‘The Pollen waits on Tiptoe’ ಇದು ಅಂಬಿಕಾತನಯದತ್ತರ ೨೬ ಕವನಗಳ ಸಂಕಲನ. ಆಶ್ಚರ್ಯವಾಯಿತೆ? ಬೇಂದ್ರೆಯವರು ಇಂಗ್ಲೀಶಿನಲ್ಲಿ ಯಾವಾಗ ಬರೆದರು , ಎಂದು? ಈ ಕವನಗಳು ಬೇಂದ್ರೆಯವರ ೨೬ ಕನ್ನಡ ಕವನಗಳ ಇಂಗ್ಲಿಶ ಭಾಷಾಂತರ. ಮತ್ತಿಷ್ಟು ಆಶ್ಚರ್ಯವಾಯಿತೆ? ಏಕೆಂದರೆ ಅಂಬಿಕಾತನಯದತ್ತರ ಕಾವ್ಯವೆಂದರೆ ಮಹಾಸಾಗರ. ಆ ಮಹಾಸಾಗರದ ಆಳವನ್ನು ಹಾಗು ವಿಸ್ತಾರವನ್ನು ಕಂಡವರಿಲ್ಲ; ಹಾಗಿದ್ದಾಗ, ಈ ಕವನಗಳನ್ನು ಭಾಷಾಂತರ ಮಾಡಿದ ಸಾಹಸಿ ಯಾರು, ಎಂದು? ಅವರು ಶ್ರೀ ಮಾಧವ ಅಜ್ಜಂಪುರ ಎನ್ನುವ ತರುಣ ಬೇಂದ್ರೆಭಕ್ತರು. ವಾಸ್ತವದಲ್ಲಿ, ಮಾಧವ ಅಜ್ಜಂಪುರರು ಕನ್ನಡಕ್ಕೆ ಹತ್ತಿರವಾದದ್ದೇ ಬೇಂದ್ರೆಯವರ ಮುಖಾಂತರ. ಅವರ ಕವನಗಳ ‘ನಾದ’ವು ಅವರನ್ನು ಆಕರ್ಷಿಸಿದ್ದರಿಂದಲೇ, ತಾವು ಬೇಂದ್ರೆಯವರ ಕವನಗಳಿಗೆ ಮರುಳರಾದರು ಎಂದು ಮಾಧವ ಅಜ್ಜಂಪುರರು ಹೇಳಿಕೊಂಡಿದ್ದಾರೆ!
ನಾನು ‘ಅನುವಾದ’
ಎನ್ನುವ ಪದವನ್ನು ಬಳಸದೆ, ಭಾಷಾಂತರ ಎನ್ನುವ ಪದವನ್ನು ಬೇಕೆಂದೇ ಬಳಸಿದ್ದೇನೆ. ಅನುವಾದದಲ್ಲಿ
ಕೇವಲ ಅನುಸರಿಸುವ ಛಾಯೆ ಇರುತ್ತದೆ. ಆದರೆ,
‘ಭಾಷಾಂತರ’ ಪದವು ‘ಅನ್ಯೋ ಭಾಷಾ ಭಾಷಾಂತರಮ್’ ಎಂದು ಹೇಳಲ್ಪಟ್ಟಿದೆ. ಅಂದರೆ ಕನ್ನಡದ ಈ ಕವನಗಳ ಭಾಷೆಯಷ್ಟೇ ಇಲ್ಲಿ
ಬೇರೆಯಾಗಿದೆ, ಅರ್ಥಾತ್ ಇಂಗ್ಲಿಶ್ ಆಗಿದೆ, ಆದರೆ ಭಾವ, ಧ್ವನಿ, ನಾದ ಇವೆಲ್ಲ ಮೂಲ ಕನ್ನಡಕ್ಕೆ
ಅತಿ ಹತ್ತಿರವಾಗಿವೆ. ಈ ಸಾಹಸಕ್ಕೆ ಶ್ರೀ ಮಾಧವ ಅಜ್ಜಂಪುರರು ಅತ್ಯಂತ ಸಮರ್ಥರೇ ಆಗಿದ್ದಾರೆ.
ಇಂಗ್ಲಂಡ ಹಾಗು ಅಮೇರಿಕಾದಲ್ಲಿ ಅಧ್ಯಯನವನ್ನು ಮಾಡಿದ ಇವರು ಇಂಗ್ಲಿಶನ್ನು ಕಂಠಗತ
ಮಾಡಿಕೂಂಡಿದ್ದಾರೆ, ಹಾಗು ಕನ್ನಡವಂತೂ ಇವರಿಗೆ ರಕ್ತಗತವೇ ಆಗಿದೆ! ಇದಷ್ಟೇ ಆದರೆ ಸಾಕೆ,
ಅಂಬಿಕಾತನಯದತ್ತರನ್ನು ಭಾಷಾಂತರಿಸಲಿಕ್ಕೆ? ಮಾಧವ ಅಜ್ಜಂಪುರರಲ್ಲಿ passion ಇದೆ, ಬೇಂದ್ರೆಯವರ ಬಗೆಗೆ ಹಾಗು ಕನ್ನಡದ ಬಗೆಗೆ!
ಮಾಧವ ಅಜ್ಜಂಪುರರ
ಭಾಷಾಂತರದ ವೈಶಿಷ್ಟ್ಯಗಳೆಂದರೆ ಮೂಲ ಕವನದ ಭಾವ, ಗತಿ ಹಾಗು ನಾದಗಳನ್ನು ಸಾಧ್ಯವಾದ ಮಟ್ಟಿಗೂ
ತಮ್ಮ ಭಾಷಾಂತರದಲ್ಲಿ ಉಳಿಸಿಕೊಂಡಿದ್ದಾರೆ. ಕೆಲವೊಮ್ಮೆ word to word ಭಾಷಾಂತರ ಮಾಡದೆ, ಭಾವಪ್ರವಾಹವನ್ನು ಬಳಸಿಕೊಂಡಿದ್ದಾರೆ. ಈ
ಮಾತನ್ನು ಇವರ ಭಾಷಾಂತರದ ಶೀರ್ಷಿಕೆಗಳಿಗೂ ಅನ್ವಯಿಸಬಹುದು. ಉದಾಹರಣೆಗೆ, ‘ಪರಾಗ’ ಎನ್ನುವ
ಕವನವನ್ನು ನೋಡಿರಿ. ಈ ಶೀರ್ಷಿಕೆಯನ್ನು ಮಾಧವ ಅಜ್ಜಂಫುರರು The Pollen Waits On
Tiptoe ಎಂದು ಮಾಡಿದ್ದಾರೆ. ಮೂಲಕವನದಲ್ಲಿ ಹೂವು ಭೃಂಗಕ್ಕಾಗಿ ಕಾತುರದಿಂದ
ಕಾಯುತ್ತಿರುವ ಹಾಗು ಆಹ್ವಾನಿಸುತ್ತಿರುವ ಭಾವವಿದೆ. ಈ ಕವನದ ಶೀರ್ಷಿಕೆಯನ್ನು ಮೂಲಕವನದ
‘ಪರಾಗ’ಕ್ಕೆ ಸಂವಾದಿಯಾಗಿ, ‘Pollen’ ಎಂದು ಭಾಷಾಂತರಿಸಿದ್ದರೆ, ಆ
ಹೂವಿನ ಕಾತುರದ ಕಲ್ಪನೆಯು ನಮ್ಮ ಅನುಭವಕ್ಕೆ ಬಹುಶಃ ಬರುತ್ತಿರಲಿಲ್ಲ. ಇದೀಗ, The
Pollen Waits On Tiptoe ಎಂದು ಹೇಳುವ ಮೂಲಕ, ಮೂಲಕವನದಲ್ಲಿರುವ ಕಾತುರವನ್ನು
ಮಾಧವ ಅಜ್ಜಂಪುರರು ಸಮರ್ಥವಾಗಿ ತಮ್ಮ ಭಾಷಾಂತರದಲ್ಲಿ ತಂದಿದ್ದಾರೆ. ಆದುದರಿಂದಲೇ, ಮಾಧವ
ಅಜ್ಜಂಪುರರು ತಮ್ಮ ಭಾಷಾಂತರಗಳನ್ನು translation ಎಂದು ಕರೆಯದೆ, ‘trans-creation’
ಎಂದು ಕರೆದಿದ್ದಾರೆ.
ಮೂಲ ಕವನಗಳಲ್ಲಿ
ಅನೇಕ ಸಾಂಸ್ಕೃತಿಕ ಪದಗಳಿವೆ. ಪ್ರಾದೇಶಿಕ ವೈಶಿಷ್ಟ್ಯದ ಹಾಗು ಜಾನಪದ ವೈಶಿಷ್ಟ್ಯದ ಪದಗಳೂ ಇವೆ.
