Friday, August 21, 2020
ಕರಣಂ ಇವರ ಕಾದಂಬರಿ ‘ಗ್ರಸ್ತ’...................... ಸುದರ್ಶನ ಗುರುರಾಜರಾವ ಇವರ ಒಂದು ವಿಶ್ಲೇಷಣೆ
ಸುದರ್ಶನ ಗುರುರಾಜರಾವ ಇವರು ಕರಣಂ ರಚಿಸಿದ ಕಾದಂಬರಿ ‘ಗ್ರಸ್ತ’ ಬಗೆಗೆ ವಿಮರ್ಶಾತ್ಮಕ ಲೇಖನ ಬರೆದಿದ್ದಾರೆ. ಇದನ್ನು ‘ಸಲ್ಲಾಪ’ದಲ್ಲಿ ಪ್ರಕಟಿಸಲು ಸಂತೋಷವಾಗುತ್ತಿದೆ. ಈ ಲೇಖನದಲ್ಲಿ ಸುದರ್ಶನರು ವ್ಯಕ್ತಪಡಿಸಿದ ಅಭಿಪ್ರಾಯಗಳು ಸಂಪೂರ್ಣವಾಗಿ ಅವರವೇ ಆಗಿವೆ. ‘ಸಲ್ಲಾಪ’ blogದ ಒಡೆಯರಿಗೆ ಇದರೊಡನೆ ಯಾವುದೇ ಸಂಬಂಧವಿಲ್ಲ.
------ಸುನಾಥ
.....................
ಕೊಂಡು ತಂದು ೨ ವರ್ಷಗಳಷ್ಟೇ ಆಗಿದ್ದರೂ ಗ್ರಸ್ತವನ್ನು ಓದಲು ಕಾಲ ಕೂಡಿ ಬಂದಿರಲೇ ಇಲ್ಲ. ಅಂತರ್ಜಾಲದಲ್ಲೂ ,ಫೇಸ್ಬುಕ್ ಪುಟಗಳಲ್ಲೂ ಸಾಕಷ್ಟು ಓದುಗರು ಈ ಕಾದಂಬರಿಯನ್ನು ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಮೊದಲು ಕರಣಂ ಅವರ ಕರ್ಮ ಮತ್ತು ನನ್ನಿ ಎರಡನ್ನೂ ಓದಿ ಮೆಚ್ಚಿದ್ದೆ.ಈ ಭಾನುವಾರ ಯಾವ ಕೆಲಸ ಇಲ್ಲದ ಕಾರಣ ನಿಧಾನವಾಗಿ ಕುಳಿತು ಓದಿದ್ದಾಯ್ತು. ಚಿಕ್ಕದಾದ ಕಾದಂಬರಿ ಚೆನ್ನಾಗಿ ಓದಿಸಿಕೊಂಡು ಹೋಯಿತು.
ಬೆಂಗಳೂರಿನ ಬ್ರಾಹ್ಮಣ ಬಡಾವಣೆಯಲ್ಲಿ ಪ್ರಾರಂಭವಾಗುವ ಕಥೆ ಅಲ್ಲ್ಲಿಲ್ಲಿ ಹರಿದು, ಪ್ರಾಗ್ ಎಂಬ ವಿದೇಶಕ್ಕೆ ಹೋಗಿ ಪುನಃ ಬೆಂಗಳೂರಿಗೆ ಬಂದು, ತಿರುವು ಪಡೆದು ಮಲೆನಾಡಿನ ಮಲೆಯೊಂದರ ಮೇಲೆ ಬಂದು ನಿಲ್ಲುತ್ತದೆ. ಅದು ಮುಕ್ತಾಯವೋ ಹೊಸ ಆರಂಭವೋ ಎಂಬುದನ್ನು ಓದುಗರು ಊಹಿಸಿಕೊಳ್ಳಬೇಕು.
ಕೆಳ ಮಧ್ಯಮ ವರ್ಗದ ಮಾಧ್ವ ಬ್ರಾಹ್ಮಣ ಕುಟುಂಬದಲ್ಲಿ ಕಣ್ಣಿನ ತುಂಬಾ ಕನಸು ಹೊತ್ತ ಯುವತಿ, ಸರಿಯಾಗಿ ತಿಳಿಯದೆ, ಪರಿಶಿಷ್ಟ ಜಾತಿಯ ಯುವಕನನ್ನು ಪ್ರೀತಿಸಿ ಮನೆಬಿಟ್ಟು ಓಡಿಹೋಗಿ ಮದುವೆ ಮಾಡಿಕೊಳ್ಳುವ ಜಯಶ್ರೀ; ಕನಸುಗಳೊಂದೂ ಸಾಕಾರವಾಗದೆ ಬರೀ ಬೀಳುಗಳ ಹಾದಿಯಲ್ಲಿ ಕ್ರಮಿಸುತ್ತಲೇ ಇನ್ನೇನು ಸ್ವಲ್ಪ ಏಳು ಕಾಣುತ್ತಿದೆ ಎಂಬಲ್ಲಿ ಹೃದಯಾಘಾತದಿಂದ ನಿಧನಳಾಗುತ್ತಾಳೆ. ಕನಸುಗಳು ತುಂಬಿದ ಜೀವವೊಂದು, ಕನಸುಗಳೇ ಇಲ್ಲದ, ಕೆಲಸ ಮಾಡುವ ಕಸುವೂ ಇಲ್ಲದ ಒಬ್ಬನನ್ನು ಓಡಿಹೋಗಿ ಮದುವೆಯಾಗುವ ವಿಪರ್ಯಾಸಗಳು ದಿನವೂ ಕಂಡು ಕೇಳುವ ವಿಚಾರವೇ. ಬವಣೆಗಳನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ. ಅವಳ ಮಗನೇ ಅಸಾಧಾರಣ ಬುದ್ಧಿಮತ್ತೆ ಮತ್ತು ಅತೀಂದ್ರಿಯ ಮನ:ಶಕ್ತಿ ಇರುವ ಅವಿನಾಶ್!
ಅವನ ತಾಯಿ ಜಯಶ್ರೀ ಗೆ ಅಡುಗೆ ಮಾಡಿ ಮನೆ ಸಂಭಾಳಿಸುವ ಕೆಲಸ ಕೊಟ್ಟಿದ್ದ ಪ್ರೊಫೆಸ್ಸರ್ ಗೋಪೀನಾಥ್ ಮನೆಯಲ್ಲೇ ಜಯಶ್ರೀ ಮತ್ತು ಶಿವಕುಮಾರ್ ಗೆ ಹುಟ್ಟಿದ ಮಗ ಅವಿನಾಶ ಕೆಲಸಕ್ಕೆ ಉಳಿಯುತ್ತಾನೆ. ಅವನೂ ತನ್ನ ಅಮ್ಮನಂತೆ ಅಡುಗೆಯಲ್ಲಿ ನುರಿತವನೇ. ಜಯಶ್ರೀಯಿಂದ ಒಮ್ಮೆ ಅವಳ ಕಥೆಯನ್ನು ಕೇಳಿ ತಿಳಿದು, ತಮ್ಮ ಸಾಂಪ್ರದಾಯಿಕ ಒತ್ತಡಗಳನ್ನು ಬದಿಗೆ ಸರಿಸಿ,ಮೀರಿ, ಆಕೆಯನ್ನು ಕೆಲಸಕ್ಕೆ ಇಟ್ಟುಕೊಂಡು ಅವಳ ಮಗನ ವಿದ್ಯಾಭ್ಯಾಸದ ಬಗೆಗೆಯೂ ಆಸಕ್ತಿ ವಹಿಸುವ ಗೋಪೀನಾಥರು ಅನಂತರವೂ ಅವನಿಗೆ ಮಾರ್ಗದರ್ಶನ ಮತ್ತಿತರ ಸಹಾಯ ಮಾಡುತ್ತಲೇ ಇರುತ್ತಾರೆ. ತಮ್ಮ ಕಾಲೇಜಿನಲ್ಲೇ ಕೆಲಸವನ್ನೂ ಕೊಡಿಸುತ್ತಾರೆ , ಅವನ ಸ್ಕಾಲರ್ಷಿಪ್ ಗೆ ತಮ್ಮದೇ ಥೀಸಿಸ್ ಕೊಟ್ಟಿರುತ್ತಾರೆ, ಅವನ ಏಳಿಗೆಯನ್ನು ಕಂಡು ಸಂತೋಷಿಸಿಯೂ ಇರುತ್ತಾರೆ. ವಿಜ್ಞಾನ -ತಂತ್ರಜ್ಞಾನ-ತತ್ವಶಾಸ್ತ್ರ ಇವುಗಳನ್ನು ಸಮನ್ವಯ ಸಾಧಿಸಿ ಅರ್ಥೈಸಿಕೊಳ್ಳುವ ಪ್ರಯತ್ನ ನಡೆಸುತ್ತಲೇ ಅವಿನಾಶನನ್ನೂ ಕಡೆಗೆ ಗಮನ ವಹಿಸಲು ಪ್ರಚೋದಿಸುತ್ತಾರೆ. ಅವಿನಾಶನ ತಂದೆ ತೀರಿಕೊಂಡಾಗ ತಮ್ಮ ಸಂಪ್ರದಾಯ, ಮಡಿ ಮೈಲಿಗೆ, ಆಚಾರಗಳನ್ನು ಮೀರಿ ಮಾನವೀಯತೆ ತೋರಿಸುತ್ತಾರೆ. ಅವರ ಮಗಳಿಗೆ ಅವಿನಾಶನೆಂದರೆ ಪ್ರೀತಿ. ಅವಿನಾಶನಿಗೂ ಅವಳನ್ನು ಮದುವೆಯಾಗುವ ಬಯಕೆ. ಈ ನಡುವೆ ರೇಖಾ ಎಂಬ ಸುಂದರಿಯೂ, ಜಾಣೆಯೂ,, ಸ್ಥಿತಿವಂತ ಮನೆತನದ, ಮದುವೆಯಾದ ಆದರೆ ದಾಂಪತ್ಯದಲ್ಲಿ ಅಸಂತುಷ್ಟಳಾದ ಹೆಣ್ಣಿನ ಪರಿಚಯ ಅವಿನಾಶನಿಗೆ ಆಗಿ, ಅವಳೊಂದಿಗೆ, ಅವಳ ಗಂಡನ ಅನುಪಸ್ಥಿತಿಯಲ್ಲಿ ದೇಹಸಂಪರ್ಕ ಬೆಳೆಸುತ್ತಾನೆ. ಹೇಳದೆ ಕೇಳದೆ ಅವಳಿಂದ ಬಿಡಿಸಿಕೊಂಡು ದೂರವೂ ಸರಿಯುತ್ತಾನೆ. ವಿದೇಶ ತಿರುಗಿ ವಾಪಸ್ಸು ಬಂದಮೇಲೆ, ಗಂಡನನ್ನು ಬಿಟ್ಟು ಹೊರಟು ಬಂದ ರೇಖಾ, ಮಗುವಿನ ಜೊತೆಗೆ, ಗೋಪೀನಾಥರ ಮಧ್ಯಸ್ಥಿಕೆಯಲ್ಲಿ ಅವಿನಾಶನ ಮನೆ ಸೇರುತ್ತಾಳೆ. ಅವನ ವಿಕ್ಷಿಪ್ತ ನಡವಳಿಕೆಗಳನ್ನು ಸಹಿಸಿಕೊಂಡು, ಅವನೂ ಅವಳನ್ನು ಒಪ್ಪಿಕೊಂಡು,ಬಾಳುವೆ ನಡೆಸುತ್ತಿರುತ್ತಾರೆ. ಅಷ್ಟರಲ್ಲಿ, ವಿದೇಶದಿಂದ ಇವನ ಸಂಶೋಧನೆಗೆ ಸಲ್ಲಬೇಕಾದ ಹಣದ ಮೊತ್ತವೊಂದು ಬರುತ್ತದೆ. ಈ ಮಧ್ಯೆ ಗೋಪೀನಾಥರ ಮಗಳ ಮದುವೆಯೂ ಆಗಿ ಆ ಕಹಿಯನ್ನು ಮೀರಿ ನಿರ್ಭಾವುಕನಾಗಿ ಯೋಚಿಸುವಾಗ ,ದೇಹ,ಮಾಂಸ, ಸೌಂದರ್ಯ,ಅದರ ಪ್ರಚೋದನೆ ಆ ಪ್ರಚೋದಕ ಶಕ್ತಿ,ಒಂದು ಆಕರವಾಗಿ,ಇನ್ನೊಂದು ಸ್ಪಂದಿಸಿ ಶಕ್ತಿ ಸೋರಿಕೆಯಾಗುವ ಐಡಿಯಾ ಬಂದುಬಿಡುತ್ತದೆ., ಅದೇ ಸ್ಪಷ್ಟವಾಗುತ್ತಾ ಹೋಗಿ ಇವನಿಗೆ ಧಿಗ್ಗನೆ ಪ್ರಪಂಚದಲ್ಲಿ ಸರ್ವವ್ಯಾಪಿಯಾಗಿರುವ ವಿದ್ಯುತ್ತನ್ನು ನಿಸ್ತಂತು ಮಾಧ್ಯಮದ ಮೂಲಕ ನಿರಂತರ ಚಾರ್ಜ್ ಮಾಡಬಲ್ಲ ವಿಧಾನದ ಸಾಕ್ಷಾತ್ಕಾರ ಹೊಳೆಯುತ್ತದೆ. ಅದನ್ನು ಭೌತಿಕವಾಗಿ ಕಾರ್ಯರೂಪಕ್ಕೆ ತರಲು ಮಲೆನಾಡಿನ ಮಧ್ಯದಲ್ಲಿ ಮನೆ ಮಾಡಿ , ಬೆಟ್ಟದ ಮೇಲೆ ತನ್ನ ಪ್ರಯೋಗ ನಡೆಸಿ, ತನ್ನ ಹೆಂಡತಿಯಂತೆಯೇ ಇದ್ದ ರೇಖಾಳನ್ನು ನಡುರಾತ್ರಿಯಲ್ಲಿ ಅಲ್ಲಿಗೆ ಕರೆದೊಯ್ದು, ಅವಳಿಂದ , ಅವಳ ಪ್ರತಿಭಟನೆ ಮೀರಿ, ಆಕಸ್ಮಿಕ ಅಕ್ರಮಣಕ್ಕೆ ಅವಳ ಗಂಡನಾದ ಸುಂದರನಿಂದಲೇ ಅತ್ಯಾಚಾರದ ಹೇಯ ಕೆಲಸಕ್ಕೆ ಪ್ರಮಾಣವನ್ನು ಪಡೆಯುತ್ತಾನೆ. ಅತಿಇಂದ್ರಿಯ ಶಕ್ತಿಯಿಂದಾಗಿ, ಮತ್ತೊಬ್ಬರ ಉದ್ದೇಶವನ್ನು ತಿಳಿಯುವ,ಘಟಿಸಿದ ಘಟನೆಯ ವಿವರಗಳನ್ನು ಅಪ್ರತ್ಯಕ್ಷವಾಗಿ ಅರಿಯುವ ಒಂದು ಜನ್ಮಜಾತ ಅಲೌಕಿಕ ಶಕ್ತಿ ಅವಿನಾಶನಿಗಿರುತ್ತದೆ!. ಅವನ ನಿಸ್ತಂತು ವಿದ್ಯುತ್ಪ್ರವಾಹದ ಉತ್ಪಾದನೆ,, ಪ್ರಸರಣ ಹಾಗೂ ಅದರ ಬಳಕೆಯನ್ನು ಮಾಡಿಕೊಳ್ಳುವ ಪ್ರಯೋಗದ ಸಾಫಲ್ಯವನ್ನೂ ಕಾಣುತ್ತಲೇ ಅವಳನ್ನು ಒಂಟಿಯಾಗಿ ಬಿಟ್ಟು ದಿಗಂಬರನಾಗಿ ಎತ್ತಲೋ ಕಳೆದು ಹೋಗುವಲ್ಲಿ ಕಥೆ ಬಂದು ನಿಲ್ಲುತ್ತದೆ.
ಎಲ್ಲಿಯೂ ನಿಲ್ಲದೆ, ಹೆಚ್ಚು ಎಳೆದಾಡದೆ ಓದಿಸಿಕೊಂಡು ಹೋಗುವ ಕಥೆಯಲ್ಲಿ ಅಲ್ಲಲ್ಲಿ ಪ್ರಾಸ್ತವಿಕವಾಗಿ, ಉಪನಿಷತ್, ವೇದ, ಪ್ರಾಚೀನ ಭಾರತೀಯ ಗಣಿತ, ಅಮೂರ್ತವಾದದ್ದರ ಅದ್ಭುತ ಚಿಂತನೆ, ನಿಕೋಲಾ ಟೆಸ್ಲಾ ಸೇರಿದಂತೆ ಹಲವಾರು ವಿಜ್ಞಾನಿಗಳ ಉಲ್ಲೇಖ ಬಂದು ಹೋಗುತ್ತದೆ.
ದೇಹದಿಂದ ಆತ್ಮ ಬೇರೆಯಾಗುವುದಲ್ಲ, ದೇಹವೇ ಅಖಂಡವಾದ ಆತ್ಮ ಎಂಬಂತೆ ನಾವು ಗ್ರಹಿಸುವ ಸರ್ವವ್ಯಾಪಿ ಶಕ್ತಿ ಎಂಬ ಜಾಲದಿಂದ ಬೇರ್ಪಡುತ್ತದೆ, ಎಂಬಂಥ ಹಲವು ಜಿಜ್ಞಾಸೆಗೆ ಒಡ್ಡಿಸಿಕೊಳ್ಳುವ ಹೇಳಿಕೆಗಳಿವೆ; ಚೆನ್ನಾಗಿವೆ.
ನಿರ್ಗುಣ ನಿರಾಕಾರ ಬ್ರಹ್ಮ, ಪಂಚಭೂತಗಳಲ್ಲಿ ಬ್ರಹ್ಮವು ಪ್ರವೇಶಿಸಿ, ತಾನೇ ಅದಾಗುವುದು ಎಂಬ ರೀತಿಯ ಉಪನಿಷತ್ ವಾಕ್ಯಗಳನ್ನು ಯಥಾಯೋಗ್ಯವಾಗಿ ಬಳಸಿಕೊಂಡಿದ್ದಾರೆ.
ಕಾದಂಬರಿಗೆ ಬೇಕಾದ ಬಿಗಿಯಾದ ಶೈಲಿ, ಸರಸರನೆ ನಡೆದು ಹೋಗುವ ಘಟನೆಗಳು, ಒಂದರಿಂದ ಇನ್ನೊಂದಕ್ಕೆ ತೆರೆದುಕೊಳ್ಳುವ ಬೆಳವಣಿಗೆಗಳು, ಒಂದು ದಿಕ್ಕಿಗೆ ಹರಿದ ಕಥೆ ಮತ್ತೊಂದು ದಿಕ್ಕಿಗೆ ಹರಿದು ಪುನಃ ಎಲ್ಲಿಗೆ ಬಿಟ್ಟಿತ್ತೋ ಅಲ್ಲಿಗೆ ಬಂದು ಮುಂದುವರಿದು ಅಂತ್ಯಕಾಣುವ ವರಸೆಯೂ ಚೆನ್ನಾಗಿದೆ. ವಿಭಿನ್ನ ಕಥಾವಸ್ತು, ಭಾಷೆ, ಸರಳತೆ ಎಲ್ಲದರಲ್ಲೂ ಆಪ್ತವೆನಿಸುವ ಈ ಕಿರುಕಾದಂಬರಿ ಬಹಳ ಕಡೆ ಕರ್ತೃವು ಎಡವಿದ ಅನುಭವ ನನಗೆ ನೀಡಿತು.
ಕಳೆದ ಶತಮಾನ ಕಂಡ ಮೇಧಾವಿ ಆದರೆ ಹತಭಾಗ್ಯನಾದ ವಿಜ್ಞಾನಿ ನಿಕೋಲಾ ಟೆಸ್ಲಾ ೧೯೧೦-೧೨ ರಲ್ಲಿಯೇ ಇಡೀ ವಿಶ್ವಕ್ಕೆ ವಿದ್ಯುತ್ತನ್ನೂ , ಮಾಹಿತಿ ತರಂಗಗಳನ್ನೂ ಬೇಕಾದಷ್ಟು ಪ್ರಮಾಣದಲ್ಲಿ ಉಚಿತವಾಗಿ ಕೊಡುವ ಆಲೋಚನೆ ಹಾಕಿ ಅದಕ್ಕೆ ಆರಂಭಿಕ ಕೆಲಸವನ್ನೂ ಪ್ರಾರಂಭಿಸಿದ್ದ. ಎಡಿಸನ್ನ್ನನ ನಿರಂತರ ಕಿರುಕುಳ, ಆರ್ಥಿಕ ಪ್ರಹಾರ, ರಾಜಕೀಯ, ಮಾರ್ಕೋನಿಯ ಶೀಘ್ರ ಫಲಿತಾಂಶ ಕೊಟ್ಟ ಪ್ರಯೋಗಗಳು ಇವನಿಗೆ ಸಹಾಯ ಸಿಗದಂತೆ ಮಾಡಿ, ದಿವಾಳಿಯೆದ್ದುಹೋದ ಟೆಸ್ಲಾ, ಅಜ್ಞಾತನಾಗಿ ಸತ್ತುಹೋದ. ಅದೇನೋ ಕೆಲವರಿಗೆ ಬಾಳಿನಲ್ಲಿ ಅದೃಷ್ಟ ಎಂಬುದಿರುವುದಿಲ್ಲ. ಕನ್ನಡದ ಪಿ.ಬಿ.ಶ್ರೀನಿವಾಸ್, ಶ್ರೀನಿವಾಸ ರಾಮಾನುಜಂ, ಅಂತಹ ಕೆಲವರು. ಲೇಖಕರ ಕಥೆಗೆ ಇದು ತಳಹದಿಯೂ, ಸ್ಫೂರ್ತಿಯೂ ಆಗಿದೆ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಕರಣಂ ಅವರ ವೈಜ್ಞಾನಿಕ ಪರಿಕಲ್ಪನೆಯಲ್ಲಿ ಹೊಸದೆಂಬುದೇನೂ ಇಲ್ಲ; ಟೆಸ್ಲಾನಿಗೆ ತೋರಿಸಲು ಅವಕಾಶ ಆಗಲಿಲ್ಲ, ಅದನ್ನೇ ಇಲ್ಲಿ ಬಳಸಿಕೊಂಡಿದ್ದಾರೆ. ಅವಿನಾಶನ ಆವಿಷ್ಕಾರ ಎಂಬಂತೆ ಬಿಂಬಿಸಿ ಟೆಸ್ಲಾನ ನೇರ ಕಾಣಿಕೆಯನ್ನು ಮರೆಮಾಚಿದ್ದು ಯಾಕೋ ತಿಳಿಯಲಿಲ್ಲ. ಅವಿನಾಶನ ವ್ಯಕ್ತಿತ್ವದಲ್ಲಿ ಮಾಂತ್ರಿಕ ವಾಸ್ತವತೆಯ ಬಳಕೆ ಮಾಡಿಕೊಂಡಿದ್ದಾರೆ. ಅದನ್ನೇ ಬಳಸಿ ಈ ಪ್ರಯೋಗ-ಪರಿಕಲ್ಪನೆ- ಪರಿಣಾಮಗಳಿಗೆ ಟೆಸ್ಲಾನನ್ನು ಬೆಸೆದಿದ್ದರೆ ವಾಸ್ತವಕ್ಕೆ ನ್ಯಾಯ ಒದಗಿಸಿದಂತಾಗುತ್ತಿತ್ತು. ಕಥಾ ಸಮಯ ಎಂದು ರಿಯಾಯಿತಿ ತೋರಿಸಬಹುದೇನೋ!! ಶ್ರುತಿ -ಸ್ಮೃತಿಗಳು ವಿದ್ಯುತ್ ತರಂಗದ ರೂಪದಲ್ಲಿ ಒಬ್ಬರಿಂದ ಇನೋಬ್ಬರಿಗೆ ಇಳಿಯಬಹುದಾದರೆ ಅದನ್ನು ಭಾರತೀಯ ಭೌಗೋಲಿಕ ಮಿತಿಗೆ ನಿಯಂತ್ರಿಸುವುದರಲ್ಲಿ ಅರ್ಥವಿಲ್ಲ.
