Tuesday, November 24, 2015

ಹಿಂಡಬಾರದು ಮಲ್ಲಿಗೆಯ ದಂಡೆಯನು.........ಮಾಲಿನಿ ಗುರುಪ್ರಸನ್ನ ಅವರ ಲೇಖನ

ಶ್ರೀಮತಿ ಮಾಲಿನಿ ಗುರುಪ್ರಸನ್ನರು  ಸರಸ ಶೈಲಿಯ ಲೇಖಕಿ ಹಾಗು ಸೂಕ್ಷ್ಮ ದೃಷ್ಟಿಯ ವಿಮರ್ಶಕಿಯಾಗಿದ್ದಾರೆ.  ‘ಚುಕುಬುಕು’ ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾದ ಅವರ ಒಂದು ಲೇಖನವನ್ನು,  (‘ಬೇಂದ್ರೆ...ನನ್ನ ಓದು’.) ಅವರ ಅನುಮತಿಯಿಂದ ‘ಸಲ್ಲಾಪ’ದಲ್ಲಿ ಈಗಾಗಲೇ ಬಳಸಿಕೊಂಡಿದ್ದೇನೆ. ಅದೇ ಪತ್ರಿಕೆಯಲ್ಲಿ ಪ್ರಕಟವಾದ, ಕೆ.ಎಸ್.ನರಸಿಂಹಸ್ವಾಮಿಯವರ ಬಗೆಗೆ ಬರೆದ ಅವರ ಮತ್ತೊಂದು ಲೇಖನವನ್ನು ‘ಸಲ್ಲಾಪ’ದಲ್ಲಿ ಬಳಸಿಕೊಳ್ಳಲು ಅವರು ಅನುಮತಿಸಿದ್ದಾರೆ. ಅವರಿಗೆ ಅನೇಕ ಧನ್ಯವಾದಗಳು.
..........................................................................



ಹಿಂಡಬಾರದು ಮಲ್ಲಿಗೆಯ ದಂಡೆಯನು
ಮಾಲಿನಿ ಗುರುಪ್ರಸನ್ನ

ಘಟನೆ ೧
ಸುಮಾರು ೫೫ನೇ ಇಸವಿಯ ಒಂದು ಮಧ್ಯಾಹ್ನ ಒಂದು ಪುಟ್ಟ ಮನೆಯಲ್ಲಿ ಮನೆ ಮಂದಿಯೆಲ್ಲ ಊಟಕ್ಕೆ ಕುಳಿತಿದ್ದಾರೆ. ಕುಂಕುಮದ ಹಣೆಯಲ್ಲಿ ಬೆವರು,ಅವಸರದಲ್ಲಿ ಹೆಣೆದ ಸೊಟ್ಟ ಜಡೆ, ಜಡೆಯಲ್ಲಿದ್ದ ಮಲ್ಲಿಗೆಗೆ ಮುಡಿಯೇರಿದ ಉತ್ಸಾಹವಿಲ್ಲ. ಮುಡಿದವಳಿಗೆ ಮುಡಿಯಲೇಬೇಕೆಂಬ ಹಟವೂ ಇದ್ದಂತಿಲ್ಲ. ಬಳೆ ತೊಟ್ಟ ಕೈಗಳು ಬಡಿಸುವುದರಲ್ಲಿ ಮಗ್ನವಾಗಿವೆ.

ಇಂತಿಪ್ಪ ಸಮಯದಲ್ಲೇ ಮನೆಯೊಡೆಯನ ಆರ್ಭಟ ಕೇಳಿಬರುತ್ತದೆ. " ಲೇ ಅಪಭ್ರಂಶು ಬಾರೆ ಇಲ್ಲಿ." ಮುಂದಾಗುವುದು ಮನೆಮಂದಿಗೆಲ್ಲ ವೇದ್ಯ. ಆಕೆ ಮೌನವಾಗಿ ಬಂದು ಪಂಕ್ತಿಯ ಮುಂದೆ ಕುಳಿತುಕೊಳ್ಳುತ್ತಾಳೆ. ಆಪೋಶನ ತೆಗೆದುಕೊಳ್ಳಲೂ ಪುರುಸೊತ್ತಿಲ್ಲದ ಮನೆಯೊಡೆಯ ಎದ್ದುಬಂದು ಅನಾಮತ್ತಾಗಿ ಹುಳಿಯ ಪಾತ್ರೆಯನ್ನೆತ್ತಿ ಅವಳ ಮೇಲೆ ಸುರಿಯುತ್ತಾನೆ. ಅವಳು ಮುಡಿದ ಮಲ್ಲಿಗೆ, ಇಟ್ಟ ಕುಂಕುಮ, ತೊಟ್ಟ ಬಳೆ,ಸುತ್ತಿಕೊಂಡ ಸೀರೆ ಎಲ್ಲವೂ ಮಾಯವಾಗಿ ಹುಳಿಯ ರಾಜ್ಯಭಾರ.

ಇಷ್ಟಕ್ಕೂ ಅವಳು ಮಾಡಿದ ತಪ್ಪಾದರೂ ಏನು? ಹುಳಿಗೆ ಕೊಂಚ ಉಪ್ಪು ಜಾಸ್ತಿ. ಅವಳ ಮುಖ ಬಾಡಿತ್ತಾ,ಮನ ನೊಂದಿತ್ತಾ ಕಂಡವರಾರು? ಕೇಳಿದವರಾರು?ಎದ್ದು ಬಚ್ಚಲಿಗೆ ನಡೆಯುತ್ತಾಳೆ. ಶುಚಿರ್ಭೂತಳಿಗೆ ಮತ್ತೆ ಅಡುಗೆ ಮಾಡುವ ಗಡಿಬಿಡಿಯಲ್ಲೂ ಸುರಿದ ಹುಳಿಯನ್ನುಸ್ವಚ್ಛಗೊಳಿಸುವ ಮನೆ ಒರೆಸುವ ಕಾಯಕ. ಇವರಿಗೆಲ್ಲಾ ಬಡಿಸಿ ಇವರ ಹೊಟ್ಟೆ ತುಂಬಿದ ನಂತರವೇ ಆಗಬೇಕಾದ ಅವಳ ಊಟದ ಬಗ್ಗೆ ಕೇಳುವವರಾರು?

ಘಟನೆ ೨
ಇದು ಇತ್ತೀಚಿನದು. ಮನೆಗೆ ನೆಂಟರು ಬಂದಿದ್ದಾರೆ. ಮನೆಯೊಡೆಯನಿಗೆ ಅವರನ್ನು ಸತ್ಕರಿಸುವ ಸಂಭ್ರಮ. ಪ್ರೇಕ್ಷಣೀಯ ಸ್ಥಳಗಳಿಗೆ ಹೆಸರುವಾಸಿ ಊರದು. ಬಂದ ನೆಂಟರು ತಿಂಡಿ ತಿಂದ ತಟ್ಟೆಯಲ್ಲೇ ಕೈ ತೊಳೆದು ಊರು ನೋಡ ಹೊರಡುತ್ತಾರೆ. ತಟ್ಟೆ ತೆಗೆಯ ಹೊರಟವರನ್ನು ಮನೆಯೊಡೆಯ ತಡೆಯುತ್ತಾನೆ. " ಊರು ನೋಡಲು ಸಮಯ ಬೇಕು. ನಿಮ್ಮ ಕೈಲಿ ಮಾಡಿಸುವುದೇ? ಅವಳು ಮಾಡ್ಕೋತಾಳೆ ಬಿಡಿ ಬಿಡಿ". ಸಮಯ ಮೀರಿದ ೮ ಗಂಟೆಯ ಬೆಳಗಿನಲ್ಲಿ ನೆಂಟರು ಹೊರಡುತ್ತಾರೆ. ಎಲ್ಲ್ಲವನ್ನೂ ತೆಗೆದು ತೊಳೆದು ಬಟ್ಟೆಬರೆ ಒಗೆದು ಮನೆ ಶುಚಿಗೊಳಿಸಿದ ಗೃಹಿಣಿ ತಾನು ತಿಂಡಿ ತಿನ್ನಲೂ ಪುರುಸೊತ್ತಿಲ್ಲದೆ ಅಡುಗೆಗೆ ಕೂರುತ್ತಾಳೆ.

' ನೆಂಟರು ಒಂದು ಗಂಟೆಗೆಲ್ಲಾ ಊಟಕ್ಕೆ ಬರುತ್ತಾರೆ. ಅವರಿಗೆ ಔತಣವಾಗಬೇಕು.' ಗಂಡನ ಆಜ್ಞೆ. ಅಡುಗೆ ಮಾಡುತ್ತಾ ಅಡಿಗಡಿಗೆ ಗಂಡನಿಗೆ, ಮಕ್ಕಳಿಗೆ ಕಾಫಿ ಕಷಾಯಗಳನ್ನು ಪೂರೈಸುತ್ತಾ ಇನ್ನೇನು ಬೋಂಡಾ ಕರಿಯಲು ಬಾಣಲೆಯಿಡುತ್ತಿರುವ ಹೊತ್ತಿಗೆ ಅದೋ ನೆಂಟರು ಬಂದೇಬಿಟ್ಟರು. ಏಸೀ ಕಾರಿನಲ್ಲಿ ಕುಳಿತು ಯಾರೋ ಕಟ್ಟಿದ ಕೋಟೆಕೊತ್ತಲ ನೋಡಿಬಂದ ನೆಂಟರಿಗೆ ಊಟಕ್ಕೆ ತಡವಾದಾಗ ಮನೆಯೊಡೆಯನ ಮನ ಮಿಡಿಯುತ್ತದೆ. ಅವರ ಹಸಿವಿನ ಅರಿವಿಲ್ಲದೆ ಅಡುಗೆ ನಿಧಾನ ಮಾಡಿದ ಹೆಂಡತಿಗೆ ಶಿಕ್ಷೆ ಬೇಡವೇ? ಅಡುಗೆ ಮನೆಯ ಪಂಪ್ ಸ್ಟೋವ್ ಸದ್ದಿನಲ್ಲಿ ಗಂಡನ ಹೊಡೆತದ ಸದ್ದು ನೆಂಟರ ಕಿವಿ ಮುಟ್ಟುವುದಿಲ್ಲ. ಇಂಗಿನ ಒಗ್ಗರಣೆಯ ಘಮ ಅವರ ಮೂಗುಗಳನ್ನು ಆಡರುತ್ತಿದೆ. ಆ ಮನೆಯೊಡೆಯನ ವಯಸ್ಸು ೭೮. ಮನೆಯೊಡತಿ(?)ಗೆ ೬೬.!!!!

ಈ ಘಟನೆಗಳನ್ನು ಸಧ್ಯಕ್ಕೆ ಇಲ್ಲಿಯೇ ಬಿಟ್ಟು ಬಿಡೋಣ. ನನಗಾಗ ೧೫ರ ಹರೆಯ. ಮೊದಲ ಕಥೆ ಪ್ರಕಟವಾದ ಪುಳಕ ಪೊಗರು ಎರಡೂ ಮೈಗೆ ಅಡರಿದ್ದ ಕಾಲ. ಒಂದು ದಿನ ನನ್ನ ಕೈಗೆ ಸಿಕ್ಕ ಕವನವೊಂದರ ಮೊದಲ ಸಾಲನ್ನು ಓದಿ ಬಿದ್ದು ಬಿದ್ದು ನಕ್ಕು ಬಿಟ್ಟೆ. ಜಗಲಿಯಲ್ಲಿ ಕುಳಿತು ಏನೋ ಓದುತ್ತಿದ್ದ ಅಣ್ಣನ(ತಂದೆ) ಮುಂದೆ ನಿಂತು ಪದ್ಯದ ಮೊದಲ ಸಾಲನ್ನು ಓದಿದೆ 'ನವಿಲೂರಿನೊಳಗೆಲ್ಲ ನೀನೇ ಬಲು ಚೆಲುವೆ ಆದಕೆ ನಮ್ಮಿಬ್ಬರಿಗೆ ನಾಳೆಯೇ ಮದುವೆ' "ಇದೆಂಥಾ ಕವನ ಅಣ್ಣಾ ನವಿಲೂರಿನೊಳಗೆಲ್ಲ ಅವಳೇ ಬಹಳ ಚೆಲುವೆಯಂತೆ ಅದಕ್ಕೆ ಇವರಿಗೆ ನಾಳೆಯೇ ಮದುವೆಯಂತೆ. ಊರಿನ ಚೆಲುವೆಯನ್ನೇ ಮದುವೆ ಮಾಡಿಕೊಳ್ಳಬೇಕೆಂದು ಇತರರೂ ಹಟ ಹಿಡಿದರೆ ಗತಿಯೇನು. ಅವಳು ಚೆಲುವೆಯಲ್ಲದಿದ್ದರೇ ಇವರು ಮದುವೆಯಾಗುತ್ತಿರಲಿಲ್ಲವೋ......." ಮುಂದುವರೆಯುತ್ತಿದ್ದ ನನ್ನ ಮಾತುಗಳನ್ನು ನನ್ನಣ್ಣನ ಮಾತುಗಳು ತುಂಡರಿಸಿದವು.

"ನೀನು ಎರಡನೇ ಸಾಲನ್ನು ಓದಿ ನಂತರ ಮೊದಲ ಸಾಲನ್ನು ಓದು". ಅರ್ಥವಾಗದೆ ಅವರ ಮುಖ ನೋಡಿದೆ. ಅವರೇ ಬಿಡಿಸಿ ಹೇಳಬೇಕಾಯಿತು. " ಹಾಗಲ್ಲ, ಅವನಿಗೆ ನಾಳೆ ಮದುವೆ ಹಾಗೆಂದೇ ನವಿಲೂರಿನೊಳಗೆಲ್ಲ ಅವಳು ಚೆಲುವೆ. ಅವನು ಅವಳಲ್ಲಿ ಆ ಚೆಲುವನ್ನು ಹುಡುಕುತ್ತಿದ್ದಾನೆ..ಕಾಣುತ್ತಿದ್ದಾನೆ. ಆ ಪದ್ಯದ ಸರಳತೆ ನಿನ್ನ ದಿಕ್ಕು ತಪ್ಪಿಸುತ್ತಿದೆ. ಅದನ್ನು ಓದುವ ರೀತಿಯೇ ಬೇರೆ. ಅವರ ಕೆಲವು ಪದ್ಯಗಳನ್ನಾದರೂ ಓದಿಕೋ. ನಂತರ ಮಾತನಾಡೋಣ" ಎಂದೂ ಖಡಕ್ಕಾಗಿ ಮಾತನಾಡದ ನನ್ನ ಅಣ್ಣನ ಮಾತುಗಳು ತುಸು ಚುರುಕಾಗೆ ಇತ್ತು.

ಅಂದಿನಿಂದ ಆರಂಭವಾದ ನರಸಿಂಹ ಸ್ವಾಮಿಯವರ ಪದ್ಯಗಳ ಓದು ಇಂದಿನವರೆಗೂ ಸಾಗಿದೆ. ನಿಜ ಹೇಳಬೇಕೆಂದರೆ ಹೆಣ್ಣನ್ನು ನರಸಿಂಹ ಸ್ವಾಮಿಯಷ್ಟು ಗೌರವಿಸಿದ ಕವಿಗಳು ನಮ್ಮಲ್ಲಿ ಬಹಳ ಕಡಿಮೆ. (ಅಥವಾ ಹೆಂಡತಿಯನ್ನು) . ನೀನಿದ್ದರೆ ಕೋಟಿ ರೂಪಾಯಿ ನಿನ್ನೆದುರು ನಾನು ಸಿಪಾಯಿ ಎನ್ನುವ ಮೂಲಕ ಗಂಡಿನ ಸಹಜ ಹಕ್ಕೆನಿಸಿರುವ ಬಿಂಕ ಬಿಗುಮಾನಗಳನ್ನು ಮೂಲೆಗೆಸೆಯುತ್ತಾರೆ. ಶಿಕಾರಿಪುರದ ಹಳ್ಳಿಯೊಂದರ ಹಸಿರು ದಾರಿಯಲ್ಲಿ ನಡೆವಾಗ, ಹರಿಹರಪುರದ ಹೊಳೆಯ ದಂಡೆಯ ಮೇಲೆ ಕುಳಿತು ಹರಿವ ಹೊಳೆಯಲ್ಲಿ ಕಾಲು ಅಲ್ಲಾಡಿಸುವಾಗ ಪದೇ ಪದೇ ನನಗೆ ನೆನಪಾಗುತ್ತಿದ್ದುದು ಅವರ ಪದ್ಯಗಳೇ. ಆಗ ಮಾರುದ್ದವಿದ್ದ ನನ್ನ ಜಡೆಯಲ್ಲಿ ಮಲ್ಲಿಗೆ ದಂಡೆ ಏರಿದಾಗ ಶಾನುಭೋಗರ ಮನೆಯ ಹುಡುಗಿಯೇ ಆಗಿಬಿಡುತ್ತಿದ್ದೆ. ( ಕಾಕತಾಳೀಯ ಎಂದರೆ ನನ್ನಜ್ಜನೂ ಶಾನುಭೋಗರೇ) .ಒಂದು ದಿನ ಕುತೂಹಲಕ್ಕೆಂಬಂತೆ ಪುಸ್ತಕ ತೆಗೆದು ಪ್ರಕಟಣೆಯ ವರ್ಷ ನೋಡಿದಾಗ ನಿಜಕ್ಕೂ ನಿಬ್ಬೆರಗಾಗಿದ್ದೆ. ೧೯೪೨!!!!! ನನ್ನ ತಂದೆಗಾಗ ೭ ವರ್ಷ..ನನ್ನಮ್ಮ ಹುಟ್ಟಿದ ವರ್ಷ. ಇದು ನನ್ನಲ್ಲಿ ಇಂದಿಗೂ ಬೆರಗು ಮೂಡಿಸುತ್ತದೆ.

