ಇತ್ತೀಚೆಗೆ ಬಿಡುಗಡೆಯಾದ, ಸಿಂಧು ರಾವ್ ಅವರ ‘ಸರ್ವಋತು ಬಂದರು’
ಕಥಾಸಂಕಲನದಲ್ಲಿ ೧೮ ಕವನಗಳಿವೆ. ಅರೇ ಇದೇನು, ಕಥಾಸಂಕಲನದಲ್ಲಿ ಕವನಗಳೇ ಎಂದು ಬೆಚ್ಚದಿರಿ! ಸಿಂಧು
ಅವರ ಶೈಲಿಯೇ ಹಾಗೆ. ಕಥೆಗಳು ನಿಮಗೆ ಭಾವಪೂರ್ಣವಾದ ಕಾವ್ಯದ ಅನುಭವವನ್ನು ಕೊಡುತ್ತವೆ. ಇಲ್ಲಿರುವ
ಕಥೆಗಳು, ಪಾತ್ರಗಳ ಭಾವಲೋಕವನ್ನು ಅನ್ವೇಷಿಸುವ, ಭಾವನೆಗಳನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸುವ ಸ್ತ್ರೀಲೋಕದ
ಕಥೆಗಳಾಗಿವೆ. ಹಾಗೆಂದುಕೊಂಡು ಇಲ್ಲಿಯ ಕಥೆಗಳು ಸ್ತ್ರೀಪ್ರಾಧಾನ್ಯ ಕಥೆಗಳು ಎನ್ನುವ ಪೂರ್ವಗ್ರಹಣೆಗೆ ಒಳಗಾಗದಿರಿ. ಇಲ್ಲಿ ಸ್ತ್ರೀಪಾತ್ರಗಳಿಗಿರುವಷ್ಟೇ
ಪ್ರಾಧಾನ್ಯವು ಪುರುಷ ಪಾತ್ರಗಳಿಗೂ ಇದೆ, ಆದರೆ ಇಲ್ಲಿಯ ಸ್ತ್ರೀಪುರುಷರ ನಡುವಿನ ಸಂಬಂಧವು ಕೇವಲ ಪ್ರೇಮಸಂಬಂಧವಲ್ಲ;
ಇದು ಅಜ್ಜ, ಮೊಮ್ಮಗಳ ಪ್ರೀತಿಯ ಸಂಬಂಧವಾಗಿರಬಹುದು, ಗೆಳೆಯ-ಗೆಳತಿಯರ ಸ್ನೇಹಬಂಧವಾಗಿರಲೂಬಹುದು. ಮುಖ್ಯವಾಗಿ
ಇಲ್ಲಿರುವ ಪಾತ್ರಗಳ ಚಿತ್ರಣವು ಸ್ತ್ರೀಯ ಕಣ್ಣಿನ ಮೂಲಕ, ಸ್ತ್ರೀಯ ಹೃದಯದ ಮೂಲಕ ಮೂಡಿದ್ದಾಗಿದೆ.
ಕನ್ನಡದಲ್ಲಿ ರಮ್ಯ ಸಾಹಿತ್ಯದ ಕ್ಷಿತಿಜದ ಮೇಲೆ, ಲೇಖಕಿಯರು
ಉದಯಿಸಿದಾಗ, ಹುಟ್ಟಿದ ಸಾಹಿತ್ಯವು ಎಂತಹದು? ಇಲ್ಲಿಯ ನಾಯಕನು ಧೀರೋದಾತ್ತ ಪುರುಷಸಿಂಹನು; ನಾಯಕಿಯು
ಅವನ ಗುಣಗಳಿಗೆ ನಿಬ್ಬೆರಗಾಗಿ ಅವನಿಗೆ ತನ್ನ ಮನಸ್ಸನ್ನು ಅರ್ಪಿಸಿಕೊಳ್ಳುವವಳು. (ಪಾಶ್ಚಾತ್ಯ ಸಾಹಿತ್ಯವೂ
ಇಂತಹದೇ. ಉದಾಹರಣೆಗೆ ಹೆಸರಾಂತ ಲೇಖಕಿ Daphne du Maurier ಅವರ The Frenchman’s Creek ಮೊದಲಾದ
ಕಾದಂಬರಿಗಳನ್ನು ನೋಡಬಹುದು.) ತನ್ನಂತರದ ಬೆಳವಣಿಗೆಯಲ್ಲಿ ಕನ್ನಡ ಲೇಖಕಿಯರು (ಉದಾಹರಣೆ: ತ್ರಿವೇಣಿ)
ಸ್ತ್ರೀಗೂ ಒಂದು ಮನಸ್ಸಿದೆ, ಆಸೆ, ಆಕಾಂಕ್ಷೆಗಳಿವೆ ಎನ್ನುವುದನ್ನು ಗುರುತಿಸಿದರು. ಆದರೂ ಸಹ ಈ ಸಾಹಿತ್ಯವು
ಆ ಕಾಲದ ವಾಸ್ತವತೆಗೆ ಅನುಗುಣವಾಗಿ, ನಾಯಕಿಯನ್ನು ಪುರುಷಾನುಚರಿಯ ರೂಪದಲ್ಲೇ ಚಿತ್ರಿಸುತ್ತಿತ್ತು.
