Wednesday, March 12, 2014

ಪದವಿನೋದ-೨

ಸಿಂಧು ಸಂಸ್ಕೃತಿಯ ಜನಸಮುದಾಯವು ಆಡುತ್ತಿದ್ದ ಭಾಷೆ ಯಾವುದು ಎಂದು ತಿಳಿಯದು. ಅವರ ಬರಹದ ಅರ್ಥವನ್ನು ಬಿಡಿಸುವುದು ಇನ್ನೂ ಸಾಧ್ಯವಾಗಿಲ್ಲ. ಸಿಂಧು ತೀರದ ಜನರ ಮುದ್ರಿಕೆಗಳಲ್ಲಿ ನಮ್ಮ ಶಿವನನ್ನು ಹೋಲುವ ಚಿತ್ರವನ್ನು ಕಾಣಬಹುದು. ಇದರಿಂದ ಅವರು ನಮ್ಮ ಪೂರ್ವಜರು ಹೌದು ಎನ್ನುವುದು ಅತ್ಯಂತ ಸಂಭವನೀಯ ಸಂಗತಿ. ಇವರು ಆರ್ಯಪೂರ್ವದ ಭಾರತದ ನಿವಾಸಿಗಳು ಆಗಿರಬಹುದು, ಅರ್ಥಾತ್ ಇವರು ಕನ್ನಡಿಗರೇ ಆಗಿರಬಹುದು. ಕಟ್ಟಡಗಳಲ್ಲಿ ಇಟ್ಟಿಗೆಯನ್ನು ಬಳಸಿದ ಇವರು ‘ಇಟ್ಟಿಗೆ’ಗೆ ಏನೆಂದು ಕರೆಯುತ್ತಿದ್ದರು ಎನ್ನುವುದು ತಿಳಿಯದು. ಕನ್ನಡಿಗರು ಸದ್ಯದಲ್ಲಿ ಬಳಸುವ ‘ಇಟ್ಟಿಗೆ’ ಪದವು ಮೂಲತಃ ‘ಇಷ್ಟಕಾ’ ಎನ್ನುವ ಸಂಸ್ಕೃತ ಪದದಿಂದ ಹುಟ್ಟಿದೆ. ಇಷ್ಟಿ ಎಂದರೆ ಯಜ್ಞ. (ದಶರಥ ಮಹಾರಾಜನು ಕೈಕೊಂಡ ಪುತ್ರಕಾಮೇಷ್ಟಿಯನ್ನು ನೆನಪಿಸಿಕೊಳ್ಳಿರಿ.) ಇಷ್ಟಕಾ ಎಂದರೆ ಯಜ್ಞಕುಂಡಗಳಿಗಾಗಿ ಬಳಸುವ ಇಟ್ಟಿಗೆ. ಸಿಂಧು ಜನರು ಯಜ್ಞಗಳನ್ನು ಮಾಡಿದ ಯಾವುದೇ ಕುರುಹುಗಳು ದೊರೆತಿಲ್ಲ. ಆದುದರಿಂದ ಇವರು ಇಷ್ಟಕಾ ಎನ್ನುವ ಪದವನ್ನು ಬಳಸಿರುವುದು ಅಸಂಭವ. ಸದ್ಯಕ್ಕೆ ಕನ್ನಡಿಗರು ಬಳಸುತ್ತಿರುವ ಇಟ್ಟಿಗೆ ಪದವು ಸಂಸ್ಕೃತಜನ್ಯವಾದದ್ದು ಎಂದು ತಿಳಿಯಬಹುದು. ಕನ್ನಡ ನಾಡಿನ ಅನೇಕ ಸ್ಥಳಗಳಲ್ಲಿ ಇಟ್ಟಿಗೆ ಅಥವಾ ಇಟ್ಟಂಗಿಯನ್ನು ದೊಡ್ಡ ಪ್ರಮಾಣದಲ್ಲಿ ನಿರ್ಮಿಸುತ್ತಿದ್ದರೇನೊ? ಅಂತಹ ಊರುಗಳನ್ನು ಅವುಗಳ ಹೆಸರುಗಳಿಂದ ಗುರುತಿಸಬಹುದು. ಸದ್ಯದ ಕರ್ನಾಟಕದಲ್ಲಿ ಇಂತಹ ಹೆಸರುಗಳು ಬೇರೆ ಬೇರೆ ತಾಲೂಕುಗಳಲ್ಲಿ ಹೀಗಿವೆ:

ಇಟಗಾ ಎನ್ನುವ ನಾಲ್ಕು ಊರುಗಳು: (ಚಿತಾಪುರ ತಾಲೂಕು-೧, ಹುಮನಾಬಾದ ತಾಲೂಕು-೧, ಜೇವರಗಿ ತಾಲೂಕು-೨)
ಇಟಕಲ್ ಎನ್ನುವ ಒಂದು ಊರು: (ಸೇಡಮ್ ತಾಲೂಕು-೧)
ಇಟಕದಿಬ್ಬನಹಳ್ಳಿ  ಎನ್ನುವ ಒಂದು ಊರು: (ಮಧುಗಿರಿ ತಾಲೂಕು-೧)
ಇಟಗಿ ಎನ್ನುವ ಒಂಬತ್ತು ಊರುಗಳು: (ಖಾನಾಪುರ ತಾಲೂಕು-೧, ದೇವದುರ್ಗ ತಾಲೂಕು-೧, ಬಸವನ ಬಾಗೇವಾಡಿ-೧, ಯಲಬುರ್ಗಾ-೧, ರಾಣಿಬೆನ್ನೂರು-೧, ರೋಣ-೧, ಶಿರಹಟ್ಟಿ-೧, ಸಿದ್ದಾಪುರ-೧, ಕುಷ್ಟಗಿ-೧)
ಇಟಗಿಯಾಳ  ಎನ್ನುವ ಒಂದು ಊರು: (ಔರಾದ ತಾಲೂಕ-೧)
ಇಟಗುಳಿ  ಎನ್ನುವ ಒಂದು ಊರು: (ಶಿರಸಿ ತಾಲೂಕ-೧)
ಇಟಿಗಟ್ಟಿ  ಎನ್ನುವ ಒಂದು ಊರು: (ಧಾರವಾಡ ತಾಲೂಕ-೧)
ಇಟ್ಟಂಗಿಹಾಳ  ಎನ್ನುವ ಒಂದು ಊರು: (ಬಿಜಾಪುರ ತಾಲೂಕು-೧)
ಇಟ್ಟಂಗೂರು  ಎನ್ನುವ ಒಂದು ಊರು: (ಆನೇಕಲ್ ತಾಲೂಕ-೧)
ಇಟ್ಟಗಲ್ಲಾಪುರ  ಎನ್ನುವ ಒಂದು ಊರು: (ಬೆಂಗಳೂರು ತಾಲೂಕು-೧)
ಇಟ್ಟಗಳ್ಳಿ  ಎನ್ನುವ ಒಂದು ಊರು: (ಪಿರಿಯಾಪುರ ತಾಲೂಕು-೧)
ಇಟ್ಟಪಟ್ಣ  ಎನ್ನುವ ಒಂದು ಊರು: (ಅರಕಲಗೂಡು ತಾಲೂಕು-೧)
ಇಟ್ಟಮಡು  ಎನ್ನುವ ಒಂದು ಊರು: (ರಾಮನಗರ ತಾಲೂಕು-೧)
ಇಟ್ಟಸಂದ್ರ  ಎನ್ನುವ ಒಂದು ಊರು: (ಹೊಸಕೋಟೆ ತಾಲೂಕ-೧)
ಇಟ್ಟಿಗಿ  ಎನ್ನುವ ಎರಡು ಊರುಗಳು: (ಹಡಗಳಿ ತಾಲೂಕ-೧, ಹೊಸಪೇಟ -೧)
ಇಟ್ಟಗಿಹಾಳ  ಎನ್ನುವ ಒಂದು ಊರು: (ಶಿರಗುಪ್ಪಾ ತಾಲೂಕ-೧)
ಇಟ್ಟಿಗುಡಿ  ಎನ್ನುವ ಒಂದು ಊರು: (ಹರಪನಹಳ್ಳಿ ತಾಲೂಕ-೧)
ಇಟ್ಟಿಗೆ  ಎನ್ನುವ ಎರಡು ಊರುಗಳು: (ಚನ್ನಗಿರಿ ತಾಲೂಕ-೧, ತರಿಕೆರೆ-೧)
ಇಟ್ಟಿಗೆಹಳ್ಳಿ  ಎನ್ನುವ ಐದು ಊರುಗಳು:
(ತುರುವೆಕೆರೆ-೧, ಭದ್ರಾವತಿ-೧, ಶಿಕಾರಿಪುರ-೧, ಶಿವಮೊಗ್ಗಿ-೧, ಹೊಸದುರ್ಗ-೧)
ಇಟ್ನ ಎನ್ನುವ ಒಂದು ಊರು: (ಹೆಗ್ಗಡದೇವನಕೊಟೆ-೧)
ಇಟ್ನಾಳ ಎನ್ನುವ ಮೂರು ಊರುಗಳು: (ಚಿಕ್ಕೋಡಿ-೧, ಸವದತ್ತಿ-೧, ರಾಯಬಾಗ-೧)
 ಒಟ್ಟು ಊರುಗಳು: ೪೦

