ಜಯಶ್ರೀ ದೇಶಪಾಂಡೆಯವರು ತಮ್ಮ ಕವನಸಂಕಲನವನ್ನು ‘ಯತ್ಕಿಂಚಿತ್’ (ಏನೋ ಅಷ್ಟಿಷ್ಟು) ಎಂದು ಕರೆದಿದ್ದಾರೆ. ಆದರೆ ಈ ಸಂಕಲನವು ಅನೇಕ ಸಾಹಿತ್ಯಿಕ ಗುಣಗಳಿಂದ ತಾನು ‘ಅಷ್ಟಿಷ್ಟಲ್ಲ’,
‘ಬಹಳಷ್ಟು’ ಎನ್ನುವುದನ್ನು ತೋರಿಸಿಕೊಡುತ್ತದೆ.
ಓದುಗನ ಮೆಚ್ಚುಗೆಗೆ ಪಾತ್ರವಾಗುವ ಮೊದಲ ಸಾಹಿತ್ಯಿಕ
ಗುಣವೆಂದರೆ ಲೇಖಕಿಯ ಭಾಷಾಪ್ರಭುತ್ವ. ಆಧುನಿಕ ಕನ್ನಡ, ಹಳೆಗನ್ನಡ, ಪ್ರಾದೇಶಿಕ ಕನ್ನಡ, ಸಂಸ್ಕೃತ, ಇಂಗ್ಲಿಶ್ ಹೀಗೆ ಎಲ್ಲ ಭಾಷೆಗಳ ಪದಗಳು ಫ್ರುಟ್-ಸಲಾಡಿನಲ್ಲಿಯ ವಿವಿಧ ಹಣ್ಣುಗಳ ಹೋಳುಗಳಂತೆ ಸಮರಸವಾಗಿ, ಕವನದ
ಅನುಭವವನ್ನು ಉದ್ದೀಪನಗೊಳಿಸುವಂತೆ ಸಹಜವಾಗಿ ಬೆರೆತುಕೊಂಡಿವೆ. ಇದಲ್ಲದೆ,
ಇಲ್ಲಿಯ ಕವನಗಳನ್ನು ಓದಿದಾಗ, ಲೇಖಕಿಯ ವಿಸ್ತಾರವಾಚನದ
ಅರಿವು ನಮ್ಮನ್ನು ಬೆರಗುಗೊಳಿಸುತ್ತದೆ. ಹಳೆಯ ಸಾಹಿತ್ಯ, ಆಧುನಿಕ ಸಾಹಿತ್ಯ, ದಾಸಸಾಹಿತ್ಯ, ಶರಣಸಾಹಿತ್ಯ
ಇವೆಲ್ಲವೂ ಈ ಲೇಖಕಿಯಲ್ಲಿ ಆತ್ಮಸಾತ್ ಆಗಿ, ಅವರ ಕವನಗಳಲ್ಲಿ ಅಲ್ಲಲ್ಲಿ
ಮಿಂಚಿವೆ. ಇದು ಸರಿಯಾದ ಕ್ರಮ. ಇದು ನಮ್ಮ ಪೂರ್ವಸೂರಿಗಳಲ್ಲಿ
ನಮಗಿರುವ ಗೌರವ ಹಾಗು ಅಭಿಮಾನದ ಪ್ರತೀಕ. ವೈದಿಕ ಆಚರಣೆಗಳ ಜ್ಞಾನವೂ ಸಹ
ಲೇಖಕಿಯಲ್ಲಿ ಇರುವುದು ಇಲ್ಲಿ ವ್ಯಕ್ತವಾಗಿದೆ. ಈ ಗುಣಗಳು ಉಸಿರಾಟದಷ್ಟೇ
ಸಹಜವಾಗಿ, ಯಾವುದೇ ಬಿಂಕವಿಲ್ಲದೆ ಕವನಗಳಲ್ಲಿ ಏಕರಸವಾಗಿರುವುದು ಪ್ರಶಂಸನೀಯವಾಗಿದೆ.
ನವೋದಯ ಕಾಲದ
ಸಾಹಿತಿಗಳು ಕೇವಲ ಸಾಹಿತ್ಯವನ್ನಷ್ಟೇ ಸೃಷ್ಟಿಸಲಿಲ್ಲ. ಆಧುನಿಕ ಸಾಹಿತ್ಯಕ್ಕೆ ಅವಶ್ಯವಿರುವ ಕನ್ನಡ ಪದಗಳನ್ನು, ಭಾಷೆಯನ್ನು ಸಹ ಅವರು ಸೃಷ್ಟಿಸಿದರು. ಜಯಶ್ರೀಯವರು ನವೋದಯ, ನವ್ಯ, ನವ್ಯೋತ್ತರವೆನ್ನುವ ವರ್ಗೀಕರಣಕ್ಕೆ ಸೀಮಿತರಲ್ಲ. ಆದುದರಿಂದಲೇ ಅವರ ಕವನಗಳಲ್ಲಿ ಈ
ಮಾದರಿಗಳನ್ನು ದಾಟಿದ ಪದಸೃಷ್ಟಿಗಳನ್ನು, ಭಾಷೆಯ ಬಳಕೆಗಳನ್ನು ಕಾಣುತ್ತೇವೆ:
ವೈಯಾರಜಾಲ, ಬೂದಿಭಾರದ ತತ್ವಜ್ಞಾನಿ, ಗುಪಿತಗಳ ಒದ್ದೆಗಂಟ, ತನಿಲೇಪ, ಬಿಟ್ಟಂದೂರು, ಹಿಗ್ಗು ಹಾಸದಿರು, ಅನಿವಾರ್ಯಜನಿತ, ಸೂರ್ಯಸಮ್ಮೋಹ, ಬೆಳಕ
ಝಲ್ಲರಿ….ಇಂತಹ ಅನೇಕ ಪ್ರಯೋಗಗಳನ್ನು ನಾವು ಇಲ್ಲಿಯ ಕವನಗಳಲ್ಲಿ ಕಾಣುತ್ತೇವೆ.
ಇವೆಲ್ಲ ಬಹಿರಂಗದ
ಲಕ್ಷಣಗಳಾದವು.
ಜಯಶ್ರೀಯವರ
ಕವನಗಳ ಅಂತರಂಗವೇನು?
ಆತ್ಮಶೋಧನೆ
ಭಾವಜೀವಿಗಳ ವೈಶಿಷ್ಟ್ಯವಾಗಿದೆ. ಜಯಶ್ರೀಯವರು ಸಹ ಇದಕ್ಕೆ ಹೊರತಾಗಿಲ್ಲ.
‘ಅಳಿಲು ನನಗಿಷ್ಟ’, ‘ಗರಿಕೆ’ ಕವನಗಳಲ್ಲಿ `Small and sincere is beautiful’ ಎನ್ನುವುದು
ಜಯಶ್ರೀಯವರ ಕಾಣ್ಕೆಯಾಗಿದೆ. ಆದರೆ ‘ಚುಕ್ಕಿ’,
‘ಸುಳ್ಳಾಡಬೇಡ ಕನ್ನಡಿ’ ಮುಂತಾದ ಕವನಗಳಲ್ಲಿ ಲೇಖಕಿ ತಾನೊಬ್ಬ
ಅಲ್ಪಜೀವಿ ಎಂದು ಹೇಳಿಕೊಳ್ಳುತ್ತಾರೆ.
“ಎಲ್ಲ ಸರಿ, ಎಲ್ಲವೂ ಸರಿಯೆಂದು ನನ್ನ
ನಂಬಿಸದಿರು ಕನ್ನಡಿಯೇ,
ಹುಲುಜೀವ ನಾನು,
…………………………………..
……………………………………..
ಇದ್ದುದನ್ನು ಇದ್ದಂತೆಯೇ ಹೇಳು ಕನ್ನಡಿಯೇ
ನೀ ಚಂದ, ನೀ ಸುಂದರವೆಂದು ನನ್ನ
ನಂಬಿಸದಿರು,
ಹಿಗ್ಗು ಹಾಸದಿರು, ಮರಳು ಮಾಡದಿರು
…………………………………..”
(…………ಸುಳ್ಳಾಡಬೇಡ ಕನ್ನಡಿ)
ತಾವು ಅಲ್ಪಜೀವಿ ಎಂದು ಹೇಳಿಕೊಳ್ಳುವ ಅವರ ಮಾತನ್ನು ನಾವು ನಂಬುವುದಿಲ್ಲ! ಇದು ಬಹುತೇಕ ಭಾರತೀಯ ತತ್ವಶಾಸ್ತ್ರಗಳ
ದರ್ಶನವಾಗಿದೆ. ಹೀಗಾಗಿ ಭಾರತೀಯ ಮನಸ್ಸಿನಲ್ಲಿ
ಇದು ಆಳವಾಗಿ ನೆಲೆಸಿದೆಯಷ್ಟೆ. ಕವಿಯು ತತ್ವಜ್ಞಾನಿಯೂ ಆದುದರಿಂದ ಜಯಶ್ರೀಯವರೂ ಹೀಗೇ ಭಾವಿಸುತ್ತಿರಬಹುದು! ಹಾಗೆಂದು ಹುಲುಜೀವವನ್ನು ಕಡೆಗಣಿಸಬೇಕಂತಿಲ್ಲ. ಝಂಝಾವಾತವನ್ನು ಎದುರಿಸುವ ಸಾಮರ್ಥ್ಯ ಒಂದು ಹುಲ್ಲುಗರಿಕೆಗೆ ಇರುವುದನ್ನು ಜಯಶ್ರೀಯವರು ‘ಗುರಿ’ಯಲ್ಲಿ ಪ್ರೀತಿಯಿಂದ ವರ್ಣಿಸುತ್ತಾರೆ:
‘………………………………………..
ನಾಕ ನರಕದ ಗಾಳಿಗುಡುಗಿನ ನಡುವೆ ನಸುಬಾಗಿ
ಝಂಝಾವಾತಕ್ಕೆ ಕಿರುಗರಿಕೆ ಕಲಿಸಿದ ಪಾಠ ನೋಡೇ…..
ದಾಟಿ ಹೋದ ಗಾಳಿ ಹಿಂದೊಮ್ಮೆ ಕಣ್ಣ ಹಾಯಿಸಲು
ಆ ಗರಿಕೆ ನಕ್ಕ ಚೆಲುವ ನೋಡೇ……’
ಆದರೇನು, ಮನಸ್ಸಂತೂ ಹಾರಾಡುವ ಗಾಳಿಪಟವೇ ಅಲ್ಲವೆ? ‘ಮನಸುಖರಾಯನ ಮನಸು’ ಎನ್ನುವ ಕವನದಲ್ಲಿ ಲೇಖಕಿ ಹೇಳುವ ಈ ಸತ್ಯವನ್ನು ನಾವು ಒಪ್ಪಿಕೊಳ್ಳಲೇ
ಬೇಕಾಗುತ್ತದೆ! ಆ ಕವನದಲ್ಲಿ ಬರುವ ಒಂದು ನುಡಿಯನ್ನು ಗಮನಿಸಿರಿ:
‘ಚಿತ್ತ ಹುತ್ತಗಟ್ಟಿತೆನ್ನುವ ನೆವ ತೆಗೆದು ಅದೆಲ್ಲೋ ಕಾಡು ಮೇಡು,
ಕೋಟೆ ಕೊತ್ತಳ, ಘೋರೆನ್ನುವ ನದಿ, ಭೋರೆನ್ನುವ ಸಾಗರ,
ಗುಯ್ಯೆನ್ನುವ ಅಡವಿ, ಮಿಣಮಿಣವನುವ ಬೆಂಕಿಹುಳ
ಸರಿ ಇನ್ನೇನು? ಈ ಮನಸಿಗೊಂದು ಹುಚ್ಚು ಅಲ್ಲವೇನು?
