ಹೆಣ್ಣು ಕೂಸು ಎನ್ನುವ ಪದವು ಆಡುಭಾಷೆಯಲ್ಲಿ ‘ಹೆಂಗೂಸು’ ಎಂದಾಗಿ, ಕೊನೆಗೊಮ್ಮೆ ‘ಹೆಂಗಸು’ ಎಂದಾಯಿತು. ಗಂಡಸು ಎನ್ನುವ ಪದವೂ ಸಹ ಗಂಡುಕೂಸು ಎನ್ನುವ ಪದದ ಅಪಭ್ರಂಶವಾಗಿದೆ. ‘ಗಂಡ’ ಎನ್ನುವ ಪದವು ‘ಗಂಡು’ ಎನ್ನುವ ಪದದಿಂದ ಬಂದಿರುವುದು ಸಹಜವೇ. ಆದರೆ ಈ ಮಾರ್ಪಾಡು ಹೇಗಾಯಿತು ಅಂತೀರಾ? ಮದುವೆಯಾದ ಮೇಲೆ ಹೆಣ್ಣು ‘ಗಂಡು’ವಿನ ಬಾಲ ಕತ್ತರಿಸುತ್ತಾಳೆ ತಾನೆ? ಆದುದರಿಂದಲೇ ‘ಗಂಡು’ ‘ಗಂಡ’ನಾಗುವುದು!
ಗಂಡು ಪದದಿಂದ ಗಂಡ ಪದ ಬಂದಿದ್ದರೆ, ‘ಹೆಂಡತಿ’ ಎನ್ನುವ ಪದ ಹೇಗೆ ಬಂದಿತು? ಹೆಣ್ಣು ಪದದಿಂದ ‘ಹೆಣ್ಣತಿ’ ಪದ ಹುಟ್ಟಿ, ಅದೇ ‘ಹೇಣತಿ’ ಎಂದು ಬದಲಾಯಿಸಿರಬಹುದು. ಆದರೆ ‘ಹೇಣತಿ’ ಪದವು ‘ಹೆಂಡತಿ’ ಎಂದು ಬದಲಾಗಲು ಸಾಧ್ಯವಿಲ್ಲ. ಈಗ ನೋಡಿ, ಹೆಣ್ಣು ಕೋಳಿಗೆ ಹೇಂಟೆ ಎಂದೂ ಕರೆಯುತ್ತಾರಲ್ಲವೆ? ಈ ಹೇಂಟೆ ಎನ್ನುವ ಪದವು ಪಕ್ಷಿಗಳಲ್ಲಿಯ ಸ್ತ್ರೀವರ್ಗಕ್ಕೆ ಅನ್ವಯಿಸುತ್ತದೆ. ಅರ್ಥಾತ್ ಹೇಂಟೆ ಎಂದರೆ ಹೆಣ್ಣು. ‘ಹೇಂಟೆ+ತಿ’ ಕೂಡಿಕೊಂಡು ‘ಹೇಂಟತಿ’ ಎನ್ನುವ ಪದ ಹುಟ್ಟಿಕೊಂಡು ಅದೇ ಮುಂದೆ ‘ಹೆಂಡತಿ’ ಎಂದು ಬದಲಾಗಿದೆ.
ಆಡುಮಾತಿನಲ್ಲಿ ಪದಗಳ ಉಚ್ಚಾರವಷ್ಟೇ ಅಲ್ಲ, ವ್ಯಾಕರಣವೂ ಸಹ ಬದಲಾಗಿ ಬಿಡುತ್ತದೆ. ಉದಾಹರಣೆಗೆ ‘ಆಕಳು’. ‘ಆವು’ ಪದದ ಅರ್ಥವು ಗೋವು ಎಂದಾಗುತ್ತದೆ. ಬಹುವಚನದಲ್ಲಿ ‘ಆವು’ ಪದವು ‘ಆವುಗಳು’ ಆಗುತ್ತದೆ. ಗೊಲ್ಲರ ದೊಡ್ಡಿಯಲ್ಲಿ ಒಂದೇ ಆವು ಎಲ್ಲಿರುತ್ತದೆ? ಅಲ್ಲಿರುವವು ಆವುಗಳು. ಆವುಗಳು ಎನ್ನುವುದು ಬಹುಶಃ ಉಚ್ಚಾರಕ್ಕೆ ತೊಡಕಾಗುವುದರಿಂದ ‘ಆವುಗಳು’ ಎನ್ನುವ ಪದವೇ ‘ಆಕಳು’ ಆಗಿ ಬದಲಾಗಿದೆ. ಇದೀಗ ಒಂದೇ ಆವಿಗೂ ನಾವು ಆಕಳು ಎಂದೇ ಕರೆಯುತ್ತೇವೆ ಹಾಗು ಅನೇಕ ಆವುಗಳಿಗೆ ಆಕಳುಗಳು ಎಂದು ಕರೆಯುತ್ತೇವೆ! ಇದೇ ರೀತಿಯಲ್ಲಿ ಮಗು ಪದದ ಬಹುವಚನವಾದ ಮಗುಗಳು ಎನ್ನುವ ಪದವು ಆಡುಮಾತಿನಲ್ಲಿ ಮಕ್ಕಳು ಎಂದಾಗಿದೆ.