ಕನ್ನಡದ ಇಟ್ಟಿಗೆ ಮರಾಠಿಯಲ್ಲಿ ವೀಟ, ವೀಠಾ ಆಗಿದೆ. ವೀಟ (ವೀಠಾ)ಗಳನ್ನು ನಿರ್ಮಾಣ ಮಾಡುವ ಊರಿಗೆ ಏನೆಂದು ಕರೆಯಬೇಕು? ಮರಾಠಿ ವೀಟ (ವೀಠಾ) ಹಾಗು ಕನ್ನಡದ ‘ಹಾಳ’ ಎರಡನ್ನು ಜೊತೆ ಮಾಡಿ ‘ವೀಟ(ಠ)ಹಾಳ’ ಎಂದು ಕರೆದರು. ಅದು ಕನ್ನಡ-ಮರಾಠಿ ಮಿಶ್ರ ಉಚ್ಚಾರದಲ್ಲಿ ಕಾಲಕ್ರಮೇಣ ‘ವಿಠ್ಠಲ’ವಾಯಿತು. ಪಂಢರಪುರದ ವಿಠ್ಠಲನು ಇಟ್ಟಿಗೆಯ ಮೇಲೆ ಗಟ್ಟಿಯಾಗಿ ನಿಂತುಕೊಂಡಿರುವುದನ್ನು ಈಗಲೂ ನೋಡಬಹುದು. ಇದನ್ನು ನೋಡಿಯೇ ಬೇಂದ್ರೆಯವರು ‘ಇಟ್ಟಿಗೆಯ ಮೇಲೆ ಅಡಿಯಿಟ್ಟ ವಿಠ್ಠಲ’ ಎಂದು ಹಾಡಿದ್ದಾರೆ.
(ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಸಹ ವಿಟ್ಲ ಎನ್ನುವ ಒಂದು ಊರು ಇದೆ. ನರಸಿಂಹರಾಜಪುರ ಹಾಗು ಬಂಟವಾಳ ತಾಲೂಕುಗಳಲ್ಲಿ ವಿಟ್ಟಲ ಎನ್ನುವ ಹೆಸರಿನ ಊರುಗಳಿವೆ. ಇವೆಲ್ಲ ‘ವೀಟಹಾಳ’ಗಳೇ ಆಗಿರಬಹುದು.)

ವಿಷ್ಣು ಎನ್ನುವ ಪದವು ಮರಾಠಿಯಲ್ಲಿ ವಿಷ್ಟೋ ಎಂದಾಗಿ, ಕ್ರಮೇಣ ವಿಠ್ಠೋ ಆಯಿತು. ಬಿಷ್ಟೋ ಎನ್ನುವ ಹೆಸರು ಮರಾಠಿಯಲ್ಲಿ ಇನ್ನೂ ಚಾಲ್ತಿಯಲ್ಲಿದೆ. ಆದುದರಿಂದ ಈ ದೇವರು ನೆಲೆಸಿದ ಸ್ಥಲವೂ ಸಹ ವಿಠ್ಠೋಹಾಳ ಅರ್ಥಾತ್ ವಿಠ್ಠಲ ಆಗಿರುವ ಸಂಭವವಿದೆ! ಆದುದರಿಂದಲೇ ಮಹಾರಾಷ್ಟ್ರದ ಮಹಾನ್ ಸಂತ ಜ್ಞಾನದೇವರು ವಿಠ್ಠಲನಿಗೆ ‘ಕಾನಡೀ ವಿಠ್ಠಲಾ’ ಎಂದು ಕರೆದಿದ್ದಾರೆ! ವೀಟಹಾಳದಲ್ಲಿ ಇರುವ ಕುಂಬಾರರ ಮನೆದೇವರು ‘ವಿಠ್ಠಲ’ನಾಗಿರಬಹುದು. ಕರ್ನಾಟಕದಲ್ಲಿ ವಿಠ್ಠಲರೂಪಿ ಹೆಸರನ್ನು ಜೋಡಿಸಿಕೊಂಡ ೪೫ ಹಳ್ಳಿಗಳಿವೆ.

ಸಿಂಧು ಸಂಸ್ಕೃತಿಯ ಜನರಿಗೆ ಹಾಗು ಹಿಮಾಲಯದ ಕೆಳಭಾಗದಲ್ಲಿ ವಾಸಿಸುತ್ತಿದ್ದ ಕನ್ನಡಿಗರಿಗೆ ಭಾರತದ ಪಶ್ಚಿಮದಲ್ಲಿರುವ ದೇಶಗಳೊಡನೆ ವಾಣಿಜ್ಯಸಂಪರ್ಕವಿತ್ತು.  ಇಂತಹ ಸಂಪರ್ಕದಿಂದಾಗಿ ಎರಡೂ ಭಾಷಿಕರಲ್ಲಿ ಪದಗಳ ಕೊಡುಕೊಳ್ಳುವಿಕೆ ಅನಿವಾರ್ಯವಾಗಿ ನಡೆಯುತ್ತಿತ್ತು. ಲ್ಯಾಟಿನ್, ಸಂಸ್ಕೃತ ಹಾಗು ಕನ್ನಡ ಈ ಮೂರು ಭಾಷೆಗಳಲ್ಲಿ ಇಂತಹ ಸಂಪರ್ಕದಿಂದಾಗಿ ಉದ್ಭವಿಸಿದ ಒಂದು ಪದವನ್ನು ನೋಡೋಣ. ಕನ್ನಡದಲ್ಲಿ ಉಣ್ಣೆ ಎಂದು ಕರೆಯಲಾಗುವ ಪದವು ಸಂಸ್ಕೃತದ ಊರ್ಣ ಪದದಿಂದ ಬಂದಿದೆ ಎಂದು ಸಂಸ್ಕೃತ ಪಂಡಿತರು ಹೇಳುತ್ತಾರೆ. ಆದರೆ ಇದು ಹೀಗೂ ಇರಬಹುದು:

