Tuesday, May 6, 2008

ಶಂ. ಬಾ. ಜೋಶಿ

ಶಂ. ಬಾ. ಜೋಶಿಯವರು ಕರ್ನಾಟಕದ ಅದ್ವಿತೀಯ ಸಂಶೋಧಕರು ಹಾಗು ಸಾಂಸ್ಕೃತಿಕ ಚಿಂತಕರು.

ಶಂಕರ ಬಾಳದೀಕ್ಷಿತ ಜೋಶಿಯವರು ಬೆಳಗಾವಿ ಜಿಲ್ಲೆಯಲ್ಲಿಯ ಸವದತ್ತಿ ತಾಲೂಕಿನ ಗುರ್ಲಹೊಸೂರು ಗ್ರಾಮದಲ್ಲಿ (-- ಮಲಪ್ರಭಾ ನದಿಗೆ ಅಡ್ಡಲಾಗಿ ಕಟ್ಟಲಾದ ‘ರೇಣುಕಾಸಾಗರ’ ಆಣೆಕಟ್ಟಿನ ಹಿನ್ನೀರಿನಲ್ಲಿ ಈ ಗ್ರಾಮ ಈಗ ಮುಳುಗಿ ಹೋಗಿದೆ.--) ಜನಿಸಿದರು.

ಸಂಶೋಧನೆ ಹಾಗು ಸಾಂಸ್ಕೃತಿಕ ಚಿಂತನೆಯ ಕ್ಷೇತ್ರಗಳನ್ನು ತಮ್ಮ ಪ್ರತಿಭೆಯಿಂದ ಬೆಳಗಿದ ಶಂ.ಬಾ.ಜೋಶಿ ಹಾಗು ವರಕವಿ ದ.ರಾ. ಬೇಂದ್ರೆ ಇವರೀರ್ವರೂ ೧೮೯೬ರ ಜನೆವರಿ ತಿಂಗಳಿನಲ್ಲಿಯೇ ಜನಿಸಿದ್ದು ಒಂದು ಯೋಗಾಯೋಗ. ಶಂ.ಬಾ. ಜೋಶಿಯವರು ಜನೆವರಿ ೪ರಂದು ಜನಿಸಿದರೆ, ಜನೆವರಿ ೩೧ರಂದು ಜನಿಸಿದ ದ.ರಾ. ಬೇಂದ್ರೆ ೨೭ದಿನಗಳಿಂದ ಚಿಕ್ಕವರು. ರಾಷ್ಟ್ರೀಯ ಮನೋಭಾವದ ವ್ಹಿಕ್ಟೋರಿಯಾ ಹಾಯ್ ಸ್ಕೂಲಿನಲ್ಲಿಯೇ (--ಆನಂತರದ ‘ವಿದ್ಯಾರಣ್ಯ ಹಾಯ್ ಸ್ಕೂಲು’--) ಇಬ್ಬರೂ ಸೇವೆ ಸಲ್ಲಿಸಿದ್ದರು. ಇಬ್ಬರೂ ಬಡತನದಲ್ಲಿ ಬೆಂದವರು. ಇಲ್ಲಿಗೇ ಇವರೀರ್ವರ ಸಾಮ್ಯ ಮುಗಿದಂತೆ. ಉಳಿದದ್ದೆಲ್ಲ ವೈಷಮ್ಯದ ಕತೆ. ತಮ್ಮ ಕೊನೆಗಾಲದವರೆಗೂ ಈ ದಿಗ್ಗಜಗಳು ಧಾರವಾಡದ ನೆಲದಲ್ಲಿ ದೀರ್ಘ ಹೋರಾಟವನ್ನೇ ನಡೆಯಿಸಿದವು. ಬೇಂದ್ರೆಯವರ ಕೊನೆಯ ದಿನಗಳಲ್ಲಿ, ಶಂ.ಬಾ., ಬೇಂದ್ರೆಯವರನ್ನು ಭೆಟ್ಟಿಯಾದರು. ವೈಚಾರಿಕ ಕುರುಕ್ಷೇತ್ರದಲ್ಲಿ ಗದಾಯುದ್ಧವನ್ನು ನಡೆಸಿದ ಈ ಮಲ್ಲರು ಕೊನೆಗಾಲದಲ್ಲಿ ಶಾಂತಿಮಂತ್ರವನ್ನು ಪಠಿಸಿದರು.

