Sunday, January 30, 2022

ಮಳೆಗಾಲ.....ಬೇಂದ್ರೆ

 ಮಳೆಗಾಲವು ಬೇಂದ್ರೆಯವರಿಗೆ ಪ್ರೀತಿಯ ಕಾಲ. ಶ್ರಾವಣ ಮಾಸದ ಬಗೆಗೆ ಬೇಂದ್ರೆಯವರು ಹಾಡಿದ ಹಾಡುಗಳೆಷ್ಟೋ! ಮಳೆಗಾಲದಲ್ಲಿ ಅವರ ಹೃದಯವು ನವಿಲಿನಿಂತೆ ಗರಿಗೆದರುವುದು! ಮಳೆಗಾಲದ ಮೊದಲಲ್ಲಿ ಭರ್ರನೆ ಬೀಸಿ ಬರುವ ಮಳೆಯು ಅವರಿಗೆ ʻಭೈರವನ ರೂಪ ತಾಳಿ ಕುಣಿಯುತ್ತಿರುವಂತೆʼ ಕಾಣುತ್ತದೆ. ಮಳೆಯಲ್ಲಿ ತೊಯ್ಯುತ್ತಿರುವ ಕಲ್ಲುಬಂಡೆಗಳು ಅವರಿಗೆ ʻಅಭ್ಯಂಜನಗಯ್ಯುತ್ತಿರುವ ಸ್ಥಾವರಲಿಂಗಗಳಂತೆʼ ಕಾಣುವುವು. ಇಂತಹ ಕಾಣ್ಕೆ ವರಕವಿಗೆ ಮಾತ್ರ ಸಾಧ್ಯ. ಅದಕ್ಕೇ ಹೇಳುತ್ತಾರಲ್ಲವೆ,  ʻ ನಾನೃಷಿಃ ಕುರುತೇ ಕಾವ್ಯಂ ʼ ಎಂದು. 

ʻಮಳೆಗಾಲʼ ಎನ್ನುವ ಬೇಂದ್ರೆಯವರ ಕವನವು ನೋಡಲು ಅತ್ಯಂತ ಸರಳವಾದ ಕವನ. ಆದರೆ ಈ ಮುಖವಾಡದ ಒಳಗೆ ಅಡಗಿದೆ, ವಿಶ್ವದ ʻಋತʼ ಅರ್ಥಾತ್‌ ʻಶಾಶ್ವತ ಸತ್ಯʼ, ನಿಸರ್ಗವನ್ನು ನಡೆಯಿಸುತ್ತಿರುವ ಚೈತನ್ಯದ ಸಾಮರಸ್ಯ ಪ್ರಕ್ರಿಯೆ.

....................................................................................................................

ಮಳೆಗಾಲ

ಅಡಗಿದೆ ದೃಷ್ಟಿ-

ಆದರು ಸುರಿಯುತ್ತಿದೆ ವೃಷ್ಟಿ!

ಮೋಡದ ಮೇಲ್ಮೋಡ.

ತಿಳಿಯದು ಏನಿದೆಯೋ ಗೂಢ !

ನಸುಕಿನ ಹಕ್ಕಿಯ ಚಿಲಿಪಿಪಿಯಿಲ್ಲ.

ಗೊಟರ್ಗುಡುತಿದೆ ಕಪ್ಪೆ.

ಜೀರುಂಡೆಯ ಕಿಲಕಿಲ ಇರುಳಿಡುಗಿದೆ

ದುರ್ದಿನಕಿದು ತಪ್ಪೇ?

ಹಸಿರಿನ ಉಲ್ಲಾಸಕೆ ಮಿತಿಯಿಲ್ಲ.

ಕೆಸರಿಗಿಲ್ಲ ಕೊರತಿ.

ಪಾತರಗಿತ್ತಿಯು ಸುಳಿದಾಡುತ್ತಿದೆ,

ಮನೆ ಹಿಡಿದಳು ಗರತಿ.

ಬಾನ್ ತುಂಬಿದೆ, ಕೆರೆ ತುಂಬಿದೆ,

ಹೂ ತುಂಬಿದೆ ಬೇಲಿ.

ನೀರಲಿದಲಿ ರಸ ತುಂಬಿದೆ

ಮಿದುವಾಗಿದೆ ಜಾಲಿ. 

........................................................................................................

