ನಾಗರಿಕತೆಯ ಇತಿಹಾಸವು ಹಿಂಸೆ ಹಾಗು ವೈರದಿಂದ ಕೂಡಿದ್ದಾಗಿದೆ. ಅಂಧಕಾರದಲ್ಲಿ
ಮುಳುಗಿದ ಇಂತಹ ಸಮಾಜವನ್ನು
ಬದಲಾಯಿಸಲು ಅನೇಕ ಮಹಾತ್ಮರು ಪ್ರಯತ್ನಪಟ್ಟಿದ್ದಾರೆ. ಅವರಲ್ಲಿ ಬುದ್ಧನೇ ಬಹುಶಃ ಪ್ರಥಮನು.
ಬೇಂದ್ರೆಯವರು ಬರೆದ ‘ಬುದ್ಧ’ ಎನ್ನುವ ಕವನವು ೧೯೫೧ನೆಯ ಇಸವಿಯಲ್ಲಿ ಪ್ರಕಟವಾದ ‘ಗಂಗಾವತರಣ’ ಕವನಸಂಕಲನದಲ್ಲಿ ಸೇರಿದೆ.
`ಬುದ್ಧ, ಬುದ್ಧ--
ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ’
‘ಬುದ್ಧ’ ಕವನದ ಮೊದಲಿನ ಎರಡು ಸಾಲುಗಳು ಇವು.
‘ಬುದ್ಧ’ ಎನ್ನುವ ಕವನವನ್ನು ಬರೆದ ಬೇಂದ್ರೆಯವರೇ ‘ನಿರ್ಬುದ್ಧ’ ಎನ್ನುವ ಕವನವನ್ನೂ ಬರೆದಿದ್ದಾರೆ.
‘‘ನಿರ್ಬುದ್ಧ’ ಕವನವು ೧೯೬೪ನೆಯ ಇಸವಿಯಲ್ಲಿ ಪ್ರಕಟವಾದ ‘ನಾಕು ತಂತಿ’ ಸಂಕಲನದಲ್ಲಿ ಪ್ರಕಟವಾಗಿದೆ.
ಈ ಹದಿಮೂರು ವರ್ಷಗಳಲ್ಲಿ ಬೇಂದ್ರೆಯವರ ಕಾಣ್ಕೆಯಲ್ಲಿ
ಏನಾದರೂ ಬದಲಾವಣೆ ಆಗಿದೆಯೆ?
‘ಬುದ್ಧ’ ಎಂದರೆ ತಿಳಿದವನು. ‘ನಿರ್ಬುದ್ಧ’ ಇದು ‘ಬುದ್ಧ’ದ ವಿರೋಧ ಪದ. ಅಂದರೆ ತಿಳಿಗೇಡಿ. ಬುದ್ಧನು ಅಹಿಂಸಾಮೂರ್ತಿ, ನಿರ್ಬುದ್ಧನು ಹಿಂಸಾವೃತ್ತಿಯವನು.
‘ಬುದ್ಧ’ ಕವನದಲ್ಲಿ ಸಮಾಜ ಸುಧಾರಿಸೀತು ಎನ್ನುವ ಮಿಣುಕು ಆಸೆ ಇದೆ.
‘ನಿರ್ಬುದ್ಧ’ ಕವನದಲ್ಲಿ ಸಮಾಜ ಸುಧಾರಿಸಲಾರದು ಎನ್ನುವ
ಹತಾಶ ಭಾವವಿದೆ. ಯಾಕೆ ಅಂತೀರಾ? ‘ನಿರ್ಬುದ್ಧ’
ಕವನದ ಮೊದಲ ನುಡಿಯಲ್ಲಿಯೇ ಬೇಂದ್ರೆಯವರ ಆಕ್ರೋಶವು ತಣ್ಣನೆಯ ನಿಟ್ಟುಸಿರಾಗಿ ಈ ಪ್ರಶ್ನೆಗೆ
ಉತ್ತರವನ್ನು ಹೇಳುತ್ತಿದೆ:
‘ನಾವು ಪೂಜಿಸುತಿಹುದು ಹೊಟ್ಟೆಕಿಚ್ಚು
ಬೇರೆ ಎನ್ನುವುದೇಕೆ ‘ಬೆಂಕಿ ಹಚ್ಚು?’’