ಶಂ. ಬಾ. ಜೋಶಿಯವರು ಗುರ್ಲಹೊಸೂರಿನಲ್ಲಿಯೇ ಕನ್ನಡ ಏಳನೆಯ ಇಯತ್ತೆಯವರೆಗೆ ಶಾಲೆ ಕಲಿತರು. ತಂದೆಯಿಂದ ಅವರಿಗೆ ವೇದಶಿಕ್ಷಣ ದೊರೆತಿತ್ತು. ತಾಯಿಯಿಂದ ಸಂಗೀತಜ್ಞಾನವನ್ನು ಪಡೆದಿದ್ದರು. ೧೯೧೪ರಲ್ಲಿ ಮಲಪ್ರಭಾ ನದಿಗೆ ಬಂದ ಮಹಾಪೂರದಿಂದಾಗಿ ಇಡೀ ಹಳ್ಳಿಯೇ ಜಲಮಯವಾಗಿ ನಾಶವಾಯಿತು. ಚಿಕ್ಕಂದಿನಲ್ಲಿಯೆ ತಂದೆಯನ್ನು ಕಳೆದುಕೊಂಡಿದ್ದ ಅವರ ಮನೆಯವರೆಲ್ಲ ಪುಣೆಗೆ ಹೋದರು. ಅಲ್ಲಿ ಇವರ ಅಣ್ಣ ಭಾನು ದೀಕ್ಷಿತ ಜೋಶಿಯವರು ಪೌರೋಹಿತ್ಯ ಮಾಡುತ್ತಿದ್ದರು. ಇವರೂ ಅಲ್ಲಿಯೇ ಪೌರೋಹಿತ್ಯದಲ್ಲಿ ಮುಂದುವರಿಯಬಹುದಾಗಿತ್ತು. ಆದರೆ ಧಾರವಾಡಕ್ಕೆ ಮರಳಿದ ಜೋಶಿಯವರು ಶಿಕ್ಷಕರ ಟ್ರೇನಿಂಗ ಕಾಲೇಜ ಸೇರಿದರು. ೧೯೨೦ರಲ್ಲಿ ಚಿಕ್ಕೋಡಿಯಲ್ಲಿ ಶಿಕ್ಷಕವೃತ್ತಿ ಪ್ರಾರಂಭಿಸಿದರು. ಮಹಾತ್ಮಾ ಗಾಂಧೀಜಿಯವರು ಆ ಸಮಯದಲ್ಲಿ ಕರ್ನಾಟಕಕ್ಕೆ ಬಂದಿದ್ದರು. ಅವರೊಡನೆ ಶಂ.ಬಾ. ಮಾಡಿದ ಸಂಚಾರದ ಫಲವಾಗಿ ಉಗರಗೋಳವೆಂಬ ಕುಗ್ರಾಮಕ್ಕೆ ವರ್ಗಾವಣೆಯಾಯಿತು. ಅಲ್ಲಿ ಕೆಲ ಕಾಲ ಕಳೆದ ಶಂ.ಬಾ. ಕೆಲಸಕ್ಕೆ ರಾಜೀನಾಮೆ ಕೊಟ್ಟು, ಧಾರವಾಡಕ್ಕೆ ಮರಳಿದರು. ‘ಕರ್ನಾಟಕ ವೃತ್ತ’, ‘ಧನಂಜಯ’, ‘ಕರ್ಮವೀರ’ ಮೊದಲಾದ ರಾಷ್ಟ್ರೀಯ ಪತ್ರಿಕೆಗಳಲ್ಲಿ ಕೆಲಕಾಲ ಲೇಖನವ್ಯವಸಾಯ ಮಾಡಿದರು. ೧೯೨೬-೨೭ರ ಅವಧಿಯಲ್ಲಿ ಕರ್ನಾಟಕ ಹಾಯ್ ಸ್ಕೂಲಿನಲ್ಲಿ ಶಿಕ್ಷಕರಾಗಿ ದುಡಿದರು. ೧೯೨೮ರಿಂದ ೧೯೪೬ರವರೆಗೆ ವ್ಹಿಕ್ಟೋರಿಯಾ ಹಾಯ್ ಸ್ಕೂಲಿನಲ್ಲಿ
(--ಆಬಳಿಕ ಅದು ‘ವಿದ್ಯಾರಣ್ಯ ಹಾಯ್ ಸ್ಕೂಲ್ ಆಯಿತು.’--) ಸೇವೆ ಸಲ್ಲಿಸಿ ನಿವೃತ್ತರಾದರು.

ಶಂ.ಬಾ. ಅವರು ಶ್ರೇಷ್ಠ ಶಿಕ್ಷಕರೂ ಆಗಿದ್ದರು. ತಮ್ಮ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗಾಗಿ ಅವರು ಹೂಡಿಕೊಂಡ ಯೋಜನೆಗಳು ಅನೇಕ. ತಾವೇ ಬಡತನದಲ್ಲಿದ್ದಾಗಲೂ ಸಹ, ತಮ್ಮ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನು ಸಹ ಅವರು ನೀಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ವಿದ್ಯಾರ್ಥಿಗಳಲ್ಲಿ ಸ್ವತಂತ್ರ ವೈಚಾರಿಕತೆಯನ್ನು ಬೆಳೆಯಿಸುವದಕ್ಕೆ ಅವರು ಮಹತ್ವ ನೀಡುತ್ತಿದ್ದರು. ಅವರ ವಿದ್ಯಾರ್ಥಿಯಾಗಿದ್ದವರು (ಶ್ರೀ ವ್ಹಿ. ಬಿ. ಕುಲಕರ್ಣಿ) ಸಮಾರಂಭವೊಂದರಲ್ಲಿ ಅವರ ಕಾಲು ಮುಟ್ಟಿ ನಮಸ್ಕಾರ ಮಾಡಿದರಂತೆ. ತಕ್ಷಣವೇ ಶಂ.ಬಾ. ಸಿಡಿನುಡಿದರು : “ಇನ್ನೂ ಎಷ್ಟು ದಿವಸ ಗುಲಾಮಗಿರಿಯೊಳಗ ಇರಾವಪಾ ನೀ?”

