೧
ಕಲ್ಲರಳಿ ಹೂವಾಗಿ | ಕೆಮ್ಮಣ್ಣ ಮನೆ ತೊಳಗಿ
ನಮ್ಮ ನಿಮ್ಮನ್ನ ಬರ ಮಾಡಿ | ಮನಮನ
ಕಮ್ಮಗಿರಿಸ್ಯಾವ, ಕಲ್ಲರಳಿ ||
೨
ಮಣ್ಣರಳಿ ಹೂವಾಗಿ | ನೂಲ ಬಟ್ಟೆಯಾಗಿ
ಮೈಮೈಗೆ ಧಾರದಾಧಾರಾ | ಗುಡಿಗುಡಿಗೆ
ಹೂಬತ್ತಿ, ಹೊತ್ತಿ, ಮಣ್ಣರಳಿ ||
೩
ನೀರರಳಿ ತಾವರಿ | ಮಿನ ಮಿನ ಮೀನಕ್ಕ
ಬೆಳಕುಂಡು ಬಾಳಿರೆನುತಾವ | ಹಗಲಿರುಳು
ಬೆಳಕನುಣಸ್ಯಾವ ನೀರರಳಿ ||
೪
ದಿಕ್ಕರಳಿ ಬೆಳಕಾಗಿ | ನೆರಳರಳಿ ಇರುಳಾಗಿ
ನಿದ್ದಿ ಎಚ್ಚರಕು ತಿರುಳಾಗಿ | ಶ್ರೀಶೈಲಾ
ತಿರುಮಲೆಗು ಪಂಜು, ಬಾನರಳಿ ||
೫
ಗಾಳಿಗಾಳಿಗು ಮಥನ | ಆ ಗಾನ ಈ ತಾನ
ಮನವರಳಿ ಮರಳು ಆಗ್ಯಾವ | ತದ್ಧ್ಯಾನಾ
ಸದ್ಧ್ಯಾನ, ಮುಕ್ತಿ ಮನವರಳಿ ||
೬
ಜೀವರಳಿ ಜೀವಾಳ | ನಾವರಳಿ ನಮ್ಮ್ಯಾಳಾ
ನಾಚಿಕಿ ಅರಳಿ ನಗತಾವ | ತೊಟ್ಟಿಲಾ
ಕುಲಕ್ಯಾವ ಕೈಕೈ, ಜೀವರಳಿ ||
೭
ಬೀಸಿದರ ಕಾಳರಳಿ | ಕಾಸಿದರ ಅನ್ನರಳಿ
ನುರಿಸಿ ನುರಿಸಿದರ ಕವಳರಳಿ | ಎದಿಯರಳಿ
ಹಾಲು ತೊರೆದಾವ, ಮಗುವರಳಿ ||
೮
ಗರ್ಭಗುಡಿಯ ದೈವ | ದೀಪಕ್ಕ ಕಣ್ಣರಳಿ
ಹೊರಳಿ ನೋಡ್ಯಾವ ಒಳಗರಳಿ | ಕತ್ತಲೆಗು
ಹೌದೇನೋ, ಕಲ್ಲಿಗು ಕಣ್ಣು ಇರತಾವ ||
೯
ಶುದ್ಧಬ್ರಹ್ಮವು ಅರಳಿ | ಶಬಲಬ್ರಹ್ಮದ ಸರಣಿ
ಸರಿಗಮಪಧನಿ ಅಂದಾವ, ಧನಿಯರಳಿ
ಅಂತರಂಗವೆ ಅರಳ್ಯಾವ, ಅರುಳರಳಿ ||
ಈ ತ್ರಿಪದಿಗಳನ್ನು ಒದಿದಾಗ ಇವು ಜಾನಪದ ತ್ರಿಪದಿಗಳು ಎನ್ನಿಸಬಹುದು. ಅಥವಾ ಸರ್ವಜ್ಞನ ಒಡಪುಗಳು ಎಂದೂ ಅನ್ನಿಸಬಹುದು. ಮೊದಲನೆಯ ತ್ರಿಪದಿಯಂತೂ ಸರ್ವಜ್ಞನ ಇಂತಹದೇ ತ್ರಿಪದಿಯ ಪ್ರಾರಂಭವನ್ನು ಹೋಲುತ್ತದೆ. ಸರ್ವಜ್ಞನ ವಚನ ಹೀಗಿದೆ:
“ಕಲ್ಲರಳಿ ಹೂವಾಗಿ, ಎಲ್ಲರಿಗು ಬೇಕಾಗಿ,
ಮಲ್ಲಿಕಾರ್ಜುನನ ಶಿಖರಕ್ಕೆ ಬೆಳಕಾಗಿ
ಬಲ್ಲವರು ಹೇಳಿ ಸರ್ವಜ್ಞ”.
ಈ ಒಡಪಿನ ಉತ್ತರ: ಸುಣ್ಣದ ಕಲ್ಲು!
ಸುಣ್ಣದ ಕಲ್ಲನ್ನು ನೀರಿನಲ್ಲಿ ಕಲಸಿದಾಗ ಅದು ಹೂವಿನಂತೆ ಅರಳಿ ಸುಣ್ಣವಾಗುತ್ತದೆ. ಈ ಸುಣ್ಣವನ್ನು ಎಲ್ಲರೂ ತಾಂಬೂಲದ ಜೊತೆಗೆ ಬೆರಸಿ ಬಳಸುತ್ತಾರೆ. ಇದೇ ಸುಣ್ಣವನ್ನು ದೇವರ ಗುಡಿಯ ಶಿಖರಕ್ಕೆ ಹಚ್ಚುತ್ತಾರೆ. ಹೀಗಾಗಿ ಇದು ಎಲ್ಲರಿಗೂ ಬೇಕಾದಂತಹ ವಸ್ತುವಾಗಿದೆ.