ಎಲ್ಲಿಳಿಯಬೇಕು ಎಲ್ಲಿ ನಿಲ್ಲಬೇಕೆಂಬ ಪರಿಜ್ಞಾನ ಇದೆಯೇನು?
ಹೇಳೀಕೇಳೀ ಮನಸುಖರಾಯನಂತೆ ಅದು’
‘ಚಿತ್ತ ಹುತ್ತಗಟ್ಟಿತೆನ್ನುವ’ ಎನ್ನುವ ಪದಪುಂಜವನ್ನು
ಗಮನಿಸಿರಿ. ಅಡಿಗರ ‘ಶ್ರೀರಾಮನವಮಿಯ ದಿವಸ’ ಎನ್ನುವ ಕವನದಲ್ಲಿಯೂ ಇಂತಹದೇ ಪದಪುಂಜವಿದೆ ಎನ್ನುವದನ್ನು ನೆನಪಿಸಿಕೊಳ್ಳಿರಿ:
‘ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು ಪುರುಷೋತ್ತಮನ ಆ ಅಂಥ ರೂಪರೇಖೆ.’
ಅಡಿಗರ ಕವನದಲ್ಲಿ ಇರುವ ‘ಹುತ್ತಗಟ್ಟದೆ ಚಿತ್ತ’ ಎನ್ನುವ ಪದಪುಂಜವನ್ನೇ ಜಯಶ್ರೀಯವರು ತಮ್ಮ ಕವನದಲ್ಲಿಯೂ ಬಳಸಿಕೊಂಡಿದ್ದಾರೆ, ಆದರೆ ವ್ಯತ್ಯಸ್ತ ಭಾವದಲ್ಲಿ!
ಇದೇ ಕವನದ ಕೊನೆಯಲ್ಲಿ ಜಯಶ್ರೀಯವರು ಬೇಂದ್ರೆಯವರನ್ನು ಸಹ ನಮ್ಮನೆನೆಪಿಗೆ ತರುತ್ತಾರೆ:
‘ಆದರೇನು ಎನ್ನ ಹರಣ ನಿನಗೆ ಶರಣ ಈ ಮೂರು ಸುತ್ತಿನ ಮುಗಿತ
ಎಂದಿಗಾದೀತೆಂಬ ಹವಣದಲಿ ಸ್ತಬ್ಧವಾದ ಮನಸು’
(ಇಲ್ಲಿ ‘ಹವಣ’ ಎನ್ನುವ ಪದಪ್ರಯೋಗವು ಎಷ್ಟು ಸಮರ್ಪಕವಾಗಿದೆ ಎನ್ನುವುದನ್ನು
ಗಮನಿಸಿರಿ. ಸಮರ್ಪಕ ಪದಗಳು ಚಿತ್ತಕ್ಕೆ ಹೊಳೆಯುವುದು ಪ್ರತಿಭಾವಂತ ಕವಿಗಷ್ಟೇ ಸಾಧ್ಯ.)
ಮುಗ್ಧ ಬಾಲ್ಯವು ಬದುಕಿನ ಸುಂದರ ಸಮಯ. ‘ಪ್ಯಾರಾಡೈಸ್ ಲಾ˘ಸ್ಟ್!’ ಎನ್ನುವ ಅವರ ಕವನದಲ್ಲಿಯ ಈ ಸಾಲನ್ನು ನೋಡಿರಿ:
‘ಬಾರೀ ಗಿಡದಾಗ ನಾ ಕೂತೇ, ಬಸ್ರಿ ಗಿಡದಾಗ ನೀ ಕೂತೀ,’
ಈ ಸಾಲನ್ನು ಓದಿದ ಯಾರಿಗಾದರೂ ಚಿಕ್ಕ ಹುಡುಗರ ಹುಡುಗಾಟದ ದಿನಗಳು ಕಣ್ಮುಂದೆ ಬಂದೇ ಬರುವವು. ಅದಕ್ಕೂ ಮುಖ್ಯವಾಗಿ ಇದು ಬೆಳಗಾವಿಯ ಸುತ್ತಮುತ್ತಲಿನ
ಪರಿಸರ ಎನ್ನುವ ಪ್ರಾದೇಶಿಕ ವಾಸ್ತವಿಕತೆ ಥಟ್ಟನೆ ಅರಿವಿಗೆ ಬರುವುದು! ಹುಡುಗಾಟವಷ್ಟೇ
ಅಲ್ಲ, ಪ್ರಕೃತಿಯ ಚೆಲುವೂ ಸಹ ಮನಸ್ಸನ್ನು ಅರಳಿಸುವ ವಯಸ್ಸಿದು. ಈ ಭಾವೋತ್ಕಟತೆ ಯಾವ ವಯಸ್ಸಿನಲ್ಲಿಯಾದರೂ ಇದ್ದದ್ದೇ.
ಅಂತಹ ಒಂದು ಕವನ ಇಲ್ಲಿದೆ:
“ಅಷ್ಟದಿಕ್ ಚತುರ್ದಶ
ಕೋನಗಳ ಬ್ರಹ್ಮಾಂಡದೋಟ
ಬೆನ್ನಲ್ಲಿ ಹೊತ್ತು ಹೊನ್ನರಶ್ಮಿಯ
ಕುದುರೆಗಳೇರಿ
ಹೊರಡುವ ನಿನಗೆ ನನ್ನ
ಬೆನ್ನಟ್ಟುವ ಹುಕಿ ಬಂದದ್ಯಾಕೋ
ಭಾಸ್ಕರಾ?”
(………………ಸೂರ್ಯಸಮ್ಮೋಹದ ಬೆಳಗು)
ನಿಸರ್ಗದ ಚೆಲುವು ಮನಸ್ಸನ್ನು ಅರಳಿಸುವಂತೆಯೇ ಸುಂದರ ಕಲಾಕೃತಿಯೂ ಮನಸ್ಸಿಗೆ ಮುದವನ್ನು ಕೊಡುವಂತಹದೇ ಆಗಿದೆ. ಮದನಿಕೆಯ ಶಿಲ್ಪವನ್ನು ನೋಡಿದ ಜಯಶ್ರೀಯವರು ಆ ಪ್ರತಿಮೆಗೆ ಈ
ರೀತಿಯಾಗಿ ಬಿನ್ನವಿಸುತ್ತಾರೆ:
‘ಬಾ
ಇನ್ನು ಬಂದುಬಿಡು, ಮುನಿಸು
ತೊರೆದು ಹೊರಳಿಬಿಡು,
ಶಿಲೆಯ ಸ್ತಬ್ಧಶೀತಲತೆಯೊಳಗಿಂದ ಹಾಡಾಗಿ
ಹರಿದುಬಿಡು,
ಹನಿಯಾಗಿ ಇನಿದಾಗಿ ಶ್ರಾವಣದ
ಸೊನೆಯಾಗಿ, ಗಂಗಾವತರಣವ
ನೀ ನರ್ತನದೆ ತುಂಬಿಬಿಡು,
ಬಾ ನಾಗವೇಣಿಯೆ ಬಾ!’
(………ಮದನಿಕೆಗೊಂದು
ಬಿನ್ನವತ್ತಳೆ)
ಹಾಗೆಂದು ಜಯಶ್ರೀಯವರ ಮನಸ್ಸು ಕೇವಲ ದೃಶ್ಯ ಚೆಲುವಿಗೆ ಮಾತ್ರ ಮಾರು ಹೋಗುವದೆಂದು ಭಾವಿಸಬೇಡಿರಿ. ಅಂತಃಕರಣದ ಚೆಲುವೇ ಅವರ ಅಂತರಂಗದ ಪ್ರೇರಣಾಸ್ರೋತ. ‘ಭಾರತ’ ಎನ್ನುವುದು ಅವರ ಅಂತಹ ಒಂದು ಕವನವಾಗಿದೆ. ಅಜ್ಜಿ ಹಾಗು ಮೊಮ್ಮಗಳ ನಡುವಿನ ಅಂತಃಸಂಬಂಧ ಈ ಕವನದ ಹೂರಣವಾಗಿದೆ. ಆ ಕವನದ ಎರಡು ಸಾಲುಗಳನ್ನು ನೋಡಿರಿ:
‘ಸೊಲಿಗಿ
ಹೂರಣ, ಅದ್ದೇಲಿ ತುಪ್ಪ
ಪಂಚಪಾಂಡವರಿಗಿಟ್ಟು
ಮುಗದ್ಹೋದ ಮಹಾಭಾರತ ಕಲಿಸಿದ್ದು
ಮರಿಬ್ಯಾಡ್ರೆನ್ನುವಾಕಿ.’
(ಈ ಕವನವು ಭಾರತೀಯ ಸಂಸ್ಕೃತಿಯ ದರ್ಶನವೂ ಆಗಿದೆ.)
ಜಯಶ್ರೀಯವರ ಕವನಗಳು ಕೇವಲ ಕಲ್ಪನೆಯಲ್ಲಿ ತೇಲುವ ಕವನಗಳಲ್ಲ,
ಇವು ಕಟು ವಾಸ್ತವತೆಯ ಕವನಗಳೂ ಆಗಿವೆ.
ಹದಿಹರೆಯದ ಸಮಯವೆಂದರೆ ಹಗಲುಗನಸಿನ ಸಮಯ. ಜೊತೆಜೊತೆಗೇ ಇದು ತೀವ್ರ ಅಪಾಯಕಾರಿ ಸಮಯವೂ ಹೌದು,
ವಿಶೇಷತಃ ಹುಡುಗಿಯರಿಗಾಗಿ.
‘ಉತ್ಪ್ರೇಕ್ಷಿತ....?’ ಎನ್ನುವ ಅವರ ಕವನದ ಮೊದಲ ನುಡಿಯನ್ನು ನೋಡಿರಿ:
‘ಭಯವಾಗುತ್ತದೆ ನನಗೆ
ಕೆಫೆ, ಕ್ಲಬ್ಬು, ಪಬ್ಬುಗಳ
ಗಾಜಿನ ಕಿಣಿಕಿಣಿಯ ನಡುವೆ ಕಳೆದು
ಹೋಗುವ
ಆ ಹುಡುಗಿಯರ ಕನಸುಗಳ
ಬಗ್ಗೆ,
ಉತ್ಪ್ರೇಕ್ಷಿತ, ಉತ್ಕಂಠಿತ ಆಸೆಗಳ ಹೊಂಡದಲ್ಲಿಳಿದು
ಸುತ್ತುಮುತ್ತುವ ಮತ್ತೇಭವಿಕ್ರೀಡಿತರ
ಹೊತ್ತುಗಾಣದ ಸೇವೆಗಳ ಹಾದಿಯಲ್ಲಿ,
ಕೆಲವೊಮ್ಮೆ ಗಾದಿಯಲ್ಲಿ ಕಳಕೊಳ್ಳುವ
ಷೋಡಶಿಯರ ಬಗ್ಗೆ!’
