ಗುರುವಿಗೆ ಮರಳು ಮಾಡುವರೇನೆ ಮಾನಿನಿ?
ಧರೆಯೊಳು ಪ್ರಭುವರ ದೊರಕುವನೆ? || ಪಲ್ಲ ||
ಸರಸಿಜಮುಖಿ ವರಪರಮಮಧುಕೇಶ್ವರ
ನರನಲ್ಲ ತಿಳಿ, ನಿನ್ನ ಸರಕೇನ?
ಧರಿಗೆ ಪಾರ್ವತಿ ತನ್ನ ತಾಮಸರೂಪದಿ
ನೆರೆ ಬಂದರೇನಾತ ಬೆರೆಯುವನೆ? ||೧||
ಚೆನ್ನ ಚೆಲ್ವಿಕೆ ಕಂಡು ಸೋಲದೆ ತಾ ನಿಂದು
ಅನ್ಯರು ಕೇಳಿದರ್ಹೇಳುವನೆ?
ತನ್ನ ನಿಜದಿ ತಾನೆ ಲೀಲೆಯಿಂದಿರುವನು
ಶೂನ್ಯಕ್ಕೆ ಶೂನ್ಯ ತಾನಿರುತಿಹನು ||೨||
ಮೊದಲು ಶಿಶುವಿನಾಳ ಸದರು ನಿರ್ಮಳಸ್ಥಳ-
ಕ್ಕೊದಗಿ ಮೃದಂಗವ ಬಾರಿಸಿದ
ಅದನು ತಿಳಿದು ಸುಮ್ಮನಿರು ನಡಿ ಹಿಂದಕ್ಕೆ
ಇದಕೇನು ಬಯಸುವುದು ಬ್ಯಾಡಿನ್ನು ||೩||
ಶರೀಫರು ಚಿಕ್ಕಂದಿನಲ್ಲಿಯೇ ರಾಮಾಯಣ, ಮಹಾಭಾರತ, ದೇವೀಪುರಾಣ, ಪ್ರಭುಲಿಂಗಲೀಲೆ ಮೊದಲಾದ ಕಾವ್ಯಗಳನ್ನು ಹಾಗು ಅನೇಕ ಮಹಾತ್ಮರ ತತ್ವಗೀತೆಗಳನ್ನು ಓದಿ ಅರಗಿಸಿಕೊಂಡವರು. ‘ಗುರುವಿಗೆ ಮರಳು ಮಾಡುವರೇನೆ ಮಾನಿನಿ’ ಎನ್ನುವ ಅವರ ಗೀತೆಯು ಅಲ್ಲಮಪ್ರಭುವಿನ ಜೀವನದ ಒಂದು ಘಟನೆಯನ್ನು ಆಧರಿಸಿದೆ. ಚಾಮರಸ ಕವಿಯು ಬರೆದ ‘ಪ್ರಭುಲಿಂಗಲೀಲೆ’ಯಲ್ಲಿ ಬರುವ ಆ ಕಥೆ
ಹೀಗಿದೆ:
ಕೈಲಾಸ ಪರ್ವತದಲ್ಲಿ ಒಮ್ಮೆ ಶಿವ,ಪಾರ್ವತಿಯರು ಸರಸ ಸಲ್ಲಾಪದಲ್ಲಿದ್ದಾಗ, ತಮ್ಮೊಳಗೆ ಯಾರು ಹೆಚ್ಚು, ಯಾರು ಕಡಿಮೆ ಎನ್ನುವ ವಾಗ್ವಾದ ನಡೆಯುತ್ತದೆ. ಭೂಲೋಕದಲ್ಲಿ ಜನ್ಮ ತಳೆದು ತನ್ನ ಮಾಯೆಯಿಂದ ಶಿವನನ್ನು ಸೋಲಿಸುವದಾಗಿ ಪಾರ್ವತಿ ಪಂದ್ಯ ಕಟ್ಟುತ್ತಾಳೆ. ಭೂಲೋಕದಲ್ಲಿ ಪಾರ್ವತಿಯ ತಾಮಸ ಕಳೆಯು ಮಾಯಾದೇವಿ ಎನ್ನುವ ರಾಜಕುಮಾರಿಯಾಗಿ ಹುಟ್ಟುತ್ತದೆ. ಇತ್ತ ಶಿವನ ಸತ್ವವು ಅಲ್ಲಮನ ರೂಪದಲ್ಲಿ ಜನ್ಮ ತಳೆಯುತ್ತದೆ. ಬನವಾಸಿಯ ಮಧುಕೇಶ್ವರ ದೇವಾಲಯದಲ್ಲಿ ಮದ್ದಲೆ ಬಾರಿಸುತ್ತಿರುವ ಅಲ್ಲಮನನ್ನು ಮಾಯಾದೇವಿ ನೋಡುತ್ತಾಳೆ,
ಕಾಮಿಸುತ್ತಾಳೆ.
