Saturday, April 27, 2024

ಭಾಷೆ ಎನ್ನುವುದು ಯಂತ್ರವೂ ಹೌದು, ಮಂತ್ರವೂ ಹೌದು.

ಸಾವಿರಾರು ವರ್ಷಗಳ ಹಿಂದೆ ನಮ್ಮ ಪೂರ್ವಜರೆಲ್ಲ ಕಾಡಾಡಿಗಳಾಗಿದ್ದರು. ಅವರು ಸಣ್ಣ ಸಣ್ಣ ಗುಂಪುಗಳಲ್ಲಿ ಬೇಟೆಗಾಗಿ ಸಂಚರಿಸುವಾಗ, ಅವರಿಗೆ ತಮ್ಮ ಸನಿಹದಲ್ಲಿಯೇ ‘ಹುಲಿ’ ಇದೆ ಎನ್ನುವ ಸುಳಿವು ಸಿಕ್ಕಿತು ಎಂದಿಟ್ಟುಕೊಳ್ಳಿ. ಒಬ್ಬರನ್ನೊಬ್ಬರು ಎಚ್ಚರಿಸಬೇಕೆಂದರೆ, ಈ ಗುಂಪುಗಳಲ್ಲಿ ಇನ್ನೂ ಭಾಷೆಯ ಬೆಳವಣಿಗೆಯಾಗಿಲ್ಲ. ಆದುದರಿಂದ ಅವರು ಹ್ರಸ್ವಧ್ವನಿಗಳನ್ನು ಉಚ್ಚರಿಸುತ್ತ, ‘ಪುಲ್, ಪುಲ್’ ಎಂದು ಅಂದಿರಬಹುದು. ಈ ಪುಲ್ ಎನ್ನುವ ಪದವೇ ಮುಂದೆ ಪುಲಿಯಾಗಿ, ಬಳಿಕ ಹುಲಿಯಾಗಿ ಮಾರ್ಪಟ್ಟಿರಬಹುದು! ಒಂದೊಂದೇ ಪದಗಳು ಈ ರೀತಿಯಾಗಿ ಬೆಳೆದು, ವಾಕ್ಯಗಳು ಸೃಷ್ಟಿಯಾಗಿ, ಭಾಷೆ ಬೆಳೆದಿರಬಹುದು! ಇದು ಜೋಕ್ ಅಲ್ಲ, ಒಂದು ಸಂಭಾವ್ಯತೆ. ಆದರೆ, ನಾನು ಹೇಳಬಯಸುವ ವಿಷಯ ಬೇರೆಯದೇ ಆಗಿದೆ:

 

ಕನ್ನಡದ ಕಥಾಬ್ರಹ್ಮ, ಜ್ಞಾನಪೀಠಪ್ರಶಸ್ತಿವಿಜೇತ ಮಾಸ್ತಿ ವೆಂಕಟೇಶ ಅಯ್ಯಂಗಾರರಿಗೆ ಸಂಸ್ಕೃತ ಪಂಡಿತರೊಬ್ಬರು ಒಮ್ಮೆ ಹೀಗೆ ಹೇಳಿದರು: `ಅಲ್ಲಯ್ಯ, ಯಾವುದೇ ಭಾಷೆಯ ಪದವಾಗಲಿ, ಅದು ಭಾವವನ್ನು ಸಮರ್ಥವಾಗಿ ವ್ಯಕ್ತಗೊಳಿಸಬೇಕು. ಈಗ ನೋಡಿ, ಕನ್ನಡದಲ್ಲಿ ನೀವು ‘ಹುಲಿ’ ಎನ್ನುತ್ತೀರಿ. ಹೀಗೆ ಅಂದಾಗ, ನಿಮಗೆ ಹುಲಿಯ ಭೀಕರತೆಯ ಅನುಭವ ಆಗುವುದೆ? ಆದರೆ, ಸಂಸ್ಕೃತದಲ್ಲಿ ‘ವ್ಯಾಘ್ರ’ ಎನ್ನುವ ಉಗ್ರ ಪದವಿದೆ. ಹೌದಲ್ಲವೆ?’

 

ಈ ಮಾತಿಗೆ ಮಾಸ್ತಿ ವೆಂಕಟೇಶ ಅಯ್ಯಂಗಾರರ ಉತ್ತರ ಹೀಗಿತ್ತು: ಸ್ವಾಮಿ, ಇರುವೆಯಂತಹ ಸಣ್ಣ ಪ್ರಾಣಿಗೆ ಕನ್ನಡದಲ್ಲಿ ಇರುವೆ ಎನ್ನುವ ಸಣ್ಣ ಪದವೇ ಇದೆ. ಸಂಸ್ಕೃತದಲ್ಲಿ ಇದಕ್ಕೆ ‘ಪಿಪೀಲಿಕಾ’ ಎನ್ನುವ ದೀರ್ಘ ಪದವನ್ನು ಬಳಸುತ್ತಾರಲ್ಲ! ಇದಕ್ಕೆ ಏನು ಹೇಳುತ್ತೀರಿ?’ ಸಂಸ್ಕೃತದ  ಅಭಿಮಾನಿ ಪಂಡಿತರು ಬಾಯಿ ಮುಚ್ಚಿಕೊಂಡು ಕೂತರು!

