Wednesday, March 27, 2013

ತರವಲ್ಲ ತಗಿ ನಿನ್ನ ತಂಬೂರಿ................ಶಿಶುನಾಳ ಶರೀಫರು



ತರವಲ್ಲ ತಗಿ ನಿನ್ನ ತಂಬೂರಿ
ಸ್ವರ ಬರದೆ ಬಾರಿಸದಿರು ತಂಬೂರಿ    ||ಪಲ್ಲ||

ಸರಸ ಸಂಗೀತದ ಕುರುಹುಗಳನರಿಯದೆ
ಬರಿದೆ ಬಾರಿಸದಿರು ತಂಬೂರಿ     ||ಅನುಪಲ್ಲ||

ಮದ್ದಲಿ ದನಿಯೊಳು ತಂಬೂರಿ ಅದ
ತಿದ್ದಿ ನುಡಿಸಬೇಕು ತಂಬೂರಿ
ಸಿದ್ಧ ಸಾಧಕರ ಸುವಿದ್ಯೆಗೆ ಒದಗುವ
ಬುದ್ಧಿವಂತಗೆ ತಕ್ಕ ತಂಬೂರಿ                ||೧||

ಬಾಳ ಬಲ್ಲವಗೆ ತಂಬೂರಿ ದೇವ
ಭಾಳಾಕ್ಷ ರಚಿಸಿದ ತಂಬೂರಿ
ಹೇಳಲಿ ಏನಿದರ ಹಂಚಿಕೆ ಅರಿಯದ
ತಾಳಗೇಡಿಗೆ ಸಲ್ಲ ತಂಬೂರಿ                 ||೨||

ಸತ್ಯಶರಧಿಯೊಳು ತಂಬೂರಿ
ಉತ್ತಮರಾಡುವ ತಂಬೂರಿ
ಬತ್ತೀಸರಾಗದಿ ಬಗೆಯನರಿಯದಂಥ
ಕತ್ತೀಗಿನ್ಯಾತಕ ತಂಬೂರಿ                      ||೩||

ಅಸಮ ಸುಮ್ಯಾಳಕ ತಂಬೂರಿ
ಕುಶಲರಿಗೊಪ್ಪುವ ತಂಬೂರಿ
ಶಿಶುನಾಳಧೀಶನ ಓದು ಪುರಾಣದಿ
ಹಸನಾಗಿ ಬಾರಿಸು ತಂಬೂರಿ                  ||೪||

ಶಿಶುನಾಳ ಶರೀಫರನ್ನು ನಾವು ಲೋಕಶಿಕ್ಷಕರು ಎಂದು ಕರೆಯಬಹುದು. ತಮ್ಮ ಗೀತೆಗಳ ಮೂಲಕ ಶರೀಫರು ಲೌಕಿಕರಿಗೆ ಸಾಮಾಜಿಕ ನೀತಿಯನ್ನು ಹಾಗು ಸಾಧಕರಿಗೆ ಆಧ್ಯಾತ್ಮಿಕ ನೀತಿಯನ್ನು ಬೋಧಿಸಿದ್ದಾರೆ. ಶರೀಫರ ಅನೇಕ ಕವನಗಳು ಒಂದು ಲೌಕಿಕ ವಸ್ತುವಿನ ವರ್ಣನೆಯಿಂದ ಪ್ರಾರಂಭವಾಗಿ, ಅಲೌಕಿಕ ವಸ್ತುವಿನ ವರ್ಣನೆಯತ್ತ ಹೊರಳುತ್ತವೆ. ‘ತರವಲ್ಲ ತಗಿ ನಿನ್ನ ತಂಬೂರಿ’ ಗೀತೆಯಲ್ಲಿಯೂ ಇದೇ ಪದ್ಧತಿಯನ್ನು ಕಾಣಬಹುದು.

ತಂಬೂರಿ ಇಲ್ಲಿ ಲೌಕಿಕ ಜೀವನದ ಸಂಕೇತವಾಗಿರುವಂತೆಯೇ, ಆಧ್ಯಾತ್ಮಿಕ ಸಾಧನೆಯ ಸಂಕೇತವೂ ಆಗಿದೆ. ಈ ಎರಡೂ ಸಂಕೇತಗಳನ್ನು ಶರೀಫರು ಅಕ್ಕಪಕ್ಕದಲ್ಲಿ ಇಟ್ಟುಕೊಂಡೇ ಈ ಗೀತೆಯನ್ನು ರಚಿಸಿದ್ದಾರೆ.  ಸಮಾಜದಲ್ಲಿ ಶಾಂತಿ ನೆಲೆಸಿರಬೇಕು ಎನ್ನುವದಾದರೆ, ಸಮಾಜದ ವಿವಿಧ, ವಿಭಿನ್ನ ಜನರಲ್ಲಿ ಸಾಮರಸ್ಯ ಹಾಗು ಪ್ರೀತಿ ಇರಬೇಕು. ಆವಾಗಲೇ ಸಮಾಜ ಎನ್ನುವ ತಂಬೂರಿಯಿಂದ ಸುಸ್ವರ ಹೊರಡುತ್ತದೆ. ಇಂತಹ ಸರಸ ಸಂಗೀತದ ಕುರುಹುಗಳನ್ನು ಅರಿಯದ, ಸಮಾಜಘಾತಕ ವ್ಯಕ್ತಿಗಳು ಸಮಾಜದಲ್ಲಿ ಅಶಾಂತಿ ಹಬ್ಬುವಂತಹ ಅಪಸ್ವರಗಳನ್ನು ಹೊರಡಿಸುತ್ತಾರೆ. ಇಂತಹವರಿಗೆ ಶರೀಫರು ಎಚ್ಚರಿಕೆ ನೀಡುತ್ತಾರೆ:
ಸ್ವರ ಬರದೆ ಬಾರಿಸದಿರು ತಂಬೂರಿ !
ಇಂತಹ ಅವಿವೇಕಿ ವ್ಯಕ್ತಿಗಳು ‘ಬಾಳಲು ಬಲ್ಲವರಲ್ಲ; ಇವರು ತಾಳಗೇಡಿಗಳು’!