ಶಂ. ಬಾ. ಜೋಶಿಯವರ ಹೆಂಡತಿ ಪಾರ್ವತಿ. ಇವರಿಗೆ ಮೂವರು ಮಕ್ಕಳು; ಮೊದಲನೆಯ ಹಾಗು ಕೊನೆಯ ಮಕ್ಕಳು ಗಂಡುಮಕ್ಕಳು, ಹೆಣ್ಣುಮಗಳು ನಡುವಿನವಳು. ಗಂಡು ಮಕ್ಕಳಿಬ್ಬರು ವಿಜ್ಞಾನದಲ್ಲಿ ಡಾಕ್ಟರೇಟ್ ಪದವಿಧರರು. ಶಂ.ಬಾ. ಜೋಶಿ ಕೇವಲ ೭ನೆಯ ಇಯತ್ತೆಯವರೆಗೆ ಕಲಿತು, ಶಿಕ್ಷಕರ ತರಬೇತಿ ಪಡೆದವರು. ತಮ್ಮ ೨೪ನೆಯ ವಯಸ್ಸಿನಲ್ಲಿ ಸ್ವಂತ ಪ್ರಯತ್ನದಿಂದ ಇಂಗ್ಲಿಶ್ ಕಲಿತರು.

ಶಂ. ಬಾ. ಜೋಶಿಯವರು ೨೮ ಸಪ್ಟಂಬರ ೧೯೯೧ರಂದು ನಿಧನರಾದರು. ಮಾರನೆಯ ದಿನ ಅವರ ಹೆಂಡತಿ ಶಂ.ಬಾ.ರನ್ನು ಹಿಂಬಾಲಿಸಿ ನಡೆದರು.
**********************************************

ಶಂ. ಬಾ. ಜೋಶಿಯವರ ಸಾಹಿತ್ಯ ಹಾಗು ಸಂಶೋಧನೆ:

ರಾಷ್ಟ್ರೀಯ ಮನೋಭಾವದ ಶಂ.ಬಾ. ಮೊದಲಲ್ಲಿ ಲೋಕಮಾನ್ಯ ತಿಲಕ ಹಾಗೂ ಅರವಿಂದ ಮಹರ್ಷಿಗಳ ಪ್ರಭಾವಕ್ಕೆ ಒಳಗಾದವರು. ಅವರ ಮೊದಲ ಕೃತಿ, “ ಮಹರ್ಷಿ ಅರವಿಂದ ಘೋಷ ಇವರ ಸಂಕ್ಷಿಪ್ತ ಚರಿತ್ರವು”, ೧೯೨೧ರಲ್ಲಿ ಪ್ರಕಟವಾಯಿತು. ೧೯೩೨ರಲ್ಲಿ “ಟಿಳಕ ಕಥಾಮೃತಸಾರ ” ಹೊರಬಂದಿತು. (ತಮ್ಮ ವಿಚಾರಗಳ ಮಾರ್ಪಾಟಿನೊಂದಿಗೆ ಶಂ.ಬಾ.ರವರು ಅರವಿಂದರನ್ನು ಟೀಕಿಸಿದ್ದಾರೆ. ಶಂ.ಬಾ. ಅವರ ನಿಷ್ಠೆ ವ್ಯಕ್ತಿಗಲ್ಲ , ತಾವು ಕಂಡ ಸತ್ಯಕ್ಕೆ ಮಾತ್ರ.)