ಇದು ಆ ಷೋಡಶಿಯರ ತಾಯಂದಿರಗಂತೂ ಒಳಒಳಗೇ ಚಡಪಡಿಸುವ
ಸಮಯವೂ ಆಗಿದೆ:
‘ಏಳು ಮಲ್ಲಿಗೆಯಲ್ಲ ಮಗಳು, ಆದರೂ ಕಣ್ಣುಗಳ ಮಣಿ ಹೌದೇ,
ಏರೇರಿ ಬೆಳೆದ ಅಂಗಾಂಗಳು.
……………………………………………….
……………………………………………..
ನಾವು ಕಾಪಿಡಬೇಕು ವಿಧಿಯಿಲ್ಲ. ಮೊನ್ನೆ ಬಸ್ಸಿಳಿದು
ಬರುವಾಗ ಮಿಡಿಗಾಯಿ ಮುರಿದು ನೆತ್ತರಿಗೊಡ್ಡಿದ್ದಲ್ಲದೆ ಕತ್ತು ಕುಯಿದರಲ್ಲ!
ರಾಕ್ಷಸರೇ? ಇಲ್ಲವಲ್ಲ ಇಲ್ಲ. ಮನುಜರಂತೆ.
ಬಾ˘ಯ್ಸ್ ಆರ್ ಬಾ˘ಯ್ಸ್! ತಪ್ಪಾದರೇನಂತೆ?
ಶಿಕ್ಷೆ ಸಲ್ಲದು, ತಿದ್ದಿಕೊಂಡಾರು
ಸಮಯ ಕೊಡಿ, ಚೀರಾಡಬೇಡಿ, ಮತ್ತೆ ಮಾಡಿದರೆ ನೋಡೋಣ.’
(……………..ಅಪುತ್ರಸ್ಯ ಗತಿರ್ನಾಸ್ತಿ)
ಈ ರೀತಿಯಲ್ಲಿ ಯಾವತ್ತೂ ಕಳವಳದಲ್ಲಿಯೇ ಬದುಕಬೇಕಾದ
ಸ್ಥಿತಿ ಹುಡುಗಿಯರ ತಾಯಂದಿರದು. ಈ ನುಡಿಯಲ್ಲಿಯ ‘ಬಾ˘ಯ್ಸ್ ಆರ್ ಬಾ˘ಯ್ಸ್!’ ಎನ್ನುವ ಪದಗಳನ್ನು ಗಮನಿಸಿರಿ. ನೆನಪಾಯಿತೆ, ಈ ‘ಮಹಾವಾಕ್ಯ’ವನ್ನು ಘೋಷಿಸಿದ ಮಹಾಪುರುಷರು
ಯಾರು, ಯಾವಾಗ, ಎಲ್ಲಿ ಎನ್ನುವುದು? ಉತ್ತರ ಪ್ರದೇಶದ ಮುಖ್ಯ ಮಂತ್ರಿಗಳಾಗಿದ್ದವರೊಬ್ಬರು
ಸಾಮೂಹಿಕ ಅತ್ಯಾಚಾರದಲ್ಲಿ ಭಾಗಿಯಾಗಿದ್ದ ಹುಡುಗರನ್ನು
ಒಪ್ಪವಿಟ್ಟುಕೊಂಡು ಹೇಳಿದ ಕೊಳಕು ಮಾತಿದು. ಇಂತಹ insensitive ಮುಖ್ಯಮಂತ್ರಿಯನ್ನು—ಗಲ್ಲಿಗೇರಿಸುವ ಬದಲಾಗಿ-- ಮತ್ತೆ ಮತ್ತೆ ಗಾದಿಗೇರಿಸುವ ನಮ್ಮ
ಕುರುಡ ಮತದಾರರು ತಮ್ಮ ಸಮುದಾಯವನ್ನು ಕಣ್ಣು ಮುಚ್ಚಿಕೊಂಡು ನೋಡುತ್ತಾರೆಯೇ ಹೊರತು ಯೋಗ್ಯತೆಯನ್ನಲ್ಲ.
ಬುದ್ಧಿಜೀವಿಗಳೆಲ್ಲರೂ ಬಾಯ್ಮುಚ್ಚಿಕೊಂಡಿದ್ದ ಈ ಸಂದರ್ಭದಲ್ಲಿ ಜಯಶ್ರೀಯವರು ತಮ್ಮಲ್ಲಿ
ಕುದಿಯುತ್ತಿರುವ ಕೋಪವನ್ನು ಕವನದ ಮೂಲಕ ವ್ಯಕ್ತಪಡಿಸಿದ್ದಾರಷ್ಟೆ.
ಕಾ˘ಲೇಜು ಹುಡುಗ, ಹುಡುಗಿಯರನ್ನು ನೀವೆಲ್ಲರೂ ನೋಡಿರುವಿರಷ್ಟೆ?
ಅವರ ಕಣ್ಣುಗಳಲ್ಲಿಯ ಹೊಳಪೇನು, ಕಿಲಿಕಿಲಿ ನಗುವೇನು,
ಕನಸುಗಳ ಬಣ್ಣಗಳೇನು? ಕಾ˘ಲೇಜಿನ
ಶಿಕ್ಷಣದ ಬಳಿಕ ಹುಡುಗರೇನೋ ಆಕಾಶಕ್ಕೆ ಹಾರಲು ತಯಾರಾಗಿರುತ್ತಾರೆ. ಹುಡುಗಿಯರು?
ಕೆಲವರು ಮೊದಲು ಉದ್ಯೋಗವನ್ನು ಹಿಡಿದು, ಬಳಿಕ ಮದುವೆಯಾಗುತ್ತಾರೆ;
ಕೆಲವರು ಮೊದಲೇ ಮದುವೆಯಾಗಿ ಬಿಡುತ್ತಾರೆ. ಒಟ್ಟಿನಲ್ಲಿ
ಇವರೆಲ್ಲರಿಗೂ ಮದುವೆಯಂತೂ ತಪ್ಪಿದ್ದಲ್ಲ! ಇವರ ಮುಂದಿನ ಬದುಕು ಹೇಗಿರುತ್ತದೆ?
ಭಾರತವೇ ಇರಲಿ, ಅಮೇರಿಕವೇ ಇರಲಿ, ಹೆಣ್ಣುಮಕ್ಕಳಿಗೆ ದಾಂಪತ್ಯದಲ್ಲಿ ದುಮ್ಮಾನ ಇರುವುದು ಸಹಜ(!) ಸಂಗತಿಯಾಗಿದೆ. ಈ ದುಮ್ಮಾನ ಹುಟ್ಟುವುದು ಅಸಮಾನತೆಯ ಅಸಮಾಧಾನದಿಂದ ಎಂದು ಹೇಳುವ ಅವಶ್ಯಕತೆ ಇಲ್ಲ. ಮದುವೆಯ ಸಂದರ್ಭದಲ್ಲಿ ‘ಹಾಲುಧಾರೆಯ ಸುಖಸಂಭ್ರಮ’ದಲ್ಲಿ ತೇಲುತ್ತಿರುವ ಹುಡುಗಿ, ತನ್ನದೆಲ್ಲವನ್ನೂ ಸಮರ್ಪಿಸಿಕೊಂಡು ಕಣ್ಣು ತೆರೆದ ಬಳಿಕ ಕಾಣುವ ವಾಸ್ತವವೇನು?
‘ಕನಸುಗಳನ್ನು
ಕಟ್ಟಿಟ್ಟ ಚಿತ್ತಾರದ ಪೆಟ್ಟಿಗೆಯ
ಮರಮರಳಿ ನೋಡಿ, ಎದೆಗೊತ್ತಿ
ನಸುನಗೆಯ
ಉಡುಗೊರೆಯನಿಟ್ಟು ಮುಚ್ಚಿ,
ಅಟ್ಟಳಿಗೆಯನಿಳಿದಾಗ
ಸೊಂಟಕ್ಕೆ ಬಿಗಿದ ಸೆರಗಿನ
ನೆನಪು
…………………………….
ಅವನ ಕನಸುಗಳಿಗೆ ಕೋಟಿ
ಬೆಲೆ
ನನ್ನದಕ್ಕೇನು ಅದೂ ಒಂದು
ಕನಸೇ?!’
……………………………..
ಸಾಸಿವೆಯಷ್ಟು
ಸುಖಕ್ಕೆ ಸಾಗರದಷ್ಟು ದುಃಖ ಕಾಣಾ,
ಅಂದಿಲ್ಲವೇ
ಅಕ್ಕ!
(………………ನತ್ತು / ಹಕೀಕತ್ತು)
(ಟಿಪ್ಪಣಿ:
‘ಉಡುಗೊರೆಯನಿಟ್ಟು ಮುಚ್ಚಿ,
ಅಟ್ಟಳಿಗೆಯನ್ನಿಳಿದಾಗ
ಸೊಂಟಕ್ಕೆ ಬಿಗಿದ ಸೆರಗಿನ ನೆನಪು’………..,ಈ
ಸಾಲಿನಲ್ಲಿ ಸುಖದ ಕನಸುಗಳನ್ನು ಹೊತ್ತ ಹೆಣ್ಣು ಕೆಳಗಿಳಿದು ಬರುವಾಗ, ತನ್ನ ದುಡಿತದ ಮಣಭಾರಕ್ಕೆ ಸಜ್ಜಾಗಬೇಕೆನ್ನುವ ಭಾವವಿರುವುದನ್ನು ಗಮನಿಸಿರಿ.)
ಏಳು ಹೆಜ್ಜೆ ಜೊತೆಗಿಟ್ಟ ಒಡನಾಡಿಯೇ ತನ್ನ ಬದುಕಿನ ಭವಿಷ್ಯ ಎಂದು ಭಾವಿಸುವ ಹೆಣ್ಣಿಗೆ, ಮದುವೆಯ ಮರುದಿನ ಕಾಣುವುದೇನು?
‘ಹೆಜ್ಜೆ ಜೋಡಿಸಿ
ಹೊಸ ಹಾದಿ ಹುಡುಕಹೊರಟ
ಸಮಯ,
ದಿಕ್ಕು ತಪ್ಪಿಸಿ ದೂರ
ಹೋದೆ
ನಿನ್ನ ನೆವಕೆ ನನ್ನ
ಕಾರಣ.
………………………..
ಸಪ್ತಪದಿಗೂ ತಾಕುವುದೇ ಕಿಲುಬು?