ಇನ್ನು ಈ ಗೀತೆಯು ಅಧ್ಯಾತ್ಮಸಾಧಕರಿಗೂ ಸಹ ಎಚ್ಚರಿಕೆಯ ದನಿಯಾಗಿದೆ. ಸ್ಥೂಲಶರೀರ, ಸೂಕ್ಷ್ಮಶರೀರ ಹಾಗು ಕಾರಣಶರೀರ ಎನ್ನುವ ಮೂರು ಶರೀರಗಳೊಂದಿಗೆ ಮನಸ್ಸನ್ನು ಬೆಸೆದಿರುವ ವ್ಯಕ್ತಿತ್ವವು ಒಂದು ತಂಬೂರಿಯಿದ್ದಂತೆ. ಸ್ಥೂಲದೇಹದ ಬೇಡಿಕೆಗಳಿಗೆ ದಾಸನಾಗಿರುವ ವ್ಯಕ್ತಿತ್ವವು ಪಶುಸಮಾನವಾದ ವ್ಯಕ್ತಿತ್ವವು. ಮಾನವನಾಗಿ ಹುಟ್ಟಿದ ಮೇಲೆ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡುವುದೇ ವಿವೇಕಿಗಳ ಲಕ್ಷಣ. ಅಂತೆಯೇ, ‘ಮಾನವಜನ್ಮ ಬಲು ದೊಡ್ಡದು, ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ’ ಎಂದು ದಾಸರು ಹಾಡಿದ್ದಾರೆ! ಭಕ್ತಿಯ ಮೂಲಕ ಸಾಧನೆ ಮಾಡುವುದು ಒಂದು ಮಾರ್ಗ. ಯೋಗಸಾಧನೆಯು ಮತ್ತೊಂದು ಮಾರ್ಗ.

ಶರೀಫರ ಅನೇಕ ಗೀತೆಗಳನ್ನು ಗಮನಿಸಿದಾಗ, ಅವರು ಯೋಗಮಾರ್ಗವನ್ನು ಅರಿತವರಾಗಿದ್ದರು ಎಂದು ಭಾಸವಾಗುವುದು. ಯೋಗಸಾಧಕರಿಗೆ ಸಹಜವಾಗಿಯೇ ಸಿದ್ಧಿಗಳು ಲಭಿಸುವವು. ಶರೀಫರ ಸಮಕಾಲೀನರಾದ ನವಲಗುಂದದ ನಾಗಲಿಂಗಸ್ವಾಮಿಗಳಿಗೆ, ಗರಗದ ಮಡಿವಾಳಪ್ಪನವರಿಗೆ ಇಂತಹ ಸಿದ್ಧಿಗಳು ದೊರೆತಿದ್ದವು. ಆದರೆ ಶರೀಫರಿಗೆ ಮಾತ್ರ ಯಾವ ಸಿದ್ಧಿಯೂ ಲಭ್ಯವಾಗಿರಲಿಲ್ಲ. ಆದುದರಿಂದಲೇ ಅವರು ‘ಎಲ್ಲರಂಥವನಲ್ಲ ನನ ಗಂಡ, ಎಲ್ಲಿಗೋಗಧಾಂಗ ಮಾಡಿಟ್ಟಾ, ಕಾಲ್ಮುರಿದು ಬಿಟ್ಟಾ’ ಎಂದು ಹಾಡಿದ್ದಾರೆ. ಯೋಗಸಾಧಕರು ಸಿದ್ಧಿಯ ಜಾಲದಲ್ಲಿ ಬೀಳಬಾರದು. ಈ ಸಿದ್ಧಿಗಳು ಅವರನ್ನು ಅಪಮಾರ್ಗಕ್ಕೆ ಎಳೆಯಬಹುದು. ಆದರೆ ಮನೋನಿಗ್ರಹದ ಮೂಲಕ ತಮ್ಮ ಮೂರೂ ಶರೀರಗಳ ಮೇಲೆ ನಿಯಂತ್ರಣ ಸಾಧಿಸಿ, ಯೋಗಾನಂದವನ್ನು ಪಡೆಯುವುದೆಂದರೆ ತಂಬೂರಿಯನ್ನು ಸರಸವಾಗಿ ಬಾರಿಸಿದಂತೆ. ಆದುದರಿಂದಲೇ ಶರೀಫರು ‘ಸರಸ ಸಂಗೀತದ ಕುರುಹುಗಳನರಿಯದೆ ಬರಿದೆ ಬಾರಿಸದಿರು ತಂಬೂರಿ’ ಎಂದು ಎಚ್ಚರಿಕೆ ನೀಡುತ್ತಾರೆ.    

