Sunday, April 18, 2021

‘ಅನುಪಮಾಆಖ್ಯಾನ ಹಾಗು ಇತರೆ ಕಥೆಗಳು’...........ಉಮೇಶ ದೇಸಾಯಿ

ಉಮೇಶ ದೇಸಾಯಿಯವರು ಕನ್ನಡ ಸಾಹಿತ್ಯದಲ್ಲಿ ಆಧುನಿಕ ಪರಿಸರದ ಸುಳಿಗಾಳಿಯನ್ನು ಸಂಚಲಿಸಿದವರು. ಈ ನನ್ನ ಮಾತಿಗೆ ಕೆಲವೊಂದು ಆಕ್ಷೇಪಣೆಗಳು ಬರಬಹುದು. ದೇಸಾಯಿಯವರಿಗಿಂತ ಮೊದಲು ಆಧುನಿಕತೆ ಕನ್ನಡ ಸಾಹಿತ್ಯದಲ್ಲಿ ಇರಲಿಲ್ಲವೆ; ಕನ್ನಡ ಸಾಹಿತಿಗಳು ಆಧುನಿಕರಿರಲಿಲ್ಲವೆ?; ಇತ್ಯಾದಿ. ಯಾರು ಇಲ್ಲವೆನ್ನುತ್ತಾರೆ? ನನ್ನ ಹೇಳಿಕೆಯನ್ನು ದಯವಿಟ್ಟು ಸೂಕ್ಷ್ಮವಾಗಿ ಗಮನಿಸಿರಿ.

ಆಧುನಿಕತೆ ಪದವೇಅಧುನಾಎನ್ನುವ ಸಂಸ್ಕೃತ ಪದದಿಂದ ಬಂದಿದೆ. ‘ಅಧುನಾಪದದ ಅರ್ಥಈ ಕ್ಷಣದ’, ಅಂದರೆ  `up to date’ ಎನ್ನುವ ಅರ್ಥ. ಕನ್ನಡ ಸಾಹಿತ್ಯದಲ್ಲಿ up-to-date ಆಗಿರುವ ಸಾಹಿತ್ಯವನ್ನು ಯಾವ ಸಾಹಿತಿಗಳು ರಚಿಸಿದ್ದಾರೆ, ಹೇಳಿ. ನವೋದಯ ಕಾಲದ ಸಾಹಿತ್ಯವು ಹೊಸ ಭಾಷೆಯನ್ನು ಕಟ್ಟಿತು; ಹೊಸ ಶೈಲಿಯನ್ನು ಕಟ್ಟಿತು. ಆದರೆ ಈ ಸಾಹಿತ್ಯದ ತಿರುಳು ಮಾತ್ರ ಹಳೆಯ ಹೂರಣವೇ, ಅರ್ಥಾತ್ ಆದರ್ಶ, ನಿಸರ್ಗ ಇತ್ಯಾದಿ. ಮುಂಬಯಿ ನಗರದಲ್ಲಿರುವ ಸಾಹಿತಿಗಳಲ್ಲಿ ಕೆಲವರು ಕರ್ನಾಟಕದ ಸಿದ್ಧಭಾಷೆಯನ್ನು ಬಿಟ್ಟು ಬೇರೆ ರೀತಿಯಲ್ಲಿ ಬರೆದಿದ್ದರೆ ಅದಕ್ಕೆ ಮುಂಬಯಿ ನಗರವೇ ಕಾರಣವಾಗಿದೆ. ಇದರಂತೆಯೇ ಕೊಡಗಿನ ಗೌರಮ್ಮನವರು ಆಧುನಿಕವಾಗಿ ಬರೆದದ್ದರ ಕಾರಣವೆಂದರೆ ಅವರು ಬೆಂಗಳೂರು, ಮೈಸೂರುಗಳಿಂದ ದೂರವಾಗಿದ್ದ ಕೊಡಗಿನಲ್ಲಿ ಇದ್ದದ್ದರಿಂದ. ಕನ್ನಡದಲ್ಲಿ ನಾನು ಓದಿದ್ದ ಮೊದಲ ಆಧುನಿಕ ಕಥೆಯನ್ನು ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದವರುಆನಂದಎನ್ನುವ ಕಾವ್ಯನಾಮದಲ್ಲಿ ಬರೆಯುತ್ತಿದ್ದ ಏ. ಸೀತಾರಾಮ ಎನ್ನುವ ಖ್ಯಾತ ಲೇಖಕರು. ಈ ಕಥೆಯನ್ನು ಇವರು ಸುಮಾರು ೬೫ ವರ್ಷಗಳ ಹಿಂದೆ ಆನುವಾದಿಸಿರಬಹುದು.

೬೫ ವರ್ಷಗಳ ಹಿಂದಿನ ಮರಾಠಿ ಸಾಹಿತ್ಯವು ಈಗಿನ ಕನ್ನಡ ಸಾಹಿತ್ಯಕ್ಕಿಂತ ಹೆಚ್ಚು ಆಧುನಿಕವೆ? ನಾನುಆಧುನಿಕ ಪರಿಸರದ ಬಗೆಗೆ ಹೇಳುತ್ತಿದ್ದೇನೆ ಎನ್ನುವುದನ್ನು ದಯವಿಟ್ಟು ನೆನಪಿಸಿಕೊಳ್ಳಿರಿ. ಮುಂಬಯಿ ನಗರಕ್ಕೆ ಭಾರತದ ಮೂಲೆ ಮೂಲೆಗಳಿಂದ ವಿಭಿನ್ನ ಮಾದರಿಯ ಜನರು ವಲಸೆ ಬರುತ್ತಿದ್ದರು. ಅವರ ಮಿಲನದಿಂದ ಮುಂಬಯಿ ನಗರವು ಆಧುನಿಕ ನಗರವಾಯಿತು. ಈ ಭಾಗ್ಯವು ಭಾರತದ ಇತರ ನಗರಗಳಿಗೆ ಸಿಕ್ಕಿಲ್ಲ!

ಕನ್ನಡ ಸಾಹಿತ್ಯದಲ್ಲಿಆಧುನಿಕತೆಇಲ್ಲವೇ ಇಲ್ಲವೆ? ಯಾಕಿಲ್ಲ? ಎಚ್. ಸಾವಿತ್ರಮ್ಮ, ತ್ರಿವೇಣಿ ಇವರಂತಹ ಲೇಖಕಿಯರು ತಮ್ಮ ಸಾಹಿತ್ಯದಲ್ಲಿ ಹೆಣ್ಣಿನ ಮನಸ್ಸನ್ನು ಬಿಚ್ಚುಬೀಸಾಗಿ ಚರ್ಚಿಸಿದ್ದಾರೆ. ಆದರೆ ಕಥೆಗಳ ಪರಿಸರಮಾತ್ರ ಸಾಂಪ್ರದಾಯಿಕ ಪರಿಸರವೇ!

