ವ್ಯಾಸ ದೇಶಪಾಂಡೆ: ವ್ಯಾಸ ದೇಶಪಾಂಡೆಯವರು ಕನ್ನಡದ ಖ್ಯಾತ ನಾಟಕಕಾರರು. ‘ಮುಂದೇನ ಸಖಿ ಮುಂದೇನ’ ಎನ್ನುವುದು ಇವರು ಬರೆದ ಮೊದಲ ನಾಟಕವಾಗಿದೆ. ಇದು ಕನ್ನಡದ ಪ್ರಪ್ರಥಮ psychedelic ನಾಟಕವೂ ಅಹುದು. (ಈವರೆಗೆ ಕನ್ನಡದಲ್ಲಿ ಬೇರೊಂದು psychedelic ನಾಟಕ ಬಾರದಿರುವದರಿಂದ ಇದೇ ಕನ್ನಡದ ಕೊನೆಯ psychedelic ನಾಟಕವೂ ಆಗಿರಬಹುದು!)
ಈ ನಾಟಕವು ಕನ್ನಡದ ಸಾಹಿತ್ಯಿಕ-ಸಾಂಸ್ಕೃತಿಕ ಪತ್ರಿಕೆಯಾದ ‘ಸಾಕ್ಷಿ’ಯಲ್ಲಿ
ಪ್ರಕಟವಾಗಿತ್ತು. ಆಬಳಿಕ ಬಿ.ವಿ.ಕಾರಂತರು ಈ ನಾಟಕವನ್ನು ಮುಂಬಯಿಯ ರಂಗದ ಮೇಲೆ ಪ್ರದರ್ಶಿಸಿದರು. ವ್ಯಾಸ ದೇಶಪಾಂಡೆಯವರ ಇನ್ನೂ ಅನೇಕ ನಾಟಕಗಳು ರಂಗಪ್ರದರ್ಶನವನ್ನು ಕಂಡಿವೆ. ಈ ಲೇಖನದಲ್ಲಿ ವ್ಯಾಸ ದೇಶಪಾಂಡೆಯವರು ಗಿರೀಶ ಕಾರ್ನಾಡರು ಬರೆದ ‘ರಾಕ್ಷಸ ತಂಗಡಿ’ ನಾಟಕದ ವಿಶ್ಲೇಷಣೆಯನ್ನು ಐತಿಹಾಸಿಕ ದೃಷ್ಟಿಯಿಂದ
ಮಾಡಿದ್ದಾರೆ. ಕಲ್ಪನೆಯು ಇತಿಹಾಸದ ವಾಸ್ತವತೆಯಿಂದ ಎಷ್ಟರ ಮಟ್ಟಿಗೆ ದೂರ
ಸರಿದರೆ ಅದು ಅಪಚಾರವಾದೀತು ಎನ್ನುವ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ಇಲ್ಲಿದೆ. -ಸುನಾಥ
******************************************
: ‘ರಾಕ್ಷಸ-ತಂಗಡಿ’, ನಾಟಕ; ‘ತಾಂತ್ರಿಕ ಮೆರಗು-----ಐತಿಹಾಸಿಕ ಕುರುಡು’
ವ್ಯಾಸ ದೇಶಪಾಂಡೆಯವರಿಂದ
ಒಂದು ವಿಶ್ಲೇಷಣೆ
‘ರಾಕ್ಷಸ-ತಂಗಡಿ’ ನಾಟಕವನ್ನು ನಾನು ಓದಿದ್ದು ಶ್ರೀ ಗಿರೀಶ ಕಾರ್ನಾಡರು ತೀರಿಕೊಂಡ ಮೇಲೆ, ಅಂದರೆ ಇದೇ ಜೂನ್ ೨೪ ಹಾಗು ೨೫ರಂದು. ಕಾರ್ನಾಡರ ಇದಕ್ಕೂ ಮೊದಲಿನ ನಾಟಕ ‘ಟಿಪ್ಪೂ ಸುಲ್ತಾನನ ಕನಸುಗಳು’ ಹಿಂದೂವಿರೋಧಿಯೆಂದು ಬಿಂಬಿಸಲ್ಪಟ್ಟು
ವಿವಾದಿತವಾಗಿತ್ತು. ಮಧ್ಯಯುಗೀನ ಹಿಂದೂ-ಮುಸ್ಲಿಮ ಘರ್ಷಣೆಯೇ ‘ರಾಕ್ಷಸ-ತಂಗಡಿ’ ನಾಟಕದ ವಸ್ತುವಾಗಿದೆ. ‘ಹಿಂದೂ-ಮುಸ್ಲಿಮ್ ದಂದುಗದಲ್ಲಿ ನಾಟಕಕಾರನು ನಿರ್ಲಿಪ್ತ ನಿರಾಸಕ್ತಿಯನ್ನು ಕಾಯ್ದುಕೊಂಡಿದ್ದಾನೆಯೇ ಅಥವಾ ಒಂದು ಕಡೆಗೆ ವಾಲಿದ್ದಾನೆಯೇ’ ಎನ್ನುವ ಪ್ರಶ್ನೆ ಓದುಗನನ್ನು ವಿಶೇಷವಾಗಿ ಕಾಡದೇ ಬಿಡದು.
ತಾಂತ್ರಿಕ ವಿನ್ಯಾಸ:
ನಾಟಕದ ಬಗೆಗೆ ಹೇಳಬೇಕೆಂದರೆ, ------
ಆರಂಭ ಹಾಗು ಅಂತ್ಯದ ಸೈಕ್ಲೋರಾಮಾ ದೃಶ್ಯಗಳು, ರಂಗಭೂಮಿಕೆಯನ್ನು ಇಬ್ಭಾಗಿಸಿ, ಒಂದು ಕಡೆಗೆ ಸುಲ್ತಾನರ ಫೌಜಿನ
ಡೇರೆಗಳು ಹಾಗು ಇನ್ನೊಂದು ಕಡೆಗೆ ವಿಜಯನಗರದ ಸೈನ್ಯದ ಶಿಬಿರಗಳು, ಎರಡೂ
ದಂಡುಗಳ ಹಾಗು ಯುದ್ಧತಂತ್ರಗಳ ಮುಖಾಮುಖಿ, ಹೀಗೆ ದೃಶ್ಯಗಳ ನಿರ್ಮಾಣದಲ್ಲಿ
ಕಾಲ್ಪನಿಕತೆಯಿಂದ ತಾಂತ್ರಿಕ ನಾಟಕವೊಂದರ
ವಿನ್ಯಾಸವನ್ನು ಸಿದ್ಧಗೊಳಿಸಲಾಗಿದೆ. ಆದರೆ ನಾಟಕವೊಂದರ ಜೀವಾಳವು ಅದು ಪ್ರತಿಫಲಿಸುವ
ಅರ್ಥವಂತಿಕೆಯಲ್ಲಿಯೇ ಇರುತ್ತದೆ.
ಇದೊಂದು ಐತಿಹಾಸಿಕ ನಾಟಕ. ಇಲ್ಲಿ ಏನು ನಡೆಯಿತು ಎಂಬುದಷ್ಟೇ ಅಲ್ಲ: ಏಕೆ ನಡೆಯಿತು ಎಂಬುದನ್ನು ಹೇಳುವುದೂ ಅಷ್ಟೇ ಮುಖ್ಯವಾಗುತ್ತದೆ. ಸತ್ಯವನ್ನು ಹೇಳಲು ಹಿಂಜರಿದರೆ, ತೋರಿಕೆಯ ಸಬೂಬುಗಳನ್ನೇ ಸತ್ಯವೆಂಬಂತೆ
ನಾಟಕದಲ್ಲಿ ಪ್ರಚಾರ ಮಾಡಿದರೆ, ಅಂತಹ ನಾಟಕವನ್ನು ಸತ್ಯದಿಂದ ದೂರವಾದ ರಚನೆಯೆಂದು
ಹೇಳಲೇಬೇಕಾಗುತ್ತದೆ.