ಕನ್ನಡದ ಉಣ್ಣೆ ಪದವು ‘ಊಲ್+ನೆಯ್’ ಎನ್ನುವ ಪದಗಳ ಜೋಡಣೆಯಿಂದ ಬಂದಿದೆ. ಈ ಊಲ್ ಪದವು ಇಂಗ್ಲೀಶಿನಲ್ಲಿ ಬಳಸಲಾಗುವ wool ಪದವೇ ಹೌದು. ಯುರೋಪದ ಅನೇಕ ಭಾಷೆಗಳಲ್ಲಿ ‘ವೂಲ್’ಗೆ ಸಮಾನವಾದ ಉಚ್ಚಾರವಿರುವ ಪದಗಳಿವೆ. ಇನ್ನು ನೆಯ್ ಅನ್ನುವುದು ಅಚ್ಚ ಕನ್ನಡ ಪದ. ಯುರೋಪಿಯನ್ ‘ವೂಲ್’ಅನ್ನು ಕನ್ನಡಿಗರು ನೆಯ್ದು ಉಣ್ಣೆಯನ್ನು ಮಾಡಿದರು. ಇದು ವ್ಯಾಪಾರ ಸಂಪರ್ಕದ ಫಲ. ಈ ಉಣ್ಣೆಯೇ ಸಂಸ್ಕೃತದಲ್ಲಿ ಊರ್ಣ ಎಂದು ಬದಲಾಗಿದೆ! ಆದರೆ ಸಂಸ್ಕೃತ ಪಂಡಿತರು ಊರ್ಣ ಪದದಿಂದಲೇ ಉಣ್ಣೆ ಎನ್ನುವ ಪದ ಬಂದಿದೆ ಎಂದು ಹೇಳುತ್ತಾರೆ. ಇದು ಮಗನಿಂದ ಅಪ್ಪ ಹುಟ್ಟಿದ ಎಂದು ಹೇಳಿದ ಹಾಗೆ!

[ಕನ್ನಡದಲ್ಲಿ ನೆಯ್ ಎನ್ನುವ ಕ್ರಿಯಾಪದದಿಂದ ಸಾಧಿಸಲ್ಪಟ್ಟ ಅನೇಕ ಪದಗಳಿವೆ.
ಎರಡು ಉದಾಹರಣೆಗಳು: ಎಳ್+ನೆಯ್ = ಎಣ್ಣೆ; ಬೆಳ್+ನೆಯ್ = ಬೆಣ್ಣೆ
ಇದರಂತೆಯೇ ‘ಊಲ್+ನೆಯ್’ = ಉಣ್ಣೆ.]

ಕನ್ನಡದ ಇನ್ನೂ ಕೆಲವು ಪದಗಳು ಯುರೋಪಿಗೆ ತೆರಳಿವೆ. ಉದಾಹರಣೆಗೆ ಕನ್ನಡದ ಬತ್ತ ಪದವು ಇಂಗ್ಲೀಶಿನಲ್ಲಿ paddy ಆಗಿದೆ. ಕಂದಮಿಳಿನ ಅರಿಶಿ ಪದವು ಇಂಗ್ಲೀಶಿನಲ್ಲಿ rice ಆಗಿದೆ. (ಕನ್ನಡದಲ್ಲಿ ಇದು ಅಕ್ಕಿಯಾಗಿ ಬದಲಾವಣೆ ಹೊಂದಿತು.)

ಆರ್ಯಭಾಷಿಕರು ಹಾಗು ಕನ್ನಡಿಗರು ವ್ಯಾಪಾರಕ್ಕಾಗಿ ಸಂಪರ್ಕಿಸಿದಾಗ ಇಬ್ಬರಿಗೂ ಅರ್ಥವಾಗಬೇಕು ಎನ್ನುವ ಉದ್ದೇಶದಿಂದ ದ್ವಿಭಾಷಿಕ ಜೋಡುಪದಗಳು ಹುಟ್ಟಿಕೊಂಡವು. ಉದಾಹರಣೆಗೆ: ಕರ್ಪಟ. ಕರ ಇದು ಸಂಸ್ಕೃತ ಪದವಾಗಿದೆ ಹಾಗು ಪಟ್ಟ ಇದು ಕನ್ನಡದ ಪದವಾಗಿದೆ. (ಪಟ್ಟ ಪದವೇ ಕಾಲಾನುಕ್ರಮದಲ್ಲಿ ಬಟ್ಟೆಯಾಗಿ ಬದಲಾಯಿತು. ಸಂಸ್ಕೃತದ ಮತ್ತೊಂದು ಪದ ‘ಅಂಶು’(=ನೂಲು) ಜೊತೆಗೆ ಕನ್ನಡದ ‘ಪಟ್ಟ’ ಕೂಡಿದಾಗ ‘ಅಂಶುಪಟ್ಟ’ ಎನ್ನುವ ಪದ ಹುಟ್ಟಿತು.)

ಈ ಕರ್ಪಟ ಪದದಿಂದ ಹಿಂದಿ ಭಾಷೆಯಲ್ಲಿ ಕಪಡಾ ಎನ್ನುವ ಪದ ಹುಟ್ಟಿಕೊಂಡಿತು. (ಹತ್ತಿಯ) ಬಟ್ಟೆಗಳನ್ನು ಮಾರುವವನು ‘ಕಪಾಡಿಯಾ’ ಅಥವಾ ‘ಕಪಟಕರ’ ಆದ. ( ಬೆಲ್ಲದ ವ್ಯಾಪಾರಿಯು ಕನ್ನಡದಲ್ಲಿ ‘ಬೆಲ್ಲದ’ ಆಗುತ್ತಾನೆ. ಈತನೇ ಮತಾಂತರಗೊಂಡ ಮೇಲೆ ‘ಗೂಡವಾಲಾ’ ಆಗುತ್ತಾನೆ ಎಂದು ನಾಡೋಜ ಪಾಟೀಲ ಪುಟ್ಟಪ್ಪನವರು ಮುನಿಸಿನಿಂದ ಹೇಳುತ್ತಿದ್ದರು!)

ಈ ‘ಪಟ್ಟ’ ಪದವು ಕನ್ನಡದಲ್ಲಿ ಎಷ್ಟೆಲ್ಲ ರೂಪಗಳಲ್ಲಿ ಬಳಕೆಯಲ್ಲಿ ಇದೆ ಎನ್ನುವುದನ್ನು ಗಮನಿಸಿರಿ:
ತಲೆಗೆ ಸುತ್ತುವ ಬಟ್ಟೆಯ ರುಮಾಲಿಗೆ ಪಟಕಾ(ಗಾ) ಎಂದು ಹೇಳುತ್ತಾರೆ. ಪಗಡೆಯನ್ನು ಆಡುವ ಹಾಸು ಇರುತ್ತದಲ್ಲ, ಅದಕ್ಕೆ ಪಗಡೆಪಟ್ಟ ಎಂದು ಕರೆಯುತ್ತಾರೆ. ವಸ್ತುಗಳನ್ನು ಕಟ್ಟಲು ಬಳಸುವ ಅರಿವೆಗೆ ಕಟ್ಟಾಪಟ್ಟಿ ಎನ್ನುತ್ತಾರೆ. ಬಟ್ಟೆಯ ಸೀರೆಗೆ ಪಟ್ಟೆಸೀರೆ ಎನ್ನುತ್ತಾರೆ. ಈ ಪಟ್ಟೆ ಸೀರೆಗೆ ಬಣ್ಣ ಹಾಕುವ ಸಮುದಾಯವನ್ನು ಪಟ್ಟೆಗಾರರು ಎಂದು ಕರೆಯುತ್ತಾರೆ.

