Monday, August 20, 2012

ಕಣ್ಣು ಕಾಣದ ಗಾವಿಲರು


ಒಂದು ಕಾಲವಿತ್ತು. ಆ ಕಾಲದಲ್ಲಿ ಚಿಕ್ಕ ಮಕ್ಕಳಿಗೆ ಶುದ್ಧಬರಹವು ಪಠ್ಯಕ್ರಮದ ಅನಿವಾರ್ಯ ಭಾಗವಾಗಿತ್ತು. ಕಲಿಸುವ ಶಿಕ್ಷಕರೂ ಸಹ ಕನ್ನಡವನ್ನು ಚೆನ್ನಾಗಿ ತಿಳಿದವರೇ ಆಗಿರುತ್ತಿದ್ದರು. ಆದುದರಿಂದ ಬರಹದಲ್ಲಿ ಕಾಗುಣಿತದ ತಪ್ಪುಗಳು ಕಂಡು ಬರುತ್ತಿರಲಿಲ್ಲ. ಈಗ ಕರ್ನಾಟಕದಿಂದ ಕನ್ನಡವೇ ಮಾಯವಾಗತೊಡಗಿದೆ. ಟೀವಿ ಹಾಗು ಆಕಾಶವಾಣಿಯ ಪ್ರಸಾರಗಳಲ್ಲಿ ಕನ್ನಡದ ಪದಗಳನ್ನು ಇಂಗ್ಲೀಶ ಪದಗಳು ಒದ್ದೋಡಿಸುತ್ತಿವೆ. ಶಿಕ್ಷಕರಿಗೇ ಶುದ್ಧ ಕನ್ನಡ ತಿಳಿದಿಲ್ಲ.  ಹೀಗಿರಲು ಕನ್ನಡ ಬರಹದಲ್ಲಿ ಕಾಗುಣಿತಕ್ಕೆ ಬೆಲೆ ಎಲ್ಲಿಯದು ಎನ್ನುವ ಪ್ರಶ್ನೆ ಸಹಜವಾದದ್ದೇ! ಆದರೂ ಸಹ ಕನ್ನಡವನ್ನು ಉಳಿಸಬೇಕಾದ, ಬೆಳಸಬೇಕಾದ ಸಂಸ್ಥೆಗಳೇ ಕಾಗುಣಿತದ ತಪ್ಪುಗಳನ್ನು ಮಾಡಬಾರದು. ಅದು ಮಹಾ ಅಪರಾಧ. ಅಂತಹ ಅಪರಾಧವನ್ನು ಶಿವಮೊಗ್ಗಿಯಲ್ಲಿಯ ನಮ್ಮ ಕುವೆಂಪು ವಿಶ್ವವಿದ್ಯಾಲಯವು ಮಾಡಿದೆ. ಈ ವಿಶ್ವವಿದ್ಯಾಲಯದ ಕಟ್ಟಡದ ಮೇಲಿನ ಲಾಂಛನವನ್ನು ಗಮನಿಸಿರಿ.

ಈ ಲಾಂಛನದ ಒಳಗೆ ಬರೆದ ಧ್ಯೇಯವಾಕ್ಯವನ್ನು ಓದಿರಿ. ಅದು ಹೀಗಿದೆ: 
‘ಮನುಜಮತ * ವಿಶ್ವಪಥ * ಸರ್ವೋದಯ * ಸಮನ್ವಯ * ಪೂರ್ಣದೃಷ್ಠಿ’
ಈ ಧ್ಯೇಯವಾಕ್ಯವು ರಾಷ್ಟ್ರಕವಿ ಕುವೆಂಪುರವರ ಜೀವನದ ಆದರ್ಶವೇ ಆಗಿದೆ. ಈ ಪದಗಳಲ್ಲಿ ಕಾಗುಣಿತದ ತಪ್ಪೆಸುಗುವುದು ಕುವೆಂಪುರವರಿಗೆ ಮಾಡುವ ಅಪಚಾರವಲ್ಲವೆ? ಹೀಗಿದ್ದರೂ ಕುವೆಂಫು ವಿಶ್ವವಿದ್ಯಾಲಯವು ಈ ಅಪರಾಧವನ್ನು ಎಸಗಿದೆ. ‘ಪೂರ್ಣದೃಷ್ಟಿ’ ಎಂದು ಬರೆಯುವ ಬದಲು ‘ಪೂರ್ಣದೃಷ್ಠಿ’ ಎಂದು ಬರೆಯಲಾಗಿದೆ.

೧೯೮೭ರಲ್ಲಿ ಈ ವಿಶ್ವವಿದ್ಯಾಲಯವು ಪ್ರಾರಂಭವಾಯಿತು. ಅಲ್ಲಿಂದ ಇಲ್ಲಿಯವರೆಗೆ ೬ ಜನ ಉಪಕುಲಪತಿಗಳು ಈ ವಿಶ್ವವಿದ್ಯಾಲಯವನ್ನು ಆಳಿದರು. ಈಗಿರುವವರು ಏಳನೆಯವರು. ಇವರ್ಯಾರೂ ಈ ತಪ್ಪನ್ನು ಗಮನಿಸಲಿಲ್ಲವೆ? ಕಟ್ಟಡದ ಮೇಲಿನ ಲಾಂಛನವು ಇವರ ಕಣ್ಣಿಗೆ ಬಿದ್ದಿರಲಿಕ್ಕಿಲ್ಲ ಎಂದು ಇಟ್ಟುಕೊಳ್ಳೋಣ. ಆದರೆ ಉಪಕುಲಪತಿಗಳು ಬರೆಯುವ ನೂರಾರು ಪತ್ರಗಳ ಮೇಲೆ ಹಾಗು ದಾಖಲೆಗಳ ಮೇಲೆ ಈ ಲಾಂಛನ ಇದ್ದೇ ಇರುತ್ತದೆಯಲ್ಲವೆ? ಅಲ್ಲಿಯೂ ಸಹ ಇವರ ಗಮನ ಹರಿಯಲಿಲ್ಲವೆ?

ಅಶಿಕ್ಷಿತರಿಗೆ ಹಾಗು ಅರೆಶಿಕ್ಷಿತರಿಗೆ ಈ ತಪ್ಪಿನ ಅರಿವಾಗಲಿಕ್ಕಿಲ್ಲ. ಆದರೆ ಉಪಕುಲಪತಿಗಳು ಹಾಗು ವಿಶ್ವವಿದ್ಯಾಲಯದ ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಪ್ರಾಧ್ಯಾಪಕರು ಉಚ್ಚ ಶಿಕ್ಷಣ ಪಡೆದವರಾಗಿರುತ್ತಾರೆ. ಈ ತಪ್ಪನ್ನು ಗಮನಿಸಿಯೂ, ತೆಪ್ಪಗೆ ಕುಳಿತರೆ ಇದು ಕುವೆಂಪುರವರಿಗೆ ಹಾಗು ಕನ್ನಡಮ್ಮನಿಗೆ  ಎಸಗುವ ಘೋರ ಅನ್ಯಾಯ. ಕುರುಡರು ತಾವಷ್ಟೇ ದಾರಿ ತಪ್ಪುತ್ತಾರೆ. ಆದರೆ ಕಣ್ಣಿದ್ದ ಈ ಕುರುಡರು ಈ ವಿಶ್ವವಿದ್ಯಾಲಯದಲ್ಲಿ ಕಲಿತ ಹಾಗು ಕಲಿಯುತ್ತಿರುವ ಎಲ್ಲ ವಿದ್ಯಾರ್ಥಿಗಳನ್ನೂ ಈ ವಿಷಯದಲ್ಲಿ ಹಾದಿಗೆಡಿಸುತ್ತಿದ್ದಾರೆ. ಸಂಚಿ ಹೊನ್ನಮ್ಮನ ಕವನದ ಸಾಲೊಂದನ್ನು ಎರವಲು ಪಡೆದು ಹೇಳುವುದಾದರೆ, ಇವರು ’ಕಣ್ಣು ಕಾಣದ ಗಾವಿಲರು!’

ಈ ವಿಷಯದಲ್ಲಿ ಒಂದು ಸರಳ ಸೂತ್ರವನ್ನು ಇಲ್ಲಿ ಉಲ್ಲೇಖಿಸಿದರೆ, ಉಪಯುಕ್ತವಾದೀತು. ಅದು ಹೀಗಿದೆ:
ಸಂಸ್ಕೃತದಲ್ಲಿ ಕ್ರಿಯಾಪದಗಳಿಂದ ಸಾಧಿತವಾದ ನಾಮಪದಗಳು ಅಥವಾ ವಿಶೇಷಣಗಳ ಕೊನೆಯ ಅಕ್ಷರವು ಅಲ್ಪಪ್ರಾಣವಾಗಿರುತ್ತದೆ. 

ಉದಾಹರಣೆಗಳು:
ಪುಷ್ (=ಪೋಷಣೆ ಪಡೆ) ... ಪುಷ್ಟಿ... ಪುಷ್ಟ
ದೃಷ್ (=ನೋಡು) .......... ದೃಷ್ಟಿ... ದೃಷ್ಟ
ತುಷ್ (=ಆನಂದಿಸು) .........ತುಷ್ಟಿ... ತುಷ್ಟ
ಇಷ್ (=ಬಯಸು) ............ ಇಷ್ಟಿ ....ಇಷ್ಟ ಇತ್ಯಾದಿ.

ತಾರತಮ್ಯಸೂಚಕ ಪದಗಳ ಅಂತವು superlative ಪದಗಳಲ್ಲಿ ಮಹಾಪ್ರಾಣವಾಗಿರುತ್ತದೆ. ಉದಾಹರಣೆಗಳು:
ಪಾಪೀ......... positive
ಪಾಪೀಯಸೀ.. comparative
ಪಾಪಿಷ್ಠ........superlative

ಕನೀ......... positive
ಕನೀಯಸೀ.. comparative
ಕನಿಷ್ಠ........superlative

ವರೀ......... positive
ವರೀಯಸೀ...comparative
ವರಿಷ್ಠ........superlative  

ಗರೀ...........positive
ಗರೀಯಸೀ....comparative
ಗರಿಷ್ಠ........ superlative    ಇತ್ಯಾದಿ.

ಆದರೆ ನಮ್ಮ ವಿಶ್ವವಿದ್ಯಾಲಯಗಳು ಅಲ್ಪಪ್ರಾಣ ಕಾಗುಣಿತವನ್ನು ಮಹಾಪ್ರಾಣಕ್ಕೂ ಹಾಗು ಮಹಾಪ್ರಾಣ ಕಾಗುಣಿತವನ್ನು ಅಲ್ಪಪ್ರಾಣಕ್ಕೂ ಬದಲಾಯಿಸಬಲ್ಲ ಚತುರಮತಿಗಳಾಗಿವೆ.

ಕುವೆಂಪು ನಮ್ಮ ರಾಷ್ಟ್ರಕವಿ, ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿಯ ಗೌರವವನ್ನು ತಂದುಕೊಟ್ಟ ಮೊದಲ ಲೇಖಕರು.  ಅವರ ಹೆಸರನ್ನು ಹೊತ್ತ ವಿಶ್ವವಿದ್ಯಾಲಯದಲ್ಲಿ ಈ ಮಟ್ಟದ ಅಜ್ಞಾನದ ಪ್ರದರ್ಶನವಾಗಬಾರದು. ಇದನ್ನು ವಿಶ್ವವಿದ್ಯಾಲಯದ ಉಪಕುಲಪತಿಗಳ ಗಮನಕ್ಕೆ ತರುವುದು ಕನ್ನಡಿಗನಾದ ನನ್ನ ಕರ್ತವ್ಯ. ಹೀಗೆಂದುಕೊಂಡು ಅವರಿಗೆ ಓಲೆಯೊಂದನ್ನು ಬರೆದಿದ್ದೇನೆ. ಅದನ್ನು ಕೆಳಗೆ ನೀಡುತ್ತಿದ್ದೇನೆ. ಸಿರಿಗನ್ನಡಂ ಗೆಲ್ಗೆ ಎಂದರೆ ಸಾಲದು, ಸರಿಗನ್ನಡಂ ಗೆಲ್ಗೆ ಸಹ ನಮಗೆ ಬೇಕು ಎನ್ನುವುದನ್ನು ನಾವೆಲ್ಲರೂ ಅರಿಯಬೇಕಲ್ಲವೆ?
......................................................................

ಇವರಿಗೆ
ಉಪಕುಲಪತಿಗಳು,
ಕುವೆಂಪು ವಿಶ್ವವಿದ್ಯಾಲಯ,
ಶಿವಮೊಗ್ಗಿ

ಮಾನ್ಯರೆ,

ವಿಷಯ: ಕುವೆಂಪು ವಿಶ್ವವಿದ್ಯಾಲಯದ ಲಾಂಛನದಲ್ಲಿಯ ತಪ್ಪು ಕಾಗುಣಿತ

ದಿನಾಂಕ ೧೪-೮-೨೦೧೨ರ ‘ಸಂಯುಕ್ತ ಕರ್ನಾಟಕ’ ಸಮಾಚಾರ ಪತ್ರಿಕೆಯಲ್ಲಿ ಛಾಪಿಸಲಾದ ವಿಶ್ವವಿದ್ಯಾಲಯದ ಲಾಂಛನದಲ್ಲಿಯ ಬರಹವನ್ನು ಓದಿ ಆಘಾತವಾಯಿತು. ಕನ್ನಡದ ಮೊದಲ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದ ಕುವೆಂಪುರವರ ಹೆಸರನ್ನು ಹೊತ್ತ ವಿಶ್ವವಿದ್ಯಾಲಯವು ತನ್ನ ಲಾಂಛನದಲ್ಲಿ ಇಂತಹ ಕಾಗುಣಿತದ ತಪ್ಪನ್ನು ಮಾಡಬಹುದೆಂದು ಕಲ್ಪಿಸುವುದೂ ಸಾಧ್ಯವಿಲ್ಲ. ಇದು ನಿಜವಾಗಿಯೂ ಲಾಂಛನಾಸ್ಪದ ವಿಷಯವಾಗಿದೆ. ನಿಮ್ಮ ಗಮನಕ್ಕಾಗಿ ಆ ಲಾಂಛನದ ಚಿತ್ರವನ್ನು ಕೆಳಗೆ ಕೊಟ್ಟಿದ್ದೇನೆ:

ಉಪಕುಲಪತಿಗಳು ಲಾಂಛನದಲ್ಲಿಯ ಬರಹವನ್ನು ದಯವಿಟ್ಟು ಓದಬೇಕು.
‘ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಠಿ’ ಎಂದು ಬರೆದಿರುವುದನ್ನು ಗಮನಿಸಬೇಕು. ಈ ಬರಹದಲ್ಲಿ ‘ಪೂರ್ಣದೃಷ್ಟಿ’ ಎಂದು ಬರೆಯುವುದರ ಬದಲು ‘ಪೂರ್ಣದೃಷ್ಠಿ’  ಎಂದು ಬರೆಯಲಾಗಿದೆ.

