Sunday, July 6, 2014

ವಂದೇ ಭಾರತಮ್!--೧



ಭಾರತದ ಪೂರ್ವೇತಿಹಾಸದ ಬಗೆಗೆ ಅಂದರೆ ಸಿಂಧು ಕೊಳ್ಳದ ಸಂಸ್ಕೃತಿಯ ಬಗೆಗೆ ತಿಳಿದುಕೊಳ್ಳಲು ಬಯಸುವವರು ಮೈಕೆಲ್ ಡ್ಯಾನಿನೊ ಎನ್ನುವ ಪುರಾತತ್ವಜ್ಞರ ಪುಸ್ತಕವನ್ನು ಓದಬೇಕು. ಮೈಕೆಲ್ ಡ್ಯಾನಿನೊ ಅವರ ಭಾರತಪ್ರೇಮವನ್ನು ಗಮನಿಸಿದರೆ ಇವರನ್ನು ಭಾರತೀಯರೆಂದೇ ಕರೆಯಬಹುದು. ಆದರೆ ಇದು ಕುರುಡುಪ್ರೇಮವಲ್ಲ, ಇದು ಇತಿಹಾಸವನ್ನು ಸಮಗ್ರವಾಗಿ ಹಾಗು ನಿಷ್ಪಕ್ಷಪಾತವಾಗಿ ಅಧ್ಯಯನ ಮಾಡಿದ ವಿದ್ವಾಂಸರೊಬ್ಬರ ಪ್ರೀತಿಯಾಗಿದೆ. ೧೯೫೬ರಲ್ಲಿ ಫ್ರಾನ್ಸಿನ ಪಾರಿ (Paris)ಯಲ್ಲಿ ಜನಿಸಿದ ಮೈಕೆಲ್ ಡ್ಯಾನಿನೊ, ತಮ್ಮ ಇಪ್ಪತ್ತೊಂದನೆಯ ವಯಸ್ಸಿನಲ್ಲಿ ಭಾರತಕ್ಕೆ ಆಗಮಿಸಿ ಇಲ್ಲಿಯ ಪ್ರಾಚೀನ ಸಂಸ್ಕೃತಿ ಹಾಗು ನಾಗರಿಕತೆಯನ್ನು ಅಭ್ಯಾಸ ಮಾಡಿದರು. ತಮ್ಮ ಕಾರ್ಯಕ್ಷೇತ್ರವನ್ನು ಕೇವಲ ಸಂಶೋಧನೆಗಷ್ಟೇ ಇವರು  ಸೀಮಿತಿಗೊಳಿಸಲಿಲ್ಲ. ೧೯೮೦ ಹಾಗು ೧೯೯೦ರಲ್ಲಿ ನೀಲಗಿರಿಯಲ್ಲಿರುವ ಶೋಲಾ ಅರಣ್ಯದ ಸಂರಕ್ಷಣೆಗಾಗಿ ಇವರು ಮಾಡಿದ ಪ್ರಯತ್ನಗಳಿಂದಾಗಿ ತಮಿಳುನಾಡು ಸರಕಾರವು ಅಲ್ಲಿಯ ಅರಣ್ಯರಕ್ಷಣಾಕಾರ್ಯವನ್ನು ಕೈಗೆತ್ತಿಕೊಂಡಿತು. ಸಿಂಧು ಕೊಳ್ಳದ ನಾಗರಿಕತೆಯ ಆಳವಾದ ಅಧ್ಯಯನವನ್ನು ಮಾಡಿದ ಇವರು `The lost river: On the trail of the Saraswati’ ಎನ್ನುವ ಪುಸ್ತಕವನ್ನು ಸಾಮಾನ್ಯ ಓದುಗನಿಗಾಗಿ ರಚಿಸಿದ್ದಾರೆ.

ಇಂತಹ ‘ವಿದೇಶಿ ಭಾರತೀಯ’ನನ್ನು ನಮ್ಮವರೇ ಆದ, ಅದರಲ್ಲೂ ಪ್ರಧಾನಮಂತ್ರಿಗಳಾದಂತಹ ಅವಧಿಯಲ್ಲಿಯೇ ಬ್ರಿಟಿಶರ ಪಾದಸ್ಪರ್ಶ ಮಾಡಿ ಬಂದಂತಹ ಮನಮೋಹನಸಿಂಗರೊಡನೆ ಸ್ವಲ್ಪ ಹೋಲಿಸಿ ನೋಡಿರಿ! ಲಂಡನ್ ವಿಶ್ವವಿದ್ಯಾಲಯದಿಂದ ಗೌರವ ಡಾ^ಕ್ಟರೇಟ್ ಪದವಿಯ ಅನುಗ್ರಹವನ್ನು ಪಡೆದಾಗ ಮಾಡಿದ ಭಾಷಣದಲ್ಲಿ ಡಾ‍^. ಮನಮೋಹನಸಿಂಗರು ಬ್ರಿಟಿಶರು ಭಾರತದಲ್ಲಿ ರೇಲವೇ, ಟೆಲಿಗ್ರಾಫ್ ಮೊದಲಾದ ಆಧುನಿಕ ಸುಧಾರಣೆಗಳನ್ನು ತಂದು ಭಾರತೀಯರ ಮೇಲೆ ‘ಮಹದುಪಕಾರ’ವನ್ನು ಮಾಡಿದ್ದಾರೆ ಎಂದು ಬಣ್ಣಿಸುತ್ತ ಬ್ರಿಟಿಶರ ಕಾಲು ಮುಟ್ಟಿ ಬಂದರು. ಒಂದು ಗೌರವ ಡಾ^ಕ್ಟರೇಟ್ ಪದವಿಗಾಗಿ ತನ್ನ ಹಾಗು ತನ್ನ ತಾಯಿನಾಡನ್ನು ಈ ಪರಿಯಾಗಿ ಕೀಳುಗೈಯಬೇಕೆ?

ಬ್ರಿಟಿಶರ ಈ ‘ಮಹದುಪಕಾರ’ವನ್ನು ಮೈಕೆಲ್ ಡ್ಯಾನಿನೊ ಯಾವ ರೀತಿಯಲ್ಲಿ ಗ್ರಹಿಸಿದ್ದಾರೆ ಎನ್ನುವುದನ್ನು ನೋಡಿರಿ:
Telegraph and railways, always projected as bringing `progress’ to India, were, in reality, first and foremost indispensable tools in the delicate exercise of keeping this huge territory under Britain’s ‘providential rule’.
(The lost River: On the trail of the Saraswati, pp 83)

ಇದಷ್ಟೇ ಅಲ್ಲ, ಬ್ರಿಟಿಶ್ ವ್ಹಾಯ್ಸರಾ^ಯ್ ಕರ್ಝನ್ ಭಾರತಕ್ಕೆ ಮಾಡಿದ ಅಪಕಾರವನ್ನು ನೆನಪು ಮಾಡಿಕೊಳ್ಳುತ್ತಲೇ, ಭಾರತದ ಪುರಾತತ್ವಶಾಸ್ತ್ರಕ್ಕೆ ಆತನಿಂದ ಆದ ಉಪಕಾರವನ್ನು ಡ್ಯಾನಿನೊ ಸ್ಮರಿಸಿಕೊಳ್ಳುವುದು ಹೀಗೆ:
Given the viceroy’s  contemptible political record in Bengal, it is good to remember this positive contribution of his: had he not stemmed the rot in the archeological establishment, India would have lost hundreds of more monuments, ancient and medieval.
(The lost River: On the trail of the Saraswati, pp 85 , italics and emphasis mine.)

ಮೈಕೆಲ್ ಡ್ಯಾನಿನೊ ಅವರ ಭಾರತಪ್ರೀತಿ ಅವರ ಹೃದಯದಿಂದ ಉಕ್ಕಿ ಬಂದಿದ್ದು. ‘ಮೇಘದೂತ’ ಕಾವ್ಯದಲ್ಲಿ ಕವಿ ಕಾಲೀದಾಸನು ಸರಸ್ವತಿ ನದಿಯ ಬಗೆಗೆ ಉಲ್ಲೇಖಿಸಿದ್ದನ್ನು, ತಮ್ಮ ಪುಸ್ತಕದಲ್ಲಿ ವಿವರಿಸುವಾಗ, ಡ್ಯಾನಿನೋ ಕಾಲೀದಾಸನಿಗೆ ‘ದೈವೀ ಕವಿ’ ಎಂದು ಕರೆಯುತ್ತಾರೆ.
In Meghadutam(the `Cloud Messenger’), India’s devine  poet Kalidasa(probably living in the first century BCE), entreats a cloud to visit.....
(The lost River: On the trail of the Saraswati, pp 44 , italics and emphasis mine)

ಒಂದು ವೇಳೆ ಕಾಲದಲ್ಲಿ ಹಿಂದೆ ಹೋಗುವ ಅವಕಾಶ ತಮಗೇನಾದರೂ ದೊರೆತರೆ, ತಾವು ಕ್ರಿ.ಪೂ. ೨೭೦೦ನೆಯ ಕಾಲಕ್ಕೆ ಹೋಗುವದಾಗಿ ಡ್ಯಾನಿನೊ ಹೇಳುತ್ತಾರೆ. ಏಕೆಂದರೆ ಆ ಅವಧಿಯಲ್ಲಿ ಸಿಂಧೂ ಕೊಳ್ಳದ ನಾಗರಿಕತೆಯು ಏರುಮುಖವಾಗಿ ಹರಡಿಕೊಳ್ಳುತ್ತಿತ್ತು.
Given a chance for a second trip on our time machine, I would unhesitatingly opt for 2700 BCE......................For atleast four millennia, a few regions of the Indo-Gangetic belt  had already harboured settled village communities.....
(The lost River: On the trail of the Saraswati, pp 83.)

ಸರಸ್ವತಿ ನದಿಯ ವರ್ಣನೆಗಳು ಋಗ್ವೇದದಲ್ಲಿ ಬರುವದನ್ನು ಮೈಕೆಲ್ ಡ್ಯಾನಿನೊ ಉಲ್ಲೇಖಿಸುತ್ತಾರೆ. ಸಿಂಧು ಕೊಳ್ಳದ ನಾಗರಿಕತೆ ಎಂದು ಕರೆಯಲಾಗುವ ನಾಗರಿಕತೆಯು ಒಂದು ಕಾಲಾವಧಿಯಲ್ಲಿ ಸರಸ್ವತಿ ನದಿಯ ಕೊಳ್ಳದಲ್ಲಿ ವ್ಯಾಪಕವಾಗಿ ನೆಲೆಸಿತ್ತು. ಸರಸ್ವತಿ ನದಿಯು ಬತ್ತಿ ಹೋದದ್ದರಿಂದ ಈ ನಾಗರಿಕತೆಯೂ ಸಹ ಕಾಣದಂತಾಯಿತು ಎಂದು ಡ್ಯಾನಿನೊ ಹೇಳುತ್ತಾರೆ. ಹಿಮಾಲಯ ಪರ್ವತಾವಳಿಯಲ್ಲಿ ಜರುಗಿದ ಭೂಸ್ತರಗಳ ಚಲನೆಯಿಂದಾಗಿ, ಸರಸ್ವತಿ ನದಿಗೆ ನೀರುಣ್ಣಿಸುತ್ತಿದ್ದ  ಯಮುನಾ ನದಿ ಹಾಗು ಇತರ ಎರಡು ನದಿಗಳು ಗಂಗಾ ನದಿಯ ಕೊಳ್ಳದತ್ತ ತಿರುಗಿಕೊಂಡವು. ಆ ಕಾರಣದಿಂದ ಸರಸ್ವತಿ ನದಿಯು ಬತ್ತಿ ಹೋಗಿರಬಹುದು ಎನ್ನುವ ಊಹೆಗೆ ಇವರು ವಿವಿಧ ದಾಖಲೆಗಳ ಬೆಂಬಲವನ್ನು ನೀಡುತ್ತಾರೆ.  