ಹಳೆಯ ಕಾಲದಲ್ಲಿ ಹೆಣ್ಣುಮಕ್ಕಳು ಕಾಳು ಬೀಸುವಾಗ ಹಾಡುವ ಧಾಟಿಯಲ್ಲಿರುವ ಈ ತ್ರಿಪದಿಗಳು ಬೇಂದ್ರೆಯವರ ರಚನೆಗಳಾಗಿವೆ. ಸರ್ವಜ್ಞನ ಒಡಪುಗಳಂತೆ ಇವು ಒಡಪಿನ ವಚನಗಳೂ ಆಗಿವೆ. ಇಲ್ಲಿಯ ಮೊದಲನೆಯ ವಚನವೂ ಸರ್ವಜ್ಞನ ವಚನದ ಧಾಟಿಯಲ್ಲಿಯೇ ಇದೆ:
ಕಲ್ಲರಳಿ ಹೂವಾಗಿ | ಕೆಮ್ಮಣ್ಣ ಮನೆ ತೊಳಗಿ
ನಮ್ಮ ನಿಮ್ಮನ್ನ ಬರ ಮಾಡಿ | ಮನಮನ
ಕಮ್ಮಗಿರಿಸ್ಯಾವ, ಕಲ್ಲರಳಿ ||
ಹಳೆಯ ಕಾಲದಲ್ಲಿ ಮನೆಯ ಗೋಡೆಗಳಿಗೆ ಕೆಮ್ಮಣ್ಣು ಸಾರಿಸಿ,ಮೇಲೆ ಸುಣ್ಣವನ್ನು ಬಳೆಯುತ್ತಿದ್ದರು. ಇಂತಹ ಕೆಮ್ಮಣ್ಣ ಮನೆಯನ್ನು ಸುಣ್ಣವು ತೊಳೆದು ಸ್ವಚ್ಛ ಮಾಡುತ್ತದೆ ಎಂದು ಬೇಂದ್ರೆಯವರು ಹೇಳುತ್ತಾರೆ. ಈ ಸ್ವಚ್ಛೀಕರಣದ ಉದ್ದೇಶವಾದರೂ ಏನು? ಇದು ಕೇವಲ ಸ್ವ-ಅರ್ಥವೆ? ಮನೆಗೆ ಬಂದಂತಹ ಅತಿಥಿಗಳಿಗೆ ಸ್ವಾಗತ ಕೋರಿ, ಅವರ ಮನಸ್ಸನ್ನು ಕಮ್ಮಗಿರಿಸುವ ಅಂದರೆ ಆಹ್ಲಾದಗೊಳಿಸುವದು ಗೃಹಸ್ಥನ ಕರ್ತವ್ಯವಾಗಿದೆ. ಈ ಕಾರ್ಯವನ್ನು ಸುಣ್ಣದ ಕಲ್ಲು ಅರಳುವದರ ಮೂಲಕ ಮಾಡುತ್ತದೆ. ಯಾವುದೇ ಪದಾರ್ಥವು ಅರಳಿದರೆ ಮಾತ್ರ, ಅದರ ಕಾರ್ಯಕ್ಕೆ ಘನತೆ ಬರುತ್ತದೆ.
ಈ ತ್ರಿಪದಿಯ ಹಿಂದಿರುವ ಮನೋಧರ್ಮ ಹೀಗಿದೆ. ಬೇಂದ್ರೆಯವರಿಗೆ ಸದಾಕಾಲವೂ ಗೆಳೆಯರು ಬೇಕು. ‘ಬಾರೊ ಸಾಧನಕೇರಿಗೆ’ ಎನ್ನುವ ತಮ್ಮ ಕವನದಲ್ಲಿ ಅವರು ತಮ್ಮ ಮನೆಯ ಬೇಲಿಗೂ ಹೂಬೆರಳಿದೆ ಎಂದು ಹೇಳುತ್ತಾರೆ.
The job of fence is defence, through offence if necessary. ಆದರೆ ಬೇಂದ್ರೆಯವರ ಮನೆಯ ಬೇಲಿಯು ಮುಗುಳುನಗೆಯ ಸ್ವಾಗತಕಾರಿಣಿಯಾಗಿ ಕಾರ್ಯ ನಿರ್ವಹಿಸುತ್ತದೆ.
ಇನ್ನು ಈ ನುಡಿಯ ಮತ್ತೊಂದು ಅರ್ಥವನ್ನು ನೋಡೋಣ. ಬೇಂದ್ರೆಯವರು ಒಂದು ಪದವನ್ನು ಬಳಸಿದಾಗ, ಆ ಪದದ ಎಲ್ಲ ಅರ್ಥಗಳನ್ನೂ ಅವರು ಬಳಸಿರುತ್ತಾರೆ. ‘ಕಲ್ಲರಳಿ’ ಎನ್ನುವ ತೋರಿಕೆಯ ಭೌತಿಕ ಅರ್ಥಕ್ಕೆ ಒಂದು ಪೌರಾಣಿಕ ಅರ್ಥವೂ ಇದೆ. ಪತಿಯ ಶಾಪದಿಂದಾಗಿ ಗೌತಮ ಋಷಿಯ ಪತ್ನಿ ಅಹಲ್ಯೆಯು ಕಲ್ಲಾದ ಘಟನೆ ಎಲ್ಲರಿಗೂ ಗೊತ್ತಿರುವದೇ. ‘ಅಹಲ್ಯಾ’ ಅಂದರೆ ನೇಗಿಲು ಹೊಡೆಯದ ಭೂಮಿ. ವಿವಾಹವಾದರೂ ಅವಳಿಗೆ ಪತಿಸಂಸರ್ಗವಿರಲಿಲ್ಲ. ಆದುದರಿಂದಲೇ ಅವಳು ಮಾನಸಿಕವಾಗಿಯೂ ಕಲ್ಲಾಗಿದ್ದಳು. ಪತಿಯ ಶಾಪದಿಂದ ಭೌತಿಕವಾಗಿಯೂ ಕಲ್ಲಾದಳು. ಅವತಾರಪುರುಷ ರಾಮಚಂದ್ರನ ಪವಿತ್ರ ಪಾದಸ್ಪರ್ಶದಿಂದ, ಅಂದರೆ ದೈವೀಚೈತನ್ಯದ ಸಂಪರ್ಕದಿಂದ ಅವಳ ಜೀವವು ಮತ್ತೆ ಅರಳುತ್ತದೆ. ಭೌತಿಕ ಬದುಕು ಆಧ್ಯಾತ್ಮಿಕ ಬದುಕಾಗಿ ಮಾರ್ಪಡುತ್ತದೆ. ಅವಳು ಗೃಹಿಣಿಯಂತೆ ಮತ್ತೊಮ್ಮೆ ಗೃಹಕೃತ್ಯಗಳಲ್ಲಿ ನಿರತಳಾಗುತ್ತಾಳೆ. ಅತಿಥಿಗಳ ಉಪಚಾರವು ಗೃಹಕೃತ್ಯದ ಮುಖ್ಯ ಭಾಗವಾಗಿದ್ದು, ಅವಳ ಮನಸ್ಸು ಅರಳಿದುದರಿಂದ, ಅತಿಥಿಗಳ ಮನಸ್ಸೂ ಈಗ ಕಮ್ಮಗಾಗುತ್ತದೆ.