ಕನ್ನಡ ಸಾಹಿತ್ಯಕ್ಕೆ ಈವರೆಗೂ ಎಂಟು ಜ್ಞಾನಪೀಠ ಪ್ರಶಸ್ತಿಗಳು ದೊರೆತಿವೆ. ಮಾಸ್ತಿ ವೆಂಕಟೇಶ ಅಯ್ಯಂಗಾರ, ಶಿವರಾಮ ಕಾರಂತ, ದೇವನೂರು ಮಹಾದೇವರಂತಹ ಶ್ರೇಷ್ಠ ಕತೆಗಾರರು ನಮ್ಮವರು. ಅನಂತಮೂರ್ತಿಯವರು ತಮ್ಮ ವೈಯಕ್ತಿಕ ದ್ವಂದವನ್ನು ಸಾಹಿತ್ಯದಲ್ಲಿ ಪರಿವರ್ತಿಸಿ ಹೆಸರು ಪಡೆದರು. ಲಂಕೇಶರು ತಮ್ಮ ಪೂರ್ವಭಾಗದಲ್ಲಿ ಶ್ರೇಷ್ಠ ಕತೆಗಾರರಾಗಿದ್ದರೂ ಸಹ ಉತ್ತರಭಾಗದಲ್ಲಿ ಕೆಳಗೆ ಜಾರಿದರು. ಭೈರಪ್ಪನವರು ಸ್ತ್ರೀಯರನ್ನು ಎರಡನೆಯ ದರ್ಜೆಯ, ಪುರುಷವಿಧೇಯಿ ಜೀವಿಗಳನ್ನಾಗಿ ಮಾಡುವ ಪಕ್ಕಾ ಸಂಪ್ರದಾಯವಾದಿಗಳು. ಇವರಲ್ಲಿ ಯಾರೂಆಧುನಿಕ ಪರಿಸರವನ್ನು ತಮ್ಮ ಸಾಹಿತ್ಯದಲ್ಲಿ ಸೃಷ್ಟಿಸಿಲ್ಲ.

ಇಂತಹ ಒಂದು ಸಾಹಿತ್ಯಿಕವಾಗಿ ಉಸುರುಗಟ್ಟಿಸುವ ವಾತಾವರಣದಲ್ಲಿ ಆಧುನಿಕ ಪರಿಸರವನ್ನು ಕೆಲವೇ ಸಾಹಿತಿಗಳು ಸೃಷ್ಟಿಸಿದ್ದಾರೆ. ಇವರಲ್ಲಿ ನಾನು ಸಿಂಧೂ ರಾವ, ತೇಜಸ್ವಿನಿ ಭಟ್ಟ, ಶ್ರೀದೇವಿ ಕಳಸದ ಹಾಗು ಜಯಶ್ರೀ ದೇಶಪಾಂಡೆ ಇವರನ್ನು ನೆನೆಯುತ್ತೇನೆ. ಆದರೆ ಇಲ್ಲಿಯೂ ಸಹ ಇವರ ಎಲ್ಲ ಕಥೆಗಳು ಆಧುನಿಕ ವಾತಾವರಣದ ಕೊಡುಗೆಗಳಲ್ಲ!

ಉಮೇಶ ದೇಸಾಯಿಯವರು ಆಧುನಿಕ ಮರಾಠಿ ಸಾಹಿತ್ಯವನ್ನು ಓದಿಕೊಂಡವರು. ಪುಣೆ, ಮುಂಬಯಿ ಮೊದಲಾದ ವಿಶಾಲ ನಗರಗಳೊಡನೆ ಸಂಪರ್ಕ ಹೊಂದಿದವರು. ಇದು ಇವರ ಸಾಹಿತ್ಯವನ್ನುಆಧುನಿಕ ಪರಿಸರದ ಸಾಹಿತ್ಯವನ್ನಾಗಿ ಮಾಡಲು ನೆರವಾಗಿದೆ.

ಇವರು ಇತ್ತೀಚೆಗೆ ಪ್ರಕಟಿಸಿದಅನುಪಮಾ ಆಖ್ಯಾನವು ಸಂಪೂರ್ಣವಾಗಿ ಆಧುನಿಕ ಪರಿಸರದ ಕಥೆ. ಈ ನೀಳ್ಗತೆಯ ಬಗೆಗೆ ನಾನು ಈಗಾಗಲೇ ಟಿಪ್ಪಣಿಯನ್ನು ಬರೆದಿದ್ದು, ಅದನ್ನು ನೋಡಲು ಈ ಕೊಂಡಿಯನ್ನು ಬಳಸಿರಿ: https://sallaap.blogspot.com/2020/09/blog-post.html

ಅನುಪಮಾ ಆಖ್ಯಾನಕಥಾಸಂಕಲನದಲ್ಲಿ ಇನ್ನೂಐದು ಕಥೆಗಳಿವೆ.

ಅಪ್ಪ, ಅಮ್ಮ ಇವರಿಬ್ಬರೂ ದುಡಿಯುತ್ತಿರುವ ಕಥೆಆಯ್ಕೆಗಳು’. ಇವರ ಮಗುವಿನ ಮಾನಸಿಕ ಚಿತ್ರಣವೇ ಈ ಕಥೆಯ ವಿಷಯ. ‘ಬಿಡುಗಡೆಕಥೆಯ ವಿಷಯ ಇನ್ನೂ ಗಂಭೀರವಾದದ್ದು. ಚಿತ್ರನಟಿಯೊಬ್ಬಳ ಮಗಳ ಲೈಂಗಿಕ ಆಯ್ಕೆ ಹಾಗು ಅವಳ ಅಮ್ಮ ಅಂದರೆ ಆ ಚಿತ್ರನಟಿ ತೆಗೆದುಕೊಳ್ಳುವ ನಿರ್ಣಯ ಈ ಕಥೆಯ ವಸ್ತು. ‘ದಾಟುಕಥೆಯಲ್ಲಿ ಮಧ್ಯಮ ವರ್ಗದ ತಂದೆಯೊಬ್ಬ  ತನ್ನ ಮಗಳ ಲೈಂಗಿಕ ಆಯ್ಕೆಯನ್ನು ಒಪ್ಪಿಕೊಳ್ಳುವ ವಿಷಯವಿದೆ. ‘ದೀಪದ ಕೆಳಗಿನ ಕತ್ತಲೆಯು ಸಂಕೀರ್ಣವಾದ ಕಥಾವಸ್ತುವನ್ನು ಹೊಂದಿದೆ. ‘ವಿದಾಯಕಥೆಯಲ್ಲಿ ಆಧುನಿಕ ಪರಿಸರ ಇದೆ ಎಂದು ಹೇಳಲು ಆಗಲಾರದು. ಆದರೆ ಲೇಖಕರ ಮನೋಧರ್ಮ ಮಾತ್ರ ಆಧುನಿಕವಾಗಿಯೇ ಇದೆ.

ಆಧುನಿಕ ಪರಿಸರದ ಕಥೆಗಳನ್ನು ನಮಗೆ ಕೊಡುತ್ತಿರುವ ಉಮೇಶ ದೇಸಾಯರಿಗೆ ಅಭಿನಂದನೆಗಳು. ಇನ್ನಿಷ್ಟು ಇಂತಹ ಕಥೆಗಳನ್ನು ಅವರು ನಮಗೆ ನೀಡಲಿ ಎಂದು ಹಾರೈಸುತ್ತೇನೆ.

