ಕಾದಂಬರಿ ಎನ್ನುವ ಸಾಹಿತ್ಯಪ್ರಕಾರವು ಕನ್ನಡದಲ್ಲಿ ಪ್ರಾರಂಭವಾಗಿ ಒಂದು ಶತಮಾನವೇ ದಾಟಿ ಹೋಗಿರಬಹುದು. ಐತಿಹಾಸಿಕ ಹಾಗು ಸಾಮಾಜಿಕ ಕಾದಂಬರಿಗಳ ಅನುವಾದದಿಂದ ಪ್ರಾರಂಭವಾದ ಕನ್ನಡ ಕಾದಂಬರಿ ಸಾಹಿತ್ಯವು,
ಆಬಳಿಕ ಕೌಟಂಬಿಕ ಹಾಗು ಸಾಮಾಜಿಕ ಕಾದಂಬರಿಗಳನ್ನು ಸಮೃದ್ಧವಾಗಿ ನೀಡಿತು. ಅನೇಕ ಓದುಗರು ಭಾವಿಸುವಂತೆ, ಕನ್ನಡದ ಮೊದಲ ನವ್ಯ ಕಾದಂಬರಿ ಎಂದು ಶಾಂತಿನಾಥ ದೇಸಾಯಿಯವರು ಬರೆದ ‘ಮುಕ್ತಿ’ಯನ್ನು ಹೆಸರಿಸಬಹುದು. ಅದರಂತೆ, ತ್ರಿವೇಣಿಯವರ ಕಾದಂಬರಿಗಳನ್ನು ಮೊದಲ ಸ್ತ್ರೀಪ್ರಧಾನ ಹಾಗು ಮನೋವೈಜ್ಞಾನಿಕ ಕಾದಂಬರಿಗಳು ಎಂದೂ ಕರೆಯಬಹುದು.
ಮತ್ತೋರ್ವ ಪ್ರಮುಖ ಕಾದಂಬರಿಕಾರರಾದ ಬಸವರಾಜ ಕಟ್ಟೀಮನಿಯವರ ಕಾದಂಬರಿಗಳನ್ನು ಕನ್ನಡದ ಮೊದಲ thematic ಕಾದಂಬರಿಗಳು ಎಂದು ಗುರುತಿಸುವುದು ಅವಶ್ಯವಿದೆ. ಆದರೆ ನಮ್ಮ ವಿಮರ್ಶಕರ ಕಣ್ತಪ್ಪಿನಿಂದಲೋ, ಉದಾಸೀನತೆಯಿಂದಲೋ ಕಟ್ಟೀಮನಿಯವರಿಗೆ ಸಲ್ಲಬೇಕಾದ ಈ ಗೌರವವು ಅವರಿಗೆ ದೊರೆತಿಲ್ಲ.
ಸಲಿಂಗಕಾಮದ ಭೂಮಿಕೆಯನ್ನು ಒಳಗೊಂಡ, ಉಮೇಶ ದೇಸಾಯಿಯವರು ಬರೆದ ಕಿರುಕಾದಂಬರಿ ‘ಭಿನ್ನ’ವು ಮೇಲಿನ ಎಲ್ಲ ವರ್ಗೀಕರಣಗಳನ್ನು ಒಳಗೊಂಡ ಒಂದು ಅದ್ಭುತ, ಆಧುನಿಕ ಕಾದಂಬರಿಯಾಗಿದೆ. ಹಾಗಿದ್ದರೂ ಸಹ ಈ ಕಾದಂಬರಿಯು ಈ ಎಲ್ಲ ವರ್ಗಗಳ ಕಾದಂಬರಿಗಳಿಗಿಂತ ಭಿನ್ನವಾಗಿಯೂ ಇದೆ. ಅದು
ಹೀಗೆ:
ಸಲಿಂಗಕಾಮಿಗಳ ಮನೋಸ್ಥಿತಿ, ಮನೋವೇದನೆ ಹಾಗು ಸಾಮಾಜಿಕ ಬವಣೆಗಳನ್ನು ತೋರಿಸುವ ಚಲನಚಿತ್ರ (ಉದಾ: ಅಲೀಘರ), ಹಾಗು ಕಥೆಗಳು (ಉದಾ: ವಸುಧೇಂದ್ರರ ಕಥೆಗಳು) ಬಂದಿವೆ. ಆದರೆ ಉಮೇಶ ದೇಸಾಯಿಯವರ ‘ಭಿನ್ನ’ ಕಾದಂಬರಿಯು ಮೂಲತಃ ಇವೆಲ್ಲವುಗಳಿಗಿಂತ ಮೂಲವಸ್ತುವಿನಲ್ಲಿ ಭಿನ್ನವಾದ ಕೃತಿಯಾಗಿದೆ.
ಸಲಿಂಗಕಾಮವು ಸಲಿಂಗಕಾಮಿಯಲ್ಲಿ ಸಹಜಭಾವವಾಗಿ ಇರುತ್ತದೆ, ಅಂದರೆ ಓರ್ವ ಗಂಡಸಿನಲ್ಲಿ ಹೆಣ್-ಭಾವವಾಗಿ ಹಾಗು ಓರ್ವ ಹೆಣ್ಣಿನಲ್ಲಿ ಪುರುಷಭಾವವಾಗಿ ಹುಟ್ಟಿನಲ್ಲಿಯೇ ಇರುತ್ತದೆ ಎನ್ನುವ ಅಭಿಪ್ರಾಯವನ್ನು ಈವರೆಗಿನ ಕೃತಿಗಳು ಹೇಳುತ್ತಿವೆ. ಆದರೆ ದೇಸಾಯಿಯವರ ‘ಭಿನ್ನ’ವು ಈ ಅಭಿಪ್ರಾಯಕ್ಕಿಂತ ಭಿನ್ನವಾದ ಮತ್ತೊಂದು ಆಯಾಮವನ್ನು ತೋರಿಸುತ್ತಿದೆ.