ಈ ಕವನದ ಈ ಮೊದಲ ವಚನವು ಮುಂದಿನ ವಚನಗಳಿಗೆ ಮುನ್ನುಡಿಯಂತಿದೆ. ನಿಸರ್ಗಕ್ಕೆ ಸೃಷ್ಟಿಸುವ ಬಯಕೆ ಇರುತ್ತದೆ. ಭೌತಿಕ ಸೃಷ್ಟಿಯು ಮೊದಲನೆಯ ಹಂತದ ಕಾರ್ಯ. ಪಾರಭೌತಿಕ ಉತ್ಕ್ರಾಂತಿಯು ಮುಂದಿನ ಹಂತವಾಗಿದೆ. ಈ ಮುಂದಿನ ವಚನಗಳಲ್ಲಿ ನಿಸರ್ಗದ ಪಂಚಮಹಾಭೂತಗಳು ಕೇವಲ ಭೌತಿಕ ವಸ್ತುಗಳಾಗಿರದೆ ಉತ್ಕ್ರಾಂತಿಯ ದರ್ಶಕಗಳಾಗಿರುವದನ್ನು ಹೇಳಲಾಗಿದೆ.
ಎರಡನೆಯ ವಚನವು ಹೀಗಿದೆ:
ಮಣ್ಣರಳಿ ಹೂವಾಗಿ | ನೂಲ ಬಟ್ಟೆಯಾಗಿ
ಮೈಮೈಗೆ ಧಾರದಾಧಾರಾ | ಗುಡಿಗುಡಿಗೆ
ಹೂಬತ್ತಿ, ಹೊತ್ತಿ, ಮಣ್ಣರಳಿ ||
ಭೂಮಿತಾಯಿಯು ತನ್ನ ಸತ್ವವನ್ನು ಸಸ್ಯಗಳಿಗೆ ಪ್ರದಾನ ಮಾಡಿದಾಗ, ಈ ಸಸ್ಯಗಳು ಹೂ ಬಿಡುತ್ತವೆ. ಇದು ಮಣ್ಣು ಅರಳುವ ಬಗೆ. ಬೇಂದ್ರೆಯವರು ಹತ್ತಿಯ ಹೂವಿಗೆ ‘ಮಣ್ಣ ಹೂವು’ ಎಂದು ಕಲ್ಪಿಸುತ್ತಾರೆ. ಈ ಹೂವಿನಿಂದ ಹತ್ತಿಯನ್ನು ಬಿಡಿಸಿ, ನೂಲು ತೆಗೆದ ಮೇಲೆ ಅದರ ದಾರವು ಮೈಗೆ ಆಧಾರವಾಗುತ್ತದೆ. ಇದು ಹತ್ತಿಯ ಪ್ರಾಪಂಚಿಕ ಪ್ರಯೋಜನ. ಹತ್ತಿಯಿಂದ ಹೂಬತ್ತಿಯನ್ನು ಮಾಡಿ, ದೇವರ ಮೂರ್ತಿಯ ಎದುರಿಗೆ ದೀಪ ಹೊತ್ತಿಸುವದು ಅದರ ಪಾರಮಾರ್ಥಿಕ ಪ್ರಯೋಜನ. ಮಣ್ಣು ಅರಳುವ ಅಂದರೆ ಉತ್ಕ್ರಾಂತವಾಗುವ ಪರಿಯಿದು. ಪಂಚಮಹಾಭೂತಗಳಲ್ಲಿ ಒಂದಾದ ‘ಪೃಥ್ವಿ’ಯ ಭೌತಿಕ ಹಾಗು ಉತ್ಕ್ರಾಂತ ಸ್ಥಿತಿಯನ್ನು ಹೇಳಿದ ಬಳಿಕ, ಬೇಂದ್ರೆಯವರು ಎರಡನೆಯ ಮಹಾಭೂತವಾದ ನೀರಿನ ಬಗೆಗೆ ಹೀಗೆ ಹೇಳುತ್ತಾರೆ:
ನೀರರಳಿ ತಾವರಿ | ಮಿನ ಮಿನ ಮೀನಕ್ಕ
ಬೆಳಕುಂಡು ಬಾಳಿರೆನುತಾವ | ಹಗಲಿರುಳು
ಬೆಳಕನುಣಸ್ಯಾವ ನೀರರಳಿ ||
ನೀರು ಅರಳಿದರೆ ಏನಾಗುವದು? ಬೇಂದ್ರೆಯವರ ಕಲ್ಪನೆಯಲ್ಲಿ ಅದು ತಾವರೆ ಹೂವಾಗುವದು! ನೀರಿನಲ್ಲಿರುವ ಬೆಳಕು ಮಂದವಾದದ್ದು. ಈ ಮಿಣ ಮಿಣ ಬೆಳಕನ್ನೇ ಉಂಡು ‘ಬಾಳಿರಿ’ ಎಂದು ಬೆಳ್‍ತಾವರೆಗಳು ಮೀನುಗಳಿಗೆ ಹರಿಸುತ್ತವೆ. ‘ಬದುಕನ್ನು ಕತ್ತಲೆಯಲ್ಲಿ ಸಾಗಿಸಬೇಡಿರಿ, ದೊರೆತಷ್ಟೇ ಬೆಳಕನ್ನು ಆತ್ಮಸಾತ್ ಮಾಡಿಕೊಳ್ಳಿರಿ’ ಎಂದು ಹೇಳುವ ನೀರು ಮೀನುಗಳಿಗೆ ಬೆಳಕನ್ನೇ ಉಣಿಸುತ್ತವೆ. ಇದು ಜೀವದ್ರವ್ಯವಾದ ನೀರು ‘ಅರಳುವ’ ಪರಿ!