(ಉತ್ತರಭಾರತದಲ್ಲಿ ತುರ್ಕರ ಆಕ್ರಮಣವಾದಾಗ ಕಾಳಗದಲ್ಲಿ ಸೋತಂತಹ ಭಾರತೀಯ ಪಡೆಗಳು ದಕ್ಷಿಣದಲ್ಲಿ ಆಶ್ರಯ ಪಡೆದರು. ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯವಂಶದ ಕೆಲವು ಬಣಗಳು ಈ ಸಮಯದಲ್ಲಿ ಕರ್ನಾಟಕದಲ್ಲಿ ನೆಲೆಸಿದವು. ಇವರ ಕುಲದೇವಿಯಾದ ಹಿಂಗುಲಾಂಬಾ ದೇವಿಯ ಗುಡಿ ಪಾಕಿಸ್ತಾನದಲ್ಲಿ ಇದೆ. ಬಟ್ಟೆಗಳಿಗೆ ಬಣ್ಣ ಹಾಕುವ ಕಾಯಕವನ್ನು ಕೈಗೆತ್ತಿಕೊಂಡ ಈ ಬಣಗಳು ‘ಪಟ್ಟೆ(ಬಟ್ಟೆ)ಗಾರರಾದರು.  ಇದೀಗ ಈ ಕಸಬನ್ನು ಇವರು ಕೈಬಿಟ್ಟಿದ್ದಾರೆ ಹಾಗು ತಮ್ಮನ್ನು ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡಿದ್ದಾರೆ.)

ಇದೇನಿದು, ಪ(ಬ)ಟ್ಟೆಸೀರೆ ಎಂದು ಯಾಕೆ ಹೇಳುತ್ತೀರಿ? ಸೀರೆ ಬಟ್ಟೆಯದೇ ಆಗಿರಬೇಕಲ್ಲವೆ ಎಂದು ಕೆಲವರು ಕೇಳಬಹುದು. ಇದು ಹಾಗಲ್ಲ. ಹತ್ತಿಯ ಬಟ್ಟೆಗಳು ಬಳಕೆಗೆ ಬರುವ ಪೂರ್ವದಲ್ಲಿ ಜನರು ತೊಗಲನ್ನೇ ಸುತ್ತಿಕೊಳ್ಳುತ್ತಿದ್ದರಲ್ಲವೆ? ದೇಹಕ್ಕೆ ಸುತ್ತಿಕೊಳ್ಳುವ ಹೊದಿಕೆಗೆ ಸಂಸ್ಕೃತದಲ್ಲಿ ‘ಚೀರ’ ಎನ್ನುತ್ತಾರೆ. ಚಿಗರಿಯ ಚರ್ಮವನ್ನು ಧರಿಸಿದವನು ‘ಚೀರಕೃಷ್ಣಾಜಿನಧರ’ನಾಗುತ್ತಾನೆ. ಈ ಚೀರವೇ ಕನ್ನಡದ ಸೀರೆ. ಹಿಂದಿಯಲ್ಲಿ ಇದು ‘ಸಾಡೀ’ ಆಗಿದೆ. ಸುತ್ತಿಕೊಂಡಾಗ ‘ಚೀರ’ವಾಗುವುದು, ಕೈಯಲ್ಲಿ ಹಿಡಿದುಕೊಂಡಾಗ ‘ಚೀಲ’ವಾಗುತ್ತದೆ. ತೊಗಲಿನ ಬದಲು ಹತ್ತಿಯ ಬಟ್ಟೆಯನ್ನು ಬಳಸಿದಾಗ ‘ಪಟ್ಟೆಚೀರ’ ಅಂದರೆ ಪಟ್ಟೆಸೀರೆ ಅರ್ಥಾತ್ ಹತ್ತಿಯ ಬಟ್ಟೆಯ ಸೀರೆ ಆಗುತ್ತದೆ!

ಪದಗಳಷ್ಟೇ ಅಲ್ಲ, ಕೆಲವೊಂದು ಊರುಗಳ ಹೆಸರುಗಳೂ ಸಹ ಇಂತಹ ‘ದ್ವಿಭಾಷಿಕ’ ಪದಗಳೇ ಆಗಿವೆ. ಉದಾಹರಣೆಗೆ ‘ಲಕ್ಷದ್ವೀಪ’ವನ್ನೇ ತೆಗೆದುಕೊಳ್ಳಿರಿ. ಇದರ ಮೂಲ ಹೆಸರು: ಲಕ್‍ದೀವ. ಕನ್ನಡದಲ್ಲಿ ಲಕ್ ಎಂದರೆ ನಡುಗಡ್ಡೆ. ಸಂಸ್ಕೃತದಲ್ಲಿ ದ್ವೀಪ ಎಂದರೆ ನಡುಗಡ್ಡೆ. ಲಕ್ ಮತ್ತು ದ್ವೀಪ(=ದೀವ್)ಗಳನ್ನು ಜೊತೆಗೂಡಿಸಿದಾಗ ಲಕ್‍ದೀವ ಹುಟ್ಟಿಕೊಂಡಿತು. ಅದನ್ನು ಮರುಸಂಸ್ಕೃತೀಕರಣಗೊಳಿಸಿದಾಗ, ಅದೇ ‘ಲಕ್ಷದ್ವೀಪ’ವಾಯಿತು! (‘ಲಂಕಾ’ದ ಅರ್ಥವು ಸಹ ದ್ವೀಪ ಎಂದೇ ಆಗಿದೆ.)

ಆರ್ಯಭಾಷೆಯ ದೀವ್‍ಗೆ ಕನ್ನಡದ ‘ಗಿ’ ಪ್ರತ್ಯಯ ಸೇರಿದಾಗ ದೀವಗಿ ಎನ್ನುವ ಊರು ಹುಟ್ಟುತ್ತದೆ. (ಕನ್ನಡದಲ್ಲಿ ‘ಗಿ’ ಹಾಗು ‘ಜಿ’ ಇವು ಸ್ಥಳವಾಚಕ ಪ್ರತ್ಯಯಗಳು. ಉದಾ: ನೀರಲಗಿ, ಜಂಬಗಿ, ಪಣಜಿ, ಕೊಂಡಜ್ಜಿ ಇತ್ಯಾದಿ.)
ಕನ್ನಡದ ಕೆಲವು ಪದಗಳು ಮಾತ್ರ ಪೂರ್ಣಶಃ ಆರ್ಯಭಾಷೆಗಳಿಂದ ಹುಟ್ಟಿಕೊಂಡತಹವು. ಉದಾಹರಣೆಗೆ ಕನ್ನಡದಲ್ಲಿರುವ ಮಡಕೆ ಹಾಗು ತಂಬಿಗೆ ಎನ್ನುವ ಪದಗಳನ್ನು ನೋಡಬಹುದು. ತಾಮ್ರದ ಉತ್ಖನನ ಹಾಗು ಬಳಕೆ ಪ್ರಾರಂಭವಾದ ನಂತರ, ತಾಮ್ರದಿಂದ ಮಾಡಿದ ಪಾತ್ರೆಗಳಿಗೆ ‘ತಾಂಬಾ’ ಎಂದು ಕರೆದರು. ಅದುವೇ ಕನ್ನಡದ ತಂಬಿಗೆ. ಸಂಸ್ಕೃತದಲ್ಲಿ ಮೃದ್ ಎಂದರೆ ಹಸಿಮಣ್ಣು (clay). (ಇಂಗ್ಲೀಶಿನ mudಅನ್ನು ನೆನಪಿಸಿಕೊಳ್ಳಿ.) ಮೃದ್‍ದಿಂದ ಮಾಡಿದ ಪಾತ್ರೆಯೇ ಮಡಕೆ! ಆರ್ಯಭಾಷೆಗಳಲ್ಲಿ ಇದು ಮಟಕಾ.