೧೯೧೭ರಲ್ಲಿ ಕರ್ನಾಟಕ ಕುಲಪುರೋಹಿತರೆಂದು ಹೆಸರಾಂತ ಆಲೂರು ವೆಂಕಟರಾಯರ ಕೃತಿ “ ಕರ್ನಾಟಕದ ಗತವೈಭವ ” ಶಂ.ಬಾ.ರನ್ನು ತೀವ್ರ ಚಿಂತನೆಗೆ ಈಡುಮಾಡಿತು. ‘ಕಾವೇರಿಯಿಂದಮಾ ಗೋದಾವರಿವರೆಗಿರ್ದ’ ಈ ನಾಡು ಈಗೇಕೆ ಕುಗ್ಗಿ ಹೋಗಿದೆ ಎನ್ನುವ ಪ್ರಶ್ನೆ ಅವರನ್ನು ಸಂಶೋಧನಾ ಕ್ಷೇತ್ರಕ್ಕೆ ಎಳೆಯಿತು. ಅಲ್ಲಿಯವರೆಗೂ ಪ್ರಾಚ್ಯ ಸಂಶೋಧನೆ ಎಂದರೆ ಶಾಸನಗಳ , ನಾಣ್ಯಗಳ ಹಾಗು ಪ್ರವಾಸಿಕರ ಗ್ರಂಥಗಳ ಪರಿಶೀಲನೆಗೆ ಪರಿಮಿತವಾಗಿತ್ತು. ಶಂ.ಬಾ.ಜೋಶಿ, ಭಾರತದಲ್ಲಿಯೇ ಮೊದಲ ಬಾರಿಗೆ (--ಹಾಗು simultaneously in Europe--), ಭಾಷೆಯಲ್ಲಿಯ ಅಂತಃಸ್ಥ ಕುರುಹಗಳ ಮೂಲಕ, ಭಾಷೆಯಲ್ಲಿಯ ಬದಲಾವಣೆಯ ಮೂಲಕ ಇತಿಹಾಸವನ್ನು ಅರಿಯುವ ಪ್ರಯತ್ನವನ್ನು ಮಾಡಿದರು. ಇದರ ಜೊತೆಜೊತೆಗೇ ಭಾಷಾವಿಜ್ಞಾನ, ಮಾನವಶಾಸ್ತ್ರ, ವಂಶವಿಜ್ಞಾನ, ಪುರಾಣಶಾಸ್ತ್ರ ಮೊದಲಾದ ಸಂಬಂಧಿತ ಶಾಸ್ತ್ರಗಳ ತಿಳುವಳಿಕೆಯ ಅವಶ್ಯಕತೆಯನ್ನು ಅವರು ಅರಿತುಕೊಂಡರು. ಕನ್ನಾಡಿಗರ (=ಕನ್ನಡಿಗರ=ಕನ್ನರ) ಮೂಲನೆಲೆಯನ್ನು ಹುಡುಕುತ್ತ, ಭಾರತದ ಈಶಾನ್ಯ ದಿಕ್ಕನ್ನು ತಲುಪಿ ಬಂದರು. (ಇವರ ಸಂಶೋಧನಾ ಕಾರ್ಯಕ್ಕೆ ಯಾವ ಸಂಸ್ಥೆಯ ಸಹಾಯವೂ ಇರಲಿಲ್ಲವೆನ್ನುವದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.) ಮಹಾರಾಷ್ಟ್ರ, ಗುಜರಾತ ಹಾಗು ರಾಜಸ್ಥಾನಗಳ ಭಾಗವಾದ ‘ಖಾನದೇಶ’ವು ಮೂಲತಃ ಕನ್ನಡಿಗರ(=ಕನ್ನರ) ದೇಶವೆನ್ನುವದನ್ನು ಸಿದ್ಧ ಮಾಡಿದರು. ಹಿಮಾಲಯದ ಅಡಿಯಲ್ಲಿದ್ದ ಕನ್ನಡಿಗರ ಎಡೆಗಳನ್ನು ಕನ್ನಡಿಗರ ಕಣ್ಣೆದುರಿಗೆ ಹಿಡಿದರು. ಕನ್ನರ ನಾಡು ಕಂನಾಡು, ಕನ್ನರ ನುಡಿ ಕಂನುಡಿ ಎನ್ನುವದನ್ನು ತೋರಿಸಿದರು. ಇದು ಶಂ.ಬಾ.ರ ಸಂಶೋಧನಾ ಕಾರ್ಯದ ಮೊದಲ ಮಜಲು. (“ಕಣ್ಮರೆಯಾದ ಕನ್ನಡ, ಎಡೆಗಳು ಹೇಳುವ ಕಂನಾಡ ಕತೆ, ಮಹಾರಾಷ್ಟ್ರದ ಮೂಲ”)

ಇಷ್ಟೆಲ್ಲ ವಿಸ್ತಾರವಾಗಿ ಹರಡಿದ್ದ ಕಂನಾಡು ಕುಗ್ಗಿ ಹೋಗಲು ಕಾರಣವನ್ನು ಹುಡುಕುತ್ತಿದ್ದಾಗ ಅವರು ವೇದ ಹಾಗು ಪುರಾಣಗಳನ್ನು ಸಂಶೋಧಕನ ದೃಷ್ಟಿಯಿಂದ ಅಧ್ಯಯನ ಮಾಡಿದರು. ವೇದಗಳಲ್ಲಿ ನಿರ್ದಿಷ್ಟರಾದ ಜನಾಂಗಗಳ ಅಭ್ಯಾಸವನ್ನು ಅವರು ಕೈಗೆತ್ತಿಕೊಂಡರು. ಇದು ಶಂ.ಬಾ. ಅವರನ್ನು ಸಂಸ್ಕೃತಿ-ಸಂಶೋಧನೆಯ ಹಾದಿಯಲ್ಲಿ ಒಯ್ದಿತು. ಇದು ಅವರ ಸಂಶೋಧನಾ ಕಾರ್ಯದ ಎರಡನೆಯ ಮಜಲು.

ವೇದಗಳಲ್ಲಿ ನಿರ್ದಿಷ್ಟರಾದ ಅವೈದಿಕ ಜನಾಂಗಕ್ಕೆ(=ಪತ್ತಿ), ಶಂ.ಬಾರವರು ‘ಹಟ್ಟಿಕಾರ’ರೆನ್ನುವ ಹೆಸರನ್ನು ಕೊಟ್ಟರು. ಈ ಹಟ್ಟಿಕಾರರೇ ಹೇಗೆ ಕಂದಮಿಳರಾದರು , ಮತ್ತು ಪಂಚದ್ರಾವಿಡರಾದರು ಎನ್ನುವದನ್ನು ತೋರಿಸಿದರು. (“ಕರ್ಣಾಟಸಂಸ್ಕೃತಿಯ ಪೂರ್ವಪೀಠಿಕೆ”).

