Wednesday, March 27, 2013

ತರವಲ್ಲ ತಗಿ ನಿನ್ನ ತಂಬೂರಿ................ಶಿಶುನಾಳ ಶರೀಫರುತರವಲ್ಲ ತಗಿ ನಿನ್ನ ತಂಬೂರಿ
ಸ್ವರ ಬರದೆ ಬಾರಿಸದಿರು ತಂಬೂರಿ    ||ಪಲ್ಲ||

ಸರಸ ಸಂಗೀತದ ಕುರುಹುಗಳನರಿಯದೆ
ಬರಿದೆ ಬಾರಿಸದಿರು ತಂಬೂರಿ     ||ಅನುಪಲ್ಲ||

ಮದ್ದಲಿ ದನಿಯೊಳು ತಂಬೂರಿ ಅದ
ತಿದ್ದಿ ನುಡಿಸಬೇಕು ತಂಬೂರಿ
ಸಿದ್ಧ ಸಾಧಕರ ಸುವಿದ್ಯೆಗೆ ಒದಗುವ
ಬುದ್ಧಿವಂತಗೆ ತಕ್ಕ ತಂಬೂರಿ                ||೧||

ಬಾಳ ಬಲ್ಲವಗೆ ತಂಬೂರಿ ದೇವ
ಭಾಳಾಕ್ಷ ರಚಿಸಿದ ತಂಬೂರಿ
ಹೇಳಲಿ ಏನಿದರ ಹಂಚಿಕೆ ಅರಿಯದ
ತಾಳಗೇಡಿಗೆ ಸಲ್ಲ ತಂಬೂರಿ                 ||೨||

ಸತ್ಯಶರಧಿಯೊಳು ತಂಬೂರಿ
ಉತ್ತಮರಾಡುವ ತಂಬೂರಿ
ಬತ್ತೀಸರಾಗದಿ ಬಗೆಯನರಿಯದಂಥ
ಕತ್ತೀಗಿನ್ಯಾತಕ ತಂಬೂರಿ                      ||೩||

ಅಸಮ ಸುಮ್ಯಾಳಕ ತಂಬೂರಿ
ಕುಶಲರಿಗೊಪ್ಪುವ ತಂಬೂರಿ
ಶಿಶುನಾಳಧೀಶನ ಓದು ಪುರಾಣದಿ
ಹಸನಾಗಿ ಬಾರಿಸು ತಂಬೂರಿ                  ||೪||

ಶಿಶುನಾಳ ಶರೀಫರನ್ನು ನಾವು ಲೋಕಶಿಕ್ಷಕರು ಎಂದು ಕರೆಯಬಹುದು. ತಮ್ಮ ಗೀತೆಗಳ ಮೂಲಕ ಶರೀಫರು ಲೌಕಿಕರಿಗೆ ಸಾಮಾಜಿಕ ನೀತಿಯನ್ನು ಹಾಗು ಸಾಧಕರಿಗೆ ಆಧ್ಯಾತ್ಮಿಕ ನೀತಿಯನ್ನು ಬೋಧಿಸಿದ್ದಾರೆ. ಶರೀಫರ ಅನೇಕ ಕವನಗಳು ಒಂದು ಲೌಕಿಕ ವಸ್ತುವಿನ ವರ್ಣನೆಯಿಂದ ಪ್ರಾರಂಭವಾಗಿ, ಅಲೌಕಿಕ ವಸ್ತುವಿನ ವರ್ಣನೆಯತ್ತ ಹೊರಳುತ್ತವೆ. ‘ತರವಲ್ಲ ತಗಿ ನಿನ್ನ ತಂಬೂರಿ’ ಗೀತೆಯಲ್ಲಿಯೂ ಇದೇ ಪದ್ಧತಿಯನ್ನು ಕಾಣಬಹುದು.