ವಿಶ್ವವಿದ್ಯಾಲಯವು ಪ್ರಾರಂಭವಾದಾಗಿನಿಂದ, ಅಂದರೆ ೧೯೮೭ನೆಯ ಇಸವಿಯಿಂದ ತಪ್ಪು ಕಾಗುಣಿತದ ಈ ಲಾಂಛನವು ವಿಶ್ವವಿದ್ಯಾಲಯದ ಕಟ್ಟಡದ ಮೇಲೆ ರಾರಾಜಿಸುತ್ತಿರಬಹುದು. ಬಹುಶಃ ನೀವು ಹಾಗು ನಿಮ್ಮ ಮೊದಲಿನ ಯಾವ ಉಪಕುಲಪತಿಯೂ ತಮ್ಮ ಮುಖವನ್ನು ಮೇಲೆತ್ತಿ ಕಟ್ಟಡದ ಮೇಲೆ ಕಂಗೊಳಿಸುತ್ತಿರುವ ಈ ಲಾಂಛನವನ್ನು ನೋಡಿರಲಿಕ್ಕಿಲ್ಲ ಎಂದುಕೊಳ್ಳೋಣ. ಆದರೆ ಉಪಕುಲಪತಿಗಳ ಎಲ್ಲ ಓಲೆಗಳಲ್ಲಿ ಹಾಗು ವಿಶ್ವವಿದ್ಯಾಲಯದ ಎಲ್ಲ ದಾಖಲೆಗಳಲ್ಲಿ ಈ ಲಾಂಛನವು ಮುದ್ರಿತವಾಗಿರುವುದನ್ನು ನೀವು ನೋಡಿರಲೇ ಬೇಕಲ್ಲವೆ? ಈವರೆಗೆ ವಿಶ್ವವಿದ್ಯಾಲಯದ ಈ ಎಲ್ಲ ಓಲೆಗಳು ಹಾಗು ದಾಖಲೆಗಳು ಅನೇಕ ಸುಶಿಕ್ಷಿತರಿಗೆ ರವಾನೆಯಾಗಿರಬಹುದು. ಇದು ಎಂತಹ ಅವಮಾನ! ಸ್ವರ್ಗದಲ್ಲಿರುವ ಕುವೆಂಪುರವರ ಆತ್ಮವು ತನ್ನ ಹೆಸರನ್ನು ಹೊತ್ತ ವಿಶ್ವವಿದ್ಯಾಲಯದಲ್ಲಿ ಕನ್ನಡಕ್ಕೆ ಆಗುತ್ತಿರುವ ಈ ಅಪಚಾರದಿಂದಾಗಿ ದಿನವೂ ಕಣ್ಣೀರನ್ನು ಸುರಿಸುತ್ತಿರಬಹುದು!

ಮಾನ್ಯ ಉಪಕುಲಪತಿಗಳೆ, ಇನ್ನೂ ಕಾಲ ಮಿಂಚಿಲ್ಲ. ಈ ತಪ್ಪನ್ನು ತ್ವರಿತವಾಗಿ ಸರಿಪಡಿಸುವ ಮೂಲಕ, ರಾಷ್ಟ್ರಕವಿ ಕುವೆಂಪುರವರ ಆತ್ಮಕ್ಕೆ ಶೀಘ್ರವೇ ಶಾಂತಿಯನ್ನು ದೊರಕಿಸುವಿರಿ ಎಂದು ನಂಬಿದ್ದೇನೆ.

ಒಂದು ಸಾಲಿನ ಉತ್ತರವನ್ನು ಹೊತ್ತ ನಿಮ್ಮ ಮಾರೋಲೆಯನ್ನು ನಾನು ನಿರೀಕ್ಷಿಸಬಹುದೆ?
.......................................................................................

ಪ್ರತಿಯನ್ನು  ಘನತೆವೆತ್ತ ರಾಜ್ಯಪಾಲರು, ಕರ್ನಾಟಕ ಹಾಗು ಉಪಕುಲಪತಿಗಳು, ಕುವೆಂಪು ವಿಶ್ವವಿದ್ಯಾಲಯ ಇವರಿಗೆ ಅವಗಾಹನೆಗಾಗಿ ಹಾಗಿ ಸಮುಚಿತ ಕ್ರಮಕ್ಕಾಗಿ ಸಮರ್ಪಿಸಲಾಗುತ್ತಿದೆ.

ಪ್ರತಿಯನ್ನು ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ವಿಧಾನಸೌಧ, ಬೆಂಗಳೂರು ಇವರಿಗೆ ಅವಗಾಹನೆಗಾಗಿ ಹಾಗು ಸಮುಚಿತ ಕ್ರಮಕ್ಕಾಗಿ ಕಳುಹಿಸಲಾಗುತ್ತಿದೆ.

English copy of the letter is forwarded with compliments to the VC, UGC, New Delhi  for favour of information and suitable action.

Saturday, July 7, 2012

ಅಶ್ವವೃತ್ತಾಂತ


--೧--
ಕಾಡೆದೆಯಲ್ಲಿ ಕುದುರೆಯ ಹೇಂಕಾರ,
ನರನರಗಳಲಿ ಅದರ ಮಾರ್ದನಿ ಸಿಡಿತ,
ಕಾಡುಕುದುರೆಯ ಸೆಣೆಸಿ ಸವಾರಿ ಮಾಡುವ
ಬಯಕೆ ಭೂತಾಕಾರ
ಚಿಮ್ಮಿ ನನ್ನನು ಕುದುರೆಯ ಬೆನ್ನ ಮೇಲೆ,
ದಿಕ್ಕು ದೆಸೆ ನೋಡದೆ ಓಡುತಿರೆ ಅಮಲಿನಲಿ,
ನಾನೆ ವಿಕ್ರಮರಾಯನೆಂಬ ಠೇಂಕಿನಲಿ,
ಎದೆಯನ್ನು ಬೀಗಿಸುತ ಝೀಂಗುಟ್ಟೆ ಗಾಳಿಯಲಿ,
. . . . . . . . . . . . . . . . . . . . . . . . . . .
ಕಣ್ಣು ಕತ್ತಲೆ, ತೊಡೆಯಲ್ಲಿ ನೋವಿನ ಸೆಳಕು,
‘ರಾಮಾ!’ ಎಂದೆನುತ ಕಣ್ಣಗಲಿಸಿರಲಿಲ್ಲ ಇನ್ನೂ
. . .. ಕಾಡೆದೆಯೊಳಗಿಂದ ಕುದುರೆಯ ಹೇಂಕಾರ,
                         ನರನರಗಳಲಿ ಮಾರ್ದನಿ!

--೨
ಏನೆಲ್ಲ ಕಸರತ್ತು ಮಾಡಿದರೂ
ಏಳದೀ ಘೋಡಾ!
ಹಾಗೆಲ್ಲ ತೀರದು ಸವಾರಿಯ ಚಟ,
ಮುದಿ ಕುದುರೆಯನ್ನೇ ಏರುವ ಹಟ,
ಮುಗ್ಗುರಿಸಿ ಬೀಳಲು ಅಕಟಕಟಾ!

ನಗುತಿಹಳು ಬಾಳಸಂಗಾತಿ:
‘ಜೊತೆಜೊತೆಗೆ ನಡೆದರೆ ಸಾಲದೆ? ಸವಾರಿಯೇ ಬೇಕೆ?’

--೩--
ಈಲಿಯಟ್ ಹೇಳಿದ್ದು ಖರೆ:
This is the way the world ends
This is the way the world ends
This is the way the world ends
Not with a bang but a whimper.

-೪-
ಕೊಟ್ಟ ಕುದುರೆಯನೇರಬೇಕು, ಅಲ್ಲಮಪ್ರಭುಗಳಂತೆ.
ಪ್ರಾಯದಲಿ ಅದು ರೇಸ್ ಗೆಲ್ಲುವ ಚದುರೆ,
ಇಳಿವಯಸಿನಲಿ ಜಟಕಾ ಕುದುರೆ!

Monday, May 21, 2012

‘ಹರಿಗೆ ಎಂದು ಗುಡಿಯನೊಂದು ಕಟ್ಟುತಿರುವೆಯಾ?’--ದಿನಕರ ದೇಸಾಯಿ


ಕನ್ನಡದಲ್ಲಿ ನಾಲ್ಕು ಸಾಲುಗಳ ಚುಟುಕುಗಳನ್ನು ಜನಪ್ರಿಯ ಗೊಳಿಸಿದ ದಿನಕರ ದತ್ತಾತ್ರೇಯ ದೇಸಾಯಿಯವರನ್ನು ಕನ್ನಡಿಗರು ‘ಚುಟುಕು ಬ್ರಹ್ಮ’ ಎಂದೇ ಗುರುತಿಸುತ್ತಾರೆ. ಹಾಗಿದ್ದರೂ ಸಹ, ‘ಚುಟುಕು’ ಇದು ಅವರ ಪ್ರತಿಭೆಯ ಹಾಗು ಸಾಧನೆಯ ಒಂದು ಅತಿ ಸಣ್ಣ ಅಂಶ ಮಾತ್ರವಾಗಿದೆ.

ದಿನಕರ ದೇಸಾಯಿಯವರು ಬೆಂಗಳೂರಿನಲ್ಲಿ ಹಾಗು ಮೈಸೂರಿನಲ್ಲಿ ಪದವಿಶಿಕ್ಷಣ ಪೂರೈಸಿದರು. ಕೊನೆಯ ವರ್ಷದಲ್ಲಿ ಅವರಿಗೆ ಇತಿಹಾಸದಲ್ಲಿ ‘ಕ್ಯಾಂಡಿ ಪಾರಿತೋಷಕ’ ಲಭಿಸಿತು. ಬಳಿಕ ಸ್ನಾತಕೋತ್ತರ ಶಿಕ್ಷಣವನ್ನು ಹಾಗು ಕಾನೂನು ಪದವಿಯನ್ನು ದೇಸಾಯಿಯವರು  ಮುಂಬಯಿಯಲ್ಲಿ ಮುಗಿಸಿದರು.

ದಿನಕರ ದೇಸಾಯಿಯವರಿಗೆ ‘ದಿನಕರನ ಚೌಪದಿ’ ಕವನಸಂಕಲನಕ್ಕಾಗಿ ಕನ್ನಡ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ.  ಆದರೆ ದೇಸಾಯಿಯವರು ಸಾಹಿತ್ಯದ ದಂತಗೋಪುರದಲ್ಲಿ  ಬದುಕಲಿಲ್ಲ. ಮುಂಬಯಿಯಲ್ಲಿ ಅವರಿಗೆ ಕಾರ್ಮಿಕ ಸಂಘಟನೆಗಳ ಮುಖಂಡರೊಡನೆ ಲಭಿಸಿದ ಸಂಪರ್ಕದಿಂದಾಗಿ ದೇಸಾಯಿಯವರು ತಮ್ಮ ಜೀವನವನ್ನೆಲ್ಲ ಶೋಷಿತವರ್ಗಗಳ ಪರವಾದ ಹೋರಾಟಕ್ಕೆ ಮುಡುಪಿಟ್ಟರು. ಗೋಕಾಕದ ಹತ್ತಿ ಗಿರಣಿಯ ಕಾರ್ಮಿಕರ ಪರವಾಗಿ ಅವರ ಹೋರಾಟದ ಜೀವನ ಪ್ರಾರಂಭವಾಯಿತು. ಬಳಿಕ ಮುಂಬಯಿಯಲ್ಲಿ  ಕಡಲಕಾರ್ಮಿಕರ ಸಂಘಟನೆಯಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡರು. ತಮ್ಮ ಪ್ರತಿಭಾವಂತ ಮಗನು ಸರಕಾರದ ಉನ್ನತ ಹುದ್ದೆಯನ್ನು ಅಲಂಕರಿಸುತ್ತಾನೆಂದು ಹಾರೈಸುತ್ತ ಕುಳಿತಿದ್ದ ಬಡ ‘ದತ್ತಣ್ಣ ಮಾಸ್ತರ’ರಿಗೆ ಇದೊಂದು ನಿರಾಶಾದಾಯಕ ಸಂಗತಿಯಾಯಿತು. ( ದಿನಕರ ದೇಸಾಯಿಯವರು ಉತ್ತರ ಕನ್ನಡ ಜಿಲ್ಲೆಯವರಾದರೆ,ಇವರಂತೆಯೇ ಮುಂಬಯಿಯ ರೇಲ್ವೇ ಕಾರ್ಮಿಕರ ಸಂಘಟನೆಗಾಗಿ ದುಡಿದ ಜಾರ್ಜ ಫರ್ನಾಂಡಿಸರು ದಕ್ಷಿಣ ಕನ್ನಡ ಜಿಲ್ಲೆಯವರು ಎನ್ನುವದು ಗಮನಾರ್ಹವಾಗಿದೆ.)

ದೇಸಾಯಿಯವರು ತಮ್ಮ ಸೇವಾಕ್ಷೇತ್ರವನ್ನು ಮುಂಬಯಿಗೆ ಮಾತ್ರ ಸೀಮಿತಗೊಳಿಸಲ್ಲ. ತಮ್ಮ ತವರುಜಿಲ್ಲೆಯಾದ ಉತ್ತರ ಕನ್ನಡ ಜಿಲ್ಲೆಯಲ್ಲಿ ಭೂಚಳುವಳಿಯನ್ನು ಪ್ರಾರಂಬಿಸಿ ಐದು ವರ್ಷ ಗಡಿಪಾರು ಶಿಕ್ಷೆಯನ್ನು ಅನುಭವಿಸಿದರು.ಹಾಲಕ್ಕಿ ಜನಾಂಗದ ಬಗೆಗೆ ಅಧ್ಯಯನವನ್ನು ಪ್ರಕಟಿಸಿ, ಆ ಜನಾಂಗವನ್ನು ಗಿರಿಜನ ಸಮುದಾಯವೆಂದು ಗುರುತಿಸಲು ದಿನಕರ ದೇಸಾಯಿಯವರೇ ಕಾರಣರು.

ಉತ್ತರ ಕನ್ನಡ ಜಿಲ್ಲೆಯ ಶೈಕ್ಷಣಿಕ ಪ್ರಗತಿಗಾಗಿ, ವಿಶೇಷತಃ ಹಿಂದುಳಿದ ವರ್ಗಗಳ ಶೈಕ್ಷಣಿಕ ಪ್ರಗತಿಗಾಗಿ, ‘ಕೆನರಾ ವೆಲ್‍ಫೇರ್ ಟ್ರಸ್ಟ್’ ಸ್ಥಾಪಿಸಿ ಶಾಲೆ ಹಾಗು ಕಾಲೇಜುಗಳನ್ನು ತೆರೆದರು. ಅನೇಕ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಸಹಾಯ ನೀಡಿದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿಕ್ಷಣದ ಜ್ಯೋತಿಯನ್ನು ಬೆಳಗಿದ ಶ್ರೇಯಸ್ಸು ದಿನಕರ ದೇಸಾಯಿಯವರಿಗೆ ಸಲ್ಲುತ್ತದೆ.