ಆದರೆ ಅಲ್ಲಮನು ಈ ರೂಪಸಿಯ ಬೇಟವನ್ನು ತಿರಸ್ಕರಿಸಿ,
ಅರಣ್ಯದಲ್ಲಿ ಅಂತರ್ಧಾನನಾಗುತ್ತಾನೆ. ತನ್ನನ್ನು ಹಿಂಬಾಲಿಸಿದ ಮಾಯಾದೇವಿಗೆ ನಿಜತತ್ವಬೋಧೆಯನ್ನು ಮಾಡುತ್ತಾನೆ.
ಮಾಯಾದೇವಿಯನ್ನು ‘ಮಾನಿನಿ’ ಎಂದು ಸಂಬೋಧಿಸುತ್ತ, ಅವಳನ್ನು ಪ್ರಶ್ನಿಸುವ ಮೂಲಕ ಶರೀಫರ ಗೀತೆ ಪ್ರಾರಂಭವಾಗುತ್ತದೆ. ‘ಮಾನಿನಿ’ ಎನ್ನುವ ಸಂಬೋಧನೆಯ
ವಿಶೇಷತೆಯನ್ನು ಗಮನಿಸಿರಿ: ಜಗನ್ಮಾತೆ ಪಾರ್ವತಿ ಗೌರವಾರ್ಹಳು. ಆದರೆ ಜಗತ್ಪಿತನ ಜೊತೆಗೆ ಪಂದ್ಯ ಕಟ್ಟುವ
ಮೂಲಕ ಅವಳು ತಪ್ಪನ್ನೆಸಗುತ್ತಿದ್ದಾಳೆ ಎನ್ನುವ ಭಾವವು ಈ ಸಂಬೋಧನೆಯಲ್ಲಿ ಅಡಕವಾಗಿದೆ.
ಗುರುವಿಗೆ ಮರಳು ಮಾಡುವರೇನೆ ಮಾನಿನಿ?
ಧರೆಯೊಳು ಪ್ರಭುವರ ದೊರಕುವನೆ? || ಪಲ್ಲ ||
ಸಮಗ್ರ ಲೋಕಕ್ಕೆ ಗುರುವಾದ ಶಿವನು ಪರಮಜ್ಞಾನ ಸಂಪನ್ನನು, ನಿರ್ವಿಕಾರನು. ಈತನು ಲೀಲಾನಿಮಿತ್ತವಾಗಿ ಧರೆಗಿಳಿದ ಮಾತ್ರಕ್ಕೆ ಪಾರ್ವತಿಯು ಈತನನ್ನು ತನ್ನ ಮಾಯೆಯಿಂದ ಮರಳು ಮಾಡಲು
ಸಾಧ್ಯವೆ? ‘ಎಂತಹ ಅಸಾಧ್ಯವಾದ ಕಾರ್ಯಕ್ಕೆ ಕೈ ಹಾಕಿದ್ದಿಯಾ, ತಾಯಿ’ ಎಂದು ಶರೀಫರು ಪಾರ್ವತೀಮಾತೆಯನ್ನು ಅಚ್ಚರಿಯಿಂದ ಕೇಳುತ್ತಾರೆ. ‘ಪ್ರಭುವರ’ ಎನ್ನುವ
ಪದದ ಮೂಲಕ ಶರೀಫರು ಶಿವನನ್ನು ಸೂಚಿಸುವಂತೆಯೇ, ಅಲ್ಲಮಪ್ರಭುವನ್ನೂ ಸಹ ಸೂಚಿಸುತ್ತಾರೆ.