ಈ ಸಂದರ್ಭದಲ್ಲಿ ನಾವು ನಮ್ಮ ಪುರಾಣಗಳನ್ನು ನೆನಪಿಸಿಕೊಳ್ಳೋಣ. ಭಗೀರಥನ ತಪಸ್ಸಿನಿಂದಾಗಿ, ಗಂಗಾನದಿಯು ಭೂಮಿಗೆ ಧುಮ್ಮಿಕ್ಕಿದ ಬಳಿಕ, ಆ ಪ್ರವಾಹದ ರಭಸವನ್ನು ತಡೆಯಲು ಶಿವನು ಗಂಗೆಯನ್ನು ತನ್ನ ಜಡೆಯಲ್ಲಿ ಕಟ್ಟಿಹಾಕಿದನು ಎಂದು ಪುರಾಣಗಳಲ್ಲಿ ವರ್ಣಿಸಲಾಗುತ್ತದೆ. ಈ ಗಂಗಾವತರಣವು ಹಿಮಾಲಯದ ಭೂಸ್ತರಗಳ ಚಲನೆಯಿಂದಲೇ ಆಗಿರಬಹುದೆ? ಆದುದರಿಂದಲೇ ಯಮುನೆಯ ದಿಕ್ಕು ಬದಲಾಗಿ, ಸರಸ್ವತಿ ನದಿಯು ಬತ್ತಿರಬಹುದೆ? ಗಂಗಾ, ಯಮುನಾ ಹಾಗು ಗುಪ್ತಗಾಮಿನಿ ಸರಸ್ವತಿ ಇವುಗಳ ತ್ರಿವೇಣಿ ಸಂಗಮವು ಈ ಘಟನಾವಳಿಯನ್ನೇ ಸೂಚಿಸುತ್ತಿರಬಹುದೆ? ಭಾರತೀಯ ಪುರಾಣಗಳು ವಾಸ್ತವ ಇತಿಹಾಸವನ್ನೇ ಕಥಾರೂಪದಲ್ಲಿ ಹೇಳುತ್ತಿವೆ ಎಂದು ಭಾಸವಾಗುತ್ತದೆ.

ಭಾರತೀಯ ಇತಿಹಾಸದ ಬಗೆಗೆ ಮತ್ತೊಂದು ರೋಚಕವಾದ ಸಂಭಾವ್ಯತೆಯೊಂದನ್ನು  ಇದೀಗ ನಿಮ್ಮ ಮುಂದೆ ಇಡಲು ನಾನು ಬಯಸುತ್ತೇನೆ. ಅನೇಕ ವರ್ಷಗಳ ಹಿಂದೆ ನಾನು ಒಂದು ಇಂಗ್ಲಿಶ್ ಪುಸ್ತಕ ಓದಿದ್ದೆ. ಅದರ ಹೆಸರು ನನಗೀಗ ನೆನಪಿಲ್ಲ. ಬಹುಶಃ ಅದು Earth Magic ಆಗಿರಬಹುದು ಅಥವಾ Chariots of Gods ಆಗಿರಬಹುದು. ಆ ಪುಸ್ತಕದ ಪುಟವೊಂದರಲ್ಲಿ ಅಮೇರಿಕದ ಬಂಡೆಗಲ್ಲಿನ ಮೇಲೆ ಕೊರೆಯಲಾದ ಕೆಲವು ಬೃಹತ್ ಇತಿಹಾಸಪೂರ್ವ ಶಿಲ್ಪಗಳ ಚಿತ್ರಗಳನ್ನು ಕೊಟ್ಟಿದ್ದಾರೆ. ಆ ಶಿಲ್ಪಗಳಲ್ಲಿಯ ಒಂದು ಶಿಲ್ಪವನ್ನು ನೋಡಿ ನಾನು ದಂಗು ಬಡಿದೆ. ಆ ಶಿಲ್ಪದ ಕಟಿಪ್ರದೇಶದ ಹಿಂಬದಿಯಲ್ಲಿ ನಾವು ಬಾಲವೊಂದನ್ನು ಜೋಡಿಸಿದರೆ, ಅದು ಸಾಕ್ಷಾತ್ ನಮ್ಮ ಮಾರುತಿಯ ಪಡಿಯಚ್ಚಿನಂತೆ ಕಾಣುತ್ತದೆ. ಪುಸ್ತಕದ ಲೇಖಕನಿಗೆ ಇದು ಮಾರುತಿಯ ಶಿಲ್ಪವಿರಬಹುದು ಎಂದು ಊಹಿಸುವ ಅನುಕೂಲತೆ ಇಲ್ಲ. ಏಕೆಂದರೆ ಬರೆದವನು ಯುರೋಪಿಯನ್ನನು. ಆದರೆ ಭಾರತೀಯನಾದ ನನಗೆ ಇದು ಹೊಳೆಯದೇ ಇರಲಾರದು.

ಪುಸ್ತಕದ ಲೇಖಕನ ಮೇರೆಗೆ ಈ ಶಿಲ್ಪಗಳನ್ನು ಕೊರೆದವರು ಬೇರೆ ಗ್ರಹದಿಂದ ಭೂಮಿಗೆ ಬಂದು ನೆಲೆಸಿದವರು. ಈ ವಾದವನ್ನು ಇತರ ವಿಜ್ಞಾನಿಗಳು ತಿರಸ್ಕರಿಸಿದ್ದಾರೆ. ಇದೀಗ ನಾವು ನಮ್ಮ ಪುರಾಣಗಳನ್ನು ಸ್ವಲ್ಪ ಗಮನಿಸೋಣ. ಮಾರುತಿಯು ವಾಯುದೇವರ ಅನುಗ್ರಹದಿಂದ ಮನುಷ್ಯಳಾದ ಅಂಜನಾದೇವಿಗೆ ಜನಿಸಿದ ಮಗ. ಮಾರುತಿಯು ಹುಟ್ಟಿದ ತಕ್ಷಣ ಸೂರ್ಯಮಂಡಲವನ್ನು ತಿನ್ನಲು ಜಿಗಿದಿದ್ದ!  ಈ ಪುರಾಣಕಥೆಯನ್ನು ವಾಸ್ತವಕ್ಕೆ ಪರಿವರ್ತಿಸಲು ಪ್ರಯತ್ನಿಸಿದರೆ ಹೊಳೆಯುವದೇನು? ಮಾರುತಿಯು ಭೂಮಿಗೆ ಬಂದ ಅನ್ಯಗ್ರಹಜೀವಿಯ ಹಾಗು ಭೂನಿವಾಸಿ ಅಂಜನಾದೇವಿಯ ಸಂಕರ ಪುತ್ರನಾಗಿರಬಹುದು! ಹೀಗೆ ಭಾವಿಸುವುದು ಕಲ್ಪನಾವಿಲಾಸದ ಪರಮಾವಧಿಯೇ ಆಗಿರಲಿ, ಆದರೆ ಈ ತರ್ಕವನ್ನು ಬದಿಗಿರಿಸಿದರೆ, ಅಮೆರಿಕದಲ್ಲಿರುವ ಆ ಇತಿಹಾಸಪೂರ್ವ ಶಿಲ್ಪ ನಮ್ಮ ಮಾರುತಿಯನ್ನು ಏಕೆ ಹೋಲುತ್ತದೆ ಎನ್ನುವದಕ್ಕೆ ಬೇರೊಂದು ಉತ್ತರವನ್ನು ನಾವು ಹುಡುಕಬೇಕಾಗುತ್ತದೆ. ಜೈ ಬಜರಂಗ ಬಲಿ!

ಹರಪ್ಪಾ ಹಾಗು ಮೊಹೆಂಜೊದಾಡೊದಲ್ಲಿ ಕಂಡು ಬಂದಂತಹ ನಗರಗಳ ರಚನೆಗಳನ್ನು ನಾವು ಸರಸ್ವತಿ ನದಿಯ ಕೊಳ್ಳದಲ್ಲಿ , ಅದರಂತೆ ಗಂಗಾ ನದಿಯ ಕೊಳ್ಳದಲ್ಲೂ ಕಾಣುತ್ತೇವೆ. ಸರಸ್ವತಿ ನದಿಯ ಕೊಳ್ಳದಲ್ಲಿ ಸುಮಾರು ಕ್ರಿಸ್ತಪೂರ್ವ ಏಳುಸಾವಿರ ವರ್ಷಗಳ ಹಿಂದಿನಿಂದಲೇ ಮಾನವವಸತಿ ಪ್ರಾರಂಭವಾಗಿತ್ತು ಎಂದು ಇತಿಹಾಸತಜ್ಞರು ಭಾವಿಸುತ್ತಾರೆ. ಈ ನಾಗರಿಕತೆಯು ತನ್ನ ಶಿಖರಾವಸ್ಥೆಯಲ್ಲಿ ಇದ್ದಾಗ ಇಜಿಪ್ತ, ಮೆಸೊಪೊಟೆಮಿಯಾ ಮೊದಲಾದ ದೇಶಗಳ ಜೊತೆಗೆ ವ್ಯಾಪಾರ ಸಂಬಂಧವನ್ನು ಇಟ್ಟುಕೊಂಡಿತ್ತು. ಈ ನಾಗರಿಕತೆಯಲ್ಲಿ ಒಬ್ಬ ಅರಸನ ಏಕಾಧಿಪತ್ಯ ಇರದೆ, ಸಾಮುದಾಯಿಕ ಆಡಳಿತ ಇತ್ತು ಎನ್ನುವುದು ಮತ್ತೊಂದು ಊಹೆ. ಈ ನಾಗರಿಕತೆಯ ಚಿತ್ರಗಳಲ್ಲಿ ಅಥವಾ ಇತರ ಕಲಾಕೃತಿಗಳಲ್ಲಿ ಸೈನಿಕರನ್ನಾಗಲೀ, ಹಿಂಸೆಯನ್ನಾಗಲೀ ತೋರಿಸುವ ಯಾವುದೇ ಚಿತ್ರ ದೊರೆತಿಲ್ಲ. ಅಥವಾ ಆ ತರಹದ ಶಸ್ತ್ರಾಸ್ತ್ರಗಳೂ ದೊರೆತಿಲ್ಲ. ಆದುದರಿಂದ ಇವರು ಯುದ್ಧವಿಮುಖರಾದ, ಶಾಂತಿಪ್ರಿಯರಾದ, ಸಾಮರಸ್ಯ ಜೀವನದ, ಸಮುದಾಯಪ್ರಭುತ್ವದ ನಾಗರಿಕರಾಗಿದ್ದರು ಎಂದು ನಾವು ಊಹಿಸಬಹುದು.

ಇಂತಹ ಒಂದು ನಾಗರಿಕತೆ ಕಣ್ಮರೆಯಾಗಲು ಕಾರಣವೇನು? ಸರಸ್ವತಿ ನದಿಯು ಬತ್ತಿಹೋಗಿದ್ದರಿಂದ ಇವರು ಪೂರ್ವದಿಕ್ಕಿಗೆ ಗುಳೇ ಹೋಗಿ ಗಂಗಾ ನದಿಯ ಕೊಳ್ಳದಲ್ಲಿ ನೆಲೆಸಿರುವುದು ಒಂದು ಸಾಧ್ಯತೆಯಾಗಿದೆ. ಈ ಸಾಧ್ಯತೆಯನ್ನು ಡ್ಯಾನಿನೊ ಪುರಸ್ಕರಿಸುತ್ತಾರೆ. ಎರಡನೆಯ ಸಾಧ್ಯತೆ ಎಂದರೆ ಈ ನಾಗರಿಕತೆಯ ಮೇಲೆ ನಡೆದ ದಾಳಿಗಳು. ಈ ವಾದವನ್ನು ಡ್ಯಾನಿನೊ ಒಪ್ಪುವುದಿಲ್ಲ.

ನಮ್ಮ ಪುರಾಣಗಳಲ್ಲಿ ಶಿವನನ್ನು ತ್ರಿಪುರಸಂಹಾರಿ ಎಂದು ಕರೆಯಲಾಗಿದೆ. ತಾರಕಾಕ್ಷ, ಕಮಲಾಕ್ಷ, ಹಾಗು ವಿದ್ಯುನ್ಮಾಲಿ ಎನ್ನುವ ಮೂವರು ಅಸುರರು ಕಟ್ಟಿಕೊಂಡ ಮೂರು ಪುರಗಳನ್ನು ನಾಶ ಮಾಡಿದ್ದಕ್ಕಾಗಿ ಶಿವನಿಗೆ ಈ ಬಿರುದು ಬಂದಿದೆ. ಅದರಂತೆಯೇ ಇಂದ್ರನಿಗೆ ಪುರಂದರ ಎಂದರೆ ಪುರಗಳನ್ನು ಕೊಚ್ಚಿ ಹಾಕಿದವನು ಎನ್ನುವ ಬಿರುದಿದೆ! ಇವರೇ ಸಿಂಧು ನಾಗರಿಕತೆಯ ವಿನಾಶಕರೆ?