ಈಗಲಾದರೋ ನಾವು ಇಪ್ಪತ್ತೆರಡನೆಯ ಶತಮಾನದಲ್ಲಿದ್ದೇವೆ. ಹೆಣ್ಣುಮಕ್ಕಳ ಸ್ಥಿತಿಗತಿಗಳಲ್ಲಿ ಸಾಕಷ್ಟು
ಬದಲಾವಣೆಗಳಾಗಿವೆ. ಈ ಶತಮಾನದ ವಾಸ್ತವತೆಯನ್ನು ಹಾಗು ಆಧುನಿಕ ಮನೋಧರ್ಮವನ್ನು ಸಿಂಧು ಅವರ ಸಾಹಿತ್ಯವು
ಪ್ರತಿಬಿಂಬಿಸುತ್ತದೆ. ಇಲ್ಲಿ ಸ್ತ್ರೀ ಹಾಗು ಪುರುಷರಲ್ಲಿ sub ordinate ಹಾಗು super
ordinate ಎನ್ನುವ ಭೇದವಿಲ್ಲ. ವಿಶೇಷತಃ, ದಂಪತಿಗಳು ಎಂದರೆ co ordinates ಮಾತ್ರ. ಈ ಒಂದು ಭಾವನೆಯನ್ನು
ಅಂತರಂಗೀಕರಿಸಿಕೊಂಡ ಕಥೆಯೆಂದರೆ: ‘ಜಗ್ಗಿ—ರಮ್ಮೀ’. ಜಗ್ಗಿ ಹಾಗು ರಮ್ಮೀ ಇವರ ಬಗೆಗೆ ನಾನು ಇಲ್ಲಿ
ಹೆಚ್ಚಿಗೆ ಹೇಳಬಯಸುವುದಿಲ್ಲ. ಹಾಗೆ ಮಾಡಿದರೆ, ರಸಗುಲ್ಲಾದಂತಹ ಈ ಸವಿಯಾದ ಕಥೆಯನ್ನು ನಾನು ಹೇಳಿದಂತೆಯೇ ಆದೀತು. ಅದು ಗುಟ್ಟಾಗಿಯೇ ಇರಲಿ. ಆದರೂ
ಕಥೆಯಲ್ಲಿಯೇ ಬಳಸಿದ, ಬೇಂದ್ರೆಯವರ ‘ನಾನು ಬಡವಿ’ ಕವನದ ಒಂದು ಅರ್ಥಪೂರ್ಣ ಸಾಲನ್ನು ಇಲ್ಲಿ ಉದ್ಧರಿಸುವ
ಆಸೆಯನ್ನು ತಡೆಯಲಾರೆ: ‘ತೋಳುಗಳಿಗೆ ತೋಳುಬಂದಿ, ಕೆನ್ನೆ ತುಂಬ ಮುತ್ತು’.
‘ಜಗ್ಗಿ—ರಮ್ಮೀ’ ಇದು ಒಂದು ಸ್ವಾರಸ್ಯಕರವಾದ ಸರಸ ಕಥೆ. ಇದು
ಒಲವಿನ ಸಹಜ ಬೆಳವಣಿಗೆಯ ಕಥೆ. ಹಾಗೆಂದು ಇದು ಕೇವಲ ಪ್ರೇಮಕಥೆ ಎಂದು ಭಾವಿಸದಿರಿ. ಕಥೆಯ ಕೊನೆಯ ಪರಿಚ್ಛೇದವನ್ನು
ಓದಿದಾಗ, ಇದು ಜಾಣದಂಪತಿಗಳ ಕಥೆಯೂ ಹೌದು ಎನ್ನುವುದು ಅರಿವಾಗುತ್ತದೆ. ಇಲ್ಲಿಯ ಕಥೆಗಳಲ್ಲಿ ಸಹಸಾ
ಹುಡುಗಿಯೇ ಜಾಣೆಯಾಗಿರುವುದು, ಈ ಕಥಾಸಂಕಲನದ ವೈಶಿಷ್ಟ್ಯ ಎನ್ನಬಹುದು! ‘ಮಿಂಚು’ ಈ ಧೋರಣೆಯ ಉತ್ತಮ ಉದಾಹರಣೆಯಾಗಿದೆ. ಈ ಕಥೆಯಲ್ಲಿ,
ಕಥೆಯ ಭಾಗವಾಗಿ ಬರುವ ಒಂದು ಕವನವು, ಸಿಂಧು ಅವರ ಕಾವ್ಯಪ್ರತಿಭೆಯ ಉದಾಹರಣೆಯಾಗಿದೆ.
