ಕನ್ನಡದಲ್ಲಿ ಕಾದಂಬರಿಯುಗವು ಪ್ರಾರಂಭವಾದಾಗಿನಿಂದ ಸಾವಿರಾರು ಕಾದಂಬರಿಗಳು
ಕನ್ನಡದಲ್ಲಿ ಬಂದಿವೆ. ಶಿವರಾಮ ಕಾರಂತರು ಮಾನವೀಯ ನೆಲೆಯ ವೈಚಾರಿಕ ಕಾದಂಬರಿಗಳನ್ನು ಸೃಷ್ಟಿಸಿದರೆ,
ಶಾಂತಿನಾಥ ದೇಸಾಯಿಯವರು ‘ಮುಕ್ತಿ’ಯ ಮೂಲಕ ನವ್ಯ ಕಾದಂಬರಿಯ ಮಾದರಿಯನ್ನು ತೋರಿಸಿದರು. ನವ್ಯೋತ್ತರ
ಸಾಹಿತಿಯಾದ ದೇವನೂರ ಮಹಾದೇವರು ‘ಕುಸುಮಬಾಲೆ’ಯ ಮೂಲಕ ಓದುಗರು ಬೆರಗಾಗುವಂತಹ ಕಾದಂಬರಿಯನ್ನು ಸೃಷ್ಟಿಸಿದರು!
ಈ ಎಲ್ಲ ಕಾದಂಬರಿಗಳ ನಡುವೆ ತ್ರಿವೇಣಿಯವರು ಬರೆದ ‘ಮೊದಲ ಹೆಜ್ಜೆ’ ಎನ್ನುವ ಕಾದಂಬರಿಯು ತನ್ನ ವೈಶಿಷ್ಟ್ಯಗಳಿಂದಾಗಿ
ಏಕಮೇವಾದ್ವಿತೀಯವಾಗಿದೆ.
ತ್ರಿವೇಣಿಯವರು ಈ ಕಾದಂಬರಿಯನ್ನು ೧೯೫೦ರ ದಶಕದಲ್ಲಿ ಬರೆದಿರಬಹುದು. ಅಂದರೆ
ಇಂದಿಗೆ ಸುಮಾರು ೬೦ ವರ್ಷಗಳೇ ಕಳೆದು ಹೋಗಿವೆ. ಕನ್ನಡದ ಮೊದಲ ಕಾದಂಬರಿಯಿಂದ ಇತ್ತೀಚಿನ ಕಾದಂಬರಿಯವರೆಗೂ
ಯಾವ ಘಟಾನುಘಟಿ ಕಾದಂಬರಿಕಾರನೂ ತ್ರಿವೇಣಿಯವರು ಈ ಕಾದಂಬರಿಯಲ್ಲಿ ಬಳಸಿದ ತಂತ್ರವನ್ನು ಬಳಸಿಲ್ಲ!
ಆದುದರಿಂದ, ಆ ಹಳೆಯ ಕಾದಂಬರಿಯ ನವನವೀನ ರಚನಾವಿಧಾನವನ್ನು ಪ್ರಸ್ತಾಪಿಸಲು ಇಲ್ಲಿ ಪ್ರಯತ್ನಿಸಲಾಗಿದೆ.
‘ಮೊದಲ ಹೆಜ್ಜೆ’ಯ ಕಥೆಯು ಬಹಳ ಸರಳವಾಗಿದೆ. ಕಾಲು ಜಾರಿದ ಹುಡುಗಿಯೊಬ್ಬಳು
ಪಟ್ಟ ಸಂಕಷ್ಟಗಳ ಕಥೆ ಇದು. ಅ. ನ.ಕೃ, ತ.ರಾ.ಸು ಮೊದಲಾದ ಕಾದಂಬರಿಕಾರರಾಗಿದ್ದರೆ, ಏಕಪ್ರಕಾರವಾದ
ಸರಳವರ್ಣನೆಯ ಮೂಲಕ ಕಥೆಯನ್ನು ಹೇಳಿ ಮುಗಿಸಿ ಬಿಡುತ್ತಿದ್ದರು. ಶಿವರಾಮ ಕಾರಂತರಾಗಿದ್ದರೆ ಕಾದಂಬರಿಯ
ನಾಯಕಿಯು ತನ್ನ ಸಂಕಷ್ಟಗಳನ್ನು ಎದುರಿಸಿ ಬಾಳನ್ನು ಕಟ್ಟಿಕೊಂಡ ಕಥೆಯನ್ನು ಹೇಳುತ್ತಿದ್ದರು. ಅನಂತಮೂರ್ತಿಯವರಾಗಿದ್ದರೆ
ನಾಯಕಿಯ existential dilemmaಅನ್ನು ಮನೋಹರವಾಗಿ ವರ್ಣಿಸುತ್ತಿದ್ದರು!
