Friday, June 10, 2016

ಮೃಚ್ಛಕಟಿಕಮ್-೧೧



ಹತ್ತನೆಯ ಅಂಕವು ಮೃಚ್ಛಕಟಿಕಮ್ ನಾಟಕದ ಕೊನೆಯ ಅಂಕವಾಗಿದೆ. ಈ ಅಂಕವು ದಾರುಣತೆಯಿಂದ ತುಂಬಿದೆ. ವಧಾಸ್ಥಾನಕ್ಕೆ ಕರೆದೊಯ್ಯುತ್ತಿರುವ ಚಾರುದತ್ತನಿಗೆ ಕೆಂಪು ಬಟ್ಟೆ ಹಾಗು ಕೆಂಪು ಕಣಗಿಲ ಹೂವುಗಳ ಮಾಲೆಯನ್ನು ತೊಡಿಸಿದ್ದಾರೆ. ಈರ್ವರು ಕೊಲೆಗಡುಕರು ಡೋಲನ್ನು ಬಾರಿಸುತ್ತ, ಚಾರುದತ್ತನ ಅಪರಾಧವನ್ನು ಹಾಗು ರಾಜಾಜ್ಞೆಯನ್ನು ಘೋಷಿಸುತ್ತಿದ್ದಾರೆ. ಈ ಕೊಲೆಗಡುಕರಿಗೂ ಸಹ ಚಾರುದತ್ತನ ಬಗೆಗೆ ಗೌರವ ಭಾವನೆ ಇದೆ. ಆದುದರಿಂದಲೇ ಅವರು, ‘ಒಳ್ಳೆಯ ವ್ಯಕ್ತಿಗಳ ಸಾವನ್ನು ನೋಡಬಾರದುಎಂದು ಸಾರ್ವಜನಿಕರಲ್ಲಿ ಬಿನ್ನವಿಸಿಕೊಳ್ಳುತ್ತಿದ್ದಾರೆ. ಚಾರುದತ್ತನಿಗೆ ಒದಗಿದ ಸ್ಥಿತಿಯನ್ನು ಕಂಡ ಹೆಣ್ಣುಮಕ್ಕಳು ಕಣ್ಣೀರು ಸುರಿಸುತ್ತಿದ್ದಾರೆ.

ಈ ಸಮಯದಲ್ಲಿ ಮೈತ್ರೇಯ ಹಾಗು ರೋಹಸೇನರು ಜನರ ನಡುವೆ ಬರುತ್ತಿದ್ದಾರೆ. ಚಾರುದತ್ತನು ನನ್ನ ಮಗನ ಮುಖವನ್ನು ಕೊನೆಯ ಸಮಯದಲ್ಲೊಮ್ಮೆ ನೋಡುವೆ.  ಅವಕಾಶ ಮಾಡಿ ಕೊಡಿಎಂದು ಕೊಲೆಗಡುಕರಲ್ಲಿ ಪ್ರಾರ್ಥಿಸುತ್ತಾನೆ. ಬಾಲಕ ರೋಹಸೇನ ಹಾಗು ಗೆಳೆಯ ಮೈತ್ರೇಯರು ಚಾರುದತ್ತನ ಬಳಿಗೆ ಬರುತ್ತಾರೆ. ಬರುತ್ತಿರುವಂತೆ ಮೈತ್ರೇಯನು ರೋಹಸೇನನಿಗೆ ಅವನ ತಂದೆಗೊದಗಿದ ಸ್ಥಿತಿಯ ಬಗೆಗೆ ಹೇಳುತ್ತಾನೆ. 

ರಿಕ್ತಹಸ್ತನಾದ ಚಾರುದತ್ತನು ಕೊನೆಯ ಗಳಿಗೆಯಲ್ಲಿ ತನ್ನ ಮಗನಿಗೆ ಏನು ಕೊಟ್ಟಾನು? ರೋಹಸೇನನಿಗೆ ಉಪನಯನವನ್ನು ಮಾಡುವುದು ಚಾರುದತ್ತನ ಕರ್ತವ್ಯವಾಗಿತ್ತು. ಅವನು ಕರ್ತವ್ಯಚ್ಯುತನಾಗಿದ್ದಾನೆ. ಆದುದರಿಂದ ದೀಕ್ಷಾಪ್ರದಾನದ ಬದಲಾಗಿ, ತನ್ನ ಜನಿವಾರವನ್ನೇ ತೆಗೆದು ತನ್ನ ಮಗನಿಗೆ ಕೊಡುತ್ತಾನೆ. ಬಂಗಾರಕ್ಕಿಂತಲೂ ಹೆಚ್ಚಿನದಾದ ಈ ಒಡವೆಯು ದೇವತೆಗಳಿಗೆ ಹಾಗು ಪಿತೃಗಳಿಗೆ ತರ್ಪಣ ನೀಡಲು ಸಾಧನವಾಗಿದೆಎಂದು ಚಾರುದತ್ತನು ತನ್ನ ಮಗನಿಗೆ ಹೇಳುತ್ತಾನೆ. ಈ ಮಾತಿನಲ್ಲಿ ಅಡಗಿದ ಗೂಢಾರ್ಥವನ್ನು ನೋಡಿರಿ. ಈ ಬಾಲಕನಿಗೆ ವಿಧ್ಯುಕ್ತವಾಗಿ ಉಪನಯನವಾದ ಬಳಿಕ, ತನ್ನ ಮೃತ ತಂದೆಗೆ ತರ್ಪಣ ನೀಡುವದೇ ಆತನ ಪ್ರಥಮ ಕರ್ತವ್ಯವಾಗಿದೆ!

ರೋಹಸೇನನು ತಂದೆಗೆ ತಕ್ಕ ಮಗನೇ ಅಲ್ಲವೆ? ಆದುದರಿಂದ ತನ್ನ ತಂದೆಯ ಬದಲಾಗಿ ತನ್ನನ್ನೇ ಶೂಲಕ್ಕೇರಿಸಿರಿ ಎಂದು ಕೊಲೆಗಡುಕರಲ್ಲಿ ಮನವಿ ಮಾಡಿಕೊಳ್ಳುತ್ತಾನೆ. ಮೈತ್ರೇಯನೂ ಸಹ ತನ್ನ ಗೆಳೆಯನ ಬದಲಾಗಿ ತನ್ನನು ಶೂಲಕ್ಕೇರಿಸಲು ಕೊಲೆಗಡುಕರಲ್ಲಿ ಪ್ರಾರ್ಥಿಸುತ್ತಾನೆ.