 ಮೊದಲಿನ ನುಡಿಯನ್ನು ನೋಡೋಣ. ಮಳೆಗಾಲದ ಒಂದು ಮುಂಜಾವು. ಬೇಂದ್ರೆಯವರು ಮನೆಯ ಬಾಗಿಲಿಗೆ ಬಂದು ಹೊರಗೆ ಇಣಕುತ್ತಾರೆ. ತಮ್ಮ ಭೌತಿಕ ದೃಷ್ಟಿಗೆ ಕಾಣುವ ನೋಟವನ್ನು ಎಣಿಸುತ್ತ, ಇದರ ಹಿಂದೆ ಇರುವ ಗೂಢವನ್ನು ಗುಣಿಸುತ್ತಿದ್ದಾರೆ. ʻಇದು ಏನೋ ನಿಸರ್ಗರಹಸ್ಯ, ಇದು ಏನು?ʼ ಎನ್ನುವ ಅಚ್ಚರಿಯಲ್ಲಿದ್ದಾರೆ. ಆಕಾಶವು ದಟ್ಟ ಮೋಡಗಳಿಂದ ತುಂಬಿದ್ದನ್ನು ಅವರು ನೋಡುತ್ತಾರೆ. ಆ ಮೋಡಗಳು ಮಳೆ ಸುರಿಸುತ್ತಿರುವುದನ್ನೂ ಅವರು ಕಾಣುತ್ತಾರೆ. ತಮ್ಮ ದೃಷ್ಟಿಯಾಚಗೆ ಏನೋ ಒಂದು ಇದೆ ಎನ್ನುವ ಕಲ್ಪನೆ ಅವರಿಗೆ ಬರುತ್ತದೆ. 

ಎರಡನೆಯ ನುಡಿಯಲ್ಲಿ ಬೇಂದ್ರೆಯವರ ಚಿತ್ತವು ನಿಸರ್ಗದ ದೃಶ್ಯದಿಂದ ನಿಸರ್ಗದ ಶ್ರಾವ್ಯದ ಕಡೆಗೆ ಹೊರಳುತ್ತದೆ. ʻಅಲ್ಲಪ್ಪಾ, ನಸುಕಿನ ಹಕ್ಕಿಗಳ ಸುಮಧುರ ಕಲರವ ಇಲ್ಲ, ಹೀಗೇಕೆ? ಆದರೆ ಕಪ್ಪೆಗಳ ಗುಟುರುವಿಕೆ ಹಾಗು ಜೀರುಂಡೆಗಳ ಗುಂಯ್ಗುಡುವಿಕೆ ಮಾತ್ರ ತಪ್ಪಿಲ್ಲವಲ್ಲ, ಎನ್ನುತ್ತಿದ್ದಾರೆ ಬೇಂದ್ರೆ. ʻಓಹೋ, ಇದು ಮಳೆಯ ಪಾರಿಣಾಮ! ಇದು ದುರ್ದಿನಕ್ಕೆ ಸಹಜವಾದದ್ದೇʼ ಎಂದುಕೊಳ್ಳುತ್ತಾರೆ ಬೇಂದ್ರೆ. ಸಂಸ್ಕೃತದಲ್ಲಿ ಮಳೆ ಬೀಳುವ ದಿನಕ್ಕೆ ದುರ್ದಿನ ಎನ್ನುತ್ತಾರೆ ಎನ್ನುವುದನ್ನು ಗಮನಿಸಬೇಕು. ಕನ್ನಡದಲ್ಲಿ ʻದುರ್ದಿನʼ ಎಂದರೆ ಕೆಟ್ಟ ದಿನ. ಕನ್ನಡದಲ್ಲಿ ಇರುವ ಅರ್ಥವನ್ನು ಹಾಗು ಸಂಸ್ಕೃತದಲ್ಲಿ ಇರುವ ಅರ್ಥವನ್ನು ಬೇಂದ್ರೆಯವರು ಶ್ಲೇಷೆಯಲ್ಲಿ ಬಳಸುವ ಜಾಣತನವನ್ನು ಗಮನಿಸಿರಿ.