ವೇದಾಧ್ಯಯನ ಹಾಗೂ ಜನಾಂಗೀಯ ಅಧ್ಯಯನವು ಶಂ.ಬಾ. ಅವರನ್ನು ಸಾಂಸ್ಕೃತಿಕ ಚಿಂತನೆಗೆ ಹಚ್ಚಿತು. ಈ ಎಳೆಯನ್ನು ಹಿಡಿದುಕೊಂಡು ಹೊರಟ ಶಂ.ಬಾ. ವೇದಗಳಲ್ಲಿಯ ಚಿಂತನೆಯು ‘ಜೀವನ- ಪ್ರವೃತ್ತಿ’ಯಿಂದ ‘ಜೀವನ-ನಿವೃತ್ತಿ’ಗೆ ಬದಲಾದ ರೀತಿಯನ್ನು ಬಿಡಿಸಿ ತೋರಿಸಿದರು. ಸಮಷ್ಟಿ-ಪ್ರಜ್ಞೆಯ ಬದಲಾಗಿ ವ್ಯಷ್ಟಿ-ಮೇಲ್ಮೆಯ ತತ್ವವನ್ನು ಆಲಂಗಿಸಿಕೊಂಡ ಹಿಂದುಗಳ ಸಮಾಜವು ಹಾಳಾದ ರೀತಿಯನ್ನು ಶಂ.ಬಾ. ವಿವರಿಸಿದರು. (“ಪ್ರವಾಹಪತಿತರ ಕರ್ಮ ಹಿಂದೂ ಎಂಬ ಧರ್ಮ, ಬುಧನ ಜಾತಕ, ಬಿತ್ತಿದ್ದನ್ನು ಬೆಳಕೊ ”).

ಶಂ.ಬಾ. ಅವರು ಪುರಾಣ-ಸಂಕೇತ ಹಾಗು ಭಾಷಾ-ಸಂಕೇತಗಳನ್ನು ವಿಶ್ಲೇಷಿಸಿ ತಮ್ಮ ಪ್ರಮೇಯಗಳನ್ನು ಬರೆದಿದ್ದಾರೆ. ಅವರ ಲೇಖನಗಳೂ ಸಹ ಈ ಸಾಂಕೇತಿಕ ಭಾಷೆಯಲ್ಲಿಯೇ ಇರುವದರಿಂದ, ಅವುಗಳನ್ನು ಅನುಸರಿಸುವದು ಸುಲಭವಾಗುವದಿಲ್ಲ. ಅಷ್ಟೇ ಏನು, ಅವು ತಪ್ಪಾಗಿಯೂ ಅರ್ಥೈಸಲ್ಪಟ್ಟವೆ. “ಋಗ್ವೇದಸಾರ : ನಾಗಪ್ರತಿಮಾ ವಿಚಾರ ” ಇದು ಶಂ.ಬಾ.ರವರ ಪ್ರಖ್ಯಾತ ಸಂಶೋಧನಾ ಗ್ರಂಥ. ಋಗ್ವೇದದಲ್ಲಿಯ ಜೀವನ್ಮುಖಿ ತತ್ವಗಳು ಮೃತ್ಯುಮುಖಿ ತತ್ವವಾಗಿ ಬದಲಾಗಿದ್ದನ್ನು ಅವರು ಸಾಧಾರವಾಗಿ ತೋರಿಸಿದ್ದಾರೆ. ಭಗವದ್ಗೀತೆಯನ್ನು ಅವರು ‘ಕಣ್ಕಟ್ಟು’ ಎಂದು ಬಣ್ಣಿಸಿದ್ದಾರೆ. ವೈವಸ್ವತ ಮನುವಿನ ಧರ್ಮವು ಸ್ವಯಂಭೂ ಮನುವಿನ ಧರ್ಮವಾಗಿ ಬದಲಾಯಿತು ಎಂದು ಮರುಗಿದ್ದಾರೆ. ಈ ರೀತಿಯಾಗಿ ಅವರೂ ಸಹ ವೈದಿಕ ಸಂಕೇತಗಳನ್ನೇ ಬಳಸಿದ್ದು , ಓದುಗರಲ್ಲಿ ತಪ್ಪು ತಿಳುವಳಿಕೆಗೆ ಕಾರಣವಾಗಿದೆ. ಸತ್ಯಕ್ಕೆ ಅಂಟಿಕೊಂಡ ಈ ನಿಷ್ಠುರ ಸಂಶೋಧಕನನ್ನು ಅನೇಕರು ಪಾಷಂಡಿ ಎಂದು ತಪ್ಪಾಗಿ ತಿಳಿದಿದ್ದಾರೆ.

ಶಂ.ಬಾ. ಕೇವಲ ಶ್ರೇಷ್ಠ ಸಂಶೋಧಕರಷ್ಟೇ ಅಲ್ಲ , ನಮ್ಮ ಕಾಲದ ಶ್ರೇಷ್ಠ ಸಾಂಸ್ಕೃತಿಕ ಚಿಂತಕರೂ ಅಹುದು. ಅಂತೆಯೆ ಪಾ.ವೆಂ. ಆಚಾರ್ಯರು ಶಂ.ಬಾ. ಜೋಶಿಯವರನ್ನು ಬಣ್ಣಿಸಿದ ಬಗೆ ಅತ್ಯಂತ ಸಮಂಜಸವಾಗಿದೆ:
ಶಂ. ಬಾ. ಜೋಶಿಯವರು ಬೆಳಕಿನ ಬೆನ್ನುಹತ್ತಿದ ಸಂಶೋಧಕರು.”