ಸಿಂಪಿಗ ಎನ್ನುವ ಪದದ ಮೂಲವು ಸ್ವಾರಸ್ಯಪೂರ್ಣವಾಗಿದೆ. ಸಿಂಪು ಎಂದರೆ ಸಮುದ್ರದಾಳದ ಒಂದು ಅತಿಪುಟ್ಟ ಜೀವಿಯ ಕಠಿಣವಾದ ಹೊರಮೈ. ಉಚ್ಚಾರಭೇದದಿಂದಾಗಿ ಸಿಂಪು ಪದವನ್ನು ಚಿಪ್ಪು ಎಂದೂ ಹೇಳಬಹುದು. ಕನ್ನಡದಲ್ಲಿ ಚಿಪ್ಪು ಇದನ್ನು ಸ್ವಲ್ಪ ದೊಡ್ಡ ಪ್ರಾಣಿಗಳ ಒರಟಾದ ಹೊರಮೈಗೆ ಬಳಸುತ್ತಾರೆ, ಉದಾಹರಣೆಗೆ ಆಮೆಯ ಚಿಪ್ಪು. ತೆಂಗಿನಕಾಯಿಯ ಕವಚಕ್ಕೂ ಚಿಪ್ಪು ಎಂದೇ ಹೇಳುತ್ತಾರೆ. ಒಟ್ಟಿನಲ್ಲಿ ಚಿಪ್ಪು ಅಥವಾ ಸಿಂಪು ಅಂದರೆ ಕವಚ. ಈ ಕವಚವನ್ನು ಸಿದ್ಧಪಡಿಸುವವನೇ ಸಿಂಪಿಗ.
ಹತ್ತಿ ಬಟ್ಟೆಯ ಶೋಧನೆ ಆಗುವ ಮೊದಲು ಗಿಡದ ತೊಪ್ಪಲು ಅಥವಾ ಪ್ರಾಣಿಗಳ ತೊಗಲನ್ನೇ ಮಾನವರು ಮೇಲರಿವೆಯಾಗಿ ಧರಿಸುತ್ತಿದ್ದರು. ಅದಕ್ಕೆಂದೆ ನಮ್ಮ ದೇವಿ ಬನಶಂಕರಿಯು ‘ಶಾಕಾಂಬರಿ’ಯಾದರೆ, ಶಿವನು ಗಜಚರ್ಮಾಂಬರಧರನು! ಇಂಗ್ಲೀಶಿನಲ್ಲಿ ಪ್ರಾಣಿಗಳ ತೊಗಲಿಗೆ hide ಎಂದೂ, coat ಎಂದೂ ಹೇಳುತ್ತಾರೆ. ಹೀಗಾಗಿ ಮಾನವರು ಧರಿಸುವ ಹೊರ ಅಂಗಿಯೂ ಸಹ ಅವರಲ್ಲಿ coat ಆಗಿರುವುದು ಸಹಜವಾಗಿದೆ. ಆದರೆ ಈ coatಅನ್ನು ಸಿದ್ಧಪಡಿಸುವವನು coater ಅಲ್ಲ; tailor! ಯಾಕಂತೀರಾ? ಇಂಗ್ಲೀಶ್ ಸಿನೆಮಾಗಳಲ್ಲಿ ಬರುವ ಹಳೆಯ ಕಾಲದ ಅತಿ ಉದ್ದನೆಯ ಕೋಟುಗಳನ್ನು ಗಮನಿಸಿರಿ. ಆ ಕೋಟಿನ ಕೊನೆಯು ಬಾಲದಂತೆ ಎರಡು ತುಂಡುಗಳಾಗಿರುವದನ್ನು ನೀವು ನೋಡಬಹುದು. ಹೀಗೆ ಕೋಟಿನ ಬಾಲವನ್ನು ಸ್ಟೈಲಿಶ್ ಆಗಿ ಸೃಷ್ಟಿಸುವವನೇ ‘ಬಾಲಿಗ, ಬಾಲಕಾರ’ ಅಥವಾ tailor!