‘ಸುಖದುಃಖೇ
ಸಮೇಕೃತ್ವಾ’ ವಚನಶೂರ
ನೀನು ಕಣೋ! ನಾನಲ್ಲ.
…………………………..
ವೃಂದಾವನದ ತುಳಸಿ ಮನೆಯೊಳಗೆ ಬಾರಳು,
ನೇರ ಹರಿವ ಹೊನಲಾಗದೆ ನೀ ಕವಲೊಡೆದೆಯಲ್ಲ,
ದಾರ ಕಟ್ಟುವ ಮೊದಲು ಯೋಚಿಸಬೇಕಿತ್ತೆ?’
(………….ಬಂಧ)
(‘ಸುಖದುಃಖೇ ಸಮೇಕೃತ್ವಾ, ಲಾಭಾಲಾಭೌ ಜಯಾಜಯೌ’ ಎನ್ನುವುದು ಸ್ಥಿತಪ್ರಜ್ಞನನ್ನು ವರ್ಣಿಸುವಾಗ
ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಹೇಳುವ ಮಾತು. ಜಯಶ್ರೀಯವರು ಇದನ್ನು ಇಲ್ಲಿ
ಬೇರೆಯೇ ಆದ ಅರ್ಥದಲ್ಲಿ ಬಳಸಿದ್ದಾರೆ!)
`ಸಸಾರ ಅಲ್ಲವೋ ಸಂಸಾರ’ ಎನ್ನುವ ಕವನವು ಪ್ರಾದೇಶಿಕ ನುಡಿ-ಚೌಕಟ್ಟಿನಲ್ಲಿರುವ ಒಂದು ಅಪೂರ್ವ ಕವನವಾಗಿದೆ. ಆ ರುಚಿಯನ್ನು ಅರಿಯಲು ಕೆಲವು ಸಾಲುಗಳನ್ನು ಉದ್ಧರಿಸುತ್ತಿದ್ದೇನೆ:
‘ಇದ್ಲೀ ಒಲಿ
ಮ್ಯಾಲಿನ ನಿಗಿ ನಿಗಿ
ಕೆಂಡದಂಥಾ ಕೋಪಿಷ್ಠ
ನೀನು,
ಬರ್ಫದ ಮ್ಯಾಲಿನ
ತಿಳಿನೀರಂಥಾ
ಥಣ್ಣಗಿನ ಆಕಿ…………..
……………………….
ಎದ್ದು ಎದಿಗೊದ್ದಂಥಾ
ಮಾತಾಡಿ
ಮತ್ತ ಮರಮರ
ಮರಗಿ…………..
……………………………
ಏಳು ಹೆಜ್ಜಿ
ಎಂಟು ವಚನ
ಮುಟ್ಟಿ ಎದಿ,
ಇಟ್ಟು ಕಣ್ಣಾಗ ಕಣ್ಣು
‘ನಾತಿ ಚರಾಮಿ
ನೀನು…..
ಕುಟುಂಬಂ ಪಾಲಯಿಷ್ಯಾಮಿ’
ಆಕಿ
…………………………….’
(………ಸಸಾರ ಅಲ್ಲವೋ
ಸಂಸಾರ)
ದಾಂಪತ್ಯದ ಈ ದುಸುಮುಸು ಮನದ ಮೇಲೆ ಕಲೆಗಳನ್ನು ಉಳಿಸದಿದ್ದೀತೆ?
‘ಎದೆಗೂಡ ಹಣತೆಯ
ನಿಶ್ಶಬ್ದ ಬೆಳಕಲ್ಲಿ
ಅಂತರಂಗಕ್ಕಷ್ಟೇ ಕಾಣಿಸಿ
ಮಾತಿಲ್ಲದೆ ಅತ್ತು,
ಪಿಸಗುಟ್ಟುವ
ಉಸಿರಲ್ಲಿ ತನ್ನ
ಗಾಯದ ಕತೆ ಹೇಳುವ
ಕಲೆ!’
ಗಡಿದಾಟಿಸಿ ಬೀಸಿದ್ದ
ಶಬ್ದಗಳ ಹೊಡೆತದ
ಕಲೆ,
ಅದರೊಳಗೆ ಕಲಸಿ
ನನ್ನನಿನ್ನಾಳದ
ವಿಷ ತಣಿದು
ಅಮೃತವಾಗದೆ
ಉಕ್ಕಿ ಹರಿದ
ಕತೆಯ ಕಲೆ!
(…….ಒಂದು ಶಾಲು
ಬೇಕಾಗಿದೆ)
ಸರಿ, ಹರಿದು ಹೋದ ಈ ಹಚ್ಚಡವನ್ನು ಸರಿಪಡಿಸಲಾದೀತೆ?
‘ಸವೆದು ಹೋದ ದಾರದಿಂದ ಕಟ್ಟಬಾರದು ಕೆಳೆತನ
………………………………………..
……………………………………………
ಹೆಜ್ಜೆ ಜೋಡಿಸಿ ಹೊಸ ಹಾದಿ ಹುಡುಕಹೊರಟ ಸಮಯ,
ದಿಕ್ಕು ತಪ್ಪಿಸಿ ದೂರ ಹೋದೆ
ನಿನ್ನ ನೆವಕೆ ನನ್ನ ಕಾರಣ.
…………………………….
……………………….
ಹೊಸಿಲಕ್ಕಿಯ ಘಲ್ಲುಮಳೆ ಹರಡಿ
ಮನೆತುಂಬಿ ನಕ್ಕ ಪರಿಗೆ ಜೋತುಕೊಂಡೆನಲ್ಲ?
ಸ್ಥಾವರಕ್ಕಳಿವಿನ ಪರಿವೆಯಿಲ್ಲದೆ?
……………………………
……………………..
ನೇರ ಹರಿವ ಹೊನಲಾಗದೆ ನೀ ಕವಲೊಡೆದೆಯಲ್ಲ
ದಾರ ಕಟ್ಟುವ ಮೊದಲು ಯೋಚಿಸಬೇಕಿತ್ತೆ?’
(……………….…..ಬಂಧ)
(ಟಿಪ್ಪಣಿ: ‘ದಾರ ಕಟ್ಟುವುದು’ ಎಂದು ಲೇಖಕಿ ಬರೆದಿದ್ದಾರೆ, ಆದರೆ ‘ಮಾಂಗಲ್ಯಮ್ ತಂತು ನಾನೇನ’ ಎನ್ನುವ ವಿಶೇಷ ಅರ್ಥವೂ ಇಲ್ಲಿ ಹೊಳೆಯುತ್ತದೆ!)
ಸುಖದ ಸಮಯಗಳಲ್ಲಿ ಮನಸ್ಸುಗಳು ಒಂದಾಗಿಯೇ ಇದ್ದಾವು; ಆದರೆ ದುಃಖದ ಸಮಯದಲ್ಲಿ? ಹೆಂಡತಿಯ ದುಃಖ ಗಂಡನದೂ ಅಲ್ಲವೆ?
‘ಅಲ್ಲೇ ಎಲ್ಲೋ ವಿಭಾಗಿಸಿಕೊಂಡುವು
ನನ್ನ ನಿನ್ನ ನೋವುಗಳು,
ಎಲ್ಲಿ? ಅದೇ ಪ್ರಶ್ನೆ.
ಅಲ್ಲ, ನೋವುಗಳಿಗೆ ನಮ್ಮಲ್ಲಿ
ಪ್ರೈವಸಿಯ
ಛಾಪು ಬಿದ್ದದ್ದು ಯಾವಾಗ?’
(……………ಗತ)
ಸೀಮಾಂತರದ ಗೆರೆಗಳು ಇತ್ತ
ಹೊರಳುವ ಮುನ್ನ
ಅತ್ತ ನೋಡಿ ನಕ್ಕದ್ದೇಕೋ?
(………ಅಗಳ್ತೆ)
ಹರಿದು ಹೋದಇಂತಹ ಬದುಕಿಗೆ ತೇಪೆ ಹಚ್ಚಲು ಹೆಣ್ಣೇ ಒದ್ದಾಡಬೇಕು!
‘ಎದ್ದುಬಂದು ಎದೆಗೊದ್ದು ಒಳಗಿನ ಸರೋವರಕ್ಕೆ
ಕಲ್ಲಿಟ್ಟು ಕಲಕಿ ಹುಚ್ಚೆಬ್ಬಿಸಿ
ಎತ್ತಿ ಕಣ್ಣಿಗಿಡುವ ನೋವುಗಳನ್ನು ತಡೆಯುವುದು
ಈಗಲೀಗ ಮಾಡಬೇಕಿರುವ ಆದ್ಯತೆ.
ನಲ್ಲಿ ಸೋರಿದರೆ ಮನೆಯಂದ ಕೆಟ್ಟೀತು,
ಕಣ್ಣು ಸೋರಿದರೆ ಬದುಕು!’
(……..ನಲ್ಲಿಗಳು ಸೋರುತ್ತಿರುತ್ತವೆ)
ಆದರೂ ಸಹ, ದಾಂಪತ್ಯದ
ಪರಾಮರ್ಶೆ ಆಗಲಿ, ಎಲ್ಲವೂ ಮತ್ತೆ ಸರಿಯಾದೀತು ಎನ್ನುವ ಭಾವನೆಯೊಂದು ಮಿಣುಕುತ್ತಿರುತ್ತದೆಯಲ್ಲವೆ? ಅದರ ಪರಿ ಹೀಗಿದೆ:
‘ಇದುವರೆಗಿಟ್ಟ ಹೆಜ್ಜೆಗಳ
ಹಿಂದಿರುಗಿ ನೋಡೋಣ…..
ಅದೇ ಪರಾಗಸ್ಪರ್ಶಕ್ಕೆ
ಕಾದ ಹೂ ನಾನಾಗಿದ್ದರೆ
ಅಥವಾ
ನನ್ನನ್ನೇ ಅರಸಿ ಸುತ್ತಿ
ಸುಳಿವ ಭೃಂಗ
ನೀನಾಗಿದ್ದರೆ….
ಖಂಡಿತ ಆ ಮೊದಲಿನ
ಪರಕಾಯ ಪ್ರವೇಶ ನಮ್ಮಲ್ಲಿ!’
(…………………ಪರಿಧಿ)
ಹೆಣ್ಣಿಗೆ ಹಾಕಿದ ನಿರ್ಬಂಧಗಳು ಅತಿಯಾದಾಗ, ಒಮ್ಮಿಲ್ಲೊಮ್ಮೆ
ಹೆಣ್ಣು ಈ ಚೌಕಟ್ಟನ್ನು ಮೀರದಿರಲಾರಳೆ?
‘ರೇಖೋಲ್ಲಂಘನ ಮಾಡಿಯೇ ತೀರುವೆನೆನ್ನುವ ಕಾಲುಗಳ
ತಡೆಯುತ್ತೀರಾದರೂ ಎಷ್ಟು ದಿನ?’