ಸಿಂಧು ಕೊಳ್ಳದ ನಾಗರಿಕತೆಯ ಮೇಲೆ ನಡೆದ ದಾಳಿ ಇರಾಣ ಹಾಗು ತುರ್ಕಮೆನಿಸ್ತಾನದಿಂದ ಬಂದಂತಹ ಆರ್ಯಜನಾಂಗದವರ ದಾಳಿ ಎನ್ನುವುದು ಒಂದು ಊಹೆ. ಸಿಂಧು ಕೊಳ್ಳದ ಜನರು ದ್ರಾವಿಡರು ಎನ್ನುವುದು ಮತ್ತೊಂದು ಊಹೆ. ಇವರು ದ್ರಾವಿಡರಲ್ಲ, ಇವರೂ ಸಹ ಆರ್ಯರೇ ಎನ್ನುವುದು ಇನ್ನೊಂದು ಊಹೆ. ಆರ್ಯಾವರ್ತದಲ್ಲಿ ನಡೆದ ಘರ್ಷಣೆಯು, ವಿಭಿನ್ನ ಕಾಲಾವಧಿಗಳಲ್ಲಿ ಭಾರತಕ್ಕೆ ಬಂದಂತಹ ಎರಡು ಆರ್ಯಜನಾಂಗಗಳ ನಡುವೆ ನಡೆದ ತಿಕ್ಕಾಟವೆಂದು ವರ್ಣಿಸಿ, ಲೂಯಿಸ್ ಎನ್ನುವವರು ಒಂದು ಕಾದಂಬರಿಯನ್ನು ಬರೆದಿದ್ದರು. ಆ ಕಾದಂಬರಿಯು ಧಾರಾವಾಹಿಯಾಗಿ ‘ಸುಧಾ’ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದೇನೇ ಇದ್ದರೂ ಸಿಂಧೂ ನಾಗರಿಕತೆಯು ನಷ್ಟವಾಗಲೇ ಇಲ್ಲ ; ಗಂಗಾ ನದಿಯ ಕೊಳ್ಳದಲ್ಲಿ ಇದು ಪುನರುಜ್ಜೀವನವನ್ನು ಹೊಂದಿತು ಎನ್ನುವ ತರ್ಕಕ್ಕೆ ಮೈಕೆಲ್ ಡ್ಯಾನಿನೊ ಅನೇಕ ದಾಖಲೆಗಳನ್ನು ನೀಡಿದ್ದಾರೆ. ಇದು ಸಂಭವನೀಯವಾಗಿದೆ.

ಸಮುದ್ರಮಥನದ ಕತೆಯನ್ನು ನಾವೆಲ್ಲ ಕೇಳಿದ್ದೇವೆ. ಸಮುದ್ರಮಥನದಲ್ಲಿ ಕಡೆಗೋಲಿನ ತರಹ ಬಳಸಲಾದ ಮಂದಾರ ಪರ್ವತವು ವಾಸ್ತವದಲ್ಲಿ ಇತ್ತೀಚೆಗೆ ಜನಿಸಿದ ಹಿಮಾಲಯ ಪರ್ವತವೇ ಆಗಿರಬಹುದು. ಈ ಬೃಹತ್ ಭೂಚಲನೆಯ ಸಮಯದಲ್ಲಿ ಅನೇಕ ಮಾನವಸಮುದಾಯಗಳು ಹಾಗು ಪ್ರಾಣಿಗಳು ಹಿಮಾಲಯದ ಸುತ್ತಲಿನ ಪ್ರದೇಶಗಳಿಂದ ಭಾರತಕ್ಕೆ ಬಂದಿರಬಹುದು. ಅಥವಾ ಈ ಜೀವಿಗಳು ಪಶ್ಚಿಮ ಏಶಿಯಾದ ದೇಶಗಳಿಂದ ಸಮುದ್ರಮಾರ್ಗವಾಗಿ ಭಾರತಕ್ಕೆ ಆಗಮಿಸಿರಲೂಬಹುದು. ಸಮುದ್ರಮಥನದ ಫಲಗಳೆಂದು ಹದಿನಾಲ್ಕು ರತ್ನಗಳನ್ನು ಹೇಳಲಾಗಿದೆ:

                                 ಲಕ್ಷ್ಮೀ ಕೌಸ್ತುಭ ಪಾರಿಜಾತಕ ಸುರಾ ಧನ್ವಂತರಿಶ್ಚಂದ್ರಮಾ: 
                                 ಗಾವಃ ಕಾಮದುಘೋ ಸುರೇಶ್ವರಗಜೋ ರಂಭಾದಿ ದೇವಾಂಗನಾ:
                                 ಅಶ್ವಃ ಸಪ್ತಮುಖೋ ಹರಿಧನುಃ ಶಂಖೋಮೃತಂ ಚಾಂಬುಧೇ:
                                 ರತ್ನಾನೀಹಿ ಚತುರ್ದಶಂ ಪ್ರತಿದಿನಂ ಕುರ್ವಂತು ವೋ ಮಂಗಲಮ್
                                   
ಈ ಶ್ಲೋಕದಲ್ಲಿ ಬರುವ ದೇವೇಂದ್ರನ ಆನೆಯನ್ನು ಐದು ಸೊಂಡಿಲುಗಳ ಐರಾವತ ಎಂದು ಕರೆಯಲಾಗುತ್ತದೆ. ಇದು ವಾಸ್ತವದಲ್ಲಿ ೪೫೦೦ ಸಾವಿರ ವರ್ಷಗಳ ಹಿಂದೆ ವಿನಷ್ಟವಾದ mammoth ಇರಬಹುದು.  ಇನ್ನು ಅಪ್ಸರೆ ಎಂದರೆ ‘ಅಪ್+ಸರಾ’ ಅರ್ಥಾತ್ ನೀರಿನಿಂದ ಬಂದವಳು. ಆದುದರಿಂದ ದೇವೇಂದ್ರನ ಸ್ವರ್ಗದಲ್ಲಿರುವ ರಂಭೆ ಮೊದಲಾದ ಅಪ್ಸರೆಯರು ಈಜಿಪ್ತಿನಿಂದ ಬಂದಂತಹ ನರ್ತಕಿಯರಾಗಿರಬಹುದು!

ಜಗತ್ತಿನಲ್ಲಿ ಇರುವ ಆಧುನಿಕ ಸಾಕು ಗೋವುಗಳೆಲ್ಲ ಹತ್ತೂವರೆಸಾವಿರ ವರ್ಷಗಳ ಹಿಂದೆ ಮೆಸೊಪೊಟೆಮಿಯಾದಲ್ಲಿ ಜನಿತವಾದ ಸಂಕರ ಗೋವುಗಳು ಎನ್ನುವುದು ವಿಜ್ಞಾನಿಗಳ ಅಬಿಪ್ರಾಯವಾಗಿದೆ. ಈ ಗೋವುಗಳೇ ಸಮುದ್ರಮಥನದಲ್ಲಿ ಕುದುರೆ, ಐರಾವತ, ಅಪ್ಸರೆ ಮೊದಲಾದ ‘ರತ್ನ’ಗಳ ಜೊತೆಗೆ ಭಾರತಕ್ಕೆ ಬಂದವೆ? ಹಾಗಿದ್ದರೆ ಭಾರತದಲ್ಲಿ ಮೊದಲು ಕುದುರೆ ಹಾಗು ಆಕಳು ಇರಲಿಲ್ಲವೆ? ಬಹುಶ: ನಮ್ಮಲ್ಲಿ ಕೇವಲ ಕತ್ತೆ ಹಾಗು ಎಮ್ಮೆ ಇದ್ದವು ಎನಿಸುತ್ತದೆ. ಕುದುರೆ ಹಾಗು ಆಕಳು ಇವು ಭಾರತಕ್ಕೆ ಪಶ್ಚಿಮ ದಿಕ್ಕಿನಿಂದ ಭೂಮಾರ್ಗವಾಗಿ ಅಥವಾ ಸಮುದ್ರಮಾರ್ಗವಾಗಿ ಬಂದಿರಬಹುದು. ಇದಕ್ಕೆ ಪೂರಕವಾಗಿ ಎರಡು ಅಂಶಗಳನ್ನು ಉಲ್ಲೇಖಿಸಬಹುದು:

(೧) ರಾವಣ ಹಾಗು ವಾಲಿ ಇವರನ್ನು ಹೀನಾಯವಾಗಿ ಸೋಲಿಸಿದ ಕಾರ್ತವೀರ್ಯಾರ್ಜುನ ಎನ್ನುವ ರಾಜನ ರಾಜಧಾನಿಯನ್ನು ಮಾಹಿಷ್ಮತಿ ಎಂದು ಕರೆಯಲಾಗುತ್ತಿತ್ತು. ಮಾಹಿಷ್ಮತಿ ಎನ್ನುವ ಪದವು ಕನ್ನಡದ ‘ಎಮ್ಮಿಗನೂರು’ ಪದದ ಸಂಸ್ಕೃತೀಕರಣವಷ್ಟೆ. ಇದು ನರ್ಮದಾ ನದಿಯ ದಂಡೆಯ ಮೇಲಿತ್ತು. ಆಂಧ್ರಪ್ರದೇಶದಲ್ಲಿ ಎಮ್ಮಿಗನೂರು ಎನ್ನುವ ಊರು ಇದೆ. ಕರ್ನಾಟಕದಲ್ಲಿ ಇರುವ ಮೈಸೂರು ಇದು ‘ಮಹಿಷ+ಊರು’, ಅಂದರೆ ಮ್ಹೈಸೂರು ಅರ್ಥಾತ್ ಮೈಸೂರು. ಮೈಸೂರಿನ ‘ಮಹಿಷಾಸುರ’ನನ್ನು ಕೊಂದಂತಹ ಚಾಮುಂಡಿ ದೇವಿಯನ್ನು ಇಲ್ಲಿ ಸ್ಮರಿಸಬಹುದು.  ಕರ್ನಾಟಕದಲ್ಲಿ ಮಹಿಷವಾಡಿ ಎನ್ನುವ ಊರು ಸಹ ಇದೆ. ಆಷ್ಟೇ ಏಕೆ, ಮಹಾರಾಷ್ಟ್ರದಲ್ಲಿ ಇರುವ ‘ಮ್ಹೈಸಾಳ’ ಎನ್ನುವುದು ಕನ್ನಡದ ‘ಮಹಿಷ+ಹಾಳ’ವೇ ಸರಿ.

ಮಾಹಿಷ್ಮತಿಯ ಈ ಕಾರ್ತವೀರ್ಯಾರ್ಜುನನು ಸೋಮವಂಶೀಯನು. ಖ್ಯಾತ ಸಂಶೋಧಕ ಶಂ.ಬಾ.ಜೋಶಿಯವರ ಪ್ರಕಾರ ಆರ್ಯರು ಸೂರ್ಯಪೂಜಕರು ಹಾಗು ಅನಾರ್ಯರು ಚಂದ್ರಪೂಜಕರು. ಅರ್ಥಾತ್ ಕಾರ್ತವೀರ್ಯಾರ್ಜುನನು ಆರ್ಯಾವರ್ತದಲ್ಲಿ ಇದ್ದಂತಹ ಕನ್ನಡ ರಾಜನು. (ಕನ್ನಡ ಎಂದು ಹೇಳುವಾಗಲೆಲ್ಲ ನಾನು ಪುರಾಣಕಾಲದ ಕಂದಮಿಳ ಸಮುದಾಯವನ್ನು ಸೂಚಿಸುತ್ತಿರುತ್ತೇನೆ.) ರಾವಣ ಹಾಗು ವಾಲಿ ಇವರು ಆರ್ಯ ತಂದೆಗೆ ದೈತ್ಯ ಕುಲದ ತಾಯಿಯಲ್ಲಿ ಹುಟ್ಟಿದ ಮಕ್ಕಳು.

(೨) ಆರ್ಯರೇನೊ ಭಾರತಕ್ಕೆ ಕುದುರೆಗಳನ್ನೇರಿ ಬಂದರು. ಆದರೆ ಕನ್ನಡಿಗರು ಬಳಸುವ ‘ಕುದುರೆ’ ಪದವು ಈಜಿಪ್ತ ಭಾಷೆಯ `hytr’ ಪದದ ಅಪಭ್ರಂಶ ಎಂದು ಹೇಳಲಾಗುತ್ತಿದೆ. ಆದುದರಿಂದ ಸಮುದ್ರಮಥನದ ಸಪ್ತಮುಖೀ ಅಶ್ವವು ಈಜಿಪ್ತಿನಿಂದ ಆಮದಾದ ಕುದುರೆಯಾಗಿದ್ದರೆ ಆಶ್ಚರ್ಯವಿಲ್ಲ!

ಇದು ಭಾರತದ ಪೂರ್ವೇತಿಹಾಸವಾಯಿತು. ಆರ್ಯರ ಆಗಮನದ ಮೊದಲು ಭಾರತದಲ್ಲಿ ಎಮ್ಮೆಗಳು ಹಾಗು ಕತ್ತೆಗಳು ಇದ್ದವು ಎನ್ನುವುದನ್ನು ಇದು ಸೂಚಿಸುತ್ತದೆ. ಆಕಳು ಹಾಗು ಕುದುರೆಗಳು ಈಜಿಪ್ತಿನಿಂದ ಅಥವಾ ಆರ್ಯರ ಜೊತೆಗೆ ಭಾರತವನ್ನು ಪ್ರವೇಸಿರಬಹುದು. ಇನ್ನು ಭಾರತದ ಪುರಾಣಕಾಲದ ಅನೇಕ ಘಟನೆಗಳು ಗಂಗಾ-ಯಮುನಾ ಕೊಳ್ಳದಲ್ಲಿಯೇ ಜರುಗಿವೆ. ನಮ್ಮ ಪುರಾಣಗಳು ಹಾಗು ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತಗಳು ಈ ಇತಿಹಾಸವನ್ನು ದಾಖಲಿಸಿವೆ.