ಕನ್ನಡೇತರ ಓದುಗರಿಗೆ ಇವು ಅರ್ಥವಾಗಲಿಕ್ಕಿಲ್ಲ. ಆದುದರಿಂದ ಮಾಧವರು ಕವನಗಳ ನಂತರದಲ್ಲಿ Glossaryಯನ್ನು ಕೊಟ್ಟು, ಅದರಲ್ಲಿ ಈ ಪದಗಳ
ಬಗೆಗೆ ವಿವರಣೆಯನ್ನು ನೀಡಿದ್ದಾರೆ. ಇದು ಎಲ್ಲ ಓದುಗರಿಗೂ ಉಪಯುಕ್ತವಾದ ಟಿಪ್ಪಣಿಯಾಗಿದೆ.
ಇದಾದ ಬಳಿಕ,
ಮಾಧವ ಅಜ್ಜಂಪುರರು ಪ್ರತಿಯೊಂದು ಕವನದ ಸಂದರ್ಭ ಹಾಗು ವೈಶಿಷ್ಟ್ಯವನ್ನು ತಮ್ಮ Introduction ಎನ್ನುವ ಲೇಖನಗಳಲ್ಲಿ
ವಿವರಿಸಿದ್ದಾರೆ. (ಈ Introduction ಕವನಗಳ ಮೊದಲಲ್ಲಿ ಅಲ್ಲ,
ಕೊನೆಯಲ್ಲಿ ಬರುತ್ತದೆ!) ಕವನದ ಒಳಹೊಕ್ಕು ನೊಡಬಯಸುವ ಓದುಗರಿಗೆ ಇದು ಅತಿ ಉಪಯುಕ್ತವಾದ
ಟಿಪ್ಪಣಿಯಾಗಿದೆ. ಈ ಸಂದರ್ಭದಲ್ಲಿ ಮಾಧವ ಅಜ್ಜಂಪುರರು ಮತ್ತೊಂದು ಮಹತ್ವದ ಕಾರ್ಯವನ್ನು
ಮಾಡಿದ್ದಾರೆ. ಕೇವಲ ಬೇಂದ್ರೆಯವರ ಕಾವ್ಯವನ್ನಷ್ಟೇ ಅಲ್ಲ, ಸ್ವತಃ ಬೇಂದ್ರೆಯವರನ್ನೂ ಸಹ ಮಾಧವ
ಅಜ್ಜಂಪುರರು ಒಳಹೊಕ್ಕು ನೋಡಿದ್ದಾರೆ. ಉದಾಹರಣೆಗೆ, Song Essence ಎನ್ನುವ
ಕವನಕ್ಕೆ ಬರೆದ ಅವರ Introductionದಲ್ಲಿ ಮಾಧವ ಅಜ್ಜಂಪುರರು
ಬೇಂದೆಯವರ ದೃಷ್ಟಿಯಲ್ಲಿ ಕವಿ ಹಾಗು ರಸಿಕ ಇವರ ನಡುವಿನ ಸಹೃದಯ ಸಂಬಂಧವನ್ನು ವಿವರಿಸಿದ್ದಾರೆ.
ಕವಿಗೆ ಸಹೃದಯ ರಸಿಕ ಓದುಗನು ಬೇಕೇ ಬೇಕು. ಅಂತಹ ರಸಿಕನಿಗೆ ಬೇಂದ್ರೆಯವರಂತಹ ಕವಿ ಬೇಕು. ಅಂದರೆ
ಮಾತ್ರ ಕಾವ್ಯದ ಸೃಷ್ಟಿಯಾಗುತ್ತದೆ. ಇದು ಬೇಂದ್ರೆಯವರ ಮನೋಧರ್ಮ. ಬೇಂದ್ರೆ ಹಾಗು ಅಜ್ಜಂಪುರ
ಇವರಲ್ಲಿ ನಾವು ಇಂತಹ ಕವಿ ಹಾಗು ಸಹೃದಯ ರಸಿಕರನ್ನು ನೋಡಬಹುದು. ಆದುದರಿಂದಲೇ ಮಾಧವ ಅಜ್ಜಂಪುರ
ಅವರಿಗೆ ಬೇಂದ್ರೆಯವರ ೨೬ ಕವನಗಳ ಅನು-ನಿರ್ಮಾಣ (trans-creation) ಮಾಡಲು
ಸಾಧ್ಯವಾಗಿದೆ. (ಇವು ಇನ್ನಷ್ಟು ಹೆಚ್ಚಾಗಲಿ ಎಂದು ಹಾರೈಸುತ್ತೇನೆ.)