(……………….ಗೆರೆಗಳು)
ಇದೆಲ್ಲಕ್ಕೂ ಉತ್ತರವನ್ನು ಕಾಲವೇ ಹೇಳಬೇಕು:
‘ಜೀವ ನೋವಿನ
ಕಡಲು, ದೇಹ ದಣಿವಿನ
ಮಡಿಲು
ಕುಗ್ಗಿದ ಕಾಯಕ್ಕೆ ಇನ್ನಿಲ್ಲ
ಕಾಯಕಲ್ಪ!
……………………………………..
ಅವರವರ ಬದುಕು ಕಟ್ಟಿ
ನಿಂತಿರುವವರು,
ಹಾಡಿಬಿಡು ಭೈರವಿಯ! ಬೇರೆ
ರಾಗ-ಚರಣಗಳಿಲ್ಲ ಇನ್ನು.
…………………………………….
ಅಂದು ನೆಟ್ಟು ಬೆಳೆಸಿದ
ಸಸಿಗಳಿಗೆ ನಿನ್ನ ನೀರಿನ
ಹಂಗಿಲ್ಲ, ತೇಲಿ ಹೊರಟಿರುವ
ಹಾಯಿ ಹಡಗಂತೆ ಅವು,
ದಿಕ್ಕು ದೆಸೆಯ ಚುಕ್ಕಾಣಿಗೆ
ಮುಕ್ಕಣ್ಣನ ದಯವಿರಲಿ!
………………………………………
ನಗುವಿನಲ್ಲಿ ಸಾಗಿದರೆ ಇರುವಷ್ಟು
ಹಾದಿ,
ನಾಳಿನ ಬುತ್ತಿಗಿರಲಿ
ಒಂದಿಷ್ಟು ಪ್ರೀತಿ!’
(………………ಕಾಲವೇ)
(ಟಿಪ್ಪಣಿ:
ಭೈರವಿ ರಾಗವು ಹಿಂದುಸ್ತಾನಿ ಸಂಗೀತದಲ್ಲಿ ಕಚೇರಿಯ
ಕೊನೆಯಲ್ಲಿ ಹಾಡುವ ರಾಗವಾಗಿದೆ.)
ಕೊನೆಯಲ್ಲಿ ಹಾಡುವ ರಾಗವಾಗಿದೆ.)
ಸಂಸಾರದ ವಿವಿಧ ಮಗ್ಗಲುಗಳನ್ನು ಜಯಶ್ರೀಯವರ ಈ ಕವನಗಳು ಚಿತ್ರಿಸುತ್ತವೆ. ಈ ಅನುಭವಗಳಿಂದ ಜಯಶ್ರೀಯವರು ಹುಡುಗಿಯರಿಗೆ ನೀಡಬಹುದಾದ ಮಾರ್ಗದರ್ಶನ ಏನಾದರೂ ಇದೆಯೆ? ‘ನಿಮ್ಮ ಬದುಕಿನಲ್ಲಿ ಮೇಲೆ ಹೋಗುವ ಮೆಟ್ಟಲುಗಳನ್ನು ಕಟ್ಟಿಕೊಳ್ಳರಿ, ಅವು ಬೀಳುವಾಗ ಎದೆಗುಂದದಿರಿ’
ಎನ್ನುವ ಕವನವೊಂದು ಹೀಗಿದೆ:
‘ನೋಡಿಲ್ಲಿ,
ನಾ ಇಟ್ಟಿಗೆಯ ರಾಶಿ
ಹೊತ್ತು ತಂದೆ,
ಸುತ್ತ ಹರಡಿದ
ಕಸಕಡ್ಡಿಗಳ ಸರಿಸಿ ಹೆಜ್ಜೆ
ಹೆಜ್ಜೆಗೆ ಚುಚ್ಚಿದ ಮುಳ್ಳುಗಳ
ಕಿತ್ತಿ ಹಸನಾಗಿಸಿದೆ……………………….
………………..
ಇದೀಗ ಮಗಳ
ಮೆಟ್ಟಿಲುಗಳು ಸಿದ್ಧವಾಗುತ್ತಿವೆ…………
…………………………………
ಮುಂದುವರಿ ಮಗಳೇ,
ನಾನಿಲ್ಲೆ ನಿನ್ನ
ಬೆನ್ನ ಹಿಂದೆ.’
(…………..ಮೆಟ್ಟಿಲುಗಳು)
ಈ
ರೀತಿಯಾಗಿ ಸ್ತ್ರೀಸಂವೇದನೆಯ ಕವನಗಳನ್ನು ನಾವಿಲ್ಲಿ ಕಾಣಬಹುದು.
ಸ್ತ್ರೀಸಂವೇದನೆ ಎಂದರೆ ಇವರೇನು ಫೆಮಿನಿಸ್ಟಾ. ವಿಮೆನ್ಸ್ ಲಿಬ್ ಪ್ರತಿಪಾದಕರಾ ಎಂದು ಕೇಳದಿರಿ. ಈ
ಪುರುಷಪ್ರಧಾನವಾದ ನಮ್ಮ ಸಮಾಜದಲಿ ಸ್ತ್ರೀಯರು ಅನೇಕ ಸಂಕಟಗಳಿಗೆ ಈಡಾಗುತ್ತಾರೆ. ಈ
ಸಂಕಟಗಳಿಗೆ ಧ್ವನಿ ಬೇಡವೆ? ಜಯಶ್ರೀಯವರ ಕವನಗಳು ಇಂತಹ ಧ್ವನಿಯಾಗಿವೆ.
ಕೊಳೆಗೇರಿಯಲ್ಲಿ ಬದುಕುವ ಹೆಣ್ಣೊಬ್ಬಳ ಸ್ಥಿತಿ ಎಷ್ಟು ದಾರುಣವಾಗಿದೆ, ಗಂಡನ ಪಶುಭಾವ ಹೇಗಿದೆ ಎನ್ನುವದನ್ನು ‘ಗರ್ಭ’
ಕವನವು ಸಾಂದರ್ಭಿಕವಾಗಿ ವರ್ಣಿಸುತ್ತದೆ:
‘ಚಪ್ಪಲಿ, ಸಬಳು, ಇಲ್ಲ ಮೊಳಕೈಯಲ್ಲೇ
ಗುದ್ದಿ ಬಡಿದು
ಆದರೂ ಇಳಿಯದ
ಹೆಂಡದ ನಶೆಗೆ ಮತ್ತವಳ
ಸೆಳೆದಮುಕಿಕೊಂಡ
ಗಂಡನ ವೀರ್ಯ ಬಹು ಫಲವತ್ತು?’
ಇದಕ್ಕೆ ವಿಪರೀತವಾಗಿ ಕೂಸಿಗಾಗಿ ಹಂಬಲಿಸುವ ಸ್ಥಿತಿವಂತರ ಮನೆಯ ಹೆಣ್ಣೊಬ್ಬಳ ಪಾಡು ಹೀಗಿದೆ:
‘ಅಲ್ಲಿ ಲೆಕ್ಕಕ್ಕಿಲದ ಗರ್ಭ ಕಳಿತು ಚಿಮ್ಮಿದ ಕೂಸೆರಡು,
ಇಲ್ಲಿ ಕಸುಗಾಯಿ ಕಮರಿ,
ಬರೆದ ಬರದ ಹಾಡು
ಅಕ್ಕಿ ಕಚ್ಚಿನ ನೀರು ಚೆಲ್ಲಿ ಹೋಗುತ್ತದೆ.’
(…………….ಗರ್ಭ)
ಕನ್ನಡ ಸಾಹಿತ್ಯವೂ ಪುರುಷಪ್ರಧಾನವಾದದ್ದೇ. ಅದರಲ್ಲಿಯೇ ಮಾಸ್ತಿ ಹಾಗು ಬೀಚಿಯವರಂತಹ ಮಹಾನುಭಾವರು ಸ್ತ್ರೀಯರ ಬಗೆಗೆ ಸಹಾನುಭೂತಿಪರರಾಗಿದ್ದರು.
ಲೇಖಕಿಯರಲ್ಲಿ ತ್ರಿವೇಣಿಯವರ ಕಾದಂಬರಿಗಳನ್ನು ನೋಡಿರಿ. ಹೆಣ್ಣಿಗೆ ಯಾರನ್ನಾದರೂ ಪ್ರೀತಿಸುವ ಹಕ್ಕಿದೆ, ಅದು ವಿಷಮವಿವಾಹದ
ಪ್ರೀತಿಯಾಗಿರಲಿ ಅಥವಾ ವಿವಾಹಬಾಹ್ಯ ಪ್ರೀತಿಯಾಗಿರಲಿ ಎಂದು ಬರೆದ ಮೊದಲ ಲೇಖಕಿ ಇವರು.
ಜಯಶ್ರೀಯವರ ಕವನಗಳು ಸ್ತ್ರೀಸಂವೇದಿತ ಕವನಗಳಿಗೆ ಮಾತ್ರ ಸೀಮಿತವಾಗಿಲ್ಲ. ‘ಮಾತು ಕೇಳದ ಕತೆ’ಯಲ್ಲಿ ಲೇಖಕರ ಪಾಡು ವರ್ಣಿತವಾಗಿದೆ.
`ಕಾಣೆಯಾದ ಎಂಎಚ್-೩೭೦’ ವಿಮಾನದುರಂತಕ್ಕೆ
ಆಹುತಿಯಾದವರ ಕರುಳಿನ ಕವನವಾಗಿದೆ.
೧೯೯೩ರಲ್ಲಿ ತೆರೆ ಕಂಡ ‘ರುಡಾಲಿ’ ಎನ್ನುವ ಚಲನಚಿತ್ರವನ್ನು ಕೆಲವರಾದರೂ ಓದುಗರು ನೋಡಿರಬಹುದು. ಉತ್ತರ
ಭಾರತದಲ್ಲಿ ಇರುವ ಪದ್ಧತಿ ಇದು. ಜಮೀನುದಾರರಂತಹ ಗಣ್ಯರ ಮನೆಯಲ್ಲಿ ಯಾರಾದರೂ
ಸತ್ತಾಗ, ಶವದ ಮುಂದೆ ಕೂತು ಅಳಲೆಂದು, ಅಳುಗೂಲಿಗಳನ್ನು(!)
ನೇಮಿಸಿಕೊಳ್ಳುತ್ತಾರೆ. ಅಂಥ ಹೆಣ್ಣುಗಳ ಹೆಸರು
‘ರುಡಾಲಿ’. ಈ ಕವನದ ಕೆಳಗಿನ ಎರಡು ನುಡಿಗಳಲ್ಲಿ ಎಂತಹ
ರುದ್ರವ್ಯಂಗ್ಯ ತುಂಬಿದೆ ನೋಡಿ:
‘ಬೊಂಬು, ಚಾಪೆ, ಮಡಕೆ, ಬೂದಿ
ದಿನದಿನದ
ಊಟ! ಅದೇ ಜೀವದಾಟ, ಅತ್ತು ದಣಿದು
ಸೋತ ಮನ ಇನ್ನಳಲಾರೆ
ಅಂತಳುವಾಗ
ಅದಕ್ಕೊಂದು
ತಪರಾಕಿ! ನಾಳೆ ಬೇಡವೆ ಹೊಟ್ಟೆಗೆ ಹಿಟ್ಟು?