ಕಾರ್ನಾಡರ ಕಣ್ಕಟ್ಟಿನ ಇತಿಹಾಸ ಹಾಗು ವಾಸ್ತವ:
ಕ್ರಿ.ಶ. ೧೫೬೫ರಲ್ಲಿ ರಾಕ್ಷಸ-ತಂಗಡಿ ಕಾಳಗ
ಯಾಕಾಗಿ ನಡೆಯಿತು? ದಕ್ಷಿಣದ ನಾಲ್ವರು ಶಾಹಿ ಸುಲ್ತಾನರ ಸಂಯುಕ್ತ ಸೈನ್ಯವು
ಯಾಕೆ ವಿಜಯನಗರದ ಮೇಲೆ ಆಕ್ರಮಣ ನಡೆಸಿತು? ಈ ಪ್ರಶ್ನೆಗಳಿಗೆ ನಾಟಕಕಾರರು
ಕೊಟ್ಟಿರುವ ತುಂಬ ಸರಳವಾದ ಉತ್ತರವೆಂದರೆ----ವಿಜಯನಗರದ ರಾಮರಾಯನ ಆಕ್ರಮಕ
ನೀತಿ! ರಾಮರಾಯನ ವೈಯಕ್ತಿಕ ಮಹತ್ವಾಕಾಂಕ್ಷೆ! ಸುಲ್ತಾನರ ರಾಜ್ಯಭಾರದ ಸಣ್ಣಪುಟ್ಟ ಸಂಗತಿಗಳಲ್ಲಿಯೂ ಹಸ್ತಕ್ಷೇಪ ನಡೆಸುವ ರಾಮರಾಯನ ದಬ್ಬಾಳಿಕೆ
ಹಾಗೂ ಅಹಂಕಾರ! ಅಂದರೆ ನಾಟಕಕಾರರ ದೃಷ್ಟಿಯಲ್ಲಿ ಸುಲ್ತಾನರಿಗೆ ದಕ್ಷಿಣಭಾರತವನ್ನು ಮುಸ್ಲಿಂ ಧ್ವಜದ, ಮುಸ್ಲಿಂ ಛತ್ರಛಾಯೆಯ ಕೆಳಗೆ ತರುವ ‘ಸಾಮ್ರಾಜ್ಯನೀತಿ’ (Imperial Policy, High policy of the state) ಇದ್ದಿರಲೇ ಇಲ್ಲವೆಂದಾಯ್ತಲ್ಲವೇ?
ಆದರೆ ಮಧ್ಯಯುಗೀನ ಭಾರತದ / ದಕ್ಷಿಣಭಾರತದ ಚರಿತ್ರೆ ಹಾಗು ಹನ್ನೊಂದನೆಯ ಶತಮಾನದಿಂದ
ಹದಿನಾರನೆಯ ಶತಮಾನದ ಒರೆಗಿನ ಜಾಗತಿಕ ಮುಸ್ಲಿಂ ಚರಿತ್ರೆಗಳು ಇಂತಹ ಮುಗ್ಧ ನಂಬಿಕೆಗೆ ತದ್ವಿರುದ್ಧವಾಗಿವೆ.
ವಿಶ್ವದಾದ್ಯಂತ ಮುಸ್ಲೀಮ ಧರ್ಮಸಾಮ್ರಾಜ್ಯ ಸ್ಥಾಪನೆಯು ಮಧ್ಯಯುಗದಲ್ಲಿ ಜಾಗತಿಕವಾಗಿ
ಇಸ್ಲಾಮಿನ ಆದರ್ಶವಾಗಿತ್ತು. ಆಕ್ರಮಕ ಸಾಮ್ರಾಜ್ಯನೀತಿಯು ಈ ಆದರ್ಶದ ಭಾಗವಾಗಿತ್ತು.
