Monday, October 10, 2022

`ಇಳೆ ಎಂದರೆ ಬರಿ ಮಣ್ಣಲ್ಲ'..........ದ. ರಾ. ಬೇಂದ್ರೆ

      " ಇಳೆ ಎಂದರೆ ಬರಿ ಮಣ್ಣಲ್ಲ

ನಮಗೋ ನೋಡುವ ಕಣ್ಣಿಲ್ಲ

ಏಸು ತಿಂದರೂ ತೀರದಿದೆ.

ಏಸು ತುಂಬಿಯೂ ಮೀರದಿದೆ.

ಅಮೃತವೆಂಬುದೂ ಅನಂತವೆಂಬುದು ಕಾಲಲ್ಲೇ ಇಲ್ಲೇ.

ಮೈಯೊಳು ಮಲಗಿದ ಆಳೆದ್ದರೆ ಬಾನೇ ಮನೆಯಲ್ಲೇ.

            ನೆಲಕೆಲ್ಲಾ ನೀರೇ ಮೇರೆ

            ನೀರುಗಾಳಿಗಳ ಹಾದಿಯೆ ಬೇರೆ.

 

ಅಣ್ಣ ತಮ್ಮದಿರು ತಮ್ಮ ತಮ್ಮೊಳಗೆ ಕಾದಾಡಲು ಬೇಕೆ?

ನಲುಮೆಯ ನೀರನು ಕೆನ್ನೀರೆನ್ನುತಾ ಚೆಲ್ಲಾಡುವಿರೇಕೆ?

            ಮಣ್ಣಲಿ ನೀರಲಿ ಸೂರ್ಯನ ಕಿರಣ

            ಚಿತ್ರಿತವಾಗಲಿ ಅಪಾರವರಣ

ಬಾನುಲಿಯಲಿ ಮಾತಾಡುವ ಬನ್ನಿ ಗಾಳಿದೇರನೇರಿ

ರಸ ಮೀರಿ ರಸವೇರಿ ರಸರಸಿಕರು ಸೇರಿ

          ಅಕಾಂಡ ತಾಂಡವವೇತಕ್ಕೆ

            ಲಾಸ್ಯವೆ ಸಾಕು ಈತಕ್ಕೆ

ನಂದಾದೀಪದ ನಡೆಮಾಡಗಳೇ ಸಂಚರಿಸುವ ಹಾಗೆ

ಜೀವಜೀವಗಳ ಕಾರ್ತಿಕೋತ್ಸವವು ಮೊದಲಾಗಲಿ ಮೇಗೆ.

            ಋತುಗಳು  ನಡೆಸಲಿ ರಿಂಗಣಗುಣಿತ

            ಜೀವ ನುಡಿಸುತಿರೆ ವೀಣಾಕ್ವಣಿತ

ಮಾಲೆಯು ಕೊರಳಿಗೆ ಜೋತಿರುವಂತೆ ಹೃದಯಕೆ ಬಂದಾತು

ಸುಗ್ಗಿಯು ನೆಲವನೆ ಸುತ್ತುತ್ತಿರಲಿ ಮಧುಲೀಲೆಗೆ ಸೋತು. "

 ************************************

ಈ ಕವನದ ಅರ್ಥವನ್ನೇ ಬಿಂಬಿಸುವ ಬೇಂದ್ರೆಯವರ ಮತ್ತೊಂದು ಪುಟ್ಟ –ಆದರೆ ಮಹತ್ವಪೂರ್ಣ ಕವನ : ‘ಬೈರಾಗಿಯ ಹಾಡು’ ಅವರ ‘ಸಖೀಗೀತ’ ಸಂಗ್ರಹದಲ್ಲಿದೆ:

 

ಇಕೋ ನೆಲ- ಅಕೋ ಜಲ

ಅದರ ಮೇಲೆ ಮರದ ಫಲ

ಮನದೊಳಿದೆ ಪಡೆವ ಛಲ

ಬೆಳೆದವಗೆ ನೆಲವೆಲ್ಲ ಹೊಲ.

 

ಜಲಧಿವರೆಗು ಒಂದೆ ಕುಲ

ಅನ್ನವೆ ಧರ್ಮದ ಮೂಲ

ಪ್ರೀತಿಯೆ ಮೋಕ್ಷಕ್ಕೆ ಬಲ

ಇದೇ ಶೀಲ ಸರ್ವಕಾಲ    ||ಇಕೋ ನೆಲ....