ಹೊಟ್ಟೆಕಿಚ್ಚು, ಇದು ಮಾನವನ ಒಡಲಿನಲ್ಲಿಯೇ ಇರುವ ಬೆಂಕಿ! ನಮ್ಮ ನೆರೆಹೊರೆಯವರ ಬಗೆಗೆ, ನೆರೆಯ ಸಮುದಾಯಗಳ ಬಗೆಗೆ, ನೆರೆಯ ರಾಷ್ಟ್ರಗಳ ಬಗೆಗೆ ಇರುವ ಅಸೂಯೆ ಹಾಗು ಅದರಿಂದ ಉದ್ಭವವಾಗುವ ದ್ವೇಷ ಇವು ನಮ್ಮಲ್ಲಿ ಅಂತರ್ನಿಹಿತವಾಗಿರುವಾಗ, ನಾವು ‘ನೆರೆಯವನಿಗೆ ಬೆಂಕಿ ಹಚ್ಚು ’ ಎಂದು ಬಾಯಿ ತೆಗೆದು ಹೇಳುವ ಅಗತ್ಯವಿದೆಯೆ? ಇದರ ಪರಿಣಾಮವೇನು? ಸಾರ್ವತ್ರಿಕ ನಾಶ; ಕೊಲ್ ಮತ್ತು ಸಾಯ್.
‘ಕೊಲ್ಲುವೆವು ಸಾಯುವೆವು ಇದೆ ಕಾಯಕ
ತಲೆಗೆ ಬೆಲೆ ಎಷ್ಟು ಕೇಳುವ ನಾಯಕ!’
ಇರಿ, ಕೊಲ್ಲು ಹಾಗು ಸಾಯಿ! ಇದೇ ನಮ್ಮ ದುಡಿಮೆ. ಬಸವಣ್ಣನವರು ‘ಕಾಯಕವೇ ಕೈಲಾಸ’ ಎಂದು ಹೇಳಿದರು. ಆದರೆ ನಮ್ಮ ಕಾಯಕವೆಂದರೆ ಮತ್ತೊಬ್ಬರನ್ನು ಮುಗಿಸುವುದು. ಇಂತಹ ಬುದ್ಧಿಗೇಡಿ ಅನುಯಾಯಿಗಳಿಗೆ ನಾಯಕನು ಕೊಡುವ ಆದೇಶವೇನು? ನೀನು ಕೊಂದ ವೈರಿಯ ತಲೆ ತಂದು ತೋರಿಸು; ನಿನಗೆ
ಅದರ ಬೆಲೆಯನ್ನು ಕೊಡುತ್ತೇನೆ. ಇಂತಹ ಪ್ರೇರಣೆ ಇದ್ದಾಗ, ಸಮಾಜವು ಸ್ಮಶಾನವಾಗುವುದರಲ್ಲಿ ತಡೆ ಏನಿದೆ?
ಸಮಾಜ
ಅನ್ನುವ ಸಂಸ್ಥೆ ಹುಟ್ಟಿದ್ದಾದರೂ ಹೇಗೆ? ಕಾಡಿನಲ್ಲಿ ಅಲೆಯುವ ಮನುಷ್ಯರ ಒಂದು ಗುಂಪು, ಒಂದು ಪ್ರದೇಶವನ್ನು ತನ್ನದೇ ಆದ ಪ್ರದೇಶ ಎಂದು ಘೋಷಿಸಿ, ಆ ಪ್ರದೇಶದ ಮೇಲೆ ಸ್ವಾಮಿತ್ವ ಸಾಧಿಸಬೇಕಾದರೆ ಈ ಗುಂಪಿಗೆ ಒಬ್ಬ ನಾಯಕ ಬೇಕು. ಆತ ಈ ಭೂಭಾಗದ ಪತಿ, ‘ಭೂಪತಿ’. ಈ ಭೂಮಿಯೇನೊ ಬರಿ ಮಣ್ಣು. ಆದರೆ ನಾಯಕನ ದೃಷ್ಟಿಯಲ್ಲಿ ಅಲ್ಲಿ ವಾಸಿಸುವ ಪ್ರಜೆಗಳ ಜೀವಕ್ಕಿರುವ ಬೆಲೆಯೂ ಅಷ್ಟೇ. ಇದು ನಮ್ಮ ನಾಗರಿಕತೆ ಬೆಳೆದು ಬಂದ ಹಾದಿ.