ಪ್ರೀತಿ ಹಾಗು ಪ್ರಣಯ ಇವು ತರುಣರಿಗೆ ಮಾತ್ರ ಮೀಸಲಾದ ವಿಷಯವಲ್ಲ. ವೃದ್ಧ ದಂಪತಿಗಳ ಮಾಗಿದ ದಾಂಪತ್ಯದ ಕಥೆಯನ್ನು ಓದಬೇಕಾದರೆ,
‘ನಗೆ ಹೂವಿನ ಬಳ್ಳಿ’ ಯನ್ನು ಓದಬೇಕು. ಈ ಕಥೆಯು ಮುದ್ದಾಗಿರಲು ಈ ದಂಪತಿಗಳಿಗಿಂತ ಹೆಚ್ಚಾಗಿ, ಓರ್ವ
ಹದಿಹರೆಯದ ಹುಡುಗಿಯು ಕಾರಣಳಾಗಿದ್ದಾಳೆ. ಓದಿ ನೋಡಿ; ನಿಮ್ಮ ಮುಖದ ಮೇಲೆ, ಮೊದಲಿನಿಂದ ಕೊನೆಯವರೆಗೂ
‘ನಗೆ ಹೂವಿನ ಬಳ್ಳಿ’ ಅರಳದೇ ಇರದು!
ಗಂಡುಹೆಣ್ಣಿನ ನಡುವಿನ ಪ್ರೇಮವೆಂದರೆ ಕೇವಲ ದಾಂಪತ್ಯ ಪ್ರೇಮ
ಮಾತ್ರವೆ? ಇವರು ಗೆಳೆಯ ಗೆಳತಿಯರೂ ಆಗಿ ಇರಬಹುದಷ್ಟೆ? ‘ಕಥೆಯೊಂದು ಪೂರ್ತಿಯಾಗಿದ್ದು’, ‘ಚೈ—ವೈ’
ಕಥೆಗಳು ಇಂತಹ ಗೆಳೆತನದ ಚಿತ್ರಗಳಾಗಿವೆ. ನಮ್ಮ ಭಾರತೀಯ ಸಮಾಜವನ್ನು ನಾವು ಆಧುನಿಕ ಸಮಾಜ ಎಂದು ಭಾವಿಸಿಕೊಂಡರೂ
ಸಹ, ಗಂಡು ಹೆಣ್ಣಿನ ಸಮಾನತೆ ನಮ್ಮ ಸಮಾಜದಲ್ಲಿ ಇನ್ನೂ ಬಂದಿಲ್ಲ. ಅವಳು ಕೆಲಸ ಮಾಡುತ್ತಿರುವ ಹೆಂಡತಿಯಾಗಿರಲಿ
(ಸರ್ವಋತು ಬಂದರು), ಅಥವಾ ಮನೆಯಲ್ಲಿರುವ ಗೃಹಿಣಿಯಾಗಿರಲಿ( ಸಂ ಸಾರ), ಅವಳ ಮೇಲೆ ಗಂಡನ ಯಜಮಾನಿಕೆ
ಇನ್ನೂ ನಿಂತಿಲ್ಲ. ಹಾಗೆಂದು ನಮ್ಮ ಸಮಾಜದಲ್ಲಿ ಒಳ್ಳೆಯ ಗಂಡಸರು ಇಲ್ಲವೆಂದಲ್ಲ! ‘ಸುಲೋಚನೆ’ ಇದಕ್ಕೊಂದು
ಅತ್ಯುತ್ತಮ ಉದಾಹರಣೆ. ಇದರಂತೆಯೇ ‘ಮರು-ಕೊಳ್ಳಿ’ಯ ನಾಯಕಿಯು ನಿರ್ಲಜ್ಜ ತಂದೆಯ ಮಗಳಾದರೂ ಸಹ, ಜೀವಕರುಣಿಯಾದ
ಗಂಡನನ್ನು ಪಡೆದವಳು.