**************************************************

ಬೇಂದ್ರೆಯವರ ಕವನಗಳು ಓದಲು ಎಷ್ಟು ಸರಳವಾಗಿರುವವೋ, ರಸಗ್ರಹಣಕ್ಕೆ ಅಷ್ಟೇ ಸಂಕೀರ್ಣವಾಗಿರುತ್ತವೆ. `ಇಳೆ ಎಂದರೆ ಬರಿ ಮಣ್ಣಲ್ಲ’ ಎನ್ನುವ ಕವನವೂ ಸಹ ರಸಪೂರ್ಣವಾದ ಹಾಗು ಅರ್ಥಗರ್ಭಿತವಾದ ಕವನವಾಗಿದೆ. ಕವನದ ಮೊದಲಿನ ಎರಡು ಸಾಲುಗಳಲ್ಲಿಯೇ ಬೇಂದ್ರೆಯವರು ಮಾನವನ ದೃಷ್ಟಿದೋಷವನ್ನು ತೋರಿಸುತ್ತಿದ್ದಾರೆ. ನಾವು ಭೂಮಿಗೆ ‘ಭೂತಾಯಿ’ ಎಂದು ಕರೆಯುತ್ತೇವೆ. ಆದರೆ ವ್ಯವಹಾರಕ್ಕೆ ಬಂದಾಗ ನಮ್ಮ ಮಟ್ಟಿಗೆ ಭೂಮಿ ಎಂದರೆ ಬರಿ ಕೊಡಕೊಳ್ಳುವ ಜಮೀನು ಮಾತ್ರ.

“ಇಳೆ ಎಂದರೆ ಬರಿ ಮಣ್ಣಲ್ಲ

ನಮಗೋ ನೋಡುವ ಕಣ್ಣಿಲ್ಲ

ಏಸು ತಿಂದರೂ ತೀರದಿದೆ.

ಏಸು ತುಂಬಿಯೂ ಮೀರದಿದೆ.

ಈ ದೃಷ್ಟಿದೋಷವನ್ನು ತಿದ್ದುವ ಉದ್ದೇಶದಿಂದ ಬೇಂದ್ರೆಯವರು ‘ನಮಗೋ ನೋಡುವ ಕಣ್ಣಿಲ್ಲ’ ಎಂದು ಹೇಳುತ್ತಿದ್ದಾರೆ. ಈ ಭೂಮಿಯು ಎಲ್ಲರದೂ ಕರ್ಮಭೂಮಿಯಾದಾಗ ಮಾತ್ರ,

“ಏಸು ತಿಂದರೂ ತೀರದಿದೆ.

ಏಸು ತುಂಬಿಯೂ ಮೀರದಿದೆ.

ಹೊನ್ನು, ಹೆಣ್ಣು, ಮಣ್ಣು ಇವು ಪುರುಷನ ಸ್ವಾರ್ಥಮೂಲ ಪ್ರಲೋಭನಗಳು. ನಮಗೆ ಅನ್ನ ಕೊಡುವ ಈ ತಾಯಿಯನ್ನು ನಾವು ಕೇವಲ ಮಣ್ಣು ಎಂದು ಭಾವಿಸಿ, ಅವಳ ಮೇಲಿನ ಅಧಿಪತ್ಯಕ್ಕಾಗಿ ಕಾದಾಡುತ್ತಿದ್ದೇವೆ.

ಇಲ್ಲಿಯವರೆಗೆ ಈ ಮಣ್ಣಿನ ಅಂದರೆ ಭೂಮಿಯ ಮೇಲೆ ನಡೆದ ಹೋರಾಟಗಳೆಲ್ಲವೂ ಮಣ್ಣಿಗಾಗಿ ಅಂದರೆ ಭೂಮಿಯ ಒಡೆತನಕ್ಕಾಗಿ ನಡೆದ ಹೋರಾಟಗಳಾಗಿವೆ. ಭೂಮಿತಾಯಿಯ ಮಕ್ಕಳಾದ ನಾವು ಭೂಮಿಯ ಮೇಲೆ ಆಧಿಪತ್ಯವನ್ನು ಸ್ಥಾಪಿಸಿ, ಭೂಪತಿಗಳಾಗುವದೆಂದರೆ `ತಾಯಿಗ್ಗಂಡರಾದಂತೆ!

(‘ನಾದಲೀಲೆ’ ಕವನಸಂಕಲನದಲ್ಲಿಯ “ಮೊದಲಗಿತ್ತಿ” ಕವನ:

ಪಾತಾಳ ಕಂಡರು ಕೆಲ ತಾಯಿಗ್ಗಂಡರು

ಅವರನ್ನೂ ಮಡಿಲಾಗ ಮಡಗಿಸಿಹೆ.”