ಶಕಾರನು ತನ್ನ ಸೇವಕನಾದ ಸ್ಥಾವರಕನನ್ನು ಒಂದು ಮಾಳಿಗೆಯಲ್ಲಿ ಬಂಧಿಸಿ ಇಟ್ಟದ್ದನ್ನು ನೆನಪಿಸಿಕೊಳ್ಳಿ. (ಎಂಟನೆಯ ಅಂಕ). ಆತನು ಮಾಳಿಗೆಯಿಂದಲೇ ಇದನ್ನೆಲ್ಲ ನೋಡುತ್ತಾನೆ ಹಾಗು ವಾಸ್ತವವಾಗಿ ಏನಾಯಿತು ಎನ್ನುವುದನ್ನು ಕೂಗಿ, ಕೂಗಿ ಹೇಳುತ್ತಾನೆ. ಆದರೆ ಆತನ ಮಾತುಗಳು ಯಾರ ಕಿವಿಗೂ ಬೀಳುವುದಿಲ್ಲ. ಆದುದರಿಂದ ಸ್ಥಾವರಕನು ಮಾಳಿಗೆಯಿಂದ ಕೆಳಗೆ ಜಿಗಿಯುತ್ತಾನೆ. ಆ ಸಮಯದಲ್ಲಿ ಶಕಾರನು ಆತನಿಗೆ ಹಾಕಿದ ಕೋಳಗಳು ತುಂಡಾಗುತ್ತವೆ. ಸ್ಥಾವರಕನು ಕೊಲೆಗಡುಕರಿಗೆ ನೈಜ ಸ್ಥಿತಿಯನ್ನು ತಿಳಿಸಿ, ಚಾರುದತ್ತನನ್ನು ಬಿಡಲು ಹಾಗು ಶಕಾರನನ್ನು ಶೂಲಕ್ಕೇರಿಸಲು ಕೇಳಿಕೊಳ್ಳುತ್ತಾನೆ.

ಶಕಾರನು ಸ್ಥಾವರಕನ ಈ ಕೃತ್ಯವನ್ನು ಸುಮ್ಮನೆ ನೋಡುತ್ತ ನಿಲ್ಲಬಹುದೆ? ಆತನು ಸ್ಥಾವರಕನನ್ನು ಒಂದು ಕಡೆಗೆ ಎಳೆದುಕೊಂಡೊಯ್ದು, ಅವನಿಗೆ ತನ್ನ ಬಂಗಾರದ ಕಡಗವನ್ನು ಲಂಚವಾಗಿ ಕೊಡಲು ಪ್ರಯತ್ನಿಸುತ್ತಾನೆ. ಅವನು ಒಪ್ಪದಿದ್ದಾಗ, ಅವನನ್ನು ಬೇರೆಡೆಗೆ ಎಳೆದು ಒಯ್ಯುತ್ತಾನೆ. ಅಪರಾಧೀ ಪ್ರವೃತ್ತಿಯ ಜನರಲ್ಲಿ ಸಾವಿರ ಅಪರಾಧೀ ಉಪಾಯಗಳಿರುತ್ತವೆ.

ಇತ್ತ ಕೊಲೆಗಡುಕರಿಗೆ. ತ್ವರೆ ಮಾಡಿ. ಚಾರುದತ್ತನ ಜೊತೆಗೆ, ಅವನ ಮಗನನ್ನೂ ಸಹ ಶೂಲಕ್ಕೇರಿಸಿಎಂದು ಶಕಾರನು ಒತ್ತಾಯಿಸುತ್ತಾನೆ.  ಚಾರುದತ್ತನಿಗೂ ಸಹ ತನ್ನ ತಪ್ಪನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳಲು ಹಾಗು ರಾಜಾಜ್ಞೆಯನ್ನು ಘೋಷಿಸಲು, ಶಕಾರನು ಹೇಳುತ್ತಾನೆ. ಅಪಮಾನಕ್ಕೆ ಈಡು ಮಾಡುವ ಈ ನಾಟಕವನ್ನು ಬೇಗನೇ ಮುಕ್ತಾಯಗೊಳಿಸಿ, ಮರಣ ಹೊಂದುವುದೇ ಲೇಸೆಂದು ಭಾವಿಸಿದ ಚಾರುದತ್ತನು ಅದೇ ಪ್ರಕಾರವಾಗಿ ಘೋಷಿಸುತ್ತಾನೆ. ಓರ್ವ ಮನುಷ್ಯನು ಎಷ್ಟರ ಮಟ್ಟಿಗೆ ನೀಚನಾಗಬಹುದು ಎನ್ನುವುದನ್ನು ನಮ್ಮ ನಾಟಕಕಾರನು ಶಕಾರನ ಪಾತ್ರದ ಮೂಲಕ ಹಾಗು ಎಷ್ಟರ ಮಟ್ಟಿಗೆ ಅಸಹಾಯಕನಾಗಬಹುದು ಎನ್ನುವುದನ್ನು ಚಾರುದತ್ತನ ಪಾತ್ರದ ಮೂಲಕ ತೋರಿಸಿದ್ದಾನೆ.

ಅಲ್ಲಿರುವ ಇಬ್ಬರು ಕೊಲೆಗಡಕರಲ್ಲಿ ಚಾರುದತ್ತನನ್ನು ಶೂಲಕ್ಕೇರಿಸಬೇಕಾದ ಕೊಲೆಗಡುಕನು ಯಾರು ಎಂದು ನಿರ್ಧರಿಸಬೇಕಲ್ಲವೆ? ಅದನ್ನು ಚೀಟಿ ಎತ್ತುವ ಮೂಲಕ ನಿರ್ಧರಿಸಲಾಯಿತು. ಆದರೆ ಆ ಕೊಲೆಗಡುಕನು ತಕ್ಷಣವೇ ತನ್ನ ಕಾರ್ಯವನ್ನು ಮುಗಿಸಲು ಸಿದ್ಧನಾಗಲಿಲ್ಲ. ಅಪರಾಧಿಯನ್ನು ರಕ್ಷಿಸುವಂತಹ ಯಾವುದಾದರೂ ಘಟನೆ ನಡೆದೀತು. ಆದುದರಿಂದ, ನಿನ್ನ ಕಾರ್ಯವನ್ನು ಸ್ವಲ್ಪ ವಿಳಂಬಿಸುಎಂದು ಅವನ ತಂದೆ ಅವನಿಗೆ ಹೇಳಿದ್ದನಂತೆ! ಕೊಲೆಗಡುಕರೂ ಕೂಡ ಚಾರುದತ್ತನ ಬಗೆಗೆ ಸದ್ಭಾವನೆಯನ್ನೇ ಹೊಂದಿದ್ದರು! ಆ ವಿಳಂಬಕಾಲವೂ ಮುಗಿದ ಬಳಿಕ, ಅನಿವಾರ್ಯವಾಗಿ, ಕೊಲೆಗಡುಕರು ಚಾರುದತ್ತನನ್ನು ಶೂಲಕ್ಕೇರಿಸುವ ತೆಂಕಣ ದಿಕ್ಕಿನ ಸ್ಮಶಾನಭೂಮಿಯನ್ನು ತೋರಿಸುತ್ತಾರೆ.

