Tuesday, January 16, 2018

ಇತಿಹಾಸದ ತಳಮಳ



‘ಸೋತವರು ಇತಿಹಾಸವನ್ನು ಬರೆಯುವದಿಲ್ಲ’ ಎನ್ನುವ ಮಾತೊಂದಿದೆ. ಗೆದ್ದವರಾದರೊ ತಮ್ಮ ಇತಿಹಾಸವನ್ನು ವಿಜೃಂಭಿಸಿಕೊಂಡು ಬರೆಯುತ್ತಾರೆ. ಭಾರತದ ಮೇಲೆ ವಿದೇಶೀಯರ ಆಕ್ರಮಣಗಳು ನಡೆದಾಗಲೆಲ್ಲ, ಅಲ್ಲಿಯ ಇತಿಹಾಸಕಾರರು ತಮ್ಮ ಆಶ್ರಯದಾತರನ್ನು ‘ಜಗದೇಕ ವೀರ’ರೆಂದೂ, ‘ಪಾಖಂಡಿಕುಠಾರ’ರೆಂದೂ ಬಣ್ಣಿಸಿದ್ದಾರೆ. ಭಾರತದಲ್ಲಿಯ ಎಷ್ಟೆಲ್ಲ ಧನದೌಲತ್ತನ್ನು, ದಾಸ,ದಾಸಿಯರನ್ನು ತಮ್ಮ ಬಾದಶಹರು ಸೂರೆ ಹೊಡೆದು, ಗೆದ್ದುಕೊಂಡು ಬಂದರೆನ್ನುವುದನ್ನು ಹಾಡಿ ಹೊಗಳಿದ್ದಾರೆ.

ಸೋತು ಹೋದವರ ಇತಿಹಾಸವನ್ನು ಯಾರು ಬರೆಯಬೇಕು? ಸೋತು ಹೋದವರಲ್ಲಿಯೂ ಸಹ ದೇಶಾಭಿಮಾನಿಗಳು ಇರುತ್ತಾರಲ್ಲವೆ? ಇವರ ಎದೆಯಲ್ಲಿಯ ಕಿಚ್ಚು ಜೀವಂತವಾಗಿ ಉರಿಯುತ್ತ ಇರುವುದಲ್ಲವೆ? ಇವರು ತಮ್ಮ ಲಾವಣಿಗಳಲ್ಲಿ, ಜನಪದ ಕಾವ್ಯಗಳಲ್ಲಿ ತಮ್ಮ ಯೋಧರ, ರಾಜರ ಧೈರ್ಯ, ಶೌರ್ಯ, ಸ್ವಾಭಿಮಾನ. ಶರಣಾಗತ ವಾತ್ಸಲ್ಯ ಇವೆಲ್ಲವನ್ನು ಮನದುಂಬಿ ನೆನೆಸಿದ್ದಾರೆ. ಆದರೆ ಇದಷ್ಟೇ ಇತಿಹಾಸವಲ್ಲ. ಬರೆಯದೆ ಉಳಿದ ಇತಿಹಾಸ ಇನ್ನೂ ಸಾಕಷ್ಟಿದೆ. ಅದೇ ವಾಸ್ತವ ಇತಿಹಾಸ.