‘ಮಡಿಲಾಗ’ ಎನ್ನುವ ಪದದಲ್ಲಿ ಇರುವ ಶ್ಲೇಷೆಯನ್ನು ಗಮನಿಸಿರಿ.)

 

ಈ ಭೂಮಿಯನ್ನು ನಾವು ತಾಯಿಯಂತೆ ತಿಳಿದರೆ, ನಾವೆಲ್ಲರೂ ಅಣ್ಣ-ತಮ್ಮಂದಿರಲ್ಲವೆ? ನಮ್ಮೆಲ್ಲ ಸೋದರರಿಗೂ ನಾವು ಪಾಲು ಕೊಡಲೇ ಬೇಕಲ್ಲವೆ? ಎಲ್ಲರಿಗೂ ಸಮಪಾಲು ಕೊಟ್ಟರೆ, ನಮಗೇನು ಉಳಿಯುತ್ತದೆ ಎಂದು ದಿಗಿಲುಗೊಳ್ಳಬೇಕಾಗಿಲ್ಲ. ಏಕೆಂದರೆ ಭೂಮಿಯ ಒಡಲಲ್ಲಿ, ಏಸು ತಿಂದರೂ ತೀರದಿದೆ. ಏಸು ತುಂಬಿಯೂ ಮೀರದಿದೆ.’

 

ಸರಿ,ಈ ಮಾತಿನ ಅರ್ಥವೇನು? ಎಲ್ಲರಿಗೂ ಸಾಕಾಗುವಷ್ಟು ಅನ್ನ ಭೂಮಿಯಲ್ಲಿದೆ. ಮತ್ತು ಮಾನವಕುಲಕ್ಕೆ ಬೇಕಾದಷ್ಟು ನೀಡಿಯೂ ಸಹ ಭೂತಾಯಿಯ ಒಡಲನ್ನು ಮೀರಿ ಹೊರಚೆಲ್ಲದಷ್ಟು ಅವಳ ಒಡಲು ವಿಶಾಲವಾಗಿದೆ. ಈ ಅನ್ನವನ್ನು ಎಲ್ಲರೂ ಹಂಚಿಕೊಂಡು ಉಣ್ಣಬೇಕಷ್ಟೆ.

 

“ಅಮೃತವೆಂಬುದೂ ಅನಂತವೆಂಬುದು ಕಾಲಲ್ಲೇ ಇಲ್ಲೇ.

ಮೈಯೊಳು ಮಲಗಿದ ಆ ಆಳೆದ್ದರೆ ಬಾನೇ ಮನೆಯಲ್ಲೇ.

            ಈ ನೆಲಕೆಲ್ಲಾ ನೀರೇ ಮೇರೆ

            ನೀರುಗಾಳಿಗಳ ಹಾದಿಯೆ ಬೇರೆ ”.

ಭೂತಾಯಿಯ ವೈಭವಕ್ಕೆ ಕೊನೆಯೇ ಇಲ್ಲ, ಕೊರತೆಯೇ ಇಲ್ಲ! ಆದುದರಿಂದ ಬೇಂದ್ರೆ ಹೇಳುತ್ತಾರೆ:

‘ಅಮೃತವೆಂಬುದೂ ಅನಂತವೆಂಬುದು ಕಾಲಲ್ಲೇ ಇಲ್ಲೇ.’ ಅಮೃತ ಹಾಗು ಅನಂತ ಇವು ದೇವರ ಉಪಾಧಿಗಳು. (Immortal Infinite) ಅವು ಮಾನವನ ಕಾಲಿನಲ್ಲಿಯೇ ಇವೆ. ಏನಿದರಿದರರ್ಥ?

 

‘ಕಾಲಲ್ಲೇ ಇಲ್ಲೆ’ ಎನ್ನುವ ಮಾತಿನಲ್ಲಿ ಅಡಗಿದ ವಿವಿಧ ಅರ್ಥಗಳನ್ನು ಗಮನಿಸಿ. ನಮ್ಮ ಕಾಲುಗಳನ್ನು ಭೂಮಿಯಲ್ಲಿ ಒತ್ತಿ ನಾವು ದುಡಿದಾಗಲೇ, ನಮಗೆ ಅಮೃತ ಸಿಗುತ್ತದೆ. ಇಲ್ಲಿ ಕಾಲು ಎನ್ನುವುದು ಕಾರ್ಯಸೂಚಕವಾಯಿತು. ‘ಕಾಲ’ ಎಂದರೆ ಸಮಯ ಎನ್ನುವ ಅರ್ಥವೂ ಇದೆಯಲ್ಲವೆ? ಅನಂತವು ನಮ್ಮ ಕಾಲಲ್ಲೇ ಇದೆ ಎಂದರೆ, ‘ಆನಂತಕಾಲದವರೆಗೆ’ ಎನ್ನುವ ಅರ್ಥವೂ ಬಂದಂತಾಯಿತು.

ಭೂತಾಯಿ ನಮಗಾಗಿ ತನ್ನ ಅಮೃತದಂತಹ ಕೊಡುಗೆಯನ್ನು ಅನಂತಕಾಲದವರೆಗೆ ನೀಡಲು ಸಿದ್ಧಳಾಗಿದ್ದಾಳೆ. ಆದರೆ, ಈ ಸಾಧನೆಗಾಗಿ ಮಾನವನು ಮಾಡಬೇಕಾದದ್ದೇನು?

 

‘ಮೈಯೊಳು ಮಲಗಿದ ಆ ಆಳೆದ್ದರೆ ಬಾನೇ ಮನೆಯಲ್ಲೇ.ʼ ಈ ಸಂಕೀರ್ಣ ವಾಕ್ಯವು ವಿವಿಧ ಅರ್ಥಗಳ ವ್ಯಾಪ್ತಿಯುಳ್ಳದ್ದಾಗಿದೆ.  ಇದರ ಸಾಮಾನ್ಯ ಅರ್ಥವೇನೆಂದರೆ, ಮನುಷ್ಯನ ಪ್ರಯತ್ನಕ್ಕೆ ಕೊನೆಯಿಲ್ಲ, ಬಾನೇ ಆತನ ಮನೆ. (Sky is the limit!) ಎರಡನೆಯ ಅರ್ಥವೆಂದರೆ ಮಾನವನು ಇನ್ನೂ ಸುಪ್ತಾವಸ್ಥೆಯಲ್ಲಿಯೇ ಇರುವನೆಂಬುದರ ಸೂಚನೆಯಾಗಿದೆ ಇದೆ. ಈತನು ಎಚ್ಚತ್ತು ವಿವೇಕ ಬುದ್ಧಿಯವನಾದರೆ, ಆಕಾಶವೇ ಈತನ ಮನೆಯಾಗುತ್ತದೆ. ಇನ್ನು ಮೂರನೆಯ ಅರ್ಥವೊಂದನ್ನು ನೋಡೊಣ> ಅದು ಆಧ್ಯಾತ್ಮಿಕ ಅರ್ಥ:

 

ಸಂಸ್ಕೃತ ವೈಯಾಕರಣಿಗಳು ‘ಪುರುಷ’ ಪದವನ್ನು ‘ಪುರೇ ಶೇತಿ’ ಅಂದರೆ ‘ಶರೀರದಲ್ಲಿ ಮಲಗಿಕೊಂಡವನು’ ಎಂದು ಅರ್ಥೈಸುತ್ತಾರೆ. ‘ಮೈಯೊಳಗೆ ಮಲಗಿದವನು’ ಎಂದರೆ ಯಾರು? ಈತನೇ ‘ದೇಹಧಾರಿಯಾದ ಪುರುಷ’ ಅರ್ಥಾತ್ ಆತ್ಮ. ಈತನಿಗೆ ಪಶುಪ್ರಜ್ಞೆಯಷ್ಟೇ ಇದೆ. ಈತನು ಪಶುಜೀವನವನ್ನು ನಡೆಯಿಸುತ್ತಿದ್ದಾನೆ ಎಂದು ಬೇಂದ್ರೆಯವರು ಹೇಳುತ್ತಿದ್ದಾರೆ.  ಈತ ಎಚ್ಚೆತ್ತರೆ, ತನ್ನ ಪಶುಪ್ರಜ್ಞೆಯಿಂದ ಹೊರಬಂದರೆ, ಆತನಿಗೆ ಬಾನೇ ಮನೆ. ಬಾನೇ ಮನೆಯಾದವನು ದೇವಸ್ವರೂಪನು.  ಮಹರ್ಷಿ ಅರವಿಂದರು ಹೇಳುವ, ಮಾನವಚೈತನ್ಯದ ಪರಮಾವಸ್ಥೆಯನ್ನು ಸಹ ಇದು ಸೂಚಿಸುತ್ತದೆ. (Evolution of man to superman). ‘ಆಳು’ ಎಂದರೆ ಕೆಲಸ ಮಾಡುವ ಗಂಡಸು. ‘ಆಳು’ ಎಂದರೆ ‘ಆಳುವವನು’ ಎನ್ನುವ ಗುಪ್ತಾರ್ಥವನ್ನೂ ಬೇಂದ್ರೆಯವರು ಸೂಚಿಸುತ್ತಾರೆ. ಮಲಗಿದ ಆ ಆಳು ಎಚ್ಚೆತ್ತರೆ, ಆತನು ಆಳುವವನೇ ಆಗುತ್ತಾನೆ. ಆಗ, ಆತನಿಗೆ ಬಾನೇ ಮನೆಯಾಗುತ್ತದೆ. ಆತನು ‘ಕೆಳ ಪ್ರಜ್ಞೆ’ಯಿಂದ ಎಚ್ಚೆತ್ತು ‘ಮೇಲಿನ ಪ್ರಜ್ಞೆ’ಗೆ ಬಂದಾಗ, ಆತನು ದೇವರೇ ಆಗುತ್ತಾನೆ!