ದಿನಕರ ದೇಸಾಯಿಯವರು  ಗೋಪಾಲಕೃಷ್ಣ ಗೋಖಲೆಯವರಿಂದ ಮುಂಬಯಿಯಲ್ಲಿ ಸ್ಥಾಪಿತವಾದ ‘ಭಾರತ ಸೇವಕ ಸಮಾಜ’ದ ಸದಸ್ಯರಾಗಿದ್ದರು. ಈ ಸಂಸ್ಥೆಯ ನಿಯಮಗಳ ಮೇರೆಗೆ ತಮಗೆ ಬಂದ ಯಾವುದೇ ಸಂಭಾವನೆಯನ್ನು ಸಂಸ್ಥೆಗೆ ಸಲ್ಲಿಸಿ, ಅತ್ಯಂತ ಕಡಿಮೆ ಖರ್ಚಿನಲ್ಲಿ ಜೀವನ ಸಾಗಿಸುತ್ತಿದ್ದರು. ತಾವು ಲೋಕಸಭಾ ಸದಸ್ಯರಾಗಿದ್ದಾಗ, ಆ ಪದನಿಮಿತ್ತ ಸಂಭಾವನೆಯನ್ನೂ ಸಹ ನೇರವಾಗಿ ಭಾರತ ಸೇವಕ ಸಮಾಜಕ್ಕೆ ಸಲ್ಲಿಸುತ್ತಿದ್ದರು. ಸ್ವಾಮಿ ವಿವೇಕಾನಂದರಂತೆ ಇವರೂ ಸಹ ದರಿದ್ರನಾರಾಯಣನಿಗೆ ಸಲ್ಲಿಸುವ ಸೇವೆಯೇ ನಿಜವಾದ ಹರಿಪೂಜೆ ಎಂದು ಭಾವಿಸಿದವರು. ಆ ಮನೋಭಾವವನ್ನು ಬಿಂಬಿಸುವ ಅವರ ಕವನ ಹೀಗಿದೆ:

ಹರಿಗೆ ಎಂದು ಗುಡಿಯನೊಂದು ಕಟ್ಟುತಿರುವೆಯಾ?
ಹರಿಯ ಒಲುಮೆ ಪಡೆದು ಪುಣ್ಯ ಗಳಿಸುತಿರುವೆಯಾ?

ಹುಚ್ಚ! ನೀನು ಹಳ್ಳಿಗೋಡು
ದೀನ ಜನರ ಪಾಡ ನೋಡು
ಇರಲು ಗುಡಿಯು ಇಲ್ಲವಲ್ಲ
ಹೊಟ್ಟೆ ತುಂಬ ಅನ್ನವಿಲ್ಲ!
ಹರಿಗೆ ಎಂದು ಗುಡಿಯನೊಂದು ಕಟ್ಟುತಿರುವೆಯಾ?

ದೀನಗೊಂದು ಗೂಡು ಸಾಕು
ದೇವಗೊಂದು ವಿಶ್ವ ಬೇಕು
ಮಣ್ಣ ಹುಲ್ಲ ಸಣ್ಣ ಗೂಡು
ಬಡವಗದುವೆ ಸಿರಿಯ ಬೀಡು
ಹರಿಗೆ ಎಂದು ಗುಡಿಯನೊಂದು ಕಟ್ಟುತಿರುವೆಯಾ?

ಜಗಕೆ ಗೋಡೆ ಹಾಕಿ ಗುಡಿಯ ಕಟ್ಟಬಲ್ಲೆಯಾ?
ಹರಿಗೆ ಎಂದು ಗುಡಿಯನೊಂದ ಕಟ್ಟುತಿರುವೆಯಾ?
ಹರಿಯ ವಿಶ್ವರೂಪವನ್ನು ಮರೆತುಬಿಟ್ಟೆಯಾ?
ದೀನಗಿಂತ ದೇವ ಬಡವನೆಂದು ಬಗೆದೆಯಾ?

ದಿನಕರ ದೇಸಾಯಿಯವರು ಶೋಷಿತರ ಪರವಾಗಿ ಹೋರಾಡಿದವರು. ಆದರೆ ಅವರು ಮಾರ್ಕ್ಸವಾದಿಗಳಲ್ಲ ಹಾಗು ನಾಸ್ತಿಕರಲ್ಲ. ಅವರಿಗೆ ಹರಿಯಲ್ಲಿ ನಂಬುಗೆ ಇದೆ. ಹಾಗೆಂದು ಹರಿಪೂಜೆಗಾಗಿ ಸಮಯವನ್ನು ‘ವ್ಯರ್ಥ’ ಮಾಡುವವರಲ್ಲ. ಸಾಮಾಜಿಕ ಹೋರಾಟದಲ್ಲಿ ಇದ್ದವರಾದರೂ ಸಹ ರಾಜಕಾರಣಿಯಲ್ಲ.  ಇವರು ಒಂದು ಅವಧಿಗಾಗಿ ಲೋಕಸಭಾ ಸದಸ್ಯರಾಗಿದ್ದರೂ ಸಹ ಯಾವುದೇ ರಾಜಕೀಯ ಪಕ್ಷದ ಸದಸ್ಯರಲ್ಲ. (ಭಾರತ ಸೇವಕ ಸಮಾಜದ ನಿಯಮಗಳ ಮೇರೆಗೆ ಇವರು ರಾಜಕೀಯ ಪಕ್ಷಗಳನ್ನು ಸೇರುವಂತಿರಲಿಲ್ಲ. ದೇವರಾಜ ಅರಸರು ಮುಖ್ಯಮಂತ್ರಿಯಾಗಿದ್ದಾಗ, ದಿನಕರ ದೇಸಾಯಿಯವರಿಗೆ ಮಂತ್ರಿ ಪದವಿಯನ್ನು ನೀಡಲು ಸಿದ್ಧರಿದ್ದರು. ಆದರೆ ತತ್ವನಿಷ್ಠರಾದ ದೇಸಾಯಿಯವರು ಆ ಆಮಿಷವನ್ನು ತಿರಸ್ಕರಿಸಿದರು.)

ತಮ್ಮ ನಿಬಿಡ ಜನಸೇವಾ ಕಾರ್ಯಕ್ರಮಗಳ ನಡುವೆ ಇವರಿಗೆ ಸಾಹಿತ್ಯರಚನೆಗೆ ಸಮಯ ಸಿಕ್ಕುವದೇ ಅಪರೂಪವಾಗಿತ್ತು. ಹಾಗಿದ್ದರೂ ಸಹ ದಿನಕರ ದೇಸಾಯಿಯವರು ‘ಜನಸೇವಕ’ ಎನ್ನುವ ಪತ್ರಿಕೆಯನ್ನು ನಡೆಯಿಸಿದರು. ಐದು ಕವನಸಂಕಲನಗಳನ್ನು ಹಾಗು ‘ನಾ ಕಂಡ ಪಡುವಣ’ ಎನ್ನುವ ಪ್ರವಾಸಸಾಹಿತ್ಯವನ್ನು ರಚಿಸಿದರು. ಈ ಪ್ರವಾಸಕಥನವು ಅವರ ಸೂಕ್ಷ್ಮ ಸಾಮಾಜಿಕ ಹಾಗು ರಾಜಕೀಯ ಒಳನೋಟವನ್ನು ಪ್ರತಿಬಿಂಬಿಸುತ್ತದೆ. ಇವನ್ನೆಲ್ಲ ಗಮನಿಸಿದಾಗ ಸಮಯದ ಅಭಾವದ ಮೂಲಕ ದಿನಕರ ದೇಸಾಯಿಯವರು ಬಹುಶಃ ಚುಟುಕುಗಳ ಕಡೆಗೆ ಒಲಿದಿರಬಹುದು ಎನ್ನಿಸುತ್ತದೆ.

‘ಹರಿಗೆ ಎಂದು ಗುಡಿಯನೊಂದು ಕಟ್ಟುತಿರುವೆಯಾ?’ ಕವನವು ದಿನಕರ ದೇಸಾಯಿಯವರ ಸಾಮಾಜಿಕ ಸಂವೇದನೆಯನ್ನು ವ್ಯಕ್ತ ಪಡಿಸುತ್ತದೆ. ಈ ಕವನಕ್ಕೆ ಪ್ರತಿಯಾಗಿ ಪು.ತಿ. ನರಸಿಂಹಾಚಾರ್ಯರು ಒಂದು ಕವನವನ್ನು ರಚಿಸಿದ್ದಾರೆ ಎಂದು ಶ್ರೀ ವ್ಯಾಸ ದೇಶಪಾಂಡೆಯವರು ನನಗೆ ತಿಳಿಸಿದಾಗ ನಾನು ಚಕಿತನಾದೆ. ಅದ್ಭುತ ಸ್ಮರಣಶಕ್ತಿಯ ಶ್ರೀ ವ್ಯಾಸ ದೇಶಪಾಂಡೆಯವರು ಆ ಕವನವನ್ನು ತಮ್ಮ ನೆನಪಿನಿಂದಲೇ ನನಗೆ ಹೇಳಿದರು. ಅದನ್ನೇ ನಾನು ಇಲ್ಲಿ ಉದ್ಧರಿಸುತ್ತಿದ್ದೇನೆ:

ಹರಿಗೆ ಎಂದು ಗುಡಿಯನೊಂದು ಕಟ್ಟುತಿರುವೆನು
ದೀನಗಿಂತ ದೇವ ಬಡವನೆಂದು ಬಗೆವೆನು.

ನಿಜವು ವಿಷ್ಣು ವಿಶ್ವಕರನು, ವಿಶ್ವಧಾಮನು
ಒಂದೆ ಹೆಜ್ಜೆ ಇಟ್ಟು ಬುವಿಯ ನಾಕವಳೆದನು
ಬೆಳ್ಳಿಬೆಟ್ಟದೊಡೆಯ ಶಿವನು ಚಂದ್ರಮೌಳಿಯು
ಪ್ರೇಮಮೂರ್ತಿ ಗಿರಿಜೆ ಅವನ ಪ್ರಣಯಕಾರ್ತೆಯು

ಆದರವನ ಬೀಡು ಮಸಣ, ಲೇಪ ಬೂದಿಯು
ಚರ್ಮ ಉಡುಗೆ, ಹಾವು ತೊಡುಗೆ, ಬದುಕು ಬಿಕ್ಕೆಯು
ದೀನಗೊಂದು ವಿಶ್ವ ಸಾಲದಾಸೆ ತಣಿಸಲು
ದೇವನೆದೆಯ ಗುಡಿಯು ಸಾಕು ನಲಿದು ನಲಿಸಲು
                        (--ಪು.ತಿ.ನರಸಿಂಹಾಚಾರ್)

ದಿನಕರ ದೇಸಾಯಿಯವರ ಕವನಕ್ಕೆ ಸಾಮಾಜಿಕ ಪ್ರೇರಣೆ ಇದ್ದರೆ, ಪು.ತಿ. ನ. ಅವರ ಕವನಕ್ಕೆ ಆಧ್ಯಾತ್ಮಿಕ ಪ್ರೇರಣೆ ಇದೆ.
‘ಅವರವರ ಭಾವಕ್ಕೆ,
ಅವರವರ ಭಕುತಿಗೆ,
ಅವರವರ ತೆರನಾಗಿ
ಇರುತಿಹನು ಶಿವಯೋಗಿ’ ಎಂದುಕೊಳ್ಳಬಹುದಷ್ಟೆ!

ದಿನಕರ ದೇಸಾಯಿಯವರ ಮೂರು ಕವನಗಳು ನನ್ನ ಅಚ್ಚುಮೆಚ್ಚಿನ ಕವನಗಳು. ‘ಹರಿಗೆ ಎಂದು ಗುಡಿಯನೊಂದು ಕಟ್ಟುತಿರುವೆಯಾ?’ ಕವನವು ಅವುಗಳಲ್ಲೊಂದು. ‘ನನ್ನ ದೇಹದ ಬೂದಿ ಗಾಳಿಯಲಿ ತೂರಿ ಬಿಡಿ’ ಎನ್ನುವದು ಮತ್ತೊಂದು ಕವನ. ಈ ಕವನ ಹೀಗಿದೆ:

ನನ್ನ ದೇಹದ ಬೂದಿ-ಗಾಳಿಯಲಿ ತೂರಿ ಬಿಡಿ
ಹೋಗಿ ಬೀಳಲಿ ಬತ್ತ ಬೆಳೆಯುವಲ್ಲಿ;
ಬೂದಿ-ಗೊಬ್ಬರದಿಂದ ತೆನೆಯೊಂದು ನೆಗೆದು ಬರೆ
ಧನ್ಯವಾಯಿತು ಹುಟ್ಟು ಸಾವಿನಲ್ಲಿ

ನನ್ನ ದೇಹದ ಬೂದಿ-ಹೊಳೆಯಲ್ಲಿ ಹರಿಯಬಿಡಿ
ತೇಲಿ ಬೀಳಲಿ ಮೀನು ಹಿಡಿಯುವಲ್ಲಿ;
ಮುಷ್ಟಿಬೂದಿಯ ತಿಂದು ಪುಷ್ಟವಾಗಲು ಮೀನು
ಧನ್ಯವಾಯಿತು ಹುಟ್ಟು ಸಾವಿನಲ್ಲಿ

ನನ್ನ ದೇಹದ ಬೂದಿ-ಕೊಳದಲ್ಲಿ ಬೀರಿ ಬಿಡಿ
ತಾವರೆಯು ದಿನದಿನವು ಅರಳುವಲ್ಲಿ;
ಬೂದಿ ಕೆಸರನು ಕೂಡಿ ಹೊಸ ಪಂಕಜವು ಮೂಡೆ
ಧನ್ಯವಾಯಿತು ಹುಟ್ಟು ಸಾವಿನಲ್ಲಿ

ಸತ್ತ ಮೇಲಾದರೂ ದೇಹ ಸೇವೆಗೆ ನಿಲಲಿ
ಇಂದಿಗೀ ನರಜನ್ಮ ಸೇವೆಯಿಂದು
ತನ್ನ ಸ್ವಾರ್ಥವ ನೆನೆದು ವ್ಯರ್ಥವಾಗಿದೆ, ದೇವ,
ನಿಜ ಸೇವೆಗೈಯಲಿಕೆ ಬರಲಿ ಮುಂದು.

ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ ನೆಹರೂರವರು ಸಹ ತಮ್ಮ ಮೃತ್ಯುಪತ್ರದಲ್ಲಿ ತಮ್ಮ ದೇಹದ ಬೂದಿಯನ್ನು ಭಾರತದ ವಿವಿಧ ಪ್ರದೇಶಗಳಲ್ಲಿ ಹಾಗು  ನದಿಗಳಲ್ಲಿ ತೂರಿ ಬಿಡಲು ಬರೆದಿದ್ದಾರೆ. ನೆಹರೂರವರು ತಮ್ಮ ಮೃತ್ಯುಪತ್ರವನ್ನು ೧೯೪೮ರಲ್ಲಿಯೇ ಬರೆದಿದ್ದರೂ ಸಹ, ಅವರ ಮರಣದ ನಂತರ ಅಂದರೆ ೧೯೬೨ರಲ್ಲಿ ಅದು ಪ್ರಕಟವಾಯಿತು. ದಿನಕರ ದೇಸಾಯಿಯವರು ತಮ್ಮ ಈ ಕವನವನ್ನು ೧೯೬೨ಕ್ಕಿಂತ ಮೊದಲೇ ಬರೆದಿದ್ದಾರೆ.
ನೆಹರೂರ ಇಚ್ಛೆಯು ಭಾವನಾತ್ಮಕವಾಗಿದೆ. ದಿನಕರ ದೇಸಾಯಿಯವರ ಕವನದಲ್ಲಿ, ತನ್ನ ಬದುಕು ಹಾಗು ತನ್ನ ಸಾವು ಎರಡರಿಂದಲೂ ಈ ಜಗತ್ತಿಗೆ ಉಪಯೋಗವಾಗಲಿ ಎನ್ನುವ ತೀವ್ರ ಕಳಕಳಿಯಿದೆ.

ದಿನಕರ ದೇಸಾಯಿಯವರು ೧೯೮೨ ನವ್ಹಂಬರ ೬ರಂದು ತೀರಿಕೊಂಡರು. ಅವರ ಕವನದಲ್ಲಿಯ ಕೋರಿಕೆಯನ್ನು ಮನ್ನಿಸಲಾಯಿತೊ ಇಲ್ಲವೊ ತಿಳಿಯದು. ಆದರೆ ಕನ್ನಡನಾಡಿನ ಈ ಸುಪುತ್ರನ ಜನ್ಮವು ಜನಸೇವೆಯಲ್ಲಿ ಸಾರ್ಥಕವಾಗಿರುವದರಲ್ಲಿ ಎಳ್ಳಷ್ಟೂ ಸಂದೇಹವಿಲ್ಲ.

ಇಂದಿರಾ ಇವರು ದಿನಕರ ದೇಸಾಯಿಯವರ ಹೆಂಡತಿ. ಈ ಮರಾಠಿ ತರುಣಿ ದೇಸಾಯಿಯವರನ್ನು ಮದುವೆಯಾಗುವ ಬಯಕೆಯನ್ನು ವ್ಯಕ್ತ ಪಡಿಸಿದಾಗ, ದೇಸಾಯಿಯವರು, ‘ನನ್ನ ಅಂಗಿಗೆ ಜೇಬು ಇಲ್ಲ’ ಎಂದು ಹೇಳಿದ್ದರು. ‘ಅದಕ್ಕಾಗಿಯೇ ನಾನು ನಿಮ್ಮನ್ನು ಮದುವೆಯಾಗಲು ಬಯಸುವುದು’ ಎಂದು ಇಂದಿರಾ ಮರುನುಡಿದರಂತೆ!


ದಿನಕರ ದೇಸಾಯಿಯವರ ನನ್ನ ಮೆಚ್ಚಿನ ಮೂರನೆಯ ಕವನ: ‘ಟಿಕ್ ಟಿಕ್ ಗೆಳೆಯಾ, ಟಿಕ್ ಟಿಕ್ ಟಿಕ್!’
ಇದೊಂದು ಅದ್ಭುತ ಮಕ್ಕಳ ಗೀತೆ. ನಾನು ಕನ್ನಡ ಶಾಲೆಯಲ್ಲಿ ಕಲಿಯುತ್ತಿರುವಾಗ  ಈ ಕವನ ನಮ್ಮ ಪಠ್ಯದಲ್ಲಿತ್ತು.
ಕವನ ಹೀಗಿದೆ:

ಗಂಟೆಯ ನೆಂಟನೆ ಓ ಗಡಿಯಾರ,
ಬೆಳ್ಳಿಯ ಬಣ್ಣದ ಗೋಲಾಕಾರ,
ವೇಳೆಯ ತಿಳಿಯಲು ನೀನಾಧಾರ,
ಟಿಕ್ ಟಿಕ್ ಗೆಳೆಯಾ, ಟಿಕ್ ಟಿಕ್ ಟಿಕ್!

ಹಗಲೂ ಇರುಳೂ ಒಂದೇ ಬಾಳು,
ನೀನಾವಾಗಲು ದುಡಿಯುವ ಆಳು,
ಕಿವಿಯನು ಹಿಂಡಲು ನಿನಗದು ಕೂಳು
ಟಿಕ್ ಟಿಕ್ ಗೆಳೆಯಾ, ಟಿಕ್ ಟಿಕ್ ಟಿಕ್!

ಮುಖ ಒಂದಾದರು ದ್ವಾದಶ ನೇತ್ರ!
ಎರಡೇ ಕೈಗಳು ಏನು ವಿಚಿತ್ರ!
ಯಂತ್ರ ಪುರಾಣದ ರಕ್ಕಸ ಪುತ್ರ!
ಟಿಕ್ ಟಿಕ್ ಗೆಳೆಯಾ, ಟಿಕ್ ಟಿಕ್ ಟಿಕ್!

ಟಿಕ್ ಟಿಕ್ ಎನ್ನುತ ಹೇಳುವೆಯೇನು?
ನಿನ್ನೀ ಮಾತಿನ ಒಳಗುಟ್ಟೇನು?
‘ಕಾಲವು ನಿಲ್ಲದು’ ಎನ್ನುವಿಯೇನು?
ಟಿಕ್ ಟಿಕ್ ಗೆಳೆಯಾ, ಟಿಕ್ ಟಿಕ್ ಟಿಕ್!

ದುಡಿಯುವದೊಂದೇ ನಿನ್ನಯ ಕರ್ಮ
ದುಡಿಸುವದೊಂದೇ ನಮ್ಮಯ ಧರ್ಮ
ಇಂತಿರುವುದು ಕಲಿಯುಗದೀ ಮರ್ಮ
ಟಿಕ್ ಟಿಕ್ ಗೆಳೆಯಾ, ಟಿಕ್ ಟಿಕ್ ಟಿಕ್!

ಈ ಬಾಲಗೀತೆಯಲ್ಲಿಯೂ ಸಹ ದಿನಕರ ದೇಸಾಯಿಯವರ ಶೋಷಿತಸಂವೇದನೆಯ ಸಮಾಜಮುಖೀ ಧೋರಣೆ ವ್ಯಕ್ತವಾಗುತ್ತಿದೆ! ‘ನೀನಾವಾಗಲು ದುಡಿಯುವ ಆಳು’ ಹಾಗು ‘ಯಂತ್ರಪುರಾಣದ ರಕ್ಕಸಪುತ್ರ’ ಎನ್ನುವ ಸಾಲುಗಳು ಈ ಧೋರಣೆಯನ್ನು ಸ್ಪಷ್ಟಪಡಿಸುತ್ತವೆ.

ದಿನಕರ ದೇಸಾಯಿಯವರು ತಮ್ಮ ಜೀವನದ ಪ್ರತಿ ಗಳಿಗೆಯನ್ನು ಸಮಾಜಕ್ಕಾಗಿ ಮೀಸಲಿಟ್ಟಿದ್ದರು. ದೇವರಲ್ಲಿ ಅವರಿಗೆ ನಂಬುಗೆ ಇದ್ದರೆ, ಅದು ಅವರ ಅಂತರಂಗಕ್ಕೆ ಮಾತ್ರ ತಿಳಿದಿರಬಹುದು. ಮರಣಶಯ್ಯೆಯಲ್ಲಿದ್ದಾಗ ಅವರು ರಚಿಸಿದ ಚುಟುಕು ಹೀಗಿದೆ:

ಜಗದೀಶ್ವರನು ಮೊನ್ನೆ ಮಾಡಿ ಟೆಲಿಫೋನು
ಕೇಳಿದನು, ‘ದೇಸಾಯಿ, ಹೇಗಿದ್ದಿ ನೀನು?’
ಮುಗಿಯಲಿಲ್ಲವೆ ನಿನ್ನ ಚುಟುಕುಗಳ ಹುಚ್ಚು
ಇನ್ನೆರಡು ಬರೆದು ನೀ ಪುಸ್ತಕವ ಮುಚ್ಚು!’

ದಿನಕರ ದೇಸಾಯಿಯವರು ತಮ್ಮ ಅಂತ್ಯವನ್ನು ಅರಿತಿರಬಹುದು. ಅದಕ್ಕೂ ಮುಖ್ಯವೆಂದರೆ, ತನ್ನನ್ನು ಹಿಡಿದುಕೊಂಡೇ ಯಾರೂ ಅಮರನಾಗಿರುವಷ್ಟು ಮುಖ್ಯ ಅಲ್ಲ ಎಂದು ಅವರು ಅರಿತಿರಬಹುದು. ಅಥವಾ ಒಂದು ಜ್ಯೋತಿ ನಂದಿದರೆ, ಅದು ಹೊತ್ತಿಸಿದ ನೂರು ಜ್ಯೋತಿಗಳು ಅಲ್ಲಿ ಬೆಳಗುತ್ತವೆ ಎನ್ನುವುದನ್ನು ಅವರು ಅರಿತಿರಬಹುದು.

ಗೋಖಲೆ ಸೆಂಟೆನರಿ ಕಾಲೇಜಿನಲ್ಲಿ ಅವರ ಎದೆಯಳತೆಯ ಮೂರ್ತಿಯನ್ನು ಸ್ಥಾಪಿಸಲು ಅವರ ಶಿಷ್ಯರು ಬಯಸಿದ್ದರು. ಹಾಗೇನಾದರೂ ಮಾಡಿದರೆ ತಾನು ರಾಜೀನಾಮೆ ಕೊಡುವದಾಗಿ ದೇಸಾಯಿಯವರು ಬೆದರಿಕೆ ಹಾಕಿದರು. ದಿನಕರ ದೇಸಾಯಿಯವರ ನಿಧನದ ನಂತರ, ಅವರ ನೆನಪಿಗಾಗಿ ಎದೆಯಳತೆಯ ಪುತ್ಥಳಿಯೊಂದನ್ನು ಅಲ್ಲಿ ನಿಲ್ಲಿಸಲಾಗಿದೆ.

ದಿನಕರ ದೇಸಾಯಿಯವರು ಶೋಷಿತರ ಹಾಗು ತಮ್ಮ ಅನೇಕ ಶಿಷ್ಯರ ಹೃದಯಗಳಲ್ಲಿ ನಿರಂತರವಾಗಿ ಬೆಳಗುತ್ತಿದ್ದಾರೆ.

(ಈ ಲೇಖನದ ಬಹ್ವಂಶ ಮಾಹಿತಿಯನ್ನು ಒದಗಿಸಿದ ಶ್ರೀ ವ್ಯಾಸ ದೇಶಪಾಂಡೆಯವರಿಗೆ ನಾನು ಕೃತಜ್ಞನಾಗಿದ್ದೇನೆ.
                                                                                                                     -ಸುನಾಥ)

Wednesday, April 25, 2012

‘ಆನಂದಕಂದ‘ರ ‘ನೋಡು ಬರುವ ಸುಗ್ಗಿಯಾಟ!’


 ‘ಆನಂದಕಂದ’ ಕಾವ್ಯನಾಮದಿಂದ ಸಾಹಿತ್ಯ ರಚಿಸಿದ ಬೆಟಗೇರಿ ಕೃಷ್ಣಶರ್ಮರನ್ನು ಸಂಪೂರ್ಣ ದೇಸೀಯ ಪ್ರತಿಭೆ ಎಂದು ಕರೆಯಬಹುದು. ತೀವ್ರ ಬಡತನದಿಂದಾಗಿ ಇವರ ವಿದ್ಯಾಭ್ಯಾಸವು ಮುಲ್ಕಿ (೭ನೆಯ ತರಗತಿಯ) ಪರೀಕ್ಷೆಗೆ ಕೊನೆಗೊಂಡಿತು. ಆದರೆ ತೀಕ್ಷ್ಣ ಬುದ್ಧಿಮತ್ತೆಯ ಕೃಷ್ಣಶರ್ಮರ ಅಧ್ಯಯನಕ್ಕೆ ಹಾಗು ಸಾಹಿತ್ಯರಚನೆಗೆ ಇದು ತೊಡಕಾಗಲಿಲ್ಲ.

ನವೋದಯ ಕಾಲದ ಇತರ ಸಾಹಿತಿಗಳಾದ ಬೇಂದ್ರೆ, ರಾಜರತ್ನಂ ಮೊದಲಾದವರು ಗ್ರಾಮೀಣ ಆಡುನುಡಿಯಲ್ಲಿ ಕಾವ್ಯರಚನೆಯನ್ನು ಮಾಡಿದ್ದಾರೆ. ಹೀಗಿದ್ದರೂ ಆ ಕವನಗಳಲ್ಲಿ ಸಂಕೀರ್ಣವಾದ ಸಾಂಸ್ಕೃತಿಕ ಪ್ರಜ್ಞೆಯಿದೆ. ಕೃಷ್ಣಶರ್ಮರ ‘ನಲ್ವಾಡುಗಳು’ ನೂರಕ್ಕೆ ನೂರರಷ್ಟು ‘ಹಳ್ಳಿಯ ಹಾಡುಗಳು’. ಕೃಷ್ಣಶರ್ಮರ ಕೆಲವು ನಲ್ವಾಡುಗಳನ್ನು ತ್ರಿವೇಣಿಯವರ blogತುಳಸೀವನ’ದಲ್ಲಿ ನೋಡಬಹುದು. ಈ ಹಾಡುಗಳನ್ನು ಓದಿದಾಗ, ವಿಶೇಷತಃ ಕೇಳಿದಾಗ, ಹಳ್ಳಿಯ  ಕವಿ ಅಥವಾ ಗರತಿಯರು ಕಟ್ಟಿ ಹಾಡಿರಬಹುದಾದ ಹಾಡುಗಳಿವು ಎಂದು ಭಾಸವಾಗುತ್ತದೆ. ಇವು ಜಾನಪದ ಹಾಡುಗಳೆಂದೇ ಅನೇಕರ ಭಾವನೆಯಾಗಿದೆ. ಅಚ್ಚರಿಯ ಮಾತೆಂದರೆ, ಈ ಹಾಡುಗಳನ್ನು ಬರೆದ ಕೃಷ್ಣಶರ್ಮರೇ, ಮಾರ್ಗ ಶೈಲಿಯ ಕಾವ್ಯರಚನೆಯನ್ನೂ ಮಾಡಿದ್ದಾರೆ. ನಾನು ಕನ್ನಡ ಶಾಲೆಯಲ್ಲಿ ಕಲಿಯುತ್ತಿದ್ದಾಗ, ಕೃಷ್ಣಶರ್ಮರ ‘ನೋಡು ಬರುವ ಸುಗ್ಗಿಯಾಟ!’ ಕವನವು ನಮ್ಮ ಪಠ್ಯದಲ್ಲಿತ್ತು. ಆ ಕವನವನ್ನು ಓದುತ್ತಿದ್ದಂತೆಯೇ ನಾನು ಕೃಷ್ಣಶರ್ಮರ ಅಭಿಮಾನಿಯಾದೆ. ಇದು ‘ಮಾರ್ಗ’ ಶೈಲಿಯ ಕವನವಾಗಿದ್ದು, ಕೃಷ್ಣಶರ್ಮರು ‘ಹಳ್ಳಿಯ ಧಾಟಿ’ಯಲ್ಲಿ ಹಳ್ಳಿಗರನ್ನೂ ಮೀರಿಸಿ ಬರೆಯುತ್ತಾರೆ ಎಂದು ನನಗೆ ಆಗ ಗೊತ್ತಿರಲಿಲ್ಲ! ಇತ್ತೀಚೆಗೆ ಇವರ ಸಮಗ್ರ ಕವನಸಂಕಲನವು ‘ಬೆಳುವಲದ ಸುಗ್ಗಿ’ ಎನ್ನುವ ಹೆಸರಿನಲ್ಲಿ ಬಿಡುಗಡೆಯಾಯಿತು. ಆ ಸಂಕಲನದಲ್ಲಿ ನನ್ನ ನೆಚ್ಚಿನ ಕವನ ನನಗೆ ಮತ್ತೆ ಲಭಿಸಿತು.

ಕವನದ ಪೂರ್ಣಪಾಠ ಹೀಗಿದೆ:

            ೧
ಬಾಳಿದು ಕನಸಲ್ಲ, ಗೋಳಿನ ತಿನಿಸಲ್ಲ,
ನನ್ನಿ-ಹಿಗ್ಗಿನ ಹೊಸತೋಟ!
ನಾನೊಂದು ಮಾಮರ, ನೀ ಮಲ್ಲಿಗೆಯ ಬಳ್ಳಿ;
ಚೆನ್ನೇ ಚೆನ್ನೆನಿತು ಈ ಕೂಟ....?

            ೨
ಮಾಗಿಯ ಕೊರೆತಕ್ಕೆ ಮೈ ಬರಲಾಗಿರೆ
ಮರ-ಬಳ್ಳಿ ಮರುಗಿ ಸಾಯುವವೆ?
ಸಾಗಿ ಬಹುದು ಸುಗ್ಗಿಯೆಂಬ ನಲವಿನಲಿ
ಕಾಲವ ತುಳಿದು ಬಾಳುವವೆ!