ತಂಬೂರಿ ಇಲ್ಲಿ ಲೌಕಿಕ ಜೀವನದ ಸಂಕೇತವಾಗಿರುವಂತೆಯೇ, ಆಧ್ಯಾತ್ಮಿಕ ಸಾಧನೆಯ ಸಂಕೇತವೂ ಆಗಿದೆ. ಈ ಎರಡೂ ಸಂಕೇತಗಳನ್ನು ಶರೀಫರು ಅಕ್ಕಪಕ್ಕದಲ್ಲಿ ಇಟ್ಟುಕೊಂಡೇ ಈ ಗೀತೆಯನ್ನು ರಚಿಸಿದ್ದಾರೆ.  ಸಮಾಜದಲ್ಲಿ ಶಾಂತಿ ನೆಲೆಸಿರಬೇಕು ಎನ್ನುವದಾದರೆ, ಸಮಾಜದ ವಿವಿಧ, ವಿಭಿನ್ನ ಜನರಲ್ಲಿ ಸಾಮರಸ್ಯ ಹಾಗು ಪ್ರೀತಿ ಇರಬೇಕು. ಆವಾಗಲೇ ಸಮಾಜ ಎನ್ನುವ ತಂಬೂರಿಯಿಂದ ಸುಸ್ವರ ಹೊರಡುತ್ತದೆ. ಇಂತಹ ಸರಸ ಸಂಗೀತದ ಕುರುಹುಗಳನ್ನು ಅರಿಯದ, ಸಮಾಜಘಾತಕ ವ್ಯಕ್ತಿಗಳು ಸಮಾಜದಲ್ಲಿ ಅಶಾಂತಿ ಹಬ್ಬುವಂತಹ ಅಪಸ್ವರಗಳನ್ನು ಹೊರಡಿಸುತ್ತಾರೆ. ಇಂತಹವರಿಗೆ ಶರೀಫರು ಎಚ್ಚರಿಕೆ ನೀಡುತ್ತಾರೆ:
ಸ್ವರ ಬರದೆ ಬಾರಿಸದಿರು ತಂಬೂರಿ !
ಇಂತಹ ಅವಿವೇಕಿ ವ್ಯಕ್ತಿಗಳು ‘ಬಾಳಲು ಬಲ್ಲವರಲ್ಲ; ಇವರು ತಾಳಗೇಡಿಗಳು’!

ಇನ್ನು ಈ ಗೀತೆಯು ಅಧ್ಯಾತ್ಮಸಾಧಕರಿಗೂ ಸಹ ಎಚ್ಚರಿಕೆಯ ದನಿಯಾಗಿದೆ. ಸ್ಥೂಲಶರೀರ, ಸೂಕ್ಷ್ಮಶರೀರ ಹಾಗು ಕಾರಣಶರೀರ ಎನ್ನುವ ಮೂರು ಶರೀರಗಳೊಂದಿಗೆ ಮನಸ್ಸನ್ನು ಬೆಸೆದಿರುವ ವ್ಯಕ್ತಿತ್ವವು ಒಂದು ತಂಬೂರಿಯಿದ್ದಂತೆ. ಸ್ಥೂಲದೇಹದ ಬೇಡಿಕೆಗಳಿಗೆ ದಾಸನಾಗಿರುವ ವ್ಯಕ್ತಿತ್ವವು ಪಶುಸಮಾನವಾದ ವ್ಯಕ್ತಿತ್ವವು. ಮಾನವನಾಗಿ ಹುಟ್ಟಿದ ಮೇಲೆ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡುವುದೇ ವಿವೇಕಿಗಳ ಲಕ್ಷಣ. ಅಂತೆಯೇ, ‘ಮಾನವಜನ್ಮ ಬಲು ದೊಡ್ಡದು, ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ’ ಎಂದು ದಾಸರು ಹಾಡಿದ್ದಾರೆ! ಭಕ್ತಿಯ ಮೂಲಕ ಸಾಧನೆ ಮಾಡುವುದು ಒಂದು ಮಾರ್ಗ. ಯೋಗಸಾಧನೆಯು ಮತ್ತೊಂದು ಮಾರ್ಗ.