ತ್ರಿವೇಣಿ ಈ ಕಥೆಯನ್ನು ಏಕಪ್ರಕಾರವಾಗಿ ವರ್ಣಿಸಿಲ್ಲ. ಅವರ ಮನದಲ್ಲಿ ಮಿಡಿಯುತ್ತಿರುವ
ನಾಯಕಿಯು ಎಲ್ಲ ಯುವತಿಯರಂತೆ ಕನಸುಗಳನ್ನು ಇಟ್ಟುಕೊಂಡವಳಲ್ಲ. ಆದರೆ (ಸಂತಾನಸೃಷ್ಟಿಗಾಗಿ ನಿಸರ್ಗವು ನಿರ್ಮಿಸಿರುವ) ಗಂಡು-ಹೆಣ್ಣಿನ ಪ್ರೀತಿಯ ಹಂಬಲವು ಎಲ್ಲರಿಗೂ ಇರುವಂತೆ ಈ ಹೆಣ್ಣಿಗೂ ಇದ್ದೇ
ಇರಬೇಕಲ್ಲವೆ? ಹಾಗೆಂದು ಅವಳು ಸುಲಭವಾಗಿ ಕಾಲು ಜಾರುವಂಥವಳೂ ಅಲ್ಲ. ತಾನು ಅವಲಂಬಿಸಬಹುದಾದ, ವಿಶ್ವಾಸಪಾತ್ರನಾದ ಗಂಡಿಗೆ ಮಾತ್ರ
ಅವಳು ತನ್ನನ್ನು ಸಮರ್ಪಿಸಿಕೊಳ್ಳುತ್ತಾಳೆ. ಆದರೆ ಆ ಗಂಡು ಈ ಹೆಣ್ಣಿಗೆ ಕೈಕೊಟ್ಟು ಓಡಿದರೆ? ಇಂತಹ
ನಾಯಕಿಯ ಕಥೆಯನ್ನು ಬರೆಯುವಾಗ, ತ್ರಿವೇಣಿಯವರು ಆವರೆಗಿನ ಕನ್ನಡ ಕಾದಂಬರಿಗಳ ನೇರ ವರ್ಣನಾಕ್ರಮವನ್ನು
ಬಿಟ್ಟು, ಹೊಸದೊಂದು ಕ್ರಮವನ್ನು ರೂಪಿಸಿಕೊಂಡರು.
ಮೊದಲ ಹೆಜ್ಜೆಯ ಕಥಾನಕವನ್ನು ನಾಲ್ಕು ಭಾಗಗಳಲ್ಲಿ ರಚಿಸಲಾಗಿದೆ. ಮೊದಲನೆಯ
ಭಾಗದ ಕಥೆಯು ನಾಯಕಿಯ ಹೇಳುವ ಕಥೆಯಾಗಿದೆ. ಈ ಭಾಗದಲ್ಲಿ ಅವಳ ಬಾಲ್ಯ ಹಾಗು ಅವಳು ತನ್ನ ತಂಗಿಯ ಬಾಣಂತನಕ್ಕಾಗಿ,
ತಂಗಿಯ ಮನೆಗೆ ಬರುವ ವರ್ಣನೆ ಇದೆ. ಎರಡನೆಯ ಭಾಗದಲ್ಲಿ ಇವಳಿಗೆ ಮೋಸ ಮಾಡಿದ ಗಂಡು ಹೇಳುವ ಕಥೆ ಇದೆ.
ಮೂರನೆಯ ಭಾಗದಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಇವಳ
ಬೇಡದ ಬಸುರಿಗೆ ಹೆರಿಗೆ ಮಾಡಿಸಿದ ನರ್ಸ ಒಬ್ಬಳು ಹೇಳುವ ಕಥೆ ಇದೆ. ಕೊನೆಯ ಭಾಗದಲ್ಲಿ ಇವಳ ಸೆರೆಮನೆಯ
ಬದುಕಿನ ವರ್ಣನೆ ಇದೆ. ಈ ಯಾವ ಭಾಗದಲ್ಲಿಯೂ ನಾಯಕಿಯ ಹೆಸರು ಬರುವುದಿಲ್ಲ. ಇವಳಿಗೆ ಸಂಬಂಧಪಟ್ಟ ಉಳಿದೆಲ್ಲ
ಪಾತ್ರಗಳ ಹೆಸರುಗಳು ಬರುತ್ತವೆ. ಇವಳು ಒಬ್ಬ ಅಸಹಾಯಕ, ಅನಾಮಿಕ, ಕಪ್ಪು ಹುಡುಗಿ ; ಹೆಸರಿನಿಂದ ಗುರುತಿಸುವ
ಯೋಗ್ಯತೆ ಇದ್ದವಳಲ್ಲ!
ಈ ಕಥೆಯನ್ನು ಕಾದಂಬರಿಕಾರಳೇ ನೇರವಾಗಿ ಹೇಳಲು ಬರುತ್ತಿರಲಿಲ್ಲವೆ, ನಾಲ್ಕು
ವಿಭಿನ್ನ ವ್ಯಕ್ತಿಗಳು ಹೇಳುವ ಕಾದಂಬರಿಯನ್ನಾಗಿ ಮಾಡುವ ಅವಶ್ಯಕತೆ ಏನಿತ್ತು ಎನ್ನುವ ಸಂದೇಹ ಯಾರಿಗಾದರೂ
ಬಾರದೆ ಇರದು. ಆದರೆ ‘ಮೊದಲ ಹೆಜ್ಜೆ’ ಕಾದಂಬರಿಯನ್ನು ಓದಿದಾಗ, ಈ ತರಹದ ವಿಂಗಡಣೆಯಲ್ಲಿ ಇರುವ ಅನುಕೂಲತೆಯ ಹಾಗು ಲೇಖಕಿಯ ಚಾತುರ್ಯದ
ಅರ್ಥವಾಗುವುದು.
ತ್ರಿವೇಣಿಯವರ ನಾಯಕಿಯರು ಸ್ವೇಚ್ಛಾಚಾರಿಗಳಲ್ಲ, ನೀತಿಯ ಗೆರೆಯನ್ನು ದಾಟುವವರಲ್ಲ.