ಈ ಲೇಖನದ ಆರಂಭದಲ್ಲಿರುವ ಎರಡು ಘಟನೆಗಳೂ ೧೯೪೨ರ ನಂತರ ಸಂಭವಿಸಿದ್ದು. ಮೊದಲನೆಯದು ನಾನು ಕೇಳಿದ ನನ್ನ ಬಂಧುಗಳ ಮನೆಯೊಂದರಲ್ಲೇ ನಡೆದ ಘಟನೆ. ಎರಡನೆಯದು ನಾನು ಕಣ್ಣಾರೆ ಕಂಡಿದ್ದು, ನೆಂಟರ ಗುಂಪಿನಲ್ಲಿ ನಾನೂ ಒಬ್ಬಳಾಗಿದ್ದು. ಹೆಣ್ಣನ್ನು ದೈಹಿಕವಾಗಿ ಮಾನಸಿಕವಾಗಿ ವೃದ್ಧಾಪ್ಯದಲ್ಲೂ ಶೋಷಿಸುತ್ತಿದ್ದ, ಅದು ಶೋಷಣೆಯಲ್ಲದೆ ತಮ್ಮ ಕರ್ತವ್ಯವೆಂದು ಹೆಣ್ಣುಗಳೂ ಒಪ್ಪಿಕೊಳ್ಳುವಂತೆ ಮಾಡಿದ್ದ ಕಾಲದಲ್ಲಿ ನರಸಿಂಹಸ್ವಾಮಿಯವರು ' ನನ್ನವಳು ನನ್ನೆದೆಯ ಹೊನ್ನಾಡನಾಳುವಳು" ಎಂದು ಸಂಭ್ರಮಿಸಿದರು. ನವಿಲೂರಿನೊಳಗೆಲ್ಲ ನೀನೇ ಬಲು ಚೆಲುವೆ ಎಂದು ಪುಳಕಗೊಂಡರು. ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿದೆ ಎಂದು ನಂಬಿದರು. ತಮ್ಮ ಮೈಮನದ ಹಸಿವು ತೀರಿದೊಡನೆ ಮುಖ ತಿರುಗಿಸಿ ನಡೆವ, ಕನಿಷ್ಟ ಹೆಂಡತಿಯ ಹೊಟ್ಟೆಯ ಬಗ್ಗೆಯೂ ಯೋಚಿಸದ, ಕಾಳಜಿ ವಹಿಸದ ಗಂಡುಗಳ ಮಧ್ಯೆ ' ನಿನ್ನ ತಟ್ಟೆಯ ತುಂಬಾ ಅನ್ನ ನೊರೆ ಹಾಲು ' ತುಂಬಿಸುವ ಭರವಸೆಯಿತ್ತವರು. ಪ್ರತಿಯಾಗಿ ಪ್ರೀತಿಯೊಂದನ್ನೇ ಅವಳಿಂದ ಬೇಡಿದವರು. ನರಸಿಂಹ ಸ್ವಾಮಿಯವರನ್ನು ಹೆಣ್ಣು ಕುಲ ಇಂದಿಗೂ ನೆನೆಯುವುದು ಇಂತಹಾ ಕಾರಣಗಳಿಗೆ.

ಹಾಗೆಂದು ನರಸಿಂಹ ಸ್ವಾಮಿಯವರ ಕವನಗಳ ಗಂಡು ಹೆಂಡತಿಯ ದಾಸನಲ್ಲ, ಹೇಡಿಯಲ್ಲ, ಕೋಪತಾಪಗಳಿಲ್ಲದ ಸಂತನೂ ಅಲ್ಲ. ಸಿಟ್ಟಿಗೆದ್ದರೆ ಹೆಂಡತಿಯ ಹೂ ಮೂಡಿಸುವ ಶಾಸ್ತ್ರಕ್ಕೂ ಚಕ್ಕರ್ ಹೊಡೆಯುವವ. ಬಳೆಗಾರನೇ ಬಂದು ಇವನಿಗೆ ದಮ್ಮಯ್ಯಗುಡ್ಡೆ ಹಾಕಬೇಕು. ದುಂಡುಮಲ್ಲಿಗೆಯ ದಂಡೆಯವಳು ಎಂಬುದನ್ನು ನೆನಪಿಸಬೇಕು. ಹೆಂಡತಿ ತೌರಿಗೆ ಹೊರಟರೆ ಸಿಡಿಮಿಡಿ ಗೊಳ್ಳುವವನು. ಪದೇ ಪದೇ ಕರೆಯದಿರಿ ಎಂದು ಮಾವನಿಗೆ ತಾಕೀತು ಮಾಡುವವನು. 'ಹೋಗಿ ಬರುವುದಕೆಲ್ಲ ತೌರುಮನೆ ಬಲು ಸೊಗಸು ಆರದಿರಲದರ ಬೆಳಕು. ಹಾಗೆಂದು ಹಗಲೆಲ್ಲಾ ಹಿಂಡಿದರೆ ಕಳುಹೆಂದು ನಿಮ್ಮೂರ ದಾರಿ ಬಳಸು.' ಎಂದು ಮಾವನಿಗೆ ಎಚ್ಚರಿಕೆ ಕೊಡುತ್ತಾನೆ. ಅಳಿಯನೇ ಬೇಡ ನಿಮಗೆಂದು ಮುನಿಯುತ್ತಾನೆ. ಹೀಗಿದ್ದರೂ ಮಗಳಿಗೆ ಕೋಪವಿಲ್ಲ. ಒಬ್ಬಳನೆ ಕಳುಹುವಿರಾ ಎಂದು ಸೂಚ್ಯವಾಗಿ ಮುಡಿದ ಹೂವನ್ನು ಮುಟ್ಟಿ ತುಂಟ ನಗೆ ಚೆಲ್ಲುತ್ತಾಳೆ. ಅವನ ಮುನಿಸಿನ ಮೂಲ ಇವಳಿಗೂ ಪ್ರಿಯವೇ. ದಾಂಪತ್ಯಕ್ಕೆ ಬೇಕಾದ ಹುಸಿಮುನಿಸು, ನಸುನಗೆ ಇದ್ದರೇನೇ ಸೊಗಸೆಂದು ಇಬ್ಬರಿಗೂ ಗೊತ್ತು.

ಅವರ ಒಂದಿರುಳು ಕನಸಿನಲಿ ಪದ್ಯದಲ್ಲಿ ಬರುವ ಸಾಲುಗಳನ್ನೇ ನೋಡಿ. " ಮಲ್ಲಿಗೆಯ ಮೊಗ್ಗುಗಳು ಮುಳ್ಳು ಬೇಲಿಯ ವರಿಸಿ ಬಳುಕುತಿತರೆ ಕಂಪ ಸೂಸಿ" ಅಲ್ಲಿ ಮಲ್ಲಿಗೆಯ ಮೊಗ್ಗುಗಳಿಗೆ ಮುಳ್ಳು ಬೇಲಿಯನ್ನು ವರಿಸುವ ಅನಿವಾರ್ಯತೆ..... ಎಲ್ಲಿಯ ಮುಳ್ಳು..ಎಲ್ಲಿಯ ಮಲ್ಲಿಗೆಯ ಮೊಗ್ಗು..ನವಿರು ಕುಲದ ಇನ್ನೂ ಪೂರ್ತಿಯಾಗಿ ಅರಳದ ಮಲ್ಲಿಗೆ ತನ್ನ ಸಹಜ ಕೋಮಲತೆಯೊಂದಿಗೆ ಮುಳ್ಳು ಬೇಲಿಯನ್ನು ಸುತ್ತಿಕೊಂಡಿದೆ. ತನ್ನ ಪರಿಸ್ಥಿತಿಗೆ ಅದು ನೋಯುತ್ತಿಲ್ಲ. ನಲುಗುತ್ತಿಲ್ಲ. ಬಾಗಿ ಬಳುಕಿ ನಲಿಯುತ್ತಿದೆ ಅದೂ ಹೇಗೆ...ಕಂಪಚೆಲ್ಲುವ ಮೂಲಕ. ಮೊಗ್ಗನ್ನು ವರಿಸಿದ ಮುಳ್ಳಿನ ರೀತಿಯಾದರೂ ಎಂತಹದ್ದು. ತನ್ನ ಮುಳ್ಳನ್ನು ಮೊಗ್ಗಿಗೆ ತಾಗದಂತೆ ಕಾಯುತ್ತಾ ಅದಕ್ಕಿನಿತೂ ನೋವಾಗದಂತೆ, ಅದು ಬಳುಕುವಂತೆ, ಮೊಗ್ಗನ್ನು ಹೂವಾಗುವಂತೆ ಕಾಪಿಡುತ್ತಿದೆ. ಮೊಗ್ಗಿಗೆ ಮುಳ್ಳಿನ ಜೊತೆ ನಲಿಯುವ ಸಂಭ್ರಮ, ಮುಳ್ಳಿಗೆ ಅದರ ನಲಿವನ್ನು ಕಂಡ ಸಾರ್ಥಕತೆ. ಓದುತ್ತಿದ್ದಾಗ ಪದೇ ಪದೇ ನನಗೆ ನೆನಪಾಗುವುದು ಅವರು ಈ ಕವನಗಳನ್ನು ರಚಿಸಿದ ಕಾಲಘಟ್ಟ. ಆ ಕಾಲದಲ್ಲೇ ಮಲ್ಲಿಗೆಯ ವನ ಅವರ ಮನ.

(ಮೊದಲೇ ಹೇಳಿಬಿಡುತ್ತೇನೆ ನಾನು ಅಡಿಗರ ಅಭಿಮಾನಿಯೂ ಹೌದು. ಇಲ್ಲಿ ನಾನು ಸೂಚಿಸುವ ಸಾಲುಗಳು ಆ ಪದ್ಯಕ್ಕಷ್ಟೆ ಸೀಮಿತ) ಒಲುಮೆಯೊಳಗೊಂದು ನಾವು ನಮಗಿಲ್ಲ ನೋವು ಸಾವು ಎನ್ನುವ ಕವಿಯನ್ನು ಯಾವ ಮೋಹನ ಮುರಳಿಯ ಕರೆಯು ಕರೆಯುವುದಿಲ್ಲ. ಗಂಡನ್ನು ಮಾತ್ರ ಕಾಡುವ ಮೋಹನ ಮುರಳಿ ಹೆಣ್ಣನ್ನೇಕೆ ಕಾಡುವುದಿಲ್ಲ? ಒಂದು ವೇಳೆ ಹೆಣ್ಣಿಗೆ ಕಾಡಿದರೆ ಗತಿಯೇನು? ' ಹೂವು ಹಾಸಿಗೆ ಚಂದ್ರ ಚಂದನ ಬಾಹು ಬಂಧನ ಚುಂಬನಗಳನ್ನು ತನ್ನ ಹಕ್ಕೆಂಬಂತೆ ಅನುಭವಿಸುವ ಗಂಡಿಗೆ ಅವೆಲ್ಲವನ್ನೂ ತೊರೆದು ಮೋಹನ ಮುರಳಿಯ ಕರೆಗೆ ಓಗೊಡುವುದು ಹೊರಡುವುದು ಹಳೆಬಟ್ಟೆ ಕಳಚಿದಷ್ಟೆ ಸುಲಭ. ಹಾಗೆ ಹೊರಡುವಾಗ ಅವನಿಗೆ ಯಾವ ಜವಾಬ್ದಾರಿಯೂ ಬಾಧಿಸುವುದಿಲ್ಲ.'ಒಲಿದ ಮಿದುವಾದ ಎದೆಯನ್ನು ಮೈಯನ್ನು ರಕ್ತ ಮಾಂಸದ ಬಿಸಿದು ಸೋಂಕಿನ ಪಂಜರ ಎಂದು ಬಣ್ಣಿಸುವವನಿಗೆ ತನ್ನ ಮೈಯ್ಯೂ ಅದೇ ಪಂಜರ ಎನ್ನುವುದು ನೆನಪಾಗುವುದಿಲ್ಲ. ಆ ಪಂಜರದೊಳಗಿನ ಹೆಣ್ಣು ಜೀವದ ತುಡಿತ ಅವನಿಗೆ ತಾಕುವುದೇ ಇಲ್ಲ. . ಬೇಲಿಯೊಳಗೆ ಕುಣಿಯುತ್ತಿರುವ ಬಯಕೆಗಳೆಲ್ಲಾ ತೀರಿದ ಮೇಲೆ ಎದುರಿಗಿದ್ದವಳ ಭಾವನೆಗಳನ್ನೂ ಗಮನಿಸದೆ ಗಂಡು ತನಗಿನ್ನುಇವೆಲ್ಲಾ ಸಾಕು ಎಂದು ಶಸ್ತ್ರಸನ್ಯಾಸ ತೆಗೆದು ಕೊಳ್ಳುತ್ತಾನೆ. ಎದುರಿದ್ದವಳಅಸಹಾಯಕ ಪ್ರಶ್ನೆ ಕಿವಿಗೆ ಬೀಳದವನಿಗೆ ಇನ್ನೂ ಹುಟ್ಟದ ಅಲೆಗಳ ಮೂಕ ಮರ್ಮರ ಕಾಡುತ್ತದೆ. ಸಪ್ತಸಾಗರದಾಚೆ ಕಣ್ಣು ಹಾಯಿಸುತ್ತಾನೆ. ಇದ್ದಕ್ಕಿದ್ದಂತೆ ಕರೆಯುವ ಮೋಹನ ಮುರಳಿ .. ಚಾಚುವ ಮಿಂಚಿನ ಕೈ ಹೆಣ್ಣಿನ ಅನುಭವಕ್ಕೆ ಬರಲು ಸಾಧ್ಯವೇ? ಅವಳಿಗಿರುವುದು ತನ್ನ ಒಲವಿತ್ತ ಜವಾಬ್ದಾರಿಯನ್ನು ನಿಭಾಯಿಸುವುದು ಮಾತ್ರ. . ಅಡಿಗರ ಈ ಅತ್ಯಂತ ಸೊಗಸಾದ ಕವನ ಏಕಪಕ್ಷೀಯ ಎಂದು ಅಡಿಗರ ಉತ್ಕಟ ಅಭಿಮಾನಿಯೂ ಆದ ನನಗೆ ಯಾವಾಗಲೂ ಅನ್ನಿಸುತ್ತಿರುತ್ತದೆ.

ನನ್ನ ಹೆಣ್ತನ ನರಸಿಂಹಸ್ವಾಮಿಯವರನ್ನು ಒಪ್ಪಿಕೊಳ್ಳುವುದು ಈ ಕಾರಣಗಳಿಗಾಗಿಯೇ. ಅವರು ತಾವು ಮಾಗಲು ಹೆಣ್ಣನ್ನು ಮೆಟ್ಟಿಲಾಗಿ ಬಳಸುವುದಿಲ್ಲ. ಅವಳ ಜೊತೆ ಜೊತೆಗೇ ಮಾಗುತ್ತಾರೆ. ಚಂದ್ರನಲಿ ಚಿತ್ರಿಸಿದ ಚೆಲುವಿನೊಳಗುಡಿಯಿಂದ ಪ್ರೇಮಗಂಗೆ ಇವರಿದ್ದಲ್ಲಿಗೆ ಬರುತ್ತಾಳೆ..ಅವಳ ಒಲುಮೆಯಿಂದ ಬಾಳು ಬೆಳಕಾಗುವಂತೆ ಮಾಡುತ್ತಾಳೆ. ಹಾಗೆಂದೇ ಅವಳು ಚಂದ್ರಮುಖಿ.

ಒಮ್ಮೆ ಕಲ್ಪಿಸಿಕೊಳ್ಳಿ.. ನಿಮ್ಮ ಮನೆಯಲ್ಲಿ ರಾಗದಲ್ಲೇ ಚಂದ್ರನ ತರುವಷ್ಟು ಸಾಮರ್ಥ್ಯವಿರುವ ನಾಗರಕುಚ್ಚಿನ ನಿಡುಜಡೆಯವಳು ಓಡಾಡುತ್ತಿದ್ದಾಳೆ. ಅವಳು ಮುಡಿದ ಮಲ್ಲಿಗೆಯ ಘಮ ನಿಮ್ಮ ಮನೆಮನವನ್ನುತುಂಬಿದೆ. ಚಿಕ್ಕ ಮನೆಯಲ್ಲೂ ಅಕ್ಕರೆಯ ದನಿಯಲ್ಲಿ ಮಾತಾಡುತ್ತಿದ್ದಾಳೆ. ಒಲುಮೆ ಅವಳ ಮಾತಲ್ಲಿ ನಡೆಯಲ್ಲಿ ಉಕ್ಕುತ್ತಿದೆ. ಒಂದಿಷ್ಟು ಒಲುಮೆಯನ್ನು ನೀವಿತ್ತರೆ ಸಡಗರದಲ್ಲಿ ಒಂದಾಗಿ ಬಾಳಲು ರತ್ನನೌಕೆಯಂತೆ ತೇಲಿ ಬರುತ್ತಾಳೆ.

ನಿಮಗಾಗ ಯಾವ ಮೋಹನ ಮುರಳಿಯ ಕರೆಯೂ ಕೇಳುವುದಿಲ್ಲ.

Friday, September 11, 2015

ರೈತಕಾರಣ



ಕರ್ನಾಟಕದಲ್ಲಿಯೇ ಆಗಲಿ ಅಥವಾ ಭಾರತದೇಶದಲ್ಲಿ ಬೇರೆಲ್ಲಿಯೇ ಆಗಲಿ, ವರ್ಷ ವರ್ಷವೂ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಲೇ ಇದ್ದಾರೆ. ಇದರ ಕಾರಣಗಳನ್ನು ಅರಿತುಕೊಳ್ಳಲು, ಜಾಣತನ ಬೇಕಾಗಿಲ್ಲ. ಆದರೆ ನಮ್ಮ ಸರಕಾರಗಳು ‘ರೈತರ ಆತ್ಮಹತ್ಯಾ-ಆಯೋಗ’ವನ್ನು ನಿಯಮಿಸಿ ಕೈ ತೊಳೆದುಕೊಳ್ಳುತ್ತಿವೆ. ಮಠಾಧೀಶರಿಂದ ಹಾಗು ಬುದ್ಧಿಜೀವಿಗಳಿಂದ ತತ್ವಜ್ಞಾನವನ್ನು ಹೇಳಿಸುತ್ತವೆ. ಇವರೆಲ್ಲರೂ ‘ಅನ್ನದಾತಾ, ನೀನು ಆತ್ಮಹತ್ಯೆಯನ್ನು ಮಾಡಿಕೊಳ್ಳಬೇಡ; ನಿನ್ನ ಬೆನ್ನು ಹಿಂದೆ ನಾವಿದ್ದೇವೆ (ಚೂರಿ ಹಾಕಲು!)’ ಎಂದು ಒಕ್ಕೊರಲಿನಿಂದ ಕೂಗು ಹಾಕುತ್ತಿದ್ದಾರೆ.  ಇದರಂತಹ ದುರಂತ ಹಾಗು ವ್ಯಂಗ್ಯ ಮತ್ತೊಂದಿಲ್ಲ. ಈ ಸಂದರ್ಭದಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದಂತೆ, ರೈತರ ಅಂಕಿ ಸಂಖ್ಯೆಗಳನ್ನಷ್ಟು ಗಮನಿಸೋಣ:

(೧) ನಗಣ್ಯ ರೈತ ಕುಟುಂಬಗಳ  ಸಂಖ್ಯೆ: = ೩೮.೪೯ ಲಕ್ಷ ;                      
ಹಿಡುವಳಿ = ೧೮೫೦೯೪೬ ಹೆಕ್ಟೇರುಗಳು
(೨) ಸಣ್ಣ ರೈತ ಕುಟುಂಬಗಳ ಸಂಖ್ಯೆ: = ೨೧.೩೮ ಲಕ್ಷ ;                            
ಹಿಡುವಳಿ = ೩೦೨೦೦೦೨ ಹೆಕ್ಟೇರುಗಳು
(೩) ಸಾಧಾರಣ ಮಧ್ಯಮ ರೈತ ಕುಟುಂಬಗಳ ಸಂಖ್ಯೆ: = ೧೨.೬೭ ಲಕ್ಷ ;     
ಹಿಡುವಳಿ = ೩೩೯೩೦೩೬ ಹೆಕ್ಟೇರುಗಳು
(೪) ಮಧ್ಯಮ ರೈತ ಕುಟುಂಬಗಳ ಸಂಖ್ಯೆ: =  ೫.೧೧ ಲಕ್ಷ ;                     
ಹಿಡುವಳಿ = ೨೯೦೩೬೮೭ ಹೆಕ್ಟೇರುಗಳು
(೫) ದೊಡ್ಡ ರೈತ ಕುಟುಂಬಗಳ ಸಂಖ್ಯೆ : =  ೦.೬೮ ಲಕ್ಷ ;                        
ಹಿಡುವಳಿ = ೯೯೩೭೮೬ ಹೆಕ್ಟೇರುಗಳು
ಒಟ್ಟು ರೈತ ಕುಟುಂಬಗಳ ಸಂಖ್ಯೆ = ೭೮.೩೨ ಲಕ್ಷ                    
ಒಟ್ಟು ಹಿಡುವಳಿ = ೧೨೧೬೧೪೫೭ ಹೆಕ್ಟೇರುಗಳು
(ಕರ್ನಾಟಕ ಸರಕಾರದ ಕೃಷಿ ಇಲಾಖೆಯ ೨೦೧೧ರ ಗಣತಿಯ ಆಧಾರ)

ಕರ್ನಾಟಕದ ರೈತರಲ್ಲಿ ೭೨.೪೪ ಲಕ್ಷ ರೈತ ಕುಟುಂಬಗಳು ಮಧ್ಯಮ ದರ್ಜೆಗಿಂತಲೂ ಕೆಳಗಿವೆ. ಅಂದರೆ ಪ್ರತಿಶತ ೯೨.೫೦ ರೈತಕುಟುಂಬಗಳು ಈ ವರ್ಗದಲ್ಲಿ ಬರುತ್ತವೆ. ಇವರ ಒಟ್ಟು ಹಿಡುವಳಿ = ೮೨೬೩೯೮೪ ಹೆಕ್ಟೇರುಗಳು ಅರ್ಥಾತ್ ಒಂದು ರೈತ ಕುಟುಂಬದ ಸರಾಸರಿ ಹಿಡುವಳಿ = ೧.೧೪ ಹೆಕ್ಟೇರುಗಳು ಅಥವಾ ೨.೫ ಎಕರೆಯಷ್ಟು. ಒಂದು ರೈತ ಕುಟುಂಬದಲ್ಲಿ ೫ ಸದಸ್ಯರು ಇರುವರು ಎಂದು ಭಾವಿಸಿದರೆ ೧.೧೪ ಹೆಕ್ಟೇರು ಜಮೀನಿನ ಮೇಲೆ ಬದುಕುವ ಜನರ ಸಂಖ್ಯೆ ಸುಮಾರು ೩.೬ ಕೋಟಿಯಷ್ಟಾಗುತ್ತದೆ. ಇವರು ಕರ್ನಾಟಕದ ಒಟ್ಟು ಜನಸಂಖ್ಯೆಯ (ಸುಮಾರು ೬.೧೧ ಕೋಟಿ) ೫೯% ಆಗುತ್ತಾರೆ. ಅಂದರೆ ನಮ್ಮ ರಾಜ್ಯದ ೫೯% ಜನರು ೧.೧೪ರಷ್ಟು ಕಡಿಮೆ ಜಮೀನಿನಲ್ಲಿ ಬದುಕು ಸಾಗಿಸುತ್ತಾರೆ. ಈ ಸಂಖ್ಯೆಗೆ ಕಾರ್ಮಿಕರ ಸಂಖ್ಯೆಯನ್ನು ಸೇರಿಸಿದರೆ, ಬಹುಶಃ ಕರ್ನಾಟಕದಲ್ಲಿ ೮೫% ಜನರು ಬಡತನದ ರೇಖೆಯ ಕೆಳಗೆ ಬದುಕುತ್ತಿರಬಹುದು ಎಂದೆನಿಸುತ್ತದೆ.

ಮುಂಗಾರು ಹಂಗಾಮಿನಲ್ಲಿ ಹೊಲ ಉತ್ತಿದ ಬಳಿಕ, ನಮ್ಮ ಬಡ ರೈತರು ಬಿತ್ತಲು ಬೀಜಗಳನ್ನು ಎಲ್ಲಿಂದ ತರುತ್ತಾರೆ? ಸಾಲ ಮಾಡದೆ ಬೀಜಗಳನ್ನು ಕೊಳ್ಳಲು ಇವರ ಬಳಿ ದುಡ್ಡು ಇದೆಯೆ? ಇವರು ಕೊಂಡುಕೊಂಡ ಬೀಜಗಳು ಕಳಪೆ ಗುಣಮಟ್ಟದ್ದಾಗಿವೆಯೆ? ಜಮೀನಿಗೆ ನೀರು ಹಾಯಿಸಲು ನೀರಾವರಿ ಸೌಲಭ್ಯ ಇದೆಯೆ? (ಕರ್ನಾಟಕದಲ್ಲಿ ಎಲ್ಲ ಮೂಲಗಳಿಂದ ನೀರಾವರಿಗೆ ಒಳಪಟ್ಟಿರುವ ಜಮೀನಿನ ಪ್ರಮಾಣ ಕೇವಲ ೨೧ ಪ್ರತಿಶತದಷ್ಟಿದೆ !) ನೀರು ಎತ್ತಲು ವಿದ್ಯುತ್ ಸೌಲಭ್ಯ ಇದೆಯೆ? ನೀರಾವರಿ ಇಲ್ಲದಲ್ಲಿ ಸಕಾಲಿಕ ಮಳೆ ಆಗಿದೆಯೆ? ಇವುಗಳಲ್ಲಿ ಒಂದೇ ಅನುಕೂಲತೆ ತಪ್ಪಿದರೂ ಸಹ ರೈತನ ವರ್ಷದ ಶ್ರಮವೆಲ್ಲ ವ್ಯರ್ಥ. ಸಾಲದ ಶೂಲಕ್ಕೆ ಸಿಲುಕಿದ ರೈತ ನೇಣಿಗೆ ಶರಣಾಗುವದೇ ಉತ್ತಮ ಪರಿಹಾರ ಎಂದು ಭಾವಿಸುತ್ತಾನೆ. ಇನ್ನು ಇವೆಲ್ಲ ಅನುಕೂಲಗಳು ದೊರೆತರೆ, ಒಳ್ಳೆಯ ಬೆಳೆ ಬಂದು ರೈತನು ಖುಶಿಯಾಗುತ್ತಾನೆ. ಆದರೆ ಎಚ್ಚರಿಕೆ, ಇದು ರೈತನ ಆತ್ಮಹತ್ಯೆಗೆ ತೆರೆದುಕೊಂಡ ಎರಡನೆಯ ದಾರಿ! ಏಕೆಂದರೆ ಒಳ್ಳೆಯ ಬೆಳೆ ಬಂದ ಹಂಗಾಮಿನಲ್ಲಿ, ದಲ್ಲಾಳಿಗಳು ರೈತನಿಗೆ ಕೊಡಬೇಕಾದ ಬೆಲೆಯನ್ನು ಪಾತಾಳಕ್ಕೆ ಇಳಿಸುತ್ತಾರೆ. ಆ ದುಡ್ಡಿನಲ್ಲಿ ಸಾಗಾಣಿಕೆಯ ಖರ್ಚೂ ಗಿಟ್ಟುವುದಿಲ್ಲವೆಂದು ಹತಾಶನಾದ ರೈತ, ಬೆಳೆಯನ್ನೆಲ್ಲ ರಸ್ತೆಗೆ ಚೆಲ್ಲಿ, ತನ್ನ ಹಳ್ಳಿಗೆ ಮರಳಿದ್ದುಂಟು.

ಇಷ್ಟೆಲ್ಲ ಬಡಿದಾಡಿ ಹೈರಾಣಾದ ರೈತ ಮನೆಗೆ ಬಂದಾಗ ನೋಡುವುದೇನು?--- ಹಸಿವೆಯಿಂದ ಮೋರೆ ಒಣಗಿಸಿಕೊಂಡು ನಿಂತಂತಹ ಹೆಂಡತಿ ಮಕ್ಕಳು. ಇವರ ಹೊಟ್ಟೆಗೆ ಹಾಕಲಾರದ ಸಂಕಟಕ್ಕಿಂತ, ಅವಮಾನಕ್ಕಿಂತ,  ಸಾಯುವುದೇ ಮೇಲು ಎಂದು ಭಾವಿಸಿದ ರೈತ ಉರುಲು ಹಾಕಿಕೊಂಡರೆ ಆಶ್ಚರ್ಯವಿಲ್ಲ. ಆದರೆ, ಇವನಿಗೆ ನಿಜವಾಗಿ ಉರುಲು ಹಾಕುವವರು, ಲಾಭದ ದುರಾಸೆಗೆ ಒಳಗಾದ ದಲ್ಲಾಳಿಗಳು ಹಾಗು ಸರಕಾರ. ‘ಅವ್ಯವಹಾರವೇ ನಮ್ಮ ವ್ಯವಹಾರ’ ಎನ್ನುವುದಂತೂ ವ್ಯಾಪಾರಿಗಳ ಸಂವಿಧಾನವೇ ಆಗಿದೆ. ಆದರೆ, ಸರಕಾರವೂ ಸಹ ‘ರೈತರ ಆತ್ಮಹತ್ಯೆಗೆ ರೈತರೇ ಕಾರಣ’ ಎನ್ನುವ ಸಬೂಬುಗಳನ್ನು ನೀಡುವುದು ದಿಗಿಲು ಹುಟ್ಟಿಸುತ್ತಿದೆ.

‘ರೈತನು ತನ್ನ ಜಮೀನಿಗಾಗಿ ಸಾಲ ಮಾಡಿಲ್ಲ, ತನ್ನ ಮಕ್ಕಳ ಮದುವೆಗಾಗಿ ಸಾಲ ಮಾಡಿದ್ದಾನೆ; ಅವನಿಗೇಕೆ ಬೇಕು ಆಡಂಬರದ ಮದುವೆ?’ ಎನ್ನುವಂತಹ ವಿಕೃತ ಮಾತುಗಳನ್ನಷ್ಟು ನೋಡಿರಿ. ಸರಕಾರದ ಯಾ ಖಾಸಗಿ ಸಂಸ್ಥೆಗಳ ನೌಕರರು ಮನೆ ಕಟ್ಟಲು, ವಾಹನ ಕೊಳ್ಳಲು ಹಾಗು ಮಕ್ಕಳ ಶಿಕ್ಷಣಕ್ಕಾಗಿ ಸಾಲ ಮಾಡುತ್ತಾರೆ. ಅವರ ಮಾಸಿಕ ವೇತನದಲ್ಲಿ ನಿಶ್ಚಿತರೂಪದ ಕಡಿತವಿರುವುದರಿಂದ, ಈ ಎಲ್ಲ ಸಾಲಗಳು ಅವರ ನಿವೃತ್ತಿಯ ಸಮಯದವರೆಗೆ ತೀರಿ ಹೋಗುತ್ತವೆ. ನಿವೃತ್ತಿಯ ನಂತರ ದೊಡ್ಡ ಮೊತ್ತದ ಕ್ಷೇಮನಿಧಿಯನ್ನು ಪಡೆದುಕೊಂಡು ಈ ನೌಕರರು ಸುಖವಾಗಿ ಜೀವಿಸುತ್ತಾರೆ. ಆದರೆ, ನಮ್ಮ ಬಡ ರೈತನು ಯಾವುದೇ ಕಾರಣಕ್ಕೆ ಸಾಲ ಮಾಡಿರಲಿ, ಅದರ ತೀರುವಳಿಗೆ ಅವನಿಗೆ ನಿಶ್ಚಿತ ಆದಾಯವಿದೆಯೆ? ದೇವರ ದಯೆಯನ್ನೇ ಅವಲಂಬಿಸಿದ ಬೆಳೆ ಹಾಗು ವ್ಯಾಪಾರಿಗಳ ದಯೆಯನ್ನೆ ಅವಲಂಬಿಸಿದ ಆದಾಯ! ಹೀಗಿರಲು ಅವನು ಮಾಡಿದ ಸಾಲ ತೀರಲು ಹೇಗೆ ಸಾಧ್ಯ?

ಈ ಸಮಸ್ಯೆಗಳಿಗೆ ಪರಿಹಾರವೇನು ? ಮೊದಲನೆಯದಾಗಿ ಸರಿಯಾದ ಬೆಳೆ ಬರಬೇಕಾದರೆ, ರೈತನಿಗೆ ಈ ಮೂಲಸೌಲಭ್ಯಗಳು ದೊರೆಯಬೇಕು:
(೧) ಜಮೀನಿಗೆ ನೀರಾವರಿ (ಅವಶ್ಯವಿದ್ದಲ್ಲಿ ವಿದ್ಯುತ್ ಶಕ್ತಿಯ ಅನುಕೂಲ)
(೨) ಒಳ್ಳೆಯ ಬೀಜಗಳ ಸುಲಭ ಪೂರೈಕೆ
(೩) ಕೃಷಿಗೆ ಅವಶ್ಯವಿರುವ ಉಪಕರಣಗಳ ಸುಲಭ ಪೂರೈಕೆ

ಈ ಮೇಲಿನ ಸೌಕರ್ಯಗಳ ಜೊತೆಗೆ, ಅತಿ ಮುಖ್ಯವಾದದ್ದು ಎಂದರೆ ಹಣಕಾಸಿನ ಸೌಕರ್ಯ.
ಹಣಕಾಸಿನ ಸಂಸ್ಥೆಗಳು ರೈತನಿಗೆ ಸಾಲವನ್ನು ಕೊಡಬಹುದು.  ಆದರೆ ದಲ್ಲಾಳಿಗಳ ಕಪಿಮುಷ್ಟಿಯಿಂದ ರೈತರನ್ನು ಬಿಡಿಸದಿದ್ದರೆ, ರೈತನಿಗೆ ಸಾಲದ ಶೂಲದಿಂದ ಪಾರಾಗಲು ಸಾಧ್ಯವಾಗಲಾರದು. ಈ ಉದ್ದೇಶ ನೆರವೇರಲು ಎರಡು ಕೆಲಸಗಳನ್ನು ಮಾಡಬೇಕಾಗುವುದು:
(೧) ಬೆಳೆಗಳ ಸಂಗ್ರಹಸೌಲಭ್ಯ
(೨) ಬೆಳೆಯ ಮಾರುಕಟ್ಟೆಯ ಬೆಲೆಯ ಸಮಂಜಸ ನಿರ್ಧಾರ

ಸದ್ಯಕ್ಕೆ ಎರಡೂ ಸೌಲಭ್ಯಗಳು ದಲ್ಲಾಳಿಗಳ ಕೈಯಲ್ಲಿವೆ! ಇವು ರೈತನ ಕೈಗೆ ಬರುವ ತನಕ ಆತನ ಆತ್ಮಹತ್ಯೆ ತಪ್ಪಲಾರದು. ಬರಗಾಲ ಅಥವಾ ಅತಿವೃಷ್ಟಿಯಿಂದ ಬೆಳೆ ಹಾಳಾದಾಗ, ಸರಕಾರವು ಆ ಬೆಳೆಗ ಬರಬಹುದಾಗಿದ್ದ ಸಂಪೂರ್ಣ ಮೊತ್ತವನ್ನು ಸರಕಾರೀ ಖಜಾನೆಯಿಂದ ರೈತನಿಗೆ ನೀಡಬೇಕು.  ‘ಅನ್ನದಾತನೇ ಆತ್ಮಹತ್ಯೆ ಮಾಡಿಕೊಳ್ಳಬೇಡ, ನಿನ್ನ ಹಿಂದೆ ನಾವಿದ್ದೇವೆ’ ಎಂದು ಬೊಬ್ಬೆ ಹಾಕುವ ಬದಲು, ಸರಕಾರವು ಇಷ್ಟು ಮಾಡಿದರೆ ಸಾಕು, ಅನ್ನದಾತನೂ ಬದುಕುತ್ತಾನೆ, ಪ್ರಜೆಗಳೂ ಬದುಕುತ್ತಾರೆ, ಸರಕಾರವೂ ಬದುಕುತ್ತದೆ.

ಆದರೆ ರಾಜಕಾರಣಿಗಳು ಮಾಡುತ್ತಿರುವುದೇನು? ರಾಜಕೀಯದ ಚದುರಂಗದಲ್ಲಿ ರಾಜಕಾರಣಿಗಳು ರೈತನನ್ನು ದಾಳವಾಗಿ ಬಳಸುತ್ತಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಮಹಾದಾಯಿ ನದಿಯ ತಿರುವಿನ ಸಮಸ್ಯೆ. ಇದು ಕರ್ನಾಟಕಕ್ಕೆ ಜೀವನ್ಮರಣದ ಪ್ರಶ್ನೆಯಾಗಿದೆ. ಆದರೆ, ನ್ಯಾಯಾಧಿಕರಣದಲ್ಲಿ ಕೊಳೆಯುತ್ತಿರುವ ಈ ಸಮಸ್ಯೆಗೆ ರಾಜಕೀಯ ಪರಿಹಾರ ಇದೆಯೆ? ಈ ಸಮಸ್ಯೆಗೆ ಸಂಬಂಧಿಸಿದ ಮೂರೂ ರಾಜ್ಯಗಳಲ್ಲಿ ಹಾಗು ಕೇಂದ್ರದಲ್ಲಿ ಒಂದೇ ಪಕ್ಷದ ಸರಕಾರವಿದ್ದರೂ ಸಹ, ರಾಜಕೀಯ ಪರಿಹಾರ ಸಾಧ್ಯವಿಲ್ಲ. ಏಕೆಂದರೆ ಆಯಾ ರಾಜ್ಯಗಳಲ್ಲಿ ಆ ಸಮಯದಲ್ಲಿ ಇರುವ ವಿರೋಧ ಪಕ್ಷಗಳು, ಇಂತಹ ಪರಿಹಾರದ ವಿರುದ್ಧ ತಮ್ಮ ರಾಜ್ಯಗಳ ಜನರ ಭಾವನೆಗಳನ್ನು ಕೆರಳಿಸಿ, ಗಲಾಟೆ ಮಾಡದೆ ಬಿಡಲಾರವು. ಇದು ಆ ಪಕ್ಷಗಳಿಗೆ ಸುವರ್ಣಾವಕಾಶ. ಇದನ್ನು ತಿಳಿದೇ, ಕರ್ನಾಟಕದ ಚಾಣಾಕ್ಷ ಮುಖ್ಯ ಮಂತ್ರಿಗಳು ಸರ್ವಪಕ್ಷನಿಯೋಗವನ್ನು ಪ್ರಧಾನ ಮಂತ್ರಿಗಳ ಬಳಿಗೆ ಕರೆದೊಯ್ದದ್ದು. ಪ್ರಧಾನ ಮಂತ್ರಿಗಳೂ ಸಹ ರಾಜಕೀಯ ಚತುರರೇ. ‘ಉಳಿದೆರಡು ರಾಜ್ಯಗಳ ವಿರೋಧ ಪಕ್ಷಗಳು ನಿಮ್ಮವೇ ಆಗಿವೆ, ಆ ಪಕ್ಷಗಳ ಮನ ಒಲಿಸಿರಿ’ ಎಂದು ಹೇಳಿ ಇವರನ್ನು ಸಾಗ ಹಾಕಿದರು. ಆದರೆ, ಕರ್ನಾಟಕದ ಮುಖ್ಯ ಮಂತ್ರಿಗಳು ಇನ್ನೂ ಹೆಚ್ಚಿನ ಜಾಣತನವನ್ನು ತೋರಿಸಿದರು; ಪ್ರಧಾನ ಮಂತ್ರಿಗಳ ತಲೆಯ ಮೇಲೆ ಗೂಬೆ ಕೂರಿಸುವದರಲ್ಲಿ ಸಫಲರಾದರು! ಇವೆಲ್ಲದರ ಪರಿಣಾಮವಾಗಿ ಹಾಗು ರಾಜ್ಯದ ಎಲ್ಲ ಪಕ್ಷಗಳ ಪ್ರೋತ್ಸಾಹದಿಂದಾಗಿ, ಮಹಾದಾಯಿ ಚಳುವಳಿಯು ಈಗ ತಾರಕಕ್ಕೇರಿದೆ. ರೈತರು ಮನೆಮಠಗಳತ್ತ ನೋಡದೆ, ಪ್ರತಿ ದಿನವೂ ಚಳುವಳಿಯನ್ನು ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಮಾಡುವ ಚಳುವಳಿಗಳಿಂದ, ಗೋವಾದಲ್ಲಿ ತಳಮಳ ಏಳುವುದಿಲ್ಲ. ನಮ್ಮ ಬದುಕು ಅಸ್ತವ್ಯಸ್ತವಾಗುವುದೇ ಹೊರತು, ಅಲ್ಲಿಯ ಜೀವನ ಎಂದಿನಂತೆ ಸರಾಗವಾಗಿ ಸಾಗುತ್ತಿರುತ್ತದೆ. ಇದನ್ನರಿತಿದ್ದರಿಂದಲೇ ಒಬ್ಬ ರಾಜಕಾರಣಿಯು, ‘ಗೋವಾಕ್ಕೆ ಕಾಯಿಪಲ್ಲೆ ಕಳಿಸುವುದನ್ನು ಬಂದ್ ಮಾಡಬೇಕು’ ಎಂದು ವೀರಾವೇಶದಿಂದ ಗರ್ಜಿಸಿದರು. ಕಾಯಿಪಲ್ಲೆ ಸಿಗದಿದ್ದರೆ, ಗೋವಾದ ಜನ ಮೀನು ತಿಂದು ಬದುಕುತ್ತಾರೆ. ಲುಕ್ಸಾನು ಆಗುವುದು ನಮ್ಮ ವ್ಯಾಪಾರಸ್ಥರಿಗೆ ಎನ್ನುವ ಕಠೋರ ಸತ್ಯ ಅವರಿಗೆ ಹೊಳೆದಂತೆ ಕಾಣುವುದಿಲ್ಲ.

ಹಾಗಿದ್ದರೆ, ದಾರಿ ಯಾವುದಯ್ಯಾ ಮಹಾದಾಯಿಗೆ? ನ್ಯಾಯಾಧಿಕರಣದಲ್ಲಿಯೇ ಇದಕ್ಕೆ ಪರಿಹಾರ ದೊರೆಯಬೇಕು. ಆ ಸಾಧ್ಯತೆಗಾಗಿ ನಮ್ಮ ಸರಕಾರ ಹಾಗು ನಮ್ಮ ರಾಜಕೀಯ ಪಕ್ಷಗಳು ತೀವ್ರ ಪ್ರಯತ್ನ ಮಾಡಬೇಕು. ಅನ್ಯಥಾ ಮಾರ್ಗವಿಲ್ಲ. ಆದರೆ, ‘ರೋಮ್ ಉರಿಯುತ್ತಿರುವಾಗ, ನೀರೋ ಪಿಟೀಲು ಬಾರಿಸುತ್ತಿದ್ದ’ ಎನ್ನುವಂತೆ, ನಮ್ಮ ರಾಜಕಾರಣಿಗಳು ‘ರೆಜಾರ್ಟ ರಾಜಕೀಯ’ದಲ್ಲಿ ನಿರತವಾಗಿವೆ, ಕೋಟಿಗಟ್ಟಲೆ ದುಡ್ಡು ಖರ್ಚು ಮಾಡುತ್ತಿವೆ. ಇಷ್ಟೆಲ್ಲ ಹಣ ಈ ಪಕ್ಷಗಳಿಗೆ ಹಾಗು ಈ ರಾಜಕಾರಣಿಗಳಿಗೆ ಎಲ್ಲಿಂದ ಬಂದಿರಬಹುದು? ಬಹುಶಃ ಕಪ್ಪುಹಣ ಇಟ್ಟುಕೊಂಡಿರುವ ವ್ಯಾಪಾರಿಗಳಿಂದ ಬಂದಿರಬಹುದೆ? ಈ ವ್ಯಾಪಾರಿಗಳು ಈ ಭಾರೀ ಮೊತ್ತವನ್ನು ಎಲ್ಲಿಂದ ತಂದಿರಬಹುದು? ಬಡ ರೈತರ ಶೋಷಣೆಯಿಂದಲೇ ಅಲ್ಲವೆ? ಇಂತಹ ರೈತರ ಉಪಕಾರವನ್ನು ಸ್ಮರಿಸಲು, ನಮ್ಮ ಪ್ರತಿಯೊಬ್ಬ ರಾಜಕಾರಣಿಯೂ ತನ್ನ ಆದಾಯದ ಒಂದು ಭಾಗವನ್ನು ರೈತರ ಸಾಲ ತೀರಿಸಲು ಏಕೆ ದಾನವಾಗಿ ನೀಡಬಾರದು? ಇದರಂದ ಅವರಿಗೆ ಇಹಲೋಕದಲ್ಲಿ ರಾಜಕೀಯ ಲಾಭ ಹಾಗು ಪರಲೋಕಕ್ಕಾಗಿ ಪುಣ್ಯ ಎರಡೂ ಲಭಿಸುತ್ತವೆ!                                                                                                                     

Sunday, September 6, 2015

ಭೂಮಿತಾಯಿಯ ಚೊಚ್ಚಿಲ ಮಗ................ಬೇಂದ್ರೆ



ಭೂಮಿತಾಯಿಯಾ
ಚೊಚ್ಚಿಲ ಮಗನನು
ಕಣ್ತೆರೆದೊಮ್ಮೆ
ನೋಡಿಹಿರೇನು?
*       *       *

ಮುಗಿಲೆಂಬುವುದು
ಕಿಸಿದಿತು ಹಲ್ಲು !
ಬಂದಾ ಬೆಳೆಯು
ಮಿಡಿಚಿಯ ಮೇವು;
ಬಿತ್ತಿದ್ದಾಯಿತು
ಉತ್ತಿಹ ಮಣ್ಣು !
ದಿನವೂ ಸಂಜೆಗೆ
ಬೆವರಿನ ಜಳಕ,
ಉಸಿರಿನ ಕೂಳಿಗೆ
ಕಂಬನಿ ನೀರು !
ಹೊಟ್ಟೆಯು ಹತ್ತಿತು
ಬೆನ್ನಿನ ಬೆನ್ನು !
ಎದೆಯ ಗೂಡಿನೊಳು
ಚಿಂತೆಯ ಗೂಗಿ !
ಮಿದುಳಿನ ಮೂಲೆಗೆ
ಲೊಟ ಲೊಟ ಹಲ್ಲಿ !
ಮೋರೆಯು ಸಾವನು
ಅಣಕಿಸುತಿಹುದು !
ಕೊರಳಿಗೆ ಹತ್ತಿದೆ
ಸಾಲದ ಶೂಲ !
ಆದರು ಬರದೋ
ಯಮನಿಗೆ ಕರುಣ
ಉಸಿರಿಗೆ ಒಮ್ಮೆ
ಜನನಾ ಮರಣಾ.
*       *       *
ನರಗಳ ನೂಲಿನ
ಪರೆ ಪರೆ ಚೀಲಾ
ತೆರೆ ತೆರೆಯಾಗಿದೆ
ಜಿರಿಜಿರಿಯಾಗಿದೆ;
ಅದರೊಳಗೊಂದು
ಎಲುಬಿನ ಬಲೆಯು !
ಟುಕು ಟುಕು ಡುಗು ಡುಗು
ಉಲಿಯುವ ನರಳುವ
ಜೀವದ ಜಂತುವು
ಹೊರಳುತ ಉರುಳುತ;
ಜನುಮವೆಂಬುವಾ
ಕತ್ತಲೆಯಲ್ಲಿ
ಬಿದ್ದಿದೆ ಒಳಗೆ
ಹೇಗೊ ಬಂದು !
ಸಾವಿನ ಬೆಳಕದು
ಕಾಣುವದೆಂದು ?
ಎಂದೋ ಎಂದೋ
ಎಂದೋ ಎಂದು
ಕನವರಿಸುವದು
ತಳಮಳಿಸುವದು !
* * * * * * * * * * * * * * * * * * *
ಕರ್ನಾಟಕದಲ್ಲಿ ಈ ವರ್ಷ ಮುಂಗಾರು ಮಳೆಯು ಕೈ ಕೊಟ್ಟಿತು. ಬಿತ್ತನೆಗೆ ಹೋಗಲಿ, ಕುಡಿಯಲು ಸಹ ನೀರಿಲ್ಲದಂತಹ ಪರಿಸ್ಥಿತಿ ಉದ್ಭವಿಸಿದೆ. ಈ ಸಂದರ್ಭದಲ್ಲಿ ಬೇಂದ್ರೆಯವರು ರಚಿಸಿದ ಒಂದು ಕವನ ನೆನಪಿಗೆ ಬರುತ್ತದೆ. ‘ಭೂಮಿತಾಯಿಯ ಚೊಚ್ಚಿಲ ಮಗನು’ ಎನ್ನುವ ಈ ಕವನವು ‘ನಾದಲೀಲೆ’ ಸಂಕಲನದಲ್ಲಿ ಅಡಕವಾಗಿದೆ. ‘ನಾದಲೀಲೆ’ ಪ್ರಕಟವಾಗಿದ್ದು ೧೯೩೮ರಲ್ಲಿ.

