ಹೊಸ ವರುಷದ ಕ್ಯಾಲೆಂಡರ.
ಅದೇ ಜನೇವರಿ, ಅದೇ ಡಿಸೆಂಬರ,
ಆದರೆ ಇತ್ತು ದಿನ, ದಿನಾಂಕಗಳ ಬದಲಾವಣೆ.
ಅದೇಕೊ ಮನಸ್ಸಿಗೆ ಅನ್ನಿಸಿತ್ತು
ಸುಖ, ದುಃಖಗಳ ಬದಲಾವಣೆ ಎಂದು,
ಆದರೂ ಆದೀತು ಈ ವರುಷ
ಹರುಷದ ವರುಷ ಎಂದು.
ನೆನಪಾಗದಿರಲಿ ಕಳೆದ ಕಹಿ ದಿನಗಳು,
ಮಾಸದಿರಲಿ ಕನಸಿನ ಸಿಹಿ ದಿನಗಳು,
ಬಾಳಿನ ಬುತ್ತಿಯನ್ನು ಹಂಚಿಕೊಂಡ ಆ ದಿನಗಳು;
ಮುಸ್ಸಂಜೆ ಹೊತ್ತಿನಲ್ಲಿ ಮೂಡಲಿ
ಮತ್ತೊಂದು ದಿನದ ಆಶಾಕಿರಣ.
ಆಶಿಸೋಣ ಹೊಸ ವರುಷಕೆ, ಹೊಸ ಬದುಕಿನ
ಹೊಸತನ ಮೂಡಲಿ ಎಂದು.
--ರೂಪಾ ಕೆ.
ಜನೆವರಿ ೨೦೧೧
. . . . . . . . . . . . . . . . . . . . . . . . . . . . . . . . . . . . . . . . . . . .
ಹುಬ್ಬಳ್ಳಿಯ ನಿವಾಸಿಯಾದ ರೂಪಾ ಕೆ. ಭಾಷಾಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಬಳಿಕ ವಿವಾಹಜೀವನವನ್ನು ಪ್ರವೇಶಿಸಿದರು. ಅನವರತವೂ ಗೃಹಕೃತ್ಯಗಳಲ್ಲಿ ಮುಳುಗಿರುವ ಈ ಗೃಹಿಣಿಯ ಪ್ರತಿಭೆ ಮನೆಗೆಲಸದಲ್ಲಿಯೇ ಮುಚ್ಚಿಕೊಂಡಂತಿದೆ. ಆದರೆ, ಮೋಡ ಸರಿದಾಗ ಮಾತ್ರ ಕಣ್ಣಿಗೆ ಬೀಳುವ ಚಂದ್ರನಂತಿರುವ ಅವರ ಪ್ರತಿಭೆಯನ್ನು ಕಾಣುವ ಅವಕಾಶವೊಂದು ಇತ್ತೀಚೆಗೆ ನನಗೆ ಸುದೈವದಿಂದ ದೊರಕಿತು. ೨೦೧೧ನೆಯ ಕ್ರಿಸ್ತವರ್ಷ ಪ್ರಾರಂಭವಾದಾಗ, ಮಾಮೂಲಿಯಂತೆ ಹೊಸ ವರ್ಷದ ಕ್ಯಾಲೆಂಡರ ಒಂದನ್ನು ಅವರು ಗೋಡೆಗೆ ತೂಗು ಹಾಕುತ್ತಿದ್ದರು. ಆ ಸಮಯದಲ್ಲಿ ತಮ್ಮ ಅಂತಃಕರಣದಲ್ಲಿ ಹೊಳೆದ ಕವನವೊಂದನ್ನು ಅದೇಕೊ ಅವರು ಗೀಚಿ ಒಗೆದಿದ್ದರು. ಅಲ್ಲಿ ಇಲ್ಲಿ ಬಿದ್ದಾಡಿದ ಈ ಕವನ ಕೆಲವು ದಿನಗಳ ಹಿಂದೆ ನನ್ನ ಕೈಸೇರಿತು. ಅದನ್ನು ಓದಿದಾಗ, ಈ ಗೃಹಿಣಿಯಲ್ಲಿ ಅಡಗಿರುವ ಕವಯಿತ್ರಿಯನ್ನು ಕಂಡು ನಾನು ಚಕಿತನಾದೆ.