ಈ ನಡುವೆ, ಬೌದ್ಧ ಭಿಕ್ಷುವಿನಿಂದ ರಕ್ಷಿತಳಾದ ವಸಂತಸೇನೆಯು ಚಾರುದತ್ತನ ಮನೆಗೆ ಹೋಗಲು, ಆ ಭಿಕ್ಷುವಿನೊಡನೆ ರಂಗದ ಮೇಲೆ ಪ್ರವೇಶಿಸುತ್ತಾಳೆ. ಚಾರುದತ್ತನ ಮೇಲೆ ಮಾಡಲಾದ ಆರೋಪ ಹಾಗು ಆತನಿಗೆ ನೀಡಲಾದ ಮರಣದಂಡನೆಯ ವಿಷಯವು ವಸಂತಸೇನೆಗೆ ತಿಳಿದಿಲ್ಲ. ಅವಳಿಗೆ ಚಾರುದತ್ತನನ್ನು ಭೆಟ್ಟಿಯಾಗುವ ಆತುರ. ಆದರೆ ಆ ಭಿಕ್ಷುವು ಅವಳನ್ನು ರಾಜಮಾರ್ಗದಲ್ಲಿಯೇ ಕರೆದುಕೊಂಡು ಹೋಗುತ್ತಿದ್ದಾನೆ. ಚಾರುದತ್ತನನ್ನು ಶೂಲಕ್ಕೇರಿಸಲು ಕೊಲೆಗಡುಕರು ಐದನೆಯ ಸಲ ಮಾಡುತ್ತಿರುವ ಘೋಷಣೆಯನ್ನು ಭಿಕ್ಷುವು ಕೇಳಿ ವಸಂತಸೇನೆಗೆ ತಿಳಿಸುತ್ತಾನೆ: ವಸಂತಸೇನೆ, ನಿನ್ನನ್ನು ಕೊಲೆ ಮಾಡಿದ ಅಪರಾಧಕ್ಕಾಗಿ ಚಾರುದತ್ತನನ್ನು ಶೂಲಕ್ಕೇರಿಸಲಾಗುತ್ತಿದೆ.

ಕೊಲೆಗಡುಕನು ಚಾರುದತ್ತನಿಗೆ ಸಿದ್ಧನಾಗಲು ಹೇಳಿ, ತನ್ನ ಕತ್ತಿಯನ್ನು ಅವನ ಕುತ್ತಿಗೆಯ ಮೇಲೆ ಬೀಸುತ್ತಾನೆ. ಆದರೆ, ಕತ್ತಿಯು ಕೈಜಾರಿ ಕೆಳಗೆ ಬೀಳುತ್ತದೆ. ಅದನ್ನು ಶುಭಶಕುನವೆಂದೇ ತಿಳಿದ ಆ ಕೊಲೆಗಡುಕನು ತನ್ನ ಕುಲದೇವಿಯಾದ ಸಹ್ಯಪರ್ವತವಾಸಿನಿಯನ್ನು ಪ್ರಾರ್ಥಿಸುತ್ತಾನೆ: ತಾಯಿ, ಚಾರುದತ್ತನನ್ನು ರಕ್ಷಿಸು ಹಾಗು  ಆ ಮೂಲಕ ನನ್ನ ವಂಶವನ್ನು
ಕಾಪಾಡು’. ಓರ್ವ ಕೊಲೆಗಡುಕನಿಗೂ ಕೂಡ, ಚಾರುದತ್ತನು ನಿರಪರಾಧಿ ಎನ್ನುವ ವಿಶ್ವಾಸವಿದೆ! (ಸಹ್ಯಾದ್ರಿವಾಸಿನಿಯಾದ ದೇವಿಯು ಈ ಕೊಲೆಗಡುಕನ ಕುಲದೇವಿ ಎಂದರೆ, ಇವನು ಕರ್ನಾಟಕದ ಘಟ್ಟಪ್ರದೇಶದಿಂದ ಉಜ್ಜಯಿನಿಗೆ ವಲಸೆ ಹೋಗಿದ್ದನೆ?)

ಇದು ಮತ್ತೋರ್ವ ಕೊಲೆಗಡುಕನನ್ನು ಕಾರ್ಯಪ್ರವೃತ್ತನಾಗಲು ಪ್ರೇರೇಪಿಸುತ್ತದೆ. ಆತನು ಚಾರುದತ್ತನ ಕೊರಳಿಗೆ ನೇಣಿನ ಹಗ್ಗವನ್ನು ಹಾಕುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಓಡುತ್ತ ಬಂದ ವಸಂತಸೇನೆಯು, ‘ತಡೆಯಿರಿ, ನಿಲ್ಲಿಸಿರಿ. ಯಾರ ಕೊಲೆಗಾಗಿ ನೀವು ಇವರನ್ನು ಶೂಲಕ್ಕೆ ಏರಿಸುತ್ತಿದ್ದೀರೋ, ಆ ದುರ್ಭಾಗಿನಿ ನಾನೇಎನ್ನುತ್ತಾಳೆ.

ಚಕಿತರಾದ ಕೊಲೆಗಡುಕರು ಚಾರುದತ್ತನಿಗೆ ಬಿಗಿದ ನೇಣನ್ನು ತೆಗೆದು ಬಿಡುತ್ತಾರೆ. ವಸಂತಸೇನೆಯನ್ನು ಕಂಡ ಶಕಾರನು ಓಡಿ ಹೋಗಲು ಪ್ರಾರಂಭಿಸುತ್ತಾನೆ. ಆದರೆ ಕೊಲೆಗಡುಕರು ಅವನನ್ನು ಬೆನ್ನಟ್ಟುತ್ತಾರೆ. ವಸಂತಸೇನೆಯನ್ನು ಹೊಡೆದುರುಳಿಸಿದವರನ್ನು ಶೂಲಕ್ಕೇರಿಸಿರಿ ಎನ್ನುವದು ರಾಜಾಜ್ಞೆಯಾಗಿದೆ. ಆದುದರಿಂದ ರಾಜನ ಮೈದುನನನ್ನೇ ಶೂಲಕ್ಕೇರಿಸುತ್ತೇವೆಎನ್ನುತ್ತ ಅವರು ಅವನನ್ನು ಹಿಡಿಯುತ್ತಾರೆ.

ವಸಂತಸೇನೆಯು ಜೀವಂತವಾಗಿರುವದನ್ನು ಕಂಡ ಚಾರುದತ್ತನು ಸಂತೋಷಾಶ್ಚರ್ಯಭರಿತನಾಗಿ, ಭಾವಾತಿರೇಕದಿಂದ  ಆಕೆಗೆ ಹೇಳುತ್ತಾನೆ:
ನೋಡು ಪ್ರಿಯೆ,
ನನಗೆ ತೊಡಿಸಲಾದ ಈ ಕೆಂಪು ಬಟ್ಟೆ ಹಾಗು ಕೆಂಪು ಮಾಲೆಯು ಮದುಮಗನ ಸಿಂಗಾರದಂತೆ ಶೋಭಿಸುತ್ತಿವೆ.
ಮೃತ್ಯುಸೂಚಕವಾದ ಈ ಡೋಲಿನ ಧ್ವನಿಯು ವಿವಾಹದ ಮಂಗಲನಾದದಂತೆ ಕೇಳುತ್ತಿದೆ.