ಓರ್ವ ವ್ಯಕ್ತಿಯ ಕೌಟಂಬಿಕ ಅಥವಾ ಸಾಮಾಜಿಕ ಪರಿಸರವು ಆ ವ್ಯಕ್ತಿಯನ್ನು ಸಲಿಂಗಕಾಮಿಯನ್ನಾಗಿ ಪರಿವರ್ತಿಸಬಲ್ಲದು ಎನ್ನುವ ವಾಸ್ತವತೆಯನ್ನು ಈ ಕೃತಿಯಲ್ಲಿ ಪ್ರತಿಪಾದಿಸಲಾಗಿದೆ. ಈ ಪರಿಸ್ಥಿತಿಯು ಮೂರು ತರಹದ ಸಂದರ್ಭಗಳನ್ನು ಆಧರಿಸಿರಬಹುದು:
(೧) ಕೌಟಂಬಿಕ
(೨) ಸಾಮಾಜಿಕ
(೩) ಮನೋವೈಜ್ಞಾನಿಕ
ದೇಸಾಯಿಯವರ ‘ಭಿನ್ನ’ದಲ್ಲಿ ಈ ಮೂರೂ ಸ್ಥಿತಿಗಳ ವಿಶ್ಲೇಷಣೆಯಿದೆ. ದೇಸಾಯಿಯವರು ಸಲಿಂಗಕಾಮದ ಬಗೆಗೆ ಒಂದು ಪ್ರಬುದ್ಧ ಪ್ರಬಂಧವನ್ನೇ ಬರೆಯಬಹುದಾಗಿತ್ತು.
ಆದರೆ ಅವರು ಕಾದಂಬರಿಯ ಮಾಧ್ಯಮವನ್ನು ಅವಲಂಬಿಸಿದ್ದರಿಂದ ಕನ್ನಡ ಓದುಗರಿಗೆ ಒಂದು ಅತ್ಯುತ್ತಮ ಸಾಹಿತ್ಯಕೃತಿ ದೊರೆತಿದೆ!
ಈ ಸಂದರ್ಭಗಳನ್ನು ಚಿತ್ರಿಸಲು ದೇಸಾಯಿಯವರು ಮುಖ್ಯವಾಗಿ ಮೂರು ಪಾತ್ರಗಳನ್ನು ಬಳಸಿದ್ದಾರೆ:
ಸುಮತಿ,
ರಜನಿ ಹಾಗು ಮೋನಿಕಾ. ಈ ಮೂರು ಮುಖ್ಯ ಪಾತ್ರಗಳ ಜೊತೆಗೆ ಮೂರು ಉಪಪಾತ್ರಗಳಿವೆ: ಸುಗಂಧಿ ಚೌಹಾಣ, ಕಿಟ್ಟಾ ಮಾವುಶಿ ಹಾಗು ನ್ಯಾನ್ಸಿ.
ಕೌಟಂಬಿಕ ಸಂದರ್ಭದಲ್ಲಿ, ಅತೃಪ್ತಕಾಮನೆಯ ಹಿರಿಯಳಿಗೆ ಬಲಿಯಾಗುವ ಕಿರಿಯ ಹುಡುಗಿಯ ಚಿತ್ರಣವಿದೆ. ತನ್ನ ತಂದೆಯ ಅತಿ ಕಾಮುಕತೆಯಿಂದಾಗಿ ಆ ಹುಡುಗಿಗೆ ಗಂಡಸರ ಬಗೆಗೆ ಹುಟ್ಟುವ ಅಸಹ್ಯ; ಪುರುಷನಿಗೆ ತೆರೆದುಕೊಳ್ಳಲು ಅವಳಿಗೆ ಸಾಧ್ಯವಾಗದಿರುವುದು;
ತನ್ನ ದೇಹಕ್ಕೆ ತಣಿವು ಕೊಡಲು ಅವಳು ಮತ್ತೊಬ್ಬ ಗೆಳತಿಯನ್ನು ಆಶ್ರಯಿಸುವುದು ಇವುಗಳ ವರ್ಣನೆಯಿದೆ. ಇವೆಲ್ಲವುಗಳಿಗೆ ದೇಸಾಯಿಯವರು ಸಮರ್ಪಕವಾದ ಮನೋವೈಜ್ಞಾನಿಕ ಆಧಾರಗಳನ್ನು ಅವಲಂಬಿಸಿದ್ದಾರೆ.