ಕಥೆಯ ಮೂಲ ಎಳೆ, “ಹುಟ್ಟು ಮತ್ತದರ ಮೂಲ ಮುಖ್ಯವಲ್ಲ, ಹುಟ್ಟಿನ ಪರಿಣಾಮ ಮುಖ್ಯ” ಎಂದಾಗಿರುವುದರಿಂದ, ಒಂದು ಹುಟ್ಟನ್ನು ಬ್ರಾಹ್ಮಣ ಜಾತಿಗೆ ತಗುಲಿ ಹಾಕಲಾಗಿದೆ. ಇಂದಿನ ಕಾಲದ ಅವಶ್ಯಕತೆಯಾದ, ಎಲ್ಲರಿಂದಲೂ ಅನ್ನಿಸಿಕೊಳ್ಳುವ ಬ್ರಾಹ್ಮಣ, ಆ ಜಾತಿಯ ಸ್ಥಿತಿ, ಗತಿ, ಆಚಾರ ವಿಚಾರ ಎಲ್ಲವುಗಳನ್ನೂ ಲೇಖಕರು ಚೆನ್ನಾಗಿ ಬಳಸಿಕೊಂಡು, ಅದಕ್ಕೊಂದಷ್ಟು ಮಸಿಯನ್ನೂ ಬಳಿಯುವಲ್ಲಿ ಯಶಸ್ವಿಯಾಗಿದ್ದಾರೆ. ಮಾಂತ್ರಿಕ ವಾಸ್ತವವನ್ನು ಅವಿನಾಶನಿಗಷ್ಟೇ, ಅವನ ಉದ್ದೇಶಗಳಿಗಷ್ಟೇ ಬಳಸಿಕೊಂಡು, ಅವನನ್ನು ಲಾಂಚ್ ಮಾಡಲು ಇತರ ಪಾತ್ರಗಳನ್ನೂ ದುರ್ಬಲವನ್ನಾಗಿ ಚಿತ್ರಿಸಿರುವುದು ಲೇಖಕರು ಪೂರ್ವತಯಾರಿಯಲ್ಲಿ ಎಡವಿರುವುದನ್ನು ತೋರಿಸುತ್ತದೆ. ಜಾತಿಯಿಲ್ಲದೆಯೂ , ಬ್ರಾಹ್ಮಣ ಜಾತಿಯನ್ನು ಹೊರತುಪಡಿಸಿಯೂ ಈ ಕಥೆಯನ್ನು ವಿಭಿನ್ನ ನೆಲೆಯಲ್ಲಿ ಕಟ್ಟಬಹುದಿತ್ತೇ ಎಂದರೆ ಹೌದು ಎನ್ನಬಹುದು. ಗಾರ್ಸಿಯ ಮಾರ್ಕ್ವೆಜ್ ನ one hundred years of solitude ಅನ್ನು ಓದಿದವರಿಗೆ, ಪಾತ್ರಗಳನ್ನೂ ನಿರ್ವಚನೆಯಿಂದ ಬೆಳೆಸುವುದು ಹೇಗೆ ಎಂದು ತಿಳಿದೀತು. ‘ಪಾತ್ರಗಳ ಮೇಲೆ ಲೇಖಕನಿಗೆ ಹಿಡಿತವಿಲ್ಲ, ಅವು ತೆರೆದುಕೊಂಡಂತೆ ಬರೆಯುತ್ತಾನೆ’ ಎನ್ನುವುದಾದರೆ, ಒಂದು ಪಾತ್ರವನ್ನು ಜಾತಿ ಮತ ಇತ್ಯಾದಿಗಳಿಗೆ ಬಿಗಿದು ಅಧೋಗತಿಯ ಪ್ರಪಾತಕ್ಕೆ ಇಳಿಸುವಾಗ, ಅದಕ್ಕೆ ಸಂವಾದಿಯಾದ ಮತ್ತೊಂದು ಚಿತ್ರವನ್ನು ಕಟ್ಟಿ ಕೊಡಬೇಕಾಗುತ್ತದೆ ಮತ್ತು ಇದೇ ಲೇಖಕರ ‘ಕರ್ಮ' ಕಾದಂಬರಿಯಲ್ಲಿ ಆ ಕೆಲಸವನ್ನು ಅಯಾಚಿತವಾಗಿ ಮಾಡಿದ್ದಾರೆ. ಜೀವನದ ಸ್ವಾರಸ್ಯ, ಜಗತ್ತಿನ ವೈಚಿತ್ರ ಇರುವುದೇ ಅಲ್ಲಿ. ಆದರೆ ಪವನ ಪ್ರಸಾದರ ಈ ಪ್ರಪಂಚದಲ್ಲಿ ನಾಯಕನನ್ನು ಬಿಟ್ಟು ಉಳಿದೆಲ್ಲ ಪಾತ್ರಗಳೂ ದುರ್ಬಲವಾಗಬೇಕು, ಅಂದರೆ ನಾಯಕನ ಹೊಳಹು ಹೆಚ್ಚಿತು ಎಂದು ತಿಳಿದಂತಿದೆ.
ಪಾತ್ರಗಳನ್ನ ಚಿತ್ರಿಸಿದ ರೀತಿಯಲ್ಲಿಯೂ ಲೇಖಕರು ಎಡವಿದ್ದಾರೆ ಎಂದೆನಲ್ಲ, ಅದನ್ನು ನೋಡೋಣ. ಈ ಮಾತನ್ನು ಹೇಳುವಾಗ ಪಾತ್ರಗಳನ್ನೂ ಅವುಗಳು ಇದ್ದಂತೆಯೇ ಒಪ್ಪಿಕೊಳ್ಳುವ ಅವಶ್ಯಕತೆಯನ್ನೂ. ಕಾದಂಬರಿಕಾರನ ಸ್ವಾತಂತ್ರ್ಯವನ್ನೂ ಅನುಲಕ್ಷ್ಯದಲ್ಲಿ ಇಟ್ಟುಕೊಂಡೆ ಹೇಳುತ್ತಿದ್ದೇನೆ.
ಲೇಖಕರ ಅನುಭವದ ಮೂಸೆಯಿಂದ ಮೂಡಿದ ಪಾತ್ರಗಳೆಂದರೆ ಜಯಶ್ರೀ ಮತ್ತು ಶಿವಕುಮಾರ ಮಾತ್ರ. ಜಯಶ್ರೀ ಪಡುವ ಕಾರ್ಪಣ್ಯಗಳು, ಇಟ್ಟ ಹೆಜ್ಜೆಗಳು, ಅವಳ ಮಿತಿಯಲ್ಲಿ ತೆಗೆದುಕೊಂಡ ನಿರ್ಧಾರಗಳು ಹಾಗೂ ಅವಳ ಅಂತ್ಯ, ಅವಳ ಗಂಡನಾದ ಶಿವಕುಮಾರ, ಅವನ ನಿಷ್ಕ್ರಿಯತೆ, ನಡೆಸಿದ ದೈನೇಸಿ ಜೀವನ ಎಲ್ಲವೂ ವಾಸ್ತವದಿಂದ ಭಿನ್ನವಿಲ್ಲ. ಓದುಗ, ತನ್ನ ಸುತ್ತಲಿನ ಪ್ರಪಂಚದ ಜತೆಗೆ ಗುರುತಿಸಿಕೊಳ್ಳಬಹದು ಹಾಗೂ ಆ ಪಾತ್ರಗಳನ್ನೂ ಚೆನ್ನಾಗಿ ಕಟ್ಟಿಕೊಡಲಾಗಿದೆ.