ಶಂ.ಬಾ. ಕೃತಿಗಳು:
೧) ಮಹರ್ಷಿ ಅರವಿಂದ ಘೋಷ ಇವರ ಸಂಕ್ಷಿಪ್ತ ಚರಿತ್ರವು (೧೯೨೧)
೨) ಟಿಳಕ ಕಥಾಮೃತಸಾರ (೧೯೩೨)
೩) ಕಣ್ಮರೆಯಾದ ಕನ್ನಡ (೧೯೩೩)
೪) ಮಹಾರಾಷ್ಟ್ರದ ಮೂಲ (೧೯೩೪)
೫) ಕರ್ನಾಟಕದ ವೀರ ಕ್ಷತ್ರಿಯರು (೧೯೩೬)
೬) ಕಂನುಡಿಯ ಹುಟ್ಟು ಅಥವಾ ನಿರುಕ್ತ (೧೯೩೭)
೭) ಕನ್ನಡದ ನೆಲೆ (೧೯೩೯)
೮) ಶಿವರಹಸ್ಯ ಅಥವಾ ವೇದದಲ್ಲಿ ಕಾಣುವ ವೀರಶೈವ ಮತದ ಬೇರುಗಳು (೧೯೩೯)
೯) ರೂಢಿ ಹಾಗು ಭಾವಿಕ ಕಲ್ಪನೆಗಳು (೧೯೪೦)
೧೦) ದಾರಿಯ ಬುತ್ತಿ (೧೯೪೩)
೧೧) ಎದ್ದೇಳು ಕನ್ನಡಿಗಾ ಅಥವಾ ಅಸಂತೋಷವೇ ಏಳ್ಗೆಯ ಮೂಲ (೧೯೪೩)
೧೨) ಕನ್ನಡ ನುಡಿಯ ಜೀವಾಳ (೧೯೪೪)
೧೩) ಅಗ್ನಿವಿದ್ಯೆ (೧೯೪೬)
೧೪) ಎಡೆಗಳು ಹೇಳುವ ಕಂನಾಡ ಕತೆ (೧೯೪೭)
೧೫) ಕರ್ಣನ ಮೂರು ಚಿತ್ರಗಳು (೧೯೪೭)
೧೬) ಯಕ್ಷಪ್ರಶ್ನೆ ಅಥವಾ ಬರಲಿರುವ ಸಮಾಜ (೧೯೪೮)
೧೭) ಸಮಾಜ ದರ್ಶನ (೧೯೪೯)
೧೮) ಸೌಂದರ್ಯ ವಿಚಾರ (೧೯೪೯)
೧೯) ಮರಾಠೀ ಸಂಸ್ಕೃತಿ : ಕಾಹೀ ಸಮಸ್ಯಾ (೧೯೫೨)
೨೦) ಹಾಲುಮತ ದರ್ಶನ (೧೯೬೦)
೨೧) ವೈವಸ್ವತ ಮನು ಪ್ರಣೀತ ಮಾನವಧರ್ಮದ ಆಕೃತಿ (೧೯೬೭)
೨೨) ಕರ್ಣಾಟ ಸಂಸ್ಕೃತಿಯ ಪೂರ್ವಪೀಠಿಕೆ (೧೯೬೭)
೨೩) ಋಗ್ವೇದ ಸಾರ : ನಾಗಪ್ರತಿಮಾ ವಿಚಾರ (೧೯೭೧)
೨೪) ಸತ್-ತ್ಯ ಮತ್ತು ಸತ್ಯ (೧೯೭೫)
೨೫) ಭಾಷೆ ಮತ್ತು ಸಂಸ್ಕೃತಿ (೧೯೭೫)
೨೬) ಪ್ರವಾಹಪತಿತರ ಕರ್ಮ ಹಿಂದೂ ಎಂಬ ಧರ್ಮ (೧೯೭೬)
೨೭) ಶ್ರೀಮತ್ ಭಗವದ್ಗೀತೆಯಲ್ಲಿ ಹುದುಗಿರುವ ರಾಜಯೋಗದ ಸ್ವರೂಪ (೧೯೭೭)
೨೮) ಸಾಂಸ್ಕೃತಿಕ ಮೂಲದಲ್ಲಿನ ತಾತ್ವಿಕ ಚಿಂತನೆಗಳು (೧೯೭೮)
೨೯) ಬುಧನ ಜಾತಕ (೧೯೮೦)
೩೦) ಕಂನಾಡವರ ಸಂಸ್ಕೃತಿಯ ಗತಿ-ಸ್ಥಿತಿ (೧೯೮೧)
೩೧) ಬಿತ್ತಿದ್ದನ್ನು ಬೆಳಕೊ (೧೯೮೪)
೩೨) ಜೀವನ ಅರ್ಥಗ್ರಹಣ ಪದ್ಧತಿ (೧೯೮೬)
೩೩) ಸ್ಥಿತ್ಯಂತರ (೧೯೯೯)

13 comments:

ಸುಪ್ತದೀಪ್ತಿ suptadeepti said...