Sunday, February 28, 2021

ಕನಸಿನ ಕೆನಿ.....................................ದ. ರಾ. ಬೇಂದ್ರೆ

ಬೇಂದ್ರೆಯವರು ಒಂದು ಸಲ ತಮ್ಮ ಭಾಷಣದಾಗ ಹೇಳಿದ್ದರು:

ನನಗ ಏನೋ ಹೊಳೀಲಿಕ್ಕೆ ಹತ್ತೇದ; ಅದು ಏನಂತ ತಿಳೀವಲ್ತು. ನನಗ ಏನೋ ತಿಳೀಲಿಕ್ಕೆ ಹತ್ತೇದ; ಅದು ಏನಂತ ಹೊಳೀವಲ್ತು.”

ಬೇಂದ್ರೆಯವರ ಕವನಗಳೂ ಹೀಗೆಯೇ ಇವೆ. ಅವುಗಳ ಅರ್ಥ ಓದುಗರಿಗೆ ಸರಳವಾಗಿ ಆಗುತ್ತದೆ. ಆದರೆ ಅವುಗಳ ಅಂತರಾರ್ಥ ಸರಳವಾಗಿ ಆಗುವುದಿಲ್ಲ.

 ತಮ್ಮ ಕವನಗಳು ಹುಟ್ಟುವ ಪರಿಯನ್ನು ಬೇಂದ್ರೆಯವರು ತಮ್ಮ ಕವನಗಳ ಮೂಲಕವೇ ಸೂಚಿಸಿದ್ದಾರೆ. ಉದಾಹರಣೆಗೆ, ‘ಭಾವಗೀತೆಹಾಗೂಗರಿಎನ್ನುವ ಕವನಗಳು.  ‘ಕನಸಿನ ಕೆನಿಎನ್ನುವ ಕವನದಲ್ಲಿ ತಮ್ಮ ಕವನಗಳನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎನ್ನುವುದನ್ನು ಬೇಂದ್ರೆಯವರು ಸೂಚಿಸುತ್ತಿದ್ದಾರೆ. ಕನಸು ಒಳಮನಸ್ಸಿನಲ್ಲಿ ಹುಟ್ಟುತ್ತದೆ. ಈ ಒಳಮನಸ್ಸಿನಲ್ಲಿ ಗೂಡುಗಟ್ಟಿದ ಆದರ್ಶಗಳು ಹಾಗು ಅನುಭವಗಳೇ ಬೇಂದ್ರೆಯವರ ಕನಸುಗಳಾಗಿವೆ. ಹಾಲು ಕಾಯ್ದು, ಕೆನೆಯು ಮೇಲೆ ಬರುವಂತೆ ಬೇಂದ್ರೆಯವರ ಕನಸುಗಳು ತಪಿಸಿ, ತಾಪಿಸಿ, ಕೆನೆಗಟ್ಟಿ ಮೇಲೆ ಬರುತ್ತವೆ. ಆದುದರಿಂದ ಇವುಕನಸಿನ ಕೆನಿಗಳು.

ಬೇಂದ್ರೆಯವರ ಕವನಗಳನ್ನು ನೋಡಿರಿ. ಬಹುತೇಕ ಎಲ್ಲ ಕವನಗಳು ಮತ್ತೊಬ್ಬರೊಡನೆ ಆಪ್ತವಾಗಿ ಹಂಚಿಕೊಂಡಂತಹ ಕವನಗಳೇ ಆಗಿವೆ. ಇಲ್ಲಿ ಬೇಂದ್ರೆಯವರು ತಮ್ಮ ಕವನವನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎನ್ನುವುದನ್ನು ತಮ್ಮ ಗೆಳೆಯನಿಗೆ ಹೇಳುತ್ತಿದ್ದಾರೆ. ಬೇಂದ್ರೆಯವರುಗೆಳೆಯಎಂದು ಸಂಬೋಧಿಸದೆ, ‘ಗೆಣೆಯಎಂದು ಕರೆಯುತ್ತಿದ್ದಾರೆ ಎನ್ನುವುದನ್ನು ಗಮನಿಸಿ. ‘ಗೆಣೆಯಎನ್ನುವದು ಆತ್ಮೀಯ ಗೆಳೆಯನಿಗೆ ಸಂಬೋಧಿಸಬಹುದಾದ ಪದ. ಮುಖ್ಯವಾಗಿ ಹೆಣ್ಣು ತನ್ನ ಪ್ರಣಯಿ ಗೆಳೆಯನನ್ನು ಕರೆಯುವಾಗ ಹೇಳಬಹುದಾದ ಪದ. ಬೇಂದ್ರೆಯವರು ಇಲ್ಲಿ ಅರ್ಥವನ್ನು ಬಳಸುತ್ತಿಲ್ಲ. ಈತ ಆಪ್ತ ಸಹೃದಯ ರಸಿಕ ಎನ್ನುವ ಅರ್ಥದಲ್ಲಿಗೆಣೆಯಎಂದು ಬೇಂದ್ರೆಯವರು ಕರೆಯುತ್ತಿದ್ದಾರೆ.

ಇದೀಗ ಕನಸಿನ ಕೆನೆಯ ಒಂದೊಂದೇ ನುಡಿಯನ್ನು ವಿಶ್ಲೇಷಿಸೋಣ:

ಕಿವೀs ಚ್ಯಾsಚ ಬ್ಯಾsಡಾ ಗೆಣಿಯಾs

ಒಳ ಒಳ ಒಳ ಹೋಗಬೇಕೋ                      || ಪಲ್ಲ ||

 

ಬಳ್ಳ ಬಳ್ಳ ಸೆಲೀಯೊಳಗs ನೆಳ್ಳ ನೀಡಬ್ಯಾಡಾ ನಿಂತು

ಮುಳುಗು ಹಾಕು ಮೂರು ಒಳಗ ಒಳಗ            ||ಅನುಪಲ್ಲ||

 ಬೇಂದ್ರೆಯವರ ಕವವನ್ನು ಅರ್ಥ ಮಾಡಿಕೊಳ್ಳಲು ಕೇವಲ ಹೊರಗಿನಿಂದ ಕಿವಿ ಚಾಚಿದರೆ ಉಪಯೋಗವಿಲ್ಲ. ಕವನದ ಅಂತರಂಗದೊಳಗೆ ನುಸುಳಬೇಕು. ‘ಒಳ ಒಳ ಹೋಗಬೇಕೋ’!