ಶರೀಫರ ಅನೇಕ ಗೀತೆಗಳನ್ನು ಗಮನಿಸಿದಾಗ, ಅವರು ಯೋಗಮಾರ್ಗವನ್ನು ಅರಿತವರಾಗಿದ್ದರು ಎಂದು ಭಾಸವಾಗುವುದು. ಯೋಗಸಾಧಕರಿಗೆ ಸಹಜವಾಗಿಯೇ ಸಿದ್ಧಿಗಳು ಲಭಿಸುವವು. ಶರೀಫರ ಸಮಕಾಲೀನರಾದ ನವಲಗುಂದದ ನಾಗಲಿಂಗಸ್ವಾಮಿಗಳಿಗೆ, ಗರಗದ ಮಡಿವಾಳಪ್ಪನವರಿಗೆ ಇಂತಹ ಸಿದ್ಧಿಗಳು ದೊರೆತಿದ್ದವು. ಆದರೆ ಶರೀಫರಿಗೆ ಮಾತ್ರ ಯಾವ ಸಿದ್ಧಿಯೂ ಲಭ್ಯವಾಗಿರಲಿಲ್ಲ. ಆದುದರಿಂದಲೇ ಅವರು ‘ಎಲ್ಲರಂಥವನಲ್ಲ ನನ ಗಂಡ, ಎಲ್ಲಿಗೋಗಧಾಂಗ ಮಾಡಿಟ್ಟಾ, ಕಾಲ್ಮುರಿದು ಬಿಟ್ಟಾ’ ಎಂದು ಹಾಡಿದ್ದಾರೆ. ಯೋಗಸಾಧಕರು ಸಿದ್ಧಿಯ ಜಾಲದಲ್ಲಿ ಬೀಳಬಾರದು. ಈ ಸಿದ್ಧಿಗಳು ಅವರನ್ನು ಅಪಮಾರ್ಗಕ್ಕೆ ಎಳೆಯಬಹುದು. ಆದರೆ ಮನೋನಿಗ್ರಹದ ಮೂಲಕ ತಮ್ಮ ಮೂರೂ ಶರೀರಗಳ ಮೇಲೆ ನಿಯಂತ್ರಣ ಸಾಧಿಸಿ, ಯೋಗಾನಂದವನ್ನು ಪಡೆಯುವುದೆಂದರೆ ತಂಬೂರಿಯನ್ನು ಸರಸವಾಗಿ ಬಾರಿಸಿದಂತೆ. ಆದುದರಿಂದಲೇ ಶರೀಫರು ‘ಸರಸ ಸಂಗೀತದ ಕುರುಹುಗಳನರಿಯದೆ ಬರಿದೆ ಬಾರಿಸದಿರು ತಂಬೂರಿ’ ಎಂದು ಎಚ್ಚರಿಕೆ ನೀಡುತ್ತಾರೆ.    

ರಾಗವನ್ನು ಅರಿತವನು ಸುಸ್ವರವನ್ನು ಹೊರಡಿಸುತ್ತಾರೆ. ಅದರಂತೆ ತಾಳವನ್ನು ಅರಿತವರು ಲಯವನ್ನು ಸಾಧಿಸುತ್ತಾರೆ. ಸಮಾಜವು ಕಾಲದ ಜೊತೆಗೆ ಬದಲಾಗುತ್ತದೆ. ಬದಲಾದ ವ್ಯವಸ್ಥೆಯ ತಾಳಕ್ಕೆ ಹೊಂದಿಕೊಂಡಂತೆಯೇ, ಸಮಾಜದ ಸಾಮರಸ್ಯವು ಕೆಡದಂತೆ ತಂಬೂರಿಯಿಂದ ನಾದವನ್ನು ಹೊರಡಿಸಬೇಕು. ಇದು ಲೌಕಿಕರಿಗೆ ಕೊಡುವ ಸೂಚನೆಯಾದರೆ, ಶರೀಫರು ಸಾಧಕರಿಗೆ ಕೊಡುವ ಉಪದೇಶವೇನು?

ಯೋಗಸಾಧನೆಯ ಮೊದಲ ಹಂತದಲ್ಲಿ ಸಾಧಕನಿಗೆ ಅನಾಹತ ಚಕ್ರದಲ್ಲಿ ನಾದ ಕೇಳುವುದು. ಶರೀಫರು ಇದನ್ನು ಮದ್ದಲಿಯ ದನಿ ಎಂದು ಕರೆಯುತ್ತಾರೆ. ಈ ನಾದವನ್ನು ಅನುಸರಿಸಿ, ಸಾಧಕನು ತನ್ನ ‘ತಂಬೂರಿ’ಯನ್ನು ಅಂದರೆ ಯೋಗಶರೀರವನ್ನು ಸಿದ್ಧಿಯ ಕಡೆಗೆ ಒಯ್ಯಬೇಕು. ಅಂತಹ ಯೋಗಿಯು ಸಿದ್ಧ ಸಾಧಕನಾಗುವುನು. ‘ಸುವಿದ್ಯೆ’ ಎಂದರೆ ಯೋಗಿಯನ್ನು ಉನ್ನತಿಗೆ ಕರೆದೊಯ್ಯುವ ವಿದ್ಯೆ. ಅಲ್ಲದೇ ‘ಷೋಡಷೀ ವಿದ್ಯಾ’ ಎನ್ನುವ ಮಂತ್ರವಿದೆ. ಇದು ತಂತ್ರಮಾರ್ಗದ ಸಾಧಕರಿಗೆ ಗುರುಮುಖೇನ ಲಭ್ಯವಾಗುವ ಮಂತ್ರ. ಬಹುಶಃ ಗುರು ಗೋವಿಂದಭಟ್ಟರಿಂದ ಶರೀಫರಿಗೆ ಈ ಮಂತ್ರದ ಉಪದೇಶವಾಗಿರಬಹುದು.