ಚಾರುದತ್ತನ ಭಾವನೆಯಲ್ಲಿಯ ಬದಲಾವಣೆಯನ್ನು ಗಮನಿಸಿರಿ. ಇಲ್ಲಿಯವರೆಗೂ ವಸಂತಸೇನೆಯನ್ನು ಕೇವಲ ಪ್ರೇಯಸಿಯಂತ ನೋಡುತ್ತಿದ್ದ ಚಾರುದತ್ತನು ಆಕೆಯನ್ನು ಇದೀಗ ಮದುಮಗಳಂತೆ ನೋಡುತ್ತಿದ್ದಾನೆ. ಅರ್ಥಾತ್ ವಸಂತಸೇನೆಯ ಗಾಢ ಪ್ರೇಮದಿಂದ ಅವನಲ್ಲಿ ಈ ಬದಲಾವಣೆ ಆಗಿರಬಹುದು ಅಥವಾ ಒಂದು ಉತ್ಕಟ ಸನ್ನಿವೇಶದಲ್ಲಿ ಅವನಿಗೆ ತನ್ನ ಹಾಗು ವಸಂತಸೇನೆಯ ನೈಜ ಸಂಬಂಧವು ಹೊಳೆದಿರಬಹುದು.

ವಸಂತಸೇನೆಯು ಶಕಾರನ ದೌರ್ಜನ್ಯವನ್ನು ವಿವರಿಸಿದಳು ಹಾಗು ಬೌದ್ಧ ಭಿಕ್ಷುವು ತನ್ನನ್ನು ರಕ್ಷಿಸಿದ ಬಗೆಯನ್ನು ತಿಳಿಸಿದಳು. ಆಗ ಬೌದ್ಧ ಭಿಕ್ಷುವು ತಾನು ಒಂದು ಕಾಲಕ್ಕೆ ಚಾರುದತ್ತನ ಸೇವಕನಾಗಿದ್ದ ಸಂವಾಹಕನು ಎಂದು ಹೇಳಿದನು. ಚಾರುದತ್ತ ಹಾಗು ವಸಂತಸೇನೆ ಇವರು ದೊಡ್ಡ ಗಂಡಾಂತರದಿಂದ ಪಾರಾದರು. ಆದರೆ ಇವರನ್ನು ಆಪತ್ತಿಗೆ ನೂಕಿದವರಾರು? ಶಕಾರನೆ, ನ್ಯಾಯಾಧೀಶರೆ ಅಥವಾ ಮಹಾರಾಜನೆ?  ನಿಜ ಹೇಳಬೇಕೆಂದರೆ, ಉಜ್ಜಯಿನಿಯ ಕೊಳೆತು ಹೋದ ವ್ಯವಸ್ಥೆಯೆ ಇದಕ್ಕೆಲ್ಲ ಕಾರಣವಲ್ಲವೆ? ನಾಟಕದ ಕೊನೆಯಲ್ಲಿ ಅದಕ್ಕೆ ನಾವು ಪರಿಹಾರವನ್ನು ಕಾಣಬೇಕಷ್ಟೆ? ಇಗೋ, ಅದು ಇಲ್ಲಿದೆ:

ಆಗ ಇದ್ದಕ್ಕಿದ್ದಂತೆ ಶರ್ವಿಲಕನು ಬಂದು ‘ದುಷ್ಟ ರಾಜನಾದ ಪಾಲಕನ ಸಂಹಾರವಾಗಿದೆ. ಆರ್ಯಕನು ರಾಜನಾಗಿ ಅಭಿಷಿಕ್ತನಾಗಿದ್ದಾನೆ. ಅವನ ಆಣತಿಯಂತೆ ಚಾರುದತ್ತನ ಬಿಡುಗಡೆಯನ್ನು ಮಾಡಲು ನಾನು ಇಲ್ಲಿ ಬಂದಿದ್ದೇನೆ’ ಎಂದು ಹೇಳುತ್ತಾನೆ. ( ಮೂರನೆಯ ಅಂಕದಲ್ಲಿ ಇದೇ ಶರ್ವಿಲಕನು ಚಾರುದತ್ತನ ಮನೆಗೆ ಕನ್ನ ಹಾಕಿ, ವಸಂತಸೇನೆಯ ಆಭರಣಗಳನ್ನು ಕದ್ದೊಯ್ದಿದ್ದನು. ನಾಲ್ಕನೆಯ ಅಂಕದಲ್ಲಿ, ವಸಂತಸೇನೆಯು ಇವನ ಪ್ರೇಯಸಿ ಮದನಿಕೆಯನ್ನು ಉದಾರವಾಗಿ ಇವನಿಗೆ ಒಪ್ಪಿಸಿದ್ದಳು. ಆ ಸಮಯದಲ್ಲಿ ಆರ್ಯಕನನ್ನು ಬಂಧಿಸಲು ರಾಜಾಜ್ಞೆಯಾಗಿರುವದನ್ನು ಕೇಳಿದ ಶರ್ವಿಲಕನು ಮದನಿಕೆಯನ್ನು ತನ್ನ ಗೆಳೆಯನ ಮನೆಯಲ್ಲಿ ಬಿಟ್ಟು, ಆರ್ಯಕನ ನೆರವಿಗಾಗಿ ಧಾವಿಸಿದ್ದನು.)

ಮೊದಮೊದಲು ಚಾರುದತ್ತನಿಗೆ ತನ್ನ ಮುಖವನ್ನು ತೋರಿಸಲು ನಾಚಿಕೊಂಡ ಶರ್ವಿಲಕನು ತನ್ನ ಪರಿಚಯವನ್ನು ಮಾಡಿಕೊಟ್ಟು, ಆರ್ಯಕನು ಚಾರುದತ್ತನನ್ನು ಬಂಧಮುಕ್ತನನ್ನಾಗಿ ಮಾಡಿರುವದಾಗಿಯೂ, ಆತನಿಗೆ ತನ್ನ ಮೊದಲ ಕಾಣಿಕೆಯೆಂದು ಕುಶಾವತಿ ಪ್ರಾಂತವನ್ನು ನೀಡಿರುವದಾಗಿಯೂ ಹೇಳುತ್ತಾನೆ.

ನಿರಪರಾಧಿಯು ಬಂಧಮುಕ್ತನಾದನು. ಆದರೆ ನಿಜವಾದ ಅಪರಾಧಿಗೆ ಶಿಕ್ಷೆಯಾಗಬೇಕಲ್ಲವೆ? ಆದುದರಿಂದ ಶಕಾರನನ್ನು ಹಿಡಿದುಕೊಂಡ ಕೊಲೆಗಡುಕರು ಆತನನ್ನು ಅಲ್ಲಿಗೆ ಎಳೆದು ತರುತ್ತಾರೆ. ಈತನಿಗೆ ಏನು ಶಿಕ್ಷೆ ಕೊಡಬೇಕೆಂದು ಶರ್ವಿಲಕನು ಚಾರುದತ್ತನನ್ನು ಕೇಳುತ್ತಾನೆ. ಈ ಸಮಯದಲ್ಲಿ ಲಜ್ಜಾಹೀನನಾದ ಶಕಾರನು, ‘ಚಾರುದತ್ತನೇ, ನನ್ನನ್ನು ರಕ್ಷಿಸು’ ಎಂದು ಅವನ ಕಾಲಿಗೆ ಬೀಳುತ್ತಾನೆ.