ಅವರ ಕವನವನ್ನು ಇಲ್ಲಿ ಸಾದರಪಡಿಸುವ ಸ್ವಾತಂತ್ರ್ಯವನ್ನು ನಾನು ಸಲಿಗೆಯ ಅಧಿಕಾರದಿಂದ ಗ್ರಹಿಸಿಕೊಂಡಿದ್ದೇನೆ.
. . . . . . . . . . . . . . . . . . . . . . . . . . . . . . . . . . . . . . . . . .
ಹಳೆಯ ವರುಷದ ಮಧ್ಯರಾತ್ರಿ ಕಳೆದು, ಹೊಸ ವರುಷ ಪ್ರಾರಂಭವಾಗುತ್ತಿದ್ದಂತೆಯೇ, “ಹೊಸ ವರ್ಷದ ಶುಭಾಶಯಗಳು, Happy New Year” ಎನ್ನುವ ಘೋಷಣೆಗಳು ಎಲ್ಲೆಡೆಯೂ ಮೊಳಗುವುವು. ಹೊಸ ವರ್ಷದ ಕ್ಯಾಲೆಂಡರನ್ನು ಗೋಡೆಗೆ ತೂಗುಹಾಕುವಾಗ ಏನೋ ಒಂದು ಸಂಭ್ರಮದ ಭಾವನೆ ಮನಸ್ಸಿನಲ್ಲಿ ಕುಣಿಯುವುದು. ಆದರೆ ಬಾಳಿನಲ್ಲಿ ಬೇವು, ಬೆಲ್ಲಗಳನ್ನು ಉಂಡ ವ್ಯಕ್ತಿಗೆ ವಾಸ್ತವತೆಯ ಅರಿವಿರುವದು. ಹೊಸ ವರ್ಷದ ಕ್ಯಾಲೆಂಡರಿನಲ್ಲಿ ಬದಲಾದದ್ದು ಕೇವಲ ದಿನ ಹಾಗು ದಿನಾಂಕಗಳು. ಅದರಂತೆಯೆ ನಮ್ಮ ಬದುಕಿನಲ್ಲಿಯೂ ಸಹ ಸುಖ ಹಾಗು ದುಃಖಗಳ ಬದಲಾವಣೆಯಾಗುವದೇ ಹೊರತು, ಸುಖದ ಸುಗ್ಗಿ ನಿರಂತರವಾಗಿರುವದಿಲ್ಲ.
ಆದರೆ ರೂಪಾ ಅವರು ಸಿನಿಕರೂ ಅಲ್ಲ, ಭ್ರಮಿಕರೂ ಅಲ್ಲ. ಅವರು ವಾಸ್ತವಪ್ರಜ್ಞೆಯುಳ್ಳ ಆಶಾವಾದಿಗಳು.
‘ಕಭೀ ತೊ ಮಿಲೇಗಿ ಬಹಾರೋಂಕೆ ಮಂಜಿಲ್, ರಾಹೀ!’ ಎನ್ನುವ ವಿಶ್ವಾಸ ಅವರಿಗಿದೆ. ಆದುದರಿಂದಲೇ ಅವರ ಹೊಸ ವರ್ಷದ ಪ್ರತೀಕ್ಷೆಯಲ್ಲಿ, ಹರುಷದ ಎಚ್ಚರದ ನಿರೀಕ್ಷೆಯೂ ಇದೆ:
“ಆದರೂ ಆದೀತು ಈ ವರುಷ
ಹರುಷದ ವರುಷ ಎಂದು.”
