Monday, April 3, 2017

“ಚಂದಿರ ಬೇಕೆಂದವನು”…. ಒಂದು ಮನೋವೇಧಕ ಸತ್ಯಕಥೆ: (ಮೂಲ: ಮಿಮಿ ಬೇರ್ಡ; ಅನುವಾದ: ಪ್ರಜ್ಞಾ ಶಾಸ್ತ್ರಿ)



ಮಿಮಿಯ ಬದುಕಿನಿಂದ ಅವಳ ಮಮತೆಯ ತಂದೆ ಮಾಯವಾದಾಗ ಅವಳು ಆರು ವರ್ಷದ ಪುಟ್ಟ ಬಾಲಕಿ. ತನ್ನ ತಾಯಿಯನ್ನು ಅನೇಕ ಸಲ ಕೇಳಿದರೂ ಸಹ, ತಾಯಿಯ ಉತ್ತರ ಒಂದೇ ಆಗಿರುತ್ತಿತ್ತು: ‘ಆತನಿಗೆ ಆರಾಮಿಲ್ಲ’, ‘ಆತ ಹೊರಗೆ ಹೋಗಿದ್ದಾನೆ.’

ಅಪ್ಪ ಮತ್ತೆ ಬರುತ್ತಾನೆ ಎನ್ನುವ ಕ್ರೂರ ನಿರೀಕ್ಷೆಯನ್ನು ಜೀವಂತವಾಗಿರಿಸಿದ್ದ ಉತ್ತರವಾಗಿತ್ತು ಅದು. ಮರುವರುಷ ಮಿಮಿಯ ತಾಯಿ ಮರುಮದುವೆಯಾಗುತ್ತಾಳೆ. ಮಿಮಿಯನ್ನು ಒಂದು ವಸತಿ ಶಾಲೆಗೆ ಕಳುಹಿಸಲಾಗುತ್ತದೆ. ಮಿಮಿಯ ನೆನಪಿನ ಒಂದು ಮೂಲೆಯಲ್ಲಿ ಅವಳ ತಂದೆ ಒಂದು  ಗೂಢವಾಗಿ ಉಳಿಯುತ್ತಾನೆ.

ಅದಾದ ಹದಿನೈದು ವರ್ಷಗಳ ನಂತರ, ಅಂದರೆ ಮಿಮಿಗೆ ಇಪ್ಪತ್ತೊಂದು ವರ್ಷಗಳಾದಾಗ, ಅವಳಿಗೆ ತನ್ನ ತಂದೆಯ ಮರಣವಾರ್ತೆ ದೊರೆಯುತ್ತದೆ. ಯಾರ ಬರುವಿಕೆಗಾಗಿ ಇಷ್ಟು ದಿನ ಮಿಮಿ ಕಾಯುತ್ತಿದ್ದಳೊ, ಅಪ್ಪ ಇನ್ನು ಬರಲಾರ, ಶಾಶ್ವತವಾಗಿ ತನ್ನ ಬದುಕಿನಿಂದ ದೂರವಾದ ಎನ್ನುವ ಕಟು ಸತ್ಯ ಮಿಮಿಯನ್ನು ಕಾಡುತ್ತದೆ.  ಮಿಮಿ ತನ್ನ ತಂದೆಯ ಅಸ್ಪಷ್ಟ ನೆನಪುಗಳೊಡನೆ ಜೀವಿಸುತ್ತಾಳೆ. ಹತ್ತು ವರುಷಗಳ  ಬಳಿಕ ಅಕಸ್ಮಾತ್ತಾಗಿ ಅವಳಿಗೆ ತನ್ನ ತಂದೆಯ ಗೆಳೆಯರ ಭೆಟ್ಟಿಯಾಗುತ್ತದೆ. ಅವರ ನಡುವೆ ನಡೆದ ಪತ್ರವ್ಯವಹಾರಗಳು ಅವಳಿಗೆ ಲಭ್ಯವಾಗುತ್ತವೆ. ತನ್ನ ತಂದೆ ಒಬ್ಬ ಪ್ರತಿಭಾಶಾಲಿ ವೈದ್ಯ ಹಾಗು ಜೀವವಿಜ್ಞಾನಿಯಾಗಿದ್ದ; ಜೀವನೋತ್ಸಾಹದ ಬುಗ್ಗೆಯಾಗಿದ್ದ ಎನ್ನುವುದು ಅವಳಿಗೆ ಗೊತ್ತಾಗುತ್ತದೆ.