ರಾಮಾಯಣದ ನಾಯಕನಾದ ರಾಮಚಂದ್ರ ಹಾಗು ಖಳನಾಯಕನಾದ ರಾವಣ ಈರ್ವರೂ ಆರ್ಯರೇ! ರಾವಣನು ವಿಶ್ರವಸ್ ಎನ್ನುವ ಋಷಿಯ ಮಗ ಹಾಗು ಆರ್ಯದೇವತೆಯಾದ ಕುಬೇರನ ಸೋದರ ಸಂಬಂಧಿ. ಅದರಂತೆ ರಾವಣನು ಕೆಣಕಿದ ವಾಲಿಯೂ ಸಹ ಆರ್ಯನೇ. ಏಕೆಂದರೆ ಅವನು ಇಂದ್ರನ ಮಗನು! ರಾವಣನ ನೆಲೆ ಯಾವುದು? Of course ಲಂಕೆ! ಆದರೆ ಈ ಲಂಕೆ ಎಲ್ಲಿದೆ? ಶ್ರೀಲಂಕಾ ದ್ವೀಪವೆ ಈ ಲಂಕೆಯೆನ್ನುವುದು  ಜನಪ್ರಿಯ ಗ್ರಹಿಕೆ. ಆದರೆ ಇದು ಗೋದಾವರಿ ನದಿಯಲ್ಲಿದ್ದಂತಹ ಯಾವುದೋ ಒಂದು ನಡುಗಡ್ಡೆ ಆಗಿರಬಹುದು ಎನ್ನುವುದು ಕೆಲವು ಸಂಶೋಧಕರ ಅಭಿಪ್ರಾಯವಾಗಿದೆ. ಯಾಕೆಂದರೆ ದ್ರಾವಿಡ ಭಾಷೆಯಲ್ಲಿ ಲಂಕಾ ಅಥವಾ ಲಕ್ ಪದದ ಅರ್ಥವೇ ನಡುಗಡ್ಡೆ. (ಆರ್ಯಾವರ್ತದಲ್ಲಿ ಹಾಗು ಹಿಮಾಲಯದ ಅಡಿಭಾಗದಲ್ಲಿ ಆರ್ಯರಲ್ಲದೇ ಭಾರತದ ಇತರ ಮೂಲನಿವಾಸಿಗಳೂ ವಾಸಿಸುತ್ತಿದ್ದರು ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.)ಅಷ್ಟೇ ಏಕೆ, ವಾರಾಣಸಿಯಿಂದ ೩೨ ಕಿಲೋಮೀಟರ ದೂರದಲ್ಲಿ  ಲಂಕಾ ಎನ್ನುವ ಊರು ಇರುವುದನ್ನು ನಾವು ಗಮನಿಸಬೇಕು. ಶಿವಭಕ್ತನಾದ ರಾವಣನು ಕಾಶಿಗೆ ಸಮೀಪದಲ್ಲಿರುವ ಲಂಕೆಯ ರಾಜನಾಗಿರಬಹುದೆ? ಆದರೆ ಶ್ರೀಲಂಕೆಯಲ್ಲಿ ಗುಡ್ಡವೊಂದರ ಮೇಲೆ ಇರುವ ಪುರಾತನ ಕೋಟೆಯು, ರಾವಣನ ಕೋಟೆ ಎಂದು ಅಲ್ಲಿಯ ಜನ ಭಾವಿಸುತ್ತಾರೆ.

ಇನ್ನು ರಾವಣ ಅಥವಾ ರಾವಳ ಎನ್ನುವ ಹೆಸರನ್ನು ಹೊತ್ತ ಅನೇಕ ವ್ಯಕ್ತಿಗಳನ್ನು ಅಥವಾ ಊರುಗಳನ್ನು ಬೃಹತ್ ಭಾರತದ ಅನೇಕ ಪ್ರದೇಶಗಳಲ್ಲಿ ನಾವು ನೋಡಬಹುದು. ರಾವಳಗಾವ ಎನ್ನುವ ಊರು ಮಹಾರಾಷ್ಟ್ರದಲ್ಲಿದೆ. ರಾವಳಪಿಂಡಿಯು ಪಾಕಿಸ್ತಾನದಲ್ಲಿರುವ ದೊಡ್ಡ ಪಟ್ಟಣ. ರವಳನಾಥ ಎನ್ನುವ ಪ್ರಸಿದ್ಧ ವ್ಯಕ್ತಿಯೊಬ್ಬನು ನಾಥ ಸಂಪ್ರದಾಯದ ಯೋಗಿಯಾಗಿದ್ದಾನೆ. ನಾಥ ಸಂಪ್ರದಾಯವು ಅವೈದಿಕ ಸಂಪ್ರದಾಯ ಎನ್ನುವುದನ್ನು ನಾವು ಗಮನಿಸಬೇಕು.

ರಾವಣನ ಹೆಂಡತಿಯು ಮಂಡೋದರಿ, ಅರ್ಥಾತ್ ಇವಳು ‘ಮಂಡ’ ಕುಲದವಳು. ಈ ಕುಲದ ಹೆಸರನ್ನು ಹೊತ್ತ ಅನೇಕ ಊರುಗಳು ಕರ್ನಾಟಕದಲ್ಲಿವೆ. ಉದಾಹರಣೆಗೆ, ಮಂಡ್ಯ, ಮಂಡಾಳ, ಮಂಡೂರು ಇತ್ಯಾದಿ. ಈ ಕುಲಸ್ಥರು ಕೇವಲ ಭಾರತಕ್ಕೆ ಸೀಮಿತರಾಗಿರಲಿಲ್ಲ. ಏಕೆಂದರೆ ಪುರಾಣಕಾಲದ ಭಾರತವು ಈಗಿನ ಭಾರತಕ್ಕಿಂತ ತುಂಬಾ ವಿಸ್ತಾರವಾಗಿತ್ತು. ಭಾರತೀಯರು ಬ್ರಹ್ಮದೇಶವೆಂದು ಕರೆಯುತ್ತಿದ್ದ ಇಗಿನ ಮೈನ್ಮಾರ ದೇಶದಲ್ಲಿರುವ ಮಂಡಾಲೆಯ ಸೆರೆಮನೆಯಲ್ಲಿ ನಮ್ಮ ಲೋಕಮಾನ್ಯ ತಿಲಕರನ್ನು ಕೈದಿಯನ್ನಾಗಿ ಇಡಲಾಗಿತ್ತಲ್ಲವೆ? ಈ ಮಂಡಾಲೆ ಎಂದರೆ ಮಂಡಹಾಳ ಅಂದರೆ ಮಂಡರ ಹಳ್ಳಿ!
ಈ ಮಂಡ ಹೆಸರಿನ ಊರುಗಳು ಪಾಕಿಸ್ತಾನದಲ್ಲಿಯೂ ಸಹ ಸಿಗುತ್ತವೆ!

ನಾಲ್ಕು ವೇದಗಳು, ಹದಿನೆಂಟು ಪುರಾಣಗಳು ಹಾಗು ಮಹಾಕಾವ್ಯಗಳೆಂದು ಪ್ರಸಿದ್ಧವಾದ ರಾಮಾಯಣ ಹಾಗು ಮಹಾಭಾರತ ಇವು ಭಾರತದ ಪ್ರಾಚೀನ ಇತಿಹಾಸದ ಆಕರಗ್ರಂಥಗಳಾಗಿವೆ. ಋಗ್ವೇದದ ರಚನೆ ಕ್ರಿ.ಶ.ಪೂ.೨೦೦೦ದಲ್ಲಿ ಆಯಿತು ಎನ್ನಲಾಗುತ್ತದೆ. ಋಗ್ವೇದದಲ್ಲಿ ‘ಪಣ’ ಎನ್ನುವ ಅನಾರ್ಯ ಜನಾಂಗದವರ ವರ್ಣನೆ ಇದೆ. ಆದುದರಿಂದ ಈ ಜನಾಂಗದವರು ಆರ್ಯರೊಡನೆ ಸಂಪರ್ಕ ಬಂದಂತಹ ಕಾಲದಲ್ಲಿ ಹಿಮಾಲಯದ ಕೆಳಭಾಗದಲ್ಲಿ ವಾಸಿಸುತ್ತಿರಬಹುದು. ಪಣರಿಗೂ ಆರ್ಯರಿಗೂ ಅನೇಕ ಯುದ್ಧಗಳಾಗಿವೆ. ಈ ಜನಾಂಗದವರು ಸೋತು ಓಡಿ ಹೋಗಿ ಭಾರತದ ವಿವಿಧ ಪ್ರದೇಶಗಳಲ್ಲಿ ನೆಲೆಸಿದರು. ಇವರು ನೆಲೆಸಿದ ಪ್ರದೇಶಗಳು ಇವರ ಹೆಸರುಗಳನ್ನು ಸೂಚಿಸುವುದು ಸಹಜವಾಗಿದೆ. ಉದಾಹರಣೆಗೆ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇರುವ ಪಣಂಬೂರು, ಉತ್ತರ ಕನ್ನಡ ಜಿಲ್ಲೆಯಲ್ಲಿ ಇರುವ ಪಣಸೋಳಿ ಹಾಗು ಗೋವಾದಲ್ಲಿ ಇರುವ ಪಣಜಿ ಇವು ಕರಾವಳಿಯಲ್ಲಿ ಹಬ್ಬಿದ ಈ ಜನಾಂಗದ ನೆಲೆಗಳಾಗಿವೆ. ಬೀದರ ಜಿಲ್ಲೆಯಲ್ಲಿ ‘ಹಣಬ’ ಎನ್ನುವ ಸಮುದಾಯವಿದೆ. ಓಡಿಸಾದಲ್ಲಿ ನೆಲೆಸಿದ ಪಣ ಜನಾಂಗದವರನ್ನು ಅಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿಸಲಾಗಿದೆ. ಪಣ ಜನಾಂಗಕ್ಕೆ ಹಾಗು ಕಂದ ಜನಾಂಗಕ್ಕೆ ನಡೆದ ತಿಕ್ಕಾಟಗಳು ಸಮಾಚಾರ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು. ಕಂದ ಜನಾಂಗದವರನ್ನು ಓಡಿಸಾದಲ್ಲಿ ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ಕಂದವರ್ಗದವರು ನೆಲೆಸಿದ ಅನೇಕ ಬೀಡುಗಳು ಕರ್ನಾಟಕದಲ್ಲಿ ಇವೆ. ಉದಾ: ಕಂದಕೂರು, ಕಂಡೊಳ್ಳಿ ಇತ್ಯಾದಿ. ಮುಂಬಯಿಯಲ್ಲಿರುವ ಕಾಂದೀವ್ಲಿ ಇದು ಕಂದವಳ್ಳಿಯೇ ಸರಿ. ಅಫಘಾನಿಸ್ತಾನದಲ್ಲಿರುವ ಹಾಗು ಅದರಂತೆ ಮಹಾರಾಷ್ಟ್ರದಲ್ಲಿರುವ ‘ಕಂದಹಾರ’’ ಇವು ಕಂದರ ನೆಲೆಗಳೇ ಆಗಿವೆ. ಗುಜರಾತದಲ್ಲಿರುವ ‘ಕಾಂಡ್ಲಾ’ ಬಂದರು ಸಹ ಕಂದಹಾಳದಿಂದಲೇ ಬಂದಿದೆ. (ಆರ್ಯ ಜನಾಂಗದವರು ಕನ್ನಡ ಉಚ್ಚಾರಗಳನ್ನು ದೀರ್ಘೀಕರಿಸುತ್ತಾರೆ. ಉದಾಹರಣೆಗೆ, ಕಾಳಿ ನದಿಯ ದಂಡೆಯ ಮೇಲಿರುವ ‘ದಂಡಿಹಳ್ಳಿ’ಯು ಆರಿಯರ ನಾಲಿಗೆಯಲ್ಲಿ ‘ದಾಂಡೇಲಿ’ ಆಗಿದೆ. ಇದರಂತೆಯೆ ಕಾಂಡ್ಲಾ.)