ಸೃಷ್ಟಿಗೆ ಅವಶ್ಯವಾದ ಭೂಮಿ ಹಾಗು ನೀರಿನ ಬಗೆಗೆ ಹೇಳಿದ ಬೇಂದ್ರೆಯವರು, ಇನ್ನು ಜೀವನಕ್ಕೆ ಬೇಕಾದ ಬೆಳಕಿನ ಬಗೆಗೆ ಹೇಳುತ್ತಾರೆ:
ದಿಕ್ಕರಳಿ ಬೆಳಕಾಗಿ | ನೆರಳರಳಿ ಇರುಳಾಗಿ
ನಿದ್ದಿ ಎಚ್ಚರಕು ತಿರುಳಾಗಿ | ಶ್ರೀಶೈಲಾ
ತಿರುಮಲೆಗು ಪಂಜು, ಬಾನರಳಿ ||
ಬೇಂದ್ರೆಯವರಿಗೆ ಕಲ್ಪನೆಯು ಅತ್ಯಂತ ನಿರಾಯಾಸವಾದ ಸಿದ್ಧಿ. ಸೂರ್ಯೋದಯವನ್ನು ಅವರು ‘ದಿಕ್ಕು ಅರಳುವದು’ ಎಂದು ಹೇಳುತ್ತಾರೆ. ಅದರಂತೆ ‘ನೆರಳು ಅರಳಿದರೆ ಅರ್ಥಾತ್ ಹೆಚ್ಚಾದರೆ’ ಅದು ಇರುಳಾಗುವುದು! ಜೀವಿಗಳಿಗೆ ಬೆಳಕು ಹಾಗು ಕತ್ತಲೆ ಎರಡೂ ಬೇಕು. ಬೆಳಗಿನ ಸಮಯದಲ್ಲಿಯ ‘ತಿರುಳು’ ಹಾಗು ನಿದ್ರೆಯಲ್ಲಿಯ ‘ತಿರುಳು’ ಎರಡೂ ಒಂದೇ, ಅದು ಕೇವಲಜ್ಞಾನ. (‘ಸ್ವಪ್ನೇ ಜಾಗೃತಿ ವಾಯ ಏಷ ಪುರುಷೋ ಮಾಯಾ ಪರಿಭ್ರಾಮಿತ:’....ಶಂಕರಾಚಾರ್ಯರು).
ಪಂಚಮಹಾಭೂತಗಳಲ್ಲಿ ಮೂರನೆಯದಾದ ‘ತೇಜಸ್’ ಅನ್ನು ಇಲ್ಲಿ ವರ್ಣಿಸಿದ ಬೇಂದ್ರೆಯವರು ಅದರ ಮುಂದಿನ ಸಾಲಿನಲ್ಲಿ ನಾಲ್ಕನೆಯದಾದ “ಆಕಾಶ’ವನ್ನೂ ವರ್ಣಿಸುತ್ತಾರೆ.
ಶ್ರೀಶೈಲದಲ್ಲಿರುವನು ಶಿವ. ತಿರುಮಲೆಯಲ್ಲಿರುವನು ವೆಂಕಟೇಶ. ಶ್ರೀಶೈಲ ಎನ್ನುವ ಸಂಸ್ಕೃತ ಪದದ ಹಾಗು ತಿರುಮಲೆ ಎನ್ನುವ ದ್ರಾವಿಡ ಪದದ ಅರ್ಥ ಒಂದೇ, ಪವಿತ್ರ ಬೆಟ್ಟ. ಈ ಎರಡೂ ಬೆಟ್ಟಗಳಿಗೆ ಬೆಳಕು ಸಿಗುವದು ‘ಪಂಜಿನಿಂದ’. ರಾತ್ರಿಯಲ್ಲಿ ಹೊತ್ತುವ ಈ ಪಂಜು ಪ್ರಾಪಂಚಿಕ ಪಂಜಲ್ಲ. ಇದು ಇರುಳಿನಲ್ಲಿ ಚಂದ್ರ ಹಾಗು ತಾರೆಗಳು ಹೊತ್ತಿಸಿದ ಪಂಜು! ಆಕಾಶದ ‘ಅರಳುವಿಕೆ’ಯು ಚಂದ್ರ ಹಾಗು ತಾರೆಗಳಲ್ಲಿ ಪರಿಣಮಿಸುತ್ತದೆ!
ಪಂಚಮಹಾಭೂತಗಳಲ್ಲಿ ಕೊನೆಯದು ಗಾಳಿ. ಮೊದಲ ನಾಲ್ಕು ಮಹಾಭೂತಗಳು ಜೀವಿಗೆ ನೆರವು ನೀಡುತ್ತವೆ. ಆದರೆ ಗಾಳಿಯಿಲ್ಲದೆ ಜೀವಿಯೇ ಇಲ್ಲ. ಆದುದರಿಂದಲೇ ಮಾಧ್ವ ತತ್ವಜ್ಞಾನದಲ್ಲಿ ‘ವಾಯು ಜೀವೋತ್ತಮ’ ಎನ್ನುವದು!