ಇಲ್ಲಿಯ ಕಥೆಗಳು ಕೇವಲ ಪ್ರೇಮದ ಕಥೆಗಳಲ್ಲ. ‘ಸ್ನಾನ’, ‘ಎಲ್ಲ
ನೋಟಗಳಾಚೆ’, ‘ಮೊದಲ ದಿನ ಮೌನ’ ಇವು ಮನಃಪರಿವರ್ತನೆಯ ಕಥೆಗಳಾದರೆ, ‘ಸಖೀಗೀತ’, ‘ಹಾಡುಹಕ್ಕಿ’, ‘ಕಾಗದದ
ದೋಣಿ’ ಕಥೆಗಳು ಬದುಕಿನ ದರ್ಶನವನ್ನು ಮಾಡಿಸುತ್ತವೆ. ‘ಚಿಲ್ಲರೆ ವಿಷಯ’ವಂತೂ ಆಧುನಿಕ ಔದ್ಯಮಿಕ ಬಕಾಸುರನ
ಕಥೆಯಾಗಿದೆ. ಅನಿವಾರ್ಯವಾಗಿ ಈ ಬಕಾಸುರನಿಗೆ ಶರಣು ಹೋಗುವವರ, ಬಲಿಯಾಗುವವರ ಕಥೆ ಇದಾಗಿದೆ. ಇಲ್ಲಿಯೂ
ಸಹ ಕಥೆಯು ಸ್ತ್ರೀಯ ಸುತ್ತಲೇ ಹೆಣೆದ ಕಥೆಯಾಗಿದೆ.
ಹೀಗೆ, ವಿವಿಧ ಪರಿಸರಗಳ ಕಥೆಗಳನ್ನು ಹೇಳುತ್ತಿರುವಂತೆಯೇ,
ಸಿಂಧು ಅವರು ವಿವಿಧ ಮನೋಧರ್ಮದ ಪಾತ್ರಗಳನ್ನು ಇಲ್ಲಿ ಚಿತ್ರಿಸಿದ್ದಾರೆ. ಸಾಧಾರಣವಾಗಿ ಇಲ್ಲಿಯ ಸ್ತ್ರೀಯರು
ಆಧುನಿಕ ಮನೋಧರ್ಮದವರು. ಹಾಗಿದ್ದರೂ ಸಹ ಇವರಲ್ಲಿ ಅನೇಕರು ಗಂಡಿನ ದೌರ್ಜನ್ಯಕ್ಕೆ ಒಳಗಾದವರೇ ಮತ್ತು
ಈ ದೌರ್ಜನ್ಯವನ್ನು ದಿಟ್ಟತನದಿಂದ ಎದುರಿಸಿ, ಬದುಕು ಕಟ್ಟಿಕೊಂಡವರೇ! ಆದರೆ ಸದ್ಯದ ವಾಸ್ತವವಂತೂ ಹೆಣ್ಣಿಗೆ
ವಿರೋಧವಾಗಿಯೇ ಇದೆ. ಉದಾಹರಣೆಗೆಂದು, ಈ ಕೆಲವು ಉದ್ಧರಣೆಗಳನ್ನು ನೋಡಿರಿ:
(೧)
ಸಂ ಸಾರ:
12 comments:
ಗುರುಗಳೇ ಅಡಿಗೆಯ ಮಾಡಿದ ತಿನಿಸನ್ನು ಸವಿದದಲ್ಲದೆ ಅದರ ಗುಣ ವಿಶೇಷಣಗಳನ್ನು ಹೊಗಳಿದಾಗ / ವಿವರಿಸಿದಾಗ ಅಡಿಗೆಯವನ ಮೊಗದಲ್ಲಿ ಸಿಗುವ/ಕಾಣುವ ಸಂತಸಕ್ಕೆ ಅಳತೆ ಗೋಲಿಲ್ಲ..
ಇಡೀ ಪುಸ್ತಕದ ಹೂರಣವನ್ನು ಕೊಟ್ಟಾಗೂ ಮಾಡಿ ಕೊಡದಲೇ ಇದ್ದೆ ಎನ್ನುವಂತಹ ಭಾವದಲ್ಲಿ ವಿವರಿಸಿ ಹರಡಿರುವ ಪರಿ ಸೂಪರ್.. ನಿಮ್ಮ ಲೇಖನ ಓದಿದ ಮೇಲೆ.. ಅರೇ ಲೇಖಕಿಯ ಪುಸ್ತಕವನ್ನು ಕೊಂಡು ಓದಿಯೇ ಬಿಡೋಣ ಅನ್ನುವಷ್ಟು ಕಾತುರತೆ ಮೂಡುತ್ತದೆ
ಸುಂದರ ಪರಿಚಯ.. ಸುಂದರ ಲೇಖನ ಗುರುಗಳೇ
ಧನ್ಯವಾದಗಳು, ಶ್ರೀಕಾಂತರೇ. ಸಿಂಧು ಅವರ ಕೃತಿಯನ್ನು ನೀವು ಮೆಚ್ಚದೆ ಇರಲಾರಿರಿ!