‘ಬಾಳ ಬಲ್ಲವರಿಗೆ ತಂಬೂರಿ’ ಎನ್ನುವಾಗ ಶರೀಫರು ಮತ್ತೆ ಸಮಾಜಕಲ್ಯಾಣಿ ವ್ಯಕ್ತಿಯನ್ನು ಸೂಚಿಸುವಂತೆಯೇ, ಯೋಗಸಾಧಕನನ್ನೂ ಸೂಚಿಸುತ್ತಾರೆ. ಸ್ಥೂಲ, ಸೂಕ್ಷ್ಮ ಹಾಗು ಕಾರಣಶರೀರ ಎನ್ನುವ ಮೂರು ಶರೀರಗಳನ್ನು ಸೃಷ್ಟಿಸಿದವನೇ ಭಾಳಾಕ್ಷ. ಈ ಮೂರೂ ಶರೀರಗಳನ್ನು ನಿಯಂತ್ರಿಸುವ ಮನಸ್ಸನ್ನು ಸೃಷ್ಟಿಸಿದವನೂ ಅವನೇ. ಆದುದರಿಂದ ಈ ಸಂಕೀರ್ಣವು ಭಾಳಾಕ್ಷ ರಚಿಸಿದ ತಂಬೂರಿ. ಭಾಳಾಕ್ಷ ಎಂದರೆ ಹಣೆಗಣ್ಣ. ಯೋಗಸಾಧನೆಯ ಶಿಖರದಲ್ಲಿ ಇರುವವನಿಗೆ ಮಾತ್ರ ಈ ಹಣೆಗಣ್ಣು ಅಂದರೆ ಜ್ಞಾನಚಕ್ಷು ಲಭ್ಯವಾಗುತ್ತದೆ! ಇಂತಹ ‘ತಂಬೂರಿ’ಯ ಹಂಚಿಕೆ ಅಂದರೆ ವಿನ್ಯಾಸವು ‘ಬಾಳಬಲ್ಲವನಿಗೆ’ ಅಂದರೆ ಬದುಕಿನ ತಿಳಿವಳಿಕೆ ಇದ್ದವನಿಗೆ ಮಾತ್ರ ಅರ್ಥವಾಗುತ್ತದೆ. ‘ಬಾಳಬಲ್ಲವನಿಗೆ’ ಪದವನ್ನು ‘ಬಾಳ ಬಲ್ಲವನಿಗೆ’ ಎಂದು ಬಿಡಿಸಿ ಬರೆದಾಗ ಬಾಳ=ಭಾಳ=ಬಹಳ ಎನ್ನುವ ಅರ್ಥವು ಹೊರಡುವುದನ್ನು ಗಮನಿಸಿರಿ. ಇಂತಹ ತಂಬೂರಿಯು ತಾಳಗೇಡಿಗೆ, ಅವನು ಲೌಕಿಕನೇ ಇರಲಿ ಅಥವಾ ಸಾಧಕನೇ ಇರಲಿ ನಿಷ್ಪ್ರಯೋಜಕವಾಗುವುದು!


ಈ ‘ಸಾಧನಾ ತಂಬೂರಿ’ಯ ಬಗೆಗೆ ಶರಿಫರು ಇಷ್ಟೆಲ್ಲ ಹೇಳಿದರು. ಇದರಿಂದ ಸ್ವರ ಹೊರಡಿಸುವವರಿಗೆ ಇರಬೇಕಾದ ಗುಣಗಳನ್ನು ತಿಳಿಸಿದರು. ಇನ್ನೂ ಒಂದು ಎಚ್ಚರಿಕೆಯನ್ನು ಅವರು ಕೊಡುತ್ತಾರೆ. ಈ ತಂಬೂರಿಯು ‘ಸತ್ಯಶರಧಿ’ಯಲ್ಲಿ ಉತ್ತಮರು ಆಡುವ ತಂಬೂರಿ. ಉದಾಹರಣೆಗೆ ಲಂಕಾಧೀಶನಾದ ರಾವಣನನ್ನೇ ತೆಗೆದುಕೊಳ್ಳಿ. ಅವನು ತನ್ನ ನರಗಳನ್ನೇ ಕಿತ್ತು, ತಂಬೂರಿಯ ತಂತಿಗಳನ್ನಾಗಿ ಮಾಡಿ, ಹಾಡಿ ಶಿವನನ್ನು ಒಲಿಸಿಕೊಂಡ ಎಂದು ಹೇಳುತ್ತಾರೆ. ಆದರೆ ಅಸತ್ಯದ ಮಾರ್ಗದಲ್ಲಿ ಅವನು ಕಾಲಿಟ್ಟಾಗ, ಅವನ ‘ತಂಬೂರಿ’ಯು ಭ್ರಷ್ಟವಾಗಿ ಹೋಯಿತು. ಅವನ ರಾಜ್ಯವೂ ಹಾಳಾಗಿ ಹೋಯಿತು! ಆದುದರಿಂದ ಈ ತಂಬೂರಿಯನ್ನು ಬಳಸಿ, ಸುನಾದವನ್ನು ಹೊರಡಿಸುವವನು ಸತ್ಯಮಾರ್ಗಿಯಾಗಿರಬೇಕು.

