Friday, January 17, 2020

ವಿಶ್ವವಾಣಿ ಪತ್ರಿಕೆಯ ಸಂಪಾದಕರಿಗೆ,

ವಿಶ್ವವಾಣಿ ಪತ್ರಿಕೆಯ ಸಂಪಾದಕರೆ,
ನಾನು ಮೆಚ್ಚುವ ದಿನಪತ್ರಿಕೆಗಳಲ್ಲಿವಿಶ್ವವಾಣಿಯೂ ಒಂದು. ಇದಕ್ಕೆ ಕಾರಣ ವಿಶ್ವವಾಣಿಯಲ್ಲಿ ಕಂಡು ಬರುವ ಜಾಣಹಾಸ್ಯ. ಇದು ಅನೇಕ ಸಲ ಯಾರ್ಯಾರೋ ವ್ಯಕ್ತಿಗಳ ಹುಳಕನ್ನು ಪ್ರದರ್ಶಿಸುವ ಸಲುವಾಗಿಯೂ ಬಳಕೆಯಾಗುತ್ತಿದೆ. ಅದರಲ್ಲೇನೂ ತಪ್ಪಿಲ್ಲ ಬಿಡಿ; ಆದರೆ ಇದು ವಿನಾಕಾರಣ ವ್ಯಕ್ತಿನಿಂದನೆಯಾಗಬಾರದಷ್ಟೆ? ಹಾಗಾದಾಗ ವಿಶ್ವವಾಣಿಗೆ ಪೀತಪತ್ರಿಕೆ ಎನ್ನುವ ಬಿರುದು ಬರಲಿಕ್ಕಿಲ್ಲವೆ? ೧೭--೨೦ರ ಪತ್ರಿಕೆಯನ್ನು ನೋಡಿದಾಗ ಇಂತಹ ಭಾವನೆಯೊಂದು ನನ್ನ ಮನದಲ್ಲಿ ಸುಳಿದು ಹೋಯಿತು.

ವಿಶ್ವವಾಣಿಯ ಮುಖಪುಟದಲ್ಲಿಯೇ ಸಲ ಒಂದುಸುದ್ದಿ+ಟೀಕೆಪ್ರಕಟವಾಗಿದೆ. ಅದು ಹೀಗಿದೆ:

ಸಮಾಚಾರಕ್ಕೆ ಕೊಡಲಾದ ಶೀರ್ಷಿಕೆಯೆ ನನ್ನಲ್ಲಿ ಅಸಹ್ಯವನ್ನು ಹುಟ್ಟಿಸಿತು. ‘ಅಲ್ಲಾಡಿಸ್ತೀರಿಪದದ ಅರ್ಥವೇನು? ……..ತಲೆಯನ್ನೆ?.... ಸುದ್ದಿಯ ತಿರುಳು ಇದಕ್ಕೆ ವಿರುದ್ಧವಾಗಿದೆ; ಹಾಗಾದರೆ ಇದು ಪೃಷ್ಠವನ್ನು ಸೂಚಿಸುತ್ತಿರಬಹುದೆಓದುಗನಾದ ನನಗಂತೂ ತಿಳಿಯದು. ಸಂಪಾದಕರೇ ಹೇಳಬೇಕು! ಇನ್ನೂ ಕೆಳಮಟ್ಟಕ್ಕೆ ಇಳಿದು ಕೇಳಬಹುದಾದರೆ ಇದು ನಾಯಿಯ ಬಾಲವನ್ನು ಸೂಚಿಸುತ್ತಿದೆಯೆ? ಆದರೆ ಇದು ಒಂದು ಗಂಭೀರ ಪತ್ರಿಕೆಯು ಮುಖಪುಟದಲ್ಲಿ ಕೊಡಬಹುದಾದ ಶೀರ್ಷಿಕೆಯಂತೆ ನನಗೆ ಅನಿಸುತ್ತಿಲ್ಲ. ಹಾಗಾದರೆ ಇದು ಬಹುಶಃ ಆಧುನಿಕ ಪತ್ರಿಕಾಕಾರರ ಅಪರಿಮಿತ ಭಾಷಾಸ್ವಾತಂತ್ರ್ಯವಿರಬಹುದೇನೊ?