ಸರಸಿಜಮುಖಿ ವರಪರಮಮಧುಕೇಶ್ವರ
ನರನಲ್ಲ ತಿಳಿ, ನಿನ್ನ ಸರಕೇನ?
ಧರಿಗೆ ಪಾರ್ವತಿ ತನ್ನ ತಾಮಸರೂಪದಿ
ನೆರೆ ಬಂದರೇನಾತ ಬೆರೆಯುವನೆ?
ಶರೀಫರು ಮಧುಕೇಶ್ವರ ಎಂದು ಹೇಳುವ ಮೂಲಕ, ಅಲ್ಲಮನು ಬನವಾಸಿಯ ಮಧುಕೇಶ್ವರ ದೇವಾಲಯದಲ್ಲಿ,
ಮದ್ದಳೆ ಬಾರಿಸುವ ಕೈಂಕರ್ಯದಲ್ಲಿದ್ದನು ಎನ್ನುವದರ ಕಡೆಗೆ, ನಮ್ಮ ಗಮನ ಸೆಳೆಯುತ್ತಾರೆ. ಮಧುಕೇಶ್ವರನ ಗುಡಿಯಲ್ಲಿ ಮದ್ದಳೆ ಬಾರಿಸುತ್ತಿರುವ ಅಲ್ಲಮನು ಸ್ವತಃ ಮಧುಕೇಶ್ವರನೇ ಹೌದು. ಜನರ ಕಣ್ಣಿಗೆ ನರನಂತೆ ಕಾಣುವ ಈ ಅಲ್ಲಮನು ಶಿವಾಂಶಸಂಭೂತನು, ಆತನು ಮನುಷ್ಯಮಾತ್ರನಲ್ಲ ಎಂದು ಶರೀಫರು ಹೇಳುತ್ತಾರೆ. ಆದುದರಿಂದ ಆತನು ಮಾಯೆಯು ತನ್ನ ಮಾಟದ ಮೂಲಕ ಕೊಂಡುಕೊಳ್ಳಬಹುದಾದ ‘ಸರಕ’ಲ್ಲ. ಸರಕು ಎನ್ನುವ ಪದದ ವಿಶಿಷ್ಟತೆಯನ್ನು ಗಮನಿಸಿರಿ.
ಸರಕು ಅಗ್ಗದ ವಸ್ತು. ಅದನ್ನು ಇಂದು ಕೊಂಡು ನಾಳೆ ಬಿಸಾಡಬಹುದು, ಕಾಮಮೋಹಿತನ ಕತೆಯೂ ಅಷ್ಟೇ. ಆದರೆ ಕಾಮಾರಿಯು ಅಷ್ಟು ಸುಲಭವಾಗಿ ಇವಳಿಗೆ ಮರಳಾಗುವನಲ್ಲ.
ಈತನನ್ನು ಗೆಲ್ಲಲು ಪಾರ್ವತಿಯು ತನ್ನ ತಾಮಸ ರೂಪದಿಂದ ಭೂಲೋಕಕ್ಕೆ ‘ನೆರೆ’ ಬಂದಿದ್ದಾಳೆ. ಅಂದರೆ, ತನ್ನೆಲ್ಲ ಲಾವಣ್ಯ, ಒನಪು, ಒಯ್ಯಾರಗಳನ್ನು ಮೈಗೂಡಿಸಿಕೊಂಡು ಬಂದಿದ್ದಾಳೆ. ಈ ಸಂದರ್ಭದಲ್ಲಿ ಚಾಮರಸನು ‘ಪ್ರಭುಲಿಂಗಲೀಲೆ’ಯಲ್ಲಿ ಹದಿಹರೆಯದ ಹೊಚ್ಚಲಲ್ಲಿರುವ ಮಾಯಾದೇವಿಯನ್ನು
ವರ್ಣಿಸಿದ ಒಂದು ನುಡಿ ನೆನಪಿಗೆ ಬರುತ್ತದೆ:
‘ಹಿಡಿ ಹಿಡಿದುಕೊಂಡರ್ತಿಯಲಿ
ಬೆಂಬಿಡದೆ ಶಿಕ್ಷಾಚಾರ್ಯತನದಲಿ
ಜಡಿದು ಜಂಕಿಸಿ, ಮುದ್ದುತನ ಮಿಗೆ ಮಾಯೆ ತನ್ನಂತೆ
ನಡೆಯ ಕಲಿಸಿದಳಂಚೆವಿಂಡಿಗೆ
ನುಡಿಯ ಕಲಿಸಿದರಗಿಳಿಗೆ
ಸರವಿಡಲು ಕಲಿಸಿದಳಾಕೆ ತನ್ನರಮನೆಯ ಕೋಗಿಲೆಗೆ’
ಹದಿಹರೆಯವು ಉಕ್ಕುತ್ತಿರುವ ಮಾಯೆಯನ್ನು ಚಾಮರಸನು ಬಣ್ಣಿಸಿದ ರೀತಿಯಿದು.