 

            ‘ಈ ನೆಲಕೆಲ್ಲಾ ನೀರೇ ಮೇರೆ

            ನೀರುಗಾಳಿಗಳ ಹಾದಿಯೆ ಬೇರೆ.’

ಭೂಮಿಯನ್ನು ಸಮುದ್ರವು ಸುತ್ತುವರಿದಿದೆ.  ಆ ನೀರೆ ಭೂಮಿಗಿರುವ ಮೇರೆ. ನೀರು ಉಗಿಯಾಗಿ ಅಂದರೆ ಊರ್ಧ್ವಮುಖಿಯಾಗಿ ಮೇಲಕ್ಕೆ ಚಲಿಸುತ್ತದೆ. ಗಾಳಿಯೂ ಸಹ ಸರ್ವವ್ಯಾಪಿಯಾಗಿದೆ, ಗಾಳಿಯು ಆಕಾಶದವರೆಗೆ ವ್ಯಾಪಿಸಿದೆ. ಗಾಳಿ ಹಾಗು ನೀರು ಇವು ಪ್ರಕೃತಿಯ ಶಕ್ತಿಗಳು, ಪಂಚಮಹಾಭೂತಗಳಲ್ಲಿಯ ಎರಡು ಭೂತಗಳು.

(ಭೂ =ಆಗು ; ಭೂತ=ಆದದ್ದು =ವ್ಯಕ್ತವಾದದ್ದು).

 

ಆದರೆ ಮಾನವನು ಈ ಊರ್ಧ್ವಪಥವನ್ನು ಬಿಟ್ಟು ಅಡ್ಡಹಾದಿಯನ್ನು ಹಿಡಿದಿದ್ದಾನೆ. ಅಮೃತ ಹಾಗು ಅನಂತ ಇವು ದೇವರ ಉಪಾಧಿಗಳು, ದೇವರ ನಾಮಗಳು. ಇದರರ್ಥವೆಂದರೆ, ಮಾನವನು ಸಹ ಸಹ ಊರ್ಧ್ವಮುಖಿಯಾಗಬೇಕೆನ್ನುವುದು ಬೇಂದ್ರೆಯವರ (ಹಾಗು ಮಹರ್ಷಿ ಅರವಿಂದರ) ಆಶಯವಾಗಿದೆ.

 

ಎರಡನೆಯ ನುಡಿಯಲ್ಲಿ ಬೇಂದ್ರೆಯವರು ಮಾನವರು ಸರಿಯಾದ ಹಾದಿಯಲ್ಲಿ ನಡೆಯಲು, ಮಾಡಬಾರದ ಹಾಗು ಮಾಡಬೇಕಾದ ಕಾರ್ಯವನ್ನು ಸೂಚಿಸುತ್ತಾರೆ.

ಒಂದು ಪದಾರ್ಥಕ್ಕೆ ಇರುವ  ಸರ್ವಸಾಮಾನ್ಯವಾದ ಅರ್ಥವನ್ನು ಬೇಂದ್ರೆಯವರು ವಿಸ್ತರಿಸುವ ಪರಿಯನ್ನು ಇಲ್ಲಿ ನೋಡಿರಿ. ಸಾಮಾನ್ಯವಾಗಿ ನೀರು ಅಂದರೆ ಜಲ. ಆದರೆ ಬೇಂದ್ರೆಯವರು ‘ನಲುಮೆಯ ನೀರು’ ಅಂದರೆ ಪರಸ್ಪರ ಪ್ರೀತಿಯ ಸಂಬಂಧ ಎನ್ನುವ ಅರ್ಥವನ್ನು ಇಲ್ಲಿ ಸೃಷ್ಟಿಸಿದ್ದಾರೆ. ಇದನ್ನು ರಕ್ತವೆನ್ನುತ್ತ ರಕ್ತಪಾತವನ್ನು ಮಾಡುತ್ತಿರುವಿರೇಕೆ, ಮಾನವರೆಲ್ಲರೂ ಅಣ್ಣ ತಮ್ಮಂದಿರಾಗಿರಲು ಪರಸ್ಪರ ಕಾದಾಟವೇಕೆ, ಎಂದು ಬೇಂದ್ರೆಯವರು ಕೇಳುತ್ತಾರೆ. 