ವರದಿಯನ್ನು ಬರೆದ ಶ್ರೀ ಜಯವೀರ ವಿಕ್ರಮ ಸಂಪತ್ ಗೌಡರು ಸುರೇಶಕುಮಾರರನ್ನುಸುರೇಶಕ್ರಮಎಂದು ಕರೆದಿದ್ದಾರೆ. ಏಕೆಂದರೆ ಮಂತ್ರಿಗಳು ಎಲ್ಲರ ಮೇಲೂ  ಕ್ರಮಜರುಗಿಸುತ್ತಾರಂತೆ! ಜಯವೀರ ವಿಕ್ರಮ ಸಂಪತ್ ಗೌಡರು ವರದಿ ಮಾಡಿದ ಘಟನೆಯಲ್ಲಿ , ಕುಣಿದು ಕುಪ್ಪಳಿಸಿದ ಶಿಕ್ಷಕಿಯರು ಯಾವುದೇ ಅಪರಾಧ ಮಾಡಿಲ್ಲವಂತೆ; ಅವರು ಅನುಸರಿಸಿದ ಹಾಡಿನಲ್ಲಿ ಯಾವುದೇ ಅಶ್ಲೀಲತೆ ಇಲ್ಲವಂತೆ; ಅಲ್ಲಲ್ಲಿ ಅಲ್ಪ ಸ್ವಲ್ಪ ಡಬಲ್ ಮೀನಿಂಗ್ ಇರಬಹುದಂತೆ! ಇಂತಹ ಕಾರ್ಯಕ್ರಮಗಳನ್ನು  ಸಾರ್ವಜನಿಕರು ತಮ್ಮ ಟೀವಿಯಲ್ಲಿ ನೋಡುವುದಿಲ್ಲವೆ? (ನೋಡಿಯೇ ನೋಡುತ್ತಾರೆ ಎಂದು ಗ್ರಹಿಸಿಕೊಳ್ಳಿರಿ!) ವಿದ್ಯಾರ್ಥಿಗಳು ಅಲ್ಲಿ ಕೆಟ್ಟಿಲ್ಲ ಅಂದರೆ ಇಲ್ಲಿಯೂ ಸಹ (ತಮ್ಮ ಶಿಕ್ಷಕಿಯರ ಕುಣಿತವನ್ನು ನೋಡಿಯೂ ಸಹ) ಕೆಡಲಾರರು ಎನ್ನುವುದು ಜಯವೀರ ವಿಕ್ರಮ ಸಂಪತ್ ಗೌಡರ ತರ್ಕ.

ವಿಶ್ವವಾಣಿಯ ಸಂಪಾದಕರೆ, ನೀವು ಇತ್ತೀಚೆಗೆ ರಸ್ತೆಯ ಮೇಲೆ ಓಡಾಡುತ್ತಿರುವ ಹದಿಹರೆಯದ ಹುಡುಗರ ಗುಂಪುಗಳನ್ನು ನೋಡಿರುವುರಾ? ಐದಾರು ಹುಡುಗರ ಗುಂಪಿನಲ್ಲಿ ಒಬ್ಬನ ಅಥವಾ ಇಬ್ಬರ ಕೈಗಳಲ್ಲಿ ಬೆಲೆ ಬಾಳುವ ಸ್ಮಾರ್ಟ ಫೋನ್ಹುಡುಗರೆಲ್ಲರೂ ಸ್ಮಾರ್ಟ ಫೋನ್ ನೋಡುತ್ತ ಹೊಲಸು ಹೊಲಸು ಮಾತುಗಳನ್ನು ಆಡುತ್ತ ನಡೆಯುತ್ತಿರುತ್ತಾರೆ. ಕೆಲವೊಮ್ಮೆ ಅವರು ಹೇಳುವ ಮಾತು ಹೀಗೂ ಇರುತ್ತದೆ: ‘, ನಾ ಆಕಿನ್ನ ಕರದೇನ್ಲೆ. ಆಕಿ ಇಂಥಲ್ಲಿ ಬರತೇನಂತ ಹೇಳ್ಯಾಲಲೆ.’ ನಮ್ಮ ಹುಡುಗರ ಸದ್ಯದ ನೈತಿಕ ಮಟ್ಟ ಇದು. ಗೌಡರೆ, ನೀವು ಇದನ್ನು ಸಮರ್ಥಿಸುತ್ತೀರಾ? ಇಂತಹ ಹುಡುಗರೆ ನಂತರದಲ್ಲಿ ಅಸಹಾಯಕ ಬಾಲಕಿ ಸಿಕ್ಕಾಗ ರೇಪ್ ಮಾಡುವವರು; ಸಂತ್ರಸ್ತೆ ತಮ್ಮ ಗುರುತು ಹೇಳಬಹುದೆನ್ನುವ ಹೆದರಿಕೆಯಲ್ಲಿ ಅವಳನ್ನು ಭೀಕರವಾಗಿ ಕೊಲೆ ಮಾಡುವವರು. ಇವರೇ ನಿರ್ಭಯಾಳ ಅತ್ಯಾಚಾರಿ ಹಾಗು ಕೊಲೆಗಾರರು. ಇವರಿಗೆ ಇಂತಹ ಶಿಕ್ಷಣವನ್ನು ಯಾರು ನೀಡುತ್ತಿದ್ದಾರೆ, ಗೌಡರೆ? ಅವರ ಪರಿಸರವೆ ಅಂದರೆ ಪಾಠಶಾಲೆಯೆ ಇದಕ್ಕೆ ಕಾರಣವಲ್ಲವೆ?