ಬಾಳಪಥದಲ್ಲಿ ಕೆಚ್ಚಿನಿಂದ ಮುನ್ನಡೆಯಲು ಬೇಕಾಗುವದೇನು ಎನ್ನುವ ಅರಿವು ಅವರಿಗಿದೆ.ಅದನ್ನು ಅವರು ಹೇಳುವ ರೀತಿ ಹೀಗಿದೆ:
“ನೆನಪಾಗದಿರಲಿ ಕಳೆದ ಕಹಿ ದಿನಗಳು,
ಮಾಸದಿರಲಿ ಕನಸಿನ ಸಿಹಿ ದಿನಗಳು.”
ಬೇಂದ್ರೆಯವರು, “ಇರುಳ ತಾರೆಗಳಂತೆ ಬೆಳಕೊಂದು ಮಿನಗುವದು, ಕಳೆದ ದುಃಖಗಳಲ್ಲಿ ನೆನೆದಂತೆಯೆ”, ಎಂದು ತಮ್ಮ ಸಖೀಗೀತದಲ್ಲಿ ಹಾಡಿದರು.
ಆದರೆ ಈ ತಂಗಿ ಆಲೋಚಿಸುವ ಬಗೆಯೇ ಬೇರೆ. ಕಹಿದಿನಗಳ ನೆನಪೇ ಬೇಡ, ಸಿಹಿ ಸಿಹಿ ಕನಸುಗಳನ್ನು ಕಂಡಂತಹ ಎಳೆತನದ, ಕೆಳೆತನದ ದಿನಗಳ ನೆನಪೇ ಸ್ಥಿರವಾಗಿರಲಿ; ಕಾಲನ ಹೊಡೆತಕ್ಕೆ ಆ ಕನಸುಗಳ ನೆನಪು ಮರೆಯಾಗದಿರಲಿ ಎಂದು ರೂಪಾ ಆಶಿಸುತ್ತಾರೆ. ತನ್ನ ಸಹಪಯಣಿಗರೊಡನೆ ಹಂಚಿಕೊಂಡ ಕನಸುಗಳೇ ಬಾಳಿನ ಮುಂದಿನ ಪಯಣದ ಬುತ್ತಿ ಎನ್ನುವದು ರೂಪಾ ಅವರ ಭಾವನೆ. ಮುಸ್ಸಂಜೆ ಕವಿಯುತ್ತಿರುವಾಗಲೂ ಸಹ, ಮರುದಿನದ ಬೆಳಗು ಆಶಾಕಿರಣವನ್ನು ಹೊತ್ತು ತರಲಿ ಎಂದು ಅವರು ಹಾರೈಸುತ್ತಾರೆ.
ಅದಮ್ಯ ಆಶಾವಾದಿಗಳೂ, ವಾಸ್ತವಪ್ರಜ್ಞೆಯುಳ್ಳವರೂ ಆದ ರೂಪಾ ಅವರಿಂದ ಚೆಲುವಾದ ಇನ್ನಿಷ್ಟು ಕವನಗಳನ್ನು ಆಶಿಸೋಣ.
30 comments:
ಕಾಕ..
ಸುಮ್ಮನೆ ಓದಿದರೆ ಸರಳವಾಗಿ ಕಾಣುವ ಈ ಕವಿತೆಯಲ್ಲಿ ಅದೆಷ್ಟೊ೦ದು ಅರ್ಥಗಳಿವೆ...! ಅದನ್ನು ತೆರೆದಿಟ್ಟ ನಿಮಗೆ ವ೦ದನೆಗಳು..ಚ೦ದದ ಕವಿತೆಯನ್ನು ಅರ್ಥವತ್ತಾಗಿ ಮೂಡಿಸಿದ ರೂಪಾರವರಿಗೆ ಅಭಿನ೦ದನೆಗಳು.
ಸುನಾಥ್ ಕಾಕಾ,
ರೂಪಾರವರು ಬರೆದ ಕವಿತೆ ಚೆನ್ನಾಗಿದೆ. ಅವರು ಇನ್ನೂ ಅನೇಕ ಕವಿತೆಗಳನ್ನು ಬರೆಯಲಿ ಎ೦ದು ಆಶಿಸುತ್ತೇನೆ.