ಪ್ರಿಯ ಕಾಕಾ,
ಸಿಂಧು ನನ್ನ ನಲ್ಮೆಯ ಗೆಳತಿ ಎಂಬ ಕಾರಣಕ್ಕೆ ಹೇಳುತ್ತಿಲ್ಲ. ನಿಜಕ್ಕೂ ಅವಳ ಕಥೆಗಳೆಂದರೆ ನನಗೆ ಬಲು ಇಷ್ಟ. ಸರ್ವಋತು ಬಂದರು ನಿಮ್ಮ ಈ ಅಮೋಘ ವಿಮರ್ಶೆಯಿಂದಾಗಿ ಪುಟಕ್ಕಿಟ್ಟ ಚಿನ್ನದಂತಾಗಿದೆ. ಕಥಾಸಂಕಲನದ ಆತ್ಮವನ್ನೇ ಹಿಂಡಿ ಉಣಬಡಿಸಿಬಿಟ್ಟಿದ್ದೀರಾ! :) ಹತ್ತು ಮಾತು ಹೇಳುವ ಜಾಗದಲ್ಲಿ ಅವಳ ಒಂದೇ ಒಂದು ಸಾಲು ನೂರು ಭಾವವನ್ನು ಪ್ರಕಟಿಸುತ್ತವೆ. ಚಿಕ್ಕ ಕಥೆಗಳೊಳಗೆ ಗಾಢ ಭಾವಗ ಭಾರ ಮೂಟೆಯಷ್ಟು! ನೀವು ಮೇಲೆ ಉದ್ಧರಿಸಿರುವ ಎಲ್ಲಾ ಸಾಲುಗಳನ್ನೂ ನಾನೂ ಮೆಚ್ಚಿದ್ದರೂ ಬಯಲಿಗಿಟ್ಟ ಹಣತೆಯಂತಹ ಬದುಕನ್ನ ಕಾಲ ಎಷ್ಟು ಉಪಾಯವಾಗಿ ಕಾದು ಎತ್ತಿ ಮನಸ್ಸಿನೊಳಗಿಟ್ಟು ನೆನಪಿನ ಪ್ರಿಸರ್ವೆಂಟಲ್ಲಿ ಅದ್ದಿ ಜೋಪಾನ ಮಾಡುತ್ತದೆ… ಈ ಸಾಲು ಮತ್ತೂ ಹೆಚ್ಚು ಇಷ್ಟವಾಗಿದ್ದು. ತುಂಬಾ ಧನ್ಯವಾದಗಳು ಕಾಕಾ ಈ ಸುಂದರ ಬರಹಕ್ಕಾಗಿ :)
@ಸಿಂಧು ರಾವ್,
ಅಭಿನಂದನೆಗಳು ಪ್ರಿಯ ಗೆಳತಿ :)
ಕಾಕಾ... ಪದಗಳಿಲ್ಲ..
ಶರಣು... ♥♥
ನಿಜ, ಪದಗಳಿಲ್ಲ. ಮ್ಯಾನುಫ್ಯಾಕ್ಚರಿಂಗ್ ಭಾಷೇಲಿ 'ಪ್ರಿಸಿಷನ್ 100' ಅಂತೀವಿ. ಯಾವುದೇ ಒಂದು ಪ್ರಾಡಕ್ಟ್ ನ ಎಲ್ಲಾ ಆಯಾಮಗಳನ್ನೂ, ಇಂಚಿಂಚನ್ನೂ ಸ್ಥೂಲವಾಗಿ ಅವಲೋಕನ ಮಾಡಿ ಅದರ ಸಂಪೂರ್ಣ ಒಳಹೊರಗನ್ನು ಒಟ್ಟೊಟ್ಟಿಗೆ ಕಟ್ಟಿಕೊಡುವ 'ಸಾರಾಂಶ' ಅದು. ಒಂದು ಪರಿಪೂರ್ಣ ಬುತ್ತಿಗಂಟಿದ್ದ ಹಾಗೆ. ಅದೇ ರೀತಿ ಈ ನಿಮ್ಮ ಲೇಖನ ಸರ್ವ ಋತು ಬಂದರಿನ ಪ್ರಿಸಿಷನ್ 100 ಅನ್ನಬಹುದು.
ಪ್ರೀತಿಯ ಸುನಾಥ ಕಾಕಾ,
ಕಥೆ ಬರೆವಾಗ ಬಿಡು ಬೀಸಾಗಿ ಬರೆದೆ. ಅವು ಒಲಿದಂತೆ ಬರೆದೆ. ನನ್ನ ನೆನಪುಗಳು, ನೋಡಿದ ವ್ಯಕ್ತಿಗಳು, ಸನ್ನಿವೇಶಗಳು, ಓದಿದ ಕಥನ ಕಾವ್ಯಗಳು ಎಲ್ಲವೂ ಜತೆಗಿದ್ದವು.