ನನ್ನ ನಿವಾಸದ ಸ್ವಲ್ಪ ಕೆಳಗೆ ಒಂದು ಹಣಮಪ್ಪನ ಸ್ವಲ್ಪ ದೊಡ್ಡ ಗುಡಿಯಿದೆ. ಅಲ್ಲಿ ರೈತರು ಹಾಗು ಕಾರ್ಮಿಕರು ಕೂತು, ಹರಟೆ ಹೊಡೆದು ಹೋಗುತ್ತಿರುತ್ತಾರೆ. ಕೆಲವು ದಿನಗಳ  ಹಿಂದೆ ಒಂದು ಸಾರ್ವಜನಿಕ ಪ್ರದರ್ಶನ ಅಲ್ಲಿ ನಡೆದಿತ್ತು. ಒಬ್ಬ ಪುಟ್ಟ ಹುಡುಗಿ ಹಾಗು ಒಬ್ಬ ಹದಿಹರೆಯದ ಹುಡುಗ , ಯಾವುದೋ ಸಿನಿಮಾ ಹಾಡಿಗೆ, ತಮ್ಮ ಮೈ ಕೈ ಕುಣಿಸುತ್ತ ಅಸಹ್ಯವಾಗಿ ಕುಣಿಯುತ್ತಿದ್ದಾರೆ. ಕೂಡಿದ ಸಾರ್ವಜನಿಕರಿಂದ ಸೀಟಿ ಹಾಗು ಚಪ್ಪಾಳೆಗಳ ಮೆಚ್ಚುಗೆ. ಇದಕ್ಕೆ ಕಾರಣವೆಂದರೆ ಯಾವ ಗುಡಿ ಗುಂಡಾರಗಳಲ್ಲಿ ಒಂದು ಕಾಲಕ್ಕೆ ಹಳ್ಳಿಗರುಸತ್ಯ ಹರಿಶ್ಚಂದ್ರನಂತಹ ಬಯಲಾಟಗಳನ್ನು ಆಡುತ್ತಿದ್ದರೊ, ಅಲ್ಲೀಗ ಅನೈತಿಕ ಕುಣಿತ ನಡೆಯುತ್ತಿದೆ. ಇಂತಹದನ್ನು ಹುಡುಗರು ಕಲಿಯುವುದು ಟೀವೀ ಹಾಗು ಸ್ಮಾರ್ಟಫೋನುಗಳಿಂದ. ಇದಕ್ಕೆ ಪ್ರೋತ್ಸಾಹ ಕೊಡುವವರು ನಮ್ಮ ಶಿಕ್ಷಕಿಯರು ಹಾಗು ಕೆಲವಾರು ಪತ್ರಕರ್ತರು.

ಭಲೇ ಜಯವೀರ ವಿಕ್ರಮ ಸಂಪತ್ ಗೌಡರೆ! ಸುರೇಶಕುಮಾರರು ನಮ್ಮೆಲ್ಲ ರಾಜಕಾರಣಿಗಳಲ್ಲಿಯೇ ಸಭ್ಯ ಹಾಗು ಸುಸಂಸ್ಕೃತ ಎಂದು ಹೆಸರಾದವರು. ನಾವು ಕಟ್ಟಬೇಕಾದ ಭಾರತವು ಸುಸಂಸ್ಕೃತವಾದ ಆಧುನಿಕ ಭಾರತ ಎಂದು ಅರಿತವರು. ಅವರ ಜೊತೆಗೆ ನೀವು ಕೈಕೂಡಿಸದಿದ್ದರೆ ಬೇಡ, ಅವರ  ಕಾಲೆಳೆಯದಿದ್ದರೆ ಸಾಕು!
-ಸುನಾಥ

2 comments:

Arathi said...

ಹೌದು ಸರ್ಚಿ ಇತ್ತೀಚಿಗೆ ಪತ್ರಿಕೆಯವರೂ ಸಹ ಸುದ್ದಿ ವಾಹಿನಗಳಂತೆ ಇಂತಾ ಅಸಭ್ಯ ಶೀರ್ಷಿಕೆ ಗಳನ್ನು ಕೊಟ್ಟು trpಹಿಂದೆ ಬಿದ್ದಿದ್ದಾರೇನೊ ಅನಿಸುತ್ತಿದೆ.
ತಮ್ಮ ಮನಸು ಇಚ್ಚೆ ತಿರುಳಿಲ್ಲದ ದ್ವೇಶ ಕಾರುವ ಅಂಕಣ ಬರಹಗಳು ಕೆಲವು ಪತ್ರಿಕೆಗಳ ಪುಟ ತುಂಬಿದುತ್ತಿರುವುದು ಶೋಚನೀಯ.

sunaath said...

ಧನ್ಯವಾದಗಳು, ಆರತಿ ಮೇಡಮ್. ಸಮಾಚಾರ ಪತ್ರಿಕೆಗಳಲ್ಲಿ ಸಮಾಚಾರದ ಬದಲಾಗಿ, ಅನಾಚಾರವೇ ವಿಜೃಂಭಿಸುವಂತಹ ಕಾಲವಿದು!