            ೩
ಹದ್ದು-ಹಾಲಕ್ಕಿಯು ಹಾರಾಡುತಿಹವೇನೆ?
ಕೂಗುತಿಹವೆ ಕಾಗೆ-ಗೂಗೆ?
ಹೆದರಿಕೆ ಬಿಡುಬಿಡು, ಅವುಗಳಾಟವ ನೋಡು,
ಹುದುಗಿಹುದಲ್ಲಿಯು ಸೊಬಗೆ!

            ೪
ಬಾಳಿನ ತೋಟಕೆ ಬರಲಿದೆ ಹೊಸ ಸುಗ್ಗಿ
ನಳನಳಿಸುವದಂದು ತಳಿತು;
ಹಣ್ಣು ಬಿಡುವೆ ನಾನು, ಹೂವ ಹೊರುವೆ ನೀನು,
ದಿಟ ದಿಟ ನಂಬು ಈ ಮಾತು!

            ೫
ಹಣ್ಣಗೊನೆಯ ಹೊತ್ತು ಜೀವಜಂಗುಳಿಗಿತ್ತು
ಹಸಿವಿನುರಿಯ ನಾ ಹಿಂಗಿಸುವೆ;
ಹೂವಿನ ಹುರುಳಿಂದೆ ಹೃದಯವನರಳಿಸಿ,
ರಸಿಕಕುಲವ ನೀ ರಂಗಿಸುವೆ!

            ೬
ಕಳಿವಣ್ಣಗಳನುಂಡು ಕೋಗಿಲೆ-ಗಿಳಿವಿಂಡು
ಕಲಕಲ ನುಡಿಯನಾಡುವವೆ!
ಹೂವಿನೈಸಿರಿ ಕಂಡು ಮರಿದುಂಬಿಗಳ ದಂಡು
ಇನಿದನಿವೆರಸಿ ಹಾಡುವುವೆ!

            ೭
ಬಾಳಿದು ಕನಸಲ್ಲ, ಗೋಳಿನ ತಿನಿಸಲ್ಲ,
ನನ್ನಿ-ಹಿಗ್ಗಿನ ಹೊಸ ತೋಟ;
ನಾನೊಂದು ಮಾಮರ, ನೀ ಮಲ್ಲಿಗೆಯ ಬಳ್ಳಿ
ನೋಡು ಬರುವ ಸುಗ್ಗಿಯಾಟ!
................................................................................................

ಬಾಳಿದು ಕನಸಲ್ಲ, ಗೋಳಿನ ತಿನಿಸಲ್ಲ,
ನನ್ನಿ-ಹಿಗ್ಗಿನ ಹೊಸತೋಟ!
ನಾನೊಂದು ಮಾಮರ, ನೀ ಮಲ್ಲಿಗೆಯ ಬಳ್ಳಿ;
ಚೆನ್ನೇ ಚೆನ್ನೆನಿತು ಈ ಕೂಟ....?

ಕರಗಿ ಹೋದ ಸುಖದ ದಿನಗಳನ್ನು ನೆನೆಸಿಕೊಂಡಾಗ, ಬಾಳು ಒಂದು ಕನಸಿನಂತೆ ಭಾಸವಾಗುವುದು ಸಹಜ. ಕಣ್ಣೆದುರಿಗಿರುವ ದುಃಖವನ್ನು ಅನುಭವಿಸುತ್ತಿರುವಾಗ, ಬಾಳು ‘ಗೋಳಿನ ತಿನಿಸು’ ಎನಿಸುವುದೂ ಸಹಜ. ‘ಆನಂದಕಂದ’ ಎನ್ನುವ ಕಾವ್ಯನಾಮವನ್ನು ಧರಿಸಿದ ಕೃಷ್ಣಶರ್ಮರು ಎದುರಿಸಿದ ಸಂಕಟಗಳು ಅನೇಕ. ಆದರೂ ಸಹ ಈ ಬಾಳು ಸುಖದ ಕನಸೂ ಅಲ್ಲ, ದುಃಖದ ತಿನಿಸೂ ಅಲ್ಲ ಎಂದು ಕೃಷ್ಣಶರ್ಮರು ತಮ್ಮ ಪತ್ನಿಗೆ ಹೇಳುತ್ತಿದ್ದಾರೆ. ಹಾಗಿದ್ದರೆ, ಈ ಬಾಳು ಏನು? ಕೃಷ್ಣಶರ್ಮರ ಅನುಭವದಲ್ಲಿ, ಅವರಿಗೆ ಹೊಳೆದ ದರ್ಶನದಲ್ಲಿ, ಇದು ಹಿಗ್ಗಿನ ಹೊಸ ತೋಟ! ಕೃಷ್ಣಶರ್ಮರು ‘ಹಿಗ್ಗು’ ಎನ್ನುವ ಪದವನ್ನು ಬಳಸಿರುವುದನ್ನು ಗಮನಿಸಿರಿ. ಆತ್ಮಸಂತುಷ್ಟನಾದ, ಸಮಾಧಾನಚಿತ್ತನಾದ ಮನುಷ್ಯನು ಈ ‘ಹಿಗ್ಗಿ’ನಲ್ಲಿಯೇ ಯಾವಾಗಲೂ ಇರುವನು. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ‘ಸುಖದುಃಖೇ ಸಮೇ ಕೃತ್ವಾ, ಲಾಭಾಲಾಭೌ, ಜಯಾಜಯೌ’ ಎಂದು ಹೇಳಿದ್ದರೆ, ನಮ್ಮ ಕೃಷ್ಣಶರ್ಮರು ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಅವರಿಗೆ ಈ ಬಾಳು ಹಿಗ್ಗು ತುಂಬಿದ ಹೊಸ ತೋಟದಂತೆ ಕಾಣುತ್ತದೆ! ಇದು ಲಡ್ಡು ಹಿಡಿದ ಹಳೆಯ ಮರಗಳು ತುಂಬಿದ ತೋಟವಲ್ಲ, ಇದು ಹೊಸ ಹೊಸ ಸಸ್ಯಗಳ ತೋಟ. ಅರ್ಥಾತ್, ಭವಿಷ್ಯದ ಕಡೆಗೆ ಮುಖ ಮಾಡಿದ ಪ್ರಕೃತಿ, looking forward to the future! ಇಂತಹ ನಳನಳಿಸುವ ನಂದನವನದಲ್ಲಿ, ಕೃಷ್ಣಶರ್ಮರು ತಮ್ಮನ್ನು ಒಂದು ಮಾವಿನ ಮರಕ್ಕೆ ಹಾಗು ತಮ್ಮ ಪತ್ನಿಯನ್ನು ಮಲ್ಲಿಗೆಯ ಬಳ್ಳಿಗೆ ಹೋಲಿಸುತ್ತಿದ್ದಾರೆ. ಇದೀಗ ‘ಮಾರ್ಗ’ ಶೈಲಿ. ಅಭಿಜಾತ ಸಾಹಿತ್ಯದಲ್ಲಿ ಮಲ್ಲಿಗೆಯ ಬಳ್ಳಿಯು ಮಾಮರವನ್ನು ಆಶ್ರಯಿಸಿರುತ್ತದೆ. ಗಂಡಹೆಂಡಿರ ಅನ್ಯೋನ್ಯ ದಾಂಪತ್ಯದ ಪರಿ ಇದು.  ‘ಇಂತಹ ಕೆಳೆತನ ಹಿತಕರವಲ್ಲವೇನೆ?’ ಎಂದು ಕವಿ ತನ್ನ ಪತ್ನಿಗೆ ಸಮಾಧಾನಿಸುತ್ತಿದ್ದಾನೆ. ‘ನನ್ನಿ’ ಪದವನ್ನು ಗಮನಿಸಿರಿ. ಈ ಪದಕ್ಕೆ ‘Indeed, Pleasant’ ಎನ್ನುವ ಅರ್ಥಗಳು ಇರುವಂತೆಯೇ, ‘ನನ್ನ+ಈ’ ಎನ್ನುವ ಅರ್ಥವನ್ನೂ ಹೊಂದಿಸಬಹುದು.

ಮಾಗಿಯ ಕೊರೆತಕ್ಕೆ ಮೈ ಬರಲಾಗಿರೆ
ಮರ-ಬಳ್ಳಿ ಮರುಗಿ ಸಾಯುವವೆ?
ಸಾಗಿ ಬಹುದು ಸುಗ್ಗಿಯೆಂಬ ನಲವಿನಲಿ
ಕಾಲವ ತುಳಿದು ಬಾಳುವವೆ!

ಕೃಷ್ಣಶರ್ಮ ದಂಪತಿಗಳ ಬಾಳಿನಲ್ಲಿ ಈಗ ಮಾಗಿಯ ಕಾಲ ಪ್ರವೇಶಿಸಿದೆ. (ಅವರ ಬಾಳು ಆರ್ಥಿಕವಾಗಿ ಯಾವಾಗಲೂ ಮಾಗಿಯ ಕಾಲವೇ ಆಗಿತ್ತು!) ಚಳಿಗಾಲದಲ್ಲಿ ಸಸ್ಯಗಳು ಎಲೆಗಳನ್ನು ಕಳಚಿಕೊಂಡು ಬರಲಾಗುವುವು. ಹಾಗೆಂದು ಅದನ್ನೇ ದುಃಖದ ಕಾರಣವಾಗಿ ಮಾಡಿಕೊಂಡು ಮರಗುತ್ತ ಸಾಯಬಹುದೆ? ಮಾಗಿಯ ನಂತರ, ಸುಗ್ಗಿ ಬಂದೇ ಬರುವುದು. ಆ ಒಂದು ನಿರೀಕ್ಷೆಯೇ ಸದಾಕಾಲದ ನಲವಿಗೆ ಕಾರಣವಾಗಬೇಕು ಎನ್ನುತ್ತಾರೆ ಕೃಷ್ಣಶರ್ಮರು.

ಇಂಗ್ಲಿಶ್ ಕವಿ ಶೆಲ್ಲಿಯೂ ಸಹ `If winter comes can spring be far behind? ಎಂದು ಹಾಡಿದ್ದಾನೆ. ಕೃಷ್ಣಶರ್ಮರು ಶೆಲ್ಲಿಗಿಂತ ಅನೇಕ ಹೆಜ್ಜೆ ಮುಂದೆ ಹೋಗಿದ್ದಾರೆ. ಶೆಲ್ಲಿಯಲ್ಲಿ ಕಾಣಿಸುವುದು ವಸಂತದ ಭರವಸೆ ಮಾತ್ರ. ‘ಕಾಲವ ತುಳಿದು ಬಾಳುವವೆ!’ ಎಂದು ಹೇಳುವಾಗ ಕೃಷ್ಣಶರ್ಮರಲ್ಲಿ ಕಾಣಿಸುವುದು ಬದುಕನ್ನು ಎದುರಿಸುವ ಕೆಚ್ಚು!    

ಹದ್ದು-ಹಾಲಕ್ಕಿಯು ಹಾರಾಡುತಿಹವೇನೆ?
ಕೂಗುತಿಹವೆ ಕಾಗೆ-ಗೂಗೆ?
ಹೆದರಿಕೆ ಬಿಡುಬಿಡು, ಅವುಗಳಾಟವ ನೋಡು,
ಹುದುಗಿಹುದಲ್ಲಿಯು ಸೊಬಗೆ!

ಕಾಗೆ, ಗೂಗೆ ಹಾಗು ಹಾಲಕ್ಕಿಗಳು ಅಪಶಕುನದ ಹಕ್ಕಿಗಳು. ಹದ್ದಂತೂ ಸತ್ತ ಪ್ರಾಣಿಗಳನ್ನು ಭಕ್ಷಿಸಲು ಬರುವ ಪಕ್ಷಿ. ಇವೆಲ್ಲ ತಮ್ಮ ತಲೆಯ ಮೇಲೆಯೆ ಚೀರುತ್ತ ಹಾರುತ್ತಿರುವಾಗ, ಬಾಳಿನಲ್ಲಿ ಭರವಸೆ ಹುಟ್ಟಲು ಸಾಧ್ಯವೆ ಎನ್ನುವುದು ಕೃಷ್ಣಶರ್ಮರ ಪತ್ನಿಯಲ್ಲಿ ಮೂಡುವ ಸಂದೇಹ. ಈ ಪಕ್ಷಿಗಳೂ ಸಹ ನಿಸರ್ಗದ ಸೃಷ್ಟಿ. ಇವುಗಳಲ್ಲಿಯೂ ಸಹ ಸೊಬಗಿದೆ. ನಮ್ಮ ಕಾರ್ಪಣ್ಯವನ್ನು ಮರೆಯೋಣ. ಸೃಷ್ಟಿಯ ಆಟದಲ್ಲಿ ನಾವೆಲ್ಲರೂ ಭಾಗಿಗಳು ಎನ್ನುವುದನ್ನು ಅರಿತು, ಅಲ್ಲಿ ಅಡಗಿರುವ ಚೆಲುವನ್ನಷ್ಟೇ ಕಾಣೋಣ ಎನ್ನುವುದು ಕೃಷ್ಣಶರ್ಮರು ತಮ್ಮ ಹೆಂಡತಿಗೆ ನೀಡುತ್ತಿರುವ ಸಮಾಧಾನ!

ಬಾಳಿನ ತೋಟಕೆ ಬರಲಿದೆ ಹೊಸ ಸುಗ್ಗಿ
ನಳನಳಿಸುವದಂದು ತಳಿತು;
ಹಣ್ಣು ಬಿಡುವೆ ನಾನು, ಹೂವ ಹೊರುವೆ ನೀನು,
ದಿಟ ದಿಟ ನಂಬು ಈ ಮಾತು!

ಕಾಲನಿಯಮ ಎನ್ನುವುದು ಒಂದಿದೆಯಲ್ಲ. ಇಂದೇನೊ ನಮ್ಮ ಬಾಳತೋಟ ಬರಲಾಗಿರಬಹುದು. ನಮ್ಮಲ್ಲಿಗೂ ಸಹ ಹೊಸ ಸುಗ್ಗಿ ಬಂದೇ ಬರುವುದು. ಆ ದಿನದಂದು ಈ ತೋಟವು ಹೊಸ ತಳಿರುಗಳನ್ನು ತುಂಬಿಕೊಂಡು ಚೆಲುವಾಗುವುದು. (‘ಅಂದು’ ಎಂದು ಹೇಳುವಾಗ, ಭವಿಷ್ಯದ ಕಡೆಗಿರುವ ಕೃಷ್ಣಶರ್ಮರ ನೋಟವನ್ನು ಗಮನಿಸಬೇಕು.) ಆ ಕಾಲದಲ್ಲಿ  ನಾನು (=ಮಾಮರವು) ಹಣ್ಣುಗಳನ್ನು ಬಿಡುವೆನು; ಹಾಗು ನೀನು (=ಮಲ್ಲಿಕಾಲತೆಯು) ಹೂವುಗಳನ್ನು ಬಿಡುವೆ. ನಿಸರ್ಗಧರ್ಮವನ್ನು ಅನುಸರಿಸಿ ನಮ್ಮ ಬಾಳೂ ಸಾಫಲ್ಯ ಪಡೆಯುವುದು.ಇದು ಭ್ರಮೆ ಎಂದು ಭಾವಿಸಬೇಡ; ಇದು ಪ್ರಕೃತಿಯ ಸತ್ಯ.

