ್ಧನ, ೧೦ ನೇ ಶತಮಾನದ ಭೋಜ ರಾಜ, ೧೨ ನೇ ಶತಮಾನದ ಚಾಲುಕ್ಯ ಸೋಮೇಶ್ವರ, ೧೬ ನೇ ಶತಮಾನದ ಕೃಷ್ಣದೇವರಾಯ , ೧೭ನೇ ಶತಮಾನದ ಪೆದಕೋಮಟಿ ವೇಮರೆಡ್ಡಿ, ೧೮ನೇ ಶತಮಾನದ ಸಿಪ್ಪೇಗೌಡ (ಉರುಫ್ ಚಿಕ್ಕಭೂಪಾಲ), ೧೯ನೇ ಶತಮಾನದ ಮುಮ್ಮಡಿ ಕೃಷ್ಣರಾಜ ಒಡೆಯರ ತನಕ ಸಾಹಿತ್ಯ ಕೃಷಿ ಮಾಡಿದ ಹತ್ತು ಹಲವಾರು ರಾಜರು ಆಗಿ ಹೋಗಿದ್ದಾರಲ್ಲ!

(ನನಗೆ ಈ ಕ್ಷಣದಲ್ಲಿ ನೆನಪಾದ ಕೆಲವರ ಹೆಸರನ್ನು ಮಾತ್ರ ಹೇಳಿದೆ, ಹುಡುಕುತ್ತಾ ಹೋದರೆ ನೂರಾರು ಜನರೇ ಸಿಗಬಹುದು)


hamsanandi said...

ಅಂದಹಾಗೆ ಸರಣಿ ಚೆನ್ನಾಗಿ ಬರುತ್ತಿದೆ.

ವರ್ಣಾಶ್ರಮ ಧರ್ಮವನ್ನು ಪಾಲಿಸುತ್ತಿದ್ದ ಸಂದರ್ಭದಲ್ಲೂ ಅದು ಅಂತಹ ದಾಟಲಾರದ ಗಡಿಯಾಗಿರಲಿಲ್ಲ ಅನ್ನುವುದನ್ನು ತಿಳಿಯಲು ಮೃಚ್ಛಕಟಿಕವೇ ಒಂದು ಒಳ್ಳೇ ಉದಾಹರಣೆ. ಹುಟ್ಟಿನಲ್ಲಿ ಬ್ರಾಹ್ಮಣನೆನಿಸಿ (ದ್ವಿಜ), ವ್ಯಾಪಾರಿಯ ವೃತ್ತಿಯನ್ನು ಮಾಡುತ್ತಿದ್ದ ಚಾರುದತ್ತ ಬಹಳ ಗೌರವಾನ್ವಿತನಾಗಿದ್ದ ಅನ್ನುವುದನ್ನು ಶೂದ್ರಕ ಮೃಚ್ಛಕಟಿಕದ ಪ್ರಸ್ತಾವನಾ ಪದ್ಯಗಳಲ್ಲೇ ಹೇಳಿದ್ದಾನೆ!

ಅವಂತಿ ಪುರ್ಯಾಂ ದ್ವಿಜಸಾರ್ಥವಾಹೋ ಯುವಾ ದರಿದ್ರಃ ಕಿಲ ಚಾರುದತ್ತಃ
ಗುಣಾನುರಕ್ತಾ ಗಣಿಕಾ ಚ ಯಸ್ಯ ವಸಂತಶೋಭೇವ ವಸಂತ ಸೇನಾ
ತಯೋರಿದಂ ಸತ್ಸುರತೋತ್ಸವಾಶ್ರಯಂ ನಯಪ್ರಚಾರಂ ವ್ಯವಹಾರದುಷ್ಟತಾಂ
ಖಲಸ್ವಭಾವಂ ಭವಿತವ್ಯತಾಂ ತಥಾ ಚಕಾರ ಸರ್ವೇ ಕಿಲ ಶೂದ್ರಕೋ ನೃಪಃ

ಚಾರುದತ್ತನು ವರ್ಣಾಶ್ರಮ ಧರ್ಮವನ್ನು "ಉಲ್ಲಂಘಿಸಿದ" ಅನ್ನುವ ಮಾತು ನಾಟಕದಲ್ಲೆಲ್ಲೂ ಬರುವುದಿಲ್ಲ. ಅಂದರೆ ಅದು ಬಹುಶಃ ಸಾಮಾನ್ಯವಾಗಿ ನಡೆಯುತ್ತಿದ್ದ ಸಂಗತಿಯಿದ್ದಿರಬೇಕು. ಇನ್ನು ಚಾರುದತ್ತ ಸಾರ್ಥವಾಹ (ವ್ಯಾಪಾರದ ಸಾರ್ಥವನ್ನು ಇಟ್ಟು ನಡೆಸುವವನು ಆದ್ದರಿಂದ) ನಾದ್ದರಿಂದ, ದೊಡ್ಡ ಮಟ್ಟದ ವ್ಯಾಪಾರಿಯೇ ಆಗಿದ್ದಿರಬೇಕು. ಆಗಿನ ಕಾಲದಲ್ಲಿ ಸಾರ್ಥಗಳಲ್ಲಿ ಸಾಮಾನು ಸರಂಜಾಮುಗಳು ಹೋಗುವಾಗ ದೋಣಿ ಮುಳುಗುವುದೇ ಆಗಲಿ, ಅಥವಾ ಕಾಡುಗಳ್ಳರಿಂದ ದರೋಡೆ ಇತ್ಯಾದಿಗಳೇ ಆಗಲಿ ಆಗಬಹುದಾದ್ದರಿಂದ ಇಂತಹ ಯಾವುದೋ ಘಟನೆಯಿಂದ, ಅತಿ ಶ್ರೀಮಂತನಾಗಿದ್ದ ಚಾರುದತ್ತ ಬಡವನಾಗಿ ಹೋದ (ಬಹುಶಃ ಮೂಲಧನ ಹೋದದ್ದರಿಂದ ತನ್ನ ಎಲ್ಲ ಚರಾಸ್ತಿಗಳನ್ನೂ ಮಾರಿ ಸಾಲ ತೀರಿಸಿರಬಹುದ್ದಾದ್ದರಿಂದ) ಎಂದು ಊಹಿಸಬಹುದು.

