Wednesday, March 6, 2013

ಭಿನ್ನಭೇದವ ಮಾಡಬ್ಯಾಡಿರಿ................ಶಿಶುನಾಳ ಶರೀಫರು


ಮಾರ್ಚ ೭ ಇದು ಶಿಶುನಾಳ ಶರೀಫರ ಭಕ್ತರಿಗೆ ಹಾಗು ಕನ್ನಡ ಸಾಹಿತ್ಯಪ್ರೇಮಿಗಳಿಗೆ ಮಹತ್ವದ ದಿನಾಂಕ. ೧೮೧೯ ಮಾರ್ಚ ೭ರಂದು ಜನಿಸಿದ ಶಿಶುನಾಳ ಶರೀಫರು ಸರಿಯಾಗಿ ೭೦ ವರ್ಷಗಳಿಗೆ, ಅಂದರೆ ೧೮೮೯ ಮಾರ್ಚ ೭ರಂದು ದೇಹವಿಟ್ಟರು. ಶರೀಫರು ಅನೇಕ ಅನುಭಾವಗೀತೆಗಳನ್ನು ಹಾಗು ತತ್ವಪದಗಳನ್ನು ರಚಿಸಿದ್ದಾರೆ. ಅವರ ಒಂದು ಅಪರೂಪದ ಗೀತೆ, ಅಂದರೆ ಸಮಾಜವ್ಯವಸ್ಥೆಯನ್ನು ಟೀಕಿಸಿ ಅವರು ರಚಿಸಿದ ಒಂದು ಅಪೂರ್ವ ಗೀತೆ ನನಗೆ ಇತ್ತೀಚೆಗೆ ಲಭ್ಯವಾಯಿತು. ಶ್ರೀಮತಿ ಯಮುನಾ ಗಾಂವಕರ ಅವರು ಸಂಪಾದಿಸಿದ ‘ನಿಜದನಿ’ ಕವನಸಂಕಲನದಲ್ಲಿ ಶರೀಫರ ಈ ಪದವು ಅಡಕವಾಗಿದೆ. ಕವನದ ಪೂರ್ಣಪಾಠ ಹೀಗಿದೆ:

ಭಿನ್ನ ಭೇದವ ಮಾಡಬ್ಯಾಡಿರಿ

ಭಿನ್ನಭೇದವ ಮಾಡಬ್ಯಾಡಿರಿ,
ಇದರುನ್ನತತನವನು ಚೆನ್ನಾಗಿ ತಿಳಿಯಿರಿ.

ಅಯ್ಯಾ ಮನೆಮನೆ ತಿರುಗೋದು ಬೆಕ್ಕು
ಲಿಂಗಾಯತರ ಮನೆಯಲ್ಲಿ, ಹಾರುವರ ಮನೆಯಲ್ಲಿ,
ಕೊಮಟಿಗರ ಮನೆಯಲ್ಲಿ
ಹಾಲು ನೆಕ್ಕೋದು ಬೆಕ್ಕು ||

ಹೊಲೆಯರ ಮನೆಯಲ್ಲಿ, ಮಾದಿಗರ ಮನೆಯಲ್ಲಿ,
ಒಕ್ಕಲಿಗರ ಮನೆಯಲ್ಲಿ ಬಾಡು ತಿನ್ನೋದು ನೋಡು ಬೆಕ್ಕು;
ಇಂಥ ಸರ್ವಜಾತಿಯೊಳಗೆ ಸೇರಿಕೊಂಡಿರೋ ನಮ್ಮ ಆಚಾರವೆಲ್ಲ
ಮೈಲಾರಲಿಂಗ ಮೈಲಾರಲಿಂಗ ||

ಅಯ್ಯಾ ಉತ್ತರಿ ಮಳೆ ಬಂದು ಸುತ್ತಿ ಸುತ್ತಿ ಹೊಡೆವಾಗ
ನೆತ್ತಿ ಮ್ಯಾಗಳ ನೀರು ಗಂಟಲಿಗಿಳಿಯಿತಲ್ಲೊ;
ಅಯ್ಯಾ ಚರವೆಲ್ಲ ಸ್ಥಿತವಲ್ಲ, ನರಜನ್ಮ ಸ್ಥಿರವಲ್ಲ,
ಆಡಿಕೊಳ್ಳಬ್ಯಾಡಿ ಬಡವರ ಬದುಕ ಕತ್ತಲ ಬೆಳದಿಂಗಳೊಳಗ ||