 ಮೂರನೆಯ ನುಡಿಯಲ್ಲಿ ಬೇಂದ್ರೆಯವರು ಮಳೆಗಾಲದ ಸಂಕಟಗಳನ್ನು ಪಕ್ಕಕ್ಕೆ ಇಡುತ್ತಾರೆ ಹಾಗು ಮಳೆಗಾಲದ ಸುಖವನ್ನು ಅನುಭವಿಸುತ್ತಿದ್ದಾರೆ. ಭೂಮಿಯೆಲ್ಲ ಹಸಿರಿನಿಂದ ತುಂಬಿದೆ. ಈ ನೋಟವು ನೋಡುಗನಲ್ಲಿ ಉಲ್ಲಾಸವನ್ನು ತುಂಬುತ್ತಿದೆ. ಅದರ ಜೊತೆಗೇ ನೆಲವೆಲ್ಲ ಕೆಸರಿನಿಂದ ಕೂಡಿದೆ. (ರಾಜರತ್ನಮ್‌ ಅವರು ಹಾಡಿದಂತೆ ʻಎಲೆಲೆ ರಸ್ತೆ, ಏನು ಅವ್ಯವಸ್ಥೆʼ!). ಇದು ಮನುಷ್ಯರಿಗೆ ಸಂಕಟಕರವಾಗಿರಬಹುದು, ಆದರೆ ಪಾತರಗಿತ್ತಿಗೆ ಇದು ಹಬ್ಬ. ಪಾತರಗಿತ್ತಿಯು ನೆಲದ ಮೇಲೆ ಚಲಿಸುವುದಿಲ್ಲ; ಅದು ನೆಲದ ಮೇಲಕ್ಕೆ ಹಾರಾಡುತ್ತದೆ. ಪಾತರಗಿತ್ತಿಗೆ ಇದು ಸಹಜ ಪ್ರವೃತ್ತಿ, ಹೊಟ್ಟೆಗಾಗಿ ಅದರ ಪರದಾಟ. ಆದರೆ ಮನೆಯ ಕೆಲಸವನ್ನು ಮಾಡಬೇಕಾಗಿರುವ ಗೃಹಿಣಿಗೆ ಹೊರಗೆ ಹಣಿಕಿ ಹಾಕಲೂ ಸಹ ಆಗಲಾರದ ಪರಿಸ್ಥಿತಿ. ಮನೆಗೆ ಅಂಟಿಕೊಂಡೇ ಅವಳು ಕೂಡಬೇಕು. (ಇಲ್ಲಿ ಬರುವ ಒಂದು ದ್ವಂದ್ವಾರ್ಥವನ್ನು ಗಮನಿಸಿರಿ. ಪಾತರಗಿತ್ತಿ ಎಂದರೆ ಚೆಲ್ಲು ಹೆಣ್ಣು ಎಂದೂ , ವೇಶ್ಯೆ ಎಂದೂ ಅರ್ಥವಾಗುತ್ತದೆ. ಅವರವರ ಒದ್ದಾಟ ಅವರವರಿಗೆ!)


ಕೊನೆಯ ನುಡಿಯಲ್ಲಿ ಬೇಂದ್ರೆಯವರ ಅನುಭೂತಿ ವ್ಯಕ್ತವಾಗುತ್ತದೆ. ಈ ಅನುಭವವು ಬೇಂದ್ರೆಯವರನ್ನು ಆಧ್ಯಾತ್ಮಿಕ ಸ್ತರಕ್ಕೆ ಒಯ್ದಿದೆ. ತಾವು ಮೊದಲು ನೋಡಿದ ನೋಟಗಳನ್ನೇ ಬೇಂದ್ರೆ ಮತ್ತೊಮ್ಮೆ ನೋಡುತ್ತಾರೆ. ಆದರೆ ಅವರ ಒಳಗಣ್ಣಿಗೆ ಕಾಣುವ ನೋಟವೇ ಇದೀಗ ಬೇರೆ. ಬಾನು ಎಂದರೆ ಆಕಾಶವು ಮೋಡಗಳಿಂದ ತುಂಬಿದೆ. ಆ ಮೋಡಗಳು ಸುರಿಸುವ ನೀರಿನಿಂದ ನೆಲದ ಮೇಲಿರುವ ಕೆರೆ, ಕುಂಟಿಗಳೆಲ್ಲ ತುಂಬಿವೆ. ಅಲ್ಲಲ್ಲಿ ಇರುವ ಬೇಲಿಗಳು ತಕ್ಷಣವೇ ಹೂಬಿಟ್ಟು ಚೆಲುವಾಗಿ ಕಾಣುತ್ತಿವೆ. ಹೂವಾದ ಬಳಿಕ ಹಣ್ಣು ಬರಬೇಕಲ್ಲವೆ? ನೀರಲ ಗಿಡದಲ್ಲಿ ರಸಭರಿತ ಹಣ್ಣುಗಳು ಬಿಡಲಾರಂಭಿಸಿವೆ. ಜಾಲಿಯ ಗಿಡವು ಅತ್ಯಂತ ಗಟ್ಟಿಯಾದ ಬೊಡ್ಡೆಯನ್ನು ಹೊಂದಿರುವ ಮುಳ್ಳು ಗಿಡ. ಜಾಲಿಯ ಗಿಡವನ್ನು ದುರ್ಜನರಿಗೆ ಹೋಲಿಸುತ್ತಾರೆ. ಅದೂ ಸಹ ಮಿದುವಾಗಿ ಬಿಟ್ಟಿದೆ. ಇದೇನು ಸೃಷ್ಟಿವೈಚಿತ್ರ್ಯ ಎಂದು ಬೇಂದ್ರೆಯವರು ಬೆರಗಾಗುತ್ತಾರೆ!  ಇದು ವಿಶ್ವದ ಋತ, ಇದು ನಿಸರ್ಗದ ಸಾಮರಸ್ಯ, ಇದು ದೈವೀ ಚೈತನ್ಯದ ಕೃಪೆ ಎನ್ನುವುದು ಬೇಂದ್ರೆಯವರ ಅನುಭೂತಿಯಾಗಿದೆ.