ಕವನದ ಪ್ರಾಸ್ತಾವಿಕ ನುಡಿಯನ್ನು ನೋಡಿರಿ:
ಭೂಮಿತಾಯಿಯಾ
ಚೊಚ್ಚಿಲ ಮಗನನು
ಕಣ್ತೆರೆದೊಮ್ಮೆ
ನೋಡಿಹಿರೇನು?

ರೈತನಿಗೆ ‘ಭೂಮಿತಾಯಿಯ ಚೊಚ್ಚಿಲ ಮಗ’ ಎನ್ನುತ್ತಾರೆ.  ಸಕಲ ಜೀವಜಂತುಗಳಿಗೆ ಆಹಾರವನ್ನು ಒದಗಿಸುವವಳೇ ಭೂಮಿತಾಯಿ. ಆದುದರಿಂದ ಭೂಮಿಯಿಂದ ಬೆಳೆ ತೆಗೆಯುವ ಒಕ್ಕಲಿಗನು ಭೂಮಿತಾಯಿಯ ಚೊಚ್ಚಿಲ ಮಗನೇ ಹೌದು. ಚೊಚ್ಚಿಲ ಮಗನಿಗೆ ತನ್ನ ಕುಟುಂಬದಲ್ಲಿ ಕೆಲವೊಂದು ಹಕ್ಕುಗಳು ಹಾಗು ಕರ್ತವ್ಯಗಳು ಇರುತ್ತವೆ. ಒಕ್ಕಲಿಗನಿಗೆ ಯಾವ ಹಕ್ಕೂ ಇಲ್ಲ, ಆದರೆ ಕರ್ತವ್ಯ ಮಾತ್ರ ಸಾಕಷ್ಟಿದೆ. ಇತರರಿಗಾಗಿ ಆತ ಶ್ರಮ ಪಡಬೇಕು ಎನ್ನುತ್ತೇವೆಯೆ ಹೊರತು ಆತನ ಸಂಕಷ್ಟಗಳನ್ನು ನಾವು ಕಣ್ಣೆತ್ತಿ ನೋಡುವುದಿಲ್ಲ. ನಾವೆಲ್ಲರೂ ಆತನ ಬಗೆಗೆ ಉದಾಸೀನ ಭಾವನೆಯನ್ನು ತಳೆದಿದ್ದೇವೆ. ಆದುದರಿಂದಲೇ ಬೇಂದ್ರೆಯವರು, ಕವನದ ಪ್ರಾಸ್ತಾವಿಕ ನುಡಿಯಲ್ಲಿ ‘ಭೂಮಿತಾಯಿಯಾ  ಚೊಚ್ಚಿಲ ಮಗನನು ಕಣ್ತೆರೆದೊಮ್ಮೆ ನೋಡಿಹಿರೇನು?’ ಎಂದು ಕೇಳುತ್ತಿದ್ದಾರೆ ! ಸರಿ, ಕಣ್ತೆರೆದು ನೋಡಿದಾಗ ಕಾಣುವುದೇನು ?

 ಮುಗಿಲೆಂಬುವುದು
ಕಿಸಿದಿತು ಹಲ್ಲು !
ಬಂದಾ ಬೆಳೆಯು
ಮಿಡಿಚಿಯ ಮೇವು;
ಬಿತ್ತಿದ್ದಾಯಿತು
ಉತ್ತಿಹ ಮಣ್ಣು !
ಭೂತಾಯಿಯ ಚೊಚ್ಚಿಲ ಮಗನ ಮೊದಲ ಕೆಲಸವೇನು? ಹೊಲವನ್ನು ಉತ್ತಲು ಹಾಗು ಬಿತ್ತಲು, ಮುಂಗಾರು ಮಳೆಯ ಪ್ರತೀಕ್ಷೆಯನ್ನು ಮಾಡುವುದು ! ಆದುದರಿಂದ ಭೂಮಿತಾಯಿಯ ಚೊಚ್ಚಿಲ ಮಗನು, ಮುಗಿಲನ್ನು ದಿಟ್ಟಿಸಿ ನೋಡುತ್ತಿದ್ದಾನೆ. ಆದರೆ, ಮುಗಿಲು ‘ಕಿಸಿದಿತು ಹಲ್ಲು’ ಎಂದರೆ ಒಕ್ಕಲಿಗನನ್ನು ಮುಗಿಲು ಅಣಕಿಸುತ್ತಿದೆ!  ಒಮ್ಮೆ ಮಳೆ ಆದೀತು ಎನ್ನುವ ಆಶಾಭಾವ ತೋರಿದರೆ, ಮರುಕ್ಷಣದಲ್ಲಿ ಕಾಣುವುದು ನಿಗಿ ನಿಗಿ ಮುಗಿಲು ! ಮುಂಗಾರು ಮಳೆಯ ನಾಲ್ಕು ಹನಿ ಬಿದ್ದರೆ ಸಾಕು, ಒಕ್ಕಲಿಗ ಉತ್ಸಾಹದಿಂದ ತನ್ನ ಹೊಲವನ್ನು ಉತ್ತಲು ಪ್ರಾರಂಭಿಸುತ್ತಾನೆ. ಹೋಗಲಿ, ಅಷ್ಟಿಷ್ಟು ಮಳೆಯಾಗಿ, ಅಷ್ಟಿಷ್ಟು ಬೆಳೆಯಾದರೂ ಬಂದಿತಲ್ಲ ಎನ್ನುವ ಸಮಾಧಾನವನ್ನು ತಳೆಯುವುದೂ ಅವನಿಗೆ ಸಾಧ್ಯವಿಲ್ಲ. ಏಕೆಂದರೆ, ‘ಬಂದಾ ಬೆಳೆಯು ಮಿಡಚಿಯ ಮೇವು’ ! ಅವನ ಬೆಳೆಯಲ್ಲಿ ಆಗ ಆತನಿಗೆ ಉಳಿಯುವುದು: ಉತ್ತಿದ ಮಣ್ಣು !

ದಿನವೂ ಸಂಜೆಗೆ
ಬೆವರಿನ ಜಳಕ,
ಉಸಿರಿನ ಕೂಳಿಗೆ
ಕಂಬನಿ ನೀರು !
ಹೊಟ್ಟೆಯು ಹತ್ತಿತು
ಬೆನ್ನಿನ ಬೆನ್ನು !
ನಮ್ಮ ರೈತನನ್ನು ವಿದೇಶೀ ರೈತರಿಗೆ ಅಥವಾ ಕೆಲಸಗಾರರಿಗೆ ಹೋಲಿಸಿ ಒಂದು ಮಾತನ್ನು ಹೇಳುವುದು ಫ್ಯಾಶನ್ ಆಗಿದೆ: ‘ನಮ್ಮ ರೈತರ ಉತ್ಪಾದನಾಸಾಮರ್ಥ್ಯ ಕಡಿಮೆ!’ ನಮ್ಮ ಒಕ್ಕಲಿಗನು ಹಗಲು ಹನ್ನೆರಡು ತಾಸು ತನ್ನ ಹೊಲದಲ್ಲಿ ಎತ್ತುಗಳ ಜೊತೆಗೆ ಎತ್ತಿನಂತೆಯೇ ದುಡಿಯುತ್ತಾನೆ. ಆದರೆ ವಿದೇಶಿ ರೈತನು ಯಂತ್ರಗಳನ್ನು ಬಳಸಿ ಇವನು ಮಾಡುವಷ್ಟೇ ಕೆಲಸವನ್ನು ಇವನಿಗಿಂತ ಚೆನ್ನಾಗಿ ಅಲ್ಪ ಕಾಲದಲ್ಲಿಯೇ ಮಾಡಿ ಮುಗಿಸುತ್ತಾನೆ. ಆದುದರಿಂದ ವಿದೇಶೀ ಕೆಲಸಗಾರನ ಉತ್ಪಾದನಾಸಾಮರ್ಥ್ಯ ನಮ್ಮ ರೈತನಿಗಿಂತ ಹೆಚ್ಚು! ನಮ್ಮ ರೈತನ ದುಡಿಮೆಗೆ ಬೆಲೆ ಇಲ್ಲ ! ಅದಕ್ಕೆಂದೇ ಬೇಂದ್ರೆಯವರು, ‘ದಿನವೂ ಸಂಜೆಗೆ ಬೆವರಿನ ಜಳಕ’ ಎನ್ನುತ್ತಾರೆ. ಇಷ್ಟೆಲ್ಲ ಶ್ರಮಪಟ್ಟ ರೈತನಿಗೆ ಸಂಜೆಯ ಹೊತ್ತಿಗೆ ಶ್ರಮದ ಪ್ರತಿಫಲವಾಗಿ ಒಂದಿಷ್ಟು ಕೂಳು ಸಿಗುತ್ತದೆ ಎನ್ನುವಂತಿಲ್ಲ. ಏಕೆಂದರೆ, ಬೆಳೆ ಬಂದ ನಂತರ ಹೊಲದ ಮಾಲೀಕನಿಗೆ ಅವನ ಪಾಲು ಕೊಟ್ಟ ನಂತರವೇ, ಇವನಿಗೆ ತನ್ನ ಭಾಗ ಸಿಗುವುದು. ಆದುದರಿಂದ ಅಲ್ಲಿಯವರೆಗೆ  ‘ಇವನ ಉಚ್ಛ್ವಾಸವೇ  ಇವನಿಗೆ ಕೂಳು, ಇವನ ಕಂಬನಿಯೇ ಇವನಿಗೆ ಕುಡಿಯಲು ಸಿಗುವ ನೀರು.’ ಉಸಿರಿನ ಕೂಳನ್ನು ಹಾಗು ಕಣ್ಣೀರ ನೀರನ್ನೇ ಕುಡಿದು ಬದುಕಬೇಕಾದ ರೈತನ ಹೊಟ್ಟೆ ತನ್ನ ಬೆನ್ನಿನ ಬೆನ್ನಿಗೇ(!) ಹತ್ತಿಕೊಳ್ಳುವುದರಲ್ಲಿ ಆಶ್ಚರ್ಯವಿಲ್ಲ.

ಇಂತಹ ರೈತನ ಮನಸ್ಸು ಎಂತಹ ಸಂಕಟದಲ್ಲಿರಬಹುದು?
ಎದೆಯ ಗೂಡಿನೊಳು
ಚಿಂತೆಯ ಗೂಗಿ !
ಮಿದುಳಿನ ಮೂಲೆಗೆ
ಲೊಟ ಲೊಟ ಹಲ್ಲಿ !
ರೈತನ ಎದೆಯಾಳವನ್ನು ಬೇಂದ್ರೆ ಎದೆಯ ಗೂಡು ಎಂದು ವ್ಯಂಗ್ಯದಿಂದ ಬಣ್ಣಿಸುತ್ತಾರೆ. ಗೂಗಿ ಅಪಶಕುನದ ಹಕ್ಕಿ. ಯಾರೊಡನೆಯೂ ಬೆರೆಯದ ನಿಶಾಚರ ಪ್ರಾಣಿ. ಎದೆಯ ಗೂಡಿನೊಳು ಅಂದರೆ ರೈತನ ಎದೆಯಾಳವನ್ನು ಚಿಂತೆ ಎನ್ನುವ ಗೂಗಿ ಆಕ್ರಮಿಸಿಕೊಂಡಿದೆ. ಹಗಲಿನಲ್ಲಿ ಗೂಗಿ ಎಲ್ಲೂ ಹೊರಬೀಳುವುದಿಲ್ಲ, ನಮ್ಮ ರೈತನಂತೆ; ಇರುಳಿನಲ್ಲಿ ತನ್ನ ಚಿಂತೆಯಲ್ಲಿ ತಾನಿರುತ್ತದೆ. ಅದರಂತೆಯೇ ನಮ್ಮ ರೈತನೂ ಸಹ ಯಾರನ್ನೂ ನೋಡಬಯಸುವುದಿಲ್ಲ, ಯಾರೊಡನೆಯೂ ಮಾತನಾಡ ಬಯಸುವುದಿಲ್ಲ, ಎಲ್ಲರಿಂದಲೂ ಮುಖ ಮುಚ್ಚಿಕೊಂಡು ತಿರುಗುತ್ತಾನೆ.

ಹೃದಯದ ಮಾತು ಹೇಗಾದರೂ ಇರಲಿ, ಆತನ ಬುದ್ಧಿ ಆತನಿಗೆ ಏನು ಹೇಳುತ್ತದೆ? ಮಿದುಳಿನ ಮೂಲೆಯಲ್ಲಿರುವ ಅಪಶಕುನದ ಹಲ್ಲಿಯೊಂದು, ಪದೇ ಪದೇ ಆತನಿಗೆ ಹೇಳುತ್ತಲೇ ಇದೆ:  ‘ಇದು ತೀರಾ ಕೆಟ್ಟ ಪರಿಸ್ಥಿತಿ, ಇದು ಬದಲಾಗುವುದು ಸಾಧ್ಯವಿಲ್ಲ !’ (ಇದು ಅಂತ್ಯವಾಗುವುದು ರೈತನ ಅಂತ್ಯದೊಡನೆಯೇ. ಆದುದರಿಂದಲೇ ನಮ್ಮ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.)

ಮೋರೆಯು ಸಾವನು
ಅಣಕಿಸುತಿಹುದು !
ಕೊರಳಿಗೆ ಹತ್ತಿದೆ
ಸಾಲದ ಶೂಲ !
ಆತನ ಕಳಾಹೀನ ಮುಖವು ಸಾವನ್ನೇ ಅಣಕಿಸುವಷ್ಟು ನಿರ್ಜೀವವಾಗಿದೆ. ಮುಖವನ್ನು ಎತ್ತಿಹಿಡಿಯಬೇಕಾದ ಕೊರಳಿಗೆ ಸಾಲದ ಶೂಲವು ಸಿಲುಕಿರುವುದರಿಂದ ಆತ ಮುಖ ಕೆಳಗೆ ಜೋತಿದೆ. ಆತ ತನ್ನ ಮುಖವನ್ನು ಎತ್ತಿಕೊಂಡು ತಿರುಗಲು ಸಾಧ್ಯವಾಗುತ್ತಿಲ್ಲ.

ಆದರು ಬರದೋ
ಯಮನಿಗೆ ಕರುಣ
ಉಸಿರಿಗೆ ಒಮ್ಮೆ
ಜನನಾ ಮರಣಾ.
ಇಂತಹ ನಿರ್ಜೀವ ಪ್ರಾಣಿಯು ಸತ್ತಾದರೂ ಹೋದರೆ, ತನ್ನ ಸಂಕಟಗಳಿಂದ ಮುಕ್ತನಾಗಬಹುದು. ಆದರೆ
ಯಮನಿಗೂ ಸಹ ಈತನ ಮೇಲೆ ಕರುಣೆ ಬರುತ್ತಿಲ್ಲ., ನಿಟ್ಟುಸಿರು ಬಿಟ್ಟಾಗೊಮ್ಮೆ ಪ್ರಾಣ ಹಾರುತ್ತದೆ, ಉಸಿರು ಎಳೆದುಕೊಂಡಾಗೊಮ್ಮೆ ಈತನಲ್ಲಿ ಪ್ರಾಣ ಮತ್ತೆ ಮಿಸುಕಾಡುತ್ತದೆ !
* * * * * * * * * * * * * * * * * * * * *
ಇಂತಹ ದುರ್ಧರ ಪರಿಸ್ಥಿತಿಯಲ್ಲಿ ಸಿಲುಕಿ ಬೆಂಡಾಗಿರುವ ಒಕ್ಕಲಿಗ ಹೇಗೆ ಕಾಣಿಸುತ್ತಾನೆ ಎನ್ನುವ ದೃಶ್ಯವನ್ನು  ಬೇಂದ್ರೆ ಈಗ ನಮಗೆ ತೋರಿಸುತ್ತಾರೆ:

ನರಗಳ ನೂಲಿನ
ಪರೆ ಪರೆ ಚೀಲಾ
ತೆರೆ ತೆರೆಯಾಗಿದೆ
ಜಿರಿಜಿರಿಯಾಗಿದೆ;
ಅದರೊಳಗೊಂದು
ಎಲುಬಿನ ಬಲೆಯು !
ಚೀಲವನ್ನು ಹೆಣೆಯಲು ನೂಲು ಬೇಕಷ್ಟೆ. ಈ ಒಕ್ಕಲಿಗನ ದೇಹದ ಚೀಲಕ್ಕೆ ನರಗಳೇ ನೂಲಾಗಿವೆ. ಅಂದರೆ ಅಷ್ಟು ಸಣಕಲಾಗಿವೆ. ಅದರಿಂದ ತಯಾರಾಗುವ ಚೀಲವೂ ಸಹ ಪರೆ, ಪರೆ, ತೆರೆ, ತೆರೆಯಾಗಿದೆ. ಅಂದರೆ ಚರ್ಮವೆಲ್ಲ ಸುಕ್ಕುಗಟ್ಟಿ ಜೋತು ಬಿದ್ದು ಜೀರ್ಣವಾಗಿದೆ. ಆ ದೇಹದ ಚೀಲದಲ್ಲಿ ಎಲುಬಿನ ಬಲೆಯೊಂದಿದೆ. ಒಕ್ಕಲಿಗನ ಅಸ್ಥಿಪಂಜರವು ಬಲೆಯಂತೆ ಕಾಣಬೇಕಾದರೆ, ಎಷ್ಟು ಶಿಥಿಲವಾಗಿರಬೇಡ! ಅಥವಾ ಈ ಬಡಪಾಯಿಯ ಜೀವವನ್ನು ಹಿಡಿದಿಡುವ ಬಲೆಯೆ ಇದು?