ಮತ್ತೊಂದು ಪ್ರಮುಖ ಪಾತ್ರವಾದ ಗೋಪೀನಾಥರು ತಮ್ಮ ಮಿತಿಯಲ್ಲಿ ತಮಗೆ ಯಾವುದೂ ಅಲ್ಲದ ಅವಿನಾಶನ ಕೈಹಿಡಿದು ಮೇಲೆತ್ತಿ, ಅವನ ಬದುಕಿಗೆ ಒಂದು ದಿಕ್ಕು, ಗುರಿ ತೋರಿಸುವ ತನಕ ಬೆಳೆಸಿ,ಅನಂತರದಲ್ಲಿ ಸ್ವಾರ್ಥಕ್ಕೆ ಪಕ್ಕಾಗಿ ಅವಿನಾಶನಿಗೆ ಮೋಸ ಮಾಡುವ ವಂಚಕನನ್ನಾಗಿ ಚಿತ್ರಿಸಲಾಗಿದೆ. ಅಲ್ಲಿಯೂ ಅವರು ತಮ್ಮ ಮಗಳನ್ನು ಇವನು ಮದುವೆಯಾಗುವ ಅನಿವಾರ್ಯತೆಯಿಂದ ತಪ್ಪಿಸಲು ಹಾಗೆ ಮಾಡಿದರು , ರೇಖಾಳಿಗೆ ಇವನನ್ನು ತಗುಲಿಹಾಕಲು ಮಾಧ್ಯಮವಾದರು, ಮಗಳ ಮದುವೆಗೆ ಕುಹಕದಿಂದ ಆಮಂತ್ರಿಸಿದರು, ಎಂದು ಓದುಗರನ್ನು ನಂಬಿಸಲು ಹರಸಾಹಸ ಪಟ್ಟಿದ್ದಾರೆ. ರೇಖಳಂಥ, ತಿಳಿದ ಬುದ್ಧಿವಂತ ಹೆಣ್ಣಿಗೆ ರೇಪು ಅಪಾದನೆ ಮಾಡಿ ಇವನನ್ನು ಬೀಳಿಸಲು, ವಯೋವೃದ್ಧರಾದ, ಧರ್ಮ ಕರ್ಮಗಳನ್ನು ಅರಿತ ಒಬ್ಬ ಸದ್ಬ್ರಾಹ್ಮಣಾನೇ ಬೇಕಿತ್ತ?.ಇಲ್ಲಿ ಪಾತ್ರಗಳನ್ನೂ ಸ್ವಾಭಾವಿಕವಾಗಿ ಬೆಳೆಯಲು ಬಿಡದೆ ತಮ್ಮ ಒಗ್ಗರಣೆ ಹಾಕಿರುವುದು ರಾಚುತ್ತದೆ. ಇದನ್ನು ಮೀರಿ, ಅವಿನಾಶನ ಬಾಯಲ್ಲಿ “ನಾನು ಬ್ರಾಹ್ಮಣನಲ್ಲದಿದ್ದರೆ ನೀವು ನನಗೆ ಅನ್ನ ಹಾಕುತ್ತಿದ್ದಿರಾ, ಸಹಾಯ ಮಾಡುತ್ತಿದ್ದೀರಾ, ಇಲ್ಲ; ನನ್ನ ಯೋಗ್ಯತೆಯಿಂದ ನೀವು ನನ್ನನ್ನು ಗಳಿಸಿಕೊಂಡಿರಿ, ನಿಮ್ಮ ಅಯೋಗ್ಯತೆಯಿಂದ ನನ್ನನ್ನು ಕಳೆದುಕೊಂಡಿರಿ ‘ಎಂಬ ಮಾತನ್ನು ಆಡಿಸಿ ,ಅದಕ್ಕೆ ಸಂವಾದಿಯಾಗಿ ಗೋಪಿನಾಥರಿಂದ, ಸ್ವಗತವೋ, ಇನ್ನೊಂದೋ ತಂದು ಆ ವಿಚಾರಗಳ ಸಮತೋಲನ ಸಾಧಿಸಲಿಲ್ಲ. ಇದು ನನಗೆ ಪೂರ್ವಾಗ್ರಹ ಎಂದೆನಿಸುತ್ತದೆ.
ಮೊದಲು ರೇಖಾಳನ್ನಂತೂ ಒಂದು ಕೃತ್ರಿಮಿಯಾಗಿ ಬೆಳೆಸಿಕೊಂಡು ಹೋಗಿದ್ದಾರೆ, ಅನಂತರದಲ್ಲಿ ಸ್ವಂತಿಕೆಯಿಲ್ಲದ, ಬದುಕಲು ಏನೋ ಮಾಡುವ ಹತಾಶ ಹೆಣ್ಣಾಗಿ ಚಿತ್ರಿಸಿದ್ದಾರೆ. ಮದುವೇಗೆ ಮುಂಚೆ, ಮದುವೆಯ ನಂತರ, ಮದುವೆ ಮುರಿದ ಮೇಲೆ, ಎಲ್ಲಾ ಹಂತಗಳಲ್ಲೂ ಅವಳು ಒಂದು ರೀತಿ ಜಾರಿದ ಹೆಂಗಸು ಎನ್ನುವ ಭಾವ ಬರುವಹಾಗೆ ಚಿತ್ರಿಸಿದ್ದೂ ಅಲ್ಲದೆ ತನ್ನ ಗಂಡನಿಗೆ ಅನುಮಾನ ಬರುವಂತೆ ತಾನೇ ಸುಳಿವುಗಳನ್ನು ಸೃಷ್ಟಿಸಿದಳು ಎಂಬಲ್ಲಿಯವರೆಗೂ ಎಳೆದಿದ್ದಾರೆ. ಇದೂ ಸಹಾ ಒಂದು ವಾಸ್ತವದ ಚೌಕಟ್ಟಿನಲ್ಲಿ ಬೆಳೆಸಿದ ಪಾತ್ರವಲ್ಲ. ತೀರಾ ನಾಟಕೀಯತೆಯನ್ನು ಬಲವಂತವಾಗಿ ಹೇರಿರುವುದು ಓದುಗನಿಗೆ ಭಾರಿ ಎನಿಸದಿರದು.
ಆನಂದತೀರ್ಥ ಎಂಬ ಜಯಶ್ರೀಯ ತಂದೆ, ಮಗಳು ಯಾರೊಂದಿಗೋ ಓಡಿಹೋದನಂತರ ನೇಣು ಬಿಗಿದು ಸತ್ತರೆ, ಅದಕ್ಕೂ ಜಯಶ್ರೀಯ ಬಾಯಲ್ಲಿ ಬಾಳು ನೀಗಿಸಲಾಗದ ಹೇಡಿ , ಸಂದರ್ಭವನ್ನು ಬಳಸಿಕೊಂಡು ನೇಣು ಬಿಗಿದು ಸತ್ತ ಎಂದು ಹೇಳಿಸಿ ಕೈತೊಳೆದುಕೊಂಡಿದ್ದಾರೆ;ಹೀಗೆ ಸಾಯುವ ತಂದೆ ತಾಯಿಯರು ಆತ್ಮಗೌರವವಿಲ್ಲದ ಆತ್ಮವಂಚನೆ ಬ್ರಾಹ್ಮಣರು ಎಂದಾಯಿತು...
ಕಿರು ಪಾತ್ರವಾಗಿ ಬಂದುಹೋಗುವ ಸುಶ್ಮಾಳನ್ನೂ ಬಿಡದೆ, ಅವಳೂ ಯಾರೊಂದಿಗೋ ಒಂದು ರಾತ್ರಿ ಮಲಗಿ ವ್ಯಭಿಚಾರ ಮಾಡಿದಳು ಎಂದೂ ತೋರಿಸಿಬಿಟ್ಟಿದ್ದಾರೆ. ಒಟ್ಟಿನಲ್ಲಿ ಎಲ್ಲರೂ ಭ್ರಷ್ಟ ಮನಸ್ಸಿನ ಆಷಾಢಭೂತಿಗಳು ಎಂದಾಯಿತು ಅನಿಸುವಂತಿದೆ
ಅವಿನಾಶನ ಪಾತ್ರ ಈ ಕಾದಂಬರಿಯ ಕೇಂದ್ರಬಿಂದು. ಪಾತ್ರದ ಹುಟ್ಟು, ಬೆಳವಣಿಗೆ, ವಿಸ್ತಾರ ಎಲ್ಲಾ ಚೆನ್ನಾಗಿದೆ. ಇಲ್ಲವೆನ್ನಲಾಗದು. ಅವನ ದೂಷಣೆಗಳು, ಹೇಳಿಕೆಗಳು, ಎಲ್ಲವೂ ಅವನೊಬ್ಬ ವಿಕ್ಷಿಪ್ತ ವ್ಯಕ್ತಿ ಎಂದು ತಿಳಿದು ಬರುತ್ತದೆ. ಅವನ ಕಾಲೇಜಿನ ಕೆಲವು ಸಂದರ್ಭಗಳು, ಅವನ ಸ್ಕಾಲರ್ಷಿಪ್ ನ ಸಂದರ್ಶನ ಪರಿಣಾಮಕಾರಿಯಾಗಿಲ್ಲ. ಅಲ್ಲಿನ ಪ್ರಶ್ನೆಗಳು, ಇವನ ಉತ್ತರ, ಅವರ ನಿರ್ಧಾರ, ಮಾತುಕತೆಗಳು ಒಂದು ನಿಜ ಸಂದರ್ಶನದ ಅನುಭವವನ್ನು ಓದುಗನಿಗೆ ಕೊಡುವುದಿಲ್ಲ. ಹಲವ್ರು ಸಂದರ್ಶನಗಳನ್ನು ಎದುರಿಸಿದವನಾಗಿ, ಹಲವಾರು ಸಂದರ್ಶನಗಳನ್ನು ಮಾಡಿದವನಾಗಿ ಹೇಳುತ್ತೇನೆ; ಇಲ್ಲಿ ಇನ್ನಷ್ಷ್ಟು ಪರಿಶ್ರಮದ ಅವಶ್ಯಕತೆ ಇತ್ತು. ಪೇಲವತೆ ಇದೆ.
ತನ್ನ ಅಲೌಕಿಕ ಶಕ್ತಿಯಿಂದ ಏನೇನನ್ನೋ ಗ್ರಹಿಸುವ, ಇತರರ ಮನಸ್ಸನ್ನು ಓದಬಲ್ಲ ಅವಿನಾಶನ ಆ ಗ್ರಹಿಕೆಗಳಿಗೆ ಸಂವಾದಿಯಾದ ಆಲೋಚನೆಗಳನ್ನೇ ಬೆಳೆಸದ ಕಾರಣ, ಈ ಕಾದಂಬರಿ, ಇಲ್ಲಿ ಬರುವ “ ಬ್ರಾಹ್ಮಣ” ಪಾತ್ರಗಳ ಬಗ್ಗೆ ಒಂದು ಘನವಾದ ತಪ್ಪು ಕಲ್ಪನೆಯನ್ನು ತಪ್ಪಾಗಿ ಮೂಡಿಸುವ ಪ್ರಮಾದವೆಸಗುತ್ತವೆ. ಕರ್ಮ ಕಾದಂಬರಿಯಲ್ಲಿ ಇರುವ ಸತ್ಯನಿಷ್ಠುರತೆ ಇಲ್ಲಿ ಪವನಪ್ರಸಾದರಿಗೆ ಸಿದ್ಧಿಸಿಲ್ಲ. ಈ ಕಾದಂಬರಿಯಲ್ಲಿ ಪಾತ್ರಗಳೆಲ್ಲವೂ ಕರಣಂ ಪವನ ಪ್ರಸಾದರ ಶಾಪಕ್ಕೆ “ಗ್ರಸ್ತ” ವಾಗಿವೆ..ಇಡೀ ಕಾದಂಬರಿಯೇ ಒಂದು ಅಜೇಂಡಾವೇನೋ ಅನ್ನಿಸಿಬಿಡುತ್ತದೆ, ಹಾಗೂ ವೈಜ್ಞಾನಿಕ ಆವಿಷ್ಕಾರದ ಕಥೆಯ ಎಳೆ ಅದಕ್ಕೆ ಕೇವಲ ದುರ್ಬಲ ಆಧಾರ ಒದಗಿಸುವಂತಿದೆ.