ಬೇಂದ್ರೆಯವರು ತಮ್ಮ ಕವನವನ್ನು ಒಂದು ನೀರಿನ ಸೆಲೆಗೆ ಹೋಲಿಸುತ್ತಿದ್ದಾರೆ. ಬಳ್ಳ ಅಂದರೆ ಒಂದು ಅಳತೆ, ಕೊಳಗದ ಅರ್ಧಭಾಗ. ಇಲ್ಲಿ ಸೆಲೆಯು ಯಾವಾಗಲೂ ನೀರನ್ನು ಚಿಮ್ಮುತ್ತಿರುವ ಸೆಲೆ ಎನ್ನುವ ಅರ್ಥವನ್ನು ಕೊಡುತ್ತದೆ. ಭೂಮಿಯ ಆಳದಿಂದ ಚಿಮ್ಮುವ ಬುಗ್ಗೆಯು, ನಿಸರ್ಗಸಹಜವಾಗಿರುತ್ತದೆ. ಬೇಂದ್ರೆಯವರ ಕವನಗಳೂ ಸಹ ಈ ಬುಗ್ಗೆಗಳಂತೆ ಸಹಜಸ್ಫೂರ್ತಿಯಿಂದ ಚಿಮ್ಮುವ ಕವನಗಳು; ಬೌದ್ಧಿಕ ಕಸರತ್ತಿನಿಂದ ಬರೆಯುವ ಕವನಗಳಲ್ಲ.  

 ಇಂತಹ ಸೆಲಿಯ ಮ್ಯಾಲ ನೀನು ನಿಂತುಕೊಂಡರೆ ಅದರ ಮೇಲೆ ನಿನ್ನ ವ್ಯಕ್ತಿತ್ವದ ನೆರಳು ಬೀಳುತ್ತದೆ. ನಿನಗೆ ಮೇಲುಮೇಲಿನ ಅರ್ಥವಷ್ಟೇ ಆಗುತ್ತದೆ; ಅದರ ನಿಜವಾದ ಭಾವವನ್ನು ನೀನು ತಿಳಿಯಲಾರೆ. ಸೆಲಿಯೊಳಗ ನೀನು ಆಳವಾಗಿ  ಮುಳುಗು ಹಾಕಬೇಕು ಎಂದು ಬೇಂದ್ರೆಯವರು ಹೇಳುತ್ತಾರೆ. ಅಂದರೆ ನಿನ್ನ ವೈಯಕ್ತಿಕ ಭಾವವನ್ನು ಕವನದ ಮೇಲೆ ಆರೋಪಿಸಬೇಡ; ಕವನದ ಅಂತರಾರ್ಥವನ್ನು ತಿಳಿಯಲು ಅದರಲ್ಲಿ ನೀನು ಸಮರಸನಾಗಬೇಕು. ಇದು ಕವನದ ಅಂತರಂಗವನ್ನು ಅರಿಯುವ ರೀತಿ.

ಮೂರು ಸಲ ಮುಳುಗು ಹಾಕು ಎಂದು ಬೇಂದ್ರೆಯವರು ಏಕೆ ಹೇಳುತ್ತಾರೆ? ಶ್ರದ್ಧಾಳುಗಳು  ತೀರ್ಥಗಳಲ್ಲಿ ಮೂರು ಸಲ ಮುಳುಗು ಹಾಕುವುದನ್ನು ನೀವು ನೋಡಿರಬಹುದು. ಪ್ರತಿ ಜೀವಿಗೂ ಸ್ಥೂಲದೇಹ, ಸೂಕ್ಷದೇಹ ಹಾಗು ಕಾರಣದೇಹ ಎನ್ನುವ ಮೂರು ದೇಹಗಳು ಇರುತ್ತವೆ. ಮೂರು ದೇಹಗಳ ಶುದ್ಧಿಗಾಗಿ ತೀರ್ಥಗಳಲ್ಲಿ ಮೂರು ಸಲ ಮುಳುಗು ಹಾಕುವ ಪದ್ಧತಿ ಇದೆ. ಓದುಗನೂ ಸಹ ತನ್ನೆಲ್ಲ ಅಂತರಂಗವನ್ನು ಕವನದಲ್ಲಿ ಮುಳುಗಿಸಿಬೇಕು, ತೊಯ್ಯಿಸಬೇಕು. ಮೊದಲನೆಯ ಮುಳುಗಿನಲ್ಲಿ, ಬೇಂದ್ರೆಯವರ ಕವನದ ಮೇಲುನೋಟದ ಅರ್ಥವಾಗುತ್ತದೆ. ಎರಡನೆಯ ಮುಳುಗಿನಲ್ಲಿ, ಇನ್ನಿಷ್ಟು ಒಳಗೆ ಹೋದಾಗ, ಒಳಮನಸ್ಸಿನ ಭಾವ ತಿಳಿಯುತ್ತದೆ. ಮೂರನೆಯ ಮುಳುಗಿನಲ್ಲಿ, ತಳಮಟ್ಟವನ್ನು ಮುಟ್ಟಿದಾಗ ಕವನದ ಅಂತರಾತ್ಮದ ಅರ್ಥವಾಗುತ್ತದೆ

 ಹೀಂಗs ಮಾಡಬೇಕೂ ; ಹಾಂಗೂ ಮಾಡಬೇಕೂs

ಹ್ಯಾಂಗಾರ ಮಾಡು ಬೆಳ್ಳಬೆಳಗs

ರಸಾ ತೀರಿದ ಮ್ಯಾಲs | ಗಸಿ ಐತಿ ಕೆಳಗs

ಅದಕ್ಕೂ ಹೋಗಬೇಕು ಕೆಳಗs

ಇದನ್ನೆಲ್ಲಾ ಕೇಳಿದ ಬೇಂದ್ರೆಯವರ ಗೆಳೆಯ ಅವರಿಗೆ  ‘ಹಂಗಾದರ, ನಿನ್ನ ಕವನವನ್ನ ಹ್ಯಾಂಗ ತಿಳಕೊಬೇಕಪಾ?’ ಅಂತ ಕೇಳತಾನ. ಅದಕ್ಕ ಬೇಂದ್ರೆಯವರು ಹೇಳತಾರ: ‘ಹಿಂಗs ಮಾಡಬೇಕು ಅನ್ನೋ ಅಂತಹ ಒಂದು ವಿಧಾನ ಇಲ್ಲಪಾ. ನೀ ಹ್ಯಾಂಗರ ಮಾಡು. ಆದರ ಅರ್ಥ ಹೊಳಿಯೋ ಹಂಗ ಬೆಳ್ಳಗ, ಬೆಳ್ಳಗ ಮಾಡು.’ ಇಲ್ಲಿ ಬೆಳ್ಳಬೆಳಗ ಅನ್ನುವ ಪದಕ್ಕ ಇರುವ ಶ್ಲೇಷಾರ್ಥವನ್ನು ಗಮನಿಸಿರಿ. ಪಾತ್ರೆಯನ್ನು ತಿಕ್ಕುವುದಕ್ಕೆಪಾತ್ರೆಯನ್ನು ಬೆಳಗುಎಂದು ಹೇಳುತ್ತಾರೆ. ಅಲ್ಲದೆ ಬೆಳ್ಳಬೆಳಗು ಎನ್ನುವ ಪದವು ಮುಂಜಾವು ಎನ್ನುವ ಅರ್ಥವನ್ನೂ ಕೊಡುತ್ತದೆ.