ಈ ವಾಯುದೇವನ ಬಗೆಗೆ ಬೇಂದ್ರೆ ಹೀಗೆ ಹೇಳುತ್ತಾರೆ:
ಗಾಳಿಗಾಳಿಗು ಮಥನ | ಆ ಗಾನ ಈ ತಾನ
ಮನವರಳಿ ಮರಳು ಆಗ್ಯಾವ | ತದ್ಧ್ಯಾನಾ
ಸದ್ಧ್ಯಾನ, ಮುಕ್ತಿ ಮನವರಳಿ ||
ವಿವಿಧ ದಿಕ್ಕುಗಳಿಂದ ಬೀಸುವ ಗಾಳಿಗಳ ತಿಕ್ಕಾಟದಿಂದ ವಿವಿಧ ನಾದ ಅಥವಾ ಸಂಗೀತ ಹೊರಡುತ್ತದೆ. ಒಂದೊಂದರದು ಒಂದೊಂದು ಗಾನ, ಒಂದೊಂದು ತಾನ. ಈ ನಾದದಿಂದ, ಸಂಗೀತದಿಂದ ಶ್ರಾವಕನ ಮನಸ್ಸೇ ಅರಳುತ್ತದೆ, ಮರುಳಾಗುತ್ತದೆ. ಸಂಗೀತವು ಅಥವಾ ನಾದವು ಪರಮಾತ್ಮನ ಕಡೆಗೆ ಮನಸ್ಸನ್ನು ಒಯ್ಯುತ್ತದೆ ಎಂದು ಹೇಳುತ್ತಾರೆ. ‘ತತ್-ಧ್ಯಾನ’ ಅಂದರೆ ‘ಅದರ’ ಧ್ಯಾನ. ಸತ್-ಧ್ಯಾನ ಅಂದರೆ ‘ಇರುವದರ’ ಧ್ಯಾನ. ಭಗವಂತನಿಗೆ ‘ತತ್’ ಎಂದು ಹೇಳುತ್ತಾರೆ, ‘ಸತ್’ ಎಂದು ಹೇಳುತ್ತಾರೆ. ಈ ತತ್ ಹಾಗೂ ಸತ್‍ದ ಧ್ಯಾನದಿಂದ ಮನಸ್ಸು ಅರಳಿ, ಮುಕ್ತಿಯು ಲಭಿಸುತ್ತದೆ.
ಈ ನುಡಿಯ ಯೌಗಿಕ ಅರ್ಥವು ಹೀಗಿದೆ:
ಸೂಕ್ಷ್ಮಶರೀರದಲ್ಲಿ ೩೬೦ ನಾಡಿಗಳಿರುತ್ತವೆ. (ಇವುಗಳಲ್ಲಿ ಇಡಾ, ಪಿಂಗಲಾ ಹಾಗು ಸುಷುಮ್ನಾ ಎನ್ನುವವು ಪ್ರಮುಖ ನಾಡಿಗಳು.) ಈ ನಾಡಿಗಳಲ್ಲಿ ಯೋಗವಾಯು ಸಂಚರಿಸುತ್ತಿರುತ್ತದೆ. ಈ ವಾಯುವಿನ ನಿಯಂತ್ರಣದಿಂದಾಗಿ ಯೋಗಿಗಳು ಸಿದ್ಧಿಯನ್ನು ಪಡೆಯುತ್ತಾರೆ. ಆದರೆ ಮನಸ್ಸು ಪೂರ್ಣ ಅರಳಿದಾಗ ಅಂದರೆ ಸಾಧನೆಯ ಕೊನೆಯ ಹಂತದಲ್ಲಿ ಸಾಧಕನು ಲೋಕದ ಕಣ್ಣಿಗೆ ‘ಮರುಳ’ನಾಗುತ್ತಾನೆ. ಇಂತಹ ಸಾಧಕನು ಜೀವನ್ಮುಕ್ತನು.
ಪಂಚಮಹಾಭೂತಗಳು ಬ್ರಹ್ಮಾಂಡದ ಒಡಲಿನಲ್ಲಿರುವವು. ಇದಕ್ಕೆ ಸಮಾನವಾಗಿ ಪಿಂಡಾಂಡದ ಯೋಗಶರೀರದಲ್ಲಿ ಆರು ಚಕ್ರಗಳು ಇರುತ್ತವೆ. ಎರಡನೆಯ ವಚನದಿಂದ ಐದನೆಯ ವಚನದ ವರೆಗೆ ಬೇಂದ್ರೆಯವರು ಪಂಚಮಹಾಭೂತಗಳ ‘ಅರಳುವಿಕೆ’ಯ ಬಗೆಗೂ ಹೇಳಿದ್ದಾರೆ. ಇವೇ ವಚನಗಳನ್ನು ಪಿಂಡಾಂಡದಲ್ಲಿರುವ ಚಕ್ರಗಳಿಗೂ ಅನ್ವಯಿಸಬಹುದು. ಮೂಲಾಧಾರಚಕ್ರವು ಪೃಥ್ವಿಗೆ ಸಂಬಂದಿಸಿದೆ. ಈ ಚಕ್ರದ ಮೇಲೆ ಇರುವದು ಸ್ವಾಧಿಷ್ಠಾನ. ಇದು ಅಗ್ನಿಗೆ ಸಂಬಂದಿಸಿದೆ. ತನ್ನಂತರ ಮಣಿಪೂರ;ಜಲಕ್ಕೆ ಸಂಬಂಧಿಸಿದೆ. ಅದರ ಮೇಲೆ ಇರುವದು ಅನಾಹತ ಚಕ್ರ. ಇದರಲ್ಲಿ ವಾಯು ಇರುತ್ತದೆ. ಐದನೆಯ ಚಕ್ರವು ವಿಶುದ್ಧಿ ಚಕ್ರ. ಈ ಚಕ್ರದಲ್ಲಿ ಆಕಾಶವಿದೆ. ಆರನೆಯ ಆಜ್ಞಾಚಕ್ರದಲ್ಲಿ ‘ಮನಸ್ಸು’ ಇರುತ್ತದೆ. ಚಕ್ರಗಳ ಸರಣಿಗೆ ಅನುಸಾರವಾಗಿ, ಬೇಂದ್ರೆಯವರು ಭೂಮಿಯ ವರ್ಣನೆ ಮಾಡಿದ ಬಳಿಕ ಅಗ್ನಿಯ ವರ್ಣನೆ ಮಾಡಬೇಕಾಗಿತ್ತು. ಆದರೆ ಅವರು ಭೂಮಿಯ ವರ್ಣನೆಯ ನಂತರ ಜಲದ ವರ್ಣನೆ ಮಾಡಿ, ಬಳಿಕ ಅಗ್ನಿಯ ವರ್ಣನೆ ಮಾಡಿದ್ದಾರೆ. ಈ ವಿಧಾನವು ಶಂಕರಾಚಾರ್ಯರ ಸೌಂದರ್ಯಲಹರಿಯಲ್ಲಿರುವ ಶ್ರೇಣಿಗೆ ಅನುಸಾರವಾಗಿ ಇದೆ. ಬೇಂದ್ರೆಯವರು ಶಂಕರಾಚಾರ್ಯರ ವರ್ಣನೆಯನ್ನು ಅನುಸರಿಸಿದ್ದಾರೆ.