ಕರ್ನಾಟಕ ಸಂಗೀತದಲ್ಲಿ ಇರುವ ಮೂಲರಾಗಗಳು ೩೨. ಈ ಬತ್ತೀಸ ರಾಗಗಳನ್ನು ಸುಸ್ವರದಲ್ಲಿ ಬಾರಿಸಲು ಅರಿಯದ ಸಾಧಕನು ಕತ್ತೆ ಇದ್ದಂತೆ. ಸಂಗೀತದ ರಾಗಗಳಂತೆ, ಜೀವನದ ರಾಗಗಳೂ ಭಿನ್ನವಾಗಿರುತ್ತವೆ. ‘ರಾಗ’ ಈ ಪದಕ್ಕೆ ಇಲ್ಲಿರುವ ಶ್ಲೇಷಾರ್ಥವನ್ನು ಗಮನಿಸಿರಿ. ಜೀವನದ ಸುಖಗಳು ಸೌಮ್ಯ ರಾಗಗಳಾದರೆ, ಕಷ್ಟಗಳು ರುದ್ರರಾಗಗಳಾಗಿರಬಹುದು. ಈ ವಿಭಿನ್ನ ರಾಗಗಳನ್ನು ಬಾರಿಸುವಾಗ, ಸಾಧಕನು ಸಮತೋಲನದ ಮನಃಸ್ಥಿತಿಯನ್ನು ಕಾಯ್ದುಕೊಳ್ಳಬೇಕು. ಗೀತೆಯಲ್ಲಿ ಶ್ರೀಕೃಷ್ಣನು ಹೇಳಿದಂತೆ, ‘ಸುಖದುಃಖೇ ಸಮಾಕೃತ್ವಾ, ಲಾಭಾಲಾಭೌ ಜಯಾಜಯೌ’ ಎನ್ನುವ ಸ್ಥಿತಪ್ರಜ್ಞತೆ ಬಂದಾಗಲೇ, ಭಾಳಾಕ್ಷ ನೀಡಿದ ತಂಬೂರಿಯನ್ನು ಬಾರಿಸಲು ಅರಿತುಕೊಂಡಂತೆ!
 
ಜೀವನದ ‘ಸುಮ್ಯಾಳಕ್ಕೆ’ ಅಂದರೆ ಸಮರಸದ ಹಿಮ್ಮೇಳಕ್ಕೆ, ಇಂತಹ ತಂಬೂರಿ ‘ಅಸಮ’ ಎಂದರೆ unequalled ಎಂದು ಶರೀಫರು ಹೇಳುತ್ತಾರೆ.  ಅದುದರಿಂದ ಇದು ‘ಕುಶಲ’ರ ಕೈಗಳಲ್ಲಿ ಮಾತ್ರ ಶೋಭಿಸುತ್ತದೆ. ಇಂತಹ ಕೌಶಲ್ಯ ಪಡೆಯಲು ಏನು ಮಾಡಬೇಕು ಎನ್ನುವ ಪ್ರಶ್ನೆಗೆ, ಶರೀಫರು ‘ಶಿಶುನಾಳಧೀಶನ ಓದು ಪುರಾಣದಿ’ ಎಂದು ಉತ್ತರಿಸುತ್ತಾರೆ. ಅರ್ಥಾತ್, ಯಾವಾಗಲೂ ದೇವರಲ್ಲಿ ಮನಸ್ಸನ್ನು ಇಡಬೇಕು. ‘ನಯನದಲ್ಲಿ ನಿಮ್ಮ ಮೂರುತಿ ತುಂಬಿ, ಶ್ರವಣದಲ್ಲಿ ನಿಮ್ಮ ಕೀರುತಿ ತುಂಬಿ’ ಎಂದು ಬಸವಣ್ಣನವರು ಹೇಳುವ ಮಾರ್ಗವಿದು. ಈ ಸಾಧನೆಯನ್ನು ಮಾಡಿದ ಬಳಿಕ, ತಂಬೂರಿಯನ್ನು ‘ಹಸನಾಗಿ ಬಾರಿಸಬೇಕು’ . ಅದರ ಸುಸ್ವರವು ಆಗ ಸಮಾಜಕ್ಕೇ ಆಗಲಿ, ಸಾಧಕನಿಗೇ ಆಗಲಿ ಶ್ರೇಯಸ್ಕರವಾಗುವುದು.