ಸಾಮಾಜಿಕ ಸಂದರ್ಭದಲ್ಲಿಯೂ ಸಹ, ಓರ್ವ ಶಾಲಾಬಾಲಕಿಯು
ಪುಂಡ ಹುಡುಗರಿಂದ ತನ್ನನ್ನು ರಕ್ಷಿಸಿಕೊಳ್ಳಲು ಓರ್ವ ಬಲಿಷ್ಠ, ಧೈರ್ಯಶಾಲಿ ಹುಡುಗಿಯ ನೆರವನ್ನು ಪಡೆದು, ಅವಳ ಸಲಿಂಗಕಾಮಿ ಪ್ರವೃತ್ತಿಗೆ ತಾತ್ಕಾಲಿಕವಾಗಿಯಾದರೂ ಬಲಿಯಾಗುವಂತಹ ಸನ್ನಿವೇಶವಿದೆ. ಇದರಂತೆ ಮತ್ತೋರ್ವ ಹುಡುಗಿಯು ಕನ್ಯಾಶ್ರಮದಲ್ಲಿ ಆಶ್ರಯ ಪಡೆದು, ಅಲ್ಲಿಯ ಕೆಲವು ಸನ್ಯಾಸಿನಿಯರಿಂದ ಸಲಿಂಗರತಿಗೆ ಅನಿವಾರ್ಯವಾಗಿ ಒಳಗಾಗಬೇಕಾಗುವ ಚಿತ್ರವಿದೆ.
ಈ ಎಲ್ಲ ಸನ್ನಿವೇಶಗಳ ಚಿತ್ರಣದ ಮೂಲಕ ದೇಸಾಯಿಯವರು ಒಂದು ಮಾತನ್ನು ಸ್ಪಷ್ಟಪಡಿಸುತ್ತಿದ್ದಾರೆ. ಸಲಿಂಗಕಾಮವು ಅನೇಕ ಸಂದರ್ಭಗಳಲ್ಲಿ ಪರಿಸ್ಥಿತಿಯ ಒತ್ತಡದಲ್ಲಿ ರೂಪಿತವಾಗಿರಬಹುದು. ಆದುದರಿಂದ ಸಲಿಂಗಕಾಮಭಾವವು ಯಾವುದೇ ವ್ಯಕ್ತಿಯಲ್ಲಿ ಸಹಜಭಾವವಾಗಿ ಇರುತ್ತದೆ ಎಂದು ಹೇಳುವದು ಸರಿಯಾಗಲಿಕ್ಕಿಲ್ಲ. ಪ್ರಸಿದ್ಧ ಮನೋವಿಜ್ಞಾನಿ ಫ್ರಾಯ್ಡ್ ಹೇಳುವ ಪ್ರಕಾರ ಚಿಕ್ಕ ಮಕ್ಕಳಲ್ಲಿ ‘ಅಂಗಸುಖ’ ಎನ್ನುವ ಭಾವವೊಂದಿರುತ್ತದೆ. ವಯೋಪ್ರಬುದ್ಧತೆಯಲ್ಲಿ ಅಂಗಸುಖ ಭಾವವು ಪ್ರತಿಲಿಂಗಕಾಮನೆಯಾಗಿ ಸ್ಥಿರವಾಗಿ ನಿಲ್ಲಬೇಕು. ಆದರೆ ಕೌಟಂಬಿಕ, ಸಾಮಾಜಿಕ ಅಥವಾ ಮನೋವೈಜ್ಞಾನಿಕ ಕಾರಣಗಳಿದ್ದಾಗ,
ಇದು ಸಲಿಂಗಕಾಮನೆಯಾಗಿ ಬದಲಾಗಬಹುದು.
ವಿದೇಶಗಳಲ್ಲಿ ಸಲಿಂಗಕಾಮನೆಗೆ ವೈಜ್ಞಾನಿಕ ಚಿಕಿತ್ಸೆಯನ್ನು ಕೊಡುವಂತಹ ಚಿಕಿತ್ಸಾಲಯಗಳಿವೆ. ನಮ್ಮಲ್ಲಿ ಅಂತಹ ಅನುಕೂಲತೆಗಳು ಇದ್ದಂತಿಲ್ಲ. ಅದರ ಬದಲಾಗಿ ಈ ಭಾವನೆಯನ್ನು ಶಾಸನಬದ್ಧ ಮಾಡುವ ಮೂಲಕ, ಸಲಿಂಗಕಾಮವನ್ನು ಪ್ರೋತ್ಸಾಹಿಸುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ!
‘ಭಿನ್ನ’ ಕಾದಂಬರಿಯ ಪಾತ್ರಗಳ ಸ್ಥೂಲ ರೂಪವನ್ನು
ಹೇಳಿದ ಮಾತ್ರಕ್ಕೆ, ಈ ಕಾದಂಬರಿಯ ಬಗೆಗೆ ಏನೂ ಹೇಳಿದಂತಾಗುವದಿಲ್ಲ.
ಈ ಕಾದಂಬರಿಯ ‘ಭಿನ್ನ’ ಎನ್ನುವ ಶೀರ್ಷಿಕೆ ಸಾರ್ಥಕವಾಗಲು ಅನೇಕ ಕಾರಣಗಳಿವೆ. ಮೊದಲನೆಯದಾಗಿ, ಪ್ರಸಕ್ತ ಸಂದರ್ಭದಲ್ಲಿ, ವಿವಾದಾತ್ಮಕವಾಗಿರುವ ಒಂದು ವಸ್ತುವಿನ ಬಗೆಗೆ ದೇಸಾಯಿಯವರು ತಮ್ಮ ಕೃತಿಯನ್ನು ರಚಿಸಿದ್ದಾರೆ.