 

ಮಾನವನ ಮನಸ್ಸಿನಲ್ಲಿ ಮೊದಲು ಹುಟ್ಟುವುದು ಭಾವ, ಬಳಿಕ ಅದಕ್ಕೆ ತಕ್ಕಂತಹ ಒಂದು ಪದ ಹುಟ್ಟುತ್ತದೆ. ಕನ್ನಡಿಗರಿಗೆ ಹುಲಿಯನ್ನು ನೋಡಿದಾಗ ಏನೂ ಭೀತಿಯಾಗುತ್ತಿರಲಿಕ್ಕಿಲ್ಲ. (ಈ ಮಾತಿಗೆ ನಮ್ಮ ‘ಸಳ’ನೇ ಸಾಕ್ಷಿಯಾಗಿದ್ದಾನೆ.) ಅದಕ್ಕೇ ಆ ಪ್ರಾಣಿಯನ್ನು ಅವರು ಸಹಜವಾಗಿ ‘ಹುಲಿ’ ಎಂದು ಬಿಟ್ಟರು. ಆದರೆ ಭಯಭೀತರಾದ ಸಂಸ್ಕೃತ ಪಂಡಿತರು ಅದೇ ಪ್ರಾಣಿಯನ್ನು ‘ವ್ಯಾಘ್ರ’ ಎಂದು ಕರೆದಿದ್ದರಲ್ಲಿ ಆಶ್ಚರ್ಯವಿಲ್ಲ! 

 

ಸಂಸ್ಕೃತದಲ್ಲಿ  ಸಹ ಭಾವವನ್ನು ವ್ಯಕ್ತ ಮಾಡದಂತಹ ಅನೇಕ ಪದಗಳಿದ್ದು, ನಮ್ಮ ಕನ್ನಡಿಗರು, ಅಂತಹ ಪದಗಳನ್ನು ‘ತಿದ್ದಿ’ಕೊಂಡಿದ್ದಾರೆ. ಸಂಸ್ಕೃತದಲ್ಲಿ ಅಲ್ಪಪ್ರಾಣ ಪದಗಳಿಲ್ಲ, ಇರುವದೆಲ್ಲವೂ ಮಹಾಪ್ರಾಣ ಪದಗಳೇ ಎನ್ನುವ ಭ್ರಮೆ ನಮ್ಮ ಕನ್ನಡಿಗರಿಗೆ ಇದೆ. ಹೀಗಾಗಿ ‘ಗರ್ಜನೆ’; ಎನ್ನುವ ಸಂಸ್ಕೃತ ಪದವನ್ನು ಕನ್ನಡಿಗರು ‘ಘರ್ಜನೆ’ ಎಂದು ತಿದ್ದಿಕೊಂಡಿದ್ದಾರೆ. ‘ಕ್ರೋಡೀಕರಣ’ ಪದವನ್ನು ‘ಕ್ರೋಢೀಕರಣ’ ಎಂದು ಬದಲಾಯಿಸಿಕೊಂಡಿದ್ದಾರೆ. ಇನ್ನು, ಉಚ್ಚ, ಉಚ್ಚಾರ, ಉಚ್ಚಾಟನೆ ಎನ್ನುವ ಪದಗಳಂತೂ ಉಚ್ಛ, ಉಚ್ಛಾರ, ಉಚ್ಛಾಟನೆ ಎಂದು upgraded ಆಗಿವೆ! ಭಲೇ ಕನ್ನಡಿಗ! ಅಥವಾ ಈ ತರಹದ ತಿದ್ದುವಿಕೆಯನ್ನು ಕನ್ನಡಿಗರ ಜಾಯಮಾನ ಎನ್ನೋಣವೇ!

 

ಮೈಸೂರು ಸಂಸ್ಥಾನವು ಬ್ರಿಟಿಶರ ಸುಪರ್ದಿಯಲ್ಲಿ ಇದ್ದಾಗ, ತಮಿಳುನಾಡಿನ ಅನೇಕ ಸುಶಿಕ್ಷಿತ ವ್ಯಕ್ತಿಗಳು ಮೈಸೂರಿನಲ್ಲಿ ಸರಕಾರಿ ಕೆಲಸದಲ್ಲಿ ಇರುತ್ತಿದ್ದರು. ತಮಿಳಿನಲ್ಲಿ ಅಂಕಿಗಳಿಗೆ ಸಂಕೇತಗಳಿಲ್ಲ. ಹೀಗಾಗಿ ಅವರು ಇಂಗ್ಲಿಶ್ ಅಂಕಿಗಳನ್ನೇ ಬಳಸುತ್ತಿದ್ದರು. ಕನ್ನಡದಲ್ಲಿ ಅಂಕಿಗಳಿಗೆ ಸಂಕೇತಗಳು ಇದ್ದರೂ ಸಹ, ನಾವು ಪ್ರಭುಗಳನ್ನು ಅನುಸರಿಸಿ, ಇಂಗ್ಲಿಶ್ ಅಂಕಿಗಳನ್ನೇ ಬಳಸತೊಡಗಿದೆವು. ಹೀಗಾಗಿ, ಕನ್ನಡದಲ್ಲಿ ೧, ೨, ೩,೪........ಗಳ ಬದಲಾಗಿ, 1,2,3,4.......ರೂಢವಾದವು. ಕರ್ನಾಟಕ ಏಕೀಕರಣವಾಗಿ ೬೮ ವರ್ಷಗಳ ನಂತರವೂ ಸಹ, ನಾವು ಈ ರೂಢಿಯ ಗುಲಾಮರೇ ಆಗಿ ಉಳಿದಿದ್ದೇವೆ!