ಅಯ್ಯಾ ಹಸಿದವನು ಹೊಲೆಯ, ಸುಸ್ತಾದವನು ಚಾಂಡಾಲ,
ಅಯ್ಯಾ ಬಾಯಲ್ಲಿ ಬೆಲ್ಲ, ಎದೆಯಲ್ಲಿ ಕತ್ತರಿ;
ಇಂಥ ಜಾತಿಗಳ ಸಹವಾಸ ಮಾಡಲು ಬ್ಯಾಡಿ ಮೈಲಾರಲಿಂಗ ||

ಇದೊಂದು ಅದ್ಭುತವಾದ ಪದ. ಶರೀಫರ ಇತರ ಪದಗಳಿಗೆ ಹೋಲಿಸಿದಾಗ ಇದರ ರಚನೆ ಭಿನ್ನವಾಗಿ ತೋರುತ್ತದೆ. ಶರೀಫರ ಅನುಭಾವ ಹಾಗು ತತ್ವಗೀತೆಗಳಿಗಿಂತ ಭಿನ್ನವಾಗಿ ಇರುವ ಈ ಗೀತೆಯಲ್ಲಿ ಸಮಾಜವ್ಯವಸ್ಥೆಯ ಬಗೆಗಿನ ವ್ಯಥೆ ಎದ್ದು ಕಾಣುತ್ತದೆ. ಆದರೆ ಶರೀಫರ ಅನೇಕ ಪದಗಳಂತೆ ಇಲ್ಲಿಯೂ ಸಹ ಅವರು ಒಂದು ಭೌತಿಕ ವಸ್ತುವಿನ ಹೋಲಿಕೆಯಿಂದ ಗೀತೆಯನ್ನು ಪ್ರಾರಂಭಿಸುತ್ತ ಅರ್ಥವಿಸ್ತಾರವನ್ನು ಮಾಡುತ್ತ ಹೋಗುತ್ತಾರೆ.

ಬೆಕ್ಕಿಗೆ ಜಾತಿಯಿಲ್ಲ! ಸಸ್ಯಾಹಾರಿಗಳ ಮನೆಯಲ್ಲಿ ಹಾಲು ನೆಕ್ಕುವ ಬೆಕ್ಕು, ಮಾಂಸಾಹಾರಿಗಳ ಮನೆಯಲ್ಲಿ ಬಾಡನ್ನು ತಿನ್ನುತ್ತದೆ. ವಿವಿಧ ಜಾತಿಗಳಲ್ಲಿರುವ ಈ ಆಚಾರಗಳಿಗೆ ಮೂಲಕಾರಣನು ಆ ಮೈಲಾರಲಿಂಗ ದೇವನೇ ಅಲ್ಲವೆ?! ಮರಣದ ಸಮಯ ಬಂದಾಗ ಜಾತಿ ಎನ್ನುವುದು ಉಳಿಯುತ್ತದೆಯೆ? ಹೀಗಿರುವಾಗ ನಮ್ಮ ಆಚಾರ ದೊಡ್ಡದು, ನಮ್ಮ ವಿಚಾರ ದೊಡ್ಡದು(!), ನಾವು ದೊಡ್ಡ ಜಾತಿಯವರು ಎನ್ನುವುದರಲ್ಲಿ ಏನಾದರೂ ಅರ್ಥವಿದೆಯೆ? ಮರಣದ ಸಂಕೇತವಾಗಿರಬಹುದಾದ ಬೆಕ್ಕಿಗೆ ಸಣ್ಣವರು, ದೊಡ್ಡವರು ಎನ್ನುವ ಭೇದವೇ ಇಲ್ಲವಲ್ಲ!

ಉತ್ತರಾ ನಕ್ಷತ್ರದಲ್ಲಿ ಬರುವ ಮಳೆಯು ಅಗಸ್ಟ ಕೊನೆಗೆ ಬರುವ ಸಂಭವವಿರುತ್ತದೆ. ಹೀಗಾಗಿ ಇದು ಜಡಿಮಳೆಯು. ಈ ಮಳೆಯಲ್ಲಿ ಸಿಕ್ಕಿಬಿದ್ದ ಮನುಷ್ಯನ ತಲೆಯೆಲ್ಲ ತೊಯ್ದು, ನೀರು ಗಂಟಲಿಗಿಳಿಯುತ್ತದೆ. ಇದೇ ರೀತಿಯಲ್ಲಿ ಮನುಷ್ಯನ ಬದುಕಿನ ಕೊನೆಯು ಯಾವಾಗಲೂ ಅನಿಶ್ಚಿತವೇ! ನಿಸರ್ಗದ ಈ ಪ್ರಹಾರಕ್ಕೆ ಜಾತಿ, ವರ್ಗ ಎನ್ನುವುದಿದೆಯೆ? ಹೀಗಿರುವಾಗ ಬಡವರ ಬದುಕನ್ನು  ಹೀಯಾಳಿಸುವದು ಅನರ್ಥಕಾರಿಯಲ್ಲವೆ? ‘ಆಡಿಕೊಳ್ಳಬ್ಯಾಡಿ ಬಡವರ ಬದುಕ ಕತ್ತಲ ಬೆಳದಿಂಗಳೊಳಗ’ ಎನ್ನುವಾಗ, ಶರೀಫರು ಅನುಭವಿಸುವ ವ್ಯಥೆಯು ಪರಿಣಾಮಕಾರಿಯಾಗಿ ಇಲ್ಲಿ ವ್ಯಕ್ತವಾಗುತ್ತಿದೆ.  ‘ಬಡವರು’ ಎನ್ನುವಾಗ ಶರೀಫರು ಮತ್ತೊಂದು ಅರ್ಥವನ್ನು ಇಲ್ಲಿ ಹುದುಗಿಸಿದ್ದಾರೆ. ಭಾರತದಲ್ಲಿ ಜಾತಿ ಮತ್ತು ವರ್ಗ ಇವು ಒಂದನ್ನೊಂದು ಹೆಣೆದುಕೊಂಡಿವೆ. ಬಡವರೆಂದರೆ ಆರ್ಥಿಕವಾಗಿ ಕೆಳವರ್ಗದವರಷ್ಟೇ ಅಲ್ಲ, ಸಾಮಾಜಿಕವಾಗಿಯೂ ಕೆಳವರ್ಗದವರು.

ಈ ಗೀತೆಯ ಮೊದಲನೆಯ ನುಡಿಯಲ್ಲಿ ಬರುವ ಜಾತಿಗಳು ಸಹಸಾ ಆರ್ಥಿಕವಾಗಿ ಹಾಗು ಸಾಮಾಜಿಕವಾಗಿ ಮೇಲ್ವರ್ಗಕ್ಕೆ ಸೇರಿಕೊಂಡಿರುವಂತಹವು. ಎರಡನೆಯ ನುಡಿಯಲ್ಲಿರುವ ಜಾತಿಗಳು ಸಹಸಾ ಕೆಳವರ್ಗಕ್ಕೆ ಸೇರಿದಂತಹವು. ಆದುದರಿಂದ ಬಡವರನ್ನು ಹೀಯಾಳಿಸಬೇಡಿರಿ ಎಂದು ಹೇಳುವಾಗ, ಶರೀಫರು ಜಾತಿ ಹಾಗು ವರ್ಗ ಎರಡನ್ನೂ ಸೂಚಿಸುತ್ತಾರೆ. ಜಾತಿ ಹಾಗು ವರ್ಗ ಇವುಗಳ ಅನ್ಯೋನ್ಯತೆಯನ್ನು ಆಧುನಿಕ ಭಾರತದಲ್ಲಿ ಪ್ರತಿಪಾದಿಸಿದವರಲ್ಲಿ ರಾಮಮನೋಹರ ಲೋಹಿಯಾ ಮುಖ್ಯರು. ಅವರಿಗಿಂತ ಒಂದು ಶತಮಾನದಷ್ಟು ಮೊದಲೇ, ಶರೀಫರು ಈ ಮಾತನ್ನು ತಮ್ಮ ಗೀತೆಯಲ್ಲಿ ಸೂಚಿಸಿದ್ದಾರೆ!