‘ನಾನು ಹೇಳುವ ಶಿಕ್ಷೆಯನ್ನು ಈತನಿಗೆ ನೀಡುವಿರಲ್ಲವೆ?’ ಎಂದು ಚಾರುದತ್ತನು ಸದ್ಯಕ್ಕೆ ರಾಜಪ್ರತಿನಿಧಿಯಾದ ಶರ್ವಿಲಕನಿಗೆ ಕೇಳುತ್ತಾನೆ. ಶರ್ವಿಲಕನೂ ಅದಕ್ಕೆ ಒಪ್ಪುತ್ತಾನೆ. ಚಾರುದತ್ತನು ತನಗೆ ಗಂಟಲಗಾಣವಾಗಿದ್ದ ಶಕಾರನಿಗೆ ಏನು ಶಿಕ್ಷೆಯನ್ನು ಹೇಳುವನೋ ಎಂದು ಪ್ರೇಕ್ಷಕರು ಉಸಿರು ಬಿಗಿ ಹಿಡಿದು ಕುಳಿತಿರುತ್ತಾರೆ. ‘ಶಕಾರನನ್ನು ಕ್ಷಮಿಸಿ ಬಿಡಿ’ ಎಂದು ಚಾರುದತ್ತನು ಹೇಳಿದಾಗ, ಎಲ್ಲರೂ ಆಶ್ಚರ್ಯಗೊಳ್ಳದಿರರೆ? ಆದರೆ ಇದು ಚಾರುದತ್ತನ ಉದಾರ ಗುಣವನ್ನೇ ತೋರಿಸುತ್ತದೆ.

ಇತ್ತ ಚಾರುದತ್ತನ ಧರ್ಮಪತ್ನಿಯಾದ ಧೂತಾದೇವಿಯ ಪರಿಸ್ಥಿತಿ ಏನು? ಶರ್ವಿಲಕನ ಮತ್ತೊಬ್ಬ ಜೊತೆಗಾರನಾದ ಚಂದನಕನು ಜನರನ್ನು ಸರಿಸುತ್ತ ಬಂದು, ‘ಧೂತಾದೇವಿಯು ಅಗ್ನಿಪ್ರವೇಶವನ್ನು ಮಾಡುತ್ತಿದ್ದಾಳೆ. ರೋಹಸೇನ ಹಾಗು ಮೈತ್ರೇಯರು ತಡೆಯಲು ಎಷ್ಟೇ ಪ್ರಯತ್ನಿಸಿದರೂ ಸಹ ಅವಳು ಕೇಳುತ್ತಿಲ್ಲ’ ಎಂದು ಹೇಳುತ್ತಾನೆ. ನಾಟಕದಲ್ಲಿಯ ಸಂಕಟಗಳ ಸರಣಿ ಇನ್ನೂ ಮುಗಿದಿಲ್ಲ!

ಧೂತಾದೇವಿಯು ಬಾಲಕ ರೋಹಸೇನನಿಗೆ, ‘ಗಟ್ಟಿ ಮನಸ್ಸು ಮಾಡಿಕೊ, ಮಗು. ನಮಗೆ ಎಳ್ಳು ನೀರು ಬಿಡಲು ನೀನು ಬದುಕಿರಬೇಕು. ನಿನ್ನನ್ನು ಸಂತೈಸಲು ನಿನ್ನ ತಂದೆ ಇಲ್ಲಿಲ್ಲ.’ ಎಂದು ಹೇಳುತ್ತ ಅಗ್ನಿಯಲ್ಲಿ ಹಾರಿಕೊಳ್ಳುವ ಕ್ಷಣದಲ್ಲಿ ಚಾರುದತ್ತನು ಅಲ್ಲಿ ಪ್ರವೇಶಿಸುತ್ತಾನೆ. ಚಾರುದತ್ತನನ್ನು ಕಂಡ ಧೂತಾದೇವಿ ಹಾಗು ರೋಹಸೇನರು ಸಂತೋಷದಿಂದ ಭಾವಾವಿಷ್ಟರಾಗುತ್ತಾರೆ.

ಇಲ್ಲಿಯವರೆಗೆ ಚಾರುದತ್ತ ಹಾಗು ವಸಂತಸೇನೆಯರ ಪ್ರೇಮಾಲಾಪವನ್ನು ಕೇಳಿದ್ದೇವೆ. ಚಾರುದತ್ತನಿಗೆ ತನ್ನ ಹೆಂಡತಿ ಧೂತಾದೇವಿಯ ಮೇಲೂ ಉತ್ಕಟ ಪ್ರೇಮ ಹಾಗು ಅಭಿಮಾನ ಇದ್ದವು ಎನ್ನುವುದು ನಾಟಕದ ಕೊನೆಯಲ್ಲಿ ವ್ಯಕ್ತವಾಗಬೇಕಷ್ಟೆ. ಆದುದರಿಂದ ನಮ್ಮ ನಾಟಕಕಾರನು ಚಾರುದತ್ತನಿಂದ ಹೇಳಿಸುವ ಈ ಮಾತುಗಳನ್ನು ಕೇಳಿರಿ:
‘ಓ ಪ್ರಿಯೆ, ನಿನ್ನ ಇನಿಯನು ಬದುಕಿರುವಾಗಲೇ ಇಂತಹ ಕಠಿಣವಾದ ನಿರ್ಧಾರವನ್ನು ಏಕೆ ಮಾಡಿದೆ? ಎಲ್ಲಿಯಾದರೂ ಸೂರ್ಯಾಸ್ತಕ್ಕಿಂತಲೂ ಮೊದಲೇ ತಾವರೆ ಬಳ್ಳಿಯು ಕಣ್ಣು ಮುಚ್ಚುವುದೆ?’

ಈ ಪ್ರಶ್ನೆಗೆ ಧೂತಾದೇವಿಯು ನೀಡುವ ಉತ್ತರವು ಹೃದಯಂಗಮವಾಗಿದೆ:
‘ಆರ್ಯಪುತ್ರ, ತಾವರೆ ಬಳ್ಳಿಯು ಜಡವಸ್ತುವಾಗಿದೆ’.
ಅರ್ಥಾತ್ ಧೂತಾದೇವಿಯು ಭಾವನೆಗಳಿಂದ ಪೂರ್ಣವಾದ ಚೇತನಳು, ತನ್ನ ಪತಿಯ ಬಗೆಗೆ ಅನನ್ಯವಾದ ಪ್ರೇಮವುಳ್ಳವಳು. ಅವಳು ತಾವರೆಯಂತೆ ಭಾವಶೂನ್ಯ ವಸ್ತುವಲ್ಲ.