ಕನ್ನಡಿಗರು ಮರೆತು ಬಿಟ್ಟ ಮಾತು ಏನೆಂದರೆ:

ಭಾಷೆ ಎನ್ನುವುದು ಯಂತ್ರವಷ್ಟೇ ಅಲ್ಲ, ಮಂತ್ರವೂ ಹೌದು!

6 comments:

Badarinath Palavalli said...

ಅತ್ಯುತ್ತಮ ಲೇಖನ ಸಾರ್.
ಭಾಷೆ ರೂಪಗೊಂಡ ಪರಿಯನ್ನು ಸರಳವಾಗಿ ವಿವರಿಸಿದ್ದೀರಿ.
ಇತರ ಭಾಷೆಯ ಬಳಕೆಗೆ ಉಪಯುಕ್ತವಾದ ಪದಗಳನ್ನು ಸುಲಭವಾಗಿ ಸೇರಿಸಿಕೊಳ್ಳುವುದು ಕನ್ನಡದ ಹಿರಿಮೆ.

sunaath said...

ಧನ್ಯವಾದಗಳು, ಬದರಿಯವರೆ. ನನ್ನ ಭಾಷಾಶಾಸ್ತ್ರದ ತಿಳಿವು ಸಣ್ಣದು. ತಿಳಿದಷ್ಟನ್ನು ಬರೆದಿದ್ದೇನೆ!

Srikanth Manjunath said...

ಗುರುಗಳೇ ಸಾಕಷ್ಟು ವರ್ಷಗಳಾದ ಮೇಲೆ ನಿಮ್ಮ ಅಂಗಳಕ್ಕೆ ಬರುತ್ತಿದ್ದೇನೆ.. ದಯವಿಟ್ಟು ಕ್ಷಮಿಸಿ

ತಟ್ಟನೆ ಫೇಸ್ಬುಕ್ ನಿಮ್ಮ ಅಂಕಣ ತೋರಿದಾಗ ಕುತೂಹಲಭರಿತನಾದೆ.. ಒಳಕ್ಕೆ ಬಂದೆ.. ವಾಹ್ ಕರುನಾಡ ಭಾಷೆಯ ಬಗ್ಗೆ ಸೊಗಸಾದ ಬರಹ.. ಪ್ರಾಯಶಃ ಇದಕ್ಕಾಗಿಯೇ ಒಂದು ಭರ್ಜರಿ ಎಂಟ್ರಿಗೆ ಕಾಯುತ್ತಿದ್ದೆ ಅನಿಸಿದೆ..

ಸೊಗಸಾಗಿದೆ.. ಲಹರಿ. ಮತ್ತು ತರ್ಕಬದ್ಧವಾದ ವಿಶ್ಲೇಷಣೆ.. ಭಾಷೆಯ ಉಗಮ, ಹರಿವು, ಅರಿವು ಎಲ್ಲವನ್ನೂ ಸಮಗ್ರವಾಗಿ ಒಂದು ಪುಟ್ಟ ಲೇಖನವಾಗಿ ಹೊರಹೊಮ್ಮಿಸುವಲ್ಲಿನ ನಿಮ್ಮ ಭಾಷೆಯ ಹಿಡಿತಕ್ಕೆ ಪ್ರೌಢಿಮೆಗೆ ಒಂದು ನಮಸ್ಕಾರಗಳು

ಸೂಪರ್ ಗುರುಗಳೇ

sunaath said...

ಧನ್ಯವಾದಗಳು, ಶ್ರೀಕಾಂತರೆ. ನಿಮ್ಮ ಪ್ರತಿಕ್ರಿಯೆಯು ನನ್ನಲ್ಲಿ ಖುಶಿಯನ್ನು ಹುಟ್ಟಿಸಿದೆ!

prabhamani nagaraja said...

ನಮಸ್ತೆ ಸರ್🙏 ಭಾಷೆಯ ಬಗ್ಗೆ ಉತ್ತಮ ಮಾಹಿತಿಯನ್ನು ನೀಡುವ ಉತ್ತಮ ಲೇಖನ 👌🌼

sunaath said...

ನಮಸ್ತೆ ಮೇಡಮ್. ನಿಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು.