Friday, May 30, 2014

ಪತ್ರಕರ್ತರ ಕರ್ತವ್ಯ, ಅಕರ್ತವ್ಯ.


ನವೋದಯ ಕಾಲದಲ್ಲಿ ಕನ್ನಡ ಸಾಹಿತಿಗಳು ಕನ್ನಡ ಭಾಷೆಯನ್ನು ಕಟ್ಟಿದಂತೆ, ಬೆಳಸಿದಂತೆ, ಪತ್ರಿಕಾಕರ್ತರೂ ಸಹ ಕನ್ನಡ ಭಾಷೆಯನ್ನು ಬೆಳಸುತ್ತಲೇ ಬಂದಿದ್ದಾರೆ. ಕನ್ನಡ ಪತ್ರಿಕೆಗಳು ಪ್ರಾರಂಭವಾಗಿ ಅರ್ಧ ಶತಕಕ್ಕಿಂತಲೂ ಹೆಚ್ಚು ವರ್ಷಗಳು ಕಳೆದಿವೆ. ಕನ್ನಡದ ಮೊದಲ ಸಮಾಚಾರಪತ್ರಿಕೆ ‘ತಾಯಿನಾಡು’ ೧೯೨೭ರಲ್ಲಿ ಪ್ರಾರಂಭವಾಯಿತು. ‘ಸಂಯುಕ್ತ ಕರ್ನಾಟಕ’ ಪತ್ರಿಕೆ ೧೯೩೩ರಲ್ಲಿ ಪ್ರಾರಂಭವಾಯಿತು. ‘ಪ್ರಜಾವಾಣಿ’ ಪತ್ರಿಕೆಯು ೧೯೪೮ರಲ್ಲಿ ಪ್ರಾರಂಭವಾಯಿತು.

ಈ ಎಲ್ಲ ಪತ್ರಿಕೆಗಳು ಹೆಮ್ಮೆಪಡುವಂತಹ ಪತ್ರಿಕಾಶೈಲಿಯನ್ನು ನಿರ್ಮಿಸಿದವು. ಅನೇಕ ಹೊಸ ಪತ್ರಿಕಾಪದಗಳನ್ನು ಸೃಷ್ಟಿಸಿದವು. ಉದಾಹರಣೆಗೆ lead articleಗೆ ‘ಅಗ್ರಲೇಖನ’ವೆಂದು ಹೆಸರಿಸಿದರು. Vested interestಅನ್ನು ‘ಪಟ್ಟಭದ್ರ ಹಿತಾಸಕ್ತಿ’ ಎಂದು ಕರೆದರು. ಆಂಗ್ಲ ಭಾಷೆಯಲ್ಲಿರುವ ಅನೇಕ ಪತ್ರಿಕಾಪದಗಳನ್ನು ನಮ್ಮ ಪತ್ರಕರ್ತರು ತುಂಬ ಸಮರ್ಥವಾಗಿ ಕನ್ನಡೀಕರಿಸಿದ್ದಾರೆ. ಇದೊಂದು ಗಂಭೀರವಾದ ಕಾರ್ಯ. ಒಟ್ಟಿನಲ್ಲಿ ಒಂದು ಸಮಾಚಾರಪತ್ರಿಕೆಯು ಮಾಡಬೇಕಾದ ಮೂರು ಅವಶ್ಯಕ ಮುಖ್ಯ ಕಾರ್ಯಗಳನ್ನು ಇವು ಸಮರ್ಪಕವಾಗಿ ನಿರ್ವಹಿಸಿದವು:
(೧) ನಿಷ್ಪಕ್ಷಪಾತವಾಗಿ ಸಮಾಚಾರವನ್ನು ನೀಡುವುದು,
(೨) ಚಿಂತನಪರ ಲೇಖನಗಳನ್ನು ನೀಡುವುದು,
(೩) ಪತ್ರಿಕಾಕನ್ನಡವನ್ನು ಬೆಳೆಸುವುದು.

ಪತ್ರಿಕಾಕರ್ತರಷ್ಟೇ ಅಲ್ಲ ನಮ್ಮ ಸರಕಾರಿ ನೌಕರರು ಸಹ ‘ಸರಕಾರಿ’ ಹಾಗು ತಾಂತ್ರಿಕ ಪದಗಳನ್ನು ತುಂಬ ಅರ್ಥಪೂರ್ಣವಾಗಿ ಭಾಷಾಂತರಿಸಿದ್ದಾರೆ. ಉದಾಹರಣೆಗೆ ‘ಪಬ್ಲಿಕ್ ವರ್ಕ್ಸ್ ಡಿಪಾರ್ಟಮೆಂಟ್’ ಎನ್ನುವುದು ‘ಲೋಕೋಪಯೋಗಿ ಇಲಾಖೆ’ ಆಯಿತು , ‘ಬೆನಿಫಿಶರಿ’ಯು  ‘ಫಲಾನುಭವಿ’ ಆದನು. ‘ಸ್ಪೀಡ್ ಬ್ರೆಕರ್’ ಎನ್ನುವುದು ‘ರಸ್ತೆದಿಬ್ಬ’ ಆಯಿತು. ಪತ್ರಕರ್ತರು, ಸರಕಾರಿ ನೌಕರರು ಹಾಗು ಜನಸಾಮಾನ್ಯರು ಇಂತಹ ಅನೇಕ ಪದಗಳನ್ನು ಅನುವಾದಿಸಿದ್ದಾರೆ ಅಥವಾ ಮರುಸೃಷ್ಟಿಸಿದ್ದಾರೆ. ಅಂತಹ ಕೆಲವು ಪದಗಳು ಹೀಗಿವೆ:
Protocol......................ಶಿಷ್ಟಾಚಾರ
Ordinanace.................ಸುಗ್ರೀವಾಜ್ಞೆ
Green revolution........ ಹಸಿರು ಕ್ರಾಂತಿ
Transgenic..................ಕುಲಾಂತರಿ
anasthesia...................ಅರಿವಳಿಕೆ
Inferiority complex.......ಕೀಳರಿಮೆ
Unconscious................ಸುಪ್ತಪ್ರಜ್ಞೆ
Dedicated to people....ಲೋಕಾರ್ಪಣೆ
Preface........................ಮುನ್ನುಡಿ

ಇಂತಹ ಅನುವಾದ ಕಾರ್ಯವೇನೊ ಹೊಸದಾಗಿ ಪ್ರಾರಂಭವಾದದ್ದು. ನೂರಾರು ವರ್ಷಗಳಿಂದ ಕನ್ನಡದಲ್ಲಿಯೇ ಸುಂದರವಾದ ಅನೇಕ ಪದಪುಂಜಗಳು ಸೃಷ್ಟಿಯಾಗಿವೆ. ಉದಾಹರಣೆಗೆ:
ಉದರವೈರಾಗ್ಯ
ಸ್ಮಶಾನಶಾಂತಿ
ಲೋಕಮಾನ್ಯ

ಭಾರತದಲ್ಲಿ ರಾಜಪ್ರಭುತ್ವವಿದ್ದಂತಹ ಕಾಲದಲ್ಲಿ, ರಾಜರ ಅನುಯಾಯಿಗಳಾದ ಕೆಲವು ಗಣ್ಯರಿಗೆ ‘ರಾಜಮಾನ್ಯ’ ಎನ್ನುವ ಬಿರುದು ದೊರೆಯುತ್ತಿತ್ತು. ಸ್ವಾತಂತ್ರ್ಯಕ್ಕಾಗಿ ಬ್ರಿಟಿಶರ ವಿರುದ್ಧ ಸಮರ ಸಾರಿದ ಬಾಲಗಂಗಾಧರ ತಿಲಕರಿಗೆ ಜನಸಾಮಾನ್ಯರೇ ‘ಲೋಕಮಾನ್ಯ’ ಎನ್ನುವ ಬಿರುದನ್ನು ಇತ್ತರು. ಇಂತಹ ಸುಂದರವಾದ ಪದಗಳ ಸೃಷ್ಟಿಕರ್ತರು ಸಾಮಾನ್ಯ ಅನಾಮಧೇಯರು. ಇವರನ್ನು ಹುಡುಕಿ ಗೌರವಿಸುವುದು ನಮ್ಮಿಂದ ಸಾಧ್ಯವಿಲ್ಲ. ಈ ಎಲ್ಲ ಹಿನ್ನೆಲೆಯಲ್ಲಿ ನಮ್ಮ ಇತ್ತೀಚಿನ ಕೆಲವು ಪತ್ರಿಕಾಸಂಪಾದಕರ ಗುಣಪರೀಕ್ಷೆಯನ್ನು ಮಾಡೋಣ!

ಶ್ರೀ ವಿಶ್ವೇಶ್ವರ ಭಟ್ಟರು ಮೊದಲು ‘ವಿಜಯಕರ್ನಾಟಕ’ ಪತ್ರಿಕೆಯ, ತನ್ನಂತರ ‘ಕನ್ನಡಪ್ರಭಾ’ ಪತ್ರಿಕೆಯ ಸಂಪಾದಕರಾದರು. ‘ಕುಂಬಾರನಿಗೆ ಒಂದು ವರ್ಷ, ಡೊಣ್ಣೆಗೆ ಒಂದು ನಿಮಿಷ’ ಎನ್ನುವಂತೆ. ನಮ್ಮ ಪತ್ರಿಕಾಪೂರ್ವಜರ ಮಹತ್ಸಾಧನೆಯನ್ನು ಭಟ್ಟರು ನುಚ್ಚುನೂರು ಮಾಡುತ್ತಿದ್ದಾರೆ. ಒಂದು ಸಮಾಚಾರಪತ್ರಿಕೆಯಲ್ಲಿ ರಂಜನೆಗೂ ಸ್ಥಾನವಿರಲೇ ಬೇಕು. ಆದರೆ ಅದೇ ಪ್ರಧಾನವಾಗಬಾರದು. ಹಾಗಾದಾಗ, ಪತ್ರಿಕಾಶೈಲಿಯು ಭರತನಾಟ್ಯವಾಗುವ ಬದಲು ‘ತಮಾಶಾ, ನೌಟಂಕಿ’ ಕುಣಿತವಾಗುತ್ತದೆ. ವಿಶ್ವೇಶ್ವರಭಟ್ಟರು ತಮ್ಮ ವಿಚಿತ್ರ ಪದಪ್ರಯೋಗಗಳ ಮೂಲಕಇದನ್ನು ಸಾಧಿಸುತ್ತಿದ್ದಾರೆ. ಉದಾಹರಣೆಗೆ ‘ಹತ್ಯಾಚಾರ’ ಎನ್ನುವ ಪದಪ್ರಯೋಗವನ್ನು ನೋಡಿರಿ. ಅತ್ಯಾಚಾರದ ಬಳಿಕ ಮಾಡಿದ ಹತ್ಯೆಯನ್ನು ಸೂಚಿಸಲು ಭಟ್ಟರು ‘ಹತ್ಯಾಚಾರ’ ಎಂದು ಬರೆಯುತ್ತಾರೆ. ಇದನ್ನೇ ‘ಅತ್ಯಾಚಾರ ಹಾಗು ಕೊಲೆ’ ಎಂದರೆ ಆಗದೆ? ತಾವು ಹೊಸ ಪದವೊಂದನ್ನು ಟಂಕಿಸಿರುವದಾಗಿ ಭಟ್ಟರು ತಮ್ಮನ್ನು ತಾವೇ ಹೊಗಳಿಕೊಳ್ಳಬಹುದು. ಆದರೆ ಇದನ್ನು ನಾನು ‘ಪಂಕ್ ಪ್ರಯೋಗ’ ಎಂದು ಕರೆಯುತ್ತೇನೆ. ತಲೆಯ ಕೂದಲನ್ನು ವಿಚಿತ್ರವಾಗಿ ಕತ್ತರಿಸಿಕೊಂಡು ತಿರುಗಾಡುವ, ‘ಪಂಕ್’ ಎಂದು ಕರೆಯಿಸಿಕೊಳ್ಳುವ ಯುವಕರನ್ನು ನೀವು ನೋಡಿರಬಹುದು. ಜನರ ಗಮನ ಸೆಳೆಯಲು ಈ ಹುಚ್ಚಾಟವನ್ನು ಅವರು ಮಾಡುತ್ತಾರೆ. ಇದೊಂದು ತರಹದ ಮನೋರೋಗ. ವಿಶ್ವೇಶ್ವರ ಭಟ್ಟರು ಕನ್ನಡ ಭಾಷೆಯನ್ನು ‘ಪಂಕ್’ ಮಾಡುತ್ತಿದ್ದಾರೆ. ಆದರೆ ಇದು ಪತ್ರಿಕೆಯಲ್ಲಿ ಬಳಸಲು ಯೋಗ್ಯವಾದ ಪ್ರಯೋಗವಲ್ಲ.