24 comments:

Badarinath Palavalli said...

ಷರೀಫರನ್ನು ತಾವು ಲೋಕ ಶಿಕ್ಷಕ ಎಂದು ಕರೆದಿರುವುದರಲ್ಲಿ ಎರಡು ಮಾತಿಲ್ಲ.

ಷರೀಫರ ಜೊತೆಗೆ ನನಗೆ ತಳಕು ಹಾಕಿಕೊಳ್ಳುವ ಹೆಸರು ನಮ್ಮ ಸುಗಮ ಸಂಗೀತಕಾರರದು. ಹಲವು ಸಂಗೀತಕಾರರು ಅದ್ಭುತವಾಗಿ ಅವರ ರಚನೆಗಳನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ದಿದ್ದಾರೆ. ಅವರಲ್ಲಿ ಅಶ್ವಥರು ದೊಡ್ಡ ಹೆಸರು.

ತಂಬೂರಿಯ ಸಂಕೇತವನ್ನು ಅವರು ಬಳಸಿದ ರೀತಿ ಮತ್ತು ಅದನ್ನು ತಾವು ವಿಶ್ಲೇಷಿಸಿದ ರೀತಿ ಎರಡೂ ಅಮೋಘ.

ತಂಬೂರಿಯನ್ನು ದೇಹದ ಜೊತೆ ಸಮೀಕರಿಸ ಪದ್ಧತಿ ಇಷ್ಟವಾಯಿತು,

ನಾನು ಶ್ರೀ. ಗರಗದ ಮಡಿವಾಳಪ್ಪನವರ ರಚನೆಗಳನ್ನು ಅಭ್ಯಸಿಸಬೇಕಿದೆ.

'ಬಾಳ ಬಲ್ಲವರಿಗೆ ತಂಬೂರಿ’ ಇದಕಿಂತ ಅನ್ವಯವುಂಟೇ?

ನಾನು ನನ್ನ ಅಹಂ ಕಟ್ಟಿಟ್ಟು "ಭಾಳಾಕ್ಷ ನೀಡಿದ ತಂಬೂರಿಯನ್ನು ಬಾರಿಸಲು" ಎಂದು ಮೊದಲಿಡುವೆನೋ? ಗುರುಗಳೇ! ಮತ್ತು ಬದುಕನ್ನು ಎಲ್ಲರೀತಿಯಲ್ಲೂ ನಾನು ಹಸನಾಗಿ ಬಾರಿಸಬೇಕು' ಅಲ್ಲವೇ?

ನಿಮಗೆ ಶಿರ ಸಾಷ್ಟಾಂಗ ವಂದನೆಗಳು.

sunaath said...

ಬದರಿನಾಥರೆ,
ಗರಗದ ಮಡಿವಾಳಪ್ಪನವರು ಆ ಕಾಲದ ದೊಡ್ಡ ಸಾಧಕರು. ಅವರು ಗೀತೆಗಳನ್ನು ರಚಿಸಿದಂತೆ ಕಾಣೆ.

ಸತೀಶ್ ನಾಯ್ಕ್ said...