ಕವಿತೆ ಬರೆದ ರೂಪಾರವರಿಗೂ,ಒಳ್ಳೆಯ ಕವಿತೆಯನ್ನು ಪರಿಚಯಿಸಿದ ನಿಮಗೂ ನನ್ನ ನಮನಗಳು.
ಸುನಾಥ ಸರ್..
ರೂಪಾರವರನ್ನೂ..
ಅವರ ಕವನವನ್ನೂ ಪರಿಚಯಿಸಿದ್ದಕ್ಕೆ ಧನ್ಯವಾದಗಳು..
ಸರಳ ಮತ್ತು ಅರ್ಥ ಗರ್ಭಿತವಾಗಿದೆ...
ಅವರಿಗೆ ನಮ್ಮ ಶುಭ ಹಾರೈಕೆಗಳು...ಅವರ ಇನ್ನಷ್ಟು ಕವನಗಳು ಬರಲಿ...
ಸುನಾಥ ಅಂಕಲ್...
ಇಷ್ಟವಾದವು ರೂಪಾ.ಕೆ ಅವರ ಸಾಲುಗಳು. ಅವರಿಂದ ಇನ್ನೂ ಕವನಗಳು/ಬರಹಗಳು ನಮಗೆ ಸಿಗಲಿ.
ಪ್ರೀತಿಯಿಂದ,
-ಶಾಂತಲಾ ಭಂಡಿ
ರೂಪಾ ಅವರ ಮನದಾಳದಿಂದ ಬಂದ ಕವಿತೆಯು ಸರಳ ಹಾಗು ಅರ್ಥಗರ್ಭಿತವಾಗಿದೆ. ಅವರಿಂದ ಇನ್ನಷ್ಟು ಇಂತಹ ಕವನಗಳು ಬರಲಿ ಎಂದು ಹಾರೈಸುತ್ತೇನೆ. ರೂಪಾ ಅವರಿಗೆ ಹಾಗು ನಿಮಗೆ ಅಭಿನಂದನೆಗಳು.
ಸುನಾಥ್ ಜೀ.......
ಸರಳ ಗೃಹಿಣಿಯೋರ್ವಳ ಸರಳ ಕವಿತೆಯನ್ನು ಸರಳವಾಗಿ ವಿವರಿಸಿದ್ದೀರಾ. ಎಷ್ಟೊಂದು ಅರ್ಥಗರ್ಬಿತ ಸಾಲುಗಳು!
ಶ್ರೀಮತಿ ರೂಪಾ ಅವರಿಂದ ಇನ್ನಷ್ಟು ಇಂತಹ ಕವನಗಳು ಹರಿದು ಬರಲಿ....
ಚಂದದ ಕವನವೊಂದನ್ನು ಅರ್ಥವತ್ತಾಗಿ ವಿವರಿಸಿದ ನಿಮಗೆ ಧನ್ಯವಾದಗಳು.
ಸುನಾಥ್ ಅವರೆ,
ರೂಪಾ ಅವರ 'ಹೊಸ ವರುಷ' ಕವನದಲ್ಲಿ ಹೊಸತನವಿದೆ. ಅವರ ಇನ್ನಷ್ಟು ಕವನಗಳು ನಮಗೆ ಸಿಗುವಂತಾಗಲಿ. ಅವರನ್ನು ಪರಿಚಿಯಿಸಿದ ನಿಮಗೆ ಕೃತಜ್ಞತೆಗಳು.