ಕನ್ನಡವನ್ನು ಕುಲಗೆಡಿಸಲು ಭಟ್ಟರು ಇನ್ನೂ ಒಂದು ಉಪಾಯವನ್ನು ಕಂಡು ಹಿಡಿದಿದ್ದಾರೆ. ಒಂದು ಪದಕ್ಕೆ ಜೋಡಿಸಬೇಕಾದ ವ್ಯಾಕರಣಸಮ್ಮತ ವಿಭಕ್ತಿಪ್ರತ್ಯಯದ ಅಂಗಛ್ಛೇದವನ್ನು ಮಾಡುವುದು. ಉದಾಹರಣೆಗೆ ‘ವಾರಾಣಸಿಯಲ್ಲಿ’ ಎಂದು ಬರೆಯಬೇಕಾದ ಪದವನ್ನು ಭಟ್ಟರು ‘ವಾರಾಣಸೀಲಿ’ ಎಂದು ಬರೆಯುತ್ತಾರೆ. ಈ ತರಹದ ಪ್ರಯೋಗದಿಂದ ಭಟ್ಟರು ಏನನ್ನು ಸಾಧಿಸುತ್ತಾರೆ?

ಪತ್ರಿಕಾಕನ್ನಡವನ್ನು ಆಡುಭಾಷೆಯ ಕನ್ನಡವನ್ನಾಗಿ ಮಾಡುವ ದೊಡ್ಡಸ್ತಿಕೆಯೆ ಇದು? ಹಾಗಿದ್ದರೆ, ‘ಮಹಾರಾಜರು ಸಿಂಹಾಸನದ ಮೇಲೆ ಕುಳಿತರು’ ಅನ್ನುವ ವಾಕ್ಯವನ್ನು ‘ಮಾರಾಜರು ಸಿಂಆಸನದ ಮ್ಯಾಲೆ ಕುಂತರು’ ಎಂದು ಇವರು ಬರೆಯಬಹುದೇನೊ? ಇನ್ನೂ ಒಂದು ನೆವ ಭಟ್ಟರ ಬತ್ತಳಿಕೆಯಲ್ಲಿ ಇರಬಹುದು: ಲಭ್ಯವಿರುವ ಸ್ಥಳದಲ್ಲಿ ಸಮಾಚಾರವನ್ನು ಹೊಂದಿಸುವ ಸಲುವಾಗಿ, ಈ ರೀತಿಯಲ್ಲಿ ಬರೆಯಲಾಗಿದೆ, ಎಂದು ಅವರು ಹೇಳಬಹುದು. ಇದು ಒಪ್ಪಲು ಅಸಾಧ್ಯವಾದ ಕುಂಟುನೆವ. ಅಕ್ಷರಗಳ ಅಳತೆಯನ್ನು ಕಡಿಮೆ ಮಾಡಿದರೆ, ಸ್ಥಳಾವಕಾಶಕ್ಕೇನು ಕೊರತೆಯಾದೀತು? ನಿಜ ಹೇಳಬೇಕೆಂದರೆ ಓದುಗರನ್ನು ಆಕರ್ಷಿಸಲು ಭಟ್ಟರು ಮಾಡುತ್ತಿರುವ ಡೊಂಬರಾಟವಿದು!