ಪಣ ಜನರನ್ನು ವೇದಗಳಲ್ಲಿ ಗುರುತಿಸಿದಂತೆ ಕಂದ ಜನಾಂಗವನ್ನು ಮಹಾಭಾರತದಲ್ಲಿ ಗುರುತಿಸಬಹುದು. ಕಂದ ಸಮುದಾಯದ ದಾರುಣ ನರಮೇಧವನ್ನು ಮಾಡಿದ ಅರ್ಜುನನನ್ನು ಮಹಾಭಾರತದಲ್ಲಿ ಮಹಾವೀರನೆಂದು ಗುರುತಿಸಲಾಗುತ್ತಿದೆ. ಇದು ಬಹುಶಃ ಭಾರತದಲ್ಲಿ ಜರುಗಿದ ಅತ್ಯಂತ ದೊಡ್ಡ ನರಮೇಧವಾಗಿರಬಹುದು. ಇದು ಹೀಗಿದೆ: ಕಂದ ಪದದಿಂದಲೇ ಸಂಸ್ಕೃತದಲ್ಲಿ ‘ಖಾಂಡವ’ ಪದ ಬಂದಿದೆ. ಇದರ ಅರ್ಥ: ‘ಕಂದ ಸಮುದಾಯಕ್ಕೆ ಸಂಬಂಧಿಸಿದ  ’ಎಂದಾಗುತ್ತದೆ. ಈ ಖಾಂಡವ ವನವನ್ನು ಅರ್ಜುನನು ಸುಟ್ಟು ಹಾಕಿದ ಬಳಿಕ, ಪಾಂಡವರು ಅಲ್ಲಿ ತಮ್ಮ ರಾಜಧಾನಿಯಾದ ಇಂದ್ರಪ್ರಸ್ತ ನಗರವನ್ನು ಕಟ್ಟಿದರು. ಆ ಅಡವಿಯಲ್ಲಿ ನೆಲೆಸಿದ್ದ ಸರ್ಪಗಳನ್ನು ಅರ್ಜುನನು ಅಗ್ನಿಯಲ್ಲಿ ಬೂದಿ ಮಾಡಿದನು. ಆ ಸರ್ಪಗಳ ಪೈಕಿ ತಕ್ಷಕ ಎನ್ನುವ ಸರ್ಪವೊಂದೇ ತಪ್ಪಿಸಿಕೊಂಡು ಹೋಯಿತು ಎಂದು ಮಹಾಭಾರತದಲ್ಲಿ ಹೇಳಲಾಗಿದೆ. ವಾಸ್ತವದಲ್ಲಿ ಸರ್ಪಗಳು ಎಂದರೆ ನಾಗ ಜನಾಂಗದವರು. ಈ ನಾಗರು ಹಾಗು ಕಂದರು ಬೇರೆಯಲ್ಲ.  ಖಾಂಡವವನದಿಂದ ಓಡಿ ಹೋದ ಕಂದರು ಕರ್ನಾಟಕದಲ್ಲಿ  ಬಂದು ನೆಲೆಸಿದ ಪ್ರದೇಶವೇ ‘ನಾಗರಖಂಡ’. ಸರ್ಪಭೂಷಣನಾದ  ಸುಬ್ರಹ್ಮಣ್ಯ ಸ್ವಾಮಿಯು ಇವರ ದೇವರು. ಈತನು ‘ಸ್ಕಂದ’ ಎಂದರೆ ‘ಕಂದ’ದ ಸಂಸ್ಕೃತೀಕೃತ ನಾಮಧಾರಿ. ಈತನ ಪರಿಸರದಲ್ಲಿಯೇ ನಾಗಪೂಜೆಯನ್ನು, ನಾಗಪ್ರತಿಷ್ಠೆಯನ್ನು ಮಾಡಲಾಗುತ್ತಿದೆ. ಇದರಂತೆಯೇ ಇತರ ಅನೇಕ ಆದಿವಾಸಿಗಳು ಸಹ ತಮ್ಮ ನೆಲೆಯನ್ನು ಬಿಟ್ಟು ದಕ್ಷಿಣಕ್ಕೆ ಓಡಿದ್ದಾರೆ. ಇವರನ್ನು ಪರಾಭವಗೊಳಿಸಿದವಳು ಒಬ್ಬ ಮಹಿಳೆ. ಇವಳು ಮಾತೃಪ್ರಧಾನ ಕುಲದ ಒಡತಿ. ಇವಳ ಕಥೆಯನ್ನು ಮುಂದೆ ನೋಡೋಣ.

Sunday, June 22, 2014

‘ನವಿಲು’....................ದ.ರಾ.ಬೇಂದ್ರೆ



ಕಲಘಟಗಿ ಇದು ಧಾರವಾಡದಿಂದ ೩೫ ಕಿಲೋಮೀಟರ ದೂರದಲ್ಲಿರುವ ತಾಲುಕಾ ಸ್ಥಳ. ಧಾರವಾಡವು ಮಲೆನಾಡಿನ ಸೆರಗಾದರೆ, ಕಲಘಟಗಿಯು ಪೂರ್ಣ ಮಲೆನಾಡಾಗಿದೆ. ಬೇಂದ್ರೆಯವರು ಒಮ್ಮೆ ಧಾರವಾಡದಿಂದ ಕಲಘಟಗಿಗೆ ಪ್ರಯಾಣಿಸುತ್ತಿದ್ದಾಗ ದಾರಿಯ ಬದಿಯ ಗದ್ದೆಯಲ್ಲಿ ನವಿಲೊಂದನ್ನು ನೋಡಿದ್ದಾರೆ. ಅದು ಬಹುಶಃ ಬೇಸಿಗೆಯ ಕಾಲವಿರಬೇಕು. ನವಿಲುಗಳು ಬೇಸಿಗೆಯ ಕಾಲದಲ್ಲಿ ಸಂತಾನೋತ್ಪಾದನೆಯನ್ನು ಮಾಡುತ್ತವೆ. ಬೇಸಿಗೆಯಲ್ಲಿ ಅಡ್ಡ ಮಳೆಗಳು ಹುಯ್ಯುವ ಸಮಯದಲ್ಲಿ ಗಂಡು ನವಿಲು ತನ್ನ ರೆಕ್ಕೆಗಳನ್ನು ಹರಡಿಕೊಂಡು ಕುಣಿಯುತ್ತದೆ ಹಾಗು ಜೊತೆಗೂಡಲೆಂದು ಹೆಣ್ಣು ನವಿಲನ್ನು ಆಹ್ವಾನಿಸುತ್ತದೆ. ಮಳೆ ಬರುವ ಮುನ್ಸೂಚನೆ ಹಕ್ಕಿಗಳಿಗೆ ತಿಳಿಯುವುದು ಅಸಹಜವೇನಲ್ಲ. ಅನೇಕ ಜೀವಿಗಳಲ್ಲಿ ಈ ಪೂರ್ವಸಂವೇದನಾ ಶಕ್ತಿ ಇದ್ದೇ ಇರುತ್ತದೆ. ಆದುದರಿಂದ ನವಿಲು ಕುಣಿದರೆ ಮಳೆ ಬರುತ್ತದೆ ಎಂದು ನಮ್ಮ ಗ್ರಾಮೀಣ ಪೂರ್ವಜರು ಭಾವಿಸುತ್ತಿದ್ದರು. 

ಆದರೆ ಬೇಂದ್ರೆಯವರು ನೋಡಿದ ನವಿಲು ತನ್ನ ಪಂಖವನ್ನು ಮುಚ್ಚಿಕೊಂಡು ಸುಮ್ಮನೇ ನಿಂತಿದೆ. ಇದು ಬೇಂದ್ರೆಯವರಲ್ಲಿ ಒಂದು ಕಲ್ಪನೆಯನ್ನು ಹುಟ್ಟಿಸಿರಬಹುದು. ಮಳೆಯು ಆಗದೇ ಇರುವದರಿಂದ, ಭೂಮಿ ಒಣಗಿ ಹೋಗಿದೆ, ಜನ ತತ್ತರಿಸುತ್ತಿದ್ದಾರೆ. ಈ ನವಿಲು ಕುಣಿದರೆ ಮಳೆ ಬಂದೀತೆ ಎಂದು ಬೇಂದ್ರೆಯವರ ಮನಸ್ಸು ಹೊಯ್ದಾಡಿರಬಹುದು. ಆಗ ಬೇಂದ್ರೆಯವರಲ್ಲಿ ಮೂಡಿದ ಹಾಡು, ‘ಕುಣಿ ಕುಣಿ ನವಿಲೇ ಕುಣೀ ಕುಣೀ’! ಕವಿತೆಯ ಪೂರ್ಣಪಾಠ ಹೀಗಿದೆ:

ಕುಣಿ ಕುಣಿ, ನವಿಲೇ, ಕುಣೀ ಕುಣೀ || ಪಲ್ಲವಿ ||
ಬಿಸಿಲಿಗೆ ಬೇಯುತ ಬಾಯ್ ಬಿಡುತಿದೆ ಇಳೆ,
ಕುದಿವುದು ಮೋಡವು, ತೊಟ್ಟಿಡದಿದೆ ಮಳೆ,
ಬತ್ತಿತು ಹಳ್ಳವು, ಅತ್ತಿತು ತೊರೆ ಹೊಳೆ,
ತಾಪವ ನೀ ಮರೆ, ಕುಣೀ ಕುಣೀ
ನಿನಗಿದೆ ಸಾವಿರ ಕಣ್ಣಿನ ಛತ್ರ,
ಮೂಲೋಕಕು ಬೀಸಣಿಕೆ ವಿಚಿತ್ರ,
ಸರಸತಿ ಅರಳಿಸಿದೀ ಶತಪತ್ರ,
ರೋಮಾಂಚನದೊಳು ಕುಣೀ ಕುಣೀ
ನೀ ಕುಣಿ, ಜೊತೆಗಾತಿಯನೂ ಕುಣಿಸು;
ನಿನ್ನ ನೋಡಿ ಜಗ ಮರೆವರ ತಣಿಸು.
ಹರುಷ ಬಾಷ್ಪಗಳನೆತ್ತಲು ಹಣಿಸು;
ಕೇಕೆಯ ಹಾಕುತ ಕುಣೀ ಕುಣೀ
ನಭಕ್ಕೆ ಏನಿದೆ ನೆಲದಲಿ ಆಸೆ?
ನೆಲಕಿದೆ ಆರದ ಶುಷ್ಕ ಪಿಪಾಸೆ!
ಮೊಳಗಲಿ ನಿನ್ನಾನಂದದ ಭಾಷೆ
ನೆಲೆ ಮುಗಿಲನು ಹೆಣೆದೀತು ಮಳೆ
ಮುಗಿಲನು ಮುದ್ದಿಡೆ ನೆಲದ ಬೆಳೆ
ಚಿಗಿವುದು, ಜಿಗಿವುದು ನೆಗೆವುದಿಳೆ;
ಚಿಕ್ಕೆ ಇರುಳು ಕುಣಿದಂತೆ ಕುಣೀ
ಕುಣಿ ಕುಣಿ ನವಿಲೇ ಕುಣೀ ಕುಣೀ.
..........................................................................................
ಬಿಸಿಲಿಗೆ ಬೇಯುತ ಬಾಯ್ ಬಿಡುತಿದೆ ಇಳೆ,
ಕುದಿವುದು ಮೋಡವು, ತೊಟ್ಟಿಡದಿದೆ ಮಳೆ,
ಬತ್ತಿತು ಹಳ್ಳವು, ಅತ್ತಿತು ತೊರೆ ಹೊಳೆ,
ತಾಪವ ನೀ ಮರೆ, ಕುಣೀ ಕುಣೀ