nijavagiyu rooparavaru chennagi barediddaare kavana namma abhinandanegaLannu tiLisi....mattastu kavanagaLannu bareyaLu heLi
ಸುನಾಥ್ ಸರ್ ---ವಾಸ್ತವೀಕತೆಯ ನೆಲೆಯಲ್ಲಿ ಚಿಂತಿಸುವ ರೂಪಾರವರ ಕವನ ನೋವುನಲಿವಿನ ಜೀವನದಲ್ಲಿ ಅಶಾಭಾವವನ್ನ ಕಟ್ಟುಕೋಡುತ್ತದೆ... ಹಾಗೆ ನಿಮ್ಮ ವ್ಯಾಖ್ಯಾನವು ಬಹಳ ಅರ್ಥಪೂರ್ಣವಾಗಿ ಮೂಡಿಬಂದಿದೆ.. **********ಧನ್ಯವಾದ************
ವಿಜಯಲಕ್ಷ್ಮಿ,
ಧನ್ಯವಾದಗಳು.
ಮನಮುಕ್ತಾ,
ರೂಪಾ ಅವರಿಗೆ ನಿಮ್ಮ ವಂದನೆಗಳನ್ನು ತಿಳಿಸುವೆ.
ಪ್ರಕಾಶ,
ರೂಪಾ ಅವರಿಗೆ ನಿಮ್ಮ ಬೇಡಿಕೆಯನ್ನು ತಲುಪಿಸುವೆ.
ಶಾಂತಲಾ,
ನಿಮ್ಮ ಪರವಾಗಿ ರೂಪಾ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವೆ.
ವನಮಾಲಾ,
ಧನ್ಯವಾದಗಳು.
ಪ್ರವೀಣ,
ಕಾಣುವ ಸರಳತೆಯ ಒಳಗೆ ಅಡಗಿರುವ ಸಂಕೀರ್ಣತೆಗೆ ಈ ಕವನವೊಂದು ಉದಾಹರಣೆ ಎನ್ನಬಹುದು.
ನಾರಾಯಣ ಭಟ್ಟರೆ,
ಈ ಗೃಹಿಣಿಯಿಂದ ಇನ್ನಷ್ಟು ಕವನಗಳನ್ನು ಬರೆಯಿಸಲು ಪ್ರಯತ್ನವನ್ನು ಮಾಡುವೆ. ಧನ್ಯವಾದಗಳು.
ಮನಸು,
ರೂಪಾ ಅವರಿಗೆ ನಿಮ್ಮ ಒತ್ತಾಯದ ಬೇಡಿಕೆಯನ್ನು ಹಾಗು ಅಭಿನಂದನೆಗಳನ್ನು ತಿಳಿಸುವೆ. ಧನ್ಯವಾದಗಳು.
ಮಹಾಬಲ ಭಟ್ಟರೆ,
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.
sukha dukkha gala badalaavane.. hosa vishleshane.. pratibheyannu anaavaranagolisida tamagu vandanegalu sunaath sir.
ananth
ಸುನಾಥ್ ಸರ್,
'ಕವನ ತುಂಬಾ ಇಷ್ಟ ಆಯ್ತು.'
ಕವನ ನಮ್ಮ ಜೋಡಿ ಹಂಚಿದ್ದಕ್ಕ-ವಿವರಿಸಿದಕ್ಕ ಧನ್ಯವಾದಗಳು.
ಬಿಡುವಿದ್ದಾಗ ನಮ್ಮ ಬ್ಲಾಗಿಗ [www.pennupaper.blogspot.com] ಭೇಟಿ ಕೊಡ್ರಿ..
ನಿಮ್ಮ ಪ್ರೋತ್ಸಾಹ ನಮಗ ಬೇಕು.
ನಮಸ್ಕಾರ.
-ಅನಿಲ್
ಅನಂತರಾಜರೆ,
ರೂಪಾ ಅವರ ಪ್ರತಿಭೆಯ ಝಳಕನ್ನು ತೋರಿಸುವ ಅವಕಾಶ ನನಗೆ ದೊರೆತಿದ್ದು ನನ್ನ ಭಾಗ್ಯವೆಂದು ತಿಳಿದ್ದಿದ್ದೇನೆ! ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
A-NILರೆ,
ಧನ್ಯವಾದಗಳು. ನಿಮ್ಮ ’ಪೆನ್ನುಪೇಪರ’ blogದಲ್ಲಿರುವ ಲೇಖನಗಳನ್ನು ಓದಿ ಖುಶಿಯಾಯಿತು. ನಿಮ್ಮ ಲೇಖನ ‘ಹೀಂಗ್ ಆದ್ರ ಹ್ಯಾಂಗ?’ ಓದಿ ನಕ್ಕು ನಕ್ಕು ಹಾಕಿದೆ.