ಹಾಗಿದ್ದಾಗ ಕಾಲು ಜಾರಲು ಒಂದು ಕಾರಣ ಬೇಕಲ್ಲವೆ? ಅದಕ್ಕೆ ಪೂರ್ವಭಾವಿಯಾಗಿ, ಈ ಕಪ್ಪು ಹುಡುಗಿಯ ಬಾಲ್ಯದ
ಹಾಗು ಯೌವನದ ಪರಿಸರವನ್ನು ಲೇಖಕಿಯೇ ವರ್ಣಿಸಿದ್ದರೆ ಅದು ಅತಿಶಯೋಕ್ತಿಯ ವರ್ಣನೆಯೋ ಅಥವಾ ನೀರಸ ವರ್ಣನೆಯೋ
ಆಗುವ ಸಾಧ್ಯತೆ ಇತ್ತು. ನಾಯಕಿಯ ತಂದೆ ಬಡತನದಲ್ಲಿ ಬದಕುತ್ತಿರುವ ಒಬ್ಬ ಶಾಲಾಶಿಕ್ಷಕ. ಅವರಿಗೆ ಇಷ್ಟು
ಬೇಗನೆ ಮಕ್ಕಳೇ ಬೇಕಿರಲಿಲ್ಲ. ಅಂತಹ ಸಮಯದಲ್ಲಿ ಮೊದಲಿನ ಹೆರಿಗೆಯಲ್ಲಿ ಒಬ್ಬ ಕಪ್ಪು ಹುಡುಗಿ ಹುಟ್ಟುತ್ತಾಳೆ. ಈ ಹೆರಿಗೆಯೂ ಸಹ ದೊಡ್ಡಮ್ಮನ ಮನೆಯಲ್ಲಿ ಆಗುವ ಅನಿವಾರ್ಯತೆ.
ಈ ಎಲ್ಲವನ್ನೂ ವರ್ಣಿಸುವಾಗ ನಮ್ಮ ಕಪ್ಪು ಹುಡುಗಿಯಲ್ಲಿ ಒಂದು ನಿರ್ಲಿಪ್ತತೆ ಕಾಣುತ್ತದೆ; ವಿಧಿಯನ್ನು
ಒಪ್ಪಿಕೊಂಡಂತಹ ಒಬ್ಬ ಸಾಮಾನ್ಯಳ ಮನೋಧರ್ಮ ಕಾಣುತ್ತದೆ. ಇದು ಲೇಖಕಿಯೇ ಮಾಡುವ ವರ್ಣನೆಯಲ್ಲಿ ಸಂಕ್ಷಿಪ್ತವಾಗಿ
ಸಾಧ್ಯವಾಗುತ್ತಿರಲಿಲ್ಲ. ನಮ್ಮ ಕಪ್ಪು ಹುಡುಗಿಯು ಹೇಳುವ ರೀತಿಯನ್ನು ನೋಡಿರಿ:
[ಸುಶೀಲಕ್ಕನ ಮಾತು ಕೇಳಿ ಸುಬ್ಬಿಗೆ ತನ್ನ ಅಸಹಾಯಕತೆ ನೆನೆದು ತುಂಬಾ
ಅಳು ಬಂತಂತೆ. ಕೊನೆಗೆ ಬಡವರು; ಬಿಂಕ ಮಾಡಿದರೆ ನಡೆಯೋದಿಲ್ಲ ಎಂದು ಯೋಚಿಸಿ ಒಪ್ಪಿಕೊಂಡಳಂತೆ.
ನಾನು ಹೆಣ್ಣಾಗಿ ಹುಟ್ಟುವುದು ನನ್ನ ತಾಯಿ ತಂದೆಗೆ ಬೇಕಿರಲಿಲ್ಲ. ಮೊದಲನೆಯದಾಗಿ
ನನ್ನ ಜನ್ಮವೇ ಅವರಿಗೆ ಬೇಕಿರಲಿಲ್ಲ.]
(ಸೂಚನೆ: ನಮ್ಮ ಕಪ್ಪು ಹುಡುಗಿಯು ತನ್ನ ತಾಯಿಯನ್ನು ಅವಳ ಹೆಸರಿನಿಂದಲೇ
ಎಂದರೆ ಸುಬ್ಬಿ ಎಂದೇ ಕರೆಯುತ್ತಿರುತ್ತಾಳೆ. ಸುಶೀಲಕ್ಕ ಎಂದರೆ ಸುಬ್ಬಿಯ ಅಕ್ಕ. ಸುಶೀಲಕ್ಕ ಸ್ವಲ್ಪ
ಸ್ಥಿತಿವಂತಳು. ಆದುದರಿಂದ ಅವಳ ಹೆಸರಿಗೆ ಅಕ್ಕ ಎನ್ನುವ ಜೋಡಣೆ. ಸುಬ್ಬಿ ಕೇವಲ ಸುಬ್ಬಿ! ಸುಬ್ಬಿಗೆ ಮೊದಲ ಹೆರಿಗೆಯನ್ನು ತವರು ಮನೆಯಲ್ಲಿ ಮಾಡಿಸುವುದು ಸಾಧ್ಯವಿರಲಿಲ್ಲ. ಆದುದರಿಂದ ಅವಳ ಅಕ್ಕನ ಮನೆಯಲ್ಲಿ ಹೆರಿಗೆ ಮಾಡಿಸುವುದು ಅನಿವಾರ್ಯವಾಯಿತು.)
