Tuesday, July 30, 2019

‘ಅನಂತಯಾನ’....ಉಮೇಶ ದೇಸಾಯಿಯವರ ಹೊಸ ಕಾದಂಬರಿಉಮೇಶ ದೇಸಾಯಿಯವರು ಹೊಸ ಕಾದಂಬರಿ ಬರೀತಿದ್ದಾರ ಅಂತ ಗೊತ್ತಾತು. ಆಹೊತ್ತಿನಿಂದ ಅದನ್ನ ಓದಲಿಕ್ಕೆ ನಾ ಚಡಪಡಿಸಲಿಕ್ಕೆ ಹತ್ತಿದೆ. ದೇಸಾಯರದು ವೈವಿಧ್ಯಪೂರ್ಣ ಸಾಹಿತ್ಯ. ಗಝಲಗಳನ್ನು ಬರದಾರ, ಕಥೆಗಳನ್ನು ಬರದಾರ, ಕಾದಂಬರಿಯನ್ನೂ ಬರದಾರ. ಅವರಭಿನ್ನಕಾದಂಬರಿಯಂತೂ ಕನ್ನಡ ಸಾಹಿತ್ಯಪ್ರಪಂಚದಲ್ಲಿಯೇ ವಿಶಿಷ್ಟ ಸ್ಥಾನ ಪಡೆದ ಕಾದಂಬರಿ ಆಗೇದ ಅಂತ ನನ್ನ ಅಭಿಪ್ರಾಯ. ಹೊಸ ಕಾದಂಬರಿಯೂ (‘ಅನಂತಯಾನ’) ಸ್ವಾರಸ್ಯಕರ ಆಗಿರಲೇ ಬೇಕು ಅನ್ನೋದು ನನ್ನ ನಂಬಿಕೆ ಆಗಿತ್ತು. ಅದಕ್ಕಂತನ ಅವರನ್ನು ಆಗಾಗ ಸಂಪರ್ಕಿಸಿ ಕಾಡತಿದ್ದೆ. ‘ದೇಸಾಯರ, ನಿಮ್ಮ ಕಾದಂಬರೀನ ಲಗೂನ ಮುಗಸರಿ; ನನಗ ಒಂದು ಕಾ˘ಪಿ ಮೇಲ್ ಮಾಡಿ ಕಳಸರಿ. ಅದರ ಮುದ್ರಣ ಆಗೂತನಕ ಕಾಯೋ ತಾಳ್ಮೆ ನನ್ನಲ್ಲಿಲ್ಲ.’

ಈ ಬೇತಾಳದ  ಕಾಟ ತಾಳಲಾರದ ದೇಸಾಯರು ಕಾದಂಬರಿಯನ್ನು ಮುಗಿಸಿ, ನನಗೊಂದು ಪ್ರತಿಯನ್ನು ಮೇಲ್ ಮೂಲಕ ಕಳಿಸಿದರು! ಓದಿದ ಮ್ಯಾಲೆ, ನಾನು ಇವರಿಗೆ ಇಷ್ಟು ಕಾಟಾ ಕೊಟ್ಟದ್ದು ಸಾರ್ಥಕ ಆತು ಅಂತ ಅನಿಸಿತು.

ದೇಸಾಯರ ಕಥೆಗಳು ನಡೆಯುವುದು ಹುಬ್ಬಳ್ಳಿ, ಬೆಳಗಾವಿ, ಮುಂಬಯಿ ಮೊದಲಾದ ಪಟ್ಟಣಗಳ ಹಾಗು ಅವುಗಳ ಸುತ್ತುಮುತ್ತಲಿನ ಊರುಗಳಲ್ಲಿ. ಊರುಗಳ ವಾತಾವರಣವನ್ನು ದೇಸಾಯರು ವಾಸ್ತವಿಕವಾಗಿ ಹಾಗು ದಟ್ಟವಾಗಿ ಕಣ್ಣಿಗೆ ಕಾಣುವಂತೆ ಚಿತ್ರಿಸುತ್ತಾರೆ. ‘ಅನಂತಯಾನಕಾದಂಬರಿಯ ಪೂರ್ವಭಾಗ ಗಿರಕಿ ಹೊಡೆಯುವುದು ಇಂತಹ ಒಂದು ಊರಿನ ದೇಸಾಯರ ವಾಡೇದಾಗ. ಅಲ್ಲಿಯ ಅಣ್ಣತಮ್ಮಂದಿರು, ಅವರ ಹೆಂಡಂದಿರು. ಅವರ ಸ್ವಭಾವ, ಅವರ ಹಾಲಚಾಲ, ಇವರೆಲ್ಲರ ಕೂಡುಕುಟುಂಬದಾಗಿನ ಶ್ರೇಣೀಕರಣ ಇವು ಕಥೆಯನ್ನು ಹೇಗೆ ನಡೆಸುತ್ತವೆ ಹಾಗು ಕಥೆಗೆ ಹೇಗೆ ತಿರುವು ಕೊಡುತ್ತವೆ ಎನ್ನುವುದನ್ನು ಓದಿದಾಗ, ದೇಸಾಯರ ಕಥನಶಕ್ತಿಯು  ಓದುಗನನ್ನು ರೋಮಾಂಚನಗೊಳಿಸುತ್ತದೆ.