ಕಳೆದು ಹೋದ ತನ್ನ ತಂದೆಯನ್ನು ಹುಡುಕಲು ಮಿಮಿ ಪ್ರಾರಂಭಿಸುತ್ತಾಳೆ. ಮಿಮಿಯ ಚಿಕ್ಕಪ್ಪನ ಮಗನ ಬಳಿ ಇರುವ ಹಳೆಯ ಕಡತಗಳಲ್ಲಿ ಮಿಮಿಯ ತಂದೆ ಪೆರಿ ಬೇರ್ಡನ ಬರಹಗಳು ಲಭ್ಯವಾಗುತ್ತವೆ. ಜೀರ್ಣವಾದ ಹಾಳೆಗಳ ಮೇಲಿನ ಬರಹಗಳು ಓದಲು ಸಾಧ್ಯವಾಗದಂತಹ ಸ್ಥಿತಿಯಲ್ಲಿರುತ್ತವೆ. ಅವು ಪೆರಿ ಬೇರ್ಡ ಮಾನಸಿಕ ಚಿಕಿತ್ಸಾಲಯಗಳಲ್ಲಿ ಚಿಕಿತ್ಸೆಗಾಗಿ ಸೇರಿಸಲ್ಪಟ್ಟಾಗ ಬರೆದಂತಹ ಟಿಪ್ಪಣಿಗಳು. ಟಿಪ್ಪಣಿಗಳಿಗೆ ಆತ ನೀಡಿದ ಶೀರ್ಷಿಕೆ: Echoes from a dungeon cell (ಕಾರ್ಗತ್ತಲ ಸೆರೆಮನೆಯೊಳಗಿಂದ ಹೊರಟ ಮಾರ್ದನಿಗಳು). ಮಿಮಿ ಎಲ್ಲ ಮಾನಸಿಕ ಚಿಕಿತ್ಸಾಲಯಗಳಿಗೆ ಎಡತಾಕಿ, ತನ್ನ ತಂದೆಯ ಬಗೆಗೆ ಅಲ್ಲಿರುವ ದಾಖಲಾತಿಗಳನ್ನು ಸಂಗ್ರಹಿಸುತ್ತಾಳೆ.  

ತನ್ನ ತಂದೆಯ ಟಿಪ್ಪಣಿಗಳ ಮೂಲಕ, ಸಮಾಚಾರ ಪತ್ರಿಕೆಯ ಪ್ರಕಟಣೆಯ ಮೂಲಕ, ಆಸ್ಪತ್ರೆಯ ದಾಖಲಾತಿಗಳ ಮೂಲಕ ಹಾಗು ತನ್ನ ತಂದೆಯ ಹಳೆಯ ಗೆಳೆಯರು ಪೂರೈಸಿದ ಮಾಹಿತಿಗಳ ಮೂಲಕ ಕಳೆದುಹೋದ ತನ್ನ ತಂದೆಯನ್ನು ಅರಿತುಕೊಳ್ಳಲು ಮಿಮಿ ತೊಳಲಾಡುತ್ತಾಳೆ.

ಪೆರಿ ಬೇರ್ಡ ಪ್ರತಿಭಾಶಾಲಿ ವೈದ್ಯನಾಗಿದ್ದ. ಉನ್ಮಾದಗ್ರಸ್ತ ಖಿನ್ನತೆಯ ಬಗೆಗೆ ಸಂಶೋಧನೆಯನ್ನು ಮಾಡುತ್ತಿದ್ದು, ಪರಿಹಾರದ ಕೊನೆಯ ಹಂತದಲ್ಲಿದ್ದ. ವಿಪರ್ಯಾಸವೆಂದರೆ ತಾನೇ ರೋಗಕ್ಕೆ ಬಲಿಯಾದ. ಮಾನಸಿಕ ಚಿಕಿತ್ಸಾಲಯಗಳೆಂದು ಕರೆಯಲಾಗುತ್ತಿದ್ದ ನರಕಸದೃಶವಾದ ವಿಚಿತ್ರ ಲೋಕದಲ್ಲಿ ಬಂದಿಯಾದ! ತನ್ನ ವರ್ತನೆಯನ್ನು ಹಾಗು  ತನ್ನ ಭ್ರಾಂತಿಯನ್ನು ತಾನೆ ಅರಿತುಕೊಳ್ಳುವ ಸಾಮರ್ಥ್ಯ ಅವನಿಗಿತ್ತು. ತನಗೆ ಕೊಡಲಾಗುತ್ತಿರುವ ವಿವಿಧ ಚಿಕಿತ್ಸೆಗಳ ಅರ್ಥಹೀನತೆಯನ್ನು ಅರಿಯುವ ಬುದ್ಧಿ ಅವನಿಗಿತ್ತು. ಪಲಾಯನದ ಸಾಹಸಗಳನ್ನೂ ಆತ ಮಾಡಿದ. ಆದರೆ ಆತ ಅಸಹಾಯಕನಾಗಿದ್ದ. ಇದೆಲ್ಲವನ್ನೂ ಆತ ಸ್ವಸ್ಥ ಸ್ಥಿತಿಯಲ್ಲಿದ್ದಾಗ ಬರೆದೂ ಇಟ್ಟ. ಇದೆಲ್ಲದರ ಜೊತೆಗೆ ಆತನಿಗೆ ಚಿಕಿತ್ಸೆಯನ್ನು ನೀಡಿದ ವಿವಿಧ ಚಿಕಿತ್ಸಾಲಯಗಳ ಹಾಗು ವೈದ್ಯರ ಟಿಪ್ಪಣಿಗಳೂ ಸಹ ಕೃತಿಯಲ್ಲಿವೆ. ಕೊನೆಗಂತೂ ಭಯಾನಕವಾದ ಲೊಬೊಟೊಮಿ ಚಿಕಿತ್ಸೆಯನ್ನು ನೀಡಿದಾಗ ಆತ ಜೀವಚ್ಛವವಾಗುತ್ತಾನೆ.