ಆಧುನಿಕ ಸಮತಾವಾದಿಗಳಂತೆ ಶರೀಫರು ಸಾಮಾಜಿಕ ಕ್ರಾಂತಿಯನ್ನು ಉಪದೇಶಿಸುತ್ತಿಲ್ಲ. ಆದರೆ ಮಾನವೀಯತೆಯನ್ನು ಬೋಧಿಸುತ್ತಿದ್ದಾರೆ. ಸಮಾಜವ್ಯವಸ್ಥೆಯು ಉಳ್ಳವರಿಗೆ ಬೆಳದಿಂಗಳಾದಾಗ, ಇಲ್ಲದವರಿಗೆ ಕತ್ತಲೆಯ ಕೂಪವಾಗಿದೆ. ಆದುದರಿಂದ ಆ ವರ್ಗದವರನ್ನು ಹಳಿಯುವುದು ಸಣ್ಣತನ ಎನ್ನುವುದು ಶರೀಫರ ಅಭಿಪ್ರಾಯವಾಗಿದೆ.

ಜಾತಿ ಹಾಗು ವರ್ಗದ ಏಕತೆಯನ್ನು ಮತ್ತೆ ಮುಂದುವರಿಸುತ್ತ, ಶರೀಫರು ‘ಹಸಿದವನೆ ಹೊಲೆಯ, ಸುಸ್ತಾದವನೆ ಚಾಂಡಾಲ’ ಎನ್ನುತ್ತಾರೆ. ‘ಹೊಲಸು ತಿನ್ನುವವನೆ ಹೊಲೆಯ’ ಎನ್ನುವ ಬಸವಣ್ಣನವರ ವಚನಕ್ಕಿಂತ ಇದು ಭಿನ್ನವಾಗಿರುವುದನ್ನು ಗಮನಿಸಬೇಕು. ಬಸವಣ್ಣನವರು ನೀತಿಯ ನೆಲೆಗಟ್ಟಿನಲ್ಲಿ ಈ ಮಾತನ್ನು ಹೇಳಿದ್ದರೆ, ಶರೀಫರು ಸಮಾಜವ್ಯವಸ್ಥೆಯ ಆಧಾರದ ಮೇಲೆ, ತಮ್ಮ ಅನುಭವಸಾರವನ್ನು ಉಸರುತ್ತಿದ್ದಾರೆ. ಈ ಪ್ರಸಂಗದಲ್ಲಿ ಯುರೋಪಿನ ಆಧುನಿಕ ಸಮತಾವಾದಿ ಮಾರ್ಕ್ಸನ ವಿಚಾರಗಳು ಶರೀಫರ ವಿಚಾರಗಳಿಗೆ ಹೋಲುತ್ತಿವೆ ಎನ್ನಬಹುದು. 

ಕೆಳವರ್ಗದವರ ಇಂತಹ ಸ್ಥಿತಿಗೆ ಕಾರಣರಾದ ಮೇಲ್ವರ್ಗದ ತತ್ವವಾದಗಳನ್ನು ಶರೀಫರು ‘ಬಾಯಲ್ಲಿ ಬೆಲ್ಲ, ಎದೆಯಲ್ಲಿ ಕತ್ತರಿ’ ಎಂದು ಗುರುತಿಸುತ್ತಾರೆ! ಇಂತಹ ಜಾತಿಗಳ ಸಹವಾಸವನ್ನು ಬಿಟ್ಟುಬಿಡುವುದೇ ಹಿತಕರ ಎಂದು ಶರೀಫರು ಉದ್ಗರಿಸುವುದು ಅವರ ವ್ಯಥೆಯ ಆಳವನ್ನು ತೋರಿಸುತ್ತದೆ.