ಇಂತಹ ನಾಗರಿಕತೆಯು ನಮ್ಮನ್ನು ಕೊಂಡೊಯ್ಯುವುದು ಉತ್ಕರ್ಷದ ಹಾದಿಯಲ್ಲಲ್ಲ,
ಸುಡುವ ಸುಡುಗಾಡಿನ ಹಾದಿಯಲ್ಲಿ. ಕಾಡುಮನುಷ್ಯನು ನಾಗರಿಕನಾಗುವ
ರೀತಿಯೆ ಇದು?
‘ಭೂಮಿ ಎನ್ನುವುದು ಮಣ್ಣು, ಪ್ರಜೆ ಎಂಬುದೂ ಮಣ್ಣು
ಸುಡುಗಾಡು ನಾಗರಿಕತೆ’
ಕಾಡನ್ನು ಸುಲಿದು ನಾಡನ್ನು ಕಟ್ಟಿದ
ಮಾನವನು ನಾಗರಿಕತೆಯ ಮುಂದಿನ ಮಜಲಿಗೆ ಬಂದಿದ್ದಾನೆ, ಇದೀಗ ‘ಸುಧಾರಿಸಿದ್ದಾನೆ!’ ಶಾಸ್ತ್ರ,
ಪಾಠ, ಪ್ರವಚನ ಇವು ನಮ್ಮ ಸುಸಂಸ್ಕೃತ ನಾಗರಿಕತೆಯ ಮುಖಗಳಾಗಿವೆ.
ವಾಸ್ತವದಲ್ಲಿ ಈ ಮುಖಗಳು ಕೇವಲ ಮುಖವಾಡಗಳಷ್ಟೇ! ಏಕೆಂದರೆ:
‘ಒಳಗೆ ಮಸೆಯುತ್ತಿಹುದು ಶಸ್ತ್ರಾಸ್ತ್ರ ಒಳಸಂಚು
ಹೊರಗೆ ಶಾಸ್ತ್ರದ ಪಾಠ ಪ್ರವಚನಗಳು.’
ಈ ನಾಗರಿಕರ ಢೋಂಗೀ ಸೋಗನ್ನಷ್ಟು ನೋಡಿರಿ:
‘ವಚನ ವಾಚನವೇನು? ವಚನ ಗಾಯನವೇನು?
ವಚನ ಮುರಿಯುವದೊಂದೆ ರಚನಾಕೃತಿ.’
ಬೇಂದ್ರೆಯವರು ಇಲ್ಲಿ ‘ರಚನಾಕೃತಿ’ ಎನ್ನುವ ಪದವನ್ನು ಬಳಿಸಿದ್ದಾರೆ. ಇದನ್ನು ನಾವು format, pattern, template, motif ಎನ್ನುವ ಅರ್ಥಗಳಲ್ಲಿ ತಿಳಿದುಕೊಳ್ಳಬಹುದು.
ಬೇಂದ್ರೆಯವರ ಕವನಗಳಲ್ಲಿ ಹಲವೊಮ್ಮೆ ಇತಿಹಾಸವು ಅಡಗಿ ನಿಂತಿರುತ್ತದೆ. ಎರಡನೆಯ ಜಾಗತಿಕ ಮಹಾಯುದ್ಧದ ಸಮಯದಲ್ಲಿ ಅಮೇರಿಕಾದ ಅಧ್ಯಕ್ಷ ಹಾಗು ಬ್ರಿಟನ್ನಿನ ಪ್ರಧಾನ
ಮಂತ್ರಿಯವರು “ತಮ್ಮೊಡನೆ ಯುದ್ಧದಲ್ಲಿ ಸಹಕರಿಸಿದ ಗುಲಾಮ ದೇಶಗಳಿಗೆ ಸ್ವಾತಂತ್ರ್ಯ
ನೀಡುವುದಾಗಿ” ಘೋಷಿಸಿದ್ದರು. ಇದನ್ನು ನಂಬಿಕೊಂಡ
ಭಾರತವು ಈ ಯುದ್ಧದಲ್ಲಿ ಸಹಭಾಗಿಯಾಯಿತು. ಯುದ್ಧ ಮುಗಿದ ಬಳಿಕ ಈ ಪುಢಾರಿಗಳು
ತಮ್ಮ ಘೋಷಣೆ ಯುರೋಪಿಯನ್ ರಾಷ್ಟ್ರಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಸಾರಿದರು. ಈ ಪಾಶ್ಚಾತ್ಯ ಶಕುನಿಗಳು ಇಂತಹ ರಚನಾಕೃತಿಯ ಮುಂದಾಳುಗಳು!