ವೈಜ್ಞಾನಿಕ ವಿವರಣೆಗಳ ಬಗೆಗೂ ಬರೆಯುವುದಾದರೆ, ಸರಳವಾಗಿ ವಿವರಿಸುವ ಪ್ರಯತ್ನದಲ್ಲಿ ಒಂದಷ್ಟು ಮುಖ್ಯವಾದ ಅಂಶಗಳನ್ನು ಉಪೇಕ್ಷಿಸಿದ್ದಾರೆ. ಸಾಮಾನ್ಯ ಓದುಗನಿಗೆ ಅದರ ಅವಶ್ಯಕತೆ ಇಲ್ಲ. ಪರಿಪೂರ್ಣತೆಯ ದೃಷ್ಟಿಯಿಂದ ಬೇಕಿತ್ತೇನೋ ಎಂದು, ಭೌತಶಾಸ್ತ್ರದಲ್ಲಿ ಪ್ರವೇಶ ಇರುವ ಕೆಲವರಿಗೆ ಅನ್ನಿಸಬಹುದು. ದ್ರವ್ಯ-ಶಕ್ತಿಯ ಸಮನ್ವಯತೆಯನ್ನು, ವಿದ್ಯುತ್ತಿನ ವಿವಿಧ ಅಲೆಗಳ ತರಂಗಾಂತರಗಳನ್ನೂ ಹೇಗೆ ಪ್ರತ್ಯೇಕಿಸಿ ಬಳಸಬೇಕು, ವಿವಿಧ ಉಪಕರಣಗಳು ತರಂಗಾಂತರದ ವ್ಯತ್ಯಾಸವಿದ್ದಾಗ ಅದನ್ನು ಪ್ರಸರಿಯುವ ಟ್ರಾನ್ಸ್ಮಿಟರ್ ನಿಂದ ಹೇಗೆ ಪಡೆದುಕೊಳ್ಳುತ್ತವೆ? LED ಬಲ್ಬು ಮತ್ತು ತಂತಿಯ ಸುರುಳಿಯ ಬಲ್ಬುಗಳು ಒಂದೇ ಟ್ರಾನ್ಸ್ಮಿಟರ್ ನ ತರಂಗಗಳನ್ನು ಪಡೆದು ಹೇಗೆ ಕೆಲಸ ಮಾಡಬಲ್ಲವು, inductive ಟೆಕ್ನಾಲಜಿಯ ವಿವರಣೆ ಸರಿಯಾ? ಎಂಬ ಹಲವಾರು ಸಂದೇಹಗಳು ಬಂದು ಹೋದವು. ಇವು ಬೇಕಿಲ್ಲದ ಆಕ್ಷೇಪಣೆಗಳು. ಪರಿಪೂರ್ಣತೆಯ ದೃಷ್ಟಿಯಿಂದ ಮುಂದಿನ ಆವೃತ್ತಿಯಲ್ಲಿ ಗಣಿಸಬಹುದು.
ಇಷ್ಟೆಲ್ಲಾ ಹೇಳಿದಮೇಲೆಯೂ, ಇದೊಂದು ಉತ್ತಮವಾಗಿ ಓದಿಸಿಕೊಂಡು ಹೋಗುವ ಕಾದಂಬರಿ.ಓದುಗನನ್ನು ಚಿಂತನೆಗೆ ಹಚ್ಚುವ, ವಿಭಿನ್ನ ಕಥಾವಸ್ತು ಇರುವ ಕಾದಂಬರಿ.
ಸುದೀರ್ಘವಾದ ಅವಲೋಕನ ಎಲ್ಲಿಯೂ ಇಲ್ಲದ ಕಾರಣ, ನನಗೆ ತಿಳಿದಷ್ಟು ನಾನಿಲ್ಲಿ ದಾಖಲಿಸಿದ್ದೇನೆ.
(ಯಾವುದೇ ವ್ಯಕ್ತಿ ಇನ್ನೊಬ್ಬನಿಗೆ ಸಹಾಯ ಮಾಡುವಾಗ ಅಲ್ಲಿ ಹೆಚ್ಚು ಲೆಕ್ಖಕ್ಕೆ ಬರುವುದು ಸಹಾಯ ಪಡೆಯುವವನು ನಮ್ಮ ಮನೋಧರ್ಮಕ್ಕೆ ಎಷ್ಟು ಸ್ಪಂದಿಸುತ್ತಾನೆ ಎಂಬುದು. ಅಲ್ಲಿ ಜಾತಿಯೊಂದು ಅಂಶವಷ್ಟೇ. ಅದನ್ನು ಬಳಸಿ ಇಡೀ ಬ್ರಾಹ್ಮಣ ಜಾತಿಯಮೇಲೆ ಗೂಬೆ ಕೂರಿಸುವ ಅವಶ್ಯಕತೆ ಇರಲಿಲ್ಲ.ಅಸಲಿಗೆ, ಅವಿನಾಶ ಬ್ರಾಹ್ಮಣನೇ ಅಲ್ಲ. ತಾಯಿಯ ಸಂಸ್ಕಾರ ಅವನಿಗೆ ಸಿಕ್ಕಿದ್ದಷ್ಟೇ. ಜಿ.ಎಸ.ಶಿವರುದ್ರಪ್ಪ ಅವರನ್ನು ಬೆಳೆಸಿದ ತ.ಸು. ಶ್ಯಾಮರಾಯ, ಕು.ವೇಂಪು ಅವರನ್ನು ಬೆಳೆಸಿದ ಟಿ.ಎಸ. ವೆಂಕಣ್ಣಯ್ಯ , ಅಂಬೇಡ್ಕರ್, ಹೀಗೆ ಚಾಣಕ್ಯ-ಚಂದ್ರಗುಪ್ತನಿಂದ ಇತ್ತೀಚಿನವರೆಗೂ ಉದಾಹರಣೆಗಳನ್ನು ಕೊಡಬಹುದು.ಲೇಖಕನಿಗೆ, ತನ್ನ ಪ್ರಸ್ತುತ ಸಮಾಜದ , ಶೋಷಣೆಗೆ ಗುರಿಯಾಗುತ್ತಿರುವ ಒಂದು ವರ್ಗದ ಕುರಿತು ಸಾಮಾಜಿಕ ಜವಾಬ್ದಾರಿ ಇರಲಿ ಎಂಬುದಕ್ಕೆ ಈ ಮಾತು)
--ಸುದರ್ಶನ ಗುರುರಾಜರಾವ
Wednesday, August 5, 2020
ಅಸ್ಪಷ್ಟ ತಲ್ಲಣಗಳು.......ಟಿ.ಎಸ್.ಶ್ರವಣಕುಮಾರಿ
‘ಅಸ್ಪಷ್ಟ ತಲ್ಲಣಗಳು’ ಎನ್ನುವ ಕಥಾಸಂಕಲನಕ್ಕಾಗಿ ಶ್ರೀಮತಿ ಟಿ.ಎಸ್. ಶ್ರವಣಕುಮಾರಿಯವರನ್ನು ಕನ್ನಡ ಓದುಗರು ಅಭಿನಂದಿಸಲೇಬೇಕು. ಈ ಕಥಾಸಂಕಲನದಲ್ಲಿಯ ಹನ್ನೆರಡು ಕಥೆಗಳು ಕನ್ನಡ ಸಾಹಿತ್ಯಕ್ಕೆ ಹೊಸ ಬಗೆಯ ಕಥೆಗಳಾಗಿವೆ. ಶ್ರವಣಕುಮಾರಿಯವರ ಈ ಕಥಾಸಂಕಲನವನ್ನು ಪ್ರಕಟಿಸುವ ಮೂಲಕ ‘ಮೈತ್ರಿ ಪ್ರಕಾಶನ’ವು ಕನ್ನಡ ಓದುಗರಿಗೆ ಒಂದು ಉಪಕಾರವನ್ನು ಮಾಡಿದೆ. ಆದುದರಿಂದ ಈ ಕಥಾಸಂಕಲನದ ಪ್ರಕಾಶಕರಾದ ‘ಮೈತ್ರಿ ಪ್ರಕಾಶನ’ದ ಒಡತಿ ಶ್ರೀಮತಿ ಅಂಜಲಿ ದೇಸಾಯಿಯವರಿಗೆ ನನ್ನ ಧನ್ಯವಾದಗಳು. ಶ್ರವಣಕುಮಾರಿಯವರ ಕಥೆಗಳನ್ನು ಬಿಡಿಬಿಡಿಯಾಗಿ ಓದಿದಾಗ ಈ ಕಥೆಗಳನ್ನು ಪೋಣಿಸುವ ಸೂತ್ರ ಒಂದಿದೆ ಎಂದು ಹೊಳೆಯಲಿಕ್ಕಿಲ್ಲ. ಇಲ್ಲಿಯ ಕಥಾಶೈಲಿಯ ಅನನ್ಯತೆ, ಕಥಾರಚನೆಯ ಹೊಸತನ ಹಾಗು ಕಥಾನಕಗಳ motif ಇವು, ಈ ಕಥೆಗಳನ್ನು ಒಟ್ಟಾಗಿ ಓದಿದಾಗ ಮಾತ್ರ ವೇದ್ಯವಾಗುತ್ತವೆ.