ಅವರಳದಿದ್ದರೆ
ನಾನಳಬೇಕು
ಮಸಣದ ಮನೆದೀಪದುರಿ
ನನ್ನ ಮನೆದೀಪದ ದೊಂದಿ!
ದಿಟ್ಟಿನೆಟ್ಟು
ದೂರ ಚಿತ್ತ, ಒಸಗೆ ಬಂತೆ? ಸಾವಿನೊಸಗೆ
ಅಲ್ಲ ನನ್ನ
ಅನ್ನದೊಸೆಗೆ.’
(…………ರುಡಾಲಿಯ ಸ್ವಗತ…)
‘ಆ ಬೇಟಿಯ ಈ ಕತಿ’ ಎನ್ನುವ ಕವನದಲ್ಲಿ ಜಯಶ್ರೀಯವರು ಅಜ್ಜಿ ಹೇಳುವ ಜಾನಪದ ಕತೆಯ formatಅನ್ನು ಬಳಸಿದ್ದಾರೆ.
‘ಎರಡು ಹೆರಳಿನ-ಅರಳುಕಣ್ಣಿನ
ಪ್ರಶ್ನೆಸಾಲಿಗುತ್ರ ಹೇಳೋ ಸುಭಗ!’
ಎನ್ನುವಾಗ ಕಥೆಯನ್ನು ಕೇಳುತ್ತಿರುವವಳು
ಮುಗ್ಧ ಬಾಲಕಿ ಎನ್ನುವುದರ ಅರಿವಾಗುತ್ತದೆ. ಇದು ಎಳೆಯ ರಾಜಕುಮಾರಿಯನ್ನು ರಾಕ್ಷಸನು ಹೊತ್ತೊಯ್ದ ಕಥೆ.
‘ಒದ್ದಿ ಮುದ್ದಾಗಿ ಥರಥರ
ನಡಿಗಿ ಗಿಳಿಹಂಗ ಹೆಣ್ಣು,
ಎದಿ ಮುಚ್ಚಲ್ಯೋ
ಕೈಕೆಳಗ ಮಾಡಲ್ಯೋ?
ಯಾವ ದಿಕ್ಕಿಗ್ಹೋದರ
ಉಳಿದಾವೆ ಮಾನ! ಇರೂದೊಂದೇ ಶೀಲ!’
ಇದು ಮಾನ ಅಥವಾ ಶೀಲವನ್ನು ಉಳಿಸಿಕೊಳ್ಳುವ
ಪ್ರಶ್ನೆಯಷ್ಟೇ
ಅಲ್ಲ; ಬದುಕಿನುದ್ದಕ್ಕೂ
ನರಕದಲ್ಲಿ ಸುಡುವ ಪ್ರಶ್ನೆ. ಈ ಬಾಲೆಯನ್ನು ಉಳಿಸಲು ಯಾವ ರಾಜಕುಮಾರ ಬಂದಾನು? ಈ ಪ್ರಶ್ನೆಗೆ ಉತ್ತರವಿಲ್ಲ.
ಕವನ ಕೊನೆಯಾಗುವುದೇ ಹಾಗೆ:
‘ಮುಂದೇನು ಪ್ರಶ್ನಿ?
ಅದೇ—ತಗೀತೇನು ಚಿಲಕಾ?’
(…..‘ಆ ಬೇಟಿಯ ಈ ಕತಿ’)
ಈ ಸಂಕಲನದ ಕವನಗಳ ಬಗೆಗೆ ಬರೆಯಲು ಹೊರಟರೆ, ಪ್ರತಿಯೊಂದು ಕವನಕ್ಕೂ ನಾಲ್ಕು ಪುಟಗಳಷ್ಟು ಬರೆಯಬೇಕಾದೀತು. ಆದುದರಿಂದ ನನಗೆ ವೈಯಕ್ತಿಕವಾಗಿ
ಅತಿ ಮೆಚ್ಚುಗೆಯಾದ
ಎರಡು ಕವನಗಳೆಂದರೆ: (೧) ‘ಅವಳು’ (೨) ಮತ್ತು ‘ನಕ್ಷತ್ರ ಕಡ್ಡಿ’ ಎಂದಷ್ಟೇ ಹೇಳಬಯಸುತ್ತೇನೆ. ಏಕೆಂದರೆ ಈ ಎರಡೂ ಕವನಗಳಲ್ಲಿ ಅಂತಃಕರಣದ ಬುಗ್ಗೆ ಚಿಮ್ಮಿದೆ:
‘ಒಲೆಯ ಮೇಲುಕ್ಕಿದ ಹತ್ತು ಹನಿ
ಹಾಲಿಗೆ ಸಕ್ಕರೆಯಿಟ್ಟು
‘ಕೃಷ್ಣ’ ಎನ್ನುವಾಗ—
ಅವಳ ನೆನಪಾಗುತ್ತದೆ.
…………………
……………….
ಕೈಬೀಸಿ ಕರೆದವಳ
ಬೊಗಸೆದುಂಬಿ ಎದೆಗೆತ್ತಿಕೊಳ್ಳಹೊರಟಾಗ
ಕರಗಿಹೋಗುವ ಅವಳ ನೆನಪಾಗುತ್ತದೆ…
ಕಣ್ಣೀರು ಕಟ್ಟೊಡೆದುಬಿಡುತ್ತದೆ.’
(……………ಅವಳು)
‘ನೀ
ಹೀಗೆ ಬೊಚ್ಚು ಬಾಯಿಯ
ನಗೆ ಸೂಸು ಹಗಲಿರುಳು,
ಇರಲಿ ಬಿಡು ಕೊನೆತನಕ
ಆ ನಗು ತುಟಿಯಲ್ಲಿ.’
(…………….ನಕ್ಷತ್ರಕಡ್ಡಿ)
ಜಯಶ್ರೀಯವರು ತಮ್ಮ ಕವನಗಳನ್ನು ರೂಪಕಗಳಲ್ಲೇ ಹೆಣೆಯುತ್ತಾರೆ!
ಉದಾಹರಣೆಗೆ ನೋಡಿರಿ:
ವೃಂದಾವನದ ತುಳಸಿ ಮನೆಯೊಳಗೆ ಬಾರಳು,
ನೇರ ಹರಿವ ಹೊನಲಾಗದೆ ನೀ ಕವಲೊಡೆದೆಯಲ್ಲ,
(………………ಬಂಧ)
ಕಾಯಿ ಹಣ್ಣಾಗಿ
ಕೊಳೆತು ಮಣ್ಣಾಗಿ
ಮತ್ತೆ ಚಿಗುರಿದ
ಹಸಿ ರೆಂಬೆಗೆ ನೇತಾಡಿದ ಹೊಸ ಮರಿಗೆ
ಉಕ್ಕೇರಿದ
ಹುಕಿ,
ಇತಿಹಾಸಕ್ಕೆ
ಮರುಕಳಿಸುವ ಹುಚ್ಚಂತೆ
(……ಹಸಿ ರೆಂಬೆಗೆ ನೇತಾಡಿದ ಹೊಸ
ಮರಿ)
ಜಯಶ್ರೀಯವರ
ಕವನಗಳಲ್ಲಿ ಶ್ಲೇಷೆಗಳಿಗೇನೂ ಕೊರತೆಯಿಲ್ಲ.
ಉದಾಹರಣೆ:
(೧)‘ಆ ಬೇಟಿಯ ಈ ಕತೆ’ : ಇಲ್ಲಿ ಬೇಟಿ
ಎಂದರೆ ಮಗಳು ಎನ್ನುವ ಅರ್ಥವೂ ಹೌದು; ‘ಬೇಟೆ’ (=prey) ಎನ್ನುವ ಅರ್ಥವೂ ಹೌದು.
(೨) ‘ಬಾಂಗಿನ ಮೊರೆತಕ್ಕೆ ಕಿಸ್ಸೆಂದು ಬಾಯಿ ತೆರೆದ ನಸುಕು’.
‘ಗರ್ಭ’ ಎನ್ನುವ ಕವನದಲ್ಲಿಯ ಸಾಲಿದು. ಇಲ್ಲಿ ಕಿಸ್ಸೆಂದು ಎನ್ನುವ ಪದವನ್ನು ‘ಕಿಸ್ ಎಂದು’ ಎಂದು ಬದಲಾಯಿಸಿಕೊಂಡಾಗ ಹೊರಡುವ ಅರ್ಥವೇ ಬೇರೆ!
(೩) ಬಣ್ಣ ರಮ್ಮು, ಜಿನ್ನು,
ಕೆಚಪ್ಪುಗಳ
ಗಾಢದಲ್ಲಿ ಕಲಸಿ ಅವರ ತುಂಡು ಸ್ಕರ್ಟಿನ
ಮೇಲೆ
ಶತಮಾನದ ಒತ್ತುಕಲೆ!
(……..ಉತ್ಪ್ರೇಕ್ಷಿತ)
(‘ಒತ್ತುಕಲೆ’ ಎನ್ನುವ ಪದವನ್ನು ಗಮನಿಸಿರಿ. ಮಸಿಯನ್ನು ಒತ್ತಿ ಹಾಕುವ
Blotting ಪೇಪರಿಗೆ ಕನ್ನಡದಲ್ಲಿ ‘ಒತ್ತುಕರಡು’ ಎನ್ನುವ ರೂಢಿಯಿದೆ. Blot ಎನ್ನುವ ಪದಕ್ಕೆ ಕಲಂಕ ಎನ್ನುವ ಅರ್ಥವೂ ಇರುವುದನ್ನು ಗಮನಿಸಬೇಕು. ಸಾಮಾನ್ಯ ಅರ್ಥ, ಸೂಚ್ಯಾರ್ಥ ಹಾಗು ಶ್ಲೇಷಾರ್ಥಗಳನ್ನು ಒಳಗೊಂಡ
ಪದವಿದು.)
(೩)ಇನ್ನು ವಾಕ್ಯವೊಂದರಲ್ಲಿ ಒಂದು ಕೊಟೇಶನ್ ಚಿಹ್ನೆಯನ್ನು ಕೊಡುವ
ಮೂಲಕ ಎರಡರ್ಥಗಳನ್ನು ಕೊಡುವ ಉದಾಹರಣೆಯೊಂದು ಹೀಗಿದೆ:
ಕಮಲದೆಲೆಯ
ಮೇಲಣ ಇಬ್ಬನಿಯಾಗಿ
ಒಂದಿಲ್ಲೊಂದು
ದಿನ ‘ಅವ’ ಸರಿಸಿದಾಗ
ಸರಿದು ಹೋಗೋಣ…..
ಏನಂತೀರಿ?