ಅಲ್ಲಾಉದ್ದೀನ ಖಿಲ್ಜಿಯ ಚಿತ್ತೂರಿನ ಆಕ್ರಮಣವೇ ಆಗಿರಲಿ ಅಥವಾ ಮಲಿಕ್ ಕಾಫರನ ದಕ್ಷಿಣಭಾರತದ
ಆಕ್ರಮಣವೇ ಆಗಿರಲಿ, ಈ ಸಾಮ್ರಾಜ್ಯನೀತಿಯನ್ನು ಜಾರಿಗೊಳಿಸಲು ನಡೆದ ಪ್ರಯತ್ನಗಳೇ
ಆಗಿವೆ!
ಹದಿನಾಲ್ಕನೆಯ ಶತಮಾನದಲ್ಲಿ ವಿಜಯನಗರವು ಸ್ಥಾಪನೆಗೊಂಡಾಗಿನಿಂದಲೇ ಹಿಡಿದು
ರಾಕ್ಷಸ-ತಂಗಡಿಯ ಕಾಳಗದ ಒರೆಗೂ ತನ್ನ ಉಳಿವಿಗಾಗಿ ಬಹಮನಿ, ಬಿಜಾಪುರ, ಅಹಮ್ಮದನಗರ, ಗೋವಳಕೊಂಡ ಮುಂತಾದ
ಸುಲ್ತಾನರೊಂದಿಗೆ ನಡೆಯಿಸಿದ ಯುದ್ಧಗಳಿಗೆ ಲೆಕ್ಕವಿಲ್ಲ. ೨೫೦ ವರ್ಷಗಳ ಈ
ದೀರ್ಘ ಕುಸ್ತಿಯು (EXISTENTIAL STRUGGLE) ೨೦ನೆಯ ಶತಮಾನದಲ್ಲಿ ಇಸ್ರಾಯಿಲ್
ದೇಶವು ನಡೆಸಿದ ತನ್ನ ಬದುಕು-ಸಾವಿನ ಹೋರಾಟಕ್ಕೆ ಸರಿಸಮವಾಗಿದೆ.
೨೫೦ ವರ್ಷಗಳಲ್ಲಿ ಕೊನೆಯ ೫೦ ವರ್ಷಗಳು ರಾಮರಾಯನ ಹೋರಾಟದ ವರ್ಷಗಳು. ಮೊದಲಿನ ಹದಿನೈದು ವರ್ಷಗಳನ್ನು ಶ್ರೀಕೃಷ್ಣದೇವರಾಯನ ಅಳಿಯನಾಗಿ ಹೋರಾಡಿದ ರಾಮರಾಯನು ಮುಂದಿನ ಮೂವತ್ತೈದು
ವರ್ಷಗಳವರೆಗೆ ವಿಜಯನಗರ ಸಾಮ್ರಾಜ್ಯದ ಅಗ್ರನಾಯಕನಾಗಿ , ಸುಲ್ತಾನರ ಸೈನ್ಯಗಳನ್ನು ಸದೆಬಡಿಯುತ್ತ,
ತನ್ನ ಪ್ರಾಣವನ್ನು ಪಣಕ್ಕಿಟ್ಟು ಸಾಮ್ರಾಜ್ಯವನ್ನು ಸಂರಕ್ಷಿಸುತ್ತಾನೆ.
ದೇಶಕ್ಕೇ ರಾಮರಾಯನು ನೀಡಿದ ಕೊಡುಗೆಯನ್ನು ಹುಂಬತನದ ರಾಜಕಾರಣವೆಂದು ಅವಮಾನಿಸಿ ತಳ್ಳಿ
ಹಾಕಬಹುದೆ? ನಮಗೆ, ಭಾರತೀಯರಿಗೆ jingoism ಬೇಡ, ಹಾಗೆಯೇ ಬುದ್ಧ್ಯಾಪೂರ್ವಕ ಆತ್ಮನಿಂದನೆಯೂ
(ಕೀಳರಿಮೆ) ಬೇಡ.