ಈ ಕೃತಿಯ
ಇನ್ನೊಂದು ಹೆಚ್ಚುಗಾರಿಕೆ ಎಂದರೆ, ಕವನದ ನಾದವನ್ನು ಆಸಕ್ತ ಓದುಗರಿಗೆ ತಲುಪಿಸುವ ಉದ್ದೇಶದಿಂದ
ಮಾಧವ ಅಜ್ಜಂಪುರರು ಪ್ರತಿಯೊಂದು ಕನ್ನಡ ಕವನವನ್ನು ಹಾಗು ಇಂಗ್ಲಿಶ್ ಭಾಷಾಂತರವನ್ನು ಸ್ವತಃ ತಾವೇ
ಹಾಡಿದ್ದಾರೆ. (ಪ್ರತಿ ಕವನದ ಮೊದಲ ಪುಟದಲ್ಲಿ ಕೊಟ್ಟಿರುವಂತಹ QR codeದ ಮೂಲಕ ಈ ಹಾಡುಗಳನ್ನು ಕೇಳಬಹುದು.) ಇದು ಕನ್ನಡ
ಸಾಹಿತ್ಯದಲ್ಲಿ ಹೊಚ್ಚಹೊಸ ಸಾಹಸ, ಮೊಟ್ಟ ಮೊದಲ ಸಾಹಸ! ಅವರ ಹಾಡುಗಾರಿಕೆಯು ಕವನಗಳನ್ನು
ಅರ್ಥೈಸಿಕೊಳ್ಳಲು ತುಂಬ ಅನುಕೂಲವಾಗಿದೆ. ಇದು ತಮಗೆಲ್ಲರಿಗೂ ಮೆಚ್ಚುಗೆಯಾಗುವುದೆನ್ನುವ ವಿಶ್ವಾಸ
ನನಗಿದೆ.
ಮಾಧವ ಅಜ್ಜಂಪುರರು ಈ ಕೃತಿಯ ಮೊದಲಲ್ಲಿ ಬೇಂದ್ರೆಯವರಿಗೆ ಒಂದು ನುಡಿನಮನವನ್ನು ಅರ್ಪಿಸಿದ್ದಾರೆ. (To Bendre Ajja—In Gratitude) ಹನ್ನೆರಡು ನುಡಿಗಳ ಈ ಇಂಗ್ಲಿಶ್ ಚೌಪದಿಯ ಕೊನೆಯ ಸಾಲು ಓರ್ವ ಕವಿಯ ಹಾಗು ಅವನ ಕಾವ್ಯದ ಸಾರ್ಥಕ್ಯವನ್ನು ಬಿಚ್ಚಿಡುತ್ತದೆ. ಬೇಂದ್ರೆಯವರಿಗೆ ‘ಅಜ್ಜಾ’ ಎಂದು ಸಂಬೋಧಿಸುವ ಈ ಕವನದ ಕೊನೆಯ ಸಾಲು ಹಿಗಿದೆ:
‘I sat close by and listened---and sang in
celebration’.
ನೋಡಿ,
ಬೇಂದ್ರೆಯವರ ಕಾವ್ಯವು ರಸಿಕನನ್ನು ಸ್ಫೂರ್ತಿಸುವ ಬಗೆ ಎಂದರೆ ಹೀಗೆ: ರಸಿಕನಲ್ಲೂ ಸಹ ‘ಹಾಡು’
ಹುಟ್ಟಬೇಕು! ನಿಜ ಹೇಳಬೇಕೆಂದರೆ, ಇದು ಯಾವುದೇ
ಕವಿಗೆ ಹಾಗು ಯಾವುದೇ ರಸಿಕನಿಗೆ ಅನ್ವಯಿಸುವಂತಹ ಮಾತು. ಮಾಧವ ಅಜ್ಜಂಪುರರು ಈ ಸಾಲನ್ನು
ಬರೆದಿರುವರೆಂದರೆ, ಇದು ಬೇಂದ್ರೆಯವರ ಕಾವ್ಯದ ಸಾರ್ಥಕ್ಯವನ್ನು ಹಾಗು ಮಾಧವ ಅಜ್ಜಂಪುರರಲ್ಲಿ
ಬೇಂದ್ರೆಯವರ ಕಾವ್ಯಾನುಭವದ ಸಾರ್ಥಕ್ಯವನ್ನು ಹಾಗು ಸ್ಫೂರ್ತ ಆನಂದವನ್ನು ತೋರುತ್ತದೆ. ಬೇಂದ್ರೆಯವರಲ್ಲಿ
ಕಾವ್ಯ ಹುಟ್ಟಿದಂತೆಯೇ ಮಾಧವ ಅಜ್ಜಂಪುರರಲ್ಲಿಯೂ ಕವನವು ಸ್ಫೂರ್ತಿಸಿದೆ. (To Bendre Ajja—In Gratitude).