ಈ ಶಾಲಾಶಿಕ್ಷಕನಿಗೆ ಒಂದರ ಮೇಲೊಂದರಂತೆ ಮಕ್ಕಳು ಹುಟ್ಟುತ್ತವೆ. ಆ ಎಲ್ಲ
ಕೂಸುಗಳ ಜೋಪಾನ, ತಾಯಿಯ ಬಾಣಂತನ ಹಾಗು ಮನೆಯ ಕೆಲಸದ ಹೊರೆ ಈ ಪುಟ್ಟ ಬಾಲಕಿಯ ಮೇಲೆ ಬೀಳುವುದು ಅನಿವಾರ್ಯ. ಇವಳ ತಂಗಿ
ಬೆಳ್ಳಗಿದ್ದು ಸುರೂಪಿಯಾಗಿದ್ದಳು. ಯಾವುದೋ ಮದುವೆಯಲ್ಲಿ ಅವಳನ್ನು ನೋಡಿದ ಒಬ್ಬ ಯುವಕ ಅವಳಿಗೆ ಮರುಳಾದ. ಹೀಗಾಗಿ ಅಕ್ಕನಿಗಿಂತಲೂ ಮೊದಲೇ ತಂಗಿಗೆ
ಮದುವೆಯಾಯಿತು. ಶೀಘ್ರವೇ ಅವಳಿಗೆ ಹೆರಿಗೆಯೂ ಆಯಿತು. ತಾಯಿ ಬಾಣಂತಿ ಆದಾಗಲೊಮ್ಮೆ ಅವಳನ್ನು ಜೋಪಾನ ಮಾಡಿದ ಕಪ್ಪು
ಹುಡುಗಿಗೆ, ಇದೀಗ ತಂಗಿಯ ಬಾಣಂತನಕ್ಕಾಗಿ ಅವಳ ಮನೆಗೆ ಹೋಗುವುದು ಅಗತ್ಯವಾಯಿತು. ಈ ಭಾಗದಲ್ಲಿ ಎಲ್ಲಿಯೂ
ನಮ್ಮ ನಾಯಕಿಯು ತನ್ನ ಕಷ್ಟಗಳನ್ನು ಹೇಳಿಕೊಂಡಿಲ್ಲ. In fact ಅವಳು ವಾಸ್ತವವನ್ನು ಅರಿತುಕೊಂಡಂತಹ, ಅದಕ್ಕೆ ಬಾಲ್ಯದಿಂದಲೇ ಒಗ್ಗಿಕೊಂಡಂತಹ ಒಬ್ಬ ಸಾಧಾರಣ ಹುಡುಗಿ.
ಇವಳ ತಂಗಿಯ ಮನೆಯ ಆವರಣದಲ್ಲಿರುವ ಕೋಣೆಯೊಂದರಲ್ಲಿ ಒಬ್ಬ ಕಾ^ಲೇಜ ಹುಡುಗನಿದ್ದಾನೆ.
ಆತ ಶೋಕೀಲಾಲ. ನಮ್ಮ ಕಪ್ಪು ಹುಡುಗಿಗೆ ಅವನಲ್ಲಿ ಆಸಕ್ತಿಯೇನೂ ಇಲ್ಲ. ಇದಿಷ್ಟು ನಮ್ಮ ನಾಯಕಿಯು ಹೇಳುವ
ಮೊದಲ ಭಾಗದ ಕಥೆ. ಈ ತರಹದ ತಂತ್ರದಿಂದಾಗಿ ಲೇಖಕಿಗೆ ಕಪ್ಪು ಹುಡುಗಿಯ ಸಾಮಾನ್ಯ ಪರಿಸರವನ್ನು
ಅವಳ ಸಾಧಾರಣತೆಯನ್ನು ನಿರ್ಲಿಪ್ತವಾಗಿ ಚಿತ್ರಿಸುವದು ಸಾಧ್ಯವಾಗಿದೆ. ಈ ತಂತ್ರದ ಅತಿ ದೊಡ್ಡ ಲಾಭವೆಂದರೆ,
ನಾಯಕಿಯ ಹೆಸರನ್ನು ಹೇಳುವ ಅಗತ್ಯವು ಎಲ್ಲೂ ಬಂದಿಲ್ಲ. ನಮ್ಮ ನಾಯಕಿಯು ಒಬ್ಬ ಅತಿ ಸಾಮಾನ್ಯ, ಅತಿ
ಸಾಧಾರಣ, ಅನಾಮಿಕ ಕಪ್ಪು ಹುಡುಗಿ.
ಎರಡನೆಯ ಭಾಗದ ಕಥೆಯನ್ನು ಹೇಳುವವನು ಈ ಕಪ್ಪು ಹುಡುಗಿಯನ್ನು ನಂಬಿಸಿ,
ಮೋಸಗೊಳಿಸಿದ ಕಾ^ಲೇಜು ಹುಡುಗ. ಈತನಿಗೆ ಈ ಹುಡುಗಿಯ ಬಗೆಗೆ ಎಂತಹ ಅಭಿಪ್ರಾಯವಿದೆ ಎಂದರೆ, ‘ಹಿಟ್ಟು
ಹಳಸಿತ್ತು, ನಾಯಿ ಹಸಿದಿತ್ತು’ ಎನ್ನುವುದು ತಮ್ಮ ಪ್ರಣಯದ ಬಗೆಗೆ ಇವನಿಗಿರುವ ಅಭಿಪ್ರಾಯ. ‘ತನ್ನ
ತಂಗಿಯನ್ನು ನೋಡಲು ತನ್ನ ತಂದೆ-ತಾಯಿಯರು ಬರುತ್ತಿದ್ದಾರೆ. ಅವರೆದುರಿಗೆ ತಮ್ಮ ಮದುವೆಯ ಪ್ರಸ್ತಾಪವನ್ನುಮಾಡಿರಿ’
ಎಂದು ನಮ್ಮ ಕಪ್ಪು ಹುಡುಗಿ ದೈನ್ಯತೆಯಿಂದ ಕೇಳಿಕೊಂಡಾಗ, ಈ ಹುಡುಗ ಮನಸ್ಸಿನಲ್ಲಿಯೇ ನಗುತ್ತಾನೆ.