ಟುಕು ಟುಕು ಡುಗು ಡುಗು
ಉಲಿಯುವ ನರಳುವ
ಜೀವದ ಜಂತುವು
ಹೊರಳುತ ಉರುಳುತ;
ಜನುಮವೆಂಬುವಾ
ಕತ್ತಲೆಯಲ್ಲಿ
ಬಿದ್ದಿದೆ ಒಳಗೆ
ಹೇಗೊ ಬಂದು !
ಜೀವ ಹೋಗುತ್ತಿರುವ ಪ್ರಾಣಿಯ ಹೃದಯವು ಹೇಗೆ ಸಾವಕಾಶವಾಗಿ ‘ಟುಕು ಟುಕು ಡುಗು ಡುಗು’ ಎಂದು ಬಡಿದುಕೊಳ್ಳುವುದೋ, ಅದೇ ರೀತಿಯಲ್ಲಿ ನಮ್ಮ ಒಕ್ಕಲಿಗನ ಹೃದಯವೂ ಸಾವಕಾಶವಾಗಿ ಬಡಿದುಕೊಳ್ಳುತ್ತ, ನರಳುತ್ತ ಬದುಕಿದೆ ! ಹರಿದಾಡುವ ಕೀಟವೊಂದನ್ನು ನೋಡಿರುವಿರಲ್ಲವೆ?  ಅದಕ್ಕೆ ಆಘಾತ ಮಾಡಿದಾಗ,ಅದು ಹೊರಳುತ್ತ, ಉರುಳುತ್ತ ಜೀವ ಹಿಡಿದುಕೊಳ್ಳಲು ಪ್ರಯತ್ನಿಸುವುದನ್ನು ನೋಡಿರುವಿರಲ್ಲವೆ? ಈ ನಮ್ಮ ಅಸಹಾಯಕ ಜಂತು ಸಹ ಹೇಗೋ ಹೇಗೋ ಹೊರಳುತ್ತ, ಉರುಳುತ್ತ ಬಂದು ‘ಜನ್ಮ’ ಎನ್ನುವ ಕತ್ತಲೆಯ ಗುಹೆಯೊಳಗೆ ಬಂದು ಬಿದ್ದಿದೆ. ಅರ್ಥಾತ್ ಜನ್ಮವೇ ಕಾರ್ಗತ್ತಲೆ; ಸಾವೇ ಬೆಳಕು!

ಸಾವಿನ ಬೆಳಕದು
ಕಾಣುವದೆಂದು ?
ಎಂದೋ ಎಂದೋ
ಎಂದೋ ಎಂದು
ಕನವರಿಸುವದು
ತಳಮಳಿಸುವದು !
ಆದರೆ ಸಾವು ಎನ್ನುವ ಬೆಳಕು ಅದಕ್ಕೆ ಎಂದಾದರೂ ಕಂಡೀತೆ? ‘ದೇವರೆ, ಎಂದು ನನ್ನನ್ನು ಮುಕ್ತಗೊಳಿಸುವೆ, ತಂದೆ?’ ಎಂದು ಹಂಬಲಿಸುತ್ತ, ತಳಮಳಗೊಳ್ಳುತ್ತ ಒಕ್ಕಲಿಗನ ಜೀವ ಮಿಡುಕುತ್ತಿದೆ.

ಬೇಂದ್ರೆಯವರ ಈ ಕವನವೂ ಈಗಲೂ ಸಹ ನಮ್ಮ ರಾಜ್ಯದ ರೈತರ ಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ ಎನ್ನಬಹುದು.
ಇತ್ತೀಚೆಗೆ, ಕರ್ನಾಟಕದಲ್ಲಿನಡೆಯುತ್ತಿರುವ ರೈತರ ಆತ್ಮಹತ್ಯೆಗಳನ್ನು ನೊಡಿದರೆ, ಒಕ್ಕಲಿಗನು ದೇವರ ಕೃಪೆಗಾಗಿ ಕಾಯದೆ, ತಾನೇ ತನ್ನನ್ನು ಮುಕ್ತಗೊಳಿಸಿಕೊಳ್ಳುತ್ತಿದ್ದಾನೆ ಎಂದು ಅನಿಸುವುದು!

Saturday, August 29, 2015

Tanmayi's thoughts

ತನ್ಮಯಿ ಇವಳು ಒಂಬತ್ತನೆಯ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿ. ಕೆಲದಿನಗಳ ಹಿಂದೆ, ತನ್ನ ಮನದಲ್ಲಿ ಹೊಳೆದ ಭಾವನೆಗಳನ್ನು ಇವಳು ಕಾಗದದ ಮೇಲೆ ಗೀಚಿ ಇಟ್ಟಿದ್ದಳು. ಅಕಸ್ಮಾತ್, ಅದು ನನಗೆ ದೊರೆಯಿತು. ಆ ಬರಹವನ್ನು ನೋಡಿ ಸಂತಸ ಹಾಗು ಅಚ್ಚರಿಗೊಂಡ ನಾನು ಅದನ್ನು ನಿಮ್ಮೆದುರಿಗೆ ಇಡುತ್ತಿದ್ದೇನೆ. ಈ ಬಾಲಕಿಗೆ ನಿಮ್ಮ ಪ್ರೋತ್ಸಾಹ ಇರಲಿ.

 

Saturday, August 15, 2015

ಶ್ರಾವಣಾ..........ಬೇಂದ್ರೆ


ಇಂದು ಶ್ರಾವಣಮಾಸ ಶುಕ್ಲಪಕ್ಷ ಪ್ರತಿಪದೆ. ಶ್ರಾವಣಮಾಸವು ಬೇಂದ್ರೆಯವರಿಗೆ  ಹಿಗ್ಗು ಕೊಡುವ ಮಾಸ. ಈ ಮಾಸದಲ್ಲಿ ಪ್ರಕೃತಿಯು ಹಸಿರನ್ನು ಉಟ್ಟುಕೊಂಡು ಮೈದುಂಬಿ ಮೆರೆಯುವದನ್ನು ಅವರು ಬಣ್ಣಿಸುವುದು ಹೀಗೆ:
ಹೂವ ಹಡಲಿಗೆಯನ್ನು ಹೊತ್ತ
ಭೂಮಿತಾಯಿ ಜೋಗಿತಿ
ಮೈsತುಂಬಿ ಕುಣಿಯುತಿಹಳ—
ನಂತ ಕಾಲವೀ ಗತಿ.
(-ಶ್ರಾವಣದ ವೈಭವ, ಸಖೀಗೀತ)

ಜಗದ್ಗುರು ಶ್ರೀಕೃಷ್ಣ ಹಾಗು ಬೇಂದ್ರೆಯವರ ಆಧ್ಯಾತ್ಮಿಕ ಗುರು ಶ್ರೀ ಅರವಿಂದರು ಹುಟ್ಟಿದ್ದೂ ಸಹ ಶ್ರಾವಣ ಮಾಸದಲ್ಲಿಯೇ. ಹೀಗಾಗಿ ಇದು ಅವರಿಗೆ ದೈವಿಕ ಮಾಸವೂ ಹೌದು. ಆದುದರಿಂದಲೇ ಅವರು ತಮ್ಮ‘ಬಂದಿಕಾರಾ ಶ್ರಾವಣಾ’ ಕವನದಲ್ಲಿ, ‘ದುಂದು-ಕಂಸನ ಕೊಂದು, ತಂದೆ-ತಾಯ್ ಹೊರತಂದ / ಕಂದನ್ನ ಕರೆ ಶ್ರಾವಣಾ’ ಎಂದು ಪ್ರಾರ್ಥಿಸುತ್ತಾರೆ.  ನನಗೆ ತಿಳಿದ ಮೇರೆಗೆ ಬೇಂದ್ರೆಯವರು ಹನ್ನೊಂದು ಶ್ರಾವಣ-ಕವನಗಳನ್ನು ರಚಿಸಿದ್ದಾರೆ. ಅವು ಹೀಗಿವೆ:

(೧) ಚಿತ್ತಿ ಮಳೆಯ ಸಂಜೆ (ಸಖೀಗೀತ….೧೯೩೨)
(೨) ಶ್ರಾವಣದ ವೈಭವ (ಸಖೀಗೀತ….೧೯೩೭)
(೩) ಅಗೋ ಅಲ್ಲಿ ದೂರದಲ್ಲಿ (ನಾದಲೀಲೆ…೧೯೩೮)
(೪) ಶ್ರಾವಣದ ಹಗಲು (ಉಯ್ಯಾಲೆ…೧೯೩೮)
(೫) ಬಂದಿಕಾರಾ ಶ್ರಾವಣಾ (ಗಂಗಾವತರಣ..೧೯೪೪)
(೬) ಶ್ರಾವಣಾ (ಕಾಮಕಸ್ತೂರಿ…೧೯೪೬)
(೭) ಪ್ರತಿ ವರ್ಷದಂತೆ ಬಂತು ಶ್ರಾವಣಾ (ಸೂರ್ಯಪಾನ…೧೯೫೭)
(೮) ಹುಬ್ಬಿ ಮಳೆ (ಸಂಚಯ…೧೯೫೯)
(೯) ಮತ್ತೆ ಶ್ರಾವಣಾ (ನಾಕು ತಂತಿ… ೧೯೬೪)
(೧೦) ಮತ್ತೆ ಶ್ರಾವಣಾ ಬಂದಾ (ನಾಕು ತಂತಿ…೧೯೬೪)
(೧೧) ನಮ್ಮ ಚಿತ್ತಾ (ಶತಮಾನ…ಅಪ್ರಕಟಿತ)

‘ಶ್ರಾವಣಾ’ ಕವನವು ಕೇವಲ ಓದುವ ಕವನವಲ್ಲ. ಶ್ರವಣ ಅಂದರೆ ಕೇಳುವುದು. ‘ಶ್ರಾವಣಾ’ ಕವನದಲ್ಲಿ ಬೇಂದ್ರೆಯವರು ಮಳೆಯ ಭೋರ್ಗರೆತವನ್ನು ನಮಗೆ ಕೇಳಿಸುತ್ತಾರೆ. ಕವನವನ್ನು ಓದುತ್ತಿರುವಂತೆಯೇ  ಓದುಗನು ಈ ಮೊರೆತವನ್ನು ಸ್ವತಃ ಅನುಭವಿಸುತ್ತಾನೆ. ಕವನದ ಪೂರ್ತಿಪಾಠ ಹೀಗಿದೆ:

ಶ್ರಾವಣಾ ಬಂತು ಕಾಡಿಗೆ | ಬಂತು ನಾಡಿಗೆ
ಬಂತು ಬೀಡಿಗೆ | ಶ್ರಾವಣಾ ಬಂತು ||ಪಲ್ಲ||
ಕಡಲಿಗೆ ಬಂತು ಶ್ರಾವಣಾ | ಕುಣಿದ್ಹಾಂಗ ರಾವಣಾ
ಕುಣಿದಾವ ಗಾಳಿ | ಭೈರವನೆ ರೂಪ ತಾಳಿ ||ಅನುಪಲ್ಲ||

                          
ಶ್ರಾವಣಾ ಬಂತು ಘಟ್ಟಕ್ಕ | ರಾಜ್ಯಪಟ್ಟಕ್ಕ
                   ಬಾನಮಟ್ಟಕ್ಕ
ಏರ್ಯಾವ ಮುಗಿಲು | ರವಿ ಕಾಣೆ ಹಾಡೆ ಹಗಲು |
ಶ್ರಾವಣಾ ಬಂತು ಹೊಳಿಗಳಿಗೆ | ಅದೇ ಶುಭಗಳಿಗೆ
                   ಹೊಳಿಗೆ ಮತ್ತೆ ಮಳಿಗೆ
ಆಗ್ಯೇದ ಲಗ್ನ | ಅದರಾಗ ಭೂಮಿ ಮಗ್ನ

                  
ಶ್ರಾವಣಾ ಬಂತು ಊರಿಗೆ | ಕೇರಿ ಕೇರಿಗೆ
          ಹೊಡೆದ ಝೂರಿಗೆ
ಜೋಕಾಲಿ ಏರಿ | ಆಡರ್ಯಾವ ಮರಕ  ಹಾರಿ |
ಶ್ರಾವಣಾ ಬಂತು ಮನಿಮನಿಗೆ | ಕೂಡಿ ದನಿದನಿಗೆ
          ಮನದ ನನಿಕೊನಿಗೆ
ಒಡೆದಾವ ಹಾಡೂ | ರಸ ಉಕ್ಕತಾವ ನೋಡು ||
                             ಶ್ರಾವಣಾ ಬಂತು.

                  
ಬೆಟ್ಟ ತೊಟ್ಟಾವ ಕುತನಿಯ ಅಂಗಿ
ಹಸಿರು ನೋಡ ತಂಗಿ
ಹೊರಟಾವೆಲ್ಲೊ ಜಂಗಿ
ಜಾತ್ರಿಗೇನೋ | ನೆರದsದ ಇಲ್ಲೆ ತಾನೋ ||
ಬನ ಬನ ನೋಡು ಈಗ ಹ್ಯಾಂಗ
ಮದುವಿ ಮಗನ್ಹಾಂಗ
ತಲಿಗೆ ಬಾಸಿಂಗ
ಕಟ್ಟಿಕೊಂಡು | ನಿಂತಾವ ಹರ್ಷಗೊಂಡು

                  
ಹಸಿರುಟ್ಟ ಬಸುರಿಯ ಹಾಂಗ
ನೆಲಾ ಹೊಲಾ ಹ್ಯಾಂಗ
ಅರಿಷಿಣ ಒಡೆಧ್ಹಾಂಗ
ಹೊಮ್ಮುತಾವ | ಬಂಗಾರ ಚಿಮ್ಮತಾವ |
ಗುಡ್ಡ ಗುಡ್ಡ ಸ್ಥಾವರ ಲಿಂಗ
ಅವಕ ಅಭ್ಯಂಗ
ಎರಿತಾವನ್ನೊ ಹಾಂಗ
ಕೂಡ್ಯಾವ ಮೋಡ | ಸುತ್ತೆಲ್ಲ ನೋಡ ನೋಡ |

                 
ನಾಡೆಲ್ಲ ಏರಿಯ ವಾರಿ
ಹರಿತಾವ ಝರಿ
ಹಾಲಿನ ತೊರಿ
ಈಗ ಯಾಕs | ನೆಲಕೆಲ್ಲ ಕುಡಿಸಲಾಕ ||
                   ಶ್ರಾವಣಾ ಬಂತು
ಜಗದ್ಗುರು ಹುಟ್ಟಿದ ಮಾಸ
ಕಟ್ಟಿ ನೂರು ವೇಷ
ಕೊಟ್ಟ ಸಂತೋಷ
ಕುಣಿತದ | ತಾನsನ ದಣಿತದ |
ಶ್ರಾವಣಾ ಬಂತು ಕಾಡಿಗೆ | ಬಂತು ನಾಡಿಗೆ
ಬಂತು ಬೀಡಿಗೆ | ಶ್ರಾವಣಾ ಬಂತು.       