ಎರಡನೆಯದಾಗಿ ಸಲಿಂಗಕಾಮಿಗಳ ಬಗೆಗಿನ ಸರ್ವೇಸಾಮಾನ್ಯ ಅಭಿಪ್ರಾಯವನ್ನು (’--- ದೇಹ ಮಾತ್ರ ಹುಡುಗನದು, ಒಳಗಿರುವುದು ಹುಡುಗಿಯ ಸ್ವಭಾವ—’) ಬದಿಗಿರಿಸಿ,
ದೇಸಾಯಿಯವರು ಪರಿಸ್ಥಿತಿಯ ಪ್ರಭಾವವನ್ನು ತೋರಿಸುವ ಕೃತಿಯನ್ನು ರಚಿಸಿದ್ದಾರೆ. ಮೂರನೆಯದಾಗಿ, ಈ ಕೃತಿಯು ಒಂದು ಪ್ರಬಂಧವಾಗದೇ, ಒಂದು ಉತ್ತಮ ಕಾದಂಬರಿಯಾಗಿದೆ. ಮೇಲೆ ನೋಡಿದಂತಹ ಎಲ್ಲ ಪಾತ್ರಗಳು, ‘ಭಿನ್ನ’ ಕಾದಂಬರಿಯ ನೇಯ್ಗೆಯಲ್ಲಿ ಹಾಸುಹೊಕ್ಕಿನಂತೆ ಅನ್ಯೋನ್ಯವಾಗಿ ಕೂಡಿಕೊಂಡಿರುವುದೇ ಇದಕ್ಕೆ ಕಾರಣವಾಗಿದೆ.
ಈ ಕಾದಂಬರಿಯು ಪ್ರಾರಂಭವಾಗುವುದು ಸುಮತಿ ಎನ್ನುವ ಮಧ್ಯವಯಸ್ಕಳ ನಿರೂಪಣೆಯೊಂದಿಗೆ. ತನ್ನಂತರ ರಜನಿಯ ಸ್ವನಿರೂಪಣೆ. ಆಬಳಿಕ ಮೋನಿಕಾಳ ನಿರೂಪಣೆ. ಕೊನೆಯಲ್ಲಿ ಮತ್ತೆ ರಜನಿಯ ನಿರೂಪಣೆ. ಇದು ಕಾದಂಬರಿಯ ತಂತ್ರವಾಗಿದೆ.
ತಂತ್ರ ಎಂದ ಮಾತ್ರಕ್ಕೆ ಇದೊಂದು ಕೃತಕ ಉಪಕರಣ ಎಂದು ಭಾವಿಸಬಾರದು. ಕಾದಂಬರಿಯಲ್ಲಿ ಹಾಸುಹೊಕ್ಕುಗಳು ಎಷ್ಟು ಮುಖ್ಯವೋ, ಹೆಣಿಗೆಯೂ ಅಷ್ಟೇ ಮುಖ್ಯವಾಗಿದೆ. ಕಾದಂಬರಿಕಾರನು ತನ್ನ ಭಾವನೆಗಳನ್ನು, ವಿಚಾರಗಳನ್ನು ಸಮರ್ಪಕವಾಗಿ ಮೂಡಿಸಲು, ಕೃತಿಸಹಜವಾದ ಹೆಣಿಗೆಯನ್ನೇ ಅವಲಂಬಿಸಬೇಕಾಗುತ್ತದೆ. ದೇಸಾಯರು ಈ ವಿಷಯದಲ್ಲಿ ಸಮರ್ಪಕವಾದ ಹೆಣಿಗೆಯನ್ನು ಆರಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲ, ಕೃತಿಯನ್ನು ಸುಸಂಬದ್ಧವಾಗಿ ಹೆಣೆದಿದ್ದಾರೆ ಎಂದೂ ಹೇಳಲೇ ಬೇಕು.
‘ಭಿನ್ನ’ ಕಾದಂಬರಿಯು ಕೇವಲ ಸಲಿಂಗಕಾಮದ ಕೃತಿಯಾಗಿ ಉಳಿದಿಲ್ಲ.