ಆದರೆ ಇದನ್ನು (ಕಥೆಗಳನ್ನು) ಓದಿ ಎಂದು ಹೇಳಲು ಸ್ವಲ್ಪ ಸಂಕೋಚವೇ ನನಗೆ ಈಗಲೂ. ಬ್ಲಾಗಲ್ಲಿ ಹಾಕುತ್ತಿದ್ದಾಗ ಓದಿದವರ ಕಮೆಂಟುಗಳು ನನ್ನ ವಿಶ್ವಾಸಕ್ಕೆ ಇಂಬಾದರೂ ಓದಿ ಎಂದು ಹೇಳಲು ಆಗಲೂ ಈಗಲೂ ನನಗೆ ಸಂಕೋಚವೇ.
ಹೀಗಿರಲು ಇವುಗಳನ್ನು ಪ್ರಕಟಿಸುತ್ತೇವೆ ಅಂತ ಅಂಕಿತದ ಪ್ರಕಾಶ್-ಪ್ರಭಾ ದಂಪತಿಗಳು ಮತ್ತು ಸಂಪಾದಕ ಜೋಗಿಯವರು ಹೇಳಿದಾಗ, ಅಯ್ಯೋ ನನ್ನ ಕಥೆಗಳಾ ಎಂದು ಹಿಂಜರಿದೆ.
ನಮಗೆ ಇಷ್ಟವಾಗಿದೆ, ಆರಿಸಿರೋದು ನಾವು, ಪ್ರಕಟಿಸಲು ಕೊಡುವುದು ಮಾತ್ರ ನಿಮ್ ಕೆಲಸ ಅಂತ ಅವರು ಹೇಳಿದಾಗ ಅದನ್ನು ಪಾಲಿಸಿಯೂ ಬಿಡುಗಡೆಯ ಹಿಂದಿನ ದಿನದವರೆಗೂ ಹಿಂಜರಿಕೆಯಲ್ಲೆ ಇದ್ದೆ.
ಅದೇಕೆ ಹಾಗೆ ಎಂದರೆ ನನಗೆ ಉತ್ತರಿಸಲೂ ಬರೋಲ್ಲ. ಬರೀಲೆ ಬೇಕು ಅಂತ ನಂಗನ್ನಿಸಿದ್ದು ನಿಜ. ಓದಿ ಅಂತ ಹೇಳಲು ಬಾಯಿ ಬರದೆ ಇದ್ದದ್ದೂ ನಿಜ.
ಇದಕ್ಕೆಲ್ಲ ನನ್ನ ಬಾಲ್ಯದ ಹಿಂಜರಿಕೆ, ಎಂದೋ ಬಾಯೆತ್ತಿದಾಗ ಎದುರಾದ ಅವಮಾನ ಕಾರಣ ಇರಬಹುದು. ನನಗೆ ಈಗ ಸ್ಪಷ್ಟವಿಲ್ಲ. ಅಥವಾ ಮಧ್ಯದಲ್ಲಿ ತಿರುವು ತೆಗೆದುಕೊಂಡ ನನ್ನ ಬದುಕಿನ ದಾರಿ ನನ್ನ ಅನಿಸಿಕೆಗಳ, ಆಶೆಗಳ ಅಥೆಂಟಿಸಿಟಿಯನ್ನೇ ಹೆದರಿಸಿದ್ದೂ ಇರಬಹುದು. ನನ್ನ ಮನೆ, ಕೆಲಸ, ಹವ್ಯಾಸ, ಗುಂಪು ಎಲ್ಲ ಕಡೆಯೂ ಒಂದು ಹೆಜ್ಜೆ ಹಿಂದೆಯೇ ನಾನು. ನನ್ನ ಅಭಿಪ್ರಾಯಗಳು ಖಡಕ್ಕಾಗಿರಬಹುದು. ಆದರೆ ಕೇಳಿ ನನ್ ಮಾತು, ಓದಿ ಇದು ಅಂತ ಹೇಳಲು ಹೊರಡುವ ಮೊದಲು ದಾಸರು ಮತ್ತು ಶರಣರು ತಲೆ ಮೇಲೆ ಕೈ ಎಳೆದು ಬಿಡ್ತಾರೆ ಅಂತ ಕಾಣತ್ತೆ. ಅದಕ್ಕೆ ಕವಿತೆ ಮತ್ತು ಕಥೆಗಳು ನನ್ನ ಮೊದಲ ಅಭಿವ್ಯಕ್ತಿ. ಮಾತು ಆಮೇಲೆ.