ಗೀತೆಯ ಮೊದಲಲ್ಲಿ ಬರುವ,
ಭಿನ್ನಭೇದವ ಮಾಡಬ್ಯಾಡಿರಿ,
ಇದರುನ್ನತತನವನು ಚೆನ್ನಾಗಿ ತಿಳಿಯಿರಿ. ಎನ್ನುವ ಪಲ್ಲವು ಮನುಷ್ಯರಲ್ಲಿರುವ ಭೇದಬುದ್ಧಿಯು ಹೀನಕರವಾಗಿದೆ, ಹಾಗು ‘ಎಲ್ಲರೂ ಒಂದೇ’ ಎನ್ನುವ ವಿಚಾರವೇ ಉನ್ನತವಿಚಾರವು ಎಂದು ತಿಳಿಹೇಳುತ್ತದೆ.

ಶರೀಫರ ಈ ಗೀತೆಯಲ್ಲಿಯ ನುಡಿಗಟ್ಟುಗಳು ಆಧುನಿಕ ಕವನಗಳ ನುಡಿಗಟ್ಟುಗಳನ್ನು ಹೋಲುತ್ತವೆ. ಗೀತೆಯ ದೇಹವು ಆಧುನಿಕ ಕವನಗಳ ದೇಹವಾಗಿದೆ. ಆದರೆ ಒಳಗಿನ ಆತ್ಮ ಮಾತ್ರ ಶರೀಫರದೇ.

18 comments:

Ashok Shettar (ಅಶೋಕ ಶೆಟ್ಟರ್) said...

"ಅಯ್ಯಾ ಹಸಿದವನು ಹೊಲೆಯ, ಸುಸ್ತಾದವನು ಚಾಂಡಾಲ,
ಅಯ್ಯಾ ಬಾಯಲ್ಲಿ ಬೆಲ್ಲ, ಎದೆಯಲ್ಲಿ ಕತ್ತರಿ;
ಇಂಥ ಜಾತಿಗಳ ಸಹವಾಸ ಮಾಡಲು ಬ್ಯಾಡಿ"
ಇಲ್ಲಿ ಕೊನೆಯ ಸಾಲನ್ನು ನಾನು ಜಾತಿಗಳಾದ ಹೊಲೆಯ ಚಾಂಡಾಲಗಳಿಗೆ ಅನ್ವಯಿಸಿ ಗಲಿಬಿಲಿಗೊಂಡಿದ್ದೆ. ಅದು ಅಂಥ ಜಾತಿಗಳ ಇರುವಿಕೆಯ ಸ್ಥಿತಿಗೆ ಕಾರಣವಾದ "ಬಾಯಲ್ಲಿ ಬೆಲ್ಲ,ಎದೆಯಲ್ಲಿ ಕತ್ತರಿ" ಭಾವನೆ/ವರ್ತನೆಯ ಮೇಲ್ಜಾತಿಗಳಿಗೆ ಅನ್ವಯಿಸಬಹುದೆಂದು ತೋಚಿರಲಿಲ್ಲ. ನಿಮ್ಮ ನಿರೂಪಣೆ ಸರಿ ಎನ್ನಿಸುತ್ತದೆ.

Srikanth Manjunath said...

ಶರೀಫ ಸಾಹೇಬರ ಈ ಗೀತೆ ನಿಜಕ್ಕೂ ಭಿನ್ನವಿದೆ. ಸಮಾಜದಲ್ಲಿ ನಡೆಯುವ ಪ್ರತಿ ಘಟನೆ, ನೀತಿ, ಪದ್ಧತಿಯನ್ನು ವಿಶಿಷ್ಟವಾಗಿ ಹೇಳುವ ಅವರ ರೀತಿಯೇ ಸೊಗಸು. ಜಾತಿ ಮತ್ತು ಬಡತನ ಇವು ಒಂದೊಕ್ಕೊಂದು ಪೂರಕವಾಗಿರುವ ಪದಗಳು. ಈ ಗೀತೆಯ ವಿಶ್ಲೇಷಣೆ ಸೊಗಸಾಗಿದೆ.
{ಈ ಸಂದರ್ಭದಲ್ಲಿ ಸನಾದಿ ಅಪ್ಪಣ್ಣ ಚಿತ್ರದ ಒಂದು ಸನ್ನಿವೇಶ ನೆನಪಿಗೆ ಬಂತು (ಸನಾದಿ ಊದುವ ಅಪ್ಪಣ್ಣನ ಜಾತಿಗೆ ಸೇರಿದ್ದ ಸಿರಿವಂತರೊಬ್ಬರಿಗೆ ಮನೆ ಹಾಕುವ ಊರಿನ ಪ್ರಮುಖರು ಕೊಡುವ ಕಾರಣ ನೀವೆಲ್ಲಿ ಅವನೆಲ್ಲಿ. ನೀವು ಸಿರಿವಂತರು!)}