ಕವನದ ಪದಾರ್ಥ ತಿಳಿದು, ಅದರ ರಸವನ್ನೆಲ್ಲ ಓದುಗನು ಹೀರಿಕೊಂಡ ಬಳಿಕ, ಮುಗಿಯಿತೆ?

ಜೇನನ್ನು ಹಿಂಡಿ, ಮೇಲಿನ ರಸವನ್ನು ಸಂಗ್ರಹಿಸಿದ ಬಳಿಕ ಸಹ, ಕೆಳಗೆಗಸಿಉಳಿದಿರುತ್ತದೆ. ಬೇಂದ್ರೆಯವರ ಕವನದಲ್ಲಿ ಮೇಲ್ಮೇಲಿನ ರಸಗ್ರಹಣಕ್ಕಿಂತ ಕೆಳಗೆ ಇಳಿಯಬೇಕು. ಅಂದರೆ ಕವನದ ಗೂಢಾರ್ಥ ಹೊಳೆಯುತ್ತದೆ.

ಬೇಂದ್ರೆಯವರ ಕವನ ಇರುವುದೇ ಹೀಗೇ. ತಿಳಿದರೂ ಸಹ ಹೊಳೆದಿರುವುದಿಲ್ಲ; ಹೊಳದರೂ ಸಹ ತಿಳಿದಿರುವುದಿಲ್ಲ. ಅದಕ್ಕಾಗಿ ಓದುಗನು ಒಳಗ, ಒಳಗ, ಕೆಳಗ, ಕೆಳಗ  ಇಳಿದು ಅನುಭವಿಸಬೇಕು.

 ಇನ್ನು ಮೂರನೆಯ ನುಡಿ ಹೀಂಗದ:

ಹೊದರಿನ್ಯಾಗ ಹೊದರೂ | ಪದರಿನ್ಯಾಗ ಪದರೂ

ನೀ ಗಂಟು ಹಾಕಬ್ಯಾಡ, ನೀ ಹೊರಗs

ಸೆರಗೀಗ ಕಟ್ಟು ಸೆರಗು | ಮಿರಗಕ್ಕ ಎಲ್ಲೀ ಮೆರಗು?

ಬೆರಗಿನ್ಯಾಗ ಬೆರ್ತುಹೋಗ ತಿರುಗs

ಬೇಂದ್ರೆಯವರ ಕವನಕ್ಕ ಅನೇಕ ಪಾತಳಿಗಳು ಇರ್ತಾವ, ಅನೇಕ ಅರ್ಥಗಳು ಇರ್ತಾವ. ‘ಹೊದರಿನ್ಯಾಗ ಹೊದರೂ | ಪದರಿನ್ಯಾಗ ಪದರೂಅಂತ ಬೇಂದ್ರೆಯವರು ಇದನ್ನs ಹೇಳತಾರ. ಈ ಪಾತಳಿಗಳನ್ನ ಒಂದರೊಳಗೊಂದು ಗಂಟು ಹಾಕಿ, ತಿಳಕೊಳ್ಳಲಿಕ್ಕೆ ಹೋಗಬ್ಯಾಡ; ಹಾಂಗ ಮಾಡಿದರ, ಅರ್ಥ ಹೋಗಿ ಅನರ್ಥ ಆಗತದ. ನೀ ಕವನದ ಪದರುಗಳ ಒಳಗ ಸಿಕ್ಕುಬೀಳಬೇಡ,  ಹೊರಗ ನಿಂತುಕೋ; ಆದರ, ಕವನದ ಅರ್ಥ ಮಾಡಿಕೊಳ್ಳಲಿಕ್ಕೆ ಸೆರಗು ಕಟ್ಟು ಅಂದರ ದೃಢಸಂಕಲ್ಪನಾಗು ಅಂತ ಬೇಂದ್ರೆಯವರು ಹೇಳತಾರ.

ಮಿರುಗುವುದು ಅಂದರೆ ಹೊಳೆಯುವುದು. ‘ಮೆರಗುಅಂದರ polish. ಸ್ವತಃ ಹೊಳೆಯುವ ಕವನಕ್ಕ polish ಬೇಕಾಗುವುದಿಲ್ಲ. ಹಾಗು ಆ ಕೆಲಸಕ್ಕ ಕೈ ಹಾಕಲೂ ಬಾರದು. ಆ ಕವನ ಓದುಗನ ಮನಸ್ಸನ್ನ ತಟ್ಟುವುದೇ ಅದರ ಕಾರ್ಯಸಿದ್ಧಿ. ಅವನಿಗೆ ಬೆರಗಿನ ಅನುಭವವನ್ನು ಕೊಡುವುದೇ ಕವನದ  ಮೇಲ್ಮೆ. ಆ ಕವನ ನೀಡುವ ಬೆರಗಿನೊಳಗ, ಓದುಗ ತಿರುತಿರುಗಿ ಅಂದರ ಪುನಃಪುನಃ ಬೆರತು ಹೋಗಬೇಕು. ಕವನದಲ್ಲಿ ಓದುಗ ಒಂದಾಗಿ ಹೋಗಬೇಕು; ಇದೇ ಕವನದ ಸಾರ್ಥಕತೆ. ಶ್ರೇಷ್ಠ ಕವನವು ಓದುಗನನ್ನು ಬೆರಗುಗೊಳಿಸುತ್ತದೆ. ಹೀಗಾಗಲಿಕ್ಕೆ ಓದುಗನ ಮನಸ್ಸೂ ಸಹ ಪಾಕಗೊಂಡಿರಬೇಕು.

 ಮುಂದಿನ ನುಡಿ ಹಿಂಗದ:

ತಿರಗs ತಿರುಗತಿರು | ತಿರುಗೂಣಿ ತಿರುಗುsಣಿ

ಮಣಿ ಮಣಿ ಪೋಣೀಸಿsದ ಕೊರಗs

ದುರುಗಮ್ಮ ದುರುದೂರು | ಮರುಗಮ್ಮ ಮಳಿನೀರು

ಶಾಕಾ ಪಾಕಾ ಮಣ್ಣಿನ ಕಾವಿನೊಳಗs

 

ತನ್ನ  ಕವನದ ತಿರುಗುಣಿಯೊಳಗ ಮತ್ತೆ ಮತ್ತೆ  ಗಿರ್ಕಿ ಹೊಡೆಯುತ್ತ ಇರು ಎಂದು ಬೇಂದ್ರೆಯವರು ಓದುಗನಿಗೆ ಹೇಳ್ತಾರ. ಒಂದs ಓದಿಗೆ ತನ್ನ ಒಳಗನ್ನ ಬಿಟ್ಟು ಕೊಡೋ ಕವನ ಅಲ್ಲ ಇದು.  ಅಂದರ ಕವನ ಎಂಥಾದದ? ಇದುಮಣಿ ಮಣಿ ಪೋಣೀಸಿs ಕೊರಗು!’  ಸುಬದ್ಧವಾಗಿ ಪೋಣಿಸಿದ ಮಣಿಹಾರ ಎಷ್ಟು ಛಂದ ಕಾಣಸ್ತದನೋ, ಅಷ್ಟs ಛಂದ ಅದ ಬೇಂದ್ರೆಕವನ. ಆದರ ಮಣಿಗಳು ಕೊರಗಿನ ಮಣಿಗಳು. ಮಣಿಗಳ ಒಳಗ ವಿಷಾದ ತುಂಬೇದ.