ಇದೇನೂ ಭಾರತಕ್ಕೆ ಬಂದಂತಹ ಮೊದಲ
ಅನುಭವ ಅಲ್ಲ.
ಗುಂಪು ಗುಂಪಿನ ರಾಜಕಾರಣದ ತಂತ್ರದಲಿ
ಹಂಪೆಯಾಯಿತು ಕೊಂಪೆ-ಹಳೆಯ ಮಾತು.
ರಾಮರಾಜನ ರುಂಡ ಕಲ್ಲಾಗಿ ಬಿದ್ದಿಹುದು
ಎಲ್ಲರ ಪ್ರದರ್ಶನಕೆ ವಸ್ತುವಾಗಿ;
ವಿಜಯನಗರದಂತಹ ಸುಖೀ, ಸಮೃದ್ಧ, ಸಿರಿವಂತ ರಾಜ್ಯವು
ದಕ್ಷಿಣದ ಸುಲ್ತಾನರ ಒಳಸಂಚಿನಿಂದಾಗಿ ಹಾಳುಕೊಂಪೆಯಾಯಿತು, ಸದ್ಧರ್ಮರಾಜ್ಯದ
ಪತನದ ಪ್ರತೀಕವಾಯಿತು! ಕರ್ನಾಟಕ ಸಾಮ್ರಾಜ್ಯದ ಸಾಮ್ರಾಟನ ರುಂಡವು ಜನಸಾಮಾನ್ಯರಿಗೆ
ಪ್ರದರ್ಶನಕ್ಕಿಟ್ಟಂತಹ ನಿಕೃಷ್ಟ ವಸ್ತುವಾಯಿತು. ಇವೆಲ್ಲದಕ್ಕೂ ನೆರೆರಾಜರ
ಮತ್ಸರ ಹಾಗು ದ್ವೇಷವೇ ಕಾರಣವಲ್ಲವೆ?
ಹೋಗಲಿ, ಈ ನೆರೆರಾಜರಾದರೂ ಕೊನೆವರೆಗೂ ಬಾಳಿ ಬದುಕಿದರೆ?
‘ಹಲ್ಬಿದಾಯಾ’
ಆಗಿಹೋಯ್ತು ಆದಿಲ್ ಶಾಹಿ
ಹೊಳೆಗೆ ಹೋದವು ದೇವರು.
ಕಬರ ಕಬರೀಭಾರ, ಕವಡಿ ಕೊರಳಿಗೆ ಬಂತು
ಯಾ ಕಪರ್ದಿಯ ಬೂದಿ ಈ ವೈಭವ?
ಇಬ್ನ ಖಾತಿರ್ ಎನ್ನುವ ಇಸ್ಲಾಮಿನ
ಓರ್ವ ಖ್ಯಾತ ಇತಿಹಾಸಕಾರನು (೧೩೦೦-೧೩೭೩) ‘ಅಲ್ ಬಿದಾಯಾ ವಾ ನ ನಿಹಾಯಾ’ ಎನ್ನುವ ಕೃತಿಯನ್ನು ರಚಿಸಿದ್ದಾನೆ. ‘ಅಲ್ ಬಿದಾಯಾ ವಾ ನ ನಿಹಾಯಾ’
ಅಂದರೆ ‘ಪ್ರಾರಂಭ ಮತ್ತು ಅಂತ’. ಇದು ಅವನ ಸಮಯದ ಇಸ್ಲಾಮಿನ ಚರಿತ್ರೆಯನ್ನು ನಿರೂಪಿಸುತ್ತದೆ. ‘ಅಲ್ ಬಿದಾಯಾ’ ಎನ್ನುವುದು ‘ಹಲ್ಬಿದಾಯಾ’
ಎನ್ನುವ ಪ್ರಾದೇಶಿಕ ರೂಪವನ್ನು ತಾಳಿರಬಹುದು. (ಬೇರೆ ಅರ್ಥವಿದ್ದರೆ,
ತಿಳಿದವರು ದಯವಿಟ್ಟು ತಿಳಿಸಬೇಕಾಗಿ ವಿನಂತಿ, ತಿದ್ದಿಕೊಳ್ಳುತ್ತೇನೆ.)