ಶಿಶುನಾಳ ಷರೀಫ್ ರ ಗ್ರಚನೆಗಳು ಕೇವಲ ಹಾಡುಗಳಾಗಿ ಅಷ್ಟೇ ಕಿವಿಗೆ ಬಿದ್ದಿದ್ದವು.. ಅವರ ರಚನೆಗಳಲ್ಲಿನ ತತ್ಪಾರ್ಯ ಅಷ್ಟು ಸುಲಭಕ್ಕೆ ಎಲ್ಲರಿಗೂ ನಿಲುಕುವಂಥದ್ದಲ್ಲ.. ಆ ದೋಷ ಉಳ್ಳವರಲ್ಲಿ ನಾನೂ ಒಬ್ಬ. ಮೊನ್ನೆ ನನ್ನ ಗುರುಗಳೂ ಕೂಡ ಹಾಗೆಯೇ ಹಾವೇರಿಯಲ್ಲಿ ಅವರ ಮನೆಗೆ ಹೋದಾಗ ತಬಲಾ,ಹಾರ್ಮೋನಿಯಂ ಗಳ ಜೊತೆ ಶಿಶುನಾಳರ ಗೀತೆಯೊಂದನ್ನ ಅದ್ಭುತವಾಗಿ ಹಾಡಿ, ಅದರ ತಾತ್ಪರ್ಯವನ್ನ ಹೇಳುವಾಗ, ಶರೀಫರು ಅವರೆಂಥಾ ಮಹಾನ್ ಕವಿ ಎನಿಸಿತ್ತು. ಒಬ್ಬ ಮಹಾನ್ ದಿಗ್ದರ್ಶಕರೆನಿಸಿತ್ತು. ಹಾಗೆ ನೀವೂ ಕೂಡ ಇಲ್ಲಿ ನನ್ನ ಸರ್ವಾಕಲಿಕ ಇಷ್ಟವಾದ ಗೀತೆಯೊಂದನ್ನ ಇಷ್ಟು ಸವಿಸ್ತಾರವಾಗಿ ವಿಸ್ತೃತಗೊಳಿಸಿ ತಿಳಿಯ ಪಡಿಸಿದ್ದಕ್ಕೆ ಧನ್ಯವಾದಗಳು ಸುನಾಥ್ ಸಾರ್. ನಿಮ್ಮ ಬ್ಲಾಗ್ ನ ಕಡೆ ಈ ಮೊದಲು ಅಷ್ಟು ಗಮನ ಕೊಟ್ಟಿರಲಿಲ್ಲ. ತುಂಬಾ ಒಳ್ಳೆಯ ಬ್ಲಾಗ್ ನಿಮ್ಮದು. ಉತ್ತಮ ಕೆಲಸ.

ಶಾನಿ said...

Simply Great!!!!

Swarna said...

ಕಾಕಾ,
'ತಂಬೂರಿ'ಯನ್ನು ಶ್ರುತಿ ಮಾಡಲು ಸಹಾಯಕವಾಗುವ ಪದದ ಅರ್ಥ ವಿಸ್ತಾರ ತಿಳಿಸಿದ್ದಕ್ಕೆ ವಂದನೆಗಳು

umesh desai said...

ಕಾಕಾ ಅಶ್ವಥ ಹಾಡಿ ಅಜರಾಮರಮಾಡಿದ ಹಾಡಿದು ಆದ್ರ ಅನುಕೂಲಕ್ಕ ತಕ್ಕಂಗ
ಪದಾನ ತಿರುವ್ಯಾರ ಅನ್ನೋ ಆರೋಪ ಕೇಳಿಬರತಿತ್ತು...ಈಗ ನಿಮ್ಮ ವಿಶ್ಲೇಷಣಾ
ಈ ಹಾಡಿಗೊಂದು ಗತ್ತು ನೀಡೇದ ನೋಡ್ರಿ..

ಚುಕ್ಕಿಚಿತ್ತಾರ said...

ಕಾಕ, ಶರೀಫರ ಹಾಡನ್ನು ಸರಳವಾಗಿ ಅರ್ಥ ಮಾಡಿಸಿದ್ದೀರಿ.. ಧನ್ಯವಾದಗಳು..

sunaath said...

ಸತೀಶರೆ,
ನಿಮ್ಮ ಗುರುಗಳು ಶರೀಫರ ಗೀತೆಯನ್ನು ವಾದ್ಯಸಹಿತವಾಗಿ ಹಾಡುವುದನ್ನು ತಿಳಿದು ಖುಶಿಯಾಯಿತು. ನೀವೂ ಸಹ ಹಾಡುತ್ತೀರಿ ಎಂದು ತಿಳಿಯುತ್ತೇನೆ. ಅಭಿನಂದನೆಗಳು.

sunaath said...

ಶಾನಿ,
Thank you so much.

sunaath said...

ಸ್ವರ್ಣಾ,
ಶರೀಫರ ತಂಬೂರಿ ಇದು! ಇದರ ಸ್ವರ ನಿಮಗೆ ಆನಂದವೀಯಲಿ!

sunaath said...

ದೇಸಾಯರ,
ಅಶ್ವತ್ಥರ ಹಾಡುಗಾರಿಕೆಯನ್ನು ನಾನು ಕೇಳಿಲ್ಲ. ಹೀಗಾಗಿ ಅವರು ಏನಾದರೂ ತಿರುಚಿದ್ದರೆ ನನಗೆ ತಿಳಿಯದು!

sunaath said...