ಹಣ್ಣಗೊನೆಯ ಹೊತ್ತು ಜೀವಜಂಗುಳಿಗಿತ್ತು
ಹಸಿವಿನುರಿಯ ನಾ ಹಿಂಗಿಸುವೆ;
ಹೂವಿನ ಹುರುಳಿಂದೆ ಹೃದಯವನರಳಿಸಿ,
ರಸಿಕಕುಲವ ನೀ ರಂಗಿಸುವೆ!

ಈ ಜೀವನಸಾಫಲ್ಯವು ಸ್ವಾರ್ಥಕ್ಕಾಗಿ ಅಲ್ಲ. ಮಾನವನು ಗಳಿಸುವದೆಲ್ಲವೂ ಸ್ವಂತಕ್ಕಾಗಿ. ಆದರೆ ಸಸ್ಯಸಂಕುಲವು ಪಡೆಯುವ ಹೂವು ಹಾಗು ಹಣ್ಣುಗಳು ಪ್ರಾಣಿಸಂಕುಲದ ಸುಖಕ್ಕಾಗಿ ಮೀಸಲಾಗಿವೆ. ಕೃಷ್ಣಶರ್ಮರು ತಮ್ಮ ಬದುಕಿನ ಬೇಗುದಿಯನ್ನು ಹೆಂಡತಿಯೊಡನೆ ಹಂಚಿಕೊಳ್ಳುತ್ತ ಬಂದಿದ್ದಾರೆ. ಇನ್ನು ಮುಂದೆ ಸುಖದ ದಿನಗಳು ಬರುವವು ಎನ್ನುವ ಅದಮ್ಯ ನಿರೀಕ್ಷೆಯನ್ನು ಇಟ್ಟುಕೊಳ್ಳುತ್ತಿದ್ದಾರೆ. ಆದರೆ ಈ ಸುಖವು ಕೇವಲ ಸ್ವಂತ ಭೋಗಕ್ಕಾಗಿ ಇರಬಾರದು ಎನ್ನುವ ಅರಿವು ಅವರಿಗಿದೆ. ಹಸಿದವರ ಒಡಲ ಉರಿಯನ್ನು ಹಿಂಗಿಸುವುದು ತಮ್ಮ ಕರ್ತವ್ಯವೆಂದೇ ಅವರು ಭಾವಿಸುತ್ತಾರೆ. ಅದಾದ ಬಳಿಕ ರಸಿಕಜನರ ಸಂತೋಷವು ಹೂಬಳ್ಳಿಯ ಧರ್ಮವಾಗಿದೆ. ಇದೇ ನಿಜವಾದ ಜೀವನಧರ್ಮ.

ಈ ಸಂದರ್ಭದಲ್ಲಿ ಸಂಸ್ಕೃತ ಸುಭಾಷಿತವೊಂದು ನೆನಪಿಗೆ ಬರುತ್ತಿದೆ:
ಪದ್ಮಾಕರಂ ದಿನಕರೋ ವಿಕಚೀಕರೋತಿ
ಚಂದ್ರೋ ವಿಕಾಸಯತಿ ಕೈರವ ಚಕ್ರವಾಲಮ್
ನಾಭ್ಯರ್ಥಿತೋsಪಿ ಜಲಧರೋ ಜಲಂ ದದಾತಿ
ಸಂತಃ ಸ್ವಯಂ ಪರಹಿತೇಷು ಕೃತಾಭಿಯೋಗಾ:

ಕಳಿವಣ್ಣಗಳನುಂಡು ಕೋಗಿಲೆ-ಗಿಳಿವಿಂಡು
ಕಲಕಲ ನುಡಿಯನಾಡುವವೆ!
ಹೂವಿನೈಸಿರಿ ಕಂಡು ಮರಿದುಂಬಿಗಳ ದಂಡು
ಇನಿದನಿವೆರಸಿ ಹಾಡುವುವೆ!

ಕೃಷ್ಣಶರ್ಮರ ಸಾತ್ವಿಕ ಅಪೇಕ್ಷೆಯನ್ನಷ್ಟು ನೋಡಿರಿ. ಇವರ ಬಾಳತೋಟದ ಸಿಹಿಫಲಗಳನ್ನು ಕೋಗಿಲೆ ಹಾಗು ಗಿಳಿಗಳ ಹಿಂಡು ಉಣ್ಣಬೇಕು, ಇವರ ತೋಟದ ಕಂಪಿನ ಹೂವುಗಳಿಗೆ ಆಕರ್ಷಿತವಾದ ದುಂಬಿಗಳು, ಅಲ್ಲಿ ನೆರೆದು, ಇಂಪಿನ ದನಿಯಲ್ಲಿ ಹಾಡಬೇಕು ಎನ್ನುವುದು ಕೃಷ್ಣಶರ್ಮರ ರಸಿಕ ಬಯಕೆ. ಈ ಸಾಲುಗಳನ್ನು ಓದುವಾಗ, ಕನ್ನಡದ ಆದಿಕವಿ ಪಂಪನು ಹಾಡಿದ ‘ ಕೋಗಿಲೆಯಾಗಿ ಮೇಣ್ ಮರಿದುಂಬಿಯಾಗಿ ಪುಟ್ಟುವುದು ನಂದನದೊಳ್, ಬನವಾಸಿ ದೇಶದೊಳ್’ ಎನ್ನುವ ರೋಮಾಂಚಕ ಕಾವ್ಯಭಾಗ ನೆನಪಾಗುವದಲ್ಲವೆ? ತಮ್ಮ ಬದುಕಿನಲ್ಲಿ ಪ್ರವೇಶಿಸುವ ಸುಖವು ಈ ರೀತಿಯಾಗಿ ಸಾಂಸ್ಕೃತಿಕವಾಗಿಯೂ ಸಫಲವಾಗಲಿ ಎನ್ನುವುದು ಕೃಷ್ಣಶರ್ಮರ ಸುಸಂಸ್ಕೃತ ಮನೋಧರ್ಮವನ್ನು ತೋರಿಸುತ್ತದೆ.

ಬಾಳಿದು ಕನಸಲ್ಲ, ಗೋಳಿನ ತಿನಿಸಲ್ಲ,
ನನ್ನಿ-ಹಿಗ್ಗಿನ ಹೊಸ ತೋಟ;
ನಾನೊಂದು ಮಾಮರ, ನೀ ಮಲ್ಲಿಗೆಯ ಬಳ್ಳಿ
ನೋಡು ಬರುವ ಸುಗ್ಗಿಯಾಟ!

ಮೊದಲ ನುಡಿಯಲ್ಲಿ ‘ಚೆನ್ನೇ ಚೆನ್ನೆನಿತು ಈ ಕೂಟ...?’ ಎನ್ನುವ ಸಂದೇಹದಿಂದ ಪ್ರಾರಂಭವಾಗುವ ಕವನವು ಅಂತ್ಯಗೊಳ್ಳುವುದು ಆತ್ಮವಿಶ್ವಾಸದ ಘೋಷಣೆಯೊಂದಿಗೆ: ‘ನೋಡು, ಬರುವ ಸುಗ್ಗಿಯಾಟ!’ 

Friday, April 6, 2012

ಕನಿಷ್ಠ ಜ್ಞಾನವಿಲ್ಲದ ಸಂಯುಕ್ತ ಕರ್ನಾಟಕ

ಫೆಬ್ರುವರಿ ೧೧ರಂದು ‘ಸಂಯುಕ್ತ ಕರ್ನಾಟಕ’ದ ಮೂರನೆಯ ಪುಟದಲ್ಲಿ ಪ್ರಕಟವಾದ ಸಮಾಚಾರದ ತುಣುಕು ಹೀಗಿದೆ:
‘ಹೊರ ಭಾಷಿಕರು ಕನ್ನಡದ ಕನಿಷ್ಟ ತಿಳಿವಳಿಕೆ ಹೊಂದಲಿ’.

ಹೊರಭಾಷಿಕರಿಗೆ ಬೇಡ, ಒಳಭಾಷಿಕರಿಗೂ ಬೇಡ, ಕನಿಷ್ಠಪಕ್ಷ ಪತ್ರಕರ್ತರಿಗಾದರೂ ಭಾಷೆಯ ಬಗೆಗೆ ಕನಿಷ್ಠ ತಿಳಿವಳಿಕೆ ಇರಬೇಕಲ್ಲವೆ? ಸಂಯುಕ್ತ ಕರ್ನಾಟಕದ ಪತ್ರಕರ್ತರಿಗೆ ಅದೇ ಇಲ್ಲ ಎನ್ನುವದನ್ನು ಅವರು ‘ಕನಿಷ್ಟ’ ಎನ್ನುವ ಪ್ರಯೋಗದ ಮೂಲಕ ರುಜುವಾತು ಮಾಡಿದ್ದಾರೆ! ಇಂತಹ ಅನೇಕ ತಪ್ಪುಗಳು ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರತಿ ದಿನವೂ ಘಟಿಸುತ್ತಿದ್ದು, ಈಗಾಗಲೇ ಅವುಗಳ ಬಗೆಗೆ ಇಲ್ಲಿ ಹಾಗು ಇಲ್ಲಿ ಬರೆಯಲಾಗಿದೆ.

ಇತ್ತೀಚೆಗೆ ಈ ಪತ್ರಿಕೆಯು ಮನೋರಂಜನೆಯ ಇನ್ನೂ ಅನೇಕ ಹೊಸ ವಿಧಾನಗಳ ಅನ್ವೇಷಣೆಯನ್ನು ಮಾಡಿದೆ. ಇಂತಹ ಒಂದು ವಿಧಾನಕ್ಕೆ ‘ಪದ ಕತ್ತರಿ ವಿಧಾನ’ ಎಂದು ಕರೆಯಬಹುದು. ಕಾಲಮ್ಮಿನ ಅಗಲಳತೆಯಲ್ಲಿ ಶೀರ್ಷಿಕೆಯನ್ನು ಕೂಡಿಸಲು ಆಗದಿದ್ದರೆ, ಯಾವುದಾದರೂ ಪದದ ಕೈಯನ್ನೋ, ಕಾಲನ್ನೋ ಕತ್ತರಿಸುವದು ಈ ವಿಧಾನದ ಲಕ್ಷಣ. ಕೆಲವೊಮ್ಮೆ ರುಂಡವನ್ನೇ ಹಾರಿಸಿದರೂ ನಡೆದೀತು. ಇದಂತೂ ಅತ್ಯುತ್ತಮ ಮಾರ್ಗ. ಕೆಳಗಿನ ಉದಾಹರಣೆಯನ್ನು ನೋಡಿರಿ:

ಅರ್ಥವಾಯಿತೆ? ‘ಭುವನೇಶ್ವರಿ’  ಎಂದು ಅಚ್ಚಿಸಲು ಜಾಗ ಸಾಲದು ಎಂದು ಮಧ್ಯಾಕ್ಷರವನ್ನು ಮಟಾಶ್ ಮಾಡಿ ‘ಭುವೇಶ್ವರಿ’ಯನ್ನಾಗಿ ಮಾಡಿದ್ದಾರೆ, ಅಷ್ಟೆ. ಇವಳು ನಮ್ಮ ಕನ್ನಡ ಭುವನೇಶ್ವರಿಯೇ ಹೌದು ಎಂದು ಸಂಪಾದಕರು ಅವಳ ತಲೆಯ ಮೇಲೆ ಆಣೆ ಇಟ್ಟು ಹೇಳಬೇಕಾಗಬಹುದು.

ಭುವನೇಶ್ವರಿಯಾದರೋ ಕನ್ನಡಿಗರ ಹೆತ್ತಮ್ಮ. ಆದುದರಿಂದ ಈ ಛೇದನವನ್ನು ಸಹಿಸಿಕೊಳ್ಳುವದು ಅವಳಿಗೆ ಅನಿವಾರ್ಯ. ಆದರೆ ಹುಬ್ಬಳ್ಳಿಯಂತಹ ಗಂಡುಮೆಟ್ಟಿನ ಶಹರದ ಮೆಣಸಿನಕಾಯಿಯವರು ಏಕೆ ಸುಮ್ಮನಿದ್ದಾರು?
ಕೆಳಗಿನ ಸುದ್ದಿಯನ್ನು ನೋಡಿರಿ.

 ಮೆಣಸಿನಕಾಯಿಯವರ ‘ನ’ ಮಂಗಮಾಯವಾಗಿ ‘ಮೆಣಸಿಕಾಯಿ’ಯಾಗಿದ್ದಾರೆ. ದಿವಂಗತರ ಬಳಗದ ಕಣ್ಣಿಗೆ ಈ ಮಂಗಾಟ ಬಿದ್ದಿರಲಿಕ್ಕಿಲ್ಲ. ಅಥವಾ ಬಿದ್ದರೂ ಸುಮ್ಮನಿದ್ದರೆ, ಅದು ಅವರ ಔದಾರ್ಯ!

ಸಂಯುಕ್ತ ಕರ್ನಾಟಕದಲ್ಲಿ ಕೇವಲ ಕತ್ತರಿ ಪ್ರಯೋಗವಷ್ಟೇ ಆಗುತ್ತದೆ ಎನ್ನುವ ತಪ್ಪು ಭಾವನೆ ಬೇಡ. ಕೆಲವೊಮ್ಮೆ ಕರ್ಮಣಿ ಪ್ರಯೋಗವೂ ಆಗುತ್ತದೆ ( ‘ಓದುಗರ ಕರ್ಮ’ ಎನ್ನುವ ಅರ್ಥದಲ್ಲಿ).
ಅಕ್ಷರಛೇದನದ ಪಾಪವನ್ನು ಕಳೆದುಕೊಳ್ಳುವ ಸಲುವಾಗಿ ಅಕ್ಷರವಿಸ್ತರಣೆಯನ್ನು ಮಾಡಿರುವ ಈ ಉದಾಹರಣೆಗಳನ್ನು ನೋಡಿರಿ:

ರೇವ್’ ಅನ್ನುವ ಆಂಗ್ಲ ಪದದ ‘ವ್’ಕಾರಕ್ಕೆ ಬಾಲ ಹಚ್ಚಿ ‘ರೇವು’ ಎಂದು ಕನ್ನಡೀಕರಿಸಿದ್ದಾರೆ. ಕನ್ನಡ ‘ಭುವೇಶ್ವರಿ’ಗೆ ಇದರಿಂದ ಖುಶಿ ಆದೀತು ಎಂದು ಭಾವಿಸೋಣ. 


ಆದರೆ  ‘ಬದುಕು’ ಪದದ ‘ಬ’ ಅಕ್ಷರಕ್ಕೆ ಬಾಲವನ್ನು ಜೋಡಿಸಿ ‘ಬುದುಕು’ ಮಾಡುವುದರ ಉದ್ದೇಶ ಮಾತ್ರ ಅರ್ಥವಾಗುವದಿಲ್ಲ!