 ದುರಗಮ್ಮ ಹಾಗು ಮರಗಮ್ಮ ಎನ್ನುವ ಎರಡು ಪ್ರತಿಮೆಗಳನ್ನು ಬಳಸಿ, ಬೇಂದ್ರೆಯವರು ತಮ್ಮ ಬದುಕಿನ ಸುಖದುಃಖಗಳನ್ನು ಹೇಳ್ತಾರ. ದುರಗಮ್ಮ ಎನ್ನುವ ದೇವತೆ ದುರುದುರು ಉರಿಯುತ್ತಿರುತ್ತಾಳೆ. ಮರಗಮ್ಮ ಯಾವಾಗಲೂ ಮರಗುತ್ತಲೇ ಇರುತ್ತಾಳೆ. ಇವಳ ಕಣ್ಣಿರೇ ಮಳಿಯಾಗುತ್ತದೆ. ಆದರೆ ದುರಗಮ್ಮ ಹಾಗು ಮರಗಮ್ಮ ಇಬ್ಬರೂ ದೇವತೆಗಳು. ಅವರು ಕೊಡುವ ಸಂಕಷ್ಟಗಳಿಂದಲೇ, ಬದುಕು ಚಿಗುರುತ್ತದೆ; ಬಾಳಿನಲ್ಲಿ ಸಾರ್ಥಕತೆ ಸಿಗುತ್ತದೆ.

 ದುರಗಮ್ಮ ಸೂರ್ಯನಂತಿದ್ದರೆ, ಮರಗಮ್ಮ ಮಳೆದೇವರಂತಿದ್ದಾಳೆ. ಬೇಸಿಗೆಯ ಉರಿ ಹಾಗು ಮಳೆಗಾಲದ ಮಳೆನೀರು ಭೂಮಿಯ ಮೇಲೆ ಬಿದ್ದು, ಒಳಗ ಇಳಿದಾಗ, ಏನಾಗತದ? ಮಣ್ಣು ಅಂದರೆ ನಮ್ಮ ಬದುಕು ತನ್ನ ಕಾವಿನಿಂದ ಅಂದರೆ ಅನುಭವಗಳಿಂದ ಶಾಕವನ್ನು (ಸಸಿಯನ್ನು) ಹುಟ್ಟಿಸತದ. ಶಾಕವೇ ಮುಂದೆ ಪಾಕವಾಗುತ್ತದೆ. ಪಾಕವೇ ಬೇಂದ್ರೆಕವನ. ಇಂತಹ ಕವನವನ್ನು ತಿಳಿದುಕೊಳ್ಳಲು, ಓದುಗನು ಬೇಂದ್ರೆಯವರ ಭಾವದೊಳಗ ಇಳಿಯಬೇಕಾಗ್ತದ.

ಇದೀಗ ಕೊನೆಯ ನುಡಿ. ಇಲ್ಲಿಯವರೆಗೆ ತಮ್ಮ ಕವನಗಳನ್ನು ಅರ್ಥ ಮಾಡಿಕೊಳ್ಳುವ ಬಗೆಗೆ ಹೇಳಿದ ಬೇಂದ್ರೆಯವರು, ಇದೀಗ ಓದುಗನಿಗೆ ಒಂದು ಸಿಹಿಯಾದ ಆದರೆ ಸುಲಭವಲ್ಲದ ಆಹ್ವಾನವನ್ನು ನೀಡುತ್ತಾರೆ.

ತೂ | ತೂತೂ | ತೂತೂ | ಹೂ ಹುತೂತುತೂ

| ಬಾ | ಅತ್ತs | ಅತ್ತs | ಅತ್ತsತ್ತs |

ಸಾರೀಗಮ್ಮತ್ತs | ಇದ್ದs ಹಿಮ್ಮತ್ತs

ಹಿಕಮತ್ತು ಮತ್ ಮತ್ ಮತ್ತs.

 

`ತೂ, ತೂ, ಹುತೂತೂ…’ ಎನ್ನುವುದುಹುಡತೂತು’ (=ಕಬಡ್ಡಿ) ಆಟದಲ್ಲಿ ಹೇಳುವ ಉಲಿ. ‘ಕಬಡ್ಡಿ, ಕಬಡ್ಡಿ….’ ಎನ್ನುವ ಬದಲಾಗಿಹುತೂತೂ….’ ಎಂದು ಹೇಳುತ್ತಾರೆ. ಬೇಂದ್ರೆಯವರು ಹೇಳುವ ಆಟದಲ್ಲಿ ಒಂದು ಭಾಗದಲ್ಲಿ ಕವಿ ನಿಂತಿದ್ದಾನೆ. ಮತ್ತೊಂದು ಭಾಗದಲ್ಲಿ ಓದುಗ ನಿಂತಿದ್ದಾನೆಬೇಂದ್ರೆಯವರು ರಸಿಕ ಓದುಗನಿಗೆ ಆಹ್ವಾನ ನೀಡುತ್ತಿದ್ದಾರೆ : ‘ಬಾ ಇನ್ನೂ ಹತ್ತರ ಬಾ. ನನ್ನ ಕವನದಾಗ ನಿನ್ನ ಹಿಡದ ಹಾಕತೇನಿ, ಬಾ! ಇದು ಸಾರಿಗಮನಿಸ ಎನ್ನುವ ಸಂಗೀತದ ಮೇಳ.  ಸಾರೀ(=ಇದೆಲ್ಲಾ) ಗಮ್ಮತ್ತ(=ಮೋಜು). ನಿನಗ ಧೈರ್ಯ (=ಹಿಮ್ಮತ್) ಇದ್ದರ, ಹಿಕಮತ್ತ (=ಕಾರ್ಯಯತ್ನ) ಇದ್ದರ, ಮತ್ತೇ ಮತ್ತೇ ಪ್ರಯತ್ನಿಸು. ಕವಿಯೊಡನೆ ಕಬಡ್ಡೀ ಆಡುಇಲ್ಲಿಮತ್ಎಂದರೆಬೇಡಎನ್ನುವ ಅರ್ಥವೂ ಸೂಚಿತವಾಗಿದೆ!

 ವರಕವಿಗಳು ತಮ್ಮ ಕವನಗಳ ಮೂಲಕ ಓದುಗನೊಡನೆ ನಿರಂತರವಾಗಿ ಕಬಡ್ಡಿಯಾಡಲು ಬಯಸುತ್ತಾರೆ. ಅವರ ಕವನಗಳ ತೆಕ್ಕೆಯಲ್ಲಿ ಹಿಡಿಬಿದ್ದು ಸೋಲುವುದು, ಗೆಲ್ಲುವುದು ಓದುಗನಿಗೆ ಇಷ್ಟವಾದ ಸಂಗತಿಯೇ ಆಗಿದೆ.