ಚೆನ್ನ ಚೆಲ್ವಿಕೆ ಕಂಡು ಸೋಲದೆ ತಾ ನಿಂದು
ಅನ್ಯರು ಕೇಳಿದರ್ಹೇಳುವನೆ?
ತನ್ನ ನಿಜದಿ ತಾನೆ ಲೀಲೆಯಿಂದಿರುವನು
ಶೂನ್ಯಕ್ಕೆ ಶೂನ್ಯ ತಾನಿರುತಿಹನು
ಮಾಯಾದೇವಿಯ ಚೆಲವು ಅಲ್ಲಮನ ಮೇಲೆ ಯಾವ
ಪ್ರಭಾವವನ್ನೂ ಬೀರುವುದಿಲ್ಲ. ಪರಮ ನಿರಾಕಾರವು ಚೆಲುವಿನ ಸಾಕಾರಕ್ಕೆ ಮರಳಾಗುವುದು ಹೇಗೆ ಸಾಧ್ಯವಾದೀತು? ಅಲ್ಲಮನ ಬಳಿಗೆ ಮಾಯಾದೇವಿಯು ತನ್ನ ಸಖಿಯರನ್ನು ಪ್ರೇಮನಿವೇದನೆಗಾಗಿ ಕಳುಹಿಸುವಳು. ಆದರೆ ಸ್ಥಿರಮನಸ್ಕನಾದ ಅಲ್ಲಮನು ಇತರರ ಬಣ್ಣನೆಗೆ ಮರಳಾಗಲು ಸಾಧ್ಯವೆ? ಆತನು ಆತ್ಮಾರಾಮನು.
ತನ್ನಲ್ಲಿಯೇ ತಲ್ಲೀನನಾಗಿರುವ ಅಲ್ಲಮನು ಯಾವುದೇ ಬಾಹ್ಯಕಾರಣದಿಂದ ವಿಚಲಿತನಾಗುವುದಿಲ್ಲ. ಯಾವುದೇ ಬಾಹ್ಯ ವಾಂಛೆಯು ಆತನಿಗೆ
ಇರುವುದಿಲ್ಲ. ‘ಶೂನ್ಯಕ್ಕೆ ಶೂನ್ಯನಿರುತಿಹನು’ ಎನ್ನುವುದರ ಮೂಲಕ ಆತನು ನಿರ್ವಿಕಲ್ಪ ಧ್ಯಾನದಲ್ಲಿ ಮಗ್ನನಾಗಿರುವನು ಎಂದು ಶರೀಫರು ಅಲ್ಲಮನನ್ನು ಬಣ್ಣಿಸುತ್ತಾರೆ.