ಪ್ರಾಸಂಗಿಕವಾಗಿ ಇಲ್ಲಿ ಅತ್ತೆ-ಸೊಸೆಯ ಸಂಬಂಧ, ಕೆಲವು ಗಂಡಂದಿರ ಅತಿಕಾಮುಕತನ, ಸರ್ವಾಧಿಕಾರಿಕೆ,
ಹೆಂಡಂದಿರ ಅಸಹಾಯಕತೆ, ವೈವಾಹಿಕ ಅತ್ಯಾಚಾರ, ಹೆಣ್ಣು ಅನುಭವಿಸುವ ಅವಮಾನ ಇವೆಲ್ಲವೂ ಈ ಕೃತಿಯಲ್ಲಿ ಬಂದಿವೆ. ಒಂದು ಕಾಲದ ಹೆಣ್ಣುಮಕ್ಕಳ ಬವಣೆಯನ್ನು ಕಿಟ್ಟಾ ಮಾವುಶಿ ಎನ್ನುವ ಪಾತ್ರವು ಕಠೋರ ಪದಗಳಲ್ಲಿ ಬಣ್ಣಿಸುವುದು ಹೀಗೆ: “ಹಿಂಗನ, ಇದು ಹೆಂಗಸಿನ ಜನ್ಮ…ಗಂಡ ಹೇಳಿದ ಅಡಗಿ ಮಾಡಬೇಕು, ಅವಾ ಹೇಳಿಧಂಗ ಕೇಳಬೇಕು, ಅವಗ ಬೇಕಾತು ಅಂದ್ರ ಅವನ ಮುಂದ ಬತ್ತಲಾಗಿ ಕಾಲು ಕಿಸಿದು ತಯಾರಾಗಬೇಕು…ಪ್ರತಿ ಹೆಂಗಸಿನ ಕರ್ಮ ಇದ ನೋಡು..ಗಂಡಸಿನ ಮುಂದ ಕಾಲು ಕಿಸಿದು ಅವ ಮಾಡಿದ್ದನ್ನು ಮಾಡಿಸಿಗೊಳ್ಳೋದು_“
ದೇಸಾಯರು ತಮ್ಮ ಹೃದಯಕ್ಕೆ ಹತ್ತಿರವಾದ,
ತಾವು ಆಳವಾಗಿ ಬಲ್ಲಂತಹ ಪರಿಸರದಲ್ಲಿಯೇ ಕೃತಿಸೃಷ್ಟಿಯನ್ನು ಮಾಡುತ್ತಾರೆ. ಹೀಗಾಗಿ ಈ ಕೃತಿಯ ಬಹುಭಾಗವು ಹುಬ್ಬಳ್ಳಿ, ಧಾರವಾಡ, ಹಾಗು ಮುಂಬಯಿ ಪಟ್ಟಣಗಳಲ್ಲಿ ಜರಗುತ್ತದೆ. ಇಲ್ಲಿಯ ಪಾತ್ರಗಳು ಮಾತನಾಡುವ ಭಾಷೆ ಹಾಗು ಲೇಖಕರು ನಿರೂಪಣೆಗೆ ಬಳಸುವ ಭಾಷೆ ಅಚ್ಚ ಪ್ರಾದೇಶಿಕ ಭಾಷೆ. ಅಲ್ಲದೆ ಇದು ಒಂದು ಕಾಲಘಟ್ಟವನ್ನು ಹಾಗು ಒಂದು ಸಮುದಾಯವನ್ನು ನೆನಪಿಸುವ ಭಾಷೆ.
ಉದಾಹರಣೆಗೆ, ಈ ಪರಿಚ್ಛೇದವನ್ನು ನೋಡಬಹುದು:
‘ಅವರು ಹೋದ ಮೇಲೆ ಅವ್ವ ವೆಂಕಪ್ಪನಿಗೆ ದೀಪ ಹಚ್ಚಿ ಬರುವುದಾಗಿ
ಹೋದಳು. ಅಪ್ಪ ಮುಂದಿನ ಎರಡು ತಿಂಗಳಿನಲ್ಲಿ ಮದುವೆಯ ಮುಹೂರ್ತ ಯಾವವು ಅಂತ
ತಿಳಿದು ಬರಲು ಜೋಶಿಯವರ ಮನೆಗೆ ಹೋದ.’
ಕೆಲವೊಂದು ಹಳೆಯ ಪದಗಳು ಈ ತಲೆಮಾರಿನವರಿಗೆ ತಿಳಿಯದಿದ್ದರೂ ಸಹ, ಅರ್ಥ ಆಗಲು ಯಾವುದೇ ತೊಂದರೆಯಾಗುವುದಿಲ್ಲ.
ಉದಾ: ದಾಡಿ ಮಾಡಿಕೊಳ್ಳುವುದು (=ಶೇವ್ ಮಾಡಿಕೊಳ್ಳುವುದು).
ಆದುದರಿಂದ ಈ ಭಾಷೆಯು ಎಲ್ಲ ಓದುಗರಿಗೂ ತಿಳಿಯುವಂತಹ ಸರಳ ಭಾಷೆಯೇ ಆಗಿದೆ. ಸರಳವಾದರೂ ರಂಜಕವಾದ ಭಾಷೆಯು ದೇಸಾಯಿಯವರ ವೈಶಿಷ್ಟ್ಯವಾಗಿದೆ.
ಹದಿಹರೆಯದ ಹುಡುಗಿಯರು ಬಳಸುವ ಭಾಷೆಯು ಕಚಗುಳಿಯನ್ನು ಇಡುವ ರೀತಿಯನ್ನು ನೋಡಿರಿ:
“ನೀ ಬಹಳ
ಹಲ್ಕಟ್ ಇದ್ದೀ ನೋಡು, ಎಲ್ಲಿ ಏನು
ಅಂತ ನೋಡದ ಮಾಡಿದಿ.”
“ಕ್ಯಾ ಯಾರ
ನಾಕು ದಿನಾ ಆಗಿತ್ತು… ನೀ ನೋಡಿದ್ರ ನಖರಾ ಮಾಡತಿ.”
“ನೀ ಬರಾಂಗಿಲ್ಲ ಅಂತ ಗೊತ್ತಾತು, ನಂಗೂ ಬ್ಯಾಸರ ಆತು, ಅದಕ ಬಂದೆ.”
ಇಲ್ಲಿ ಸ್ವಗತವೂ ಸಹ ಓದುಗನನ್ನು ಸೆರೆ ಹಿಡಿಯುವ ಭಾಷೆಯಾಗಿಯೇ ಬರುತ್ತದೆ.