Tuesday, January 12, 2021

‘ಮಾತ್ರೆ ದೇವೋ ಭವ’..................ಆರತಿ ಘಟಿಕಾರರ ವಿನೋದ ಲೇಖನಗಳ ಸಂಕಲನ


ಆರತಿ ಘಟಿಕಾರರು ಕನ್ನಡದ ಜಾನೇಮಾನೇ ವಿನೋದ ಸಾಹಿತಿಗಳು. ಅವರ ವಿನೋದ ಲೇಖನಗಳು ಈಗಾಗಲೇ ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡು ಓದುಗರನ್ನು ನಗಿಸಿವೆ, ಸಂತೋಷಗೊಳಿಸುವೆ. ‘ಭಾವತೋರಣಎನ್ನುವ ಅವರ ಬ್ಲಾ˘ಗ್ ದಲ್ಲಿ (bhaavatorana.bloggspot.com), ಅವರ ಹಾಸ್ಯಲೇಖನಗಳನ್ನು ಓದಬಹುದು. ‘ಮಾತ್ರೆ ದೇವೋ ಭವಎನ್ನುವುದು ಅವರ ಹಾಸ್ಯಲೇಖನಗಳ ಸಂಕಲನ. ಇದು ಅವರ ಪ್ರಥಮ ಪ್ರಕಟಿತ ಕೃತಿಯೂ ಹೌದು. 

ಹಾಸ್ಯ ಹೇಗಿರಬೇಕು? ಹಾಸ್ಯಬ್ರಹ್ಮ ಬಿರುದಾಂಕಿತ ರಾ.ಶಿ.ಯವರು ಒಮ್ಮೆ ಹೇಳಿದಂತೆ ಹಾಸ್ಯವು subtle ಪದದಲ್ಲಿಯ b ಇದ್ದಂತೆ ಇರಬೇಕು. ಹಾಸ್ಯವು ಮುಗುಳುನಗೆಯನ್ನು ಉಕ್ಕಿಸಬೇಕೇ ಹೊರತು, ಅಟ್ಟಹಾಸವನ್ನಲ್ಲ. ಆರತಿಯವರ ಲೇಖನಗಳನ್ನು ಓದುತ್ತ ಹೋದಂತ, ಓದುಗನ ಮುಖದ ಮೇಲಿನ ಮುಗುಳುನಗೆಯು ಮಾಸುವುದೇ ಇಲ್ಲ. ಅವಲೇಖನಗಳ ಪ್ರತಿಯೊಂದು ಸಾಲೂ ಹಾಸ್ಯದ ಪುಟ್ಟ ಕಾರಂಜಿಯಾಗಿದೆ. ಇದು ಅವರ ಲೇಖನ ಶೈಲಿ. 

ಸಾಮಾನ್ಯವಾಗಿ ನಾವು ಓದುವ ಅನೇಕ ಹಾಸ್ಯಲೇಖನಗಳು ಘಟನೆಗಳನ್ನು ಆಧರಿಸಿರುತ್ತವೆ. ಆದರೆ ಆರತಿಯವರ ವಿನೋದಕ್ಕೆ ಘಟನೆಗಳೇ ಬೇಕಂತಿಲ್ಲ. ವಿನೋದವು ಅವರ ವರ್ಣನೆಯಲ್ಲಿಯೇ ಇದೆ. ಭಾಷೆಯ ಜೊತೆಗಿನ ಚೆಲ್ಲಾಟ ಹಾಗು ಸಹಜಸ್ಫೂರ್ತ wit ಇವು ಆರತಿಯವರ ವಿನೋದದ ವೈಶಿಷ್ಟ್ಯಗಳಾಗಿವೆ. 

ಈ ವಿಶಿಷ್ಟ್ಯತೆಗಳ ಉದಾಹರಣೆಗಾಗಿ ಅವರ ಮಿನಿ ಮನೆ (ವನ)ವಾಸ ಎನ್ನುವ ಲೇಖನವನ್ನೇ ನೋಡೊಣ.

ತೀಕ್ಷ್ಣಮತಿ ಹಾಗು ಜಿಪುಣಾಗ್ರೇಸರ”; ಹೀಗೆ :೧ ಸ್ವಭಾವದವರಾದ ನನ್ನ ಪತಿರಾಯರುಎಂದು ತಮ್ಮ ಪತಿರಾಯರನ್ನು ಅಣಗಿಸುತ್ತ ಆರತಿಯವರು, ವಿನೋದದ ಊಟಕ್ಕೆ ಒಗ್ಗರಣೆ ಹಾಕುತ್ತಾರೆ. ಈ ಪತಿರಾಯರು ಕಟ್ಟಿಸಿದ ಮನೆ ಹಾಗು ಪಕ್ಕದ ಮನೆ ಇವೆರಡೂ ಒಂದು ಕಾ˘ಮನ್ ಗೋಡೆಯ ಮೂಲಕ ಎರಡು ದೇಹ, ಒಂದೇ ಆತ್ಮ ಎನ್ನುವಂತೆ ಇದ್ದವಂತೆ. ಸಂಸಾರ ಬೆಳೆದಂತೆ, ಈ ಮನೆ ಪುಟ್ಟದಾಗತೊಡಗಿದಾಗ, ಆರತಿಯವರು ಸ್ವಲ್ಪ ದೊಡ್ಡದಾದ ಮನೆಯನ್ನು ತೆಗೆದುಕೊಳ್ಳುವ ಪ್ರಸ್ತಾವನೆಯನ್ನು ಇಡುತ್ತಾರೆ. ಇವರ ಪತಿರಾಯರು ಜಾಣತನದಿಂದ, ಆ ಪ್ರಸ್ತಾವನೆಯನ್ನು ತಳ್ಳಿಹಾಕಿದಾಗ”, ಆರತಿಯವರು, “ಪಾಲಿಗೆ ಬಂದದ್ದು ‘punchಅಮ್ರುತಾ ಎಂದು ಬಗೆದು ಸುಮ್ಮನಾಗುತ್ತಾರೆ. ಈ ರೀತಿಯಾಗಿ ಭಾಷೆಯಲ್ಲಿಯೇ ವಿನೋದವನ್ನು ಹೊಮ್ಮಿಸುವ ಜಾಣ್ಮೆ ಆರತಿಯವರಲ್ಲಿದೆ! 

ಆರತಿಯವರು ಆಧುನಿಕ ಕಾಲದಲ್ಲಿ, ಆಧುನಿಕ ಪರಿಸರದಲ್ಲಿ ಇರುತ್ತಿರುವ ಲೇಖಕಿಯರು. ಹೀಗಾಗಿ ಇವರ ಲೇಖನಗಳಲ್ಲಿ ಆಧುನಿಕ ಭಾಷೆ, ಆಧುನಿಕ ಪರಿಸರ, ಆಧುನಿಕ ಪರಿಕರ ಕಾಣುವುದು ಸಹಜವಾಗಿದೆ. ತಮ್ಮ ಪತಿಯೊಡನೆ *ಮಾಮೂಲಿ* ಜಗಳ ಕಾಯುತ್ತಿದ್ದ ಆರತಿಯವರು ಹೀಗೆ ಹೇಳುತ್ತಾರೆ:

ತಾಲ ತಮಟೆಗಳ ಸೌಂಡ್ ಎಫೆಕ್ಟ್ ನಲ್ಲಿ ಸಾಗುತ್ತಿದ್ದ ನಮ್ಮ ಜಗಳಕ್ಕೆ ನಾನು ಏನೋ ಶಾ˘ಕ್ ಹೊಡೆದವಳಂತೆ ಎಚ್ಚೆತ್ತುಕೊಂಡು ಬ್ರೇಕ್ ಹಾಕಿ ನನ್ನ ದನಿಯನ್ನು ಪಿಸುನುಡಿಯ ಗೇರಿಗೆ ಬದಲಾಯಿಸಿ ಇವರನ್ನೂ ಎಚ್ಚರಿಸಿದೆ”.