ವಾಸ್ತವ ಇತಿಹಾಸ: 
ವಿದೇಶೀ ದಾಳಿಕಾರರನ್ನು ‘ನರಹಂತಕರು, ಸೀಳುನಾಯಿಗಳು, ದರೋಡೆಖೋರರು’ ಎಂದು ಗುರುತಿಸುವುದು ವಾಸ್ತವಕ್ಕೆ ಹತ್ತಿರವಾದ ಮಾತು. ತಾವು ಆಕ್ರಮಿಸುತ್ತಿರುವ ಪ್ರದೇಶಗಳನ್ನು ಸುಡುತ್ತ, ಕಂಡವರನ್ನು ಕೊಲ್ಲುತ್ತ, ಹೆಣ್ಣುಮಕ್ಕಳ ಮೇಲೆ ದೌರ್ಜನ್ಯವೆಸಗುತ್ತ ಮುನ್ನುಗ್ಗುವುದು ಇವರ ರಣನೀತಿ. ಇದರ ಪರಿಣಾಮವೇನು? ಇಲ್ಲಿಯ ಪ್ರಜೆಗಳು ಹಾಗು ರಾಜರು ಇವರ ಕ್ರೌರ್ಯಕ್ಕೆ ಹೆದರಿರಬೇಕು; ಹೋರಾಟವಿಲ್ಲದೆ ತಮ್ಮ ಕಾಲಿಗೆ ಬೀಳಬೇಕು ಎನ್ನುವುದು ಈ ರಣನೀತಿಯ ಉದ್ದೇಶ. ಇಲ್ಲಿಯ ರಾಜರು ಮೊದಮೊದಲಿಗೆ ಪ್ರತಿಹೋರಾಟಕ್ಕೆ ಸಜ್ಜಾದರೂ ಸಹ, ತಮ್ಮ ಭೂತಾಯಿ ಹಾಗು ತಮ್ಮ ಪ್ರಜೆಗಳು ಭೀಕರ ಕ್ರೌರ್ಯಕ್ಕೆ ಒಳಗಾಗುವುದನ್ನು ನೋಡಲಾರದೆ ಮತ್ತು ಈ ಸೀಳುನಾಯಿಗಳ ಜೊತೆಗೆ ಹೋರಾಡುವ ಶಕ್ತಿ ಇಲ್ಲದೆ, ಅನಿವಾರ್ಯವಾಗಿ ಶರಣಾಗುತ್ತಿದ್ದರು. ತಮ್ಮ ಹೆಣ್ಣು, ಹೊನ್ನು ಹಾಗು ಮಣ್ಣಿನಲ್ಲಿಯ ಬಹುಭಾಗವನ್ನು ದರೋಡೆಖೋರರಿಗೆ ಒಪ್ಪಿಸಿ, ತಮ್ಮ ಕೈಲಾದಷ್ಟು ಶಾಂತಿಯನ್ನು ಕೊಂಡು ಕೊಳ್ಳುತ್ತಿದ್ದರು.

ಚಿತ್ತೂರಿನ ಇತಿಹಾಸದಲ್ಲಿ ಇನ್ನೂ ಒಂದು ದಾರುಣ ಅಂಶಇದೆ. ಅಲ್ಲಾಉದ್ದೀನ ಖಿಲಜಿಯು ರಾಣಿ ಪದ್ಮಿನಿಯ ಚೆಲುವಿನ ಖ್ಯಾತಿಯನ್ನು ಕೇಳಿ ಮರುಳಾದ ಎಂದು ಹೇಳುತ್ತಾರೆ. ತಮ್ಮ ಜನಾನಾವನ್ನು ವಿಸ್ತರಿಸುತ್ತಲೇ ಇರುವ ಈ ಬಾದಶಾಹರುಗಳಿಗೆ ಪರಸ್ತ್ರೀಯರು ಎಂದರೆ ತಮ್ಮ ದಾಸಿಯರು ಎನ್ನುವ ಭಾವನೆ ಸಹಜವಾದದ್ದೇ. ಸರಿ, ಖಿಲಜಿಯು ಚಿತ್ತೂರಿನ ಮೇಲೆ ದಾಳಿ ಮಾಡಿದ. ಮೊದಲನೆಯ ಸಲ ಸೋತು ಹೋದ. ಭೀಮಸಿಂಗನನ್ನು ವಂಚನೆಯಿಂದ ಬಂಧಿಸಿದ. ‘ಎರಡನೆಯ ಸಲದ ದಾಳಿಯಲ್ಲಿ ಖಿಲಜಿ ಗೆಲ್ಲುವುದು ನಿಶ್ಚಿತವಾದದ್ದರಿಂದ, ರಾಣಿ ಪದ್ಮಿನಿಯ ಜೊತೆಗೆ ಅರಮನೆಯ ಹೆಣ್ಣುಮಕ್ಕಳೆಲ್ಲ ‘ಜೋಹರ’ದಲ್ಲಿ ಸುಟ್ಟುಕೊಂಡು ಸತ್ತರು. ರಾಜಪೂತ ಯೋಧರು ಹೋರಾಡಿ ಮಡಿದರು’ ಇದಿಷ್ಟು ನಮಗೆ ಇತಿಹಾಸದ ಪುಟಗಳಲ್ಲಿ ಸಿಗುವ ಮಾಹಿತಿ. ಇತಿಹಾಸವು ಭೀಮಸಿಂಗನ ಹಾಗು ಆತನ ಪ್ರಜೆಗಳ ಮನದಲ್ಲಿ ನಡೆದ ತಳಮಳವನ್ನು, ಅವರ ಮಾನಸಿಕ ಹೋರಾಟವನ್ನು ಹೇಳುವುದಿಲ್ಲ. ಇತಿಹಾಸವು ಲೂಟಿಯಾದ, ಸುಟ್ಟು ಹೋದ ಚಿತ್ತೂರಿನ ಸಂಕಟವನ್ನು ಹೇಳುವುದಿಲ್ಲ.