ಈ ಕಾದಂಬರಿಯನ್ನು ಓದುತ್ತಿದ್ದಂತೆ ನನಗೆ ಶ್ರೀಮತಿ ಶಶಿ ದೇಶಪಾಂಡೆಯವರ ಆಂಗ್ಲ ಕಾದಂಬರಿ ‘Roots and Shadows’ ನೆನಪಾಯಿತು. ಕಾದಂಬರಿಯಲ್ಲಿ ಒಂದು ಜಮೀನುದಾರಿ ಮನೆತನವು ಆಧುನಿಕ ವಾತಾವರಣದಲ್ಲಿ ಹೇಗೆ ಬದಲಾಯಿತು ಎನ್ನುವದನ್ನು ಬರೆಯಲಾಗಿದೆ. ಆಂಗ್ಲ ಕಾದಂಬರಿಯನ್ನು ಓದುವಾಗ, ಕನ್ನಡ ಕಾದಂಬರಿಯನ್ನು ಓದುತ್ತಿರುವಂತೆ ಅನಿಸುವುದು ಶಶಿ ದೇಶಪಾಂಡೆಯವರ ಹೆಗ್ಗಳಿಕೆಯಾಗಿದೆ.

ದೇಸಾಯರ ಈ ಕಾದಂಬರಿಯಲ್ಲಿ ಇಂತಹ ಬದಲಾವಣೆ ಕೇವಲ ಪ್ರಾಸಂಗಿಕವಾದದ್ದು. ಒಂದು ಗತಕಾಲದಲ್ಲಿ ಮನೆತನದ ಒಬ್ಬ ವ್ಯಕ್ತಿಯ ಬಗೆಗೆ, ಪ್ರವಾಹದಲ್ಲಿ ತೇಲುವ ಕಾಷ್ಠದಂತೆ ಅವನ ಅಳಿವಿಗೆ ಮೀರಿ ಅವನಲ್ಲಾದ ಬದಲಾವಣೆಗಳ ಬಗೆಗೆ, ಇಲ್ಲಿ ಬರೆಯಲಾಗಿದೆ. ಕೊನೆಯವರೆಗೂ ಕಥೆಯ ನಡೆಯ ಕುತೂಹಲವನ್ನು ಕಾಯ್ದುಕೊಂಡು ಹೋಗುವ ದೇಸಾಯರ ಪ್ರತಿಭೆ ಶ್ಲಾಘನೀಯವಾದದ್ದು.

ದೇಸಾಯರು ಬ್ಯಾಂಕ ಅಧಿಕಾರಿ ನಿಜ. ಆದರೆ ಅವರು ಮನೋವಿಜ್ಞಾನದಲ್ಲಿ ತರಬೇತಿ ಪಡೆದಿದ್ದರೋ ಏನೋ ಎನ್ನುವ ಅನುಮಾನ ನನಗಿದೆ. ಅವರ ಕಥೆ-ಕಾದಂಬರಿಗಳಲ್ಲಿ ನಡೆಯುವ ಪ್ರಸಂಗಗಳು ಮನೋವಿಜ್ಞಾನವನ್ನು ಅನುಸರಿಸಿಯೇ ನಡೆಯುತ್ತವೆ. ಸಂದರ್ಭಗಳಲ್ಲಿ ಕಾದಂಬರಿಯ ಪಾತ್ರಗಳಿಗೆ ಅಪಚಾರವಾಗಬಾರದಲ್ಲ! ಆದುದರಿಂದ ಕಾದಂಬರಿಯ ಪಾತ್ರಗಳು ಕೆಲವೊಮ್ಮೆ ಹಿನ್ನೆನಪುಗಳಲ್ಲಿ ಕಥೆಯನ್ನು ನಡೆಯಿಸುವ ವಿಧಾನವನ್ನು ಇಲ್ಲಿ ಕಾಣುತ್ತೇವೆ. ವಿಧಾನದ ಒಂದು  ಅನುಕೂಲವೆಂದರೆ, ಕಥಾನಕದ ಎಲ್ಲ ಪಾತ್ರಗಳಿಗೂ (ಅವು ಎಷ್ಟೇ ಚಿಕ್ಕ ಪುಟ್ಟ ಪಾತ್ರಗಳಿದ್ದರೂ ಸಹ) ಸಮಾನವಾದ ಸ್ಥಾನಮಾನ ಇಲ್ಲಿ ದೊರೆಯುತ್ತದೆ. ಇದರ ಪರಿಣಾಮವೆಂದರೆ, ಈ ಕಥಾನಕವು ನಿಮ್ಮ ಕಣ್ಣೆದುರಿಗೇ ನಡೆಯುತ್ತಿರುವ ರಂಗನಾಟಕ ಎನ್ನುವ ಆಪ್ತಭಾವ ನಿಮ್ಮಲ್ಲಿ ಒಡಮೂಡುತ್ತದೆ.