ವಿನೋದದ ಕಲೆ ನಿಮ್ಮಲ್ಲಿದೆ. ಮುಂದುವರೆಸಿ.
ಕವನ ಚೆನ್ನಾಗಿದೆ.
ಆದರೆ ನಾವು ಕನ್ನಡಿಗರು ಈ ಕವನ ಓದುವಾಗ ’ಹರುಷ’, ’ವರುಷ’ ದಲ್ಲಿರುವ ’ಷ’ಕಾರವನ್ನು ನಿಜವಾಗಿ ಉಲಿಯುತ್ತೀವೆಯೆ?
ಅಲ್ಲಿ ’ಷ’ಕಾರದ ಬದಲು ’ಶ’ಕಾರ ಹಾಕಿ ಗಟ್ಟಿಯಾಗಿ ಓದಿ ಏನಾದರೂ ಬೇರೆಯಾಗಿ ಉಲಿಯುತ್ತಿದ್ದೀರಾ? ಎಂಬುದನ್ನ ಗಮನಿಸಿ. ಪ್ರಾಮಾಣಿಕವಾಗಿ ನಿಮ್ಮ ಅನುಬವ ತಿಳಿಸಿ.
RUPAARAVARA KAVANA CHENNAAGIDE, PARICHAYISIDDAKKE TAMAGE VANDANEGALU.
ಭರತರೆ,
ಅಕ್ಷರಶಾಸ್ತ್ರದ ಸಮಗ್ರ ತಿಳಿವಳಿಕೆಯನ್ನು ತಾವು ಪಡೆದಿಲ್ಲ. ಒಂದು ವರ್ಣದ ಉಗಮ ಹಾಗು ಬೆಳವಣಿಗೆಯ ಹಿಂದೆ ಅನೇಕ ಅಂಶಗಳು ಇರುತ್ತವೆ. ಸಾವಿರಾರು ವರ್ಷಗಳ ಬೆಳವಣಿಗೆಯಲ್ಲಿ ಮೂಡಿ ಬಂದು, ಅರಳಿ ನಿಂತ ಅಕ್ಷರಕುಸುಮಗಳನ್ನು, ನಮ್ಮ ಅಲ್ಪ ಅನುಭವ ಹಾಗು ಅರೆತರ್ಕದ ಆಧಾರದ ಮೇಲೆ ಹೀಗಳೆಯುವದು ಸಮಂಜಸವಲ್ಲ. ಇನ್ನಿಷ್ಟು ಅಧ್ಯಯನ ಮಾಡಿರಿ
ಎನ್ನುವ ಸಲಹೆಯನ್ನು ನಾನು ನಿಮಗೆ ನೀಡಬಯಸುತ್ತೇನೆ. ಮಾಡುವದು ಅಥವಾ ಬಿಡುವದು ನಿಮಗೆ ಬಿಟ್ಟಿದ್ದು.
ಸೀತಾರಾಮರೆ,
ರೂಪಾ ಅವರ ಕವನವನ್ನು ಮೆಚ್ಚಿದ್ದಕ್ಕಾಗಿ ಧನ್ಯವಾದಗಳು.