ಮೊದಲನೆಯ ಸಲ ಭೀಮಸಿಂಗನು ಖಿಲಜಿಯನ್ನು ಸೋಲಿಸಿದಾಗಲೂ ಸಹ, ಚಿತ್ತೂರು ರಾಜ್ಯದ ಬಹುಭಾಗವು ನಾಶವಾಗಿತ್ತು. ಬೆಳೆನಾಶ, ಸಂಪತ್ತಿನ ಸೂರೆ, ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಇವು ರಾಜ್ಯದ ಅರಸನಾದ ರಾಣಾ ಭೀಮಸಿಂಗನನ್ನು ಮಾನಸಿಕವಾಗಿ ಜರ್ಜರಿಸಿರಲೇ ಬೇಕಲ್ಲವೆ? ರಾಜ್ಯದ ಪುನರ್ನಿರ್ಮಾಣ; ಪ್ರಜೆಗಳನ್ನು ಸಂತೈಸಿ, ಅವರ ನೆರವಿಗೆ ನಿಲ್ಲುವುದು ಇವೆಲ್ಲವನ್ನು ಮಾಡುವುದಲ್ಲದೆ, ಖಿಲಜಿಯ ಮರುದಾಳಿಗೆ ತಯಾರಿ ಮಾಡಿಕೊಳ್ಳುವುದು ಇವೆಲ್ಲ ಸಾಮಾನ್ಯವಾದ ಸಂಗತಿಗಳೆ?

ಖಿಲಜಿಗಾದರೊ ಎರಡನೆಯ ದಾಳಿ ಅನಿವಾರ್ಯ. ಅವನ ಸ್ತ್ರೀಲಾಲಸೆ ಇದಕ್ಕೆ ಒಂದು ಕಾರಣವಾದರೆ, ತಾನು ಪರಾಜಿತನಾದೆ ಎನ್ನುವ ಅವಮಾನವನ್ನು  ತೊಡೆದುಹಾಕುವುದೂ ಸಹ ರಾಜಕೀಯವಾಗಿ ಅವನಿಗೆ ಒಂದು ಮಹತ್ವದ ಮಾತೇ ಆಗಿರಬಹುದು.

ರಾಣಾ ಭೀಮಸಿಂಗನ ಎದುರಿಗೆ ಇರುವ ಆಯ್ಕೆಗಳು ಕಠಿಣವಾದಂತಹವು:
ಮೊದಲನೆಯ ಆಯ್ಕೆ: 
ಖಿಲಜಿಗೆ ಪದ್ಮಿನಿಯನ್ನು ಒಪ್ಪಿಸಿ, ರಾಜ್ಯದ ಸತ್ಯಾನಾಶವನ್ನು ತಡೆಯುವುದು; ಆತನಿಗೆ ಹೇರಳವಾಗಿ ಕಪ್ಪ ಕಾಣಿಕೆಗಳನ್ನು ಕೊಡುವುದು; ಆತ ಕರೆದಾಗೆಲ್ಲ ಆತನ ದರಬಾರಿಗೆ ಹೋಗಿ ಮುಜುರೆ ಹಾಕುವುದು; ಆತನ ಯುದ್ಧಗಳಲ್ಲಿ ಆತನ ಬೆಂಬಲಕ್ಕೆ ತನ್ನ ಸೈನ್ಯವನ್ನು ಒದಗಿಸುವುದು ಇತ್ಯಾದಿ.

ಖಿಲಜಿಯು ರಾಣಿ ಪದ್ಮಿನಿಯ ಬದಲಾಗಿ ಬೇರಾವುದೋ ರಾಜಕುಮಾರಿಯನ್ನು ಬಯಸಿದ್ದರೆ, ಆಕೆಯನ್ನು ಈ ತುರಕನಿಗೆ ಮದುವೆ ಮಾಡಿಯೇ ಒಪ್ಪಿಸಬಹುದಾಗಿತ್ತು. ಆದರೆ, ಇವಳು ವಿವಾಹಿತಳು, ಚಿತ್ತೂರಿನ ರಾಣಿ. ಆದುದರಿಂದ, ಇದು ಚಿತ್ತೂರಿನ ಸ್ವಾಭಿಮಾನದ ಪ್ರಶ್ನೆಯೂ ಹೌದು. ರಾಣಿಯನ್ನು ಖಿಲಜಿಗೆ ಒಪ್ಪಿಸುವದೆಂದರೆ, ಖಿಲಜಿಗೆ ಶರಣಾಗಿ ನೆಲಕ್ಕೆ ಮೂಗು ತಿಕ್ಕಿದಂತೆ. ಇದು ಘೋರ ಅಪಮಾನ.

ಇಂತಹ ರಾಣಾನನ್ನು ಪ್ರಜೆಗಳು ಗೌರವಿಸಲು ಸಾಧ್ಯವೆ? ಅವರ ಕಣ್ಣಿನಲ್ಲಿ ಈತ ಷಂಢನಾಗುವುದಿಲ್ಲವೆ? ತನ್ನ ಹೆಂಡತಿಯನ್ನು, ಚಿತ್ತೂರಿನ ರಾಣಿಯನ್ನು ರಕ್ಷಿಸಲಾಗದವನು ರಾಜಪಟ್ಟಕ್ಕೆ ಅಯೋಗ್ಯನು ಎಂದು ಪ್ರಜೆಗಳು ಭಾವಿಸಲಿಕ್ಕಿಲ್ಲವೆ? ಈತ ಸಿಂಹಾಸನದ ಮೇಲೆ ಉಳಿಯುವುದು ಹಾಸ್ಯಾಸ್ಪದವಾಗುವುದಿಲ್ಲವೆ?

ಎರಡನೆಯ ಆಯ್ಕೆ:
ಖಿಲಜಿಯೊಡನೆ ಮರುಹೋರಾಟಕ್ಕೆ ಸಿದ್ಧನಾಗುವುದು.
ಮೊದಲನೆಯ ಯುದ್ಧದಿಂದಾಗಿಯೇ ಚಿತ್ತೂರು ಬಸವಳಿದು ಹೋಗಿದೆ. ಎರಡನೆಯ ಯುದ್ಧಕ್ಕೆ ಸೈನಿಕರನ್ನು, ಶಸ್ತ್ರಾಸ್ತ್ರಗಳನ್ನು ಸಿದ್ಧಪಡಿಸಲು ಚಿತ್ತೂರಿಗೆ ಸಾಧ್ಯವೆ? ಜಮೀನುಗಳು ಸುಟ್ಟು ಹೋಗಿರುವದರಿಂದ, ತಿನ್ನಲು ಕೂಳಿಲ್ಲದೆ, ಅನೇಕರು ಗುಳೆ ಹೋಗಿದ್ದಾರೆ. ಅಳಿದುಳಿದ ಪ್ರಜೆಗಳನ್ನು ಒಟ್ಟುಗೂಡಿಸಿ, ಸೋಲುವುದು ಖಚಿತವಿರುವ ಎರಡನೆಯ ಹೋರಾಟವನ್ನು ಮಾಡುವುದು ಸಾಧ್ಯವೆ?
ಇದು ಹುಚ್ಚುತನ, ಇದು ಆತ್ಮಾಹುತಿ.

ರಾಣಾ ಭೀಮಸಿಂಗನ ಎದುರಿಗೆ ಕಠಿಣವಾದ ಆಯ್ಕೆಗಳಿದ್ದವು: ಹೋರಾಡಿ ಸಾಯಿ ಅಥವಾ ಬದುಕಿ ಸಾಯಿ. ರಾಣಾ ಹಾಗು ಆತನ ಪ್ರಜೆಗಳಿಗೆ ಇದರಲ್ಲಿ ಯಾವುದೇ ಇಬ್ಬಗೆ ಕಾಣಲಿಲ್ಲ. ರಾಣಾನ ಮಾನವೇ ತಮ್ಮ ಮಾನ ಎಂದು ಅವರು ಅರಿತಿದ್ದರು. ಅವರು ಹೋರಾಡಿಯೇ ಸಾಯಲು ಒಮ್ಮತದಿಂದ ಸಿದ್ಧರಾದರು.

ಖಿಲಜಿ ಮತ್ತೊಮ್ಮೆ ದಂಡೆತ್ತಿ ಬಂದ. ಚಿತ್ತೂರಿನ ಹಳ್ಳಿಗಳು ಹಾಗು ಜಮೀನುಗಳು ಮತ್ತೊಮ್ಮೆ ಬೆಂಕಿಯ ಪಾಲಾದವು. ಅಲ್ಲೆಲ್ಲ ಕೈಗೆ ಸಿಕ್ಕ ಪದ್ಮಿನಿಯರು ತುರುಕರ ಪಾಲಾದರು. ಚಿತ್ತೂರ ಯೋಧರು ಸಾಯಲು ಸಿದ್ಧರಾಗಿಯೇ ಹೋರಾಡಿದರು, ಸತ್ತರು.