ವಿಜಯನಗರವನ್ನು ಹಾಳು ಹೊಡೆದ ದಕ್ಷಿಣದ
ಸುಲ್ತಾನರ ಗತಿ ಏನಾಯಿತು? ೧೬೮೬ನೆಯ ಇಸವಿಯಲ್ಲಿ
ಔರಂಗಜೇಬನು ದಕ್ಷಿಣಸುಲ್ತಾನಗಿರಿಯ ದಕ್ಷಿಣ ತುದಿಯಲ್ಲಿದ್ದ ವಿಜಯಪುರವನ್ನು ಆಕ್ರಮಿಸವದರೊಂದಿಗೆ,
ಆದಿಲ್ ಶಾಹಿಯು ‘ಹಲ್ಬಿದಾಯಾ’ ಆಯಿತು, ಅಂದರೆ ಅದೂ ಸಹ ಕೊನೆಗೊಂಡಿತು.
ಇಸ್ಲಾಮದ ಇತಿಹಾಸದಲ್ಲಿಯ ಅತ್ಯಂತ
ದುರ್ಭರ ಘಟನೆ ಎಂದರೆ ಕರ್ಬಲಾ ಕಾಳಗ. ಈ ಕಾಳಗದಲ್ಲಿ
ಹಸನ್ ಹಾಗು ಹುಸೇನ್ ಎನ್ನುವ ಸೋದರರು ಮರಣ ಹೊಂದಿದರು. ಈ ಘಟನೆಯ ಶೋಕಾಚರಣೆಯ
ದಿನದಂದು ಮುಸ್ಲಿಮ್ ಯುವಕರು ಹುಲಿ ವೇಷವನ್ನು ತೊಟ್ಟು ಅಣಕು ಕಾಳಗ ಪ್ರದರ್ಶನ ಮಾಡುತ್ತಾರೆ.
ಕೈಯನ್ನು ಹೋಲುವ ಎರಡು ಪ್ರತಿಮೆಗಳನ್ನು (‘ಪಂಜಾ’ಗಳನ್ನು) ಹಿಡಿದು ಹೊಳೆ ಅಥವಾ ಕೆರೆಗೆ ಹೋಗಿ, ಅಲ್ಲಿ ಈ ಎರಡೂ ಪಂಜಾಗಳನ್ನು ಮುಳುಗಿಸುತ್ತಾರೆ. ಸ್ಥಳೀಯ ಮುಸಲ್ಮಾನರು
ಈ ಪಂಜಾಗಳನ್ನು ದೇವರು ಎಂದು ಭಾವಿಸುತ್ತಾರೆ. ಈ ಘಟನೆಯನ್ನೇ ಬೇಂದ್ರೆಯವರು
‘ಹೊಳೆಗೆ ಹೋದವು ದೇವರು’ ಎಂದು ಹೇಳುತ್ತಿದ್ದಾರೆ.
ಈ ಎಲ್ಲ ಸಂಗತಿಗಳು ನಾಗರಿಕತೆಯ ದುರ್-ಅಂತವನ್ನು ತೋರಿಸುತ್ತವೆ.
ಕಬರ ಹಾಗು ಕಬರಿ ಎರಡಕ್ಕೂ ಒಂದೇ
ಅರ್ಥವಿದೆ: ಜಟೆ. ಇಲ್ಲಿ
ಕಬರವನ್ನು ಉರ್ದೂ ಭಾಷೆಯ ‘ಕಬ್ರ’ (= ಕಬರಸ್ಥಾನ
= ಸ್ಮಶಾನ) ಎಂದೂ ಅರ್ಥ ಮಾಡಿಕೊಳ್ಳಬಹುದು. ಕಪರ್ದ ಎಂದರೆ ಕವಡೆ. ಇದಕ್ಕೆ ಜಟೆ ಎನ್ನುವ ಅರ್ಥವೂ ಇದೆ.