ಸಂಸ್ಕೃತದ ಸ್ಥಾಲಿ ಇದು ಕನ್ನಡದಲ್ಲಿ ಥಾಲಿ ಆಯಿತು. ಈ ಸ್ಥಾಲಿಯಲ್ಲಿ ‘ಪಿಷ್ಟ’ ಅಂದರೆ ಹಿಟ್ಟನ್ನು ಕಲಿಸಿ, ಬಡಿದು ಎಣ್ಣೆಯಲ್ಲಿ ಬೇಯಿಸಿದಾಗ ‘ಥಾಲಿಪೀಠ’ ಎನ್ನುವ ಸ್ವಾದಿಷ್ಟ ತಿನಿಸು ತಯಾರಾಗುತ್ತದೆ. ಕನ್ನಡಿಗರ ಬಾಯಿಯಲ್ಲಿ ಅದು ಚರ್ವಿತಚರ್ವಣಗೊಂಡು ‘ಥಾಲಿಪೆಟ್ಟು’ ಎನ್ನುವ ರೂಪವನ್ನು ತಾಳಿತು!

ಅಡುಗೆಯ ತಿನಿಸುಗಳಂತೂ ‘ಸಮಗ್ರ ಭಾರತೀಯ’ವಾಗಿವೆ. ಉದಾಹರಣೆಗೆ: ರೋಟಿ, ಭಾತ್ ಇತ್ಯಾದಿ.

ಅದೇಕೆ, ಜಾಗತೀಕರಣದ ಫಲವಾಗಿ ಪಾಶ್ಚಾತ್ಯರ ಪಿಝಾ ಕೂಡ ಈಗ ಭಾರತೀಯ ಪದವೇ ಆಗಿದೆ!

30 comments:

Srikanth Manjunath said...

ಆರ್ಯಭಾಷಿಕರು ಹಾಗು ಕನ್ನಡಿಗರು ವ್ಯಾಪಾರಕ್ಕಾಗಿ ಸಂಪರ್ಕಿಸಿದಾಗ ಇಬ್ಬರಿಗೂ ಅರ್ಥವಾಗಬೇಕು ಎನ್ನುವ ಉದ್ದೇಶದಿಂದ ದ್ವಿಭಾಷಿಕ ಜೋಡುಪದಗಳು ಹುಟ್ಟಿಕೊಂಡವು.

ಕರೆಯುವುದಕ್ಕೆ ಗುರುತಿಸಿಕೊಳ್ಳುವುದಕ್ಕೆ ಉಪಯೋಗಿಸುವ ಪದಗಳ ಹಿಂದೆ ಅಮೋಘ ಕಥಾನಕ ಅಥವಾ ಚರಿತ್ರೆ ಇದೆ ಎಂದು ಅರಿತಿದ್ದೆ.. ನೀವು ಪ್ರತಿಯೊಂದು ಪದವನ್ನು ಅರ್ಜುನ ತನ್ನ ಬತ್ತಳಿಕೆಯಿಂದ ತೆಗೆದು ಸರಿಯಾದ ಗುರಿಗೆ ಬಿಡುವಂತೆ ಬಿಡಿಸಿ ಅರ್ಥ ವಿಸ್ತಾರ ಮಾಡಿರುವ ಪರಿ ಸುಂದರ ಸರ್ಜಿ..

ಬಹು ಉಪಯುಕ್ತ ಲೇಖನ ಮಾಲಿಕೆ.. ಇದನ್ನು ಓದಿದ್ದು ನನ್ನ ಪುಣ್ಯ ಎನ್ನುವ ಭಾವ ನನ್ನದು..

Badarinath Palavalli said...

ನನ್ನ ಮೆಚ್ಚಿನ ಸ್ಥಳ ನಾಮ, ಪದೋತ್ಪತ್ತಿ ಮತ್ತು ಇತರೆಡೆಗೆ ವಲಸೆ ಹೋದ ಕನ್ನಡ ಪದಗಳನ್ನು ಕೈಗೆತ್ತಿಕೊಂಡದ್ದಕ್ಕೆ ಅನಂತ ವಂದನೆಗಳು.

ತಾವು ೨೦೦೮ರಲ್ಲಿ ಬರೆದ ಕರ್ನಾಟಕದ ಸ್ಥಳ ನಾಮಗಳು ಒಂದು ಅಧ್ಯಯನ, ನನಗೆ ಮೆಚ್ಚಿನ ಸಂಶೋಧನಾ ಗ್ರಂಥ.

ಸಿಂಧು ಸಂಸ್ಕೃತಿಯ ಕಗ್ಗಂಟು ಬಿಡಿಸುವ ಕಾಲ ಸನ್ನಿಹದಲ್ಲಿದೆ ಎಂದು ಪತ್ರಿಕೆಗಳು ವರದಿ ಮಾಡಿತ್ತು. ಉತ್ತರ ಪ್ರದೇಶದ ವಿಜ್ಞಾನಿಯೊಬ್ಬರ ಮುಂದಾಳತ್ವದಲ್ಲಿ ಪುರಾತನ ತಜ್ಞರು, ಭಷಾ ವಿದ್ವಾಂಸರು, ಇತಿಹಾಸ ತಜ್ಞರ ಜೊತೆ ಕಂಪ್ಯೂಟರ್ ಪರಿಣಿತರ ತಂಡ ಸಧ್ಯದಲ್ಲೇ ಚಟುವಟಿಕೆ ಆರಂಭಿಸುತ್ತದಂತೆ. ಕಗ್ಗಂಟು ಇಡಿಗಂಟಾಗುವ ಕಾಲ ಬೇಗ ಬರಲಿ.

ಈ ಚೀರಾ ಯಥಾವತ್ ತೆಲುಗಿನಲ್ಲಿ ಈಗಲೂ ಬಳಕೆಯಲ್ಲಿದೆ. ಹಾಗೆಯೇ ಪಟ್ಟು ಚೀರ (ರೇಷಿಮೆ ಸೀರೆ)

ವಿಠ್ಠಲನಿಗೂ ಇಟ್ಟಿಗೆಗೂ ಸತ್ಸಂಬಂಧ.

ಪುರಾತನ ಭಾರತೀಯ ಕಾಲಮಾನದಲ್ಲಿ, ಕನ್ನಡವು ವ್ಯಾಪಿಸಿದ ರೀತಿ ಹೆಮ್ಮೆ ತರಿಸಿತು.

ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ನೆಲದಿಂದ ಲೂಟಿ ಮಾಡಿ ಒಯ್ದ ಪದಾರ್ಥಗಳು ಈಗ ಪಾಶ್ಚಿಮಾತ್ಯರ ಬಾಯಲ್ಲಿ ಏನೇನು ಪರಿವರ್ತಿತವಾಗಿವೆಯೋ? ಅಲ್ಲವೇ ಸಾರ್.

ಒಂದು ಬಾಲಂಗೋಚಿ:
ಮಾವಿನ ಕಾಯಿಯ ಓಟೆ - ವಾಟೆಯ ಅಕಾರದ ಕಲ್ಲಿರುವ ಬೆಟ್ಟದ ಪಕ್ಕದಲ್ಲಿ ಕಟ್ಟಿಕೊಂಡ ಹೊಸ ಹಳ್ಳಿ, ವಾಟದ ಹೊಸ ಹಳ್ಳಿ (ಆಂಧ್ರಕ್ಕೆ ಅತಿ ಸನಿಹದಲ್ಲಿರುವ ಕಾರಣ, ವಾಟಂಕೊತ್ತ ಪಲ್ಲಿ).
ಇದು ನನ್ನ ಹಳ್ಳಿ.

Badarinath Palavalli said...

ಫೆಸ್ ಬುಕ್ಕಿನ. 3K - ಕನ್ನಡ ಕವಿತೆ ಕವನ ಗುಂಪಿನಲ್ಲಿ share ಮಾಡಿದ್ದೇನೆ:

https://m.facebook.com/groups/191375717613653?view=permalink&id=594766373941250&refid=18&_ft_

sunaath said...