ಈ ಕವನವನ್ನು ಬರೆದವನು ಒಬ್ಬನೇ ಕವಿ. ಆದರೆ ಕವನದಲ್ಲಿ ಹಾಸುಹೊಕ್ಕಾದ ಭಾವನೆಗಳು ಆ ಒಬ್ಬನೇ ಕವಿಯ ವಿವಿಧ ವಯೋಘಟ್ಟಗಳನ್ನು ಹಾಗು ವಿವಿಧ ಪ್ರಜ್ಞೆಗಳನ್ನು ಸೂಚಿಸುವುದು, ಈ ಕವನದ ಅಚ್ಚರಿಗಳಲ್ಲೊಂದು!
ಕವನದ ಮೊದಲಲ್ಲಿ ಇರುವ ಪಲ್ಲ ಹಾಗು ಅನುಪಲ್ಲಗಳು ಭಿರ್ರನೆ ಬೀಸುವ ಮಳೆಗಾಳಿಗೆ ವಿಸ್ಮಯಗೊಳ್ಳುವ, ಭೀತನಾಗುವ ಬಾಲಮನೋಭಾವವನ್ನು ಪ್ರದರ್ಶಿಸುತ್ತವೆ.
ಶ್ರಾವಣಾ ಬಂತು ಕಾಡಿಗೆ | ಬಂತು ನಾಡಿಗೆ
ಬಂತು ಬೀಡಿಗೆ | ಶ್ರಾವಣಾ ಬಂತು ||ಪಲ್ಲ||
ಕಡಲಿಗೆ ಬಂತು ಶ್ರಾವಣಾ | ಕುಣಿದ್ಹಾಂಗ ರಾವಣಾ
ಕುಣಿದಾವ ಗಾಳಿ | ಭೈರವನೆ ರೂಪ ತಾಳಿ ||ಅನುಪಲ್ಲ||

ಶ್ರಾವಣದ ಈ ಮಳೆಗಾಳಿಯು ರಾವಣನೇ ಕುಣಿಯುತ್ತಿರುವನೇನೊ ಎನ್ನುವಷ್ಟು ಭೀಕರವಾಗಿವೆ. (ರಾವಣನಿದ್ದದ್ದು ಭಾರತದ ದಕ್ಷಿಣದಲ್ಲಿದ್ದ ಲಂಕೆಯಲ್ಲಿ; ಭಾರತಕ್ಕೆ ಮುಂಗಾರು ಮಳೆ ಬರುವುದೂ ಸಹ ದಕ್ಷಿಣ-ಪಶ್ಚಿಮದಿಂದಲೇ!) ಕಡಲಿನ ತೆರೆಗಳನ್ನು ಅಲ್ಲೋಲ ಕಲ್ಲೋಲ ಮಾಡುವ ಶಕ್ತಿಶಾಲಿ ಗಾಳಿಯ ರೂಪವನ್ನು ‘ಕುಣಿದಾವ ಗಾಳಿ’ ಎನ್ನುವ ಎರಡೇ ಪದಗಳಲ್ಲಿ ಬೇಂದ್ರೆ ಬಿಚ್ಚಿಟ್ಟಿದ್ದಾರೆ. ಆದರೆ ರಾವಣನಂತೆ ಈ ಮಳೆಗಾಳಿ ವಿನಾಶಕಾರಿಯಲ್ಲ. ರಾವಣನು ಪೂಜಿಸುತ್ತಿದ್ದ ದೇವತೆಯಾದ ಶಿವನೇ ಅಂದರೆ ಭೈರವನೇ ಮಳೆಗಾಳಿಯ ರೂಪ ತಾಳಿ ಕಡಲಿನ ಮೇಲೆ ಕುಣಿಯುತ್ತಿರುವನೇನೊ  ಎನ್ನುವ ವಿರಾಟ್ ದರ್ಶನವನ್ನು ಇಲ್ಲಿ ಬೇಂದ್ರೆ ತೋರಿಸುತ್ತಿದ್ದಾರೆ. ಭೈರವನೂ ಸಹ ಭಯಂಕರನೇ. ಆದರೆ ರಾವಣನಂತೆ ವಿನಾಶಕನಲ್ಲ. ಮುಂಗಾರು ಮಳೆಗಾಳಿಯ ಎರಡೂ ರೂಪಗಳನ್ನು ಬೇಂದ್ರೆಯವರು ಈ ಎರಡು ಪ್ರತಿಮೆಗಳ ಮೂಲಕ ತೋರಿಸುತ್ತಿದ್ದಾರೆ.
(‘ರುದ್ರವಿಲಾಸದ ಪರಿಯೇ ಬೇರೆ / ಶಿವಕರುಣೆಯೆ ಹಿರಿದು’ ಎನ್ನುವ ಮತ್ತೊಂದು ಬೇಂದ್ರೆ-ಕವನದ ಸಾಲುಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು.)

ಎಂತಹ ಕಲ್ಪನಾವಿಲಾಸದಲ್ಲಿಯೂ ಸಹ ಬೇಂದ್ರೆಯವರ ಕವನಗಳು ಕ್ರಮಬದ್ಧತೆಯನ್ನು ಕಾಯ್ದುಕೊಳ್ಳುತ್ತವೆ ಎನ್ನುವದಕ್ಕೆ ನಿದರ್ಶನವಾಗಿ, ಈ ಸಾಲುಗಳನ್ನು ನೋಡಬಹುದು:
ಶ್ರಾವಣಾ ಬಂತು ಕಾಡಿಗೆ | ಬಂತು ನಾಡಿಗೆ
ಬಂತು ಬೀಡಿಗೆ | ಶ್ರಾವಣಾ ಬಂತು
ಮಳೆಗಾಳಿಯು ಕಡಲನ್ನು ದಾಟಿದ ಬಳಿಕ ಮೊದಲು ಪ್ರವೇಶಿಸುವುದು ಪಶ್ಚಿಮ ಘಟ್ಟದ ಕಾಡನ್ನೇ ತಾನೆ? ಅನಂತರ ಅದು ವಿಶಾಲವಾದ ಜನಬಳಕೆಯ ನಾಡನ್ನು ಹಾಗು ಜನರು ವಾಸಿಸುವ ಬೀಡನ್ನು ತಲಪುತ್ತದೆ!

ಮುಂದಿನ ನುಡಿಯಲ್ಲಿ ಅಂದರೆ ಒಂದನೆಯ ನುಡಿಯಲ್ಲಿ ಬೇಂದ್ರೆಯವರ ಬಾಲಮನೋಭಾವ ಕಡಿಮೆಯಾಗಿದೆ. ಆ ಸ್ಥಾನದಲ್ಲಿ ಪ್ರಬುದ್ಧ ಕವಿ ಮನೋಭಾವ ಕಾಣುತ್ತಿದೆ:
ಶ್ರಾವಣಾ ಬಂತು ಘಟ್ಟಕ್ಕ | ರಾಜ್ಯಪಟ್ಟಕ್ಕ
                   ಬಾನಮಟ್ಟಕ್ಕ
ಏರ್ಯಾವ ಮುಗಿಲು | ರವಿ ಕಾಣೆ ಹಾಡೆ ಹಗಲು |
ಶ್ರಾವಣಾ ಬಂತು ಹೊಳಿಗಳಿಗೆ | ಅದೇ ಶುಭಗಳಿಗೆ
                   ಹೊಳಿಗೆ ಮತ್ತೆ ಮಳಿಗೆ
ಆಗ್ಯೇದ ಲಗ್ನ | ಅದರಾಗ ಭೂಮಿ ಮಗ್ನ
ಘಟ್ಟಕ್ಕೆ ಢಿಕ್ಕಿ ಹೊಡೆಯುತ್ತಿದ್ದ ಶ್ರಾವಣದ ಮೋಡಗಳು ಈಗ ಇನ್ನಿಷ್ಟು ಅಂದರೆ ಆಕಾಶದೆತ್ತರಕ್ಕೆ ಏರಿವೆ. ( ಈ ವರ್ಣನೆ ಕಾಳಿದಾಸನ ‘ಮೇಘದೂತ’ವನ್ನು ನೆನಪಿಗೆ ತರುವದಲ್ಲವೆ?)  ಆಕಾಶದೆತ್ತರಕ್ಕೆ ಏರಿದ ಈ ಮೋಡಗಳು ತಮ್ಮ ಕೆಳಗಿನ ಭೂಮಿಯೆನ್ನೆಲ್ಲ ಕವಿದಿವೆ. ಇದನ್ನು ಕಂಡ ಸೂರ್ಯನು ಹಾಡುಹಗಲೆ ಕಾಣದಾಗಿದ್ದಾನೆ!
ಭೂಮಿಯ ಮೇಲೆ ಹರಡಿದ ಈ ಮೋಡಗಳು ಅಲ್ಲಿ ಹರಿಯುತ್ತಿರುವ ಪ್ರವಾಹಗಳಿಗೆ ಮಳೆಯನ್ನು ಸುರಿಯುತ್ತಿವೆ. ಮೋಡ ಹಾಗು ಹೊಳೆ ಒಂದಾಗುತ್ತಿರುವ ಈ ದೃಶ್ಯವು ಅವುಗಳ ಮಿಲನದಂತೆ ಕಾಣುತ್ತಿದೆ. (ಕನ್ನಡದಲ್ಲಿ ಲಗ್ನ ಎಂದರೆ ಮದುವೆ ಎನ್ನುವ ಅರ್ಥವೇನೋ ಇದೆ. ಆದರೆ ಲಗ್ನದ ನಿಜವಾದ ಅರ್ಥವು ‘ಹತ್ತಿಕೊಂಡಿರು’ (ಹಿಂದೀ लगना) ಎಂದಾಗುತ್ತದೆ. ಈ ಒಂದು ಶುಭಮುಹೂರ್ತದಲ್ಲಿ ಭೂಮಿ ಸಂತೋಷಭರಿತವಾಗಿದೆ.

ಹೊಳೆ, ಹಳ್ಳ, ಬಯಲು ಪ್ರದೇಶ ಇವೆಲ್ಲವನ್ನು ದಾಟಿದ ಮಳೆಗಾಳಿ ಈಗ ಜನವಸತಿಗಳಿಗೆ ಬರಬೇಕಲ್ಲವೆ?  ಇಲ್ಲಿ ಕವಿ ಕಾಣುವದೇನು?
ಶ್ರಾವಣಾ ಬಂತು ಊರಿಗೆ | ಕೇರಿ ಕೇರಿಗೆ
          ಹೊಡೆದ ಝೂರಿಗೆ
ಜೋಕಾಲಿ ಏರಿ | ಆಡರ್ಯಾವ ಮರಕ  ಹಾರಿ |
ಶ್ರಾವಣಾ ಬಂತು ಮನಿಮನಿಗೆ | ಕೂಡಿ ದನಿದನಿಗೆ
          ಮನದ ನನಿಕೊನಿಗೆ
ಒಡೆದಾವ ಹಾಡೂ | ರಸ ಉಕ್ಕತಾವ ನೋಡು ||
                             ಶ್ರಾವಣಾ ಬಂತು.
ಶ್ರಾವಣಮಾಸವು ಹಬ್ಬಗಳ ಮಾಸವೂ ಹೌದು. ಹಳ್ಳಿಗಳಲ್ಲಿ ಹುಡುಗ, ಹುಡುಗಿಯರು ಮರಕ್ಕೆ ಜೋಕಾಲಿ ಕಟ್ಟಿ ಜೋರುಜೋರಾಗಿ ‘ಝುರಿಕಿ’ (= taking swing) ಹಾಕುತ್ತ ಜೀಕುತ್ತಾರೆ. ಅದೇ ರೀತಿಯಲ್ಲಿ, ಈ ಮಳೆಗಾಳಿಯೂ ಸಹ ಜೋರಾಗಿ ಜೀಕುತ್ತ ಮರಗಳಿಗೆ ಅಡರುತ್ತದೆ ಅಂದರೆ ತೆಕ್ಕೆ ಹಾಯುತ್ತದೆ. ಹುಡುಗರು ಮಳೆಗಾಳಿ ಎನ್ನದೆ ಹೊರಗೆ ಆಡುತ್ತಿದ್ದರೆ, ಮನೆಯೊಳಗಿನ ಹಿರಿಯರು ಸಹ ಉತ್ಸಾಹದಲ್ಲಿ ಇರುತ್ತಾರೆ. ತಮ್ಮ ಊರಿಗೆ, ಹೊಲಗಳಿಗೆ ಮಳೆ ಬಂದ ಹುರುಪಿನಲ್ಲಿ ಅವರು ದನಿಗೆ ದನಿ ಕೂಡಿಸಿ ಉಲಿಯುತ್ತಿದ್ದಾರೆ. ಅವರ ಪ್ರಸನ್ನಗೊಂಡ ಮನಸ್ಸೆಂಬ ರೆಂಬೆಯ ಚೆಲುವಾದ ಕೊನೆಯಲ್ಲಿ (ಹೂವು ಅರಳುವಂತೆ) ಹಾಡು ಒಡೆದಿವೆ! ‘ಒಡೆದಿವೆ’ ಎನ್ನುವ ಕ್ರಿಯಾಪದವನ್ನು ಎಷ್ಟೆಲ್ಲ ಅರ್ಥಪೂರ್ಣವಾಗಿ ಬೇಂದ್ರೆ ಬಳಸುತ್ತಿದ್ದಾರೆ, ನೋಡಿ! ‘ರಸ ಉಕ್ಕತಾವ’ ಅಂದರೆ ಸಂತೋಷರಸ ಉಕ್ಕುತ್ತಿದೆ ಎಂದರ್ಥ. ರಸ ಅಂದರೆ ನೀರು, ದ್ರವ. ಮಳೆಯ ನೀರು ಈ ಹಳ್ಳಿಗರ ಹಾಡುಗಳಲ್ಲಿ ‘ಆನಂದದ್ರವ’ವನ್ನು ಉಕ್ಕಿಸುತ್ತದೆ. ಈ ಸಂತೋಷವು ಅಭಿವ್ಯಕ್ತವಾಗುವುದು ‘ಶ್ರಾವಣಾ ಬಂತು’ ಎಂದು ಕೊನೆಯಲ್ಲಿ ಬರುವ ಉದ್ಗಾರದಲ್ಲಿ!
( ‘ಮನದ ನನಿಕೊನಿಗೆ’ ಎನ್ನುವಾಗ ಬೇಂದ್ರೆಯವರು ‘ಮನದ ಮಾಮರದ ಕೊನಿಗೆ’ ಎನ್ನುವ ತಮ್ಮದೇ ಸಾಲನ್ನು ಹಾಗು ‘ಕೋಗಿಲೆ, ಚೆಲ್ವ ಕೋಗಿಲೆ’ ಎನ್ನುವ ನಿಜಗುಣಿ ಶಿವಯೋಗಿಗಳ ಕವನವನ್ನು ನೆನಪಿಸುತ್ತಾರೆ.) 

ಈ ಶ್ರಾವಣವು ನಿಸರ್ಗದಲ್ಲಿ ಮೂಡಿಸಿದ ಪರಿಣಾಮವೇನು? ಅದು ಮುಂದಿನ ನುಡಿಯಲ್ಲಿ  ವ್ಯಕ್ತವಾಗುತ್ತಿದೆ:
ಬೆಟ್ಟ ತೊಟ್ಟಾವ ಕುತನಿಯ ಅಂಗಿ
ಹಸಿರು ನೋಡ ತಂಗಿ
ಹೊರಟಾವೆಲ್ಲೊ ಜಂಗಿ
ಜಾತ್ರಿಗೇನೋ | ನೆರದsದ ಇಲ್ಲೆ ತಾನೋ ||
ಬನ ಬನ ನೋಡು ಈಗ ಹ್ಯಾಂಗ
ಮದುವಿ ಮಗನ್ಹಾಂಗ
ತಲಿಗೆ ಬಾಸಿಂಗ
ಕಟ್ಟಿಕೊಂಡು | ನಿಂತಾವ ಹರ್ಷಗೊಂಡು

ಕವಿಯ ನೋಟ ಇದೀಗ ಸುತ್ತಲಿನ ಪರಿಸರದ ಮೇಲೆ ವಿಶಾಲವಾಗಿ ಹರಿಯುತ್ತದೆ. ಅಲ್ಲಿ ಕಾಣುವುದೇನು? ಮಳೆಗಾಲದ ಮೊದಲಲ್ಲಿ ಸ್ವೇಚ್ಛೆಯಾಗಿ ಬೆಳೆದು, ಬೆಟ್ಟಗಳ ಮೇಲೆಲ್ಲ ವ್ಯಾಪಿಸಿದ ಹಸಿರು ಕಿರಿಹುಲ್ಲು. ಇದು ದೂರದಿಂದ ಕವಿಯ ಕಣ್ಣಿಗೆ ಕುತನಿಯ (=velvet) ಅಂಗಿಯನ್ನು ತೊಟ್ಟ ಪುಟ್ಟ ಮಕ್ಕಳ ಹಾಗೆ ಕಾಣುತ್ತದೆ. ಈ ಪುಟ್ಟ ಮಕ್ಕಳು ಕುತನಿಯ ಅಂಗಿಯನ್ನು ತೊಡುವುದು ಅಪರೂಪದ ಸಂದರ್ಭಗಳಲ್ಲಿ, ಅಂದರೆ ಹಬ್ಬಗಳಲ್ಲಿ ಜಾತ್ರೆಗೆ ಹೊರಡುವಾಗ. ಅವು ಹೊರಡುವುದು ತುಂಬ ಉತ್ಸಾಹದಿಂದ (ಜಂಗಿ ಎನ್ನುವುದು ಜಂಗ್ ಎನ್ನುವ ಹಿಂದೀ ಪದದಿಂದ ಬಂದಿದೆ. ಇದರ ಅರ್ಥ ಕಾಳಗ.) ಆ ಎಲ್ಲ ಬೆಟ್ಟಗಳು ನೆರೆದದ್ದು ಇಲ್ಲಿಯೇ: ಕವಿಯ ಸುತ್ತಲೂ! ಶ್ರಾವಣಮಾಸದ ಮೊದಲ ಹಬ್ಬ ನಾಗರಪಂಚಮಿ ತಾನೆ? ಈ ಹಬ್ಬವು ಹೆಣ್ಣುಮಕ್ಕಳ ಹಬ್ಬ. ಅಣ್ಣ-ತಂಗಿಯರು ಕೂಡಿ ನಲಿಯುವ ಹಬ್ಬ. ಆದುದರಿಂದಲೇ. ಕವಿಯು ‘ನೋಡ ತಂಗಿ’ ಎಂದು ತನ್ನ ಮುದ್ದು ತಂಗಿಗೆ ಹೇಳುತ್ತಿದ್ದಾನೆ.