ಉದಾಹರಣೆಗೆ ರಜನಿಯ ಸ್ವಗತವನ್ನು ನೋಡಬಹುದು: ‘ನನ್ನ ತರಹದವರು ಪುಸ್ತಕದ
ಮುಚ್ಚಿಟ್ಟ ಪುಟಗಳಾಗಿಯೇ ಉಳಿದು ಬಿಡುತ್ತೇವೆಯೆ?’
‘ಭಿನ್ನ’ ಕೃತಿಯಲ್ಲಿ ಸಲಿಂಗರತಿಯ ವಿವರಗಳೂ ಬಂದಿವೆ. ಹಾಗೆಂದು ಇದು
ಪೋರ್ನೋ ಅಲ್ಲ, ಆಗಿಲ್ಲ. ಓರ್ವ ಹುಡುಗಿಯು ಸಲಿಂಗರತಿಗೆ ಒಳಗಾಗುವ ಹಾಗು ಮರಳಾಗುವ ಸಂದರ್ಭಗಳನ್ನು ನಿರೂಪಿಸಲು ಈ ವರ್ಣನೆಗಳು ಅವಶ್ಯವಾಗಿವೆ. ಆದುದರಿಂದ ಈ ವರ್ಣನೆಗಳನ್ನು ಕಥಾನಕದ ಸಾವಯವ ಅಂಗಗಳು ಎಂದು ಕರೆಯಬಹುದು.
ಮನೋವಿಜ್ಞಾನದ ಮೇಲೆ ಆಧಾರಿತವಾದ ‘ಭಿನ್ನ’ ಕಾದಂಬರಿಯ ಪಾತ್ರಗಳಿಗೆ ದೇಸಾಯಿಯವರು
ಪ್ರಾರಂಭದಿಂದ ಕೊನೆಯವರೆಗೂ ಅವರವರ ಸ್ವಭಾವಕ್ಕೆ ಸಹಜವಾದ ಘಟನೆಗಳನ್ನೇ ತೋರಿಸಿದ್ದಾರೆ. ಉದಾಹರಣೆಗೆ
ಈ ಕೃತಿಯ ಒಂದು ಪಾತ್ರವು ಪುಕ್ಕಲು ಪಾತ್ರ. ತಾನು ಏನು ಮಾಡಬೇಕು ಎನ್ನುವ ತೊಳಲಾಟದಲ್ಲಿಯೇ ಬಳಲುವ
ಹಾಗು ಯಾವುದೇ ನಿರ್ಣಯವನ್ನು ಸ್ವಂತವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲದ ಒಂದು ಪಾತ್ರವು ಕೊನೆಗೂ
ಒಂದು ಉತ್ತಮ ಅವಕಾಶವನ್ನು ಕಳೆದುಕೊಳ್ಳುವ ಪಾತ್ರವಾಗಿಯೇ ಉಳಿಯುತ್ತಾಳೆ. ಬಾಲ್ಯದಲ್ಲಿಯೇ ಪರಿಸ್ಥಿತಿಯ
ಕೈಗೊಂಬೆಯಾಗಿ ಬೆಳೆದ ಹಾಗು ಆದುದರಿಂದ ಈ ಸ್ವಭಾವಕ್ಕೆ ವಿರುದ್ಧ ಸ್ವಭಾವನ್ನು ರೂಢಿಸಿಕೊಂಡಿರುವ ಮತ್ತೊಂದು
ಪಾತ್ರವು ಆ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಾಳೆ. ಸಂಕಷ್ಟದಲ್ಲಿರುವವರು ಬದುಕಬೇಕಾದ ಕಠೋರ
ಸತ್ಯವನ್ನು ಈ ಪಾತ್ರದ ಮೂಲಕ ದೇಸಾಯಿಯವರು ಸಮರ್ಪಕವಾಗಿ ನಿರೂಪಿಸಿದ್ದಾರೆ.
ಉಮೇಶ ದೇಸಾಯಿಯವರ ಕಾದಂಬರಿ ‘ಭಿನ್ನ’ವನ್ನು ಸುಮಾರು ೫೦ ವರ್ಷಗಳ ಹಿಂದೆ
ಬಂದ ಮತ್ತೊಬ್ಬ ದೇಸಾಯರ (ಶಾಂತಿನಾಥ ದೇಸಾಯಿ) ಪ್ರಖ್ಯಾತ ಕಾದಂಬರಿ ‘ಮುಕ್ತಿ’ಯ ಜೊತೆಗೆ ಹೋಲಿಸುವುದು
ಅಗತ್ಯವಾಗಿದೆ. ‘ಮುಕ್ತಿ’ಯು ಆ ಕಾಲದಲ್ಲಿ ಆಧುನಿಕ ಕಥಾನಕವನ್ನು ಹೊಂದಿತ್ತು. ‘ಭಿನ್ನ’ವು ಈ ಕಾಲದ
ವಿವಾದಾತ್ಮಕ ವಿಷಯವನ್ನು ವಿಶ್ಲೇಷಿಸುತ್ತಿದೆ. ‘ಮುಕ್ತಿ’ಯಲ್ಲಿ ಬರುವ ಮುಖ್ಯ ಪಾತ್ರಗಳು ಕೇವಲ ಮೂರು.