ಎಲ್ಲ ಮಾಹಿತಿಗಳು ಮಿಮಿಯ ಎದುರಿಗೆ ಒಂದು jigsaw puzzle ತರಹ ನಿಲ್ಲುತ್ತವೆ. ಸಮಸ್ಯೆಯ ಚೆಲ್ಲಿ ಹೋದ ತುಣುಕುಗಳನ್ನು ಜೋಡಿಸಿ, ತನ್ನ ತಂದೆ ಪೆರಿ ಬೇರ್ಡನ ನೈಜ ಚಿತ್ರವನ್ನು ಅರಿತುಕೊಂಡಾಗ ಅವಳಿಗೆ ಐವತ್ತಾರು ವರ್ಷಗಳು. ಅವಳಿಗೆ ಎಪ್ಪತ್ತೈದು ವರ್ಷಗಳಾದಾಗ, ತನ್ನ ತಂದೆಯ ಬಗೆಗೆ ಅವಳು ಬರೆದ ಕೃತಿ ಹೊರಬರುತ್ತದೆ: He wanted the moon (ಚಂದಿರ ಬೇಕೆಂದವನು).

ಕಳೆದು ಹೋದವರ ಚರಿತ್ರೆಯನ್ನು ಬರೆಯುವುದು ಕಷ್ಟದ ಸಂಗತಿ. ಆತ ತನ್ನ ತಂದೆಯಾಗಿದ್ದರೆ, ತಜ್ಞ ವೈದ್ಯ ಮತ್ತು ಪ್ರತಿಭಾಶಾಲಿ ವಿಜ್ಞಾನಿಯಾಗಿದ್ದರೆ ಹಾಗು ಮನೋರೋಗಿಯಾಗಿದ್ದರೆ ಇದು ದುಸ್ಸಾಧ್ಯದ ಮಾತು. ಮಿಮಿ ಬೇರ್ಡ ಚರಿತ್ರೆಯನ್ನು ಅನುಕಂಪದ ದಾಖಲೆಯನ್ನಾಗಿ ಮಾಡಿಲ್ಲ, ಅಥವಾ ಪ್ರಶಂಸೆಯ ಪರಾಕನ್ನಾಗಿಯೂ ಮಾಡಿಲ್ಲ. ತನ್ನ ತಂದೆಯ ಸಂಕೀರ್ಣ ಜೀವಿತವನ್ನು ಸರಳವಾಗಿ, ವಸ್ತುನಿಷ್ಠವಾಗಿ ಹಾಗು ಆಪ್ತವಾಗಿ ನಿರೂಪಿಸುವದರಲ್ಲಿ ಮಿಮಿ ಸಫಲರಾಗಿದ್ದಾರೆ. ಅದೇ ಸಮಯದಲ್ಲಿ ಅಮೇರಿಕದಲ್ಲಿ ಮನೋರೋಗಿಗಳಿಗೆ ಕೊಡಲಾಗುತ್ತಿದ್ದ ಭಯಾನಕ ಚಿಕಿತ್ಸೆಗಳ ವಿವರಗಳನ್ನು ತನ್ನ ತಂದೆ ಬರೆದಿಟ್ಟ ದಾಖಲೆಗಳ ಸಹಿತ ಒದಗಿಸಿದ್ದಾರೆ.