ಬೇಂದ್ರೆಯವರ ಕನ್ನಡ ಕವನಗಳನ್ನು ಈಗಾಗಲೇ ಓದಿದವರೂ ಸಹ ಈ ಇಂಗ್ಲಿಶ್ ಭಾಷಾಂತರವನ್ನು ಪ್ರಿತಿಯಿಂದ ಓದಿ ಆನಂದಪಡಬಹುದು. ಹೆಚ್ಚಿನ ವಿವರಗಳಿಗಾಗಿ ಮಾಧವ ಅಜ್ಜಂಪುರರನ್ನು ಈ ಕೊಂಡಿಯಲ್ಲಿ ಸಂಪರ್ಕಿಸಬಹುದು:mk.ajjampur@gmail.com
5 comments:
ಬೇಂದ್ರೆಯವರ ಕಾವ್ಯವೆಂಬುದು ಒಂದು ಮಹಾಸಾಗರ, ಈ ಸಿಂಧುವಿನಿಂದ ಎತ್ತಿಕೊಂಡ ಕವಿತೆಗಳನ್ನು ಇಂಗ್ಲೀಷಿಗೆ ತಂದಿರುವ ಮಾಧವ ಅಜ್ಜಂಪುರ ಅವರ ಸಾಧನೆ ನಿಜಕ್ಕೂ ಅನನ್ಯ. ಇದಕ್ಕೆ ತಮ್ಮ ಮನೋಜ್ಞ ಅವಲೋಕನ ನಮ್ಮಂಥ ಕಿರು ಓದುಗರಿಗೆ ರಸದೂಟವೇ ಹೌದು. ಮಾಧವ ಅಜ್ಜಂಪುರ ಅವರಿಗೂ ತಮಗೂ ತುಂಬುಮನದ ಧನ್ಯವಾದಗಳು ಸರ್.
ಧನ್ಯವಾದಗಳು, ಮೇಡಮ್! ಬೇಂದ್ರೆಯವರ ಕವನಗಳನ್ನು, ವಿಮರ್ಶೆಗಳನ್ನು, ಅನುವಾದಗಳನ್ನು ಏನೇನೆಲ್ಲ ಓದಿದರೂ ಅದು ಸುಖಕರವಾಗಿಯೇ ಇರುತ್ತದೆ.
ವರಕವಿ ದ ರಾ ಬೇಂದ್ರೆ ನನ್ನ ತಂದೆಯವರಿಗೆ ವಿಕ್ಟೋರಿಯಾ
ಹೈಸ್ಕೂಲಿನಲ್ಲಿ ಗುರುಗಳಾಗಿದ್ದರು. ಎಲ್ಲರಿಗೂ ಬೇಂದ್ರೆ "ಮಾಸ್ತರು" ಆದ ಅವರು ಇಂಗ್ಲಿಷ್, ಕನ್ನಡ, ಮರಾಠಿ, ಸಂಸ್ಕೃತಗಳ "ಮಾಸ್ಟರ್"ರೇ
ಆಗಿದ್ದರು. ಅವರು ಇಂಗ್ಲಿಷ್ ನಲ್ಲಿ ಕವನ ರಚಿಸಿದ್ದು ಆಶ್ಚರ್ಯವೇನೂ ಅಲ್ಲ. 🙏
ಹೌದು, ವಸಂತ, ಬೇಂದ್ರೆಯವರು ತಮ್ಮ ತಾರುಣ್ಯದಲ್ಲಿ (ಕಾಲೇಜಿನ ದಿನಗಳಲ್ಲಿ) ಇಂಗ್ಲಿಶ್ ಕವನವನ್ನು ರಚಿಸಿದಂತಿದೆ. ಇನ್ನು ಮರಾಠಿಯಲ್ಲೂ ಸಹ ಅವರು ಕವನವನ್ನು ರಚಿಸಿದ್ದಾರೆ. ಬೇಂದ್ರೆಯರಂತಹ ದೊಡ್ಡ ಮನುಷ್ಯರು ನಿಮ್ಮ ತಂದೆಯವರ ಗುರುಗಳಾಗಿದ್ದದ್ದು ನಿಮ್ಮ ತಂದೆಯವರ ಆದೃಷ್ಟವೆಂದು ನಾನು ಭಾವಿಸುತ್ತೇನೆ.
Sri Bendre wrote English poems in his college days under pen name Ben Ramson His professor who was an Englishman advised him to write in his own language
Post a Comment