ಬೆಂಕಿಯಲ್ಲಿ ಬೆಂದ ಚಿನ್ನವು ಹೊಳೆಯುವಂತೆ, ಸಂಕಟಗಳಲ್ಲಿ ಬೆಂದು, ಮೃತ್ಯುಮುಖದಿಂದ ಪಾರಾಗಿ ಬಂದ ಚಾರುದತ್ತನು ತನ್ನ ಮಿತ್ರನಾದ ಮೈತ್ರೇಯನನ್ನು ಹಾಗು ಸೇವಿಕೆಯಾದ ರದನಿಕೆಯನ್ನು ಸ್ವೀಕರಿಸುತ್ತಾನೆ. ಧೂತಾದೇವಿಯು ಹೊಸ ರಾಜನಾದ ಆರ್ಯಕನ ಪರವಾಗಿ ಶರ್ವಿಲಕ ಮತ್ತು ವಸಂತಸೇನೆಯನ್ನು ಸ್ವೀಕರಿಸುತ್ತಾಳೆ. ಹೊಸ ರಾಜನು ವಸಂತಸೇನೆಗೆ ಸದ್ಗೃಹಿಣಿಯ ಸ್ಥಾನವನ್ನು ದಯಪಾಲಿಸುತ್ತಾನೆ.

(ಈ ಕೃತ್ಯವನ್ನು ಎರಡು ಐತಿಹಾಸಿಕ ಘಟನೆಗಳೊಂದಿಗೆ ಹೋಲಿಸಬಹುದು:
ನರಕಾಸುರನ ವಧೆಯ ನಂತರ, ಶ್ರೀಕೃಷ್ಣನು, ಅಲ್ಲಿ ಬಂಧನದಲ್ಲಿದ್ದ ೧೬೦೦೦ ಹೆಣ್ಣುಮಕ್ಕಳನ್ನು ಮುಕ್ತಗೊಳಿಸಿ ಮದುವೆಯಾದನು ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಇದರ ಮರ್ಮವಿಷ್ಟೆ: ಈ ಹೆಣ್ಣುಮಕ್ಕಳಿಗೆ ಧರ್ಮಪತ್ನಿಯರು ಎನ್ನುವ ಶಾಸನಬದ್ಧ ಸ್ಥಾನವನ್ನು ಕೃಷ್ಣನು ನೀಡಿದನು. ಅವರಿಗೆ ಈಗಾಗಲೇ ಹುಟ್ಟಿದ ಹಾಗು ಇನ್ನು ಹುಟ್ಟಲಿರುವ ಮಕ್ಕಳು ಶಾಸನಬದ್ಧರಾಗಿ ಶ್ರೀಕೃಷ್ಣನ ಮಕ್ಕಳಾದರು.

ಎರಡನೆಯ ಘಟನೆ ಬಂಗ್ಲಾದೇಶದ್ದು. ಪಾಕಿಸ್ತಾನದಿಂದ ಮುಕ್ತಿ ಪಡೆದ ಬಂಗ್ಲಾದೇಶದಲ್ಲಿ ಸಾವಿರಾರು ಕನ್ಯಾಮಾತೆಯರಿದ್ದರು. ಸಾಮಾನ್ಯ ಕಾಯದೆಯ ಮೇರೆಗೆ ಅವರ ಮಕ್ಕಳು ಜಾರಜರು. ಬಂಗ್ಲಾದೇಶದ ಶಾಸನಸಭೆಯು ಅವರಿಗೆ ಶಾಸನೀಯ ಮನ್ನಣೆಯನ್ನಿತ್ತು, ಅವರ ಹುಟ್ಟಿನ ಅಪಮಾನವನ್ನು ತೊಡೆದು ಹಾಕಿತು.)

ಅನಂತರ ಚಾರುದತ್ತನ ಇಚ್ಛೆಯಂತೆ ಸ್ಥಾವರಕ, ಚಂದನಕ ಹಾಗು ಬೌದ್ಧ ಸನ್ಯಾಸಿ ಸಹ ಸಮ್ಮಾನಿಸಲ್ಪಟ್ಟರು, ಶಕಾರನೂ ಸಹ! ಚಾರುದತ್ತನು ತನಗೆ ಈಗಾಗಲೇ ಒಳ್ಳೆಯ ವಸ್ತುಗಳು ದೊರೆತಿವೆ ಎಂದು ಹೇಳುತ್ತಾನೆ. ತನ್ನ ಹಳೆಯ ದುಃಖಗಳನ್ನು ಮರೆತು ಹೊಸ ಸಂತೋಷದಲ್ಲಿ ಎಲ್ಲರೊಡನೆ ಭಾಗಿಯಾಗುವ ಸದ್ಗುಣವನ್ನು ಚಾರುದತ್ತನು ತೋರಿಸುತ್ತಾನೆ. ನಾಟಕವು ಚಾರುದತ್ತನ ಆಶಯದೊಂದಿಗೆ (ಭರತವಾಕ್ಯದೊಂದಿಗೆ) ಕೊನೆಯಾಗುತ್ತದೆ:

‘ಗೋವುಗಳು ಕ್ಷೀರಸಂಪನ್ನವಾಗಲಿ, ಭೂಮಿಯು ಸಸ್ಯಶಾಲಿನಿಯಾಗಲಿ. ಮೋಡಗಳು ಕಾಲಕಾಲಕ್ಕೆ ಮಳೆ ಸುರಿಸಲಿ, ತಂಗಾಳಿಯು ಎಲ್ಲರಿಗೂ ಸುಖವನ್ನು ನೀಡುತ್ತ ಬೀಸಲಿ. ಎಲ್ಲರ ಮನೆಯಲ್ಲೂ ಸಂತೋಷದ ಚಿಲುಮೆ ಇರಲಿ. ಬ್ರಾಹ್ಮಣರ ಸಜ್ಜನಿಕೆಗೆ ಬೆಲೆ ಇರಲಿ. ಹಗೆಗಳನ್ನು ನಾಶ ಮಾಡಿ ಸಿರಿವಂತರಾದ ಅರಸರು ಭೂಮಿಯನ್ನು ಧರ್ಮದಿಂದ ಪಾಲಿಸಲಿ.’