ಮರುದಿನವೇ ತಾನಿದ್ದ ಆ ಕೋಣೆಯನ್ನು ಬಿಟ್ಟು, ಬೇರೊಂದು ಕೋಣೆಗೆ ಹೊರಟು ಹೋಗುತ್ತಾನೆ. ಈ ಸಂದರ್ಭದಲ್ಲಿ
ಆ ಹುಡುಗಿಯ ಮನಸ್ಸಿನಲ್ಲಿ ಏನೇನು ನಡೆದಿರಬಹುದು ಎನ್ನುವುದನ್ನು ಆತ ಗ್ರಹಿಸುವುದು ಹೀಗೆ: ಆತ ಚಿಕ್ಕವನಿದ್ದಾಗ
ಒಂದು ನಾಯಿ ಮರಿಯನ್ನು ನೀರಿನಲ್ಲಿ ಮುಳುಗಿಸಿದ್ದ. ಇದೀಗ ಕಪ್ಪು ಹುಡುಗಿಯ ನೋಟದಿಂದ ಅವನಿಗೆ ಆ ಪ್ರಸಂಗ
ನೆನಪಿಗೆ ಬರುತ್ತದೆ:
[ನಾಯಿ ಮರಿ ನೀರಿನಲ್ಲಿ ಮುಳುಗುವದಕ್ಕೆ ಮುಂಚೆ ನನ್ನ ಕಡೆ ದೈನ್ಯದಿಂದ
ನೋಡಿ ಮುಳುಗಿತು……ಮರಿಯನ್ನು ಈಚೆಗೆ ತೆಗೆದಾಗ ಅದಕ್ಕೆ ಪ್ರಾಣವಿರಲಿಲ್ಲ.ಆದರೆ ಅದು ಮುಳುಗುವದಕ್ಕೆ ಮುಂಚೆ ನನ್ನ ಕಡೆ ನೋಡಿದುದನ್ನು ಮಾತ್ರ
ಎಂದಿಗೂ ಮರೆಯಲಾರೆ.
ಅವಳು ನನ್ನ ಕಡೆ ದೃಷ್ಟಿ ಬೀರಿ ಒಳಗೆ ಹೋದಾಗ ನನಗೆ ನಾಯಿ ರಾಮಿಯ ನೆನಪು
ಬಂದಿತು.]
ಈ ಭಾಗವನ್ನು ಸ್ವತಃ ಲೇಖಕಿಯೇ ನಿರೂಪಿಸಿದ್ದರೆ, ಕಾ^ಲೇಜು ಹುಡುಗನ ಹಿನ್ನೆಲೆಯನ್ನು
ವಿವರಿಸಬೇಕಾಗುತ್ತಿತ್ತು.
ಕಪ್ಪು ಹುಡುಗಿಯು ಆ ಹುಡುಗನ ಬಲೆಗೆ ಬೀಳುವ ಸಂದರ್ಭವನ್ನು ವಿವರಿಸುವುದು
ಲೇಖಕಿಯ ಅನಿವಾರ್ಯತೆಯಾಗುತ್ತಿತ್ತು. ಲೇಖಕಿಯು ಪಕ್ಷಪಾತ ಮಾಡುತ್ತಿದ್ದಾಳೆ ಎಂದು ಓದುಗನಿಗೆ ಅನಿಸುವ ಸಾಧ್ಯತೆ ಇತ್ತು. ಇದೀಗ ಹುಡುಗನೇ
ಮಾಡುವ ನಿರೂಪಣೆಯಿಂದಾಗಿ ಇತರ ವರ್ಣನೆಗಳನ್ನು ಬಿಟ್ಟು ಬಿಡುವುದು ಹಾಗು ಕಾದಂಬರಿಯ ಗಾತ್ರವನ್ನು ನಿಯಂತ್ರಿಸುವುದು
ಲೇಖಕಿಗೆ ಸಾಧ್ಯವಾಗಿದೆ.
ಮೂರನೆಯ ಭಾಗದ ಕಥೆಯನ್ನು
ಹೇಳುವವಳು ಸಾರ್ವಜನಿಕ ಹೆರಿಗೆ ಆಸ್ಪತ್ರೆಯ ಒಬ್ಬ ನರ್ಸ. ಒಬ್ಬ ಕಪ್ಪು ಹುಡುಗಿ ಯಾರದೂ ಜೊತೆಯಿಲ್ಲದೆ,
ಆಸ್ಪತ್ರೆಗೆ ಬಂದು ಹೆರಿಗೆ ಮಾಡಿಸಿಕೊಳ್ಳುವ ಸಂದರ್ಭವನ್ನು ಇವಳು ಹೇಳುತ್ತಾಳೆ. ಆ ಹುಡುಗಿಯ ಹೆಸರನ್ನು
ಕೇಳಿದಾಗ, ಅವಳು ಏನೋ ಒಂದು ಹೆಸರನ್ನು ಹೇಳುತ್ತಾಳೆ. ಹೆರಿಗೆಯ ಸಮಯದಲ್ಲಿ ಹಾಗು ಹೆರಿಗೆಯಾದ ಬಳಿಕ
ಇವಳನ್ನು ನೋಡಲು ಯಾರೂ ಬರುವದಿಲ್ಲ. ಆ ಕಪ್ಪು ಹುಡುಗಿ ಹೆರಿಗೆ ಆಸ್ಪತ್ರೆಯಿಂದ ತನ್ನ ಮಗುವನ್ನು ಎತ್ತಿಕೊಂಡು
ಒಬ್ಬಳೇ ಹೊರಟು ಹೋಗುತ್ತಾಳೆ.
[ಅವಳೊಡನೆ ಯಾರೂ ಇರಲಿಲ್ಲ. ಅವಳು ಆಸ್ಪತ್ರೆಯ ಲಂಗವನ್ನು ಕಳಚಿ ಮೊದಲ
ದಿನ ತಾನುಟ್ಟುಕೊಂಡ ಬಂದಿದ್ದ ಹರಕು ಸೀರೆಯನ್ನು ಧರಿಸಿದ್ದಳು. ಮಗು ಅವಳ ಹೆಗಲ ಮೇಲೆ ಮಲಗಿ ನಿದ್ರಿಸುತ್ತಿತ್ತು.]