ರಾಗವನ್ನು ಅರಿತವನು ಸುಸ್ವರವನ್ನು ಹೊರಡಿಸುತ್ತಾರೆ. ಅದರಂತೆ ತಾಳವನ್ನು ಅರಿತವರು ಲಯವನ್ನು ಸಾಧಿಸುತ್ತಾರೆ. ಸಮಾಜವು ಕಾಲದ ಜೊತೆಗೆ ಬದಲಾಗುತ್ತದೆ. ಬದಲಾದ ವ್ಯವಸ್ಥೆಯ ತಾಳಕ್ಕೆ ಹೊಂದಿಕೊಂಡಂತೆಯೇ, ಸಮಾಜದ ಸಾಮರಸ್ಯವು ಕೆಡದಂತೆ ತಂಬೂರಿಯಿಂದ ನಾದವನ್ನು ಹೊರಡಿಸಬೇಕು. ಇದು ಲೌಕಿಕರಿಗೆ ಕೊಡುವ ಸೂಚನೆಯಾದರೆ, ಶರೀಫರು ಸಾಧಕರಿಗೆ ಕೊಡುವ ಉಪದೇಶವೇನು?

ಯೋಗಸಾಧನೆಯ ಮೊದಲ ಹಂತದಲ್ಲಿ ಸಾಧಕನಿಗೆ ಅನಾಹತ ಚಕ್ರದಲ್ಲಿ ನಾದ ಕೇಳುವುದು. ಶರೀಫರು ಇದನ್ನು ಮದ್ದಲಿಯ ದನಿ ಎಂದು ಕರೆಯುತ್ತಾರೆ. ಈ ನಾದವನ್ನು ಅನುಸರಿಸಿ, ಸಾಧಕನು ತನ್ನ ‘ತಂಬೂರಿ’ಯನ್ನು ಅಂದರೆ ಯೋಗಶರೀರವನ್ನು ಸಿದ್ಧಿಯ ಕಡೆಗೆ ಒಯ್ಯಬೇಕು. ಅಂತಹ ಯೋಗಿಯು ಸಿದ್ಧ ಸಾಧಕನಾಗುವುನು. ‘ಸುವಿದ್ಯೆ’ ಎಂದರೆ ಯೋಗಿಯನ್ನು ಉನ್ನತಿಗೆ ಕರೆದೊಯ್ಯುವ ವಿದ್ಯೆ. ಅಲ್ಲದೇ ‘ಷೋಡಷೀ ವಿದ್ಯಾ’ ಎನ್ನುವ ಮಂತ್ರವಿದೆ. ಇದು ತಂತ್ರಮಾರ್ಗದ ಸಾಧಕರಿಗೆ ಗುರುಮುಖೇನ ಲಭ್ಯವಾಗುವ ಮಂತ್ರ. ಬಹುಶಃ ಗುರು ಗೋವಿಂದಭಟ್ಟರಿಂದ ಶರೀಫರಿಗೆ ಈ ಮಂತ್ರದ ಉಪದೇಶವಾಗಿರಬಹುದು.

‘ಬಾಳ ಬಲ್ಲವರಿಗೆ ತಂಬೂರಿ’ ಎನ್ನುವಾಗ ಶರೀಫರು ಮತ್ತೆ ಸಮಾಜಕಲ್ಯಾಣಿ ವ್ಯಕ್ತಿಯನ್ನು ಸೂಚಿಸುವಂತೆಯೇ, ಯೋಗಸಾಧಕನನ್ನೂ ಸೂಚಿಸುತ್ತಾರೆ. ಸ್ಥೂಲ, ಸೂಕ್ಷ್ಮ ಹಾಗು ಕಾರಣಶರೀರ ಎನ್ನುವ ಮೂರು ಶರೀರಗಳನ್ನು ಸೃಷ್ಟಿಸಿದವನೇ ಭಾಳಾಕ್ಷ. ಈ ಮೂರೂ ಶರೀರಗಳನ್ನು ನಿಯಂತ್ರಿಸುವ ಮನಸ್ಸನ್ನು ಸೃಷ್ಟಿಸಿದವನೂ ಅವನೇ. ಆದುದರಿಂದ ಈ ಸಂಕೀರ್ಣವು ಭಾಳಾಕ್ಷ ರಚಿಸಿದ ತಂಬೂರಿ. ಭಾಳಾಕ್ಷ ಎಂದರೆ ಹಣೆಗಣ್ಣ. ಯೋಗಸಾಧನೆಯ ಶಿಖರದಲ್ಲಿ ಇರುವವನಿಗೆ ಮಾತ್ರ ಈ ಹಣೆಗಣ್ಣು ಅಂದರೆ ಜ್ಞಾನಚಕ್ಷು ಲಭ್ಯವಾಗುತ್ತದೆ! ಇಂತಹ ‘ತಂಬೂರಿ’ಯ ಹಂಚಿಕೆ ಅಂದರೆ ವಿನ್ಯಾಸವು ‘ಬಾಳಬಲ್ಲವನಿಗೆ’ ಅಂದರೆ ಬದುಕಿನ ತಿಳಿವಳಿಕೆ ಇದ್ದವನಿಗೆ ಮಾತ್ರ ಅರ್ಥವಾಗುತ್ತದೆ. ‘ಬಾಳಬಲ್ಲವನಿಗೆ’ ಪದವನ್ನು ‘ಬಾಳ ಬಲ್ಲವನಿಗೆ’ ಎಂದು ಬಿಡಿಸಿ ಬರೆದಾಗ ಬಾಳ=ಭಾಳ=ಬಹಳ ಎನ್ನುವ ಅರ್ಥವು ಹೊರಡುವುದನ್ನು ಗಮನಿಸಿರಿ. ಇಂತಹ ತಂಬೂರಿಯು ತಾಳಗೇಡಿಗೆ, ಅವನು ಲೌಕಿಕನೇ ಇರಲಿ ಅಥವಾ ಸಾಧಕನೇ ಇರಲಿ ನಿಷ್ಪ್ರಯೋಜಕವಾಗುವುದು!