ಶಂ.ಬಾ.ಜೋಶಿಯಂಥ ಉನ್ನತ ವ್ಯಕ್ತಿತ್ವದ ಪರಿಚಯ ಕೊಟ್ಟಿದ್ದಕ್ಕೆ ಧನ್ಯವಾದಗಳು ಕಾಕಾ.
ಹೊಸತನದ ಶೋಧನೆಯಲ್ಲಿ ತೊಡಗಿರುವವರು, ತಮ್ಮ ಕಾಲವನ್ನೂ ಮೀರಿದ ಚಿಂತನೆಯಲ್ಲಿರುವವರು ತಮ್ಮ ಸಮಕಾಲೀನರ ನಡುವೆ "ಪಾಷಂಡಿ"ಯಾಗುವುದು ಹೊಸತೇನಲ್ಲ. ಅದನ್ನು ಕಿರೀಟಕ್ಕೊಂದು ಗರಿಯೆಂದೇ ಪರಿಗಣಿಸಬಹುದು, ಅಲ್ಲವೆ?

Anonymous said...

ಶಂಬಾ ಬಗ್ಗೆ ಇಷ್ಟೆಲ್ಲ ವಿಚಾರಗಳನ್ನೂ ಒಟ್ಟಿಗೆ ಕೊಟ್ಟಿದ್ದಕ್ಕೆ ಥ್ಯಾಂಕ್ಸ್. ಶಿಸ್ತಿನಿಂದ ವಿಸ್ತಾರವಾಗಿ ಬರೆದ ಈ ಲೇಖನವನ್ನು ಕನ್ನಡ ವಿಕಿಪೀಡಿಯಾದಲ್ಲಿ ಹಾಕುವ ಬಗ್ಗೆ ಯೋಚನೆ ಮಾಡಬೇಕೆಂದು ವಿನಂತಿ.

Anonymous said...

ಸುನಾಥರೇ ಶಂಬಾ ಜೋಶಿಯವರ ಬಗೆಗಿನ ಮಾಹಿತಿಗೆ ಧನ್ಯವಾದಗಳು. ಶಂಬಾ ಜೋಶಿ ಎಂದೇ ಪ್ರಖ್ಯಾತರಾಗಿದ್ದ ಅವರ ಪೂರ್ತಿ ಹೆಸರು ಶಂಕರ ಬಾಳದೀಕ್ಷಿತ ಜೋಶಿಯವರೆಂದು ತಿಳಿದೇ ಇರಲಿಲ್ಲ. ಹಾಗೆಯೇ ಬೇಂದ್ರೆ ಮತ್ತು ಶಂಬಾ ಅವರ ನಡುವೆ ವಿರಸವಿತ್ತೆಂದು ಕೇಳಿದ್ದೇನೆ. ನಿಜವೇ? ಏನು ಕಾರಣ? ಆ ಬಗ್ಗೆಯೂ ಸ್ವಲ್ಪ ಬರೆದಿದ್ದರೆ ಚೆನ್ನಿತ್ತು.

ಮನಸ್ವಿನಿ said...

ಶಂ.ಬಾ.ಜೋಶಿಯವರ ಬಗ್ಗೆ ಇಷ್ಟೆಲ್ಲ ಮಾಹಿತಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು.

ತೇಜಸ್ವಿನಿ ಹೆಗಡೆ said...

ಸುನಾಥರೆ,

ಶಂ.ಬಾ.ಜೋಶಿಯವರ ಹೆಸರು ಕೇಳಿ ಮಾತ್ರ ಗೊತ್ತಿತ್ತು..ಅವರ ಜೀವನ ಹಾಗೂ ಸಂಶೋಧನೆಗಳ ಕುರಿತು ಸವಿಸ್ತಾರವಾದ ಮಾಹಿತಿಯನ್ನು ಒದಗಿಸಿದ ನಿಮಗೆ ತುಂಬಾ ಧನ್ಯವಾದಗಳು.

sunaath said...

ಜ್ಯೋತಿ,
ನೀನು ಹೇಳುವದು ನಿಜ. ಸೂರ್ಯನ ಸುತ್ತಲೂ ಭೂಮಿ ತಿರುಗುತ್ತಿದೆ ಎಂದು ಹೇಳಿದ್ದಕ್ಕಾಗಿ ಗೆಲಿಲಿಯೋನೂ ಪಾಷಂಡಿಯಾಗಿದ್ದನಲ್ಲವೆ!
ಭಾರತೀಯ ಸಾಮಾಜಿಕ ಚಿಂತಕರಲ್ಲಿಯೆ ಶಂ.ಬಾ. ಅವರದು ಅಗ್ರಗಣ್ಯ ಸ್ಥಾನ.ದುರ್ದೈವದಿಂದ, ಅವರ ಹೆಸರು ಕಂನಾಡಿಗಷ್ಟೇ ಸೀಮಿತವಾಗಿದೆ.
-ಕಾಕಾ

sunaath said...

ಚಕೋರರೆ,
ಕನ್ನಡ ವಿಕಿಪೀಡಿಯಾದಲ್ಲಿ ಶಂ.ಬಾ. ಜೋಶಿಯವರ ಬಗೆಗೆ ಒಂದು ಲೇಖನವಿದೆ.ದಯವಿಟ್ಟು ನೋಡಿರಿ

sunaath said...