ಅರಮನೆಯ ಹೆಣ್ಣುಮಕ್ಕಳ ಆಯ್ಕೆಯೂ ಸ್ಪಷ್ಟವಾಗಿತ್ತು: ಜೋಹಾರ್!

ಇತಿಹಾಸವು ಭೀಮಸಿಂಗನ ಹಾಗು ಆತನ ಪ್ರಜೆಗಳ ಮಾನಸಿಕ ತಳಮಳವನ್ನು ಹೇಳುವುದಿಲ್ಲ; ರಾಣಿ ಪದ್ಮಿನಿಯ ಹಾಗು ಇತರ ಸ್ತ್ರೀಯರ ತಳಮಳವನ್ನು ಹೇಳುವುದಿಲ್ಲ. ಸಾಯುತ್ತಿರುವವರ ಹಾಗು ಸುಟ್ಟುಹೋಗುತ್ತಿರುವವರ ವೇದನೆಯನ್ನು ಹೇಳುವುದಿಲ್ಲ. ಬುದ್ಧಿಜೀವಿಗಳ ಮಟ್ಟಿಗಂತೂ ಇದು ಅಪರಾಧ!

ನಮ್ಮ ಚಿತ್ರನಿರ್ಮಾಪಕರೂ ಸಹ ಇವ್ಯಾವುದನ್ನೂ ಹೇಳುವುದಿಲ್ಲ.   ಗಲ್ಲಾಪೆಟ್ಟಿಗೆಯೇ ಅವರ ಏಕಮೇವ ಆಯ್ಕೆ. ಹೀಗಾಗಿ ರಾಣಿ ಪದ್ಮಿನಿಗೆ ಇದು ಎರಡನೆಯ ಜೋಹಾರ್!

ಇತಿಹಾಸದ ತಳಮಳವನ್ನು ಕೇಳುವವರು ಯಾರು?

4 comments:

prabhamani nagaraja said...

ವಾಸ್ತವ ಇತಿಹಾಸದ ನೈಜ ಪುಟಗಳನ್ನು ತೆರೆದಿಟ್ಟಿದ್ದೀರಿ ಸರ್. ನಿಮ್ಮ ಉತ್ತಮ ಬರಹದಿಂದ ಬಹಳ ವಿಷಯಗಳು ತಿಳಿದವು.

sunaath said...

ಧನ್ಯವಾದಗಳು, ಮೇಡಮ್!

ಚಿತ್ರಾ said...

ಅಂದು ಒಬ್ಬ ಖಿಲ್ಜಿ ಇದ್ದ. ಅವನು ತಮ್ಮ ರಾಣಿಯ ಮೇಲೆ ಕಣ್ಣು ಹಾಕಿದ್ದನ್ನು ಸಹಿಸಲಾಗದೆ , ಆಕೆಯ ಗೌರವ ತಮ್ಮ ಗೌರವವೂ ಹೌದು ಎಂದು ತಿಳಿದು ಹೋರಾಡಿ ಚಿತ್ತೂರಿನ ಜನತೆ / ಯೋಧರು ತಮ್ಮ ಜೀವವನ್ನೇ ಬಲಿ ಕೊಟ್ಟರು ! ಆದರೆ ಇಂದು ಪ್ರತಿನಿತ್ಯ ಒಬ್ಬ ಖಿಲ್ಜಿ ಹುಟ್ಟುತ್ತಿದ್ದಾನೆ, ಹೆಣ್ಣು ಎಂದಾದರೆ ಸಾಕು ಅದು ತನಗೆ ಬೇಕು ಎಂದು ಅದೆಷ್ಟೋ ಪದ್ಮಿನಿಯರ ಸಮ್ಮಾನಗಳನ್ನು ಹೊಸಕಿ ಹಾಕುತ್ತಿದ್ದಾನೆ , ಆದರೆ ಆಕೆಯ ಗೌರವಕ್ಕಾಗಿ ಹೋರಾಡುವ ಒಬ್ಬರೂ ಕಾಣುತ್ತಿಲ್ಲ ! ಪದ್ಮಿನಿಯರಿಗೆ ಸದಾ " ಜೋಹಾರ್ ' ಮಾತ್ರವೇ ಗತಿಯೇ? ಎಂಬ ಪ್ರಶ್ನೆ ಕಾಡುತ್ತದೆ .

sunaath said...

ಹೌದು, ಚಿತ್ರಾ ಮೇಡಮ್. ಇದು ವಾಸ್ತವ. ನಮ್ಮ ಸಮಾಜವು ಅದೆಂತು ಸುಧಾರಿಸೀತು ಎನ್ನುವುದು ತಿಳಿಯದಾಗಿದೆ.