ದೇಸಾಯರ ಕಾದಂಬರಿಗಳ ವೈಶಿಷ್ಟ್ಯವೆಂದರೆ ರೋಚಕತೆ ಎನ್ನಲೆ? ಕೌಟಂಬಿಕ ಪ್ರಸಂಗಗಳೇ ಕಥಾನಕದ ಜೀವಾಳವಾಗಿದ್ದರೂ ಸಹ, ರಹಸ್ಯಮಯತೆ, ಇದರಿಂದ ಹುಟ್ಟುವ ಕುತೂಹಲ, ಇವು ಅವರ ಕಾದಂಬರಿಗಳನ್ನು ರಂಜನೀಯವಾಗಿಸುತ್ತವೆ. ಇದಲ್ಲದೆ ಉತ್ತರ ಕರ್ನಾಟಕದ ಕಾಲಾನುಸಾರಿ ಬದಲಾಗುತ್ತಿದ್ದ ಪ್ರಾದೇಶಿಕ ವಾತಾವರಣ, ಭಾಷೆ ಇವೆಲ್ಲ ಓದುಗನಲ್ಲಿ ಕಚಕುಳಿಯನ್ನಿಡುತ್ತಿವೆ.

ಒಂದು ಕಾದಂಬರಿ ಎಂದರೆ ಒಬ್ಬ ವ್ಯಕ್ತಿ ಇದ್ದಂತೆ. ವ್ಯಕ್ತಿಯ ಡ್ರೆಸ್ಸು, ಸ್ಟೈಲು ಇವೆಲ್ಲ ನೋಡುಗನನ್ನು impress ಮಾಡುತ್ತವೆ. ಆದರೆ ವ್ಯಕ್ತಿಯ ಬಗೆಗೆ ನಮಗೆ ಗೌರವ ಬರುವುದು, ಅವನ ಬಗೆಗೆ ಸ್ನೇಹ ಹುಟ್ಟುವುದು ಅವನ ಅಂತರಂಗ ಅರ್ಥವಾದಾಗ. ಕಾದಂಬರಿಯ ಬಗೆಗೂ ಇದೇ ಮಾತನ್ನು ಹೇಳಬಹುದು. ದೇಸಾಯರ ಕಾದಂಬರಿಗಳ ಬಗೆಗೆ ಗೌರವ ಹುಟ್ಟುವುದು ಅವರ ಕಾದಂಬರಿಯ ಜೀವಾಳದಿಂದ. ‘ಅನಂತಯಾನ’ದ ಜೀವಾಳ ಸುರುಚಿಯಿಂದ ಕೂಡಿದೆ. ಆದುದರಿಂದ ಅನಂತನ ಯಾನದಲ್ಲಿ ಓದುಗರು ನಿಶ್ಶಂಕವಾಗಿ ಭಾಗಿಯಾಗಬಹುದು, ಖಂಡಿತವಾಗಿಯೂ  ಖುಶ್ ಆಗುತ್ತಾರೆ ಎನ್ನುವ ನಂಬಿಕೆ ನನಗಿದೆ!

4 comments:

prabhamani nagaraja said...

ಉಮೇಶ ದೇಸಾಯಿಯವರ ಅನಂತಯಾತ್ರೆಯ ಬಗ್ಗೆ ಉತ್ತಮವಾಗಿ ಬರೆದಿದ್ದೀರಿ ಸರ್. ದೇಸಾಯಿಯವರಿಗೆ ಅಭಿನಂದನೆಗಳು ಹಾಗೂ ಪರಿಚಯಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು.

sunaath said...

ಧನ್ಯವಾದಗಳು, ಮೇಡಮ್!

Badarinath Palavalli said...

ಉಮೇಶ ದೇಸಾಯಿಯವರ ಅನಂತ ಯಾತ್ರೆ ಖಂಡಿತ ಹುಡುಕಿಕೊಂಡು ಹೋಗಿ, ಕೊಂಡು ಓದುವೆ ಸಾರ್.
ಪರಿಚಯ ಲೇಖನಕ್ಕಾಗಿ 'ಅನಂತ' ಧನ್ಯವಾದಗಳು.

sunaath said...

ಬದರಿನಾಥರೆ,
ನಾನು ‘ಅನಂತಯಾತ್ರೆ’ ಎಂದು ತಪ್ಪಾಗಿ ಬರೆದಿದ್ದೇನೆ. ಇದು ‘ಅನಂತಯಾನ’ ಆಗಬೇಕು. ಇನ್ನು ಮತ್ತೊಂದು ವಿಷಯ. ನಿಮ್ಮಿಂದ ಹೊಸ ಕವನಗಳು ಬಂದಿಲ್ಲ. ಏಕೆ? ‘ಬೇಗನೆ ನಮಗೆ ನಮಗೆಲ್ಲರಿಗೂ ಕಾವ್ಯಸುಖವನ್ನು ಕೊಡಿ’ ಎಂದು ನಿಮ್ಮಲ್ಲಿ ಬಿನ್ನವಿಸುತ್ತೇನೆ.