ಒಂದು
ವೇಳೆ ನಾಟಕಕಾರನು ಹೇಳುವಂತೆ ರಾಮರಾಯನ ಪ್ರಚೋದನಕಾರಿ ಕ್ರಿಯೆಗಳೇ ಸುಲ್ತಾನರ ಪ್ರತಿಕ್ರಿಯೆಗೆ ಸಂಪೂರ್ಣವಾಗಿ
ಕಾರಣವಾಗಿದ್ದರೆ, ಯುದ್ಧಕ್ಕೆ ರಾಮರಾಯನೇ
ಕಾರಣವೆನ್ನುವದಾಗಿದ್ದರೆ, ಈ ಮುಂದಿನ ಪ್ರಶ್ನೆಗಳಿಗೆ ಉತ್ತರ ಏನಿದೆ?
(೧) ನಾಲ್ಕೂ ಜನ ಸುಲ್ತಾನರು ತಮ್ಮ ತಮ್ಮ ಸೈನ್ಯಗಳನ್ನು ಈ ಯುದ್ಧಕ್ಕಾಗಿ
ಎಷ್ಟು ವರ್ಷಗಳಿಂದ ಸಜ್ಜುಗೊಳಿಸುತ್ತ, ವಿಸ್ತಾರಗೊಳಿಸುತ್ತ, ಸರ್ವಸಿದ್ಧತೆ ಮಾಡಿಕೊಳ್ಳುತ್ತಿದ್ದರು? ಯುದ್ಧದ ಗುರಿಯೇ ಇಲ್ಲದಿದ್ದರೆ
ಅವರು ಸಿದ್ಧತೆ ಮಾಡಿಕೊಳ್ಳುತ್ತಿದ್ದುದಾದರೂ ಯಾಕೆ?
(೨) ‘ಸಿದ್ಧತೆ’ಯ ಭಾಗವಾಗಿಯೇ ವಿಜಾಪುರದ
ಸುಲ್ತಾನ ಅಲಿ ಆದಿಲ್ ಶಾ ತನ್ನಿಬ್ಬರು ದಳಪತಿಗಳನ್ನು ‘ಕಪಟಕೋಪ’ಕ್ಕೀಡು ಮಾಡಿ, ತಮ್ಮ ‘ಜೀವರಕ್ಷಣೆ’ಗಾಗಿ ಅವರು ವಿಜಯನಗರಕ್ಕೆ ಓಡಿ ಬಂದಂತೆ ನಾಟಕವಾಡಿ, ಆ ಸಹೋದರರು
ತಮ್ಮ ಸಹಚರರೊಂದಿಗೆ ವಿಜಯನಗರದ ಸೈನ್ಯವನ್ನು ಸೇರಿಕೊಳ್ಳುವಂತೆ ಮಾಡಿದ. ರಾಕ್ಷಸ-ತಂಗಡಿ ಕಾಳಗದಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿದ್ದ ಸುಲ್ತಾನನ
ಈ ಗುಪ್ತ ಸೈನಿಕರು ಏಕಾಏಕಿ ವಿಜಯನಗರದ ಸೈನ್ಯದ ಮೇಲೆ ತಿರುಗಿ ಬಿದ್ದು ವಿಜಯನಗರದ ಸೋಲಿಗೆ ಕಾರಣರಾದರಲ್ಲವೆ?
ಇಷ್ಟು ದೀರ್ಘಾವಧಿ ಗುಪ್ತ ಒಳಸಂಚಿಗೆ ಒಂದು ದೊಡ್ಡ ಮಹತ್ವಾಕಾಂಕ್ಷೆ ಕಾರಣವಾಗಿರಬೇಕಲ್ಲವೆ?
(೩) ಸುಲ್ತಾನರ ಸಂಯುಕ್ತ ಸೈನ್ಯವು ಕೃಷ್ಣಾ ನದಿಯನ್ನು ದಾಟಿ ಬಂದು ವಿಜಯನಗರ ರಾಜ್ಯವನ್ನು ಪ್ರವೇಶಿಸಿದಾಗ
ಈ ಕಾಳಗ ನಡೆಯಿತು. ಅಂದರೆ ದಾಳಿಕಾರರು
ಯಾರು? ಯುದ್ಧಕ್ಕೆ ಪ್ರಚೋದನೆ ಯಾರಿಂದ ಆಯಿತು?