ದೂರದ ಬೆಟ್ಟಗಳು ಪುಟ್ಟ ಮಕ್ಕಳಂತೆ ಕಂಡರೆ, ಹತ್ತಿರದ ಬನಗಳು ಕಾಣುವುದು ಹರೆಯದ ಮದುಮಕ್ಕಳ ಹಾಗೆ. ಬನದಲ್ಲಿರುವ ಮರಗಳ ಶಿರೋಭಾಗವು ಹೊಸ ತಳಿರುಗಳಿಂದ ಚಿಗುರಿ, ಕವಿಯ ಕಣ್ಣಿಗೆ ಮದುಮಗನು ಧರಿಸಿದ ಬಾಸಿಂಗದ ಹಾಗೆ ಕಾಣುತ್ತದೆ. ಮದುಮಕ್ಕಳಲ್ಲಿ ಉಕ್ಕುವ ಹರ್ಷವನ್ನು ಈ ಬನಗಳಲ್ಲಿಯೂ ಕಾಣಬಹುದು. ಈ ಹರ್ಷಕ್ಕೆ ಕಾರಣವೆಂದರೆ ಮತ್ತೆ ಮತ್ತೆ ಸೃಷ್ಟಿಸುವ ಅವಕಾಶ!

ಪುಟ್ಟ ಮಕ್ಕಳನ್ನು ಹಾಗು ಮದುಮಗನನ್ನು ಕಂಡ ಕವಿಯ ಕಣ್ಣು ಈಗ ಪ್ರಕೃತಿದೇವಿಯನ್ನು ನೋಡುತ್ತದೆ:
ಹಸಿರುಟ್ಟ ಬಸುರಿಯ ಹಾಂಗ
ನೆಲಾ ಹೊಲಾ ಹ್ಯಾಂಗ
ಅರಿಷಿಣ ಒಡೆಧ್ಹಾಂಗ
ಹೊಮ್ಮುತಾವ | ಬಂಗಾರ ಚಿಮ್ಮತಾವ |
ಪ್ರಕೃತಿಯು ಹಸಿರಿನಿಂದ ತುಂಬಿದೆ.  ಹಸಿರು ಎಲ್ಲೆಡೆಗೂ ಬೆಳೆದು ನಿಂತಿದೆ. ಭೂತಾಯಿ ಈಗ ಬಸಿರಾಗಿದ್ದಾಳೆ. ಬಸಿರು ಹೆಣ್ಣುಮಗಳು ಗಲ್ಲಗಳಿಗೆ ಅರಿಷಿಣ ಹಚ್ಚಿಕೊಳ್ಳುವಂತೆ, ನೆಲದ ಮೇಲೆ ಹರಡಿದ ಹಳದಿ ಕಿರುಸಸ್ಯಗಳು ಭೂತಾಯಿಯ ಚೆಲುವನ್ನು ಹೆಚ್ಚಿಸಿವೆ. ಬಂಗಾರ ಬಣ್ಣದ ಸಸ್ಯಗಳು ಭೂತಾಯಿಯ ಒಡವೆಗಳಂತೆ ಕಾಣುತ್ತವೆ ಎನ್ನುವುದು ಒಂದು ಅರ್ಥವಾದರೆ,  ಸೃಷ್ಟಿಯ ಬಸಿರಿನಿಂದ ಬಂಗಾರದಂತಹ ಫಲ ದೊರೆಯಲಿದೆ ಎನ್ನುವುದು ಮತ್ತೊಂದು ಅರ್ಥವಾಗುತ್ತದೆ.

ಮಳೆಯ ಅರ್ಭಟಕ್ಕೆ ಪುಟ್ಟ ಬಾಲಕನಂತೆ ಬೆರಗಾಗಿ ನಿಂತ ಕವಿ, ಪ್ರಬುದ್ಧ ಕವಿಯಾಗಿ ತನ್ನ ಸುತ್ತಲಿನ ಪ್ರಕೃತಿಯ ಚೆಲುವನ್ನು ಕಂಡು ಆನಂದಿಸಿದನು. ಇದೀಗ ಅವನು ಪ್ರಕೃತಿಯ ದೈವಿಕತೆಯನ್ನು ಅನುಭವಿಸುತ್ತಲಿದ್ದಾನೆ:
ಗುಡ್ಡ ಗುಡ್ಡ ಸ್ಥಾವರ ಲಿಂಗ
ಅವಕ ಅಭ್ಯಂಗ
ಎರಿತಾವನ್ನೊ ಹಾಂಗ
ಕೂಡ್ಯಾವ ಮೋಡ | ಸುತ್ತೆಲ್ಲ ನೋಡ ನೋಡ |
ಕುತನಿಯ ಅಂಗಿಯನ್ನು ತೊಟ್ಟ ಪುಟ್ಟ ಮಕ್ಕಳಂತೆ ಕಾಣುತ್ತಿದ್ದ ಬೆಟ್ಟಗಳು ಈಗ ಅವನಿಗೆ ಸ್ಥಾವರಲಿಂಗದಂತೆ ಕಾಣುತ್ತಿವೆ. ದೇವಾಲಯಗಳಲ್ಲಿ ಇರುವ ಲಿಂಗಕ್ಕೆ ಅಭಿಷೇಕವಾಗುವುದು ಪೂಜಾರಿಯು ಬಿಂದಿಗೆಯಲ್ಲಿ ತುಂಬಿ ತಂದ ಹೊಳೆಯ ಅಥವಾ ಬಾವಿಯ ನೀರಿನಿಂದ.  ಬಯಲಲ್ಲಿ ಸ್ಥಾವರಲಿಂಗಗಳಂತೆ ತಲೆ ಎತ್ತಿ ನಿಂತಿರುವ ಈ ಬೆಟ್ಟಗಳಿಗೆ ಅಭಿಷೇಕವಾಗುತ್ತಿರುವುದು ಮಳೆಯ ಸಹಜ ನೀರಿನಿಂದ. ಅಭಿಷೇಕಿಸುತ್ತಿರುವ ಭಕ್ತರು ಅಥವಾ ಪೂಜಾರಿಗಳೆಂದರೆ ಮೋಡಗಳು.  ಇದೊಂದು ಅದ್ಭುತ ಕಲ್ಪನೆ. ಈ ಕಲ್ಪನೆ ಲೌಕಿಕ ಕವಿಗೆ ಸಾಧ್ಯವಾಗದು. ಇದು ಹೊಳೆಯುವುದು ಧ್ಯಾನಸ್ಥನಾದ ಅವಧೂತನಿಗೆ ಮಾತ್ರ. ಈ ಸಾಲುಗಳು ಬೇಂದ್ರೆಯವರ ಮಾನಸದಲ್ಲಿ ಹೊಳೆದಾಗ ಅವರು ಅವಧೂತಪ್ರಜ್ಞೆಯಲ್ಲಿ ಇರಬೇಕು.
( ಅಭ್ಯಂಗಸ್ನಾನ ಮಾಡುವುದು ಯಜ್ಞಪೂರ್ವದಲ್ಲಿ. ಶ್ರಾವಣದ ಮಳೆ ದೈವಯಜ್ಞದಂತಿದೆ. ಈ ಹಿನ್ನೆಲೆಯಲ್ಲಿ ‘ಸಾಕ್ಷಿ’ (=ಆರ್.ಜಿ.ಕುಲಕರ್ಣಿ)ಯವರು ಹೇಳುವುದು ಹೀಗೆ: ‘ಪರ್ಜನ್ಯ ಒಂದು ಯಜ್ಞಕ್ರಮ.....ಅದು ಪುರುಷಾರ್ಥಪ್ರದಾಯಕವಾದದ್ದು...ಅದು ಕೇವಲ ಪ್ರಕೃತಿವಿಲಾಸವಲ್ಲ ಎನ್ನುವುದನ್ನು ಬೇಂದ್ರೆಯವರ ಕಾವ್ಯೋದ್ಯೋಗ ಕಂಡಿರಬೇಕು.)

(ಟಿಪ್ಪಣಿ : ‘ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ ’ ಎಂದು ಬಸವಣ್ಣನವರು ಸಾರಿದರು. ಬೇಂದ್ರೆ ಇಲ್ಲಿ ನಿಸರ್ಗವನ್ನೇ ದೇವಾಲಯವನ್ನಾಗಿ ಮಾಡಿ, ಬೆಟ್ಟಗಳನ್ನೇ ಲಿಂಗಗಳನ್ನಾಗಿ ಮಾಡಿ ಸ್ಥಾವರದ ವಿಭೂತಿಯನ್ನು ತೋರಿಸಿದ್ದಾರೆ.)

ಈ ಅವಧೂತಕವಿಗೆ ಮತ್ತೇನು ಕಾಣಿಸುತ್ತದೆ?
ನಾಡೆಲ್ಲ ಏರಿಯ ವಾರಿ
ಹರಿತಾವ ಝರಿ
ಹಾಲಿನ ತೊರಿ
ಈಗ ಯಾಕs | ನೆಲಕೆಲ್ಲ ಕುಡಿಸಲಾಕ ||
                   ಶ್ರಾವಣಾ ಬಂತು

ಈ ಪರ್ಜನ್ಯಯಜ್ಞದ ಫಲಶ್ರುತಿಯೇನು?
ಶ್ರಾವಣ ಮಾಸ ಬರುವುದು ಸೃಷ್ಟಿಗೆ ಪೋಷಣೆ ಕೊಡುವುದಕ್ಕಾಗಿ. ನಾಡಿನ ಏರಿಗಳು ಹಾಗು ಓರೆಗಳು (ವಾರಿಗೆ ಓರೆ ಎನ್ನುವ ಅರ್ಥವಿರುವಂತೆಯೇ ನೀರು ಎನ್ನುವ ಅರ್ಥವೂ ಇದೆ.) ನೀರಿನ ಝರಿಗಳಿಂದ ತುಂಬಿ ಹರಿಯುತ್ತವೆ. ಇದು ಬರಿ ನೀರಲ್ಲ, ಇದು ಹಾಲಿನ ತೊರಿ. ಈ ಹಾಲನ್ನು ಶ್ರಾವಣವು ನೆಲಕ್ಕೆ ಕುಡಿಸುತ್ತದೆ. ಭೂತಾಯಿಗೇ ಶ್ರಾವಣವು ತಾಯಿಯಾಗಿದೆ!

ಶ್ರಾವಣದ ಈ ಆಟ, ಸೃಷ್ಟಿಯ ಈ ಆಟ ನಮ್ಮ ಅವಧೂತ ಕವಿಗೆ ಕೊಡುವ ದರ್ಶನ ಏನಿರಬಹುದು?
ಜಗದ್ಗುರು ಹುಟ್ಟಿದ ಮಾಸ
ಕಟ್ಟಿ ನೂರು ವೇಷ
ಕೊಟ್ಟ ಸಂತೋಷ
ಕುಣಿತದ | ತಾನsನ ದಣಿತದ |
ಶ್ರಾವಣಾ ಬಂತು ಕಾಡಿಗೆ | ಬಂತು ನಾಡಿಗೆ
ಬಂತು ಬೀಡಿಗೆ | ಶ್ರಾವಣಾ ಬಂತು.       

ಶ್ರೀಕೃಷ್ಣ ಹಾಗು ಅರವಿಂದರು ಹುಟ್ಟಿದ್ದು ಶ್ರಾವಣ ಮಾಸದಲ್ಲಿ. ಇವರಿಬ್ಬರೂ ಜಗದ್ಗುರುಗಳು. ಇವರು ತಮ್ಮ ಲೀಲೆಗಾಗಿ ನೂರು ವೇಷ ಕಟ್ಟುತ್ತಾರೆ, ಕುಣಿಯುತ್ತಾರೆ, ಕುಣಿಕುಣಿದು ದಣಿಯುತ್ತಾರೆ. ಈ ಆಟವು ಅವರಿಗೂ ಸಂತೋಷವನ್ನು ಕೊಡುತ್ತದೆ, ನಮಗೂ ಸಂತೋಷವನ್ನು ಕೊಡುತ್ತದೆ. (ಪುರಂದರ ದಾಸರ ‘ಆಡ ಪೋಗೋಣು ಬಾರೊ ರಂಗಾ, ಕೂಡಿ ಯಮುನೆ ತೀರದಲ್ಲಿ’ ಎನ್ನುವ ಗೀತೆಯನ್ನು ನೆನಪಿಸಿಕೊಳ್ಳಿರಿ.) ಈ ಸೃಷ್ಟಿಯ ಚರಾಚರ ವಸ್ತುಗಳು, ಋತುಮಾನಗಳು ಎಲ್ಲವೂ ಆತನ ಆಟಿಕೆಗಳೇ!  ಎಲ್ಲವೂ ಆತನ  ಆನಂದಕ್ಕಾಗಿ! ಇದೇ ನಮ್ಮ ಅವಧೂತ ಕವಿ ಕಂಡ ಕಾಣ್ಕೆ.
(ಬೇಂದ್ರೆಯವರ ‘ಕುಣಿಯೋಣ ಬಾರಾ’ ಕವನದ ಕೊನೆಯ ಸಾಲುಗಳನ್ನು ನೆನಪಿಸಿಕೊಳ್ಳಿರಿ:
ಆ ಕ್ಷೀರಸಾಗರ / ದಾನಂದದಾಗರ / ತೆರಿ ತೆರಿ ತೆರದರ / ಕುಣಿಯೋಣ ಬಾ
ಹದಿನಾಲ್ಕು ಲೋಕಕ್ಕ / ಚಿಮ್ಮಲಿ ಈ ಸುಖ / ಹಿಗ್ಗಲಿ ಸಿರಿಮುಖ / ಕುಣಿಯೋಣ ಬಾ’)

ಬೇಂದ್ರೆಯವರು ಕವನದ ಮೊದಲಿನಿಂದ ಕೊನೆಯವರೆಗೆ ಮೂರು ಬಗೆಯ ಪ್ರಜ್ಞೆಗಳಲ್ಲಿ ಈ ಕವನವನ್ನು ರಚಿಸಿದ್ದಾರೆ:
(೧) ಬೆರಗಿನ ಬಾಲಭಾವ (೨) ಪ್ರಬುದ್ಧ ಕವಿಭಾವ (೩) ಅವಧೂತಭಾವ
ಕವನದ ನುಡಿಗಳೂ ಸಹ ಇದೇ ಕ್ರಮವನ್ನು ಅನುಸರಿಸಿವೆ.
ಈ ಮೂರು ಭಾವಗಳಲ್ಲಿಯ ಕಾಣ್ಕೆಗಳನ್ನು ಹೆಣೆದು ಬೇಂದ್ರೆಯವರು ರಸಸೃಷ್ಟಿಯನ್ನು ಮಾಡಿದ್ದಾರೆ. ಸಂಗೀತದ ನಾದವನ್ನು ಕವನದಲ್ಲಿ ಹೊಮ್ಮಿಸಿದ್ದಾರೆ. ಪ್ರಕೃತಿಯ ಹಿಗ್ಗನ್ನು ತಾವು ಅನುಭವಿಸುತ್ತ, ನಮಗೂ ಉದಾರವಾಗಿ ಹಂಚಿದ್ದಾರೆ.

(ಟಿಪ್ಪಣಿ: ಸುಮಾರು ನೂರು ವರ್ಷಗಳ ಹಿಂದೆ ಧಾರವಾಡದಲ್ಲಿ ನೂರು ಸೆಂಟಿಮೀಟರ ವಾರ್ಷಿಕ ಮಳೆಯಾದ ದಾಖಲೆ ಇದೆ. ಇದೀಗ ೫೦-೬೦ ಸೆಂಟಿಮೀಟರ ಮಳೆಯಾದರೆ, ಅದನ್ನೇ ಅತಿವೃಷ್ಟಿ ಎನ್ನುವ ಕಾಲ ಬಂದಿದೆ. ಆ ಕಾಲದ ಮಳೆಯನ್ನು ಅನುಭವಿಸಿದ, ಧಾರವಾಡದ ಜಾನಪದ ಕವಿಯೊಬ್ಬ ಹಾಡಿದ್ದು ಹೀಗೆ:
ಧಾರವಾಡದ ಮ್ಯಾಗ
ಏರಿ ಬಂದಾವ ಮೋಡ
ದೊರಿಯ ನೋಡಪ್ಪ, ಕಮಕಾಳ ಕಟ್ಟೀ ಮ್ಯಾಲ
ಭೋರ್ಯಾಡತಾನ ಮಳಿರಾಯ !)
(‘ಶ್ರಾವಣಾ’ ಕವನವು ‘ಕಾಮಕಸ್ತೂರಿ’ ಕವನಸಂಕಲನದಲ್ಲಿದೆ.)