ಅಶ್ವಹೃದಯವನ್ನು ಬಲ್ಲವರೇ ಕುದುರೆಯನ್ನು
ಪಳಗಿಸಬಲ್ಲರು ಎಂದು ಹೇಳುತ್ತಾರಲ್ಲವೆ, ಹಾಗೆಯೇ ಭಾಷಾಹೃದಯವನ್ನು
ಬಲ್ಲವರೇ ಭಾಷೆಯನ್ನು ಪಳಗಿಸಬಲ್ಲರು. ಇವರೇ ಕವಿಗಳು!
ಜಯಶ್ರೀಯವರ ಕವನಶೈಲಿಯ ಬಗೆಗೆ ಹೇಗೆ ಹೇಳಲಿ? ಪದಸಂಪತ್ತಿಯ ಬಗೆಗೆ ಹೇಳಲೆ, ವರ್ಣನಾವೈಭವದ ಬಗೆಗೆ ಹೇಳಲೆ,
ಅಲಂಕಾರಗಳ ಬಗೆಗೆ ಹೇಳಲೆ? ನಿಮ್ಮೆದುರಿಗೆ ಅವುಗಳನ್ನು ಪ್ರಸ್ತುತ ಪಡಿಸುವುದೇ ಉತ್ತಮ ಕಾರ್ಯವೆನಿಸುತ್ತದೆ. ಆದುದರಿಂದ ಕೆಲವು ಉದಾಹರಣೆಗಳನ್ನು ಮಾತ್ರ ಕೊಡುತ್ತೇನೆ:
(೧) ರಾತ್ರಿ ಬರುತ್ತದೆ, ಬರುತ್ತಲೇ ಇರುತ್ತದೆ.
ಕ್ಷಿತಿಜ ಬಳಿದುಕೊಂಡಿದ್ದ ಸಂಜೆರಂಗಿಗೆ
ಮುಸುಕಿಟ್ಟು ನಗುತ್ತದೆ.
(………..ಚುಕ್ಕಿ)
(೨) ಸುಪ್ತಭಾವದ ಸಂಕೀರ್ಣ ಹೊಳಹುಗಳ
ಮಿರುಗೆಲ್ಲವ ತಿಕ್ಕಿ ತೀಡಿ ಮುದುಡಿಸಿ
ತನ್ನದೇ ಮುಖವಾಡವಿಟ್ಟಿತು
(…..ಮಾತು ಕೇಳದ ಕತೆ!)
(೩)ನಾನರಿಯೆ ಮರ್ತ್ಯಾಮರ್ತ್ಯಗಳ ಕುಹರಗರ್ಭಗಳಲ್ಲೇನಿದೆಯೆಂದು
………………………………………………..
ಜೀವಜಾತರ ಪ್ರಜ್ಞೆಸಾಲು ತೆರೆದ ನಚಿಕೇತನಾಗಿ
(……………ಯತ್ಕಿಂಚಿತ್)
(೪) ಕೊನೆಗೆ ನದಿದಂಡೆಯಲಿ ಜಟಾಜೂಟಕ್ಕೊಂದಿಷ್ಟು
ಕಂಡವರು ತಂದ ನೀರು ಹನಿಸಿಕೊಂಡು
ಕೂತ ಬೂದಿಭಾರದ ತತ್ವಜ್ಞಾನಿ
ಮುಕ್ಕಣ್ಣನ ಮೂರನೆಯ ಕಣ್ಣು ತೆರೆಯದಿರಲಪ್ಪ
(೫) ಸವೆದು ಹೋದ ದಾರದಿಂದ ಕಟ್ಟಬಾರದು ಕೆಳೆತನ
……………………………….
ಕ್ಷತಿಗಳಿಗೆ ಬಳಿವ ತನಿಲೇಪಕ್ಕೆ
ಹಾತೊರೆದೆ.
……………………………….
ಸಪ್ತಪದಿಗೂ ತಾಕುವುದೇ ಕಿಲುಬು?
(…………………ಬಂಧ)
(೬) ಪಾರಿಜಾತ ಪುಲಕಿಸಿ ಅಂಗಳದ ತುಂಬ
ಮೈ ನಡುಗಿಸಿ ಉದುರಿ ಬಿಳಿಕೇಸರಿ ರಂಗೋಲಿ,
ಪೋಣಿಸಿ ಕೊಳಲೂದುವವನಿಗಿಡುವ ಹೊತ್ತು
………………………………..
ಉಗ್ಗಡಿಸಿ ಚೂತವನದಿಂಪಿನ ಮಧ್ಯಮಾವತಿ!
(…………..........…ಗರ್ಭ)
(ಟಿಪ್ಪಣಿ: ಕರ್ನಾಟಕ ಸಂಗೀತದಲ್ಲಿ ಮಧ್ಯಮಾವತಿ ರಾಗವು
ಕಚೇರಿಯ
ಕೊನೆಯಲ್ಲಿ ಹಾಡುವ ರಾಗ)
ಕೊನೆಯಲ್ಲಿ ಹಾಡುವ ರಾಗ)
(೭) ಉತ್ಪ್ರೇಕ್ಷಿತ,
ಉತ್ಕಂಠಿತ ಆಸೆಗಳ ಹೊಂಡದಲ್ಲಿಳಿದು
ಸುತ್ತುಮುತ್ತುವ ಮತ್ತೇಭವಿಕ್ರೀಡಿತರ…
(ಮತ್ತೇಭವಿಕ್ರೀಡಿತ ಎನ್ನುವುದು ಒಂದು ವೃತ್ತವೂ ಹೌದು; ಇಲ್ಲಿ ಮದವೇರಿದ ಆನೆಯ ಜಿಗಿದಾಟವೂ ಹೌದು.
ಆನೆಗಳು ಹೊಂಡದಲ್ಲಿಳಿದು ಚೆಲ್ಲಾಟವಾಡುತ್ತವೆ ಎನ್ನುವುದು ಒಂದು ವಾಸ್ತವಿಕತೆ.)
(೮) ಮಸಣದ ದೀಪದುರಿ ನನ್ನ ಮನೆದೀಪದ
ದೊಂದಿ
……………………………..
ಹೋ! ನನಗಿಲ್ಲ ನಾಚಿಕೆ ಎದೆಹೊಡೆದು
ಗುದ್ದಿ
ಭೋರಾಡಿ— ಪಂಚಮ, ಷಡ್ಜ, ತಾರಕಗಳೆಲೆಲ್ಲ ಇಳಿದ
ಘೋರ ಅಳು, ಸತ್ತ ಎಮ್ಮೆಗೆ ಸೇರು ಹಾಲು!
ಸದ್ಗುಣಗಾಥಾ ಪ್ರವಾಹ, ಹೊಗಳಿದಷ್ಟೂ ಮರುಕದೆರೆ,
ತಪ್ಪಿಲ್ಲ ಏನ, ಇದ್ದದ್ದೇ ಇಳಿದು ಬಂದ ಶೋಕಾವತರಣ.
(……………….ರುಡಾಲಿ)
(ಟಿಪ್ಪಣಿ: ಬೇಂದ್ರೆಯವರ ‘ಗಂಗಾವತರಣ’ವನ್ನು ನೆನೆಪಿಸಿಕೊಳ್ಳಿರಿ.)
(೯)ಆದರೂ ಎದೆಯ ಸೆಲೆಬಿರಿದು
ಉಕ್ಕುವ
ನೀರ ಝರಿಗೆ ಎಂದೆಂದೂ ಬತ್ತದ ಶಕ್ತಿ
ಎಷ್ಟು ಹರಿದರೂ ಮತ್ತೆ ತುಂಬಿಕೊಳ್ಳುವ ಕಸುವು
ಕಾರಣ ಇಷ್ಟೇ,
ಹೊಸ ನೋವುಗಳಿಗೆ ಬರವಿಲ್ಲದ ಬದುಕಿದು
(…..ನಲ್ಲಿಗಳು ಸೋರುತ್ತಿರುತ್ತವೆ)
(೧೦) ‘ಎದೆಹಾಲಿನ ಕತೆಗಿತೆ, ಮರುಳೆ ನಿನಗೆ? ರಬ್ಬಿಶ್!’
…………………………………
‘ಇತಿಹಾಸಕ್ಕೆ ಮರುಕಳಿಸುವ ಹುಚ್ಚಂತೆ.’
……………………
‘ಅಂದಂದಿನ ವರ್ತಮಾನಕ್ಕೆ
ಸುರಿದ ಭೂತದ ಕಣ್ಣೀರು!’
(…………….ಹಸಿ ರೆಂಬೆಗೆ ನೇತಾಡಿದ ಹೊಸ ಮರಿ)
(೧೦) ಕನಸಿಗೂ ಉಂಟೆ?
ಆಯ್ದುಕೊಳ್ಳುವ ಹಕ್ಕು
(…………ಪ್ಯಾರಾಡೈಸ್ ಲಾ˘ಸ್ಟ್)
(೧೧) ‘ಶಬ್ದ ಈಸಿಕ್ವಲ್ ಟು ಬಾಣ
ಎನ್ನುವದಕ್ಕೇನರ್ಥ?’
(………….ಅಗಳ್ತೆ)
(೧೨) ‘ಲಕ್ಷ ಅಕ್ಷರದ ಚಿತ್ತಾರ ಬಿಡಿಸಿದ ದವತಿಯ ಕರಿ ಶಾಯಿ.’
(……………..ದಾಹ)
(೧೩) ಧೂಳು ಮಣ್ಣೂ ಹರಡಿ ಉಚ್ಛೃಂಖಲ
ವ್ಯೋಮಧೂಮದ ಮಳೆ ಬಿದ್ದುಬಿಟ್ಟಿತ್ತು.
(……………..ಪ್ರತಿಮೆ)
(೧೪) ಜಗತ್ತಿಗೇನು? ಇಲ್ಲಿದೆ ಇಲ್ಲೇ ಇರುತ್ತೆ,
ಬಂಡಿ ಬಂದಾಗ ಏರಲು ಕಾದು ಕೂತವರ ಅಸ್ತವ್ಯಸ್ತ ಸಾಲುಸಾಲು!
(.......................................ಶೈಥಿಲ್ಯ)
(೧೫) ಪಡುವಣದ ನಲ್ಗಾಳಿ ಶುಕಪಿಕಗಳ ಗರಿ—
ಕೊಕ್ಕಿನಡಿ ಬಚ್ಚಿಟ್ಟು ಒಯ್ಯುತಿರೆ
ಒಲವಿನ ಸಂದೇಶವನು ಮೂಡಣದೆಡೆಗೆ.
(…………………ಪವನದ ಪರಿ)
ಇಷ್ಟು ಸಾಕು!
‘ಯತ್ಕಿಂಚಿತ್’ ಕವನಸಂಕಲನದ ಬಗೆಗೆ ಎಷ್ಟು ಹೇಳಿದರೂ ಕಡಿಮೆಯೇ. ಬೆಲ್ಲದ ಸವಿಯನ್ನು
ವರ್ಣಿಸಬಾರದು, ತಿಂದೇ ನೋಡಬೇಕು!