sunaath said...

ಶೆಟ್ಟರೆ,
ಮೇಲ್ಜಾತಿ/ಮೇಲ್ವರ್ಗದವರು ನೀಡುವ ನೀತಿಪಾಠಗಳು ಕೊಳಚೆಪ್ರದೇಶಗಳಲ್ಲಿ ವಾಸಿಸುವರಿಗೆ ಕತ್ತರಿ ಇಟ್ಟಂತೆಯೇ ಸರಿ.
ಬೇಂದ್ರೆಯವರು ಬರೆದ ‘ಕರಿಮರಿ ನಾಯಿ’ ಕವನದಲ್ಲಿಯ ‘ಬೆಚ್ಚನೆ ಮನೆಯಾ ಹೊಚ್ಚಲದೊಳಗೆ
ಭಟ್ಟರು ನಿಂತರು ಹಣಕುತ ಹೊರಗೆ’
ಸಾಲುಗಳನ್ನು ನೆನಪಿಸಿಕೊಳ್ಳಬಹುದು!

sunaath said...

ಶ್ರೀಕಾಂತರೆ,
‘ಸನಾದಿ ಅಪ್ಪಣ್ಣ’ ಚಲನಚಿತ್ರದ ಈ ಪ್ರಸಂಗ ನಿಜವಾಗಿಯೂ ಉದ್ಬೋಧಕವಾಗಿದೆ!

Swarna said...

ಕಾಕಾ , ನೀವು ಹೇಳಿದಂತೆ ಈ ರಚನೆ ಭಿನ್ನವಾಗಿದೆ .
ಇದರಲ್ಲಿ ಗುರುಗೋವಿಂದರ ಅಥವಾ ಶಿಶುನಾಳಧೀಶನ ಹೆಸರೂ ಇಲ್ಲ.ಉತ್ತರೆ ಮಳೆಯ ಹೋಲಿಕೆ ಇಷ್ಟವಾಯಿತು .
ನಿಮ್ಮ ನಿರೂಪಣೆಯಲ್ಲಿ ಈ ತತ್ವ ಮತ್ತು ಪದ ನಮ್ಮೊಳಕ್ಕೂ ಇಳಿಯಲಿ,ವಂದನೆಗಳು

ಮನಮುಕ್ತಾ said...

ಶರೀಫರ ಕೆಲವು ಗೀತೆಗಳನ್ನು ಕೇಳಿದ್ದೆ.. ಈ ಕವನದ ಬಗ್ಗೆ ತಿಳಿದಿರಲಿಲ್ಲ..ಒಳ್ಳೆಯ ನಿರೂಪಣೆ ನೀಡಿದ್ದೀರಿ ಕಾಕ. ವ೦ದನೆಗಳು.

sunaath said...

ಸ್ವರ್ಣಾ,
ನೀವು ಹೇಳಿದಂತೆ ಇದರಲ್ಲಿ ಶರೀಫರ ಅಂಕಿತವಿಲ್ಲ. ಆದರೆ ಮೈಲಾರಲಿಂಗ ಎನ್ನುವ ಸಂಬೋಧನೆ ಇದೆ. ಅಲ್ಲದೆ ಕವನವಿಷಯ ಮತ್ತು ರಚನೆ ಅವರ ಇತರ ಕವನಗಳಿಗಿಂತ ಭಿನ್ನವೆನಿಸುತ್ತದೆ. ಆದರೂ ಸಹ ಇದು ಅವರ ಹೆಸರಿನಲ್ಲಿಯೆ ‘ನಿಜದನಿ’ಯಲ್ಲಿ ಅಡಕವಾಗಿದೆ.

sunaath said...