ಈ ‘ಸಾಧನಾ ತಂಬೂರಿ’ಯ ಬಗೆಗೆ ಶರಿಫರು ಇಷ್ಟೆಲ್ಲ ಹೇಳಿದರು. ಇದರಿಂದ ಸ್ವರ ಹೊರಡಿಸುವವರಿಗೆ ಇರಬೇಕಾದ ಗುಣಗಳನ್ನು ತಿಳಿಸಿದರು. ಇನ್ನೂ ಒಂದು ಎಚ್ಚರಿಕೆಯನ್ನು ಅವರು ಕೊಡುತ್ತಾರೆ. ಈ ತಂಬೂರಿಯು ‘ಸತ್ಯಶರಧಿ’ಯಲ್ಲಿ ಉತ್ತಮರು ಆಡುವ ತಂಬೂರಿ. ಉದಾಹರಣೆಗೆ ಲಂಕಾಧೀಶನಾದ ರಾವಣನನ್ನೇ ತೆಗೆದುಕೊಳ್ಳಿ. ಅವನು ತನ್ನ ನರಗಳನ್ನೇ ಕಿತ್ತು, ತಂಬೂರಿಯ ತಂತಿಗಳನ್ನಾಗಿ ಮಾಡಿ, ಹಾಡಿ ಶಿವನನ್ನು ಒಲಿಸಿಕೊಂಡ ಎಂದು ಹೇಳುತ್ತಾರೆ. ಆದರೆ ಅಸತ್ಯದ ಮಾರ್ಗದಲ್ಲಿ ಅವನು ಕಾಲಿಟ್ಟಾಗ, ಅವನ ‘ತಂಬೂರಿ’ಯು ಭ್ರಷ್ಟವಾಗಿ ಹೋಯಿತು. ಅವನ ರಾಜ್ಯವೂ ಹಾಳಾಗಿ ಹೋಯಿತು! ಆದುದರಿಂದ ಈ ತಂಬೂರಿಯನ್ನು ಬಳಸಿ, ಸುನಾದವನ್ನು ಹೊರಡಿಸುವವನು ಸತ್ಯಮಾರ್ಗಿಯಾಗಿರಬೇಕು.

ಕರ್ನಾಟಕ ಸಂಗೀತದಲ್ಲಿ ಇರುವ ಮೂಲರಾಗಗಳು ೩೨. ಈ ಬತ್ತೀಸ ರಾಗಗಳನ್ನು ಸುಸ್ವರದಲ್ಲಿ ಬಾರಿಸಲು ಅರಿಯದ ಸಾಧಕನು ಕತ್ತೆ ಇದ್ದಂತೆ. ಸಂಗೀತದ ರಾಗಗಳಂತೆ, ಜೀವನದ ರಾಗಗಳೂ ಭಿನ್ನವಾಗಿರುತ್ತವೆ. ‘ರಾಗ’ ಈ ಪದಕ್ಕೆ ಇಲ್ಲಿರುವ ಶ್ಲೇಷಾರ್ಥವನ್ನು ಗಮನಿಸಿರಿ. ಜೀವನದ ಸುಖಗಳು ಸೌಮ್ಯ ರಾಗಗಳಾದರೆ, ಕಷ್ಟಗಳು ರುದ್ರರಾಗಗಳಾಗಿರಬಹುದು. ಈ ವಿಭಿನ್ನ ರಾಗಗಳನ್ನು ಬಾರಿಸುವಾಗ, ಸಾಧಕನು ಸಮತೋಲನದ ಮನಃಸ್ಥಿತಿಯನ್ನು ಕಾಯ್ದುಕೊಳ್ಳಬೇಕು. ಗೀತೆಯಲ್ಲಿ ಶ್ರೀಕೃಷ್ಣನು ಹೇಳಿದಂತೆ, ‘ಸುಖದುಃಖೇ ಸಮಾಕೃತ್ವಾ, ಲಾಭಾಲಾಭೌ ಜಯಾಜಯೌ’ ಎನ್ನುವ ಸ್ಥಿತಪ್ರಜ್ಞತೆ ಬಂದಾಗಲೇ, ಭಾಳಾಕ್ಷ ನೀಡಿದ ತಂಬೂರಿಯನ್ನು ಬಾರಿಸಲು ಅರಿತುಕೊಂಡಂತೆ!
 