ಆದರೆ ಸುನಾಥ ಕಾಕಾ ನೀವು ನನ್ನ ಬ್ಲಾಗನ್ನು ಓದಿ ಕಮೆಂಟು ಮಾಡುವುದರಿಂದ ನನಗಾದ ದೊಡ್ಡ ಲಾಭವೆಂದರೆ ನಿಮ್ಮ ನಿರ್ವ್ಯಾಜ ಅಂತಃಕರಣದ ಎಂಡೋರ್ಸ್ ಮೆಂಟು. ನೀವು ಓದಿ "ಸರಿ ಸಿಂಧೂ" ಎಂದರೆ ನನಗೆ ದೊಡ್ಡ ಸಮಾಧಾನ. ಅಂತದ್ದರಲ್ಲಿ ನೀವು ನನ್ನ ಪುಸ್ತಕ ಓದಿ ಬರೆದಿದ್ದನ್ನು ಓದಿ ನಾನು ಮೂಕಳಾಗಿದ್ದೇನೆ. ಇದರ ಬಗ್ಗೆ ಯಾವ ಮಾತೂ ಹೆಚ್ಚು ಮತ್ತು ಕಡಿಮೆ.
ನನ್ನ ಕಥೆಗಳ ಅಂತರಂಗ ಒಂದು ಹೆಣ್ಣು. ನನ್ನದಲ್ಲದ, ಅಥವಾ ನನ್ನ ಒಳ ಹೋಗದ ಯಾವ ಅನುಭವವನ್ನೂ ನಾನು ಹೇಳಲು ಪ್ರಯತ್ನಿಸಿಲ್ಲ. ಹಾಗಂತ ಕಥೆಗಳ್ಯಾವುದೂ ನನ್ನವಲ್ಲ. ಆದರೆ ಅವರೆಲ್ಲ ನಾನು ಬಂದ ದಾರಿಯುದ್ದಕ್ಕೂ ಇದ್ದವರು. ಒಳಹೊಕ್ಕವರು. ಅವರ ಅಸಹಾಯಕತೆ, ದೈನ್ಯತೆ, ಸಿಟ್ಟು, ಹತಾಶೆ, ಪ್ರೀತಿ, ಅಕ್ಕರೆ, ತುಂಟತನ, ತಮಾಷೆ, ಗಾಢ ಪ್ರೇಮ, ತಾಯ್ತನ, ಕಳೆದುಕೊಳ್ಳುವಿಕೆ, ನಿರ್ವಾತ, ಭ್ರಮ ನಿರಸನ ನನ್ನವೂ ಹೌದು...ಅದೆಲ್ಲದರ ಮಧ್ಯೆ ಅವರವರೇ ತೋರಿಕೊಟ್ಟ ಭರವಸೆ ಶಕ್ತಿ ನನ್ನವೂ ಹೌದು. ನನ್ನ ಕಥೆಗಳ ಮೂಲ ಆಶಯ ಜತೆಪಯಣ - ಅದು ಹಂಬಲವಿರಬಹುದು, ನಿಜವಿರಬಹುದು, ಕನಸಿರಬಹುದು, ಕೈಗೂಡದ ಪ್ರಯತ್ನವಿರಬಹುದು ಎಲ್ಲದರ ಆಶೆ, ಆಶಯ ಜತೆಪಯಣ. ಎಲ್ಲರ ಜೊತೆಗೆ ಎಲ್ಲರೊಂದಿಗೆ.. ಅದರಲ್ಲಿ ಹೆಚ್ಚು ಕಮ್ಮಿ ಇಲ್ಲ. ಮೇಲು ಕೀಳು ಇಲ್ಲ. ಅದನ್ನ ಗುರುತಿಸಿದ್ದೀರಿ. ಇನ್ನು ಮಾತನಾಡಿದರೆ ನಿಮ್ಮ ಸೊಗಸಾದ ಲೇಖನವನ್ನು ಹದಗೆಡಿಸಿದ ಹಾಗಾಗುತ್ತೆ. ಯಾವುದಕ್ಕೆ ಕೃತಜ್ಞತೆ ಹೇಳಲಿ, ಹೇಗೆ ಹೇಳಲಿ. ಈ ಮಮತೆಗೆ ಕೃತಜ್ಞತೆಯೂ ಸಣ್ಣದೆ.
ಪ್ರೀತಿಯಿಂದ,
ಬಿಗಿದಪ್ಪುಗೆಗಳೊಡನೆ,
ಸಿಂಧು.