ಮುಂದಿನ ನುಡಿ ಹೀಗಿದೆ:
ಜೀವರಳಿ ಜೀವಾಳ | ನಾವರಳಿ ನಮ್ಮ್ಯಾಳಾ
ನಾಚಿಕಿ ಅರಳಿ ನಗತಾವ | ತೊಟ್ಟಿಲಾ
ಕುಲಕ್ಯಾವ ಕೈಕೈ, ಜೀವರಳಿ||
ಇದುವರೆಗೆ ಬ್ರಹ್ಮಾಂಡದ ವಿಕಾಸವನ್ನು ಹಾಗು ವೈಯಕ್ತಿಕ ಉತ್ಕ್ರಾಂತಿಯನ್ನು ಬೇಂದ್ರೆಯವರು ವರ್ಣಿಸಿದರು. ಜೀವವು ಅರಳಿ ಜೀವಾಳವಾದ ಬಳಿಕ ಅಂದರೆ ವೈಯಕ್ತಿಕ ಉತ್ಕ್ರಾಂತಿಯ ಬಳಿಕ, ಇದು ಇಲ್ಲಿಗೇ ನಿಲ್ಲಬೇಕೆ? ಮಾಯೆಗೆ ಅಧೀನವಾದ ಹೊಸ ಜೀವಿಯ ನಿರ್ಮಾಣ ಆಗಬೇಕಲ್ಲವೆ? ಸೃಷ್ಟಿಯ ಉದ್ದೇಶವೇನು? ಬೇಂದ್ರೆಯವರ ಮಾನಸ ಗುರುಗಳಾದ ಅರವಿಂದರು ಹೇಳುವದು ಹೀಗೆ: To be or to become something is the whole endeavour of the Nature. ಇದೊಂದು ಅವಿರತ ಪ್ರಕ್ರಿಯೆ. ಬೇಂದ್ರೆಯವರು ಇದನ್ನು ‘ನಾವರಳಿ ನಮ್ಮ ಮ್ಯಾಳಾ’ ಎಂದು ಹೇಳುತ್ತಾರೆ. ಮ್ಯಾಳ ಅಂದರೆ ಜಾತ್ರೆ. ಇದು ಆಧ್ಯಾತ್ಮಿಕ ಗುಂಪುಗಳಿಗೂ ಅನ್ವಯಿಸುತ್ತದೆ. ಈ ಮ್ಯಾಳವನ್ನು ಸೃಷ್ಟಿಸಲು ಗಂಡು ಹಾಗು ಹೆಣ್ಣು ಬೇಕು. ಇವರ ನಡುವೆ ಇರುವ ನಾಚಿಕೆಯು ಅರಳಿ ನಕ್ಕಾಗ, ತೊಟ್ಟಿಲು ತೂಗುತ್ತವೆ. ಆ ತೊಟ್ಟಿಲಿನಲ್ಲಿ ಜೀವವು ಅರಳುತ್ತಿರುತ್ತದೆ! ಪ್ರಪಂಚ ಈ ರೀತಿಯಾಗಿ ಮುಂದುವರೆಯುತ್ತದೆ.
ಈ ಪ್ರಪಂಚವನ್ನು ಪೋಷಿಸಲು ಏನು ಮಾಡಬೇಕು? ಬೇಂದ್ರೆ ಅದನ್ನು ಹೀಗೆ ಹೇಳುತ್ತಾರೆ:
ಬೀಸಿದರ ಕಾಳರಳಿ | ಕಾಸಿದರ ಅನ್ನರಳಿ
ನುರಿಸಿ ನುರುಸಿದರ ಕವಳರಳಿ | ಎದಿಯರಳಿ
ಹಾಲು ತೊರೆದಾವ, ಮಗುವರಳಿ ||
ಭೂಮಿಯಲ್ಲಿ ಗೆಯ್ಯಬೇಕು, ಬಂದ ಕಾಳನ್ನು ಬೀಸಬೇಕು,ಕಾಸಿ ಅನ್ನ ಮಾಡಬೇಕು. ಇವೆಲ್ಲವೂ ಅರಳುವ ಪ್ರತಿಕ್ರಿಯೆಯ ಭಾಗವಾಗಿವೆ. ಹೀಗೆ ಅರಳಿದ ಕವಳವನ್ನು ನುರುಸಿದರೆ, ತಾಯಿಯ ಎದೆ ಅರಳಿ ಹಾಲು ಬರುವದು. ಹಾಲು ‘ತೊರೆದಾವ’ ಅಂದರೆ ಹಾಲು ಸ್ತನಗಳನ್ನು ತೊರೆದು ಹೊರಗೆ ಬರುವವು ಎನ್ನುವ ಅರ್ಥವನ್ನು ಕೊಡುವದಲ್ಲದೆ, ತೊರೆಯಂತೆ ಅಂದರೆ ಪ್ರವಾಹದಂತೆ ಹರಿಯುವದು ಎನ್ನುವ ಸೂಚನೆಯನ್ನೂ ಕೊಡುತ್ತದೆ. ಆ ಜೀವರಸವು ಮಗುವಿಗೆ ಪೋಷಣೆಯಾಗುವದು. ಈ ಪೋಷಣೆಯಿಂದ ಮಗುವು ಅರಳುವದು.