ಕ್ರಮಬದ್ಧ ಬೆಳೆವಣಿಗೆಯು   ಬೇಂದ್ರೆಯವರ ಕವನಗಳ ಅಚೂಕ ವೈಶಿಷ್ಟ್ಯವಾಗಿದೆ. ಮೊದಲನೆಯ ನುಡಿಯಲ್ಲಿ ಬೇಂದ್ರೆಯವರು ಭೂಮಿಯ ಬವಣೆಯನ್ನು ಬಣ್ಣಿಸುತ್ತಿದ್ದಾರೆ. ಬಾಯಾರಿಕೆಯಿಂದ ಭೂತಾಯಿ ಬಾಯ್ಬಿಡುತ್ತಿದ್ದಾಳೆ ಎಂದು ಹೇಳುವಾಗ, ಬೇಂದ್ರೆಯವರು ಎರೆಮಣ್ಣಿನ ಹೊಲಗಳಲ್ಲಿ ಎದ್ದಿರುವ ಬಿರುಕುಗಳನ್ನು ಚಿತ್ರಿಸುತ್ತಿದ್ದಾರೆ. ಈ ಪರೋಕ್ಷ ವರ್ಣನೆ ಬೇಂದ್ರೆಯವರ ಕವನಗಳ ಮತ್ತೊಂದು ಲಕ್ಷಣವಾಗಿದೆ. ಭೂತಾಯಿಯ ಬಾಯಾರಿಕೆಗೆ ಕಾರಣವೆಂದರೆ ಮಳೆ ಇಲ್ಲ. ಮಳೆ ಇಲ್ಲದ್ದರಿಂದ ತೊರೆ, ಹಳ್ಳಗಳೆಲ್ಲ ಬತ್ತಿ ಹೋಗಿವೆ. ಮಳೆಯನ್ನು ಸುರಿಸುವ ಮೋಡವು ಸುಡುಬೇಸಿಗೆಯಿಂದಾಗಿ ಕಾಯ್ದಿದೆ. ಕಾಯ್ದ ಮೋಡವು ಮೇಲೇರಿ ಹೋಗುವುದು ಹಾಗು ಮಳೆಯನ್ನು ಸುರಿಸದೆ ಇರುವುದು ವೈಜ್ಞಾನಿಕ ಸತ್ಯವಾಗಿದೆ. ಅರ್ಥಾತ್ ಬೇಂದ್ರೆಯವರ ಕವನಗಳಲ್ಲಿ ಕಲ್ಪನೆಯು ಯಾವಾಗಲೂ ಸತ್ಯವನ್ನು ಅನುಸರಿಸುತ್ತದೆ. ಮಳೆಯೇ ಇಲ್ಲವಾದಾಗ, ಹಳ್ಳ ಬತ್ತಿ ಹೋಗುವುದು ಸಹಜವಾಗಿದೆ; ಸ್ವಲ್ಪ ನೀರು ಇರಬಹುದಾದ ತೊರೆ ಹಾಗು ಹೊಳೆಗಳಲ್ಲಿ ಈ ನೀರು, ಹೊಳೆಯು ಅತ್ತಿದ್ದರ ಪರಿಣಾಮದಂತೆ ಕಾಣುವುದು ಕಲ್ಪನೆಯ ಪರಮಶಿಖರವಾಗಿದೆ! ಇಷ್ಟೆಲ್ಲ ಸಂಕಟವು ಸುತ್ತಲೂ ಸುತ್ತಿರುವಾಗಲೂ ಸಹ, ಬೇಂದ್ರೆಯವರು ನವಿಲಿಗೆ ಕುಣಿಯಲು ಕರೆಯುತ್ತಿದ್ದಾರೆ. ‘ತಾಪವನ್ನು ಮರೆ’ ಎಂದು ಹೇಳುವಾಗ, ‘ಬಿಸಿಲಿನ ಶಕೆ’ ಎಂದು ಸೂಚಿಸುವದರ ಜೊತೆಗೆ ‘ಮಾನಸಿಕ ಸಂತಾಪ’ ಎನ್ನುವ ಅರ್ಥವನ್ನೂ ಬೇಂದ್ರೆಯವರು ಸೂಚಿಸುತ್ತಿದ್ದಾರೆ.

ನಿನಗಿದೆ ಸಾವಿರ ಕಣ್ಣಿನ ಛತ್ರ,
ಮೂಲೋಕಕು ಬೀಸಣಿಕೆ ವಿಚಿತ್ರ,
ಸರಸತಿ ಅರಳಿಸಿದೀ ಶತಪತ್ರ,
ರೋಮಾಂಚನದೊಳು ಕುಣೀ ಕುಣೀ

ನವಿಲು ಕುಣಿದ ಮಾತ್ರಕ್ಕೆ ಮಳೆ ಆದೀತೆ ಎನ್ನುವ ಸಂಶಯ ಯಾರಿಗಾದರೂ ಬರುವುದು ಸಹಜವೇ ಆಗಿದೆ. ಬೇಂದ್ರೆಯವರಿಗೂ ಸಹ ಈ ಸಂಶಯ ಬಂದಿರಬಹುದು. ಆದುದರಿಂದ ಅವರು ನವಿಲಿನ ಅಲೌಕಿಕತೆಯನ್ನು ಆಲೋಚಿಸುತ್ತಾರೆ. ನವಿಲು ನಮ್ಮೆಲ್ಲರಂತೆ ಕೇವಲ ಭೂಜೀವಿ ಅಲ್ಲ. ದೇವಲೋಕದ ಸರಸ್ವತಿಯು ‘ಶತಪತ್ರ’ದ ಮೇಲೆ ಎಂದರೆ ಕಮಲದ ಹೂವಿನ ಮೇಲೆ ಆಸೀನಳಾಗಿರುತ್ತಾಳೆ. ನವಿಲಿನ ರೆಕ್ಕೆಗಳೂ ಸಹ ಶತಪತ್ರಗಳು ಅಂದರೆ ನೂರು ಕಣ್ಣಿನ ಗರಿಗಳಾಗಿವೆ. ಈ ರೆಕ್ಕೆಗಳಿಂದ ಮಾಡಿದ ಬೀಸಣಿಗೆಯು ಗಾಳಿಯನ್ನು ಬೀಸಿಕೊಳ್ಳುವುದಕ್ಕಾಗಿ ಭೂಲೋಕದಲ್ಲಿ ಬಳಕೆಯಾಗುತ್ತದೆ. ಸ್ವರ್ಗ ಹಾಗು ಪಾತಾಳ ಲೋಕದಲ್ಲಿ ಇದು ಅಲಂಕಾರವಾಗಿ ಉಪಯೋಗಿಸಲ್ಪಡುತ್ತದೆ. ಅಲ್ಲದೆ ನವಿಲು ಸರಸ್ವತಿಯ ವಾಹನವೂ ಅಹುದು. ಇದೆಲ್ಲವೂ ನವಿಲಿಗಿರುವ ದೇವಸಂಬಂಧವನ್ನು ತಿಳಿಸುತ್ತದೆ. ಇಂತಹ ಅಸಾಮಾನ್ಯ ಜೀವಿಯಾದ ನವಿಲು ಕುಣಿದರೆ ಮಳೆ ಆಗದಿದ್ದೀತೆ? ಜೊತೆಗಾತಿಯ ಜೊತೆಗೆ ನರ್ತಿಸುವುದು ನವಿಲಿಗೆ ರೋಮಾಂಚನವನ್ನು ಮಾಡಿದರೆ, ಮಳೆ ಆದೀತೆನ್ನುವ ಆಸೆ ಮಾನವರನ್ನು ರೋಮಾಂಚನಗೊಳಿಸುತ್ತದೆ!

ನೀ ಕುಣಿ, ಜೊತೆಗಾತಿಯನೂ ಕುಣಿಸು;
ನಿನ್ನ ನೋಡಿ ಜಗ ಮರೆವರ ತಣಿಸು.
ಹರುಷ ಬಾಷ್ಪಗಳನೆತ್ತಲು ಹಣಿಸು;
ಕೇಕೆಯ ಹಾಕುತ ಕುಣೀ ಕುಣೀ

ಮಳೆಯು ಆಗಲಿ ಎನ್ನುವ ಹಂಬಲದಿಂದ ಬೇಂದ್ರೆಯವರು ನವಿಲಿಗೆ ಕುಣಿಯಲು ಆಹ್ವಾನವನ್ನೇನೊ ಇತ್ತರು. ಆದರೆ ಬೇಂದ್ರೆಯವರಿಗೆ ನವಿಲಿನ ಕುಣಿತದ ಮೂಲೋದ್ದೇಶ ಚೆನ್ನಾಗಿ ಗೊತ್ತು. ಆದುದರಿಂದಲೇ ‘ ನಿನ್ನ ಜೊತೆಗಾತಿಯನ್ನೂ ಕುಣಿತಕ್ಕೆ ಕರೆ; ನಿಮ್ಮ ಲೋಕಸಂಗ್ರಹ ಕಾರ್ಯ ನೆರವೇರಲಿ’ ಎನ್ನುತ್ತಾರೆ. ಈ ಕುಣಿತವನ್ನು ನೋಡಿದ ಜನ ಹರ್ಷಿತರಾಗುತ್ತಾರೆ. ಏಕೆ ಎನ್ನುತ್ತೀರಾ? ಇದು ಕೇವಲ ನವಿಲಿನ ನರ್ತನವನ್ನು ನೋಡಿದ ಆನಂದವಲ್ಲ, ಅಥವಾ ಒಂದು ಗಳಿಗೆಯ ಮಟ್ಟಿಗಾದರೂ ಜನರು ಸುತ್ತಲಿನ ತಾಪವನ್ನು ಮರೆತಿದ್ದಾರೆ ಎನ್ನುವ ಆನಂದವಲ್ಲ. ನಿಸರ್ಗವು ಸಂತೋಷದಿಂದ ಇದ್ದರೆ, ಜಗತ್ತಿಗೆಲ್ಲ ಒಳ್ಳೆಯದಾಗುತ್ತದೆ ಎನ್ನುವ ತಿಳಿವಳಿಕೆಯು ಈ ಆನಂದಕ್ಕೆ ಕಾರಣ. ಕಾಲಕಾಲಕ್ಕೆ ಮಳೆ ಬರಬೇಕು, ನವಿಲು ಕುಣಿಯಬೇಕು, ಸಕಲ ಜೀವಿಗಳು ತೃಪ್ತರಾಗಿರಬೇಕು ಎನ್ನುವ ಜೀವನದರ್ಶನ.

ನಭಕ್ಕೆ ಏನಿದೆ ನೆಲದಲಿ ಆಸೆ?
ನೆಲಕಿದೆ ಆರದ ಶುಷ್ಕ ಪಿಪಾಸೆ!
ಮೊಳಗಲಿ ನಿನ್ನಾನಂದದ ಭಾಷೆ
ನೆಲೆ ಮುಗಿಲನು ಹೆಣೆದೀತು ಮಳೆ

ಇಲ್ಲಿ ಕವಿಯಲ್ಲಿ ಒಂದು ಸಂಶಯ ಹುಟ್ಟುತ್ತದೆ. ಆಕಾಶವು ಮಳೆಯನ್ನು ಏಕೆ ಸುರಿಸಬೇಕು. ಅಂತಹ ಹಂಗು ಏನಿದೆ ಅದಕ್ಕೆ?  ಆದರೆ ಭೂಮಿಗೆ ಮಾತ್ರ ಯಾವಾಗಲೂ ತೀರದಂತಹ ಬಾಯಾರಿಕೆ ಇದೆ. ಆ ಕಾರಣದಿಂದ ಆಕಾಶವು ಮಳೆಯನ್ನು ಅನುಗ್ರಹಿಸಬೇಕು. ಇದೇ ‘ದ್ಯಾವಾ ಪೃಥವಿ’ಗಳ ನಡುವಿನ ಸಂಬಂಧ, ಇದೇ ಲೌಕಿಕ ಹಾಗು ಅಲೌಕಿಕಗಳ ನಡುವಿನ ಪ್ರೇಮಸಂಬಂಧ. (ಇಲ್ಲಿ ಬಸವಣ್ಣನವರ ‘ಹಳೆಯ ನಾನು, ಕೆಳೆಯ ನೀನು’ ಎನ್ನುವ ವಚನ ನೆನಪಾಗುತ್ತದೆ.) ಆದುದರಿಂದ, ನವಿಲೇ, ನೀನು ಕೇಕೆ ಹಾಕುತ್ತ ಕುಣಿ. ಆ ಕರೆಗೆ ಸ್ಪಂದಿಸಿ ಮಳೆ ಭೂಲೋಕವನ್ನು ತಲುಪೀತು!

ಮುಗಿಲನು ಮುದ್ದಿಡೆ ನೆಲದ ಬೆಳೆ
ಚಿಗಿವುದು, ಜಿಗಿವುದು ನೆಗೆವುದಿಳೆ;
ಚಿಕ್ಕೆ ಇರುಳು ಕುಣಿದಂತೆ ಕುಣೀ
ಕುಣಿ ಕುಣಿ ನವಿಲೇ ಕುಣೀ ಕುಣೀ.

ನವಿಲಿನ ಮೂಲಕ ಬೇಂದ್ರೆಯವರು ದೇವರನ್ನೂ ಸಹ ಪ್ರಾರ್ಥಿಸುತ್ತಿದ್ದಾರೆ. ಈ ಪ್ರಾರ್ಥನೆಯ ಫಲಶ್ರುತಿ ಏನು? ಮಳೆಯು ಕೆಳಗೆ ಧುಮ್ಮಿಕ್ಕುವದರಿಂದ ಬೆಳೆ ಮೇಲೆ ಉಕ್ಕುವುದು. ಭೂತಾಯಿಯು ಸಂತುಷ್ಟಳಾಗಿ ಆಕಾಶಕ್ಕೆ ಜಿಗಿದಂತೆ ಇದು ತೋರುವುದು. ಆದುದರಿಂದ ಸಾವಿರ ಚಿಕ್ಕೆಗಳು ಇರುಳಿನ ಆಗಸದಲ್ಲಿ ಹೊಳೆಯುವಂತೆ, ನಿನ್ನ ರೆಕ್ಕೆಗಳನ್ನು ಹರಡಿಕೊಂಡು ಕುಣಿ ಎಂದು ಬೇಂದ್ರೆಯವರು ನವಿಲಿಗೆ ಕೇಳಿಕೊಳ್ಳುತ್ತಾರೆ. ಇದು ಮತ್ತೊಮ್ಮೆ ಭೂಲೋಕ ಹಾಗು ದೇವಲೋಕದ ಸಂಬಂಧವನ್ನು ನೆನಪಿಸುತ್ತದೆ. ಇದು ಬೇಂದ್ರೆಯವರು ನವಿಲಿಗೆ ಮಾಡುವ ಪ್ರಾರ್ಥನೆಯೂ ಹೌದು ; ದೇವರಲ್ಲಿ ಅವರು ಮಾಡುವ ಪ್ರಾರ್ಥನೆಯೂ ಹೌದು.