ಕೆಲವೇ ದಿನಗಳ ಬಳಿಕ ಆ ನರ್ಸ ಪತ್ರಿಕೆಯಲ್ಲಿ ಒಂದು ಸಮಾಚಾರವನ್ನು ಓದುತ್ತಾಳೆ:
[…ಈ ಸುದ್ದಿಯ ಪಕ್ಕದಲ್ಲೆ ಮತ್ತೊಂದು ಸುದ್ದಿ ಪ್ರಕಟವಾಗಿತ್ತು. ‘ಶಿಶುಹತ್ಯೆ
ಎಂಬ ಶಿರೋನಾಮೆ ನನ್ನ ಗಮನವನ್ನು ಸೆಳೆಯಿತು…]
ತ್ರಿವೇಣಿಯವರು ನೇರ ನಿರೂಪಣೆಯನ್ನು ಅವಲಂಬಿಸಿದ್ದರೆ, ಈ ಕಪ್ಪು ಹುಡುಗಿಯು
ಬಸಿರಾದ ಬಳಿಕ, ಅವಳ ಮನೆಯವರಿಗೆ ಅದು ತಿಳಿದ ಬಗೆ, ಅವಳು ಮನೆಯಿಂದ ಹೊರಬೀಳಬೇಕಾದ ಅಸಹಾಯಕತೆ, ಅವಳು
ಎಲ್ಲಿ ಮತ್ತು ಹೇಗೆ ಬದುಕಿದಳು ಎನ್ನುವ ವಿವರಗಳನ್ನು ವರ್ಣಿಸಬೇಕಾಗುತ್ತಿತ್ತು. ಆಬಳಿಕ ತನ್ನ ನವಜಾತ ಶಿಶುವನ್ನು ಹತ್ಯೆಗೈದ ವಿವರಗಳನ್ನು, ಆ ಸಂದರ್ಭದಲ್ಲಿಯ
ಅವಳ ಮನಸ್ಸಿನಲ್ಲಿ ಏಳುಬೀಳುತ್ತಿರುವ ಭಾವನೆಗಳನ್ನು ಹೇಳಬೇಕಾಗುತ್ತಿತ್ತು. ಇದೀಗ ಇವಳಿಗೆ ಹೆರಿಗೆ
ಮಾಡಿಸಿದ ನರ್ಸ ಕಣ್ಣಿಗೆ ಆ ಸುದ್ದಿ ಬಿಳುವ ಮೂಲಕ, ಉಳಿದೆಲ್ಲ ವರ್ಣನೆಗಳ ಅವಶ್ಯಕತೆಗಳನ್ನು ತ್ರಿವೇಣಿಯವರು
ತೊಡೆದು ಹಾಕಿದ್ದಾರೆ. ಭಾವನೆಗಳಿಗೆ ಇಲ್ಲೆಲ್ಲಿಯೂ ಸ್ಥಾನವೇ ಇಲ್ಲ.
ನಾಲ್ಕನೆಯ ಭಾಗದಲ್ಲಿ ನಮ್ಮ ಕಪ್ಪು ಹುಡುಗಿಯೇ ಮತ್ತೊಮ್ಮೆ ತನ್ನ ಕಥೆಯನ್ನು
ಹೇಳುತ್ತಾಳೆ. ಅವಳನ್ನು ಇರಿಸಲಾದ ಸೆರೆಮನೆಯ ವರ್ಣನೆಯಿಂದ ಕಥೆ ಪ್ರಾರಂಭವಾಗುತ್ತದೆ. ಶಿಕ್ಷೆಯ ಅವಧಿ
ಮುಗಿದ ನಂತರ ಅವಳನ್ನು ಸೆರೆಮನೆಯಿಂದ ಬಿಡುಗಡೆ ಮಾಡುವ ದಿನದ ಅವಳ ಸ್ವಗತ ನಿರೂಪಣೆ ಹೀಗಿದೆ:
[(ಜೇಲರ್ ಕೇಳುತ್ತಾರೆ:)....’ನಿಮ್ಮೋರು ಯಾರೂ ಇಲ್ಲವೇನು?
ನಿಮ್ಮಪ್ಪ ಇದಾರಲ್ಲ….ಅಲ್ಲಿಗೆ ಯಾಕೆ ಹೋಗಬಾರದು?’
ನಾನು ಅವಮಾನದಿಂದ
ನಾಲಿಗೆ ಕಚ್ಚಿ ಹೇಳಿದೆ: ‘ಅವರು ನನ್ನ ಮನೆಗೆ ಸೇರಿಸೋಲ್ಲ.’
‘ಯಾಕೆ?’
‘ನಾನು ಅವರ ವಂಶಕ್ಕೆ
ಮಸಿ ಬಳಿದಿದೀನಿಂತ ಅವರ ಭಾವನೆ. ಅವರು ನನ್ನ ತಿರುಗಿ ಅವರ ಹತ್ತಿರ ಸೇರಿಸೋದಿಲ್ಲ. ನನಗೆ ಚೆನ್ನಾಗಿ
ಗೊತ್ತು. ನಾನೊಬ್ಬಳೇ ಜಗತ್ತನ್ನು ಎದುರಿಸಿ ಹೋರಾಡಬೇಕು.’
ಮಳೆಯಿನ್ನೂ ನಿಂತಿರಲಿಲ್ಲ. ಹನಿಹನಿಯಾಗಿ ಬೀಳುತ್ತಲೇ ಇತ್ತು. ನಾನು
ನಿಧಾನವಾಗಿ ಕಾಲೆಳೆದುಕೊಂಡು ಜೈಲಿನ ಕಾಂಪೌಂಡನ್ನು ದಾಟಿ ರಸ್ತೆಗೆ ಬಂದೆ. ಹೆಬ್ಬಾಗಿಲಿನ ಪಕ್ಕದಲ್ಲಿ
ಮರವೊಂದರ ಆಶ್ರಯದಲ್ಲಿ ಮುದುಕನೊಬ್ಬ ನಿಂತಿದ್ದ. ಮುಪ್ಪು
ಅವನ ಮುಖದ ಮೇಲೆ, ದೇಹದ ಮೇಲೆ ತನ್ನ ದಾಳಿ ನಡಿಸಿತ್ತು.