ಕಪರ್ದಿ ಎಂದರೆ ಕವಡಿಯನ್ನು ಹೋಲುವ ರೀತಿಯಲ್ಲಿ ಜಟೆಯನ್ನು ಕಟ್ಟಿಕೊಂಡಿರುವ,
ಸ್ಮಶಾನವಾಸಿ ಶಿವ! ಆತ ಕೊರಳಿನಲ್ಲಿಯೂ ಸಹ ಕವಡಿಗಳನ್ನೇ
ಧರಿಸಿಕೊಂಡು, ಭಸ್ಮಧಾರಿಯಾಗಿ ಸ್ಮಶಾನದಲ್ಲಿ ವಾಸಿಸುತ್ತಾನೆ! ಇದು ನಮ್ಮ ನಾಗರಿಕತೆಯ ವೈಭವ! ಇಂತಹ ಪರಿಸ್ಥಿತಿ ಏಕೊ?
‘ಕಬರ ಕಬರೀಭಾರ’ ಎಂದರೆ ಸ್ಮಶಾನವೆಲ್ಲ ಜಟೆಗಳಿಂದ ತುಂಬಿಹೋಯಿತು. ಹಿಂದುಸ್ತಾನದಲ್ಲಿ
ಅನೇಕ ಯುದ್ಧಗಳು ನಡೆದಿವೆ. ಪ್ರತಿ ಯುದ್ಧದಲ್ಲಿಯೂ ಲಕ್ಷಗಟ್ಟಲೆ ಜನರು ಸತ್ತರು
ಎಂದು ಇತಿಹಾಸಪುಸ್ತಕಗಳಲ್ಲಿ ಓದುತ್ತೇವೆ. ಇದು ಕಬರಸ್ತಾನವನ್ನು ಜಟೆಗಳಿಂದ
ತುಂಬಿದೆ! (ಗೋರಿಗಳಲ್ಲಿ ಇರುವ ಹೆಣಗಳ ಮಾಂಸ ಹಾಗು ಮೂಳೆಗಳು ಕಾಲಾಂತರದಲ್ಲಿ
ಮಣ್ಣಿನಲ್ಲಿ ಮಣ್ಣಾಗುತ್ತವೆ. ಆದರೆ ಕೂದಲು ಮಾತ್ರ ಹಾಗೆಯೇ ಉಳಿಯುತ್ತದೆ.)
ರಾಮನತ್ತರು ಚೆಂದ, ಕೃಷ್ಣನತ್ತರು ಚೆಂದ
ಇದ್ದವರ ಬಾಯಿಗೋ ಉಳ್ಳೆಗಡ್ಡಿ.
ನಮ್ಮ ಈ ನಾಗರಿಕತೆಯನ್ನು, ಸಂಸ್ಕೃತಿಯನ್ನು ಉನ್ನತೀಕರಿಸಲು ಬುದ್ಧ ಹಾಗು ಗಾಂಧಿಯಂತಹ
ಮಾನವರಿಂದ ಸಾಧ್ಯವಿಲ್ಲವೆಂದು, ಸ್ವತಃ ದೇವರೇ ರಾಮ ಹಾಗು ಕೃಷ್ಣರ ರೂಪದಲ್ಲಿ ಅವತಾರ ತಾಳಿ
ಭೂಲೋಕಕ್ಕೆ ಬಂದನೇನೊ?
‘ಯದಾ ಯದಾಯ ಧರ್ಮಸ್ಯ ಗ್ಲಾನಿರ್ಭವತಿ ಭಾರತ,
ಅಭ್ಯುತ್ಠಾನಾಂ ಅಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್’ ಎಂದು
ದೇವರೇ ಘೋಷಿಸಿದರೂ ಆದದ್ದೇನು?’ ನಮ್ಮ ನಾಗರಿಕತೆಯನ್ನು ನೋಡಿ ಈ ಅವತಾರಪುರುಷರು
ಎಷ್ಟು ಕಣ್ಣೀರು ಸುರಿಸಿದರೂ, ಅದು ವ್ಯರ್ಥ. ಏಕೆಂದರೆ
ಬದುಕುಳಿದ ಪ್ರಜೆಗಳಿಗೆ ಏನೂ ಸುಖವಿಲ್ಲ; ಅವರ ಬಾಯಿಗೆ ಕೊನೆಗೂ ಬರುವುದು
ಕಣ್ಣೀರು ಹಾಕಿಸುವ ಉಳ್ಳೆಗಡ್ಡಿ ಮಾತ್ರ!