(೪) ಮಧ್ಯ ಏಶಿಯಾ ಭಾಗದ ವಿವಿಧ ದೇಶಗಳಿಂದ ಧರ್ಮಯೋಧರು (ಜಿಹಾದಿಗಳು)
ಹಾಗು ಲೂಟಿಕೋರ ಸೈನಿಕರು (mercenary soldiers) ದೊಡ್ಡ
ಸಂಖ್ಯೆಯಲ್ಲಿ ಈ ಯುದ್ಧದಲ್ಲಿ ಭಾಗವಹಿಸಲು ಸುಲ್ತಾನರ ಸೈನ್ಯದೊಂದಿಗೆ ಬಂದಿದ್ದರು. ರಾಜಧಾನಿ ವಿಜಯನಗರವನ್ನು ಕೊಳ್ಳೆ ಹೊಡೆದು ಅಪಾರ ಸಂಪತ್ತನ್ನು ಗಳಿಸಿಕೊಳ್ಳುವುದು ಅವರ ಉದ್ದೇಶವಾಗಿತ್ತು.
ರಾಕ್ಷಸ-ತಂಗಡಿ ಕಾಳಗವು ಈ ಮುಸ್ಲಿಂ ಚರಿತ್ರೆಯಲ್ಲಿ ಕೈಕೊಂಡ
ಇನ್ನೊಂದು ‘ಜೇಹಾದ ಸಮರ’ವಲ್ಲವೆ?
ಕಾರ್ನಾಡರ ಪ್ರಕಾರ, ವಿಜಯನಗರವನ್ನು ಕೊಳ್ಳೆ ಹೊಡೆದು ತಮ್ಮ ಬೊಕ್ಕಸವನ್ನು
ತುಂಬಿಕೊಳ್ಳುವ ದುರಾಸೆ, ದುರುದ್ದೇಶಗಳಿಂದಂತೂ ಸುಲ್ತಾನರು ಯುದ್ಧಕ್ಕೆ
ಬಂದಿಲ್ಲ. ಅದರಲ್ಲಿಯೂ ವಿಜಾಪುರದ ಸುಲ್ತಾನ ಅಲಿ ಆದಿಲ್ ಶಾಹನಂತೂ ಹೆಚ್ಚು
ಕಡಿಮೆ ‘ವಿರಕ್ತ-ಸಂತ-ಸೂಫಿಜ್ಞಾನಿ-ತತ್ವಜ್ಞಾನಿ’! ಈ ನಾಟಕಕ್ಕೆ
ಕಾರ್ನಾಡರು ಸೃಷ್ಟಿಸಿರುವ ಹೀರೋ ಪಾತ್ರ ಯಾರೆಂದರೆ ಆತ ನಿಸ್ಸಂಶಯವಾಗಿ ಅಲಿ ಆದಿಲ್ ಶಾ ನೇ!
ಒಟ್ಟಿನ ಮೇಲೆ ಕಾರ್ನಾಡರು ಮುಸ್ಲಿಂ ಪ್ರಭುತ್ವಗಳು
ಆಕ್ರಮಣಶೀಲವಾಗಿದ್ದವೆಂಬ ಸತ್ಯವನ್ನು ಹೊರಹಾಕಲು ಹಿಂಜರಿಯುತ್ತಾರೆಂಬ ಗುಮಾನಿ ಈ ನಾಟಕವನ್ನು ಓದಿದ
ಮೇಲೆ ಉಂಟಾಗುತ್ತದೆ.
………………………………………………………………………….