ವಿಜಯಶ್ರೀ,
ನಿಮಗೆ ಧನ್ಯವಾದಗಳು.

ಚಿನ್ಮಯ ಭಟ್ said...

ಧನ್ಯವಾದಗಳು ಸರ್...
ಗೀತೆಯನ್ನು ಕೇಳಿ ಗೊತ್ತಿತ್ತು ಅಷ್ಟೇ...ಅದರ ಅರ್ಥವನ್ನು ತಿಳಿಯುವ ಪ್ರಯತ್ನ ಮಾಡಿರಲಿಲ್ಲ...ವಂದನೆಗಳು ತಿಳಿಸಿಕೊಟ್ಟಿದ್ದಕ್ಕಾಗಿ :)..
ನಮಸ್ತೆ :)

ಮಂಜುಳಾದೇವಿ said...

ಶಿಶುನಾಳ ಷರೀಫರ ಈ ಗೀತೆಯಲ್ಲಿರುವ ವಿವಿಧ ರೀತಿಯ ಅರ್ಥಗಳನ್ನು ಸವಿಸ್ತಾರವಾಗಿ ವಿವರಿಸಿದ್ದಕ್ಕೆ ನಿಮಗೆ ಧನ್ಯವಾದಗಳು ಸಾರ್.

sunaath said...

ಚಿನ್ಮಯ,
ನಿಮಗೆ ಧನ್ಯವಾದಗಳು.

sunaath said...

ಮಂಜುಳಾದೇವಿಯವರೆ,
ನಿಮಗೆ ಧನ್ಯವಾದಗಳು.

Subrahmanya said...

ಕಾಕಾ,
ತುಂಬ ವಿಚಾರಗಳನ್ನು ತಿಳಿದಂತಾಯಿತು. ಸಾಮಾನ್ಯ ಎಂದು ಕಾಣುವ ಒಂದು ಪದ್ಯಕ್ಕಿರುವ ವಿವಿಧ ಆಯಾಮಗಳ ಸಾಧ್ಯತೆಯನ್ನು ಕಂಡಂತಾಯಿತು.

ಹಾಗೆಯೇ ಬೇಂದ್ರೆಯವರ "ಬದುಕು ಮಾಯೆಯ ಮಾಟ" ಕವನದ ಸಲ್ಲಾಪವೂ ಬರಲಿ. waitinig for it from long time .

sunaath said...

ಸುಬ್ರಹ್ಮಣ್ಯರೆ,
ಘನಕವಿಯ ಕವನವು ಘನವಾಗಿ ಇರುವುದರಲ್ಲಿ ಅಚ್ಚರಿ ಏನಿದೆ?
‘ಬದುಕು ಮಾಯೆಯ ಮಾಟ’ವನ್ನು ಪ್ರಯತ್ನಿಸುತ್ತೇನೆ.

ಮನಮುಕ್ತಾ said...

ಒಮ್ಮೊಮ್ಮೆ ಈ ಗೀತೆಯನ್ನು ಗುನುಗುತ್ತಿರುತ್ತೇನೆ..ಸ್ವಲ್ಪಮಟ್ಟಿಗಷ್ಟೇ ಅರ್ಥಮಾಡಿಕೊ೦ಡಿದ್ದೆ.. ನಿಮ್ಮಿ೦ದ ಸರಿಯಾಗಿ ತಿಳಿಯಿತು.. ತು೦ಬಾ ಚೆನ್ನಾಗಿ ವಿವರಿಸಿದ್ದೀರಿ.. ವ೦ದನೆಗಳು ಕಾಕಾ.

sunaath said...

ಮನಮುಕ್ತಾ,
Pleasure is mine!

ರಾಘವೇಂದ್ರ ಎಂ said...

ತುಂಬ ಇಷ್ಟವಾಯಿತು ಈ ಬರಹ...

sunaath said...

RJ,
ಧನ್ಯವಾದಗಳು.

ಶಿವಪ್ರಕಾಶ್ said...

Dear sunaath sir, naanu ati hecchu istapaduva geethegalalli idu ondu.. idara olagiruva nija arthada parichaya maadisiddakke dhanyavaadagalu sir..

Thank u :)

Shivaprakash HM

sunaath said...

ಶಿವಪ್ರಕಾಶರೆ,
ನಿಮಗೂ ಧನ್ಯವಾದಗಳು.