ಭಟ್ಟರು ಇಷ್ಟಕ್ಕೇ ಸುಮ್ಮನಾಗಿಲ್ಲ. ಆಂಗ್ಲ ಪದಗಳಿಗೆ ತಪ್ಪು ಕನ್ನಡ ಪದಗಳನ್ನು ಸೂಚಿಸುವ ತೆವಲು ಅವರಲ್ಲಿದೆ. ಭಟ್ಟರು ಈ ಮೊದಲೊಮ್ಮೆ audacity ಪದವನ್ನು ‘ತಿಕಕೊಬ್ಬು’ ಎಂದು ವರ್ಣಿಸಿದಾಗ, ಅದನ್ನು ಖಂಡಿಸಿ ನಾನು ಇಲ್ಲಿ ಬರೆದಿದ್ದೆ. ಅಂತಹದೇ ತಪ್ಪನ್ನು ಭಟ್ಟರು ಮತ್ತೊಮ್ಮೆ ಮಾಡಿದ್ದಾರೆ. ಅದು ಹೀಗಿದೆ:
Faceless ಪದದ ಅರ್ಥ ‘ಗುರುತಿರದ’ ಎಂದಾಗುತ್ತದೆ, ಉದಾಹರಣೆಗೆ , Faceless mob, Faceless kidnapper, Faceless Terrorist ಇತ್ಯಾದಿ. ಭಟ್ಟರು faceless ಎಂದರೆ ‘ಮುಖೇಡಿ’ ಎಂದು ಸೂಚಿಸಿದ್ದಾರೆ. ‘ಮುಖೇಡಿ’ ಅಥವಾ ‘ಮುಖಹೇಡಿ’ ಅಥವಾ ‘ಮಖೀನ’ ಎಂದರೆ ಮತ್ತೊಬ್ಬರ ಜೊತೆ ಮುಖ ಎತ್ತಿ ಮಾತನಾಡಲೂ ಸಹ ಹೆದರಿಕೊಳ್ಳುವ, ಸಂಕೋಚಪಡುವ ವ್ಯಕ್ತಿ. ಭಟ್ಟರ ಪ್ರಕಾರ Faceless Terrorist ಎಂದರೆ ‘ಹೆದರುಪುಕ್ಕ, ಸಂಕೋಚಶೀಲ ಭಯೋತ್ಪಾದಕ’!
ಭಟ್ಟರೆ, ನೀವು ಇಂಗ್ಲಿಶ್ ಪದಗಳನ್ನೇ ಬಳಸಿರಿ ಅಥವಾ ಕನ್ನಡ ಪದಗಳನ್ನೇ ಬಳಸಿರಿ, ‘ಕನ್ನಡಪ್ರಭಾ’ದ ಓದುಗರಿಗೆ ಅರ್ಥವಾಗುತ್ತದೆ. ದಯವಿಟ್ಟು ಇಂಗ್ಲಿಶ್ ಪದವನ್ನು ಬಳಸಿ ಅದಕ್ಕೆ ತಪ್ಪು ಕನ್ನಡ ಪದವನ್ನು ಸೂಚಿಸಬೇಡಿ. ಅದು ಅಮಾಯಕ ಓದುಗರಿಗೆ, ವಿಶೇಷತಃ ವಿದ್ಯಾರ್ಥಿಗಳಿಗೆ ದಾರಿ ತಪ್ಪಿಸಬಹುದು.ತನ್ನ ಅಜ್ಞಾನವನ್ನು ಇತರಲ್ಲಿ ಯಾವುದೇ ಸಂಕೋಚವಿಲ್ಲದೇ ಹರಡುವವನಿಗೆ ಏನೆನ್ನಬೇಕು? ಒಂದು ಜನಪ್ರಿಯ ಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್ಟರು ತಮ್ಮ ಬರಹದ ಮೂಲಕ ತಪ್ಪು ಮಾಹಿತಿ ಪ್ರಸಾರವಾಗದಂತೆ ಎಚ್ಚರದಿಂದ ಇರಬೇಕು. ಆದರೆ ಇಲ್ಲಿ ನೋಡಿ: ‘ಬಾಲವಿಲ್ಲದ ಮುಧೋಳ ನಾಯಿ’ ಎಂದು ಬರೆಯುವ ಮೂಲಕ ಭಟ್ಟರು ಮುಧೋಳ ನಾಯಿಗೆ ಬಾಲ ಇರುವುದಿಲ್ಲ ಎನ್ನುವ ತಪ್ಪು ತಿಳಿವಳಿಕೆಯನ್ನು ಜನರಲ್ಲಿ ಹರಡುತ್ತಿದ್ದಾರೆ. ಮುಧೋಳ ನಾಯಿಗೆ ಏನಾದರೂ ಈ ವಿಷಯ ತಿಳಿದರೆ ಅದು ಭಟ್ಟರನ್ನು ಸುಮ್ಮನೆ ಬಿಟ್ಟೀತೆ? ಯಾಕೆಂದರೆ ಅದಕ್ಕೆ ಸಾಕಷ್ಟು ಉದ್ದವಾದ ಬಾಲವಿದೆ. ಭಟ್ಟರು, ‘ಇದು ಹಾಗಲ್ಲ, ಬಾಲವಿರದಂತಹ ಮುಧೋಳ ನಾಯಿ’ಯ ಬಗೆಗೆ ನಾನು ಬರೆಯುತ್ತಿದ್ದೆ ಎನ್ನುವ ಸಮಜಾಯಿಸಿ ಕೊಡಲು ಪ್ರಯತ್ನಿಸಬಹುದು. ದಯವಿಟ್ಟು ಈ ಮಾತನ್ನು ಮುಧೋಳ ನಾಯಿಯ ಎದುರಿಗೆ ಹೇಳಲು ಪ್ರಯತ್ನಿಸಿರಿ! 


ನೀವು ಎಷ್ಟೇ ತಿಳಿಹೇಳಿದರೂ ಭಟ್ಟರು ಎರಡೇ ವಾಕ್ಯಗಳಲ್ಲಿ ನಿಮ್ಮನ್ನು ಚಿತ್ ಮಾಡಿ ಬಿಡುತ್ತಾರೆ: `ಪ್ರತಿಯೊಂದು ಪತ್ರಿಕೆಗೂ ಒಂದು stylesheet ಇರುತ್ತದೆ ; ಇದು ಕನ್ನಡಪ್ರಭಾ ಪತ್ರಿಕೆಯ stylesheet !’  
 ‘ನೀಟಾದ ಸೂಟಿನ ಬಟ್ಟೆ ಹಾಕಿಕೊಂಡರೆ ಚೆನ್ನಾಗಿ ಕಾಣುತ್ತೀಯಪ್ಪಾ’ ಎಂದು ನೀವು ಒಬ್ಬ ಎಬಡನಿಗೆ ಹೇಳಿದರೆ, ಆತನು ‘ಲಂಗೋಟಿಯೇ ನನ್ನ style !’ ಎಂದು ಹೇಳಿದನಂತೆ. ಇದೂ ಹಾಗೆಯೇ!

ಭಟ್ಟರೆ, ಕನ್ನಡಪ್ರಭಾ ಪತ್ರಿಕೆಯ ಪ್ರಸಾರವು ನಿಮ್ಮ ಆಡಳಿತದಲ್ಲಿ ಸಾಕಷ್ಟು ವರ್ಧಿಸಿದೆ. ನೀವು ಕನ್ನಡದ ಒಬ್ಬ ಹೊಣೆಗಾರ ಸಂಪಾದಕರಂತೆ ವರ್ತಿಸಬೇಕೆ ವಿನಃ ಹತ್ಯಾಚಾರಿ ‘ಪಂಕ್’ ಸಂಪಾದಕನಂತೆ ಅಲ್ಲ. ಏಕೆಂದರೆ, ಪತ್ರಿಕೆಯನ್ನು ಓದುವ ಅಮಾಯಕ ತರುಣರು ಹಾಗು ವಿದ್ಯಾರ್ಥಿಗಳು ನೀವು ಬರೆದದ್ದೇ ಸರಿ ಎಂದು ತಪ್ಪಾಗಿ ಭಾವಿಸುತ್ತಾರೆ. ಅಷ್ಟೇ ಅಲ್ಲ, ಶ್ರೇಷ್ಠ ಇತಿಹಾಸವಿದ್ದಂತಹ ‘ಸಂಯುಕ್ತ ಕರ್ನಾಟಕ ಪತ್ರಿಕೆ’ಯೂ ಸಹ ನಿಮ್ಮನ್ನು ಅನುಕರಿಸಲು ಪ್ರಯತ್ನಿಸುತ್ತ ಮುಕ್ಕರಿಸುತ್ತಿದೆ. ಆದುದರಿಂದ ದಯವಿಟ್ಟು ಈ ‘ಮಂಗಾಟ’ವನ್ನು ನಿಲ್ಲಿಸಿರಿ ಎಂದು ನಿಮ್ಮಲ್ಲಿ ಪ್ರಾರ್ಥಿಸುತ್ತೇನೆ.     

24 comments:

ವಿ.ರಾ.ಹೆ. said...

ನಿಮ್ಮ ಕಾಳಜಿ, ಆತಂಕ ನಿಜ.

ನಾವು ಪತ್ರಿಕೆಗಳಿಂದಲೇ ಎಷ್ಟೋ ಸುಂದರ ಕನ್ನಡ ಪದಗಳನ್ನು ತಿಳಿದುಕೊಂಡಿದ್ದಿದೆ. ಇವತ್ತು ನನ್ನ ತಲೆಮಾರಿನವರಿಗೆ ಇಷ್ಟಾದರೂ ಕನ್ನಡ ತಿಳಿದಿದೆ ಎಂದರೆ ಅದರಲ್ಲಿ ಪತ್ರಿಕೆಗಳ ಪಾತ್ರ ದೊಡ್ಡದಿದೆ. ಅನೇಕ ಇಂಗ್ಲೀಷ್ ಪದಗಳಿಗೆ ಪರ್ಯಾಯವಾಗಿ ಸುಂದರ ಕನ್ನಡ ಪದಗಳನ್ನು ಬಳಕೆಗೆ ತಂದಿರುವ ಹಿರಿಮೆ ಪತ್ರಿಕೆಗಳದ್ದು. ಆದರೆ ಇತ್ತೀಚಿನ ವರ್ಷಗಳಲ್ಲಿ ಹೊಸತನದ ಹೆಸರಿನಲ್ಲಿ ಮತ್ತು ಪ್ರಾಸಕ್ಕಾಗಿ ಪತ್ರಿಕೆಗಳಲ್ಲಿ ಬಳಸುತ್ತಿರುವ ತಲೆಬರಹಗಳನ್ನು ಪದಗಳನ್ನು ನೋಡಿದರೆ ಬೇಸರವಾಗುತ್ತದೆ. ಇದರಿಂದ ಸುದ್ದಿಯ ಗಾಂಭೀರ್ಯವೂ ಹಾಳಾಗುತ್ತಿದೆ. ಎಗ್ಗಿಲ್ಲದೇ ಇಂಗ್ಲೀಷ್ ಪದಗಳ ಬಳಕೆಯೂ ಆಗುತ್ತಿದೆ.

'ವಿಜಯ ಕರ್ನಾಟಕ'ದಲ್ಲಿದ್ದಾಗ ವಿಶ್ವೇಶ್ವರ ಭಟ್ಟರು ಶುರುಮಾಡಿದ ಈ ದುರ್ಬಳಕೆಗಳು ಈಗ ಎಲ್ಲಾ ಪತ್ರಿಕೆಗಳಿಗೂ ಹರಡಿದೆ. ಪ್ರಜಾವಾಣಿಯೊಂದೇ ಇಂದಿಗೂ ಗಂಭೀರತೆ ಮತ್ತು ಆದಷ್ಟು ಮಟ್ಟಿಗೆ ಒಳ್ಳೆಯ ಭಾಷೆಯ ಬಳಕೆ ಕಾಯ್ದುಕೊಂಡಿದೆ. ಈ ಮಂಗಾಟದ ತಳಿಗಳು ಇಂದು ಬೇರೆ ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ ಹರಡಿಕೊಂಡು ಅಲ್ಲೂ ಭಾಷೆ ಕುಲಗೆಡಿಸುತ್ತಿದ್ದಾರೆ. ಒಬ್ಬ ವಿಚಿತ್ರ ತಲೆಬರಹ ಕೊಡುತ್ತಾನೆಂದು ಮತ್ತೊಬ್ಬನೂ ತಾನು ಕೂಡ ವಿಭಿನ್ನವಾಗಿರಬೇಕೆಂದು ಇನ್ನೂ ವಿಚಿತ್ರವಾಗಿ ಕೊಡುತ್ತಾರೆ. ಅದಕ್ಕೆ ಸಮರ್ಥನೆಯೂ ತಯಾರಿರುತ್ತದೆ. ಇವರ ಅಸಂಬದ್ಧ ತಲೆಬರಹ, ಭಾಷೆಯ ಬಳಕೆಯ ಆಧಾರದಲ್ಲಿ ಪತ್ರಿಕೆಯ ಪ್ರಸಾರ, ಜನಪ್ರಿಯತೆ, ನಿರ್ಧಾರವಾಗುವುದಿಲ್ಲ ಅನ್ನುವುದನ್ನು ಇವರು ತಿಳಿದುಕೊಳ್ಳಬೇಕು. ಪತ್ರಿಕೆಗಳು ಪ್ರತಿ ಪೀಳಿಗೆಯಲ್ಲಿ ಭಾಷೆಯನ್ನು ಉಳಿಸಲು, ಬೆಳೆಸಲು ಮುಖ್ಯ ಪಾತ್ರ ವಹಿಸುತ್ತವೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಇವರು ಕೆಲಸ ಮಾಡಬೇಕಿದೆ.

sunaath said...

ವಿ.ರಾ.ಹೆ,
ಸಮರ್ಥ ವಿಶ್ಲೇಷಣೆಯ ಮೂಲಕ ಪ್ರತಿಕ್ರಿಯಿಸಿದ್ದೀರಿ. ಪದಗಳ ದುರ್ಬಳಕೆಯ ಅನುಕರಣೆ ಮಾಡಲು ಪ್ರಾರಂಭಿಸಿದ ಸಂಯುಕ್ತ ಕರ್ನಾಟಕವಂತೂ ಈಗ ಪೂರ್ತಿ ಹಾಳಾಗಿ ಹೋಗಿದೆ! ಇತರ ಪತ್ರಿಕೆಗಳಾದರೂ ಇಂತಹ ದುರ್ಗತಿಗೆ ಇಳಿಯದಿರಲಿ! ಧನ್ಯವಾದಗಳು.

ಮಂಜುಳಾದೇವಿ said...


samayochota lekhana sir....!!!nimma kalajiya bagge hemme aguttide.....

sunaath said...

ಮಂಜುಳಾದೇವಿಯವರೆ,
ಧನ್ಯವಾದಗಳು.

Badarinath Palavalli said...

ಒಂದು ಭಾಷೆಯ ಬೆಳವಣಿಗೆಗೆ ಸಾಹಿತ್ಯ ವಲಯದ ಜೊತೆ ಪತ್ರಿಕಾ ವಲಯದ ಕೊಡುಗೆಯೂ ಅಪರಾವಾದದ್ದು.

ಪದಗಳು ಅಪಭ್ರಂಶುವಾಗದಂತೆ - ವಾಕ್ಯವನ್ನು ಒಡೆಯುವ ಮತ್ತು ಅದನ್ನು ಬಳಸಿಕೊಳ್ಳುವ ನಿಟ್ಟಿನಲ್ಲೂ ಪತ್ರಿಕೆಗಳು ಎಚ್ಚರ ವಹಿಸಬೇಕಿದೆ.

https://www.facebook.com/photo.php?fbid=602047969839656&set=gm.483794418371780&type=1&theater

ಜಲನಯನ said...

ಸುನಾಥಣ್ಣ, ಸಲ್ಲಾಪಕ್ಕೆ ಬರುವುದು ಅಪರೂಪವಾಗಿದೆ ಕ್ಷಮೆಯಿರಲಿ. ಹಲವು ಮಾಹಿತಿಪೂರಿತ ಲೇಖನಗಳನ್ನು ಓದಲಾಗುತ್ತಿಲ್ಲ. ಈ ದಿನ ಪದಾರ್ಥ ಚಿಂತಾಮಣಿ(ನಿರ್ವಾಹಕ ಮಂಡಳಿ) ಯಲ್ಲಿ ಪೆರ್ಲಾ ರವರು ಮತ್ತು ಮಂಜುನಾಥ್ ಕೊಳ್ಳೆಗಾಲ ಇದೇ ವಿಷಯ ಪ್ರಸ್ತಾಪಿಸಿದ್ದಾರೆ. ಮುದ್ರಣ ಮತ್ತು ದೃಶ್ಯಮಾಧ್ಯಮಗಳಲ್ಲದೇ ಶ್ರವಣ (ರೇಡಿಯೋ) ದಲ್ಲೂ ಈ ಹಾವಳಿ ಹೆಚ್ಚುತ್ತಿದೆ. ಬಹಳ ಸಕಾಲಿಕ ಲೇಖನ ಇದು. ಅಲ್ಪ ಮಹಾ ಪ್ರಾಣಗಳ ಬಳಕೆಯಲ್ಲಂತೂ ನಮ್ಮ ದೃಶ್ಯಮಾಧ್ಯಮಗಳ ಎಡವಟ್ಟು ಹೇಳತೀರದು. ಅದರಲ್ಲೂ ಭಾಷೆಯ ಗಾಂಭೀರ್ಯ ಗತ್ತು ಸೊಗಡು, ಸೊಗಸನ್ನು ಕಾಪಾಡಬೇಕಾದ ಧಾರ್ಮಿಕ, ಚಾರಿತ್ರಿಕ, ಪೌರಾಣಿಕ ಧಾರಾವಾಹಿಗಳಲ್ಲಿ ಯಥೇಚ್ಛವಾಗಿ ಕಂಡುಬರುವ ಈ ಲೋಪಗಳನ್ನು ಸರಿಪಡಿಸುವ ಯಾವುದೇ ಚಿಂತೆ ಈ ಮಾಧ್ಯಮಗಳಿಲ್ಲದಿರುವುದು ನಿಜಕ್ಕೂ ವಿಶಾದನೀಯ. ಧನ್ಯವಾದ ಅಣ್ಣ ಒಳ್ಳೆಯ ಚಿಂತನೆಗೆ ದಾರಿ ಮಾಡುವ ಲೇಖನಕ್ಕೆ.

Unknown said...

ಅರ್ಥಪೂರ್ಣ ಲೇಖನ ಸರ್... ಇತ್ತೀಚೆಗೆ ಎಲ್ಲ ಮಾಧ್ಯಮಗಳಲ್ಲೂ ಇದನ್ನೇ ಕಾಣುತ್ತಿದ್ದೇವೆ. ಹಲವಾರು ಪತ್ರಿಕೆಗಳ ಸಾಹಿತ್ಯವೂ ಬಿಂದಾಸ್ ಆಗುತ್ತಿದೆ. ಆಡುಮಾತೇ ಸಾಹಿತ್ಯವಾಗುತ್ತಿದೆ ಅನಿಸುತ್ತಿದೆ ಎಲ್ಲವೂ ಸರಳೀಕರಣದ ಪ್ರಭಾವ ಇರಬಹುದೇನೋ.. ಅದರ ಬಗ್ಗೆ ಬೆಳಕು ಚೆಲ್ಲಿದ್ದೀರಿ

Subrahmanya said...

ವಿ.ರಾ.ಹೆ. ಅವರ ಮಾತುಗಳು ಸ್ಪಷ್ಟವಾಗಿದೆ. ಅದನ್ನು ನಾನು ಅನುಮೋದಿಸುತ್ತೇನೆ. ವಿಚಿತ್ರ ಪದಗಳನ್ನು ಹೊಂದಿಸುವುದನ್ನು ಹೀಗೆ ಮುಂದುವರಿಸಿದರೆ, ಮುಂದಿನ ಪೀಳಿಗೆಯು ಆ ಪದಗಳನ್ನೇ 'ಸರಿ' ಎಂದು ನಂಬುವುದರಲ್ಲಿ ಸಂದೇಹವಿಲ್ಲ. ಪತ್ರಿಕೆಯ 'ಭಾಷಾ ಪ್ರವೀಣರು' ಎಚ್ಚೆತ್ತುಕೊಳ್ಳ್ಯಬೇಕಿದೆ.

sunaath said...

ನಿಜ, ಬದರಿನಾಥರೆ. ಪದಸಂಯೋಜನೆ ಅರ್ಥಪೂರ್ಣವಾಗಿರಬೇಕೆ ಹೊರತು ಅನರ್ಥಕ್ಕೆ ಎಡೆ ಮಾಡಬಾರದು!

sunaath said...

ಜಲನಯನ,
ಭಾಷೆಯ ಮೇಲೆ ನಡೆದಿರುವ ಈ ‘ಹತ್ಯಾಚಾರ’ ಎಲ್ಲರಿಗೂ ಬೇಸರವನ್ನು ಉಂಟು ಮಾಡಿದೆ. ಇದನ್ನು ತಡೆಯಲು ಒಂದು ಸಂಘಟಿತ ಪ್ರಯತ್ನ ನಡೆಯಬೇಕು.

sunaath said...

ನಾಗಲಕ್ಷ್ಮಿಯವರೆ,
ಧನ್ಯವಾದಗಳು.

sunaath said...

ಸುಬ್ರಹ್ಮಣ್ಯರೆ,
ಧನ್ಯವಾದಗಳು.

ಚಿನ್ಮಯ ಭಟ್ said...

ಧನ್ಯವಾದ ಕಾಕಾ...ಅಗ್ರಲೇಖನ,ಪಟ್ಟಭದ್ರ ಹಿತಾಸಕ್ತಿಗಳನ್ನು ಓದಿ ಗೊತ್ತಿತ್ತು ಅಷ್ಟೇ...
ನಂಗನ್ಸಿದ್ದು..ಗೊತ್ತಿಲ್ಲ ಸರಿನೋ ತಪ್ಪೋ ಅಂತಾ..ಜನರಿಗೆ ಹತ್ತಿರ ಆಗುವ ಕನ್ನಡವನ್ನು ಬಳಸುತ್ತಿದ್ದೇವೆ ಅನ್ನೋ ಭ್ರಮೆಯಲ್ಲಿ ಈ ಥರಹದ ಎಡವಟ್ಟುಗಳು ಆಗ್ತಾ ಇದ್ಯಾ ಅಂತಾ??

sunaath said...

ಚಿನ್ಮಯರೆ,
ವಿಶ್ವೇಶರ ಭಟ್ಟರು ಸಮಾಚಾರ ಪತ್ರಿಕೆಗೆ ಹೊಸ ಮುಖವನ್ನೇ ನೀಡಿದ್ದಾರೆ. ಅವರಿಂದಾಗಿ, ಅವರ ಬಳಗದಿಂದಾಗಿ ಕನ್ನಡಪ್ರಭಾ ಪತ್ರಿಕೆಯು ರಂಜನೀಯವಾಗಿದೆ. ಆದರೆ ಒಳ್ಳೇ ಪತ್ರಿಕೆಗೆ ಅದಷ್ಟೇ ಸಾಲದು. ಪತ್ರಿಕಾಹಿರಿಯರು ಪತ್ರಿಕೆಗಳನ್ನು ಹಾಗು ಪತ್ರಿಕಾಕನ್ನಡವನ್ನು ಕಟ್ಟಿ ಬೆಳೆಯಿಸಿದ ಪರಿಯನ್ನು ಭಟ್ಟರು ಅಭ್ಯಾಸ ಮಾಡುವುದು ಒಳಿತು!

Anil Talikoti said...

ಸುನಾಥ ಕಾಕಾ,
ಒಂದು ಹಂತದವರೆಗೆ, ಒಂದು ದೃಷ್ಟಿಯಿಂದ ಇವು ಸಹ್ಯವಾಗಬಹುದು, ಆದರೆ ಸೃಜನಶೀಲತೆ ನೆಪದಲ್ಲಿ ಇಂಥಹ ಹೇರಿಕೆ ನೀವು ಹೇಳಿದಂತೆ ತಪ್ಪು ಮತ್ತು ಖಂಡನಾರ್ಹ. ಪನ್ ಆಗಿ ಆರಂಭವಾದದ್ದು ಪಂಕ್ ಆಗಿ ಪರಪೆಚುವಲಿ ಹಬ್ಬಿ ಅದೇ ಸರಿ ಎನ್ನುವ ಎಡಬಿಡಂಗಿಗಳಿಗೆ ತಾಕುವಂತಿದೆ ನಿಮ್ಮ ಲೇಖನ.
~ಅನಿಲ

sunaath said...

ಅನಿಲರೆ,
ಪನ್, ವಿನೋದ ಇವೆಲ್ಲ ಸ್ವಾಗತಾರ್ಹವೇ; ಆದರೆ ಒಂದು ಮಿತಿಯಲ್ಲಿ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ಮನಸು said...

ಪತ್ರಿಕೆಯಲ್ಲಿ ಬರುವುದೆಲ್ಲವೂ ನಿಜ ಎಂದು ನಾವು ಊಹಿಸಿಬಿಡುತ್ತೇವೆ. ಯಾವುದೇ ಮಾಧ್ಯಮ ಜನರ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ಮಾಧ್ಯಮದವರು ತಮ್ಮ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕಾಗುತ್ತದೆ. ಪ್ರಜಾವಾಣಿ ಅಂದು ಹೇಗಿತ್ತೋ ಇಂದಿಗೂ ಅದೇ ರೀತಿ ಇದೆ ಎಂಬುದು ನನ್ನ ಅನಿಸಿಕೆ. ಮಿಕ್ಕೆಲ್ಲಾ ಪತ್ರಿಕೆಗಳು ಬಹಳಷ್ಟು ಆಡಂಬರದ ಪತ್ರಿಕೆಗಳಾಗಿಬಿಟ್ಟಿವೆ ಎಂದೆನಿಸುತ್ತೆ.

sunaath said...

ಮನಸು,
ತಾವು ಹೇಳುತ್ತಿರುವುದು ನೂರಕ್ಕೆ ನೂರರಷ್ಟು ಸತ್ಯ!

Swarna said...

ಕಾಕಾ ,
ಈಗೀಗ ಪತ್ರಿಕೆಗಳ ವಿಶ್ವಾಸಾರ್ಹತೆಯೇ ದೊಡ್ಡ ಪ್ರಶ್ನೆಯಾಗಿಬಿಟ್ಟಿದೆ .ದಿನಕ್ಕೊಂದು ಹೊಸ ಪದ ಟಂಕಿಸುವ ಬದಲು ಇರುವುದನ್ನು ಸರಿಯಾಗಿ ಬಳಸಿದರೆ ಕನ್ನಡಾಂಬೆ ಸಂತೋಷಿಸುತ್ತಾಳೆನೋ ?
ನಿಮ್ಮ ಲೇಖನ ನಮ್ಮ ಅಭಿಪ್ರಾಯಗಳನ್ನೂ ಹಿಡಿದಿಟ್ಟಿದೆ
ವಂದನೆಗಳೊಂದಿಗೆ
ಸ್ವರ್ಣಾ

sunaath said...

ಸ್ವರ್ಣಾ,
ಧನ್ಯವಾದಗಳು.

Anonymous said...

bhattru dappa charmadavaru. avarige maathina chadi eetu taaguvudu kashta.

sunaath said...

ಅನಾಮಿಕರೆ,
ತಮ್ಮ ಮಾತು ನಿಜ!

Pramod P T said...

Namaskaar,

nimma ee lEkhana Odida mele, patrikegaLalloo 'gimik' shuruvaagide annistide!

monne KBnalli "vikramOditya" anta front page nalli bandittu. idu sarino tappo anta gottaagta illaa..

sunaath said...

ಪ್ರಮೋದರೆ,
ವಿಕ್ರ‘ಮೋದಿ’ತ್ಯ ಎನ್ನುವ ಪದವು ಕ್ಷಣಕಾಲದ ರಂಜನೆಯನ್ನು ಕೊಡುವದೇನೊ ಸರಿಯೆ. ಆದರೆ ಇಂತಹ ಪದಪುಂಜಗಳು ಅತಿಯಾದಾಗ, ಸಮಾಚಾರದ ಗಾಂಭೀರ್ಯ ಹಾಳಾಗಿ ಹೋಗುತ್ತದೆ. ಆದುದರಿಂದ ಸಂಪಾದಕರು ಔಚಿತ್ಯವನ್ನು ಅರಿತುಕೊಂಡು ಇಂತಹ ಪ್ರಯೋಗಗಳನ್ನು ಬಳಸಬೇಕಷ್ಟೆ.