ಇತಿಹಾಸ---ತೆರೆದ ಕಣ್ಣೋಟದಿಂದ:
ಜಾಗತಿಕ ಚರಿತ್ರೆಯನ್ನು ಅವಲೋಕಿಸಿದಾಗ
ಬಹುತೇಕ ಜನಾಂಗಗಳು ತಮ್ಮ ತಮ್ಮ ಜನಾಂಗೀಯ ಇತಿಹಾಸದ ಯಾವುದೋ ಒಂದು ಘಟ್ಟದಲ್ಲಿ ಆಕ್ರಮಣಶೀಲರೂ ಹಿಂಸಾಪರರೂ
ಆಗಿಯೇ ಇದ್ದದ್ದು ಗೋಚರಿಸುತ್ತದೆ. ೧೬-೧೯ನೆಯ ಶತಮಾನದ ಇಂಗ್ಲಂಡಿನ ಚರಿತ್ರೆಯಂತೂ ಇದ್ದೇ ಇದೆ. ೨೦ನೆಯ
ಶತಮಾನದ ರಶಿಯಾ ಹಾಗು ಪೂರ್ವ ಯುರೋಪ ರಾಷ್ಟ್ರಗಳಂತೂ ವಿಶ್ವವನ್ನೆಲ್ಲ ‘ಕೆಂಪುಮಯ’ ಮಾಡುವುದು ಪುಣ್ಯದ ಕೆಲಸವೆಂದೇ ಭಾವಿಸಿದ್ದವು.
ಆದರೆ ೨೧ನೆಯ ಶತಮಾನದ ಇಂಗ್ಲಂಡ ಹಾಗು ರಶಿಯಾಗಳನ್ನು ಈ ತಪ್ಪುಗಳಿಗೆ ಹೊಣೆಗಾರರನ್ನಾಗಿ
ಮಾಡಲು ಆಗುವದಿಲ್ಲ. ಈ ಮಾತು ಇಸ್ಲಾಮಿಕ್ ಸಾಮ್ರಾಜ್ಯವಾದಿಗಳಿಗೂ ಅಷ್ಟೇ
ಅನ್ವಯಿಸುತ್ತದೆ. ಆದರೆ ಸಾಮ್ರಾಜ್ಯವಾದಿಗಳ ಐತಿಹಾಸಿಕ ದೌರ್ಜನ್ಯಗಳನ್ನು
ಕಂಡೂ ಕಾಣದಂತೆ ನಟಿಸುವುದು ಚಾರಿತ್ರಿಕ ಸತ್ಯಕ್ಕೆ ಬಗೆಯುವ ಅಪಚಾರವಾಗುತ್ತದೆ. ಚರಿತ್ರೆಯ ತಪ್ಪುಗಳನ್ನು ಬಹಿರಂಗಪಡಿಸುವುದೇ ಸರಿಪಡಿಸುವದರ ಮೊದಲ ಹೆಜ್ಜೆ.
……………………………………………………………………
ಕೊನೆಯ ಮಾತು:
ಕೊನೆಯದಾಗಿ ರಾಮರಾಯನನ್ನು ರಂಗಭೂಮಿಯ ಒಂದು ಪಾತ್ರವನ್ನಾಗಿ ಕಾರ್ನಾಡರು ಸೃಷ್ಟಿಸಿರುವ ಪರಿ! ವಿಜಯನಗರದ ಚರಿತ್ರೆಯ ಒಬ್ಬ ವೀರಯೋಧನನ್ನು, ನಿರ್ಭೀತ
ಸೇನಾನಿಯನ್ನು, ಮಹಾಮುತ್ಸದ್ದಿಯನ್ನು, ಸಾಮ್ರಾಜ್ಯಪರಿಪಾಲಕನನ್ನು—‘ಉಚ್ಚೆ ಕಟ್ಟಿಕೊಳ್ಳಲಾಗದ ವೃದ್ಧ, ಅದೇ ವಾಸನೆಯನ್ನು ಆಡಳಿತಕ್ಕೆ ಹಬ್ಬಿಸುತ್ತಿರುವ ಕೊಳಕ,
ನಿರ್ಜೀವ ರುಂಡವಾಗಿರುವ ಸತ್ವಹೀನ ಬೆದರುಬೊಂಬೆ’ಯನ್ನಾಗಿ
ನಾಟಕವು ಪ್ರದರ್ಶಿಸಿರುವ ರೀತಿಯು ಅಸಹ್ಯವನ್ನು ಹುಟ್ಟಿಸುತ್ತದೆ.
---ವ್ಯಾಸ ದೇಶಪಾಂಡೆ