ಜಯಶ್ರೀ ದೇಶಪಾಂಡೆಯವರು ಇನ್ನಷ್ಟು ಸಾಹಿತ್ಯವನ್ನು
ಸೃಷ್ಟಿಸಿ ನಮಗೆಲ್ಲರಿಗೂ ಮುದವೀಯಲಿ ಎಂದು ಆಶಿಸುತ್ತೇನೆ.
…………………………………………………………….
ಟಿಪ್ಪಣಿ:
(೧)ಏಳು ಹೆಜ್ಜಿ: ವಧೂವರರು ಅಗ್ನಿಯ ಸುತ್ತಲೂ ತಿರುಗುವ ಸಪ್ತಪದಿ ಆಚರಣೆ
(೨) ಎಂಟು ವಚನಗಳು: ಸಪ್ತಪದಿಯ ಸಮಯದಲ್ಲಿ ವರನು ವಧುವಿಗೆ ಹೇಳುವ ಎಂಟು ವಚನಗಳು
(oath)ಹೀಗಿವೆ:
(ಇವುಗಳಲ್ಲಿ ಪಾಠಾಂತರಗಳೂ ಇವೆ.)
(೧) ಇಷೇ ಏಕಪದಾ ಭವ,
ಸಾ ಮಾಮ್ ಅನುವ್ರತಾ ಭವ.
(ಸಮೃದ್ಧಿಗಾಗಿ ಮೊದಲ ಹೆಜ್ಜೆಯನ್ನು ನನ್ನನನುಸರಿಸಿ ಇಡು.)
(೨) ಊರ್ಜೇ ದ್ವಿಪದಾ ಭವ, ಸಾ ಮಾಮ್ ಅನುವ್ರತಾ ಭವ.
(ಶಕ್ತಿಗಾಗಿ ಎರಡನೆಯ ಹೆಜ್ಜೆಯನ್ನು ನನ್ನನನುಸರಿಸಿ ಇಡು.)
(೩) ರಾಯಸ್ಪೋಷಾಯ ತ್ರಿಪದಾ ಭವ,
ಸಾ ಮಾಮ್ ಅನುವ್ರತಾ ಭವ.
(ಧನದ ವೃದ್ಧಿಗಾಗಿ ಮೂರನೆಯ ಹೆಜ್ಜೆಯನ್ನು ನನ್ನನನುಸರಿಸಿ ಇಡು.)
(೪) ಮಾಯೋಭವಾಯ ಚತುಷ್ಪದಾ ಭವ,
ಸಾ ಮಾಮ್ ಅನುವ್ರತಾ ಭವ.
(ಮಮತೆಯುಂಟಾಗುವದಕ್ಕಾಗಿ ನಾಲ್ಕನೆಯ ಹೆಜ್ಜೆಯನ್ನು ನನ್ನನನುಸರಿಸಿ ಇಡು.)
(೫)
ಪ್ರಜಾಭ್ಯಃ ಪಂಚಪದಾ ಭವ, ಸಾ ಮಾಮ್ ಅನುವ್ರತಾ ಭವ.
(ಸಂತಾನಕ್ಕಾಗಿ ಐದನೆಯ ಹೆಜ್ಜೆಯನ್ನು ನನ್ನನನುಸರಿಸಿ ಇಡು.)
(೬)ಋತುಭ್ಯಃ ಷಟ್ಪದಾ ಭವ, ಸಾ ಮಾಮ್ ಅನುವ್ರತಾ ಭವ.
(ಎಲ್ಲಋತುಗಳೂ ನಮಗೆ ಸಂತೋಷದಾಯಕವಾಗಲಿ,
ಅದಕ್ಕಾಗಿ ನನ್ನೊಡನೆ ಆರನೆಯ ಹೆಜ್ಜೆಯನ್ನಿಡು.)
(ಎಲ್ಲಋತುಗಳೂ ನಮಗೆ ಸಂತೋಷದಾಯಕವಾಗಲಿ,
ಅದಕ್ಕಾಗಿ ನನ್ನೊಡನೆ ಆರನೆಯ ಹೆಜ್ಜೆಯನ್ನಿಡು.)
(೭) ಸಖಾ ಸಪ್ತಪದಾ ಭಾವ
(ನಮ್ಮ ಪರಸ್ಪರ ಕೆಳೆತನಕ್ಕಾಗಿ ಏಳನೆಯ ಹೆಜ್ಜೆಯನ್ನಿಡೋಣ)
(೮) ಸಖ್ಯಂ ತೇ ಗಮೇಯಮ್,
ಸಖ್ಯಾತ್ ತೇ ಮಾಯೋಷಮ್, ಸಖ್ಯಾನ್ಮೇ ಮಾಯೋಷ್ಠಾ
(ನಿನ್ನ ಗೆಳೆತನವು ನನಗೆ ದೊರೆಯಲಿ, ನಿನ್ನ ಗೆಳೆತನದಿಂದ ನಾನು ದೂರ ಸರಿಯದಿರಲಿ,
ನನ್ನ ಗೆಳೆತನದಿಂದ ನೀನೂ ದೂರ ಸರಿಯದಿರಲಿ.)
(ನಿನ್ನ ಗೆಳೆತನವು ನನಗೆ ದೊರೆಯಲಿ, ನಿನ್ನ ಗೆಳೆತನದಿಂದ ನಾನು ದೂರ ಸರಿಯದಿರಲಿ,
ನನ್ನ ಗೆಳೆತನದಿಂದ ನೀನೂ ದೂರ ಸರಿಯದಿರಲಿ.)
ವಧುವಿನಎದೆಯನ್ನು ಮುಟ್ಟಿ ಹೇಳುವ ಮಾತು:
ಮಮ ವ್ರತೇ ತೇ ಹೃದಯಂ ದದಾಮಿ
ಮಮಚಿತ್ತಮನುಚಿತ್ತಂ ತೇ ಅಸ್ತು
ಮಮವಾಚಮೇಕಮನಾ ಜುಷಸ್ವ
ಪ್ರಜಾಪತಿಸ್ತ್ವಾನಿಯನಕ್ತಿ ಮಹ್ಯಮ್
(ನನ್ನ ವ್ರತದಲ್ಲಿ ನಿನಗೆ ನನ್ನ ಹೃದಯವನ್ನೇ ಕೊಡುತ್ತೇನೆ. ನಿನ್ನ
ಚಿತ್ತವು ನನ್ನ ಚಿತ್ತಕ್ಕೆ ಅನುಕೂಲವಾಗಲಿ, ಒಂದೇ ಮನಸ್ಸಿನಿಂದ ನೀನು ನನ್ನ ಮಾತುಗಳನ್ನು
ಪಾಲಿಸಬೇಕು, ಪ್ರಜಾಪತಿಯು ನನಗಾಗಿ ನಿನ್ನನ್ನು ಯೋಜಿಸಲಿ)
…………………………………………………………………………………………..
ಈ ಕವನಸಂಕಲನವು ದೊರೆಯಬಹುದಾದ ಸ್ಥಳ:
‘ಮಾಧ್ಯಮ ಅನೇಕ ಪ್ರೈ.ಲಿ.’
# ೭೯೬, ೯ನೆಯ ಮೇನ್, ಮೆಟ್ರೋ ಸ್ಟೇಶನ್ ಹತ್ತಿರ
ಇಂದಿರಾನಗರ, ಬೆಂಗಳೂರು-೫೬೦ ೦೩೮.
10 comments:
ತುಂಬುಹೃದಯದ ಧನ್ಯವಾದಗಳು ಸರ್. ನನ್ನ ಕವನಗಳ ಗೌರವವನ್ನು ತಮ್ಮ ಅದ್ಭುತ ಲೇಖನಿಯಿಂದ ಹೆಚ್ಚಿಸಿದ್ದೀರಿ.
ಕೃತಜ್ಞಳು ನಾನು ನಿಮಗೆ.
ನನ್ನದೇನಿದೆ, ಮೇಡಮ್? ಬೆಳದಿಂಗಳು ಹೆಚ್ಚೊ, ಅದರ ವಿಮರ್ಶೆ ಹೆಚ್ಚೊ?!
ವಾವ್ ವಾವ್! ಇಂಥ ಸುಂದರ ಕವನಗಳನ್ನು ಬರೆದಿರುವ ಜಯಶ್ರೀ ದೇಶಪಾಂಡೆ ಅವರೀಗೆ ಮತ್ತು ಸುಂದರ ವಿಮರ್ಶೆ ಬರೆದಿರುವವರೆಗೆ ನನ್ನ ಕೋಟಿ ನಮನಗಳು!
ಪ್ರಿಯ ಸಾಗರ,
ಅಭಿನಂದನೆಗಾಗಿ ಧನ್ಯವಾದಗಳು. ಜಯಶ್ರೀ ದೇಶಪಾಂಡೆಯವರ ಕವನಗಳು ಸುಂದರವಾಗಿವೆ ಎನ್ನುವುದರಲ್ಲಿ ಸಂದೇಹವಿಲ್ಲ. ‘ಹೂವಿನ ಜೊತೆಗೆ ನಾರು’ ಎನ್ನುವಂತೆ ನನ್ನ ಲೇಖನವೂ ಮೆಚ್ಚುಗೆ ಗಳಿಸಬಹುದು!
ಧನ್ಯವಾದಗಳು ಶ್ರೀ ಸಾಗರ ಅವರೇ 🙏
This huge collection of poems by Jayashree Deshpande (very proud to have her as my Mother-in-law) is a testament to her keen sense of observation. I have been to several European historical places with her. After every trip, she writes a travelog with such fine details that makes me wonder when did all that information sink in, while nothing much seems to have sunken in in my brain. Amazing analytical powers. If she were a scientist, she would be in the ranks of the greats. The analysis by Shri Sagar is equally mesmerizing. Kudos to you, Maami.
With Love - Narasimha
ನರಸಿಂಹ ಶೂರ್ಪಾಲಿಯವರಿಗೆ ಧನ್ಯವಾದಗಳು. ಜಯಶ್ರೀ ದೇಶಪಾಂಡೆಯವರ ಸೂಕ್ಷ್ಮಗ್ರಹಣಶಕ್ತಿ ಹಾಗು ವಿದ್ವತ್ತು ಪ್ರಶಂಸನೀಯವಾಗಿವೆ.
Very thankful for your great review Sunaath sir.You have seen beyond the lines and explained the depth of Mrs Jayashree Deshpande's poems in detail. Writing and review complement each other. Thank you
Narasimha Shurpali,
Thank you very much for your beautiful comment on the review of my poetry herein.I find myself to be fortunate to get my writings reviewed in sunatha kaaka's sallapa blog.he is doing such a great service to the kannada literature by evaluvating the literature of many many schlolarly writrs.
you have mentioned about the wonderful trips I have made throught the European continent with you all. yes, it has energised me to write me more.I Thank you again.
ಪೂಜಾ ಮೇಡಮ್, ನಿಮ್ಮ ಸ್ಪಂದನೆಗಾಗಿ ಧನ್ಯವಾದಗಳು. ಸಾಹಿತ್ಯ ಕೊಡುವ ಸುಖ ಅಪೂರ್ವವಾದದ್ದು!
Post a Comment