ಶ್ರವಣಕುಮಾರಿಯವರ ಹನ್ನೆರಡು ಕಥೆಗಳಲ್ಲಿ ಹತ್ತು ಕಥೆಗಳು ಹೆಂಗೂಸುಗಳ ಕಥೆಗಳು. ಈ ಹತ್ತು ಕಥೆಗಳಲ್ಲಿ ಎರಡು ಕಥೆಗಳು ಕೆಳಸ್ತರದ ಹೆಂಗಸರ ಕಥೆಗಳಾಗಿವೆ. ಉಳಿದ ಎಂಟು ಕಥೆಗಳಲ್ಲಿ ಬರುವ ಮಹಿಳೆಯರು ಆಧುನಿಕರು, ದೊಡ್ಡ ನಗರಗಳಲ್ಲಿ ಕೆಲಸ ಮಾಡುವವರು, ಸ್ವತಂತ್ರ ವಿಚಾರಗಳುಳ್ಳವರು, ಆಧುನಿಕ ಜೀವನಶೈಲಿಯನ್ನು ರೂಢಿಸಿಕೊಂಡವರು ; ಕೆಲವರು ಗಂಡುದರ್ಪವನ್ನು ಎದುರಿಸಿ ವಿಚ್ಛೇದಿತರಾಗಿ ಬಾಳುತ್ತಿರುವವರು;ಇನ್ನು ಕೆಲವರು ಗಂಡನ ಮರ್ಜಿಯನ್ನು ಅನುಸರಿಸಿ ಬದುಕು ಸಾಗಿಸುತ್ತಿರುವವರು. ಮೊದಲನೆಯ ಪ್ರಕಾರದಲ್ಲಿ ಬರುವವರು ಸ್ವತಂತ್ರ ಜೀವನವನ್ನು ನಡೆಸುತ್ತಿರುವ ಕಾರಣದಿಂದಾಗಿಯೇ ಒಂಟಿತನವನ್ನು ಅನುಭವಿಸುತ್ತಿದ್ದಾರೆ. ಇವರ ಕೌಟಂಬಿಕ ಬದುಕಿನಲ್ಲಿ ಬಿರುಕು ಬಿಟ್ಟಿದೆ. ಹೀಗಾಗಿ ಆಪ್ತತೆಯ ಬೆಸುಗೆ ಇಲ್ಲಿ ಕಳಚಿ ಹೋಗಿದೆ. ಇವಳು ಒಂಟಿ ಹೆಣ್ಣು, ಅಸಹಾಯಕಳು. ಎರಡನೆಯ ಪ್ರಕಾರದಲ್ಲಿರುವವರು ಆರ್ಥಿಕ ವಿಷಯದಲ್ಲಿ ಗಂಡನ ಅನುಮತಿಗಾಗಿ ಕಾಯಬೇಕಾಗಿರುವ ಕಾರಣದಿಂದಾಗಿ ಮಾನಸಿಕ ದುಗುಡದಲ್ಲಿದ್ದಾರೆ. ಇದೂ ಸಹ ಆಪ್ತತೆಯ ಅಭಾವಕ್ಕೆ ಹಾಗು ಅದೃಶ್ಯ ಒಳಬಿರುಕಿಗೆ ಕಾರಣವಾಗಿದೆ! ಈ ಅಂಶಗಳನ್ನು ಜಾಣತನದಿಂದ ಹೆಣೆದಿರುವ ಈ ಕಥೆಗಳ ಒಂದು ಪಕ್ಷಿನೋಟವನ್ನು ನೋಡೋಣ:
ಮೊದಲನೆಯ ಕಥೆಯ (‘ಅವಳ ಮಗಳು’) ಮೊದಲಲ್ಲಿಯೇ ಗಂಡ ಹಾಗು ಹೆಂಡತಿ ಬೇರೆಯಾಗಿ ಬದಕುತ್ತಿರುವ ಪ್ರಸಂಗವಿದೆ. ಪುಟ್ಟ ಮಗಳು ತಾಯಿಯ ಜೊತೆ ಬೆಳೆಯುತ್ತಾಳೆ. ಮಗಳು ಬೆಳೆಯುತ್ತ ಬಿನ್ ದಾಸ್ ಆದಾಗ, ಮಗಳನ್ನು ಸಂಭಾಳಿಸಲಾಗದ ಸಂಕಟವನ್ನೂ ಇವಳು ಅನುಭವಿಸಬೇಕು. ಗಂಡ ಇವಳನ್ನು ಭೌತಿಕವಾಗಿ ಹಾಗು ಮಾನಸಿಕವಾಗಿ ದೂರೀಕರಿಸಿದ್ದಾನೆ ; ಮಗಳು ತಾಯಿಯನ್ನು ಮಾನಸಿಕವಾಗಿ ದೂರ ಮಾಡಿ, ತನ್ನ ಲೋಕದಲ್ಲೇ ತಾನಿದ್ದಾಳೆ. ಅಲ್ಲಿ ತಾಯಿಗೆ ಪ್ರವೇಶವಿಲ್ಲ. ಗಂಡ ಹಾಗು ಮಗಳು ಇಬ್ಬರಿಗೂ ಅನಾಪ್ತಳಾದ ಒಂಟಿ ಹೆಣ್ಣುಮಗಳು ಎಂತಹ ಮಾನಸಿಕ ಬಿಕ್ಕಟ್ಟಿನಲ್ಲಿ ಒದ್ದಾಡುತ್ತಿರಬೇಕು! ಇಷ್ಟಲ್ಲದೆ, ಯಾರ ನೆರವಿಲ್ಲದೆ ದಿನ ನೂಕುತ್ತಿರುವ ಒಂಟಿ ಹೆಣ್ಣಿನ ದೈನಂದಿನ ಸಮಸ್ಯೆಗಳು ಬೇರೆ.
ಇವೆಲ್ಲ ಸಾಮಾನ್ಯ ಲೇಖಕನ ಕೈಯಲ್ಲಿ ಸಿಕ್ಕರೆ, ಅದೊಂದು ರಾಮಾಯಣವಾಗುತ್ತದೆ. ಆದರೆ ಶ್ರವಣಕುಮಾರಿಯವರ ಪ್ರತಿಭೆಯನ್ನು ನಾವು ಮೆಚ್ಚಬೇಕು! ಕಥೆಯನ್ನು ರೂಟಿನ್ ಎಂಬಂತೆ ಸಹಜವಾಗಿ ಪ್ರಾರಂಭಿಸುವ ಅವರ ಚತುರತೆ, ಕಥೆಯನ್ನು ಬೆಳೆಯಿಸುವ ಅವರ ವಿಧಾನ, ಕಥಾವಿಸ್ತಾರದ ಭಯವಿಲ್ಲದೆ ಅವಶ್ಯವಿರುವ ಎಲ್ಲವನ್ನು ಬರೆಯುವ ಹಾಗು ಅನವಶ್ಯವಾದ ಏನನ್ನೂ ಬರೆಯದಿರುವ ಅವರ ಕಥನಕುಶಲತೆ ಇವು ಓದುಗನನ್ನು ಸೆರೆ ಹಿಡಿಯುತ್ತವೆ. ಇದಲ್ಲದೆ ಶ್ರವಣಕುಮಾರಿಯವರ ಕಥೆಗಳಲ್ಲಿ ಮನೋವಿಜ್ಞಾನವು ಹಾಸುಹೊಕ್ಕಾಗಿದೆ. ಒಂದೋ ಅವರು ಮನೋವಿಜ್ಞಾನದ ಅಧ್ಯಯನವನ್ನು ಮಾಡಿರಬೇಕು, ಇಲ್ಲಾ ಮನೋವಿಜ್ಞಾನದಲ್ಲಿ ಇವರಿಗೆ ಒಳನೋಟವಿದೆ. ಹೀಗಾಗಿ ಇಲ್ಲಿಯ ಕಥೆಗಳ ಪಾತ್ರಗಳ ನಡೆಯನ್ನು, ಒಳತೋಟಿಯನ್ನು ಅವರು ಬರೆಯುವಾಗ, ಓರ್ವ ಮನೋವಿಜ್ಞಾನಿ ಇದನ್ನೆಲ್ಲ ಬರೆಯುತ್ತಿದ್ದಾನೆ ಎನ್ನುವ ಅನುಭವ ಓದುಗನಿಗೆ ಆಗುತ್ತದೆ!
ಎರಡನೆಯ ಕಥೆಯಾದ ‘ಅಸ್ಪಷ್ಟ ತಲ್ಲಣಗಳು’ ಸಹ ಇಂತಹದೇ ಕಥೆ. ಗಂಡನಿಲ್ಲದೆ, ಮಗಳನ್ನು ಬೆಳೆಯಿಸಿದ ಮಹಿಳೆಯ ಕಥೆ ಇದು. ಮಗಳು ಮನೆ ಬಿಟ್ಟು ತನ್ನ ಪ್ರಿಯಕರನ ಜೊತೆಗೆ ಹೋದಾಗ, ತಾಯಿಯ ಒಡಲಬೇಗುದಿಯೇ ಈ ಕಥೆಯ ವಸ್ತು. ಈ ಅನಾಪ್ತತೆ ಅನ್ನುವುದು ಕೇವಲ ದಂಪತಿಗಳ ನಡುವೆ ಅಥವಾ ತಂದೆತಾಯಿ ಹಾಗು ಮಕ್ಕಳ ನಡುವೆ ನಡೆಯುವ ಸಂಗತಿಯಲ್ಲ. ಬಾಲ್ಯದಲ್ಲಿ ಕೂಡಿ ಬೆಳೆದವರು, ದೊಡ್ಡವರಾಗಿ, ತಮ್ಮ ತಮ್ಮ ಸಂಸಾರದಲ್ಲಿ ಮಗ್ನರಾದಾಗ ಅವರಲ್ಲಿ ಕುಟುಂಬಸ್ವಾರ್ಥ ಬೆಳೆಯುವುದು ಸಹಜಸಾಧ್ಯ. ಅಂತಹ ಪ್ರಸಂಗವೊಂದು ‘ಪಾಲು’ ಎನ್ನುವ ಕಥೆಯಲ್ಲಿದೆ. ಇಲ್ಲಿಯೂ ಸಹ ಎಲ್ಲ ಸೋದರರು ಒಂದು ಕಡೆ ನಿಂತು ಹುಟ್ಟಿದ ಮನೆಯನ್ನು ಮಾರಾಟ ಮಾಡಲು ನಿಂತಾಗ, ಅವರ ಸೋದರಿ ತಲ್ಲಣಗೊಳ್ಳುತ್ತಾಳೆ, ಅಸಹಾಯಕತೆಯನ್ನು ಅನುಭವಿಸುತ್ತಾಳೆ. ಈ ಕಥೆಯ ಸೋದರರಲ್ಲಿ ಒಬ್ಬಾತನು ಒಳ್ಳೆಯ ನೌಕರಿಯನ್ನು ಮಾಡುತ್ತ ದೂರದೂರಿನಲ್ಲಿದ್ದಾನೆ. ಇನ್ನೊಬ್ಬನಿಗೆ ಸಂಪಾದನೆ ಸಾಲದು. ಆದರೆ ಇವರಿಬ್ಬರಿಗೂ ಮನೆ ಮಾರಾಟ ಹಾಗು ಪಾಲು ಬೇಕೇ ಬೇಕು. ಇವರ್ಯಾರಿಗೂ ಇಲ್ಲದ ತವರುಮನೆಯ ಪ್ರೇಮ,ಆ ಅಸಹಾಯಕ ಸೋದರಿಗೆ ಮಾತ್ರ ಇದೆ.
ಇನ್ನೊಬ್ಬ ಸೋದರಿಯ ಕಥೆ ಸ್ವಲ್ಪ ಭಿನ್ನವಾಗಿದೆ. ಇವಳ ಪ್ರೀತಿಯ ಸೋದರ, ಮೊದಲೆಲ್ಲ ಒಳ್ಳೆಯ ರೀತಿಯಲ್ಲಿದ್ದವನು ಇದೀಗ ಭಿಕಾರಿಯಾಗಿದ್ದಾನೆ. ಅವನಿಗೆ ಈಕೆ ಆಗಾಗ ಸಹಾಯ ಮಾಡುತ್ತಿರುತ್ತಾಳೆ. ಆದರೆ ಕೊನೆಕೊನೆಗೆ ಈಕೆಯ ಗಂಡನಿಗೆ ಇದರಿಂದ ಅಸಮಾಧಾನವಾಗುತ್ತಿದೆ. ಹೆಂಡತಿಯು ಗಂಡನ ಮೇಲೆ ಆರ್ಥಿಕವಾಗಿ ಅವಲಂಬಿತಳಾಗಿದ್ದರೆ, ಸಮಸ್ಥಾನದಲ್ಲಿ ನಿಲ್ಲದಾದಾಗ ಅವಳೂ ಸಹ ಒಂದು ರೀತಿಯಲ್ಲಿ ಒಂಟಿಯೇ! ‘ಕಟ್ಟೆಯ ಮೇಲೆ ಕೂತವನು’ ಎನ್ನುವ ಈ ಕಥೆಯಲ್ಲಿ ಗಂಡ ತನಗೆ ಏನೆನ್ನುತ್ತಾನೊ ಎನ್ನುವದೊಂದೇ ಈ ಹೆಣ್ಣುಮಗಳ ಒಳಕುದಿಯಲ್ಲ, ತನ್ನ ಸೋದರ ತನ್ನ ಮನೆಗೆ ಬಂದು ಬಿಟ್ಟರೆ, ತಾನು ಹೇಗೆ ಆತನನ್ನು ಎದುರಿಸಬೇಕು ಎನ್ನುವುದೂ ಸಹ ಇವಳ ಸಂಕಟವಾಗಿದೆ.