ಈ ಸಾಮಾನ್ಯ ಪ್ರಜೆಗಳು ಕುರಿಗಳಿದ್ದಂತೆ. ಆಳುವವರ ಆಡಂಬರದ ಯಜ್ಞಗಳಲ್ಲಿ ಇವರು ಹೋತಗಳು ಅಂದರೆ
ಬಲಿಪಶುಗಳು. ಉಳಿದವುಗಳು ತಮ್ಮ ಮುಂದಾಳುವನ್ನು ಬ್ಯಾಂ ಅನ್ನುತ್ತ ಹಿಂಬಾಲಿಸುವ
ಕುರಿಗಳು.
‘ಯಜ್ಞ’
ಆದರೂ ಏನು? ಹೋತ ಹೋದರೂ ಏನು?
ಕುರಿಯು ‘ಬ್ಯಾಂ’ ಅನ್ನುವುದು ತಪ್ಪಲಿಲ್ಲ.
ಧರ್ಮ, ದೇವರು ಇವೆಲ್ಲ ಮನುಷ್ಯನನ್ನು ಉನ್ನತಿಯೆಡೆಗೆ ಒಯ್ಯುವ
ಸಾಧನಗಳಾಗಿರಬೇಕು. ಆದರೆ ವಾಸ್ತವದಲ್ಲಿ ಇಲ್ಲಿ ಘಟಿಸುತ್ತಿರುವದೇನು?
ನಮ್ಮ ದೇವರು ಹೆಚ್ಚು ನಿಮ್ಮ ದೇವರು
ಹೆಚ್ಚು
ದೀಪ ಹಚ್ಚುವ ಕೈಯು ಕೊಲೆಗೆ ಬದ್ಧ.
ಧರ್ಮ ಹಾಗು ದೇವರು ಇವು ಒಂದು ಸಂಸ್ಕೃತಿಯ
ಮಹೋನ್ನತ ತತ್ವಗಳು, ಇವು ನಾಗರಿಕತೆಯ
ದೀಪಗಳು. ಆದರೆ ಇವುಗಳ ಹೆಸರಿನಲ್ಲಿ ನಡೆದ ಕೊಲೆ, ಅತ್ಯಾಚಾರಗಳು ಇತಿಹಾಸದ ತುಂಬ ತುಂಬಿವೆ. ಇತಿಹಾಸದ ಪುಟಗಳಲ್ಲಿ
ದಾಖಲಾದ ಕ್ರುಸೇಡ್ ಹಾಗು ಜಿಹಾದಗಳು ಈ ಮಾತಿಗೆ ಸಾಕ್ಷಿಯಾಗಿವೆ. ಆದುದರಿಂದ
ಬೇಂದ್ರೆಯವರು ಈ ಇತಿಹಾಸದಿಂದ ಪಾಠ ಕಲಿಯದಿದ್ದರೆ, ಎಂತಹ ಬುದ್ಧನೇ ಆಗಲಿ,
ದೇವದೂತನೇ ಆಗಲಿ, ಮಾನವಕುಲವನ್ನು ರಕ್ಷಿಸಲಾರ
, ಅಂತಹ ಪ್ರಜೆಗಳು ತಿಳಿಗೇಡಿಗಳು ಎಂದು ನಿಟ್ಟುಸಿರು ಬಿಡುತ್ತಾರೆ:
ಬುದ್ಧನೇ ನಿಜವಿರಲಿ, ಸಿದ್ಧನೇ ನಿಜವಿರಲಿ
ಇತಿಹಾಸ ತಿಳಿಯದವ ಶುದ್ಧ ನಿರ್ಬುದ್ಧ.
ಈ ಮಾತಿನ ಸತ್ಯವನ್ನು ನಾವು ಈವತ್ತೂ
ಸಹ ನೋಡುತ್ತಿದ್ದೇವೆ.
ಬೇಂದ್ರೆಯವರ ಕವನಗಳ ಒಂದು ವೈಶಿಷ್ಟ್ಯವೆಂದರೆ, ಕವನಕ್ಕೆ ತಕ್ಕಂತಹ ಗತಿ. ಈ ಕವನದ ಗತಿಯು ನಿರಾಶೆಯನ್ನು ಪ್ರತಿಫಲಿಸುವ ಗತಿಯಾಗಿದೆ ಎನ್ನುವುದನ್ನು ಗಮನಿಸಬೇಕು.