ಅಂದಹಾಗೆ ಸಂಸ್ಕೃತ ನಾಟಕಗಳ ಬಗ್ಗೆ ಒಂದು ಮೈಸೂರು ವಿಶ್ವವಿದ್ಯಾನಿಲಯದ ಹಳೆಯ ಪುಸ್ತಕವೊಂದಿದೆ, ನೀವು ಓದಿಲ್ಲದಿದ್ದರೆ ನಿಮಗೆ ಕಳಿಸಬಲ್ಲೆ. ನಿಮಗೆ ಹಿಡಿಸುತ್ತೆ!






sunaath said...

ಧನ್ಯವಾದಗಳು, ರಾಮಪ್ರಸಾದರೆ. ರಾಜರ ವಿಷಯದಲ್ಲಿ ನಾನು ಪೂರ್ವಾಗ್ರಹದ ಮಾತನ್ನು ಆಡಿರಬಹುದು ಎನ್ನುವದನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಶೂದ್ರಕನು ನನ್ನ ಪೂರ್ವಾಗ್ರಹದ ಒಳಗಿದ್ದಾನೊ, ಹೊರಗಿದ್ದಾನೊ ಎನ್ನುವುದನ್ನು ನಾನು ಅರಿಯೆ. ಒಟ್ಟಿನಲ್ಲಿ ನನ್ನದು ವೈಯಕ್ತಿಕ ಅಭಿಪ್ರಾಯವಷ್ಟೇ. ಮನ್ನಣೆ ಇರಲಿ!

sunaath said...

ಅತಿಪೂರ್ವಕಾಲದಲ್ಲಿ ಒಂದು ವರ್ಣದವರು ತಮ್ಮ ವರ್ಣಧರ್ಮವನ್ನು ಪಾಲಿಸುತ್ತಿದ್ದರು ಎಂದು ಹೇಳಬಹುದು. ತನ್ನಂತರ ಈ ಪಾಲನೆ ಖಿಲವಾಗಿ ಹೋಗಿರಲು ಸಾಕು.ಈ ನಾಟಕದಲ್ಲಿ ನಮಗೆ ಕಾಣುವ ಸಂಗತಿ ಎಂದರೆ:
(೧)ಬ್ರಾಹ್ಮಣನು ಬ್ರಾಹ್ಮಣವೃತ್ತಿಯನ್ನು ಅವಲಂಬಿಸಿಲ್ಲ,
(೨)ರಾಜರು despotic ಆಗಿದ್ದಾರೆ,
(೩)ನ್ಯಾಯಾಧಿಕರಣವು ಒತ್ತಡದಲ್ಲಿ ಕೆಲಸ ಮಾಡುತ್ತಿದೆ, ಇತ್ಯಾದಿ.
ಇದೆಲ್ಲದರ ಅರ್ಥವೆಂದರೆ ಸಮಾಜ ಹಾಗು ರಾಜಕಾರಣ ಕೆಟ್ಟು ಹೋಗಿವೆ. ನ್ಯಾಯದಿಂದ ನಡೆಯುವದರ ಮೂರ್ತಿಮಂತನಾದ ಚಾರುದತ್ತನು ಇನ್ನಿಲ್ಲದ ಸಂಕಟಗಳನ್ನು ಅನುಭವಿಸುತ್ತಾನೆ. ಹೀಗಿದ್ದರೂ ಸಹ, ‘ಧರ್ಮವೇ ಜಯವೆಂಬ ಮೂಲಮಂತ್ರ’ದಲ್ಲಿ ಭಾರತೀಯರಿಗೆ ನಂಬಿಕೆ ಇದೆ. ಮೃಚ್ಛಕಟಿಕಮ್ ಈ ಸಂದೇಶವನ್ನು ಕೊಡುವ ನಾಟಕ ಎಂದು ನಾನು ಭಾವಿಸುತ್ತೇನೆ.

ನೀವು ಅಮೇರಿಕಾದಲ್ಲಿ ಇದ್ದೀರಿ ಎಂದು ನಾನು ತಿಳಿದಿದ್ದೇನೆ. ಪುಸ್ತಕವನ್ನು ಕಳಿಸಲು ನಿಮಗೆ ಅನುಕೂಲವಾಗಬಹುದೆ? ದಯವಿಟ್ಟು sunaath@gmailಗೆ ನೀವು ಬರೆದರೆ, ನಾನು ನಿಮಗೆ ಮತ್ತೆ ಬರೆಯುತ್ತೇನೆ. ಧನ್ಯವಾದಗಳು.