ತ್ರಿವೇಣಿ,
ಶಂ.ಬಾ. ಜೋಶಿ ಹಾಗು ಬೇಂದ್ರೆ ಇವರೀರ್ವರೂ ಮೊದಲಿಗೆ "ಗೆಳೆಯರ ಬಳಗ"ದ ಸದಸ್ಯರಾಗಿದ್ದರು. ಇಬ್ಬರ ವಿಚಾರಧಾರೆಗಳು ಪರಸ್ಪರ ವಿರುದ್ಧವಾಗಿದ್ದವು. ಈ ವೈಚಾರಿಕ ವೈಷಮ್ಯ ವೈಯಕ್ತಿಕ ವೈಷಮ್ಯವಾಗಿ ಬದಲಾಗಿದ್ದು ನಾಡಿನ ದುರ್ದೈವ.

ಬೇಂದ್ರೆಯವರ ಕೊನೆಗಾಲದಲ್ಲಿ, ಶಂ.ಬಾ., ಬೇಂದ್ರೆಯವರನ್ನು ಭೆಟ್ಟಿಯಾಗಿ ಸ್ನೇಹಹಸ್ತವನ್ನು ಚಾಚಿದರಷ್ಟೆ.

sunaath said...

ಮನಸ್ವಿನಿ, ತೇಜಸ್ವಿನಿ,
ಶಂ.ಬಾ.ರ ಸಂಶೋಧನೆಗಳ ಬಗೆಗೆ ನಾನು ಕೊಟ್ಟ ಮಾಹಿತಿ ಅತ್ಯಲ್ಪ. ಅವರ ವಿಚಾರಧಾರೆಯ ಹೊಳಹನ್ನು ಮಾತ್ರ ನಾನು ಕೊಟ್ಟಿದ್ದೇನೆ.

Shriniwas M Katti said...

ನನ್ನ "ಕಾಂಪೂಟರ್" 10-12 ದಿನಗಳಿಂದ ಸತ್ಯಾಗ್ರಹ ಮಾಡಿತ್ತು. ಇಂದೇ ಸರಿಯಾಗಿದೆ ಎಂಬ ಭಾವ ಬರುತ್ತಿದೆ. ಶರೀ ಶಂ ಬಾ ಜೋಶಿಯವರು ಮಹಾನ್ ಸಂಶೋಧಕರು!? ಆದರೆ ಅವರಿಗೆ ವೇದದ, ಉಪನಿಷತ್ತಿನ ಎಲ್ಲ ಮಂತ್ರಗಳಲ್ಲಿ ಲೈಂಗಿಕ ಪ್ರತಿಮೆಗಳೇ ಕಾಣುತ್ತಿವೆ. ಅವರ ಸಂಶೋಧನಾತ್ಮಕ ಪ್ರಭಂಧಗಳನ್ನು ಅರಗಿಸಿಕೊಳ್ಳುವದು ನನಗಂತೂ ಅಸಾಧ್ಯದ ಮಾತೇ ಸರಿ.ನನ್ನಂಥವರ ಸಾಮಾನ್ಯ ಬುದ್ಧಿಯ ಮಟ್ಟಕ್ಕೆ ನಿಲುಕದ ಪ್ರತಿಭೆ ಅವರದು. ಹೀಗಾಗಿ ಅವರು "ಜನಪ್ರಿಯ" ಆಗಲಿಲ್ಲವೆಂದು ತೋರುತ್ತದೆ. ನಿಮ್ಮ ಬರೆಹವನ್ನು ಓದಿದ ಮೇಲೆ ಅವರ ಪುಸ್ತಕಗಳನ್ನು ಓದುವ ಆಸೆಯಾಗುತ್ತಿದೆ. ಪ್ರಯತ್ನಿಸುವೆ.

sunaath said...

ಕಟ್ಟಿಯವರೆ,
ನಿಮಗೆ ಪುನಃ ಸ್ವಾಗತ. ಶಂ.ಬಾ.ಜೋಶಿಯವರ ಕೃತಿಗಳನ್ನು ಮತ್ತೊಮ್ಮೆ ಓದಿ ನೋಡಿ. ನಿಮ್ಮ ಅಭಿಪ್ರಾಯ ತಿಳಿಸಿರಿ.

ಜಯಶ್ರೀ said...

ಶಂಬಾ ಜೋಷಿಯವರು Karl Popper ಬಗ್ಗೆ ಬರೆದ ವಿವರಗಳು ಸಿಗಬಹುದೇ

sunaath said...

ಜಯಶ್ರೀ ಮೇಡಮ್, ಈ ವಿಷಯದ ಬಗೆಗೆ ನನಗೆ ಏನೂ ಗೊತ್ತಿಲ್ಲ. ಶಂಬಾ ಅವರು ತಮ್ಮ ಕೃತಿಗಳಲ್ಲಿ Popper ಅವರನ್ನು ಪ್ರಸ್ತಾಪಿಸಿದ್ದೂ ಸಹ ನನಗೆ ತಿಳಿದಿಲ್ಲ. ನಿಮಗೆ ಗೊತ್ತಿದ್ದರೆ, ದಯವಿಟ್ಟು ತಿಳಿಸಿ.