ಮಿಮಿ ತನ್ನ ತಂದೆಯ ಹೋರಾಟದ ಚರಿತ್ರೆಯನ್ನು ಬರೆದು ಅಷ್ಟಕ್ಕೆ ವಿರಮಿಸಲಿಲ್ಲ. ಆತ ಬರೆದ ಸಂಶೋಧನಾ ಲೇಖನವನ್ನುಸೈಕಿಯಾಸ್ಟ್ರಿಕ್ ಸರ್ವೀಸಿಸ್ಎನ್ನುವ ಮನೋವಿಜ್ಞಾನದ ನಿಯತಕಾಲಿಕೆಗೆ ಕಳುಹಿಸಿದಳು. ಅದು ಪ್ರಕಟವಾದ ನಂತರ, ಪೆರಿ ಬೇರ್ಡರು ವಿಷಯದಲ್ಲಿ ಆಳವಾದ ಸಂಶೋಧನೆಯನ್ನು ಮಾಡಿದವರಲ್ಲಿ ಮೊಟ್ಟ ಮೊದಲಿಗರು ಎನ್ನುವ ವಿಷಯ ವಿಜ್ಞಾನಲೋಕಕ್ಕೆ ಅರಿವಾಯಿತು.

ಕತ್ತಲೆಯ ಸೆರೆಮನೆಯಿಂದ ಮಿಮಿ ತನ್ನ ತಂದೆಯನ್ನು ಯಶಸ್ಸಿನ ಬೆಳಕಿಗೆ ತಂದಳು.
******************************************************
ಪೆರಿ ಬೇರ್ಡ ಉನ್ಮಾದ ಸ್ಥಿತಿಯಿಂದ ಹೊರ ಬಂದಾಗ, ಬರೆಯುತ್ತಿದ್ದ ಟಿಪ್ಪಣಿಗಳು ಆತನ ಶಾಸ್ತ್ರೀಯ ಜ್ಞಾನವನ್ನಷ್ಟೇ ತೋರಿಸುವುದಿಲ್ಲ, ಅವನಲ್ಲಿ ಅಡಗಿಕೊಂಡಿದ್ದ ಸಾಹಿತ್ಯಪ್ರತಿಭೆಯನ್ನೂ ಸಹ ಅವು ಬೆಳಕಿಗೆ ತರುತ್ತವೆ. ಅಂತಹ ಕೆಲವೇ ಕೆಲವು ವಾಕ್ಯಗಳನ್ನು ಆತನ ಟಿಪ್ಪಣಿಗಳಿಂದ ಎತ್ತಿ ಇಲ್ಲಿ ಉದಾಹರಿಸುತ್ತೇನೆ:

() (ಮಾನಸಿಕ ಆಸ್ಪತ್ರೆಯಲ್ಲಿ) ಒಮ್ಮೊಮ್ಮೆ ಜೋಡಿ ಹಕ್ಕಿಗಳು ಬರುತ್ತಿದ್ದವು. ಕೈಸಾಲೆಯ ಸಮೀಪಕ್ಕೆ ಕುಪ್ಪಳಿಸುತ್ತ ಬರುತ್ತಿದ್ದವು. ಅವು ಸೀದಾ ಗಾಳಿಯೊಳಗೆ ಡೈವ್ ಹೊಡೆಯುತ್ತಿದ್ದವು, ಹೃದಯಕ್ಕೆ ಹೃದಯ; ಚುಂಚಿಗೆ ಚುಂಚನ್ನು ಕೊಟ್ಟು ಮಿಲನದ ಹಾರಾಟ.
() ವಸಂತದ ಸೂರ್ಯನ ಔದಾರ್ಯ ಎಲ್ಲೆಡೆ ಹರಡಿತ್ತು
() ಉನ್ಮಾದಗ್ರಸ್ತರು ಕತ್ತಲೊಳಗೇನೂ ಇರುವುದಿಲ್ಲ. ನಡೆಯುತ್ತಿರುವುದರ ಬಗೆಗೆ ಅವರಿಗೆ ಸಂಪೂರ್ಣ ಅರಿವಿರುತ್ತದೆ.
() ಭ್ರಾಂತಿಯ ಬೆನ್ನೇರಿ ಹೊರಟೆ.
() ಮಾನವ ಅಸ್ತಿತ್ವದ ಅನೂಹ್ಯ ಜಗತ್ತಿನಲ್ಲಿ ನನ್ನನ್ನು ಅಧೀರಗೊಳಿಸುವ ಎಷ್ಟೊಂದು ಬಗೆಯ ಅನುಭವಗಳು ನನಗೆ ಆಗಿವೆ.
() ಆರೋಗ್ಯ ಸುಸ್ಥಿಗೆ ಮರಳಿದ ಹಂತದಲ್ಲಿ ಸ್ವವಿಮರ್ಶೆ, ಆದರಿಂದ ಉಂಟಾಗುವ ಲಜ್ಜೆ, ಮುಜುಗರದ ಭಾವಗಳು ನಮ್ಮ ಶತ್ರುಗಳಾಗಿ ಪರಿಣಮಿಸುತ್ತವೆ. ಅವು ಎಷ್ಟರ ಮಟ್ಟಿಗೆ ಹಿಂಸಿಸುತ್ತವೆ ಎಂದರೆ ಎದೆ ಕುಹರದ ತಳದವರೆಗೆ ಕೊರೆದು ಗಾಯ ಮಾಡಿರುತ್ತವೆ.
() ಮಾನಸಿಕ ಆಸ್ಪತ್ರೆಯೊಂದರಲ್ಲಿ ಏನೇನಾಗುತ್ತದೆ ಎಂಬುದನ್ನು ಸ್ವತಃ ಅನುಭವಿಸದೇ ಇದ್ದವರಿಗೆ ಚಿಕಿತ್ಸೆಗಳೆಂಬ ರೌರವ ನರಕದ ಬಗೆಗೆ ಕಿಂಚಿತ್ತೂ ಜ್ಞಾನವಿರುವುದಿಲ್ಲ ಎಂಬ ಸತ್ಯ ಮತ್ತೆ ಮತ್ತೆ ಸಾಬೀತಾಗತೊಡಗಿತು.
() ನನ್ನದು ಅಂದುಕೊಂಡಿದ್ದ ಜಾಗ ನನ್ನದಾಗಿ ಉಳಿದಿರಲಿಲ್ಲ, ಜನ ನನ್ನವರಾಗಿ ಉಳಿದಿರಲಿಲ್ಲ.
() ಇದು ಹೊರಲು ದುಸ್ಸಾಧ್ಯವಾದ ಶಿಲುಬೆ.

ಕೃತಿಯಎರಡನೆಯ ಭಾಗದಲ್ಲಿ ಮಿಮಿಯ ತೊಳಲಾಟ, ತನ್ನ ತಂದೆಯ ದಾಖಲಾತಿಗಳನ್ನು ಸಂಶೋಧಿಸಲು ಅವಳು ಪಟ್ಟ ಪ್ರಯತ್ನಗಳ ವಿವರಗಳಿವೆ. ಮಿಮಿಯ ಬರಹದಲ್ಲೂ ಸಹ ಸಾಹಿತ್ಯಿಕ ಪ್ರತಿಭೆಯ ಮಿಂಚನ್ನು ಕಾಣಬಹುದು. ಎರಡು ಉದಾಹರಣೆಗಳನ್ನು ನೋಡೋಣ:
() ಅಪರಾಹ್ನದ ಬೆಳಕಿನ ನೆರಳುಗಳು ಅಲೆಅಲೆಯಾಗಿ ನಾನು ಓದುತ್ತಿದ್ದ ಪತ್ರಗಳ ಮೇಲೆ ನರ್ತಿಸಿದವು. ಮೌನಗರ್ಭದೊಳಗಿಂದ ನನ್ನ ಅಪ್ಪನ ಕತೆ ಹೊರಬರುತ್ತಿತ್ತು.
() ನನ್ನ ಮತ್ತು ಅಪ್ಪನ ನಡುವೆ ಇದೆಯೆಂದು ನಂಬಿದ ಬಾಂಧವ್ಯವು ಈಗ ಸ್ಪರ್ಶಗ್ರಾಹ್ಯವಾಗಿತ್ತು.

****************************************

ಇಂತಹ ಒಂದು ಉತ್ಕೃಷ್ಟ ಕೃತಿಯನ್ನು ಸಮರ್ಪಕವಾಗಿ ಕನ್ನಡಕ್ಕೆ ತಂದ ಪ್ರಜ್ಞಾ ಶಾಸ್ತ್ರಿಯವರಿಗೆ ನಾವು ಕೃತಜ್ಞತೆಗಳನ್ನು ಸಲ್ಲಿಸಬೇಕು. ಮೂಲದ ಆಶಯ ಹಾಗು ಶೈಲಿಗೆ ಎಳ್ಳಷ್ಟೂ ಧಕ್ಕೆ ತರದ ರೀತಿಯಲ್ಲಿ ಅನುವಾದವಾಗಿದೆ ಎಂದು ನಾನು ಭಾವಿಸುತ್ತೇನೆ. ಕೃತಿಯನ್ನು ಓದುವಾಗ, ಇದು ಅನುವಾದ ಎಂದು ಅನಿಸುವುದೇ ಇಲ್ಲ. ಅವರು ಬಳಸಿದ ಕೆಲವು ಕನ್ನಡ ಪದಗಳನ್ನು ಗಮನಿಸಿದಾಗ ಇದರ ಇಂಗ್ಲಿಶ್ ಮೂಲ ಏನಿರಬಹುದೆಂದು ಓದುಗರಿಗೆ ಕುತೂಹಲವಾಗುತ್ತದೆ. ಅಂತಹ ಕೆಲವು ಪದಗಳನ್ನು ಇಲ್ಲಿ ಕೊಡುತ್ತಿದ್ದೇನೆ. ಅನುವಾದಿತ ಪದಗಳ ಮೂಲವನ್ನು ಊಹಿಸುವುದು ಒಂದು ಕ್ವಿಝ್ ಆಟದಷ್ಟೇ ಸ್ವಾರಸ್ಯಕರವಾದೀತು! ಇವುಗಳಲ್ಲಿ ಕೆಲ ಪದಗಳು ಅಚ್ಚ ಕನ್ನಡ ಪದಗಳಾಗಿರುವುದನ್ನು ಗಮನಿಸಬೇಕು. ಕೆಲ ಪದಗಳು ಭಾರತೀಯ ಸಂಸ್ಕೃತಿಯ ಛಾಯೆಯನ್ನು ಹೊಂದಿವೆ. ಇನ್ನುಳಿದ ಕೆಲವು ಪದಗಳು ಸಾರ್ಥಕ ಅನುವಾದಗಳಾಗಿವೆ:

"...... ಮೆಟ್ಟಂಗಾಲು,  ಕ್ಷಣಚಿತ್ತ ಕ್ಷಣಪಿತ್ತ,  ಕೋಳಿನಿದ್ದೆ, ರೌರವ ನರಕ, ಕುಲೀನಸತ್ತೆ, ಧುನ್, ಸೊಲ್ಲು, ಪುಣ್ಯಾತ್ಮ, ಕಾಲುಬಂದಿ, ಹುಂಬ ಧೈರ್ಯ, ನಿಚ್ಚಳ ಬೆಳಗು, ಬೆಳದಿಂಗಳ ಗೀತೆಗಳು, ಕ್ರೂರ ನಿರೀಕ್ಷೆ, ಹುಟ್ಟುದೋಣಿ, ಶಯನಶಾಲೆ, ಕೈಸಾಲೆ, ಹೆಜ್ಜೆಗುರುತು, ಪ್ರಲೋಭನಕಾರಿ, ಚಿತ್ತಸ್ಥಿರಕಾರಿ, ಮುಕ್ತಸಂತೋಷ, ಹಿಮರಾಜಕುಮಾರಿ, ಗೊಲ್ಲತಿಯ ದಿರಿಸು, ಬಳ್ಳಿ ಅಕ್ಷರಗಳ ಬರಹ, ಹತಾಶೆಗಳ ಕೊಪ್ಪರಿಗೆ, ಯಾತನೆಗಳ ಕುಲುಮೆಯೊಳಗೆ, ಹುಮ್ಮಸ್ಸಿನ ಚಡಪಡಿಕೆ, ಹೊಗೆಯಾಡುವ ಅಸಹನೆ, ರಾಕ್ಷಸ ಕಸುವು, ಮನೋವಿಕಲ್ಪ, ಭಾವಸನ್ನಿ, ಮಿಥ್ಯಾದರ್ಶನ, ಚಿತ್ತಭ್ರಾಂತಿ, ಅತಿಸಂವೇದನೆ, ಸ್ವಮರುಕ, ಚಿತ್ತಸ್ಥಿತಿಯ ಓಲಾಟ, ನಿರಸ್ತ್ರರಾಗಿ ಕೈಚೆಲ್ಲಿ ಕೂತ ಪಾಪದ ರೋಗಿಗಳು, …..”

ಕೆಲವೊಂದು ಸಂದರ್ಭಗಳಲ್ಲಿ, ಪ್ರಜ್ಞಾ ಶಾಸ್ತ್ರಿಯವರು ಅನುವಾದಿತ ಕನ್ನಡದ ಪದಗಳ ಬದಲಾಗಿ ಇಂಗ್ಲಿಶ್ ಪದಗಳನ್ನೇ ಬಳಸಿದ್ದಾರೆ:
"......ಲಿವಿಂಗ್ ರೂಮ್, ಕಾರಿಡಾರ್,  ಆಕ್ಯುಪೇಶನಲ್ ಥೆರಪಿ, ಲಾನ್, ಪಾಯಸನ್ ಐವಿ, ಲೊಬೊಟೊಮಿ, ಗಿನಿಪಿಗ್, ಸ್ಟ್ರೇಟ್ ಜಾಕೆಟ್. …..”

ಪದಗಳಿಗೆ ಪರ್ಯಾಯ ಪದಗಳು ಅವರಿಗೆ ಸಿಕ್ಕುತ್ತಿರಲಿಲ್ಲವೆಂದಲ್ಲ. ಆದರೆ ಆಂಗ್ಲಮೂಲದ ಪದಗಳನ್ನೇ ಬಳಸಿಕೊಳ್ಳುವುದರ ಮೂಲಕ, ಯಥಾರ್ಥ ವಾತಾವರಣ ಸೃಷ್ಟಿಯನ್ನು ಉಳಿಸಿಕೊಳ್ಳುವುದರಲ್ಲಿ ಅವರು ಸಫಲರಾಗಿದ್ದಾರೆ.

**********************************
ಚಂದಿರ ಬೇಕೆಂದವನು’ (He wanted the moon) ಕೃತಿಯನ್ನು ಓದಲು ಕೈಗೆತ್ತಿಕೊಂಡರೆ, ಕೊನೆಯನ್ನು ಓದುವವರೆಗೂ ಕೆಳಗಿಡಲು ಸಾಧ್ಯವಾಗುವುದಿಲ್ಲ. ಇದರ ಶ್ರೇಯಸ್ಸು ಮಿಮಿ ಬೇರ್ಡ ಅವರಿಗೆ ಸಲ್ಲಬೇಕು. ಅಷ್ಟೇ ಸಮರ್ಪಕವಾಗಿ ಕೃತಿಯನ್ನು ಕನ್ನಡಕ್ಕೆ ತಂದ ಪ್ರಜ್ಞಾ ಶಾಸ್ತ್ರಿಯವರೂ ಸಹ ಶ್ರೇಯಸ್ಸಿನಲ್ಲಿ ಭಾಗೀದಾರರಾಗಿದ್ದಾರೆ. ಕೃತಿಯ ಪ್ರಕಾಶಕರಾದಛಂದ ಪುಸ್ತಕ ವಸುಧೇಂದ್ರರವನ್ನು ನಾವು ಮರೆಯಲು ಸಾಧ್ಯವೆ?

ಕೃತಿಯನ್ನು ಮುಗಿಸಿದ ನಂತರ ನಿರಾಳರಾದ ಮಿಮಿ ಬೇರ್ಡರ ವಾಕ್ಯಗಳನ್ನು ಉದ್ಧರಿಸುವ ಮೂಲಕ ಲೇಖನಕ್ಕೆ ಮಂಗಳ ಹಾಡುವುದು ಸರಿಯಾದೀತು:
ಬದುಕಿಡೀ ಅಪ್ಪನೆಂಬ ರಹಸ್ಯವನ್ನು ಅರಸುತ್ತ, ಸೋಜಿಗ ಪಡುತ್ತ, ಗೂಢಾರ್ಥ ಬಿಡಿಸುತ್ತ ಕಳೆದೆ. ಈಗ ಒಗಟನ್ನು ಬಿಡಿಸಿಟ್ಟಾಯಿತು. ಅವನು ಯಾರಾಗಿದ್ದ, ಏನೇನೆಲ್ಲ ಅನುಭವಿಸಿದ ಮತ್ತು ಅವನು ಬಿಟ್ಟು ಹೋದ ಆಸ್ತಿಯೇನು ಎಂಬುದನ್ನೆಲ್ಲ ಅರಿತೆ. ……..ನನಗೆ ಆಗಷ್ಟೇ ಎಪ್ಪತ್ತೈದಾಗಿತ್ತು. ನನ್ನ ಬದುಕಿನ ಕೆಲವು ಗೂಢಗಳು ಸ್ವಲ್ಪ ತಡವಾಗಿ ಅನಾವರಣಗೊಂಡವು. ಆದರೆ, ಕೊನೆಗೂ ಅನಾವರಣಗೊಂಡಿತಲ್ಲ. ಅಷ್ಟಕ್ಕೂ ತೀರಾ ತಡವೇನೂ ಆಗಲಿಲ್ಲ.”

2 comments:

avyaktalakshana said...

ಸುನಾಥ ಕಾಕಾ,
ನಿಮ್ಮಿಂದ ಕಲಿಯಬೇಕಾದ್ದು ಬಹಳಷ್ಟಿದೆ. ಸಹೃದಯ ಓದು ಎಂಬುದನ್ನು ಮೂರ್ತರೂಪಕ್ಕಿಳಿಸಿದ್ದೀರಿ. ಧನ್ಯತೆಯ ಖುಷಿಯನ್ನು ಅನುಭವಿಸುತ್ತಿದ್ದೇನೆ.

ಅದರಲ್ಲಿನ ಕೆಲವು ಪದಗಳಿಗೆ ಇಂಗ್ಲೀಷ್ ರೂಪ ಹೇಗಿತ್ತೋ ಎಂದು ಅಚ್ಚರಿ ವ್ಯಕ್ತ ಪಡಿಸಿದ್ದೀರಿ. ಕೆಲವೊಂದಿಷ್ಟಕ್ಕೆ ನಾನೂ ಮೂಲವನ್ನು ಕೆದಕಿ ಹುಡುಕಬೇಕು. ಅದರಲ್ಲಿ ’ಚಿತ್ತ ಸ್ಥಿರಕಾರಿ’ ಎಂಬುದು ಚೆನ್ನಾಗಿ ನೆನಪಿದೆ. ಅದರ ಮೂಲ ರೂಪ mood stabilizing drugs. ಚಿತ್ತ ಸ್ಥಿರಕಾರಿ ಮದ್ದುಗಳು ಅಂತ ಮಾಡಿದೆ. ಅದನ್ನು ಕನ್ನಡಕ್ಕೆ ತರಲು ಸಾಕಷ್ಟು ತಲೆ ಕೆಡಿಸಿಕೊಂಡಿದ್ದೆ. ವೈದ್ಯಕೀಯ ಪರಿಭಾಷೆಗಳು ಸುಮಾರು ತ್ರಾಸು ಕೊಟ್ಟಿವೆ. ತಲೆಗೆ ಏನೂ ಹೊಳೆಯದೆ ಅನುವಾದವನ್ನು ನಿಲ್ಲಿಸಿದ್ದೂ ಇದೆ. ಈ ಚಿತ್ತ ಸ್ಥಿರ ಕಾರಿಯೂ ಹಾಗೇ ಆಗಿ ನಂತರ ಅದರ ಮೂಲ ರೂಪವನ್ನೆ ಇಟ್ಟಿದ್ದೆ. ಸ್ವಲ್ಪ ಸಮಯದ ನಂತರ ಪುನಃ ಓದುವಾಗ ಹೊಳೆದದ್ದು. ಅದೊಂದು ಮಧುರ ಕ್ಷಣವಾಗಿತ್ತು. ಉಳಿದ ಪದಗಳನ್ನೂ ಸಮಯ ಸಿಕ್ಕಾಗ ಮೂಲದೊಳಗಿಂದ ಹುಡುಕಿ ನಿಮಗೆ ಕೊಡುತ್ತೇನೆ.

ಪ್ರೀತಿಪೂರ್ವಕವಾಗಿ
ಪ್ರಜಾ

sunaath said...

ಪ್ರಜ್ಞಾ ಮೇಡಮ್,
‘ಚಂದಿರ ಬೇಕೆಂದವನು’ ಕೃತಿಯನ್ನು ಓದುವಾಗ, ಸಲೀಸಾಗಿ ಓದುತ್ತಿರುವ ಅನುಭವವಾಗುತ್ತದೆ. ಆದರೆ ಬಲ್ಲವರೆ ಬಲ್ಲರು ಬೆಲ್ಲದ ಸವಿಯ ಎನ್ನುತ್ತಾರಲ್ಲ, ಅದು ಇಲ್ಲಿ ಓದುಗರಿಗೆ ಮಾತ್ರ ಅನ್ವಯಿಸುತ್ತದೆ. ಈ ಬೆಲ್ಲದ ಪಾಕವನ್ನು ಮಾಡಲು ನೀವು ಪಟ್ಟ ಕಷ್ಟ ನಿಮಗೆ ಮಾತ್ರ ಗೊತ್ತಾಗುವುದು. ‘ಚಿತ್ತಸ್ಥಿರಕಾರಿ’ ಎನ್ನುವ ಒಂದು ಪದದ ಉದಾಹರಣೆಯನ್ನು ನೀವು ಕೊಟ್ಟಿದ್ದೀರಿ.ಇಂತಹ ಎಷ್ಟೋ ಪದಗಳನ್ನು ರಚಿಸುವ ಕಷ್ಟ ನಿಮಗೇ ಗೊತ್ತು. ಇದಕ್ಕಿಂತ ಮುಖ್ಯವಾಗಿ ನೀವು ಬಳಸಿದ ಕನ್ನಡ-ವಿಶಿಷ್ಟ ಪದಗಳಿವೆಯಲ್ಲ, ಉದಾಹರಣೆಗೆ ‘ಪುಣ್ಯಾತ್ಮ’, ‘ಕ್ಷಣಚಿತ್ತ ಕ್ಷಣಪಿತ್ತ’ ಇತ್ಯಾದಿ, ಈ ಪದಗಳೇ ನನ್ನ ಮೇಲೆ ಮೋಡಿ ಮಾಡಿದವು. ಮೂಲಕೃತಿಯ ಲೇಖಕಿಯು ಹೇಳಬಯಸುವ ಭಾವವನ್ನು ನೀವು ಕನ್ನಡ ವಿಶಿಷ್ಟ ಪದಗಳ ಮೂಲಕ, ನಮಗೆ ತಲುಪಿಸಿದ್ದೀರಿ ಎಂದು ನಾನು ಭಾವಿಸುತ್ತೇನೆ. ಇದೇ ನೈಜ ಅನುವಾದ. ಅಭಿನಂದನೆಗಳು.