ಮುಖದ ತೊಗಲು ಸುಕ್ಕುಗಟ್ಟಿತ್ತು. ಕಣ್ಣುಗಳು ಹೂತು ಹೋಗಿ ಮಂಕಾಗಿದ್ದವು. ಆರಿಸಿ ಹುಡುಕಿದರೂ ತಲೆಯಲ್ಲಿ
ಒಂದೂ ಕಪ್ಪು ಕೂದಲು ಇರಲಿಲ್ಲ. ಮಳೆಯಲ್ಲಿ ನೆನೆಯುತ್ತಾ ನಿಂತಿರುವ ಮುದುಕನನ್ನು ನೋಡಿ ನನಗೆ ಮರುಕವುಂಟಾಯಿತು.
ನಾನು ಕುತೂಹಲದಿಂದ ಅವನ ಕಡೆಗೆ ನೋಡಿದೆ.
’ಇನ್ನು ಹದಿನೈದಿಪ್ಪತ್ತು ವರ್ಷ ಕಳೆದರೆ ನಮ್ಮ ತಂದೇನೂ ಹೀಗೆ ಕಾಣಬಹುದು’
ಎಂದು ಮನಸ್ಸಿನಲ್ಲಿಯೇ ನಾನು ಹೇಳಿಕೊಂಡೆ.
ಮಳೆಯಲ್ಲಿ ನಡುಗುತ್ತಾ ನಿಂತಿದ್ದ ಮುದುಕನೂ ನನ್ನ ಕಡೆಗೆ ನೋಡಿದ. ಭಾವಾವೇಶದಿಂದ
ಅವನ ತುಟಿಯಲುಗಿತು. ಕಾಂತಿಹೀನವಾಗಿದ್ದ ಅವನ ಕಣ್ಣುಗಳಲ್ಲಿ ಬೆಳಕು ಚಿಮ್ಮಿ ಬಂತು. ನಿರ್ಜೀವ ಪ್ರತಿಮೆಯಂತೆ
ನಿಂತಿದ್ದ ಅವನ ಕಾಲುಗಳು ಚಲಿಸಿದವು.
ಯಾವುದೋ ಮೋಡಿಗೆ ಒಳಗಾದವಳಂತೆ ನಾನು ನಿಂತಲ್ಲಿಂದ ಅಲುಗದೆ, ರೆಪ್ಪೆ
ಮಿಟುಕಿಸದೆ ಮುದುಕನನ್ನೇ ನೋಡಿದೆ. ಆ ಮುದುಕ ನಿಧಾನವಾಗಿ ನನ್ನ ಹತ್ತಿರ ಬಂದು ನನ್ನ ತೋಳು ಹಿಡಿದು,
ಅತ್ಯಂತ ಮೃದುವಾದ ದನಿಯಲ್ಲಿ “ಬಾಮ್ಮ, ಮನೆಗೆ ಹೋಗೋಣ” ಎಂದ.]
‘ನಾನು ಅವರ ವಂಶಕ್ಕೆ
ಮಸಿ ಬಳಿದಿದೀನಿಂತ ಅವರ ಭಾವನೆ. ಅವರು ನನ್ನ ತಿರುಗಿ ಅವರ ಹತ್ತಿರ ಸೇರಿಸೋದಿಲ್ಲ. ’ ಎಂದು
ಕಪ್ಪು ಹುಡುಗಿಯು ಹೇಳುವ ಮೂಲಕ, ತ್ರಿವೇಣಿಯವರು ಕಪ್ಪು ಹುಡುಗಿಯು ಬಸಿರಾದದ್ದು ಅವಳ ಕುಟುಂಬಕ್ಕೆ
ತಿಳಿದ ಬಳಿಕ ನಡೆದ ಘಟನೆಗಳನ್ನು, ಅವರು ಇವಳನ್ನು ತಿರಸ್ಕರಿಸಿದ್ದನ್ನು ಬರೆಯದೇನೆ ಓದುಗರಿಗೆ ತಿಳಿಸಿದ್ದಾರೆ.
ಇವಳ ದುರಂತದಿಂದಾಗಿ ಇವಳ ತಂದೆಗಾದ ಸಂಕಟವನ್ನು, ಆತನಿಗೆ ಅಕಾಲದಲ್ಲಿ ಮುಪ್ಪು ಅಡರಿದ್ದನ್ನು ಕಪ್ಪು
ಹುಡುಗಿಯ ಸ್ವಗತವು ನಮಗೆ ತಿಳಿಸುತ್ತದೆ. ತಂದೆಯ ಬಗೆಗೆ ಇವಳಿಗೆ ಇನ್ನೂ ಆರದ ಪ್ರೀತಿಯನ್ನು ಇದು ತೋರಿಸುತ್ತದೆ.
ಇಷ್ಟೆಲ್ಲ ಇದ್ದರೂ ಸಹ ತಂದೆಯು ತನ್ನ ಮಗಳನ್ನು ಮರಳಿ ಮನೆಗೆ ಕರೆದುಕೊಂಡು ಹೋಗುವ ಸಾಲು ಅವಳ ಬಗೆಗೆ
ಅವನಿಗಿರುವ ಪ್ರೀತಿಯನ್ನು, ಮರುಕವನ್ನು ತೋರಿಸುತ್ತದೆ.