ಮೊದಲು ಶಿಶುವಿನಾಳ ಸದರು ನಿರ್ಮಳಸ್ಥಳ-
ಕ್ಕೊದಗಿ ಮೃದಂಗವ ಬಾರಿಸಿದ
ಅದನು ತಿಳಿದು ಸುಮ್ಮನಿರು ನಡಿ ಹಿಂದಕ್ಕೆ
ಇದಕೇನು ಬಯಸುವುದು ಬ್ಯಾಡಿನ್ನು
ಮಧುಕೇಶ್ವರನ ಗುಡಿಯು ನಿರ್ಮಲ ಸ್ಥಳವು. ಆದುದರಿಂದಲೇ ಶಿಶುವಿನಾಳ ಪ್ರಭುವಾದ ಅಲ್ಲಮನು ಅಲ್ಲಿ ಮೃದಂಗವನ್ನು ಬಾರಿಸುತ್ತ, ಆನಂದದಲ್ಲಿದ್ದಾನೆ. ಆತನ
ವಾದನವು ಯಾರದೇ ರಂಜನೆಗಾಗಿ ಅಲ್ಲ. ಮಾಯೆಯು ಈ ಮರ್ಮವನ್ನು ಅರಿತುಕೊಳ್ಳಬೇಕು; ಅಲ್ಲಮನ ಬಯಕೆಯನ್ನು ಅವಳು ಬಿಡಬೇಕು ಹಾಗು ‘ಹಿಂದಕ್ಕೆ ನಡೆಯಬೇಕು’ ಎಂದು ಶರೀಫರು ಪಾರ್ವತಿಯ ಮಾಯಾಕಳೆಗೆ ಜಬರಿಸಿ ಹೇಳುತ್ತಾರೆ. ‘ಹಿಂದೆ ನಡೆ’ ಎಂದರೆ, ಶಿವನೊಡನೆ ಪಂದ್ಯ ಕಟ್ಟುವ ಹುಚ್ಚುತನವನ್ನು ಬಿಟ್ಟು, ನಿನ್ನ ಸ್ವಸ್ಥಾನಕ್ಕೆ ಮರಳು ಎನ್ನುವುದು ಶರೀಫರ ಇಂಗಿತವಾಗಿದೆ.
ಚಾಮರಸನ ಪ್ರಭುಲಿಂಗಲೀಲೆಯ ಕಥೆಯಲ್ಲಿ ಅಲ್ಲಮನು ಮಾಯೆಯನ್ನು ತಿರಸ್ಕರಿಸಿ, ಅಡವಿಯಲ್ಲಿ ಅಂತರ್ಧಾನನಾದನು ಹಾಗು ತನ್ನನ್ನು ಹುಡುಕಿಕೊಂಡು ಬೆನ್ನಟ್ಟಿ ಬಂದ ಮಾಯಾದೇವಿಗೆ ತತ್ವಬೋಧೆಯನ್ನು ಮಾಡಿ, ಅವಳನ್ನು ಸದ್ಗತಿಗೆ ತಿರುಗಿಸಿದನು
ಎಂದು ಬರುತ್ತದೆ.
ಪ್ರತಿಯೊಬ್ಬ ಸಾಧಕನ ಆಂತರ್ಯದಲ್ಲಿ ಆತ್ಮಾರಾಮನಾದ ಅಲ್ಲಮನು ಅಂದರೆ ಶಿವನು ಇದ್ದೇ ಇದ್ದಾನೆ. ಪ್ರಪಂಚದ ಆಮಿಷಗಳು, ಮಾಯಾವಿಕಾರಗಳು ಆತನನ್ನು ಸೆಳೆಯಲಾರವು ಎನ್ನುವುದನ್ನು ಶರೀಫರು ಕಥಾರೂಪದ ತಮ್ಮ ಗೀತೆಯ ಮೂಲಕ ಸೂಚಿಸುತ್ತಿದ್ದಾರೆ.
4 comments:
ನಿಮ್ಮಿಂದ ನನ್ನ ಒಳನೋಟ ವಿಸ್ತಾರವಾಗುತ್ತಿದೆ...
ಬರೆಯುತ್ತಿರಿ.
ಧನ್ಯವಾದಗಳು, ರವಿ.
ಇತ್ತೀಚಿಗೆ ಶಿಶುನಾಳ ಶರೀಫರ ಚಿತ್ರ ನೋಡಿದೆ.. ಅವರ ಬದುಕಲ್ಲಿ ಅವರ ಗುರುಪಾತ್ರ ಬಹಳ ಮಹತ್ವದ್ದೆನಿಸಿತು.
ಹೌದು, ಮನಸಿನ ಮನೆಯವರೆ. ಶರೀಫರಿಗೆ ಹೊಸ ಜನ್ಮ ಕೊಟ್ಟವರೆ ಅವರ ಗುರುಗಳಾದ ಗೋವಿಂದ ಭಟ್ಟರು.
Post a Comment