ಬಾಲ ಎಂದಾಗ ನಮ್ಮ ‘ವಾಲಿ’ ನೆನಪಾಗುತ್ತಾನೆ. ವಾಲ ಅಂದರೆ ಬಾಲ. ಬಾಲ ಅಥವಾ ವಾಲ ಇದ್ದವನೇ ವಾಲಿ. ಇವನ ಕುಲವನ್ನೇ ರಾಮಾಯಣದಲ್ಲಿ ವಾನರಕುಲ ಎಂದು ಕರೆಯಲಾಗಿದೆ. ವಾನರ ಎಂದರೆ, ‘ವಾ+ನರ’ , ‘ಈತನು ಮನುಷ್ಯನೇ?’ ಎನ್ನುವ ಅರ್ಥ. ಅಡವಿಯಲ್ಲಿ ಮರಗಳ ಮೇಲೆ ವಾಸಿಸುತ್ತಿದ್ದ ಈ ಮನುಷ್ಯರನ್ನು ರಾಮಾಯಣ ಕಾಲದ ಆರ್ಯರು ಅಚ್ಚರಿಯಿಂದ ‘ವಾನರ’ ಎಂದು ಕರೆದಿರಬಹುದು. ಆದರೆ ಈ ವಾನರರಿಗೆ ನಿಜವಾಗಲೂ ಬಾಲ ಇರಲಿಲ್ಲ. ಇವರು ಮರಗಳ ಮೇಲೆ ವಾಸಿಸುತ್ತಿದ್ದರು. ಬಹುಶ: ಮಂಗಗಳನ್ನು ಅನುಕರಿಸಿ, ಜಿಗಿದಾಟಕ್ಕೆ ಅನುಕೂಲವಾಗಲಿ ಎಂದು ಕೃತಕ ಬಾಲಗಳನ್ನು ಕಟ್ಟಿಕೊಂಡಿರಲೂ ಬಹುದು. ರಾವಣನು ಹನುಮಂತನನ್ನು ಬಂಧಿಸಿದಾಗ, ಆತನು ತನ್ನ ಬಾಲವನ್ನು ಬೆಳೆಸಿದನು ಎಂದು ಹೇಳುತ್ತಾರೆ. ಬಹುಶಃ ಅದು ಕೃತಕ ಬಾಲವೇ ಇರಬಹುದು. ಆದುದರಿಂದಲೇ ರಾಕ್ಷಸರು ಬಾಲಕ್ಕೆ ಬೆಂಕಿಯನ್ನು ಹಚ್ಚಿದಾಗಲೂ ಸಹ ಹನುಮಂತನಿಗೆ ಯಾವುದೇ ಅಪಾಯವಾಗಿರಲಿಕ್ಕಿಲ್ಲ.
ಕನ್ನಾಡಿನ ಅಪೂರ್ವ ಸಂಸ್ಕೃತಿ-ಸಂಶೋಧಕರಾದ ಶ್ರೀ ಶಂ.ಬಾ.ಜೋಶಿಯವರು ಮನುಷ್ಯರು ಮರಗಳ ಮೇಲೆ ವಾಸಿಸುವ ಕಾಲಖಂಡವನ್ನು ಗುರುತಿಸಿ, ಇವರನ್ನು ‘ಮರಹಟ್ಟ’ರು ಅಥವಾ ‘ಮರಹಾಡಿ’ಗಳು ಎಂದು ಕರೆದರು. ಈ ಮರಹಟ್ಟರ ದೇಶವೇ ಸಂಸ್ಕೃತೀಕರಣದ ನಂತರ ‘ಮಹಾರಾಷ್ಟ್ರ’ವಾಯಿತು! ಈ ಅನಾರ್ಯ ವಾನರರ ಭಾಷೆ ಕನ್ನಡ. ಇವರು ಆರ್ಯರ ಜೊತೆಗೆ ಸಂಭಾಷಿಸುವಾಗ ಬಳಸುವ ಮಿಶ್ರಿತ ಭಾಷೆಯನ್ನು ಆರ್ಯರು ‘ಮರಹಾಟೀ’ ಭಾಷೆ ಎಂದು ಕರೆದರು. ಈ ರೀತಿಯಾಗಿ ಮರ್ಹಾಠಿ ಭಾಷೆ ಹುಟ್ಟಿಕೊಂಡಿತು. ಆಧುನಿಕ ಕಾಲದಲ್ಲಿ ಈ ಮರಹಾಡಿ ಭಾಷೆಯು ಅಥವಾ ಮರಹಟ್ಟಿ ಭಾಷೆಯು ಅರ್ಥಾತ್ ಮರ್ಹಾಠಿ ಭಾಷೆಯು ಮರಾಠೀ ಎಂದು ಬದಲಾಗಿದೆ. ಈ ಮರಹಟ್ಟರ ಬಹುಪಾಲು ಜನ ಮೊದಲು ಕನ್ನಡಿಗರೇ. ಆರ್ಯಸಂಪರ್ಕದಿಂದಾಗಿ ಮರಾಠಿಗರಾದರಷ್ಟೆ.
ಆರ್ಯರು ಬರುವ ಮೊದಲು ಭಾರತದಲ್ಲಿ ಕುದುರೆಗಳು ಇರಲಿಲ್ಲ. In fact ಕುದುರೆ ಎನ್ನುವ ಕನ್ನಡ ಪದವು ಈಜಿಪ್ತಿನ hytr ಎನ್ನುವ ಪದದಿಂದ ಹುಟ್ಟಿದೆ ಎಂದು ಹೇಳುತ್ತಾರೆ. ಹಿಮಾಲಯದ ಕೆಳಭಾಗದಲ್ಲಿ ವಾಸಿಸುತ್ತಿದ್ದ ಅನಾರ್ಯರು ಕುದುರೆಯ ಬದಲಾಗಿ ಗೂಳಿಗಳನ್ನು ಸಂಚಾರಕ್ಕಾಗಿ ಬಳಸುತ್ತಿದ್ದರು. ನಮ್ಮ ಶಿವನ ಪ್ರೀತಿಯ ವಾಹನವು ವೃಷಭವೇ ತಾನೆ? ಆರ್ಯಭಾಷೆಯಲ್ಲಿ ಕುದುರೆಗೆ ಆಶ್ವ ಎಂದು ಕರೆಯುತ್ತಾರೆ. ಘೋಟಕ ಎನ್ನುವುದು ಆಶ್ವದ ಬದಲಿ ಪದ. ಬೇಂದ್ರೆಯವರ ಕವನವೊಂದರ ಸಾಲುಗಳು ಹೀಗಿವೆ:
ಘುರ್ರೆ ಘುರ್ರೆ ಘೋಟಕಾ
ನಡೆ ಅಂತಃಸ್ಫೋಟಕಾ!
ಬೇಂದ್ರೆಯವರ ಪದಚಮತ್ಕಾರವನ್ನು ಈ ಸಾಲುಗಳಲ್ಲಿ ಕಾಣಬಹುದು. ಘೋಟಕ ಪದದಿಂದಲೇ ‘ಘೋಡಾ’ ಎನ್ನುವ ಹಿಂದೀ ಪದ ಬಂದಿದೆ. ಘುರ್ರೆ ಇದು ಕುದುರೆಯ ಕೆನೆತದ ಧ್ವನಿ. ಘುರ್ರೆ ಇದು ಕುರ್ರೆ ಎಂದು ಬದಲಾಗಿ, ತೆಲುಗು ಭಾಷೆಯ ಕುರ್ರಂ ಎಂದಾಗುತ್ತದೆ. ತೆಲುಗಿನಲ್ಲಿ ಕುರ್ರಂ ಎಂದರೆ ಕುದುರೆ! ಈ ರೀತಿಯಾಗಿ ಬೇಂದ್ರೆಯವರು ಕುದುರೆಯ ಅರ್ಥದ ಸಂಸ್ಕೃತ ಪದಗಳನ್ನು ಬಳಸುತ್ತಲೇ, ಹಿಂದಿ ಹಾಗು ತೆಲಗು ಭಾಷೆಯ ಛಾಯಾಪದಗಳನ್ನು ಸಹ ಸೂಚಿಸುತ್ತಾರೆ!
ಬೇಂದ್ರೆಯವರ ಪದಭಾಂಡಾರವೇ ಅಪಾರವಾದದ್ದು. ಅವರ ಕವನವೊಂದರ ಈ ಸಾಲುಗಳನ್ನು ನೋಡಿರಿ:
ತಾಯಿ ಕನಿಮನಿಯೆ, ನೀ ಅಕ್ಕ ಅಕ್ಕರತೆಯೆ,
ಬಾ ಎನ್ನ ತಂಗಿ, ಬಾ ಮುದ್ದು ಬಂಗಾರವೆ…
ಈ ‘ಕನಿಮನೆ’ಯ ಅರ್ಥವನ್ನು ನಾನು ಪದಕೋಶಗಳಲ್ಲಿ ಹುಡುಕಬೇಕಾಯಿತು. ‘ಕನಿ’ ಇದರ ಅರ್ಥ ಪ್ರೀತಿ, ವಾತ್ಸಲ್ಯ ಇತ್ಯಾದಿ. ಆದುದರಿಂದ ‘ಕನಿಮನೆ’ ಎಂದರೆ ಪ್ರೀತಿಯ ಭಾಂಡಾರ. ಎಷ್ಟೋ ವರ್ಷಗಳ ನಂತರ ಪತ್ರಿಕೆಗಳಲ್ಲಿ ಕರುಣಾನಿಧಿಯವರ ಮಗಳ ಹೆಸರನ್ನು ಓದಿದೆ: ‘ಕನಿಮೋಳಿ’ ಎಂದು. ಥಟ್ಟನೆ ನೆನಪಾದದ್ದು ಬೇಂದ್ರೆಯವರ ಕನಿಮನೆ. ಕನಿಮೋಳಿ ಹೆಸರಿನ ಅರ್ಥ ಆಗ ಹೊಳೆಯಿತು. ಕನಿ ಎಂದರೆ ಪ್ರೀತಿ. ಮೋಳಿ ಎನ್ನುವ ಪದಕ್ಕೆ ತಮಿಳು ಹಾಗು ಮಲೆಯಾಳಂದಲ್ಲಿ ಹೆಣ್ಣು ಮಗು ಎನ್ನುವ ಅರ್ಥವಿದೆ. ಕನ್ನಡದಲ್ಲಿ ‘ಪೋರಿ’ ಎಂದು ಹೇಳಿದಂತೆ. ಆದುದರಿಂದ ಕನಿಮೋಳಿ ಎನ್ನುವುದರ ಅರ್ಥ: ಪ್ರೀತಿಯ ಪುಟ್ಟಿ ಎಂದು!