ಧನ್ಯವಾದಗಳು ಶ್ರೀಕಾಂತ. ಬಹುಶ: ಒಂದು ಭಾಷೆಯಲ್ಲಿಯ ಶೇಕಡಾ ಐವತ್ತರಷ್ಟು ಪದಗಳು ಪರಭಾಷೆಯಿಂದ ಆಮದಾದ, ಬದಲಾವಣೆಗೊಂಡ ಪದಗಳೇ ಆಗಿರಬಹುದೇನೊ ಎನ್ನುವ ಸಂಶಯ ಬರುತ್ತಿದೆ!

sunaath said...

ಬದರಿನಾಥರೆ,
ಕನ್ನಡ, ತುಳು, ತೆಲುಗು, ಮಲೆಯಾಳಂ ಹಾಗು ತಮಿಳು ಭಾಷೆಗಳಲ್ಲಿ ಸೋದರ ಸಂಬಂಧವಿದ್ದು, ಸಂಸ್ಕೃತದ ಜೊತೆಗೂ ಸಹ ಈ ಭಾಷೆಗಳಿಗೆ ಆಪ್ತತ್ವವಿದೆ. ಈ ಎಲ್ಲ ಭಾಷೆಗಳಲ್ಲಿಯೂ ಪಾಂಡಿತ್ಯವಿದ್ದವರಿಗೆ ಪದಮೂಲವನ್ನು ಶೋಧಿಸುವುದು ಸರಳ ಕಾರ್ಯವೆಂದು ಭಾಸವಾಗುತ್ತದೆ. ನಿಮಗೆ ತಿಳಿದ ಪದಮೂಲಗಳನ್ನು blog ಮೂಲಕ ತಿಳಿಸುತ್ತಿರಿ ಎಂದು ಬಿನ್ನವಿಸುತ್ತೇನೆ.

sunaath said...

ಬದರಿನಾಥರೆ,
Fbಯಲ್ಲಿ ಹಂಚಿಕೊಂಡದ್ದಕ್ಕಾಗಿ ಧನ್ಯವಾದಗಳು.

Swarna said...

ಭಾಷಾವಿಜ್ಞಾನದ ಜೊತೆಗೆ ಭೂಗೋಳವನ್ನೂ ಚಂದಗೆ ವಿವರಿಸಿದ ನಿಮಗೆ ವಂದನೆಗಳು. ಥಾಲಿಪೀಟ್ ನಿಂದ ಉಪ್ಪಿಟ್ ಬಂದಿರಬಹುದಾ ? (ಉಪ್ಪು + ಹಿಟ್ಟು ), ಗೋದಿ ಹಿಟ್ಟಿನ ಉಕ್ಡ ಪಿಂಡಿ ಅಂತ ಮಾಡ್ತಾರಲ್ಲ ಆದರಿಂದ ಈ ಅನುಮಾನ ಬಂತು.

sunaath said...

ಸ್ವರ್ಣಾ
ಥಾಲಿಪೆಟ್ಟು ಹಾಗು ಉಪ್ಪಿಟ್ಟು ಎರಡಕ್ಕೂ ಹತ್ತಿರದ ಸಂಬಂಧವೇನೋ ಇದೆ. ಆದರೆ ಒಂದರಿಂದ ಒಂದು ಬಂದಿರಲಿಕ್ಕಿಲ್ಲ!

GUDDAPPA said...

ಲೇಖನದಲ್ಲಿ ವಿಷ್ಣು ಪದ ಮರಾಟಿಯಲ್ಲಿ ವಿಟ್ಟ ಎಂದು ಆಗಿದೆ ಎಂದು ಬರೆಯಲಾಗಿದೆ. ಆದರೆ ಇದು ತಪ್ಪು.ವಿಷ್ಣು ಎನ್ನುವದು ವಿಟ್ಟ ಎಂದಾಗುವದು ಕನ್ನಡದಲ್ಲಿ ಮಾತ್ರ.ಇದಕ್ಕೆ ಉದಾಹರಣೆ ಎಂದರೆ ಕೃಷ್ಣ ಎನ್ನುವದು ಕನ್ನಡದಲ್ಲಿ ಕಿಟ್ಟ,(ಕಿಟ್ಟು)ಆಗುತ್ತದೆ. ಹಾಗೆಯೇ ಕನ್ನಡದ ಹಲವಾರು ಶಾಸನಗಳಲ್ಲಿ ಬಿಟ್ಟ,ಬಿಟ್ಟಿದೇವ, ಎನ್ನುವ ವ್ಯಕ್ತಿ ಹೆಸರು ಸೂಚಕ ಪದಗಳಿವೆ. ಎಲ್ಲರಿಗು ಗೊತ್ತಿರುವಂತೆ ಹೊಯ್ಸಳ ದೊರೆ ವಿಷ್ಣುವರ್ಧನನ ಇನ್ನೊಂದು ಹೆಸರು ಬಿಟ್ಟಿದೇವ ಎಂದು. ಇ ವಿಷಯವನ್ನು ಅನೇಕ ಭಾಷಾ ವಿಜ್ಜ್ಞಾನಿಗಳು ಒಪ್ಪಿಕೊಂಡಿದ್ದು ವಿಟ್ಟಲ ನ ಮೂಲ ಕನ್ನಡ ಪದ ಎಂಬುವದು ಸರ್ವ ಒಪ್ಪಿತ ವಿಷಯವಾಗಿದೆ. ಇದಕ್ಕೆ ಕಲಶ ಇಟ್ಟಂತೆ ಜ್ಞಾನದೇವ ಅವರುಬರೆದ ಜ್ಞಾನೇಶ್ವರಿಯಲ್ಲಿ (ಇದು ಮರಾಟಿಯಲ್ಲಿ ದೊರೆತ ಪ್ರಥಮ ಗ್ರಂಥ ಕಾಲ ೧೨೫೦)ವಿಟ್ಟಲನನ್ನು ಕಾನಡಿ ವಿಟ್ಟಲ ಎಂದು ಹೇಳಿದ್ದಾರೆ.

Ramaprasad KV said...

ಸುನಾಥರೆ,

ನಿಮ್ಮ ಬರಹದಲ್ಲಿ ಒಂದು ತಪ್ಪು ನುಸುಳಿದೆ. ಸಿಂಧೂ/ಸರಸ್ವತಿ ಸಂಸ್ಕೃತಿಯಲ್ಲಿ ಯಾಗಯಜ್ಞಾದಿಗಳನ್ನು ಮಾಡಿರುವ ಕುರುಹಿಲ್ಲ ಅಂತ ನೀವು ಹೇಳಿದ್ದೀರಿ. ಇದು ಸರಿಯಲ್ಲ. ಕಾಲಿಬಂಗನ್ ನಲ್ಲಿ (ಬಹುಶಃ ಇನ್ನೂ ಕೆಲವು ಕಡೆ) ಯಜ್ಞವೇದಿಗಳು, ಇಟ್ಟಿಗೆಯಲ್ಲಿ ಕಟ್ಟಿರುವುವೇ ಸಿಕ್ಕಿವೆ. ನೀವು ಮೈಕೆಲ್ ಡ್ಯಾನಿನೋ ಅವರ "ಇನ್ ಸರ್ಚ್ ಆಫ್ ದ ಹಿಸ್ಟಾರಿಕ್ ಸರಸ್ವತಿ" ಎನ್ನುವ ಪುಸ್ತಕವನ್ನು ನೋಡಬಹುದು.