 

ಸೂರ್ಯನು ಇಡೀ ಜಗತ್ತಿಗೆ ಪೋಷಣೆಯನ್ನು ನೀಡುತ್ತಾನೆ. ಅವನ ಕಿರಣಗಳು ನಮ್ಮ ಭೂತಾಯಿಯ ಮಣ್ಣಿನ ಮೇಲೆ ಹಾಗು ನೀರಿನಲ್ಲಿ ಮಿಂಚುತ್ತಿವೆ. ಈ ರೀತಿಯಲ್ಲಿ ಸೂರ್ಯನು ಭೂತಾಯಿಗೆ ಹಾಗು ನೀರಿಗೆ ಅಂದರೆ ನೀರಿನಲ್ಲಿ ಇರುವ ಜೀವಿಗಳಿಗೆ ಪೋಷಣೆಯನ್ನು ನೀಡುತ್ತಿದ್ದಾನೆ. ಬೇಂದ್ರೆಯವರು ಹೇಳುವ ಸೂರ್ಯನು ಜ್ಞಾನಸೂರ್ಯನೂ ಆಗಿದ್ದಾನೆ. ಇದು ಮಾನವ ಹಾಗು ದೇವರ ನಡುವೆ ಇರುವ ಸಂಬಂಧ. ಇದನ್ನು ಗ್ರಹಿಸಿದ ಮಾನವನು ತನ್ನ ಪ್ರಜ್ಞೆಯನ್ನು ವಿಸ್ತರಿಸಿ ಅಪಾರವರಣವನ್ನು ಅಂದರೆ, ಮೇರೆಯಿಲ್ಲದ ತಿಳಿವನ್ನು ಹೊಂದಬೇಕು.

 

ಅಂತಹ ಸಮಯದಲ್ಲಿ ಮಾನವರು ಗಾಳಿಯ ತೇರನ್ನು ಏರಿ, ಅಂದರೆ ಅಧೋಮುಖಿಯಾದ ಪ್ರಾಣವನ್ನು ಯೋಗಶಕ್ತಿಯಿಂದ ಸಹಸ್ರಾರಕ್ಕೆ ಏರಿಸಿ ಬಾನುಲಿಯಲ್ಲಿ ಅಂದರೆ ಅತಿಮಾನವ ಸಂಭಾಷಣೆಯಲ್ಲಿ ತೊಡಗಬಹುದು!  ಭೂಮಿಗೆ ಬದ್ಧವಾದ ಪ್ರಾಪಂಚಿಕ  ಮಿತಿಯನ್ನು ಮೀರಿ ದೈವಿಕ ರಸವನ್ನು ತಲುಪಬಹುದು. ಇದನ್ನು ಸಾಧಿಸಲು ಮಾನವನು ತನ್ನ ʻಅಕಾಂಡ ತಾಂಡವʼವನ್ನು ಬಿಡಬೇಕು. ಅಂದರೆ ಹೊತ್ತಲ್ಲದ ಹೊತ್ತಲಲಿ ಮಾಡಬಾರದ್ದನ್ನು ಮಾಡುವದನ್ನು ಬಿಡಬೇಕು. ಹಾಗಿದ್ದರೆ ಆತ ಏನನ್ನು ಮಾಡಬೇಕು? ಆತ ಲಾಸ್ಯ ನರ್ತನವನ್ನು ಮಾಡಬೇಕು. { ತಾಂಡವವು ಶಿವನ ರುದ್ರನರ್ತನವಾದರೆ, ಲಾಸ್ಯವು ಪಾರ್ವತಿಯ ಸೌಮ್ಯ ನರ್ತನವಾಗಿದೆ.} ಇಷ್ಟೇ ಸಾಕು ಮಾನವನ ಉತ್ಕ್ರಾಂತಿಗೆ. ಆವಾಗ ಈ ಭೂಮಿ ಹೇಗೆ ಕಾಣುವುದು: ನಂದಾದೀಪದ ನಡೆಮಾಡಗಳೇ ಸಂಚರಿಸುವ ಹಾಗೆ!