ಆಧುನೀಕರಣದ ಜೊತೆಗೆ ನಮ್ಮ ಬದುಕಿನ ಪದ್ಧತಿಯೇ ಬದಲಾಯಿತಲ್ಲವೆ? ಮೊದಲೆಲ್ಲ ನಮ್ಮ ಹಳ್ಳಿಗಳಲ್ಲಿ ‘ಅಲ್ಲಿಪಾಕ’ ಎನ್ನುವ ಸಣ್ಣ ತಿನಿಸನ್ನು ಚಪ್ಪರಿಸುತ್ತಿದ್ದರು. ಪೇಪರ್‍ಮೆಂಟುಗಳು ಬಂದ ಮೇಲೆ, ಅಲ್ಲೀಪಾಕ ಹಳ್ಳ ಹಿಡಿಯಿತು. ಆದರೆ ಅಲ್ಲಿಪಾಕ ಹಾಗು ಪೇಪರ್‍ಮೆಂಟುಗಳಲ್ಲಿ ಭಾಷಾಸಾಮ್ಯತೆ ಹಾಗು ರಚನಾಸಾಮ್ಯತೆ ಇವೆ. ಅಲ್ಲಾ ಪದದ ಅರ್ಥ ಹಸಿ ಶುಂಠಿ. ಈ ಹಸಿ ಶುಂಠಿಯನ್ನು ಬೆಲ್ಲದ ಪಾಕದ ಜೊತೆಗೆ ಬೆರಸಿ ತಯಾರಿಸಿದ್ದ ತಿನಿಸೇ ಅಲ್ಲೀಪಾಕ. ಪೇಪರ್‍ಮೆಂಟ ಎನ್ನುವುದು pepper-mint ಅರ್ಥಾತ್ pepper ಅಂದರೆ ಮೆಣಸಿನ ಕಾಳನ್ನು ಸಕ್ಕರೆಯ ಪಾಕದಲ್ಲಿ mint ಅಂದರೆ ಅಚ್ಚು ಹಾಕಿ ತಯಾರಿಸುವ ತಿನಿಸು. ಆಧುನಿಕ ಪೇಪರಮೆಂಟಿನ ಹೊರಗಿನ ಬೆರಗಿಗೆ ಮರುಳಾಗಿ ನಮ್ಮವರು ಪೌಷ್ಟಿಕವಾದ ಅಲ್ಲೀಪಾಕವನ್ನು ಕೈಬಿಟ್ಟರು.
ಅಂದ ಹಾಗೆ ‘ಆಧುನೀಕರಣ’ ಎನ್ನುವ ಪದವು ಸರಿಯಾದದ್ದು; `ಆಧುನಿಕೀಕರಣ’ ತಪ್ಪಾದ ಪದ. ಏಕೆಂದರೆ, ಅಧುನಾ ಎನ್ನುವ ಸಂಸ್ಕೃತ ಪದದ ಅರ್ಥ: `ಈಗ, now’ ಎನ್ನುವುದು. ಆಧುನಿಕ ಪದದ ಅರ್ಥ up to date ವ್ಯಕ್ತಿ ಎಂದಾಗುತ್ತದೆ. ಆಧುನೀಕರಣವೆಂದರೆ keeping up to date!
‘ನಿಮ್ಮ ದೇಹಸ್ಥಿತಿಯು ಚೆನ್ನಾಗಿದೆಯೆ’ ಎಂದು ಕೇಳಲು ಕನ್ನಡಿಗರು ‘ ಏನ್ರೀ, ಆರೋಗ್ಯವಾಗಿದ್ದೀರಾ?’ ಎಂದು ಕೇಳುವರು. ಇಂಗ್ಲೀಶಿನಲ್ಲಿ ಕೇಳುವವರು ‘How is your health?’ ಎಂದು ಕೇಳುವರು. ಈ ಪದಗಳ ಮೂಲವನ್ನು ಪರೀಕ್ಷಿಸಿದರೆ, ಎರಡೂ ಧೋರಣೆಗಳಲ್ಲಿಯ ಭೇದವು ಅಚ್ಚರಿಯನ್ನು ಹುಟ್ಟಿಸುತ್ತದೆ. ‘ಆರೋಗ್ಯ’ ಪದದ ಅರ್ಥವು ‘ರೋಗ ಇಲ್ಲದೆ ಇರುವುದು’ ಎಂದಾಗುತ್ತದೆ. ‘Health’ ಪದವು Heal ಅಂದರೆ ‘ಗುಣಪಡಿಸು’ ಎನ್ನುವ ಪದದಿಂದ ಬಂದಿದೆ. ಮೊದಲು ರೋಗವು ಇದ್ದರೆ ಮಾತ್ರ ಗುಣಪಡಿಸಲು ಸಾಧ್ಯ, ಅಲ್ಲವೆ!?
ಇಂತಹ ಧೋರಣಾಭೇದವನ್ನು ಮದುವೆಯ ನಿಶ್ಚಯದಲ್ಲೂ ನೋಡಬಹುದು. ಮದುವೆಯನ್ನು ಒಮ್ಮೆನಿಶ್ಚಯಿಸಿದ ಬಳಿಕ ಅದನ್ನು ರದ್ದು ಪಡಿಸುವಂತಿಲ್ಲ. ಇದು ನಮ್ಮ ‘ನಿಶ್ಚಯ’ ಪದದ ಅರ್ಥ. ಉತ್ತರ ಭಾರತದವರು ನಿಶ್ಚಯಕಾರ್ಯವನ್ನು ‘ಮಾಂಗನಿ’ ಎಂದು ಕರೆಯುತ್ತಾರೆ. ‘ಮಾಂಗನಾ’ ಎನ್ನುವ ಹಿಂದಿ ಪದದ ಅರ್ಥ ‘ಬೇಡುವುದು’. ವರಪಕ್ಷದವರು ವರದಕ್ಷಿಣೆಯನ್ನು ಬೇಡುತ್ತಾರೆ. ಅದು ಒಪ್ಪಿಗೆಯಾದರೆ ಮಾತ್ರ ಮದುವೆ ನಡೆಯುವುದು. ಆದುದರಿಂದ ಅವರಲ್ಲಿ ನಿಶ್ಚಯವು ‘ಮಾಂಗನಿ’ ಆಗಿದೆ. ಪಾಶ್ಚಿಮಾತ್ಯರಲ್ಲಿ ಇದು engagement. ಗಂಡು ಹಾಗು ಹೆಣ್ಣು ಒಂದು ಕರಾರಿಗೆ ಒಳಪಡುತ್ತಾರೆ. ಒಬ್ಬರಿಗೆ engage ಆದವರು ಬೇರೊಬ್ಬರನ್ನು ಮದುವೆಯಾಗಲಾರರು.