ಅಲ್ಲದೆ "ಆರ್ಯರು ಬರುವ ಮೊದಲಿನ" ಅನ್ನುವ ಅಭಿಪ್ರಾಯವೇ ಈಗ ಅನುಮಾನಾಸ್ಪದವಾಗಿದೆ. ಏಕೆಂದರೆ ಸಿಂಧೂ ಸರಸ್ಬತೀ ಕಾಲದಲ್ಲೇ ನಾವು "ಆರ್ಯ"ವೆಂದು ಯಾವುದನ್ನು ಗಣಿಸಿದ್ದೇವೋ ಅದು ಸಿಕ್ಕಿರುವಾಗ, ಅದಕ್ಕೆ ಮುಂಚೆ ಯಾರು ಎಲ್ಲಿಂದ ಬಂದರು ಅಂತ ಇದಮಿತ್ಥಂ ಅಂತ ಹೇಳುವುದಂತೂ ಕಷ್ಟವೇ.

ಒಟ್ಟಿನಲ್ಲಿ ಎಲ್ಲರೂ ಆಫ್ರಿಕಾದಿಂದ ಯಾವುದೋ ಕಾಲದಲ್ಲಿ ಹೊರಟು ಬಂದಿದ್ದಾರೆಂಬುದನ್ನು ಒಪ್ಪಬಹುದಾದರೂ, ಚರಿತ್ರೆಗೆ ಗೊತ್ತಿರುವ ಕಾಲದಲ್ಲಿ ಬೇರೆಡೆಯಿಂದ "ಆರ್ಯ"ರು ಬಂದರು ಅಂತ ಹೇಳುವುದನ್ನು ಒಪ್ಪುವುದೂ ಕಷ್ಟ.

umesh desai said...

ಮೊದಲಿಗೆ ಕ್ಷಮೆ ಕೇಳುವೆ ಬ್ಲಾಗಿಗೆ ಬರದೇ ಭಾಳದಿನ ಆದವು.
ಇದು ಸಂಗ್ರಹ ಯೋಗ್ಯ ಲೇಖನ ನಿಮ್ಮ ಉತ್ಸಾಹದ ಲವಲೇಶ ನನ್ನಂಥಹ
ರಣಹೇಡಿ(ಬ್ಲಾಗ್ ಹೇಡಿ..??)ಗಳಿಗೆ ದಾನ ಮಾಡರಿ..!!

ತೇಜಸ್ವಿನಿ ಹೆಗಡೆ said...

Very informative kaaka... thanks for it. :)

sunaath said...

ಗುಡ್ಡಪ್ಪನವರೆ,
ಧನ್ಯವಾದಗಳು. ನಾನು ‘ವಿಷ್ಣು’ ಪದವು ‘ವಿಟ್ಟ’ ಆಯಿತು ಎಂದು ಹೇಳಿಲ್ಲ. ಅದು ವಿಷ್ಟೋ ಆಯಿತು ಎಂದಿದ್ದೇನೆ. ಆರ್ಯಭಾಷೆಗಳಲ್ಲಿ ಇದು ಸಹಜ. ಉದಾಹರಣೆಗೆ ಕೃಷ್ಣ ಪದವು ಬಂಗಾಲಿಯಲ್ಲಿ ‘ಕೇಷ್ಟೋ’ ಆಗುತ್ತದೆ. ಕನ್ನಡದಲ್ಲಿ ಮಾತ್ರ ಈ ‘ಷ’ಕಾರ ಲೋಪವಾಗಿ ವಿಟ್ಟ ಹಾಗು ಕಿಟ್ಟ ಆಗುವುದು ಸಹಜವೇ ಆಗಿದೆ.

sunaath said...

ರಾಮಪ್ರಸಾದರೆ,
ಕಾಲಿಬಂಗನ್ ಹಾಗು ಲೋಥಾಲಗಳಲ್ಲಿ ಮಾತ್ರ ಯಜ್ಞಕುಂಡಗಳು ದೊರೆತಿವೆ. ಬೇರೆ ಸ್ಥಳಗಳಲ್ಲಿ ಸಿಕ್ಕಿಲ್ಲ. ಹಡಪ್ಪಾ ಸಂಸ್ಕೃತಿಯ ಕಾಲವನ್ನು ಕ್ರಿ.ಪೂ.೩೩೦೦ರಿಂದ ಕ್ರಿ.ಪೂ.೧೬೦೦ರವರೆಗೆ ಎಂದು ಗುರುತಿಸಲಾಗಿದೆ. ಕ್ರಿ.ಪೂ. ೨೦೦೦ದಿಂದ ಕ್ರಿ.ಪೂ.೧೫೦೦ರ ಅವಧಿಯಲ್ಲಿ ಆರ್ಯರು ಭಾರತವನ್ನು ಅಂದರೆ ಸಿಂಧು ಕೊಳ್ಳವನ್ನು ಪ್ರವೇಶಿಸಿದರು ಎಂದು ಹೇಳಲಾಗುತ್ತಿದೆ. ಕ್ರಿ.ಪೂ.೧೫೦೦ರಿಂದ ಕ್ರಿ.ಪೂ.೧೦೦೦ದ ಅವಧಿಯಲ್ಲಿ ಋಗ್ವೇದವನ್ನು ರಚಿಸಲಾಯಿತು ಎನ್ನಲಾಗಿದೆ. ಹಡಪ್ಪಾದ ಜನ ಕ್ರಿ.ಪೂ. ೨೪೦೦ರಲ್ಲಿ ಲೋಥಾಲಕ್ಕೆ ಗುಳೆ ಹೋದರು ಹಾಗು ಅಲ್ಲಿ ಈಗಾಗಲೇ ವಾಸಿಸುತ್ತಿದ್ದ ಜನರೊಡನೆ ಸಹಬಾಳ್ವೆಯನ್ನು ನಡೆಯಿಸಿದರು ಎಂದು ಹೇಳಲಾಗುತ್ತಿದೆ. ಯಜ್ಞಕುಂಡಗಳು ಕಾಲೀಬಂಗನ್ ಹಾಗು ಲೋಥಾಲಗಳಲ್ಲಿ ಮಾತ್ರ ದೊರೆತಿರುವದರಿಂದ, ಆ ಸ್ಥಳಗಳಲ್ಲಿ ಹಡಪ್ಪಾ ಸಂಸ್ಕೃತಿಯ ಹಾಗು ಅನ್ಯ ಸಂಸ್ಕೃತಿಯ ಜನತೆಯು ಕೂಡಿಕೊಂಡಿತು ಎಂದು ಹೇಳಬಹುದೇನೊ.
ಆರ್ಯರು ಭಾರತದಲ್ಲಿ ಮೊದಲಿನಿಂದಲೂ ಇದ್ದರೋ ಅಥವಾ ಅವರು ಆಗಮಿಗಳೋ ಎನ್ನುವುದು ಚರ್ಚಾಸ್ಪದವಾಗಿದ್ದರೂ ಸಹ, ಅನಾರ್ಯ ಜನಾಂಗಳು ಭಾರತದಲ್ಲಿ ವಾಸಿಸುತ್ತಿದ್ದವು ಎನ್ನುವುದು ನಿಸ್ಸಂಶಯ ಎಂದು ಅನಿಸುತ್ತದೆ.

sunaath said...

ದೇಸಾಯರ,
ನಾನೊಬ್ಬ ಉದ್ಯೋಗವಿಲ್ಲದ ಬಡಗಿ; ಏನನ್ನಾದರೂ ಕೆತ್ತುತ್ತ ಕುಳಿತಿರುತ್ತೇನೆ!

sunaath said...

ತೇಜಸ್ವಿನಿ,
ನಿಮಗೂ ಧನ್ಯವಾದಗಳು.

ಮಂಜುಳಾದೇವಿ said...