ಸುನಾಥಣ್ಣ...ಲೇಖಕನ/ಕಿಯ ಗುಪ್ತ ಸೃಜನಶೀಲತೆಯನ್ನು ಅವರ ಬರಹಗಳಲ್ಲಿ ಹುಡುಕಿ ತೆಗೆವ ನಿಮ್ಮ ಸಂಶೋಧಕ ಮನಸ್ಸಿಗೆ ನನ್ನ ನಮನ. ಹೌದು ಎಷ್ಟೋ ಜನ ಬರೆದದ್ದು ಏನೋ..ಗೀಚುವಿಕೆ ಎಂದುಕೊಳ್ಳುತ್ತಾರೆ ನಿಜಕ್ಕೂ ಹಾಗಾಗಿರುವುದಿಲ್ಲ..ರೂಪಾವರ ಕವನ ನಿಮ್ಮ ಕಣ್ಣಿಗೆ ಬಿದ್ದದ್ದು ಅದನ್ನು ನಮ್ಮಲ್ಲಿಗೆ ತಂದದ್ದು...ಅವರ ಕವಿಭಾವದ ವ್ಯಕ್ತಗೊಳ್ಳುವಿಕೆಗೆ ಸಹಕಾರಿಯಾಯಿತು...
ಜಲನಯನ,
ನಿಮ್ಮ ಮಾತು ನಿಜ. ಕವಿಹೃದಯದ ಅನೇಕರು ನಮ್ಮ ಸುತ್ತಲು ಇದ್ದೇ ಇರುತ್ತಾರೆ. ಅವರ ಸೃಜನಶೀಲ ಅಭಿವ್ಯಕ್ತಿಗೆ ಅರಳುವ ಅವಕಾಶ ಒಮ್ಮೊಮ್ಮೆ ದೊರಕುತ್ತದೆ. ಅದು ಅರಳಿದಾಗ ಹರಡುವ ಕಂಪನ್ನು ನಾವು ಕಳೆದುಕೊಳ್ಳಬಾರದು.
"..ಇನ್ನಿಷ್ಟು ಅಧ್ಯಯನ ಮಾಡಿರಿ ಎನ್ನುವ ಸಲಹೆಯನ್ನು ನಾನು ನಿಮಗೆ ನೀಡಬಯಸುತ್ತೇನೆ..."
ನಿಕ್ಕುವ...ಮಾಡುತ್ತೇನೆ...ನನ್ನ ಕೇಳ್ವಿಗೆ ಉತ್ತರ ಸಿಗಲಿಲ್ಲ. ಯಾಕಂದರೆ ನಾನು ಹಾಗೆ ಮಾಡಿದಾಗ( ’ಷ’ ತೆಗೆದು ’ಶ’ ಹಾಕಿ ಗಟ್ಟಿಯಾಗಿ ಓದಿದಾಗಲೂ) ನನಗೆ ನನ್ನ ಉಲಿಯುವಿಕೆಯಲ್ಲಿ ಯಾವ ಬೇರೆತನ ಕಾಣಲಿಲ್ಲ. ಆದ್ದರಿಂದ ಓದುಗರಿಗೆ ಏನಾದರೂ ಉಲಿಕೆಯಲ್ಲಿ ಬೇರೆತನ ಅನಿಸಿತೇ ಎನ್ನುವುದನ್ನ ತಿಳಿದುಕೊಳ್ಳಲು ಹಾಗೆ ಕೇಳಬೇಕಾಯಿತು.
ರೂಪಾ ಅವರ ಕವನ ಸರಳ-ಸುಂದರ, ಅವರಲ್ಲಿರುವ ಸುಪ್ತ ಪ್ರತಿಭೆಗೆ ಕನ್ನಡಿ ಹಿಡಿದ ನಿಮಗೆ ಅಭಿನಂದನೆಗಳು, ಹಿರಿಯರಲ್ಲಿ ಇರಬೇಕಾದ ಗುರುತಿಸುವ ದೊಡ್ಡ ಗುಣ ನಿಮ್ಮಲ್ಲಿ ಕಂಡು ಖುಷಿಯಾಯ್ತು, ರೂಪಾ ಅವರಿಗೆ ಶುಭಾಶಯಗಳು ಮತ್ತು ತಮಗೆ ಧನ್ಯವಾದಗಳು
Post a Comment