‘ಭಿನ್ನ’ ಕಾದಂಬರಿಗಳಲ್ಲಿ ಬರುವ ಮುಖ್ಯ ಪಾತ್ರಗಳೂ ಸಹ ಕೇವಲ ಮೂರು. ಶಾಂತಿನಾಥ ದೇಸಾಯಿಯವರ ಭಾಷೆಯೂ
ಸಹ ಧಾರವಾಡದ ಪ್ರಾದೇಶಿಕ ಭಾಷೆ. ಉಮೇಶರ ಭಾಷೆಯೂ ಸಹ ಧಾರವಾಡ-ಹುಬ್ಬಳ್ಳಿಯ ಭಾಷೆ. ಶಾಂತಿನಾಥರ ಪರಿಸರ
ಧಾರವಾಡ ಹಾಗು ಮುಂಬಯಿ. ಉಮೇಶರ ಪರಿಸರವೂ ಸಹ ಹುಬ್ಬಳ್ಳಿ,ಧಾರವಾಡ ಹಾಗು ಮುಂಬಯಿ. ಆದರೆ ‘ಮುಕ್ತಿ’ಯಲ್ಲಿ ನಾಯಕನು ತನ್ನ ತೊಳಲಾಟದಿಂದ ಮುಕ್ತಿಯನ್ನು
ಪಡೆಯುತ್ತಾನೆ. ‘ಭಿನ್ನ’ದಲ್ಲಿ ಪ್ರಮುಖ ಪಾತ್ರಕ್ಕೆ ಮುಕ್ತಿ ದೊರೆಯುವದಿಲ್ಲ!
ಇತ್ತೀಚಿನ ಪ್ರಮುಖ ಲೇಖಕರ ಕಥಾನಕಗಳು ಕ್ಲೀಶೆಗಳಾಗುತ್ತಿರುವ ಸಂದರ್ಭದಲ್ಲಿ,
ಉಮೇಶ ದೇಸಾಯಿಯವರ ‘ಭಿನ್ನ’ವು ತನ್ನ ಭಿನ್ನತೆಯಿಂದಾಗಿ, ಕನ್ನಡ ಸಾಹಿತ್ಯದ ಮಹತ್ವದ ಕೃತಿಯಾಗಿದೆ.
6 comments:
ಈ ರೀತಿಯ ವಿಷಯ ತುಂಬಾ ಮಡಿವಂತಿಕೆಯಿಂದ ಕೂಡಿದ ವಸ್ತುವಾಗಿರುತ್ತದೆ.. ನಮ್ಮ ದೇಶ ಇನ್ನೂ ಮುಕ್ತ ಮುಕ್ತ ಮುಕ್ತ ಆಗಿಲ್ಲ.. ಸಾವಿರಾರು ವರ್ಷಗಳ ಸಂಸ್ಕಾರ, ಪರಂಪರೆ ನಮ್ಮನ್ನು ಅದೇ ಹಾದಿಯಲ್ಲಿ ನೆಡೆಸಿಕೊಳ್ಳುತ್ತಾ ಸಾಗಿದೆ..
ಈ ರೀತಿಯ ಸಂಕೀರ್ಣತೆಯಿಂದ ಕೂಡಿದ ವಸ್ತುವನ್ನು ಪ್ರಸ್ತುತ ಪಡಿಸುವುದು ಹಗ್ಗದ ಮೇಲೆ ನೆಡೆದಂತೆ.. ಒಂದೂ ಚೂರು ಹೆಜ್ಜೆ ವ್ಯತ್ಯಾಸವಾದರೂ ಅಶ್ಲೀಲತೆಯ ಕಡೆಗೆ ವಾಲುವ ಮತ್ತು ಗರಿ ಗರಿ ದೋಸೆಯಂತೆ ಬಿಕರಿಯಾಗುವ ಸಾಹಿತ್ಯವಾಗಿಬಿಡುವ ಪ್ರಮಾದ ಇರುತ್ತದೆ..
ನಿಮ್ಮ ವಿಮರ್ಶೆ ಮತ್ತು ಕಾದಂಬರಿಯ ಪುಟಪುಟವನ್ನು ತೆರೆದಿಡುವ ಬರಹ.. ಈ ಅನುಮಾನವನ್ನು ಹೋಗಲಾಡಿಸುದಷ್ಟೇ ಅಲ್ಲದೆ ಎಲ್ಲರೂ ಓದಬೇಕೆನಿಸುವ ಹಂಬಲವನ್ನು ಹುಟ್ಟು ಹಾಕುತ್ತದೆ.. ಎಳೆ ಎಳೆಯಾಗಿ ಬಿಡಿಸಿ ಮೂಡಿಸಿರುವ ನಿಮ್ಮ ಬರಹ ಸುಂದರವಾಗಿದೆ ಗುರುಗಳೇ.. ಅದಕ್ಕೆ ಬೇಕಾಗಿರುವ ಉದಾಹರಣೆ.. ಹೋಲಿಕೆ.. ಎಲ್ಲವೂ ಪೂರಕವಾಗಿ ನಿಂತಿದೆ..