ಕತ್ತರಿ ಹಾಗು ಕರ್ಮಣಿ ಪ್ರಯೋಗಗಳಲ್ಲದೆ, ಇನ್ನೊಂದು ಪ್ರಯೋಗವನ್ನೂ ಈ ಪತ್ರಿಕೆಯವರು ವಿಕಾಸಗೊಳಿಸಿದ್ದಾರೆ. ಅದಕ್ಕೆ ‘ಇಕ್ಕಳ ಪ್ರಯೋಗ’ ಎನ್ನುವ ಹೆಸರನ್ನು ಕೊಡಬಹುದು. ಒಂದು ಪದವನ್ನು ಸರಿಯಾಗಿ ಬರೆಯಲು ಸ್ಥಳಾಭಾವವಾದರೆ, ಆ ಪದವನ್ನು ಇಕ್ಕಳದಲ್ಲಿ ಹಾಕಿ ಹಿಚುಕುವುದು ಈ ಪ್ರಯೋಗದ ವಿಧಾನವಾಗಿದೆ. ಕೆಳಗಿನ ಉದಾಹರಣೆಯನ್ನು ನೋಡಿರಿ:

‘ಭಗವದ್ಗೀತೆ’ ಎನ್ನುವ ಪದವು ಇಕ್ಕಳದಲ್ಲಿ ಸಿಲುಕಿ ‘ಭಗ್ವದ್ಗೀತೆ’ಯಾಗಿದೆ. ಈ ಪ್ರಯೋಗದ ಕೆಲವೊಂದು ಸಂಭಾವ್ಯತೆಗಳನ್ನು ಊಹಿಸಿ ನಾನು ಗಾಬರಿಯಾದೆ. ‘ಬಸವೇಶ್ವರರ ವಚನಗಳು’ ಪದಪುಂಜವನ್ನು ಈ ಪ್ರಯೋಗದಲ್ಲಿ ‘ಬಸ್ವೇಶ್ವರ ವಚ್ನಗ್ಳು’ ಎಂದೂ, ‘ಮೂರು ಸಾವಿರ ಮಠದ ಅಪ್ಪನವರು’ ಪದಪುಂಜವನ್ನು ‘ಮೂರ್ಸಾವ್ರ ಮಠ್ದಪ್ನೋರ್’ ಎಂದೂ ಬರೆದರೆ ಅನಾಹುತವಾಗಲಿಕ್ಕಿಲ್ಲವೆ? ಅಥವಾ ಅದುವೇ ‘ಸಂಯುಕ್ತ ಕರ್ನಾಟಕ’ದ ‘ಸ್ಟೈಲ್ಶೀಟ್’ (=style sheet) ಎಂದು ಹೇಳಬಹುದೆ?

ಸ್ಥಳವನ್ನು ಉಳಿಸಲು ಸಂ.ಕ.ದವರು ಅಧ್ಯಾಹರಣ, ಸಂಕ್ಷಿಪ್ತೀಕರಣದಂತಹ ಇನ್ನೂ ಅನೇಕ ಉಪಾಯಗಳನ್ನು  ಯೋಜಿಸಿದ್ದಾರೆ.
‘ಖಾಲೀ ಗಾಡಾ ಸ್ಪರ್ಧೆ’ ಎನ್ನುವ ಈ ಶೀರ್ಷಿಕೆಯನ್ನು ನೋಡಿರಿ.

ಖಾಲೀ ಗಾಡಾದ ಎಂತಹ ಸ್ಪರ್ಧೆ ಎಂದು ನೀವು ಅಚ್ಚರಿಗೊಳ್ಳಬಹುದು. ಇಲ್ಲಿ ‘ಓಡಿಸುವ’ ಎನ್ನುವುದು ಅಧ್ಯಾಹೃತವಾಗಿದೆ. ಈ ಪ್ರಯೋಗವನ್ನು ಹೇಗಾದರೂ ಸಹಿಸಿಕೊಳ್ಳಬಹುದು. ಆದರೆ ಈ ಕೆಳಗಿನ ತಲೆಬರಹದ ಅರ್ಥವೇನು?

ರಾಹುಲನು ತಮ್ಮ ಮೇಲೆ ಮಾಡಿದ ಟೀಕೆಯಿಂದ ಖತಿಗೊಂಡ ಸೋನಿಯಾ ಗಾಂಧಿಯವರು ಅವನನ್ನೇ ‘ಹುಚ್ಚ’ನೆಂದು ಮರು ಟೀಕಿಸಿದ್ದಾರೆನ್ನುವ ಅರ್ಥ ಬರುವದಲ್ಲವೆ? ಹಾಗೆ ಅರ್ಥೈಸಿಕೊಂಡರೆ, ಅದು ಓದುಗರದೇ ತಪ್ಪು ಎಂದು ಸಂ.ಕ.ದವರು ಹೇಳುತ್ತಾರೆ. ಯಾಕೆಂದರೆ ಇದು ‘ಸಂಕ್ಷಿಪ್ತೀಕರಣ ಪ್ರಯೋಗ’ ಎನ್ನುವುದು ಅವರ ಸಮಜಾಯಿಷಿ. 
ಇನ್ನೊಂದು ಉದಾಹರಣೆಯನ್ನು ನೋಡಿರಿ:

ಈ ಸುದ್ದಿ ತುಣುಕಿನಲ್ಲಿ ಯಾರು ವಿಷಾದ ಪಟ್ಟಿದ್ದಾರೆ ಎನ್ನುವುದು ಅಪ್ರಸ್ತುತ! ಅದನ್ನು ಮುಂದಿನ ಸಾಲುಗಳಲ್ಲಿ ಹುಡುಕಿಕೊಳ್ಳಿರಿ.  

ಸಂಕ್ಷಿಪ್ತೀಕರಣವು ಕೇವಲ ತಲೆಬರಹಗಳಿಗೆ ಮಾತ್ರ ಸೀಮಿತವಾಗಿಲ್ಲ. ಸುದ್ದಿಯನ್ನೇ ಸಂಕ್ಷಿಪ್ತೀಕರಣಗೊಳಿಸುವದು ಸಂ.ಕ.ದವರ ಸ್ಪೆಶಾಲಿಟಿ ಎನ್ನಬಹುದು. ಅದಕ್ಕೊಂದು ಉದಾಹರಣೆ:
 ಸಮಾಚಾರದ ಈ ತುಣುಕಿನಲ್ಲಿ ಏನಾದರೂ ಅರ್ಥವಾಗುತ್ತಿದೆಯೆ? ನಾಯಕರು ಬೆಂಗಳೂರಿನಿಂದ ಪ್ರವಾಸ ಹೊರಟು ಧಾರವಾಡಕ್ಕೆ ಬರುವರು ಹಾಗು ಸರ್ಕೀಟ್ ಹೌಸಿನಲ್ಲಿ ವಾಸ್ಯವ್ಯ ಮಾಡುವರು ಎನ್ನುವುದು ಓದುಗರ ಊಹೆಗೆ ಬಿಟ್ಟ ವಿಷಯವಾಗಿದೆ! ಇದು ಓದುಗರನ್ನು ತರ್ಕಕುಶಲರನ್ನಾಗಿ ಮಾಡುವ ಪ್ರಯತ್ನವಾಗಿರಬಹುದೆ?

ಈಗ ಈ ಕೆಳಗಿನ ಉದಾಹರಣೆ ನೋಡಿರಿ:

ದುರಿಯಿಂದ’ ಎನ್ನುವ ಪದವು ತಪ್ಪು ಎನ್ನುವುದು ಎಂತಹ ದಡ್ಡನಿಗೂ ಗೊತ್ತಾಗುತ್ತದೆ. ಹಾಗಿದ್ದರೆ ಸಂಯುಕ್ತ ಕರ್ನಾಟಕದವರಿಗೆ ಏಕೆ ಗೊತ್ತಾಗಲಿಲ್ಲ ಎನ್ನುವ ಸಂದೇಹ ನಿಮಗೆ ಬರಬಹುದು. ಇದು  ‘ಸರಿಯಾದ ಅಕ್ಷರವನ್ನು ಊಹಿಸಿರಿ’ ಎನ್ನುವ ಸ್ಪರ್ಧೆಯಾಗಿದ್ದು, ಅದನ್ನು ಪತ್ರಿಕೆಯವರು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿದ್ದಾರೆ. ಅದನ್ನೂ ಸಹ ಜಾಣರಾದ ಓದುಗರೇ ಊಹಿಸಿಕೊಳ್ಳಬೇಕು.

ಇರುವ ಪದಗಳನ್ನು ಬದಲಾಯಿಸಿ, ಹೊಸ ಪದಗಳನ್ನು ಸೃಷ್ಟಿಸುವದರಲ್ಲಿ ಸಂಯುಕ್ತ ಕರ್ನಾಟಕಕ್ಕೆ ಅತೀವ ಆಸಕ್ತಿ. ‘ಖಾಲಿ ಗಾಡಿ ಓಡಿಸಿ’ ಎನ್ನುವ ವಾಕ್ಯದಲ್ಲಿಯ ‘ಗಾಡಿ’ ಪದವು ಸಂ.ಕ.ದ ಪತ್ರಕರ್ತರಿಗೆ ಪಸಂದು ಬಿದ್ದಂತೆ ಕಾಣುವದಿಲ್ಲ. ‘ಗಾಡಿ’ಯನ್ನು ‘ಗಾಡಾ’ ಮಾಡಿದರೆ ಅದು ‘ಜಾಸ್ತಿ ಹಿಂದೀ’ ಪದದಂತೆ ಕಾಣಬಹುದು ಎನ್ನುವದು ಅವರ ಗ್ರಹಿಕೆಯಾಗಿರಬಹುದೆ? ಗಾಡಿ ಎನ್ನುವದೇ ಹಿಂದೀ ಪದವಾಗಿರುವಾಗ ಈ ಕಸರತ್ತು ಯಾಕೆ ಎಂದು ಕೇಳುವಿರಾ? ಅದು ಪತ್ರಕರ್ತರ ಪ್ರಿವಿಲೇಜ್ ಅಲ್ಲವೆ? ಗಾಡಿ ಎನ್ನುವದು ಒಂದು ನಿರ್ಜೀವ ವಸ್ತುವಿನ ಹೆಸರು. ಗಾಡಾ ಎನ್ನಿರಿ, ಘೋಡಾ ಎನ್ನಿರಿ, ಅದರಿಂದ ಗಾಡಿಗೆ ಏನೂ ಅನ್ನಿಸುವದಿಲ್ಲ. ಆದರೆ ಸಜೀವ ವ್ಯಕ್ತಿಗಳ ಹೆಸರನ್ನು ಬದಲಾಯಿಸಿದರೆ? ಖ್ಯಾತ ಹಿಂದೀ ಸಿನೆಮಾ ನಟ ಆಮೀರನು ಸಂ.ಕ.ದ ಕೈಯಲ್ಲಿ ಸಿಕ್ಕು ಅಮೀರನಾಗಿದ್ದಾನೆ, ಅಂದರೆ ಶ್ರೀಮಂತನಾಗಿದ್ದಾನೆ. ಭಲೆ ಆಮೀರನ ಅದೃಷ್ಟವೆ!

ಕನ್ನಡದ ಮೇರುನಟ ರಾಜಕುಮಾರರು ಈ ಗಳಿಗೆಯಲ್ಲಿ ನಮ್ಮ ಜೊತೆಗಿಲ್ಲ. ಅವರು 
ಬದುಕಿದ್ದರೆ ಸಂ.ಕ.ದವರು ಅವರನ್ನು ರಜಾಕುಮಾರರನ್ನಾಗಿ ಮಾರ್ಪಡಿಸುತ್ತಿದ್ದರೋ ಏನೋ! ವ್ಯಕ್ತಿಯ ಹೆಸರನ್ನೇ ಬದಲಾಯಿಸುವ ಸಾಮರ್ಥ್ಯ ಉಳ್ಳವರು ಲೇಖಕರ ಕೃತಿಯ ಹೆಸರನ್ನು ಬಿಡಬಹುದೆ? ಕನ್ನಡದ ವಿನಾಯಕ ಗೋಕಾಕರು ತಮ್ಮ ಮಹಾಕಾವ್ಯ ‘ಭಾರತ ಸಿಂಧುರಶ್ಮಿ’ಗಾಗಿ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದರು. ಕನ್ನಡ ಹಾಗು ಇಂಗ್ಲಿಶ್ ಭಾಷಾಪಾಂಡಿತ್ಯದಲ್ಲಿ ಇವರನ್ನು ಮೀರಿಸಿದವರಿಲ್ಲ. ಇಂಥವರು ತಮ್ಮ ಕೃತಿಯ ಹೆಸರಿನಲ್ಲಿ ಕಾಗುಣಿತದ ತಪ್ಪನ್ನು ಮಾಡಿರುವರು ಎನ್ನುವುದು ಸಂ.ಕ. ಪಂಡಿತರ ಅಭಿಪ್ರಾಯ. ಆದುದರಿಂದ ಆ ಹೆಸರನ್ನು ‘ಭಾರತ ಸಿಂಧುರಶ್ಮೀ’ ಎಂದು ಬದಲಾಯಿಸಿದ್ದಾರೆ.

ಕೃತಿಯ ಹೆಸರನ್ನು ತೆಗೆದುಕೊಂಡು ಏನು ಮಾಡುವಿರಿ, ಕವಿಯನ್ನೇ ಬದಲಾಯಿಸುವ ಶಕ್ತಿ ನಮಗಿದೆ ಎನ್ನುವುದು ಸಂ.ಕ.ದವರ ಬುಡುಬುಡಿಕೆ ಎಂದು ತಿಳಿಯಬೇಡಿ. ನಮ್ಮ ಮು.ಮಂ. ಸದಾನಂದ ಗೌಡರು ತಮ್ಮ ಬಜೆಟ್ ಭಾಷಣದಲ್ಲಿ ಓದಿದ ಕವನವನ್ನು ‘ಚನ್ನವೀರ ಕಣವಿ’ಯವರ ಕವನವೆಂದು ಸಂ.ಕ.ದವರು ಘೋಷಿಸಿದ್ದಾರೆ.

ಅದ್ಯಾವನೋ ಬೇಂದ್ರೆ ಎನ್ನುವವನು ಆ ಕವನವನ್ನು ‘ಬೈರಾಗಿಯ ಹಾಡು’ ಎನ್ನುವ ತಲೆಬರಹ ಕೊಟ್ಟು ‘ಸಖೀಗೀತ’ ಎನ್ನುವ ಕವನಸಂಕಲನದಲ್ಲಿ ಅಚ್ಚು ಹಾಕಿಸಿಕೊಂಡಿದ್ದಾನೆ. ಇಲ್ಲಿದೆ ನೋಡಿ ಆ ಕವನ. (ಇದರಲ್ಲಿಯೂ ಸಹ ಮಾಡಲಾದ ಕಾಗುಣಿತದ ತಪ್ಪುಗಳನ್ನು ಕೆಂಪು ಗೆರೆಯಿಂದ ಗುರುತಿಸಲಾಗಿದೆ.)

‘ಕನ್ನಡಪ್ರಭಾ’ದವರೂ ಸಹ ಚನ್ನವೀರ ಕಣವಿಯವರ ಹೆಸರನ್ನೇ ಹಾಕಿದ್ದಾರೆ. ಸಂಯುಕ್ತ ಕರ್ನಾಟಕದವರೇನು ಹೆಚ್ಚುಗಾರಿಕೆ ಎನ್ನುವಿರಾ? 
ಸ್ವಾಮಿ, ಒಂದು ಸಂಸ್ಥೆಯನ್ನೇ ಕಿತ್ತಿ ಮತ್ತೊಂದು ಜಾಗದಲ್ಲಿ ಸ್ಥಾಪಿಸಬಲ್ಲ ಶಕ್ತಿ ಯಾರಿಗಿದೆ? ಅಲ್ಲಾಉದ್ದೀನನ ‘ಶೀಶೆಯಲ್ಲಿಯ ಭೂತ’ಕ್ಕೆ ಮಾತ್ರ ಇಂಥ ಶಕ್ತಿ ಇದೆ ಎಂದು ನೀವು ತಿಳಿದಿರುವಿರಾ? ಸಂ.ಕ.ದ ಪತ್ರಕರ್ತರು ಈ ‘bottle ಭೂತ’ಕ್ಕಿಂತ ಏನೂ ಕಡಿಮೆ ಇಲ್ಲ.