ಕೊನೆಯವರೆಗೂ ಕುತೂಹಲವನ್ನು ಕೆರಳಿಸುವ ಮೃಚ್ಛಕಟಿಕಮ್ ನಾಟಕವು ಭಾರತೀಯ ನಾಟ್ಯಪರಂಪರೆಗೆ ಅನುಗುಣವಾಗಿ ಸುಖಾಂತವಾಗಿ ಸಮಾಪ್ತವಾಗುತ್ತದೆ. ಭಾರತೀಯ ಪರಂಪರೆಯನ್ನು ಅರಿತ ಎಲ್ಲ ಲೇಖಕರು ಈ ಭರತವಾಕ್ಯವನ್ನು ತಮ್ಮ ಸಾಹಿತ್ಯದ ಕೊನೆಯಲ್ಲಿ ಹೇಳಿದ್ದಾರೆ. ಉದಾಹರಣೆಗೆ ಬೇಂದ್ರೆಯವರ ‘ಕುಣಿಯೋಣ ಬಾರಾ’ ಕವನವನ್ನು ನೋಡಬಹುದು. ಬದುಕಿನಲ್ಲಿ ಬೇಸತ್ತ ಕವಿಯು, ಬೇಸರದ ಪರಿಹಾರಾರ್ಥವಾಗಿ ತನ್ನ ಹೆಂಡತಿಗೆ ‘ಕುಣಿಯೋಣ ಬಾರಾ’ ಎಂದು ಕರೆಯುತ್ತಾನೆ. ತಮ್ಮ ಕುಣಿತವು ವಿಶ್ವನಿಯಾಮಕನ ಆನಂದನೃತ್ಯವೇ ಆಗಿದೆ ಎಂದು ಕೊನೆಯಲ್ಲಿ ಅರಿವಾದಾಗ, ಕವಿ ಹೇಳುವ ಭರತವಾಕ್ಯ ಹೀಗಿದೆ:

‘ಆ ಕ್ಷೀರ-
      ಸಾಗರ-
       ದಾನಂದದಾಗರ
                 ತೆರಿ ತೆರಿ ತೆರದರ |
       ಕುಣಿಯೋಣ ಬಾರಾ, ಕುಣಿಯೋಣ ಬಾ|
ಹದಿನಾಲ್ಕು ಲೋಕಕ್ಕ
        ಚಿಮ್ಮಲಿ ಈ ಸುಖ
                  ಹಿಗ್ಗಲಿ ಸಿರಿಮುಖ |
       ಕುಣಿಯೋಣ ಬಾರಾ, ಕುಣಿಯೋಣ ಬಾ|
           
ಸಂಸ್ಕೃತದ ಓರ್ವ ಶ್ರೇಷ್ಠ ನಾಟಕಕಾರ ಹಾಗು ಕನ್ನಡದ ಓರ್ವ ಶ್ರೇಷ್ಠ ಕವಿ ಇವರು ಆಶಿಸುವಂತೆ, ಸಮಸ್ತ ಜಗತ್ತಿಗೆ ಕಲ್ಯಾಣವಾಗಲಿ ಎಂದು ನಾವೂ ಆಶಿಸೋಣ!

10 comments:

ಮನಸು said...

ಚಾರುದತ್ತನ ಕಥೆ ನಿಜಕ್ಕೂ ಅದ್ಭುತವಾಗಿದೆ. ಇಲ್ಲಿ ಚಾರುದತ್ತನಿಗೆ ಶಿಕ್ಷೆಯಾಗುವಂತೆ ಮಾಡಿದ ಶಕಾರನದೇ ತಪ್ಪು ಆದರೆ ರಾಜ ತನ್ನ ತೀರ್ಪನ್ನು ಕೊಡುವ ಮುಂಚೆ ಕೂಲಂಕುಷವಾಗಿ ಪರಿಶೀಲಿಸಬೇಕಿತ್ತು ಎಂದೆನಿಸುತ್ತೆ. ಅಲ್ಲೇನೋ ವಸಂತ ಸೇನೆ ಬದುಕಿದ್ದೇನೆ ಎಂದು ಬಂದಳು, ಅವಳು ಬರುವುದು ತಡವಾಗಿದ್ದರೆ ನಿರಪರಾಧಿ ಬಲಿಯಾಗುತ್ತಿದ್ದ. ಯಾವ ಕಾಲಘಟ್ಟಗಳಾದರೇನು ಅನ್ಯಾಯಗಳು ನಡೆಯುತ್ತಲೇ ಇರುತ್ತವೆ. ಸುಳ್ಳಿನ ಮುಂದೆ ಸತ್ಯಗಳು ಮುಚ್ಚಿಹೋಗುತ್ತವೆ.

ಕೆಂಪು ಹೂ ಮತ್ತೆ ಕೆಂಪು ಬಟ್ಟೆ ತೊಟ್ಟು ಹೋಗುವುದು ಮರಣಕ್ಕೂ ಮತ್ತು ಮದುವೆ ಎರಡಕ್ಕೊ ಹೋಲಿಕೆ ಮಾಡಿರುವುದು ಅದ್ಭುತವಾಗಿದೆ. ಜನಿವಾರವನ್ನು ತನ್ನ ಮಗನಿಗೆ ಕೊಡುವ ದೃಶ್ಯವಂತು ಕಣ್ಣ ಮುಂದೆ ಬಂದಂತಾಯಿತು. ಅದ್ಭುತ ವಿವರಣೆ. ಕಾಕಾ ನಿಮ್ಮ ಈ ಬರಹದಿಂದ ಈ ನಾಟಕವನ್ನು ನೋಡಬೇಕೆನಿಸಿದೆ.

prabhamani nagaraja said...

ನಿಮ್ಮ ಸುಲಲಿತ ಸರಳನಿರೂಪಣೆಯಿ೦ದ ನಾಟಕವನ್ನು ಪ್ರತ್ಯಕ್ಷ ನೋಡಿದ ಅನುಭವವಾಯಿತು ಸರ್. ನಿಮ್ಮಿ೦ದ ಇ೦ಥಾ ಬರಹಗಳನ್ನು ಇನ್ನೂ ಹೆಚ್ಚು ನಿರೀಕ್ಷಿಸುತ್ತೇನೆ.

sunaath said...

ಮನಸು,
ನೀನಾಸಂ ತಂಡವು ಈ ನಾಟಕವನ್ನು ಆಡಿತ್ತು ಎಂದು ಕೇಳಿದ್ದೇನೆ. ಈ ನಾಟಕವನ್ನು ಆಡಲು ಬೇಕಾಗುವ ಸಮಯ,ನಟವರ್ಗ ಹಾಗು ರಿಸೋರ್ಸ್ ಇವನ್ನು ಗಮನಿಸಿದರೆ ರಂಗಪ್ರಯೋಗಕ್ಕೆ ಇದು ಕಠಿಣವಾದ ನಾಟಕ ಎನ್ನಿಸುತ್ತದೆ. ಆದರೂ ಪ್ರಯತ್ನಿಸುವ ಉತ್ಸಾಹಿಗಳು ಇದ್ದೇ ಇರಬಹುದು!

sunaath said...

ಪ್ರಭಾಮಣಿ ಮೇಡಮ್,
ಪ್ರತಿಕ್ರಿಯೆಗೆ ಧನ್ಯವಾದಗಳು.

AntharangadaMaathugalu said...