ಜೀವನದ ‘ಸುಮ್ಯಾಳಕ್ಕೆ’ ಅಂದರೆ ಸಮರಸದ ಹಿಮ್ಮೇಳಕ್ಕೆ, ಇಂತಹ ತಂಬೂರಿ ‘ಅಸಮ’ ಎಂದರೆ unequalled ಎಂದು ಶರೀಫರು ಹೇಳುತ್ತಾರೆ.  ಅದುದರಿಂದ ಇದು ‘ಕುಶಲ’ರ ಕೈಗಳಲ್ಲಿ ಮಾತ್ರ ಶೋಭಿಸುತ್ತದೆ. ಇಂತಹ ಕೌಶಲ್ಯ ಪಡೆಯಲು ಏನು ಮಾಡಬೇಕು ಎನ್ನುವ ಪ್ರಶ್ನೆಗೆ, ಶರೀಫರು ‘ಶಿಶುನಾಳಧೀಶನ ಓದು ಪುರಾಣದಿ’ ಎಂದು ಉತ್ತರಿಸುತ್ತಾರೆ. ಅರ್ಥಾತ್, ಯಾವಾಗಲೂ ದೇವರಲ್ಲಿ ಮನಸ್ಸನ್ನು ಇಡಬೇಕು. ‘ನಯನದಲ್ಲಿ ನಿಮ್ಮ ಮೂರುತಿ ತುಂಬಿ, ಶ್ರವಣದಲ್ಲಿ ನಿಮ್ಮ ಕೀರುತಿ ತುಂಬಿ’ ಎಂದು ಬಸವಣ್ಣನವರು ಹೇಳುವ ಮಾರ್ಗವಿದು. ಈ ಸಾಧನೆಯನ್ನು ಮಾಡಿದ ಬಳಿಕ, ತಂಬೂರಿಯನ್ನು ‘ಹಸನಾಗಿ ಬಾರಿಸಬೇಕು’ . ಅದರ ಸುಸ್ವರವು ಆಗ ಸಮಾಜಕ್ಕೇ ಆಗಲಿ, ಸಾಧಕನಿಗೇ ಆಗಲಿ ಶ್ರೇಯಸ್ಕರವಾಗುವುದು.

Wednesday, March 6, 2013

ಭಿನ್ನಭೇದವ ಮಾಡಬ್ಯಾಡಿರಿ................ಶಿಶುನಾಳ ಶರೀಫರು


ಮಾರ್ಚ ೭ ಇದು ಶಿಶುನಾಳ ಶರೀಫರ ಭಕ್ತರಿಗೆ ಹಾಗು ಕನ್ನಡ ಸಾಹಿತ್ಯಪ್ರೇಮಿಗಳಿಗೆ ಮಹತ್ವದ ದಿನಾಂಕ. ೧೮೧೯ ಮಾರ್ಚ ೭ರಂದು ಜನಿಸಿದ ಶಿಶುನಾಳ ಶರೀಫರು ಸರಿಯಾಗಿ ೭೦ ವರ್ಷಗಳಿಗೆ, ಅಂದರೆ ೧೮೮೯ ಮಾರ್ಚ ೭ರಂದು ದೇಹವಿಟ್ಟರು. ಶರೀಫರು ಅನೇಕ ಅನುಭಾವಗೀತೆಗಳನ್ನು ಹಾಗು ತತ್ವಪದಗಳನ್ನು ರಚಿಸಿದ್ದಾರೆ. ಅವರ ಒಂದು ಅಪರೂಪದ ಗೀತೆ, ಅಂದರೆ ಸಮಾಜವ್ಯವಸ್ಥೆಯನ್ನು ಟೀಕಿಸಿ ಅವರು ರಚಿಸಿದ ಒಂದು ಅಪೂರ್ವ ಗೀತೆ ನನಗೆ ಇತ್ತೀಚೆಗೆ ಲಭ್ಯವಾಯಿತು. ಶ್ರೀಮತಿ ಯಮುನಾ ಗಾಂವಕರ ಅವರು ಸಂಪಾದಿಸಿದ ‘ನಿಜದನಿ’ ಕವನಸಂಕಲನದಲ್ಲಿ ಶರೀಫರ ಈ ಪದವು ಅಡಕವಾಗಿದೆ. ಕವನದ ಪೂರ್ಣಪಾಠ ಹೀಗಿದೆ:

ಭಿನ್ನ ಭೇದವ ಮಾಡಬ್ಯಾಡಿರಿ

ಭಿನ್ನಭೇದವ ಮಾಡಬ್ಯಾಡಿರಿ,
ಇದರುನ್ನತತನವನು ಚೆನ್ನಾಗಿ ತಿಳಿಯಿರಿ.