ಉಮೇಶ್ ದೇಸಾಯಿ ಸರ್ ಅವರಿಗೆಅಭಿನಂದನೆಗಳು .. ಹಾಗೂ ಗುರುಗಳೇ ನಿಮಗೆ ಧನ್ಯವಾದಗಳು ಸೂಪರ್ ಬರಹ ಹಂಚಿಕೊಂಡಕ್ಕೆ
ಪ್ರಿಯ ಶ್ರೀಕಾಂತರೆ,
ನಿಮ್ಮ ಸ್ಪಂದನಕ್ಕಾಗಿ ಧನ್ಯವಾದಗಳು. ದೇಸಾಯರು ಉತ್ತಮ ಕಾದಂಬರಿಯನ್ನು ಬರೆದಿದ್ದಾರೆ.ನೀವು ಹೇಳಿದಂತೆ ಇದು ಹಗ್ಗದ ಮೇಲೆ ನಡೆಯುವಂತಹ ಕಾರ್ಯ. ಇನ್ನು, ಈ ಕಾದಂಬರಿಯಲ್ಲಿ ಪೋರ್ನೋ ಇಲ್ಲ. ಆದರೆ ಪೋರ್ನೋ ಇದ್ದಂತಹ ಸಾಹಿತ್ಯ ಕೆಟ್ಟ ಸಾಹಿತ್ಯ ಆಗಿರಬೇಕಂತಿಲ್ಲ. ಬಹಳ ವರ್ಷಗಳ ಹಿಂದೆ ಪಾಟೀಲ ಪುಟ್ಟಪ್ಪನವರು ‘ಪ್ರಪಂಚ’ ಎನ್ನುವ ವಾರಪತ್ರಿಕೆಯನ್ನು ಹೊರಡಿಸುತ್ತಿದ್ದರು. ಹೀಗಾಗಿ ನಿಮಗೆ ಇದರ ಬಗೆಗೆ ಗೊತ್ತಿರಲಿಕ್ಕಿಲ್ಲ. ‘ಪ್ರಪಂಚ’ದ ಉಪಸಂಪಾದಕ ಹಾಗು all-in-all ಆದಂತಹ ಎಮ್. ಜೀವನ ಎನ್ನುವವರು ಹೊಟ್ಟೆ ತುಂಬಿಸಿಕೊಳ್ಳುವದಕ್ಕಾಗಿ ಪೋರ್ನೋ ಬರೆಯುತ್ತಿದ್ದರು. ಅವರ ಕೃತಿಗಳಿಗೆ ಒಳ್ಳೆಯ ಬೇಡಿಕೆ ಇತ್ತು. ಆದರೆ ಅವರ ಪೋರ್ನೋ ಸಾಹಿತ್ಯವು ನಿಜವಾಗಿಯೂ ಉತ್ತಮ ಸಾಹಿತ್ಯವಾಗಿತ್ತು. ಇನ್ನು ಅನೇಕ ಪಾಶ್ಚಾತ್ಯ ಲೇಖಕರ ‘free'ಸಾಹಿತ್ಯವನ್ನು ನಮ್ಮ ಬುದ್ಧಿಜೀವಿಗಳು ತಬ್ಬಿಕೊಂಡು ಕೊಂಡಾಡುತ್ತಿರುತ್ತಾರೆ! ಹಂಸಕ್ಷೀರನ್ಯಾಯದಂತೆ ನಡೆದುಕೊಳ್ಳಲು ಪ್ರಯತ್ನಿಸೋಣ!
ಹೊಸ ಮಾಹಿತಿ ಕೊಟ್ಟಿದೀರಾ ಗುರುಗಳೇ..
ಸಾಹಿತ್ಯ ಸಾಹಿತ್ಯವೇ.. ಅದು ಕೂಡ ಒಂದು ಕ್ರಿಯಾತ್ಮಕ ಸೃಷ್ಟಿಯ ಫಲ ಅದು.. . ನಿಮ್ಮ ಅಭಿಪ್ರಾಯ ಸರಿಯಾಗಿದೆ.. ಒಂದು ದೃಷ್ಟಿಯಲ್ಲಿ ನೋಡಿದರೆ ತಪ್ಪು.. ಇನ್ನೊಂದು ದೃಷ್ಟಿಯಲ್ಲಿ ನೋಡಿದರೆ ತಪ್ಪಿಲ್ಲ.. ಕಾಮನ ಬಿಲ್ಲು ಚಿತ್ರದಲ್ಲಿ ಅನಂತ್ ನಾಗ್ ರಾಜ್ ಕುಮಾರ್ ಅವರಿಗೆ ಹೇಳುವ ಮಾತು ನೆನಪಿಗೆ ಬಂತು.
ದೇಸಾಯಿಯವರ ಪುಸ್ತಕವನ್ನು ಖಂಡಿತ ಓದುವೆ ..
ಧನ್ಯವಾದಗಳು, ಶ್ರೀಕಾಂತ.
ಉತ್ತಮ ವಿಶ್ಲೇಷಣೆ. ನಮಗೆಲ್ಲ ಉಮೇಶ್ ದೇಸಾಯಿ ಅಂತಹ ಲೇಖಕರಿರುವುದೇ ತಿಳಿದಿರೋಲ್ಲ. ಇಲೆಕ್ಟ್ರಾನಿಕ್ ಆವೃತ್ತಿಯಲ್ಲಿ ,Google books ನಂತಹ ಜಾಲದಂಗಡಿಗಳಲ್ಲಿ ಪ್ರಕಟಿಸಿದರೆ ಕೊಂಡು ಓದಬಹುದು.
ಸುದರ್ಶನರೆ, ನಿಮ್ಮ ಅಭಿಪ್ರಾಯವನ್ನು ಉಮೇಶ ದೇಸಾಯರಿಗೆ ತಿಳಿಸುವೆನು.
Post a Comment