Friday, May 30, 2014

ಪತ್ರಕರ್ತರ ಕರ್ತವ್ಯ, ಅಕರ್ತವ್ಯ.


ನವೋದಯ ಕಾಲದಲ್ಲಿ ಕನ್ನಡ ಸಾಹಿತಿಗಳು ಕನ್ನಡ ಭಾಷೆಯನ್ನು ಕಟ್ಟಿದಂತೆ, ಬೆಳಸಿದಂತೆ, ಪತ್ರಿಕಾಕರ್ತರೂ ಸಹ ಕನ್ನಡ ಭಾಷೆಯನ್ನು ಬೆಳಸುತ್ತಲೇ ಬಂದಿದ್ದಾರೆ. ಕನ್ನಡ ಪತ್ರಿಕೆಗಳು ಪ್ರಾರಂಭವಾಗಿ ಅರ್ಧ ಶತಕಕ್ಕಿಂತಲೂ ಹೆಚ್ಚು ವರ್ಷಗಳು ಕಳೆದಿವೆ. ಕನ್ನಡದ ಮೊದಲ ಸಮಾಚಾರಪತ್ರಿಕೆ ‘ತಾಯಿನಾಡು’ ೧೯೨೭ರಲ್ಲಿ ಪ್ರಾರಂಭವಾಯಿತು. ‘ಸಂಯುಕ್ತ ಕರ್ನಾಟಕ’ ಪತ್ರಿಕೆ ೧೯೩೩ರಲ್ಲಿ ಪ್ರಾರಂಭವಾಯಿತು. ‘ಪ್ರಜಾವಾಣಿ’ ಪತ್ರಿಕೆಯು ೧೯೪೮ರಲ್ಲಿ ಪ್ರಾರಂಭವಾಯಿತು.

ಈ ಎಲ್ಲ ಪತ್ರಿಕೆಗಳು ಹೆಮ್ಮೆಪಡುವಂತಹ ಪತ್ರಿಕಾಶೈಲಿಯನ್ನು ನಿರ್ಮಿಸಿದವು. ಅನೇಕ ಹೊಸ ಪತ್ರಿಕಾಪದಗಳನ್ನು ಸೃಷ್ಟಿಸಿದವು. ಉದಾಹರಣೆಗೆ lead articleಗೆ ‘ಅಗ್ರಲೇಖನ’ವೆಂದು ಹೆಸರಿಸಿದರು. Vested interestಅನ್ನು ‘ಪಟ್ಟಭದ್ರ ಹಿತಾಸಕ್ತಿ’ ಎಂದು ಕರೆದರು. ಆಂಗ್ಲ ಭಾಷೆಯಲ್ಲಿರುವ ಅನೇಕ ಪತ್ರಿಕಾಪದಗಳನ್ನು ನಮ್ಮ ಪತ್ರಕರ್ತರು ತುಂಬ ಸಮರ್ಥವಾಗಿ ಕನ್ನಡೀಕರಿಸಿದ್ದಾರೆ. ಇದೊಂದು ಗಂಭೀರವಾದ ಕಾರ್ಯ. ಒಟ್ಟಿನಲ್ಲಿ ಒಂದು ಸಮಾಚಾರಪತ್ರಿಕೆಯು ಮಾಡಬೇಕಾದ ಮೂರು ಅವಶ್ಯಕ ಮುಖ್ಯ ಕಾರ್ಯಗಳನ್ನು ಇವು ಸಮರ್ಪಕವಾಗಿ ನಿರ್ವಹಿಸಿದವು:
(೧) ನಿಷ್ಪಕ್ಷಪಾತವಾಗಿ ಸಮಾಚಾರವನ್ನು ನೀಡುವುದು,
(೨) ಚಿಂತನಪರ ಲೇಖನಗಳನ್ನು ನೀಡುವುದು,
(೩) ಪತ್ರಿಕಾಕನ್ನಡವನ್ನು ಬೆಳೆಸುವುದು.

ಪತ್ರಿಕಾಕರ್ತರಷ್ಟೇ ಅಲ್ಲ ನಮ್ಮ ಸರಕಾರಿ ನೌಕರರು ಸಹ ‘ಸರಕಾರಿ’ ಹಾಗು ತಾಂತ್ರಿಕ ಪದಗಳನ್ನು ತುಂಬ ಅರ್ಥಪೂರ್ಣವಾಗಿ ಭಾಷಾಂತರಿಸಿದ್ದಾರೆ. ಉದಾಹರಣೆಗೆ ‘ಪಬ್ಲಿಕ್ ವರ್ಕ್ಸ್ ಡಿಪಾರ್ಟಮೆಂಟ್’ ಎನ್ನುವುದು ‘ಲೋಕೋಪಯೋಗಿ ಇಲಾಖೆ’ ಆಯಿತು , ‘ಬೆನಿಫಿಶರಿ’ಯು  ‘ಫಲಾನುಭವಿ’ ಆದನು. ‘ಸ್ಪೀಡ್ ಬ್ರೆಕರ್’ ಎನ್ನುವುದು ‘ರಸ್ತೆದಿಬ್ಬ’ ಆಯಿತು. ಪತ್ರಕರ್ತರು, ಸರಕಾರಿ ನೌಕರರು ಹಾಗು ಜನಸಾಮಾನ್ಯರು ಇಂತಹ ಅನೇಕ ಪದಗಳನ್ನು ಅನುವಾದಿಸಿದ್ದಾರೆ ಅಥವಾ ಮರುಸೃಷ್ಟಿಸಿದ್ದಾರೆ. ಅಂತಹ ಕೆಲವು ಪದಗಳು ಹೀಗಿವೆ:
Protocol......................ಶಿಷ್ಟಾಚಾರ
Ordinanace.................ಸುಗ್ರೀವಾಜ್ಞೆ
Green revolution........ ಹಸಿರು ಕ್ರಾಂತಿ
Transgenic..................ಕುಲಾಂತರಿ
anasthesia...................ಅರಿವಳಿಕೆ
Inferiority complex.......ಕೀಳರಿಮೆ
Unconscious................ಸುಪ್ತಪ್ರಜ್ಞೆ
Dedicated to people....ಲೋಕಾರ್ಪಣೆ
Preface........................ಮುನ್ನುಡಿ

ಇಂತಹ ಅನುವಾದ ಕಾರ್ಯವೇನೊ ಹೊಸದಾಗಿ ಪ್ರಾರಂಭವಾದದ್ದು. ನೂರಾರು ವರ್ಷಗಳಿಂದ ಕನ್ನಡದಲ್ಲಿಯೇ ಸುಂದರವಾದ ಅನೇಕ ಪದಪುಂಜಗಳು ಸೃಷ್ಟಿಯಾಗಿವೆ. ಉದಾಹರಣೆಗೆ:
ಉದರವೈರಾಗ್ಯ
ಸ್ಮಶಾನಶಾಂತಿ
ಲೋಕಮಾನ್ಯ

ಭಾರತದಲ್ಲಿ ರಾಜಪ್ರಭುತ್ವವಿದ್ದಂತಹ ಕಾಲದಲ್ಲಿ, ರಾಜರ ಅನುಯಾಯಿಗಳಾದ ಕೆಲವು ಗಣ್ಯರಿಗೆ ‘ರಾಜಮಾನ್ಯ’ ಎನ್ನುವ ಬಿರುದು ದೊರೆಯುತ್ತಿತ್ತು. ಸ್ವಾತಂತ್ರ್ಯಕ್ಕಾಗಿ ಬ್ರಿಟಿಶರ ವಿರುದ್ಧ ಸಮರ ಸಾರಿದ ಬಾಲಗಂಗಾಧರ ತಿಲಕರಿಗೆ ಜನಸಾಮಾನ್ಯರೇ ‘ಲೋಕಮಾನ್ಯ’ ಎನ್ನುವ ಬಿರುದನ್ನು ಇತ್ತರು. ಇಂತಹ ಸುಂದರವಾದ ಪದಗಳ ಸೃಷ್ಟಿಕರ್ತರು ಸಾಮಾನ್ಯ ಅನಾಮಧೇಯರು. ಇವರನ್ನು ಹುಡುಕಿ ಗೌರವಿಸುವುದು ನಮ್ಮಿಂದ ಸಾಧ್ಯವಿಲ್ಲ. ಈ ಎಲ್ಲ ಹಿನ್ನೆಲೆಯಲ್ಲಿ ನಮ್ಮ ಇತ್ತೀಚಿನ ಕೆಲವು ಪತ್ರಿಕಾಸಂಪಾದಕರ ಗುಣಪರೀಕ್ಷೆಯನ್ನು ಮಾಡೋಣ!

ಶ್ರೀ ವಿಶ್ವೇಶ್ವರ ಭಟ್ಟರು ಮೊದಲು ‘ವಿಜಯಕರ್ನಾಟಕ’ ಪತ್ರಿಕೆಯ, ತನ್ನಂತರ ‘ಕನ್ನಡಪ್ರಭಾ’ ಪತ್ರಿಕೆಯ ಸಂಪಾದಕರಾದರು. ‘ಕುಂಬಾರನಿಗೆ ಒಂದು ವರ್ಷ, ಡೊಣ್ಣೆಗೆ ಒಂದು ನಿಮಿಷ’ ಎನ್ನುವಂತೆ. ನಮ್ಮ ಪತ್ರಿಕಾಪೂರ್ವಜರ ಮಹತ್ಸಾಧನೆಯನ್ನು ಭಟ್ಟರು ನುಚ್ಚುನೂರು ಮಾಡುತ್ತಿದ್ದಾರೆ. ಒಂದು ಸಮಾಚಾರಪತ್ರಿಕೆಯಲ್ಲಿ ರಂಜನೆಗೂ ಸ್ಥಾನವಿರಲೇ ಬೇಕು. ಆದರೆ ಅದೇ ಪ್ರಧಾನವಾಗಬಾರದು. ಹಾಗಾದಾಗ, ಪತ್ರಿಕಾಶೈಲಿಯು ಭರತನಾಟ್ಯವಾಗುವ ಬದಲು ‘ತಮಾಶಾ, ನೌಟಂಕಿ’ ಕುಣಿತವಾಗುತ್ತದೆ. ವಿಶ್ವೇಶ್ವರಭಟ್ಟರು ತಮ್ಮ ವಿಚಿತ್ರ ಪದಪ್ರಯೋಗಗಳ ಮೂಲಕಇದನ್ನು ಸಾಧಿಸುತ್ತಿದ್ದಾರೆ. ಉದಾಹರಣೆಗೆ ‘ಹತ್ಯಾಚಾರ’ ಎನ್ನುವ ಪದಪ್ರಯೋಗವನ್ನು ನೋಡಿರಿ. ಅತ್ಯಾಚಾರದ ಬಳಿಕ ಮಾಡಿದ ಹತ್ಯೆಯನ್ನು ಸೂಚಿಸಲು ಭಟ್ಟರು ‘ಹತ್ಯಾಚಾರ’ ಎಂದು ಬರೆಯುತ್ತಾರೆ. ಇದನ್ನೇ ‘ಅತ್ಯಾಚಾರ ಹಾಗು ಕೊಲೆ’ ಎಂದರೆ ಆಗದೆ? ತಾವು ಹೊಸ ಪದವೊಂದನ್ನು ಟಂಕಿಸಿರುವದಾಗಿ ಭಟ್ಟರು ತಮ್ಮನ್ನು ತಾವೇ ಹೊಗಳಿಕೊಳ್ಳಬಹುದು. ಆದರೆ ಇದನ್ನು ನಾನು ‘ಪಂಕ್ ಪ್ರಯೋಗ’ ಎಂದು ಕರೆಯುತ್ತೇನೆ. ತಲೆಯ ಕೂದಲನ್ನು ವಿಚಿತ್ರವಾಗಿ ಕತ್ತರಿಸಿಕೊಂಡು ತಿರುಗಾಡುವ, ‘ಪಂಕ್’ ಎಂದು ಕರೆಯಿಸಿಕೊಳ್ಳುವ ಯುವಕರನ್ನು ನೀವು ನೋಡಿರಬಹುದು. ಜನರ ಗಮನ ಸೆಳೆಯಲು ಈ ಹುಚ್ಚಾಟವನ್ನು ಅವರು ಮಾಡುತ್ತಾರೆ. ಇದೊಂದು ತರಹದ ಮನೋರೋಗ. ವಿಶ್ವೇಶ್ವರ ಭಟ್ಟರು ಕನ್ನಡ ಭಾಷೆಯನ್ನು ‘ಪಂಕ್’ ಮಾಡುತ್ತಿದ್ದಾರೆ. ಆದರೆ ಇದು ಪತ್ರಿಕೆಯಲ್ಲಿ ಬಳಸಲು ಯೋಗ್ಯವಾದ ಪ್ರಯೋಗವಲ್ಲ.