ತೇಜಸ್ವಿನಿ, ಮಾಲಿನಿ, ಪ್ರವೀಣ ಹಾಗು ಸಿಂಧು,
ಒಂದು ಮುದ್ದಾದ ಕೂಸಿಗೆ, ಮುದ್ದಾಗಿದೆ ಎಂದು ಎಷ್ಟು ಹೇಳಿದರೂ, ಅದು ಕೂಸಿನ ಮುದ್ದುತನಕ್ಕೆ ಸರಿಯಾದೀತೆ? ಸಿಂಧು ಅವರ ಕಥೆಗಳು ನನ್ನ ಮನಸ್ಸಿಗೆ ಕೊಟ್ಟ ಸುಖವೇ, ನನ್ನ ಲೇಖನದಲ್ಲಿ ಮೈದಾಳಿದೆ.ಈ ಕಥೆಗಳನ್ನು ಓದಿ ನೀವೂ ಸಂತೋಷ ಪಟ್ಟಿದ್ದೀರಿ.ಆದುದರಿಂದ ನಾನು ಹೇಳಬಹುದಾದದ್ದು ಇಷ್ಟೇ:
‘ಸಹಮೋದಂ ಕರವಾವಹೈ’!
ಕಾಕಾ ಕೂಸು ಮುದ್ದಾಗಿರೋದು ನಮಗೆ ಕಂಡರೂ, ಅದರ ಸ್ನಿಗ್ಧ ನಗು, ಚೆಲುವು ಎಲ್ಲವನ್ನು ಬಿಡಿ ಬಿಡಿಯಾಗಿ ಬಿಡಿಸಿ ತೋರಿ ಮತ್ತಷ್ಟು ಅದರ ಅಂದವನ್ನು ಕಣ್ಣಿಗೆ ಕಟ್ಟಿಕೊಟ್ಟಿದ್ದೀರಿ ಅಷ್ಟೇ :) ಆಹಾ.. ‘ಸಹಮೋದಂ ಕರವಾವಹೈ!’ <3
ತೇಜಸ್ವಿನಿ, ನಿಮ್ಮೆದುರಿಗೆ ಮಾತಿನಲ್ಲಿ ಸೋಲುವುದೂ ಸಹ, ಈ ಕಾಕಾನಿಗೆ ಸುಖದಾಯಕವೇ ಆಗಿದೆ!
ಕಥಾ ಸಂಕಲನ ಕೊಂಡು ಓದುವೆ ಸಾರ್, ಮತ್ತೆ ಹಿಂದಿರುಗಿವೆ...
ಪ್ರೇರೇಪಿಸಿದ್ದಕ್ಕಾಗಿ ಅನಂತ ವಂದನೆಗಳು.
ಧನ್ಯವಾದಗಳು, ಬದರಿಯವರೆ. ನಿಮ್ಮ blogನಲ್ಲಿ ಇತ್ತೀಚೆಗೆ ಏನೂ ಬರುತ್ತಿಲ್ಲವಲ್ಲ?
ನಾನು ಮುಂಚಿನಿಂದಲೂ ಸಿಂಧು ಬ್ಲಾಗಿನ ಅಭಿಮಾನಿ, ಕಥೆ ಅನ್ನೋದು ಒಳಮನಸಿಗೆ ತಟ್ಟಬೇಕು, ಕಾಡಬೇಕು, ಅದರಲ್ಲಿ ಯಾವುದೋ ಪಾತ್ರ ನಾನಾಗಿ ಇಡೀ ಕಥೆಯನ್ನು ಅನುಭವಿಸಬೇಕು ಅಂದರೆ ಸಿಂಧುವಿನ ಈ ಪುಸ್ತಕ ಓದಬೇಕು.
ನಾನೂ ಓದಿದೆ, ಮನ ತಣಿಯದೆ,ನನ್ನ ಬಳಗದ ಎಲ್ಲರಿಗೂ ಓದಿಸಿದೆ. ಆಗಾಗ ಮೆಲುಕು ಹಾಕುವೆ,ಕೆಲವೊಮ್ಮೆ ಪ್ರತಿಕ್ರಿಯೆ ನೀಡುವಾಗ ಅರರೆ ಸಿಂಧುವಿನ ಕಥೆಯ ಪಾತ್ರದ ಹಾಗೆ ಆಡುತ್ತಿದ್ದೇನೆ ಅಂತ ಅಂದುಕೊಳ್ಳುವುದು ಉಂಟು.
ಇವೆಲ್ಲ ಕಥೆಗಳು ಕವನಕ್ಕಿಂತ ಏನೇನೂ ಕಮ್ಮಿ ಅಲ್ಲ ಕಾಕಾ
ನಿಮ್ಮ ಈ ಬರಹ ಆ ಪುಸ್ತಕಕ್ಕೆ ಇಟ್ಟ ಕಿರೀಟ, ನಿಮಗೆ ತುಂಬು ಪ್ರೀತಿ..
Post a Comment