ಸೃಷ್ಟಿಚಕ್ರವು ಹೀಗೆ ತಿರುಗಬೇಕಲ್ಲವೆ? ಹೊಸ ಸೃಷ್ಟಿಗೆ ವಿಶ್ವಚೈತನ್ಯದ ಅರಿವಾಗಬೇಕು. ಅದಕ್ಕಾಗಿ ದೇವಸ್ಥಾನದ ಸೃಷ್ಟಿಯಾಗಬೇಕು, ದೇವರ ಮೂರ್ತಿಯ ಸೃಷ್ಟಿಯಾಗಬೇಕು. ಗರ್ಭಗುಡಿಯಲ್ಲಿ ದೀಪ ಹೊತ್ತಿಸಿದಾಗ, ದೇವರ ಮೂರ್ತಿಯ ಕಣ್ಣುಗಳು ಅರಳಿದಂತೆ ಕಾಣುವವು. ಶ್ರದ್ಧೆಯಿದ್ದಲ್ಲಿ ಕಲ್ಲಿನ ಮೂರ್ತಿಯೂ ಸಹ ಸಜೀವವಾಗುವದು. ಆದುದರಿಂದ ಕಲ್ಲಿಗೂ ಕಣ್ಣು ಮೂಡುತ್ತವೆ. ಶ್ರದ್ಧೆ ಇರುವದರಿಂದಲೇ ಕತ್ತಲೆಯಲ್ಲಿ ಇರುವ ಭಕ್ತನಿಗೂ ಕಣ್ಣು ಮೂಡುತ್ತವೆ. ಭಕ್ತನಲ್ಲಿ ಶ್ರದ್ಧೆ ಅರಳಿದಾಗ ದೇವತೆಯಲ್ಲಿ ಅನುಗ್ರಹ ಅರಳುತ್ತದೆ. ಇದನ್ನು ಬೇಂದ್ರೆಯವರು ಹೇಳುವದು ಹೀಗೆ:
ಗರ್ಭಗುಡಿಯ ದೈವ | ದೀಪಕ್ಕ ಕಣ್ಣರಳಿ
ಹೊರಳಿ ನೋಡ್ಯಾವ ಒಳಗರಳಿ | ಕತ್ತಲೆಗು
ಹೌದೇನೋ, ಕಲ್ಲಿಗು ಕಣ್ಣು ಇರತಾವ ||
ಬಾಹ್ಯಪೂಜೆಯ ಮುಂದಿನ ಭಾಗವು ಅಂತರಂಗದಲ್ಲಿರುವ ಚೈತನ್ಯದ ಪೂಜೆ. ವ್ಯಕ್ತಿಯ ಅಂತಶ್ಚೈತನ್ಯದ ಅರಳುವಿಕೆಯನ್ನು ಬೇಂದ್ರೆಯವರು ಕೊನೆಯ ನುಡಿಯಲ್ಲಿ ಈ ರೀತಿಯಾಗಿ ವರ್ಣಿಸಿದ್ದಾರೆ.
ಶುದ್ಧಬ್ರಹ್ಮವು ಅರಳಿ | ಶಬಲಬ್ರಹ್ಮದ ಸರಣಿ
ಸರಿಗಮಪಧನಿ ಅಂದಾವ, ಧನಿಯರಳಿ
ಅಂತರಂಗವೆ ಅರಳ್ಯಾವ, ಅರುಳರಳಿ ||
ಯೋಗಿಯು ಮೂಲಾಧಾರದಲ್ಲಿರುವ ಕುಂಡಲಿನಿ ಚೈತನ್ಯವನ್ನು ಅರಳಿಸಿ, ಉತ್ಕ್ರಾಂತಿಪಥದಲ್ಲಿ ಮೇಲೊಯ್ದು, ಆಜ್ಞಾಚಕ್ರಕ್ಕೂ ಮೇಲಿರುವ ಸಹಸ್ರದಲ ಪದ್ಮದಲ್ಲಿ ಸ್ಥಾಪಿಸುತ್ತಾನೆ. ಅಲ್ಲಿರುವ ದೇವಿಯು ‘ಶಬಲ ಬ್ರಹ್ಮಳು’ ಅಂದರೆ ಅನೇಕ ವರ್ಣಗಳಿಂದ ಶೋಭಿತಳಾಗಿರುವಳು. ಇವಳು ನಾದಬ್ರಹ್ಮಳೂ ಹೌದು. ಅದಕ್ಕಾಗಿಯೇ ಬೇಂದ್ರೆಯವರು ಇಲ್ಲಿ ‘ಸ,ರಿ,ಗ,ಮ,ಪ,ಧ,ನಿ’ ಎನ್ನುವ ಸಪ್ತಸ್ವರಗಳನ್ನು ಆಲಿಸುತ್ತಿದ್ದಾರೆ. ಇದಕ್ಕೂ ಮೇಲಿರುವದು ‘ನಾದಬಿಂದುಕಲಾತೀತ’ವಾದ ಶುದ್ಧಬ್ರಹ್ಮ. ಅಲ್ಲಮಪ್ರಭುಗಳು ಹೇಳುವ ‘ನಿರ್ಬಯಲು’ ಇದೇ ಆಗಿದೆ. ಇಲ್ಲಿ ‘ಅರುಳು’ ಅಂದರೆ ಜ್ಞಾನವೇ ಅರಳುತ್ತದೆ. ಈ ರೀತಿಯಾಗಿ ಮಾಯೆ ಹಾಗು ಚೈತನ್ಯ ಆಟವಾಡುತ್ತಿವೆ!
ಪ್ರತಿಯೊಂದು ಜೀವಿಗೂ ಒಳಗಣ್ಣು ಹಾಗು ಹೊರಗಣ್ಣು ಇರುತ್ತವೆ. ಈ ಕಣ್ಣುಗಳು ಆತನ ಬಾಹ್ಯಪ್ರಪಂಚದಲ್ಲಿ ಹಾಗು ಅಂತರಂಗದಲ್ಲಿ ಉತ್ಕ್ರಾಂತಿಯನ್ನು ಸಾಧಿಸಲು ನೆರವಾಗುವ ಸಾಧನಗಳಾಗಬೇಕು. ಇದು ‘ಕಣ್ಣರಳು’ ಕವನದ ತಿರುಳು. ‘ಕಣ್ಣರಳು’ ಅಂದರೆ ವಿಸ್ಮಯಗೊಳ್ಳು ಎನ್ನುವ ಅರ್ಥವೂ ಇದೆ. ಪರಮಾತ್ಮನ ಲೀಲಾನಾಟಕವನ್ನು ಕಂಡ ಕಣ್ಣುಗಳು ವಿಸ್ಮಯದಿಂದ ಅರಳುವದು ಸಹಜವೇ ಆಗಿದೆ.
‘ಕಣ್ಣರಳು’ ಕವನವು ‘ನಾಕು ತಂತಿ’ ಸಂಕಲನದಲ್ಲಿ ಅಡಕವಾಗಿದೆ.