ಪೃಥ್ವಿ, ಅಪ್‌, ತೇಜ, ಆಕಾಶ ಹಾಗು ವಾಯು ಎನ್ನುವ ಪಂಚಮಹಾಭೂತಗಳು ಈ ಸಾಮರಸ್ಯದ ಪ್ರಕ್ರಿಯೆಯಲ್ಲಿ ಭಾಗವಹಿಸಿರುವುದನ್ನು ನಾವು ಈ ಕವನದಲ್ಲಿ ಕಾಣಬಹುದು. 

7 comments:

ಜಲನಯನ said...

ಸುನಾಥಣ್ಣ ಚಂದದ ವಿವರಣಾತ್ಮಕ ವ್ಯಾಖ್ಯಾನಕೆ ಧನ್ಯವಾದಗಳು.
ಮಳೆಗಾಲದ ವಿಹಂಗಮ ನೋಟ ..
ಹಸಿರಿನ ಉಲ್ಲಾಸಕೆ ಮಿತಿಯಿಲ್ಲ.
ಕೆಸರಿಗಿಲ್ಲ ಕೊರತಿ.
ಪಾತರಗಿತ್ತಿಯು ಸುಳಿದಾಡುತ್ತಿದೆ,
ಮನೆ ಹಿಡಿದಳು ಗರತಿ.

Badarinath Palavalli said...

ವಾವ್ ಸಾರ್,
ಸರಳ ಕವನ ಅಂತ ಓದಿಸಿಕೊಂಡರೂ, ಆಂತರ್ಯದಲ್ಲಿ ಎಂತಹ ಅಮೋಘವನ್ನು ಅಜ್ಜ ಅಡಗಿಸಿಟ್ಟಿದ್ದಾರೆ!
ಅರ್ಥವತ್ತಾಗಿ ವಿವರಸಿದ್ದೀರಿ ಧನ್ಯವಾದಗಳು.

ಹಾಗೆ, ನಮ್ಮೂರ ಕಡೆ ಮಳೆಗಾಲದಲ್ಲಿ ವಟಗುಟ್ಟುವ ಕಪ್ಪೆಯ ಸದ್ದಿನ ಹಿಂಸೆ ನಾನೂ ಅನುಭವಿಸಿದ್ದೀವಿ. ಇಡೀ ದಿನ ಕಪ್ಪೆ ವರಾತ - ತಕ್ಕೊಳ್ಳಿ ಎಂತಹ ದುರ್ದಿನ! 😁

sunaath said...

ಧನ್ಯವಾದಗಳು, ಸೀತಾರಾಮರೆ. ಬೇಂದ್ರೆಯವರ ಕವನಕ್ಕೆ ನನಗೆ ತಿಳಿದಷ್ಟನ್ನು ನಾನು ಬರೆದಿದ್ದೇನೆ. ಇದನ್ನು ನೀವು ಸ್ವೀಕರಿಸಿದ್ದೀರಿ. ಧನ್ಯವಾದಗಳು.

sunaath said...

ಜಲನಯನ, ನಿಮ್ಮ ಸ್ಪಂದನೆ ನನಗೆ ಸಂತೋಷವನ್ನು ತಂದಿತು. ಸ್ನೇಹಬಳಗದ ಶಭಾಶಗಿರಿಯು ಸುಖಕರವಾಗಿರುತ್ತದೆ!

sunaath said...

ಬದರಿನಾಥರೆ, ನೀವೂ ಸಹ ಕಪ್ಪೆಯ ಸಂಗೀತದ ಸುಖವನ್ನು ಅನುಭವಿಸಿದ್ದೀರಿ ಎನ್ನುವುದು ಸಂತೋಷದ ಸಂಗತಿ!

Jayashree Deshpande said...

ಮಳೆ ಎಂಬ ಅಮೃತವರ್ಷದ ಸಿರಿಯನ್ನು ಕವಿವರ್ಯರು ಕಂಡಷ್ಟೇ ಅಮೋಘವಾಗಿ ನಿಮ್ಮ ಲೇಖನಿಯೂ ಚಿತ್ರಿಸಿದೆ. ಮೋಡದ ಮೇಲ್ಮೋಡದ ಗೂಢ ಅವರ್ಣನೀಯವೇ.

ಕೃಷ್ಣಮೂರ್ತಿ said...

ತುಂಬಾ ಚೆನ್ನಾಗಿ ಬರೆದಿದ್ದೀರಿ... ನಿಮ್ಮ 'ವರ್ಷ'ದ ವಿವರಣೆ ತಂದಿದೆ,ಬೇಂದ್ರೆ ಅಜ್ಜನ ಅಭಿಮಾನಿಗಳಿಗೆ ಅಪಾರ'ಹರ್ಷ'