ಅಯ್ಯಾ ಮನೆಮನೆ ತಿರುಗೋದು ಬೆಕ್ಕು
ಲಿಂಗಾಯತರ ಮನೆಯಲ್ಲಿ, ಹಾರುವರ ಮನೆಯಲ್ಲಿ,
ಕೊಮಟಿಗರ ಮನೆಯಲ್ಲಿ
ಹಾಲು ನೆಕ್ಕೋದು ಬೆಕ್ಕು ||

ಹೊಲೆಯರ ಮನೆಯಲ್ಲಿ, ಮಾದಿಗರ ಮನೆಯಲ್ಲಿ,
ಒಕ್ಕಲಿಗರ ಮನೆಯಲ್ಲಿ ಬಾಡು ತಿನ್ನೋದು ನೋಡು ಬೆಕ್ಕು;
ಇಂಥ ಸರ್ವಜಾತಿಯೊಳಗೆ ಸೇರಿಕೊಂಡಿರೋ ನಮ್ಮ ಆಚಾರವೆಲ್ಲ
ಮೈಲಾರಲಿಂಗ ಮೈಲಾರಲಿಂಗ ||

ಅಯ್ಯಾ ಉತ್ತರಿ ಮಳೆ ಬಂದು ಸುತ್ತಿ ಸುತ್ತಿ ಹೊಡೆವಾಗ
ನೆತ್ತಿ ಮ್ಯಾಗಳ ನೀರು ಗಂಟಲಿಗಿಳಿಯಿತಲ್ಲೊ;
ಅಯ್ಯಾ ಚರವೆಲ್ಲ ಸ್ಥಿತವಲ್ಲ, ನರಜನ್ಮ ಸ್ಥಿರವಲ್ಲ,
ಆಡಿಕೊಳ್ಳಬ್ಯಾಡಿ ಬಡವರ ಬದುಕ ಕತ್ತಲ ಬೆಳದಿಂಗಳೊಳಗ ||

ಅಯ್ಯಾ ಹಸಿದವನು ಹೊಲೆಯ, ಸುಸ್ತಾದವನು ಚಾಂಡಾಲ,
ಅಯ್ಯಾ ಬಾಯಲ್ಲಿ ಬೆಲ್ಲ, ಎದೆಯಲ್ಲಿ ಕತ್ತರಿ;
ಇಂಥ ಜಾತಿಗಳ ಸಹವಾಸ ಮಾಡಲು ಬ್ಯಾಡಿ ಮೈಲಾರಲಿಂಗ ||

ಇದೊಂದು ಅದ್ಭುತವಾದ ಪದ. ಶರೀಫರ ಇತರ ಪದಗಳಿಗೆ ಹೋಲಿಸಿದಾಗ ಇದರ ರಚನೆ ಭಿನ್ನವಾಗಿ ತೋರುತ್ತದೆ. ಶರೀಫರ ಅನುಭಾವ ಹಾಗು ತತ್ವಗೀತೆಗಳಿಗಿಂತ ಭಿನ್ನವಾಗಿ ಇರುವ ಈ ಗೀತೆಯಲ್ಲಿ ಸಮಾಜವ್ಯವಸ್ಥೆಯ ಬಗೆಗಿನ ವ್ಯಥೆ ಎದ್ದು ಕಾಣುತ್ತದೆ. ಆದರೆ ಶರೀಫರ ಅನೇಕ ಪದಗಳಂತೆ ಇಲ್ಲಿಯೂ ಸಹ ಅವರು ಒಂದು ಭೌತಿಕ ವಸ್ತುವಿನ ಹೋಲಿಕೆಯಿಂದ ಗೀತೆಯನ್ನು ಪ್ರಾರಂಭಿಸುತ್ತ ಅರ್ಥವಿಸ್ತಾರವನ್ನು ಮಾಡುತ್ತ ಹೋಗುತ್ತಾರೆ.

ಬೆಕ್ಕಿಗೆ ಜಾತಿಯಿಲ್ಲ! ಸಸ್ಯಾಹಾರಿಗಳ ಮನೆಯಲ್ಲಿ ಹಾಲು ನೆಕ್ಕುವ ಬೆಕ್ಕು, ಮಾಂಸಾಹಾರಿಗಳ ಮನೆಯಲ್ಲಿ ಬಾಡನ್ನು ತಿನ್ನುತ್ತದೆ. ವಿವಿಧ ಜಾತಿಗಳಲ್ಲಿರುವ ಈ ಆಚಾರಗಳಿಗೆ ಮೂಲಕಾರಣನು ಆ ಮೈಲಾರಲಿಂಗ ದೇವನೇ ಅಲ್ಲವೆ?! ಮರಣದ ಸಮಯ ಬಂದಾಗ ಜಾತಿ ಎನ್ನುವುದು ಉಳಿಯುತ್ತದೆಯೆ? ಹೀಗಿರುವಾಗ ನಮ್ಮ ಆಚಾರ ದೊಡ್ಡದು, ನಮ್ಮ ವಿಚಾರ ದೊಡ್ಡದು(!), ನಾವು ದೊಡ್ಡ ಜಾತಿಯವರು ಎನ್ನುವುದರಲ್ಲಿ ಏನಾದರೂ ಅರ್ಥವಿದೆಯೆ? ಮರಣದ ಸಂಕೇತವಾಗಿರಬಹುದಾದ ಬೆಕ್ಕಿಗೆ ಸಣ್ಣವರು, ದೊಡ್ಡವರು ಎನ್ನುವ ಭೇದವೇ ಇಲ್ಲವಲ್ಲ!