ಗಂಡನ ಅಕಾಲ ನಿಧನದ ಬಳಿಕ, ಎರಡು ವರ್ಷದ ಮಗನನ್ನು ಒಂಟಿಯಾಗಿ ಬೆಳೆಯಿಸಿದ ಮಹಿಳೆಯ ಕಥೆ ‘ಕಿತ್ತ ಕೊಂಡಿ’ಯಲ್ಲಿದೆ. ಇವಳ ಮಗ ಅಮೆರಿಕಾದಲ್ಲಿದ್ದಾನೆ. ಅಲ್ಲಿಯ ಹುಡುಗಿಯೊಬ್ಬಳನ್ನು ಮದುವೆಯಾಗುವ ತರದೂದಿನಲ್ಲಿ ಅವನಿದ್ದಾನೆ. ಇವಳಿಗೆ ಮಗ ಎಲ್ಲಿ ತನ್ನನ್ನು ಬಿಟ್ಟು ಅಲ್ಲಿಯೇ ನೆಲೆಸಿಬಿಡುತ್ತಾನೊ ಎನ್ನುವ ಹೆದರಿಕೆಯಾದರೆ, ಇವಳ ಜೊತೆಗೆ ಇರುವ ಇವಳ ಮುದುಕಿ ಅವ್ವನಿಗೆ ತನ್ನ ಮಗಳು ತನ್ನನ್ನು ಬಿಟ್ಟು ಎಲ್ಲಿ ಅಮೆರಿಕಾಕ್ಕೆ ಹೋಗಿ ಬಿಡುವಳೊ ಎನ್ನುವ ಹೆದರಿಕೆ. ಇಂತಹ ಹೆದರಿಕೆಯಲ್ಲಿ ಜೀವಿಸುವ ಎರಡು ಹೆಣ್ಣುಗಳ ಕಥೆ ಇಲ್ಲಿದೆ. ಆದರೆ ಇದಷ್ಟೇ ಅಲ್ಲ ; ಒಂಟಿ ಹೆಣ್ಣಿಗೆ ದೈನಂದಿನ ಸಣ್ಣಪುಟ್ಟ ಸಮಸ್ಯೆಗಳೂ ಸಹ ದೊಡ್ಡ ಸಂಕಟಗಳೇ ಆಗಿರುತ್ತವೆ. ತನ್ನ ಕಚೇರಿಯಲ್ಲಿಯ ಗಂಡುಗಳ ಕಣ್ಣುಗಳನ್ನು ಎದುರಿಸಬೇಕು, ಅವರ ಕೊಂಕು ಮಾತುಗಳನ್ನು ನಿಭಾಯಿಸಬೇಕು, ತನ್ನ ಹಳೆಯ ಕುಪ್ಪುಸದ ಹುಕ್ಕು ಎಲ್ಲಿ ಕಳಚೀತೊ ಎನ್ನುವ ಹೆದರಿಕೆಯಿಂದ ಅಲ್ಲಿ ಯಾವಾಗಲೂ ಒಂದು ನಿಗಾ ಇಟ್ಟಿರಬೇಕು, ಇವೆಲ್ಲ ಈ ಹೆಣ್ಣುಜೀವವನ್ನು ಸತತವಾಗಿ ಚುಚ್ಚುತ್ತಲೇ ಇರುತ್ತವೆ.
ಅನಾಪ್ತತೆ, ಒಂಟಿತನ ಹಾಗು ಅದರಿಂದ ಹುಟ್ಟುವ ಅಸಹಾಯಕತೆ ಮತ್ತು ಖಿನ್ನತೆ ಇವನ್ನಷ್ಟೇ ಲೇಖಕಿ ಈ ಕಥೆಗಳ ಮೂಲಕ ಚಿತ್ರಿಸುತ್ತಿದ್ದಾಳೆ ಎನ್ನುವುದು ಸರಿಯಲ್ಲ. ಇವುಗಳನ್ನು ಉಪಶಮನಗೊಳಿಸುವ ಮದ್ದೂ ಸಹ ಲೇಖಕಿಗೆ ಗೊತ್ತು. ಅದು ಎರಡು ಜೀವಿಗಳ ನಡುವೆ ನಡೆಯಬೇಕಾದ ಆಪ್ತಸಂವಹನ. ಈ ಮದ್ದನ್ನು ಪ್ರತಿ ವ್ಯಕ್ತಿ ತಾನೇ ಕಂಡುಕೊಳ್ಳಬೇಕಾಗುತ್ತದೆ. ‘ಜೀವನ್ಮುಖಿ’ ಎನ್ನುವ ಕಥೆ ಈ ಅಂಶವನ್ನು ಸಮರ್ಥವಾಗಿ ಹೇಳುತ್ತದೆ. ಗಂಡನಿಗೆ ವರ್ಗಾವಣೆಯಾದಲ್ಲೆಲ್ಲ ಹೋಗಬೇಕಾದ ನೌಕರಿ. ಹೆಂಡತಿ ಒಬ್ಬಳೇ ಮಗಳನ್ನು ಬೆಳೆಯಿಸುವ ಭಾರವನ್ನು ಹೊತ್ತುಕೊಂಡು ತಮ್ಮ ನಗರದಲ್ಲಿ ಉಳಿಯುತ್ತಾಳೆ. ಗಂಡ ಯಾವಾಗಲೋ ಒಮ್ಮೆ ಬಂದು ಇವರನ್ನು ಭೆಟ್ಟಿಯಾಗುವನು. ಹೀಗಾಗಿ ಪುಟ್ಟ ಮಗಳ ಜೊತೆಗಂತೂ ಇವನ ಸಂವಹನ ಶೂನ್ಯ ಪ್ರಮಾಣದಲ್ಲಿದೆ. ಹಗಲಿನಲ್ಲಿ ಈತನಿಗೆ ಹೆಂಡತಿಯ ಜೊತೆಗೆ ಮಾತನಾಡಲು ಸಮಯವಿಲ್ಲ; ರಾತ್ರಿಯಲ್ಲಿ ಗಳಿಗೆಯ ಕಾರ್ಯಕ್ರಮಕ್ಕೆ ಮಾತೇಕೆ ಬೇಕು?! ಬೇಸತ್ತ ಹೆಂಡತಿಯು ನಿರ್ಭಿಡೆಯಿಂದ ಗಂಡನನ್ನು ದೂರಿ, ಆಶ್ರಮವನ್ನು ಸೇರುವ ತನ್ನ ನಿರ್ಧಾರವನ್ನು ಇವನಿಗೆ ಹೇಳುತ್ತಾಳೆ. ಪುಟ್ಟ ಮಗಳನ್ನು ಬೋರ್ಡಿಂಗ ಸ್ಕೂಲಿನಲ್ಲಿ ಇಡುವ ಅನಿವಾರ್ಯತೆ ಬರುತ್ತದೆ. ಇವನ ಮನೆಗೆ ಅಕಸ್ಮಾತ್ತಾಗಿ ಬರುವ ಅತಿಥಿಯೊಬ್ಬ ತನ್ನ ಹಾಗು ತನ್ನ ಪುಟ್ಟ ಮಗಳೊಡನೆ ಸಾಧಿಸಿದ ಸಲುಗೆಯನ್ನು ನೋಡಿ, ಜೀವನವನ್ನು ಹೊಸದಾಗಿ ಅರ್ಥ ಮಾಡಿಕೊಂಡ ಈತ ‘ಜೀವನ್ಮುಖಿ’ಯಾಗಿ ಪರಿವರ್ತನೆಯಾಗುತ್ತಾನೆ. ತನ್ನ ಮಗಳಿಗೆ ವಾತ್ಸಲ್ಯವನ್ನು ಕೊಟ್ಟು, ಅವಳ ಪ್ರೀತಿಯನ್ನು ಪಡೆಯಲು ಸಮರ್ಥನಾಗುತ್ತಾನೆ.
ಈ ಎಲ್ಲ ಕಥೆಗಳಿಗಿಂತ ಭಿನ್ನವಾದದ್ದು ‘ಕಾಮಿನಿಯೂ ಚಿಕನ್ ಬಿರ್ಯಾನಿಯೂ’ ಎನ್ನುವ ಕಥೆ. ಹಸಿದ ಹೊಟ್ಟೆಗೆ ತುಸು ಕೂಳು ಹಾಕಲು ಸೂಳೆಯೊಬ್ಬಳು, ಬೀದಿ ಬದಿಯಲ್ಲಿ ಗಿರಾಕಿಗಳನ್ನು ಹುಡುಕುತ್ತ ನಿಂತಿದ್ದಾಳೆ. ಮೋಟರ ಸಾಯಕಲ್ ಮೇಲೆ ಬಂದ ಹುಡುಗನೊಬ್ಬ ಇವಳಿಗೆ ಚಿಕನ್ ಬಿರಿಯಾನಿಯ ಆಸೆ ಹಚ್ಚುತ್ತಾನೆ. ಅವನ ಮೋಟರ ಸೈಕಲ್ ಮೇಲೆ ಕುಳಿತಾಗ ಈ ಹುಚ್ಚು ಹೆಣ್ಣು ರಂಗೀನ ಕನಸುಗಳನ್ನು ಕಾಣುತ್ತಾಳೆ. ಇವಳನ್ನು ಭೋಗಿಸಿದ ಬಳಿಕ ಆತ ಮೋಸದಿಂದ ಓಡಿ ಹೋಗುತ್ತಾನೆ. ಇತ್ತ ದುಡ್ಡೂ ಇಲ್ಲದೆ, ಅತ್ತ ಹೊಟ್ಟೆಗೂ ಇಲ್ಲದೆ ನಿತ್ರಾಣವಾಗಿ ರೋದಿಸುತ್ತ, ಶಪಿಸುತ್ತ ಕುಳಿತಿರುವ ಇವಳನ್ನು ಕಂಡು ಮರುಗಿದ ತಲೆಹಿಡುಕನೊಬ್ಬ ತನ್ನ ಊಟವನ್ನು ಇವಳಿಗೆ ಕೊಡುತ್ತಾನೆ. ಅಸಹಾಯಕ ಹೆಣ್ಣುಮಕ್ಕಳ ಶೋಷಣೆಯ ಮತ್ತೊಂದು ಮುಖವಿದು. ಈ ಕಥೆಯ ವೈಶಿಷ್ಟ್ಯವೆಂದರೆ ಇಲ್ಲಿ ಬಳಸಲಾದ ಕೆಳವರ್ಗದ ಭಾಷೆ. ಇಂತಹದೇ ಭಾಷೆಯನ್ನು ಬಳಸಿದ ಮತ್ತೊಂದು ಕಥೆ ಎಂದರೆ ‘ಜೇಡನ ಬಲೆ’. ಕಷ್ಟಪಟ್ಟು ಕಾ˘ಲೇಜಿಗೆ ಸೇರಿದ ಕೆಳತರಗತಿಯ ಹುಡುಗಿಯೊಬ್ಬಳು ತನಗೆ ತಿಳಿಯದೆಯೇ ಶೋಷಕನ ಬಲೆಗೆ ಸಿಕ್ಕು, ಹಣವನ್ನು ಕಕ್ಕುತ್ತ ನರಳುತ್ತಾಳೆ. ಕೊನೆಗೊಮ್ಮೆ ಆತ ತನ್ನ ಕಾಮದಾಟಕ್ಕೆ ಇವಳನ್ನು ಕರೆದಾಗ, ಇವಳು ರೋಷದಿಂದ ಅವನನ್ನು ಎದುರಿಸಿ, ಅವನ ಬಲೆಯಿಂದ ಮುಕ್ತಳಾಗುತ್ತಾಳೆ. ಇಲ್ಲಿಯೂ ಸಹ ಗ್ರಾಮ್ಯ ಭಾಷೆಯನ್ನು ಸಹಜವಾಗಿ ಬಳಸಲಾಗಿದೆ.