ಕನ್ನಡವನ್ನು ಕುಲಗೆಡಿಸಲು ಭಟ್ಟರು ಇನ್ನೂ ಒಂದು ಉಪಾಯವನ್ನು ಕಂಡು ಹಿಡಿದಿದ್ದಾರೆ. ಒಂದು ಪದಕ್ಕೆ ಜೋಡಿಸಬೇಕಾದ ವ್ಯಾಕರಣಸಮ್ಮತ ವಿಭಕ್ತಿಪ್ರತ್ಯಯದ ಅಂಗಛ್ಛೇದವನ್ನು ಮಾಡುವುದು. ಉದಾಹರಣೆಗೆ ‘ವಾರಾಣಸಿಯಲ್ಲಿ’ ಎಂದು ಬರೆಯಬೇಕಾದ ಪದವನ್ನು ಭಟ್ಟರು ‘ವಾರಾಣಸೀಲಿ’ ಎಂದು ಬರೆಯುತ್ತಾರೆ. ಈ ತರಹದ ಪ್ರಯೋಗದಿಂದ ಭಟ್ಟರು ಏನನ್ನು ಸಾಧಿಸುತ್ತಾರೆ?

ಪತ್ರಿಕಾಕನ್ನಡವನ್ನು ಆಡುಭಾಷೆಯ ಕನ್ನಡವನ್ನಾಗಿ ಮಾಡುವ ದೊಡ್ಡಸ್ತಿಕೆಯೆ ಇದು? ಹಾಗಿದ್ದರೆ, ‘ಮಹಾರಾಜರು ಸಿಂಹಾಸನದ ಮೇಲೆ ಕುಳಿತರು’ ಅನ್ನುವ ವಾಕ್ಯವನ್ನು ‘ಮಾರಾಜರು ಸಿಂಆಸನದ ಮ್ಯಾಲೆ ಕುಂತರು’ ಎಂದು ಇವರು ಬರೆಯಬಹುದೇನೊ? ಇನ್ನೂ ಒಂದು ನೆವ ಭಟ್ಟರ ಬತ್ತಳಿಕೆಯಲ್ಲಿ ಇರಬಹುದು: ಲಭ್ಯವಿರುವ ಸ್ಥಳದಲ್ಲಿ ಸಮಾಚಾರವನ್ನು ಹೊಂದಿಸುವ ಸಲುವಾಗಿ, ಈ ರೀತಿಯಲ್ಲಿ ಬರೆಯಲಾಗಿದೆ, ಎಂದು ಅವರು ಹೇಳಬಹುದು. ಇದು ಒಪ್ಪಲು ಅಸಾಧ್ಯವಾದ ಕುಂಟುನೆವ. ಅಕ್ಷರಗಳ ಅಳತೆಯನ್ನು ಕಡಿಮೆ ಮಾಡಿದರೆ, ಸ್ಥಳಾವಕಾಶಕ್ಕೇನು ಕೊರತೆಯಾದೀತು? ನಿಜ ಹೇಳಬೇಕೆಂದರೆ ಓದುಗರನ್ನು ಆಕರ್ಷಿಸಲು ಭಟ್ಟರು ಮಾಡುತ್ತಿರುವ ಡೊಂಬರಾಟವಿದು!

ಭಟ್ಟರು ಇಷ್ಟಕ್ಕೇ ಸುಮ್ಮನಾಗಿಲ್ಲ. ಆಂಗ್ಲ ಪದಗಳಿಗೆ ತಪ್ಪು ಕನ್ನಡ ಪದಗಳನ್ನು ಸೂಚಿಸುವ ತೆವಲು ಅವರಲ್ಲಿದೆ. ಭಟ್ಟರು ಈ ಮೊದಲೊಮ್ಮೆ audacity ಪದವನ್ನು ‘ತಿಕಕೊಬ್ಬು’ ಎಂದು ವರ್ಣಿಸಿದಾಗ, ಅದನ್ನು ಖಂಡಿಸಿ ನಾನು ಇಲ್ಲಿ ಬರೆದಿದ್ದೆ. ಅಂತಹದೇ ತಪ್ಪನ್ನು ಭಟ್ಟರು ಮತ್ತೊಮ್ಮೆ ಮಾಡಿದ್ದಾರೆ. ಅದು ಹೀಗಿದೆ:
Faceless ಪದದ ಅರ್ಥ ‘ಗುರುತಿರದ’ ಎಂದಾಗುತ್ತದೆ, ಉದಾಹರಣೆಗೆ , Faceless mob, Faceless kidnapper, Faceless Terrorist ಇತ್ಯಾದಿ. ಭಟ್ಟರು faceless ಎಂದರೆ ‘ಮುಖೇಡಿ’ ಎಂದು ಸೂಚಿಸಿದ್ದಾರೆ. ‘ಮುಖೇಡಿ’ ಅಥವಾ ‘ಮುಖಹೇಡಿ’ ಅಥವಾ ‘ಮಖೀನ’ ಎಂದರೆ ಮತ್ತೊಬ್ಬರ ಜೊತೆ ಮುಖ ಎತ್ತಿ ಮಾತನಾಡಲೂ ಸಹ ಹೆದರಿಕೊಳ್ಳುವ, ಸಂಕೋಚಪಡುವ ವ್ಯಕ್ತಿ. ಭಟ್ಟರ ಪ್ರಕಾರ Faceless Terrorist ಎಂದರೆ ‘ಹೆದರುಪುಕ್ಕ, ಸಂಕೋಚಶೀಲ ಭಯೋತ್ಪಾದಕ’!
ಭಟ್ಟರೆ, ನೀವು ಇಂಗ್ಲಿಶ್ ಪದಗಳನ್ನೇ ಬಳಸಿರಿ ಅಥವಾ ಕನ್ನಡ ಪದಗಳನ್ನೇ ಬಳಸಿರಿ, ‘ಕನ್ನಡಪ್ರಭಾ’ದ ಓದುಗರಿಗೆ ಅರ್ಥವಾಗುತ್ತದೆ. ದಯವಿಟ್ಟು ಇಂಗ್ಲಿಶ್ ಪದವನ್ನು ಬಳಸಿ ಅದಕ್ಕೆ ತಪ್ಪು ಕನ್ನಡ ಪದವನ್ನು ಸೂಚಿಸಬೇಡಿ. ಅದು ಅಮಾಯಕ ಓದುಗರಿಗೆ, ವಿಶೇಷತಃ ವಿದ್ಯಾರ್ಥಿಗಳಿಗೆ ದಾರಿ ತಪ್ಪಿಸಬಹುದು.



ತನ್ನ ಅಜ್ಞಾನವನ್ನು ಇತರಲ್ಲಿ ಯಾವುದೇ ಸಂಕೋಚವಿಲ್ಲದೇ ಹರಡುವವನಿಗೆ ಏನೆನ್ನಬೇಕು? ಒಂದು ಜನಪ್ರಿಯ ಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್ಟರು ತಮ್ಮ ಬರಹದ ಮೂಲಕ ತಪ್ಪು ಮಾಹಿತಿ ಪ್ರಸಾರವಾಗದಂತೆ ಎಚ್ಚರದಿಂದ ಇರಬೇಕು. ಆದರೆ ಇಲ್ಲಿ ನೋಡಿ: ‘ಬಾಲವಿಲ್ಲದ ಮುಧೋಳ ನಾಯಿ’ ಎಂದು ಬರೆಯುವ ಮೂಲಕ ಭಟ್ಟರು ಮುಧೋಳ ನಾಯಿಗೆ ಬಾಲ ಇರುವುದಿಲ್ಲ ಎನ್ನುವ ತಪ್ಪು ತಿಳಿವಳಿಕೆಯನ್ನು ಜನರಲ್ಲಿ ಹರಡುತ್ತಿದ್ದಾರೆ. ಮುಧೋಳ ನಾಯಿಗೆ ಏನಾದರೂ ಈ ವಿಷಯ ತಿಳಿದರೆ ಅದು ಭಟ್ಟರನ್ನು ಸುಮ್ಮನೆ ಬಿಟ್ಟೀತೆ? ಯಾಕೆಂದರೆ ಅದಕ್ಕೆ ಸಾಕಷ್ಟು ಉದ್ದವಾದ ಬಾಲವಿದೆ. ಭಟ್ಟರು, ‘ಇದು ಹಾಗಲ್ಲ, ಬಾಲವಿರದಂತಹ ಮುಧೋಳ ನಾಯಿ’ಯ ಬಗೆಗೆ ನಾನು ಬರೆಯುತ್ತಿದ್ದೆ ಎನ್ನುವ ಸಮಜಾಯಿಸಿ ಕೊಡಲು ಪ್ರಯತ್ನಿಸಬಹುದು. ದಯವಿಟ್ಟು ಈ ಮಾತನ್ನು ಮುಧೋಳ ನಾಯಿಯ ಎದುರಿಗೆ ಹೇಳಲು ಪ್ರಯತ್ನಿಸಿರಿ! 


ನೀವು ಎಷ್ಟೇ ತಿಳಿಹೇಳಿದರೂ ಭಟ್ಟರು ಎರಡೇ ವಾಕ್ಯಗಳಲ್ಲಿ ನಿಮ್ಮನ್ನು ಚಿತ್ ಮಾಡಿ ಬಿಡುತ್ತಾರೆ: `ಪ್ರತಿಯೊಂದು ಪತ್ರಿಕೆಗೂ ಒಂದು stylesheet ಇರುತ್ತದೆ ; ಇದು ಕನ್ನಡಪ್ರಭಾ ಪತ್ರಿಕೆಯ stylesheet !’  
 ‘ನೀಟಾದ ಸೂಟಿನ ಬಟ್ಟೆ ಹಾಕಿಕೊಂಡರೆ ಚೆನ್ನಾಗಿ ಕಾಣುತ್ತೀಯಪ್ಪಾ’ ಎಂದು ನೀವು ಒಬ್ಬ ಎಬಡನಿಗೆ ಹೇಳಿದರೆ, ಆತನು ‘ಲಂಗೋಟಿಯೇ ನನ್ನ style !’ ಎಂದು ಹೇಳಿದನಂತೆ. ಇದೂ ಹಾಗೆಯೇ!

ಭಟ್ಟರೆ, ಕನ್ನಡಪ್ರಭಾ ಪತ್ರಿಕೆಯ ಪ್ರಸಾರವು ನಿಮ್ಮ ಆಡಳಿತದಲ್ಲಿ ಸಾಕಷ್ಟು ವರ್ಧಿಸಿದೆ. ನೀವು ಕನ್ನಡದ ಒಬ್ಬ ಹೊಣೆಗಾರ ಸಂಪಾದಕರಂತೆ ವರ್ತಿಸಬೇಕೆ ವಿನಃ ಹತ್ಯಾಚಾರಿ ‘ಪಂಕ್’ ಸಂಪಾದಕನಂತೆ ಅಲ್ಲ. ಏಕೆಂದರೆ, ಪತ್ರಿಕೆಯನ್ನು ಓದುವ ಅಮಾಯಕ ತರುಣರು ಹಾಗು ವಿದ್ಯಾರ್ಥಿಗಳು ನೀವು ಬರೆದದ್ದೇ ಸರಿ ಎಂದು ತಪ್ಪಾಗಿ ಭಾವಿಸುತ್ತಾರೆ. ಅಷ್ಟೇ ಅಲ್ಲ, ಶ್ರೇಷ್ಠ ಇತಿಹಾಸವಿದ್ದಂತಹ ‘ಸಂಯುಕ್ತ ಕರ್ನಾಟಕ ಪತ್ರಿಕೆ’ಯೂ ಸಹ ನಿಮ್ಮನ್ನು ಅನುಕರಿಸಲು ಪ್ರಯತ್ನಿಸುತ್ತ ಮುಕ್ಕರಿಸುತ್ತಿದೆ. ಆದುದರಿಂದ ದಯವಿಟ್ಟು ಈ ‘ಮಂಗಾಟ’ವನ್ನು ನಿಲ್ಲಿಸಿರಿ ಎಂದು ನಿಮ್ಮಲ್ಲಿ ಪ್ರಾರ್ಥಿಸುತ್ತೇನೆ.