ನಾವು ಬಳಸುವ ಪದಗಳು ನಮ್ಮ ಸಾಂಸ್ಕೃತಿಕ ಭೇದಕ್ಕೆ ಹಿಡಿದ ಕನ್ನಡಿಯಾಗಿವೆ!
22 comments:
ಸಲ್ಲಾಪದಲ್ಲಿ ಶಬ್ದ ವ್ಯುತ್ಪತ್ತಿ ಸಲ್ಲಾಪ. ಚೆನ್ನಾಗಿದೆ ಕಾಕಾ.
ಬೇಂದ್ರೆ ಅಜ್ಜನ ಅರಿವಿಗೆ ನಿಲುಕದ ತಿಳಿವಿನ ಹರವನ್ನ ಸೊಗಸಾಗಿ ತಿಳಿಸುತ್ತಿರುವ ನಿಮಗೆ ವಂದನೆಗಳು
ಸ್ವರ್ಣಾ,
ಬೇಂದ್ರೆಯವರನ್ನು ‘ಪದಾರ್ಥಸಾಗರ’ ಎಂದು ಕರೆಯುವುದು ಸೂಕ್ತವಾದೀತೇನೊ! ನನಗೆ ಹೊಳೆದದ್ದು ಅಷ್ಟಿಷ್ಟು ಮಾತ್ರ.
ಪದೋತ್ಪತ್ತಿ ಮತ್ತು ವಿವಿದ ಪ್ರದೇಶಗಳಲ್ಲಿ ಭಾಷೆಯ ಬಳಕೆಯಲ್ಲಿನ ವಿಭಿನ್ನತೆ ನನಗೆ ನೆಚ್ಚಿನ ವಿಭಾಗ.
ಈ ಲೇಖನ ಮಾಲೆಯನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತೇನೆ ಸಾರ್.
ಅದ್ಭುತ ಪದ ಮಾಲಾ ಮೂಲಿಕೆಗಳು ವಿನೊದವೋ ಸ್ವಾರಸ್ಯವೂ ಆಗಿದೆ ಸಾರ್.. ಬಹಳ ಉಪಯೋಗಕಾರಿ. :)
ಸತೀಶರೆ,
ಧನ್ಯವಾದಗಳು.
ಪದಗಳ ಮೂಲವನ್ನು ಶೋಧಿಸುವ ಪರಿ ಆಸಕ್ತಿಕರವಾಗಿದೆ, ಉತ್ತಮ ಮಾಹಿತಿಯುಕ್ತ ಲೇಖನಕ್ಕಾಗಿ ಧನ್ಯವಾದಗಳು ಸುನಾಥ್ ಸರ್.
ಪ್ರತಿ ಪದಗಳ ಮೂಲವನ್ನು ತಿಳಿಸಿದ್ದೀರಿ ಕಾಕಾ, ಧನ್ಯವಾದಗಳು. ಕನ್ನಿಮೋಳಿ ಎಂಬ ಹೆಸರು ಕೇಳಿದ ಕೂಡಲೇ ನಾನು ಒಮ್ಮೆ ತಮಿಳು ಸ್ನೇಹಿತರನ್ನು ಕೇಳಿದ್ದೆ ಅದರ ಅರ್ಥವೇನು ಎಂದು. ನೀವು ಹೇಳಿದ ಅರ್ಥವನ್ನೇ ಹೇಳಿದ್ದರು. :):)
ಮನಸು,
ಪದಗಳ ಮೂಲವನ್ನು ಶೋಧಿಸುವುದು ಆಸಕ್ತಿಕರವಾದ ಆಟವಿದ್ದಂತೆ. ಇದು ಖುಶಿ ಕೊಡುತ್ತದೆ!
ಸ್ವಾರಸ್ಯಕರ ಲೇಖನ.....ಪದವಿನೋದ ಓದಿ ಬಹಳ ಖುಷಿಯಾಯಿತು ಸಾರ್....
ಪ್ರೀತಿಯ ಕಾಕಾ,
ಕನ್ನಡ ಕನ್ನಡ.. ಹಾ ಸವಿಗನ್ನಡ!
ಈ ಪದವಿನೋದ ನನಗೆ ತುಂಬ ಇಷ್ಟ. ಒಂದು ಪದದ ಉತ್ಪತ್ತಿ, ಅರ್ಥ ಮತ್ತು ವ್ಯಾಪ್ತಿ ತಿಳಿದುಕೊಳ್ಳುವುದು ನನಗೂ ತುಂಬ ಇಷ್ಟ.