ತ್ರಿವೇಣಿಯವರು ಸರಸ, ಸುರಸ ಶೈಲಿಗೆ ಹೆಸರಾದವರು. ಈ ಕಾದಂಬರಿಯಲ್ಲಿ ತಮ್ಮ
ರಚನಾಶೈಲಿಯನ್ನು ಅವರು ಬದಲಿಸಿದ್ದಾರೆ. ತಾವು ಹೇಳಬೇಕಾದದ್ದನ್ನು ಪದಗಳಲ್ಲಿ ವರ್ಣಿಸದೆ, ಓದುಗನ ಮನಸ್ಸನ್ನು
ಮುಟ್ಟಲು ಅವರಿಗೆ ಸಾಧ್ಯವಾಗಿದೆ.
8 comments:
ಸುನಾತ್ ಕಾಕ, ಪುಸ್ತಕ ಓದಿದ್ದು ಮರೆತೇ ಹೋಗಿತ್ತು. ನೀವು ಕಥೆಯನ್ನೂ ನೆನಪಿಸಿದಿರಿ ಮತ್ತು ತ್ರಿವೇಣಿಯವರ ನಿರೂಪಣಾ ಶೈಲಿಯನ್ನೂ ನೆನಪಿಸಿದಿರಿ. ಅವರು ಬರೆದ ಕಥೆಗಳಲ್ಲೆಲ್ಲಾ ಒಂದು ಒಳಾರ್ಥವಿರುತ್ತಿತ್ತು. ಅನೇಕ ಸಲ ಪದಗಳಿಂದ ವರ್ಣಿಸಿದರೆ ಪ್ರಾಮುಖ್ಯತೆ ಕಳೆದುಕೊಳ್ಳಬಹುದಾದ ಸನ್ನಿವೇಶಗಳನ್ನು ಗೂಡವಾಗಿ, ಚಿಕ್ಕ ಹಾಗೂ ಚೊಕ್ಕವಾಗಿ ಅರ್ಥ ಮಾಡಿಸುತ್ತಿದ್ದರು. ಧನ್ಯವಾದಗಳು ಕಾಕ. ತುಂಬಾ ದಿನಗಳ ನಂತನ ನಿಮ್ಮ ಬ್ಲಾಗ್ ಕಡೆ ಬಂದಿದ್ದಕ್ಕೆ ಒಂದು ಒಳ್ಳೆಯ ಲೇಖನ ಓದಲು ಸಿಕ್ಕಿತು...
ಶ್ಯಾಮಲಾ
ಧನ್ಯವಾದಗಳು, ಶ್ಯಾಮಲಾ!
ಈ ರೀತಿ 'ಪಾಪ್ಯುಲರ್ ' ಆಗಿರದ ಒಳ್ಳೆಯ ಕಾದಂಬರಿಗಳ ಬಗ್ಗೆ ನೀವು ಪರಿಚಯಿಸಿದರೆ ಓದುವ ಮನಸ್ಸುಗಳು ಹೆಚ್ಚುತ್ತವೆ. Thank U
ಕಾಲೇಜಿನಲ್ಲಿ ಅವರ ಒಂದು ಸಣ್ಣ ಕತೆ ನಮ್ಮ ಪುಸ್ತಕದಲ್ಲಿತ್ತು, ನಾವೆಲ್ಲಾ ತುಂಬಾ ಇಷ್ಟ ಪಟ್ಟಿದ್ದೋ. ನಂತರ ತ್ರಿವೇಣಿಯವರು ಮರೆತೇ ಹೋಗಿದ್ದರು. ಮತ್ತೆ ಅವರ ಪುಸ್ತಕಗಳನ್ನು ಹುಡುಕಿ ಹೋಗುವಾಗೆ ಮಾಡಿದಿರಿ.
ಸುಬ್ರಹ್ಮಣ್ಯರೆ,
ಸಲಹೆಗೆ ಧನ್ಯವಾದಗಳು. ಪ್ರಯತ್ನಿಸುತ್ತೇನೆ.
ಪುನೀತರೆ,
ತ್ರಿವೇಣಿಯವರ ಕಾದಂಬರಿಗಳು ಇದೀಗ ಮೂರ್ನಾಲ್ಕು ಸಂಕಲನಗಳಲ್ಲಿ ಲಭ್ಯವಿವೆ. ಒಂದೊಂದು ಸಂಕಲನದಲ್ಲಿ ಮೂರೋ, ನಾಲ್ಕೋ ಕಾದಂಬರಿಗಳಿವೆ. ನೀವು ಬೇಕಾದ ಸಂಕಲನವನ್ನು ಆರಿಸಿ ಓದಬಹುದು.
ಕಪ್ಪಾಗಿ ಹುಟ್ಟಿದ್ದಕ್ಕೆ ಎಷ್ಟು ಕಷ್ಟ. ಕಪ್ಪು! ನಮ್ಮಲ್ಲಿ ಮುಕ್ಕಾಲು ಭಾಗ ಜನ ಕಪ್ಪಾದರೂ, ಅವರಿಗೇ ಕಪ್ಪು ಜನರೆಂದರೆ ಆಗೋಲ್ಲ. ಕಪ್ಪು ಅಂದರೆ ಎಷ್ಟು ಅಲರ್ಜಿ ಅಂದ್ರೆ polished ಅಕ್ಕಿ, ಬಿಳಿ ಎಳ್ಳು, ಬಿಳಿ ಬೆಲ್ಲ ಮಾತ್ರ ತಿಂತಾರೆ.
ಜೈಲಿನ ಚಿತ್ರಣ ತುಂಬಾ ಚೆನ್ನಾಗಿದೆ. ;-)
ಪುನೀತರೆ, ನಿಮ್ಮ ಮಾತು ನಿಜ. ಪ್ರತಿಕ್ರಿಯೆಗೆ ಧನ್ಯವಾದಗಳು.
Post a Comment