‘ಮುಖಾಮುಖಿ’ಯು ಈ ಸಂಕಲನದ ಮನ ಕರಗಿಸುವ ಕಥೆಯಾಗಿದೆ. ಚಿಕ್ಕ ವಯಸ್ಸಿನಲ್ಲಿಯೇ ಮುದುಕನೊಬ್ಬನನ್ನು ಮದುವೆಯಾಗಿ, ಬಳಿಕ ವಿಧವೆಯಾಗಿ, ಪುರುಷಸುಖವಿಲ್ಲದೆ ಬಾಳಿದ ಹೆಣ್ಣುಮಗಳೊಬ್ಬಳು, ಸಮಾಜದ ಅಪಹಾಸ್ಯಕ್ಕೆ ಪಕ್ಕಾಗುತ್ತ ಕೊನೆಯವರೆಗೂ ತುತ್ತು ಅನ್ನಕ್ಕಾಗಿ ಏನೆಲ್ಲ ಪಾಡು ಪಡಬೇಕಾಯಿತು ಎನ್ನುವುದು ಈ ಕಥೆಯ ವಸ್ತು. ಕಥೆಯ ಕೊನೆಯಲ್ಲಿ ಬರುವ ದಾರುಣ ಅನಿರೀಕ್ಷಿತತೆ ಓದುಗನನ್ನು ಕಂಗೆಡಿಸುತ್ತದೆ.
ಸಂಕಲನದ ಕೊನೆಯ ಕಥೆ ‘ರಾಧಾರಮಣ’ ಇದು ಈ ಎಲ್ಲ ಕಥೆಗಳಿಗಿಂತ ವಿಭಿನ್ನವಾದ ಕಥೆ. ಇದು ಹೆಣ್ಣಿನ ಶೋಷಣೆಯ ಕಥೆಯಲ್ಲ. ಇದು ಪೌರುಷವಿಲ್ಲದ ಗಂಡಸಿನ ಕಥೆ. ಈ ಕಥೆಯನ್ನು ಸಾಕ್ಷಿಯಾಗಿ ನೋಡುತ್ತಿರುವವಳು ಒಬ್ಬ ಕೆಳಸ್ತರದ ಹೆಣ್ಣು ಮಗಳು. ಅವಳಿಗೆ ಜೊತೆಯಾಗಿ ಇರುವುದು ಅವಳ ನಾಯಿ. ಓದುಗನಿಗೆ ಈ ನಾಯಿಯೂ ಸಹ ಆಪ್ತವಾಗುವುದು ಕಥೆಯಲ್ಲಿಯ ಸ್ವಾರಸ್ಯಕರ ಅಂಶವಾಗಿದೆ.
ನಾಯಕಿಯ ಸುತ್ತ ಹೆಣೆಯುತ್ತ ಹೋದ ಇಲ್ಲಿಯ ಕಥೆಗಳು ಕೆಲವೊಮ್ಮೆ flash backನ ನೆರವನ್ನು ಪಡೆಯುತ್ತವೆ. ಹೀಗಾಗಿ ಕಥೆಗಳನ್ನು ಬಿಗಿಯಾಗಿ ಹೆಣೆಯಲು ಲೇಖಕಿಗೆ ಸಾಧ್ಯವಾಗಿದೆ. ಕಥೆಗಳ ಪಾತ್ರಗಳ ಮನೋವಿಶ್ಲೇಷಣೆಯನ್ನು ಸರಳವಾಗಿ ಬಿಡಿಸುತ್ತ ಹೋಗುವುದರಿಂದ ಕಥೆಗಳಲ್ಲಿ ಸಹಜತೆ ಹಾಗು ಜೀವಂತಿಕೆ ಸಾಧ್ಯವಾಗಿದೆ. ಅನೇಕ ಸಲ ಲೇಖಕನು ಕಥೆಗೆ ಬೇಕಾದಂತಹ ಪಾತ್ರಗಳನ್ನು, ಕಥಾನಕವನ್ನು ಸೃಷ್ಟಿಸಿಕೊಳ್ಳುತ್ತಾನೆ. ಇದು ಅವನ ಅಧಿಕಾರ. ಶ್ರವಣಕುಮಾರಿಯವರು ಒಂದು ಮಿತಿಯಲ್ಲಿಯೇ ಈ ಅಧಿಕಾರವನ್ನು ಸಮರ್ಥವಾಗಿ ಚಲಾಯಿಸಿದ್ದಾರೆ. ಕೆಲವೊಮ್ಮೆ ಈ ಮಿತಿಯನ್ನು ಸ್ವಲ್ಪವೇ ಮೀರಿದ ಒಂದೆರಡು ಕಥೆಗಳು ಇಲ್ಲಿವೆ. ಉದಾಹರಣೆಗಾಗಿ ‘ಮುಖಾಮುಖಿ’ ಕಥೆಯನ್ನೇ ನೋಡೋಣ. ತಂದೆಯ ವಯಸ್ಸಿನವನೊಬ್ಬನು ತನಗೆ ಮನಸ್ಸಿರದೇ ಹೋದರೂ ಬಾಲಕಿಯೊಬ್ಬಳನ್ನು ಮದುವೆಯಾಗುವ ಅನಿವಾರ್ಯತೆಯೆ ಇಲ್ಲಿಯ ಕಥೆ. ಈ ‘ಅನಿವಾರ್ಯತೆ’ಯನ್ನು ಲೇಖಕಿ ಸೃಷ್ಟಿಸಿರುವ ರೀತಿ ಕೃತಕವೆನಿಸುತ್ತದೆ. ಈ ಕೃತಕತೆಯನ್ನು ಮರೆಯಾಗಿಸುವ ಉದ್ದೇಶದಿಂದ ಲೇಖಕಿ ಮತ್ತೊಂದು ಪಾತ್ರವನ್ನು ಸೃಷ್ಟಿಸಿ, ಅವಳೆದುರಿಗೆ ಕಥೆಯನ್ನು ಬಿಚ್ಚಿಸಿದ್ದಾರೆ. ಪರಿಣಾಮತಃ ಓದುಗನು ಇಂತಹ ಅಸಂಭಾವ್ಯತೆಯನ್ನು ಒಪ್ಪಿಕೊಳ್ಳುತ್ತಾನೆ. ಇದೇ ರೀತಿಯಲ್ಲಿ ‘ಜೀವನ್ಮುಖಿ’ ಕಥೆಯಲ್ಲಿಯ ಹೆಂಡತಿಯ ನಿರ್ಧಾರ. ಇದೂ ಸಹ ಕಥೆಗೆ ಅವಶ್ಯಕವಾಗಿರುವದರಿಂದ ಒಪ್ಪಿಕೊಳ್ಳಲೇ ಬೇಕು. ಈ ಎಲ್ಲ ಅಸಂಭಾವ್ಯತೆಗಳನ್ನು ಓದುಗನು ಪಿಟಕ್ಕೆನ್ನದೆ ಒಪ್ಪಿಕೊಳ್ಳುವುದೇ ಲೇಖಕಿಯ ಕಥನಪ್ರತಿಭೆಗೆ ಸಾಕ್ಷಿಯಾಗಿದೆ.
‘ಜೇಡನ ಬಲೆ’ಯಲ್ಲಿ ಗ್ರಾಮ್ಯ ಭಾಷೆಯಲ್ಲಿ ಕಥೆ ಸಾಗಿದೆ. ಶೋಷಿತ ಹುಡುಗಿ ಹಾಗು ಶೋಷಕ ವ್ಯಕ್ತಿಯೊಬ್ಬನ ನಡುವೆ ನಡೆಯುವ ಮಾತುಗಳೂ ಸಹ ಗ್ರಾಮ್ಯಭಾಷೆಯಲ್ಲಿಯೇ ಇವೆ. ಹಿಗಿದ್ದರೂ ಸಹ ಆತನು ಒಮ್ಮೆ ಈ ಹುಡುಗಿಗೆ, “ನಿನ್ ಫೋಟೋ ನನಗೆ ಬಂಗಾರದ ಮೊಟ್ಟೆ ಇಡುವ ಕೋಳಿ” ಎನ್ನುವುದು ಹಾಗು “ಇದು ಜಾಣ ಕೋಳಿ ಥರಾ” ಎನ್ನುವುವು ಕನ್ನಡದ ಮಾತುಗಳು ಎನಿಸುವುದಿಲ್ಲ. ಇಂಗ್ಲೀಶಿನ ‘Hen laying the golden eggs’ ಹಾಗು `That’s like a wise girl’ ಎನ್ನುವುದರ ಭಾಷಾಂತರಗಳು ಎಂದೆನಿಸಿ ಬಿಡುತ್ತದೆ. ನನ್ನ ತಿಳಿವಳಿಕೆ ಸರಿ ಇರಲಿ, ಬಿಡಲಿ, ನನ್ನ ಮಟ್ಟಿಗೆ ಇವು ಕಥೆಯ ಓದಿನ ಓಘದಲ್ಲಿ ಸ್ವಲ್ಪ ಅಡಚಣೆಯನ್ನಂತೂ ಮಾಡಿದವು. ಆದರೆ ಒಳ್ಳೆಯ ಅಭಿರುಚಿಯ, ಇಷ್ಟು ಸೊಗಸಾದ ಕಥೆಗಳನ್ನು ಬರೆದ ಲೇಖಕಿಗೆ ಇಷ್ಟೂ ‘ಕವಿಸ್ವಾತಂತ್ರ್ಯ’ವನ್ನು ಕೊಡದಿರಲು ಹೇಗೆ ಸಾಧ್ಯ?
ಕಥೆಗಳನ್ನು ಎಳೆದಾಡಿ, ಮೇಲೆ-ಕೆಳಗೆ ಮಾಡಿ ನಾನು ಬರೆಯುತ್ತಿರುವಾಗ, ಇವುಗಳ ಸ್ವಾರಸ್ಯವನ್ನು ನಾನು ಮಸಕುಗೊಳಿಸುತ್ತಿದ್ದೇನೆ ಎನ್ನುವ ಭಯ ನನಗಿದೆ. ವಾಸ್ತವದಲ್ಲಿ ಕಥೆಗಳು ತುಂಬ ಚೆನ್ನಾಗಿವೆ. ಓದುಗನು ಕಥೆಯ ಪಾತ್ರಗಳೊಡನೆ ಲೀನನಾಗಿ ಹೋಗುತ್ತಾನೆ. ಶ್ರವಣಕುಮಾರಿಯವರು ಕನ್ನಡಕ್ಕೆ ಆಸಕ್ತಿಕರವಾದ ಹೊಸ ಮಾದರಿಯ ಕಥೆಗಳನ್ನು ಕೊಟ್ಟಿದ್ದಾರೆ. ಇನ್ನಷ್ಟು ಕಥೆಗಳು ಇವರಿಂದ ಬರಲಿ ಎಂದು ಹಾರೈಸುತ್ತೇನೆ.
Subscribe to:
Posts (Atom)