ಉತ್ತರಾ ನಕ್ಷತ್ರದಲ್ಲಿ ಬರುವ ಮಳೆಯು ಅಗಸ್ಟ ಕೊನೆಗೆ ಬರುವ ಸಂಭವವಿರುತ್ತದೆ. ಹೀಗಾಗಿ ಇದು ಜಡಿಮಳೆಯು. ಈ ಮಳೆಯಲ್ಲಿ ಸಿಕ್ಕಿಬಿದ್ದ ಮನುಷ್ಯನ ತಲೆಯೆಲ್ಲ ತೊಯ್ದು, ನೀರು ಗಂಟಲಿಗಿಳಿಯುತ್ತದೆ. ಇದೇ ರೀತಿಯಲ್ಲಿ ಮನುಷ್ಯನ ಬದುಕಿನ ಕೊನೆಯು ಯಾವಾಗಲೂ ಅನಿಶ್ಚಿತವೇ! ನಿಸರ್ಗದ ಈ ಪ್ರಹಾರಕ್ಕೆ ಜಾತಿ, ವರ್ಗ ಎನ್ನುವುದಿದೆಯೆ? ಹೀಗಿರುವಾಗ ಬಡವರ ಬದುಕನ್ನು  ಹೀಯಾಳಿಸುವದು ಅನರ್ಥಕಾರಿಯಲ್ಲವೆ? ‘ಆಡಿಕೊಳ್ಳಬ್ಯಾಡಿ ಬಡವರ ಬದುಕ ಕತ್ತಲ ಬೆಳದಿಂಗಳೊಳಗ’ ಎನ್ನುವಾಗ, ಶರೀಫರು ಅನುಭವಿಸುವ ವ್ಯಥೆಯು ಪರಿಣಾಮಕಾರಿಯಾಗಿ ಇಲ್ಲಿ ವ್ಯಕ್ತವಾಗುತ್ತಿದೆ.  ‘ಬಡವರು’ ಎನ್ನುವಾಗ ಶರೀಫರು ಮತ್ತೊಂದು ಅರ್ಥವನ್ನು ಇಲ್ಲಿ ಹುದುಗಿಸಿದ್ದಾರೆ. ಭಾರತದಲ್ಲಿ ಜಾತಿ ಮತ್ತು ವರ್ಗ ಇವು ಒಂದನ್ನೊಂದು ಹೆಣೆದುಕೊಂಡಿವೆ. ಬಡವರೆಂದರೆ ಆರ್ಥಿಕವಾಗಿ ಕೆಳವರ್ಗದವರಷ್ಟೇ ಅಲ್ಲ, ಸಾಮಾಜಿಕವಾಗಿಯೂ ಕೆಳವರ್ಗದವರು.

ಈ ಗೀತೆಯ ಮೊದಲನೆಯ ನುಡಿಯಲ್ಲಿ ಬರುವ ಜಾತಿಗಳು ಸಹಸಾ ಆರ್ಥಿಕವಾಗಿ ಹಾಗು ಸಾಮಾಜಿಕವಾಗಿ ಮೇಲ್ವರ್ಗಕ್ಕೆ ಸೇರಿಕೊಂಡಿರುವಂತಹವು. ಎರಡನೆಯ ನುಡಿಯಲ್ಲಿರುವ ಜಾತಿಗಳು ಸಹಸಾ ಕೆಳವರ್ಗಕ್ಕೆ ಸೇರಿದಂತಹವು. ಆದುದರಿಂದ ಬಡವರನ್ನು ಹೀಯಾಳಿಸಬೇಡಿರಿ ಎಂದು ಹೇಳುವಾಗ, ಶರೀಫರು ಜಾತಿ ಹಾಗು ವರ್ಗ ಎರಡನ್ನೂ ಸೂಚಿಸುತ್ತಾರೆ. ಜಾತಿ ಹಾಗು ವರ್ಗ ಇವುಗಳ ಅನ್ಯೋನ್ಯತೆಯನ್ನು ಆಧುನಿಕ ಭಾರತದಲ್ಲಿ ಪ್ರತಿಪಾದಿಸಿದವರಲ್ಲಿ ರಾಮಮನೋಹರ ಲೋಹಿಯಾ ಮುಖ್ಯರು. ಅವರಿಗಿಂತ ಒಂದು ಶತಮಾನದಷ್ಟು ಮೊದಲೇ, ಶರೀಫರು ಈ ಮಾತನ್ನು ತಮ್ಮ ಗೀತೆಯಲ್ಲಿ ಸೂಚಿಸಿದ್ದಾರೆ!