ಕಾಕಾ ವಿವರಣೆ ತುಂಬಾ ಚೆನ್ನಾಗಿದೆ. ದೃಶ್ಯಗಳು ಕಣ್ಣ ಮುಂದೆ ನಡೆಯುತ್ತಿರುವಂತಿದೆ.
ಧನ್ಯವಾದಗಳು.
ನಿಮಗೆ ಶ್ರೀ ದ ರಾ ಬೇಂದ್ರೆಯವರ ’ನರಸಿಂಹ ಸ್ತುತಿ’ ತಿಳಿದಿದೆಯಾ?


ಶ್ಯಾಮಲ

ಸಿಂಧು sindhu said...

ಪ್ರೀತಿಯ ಕಾಕಾ,
ಇವತ್ತು ಒಟ್ಟಿಗೇ ಮೂರರಿಂದ ಕೊನೆಯ ಅಂಕದವರೆಗೂ ಓದಿಬಿಟ್ಟೆ.
ಈ ನಾಟಕವನ್ನು ಬಹಳ ಕಾಲದ ಹಿಂದೆ.. (ಹೆಚ್ಚೂ ಕಮ್ಮಿ ೨೫ ವರ್ಷಗಳಿಗೂ ಮುಂಚೆ) ಆವೆ ಮಣ್ಣಿನ ಬಂಡಿ ಅಂತ ನೀನಾಸಂನವರು ಮಾಡಿದ್ದರು. ಒಂದೇ ಸಲ ನೋಡಿದ್ದೆ.
ನಿಮ್ಮ ಬರಹ ತುಂಬ ಚೆನ್ನಾಗಿ ಮೂಡಿಬಂದಿದೆ. ನೀವು ಜಗಲಿಯಲ್ಲಿ ಕುಳಿತು ಸ್ನೇಹಿತರ(ಸಮಾನಾಸಕ್ತರ) ಜೊತೆಗೆ ಮಾತನಾಡುವ ಶೈಲಿಯಲ್ಲಿ, ನಾಟಕ, ಕತೆ, ಹೂರಣ. ಇತಿಹಾಸ ಮತ್ತು ನಿಮ್ಮ ಆಲೋಚನೆಗಳನ್ನೂ ವಿಷದಪಡಿಸಿದ್ದು ಆಪ್ತವಾಗಿ ಬಂದಿದೆ.
ಈ ನಾಟಕದ ಮೂಲಕ ಶೂದ್ರಕನನ್ನು ನಮ್ಮ ಓದಿನ ಜಗುಲಿಗೆ ತಂದಿಟ್ಟ ನಿಮಗೆ ಧನ್ಯವಾದಗಳು.
ಈ ನಾಟಕದ ಮೂಲ ಮಂಗಳವು ಎಷ್ಟು ಚೆನ್ನಾಗಿದೆಯೋ ಅಷ್ಟೇ ಅರ್ಥಪೂರ್ಣ ನೀವು ಕೋಟ್ ಮಾಡಿರುವ ಕುಣಿಯೋಣು ಬಾರಾ ಕವಿತೆಯ ಸಾಲುಗಳು.
ಹದಿನಾಲ್ಕು ಲೋಕಕ್ಕೆ ಚಿಮ್ಮಲಿ ಈ ಸುಖ..
ಪ್ರೀತಿಯಿಂದ
ಸಿಂಧು

sunaath said...

ಶ್ಯಾಮಲ,
‘ಡಿಂಭದ ಈ ಕಂಬದೊಳಗೆ ನೀವು ಅಡಗಿ ಇರುವಿರಿ,
ನಂಬಿರುವೀ ಎದೆಹೂವನೆ ಆಸರೆ ಮಾಡಿರುವಿರಿ’ ಎನ್ನುವ ಸ್ತೋತ್ರವೆ?
ಈ ಕವನ ನನ್ನ ಹತ್ತಿರ ಇಲ್ಲ. ಇದೇ ಕವನ ನಿಮಗೆ ಬೇಕಾಗಿದ್ದರೆ, ಗ್ರಂಥಾಲಯದಲ್ಲಿ ಹುಡುಕಿ ನಿಮ್ಮ ಇ-ಮೇಲಿಗೆ ಕಳಿಸಿ ಕೊಡುವೆ.

sunaath said...

ಧನ್ಯವಾದಗಳು, ಸಿಂಧು. ಮೃಚ್ಛಕಟಿಕಮ್, ಅಬಿಜ್ಞಾನಶಾಕುಂತಲಮ್ ಹಾಗು ಸ್ವಪ್ನವಾಸವದತ್ತಾ ಇವು ಸಂಸ್ಕೃತದ ಹಾಗು ವಿಶ್ವದ ಮೂರು ಶ್ರೇಷ್ಠ ನಾಟಕಗಳಾಗಿವೆ. ಈ ಮೂರು ನಾಟಕಗಳ ಬಗೆಗೆ ಒಂದು ಸಣ್ಣ ಟಿಪ್ಪಣಿಯನ್ನು ಬರೆದು ಸಾದರಪಡಿಸುವ ವಿಚಾರ ಮಾಡುತ್ತಿದ್ದೇನೆ.

ಅಪ್ಪ-ಅಮ್ಮ(Appa-Amma) said...

ಸುನಾಥ ಕಾಕಾ,

ಮೃಚ್ಛಕಟಿಕಮ್ ಎಲ್ಲಾ ೧೦ ಭಾಗಗಳನ್ನು ಓದಿದೆ.
ಶೂದ್ರಕ ಕವಿಯ ರಚನಾ ಕೌಶಲ್ಯ ಅಸಾಧಾರಣ !

ನಿಮ್ಮ ಅದ್ಭುತ ವಿವರಣೆಗೊಂದು ಶರಣು !

ಉತ್ಸವ ಅನ್ನುವ ಹಿಂದೆ ಸಿನಿಮಾ ಇದರ ಆಧಾರಿತ ಅನಿಸುತ್ತೆ.
ತುಂಬಾ ಹಿಂದೆ ನೋಡಿದ ನೆನಪು.

sunaath said...

ಅಪ್ಪ-ಅಮ್ಮ,
ನೀವು ಹೇಳುವುದು ಸರಿ. ಶಶಿ ಕಪೂರರು ನಿರ್ಮಿಸಿದ ‘ಉತ್ಸವ’ ಚಿತ್ರವು ಮೃಚ್ಛಕಟಿಕಮ್ ನಾಟಕದ ಮೇಲೆ ಆಧಾರಿತವಾಗಿದೆ. ಇದನ್ನು ಗಿರೀಶ ಕಾರ್ನಾಡ ನಿರ್ದೇಶಿಸಿದ್ದರು. ಶೂದ್ರಕನ ಮೃಚ್ಛಕಟಿಕಮ್ ಹಾಗು ಕಪೂರ-ಕಾರ್ನಾಡರ ‘ಉತ್ಸವ’ವನ್ನು ಸುಧಾರಸ ಹಾಗು ನೀರುಮಜ್ಜಿಗೆಗೆ ಹೋಲಿಸಬಹುದು!