ರಾಜರತ್ನಂ' ಅವರ ಕನ್ನಡ ಪದಗೋಳ್ಗೆ ಹನ್ನೆರಡ್ ಅರ್ಥ.. ವನ್ನ ಬಲು ಚೆನಾಗಿ ಪರಿಚಯಿಸಿದ್ದೀರಿ.
ಅದರಲ್ಲೂ ಬೇಂದ್ರೆಯವರ ಸಾಲುಗಳು.. ಹೋಳಿಗೆಯ ಮೇಲೆ ತುಪ್ಪವಿಟ್ಟು ಬಡಿಸಿದ ಹಾಗಿದೆ.
-ಸಿಂಧು
ಸಿಂಧು,
ಬೇಂದ್ರೆ ಹೇಳಿಕೇಳಿ ಪದಗಾರುಡಿಗರು. ಅವರ ಮೆದುಳೇ ಒಂದು ಶಬ್ದಕೋಶವೇನೊ! ಇನ್ನು ಪದಗಳ ಮೂಲವನ್ನು ಹುಡುಕುವುದು ಆಸಕ್ತಿಕರವಾದ ಸಂಗತಿಯಾಗಿದೆ.
ಸುನಾಥರೆ
ಪದವಿನೋದ 'ಒಂದು' ಎಂದಿರುವದರಿಂದ ಮುಂದಿನದಕ್ಕಾಗಿ ಕಾಯುವದಕ್ಕೆ ಖುಷಿಯಾಗುತ್ತಿದೆ. 'ಕೊರೊವಾಯಿ' ಎಂಬ ಜನಾಂಗ ಮೊನ್ನೆ ಮೊನ್ನೆವರೆಗೂ ಮರಹಟ್ಟಿಗಳೆ ಆಗಿದ್ದವರು (http://en.wikipedia.org/wiki/Korowai_people). ಪದಗಳ ಚೆಂಡಾಡುವ ನಿಮ್ಮ ಚಾಣಕ್ಯಕ್ಕೆ ಬೆರಗಾದೆ.
-ಅನಿಲ
ಅನಿಲರೆ,
ಕೊರೊವಾಯಿ ಜನಾಂಗದ ಬಗೆಗೆ ಲಿಂಕ್ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ಆದಿವಾಸಿ ಜನಾಂಗವು ಹೇಗೆ ನಾಗರಿಕವಾಗುತ್ತ ಹೋಗುವುದು ಎನ್ನುವುದನ್ನು ನಾವು ಕಲಿಯಬಹುದು.
ಸರ್,
ಪದ ವ್ಯುತ್ಪತ್ತಿ ಚೆನ್ನಾಗಿದೆ.ಇಂಥದ್ದನ್ನೆಲ್ಲ ಅಭ್ಯಾಸ ಮಾಡುವದರಿಂದ ನಮಗೆ ಪದ/ಶಬ್ದಗಳ ಮೂಲ ಗೊತ್ತಾಗುವದಲ್ಲದೇ,(ಬೈ ಪ್ರಾಡಕ್ಟ್ ಥರ) ನಮ್ಮ ನಾಗರಿಕತೆ ಹೇಗೆಲ್ಲ ಬೆಳೆದು ಬಂತು ಅನ್ನುವ ಕಲ್ಪನೆಯೂ ಸಿಗಬಹುದು. ನೀವು ಪದಗಳ ಬಗ್ಗೆ ಹೇಳಿದ್ದೀರಿ,ಕೆಲವೊಮ್ಮೆ ಹೆಸರುಗಳ ಬಗ್ಗೆ ಹೀಗೆಲ್ಲ ನಾನು ಯೋಚಿಸಿದ್ದಿದೆ.
ಕೃಷ್ಣ ಹುಟ್ಟುವದಕ್ಕೂ ಮೊದಲು "ಕೃಷ್ಣ" ಎಂಬ ಹೆಸರು ಚಾಲ್ತಿಯಲ್ಲಿತ್ತೆ? ರಾಮಾಯಣಕ್ಕೂ ಮೊದಲು ರಾವಣನೆಂಬ ಹೆಸರು ಬಳಕೆಯಲ್ಲಿತ್ತೆ? ವ್ಯಾಸ,ಪೈಗಂಬರ,ಲಕ್ಷ್ಮಣ,ಸೀತೆ,ಊರ್ಮಿಳೆ,ದ್ರೌಪದಿ,ಕ್ರಿಸ್ತ- ಇವೆಲ್ಲ ಹೆಸರುಗಳು ನಮಗೆ ಗೊತ್ತಿರುವ ಮೂಲಪ್ರತಿಮೆಗಳ ಹೊರತಾಗಿಯೂ ಈ ಮೊದಲು ಚಾಲ್ತಿಯಲ್ಲಿದ್ದವೇ?