ಒಂದು ವೇಳೆ ತಮ್ಮ ಜಗಳದ ಸೌಂಡ್ ಬೈಟ್ ಗಳನ್ನು ಕಡಿಮೆ ಮಾಡಲು ಇವರಿಗೆ ಸಾಧ್ಯವಾಗದಿದ್ದರೆ, ಆಗ ನೆರೆಮನೆಯರ ಡಿಶ್ ಆಂಟೆನಾದಂತಹ ಕಿವಿಗಳು….”

ಆಧುನಿಕ ಭಾಷೆಯು ಹೊಮ್ಮಿಸುವ ಈ ವಿನೋದದ ಪರಿಯನ್ನು ಗಮನಿಸಿರಿ! 

(*ಮಾಮೂಲಿ* ಜಗಳ ಎನ್ನುವ ಪದವು ನನ್ನದು; ಇದು ಒಂದು ಊಹೆಯಷ್ಟೆ. ಆರತಿಯವರನ್ನು ದಯವಿಟ್ಟು ಈ ಪದಕ್ಕೆ ಹೊಣೆಗಾರರನ್ನಾಗಿ ಮಾಡಬೇಡಿರಿ! ಅವರು ಅಂಥವರಿರಲಿಕ್ಕಿಲ್ಲ.)


ಭಾಷೆಯೇ ವಿನೋದದ ಸಾಧನವಾಗುವ ಈ ಶೈಲಿಯನ್ನು ನಾನು ಇತರತ್ರ ಕಂಡಿಲ್ಲ ಎಂದು ಹೇಳಬಲ್ಲೆ. ಇನ್ನೊಂದೆರಡು ಇಂತಹ ಉದಾಹರಣೆಗಳನ್ನುಮಾತ್ರೆದೇವೋಭವಲೇಖನದಿಂದ ಉದ್ಧರಿಸುವ ಚಪಲವನ್ನು ನಾನು ತಡೆದುಕೊಳ್ಳಲಾರೆ;

 

 () ಇನ್ನು ಶೀತ ಜ್ವರಗಳಂತಹ ಚಿಕ್ಕ ಪುಟ್ಟ ರೌಡಿ ಬಾಧೆಗಳು…………….

() ನಿರಂತರವಾಗಿ ನಮ್ಮಂತಹ ಗಟ್ಟಿ ಜೀವಗಳ ಮೇಲೆ ತಮ್ಮ ಪ್ರಯೋಗಗಳನ್ನು ನಡೆಸುತ್ತಲೇ……

() ಈ ಸೂಜಿಗಳ ಶಿರಶಯ್ಯೆ………………..

() ಮನೆಯೇ ಮಾತ್ರಾಲಯ, ಮನಸೇ (ದೇಹವೇ) ರೋಗಾಲಯ

() ಏಕ ()ಕ್ರಾಧಿಪತ್ಯ

() ಪಾದ ಪಾದ ವಿಪದಂ

() ಮೊದಲು ಪತಿಯಿಂದ ಸಿಂಪತಿ, ಬಳಿಕ ನ್ಯಾಚುರೋಪತಿ


ಆರತಿಯವರ ವಿನೋದದೃಷ್ಟಿಯು ೩೬೦ ಅಂಶಗಳಷ್ಟು ವಿಸ್ತಾರವಾದ  ಪೂರ್ಣಕೋನದ್ದಾಗಿದೆ. ಹೀಗಾಗಿ ಇವರ ವಿನೋದನೋಟಕ್ಕೆ ಸಿಗದ ವಸ್ತುವಿಲ್ಲ. ಆದರೆ ಈ ವಿನೋದವು ಮೃದುವಾದ ವಿನೋದ, ಯಾರನ್ನೂ ಕುಟುಕುವ ವಿನೋದವಲ್ಲ. ತಂಗಾಳಿಯಂತೆ ಮನಸ್ಸನ್ನು ಸವರಿ ಸುಖವನ್ನು ಕೊಟ್ಟು ಸರಿಯುವಂತಹದು. ಉದಾಹರಣೆಗೆ˘ಟೋರಾಜಲೇಖನವನ್ನೇ ನೋಡಿರಿ

ಈ ಲೇಖನದಲ್ಲಿ ಆ˘ಟೋರಾಜನು, ಆರತಿಯವರಿಗೆ ತನ್ನ ಲೋಕಜ್ಞಾನದ ವ್ಯಾಖ್ಯಾನವನ್ನು ಮಾಡುತ್ತಲೇ ಹೋಗುತ್ತಾನೆ.    ಲೋಕಜ್ಞಾನವು ಸರ್ವಸಾಮಾನ್ಯರ ಸಾಮಾನ್ಯಜ್ಞಾನವಾಗಿರುವದರಿಂದ ಎಲ್ಲರನ್ನೂ ನಗಿಸುತ್ತದೆಯೆ ಹೊರತು, ಎಲ್ಲಿಯೂ ಯಾರನ್ನೂ ಚುಚ್ಚುವುದಿಲ್ಲ.

ಆರತಿಯವರು ತಮ್ಮ ಸಂಕಲನದಲ್ಲಿ ಇಪ್ಪತ್ತುನಾಲ್ಕು ಲೇಖನಗಳನ್ನು ಕೊಟ್ಟಿದ್ದಾರೆ. ದಿನದ ಇಪ್ಪತ್ತುನಾಲ್ಕು ಗಂಟೆಗಳು ವಿನೋದದ ಆನಂದದಿಂದ ತುಂಬಿರಲಿ ಎನ್ನುವುದರ ಸಂಕೇತವಾಗಿರಬಹುದೆ ಇದು? ಆರತಿಯವರು ನಮ್ಮನ್ನು ದಿನದ ಇಪ್ಪತ್ತುನಾಲ್ಕು ಗಂಟೆಗಳಲ್ಲಿ, ವರ್ಷದ ೩೬೫ ದಿನಗಳಲ್ಲಿ ವಿನೋದದಿಂದ ತಣಿಸಲಿ ಎಂದು ಹಾರೈಸುತ್ತ , ಇನ್ನಷ್ಟು ಹೆಚ್ಚೆಚ್ಚು ಲೇಖನಗಳನ್ನು ಅವರಿಂದ ಎದುರು ನೋಡುತ್ತೇನೆ.