ಆಸಕ್ತಿದಾಯಕವಾದ ಮತ್ತು ತುಂಬಾ ಉಪಯುಕ್ತವಾದ ಲೇಖನವನ್ನು ಪ್ರಸ್ತುತಪಡಿಸಿರುವಿರಿ , ಧನ್ಯವಾದಗಳು ಸಾರ್

sunaath said...

ಮಂಜುಳಾದೇವಿಯವರೆ,
ನಿಮಗೂ ಧನ್ಯವಾದಗಳು.

ISHWARA BHAT said...

ಬಹಳ ಉಪಯುಕ್ತವಾದ ಜಿಜ್ಞಾಸೆಯನ್ನು ಹೊಂದಿದ ಲೇಖನ. ಈ ಕುರಿತಾಗಿ ಹಲವಷ್ಟನ್ನು ನಿರೀಕ್ಷಿಸುತ್ತೇವೆ.
,
ನಮಸ್ಕಾರಗಳು ಕಾಕಾ,
ಈಶ್ವರ ಭಟ್

Anil Talikoti said...

ಪದ ಉತ್ಪತ್ತಿ ಮತ್ತದರ ಬದಲಾವಣೆ ಬಹಳ ಚೊಲೊ ತಿಳಿಸಿರಿ. ಇಲ್ಲಿಗೆ ಬರುಕಿಂತಾ ಮೊದಲು 'ಅಜ್ಜಾ ಪಿಜ್ಜಾಕ ಸಜ್ಜಾಗು' ಅಂತ ಅಜ್ಜನ್ನ ಅಂಜಿಸ್ತಿದ್ದ ನನ್ನ ಮಗ -ಈಗ ಪಿಜ್ಜಾ ಬೆಂಗಳೂರಿನ್ಯಾಗ ಸಂದಿಗೊಂದ್ಯಾಗ ಸಿಗತಾವೇನೋ . ಹಂಗ ಇಲ್ಲಿ 'ಕರಿ', 'ಸಮೋಸಾ', 'ಚಟ್ನಿ' ಪದ ಎಲ್ಲಾ ಅಮೆರಿಕನಗೆ ಗೊತ್ತಿದ್ರೂ ಅವರ ಬಾಯಾಗ ಅವನ್ನ ಕೇಳಿದ್ರ 'ಇಟ್ಟಿಗೆ' ಹೋಗಿ 'ವೀಠಾ' ದಾಟಿ 'ವೀಠಹಾಲ' ಆಗುದು ಅಗದಿ ಖರೆ ಅನಸ್ತದ.

sunaath said...

ಈಶ್ವರ,
ಪದ-ವಿನೋದ-ವಿಹಾರದಲ್ಲಿ ಮತ್ತೆ ಭೆಟ್ಟಿಯಾಗೋಣ. ಆದರೆ ನಿಮ್ಮ ಮಲ್ಲಿಗೆಯ ಕಂಪು ಬ್ಲಾ*ಗಿನಲ್ಲಿ ಮತ್ತೆ ಏಕೆ ಸೂಸಿ ಬರುತ್ತಿಲ್ಲ?!

sunaath said...

ಅನಿಲರೆ,
‘ಅಜ್ಜಾ, ಪಿಜ್ಜಾಕ ಸಜ್ಜಾಗು’ ಓದಿ ತುಂಬಾ ನಕ್ಕೆ. ನಿಮ್ಮ ಮಗನೂ ಸಹ ನಿಮ್ಮಂತೆಯೇ ವಿನೋದ ಸ್ವಭಾವದವನು ಎಂದು ಅನಿಸುತ್ತದೆ. ನಿಮ್ಮಿಬ್ಬರಿಗೂ ಶುಭಾಶಯಗಳು.

Vinod Kumar said...

ಉತ್ತಮ ಮಾಹಿತಿಯುಕ್ತ ಲೇಖನ , ಧನ್ಯವಾದಗಳು

sunaath said...

ವಿನೋದಕುಮಾರರೆ,
ನಿಮ್ಮ ಸ್ಪಂದನೆಗೆ ತುಂಬಾ ಧನ್ಯವಾದಗಳು.

Anonymous said...

Nice kaka

Subrahmanya said...

ಪದವಿನೋದ ೧ ರಲ್ಲಿ 'ಕನಿಮೋಳಿ' ಯ ಬಗೆಗೆ ಓದಿ ಅಚ್ಚರಿಯಾಯಿತು !. ನಮ್ಮ ಪ್ರೀತಿಯ ಪುಟ್ಟಿ (೨G) ಏನೆಲ್ಲಾ ಮಾಡಿದ್ದಾಳೆ ಎಂದೆನಿಸಿತು.

ಪದ ೨ ರಲ್ಲಿ ವಿಠಲನ ಬಗೆಗೆ ತಿಳಿಸಿಕೊಟ್ಟಿದ್ದಕ್ಕೆ ಅನೇಕ ಧನ್ಯವಾದಗಳು. ಈ ಮಾಹಿತಿಗಳಿಂದ ವೈಯಕ್ತಿಕವಾಗಿ ಉಪಯೋಗವಾಯಿತು. (ಈಚೀಚೆಗಷ್ಟೆ ವಿಠ್ಠಲ-ರುಕುಮಾಯಿ ಮಂದಿರದ ಪ್ರಾರಂಭೋತ್ಸವದಲ್ಲಿ ಪಾಲ್ಗೊಂಡಿದ್ದೆ). ದಯವಿಟ್ಟು ಈ ಸರಣಿಯನ್ನು ಬೆಳೆಸಿ.

sunaath said...

Thank you, anonymus.

sunaath said...

ಸುಬ್ರಹ್ಮಣ್ಯರೆ,
ವಿಠ್ಠಲ-ರುಕುಮಾಯಿ ಆಶೀರ್ವಾದ ಪಡೆದ ನೀವೇ ಪುಣ್ಯವಂತರು!

ಜಲನಯನ said...

ಸುನಾಥಣ್ಣ,,,
ನನಗೆ ನಿಜಕ್ಕೂ ಬೇಸರವಾಗುತ್ತಿದೆ..ನಿಮ್ಮ ಈ ಅಗಾಧ ಜ್ಞಾನವನ್ನು ಸ್ವಲ್ಪ ಸ್ವಲ್ಪವಾದರೂ ಪದಾರ್ಥ ಚಿಂತಾಮಣಿಯಲ್ಲಿ ನಿಮಗೆ ಬಿಡುವಾದಾಗ ಹಂಚಿಕೊಳ್ಳಿ...ನಮಗೂ ಕಲಿತುಕೊಳ್ಳುವ ಅವಕಾಶ ಸಿಗಲಿ...
ಇಟ್ಟಿಗೆಯ ಹುಟ್ಟು..ವಾಹ್...!! ನನಗೆ ಮಾತ್ರವಲ್ಲ ಎಷ್ಟೋ ಮಂದಿ ಕನ್ನಡಿಗರಿಗೆ ತಿಳಿದಿರಲಿಕ್ಕಿಲ್ಲ...
ಅಣ್ಣಾ ನನ್ನ ಕಳಕಳಿಯ ವಿನಂತಿ- ಆಗೊಮ್ಮೆ ಈಗೊಮ್ಮೆಯಾದರೂ ಬಂದು ನಮ್ಮನ್ನು ತಿದ್ದಿ ನಿಮ್ಮ ಜ್ಞಾನ ಹಂಚಿಕೊಳ್ಳಿ.

sunaath said...

ಜಲನಯನ,
FaceBook ನನಗೆ ಬಗೆಹರಿಯದ ಸಮಸ್ಯೆ. ಕೆಲವೊಮ್ಮೆ ಅದರಲ್ಲಿ ಪ್ರವೇಶಿಸಿ, ಏನೂ ತಿಳಿಯದೆ ಕಂಗಾಲಾಗಿ ಹೋದೆ. ಆದುದರಿಂದ........