ಹಹಹ.. ಉತ್ತರವನ್ನು ನೀವೇ ಹೇಳಬೇಕು! :-)
ಆದರೆ,ಹೀಗೆಲ್ಲ ನನ್ನನ್ನು ನಾನೇ ಪ್ರಶ್ನಿಸಿಕೊಂಡಮೇಲೆ ನನಗನಿಸಿದ್ದು: ಯಾವುದೇ ಒಬ್ಬ ವ್ಯಕ್ತಿ ಭೂಮಂಡಲದ ಮೇಲೆ ತನ್ನ ಅಳಿವಿನ ಮೇಲೂ ತನ್ನ ಗುಣವಿಶೇಷಗಳಿಂದ ಒಂದು ಸಮಾಜ ಮತ್ತು ಅಲ್ಲಿನ ಪರಿಸರದ ಮೇಲೆ ಅದ್ಭುತವಾಗಿ ಛಾಪೊತ್ತುವುದೆಂದರೆ ಬಹುಶಃ ಇದೇ ಇರಬೇಕು.. :-)
RJ,
‘ರಾವಣ’ನಿಗೆ ‘ರಾವಳ’ ಎಂದೂ ಹೇಳುತ್ತಾರೆ. ಅತಿ ಸಮೀಪದ ಉದಾಹರಣೆ ಎಂದರೆ ಬಸವಣ್ಣನವರು ತಮ್ಮ ವಚನವೊಂದರಲ್ಲಿ ‘ನಾದ ಮಾಡಿದ ರಾವಳನಿಗೆ ಏನಾಯ್ತು?’ ಎಂದು ಪ್ರಶ್ನಿಸಿದ್ದಾರೆ. ರಾವಳ ಎನ್ನುವುದು ವ್ಯಕ್ತಿಯ ಹೆಸರೂ ಆಗಿರಬಹುದು ಅಥವಾ ಕುಲದ ಹೆಸರೂ ಆಗಿರಬಹುದು. ಅನೇಕ ಊರುಗಳ ಹೆಸರುಗಳು ರಾವಳದಿಂದ ಪ್ರಾರಂಭವಾಗುತ್ತವೆ. ಉದಾಹರಣೆಗೆ: ರಾವಳಪಿಂಡಿ, ರಾಳೇಗಾವಿ, ರಾವಳಗಾವ ಸಿದ್ಧಿ ಇತ್ಯಾದಿ. ಆದುದರಿಂದ ರಾವಣ ಎನ್ನುವ ಹೆಸರು ರಾಮಾಯಣಕ್ಕಿಂತ ತುಂಬಾ ಹಳೆಯದು!
ಕೃಷ್ಣ ಎಂದರೆ ಕಪ್ಪು. ಕೃಷ್ಣ ಪದವು ಕನ್ನ ಎಂದು ಬದಲಾಯಿತು ಎಂದು ಹೇಳುತ್ತಾರೆ. ಆದರೆ ನನ್ನ ಅಭಿಪ್ರಾಯದ ಮೇರೆಗೆ, ಕನ್ನನೇ ಸಂಸ್ಕೃತೀಕರಣಗೊಂಡು ಕೃಷ್ಣನಾದ!ಇಂತಹ ಕೆಲವು ಹೆಸರುಗಳು ಮೊದಲೂ ಚಾಲ್ತಿಯಲ್ಲಿದ್ದವು.
ಪುರಾಣಗಳಲ್ಲಿ ಬರುವ ಇನ್ನೂ ಕೆಲವು ಹೆಸರುಗಳು ಕೇವಲ ಸಾಂಕೇತಿಕ. ಉದಾಹರಣೆಗೆ: ಅಹಲ್ಯಾ. ಹಲ್ ಎಂದರೆ ನೇಗಿಲು. ಅಹಲ್ಯಾ ಅಂದರೆ ನೇಗಿಲಿನಿಂದ ಹೊಡೆಯದಿರುವಳು=unploughed ಅರ್ಥಾತ್ ಕನ್ಯೆ.
ಇಂದ್ರನು ಗೌತಮ ಋಷಿಯ ವೇಷದಿಂದ ಇವಳಲ್ಲಿ ಬಂದಾಗ, ಇವಳಿಗೆ ಅದು ಗೊತ್ತಿತ್ತು ಆದರೆ ರತಿ ಅನುಭವಕ್ಕಾಗಿ ಕಾತರಿಸಿದ ಇವಳು ಏನೂ ತಿಳಿಯದವಳಂತೆ ಅವನನ್ನು ಬರಮಾಡಿಕೊಂಡಳು ಎಂದು ಹೇಳಲಾಗುತ್ತಿದೆ.
ನನಗೂ ಪದಗಳ ಮೂಲ, ಅವುಗಳ ಇತಿಹಾಸ ತುಂಬಾ ಕುತೂಹಲ. ಚೆನ್ನಾಗಿ ವಿಶ್ಲೇಶನೆ ಮಾಡಿದ್ದೀರಿ
ಧನ್ಯವಾದಗಳು, ದೀಪಸ್ಮಿತಾ.
ಪದಗಳ ಮೂಲ ತಿಳಿದಂತೆಲ್ಲ ಬೆರಗು ಹುಟ್ಟುತ್ತದೆ.
ತುಂಬಾ🙏🙏🙏ಅದ್ಭುತವಾಗಿದೆ ನಿಮ್ಮ ವಿಷಯಗಳು
ಧನ್ಯವಾದಗಳು, Unknownರೆ!
ಅಗಸ ಅಘಸವೇ ಸರಿ. ಅಗಸ ಸಂಸ್ಕೃತ ಮೂಲದ್ದು. ಮಡಿವಾಳ ಕನ್ನಡದ್ದು ಆಗಿರಬಹುದು.
ಧನ್ಯವಾದಗಳು
ಧನ್ಯವಾದಗಳು, Anonymous!
Post a Comment