ಆಧುನಿಕ ಸಮತಾವಾದಿಗಳಂತೆ ಶರೀಫರು ಸಾಮಾಜಿಕ ಕ್ರಾಂತಿಯನ್ನು ಉಪದೇಶಿಸುತ್ತಿಲ್ಲ. ಆದರೆ ಮಾನವೀಯತೆಯನ್ನು ಬೋಧಿಸುತ್ತಿದ್ದಾರೆ. ಸಮಾಜವ್ಯವಸ್ಥೆಯು ಉಳ್ಳವರಿಗೆ ಬೆಳದಿಂಗಳಾದಾಗ, ಇಲ್ಲದವರಿಗೆ ಕತ್ತಲೆಯ ಕೂಪವಾಗಿದೆ. ಆದುದರಿಂದ ಆ ವರ್ಗದವರನ್ನು ಹಳಿಯುವುದು ಸಣ್ಣತನ ಎನ್ನುವುದು ಶರೀಫರ ಅಭಿಪ್ರಾಯವಾಗಿದೆ.

ಜಾತಿ ಹಾಗು ವರ್ಗದ ಏಕತೆಯನ್ನು ಮತ್ತೆ ಮುಂದುವರಿಸುತ್ತ, ಶರೀಫರು ‘ಹಸಿದವನೆ ಹೊಲೆಯ, ಸುಸ್ತಾದವನೆ ಚಾಂಡಾಲ’ ಎನ್ನುತ್ತಾರೆ. ‘ಹೊಲಸು ತಿನ್ನುವವನೆ ಹೊಲೆಯ’ ಎನ್ನುವ ಬಸವಣ್ಣನವರ ವಚನಕ್ಕಿಂತ ಇದು ಭಿನ್ನವಾಗಿರುವುದನ್ನು ಗಮನಿಸಬೇಕು. ಬಸವಣ್ಣನವರು ನೀತಿಯ ನೆಲೆಗಟ್ಟಿನಲ್ಲಿ ಈ ಮಾತನ್ನು ಹೇಳಿದ್ದರೆ, ಶರೀಫರು ಸಮಾಜವ್ಯವಸ್ಥೆಯ ಆಧಾರದ ಮೇಲೆ, ತಮ್ಮ ಅನುಭವಸಾರವನ್ನು ಉಸರುತ್ತಿದ್ದಾರೆ. ಈ ಪ್ರಸಂಗದಲ್ಲಿ ಯುರೋಪಿನ ಆಧುನಿಕ ಸಮತಾವಾದಿ ಮಾರ್ಕ್ಸನ ವಿಚಾರಗಳು ಶರೀಫರ ವಿಚಾರಗಳಿಗೆ ಹೋಲುತ್ತಿವೆ ಎನ್ನಬಹುದು. 

ಕೆಳವರ್ಗದವರ ಇಂತಹ ಸ್ಥಿತಿಗೆ ಕಾರಣರಾದ ಮೇಲ್ವರ್ಗದ ತತ್ವವಾದಗಳನ್ನು ಶರೀಫರು ‘ಬಾಯಲ್ಲಿ ಬೆಲ್ಲ, ಎದೆಯಲ್ಲಿ ಕತ್ತರಿ’ ಎಂದು ಗುರುತಿಸುತ್ತಾರೆ! ಇಂತಹ ಜಾತಿಗಳ ಸಹವಾಸವನ್ನು ಬಿಟ್ಟುಬಿಡುವುದೇ ಹಿತಕರ ಎಂದು ಶರೀಫರು ಉದ್ಗರಿಸುವುದು ಅವರ ವ್ಯಥೆಯ ಆಳವನ್ನು ತೋರಿಸುತ್ತದೆ.

ಗೀತೆಯ ಮೊದಲಲ್ಲಿ ಬರುವ,
ಭಿನ್ನಭೇದವ ಮಾಡಬ್ಯಾಡಿರಿ,
ಇದರುನ್ನತತನವನು ಚೆನ್ನಾಗಿ ತಿಳಿಯಿರಿ. ಎನ್ನುವ ಪಲ್ಲವು ಮನುಷ್ಯರಲ್ಲಿರುವ ಭೇದಬುದ್ಧಿಯು ಹೀನಕರವಾಗಿದೆ, ಹಾಗು ‘ಎಲ್ಲರೂ ಒಂದೇ’ ಎನ್ನುವ ವಿಚಾರವೇ ಉನ್ನತವಿಚಾರವು ಎಂದು ತಿಳಿಹೇಳುತ್ತದೆ.

ಶರೀಫರ ಈ ಗೀತೆಯಲ್ಲಿಯ ನುಡಿಗಟ್ಟುಗಳು ಆಧುನಿಕ ಕವನಗಳ ನುಡಿಗಟ್ಟುಗಳನ್ನು ಹೋಲುತ್ತವೆ. ಗೀತೆಯ ದೇಹವು ಆಧುನಿಕ ಕವನಗಳ ದೇಹವಾಗಿದೆ. ಆದರೆ ಒಳಗಿನ ಆತ್ಮ ಮಾತ್ರ ಶರೀಫರದೇ.