ಮನಮುಕ್ತಾ,
ನನಗೂ ಸಹ ಈ ಗೀತೆ ಹೊಸದೇ!

Badarinath Palavalli said...

ಸಾರ್,ಹಿಂದೊಮ್ಮೆ ದಾಸ ಸಾಹಿತ್ಯ ಮತ್ತು ಶರೀಫರ ತತ್ವ ಪದಗಳು ಇಂದಿನ ಆಧುನಿಕ ಸಾಹಿತ್ಯಕ್ಕೆ ತೀರಾ ಹತ್ತಿರವಾಗಿ ಯಾಕಿವೆ ಎಂದು ತಿಳಿಯಲು ನಿಮಗೆ ಫೋನ್ ಮಾಡಿದ್ದೆ. ಅಂದು ನೀವು ನನಗೆ ಬಹಳಷ್ಟು ಗ್ರಾಂಥಿಕ ಮತ್ತು ಆಡು ಭಾಷೆಯ ಸಂಗತಿಗಳನ್ನು ತಿಳಿಸಿ ಕಣ್ಣು ತೆರೆಸಿದಿರಿ. ಅದರ ಮುಂದುವರೆದ ಪಾಠವೇ ಇಲ್ಲಿ ನೀವು ನಮಗಾಗಿ ಎಟ್ಟಿಕೊಟ್ಟಿರುವ ಈ ತತ್ವಪದ.

ಶರೀಫರ ಅಗಾಧ ಜೀವನ ಪ್ರೀತಿ ಮತ್ತು ಸಮಾಜ ಸಮಾನತಾ ಆಶಯದ ಕಿರು ಪರಿಕಾಯದಂತಿದೆ ಈ ಕೃತಿ. ಇಲ್ಲಿಯವರೆಗೂ ಈ ತತ್ವ ಪದ ನನಗೆ ಓದಿಗೆ ಸಿಕ್ಕಿರಲಿಲ್ಲ ಈಗ ಸಂಗ್ರಹಿಸಿ ಇಟ್ಟುಕೊಳ್ಳುತ್ತೇನೆ. ಧನ್ಯವಾದಗಳು.

umesh desai said...

ಕಾಕಾ ಶರೀಫಜ್ಜನ ಭಿನ್ನ ಪದ ಅದರ ಅರ್ಥ ಹೇಳುವ, ತಿಳಿಸುವ ನಿಮ್ಮ ವಿಶ್ಲೇಷಣಾ
ಎರಡೂ ಸೇರಿದ್ವು...

ಗಿರೀಶ್.ಎಸ್ said...

ಶರೀಫ಼ರ ಈ ರಚನೆಯನ್ನು ಕೇಳಿರಲಿಲ್ಲ. ಒಳ್ಳೆಯ ವಿಶ್ಲೇಷಣೆ ಯೊಂದಿಗೆ ಅರ್ಥಗರ್ಭಿತವಾಗಿ ವಿವರಿಸಿದ್ದೀರಿ ಸರ್ ..

sunaath said...

ಬದರಿನಾಥರೆ,
ಶರೀಫರ ಜೀವನಪ್ರೀತಿಯನ್ನು ಸರಿಯಾಗಿ ಗುರುತಿಸಿದ್ದೀರಿ. ತಮ್ಮ ಅನೇಕ ಪದಗಳಲ್ಲಿ ಅವರು ಹಸನಾದ ಬದುಕಿನ ನೀತಿಯನ್ನು ವಿವರಿಸಿದ್ದಾರೆ.

sunaath said...

ದೇಸಾಯರ,
ಧನ್ಯವಾದಗಳು.

sunaath said...

ಗಿರೀಶ,
ಧನ್ಯವಾದಗಳು.

balasubramanya said...