ರಾ.ಹ.ದೇಶಪಾಂಡೆ ಮೊದಲಾದ ಧಾರವಾಡದ ಕನ್ನಡಪ್ರಿಯ ಗೃಹಸ್ಥರ ಪ್ರಯತ್ನದಿಂದಾಗಿ, ೧೮೯೦ನೆಯ ಇಸವಿಯಲ್ಲಿ ಧಾರವಾಡದಲ್ಲಿ ‘ಕರ್ನಾಟಕ ವಿದ್ಯಾವರ್ಧಕ’ ಸಂಸ್ಥೆಯ ಸ್ಥಾಪನೆಯಾಯಿತು. ಆ ಸಂಸ್ಥೆಯನ್ನು ಅದರ ಕಟ್ಟಡದ ಜೊತೆಗೆ ಅನಾಮತ್ತಾಗಿ ಎತ್ತಿ ಹುಬ್ಬಳ್ಳಿಯಲ್ಲಿ ಇರಿಸಿದ ಕೀರ್ತಿ ಸಂ.ಕ.ದ bottle ಭೂತ’ಕ್ಕೆ ಸಲ್ಲುತ್ತದೆ! ‘ಭಾರತ ಸಿಂಧು ರಶ್ಮೀ’ ಎಂದು ಮೇಲೆ ಬರೆಯಲಾದಂತಹ ವರದಿಯಲ್ಲಿಯೇ ಧಾರವಾಡದಲ್ಲಿರುವ ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಹುಬ್ಬಳ್ಳಿಗೆ ಎತ್ತಿಡಲಾದ ರೋಚಕ ಮಾಹಿತಿ ಸಹ ನಿಮಗೆ ಲಭ್ಯವಾಗುತ್ತದೆ. After all ಧಾರವಾಡ ಹಾಗು ಹುಬ್ಬಳ್ಳಿ ಇವೆರಡೂ ಒಂದೇ ಮಹಾನಗರಪಾಲಿಕೆಗೆ ಸೇರಿವೆಯಲ್ಲ ಎಂದು ಸಮಾಧಾನ ಪಟ್ಟುಕೊಳ್ಳೋಣ.

ಸಂ.ಕ.ದವರು ಬಳಸುವ ಪದಗಳು ಕೆಲವೊಮ್ಮೆ ಓದುಗನನ್ನು ದೀರ್ಘ ಆಲೋಚನೆಯಲ್ಲಿ ಮುಳುಗಿಸುತ್ತವೆ. 
ಈ ತುಣಕನ್ನು ನೋಡಿರಿ:

‘ವಿದೇಶೀಯ ಬಂಡವಾಳ ಅನನ್ಯ’ ಎಂದು ಇಲ್ಲಿ ಸಾರಲಾಗಿದೆ. ಇದರ ಅರ್ಥ ಏನಿದ್ದೀತು? ಅನ್ಯ ಎಂದರೆ ಬೇರೆಯವನು. ಅನನ್ಯ ಎಂದರೆ ‘ಬೇರೆ ಅಲ್ಲ’ ಎಂದರ್ಥ. ಅವನ ಸಾಧನೆ ಅನನ್ಯವಾಗಿದೆ ಎಂದರೆ ಅವನಂತೆ ಬೇರಾರೂ ಆ ಸಾಧನೆಯನ್ನು ಮಾಡಿಲ್ಲ ಎನ್ನುವ ಅರ್ಥವಾಗುತ್ತದೆ. ಆದುದರಿಂದ ಈ ಸುದ್ದಿಯ ಅರ್ಥವು ವಿದೇಶೀ ಬಂಡವಾಳದಂತೆ ಬೇರೆ ಯಾವ ಬಂಡವಾಳವೂ ಇಲ್ಲ ಎಂದು ತಿಳಿಯಬೇಕಾಗುವದಲ್ಲವೆ? ಇದನ್ನು ‘ಬಂಡ್ವಾಳಿಲ್ಲದ ಬಡಾಯಿ’ ಎಂದು ಕರೆಯಬಹುದೆ!?

ಇನ್ನು  ವಿದೇಶೀ ಬಂಡವಾಳಕ್ಕಾಗಿ ಕರ್ನಾಟಕ ಸರಕಾರದವರು ಪರದೇಶಗಳಲ್ಲಿ ‘ರೋಡ್ ಶೋ’ ಮಾಡುವವರಿದ್ದಾರೆ ಎನ್ನುವ ಸಮಾಚಾರ ಓದಿ ನನಗೆ ಆಘಾತವಾಯಿತು.

ರೋಡ್ ಶೋ ಮಾಡುವದು ಚುನಾವಣೆ ಸಮಯದಲ್ಲಿ ಎನ್ನುವುದು ನನ್ನ ಕಲ್ಪನೆ.  ವಿದೇಶದಿಂದ ಬಂಡವಾಳ ಆಹ್ವಾನಿಸಲು ರೋಡ್ ಶೋ ಮಾಡುತ್ತಾರೆಯೆ? ಅಥವಾ ರಸ್ತೆಯ ಬದಿಗೆ ನಿಂತು ಎತ್ತುವ ಭಿಕ್ಷೆಗೆ ಸಂ.ಕ.ದವರು ‘ರೋಡ್ ಶೋ’ ಎನ್ನುವ ಪರ್ಯಾಯ ಪದ ಬಳಸಿದ್ದಾರೆಯೆ!?

ಪತ್ರಕರ್ತರಿಗೆ ಅತ್ಯವಶ್ಯವಾದದ್ದು ಭಾಷಾಜ್ಞಾನ. ಕನ್ನಡ ಪತ್ರಕರ್ತರಿಗೆ ಕನ್ನಡ, ಸಂಸ್ಕೃತ ಹಾಗು ಇಂಗ್ಲಿಶ್ ಭಾಷೆಗಳ ಉತ್ತಮ ಜ್ಞಾನವು ಅವಶ್ಯವೆಂದು ಹೇಳಬೇಕಾಗಿಲ್ಲ. ಇದರ ಜೊತೆಗೆ ಕರ್ನಾಟಕದ ನೆರೆರಾಜ್ಯಗಳ ಭಾಷೆಗಳ ಜ್ಞಾನವೂ ಕೊಂಚ ಮಟ್ಟಿಗಾದರೂ ಇರುವದು ಒಳ್ಳೆಯದು. ಸಂ.ಕ.ದವರ ಕನ್ನಡ ಭಾಷೆಯ ಜ್ಞಾನವು ಪ್ರಾಥಮಿಕ ಶಾಲೆಯ ಬಾಲಕರ ಮಟ್ಟದ್ದು ಎಂದು ಹೇಳಬಹುದು. ಇಲ್ಲಿರುವ ಎರಡು ವರದಿಗಳನ್ನು ನೋಡಿದರೆ ಈ ಮಾತಿನ ಸತ್ಯ ಹೊಳೆದೀತು.



ಇನ್ನು ಈ ಕೆಳಗಿನ ಎರಡು ಮಾಹಿತಿಗಳು ಪತ್ರಕರ್ತರಿಗೆ ಸಂಬಂಧಿಸಿಲ್ಲ. ಆದರೆ ಬೇರೆ ಭಾಷೆಯನ್ನು ತಿಳಿಯದವರು ತಮ್ಮ ಭಾಷಾ ಅಜ್ಞಾನವನ್ನು ಹೇಗೆ ಹರಡುತ್ತಾರೆ ಎನ್ನುವದಕ್ಕೆ ಇವು ಅತ್ಯುತ್ತಮ ಉದಾಹರಣೆಗಳಾಗಿವೆ:

(೧) ಕೆಲ ವರ್ಷಗಳ ಹಿಂದೆ ರಂಗಕರ್ಮಿ ಪ್ರಸನ್ನರು ಸಂಯುಕ್ತ ಕರ್ನಾಟಕದಲ್ಲಿ ಪ್ರತಿ ವಾರವೂ ಒಂದು ಲೇಖನ ಬರೆಯುತ್ತಿದ್ದರು. ಒಂದು ಸಲ ಪ್ರವಾಸದ ಸಮಯದಲ್ಲಿ ಅವರ ಆತಿಥೇಯರು ಅವರಿಗೆ `ಥಾಲೀಪೆಟ್ಟು ಎನ್ನುವ ತಿನಿಸನ್ನು ಉಣಬಡಿಸಿದ್ದರು. ಸ್ಥಾಲೀ ಎನ್ನುವ ಸಂಸ್ಕೃತ ಪದದಿಂದ ಥಾಲೀ ಎನ್ನುವ ಮರಾಠೀ ಪದ ಹುಟ್ಟಿದೆ. ಇದರ ಅರ್ಥ ಬಟ್ಟಲು. ಪಿಷ್ಟ ಎನ್ನುವ ಸಂಸ್ಕೃತ ಪದದ ಅರ್ಥ ಹಿಟ್ಟು. ಮರಾಠಿಯಲಿ ಇದು ‘ಪೀಠ’ ಆಗಿದೆ. ಮರಾಠಿಯ ಈ ಥಾಲೀಪೀಠವು ಕನ್ನಡದಲ್ಲಿ ಥಾಲಿಪೆಟ್ಟು ಆಗಿದೆ. ಆದುದರಿಂದ ‘ಥಾಲೀಪೀಠ’ ಅಥವಾ ಥಾಲಿಪೆಟ್ಟು ಎಂದರೆ ಬಟ್ಟಲಿನಲ್ಲಿ ನಾದಿ ಎಣ್ಣೆಯಲ್ಲಿ ಬೇಯಿಸಿದ ಹಿಟ್ಟಿನ ಪದಾರ್ಥ. ನಮ್ಮ ಪ್ರಸನ್ನರಿಗೆ ಈ ಭಾಷಾಜ್ಞಾನವಿಲ್ಲ. ‘ತಾಲಿಯಲ್ಲಿ ಹಾಕಿ ಪೆಟ್ಟು ಕೊಟ್ಟು ಮಾಡುವದರಿಂದ ಈ ತಿನಿಸಿಗೆ ‘ತಾಲಿಪೆಟ್ಟು’ ಎಂದು ಕರೆಯುತ್ತಾರೆ’ ಎನ್ನುವ ತಮ್ಮ ವಿಶ್ಲೇಷಣೆಯನ್ನು ಅವರು ಸಂಯುಕ್ತ ಕರ್ನಾಟಕದ ಮೂಲಕ ಉದ್ಘೋಷಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಪತ್ರಿಕೆಯ ಸಂಪಾದಕರು ಲೇಖಕರನ್ನು ಸಂಪರ್ಕಿಸಿ, ಸರಿಯಾದ ತಿಳಿವಳಿಕೆಯನ್ನು ಕೊಡಬೇಕು. ಇದು ಸಂಪಾದಕರ ಜವಾಬ್ದಾರಿ.

(೨) ಪ್ರಸನ್ನರಿಗೆ ಮರಾಠೀ ಭಾಷೆಯ ಜ್ಞಾನವಿರಲಿಕ್ಕಿಲ್ಲ. ಅವರನ್ನು ಕ್ಷಮಿಸೋಣ. ಆದರೆ ಕನ್ನಡ ಹಾಗು ಸಂಸ್ಕೃತಗಳ ಉದ್ದಾಮ ಪಂಡಿತರಾದ ಬನ್ನಂಜೆ ಗೋವಿಂದಾಚಾರ್ಯರು ಮಾಡಿದ ಪ್ರಮಾದಕ್ಕೆ ಏನನ್ನೋಣ? ತಮ್ಮ ‘ಕನಕೋಪನಿಷತ್’ ಎನ್ನುವ ಉತ್ತಮ ಕೃತಿಯಲ್ಲಿ ಬನ್ನಂಜೆಯವರು ‘ಗೋಡಖಿಂಡಿ’ ಪದದ ಅರ್ಥವನ್ನು ಬಿಡಿಸಿದ್ದಾರೆ. ‘ಗೋಡೆ’ಯಲ್ಲಿ ‘ಖಿಂಡಿ’ ಇರುವದೇ ಗೋಡಖಿಂಡಿ. ಆದುದರಿಂದ ‘ಗೋಡಖಿಂಡಿ’ ಎನ್ನುವ ಅಡ್ಡಹೆಸರಿನವರು ಕನಕನ ಖಿಂಡಿಗೆ ಸಂಬಂಧಪಟ್ಟವರು ಎನ್ನುವುದು ಬನ್ನಂಜೆಯವರ ಅಭಿಪ್ರಾಯ.

ಬನ್ನಂಜೆಯವರೆ, ‘ಆನೆಖಿಂಡಿ’ ಎನ್ನುವ ಊರಿನ ಹೆಸರನ್ನು ನೀವು ಕೇಳಿರುವಿರಾ? ಆನೆಗಳು ವಾಸಿಸುವ ಜಾಗಕ್ಕೆ ಅಥವಾ ನೀರು ಕುಡಿಯಲು ಬರುವ ಜಾಗಕ್ಕೆ ಆನೆಖಿಂಡಿ ಎನ್ನುತ್ತಾರೆಯೆ ಹೊರತು ಆನೆಯಲ್ಲಿ ಇರುವ ಖಿಂಡಿಗೆ ಅಲ್ಲ! ಅದರಂತೆ ಘೋಡಾ ಅಂದರೆ ಕುದುರೆಗಳನ್ನು ನೀರು ಕುಡಿಸಲು ಒಯ್ಯುವ ಜಾಗಕ್ಕೆ ಘೋಡಖಿಂಡಿ ಎನ್ನುತ್ತಾರೆ. ಅದೇ ಗೋಡಖಿಂಡಿ ಆಗಿದೆ. ಇಲ್ಲಿ ಖಿಂಡಿ ಎನ್ನುವುದು water hole ಎನ್ನುವ ಅರ್ಥವನ್ನು ಕೊಡುತ್ತದೆ.

ಸಂಯುಕ್ತ ಕರ್ನಾಟಕದ ಪತ್ರಕರ್ತರಿಗೆ ಮತ್ತೊಂದು ದುರಭ್ಯಾಸವಿದೆ. ಎಲ್ಲ  ಸಂಸ್ಕೃತ ಪದಗಳು ಮಹಾಪ್ರಾಣ ಪದಗಳು ಎನ್ನುವ ತಪ್ಪು ತಿಳುವಳಿಕೆಯೇ ಅವರ ಈ ದಡ್ಡತನದ ಕಾರಣವಾಗಿರಬಹುದು. 
ಮೂರು ಉದಾಹರಣೆಗಳನ್ನು ನೋಡಿರಿ:






ಸಂ.ಕ.ದವರಿಗೆ ನನ್ನದೊಂದು ವಿನಮ್ರ ವಿನಂತಿ:
ನಿಮ್ಮ ಪತ್ರಿಕೆಯಲ್ಲಿ ಬರೆಯುವ ವರದಿಗಳನ್ನು ಸಂಕಲಿಸಿ, ಒಂದು ಕೈಪಿಡಿಯನ್ನು ತಯಾರಿಸಿರಿ. ‘ಪತ್ರಿಕಾವರದಿ’ಯನ್ನು ಹೇಗೆ ಬರೆಯಬಾರದು ಹಾಗು ಪತ್ರಿಕೆಯಲ್ಲಿಯ ಪದದೋಷಗಳು’ ಎನ್ನುವುದಕ್ಕೆ ಇದೊಂದು ಆದರ್ಶ ಮಾದರಿಯಾಗಬಹುದು!!