 

ನಂದಾದೀಪ ಎಂದರೆ ದೇವರ ಎದುರಿಗೆ ಹಚ್ಚಿಡುವ ದೀಪ. ನಡೆಮಾಡ ಎಂದರೆ ದೇವರ ರಥ ಅಥವಾ ತೇರು. ಇದೀಗ ಮಾನವರೆಲ್ಲರೂ ದೈವತ್ವವನ್ನು ತಳೆದು, ತೇರು ಎಳೆಯುತ್ತಿರುವಂತಹ ದೃಶ್ಯ ಕಾಣುವುದು! ಕಾರ್ತೀಕ ಮಾಸದ ಗಾಢಾಂಧಕಾರಾದಲ್ಲಿದಲ್ಲಿ ಹೊರಟ ಉತ್ಸವದಂತೆ ಭಾಸವಾಗುವುದು.ಬೇಂದ್ರೆಯವರ ಕನಸು ಎಷ್ಟು ಉಚ್ಚಮಟ್ಟದ್ದಾಗಿದೆ ಎನ್ನುವುದನ್ನು ನೋಡಿದಿರಾ?

 

ಭೂಮಿ ಹಾಗು ಮಾನವ ಅಥವಾ ನಿಸರ್ಗ ಹಾಗು ಮಾನವ ಇವರ ನಡುವಿನ ಸಾಮರಸ್ಯವನ್ನು ಸೂಚಿಸುವದರ ಸಲುವಾಗಿ ಬೇಂದ್ರೆಯವರು ʻ ಋತುಗಳು ನಡೆಸಲಿ ರಿಂಗಣಗುಣಿತ, ಜೀವ ನುಡಿಸುತಿರೆ ವೀಣಾಕ್ವಣಿತʼ ಎಂದು ಹೇಳುತ್ತಾರೆ. ರಿಂಗಣಗುಣಿತ ಅಂದರೆ ವೃತ್ತಾಕಾರದಲ್ಲಿ ಒಂದರ ಹಿಂದೆ ಒಂದು ಕುಣಿಯುವ ನರ್ತನ. ಋತುಗಳೂ ಸಹ ಇದರಂತೆಯೇ ನಿಯಮಬದ್ಧವಾಗಿ ಬದಲಾಗುತ್ತಿರಲಿ ಎನ್ನುವ ಆಶಯ ಇಲ್ಲಿದೆ. ಮಾನವನೂ ಸಹ ನಿಸರ್ಗ ನಿಯಮವನ್ನು ಮೀರದಿದ್ದರೆ, ಆತನ ಬಾಳೂ ಸಹ ವೀಣೆಯ ಸ್ವರಬದ್ಧ ರಾಗದಂತಾಗುವುದು ಎನ್ನುವುದು ಕವಿಯ ಆಶಯ.

 

ಕೊನೆಯಲ್ಲಿ ಕವಿ ತಮ್ಮ ಕಾಣ್ಕೆಯನ್ನು ಹೀಗೆ ಹೇಳುತ್ತಾರೆ:

ಮಾಲೆಯು ಕೊರಳಿಗೆ ಜೋತಿರುವಂತೆ  ಹೃದಯಕೆ ಬಂದಾತು

 ಸುಗ್ಗಿಯು ನೆಲವನೆ ಸುತ್ತುತ್ತಿರಲಿ ಮಧುಲೀಲೆಗೆ ಸೋತು.

ಹೂವಿನ ಮಾಲೆ ಕೊರಳಿಗೆ ಜೋತು ಬಿದ್ದರೆ ಸಾಕು, ಅದು ಹೃದಯಕ್ಕೆ ಹತ್ತಿರವಾದಂತೆ. ನಮ್ಮ ಸಂಕಲ್ಪವೂ ಸಹ ಇದೇ ರೀತಿಯಾದರೆ ನಮ್ಮ ಬಾಳೂ ಸಹ ಹಸನಾಗುವುದು. ಇದು ಮಾನವರ ಸಹಜೀವನದ ಮಧುಲೀಲೆ. ಈ ಮಧುಲೀಲೆಗೆ ನಿಸರ್ಗವೂ ಸಹ ಮರುಳಾಗಿ ಸುಗ್ಗಿ ಎನ್ನುವುದು ತಪ್ಪದಂತೆ ನಮ್ಮನ್ನು ಸುತ್ತುತ್ತಲೇ ಇರುವುದು.