ಶಿಶುನಾಳ ಶರೀಫರ ಒಂದು ಅಪರೂಪದ ತತ್ವ ಪದದ ದರ್ಶನ ಮಾಡಿಸಿದ ನಿಮಗೆ ನನ್ನ ನಮನಗಳು. ಬಹಳ ಅರ್ಥ ಗರ್ಭಿತ ಪಧ್ಯ ಇದು. ಸರ್ವ ಜಾತಿಗಳಿಗೂ ಈ ಭೂಮಿಯಲ್ಲಿ ಜೀವಿಸುವ ಹಕ್ಕು ಇದೆ. ಎಂಬ ಸತ್ಯವ ಸಾರುವ ರಚನೆ ಇದು. ಯಾವುದೇ ಜೀವಿ ಸತ್ತಾಗ ಪ್ರಕೃತಿ ಸತ್ತ ಜೀವಿಯ ಜಾತಿಕೇಳದೆ ತನ್ನ ಒಡಲ ಆಸರೆ ನೀಡುತ್ತದೆ.ಹಾಗೆಯೇ ನಿಜವಾದ ಮಾನವ ಧರ್ಮವೂ ಕೂಡ ಪ್ರತಿಯೊಂದು ಜೀವಿಗೂ ಕೂಡ ಜ್ಞಾನದ ಬೆಳಕ ನೀಡಿ ಉದ್ದಾರ ಮಾಡುತ್ತದೆ. ಬಹಳ ಒಳ್ಳೆಯ ಲೇಖನ ಬರೆದ ನಿಮಗೆ ನನ್ನ ನಮಸ್ಕಾರಗಳು. ದೇಸಾಯಿ ಸಾರ್.

sunaath said...

ಬಾಲು,
ಶರೀಫರದು ಮಾನವಧರ್ಮ. ಸಮಾಜದ ಓರೆಕೋರೆಗಳನ್ನು ತಿದ್ದುವದರಲ್ಲಿ ಶರೀಫರ ಪದಗಳು ಹಾಗು ಸರ್ವಜ್ಞನ ವಚನಗಳು ಸಾಕಷ್ಟು ಕಾಣಿಕೆ ನೀಡಿವೆ.
ಈ ಪದವನ್ನು ನಾನು ನೋಡಿದ್ದು ಶ್ರೀಮತಿ ಯಮುನಾ ಗಾಂವಕರ ಅವರು ಸಂಪಾದಿಸಿದ ‘ನಿಜದನಿ’ ಕವನಸಂಕಲನದಲ್ಲಿ. ಪದವನ್ನು ನನಗೆ ತೋರಿಸಿದವರು ಶ್ರೀ ವ್ಯಾಸ ದೇಶಪಾಂಡೆಯವರು. ಇವರೀರ್ವರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ.

ಸಂಧ್ಯಾ ಶ್ರೀಧರ್ ಭಟ್ said...

ಪ್ರಾಥಮಿಕ ಶಾಲೆಯಲ್ಲಿ ಪದ್ಯ ಕಲಿಸಿ ಹೀಗೆಯೇ ಅರ್ಥ ಹೇಳುತ್ತಿದ್ದರು. ಹಾಗೆಯೇ ಪ್ರೀತಿಯಿಂದ ತಿಳಿಸಿಕೊಟ್ಟಿದ್ದೀರಾ ಕಾಕ.
ಸಾಮಾಜಿಕ ಅಸಮಾನತೆಯ ಬಗೆಗೆ ತುಂಬಾ ಸುಂದರವಾಗಿ ಹೇಳಿದ್ದಾರೆ ಶರೀಫರು. ಬರೀ ಪದ್ಯವನ್ನಷ್ಟೇ ಅಲ್ಲದೆ ಅದರ ಭಾವಾರ್ಥವನ್ನು ಚಂದವಾಗಿ ವಿವರಿಸಿದ್ದೀರಾ.

ಧನ್ಯವಾದಗಳು ,

ಪ್ರೀತಿಯಿಂದ ,
ಸಂಧ್ಯಾ ಶ್ರೀಧರ್ ಭಟ್

sunaath said...

ಸಂಧ್ಯಾ,
ನಿಮಗೆ ಧನ್ಯವಾದಗಳು.