6 comments:

Badarinath Palavalli said...

ಬಹಳ ಸರಳವಾಗಿ ವಿವರಿದ್ದೀರಾ ಸಾರ್.
'ಅವ ನೆಡೆಯೋ ದಾರೀಲಿ
ಗರಿಕೇನೂ ಬೆಳೆಯೋಲ್ಲ' ಎನ್ನುವಂತೆ ಮನುಜನ ಅಮಿತ ದಾಹಕ್ಕೆ ಕಡಿವಾಣ ಎಂದೋ?
ಎರಡೂ ಕವನಗಳ ಹೂರಣವು ಮನೋ ಚಿಕಿತ್ಸಕ.
(ಬ್ಲಾಗ್ ಲೋಕಕ್ಕೆ ಮರಳಿದ ತಮಗೆ ಅನಂತ ವಂದನೆಗಳು)

Jayashree Deshpande said...

'ಆಳು' ಎಂಬ ಎರಡೇ ಅಕ್ಷರಗಳ ಪದದಲ್ಲಿನ ವಿಶಾಲಾರ್ಥವನ್ನು ಎಷ್ಟು ಚೆನ್ನಾಗಿ, ಸರಳವಾಗಿ ವಿವರಿಸಿದ್ದೀರಿ. ಅಂತೆಯೇ ಅಕಾಂಡ ತಾಂಡವವನ್ನು ಮನುಷ್ಯರು ನಡೆಸುತ್ತ ಭೂಮಿಗೆ, ಮುಂದಿನ ಪೀಳಿಗೆಗೆ, ಮಾಡುತ್ತಿರುವ ಅನ್ಯಾಯದ ಪರಿಣಾಮಗಳ ಬಗೆಗಿನ ಬೇಂದ್ರೆಯವರ ಎಚ್ಚರಿಕೆ ನಿಮ್ಮ ವ್ಯಾಖ್ಯಾನ ಎರಡೂ ಮನಮಿಡಿದಿವೆ. ನಿಮ್ಮ ಲೇಖನಿ ಮತ್ತು ಬೇಂದ್ರೆಯವರ ಕಾವ್ಯ ಎರಡೂ ಅಪೂರ್ವ ಸಂಗಾತಿಗಳು. ಬರಹಕ್ಕಾಗಿ
ಧನ್ಯವಾದಗಳು ಸರ್.

Vasant Chitguppi said...

ವರಕವಿ ಬೇಂದ್ರೆಯವರಿಗೆ ಮಾನವನ ಆತ್ಮಿಕ ಏಳಿಗೆಯ ಬಗೆಗೆ ಇರುವ ಕಳಕಳಿ ಈ ಕವನದಲ್ಲಿ ತುಂಬಿ ತುಳುಕುತ್ತಿದೆ.

sunaath said...

ಹೌದು, ವಸಂತ. ಬೇಂದ್ರೆಯವರ ಮೊದಲಿನ ಕವನಗಳಲ್ಲಿ, ದೇಶದ ಸ್ವಾತಂತ್ರ್ಯ, ಕನ್ನಡ ಭಾಷೆ, ಕನ್ನಡ ನಾಡಿನ ಉದ್ಧಾರ ಇವೆಲ್ಲವೂ ಮಹತ್ವದ್ದಾಗಿವೆ. ಅವರ ನಂತರದ ಕವನಗಳಲ್ಲಿ ಅರವಿಂದ ಮಹರ್ಷಿಗಳ ತತ್ವಜ್ಞಾನ, ಆಧ್ಯಾತ್ಮ, ಆತ್ಮಿಕ ಏಳಿಗೆ ಮಹತ್ವದ್ದಾಗಿವೆ. ವಿಷಯ ಏನೇ ಇದ್ದರೂ ಪ್ರತಿಯೊಂದು ಕವನವೂ ಒಂದು ಮುತ್ತಾಗಿದೆ!

prabhamani nagaraja said...

ಬೇಂದ್ರೆಯವರ ಸಾಮ್ಯ ಕವನಗಳ ಸಾರ ಸಂಗ್ರಹಿಸಿ ನಮಗೂ ಅರ್ಥವಾಗುವಂತೆ ಬಹಳ ಚೆನ್ನಾಗಿ ವಿವರಿಸಿದ್ದೀರಿ ಸರ್👌 ವಂದನೆಗಳು🙏

sunaath said...

ಧನ್ಯವಾದಗಳು, ಮೇಡಮ್!