15 comments:
ಕಾಕಾ, ದಂಗಾಗಿ ಹೋದೆ. ಧನ್ಯವಾದಗಳು.
ಬೇಂದ್ರೆಯವರ ಪದಮೋಡಿಯನ್ನು ಅರಿಯಲು ಧಾರವಾಡದ, ಸುತ್ತಮುತ್ತಲ ಭಾಷೆಯ ಸೊಗಡನ್ನೂ ಅರಿತಿರಲೇಬೇಕು. ಅದಿಲ್ಲದೆ ಆ ಅವಧೂತನ ಜಾಡು ಹಿಡಿಯುವುದು ಕಷ್ಟ.
ಸಂಕೋಚದಿಂದಲೇ ಒಂದು ಕಣ್ತಪ್ಪನ್ನು ತೋರಿಸಬಯಸುತ್ತೇನೆ:
ಆರು ಚಕ್ರಗಳನ್ನೂ ಅವುಗಳ ಪ್ರತಿನಿಧಿ ಪಂಚಭೂತಗಳನ್ನೂ ಬರೆಯುವಾಗ ಇವೆರಡು ಅದಲು-ಬದಲಾಗಿವೆ--
೨).ಸ್ವಾಧಿಷ್ಠಾನ…. ಅಗ್ನಿ(ತೇಜಸ್) (ಅಪ್ ಆಗಬೇಕು)
೩).ಮಣಿಪೂರ…….ಅಪ್ (ಅಗ್ನಿ /ತೇಜಸ್ ಆಗಬೇಕು)
ಉದ್ಧಟತನವಲ್ಲ ಕಾಕಾ, ಕ್ಷಮಿಸಿ. ನಿಮ್ಮ ಜ್ಞಾನದ ಮುಂದೆ ನನ್ನ ತಿಳುವಳಿಕೆ ಸಣ್ಣದು.
ವಿಶ್ಲೇಷಣೆಗೆ ಮತ್ತೊಮ್ಮೆ ಧನ್ಯವಾದಗಳು.
ಅದ್ಭುತವಾಗಿದೆ. ಬೇಂದ್ರೆ ಮೋಡಿಗಾರ. ಕನ್ನಡದ ಆಡುಮಾತುಗಳನ್ನು ಅರ್ಥಪೂರ್ಣವಾಗುವ ಹಾಗೆ ಬಳಸಿಕೊಂಡ ಕವಿಗಳೆಂದರೆ ಕುಮಾರವ್ಯಾಸ ಮತ್ತು ನಂತರ ಬೇಂದ್ರೆ. ಈ ಇಬ್ಬರ ಹೆಸರು ಗೊತ್ತಿದ್ದವರಿಗೆ ಶಬ್ದ ದಾರಿದ್ರ್ಯ ಬರಲಿಕ್ಕಿಲ್ಲ.
ಸಂಕೋಚವೇಕೆ, ಜ್ಯೋತಿ? ನಿನ್ನ ಅನುಮಾನ ಸರಿಯಾಗಿಯೇ
ಇದೆ. ನಿಜವಾಗಿಯೂ ಇಲ್ಲಿ ಅದಲು ಬದಲು ಆಗಿಲ್ಲ. ಆದರೆ ಈ ಅನುಮಾನ ಬರಲು ಕಾರಣವೆಂದರೆ, ಚಕ್ರಸರಣಿಯನ್ನು ಬಣ್ಣಿಸುವಾಗ, ಬೇಂದ್ರೆಯವರು ಯೋಗಪದ್ಧತಿಯ ಸಾಂಪ್ರದಾಯಿಕ ಸರಣಿಯನ್ನು ಅನುಸರಿಸಿಲ್ಲ. ಅವರು ಶಂಕರಾಚಾರ್ಯರು ತಮ್ಮ "ಸೌಂದರ್ಯ ಲಹರಿ"ಯಲ್ಲಿ ಅನುಸರಿಸಿದ ಸರಣಿಯನ್ನು ಅನುಸರಿಸಿದ್ದಾರೆ. ಹೀಗಾಗಿ, ಮೂಲಾಧಾರ(ಪೃಥ್ವಿ)ಚಕ್ರದ ನಂತರ,ಸ್ವಾಧಿಷ್ಠಾನ(ಅಗ್ನಿ) ಚಕ್ರವನ್ನು ಬಣ್ಣಿಸದೆ, ಮಣಿಪೂರ(ಅಪ್)ಚಕ್ರವನ್ನು ಬಣ್ಣಿಸಿದ್ದಾರೆ. ಇದರಿಂದಾಗಿ, ಇದು confusionಅನ್ನು
ಸೃಷ್ಟಿಸಿದೆ. ಶಂಕರಾಚಾರ್ಯರು ರಚಿಸಿದ ಶ್ಲೋಕವು ಈ ರೀತಿಯಾಗಿದೆ:
"ಮಹೀಂ ಮೂಲಾಧಾರೇ,ಕಮಪಿ ಮಣಿಪೂರೇ, ಹುತವಹಂ|
ಸ್ಥಿತಂ ಸ್ವಾಧಿಷ್ಠಾನೆ,ಹೃದಿಮರುತ ಮಾಕಾಶಮುಪರಿ|
ಮನೋಪಿ ಭ್ರೂಮಧ್ಯೇ, ಸಕಲಮಪಿ ಭಿತ್ವಾ ಕುಲಪಥಂ|
ಸಹಸ್ರಾರೇ ಪದ್ಮೇ ಸಹ ರಹಸಿ ಪತ್ಯಾ ವಿಹರಸೇ||
ಅಂದ ಹಾಗೆ,ಈ ಕವನದ ಶೀರ್ಷಿಕೆಯ ಬಗೆಗೆ ಬರೆಯುವದನ್ನು
ಬಿಟ್ಟು ಬಿಟ್ಟಿದ್ದೆ.
"ಕಣ್ಣರಳು" ಎಂದರೆ ವಿಸ್ಮಯದಿಂದ ನೋಡು ಎನ್ನುವ ಅರ್ಥ ಹಾಗು ಜ್ಞಾನವನ್ನು ಗ್ರಹಿಸು ಅನ್ನುವ ಅರ್ಥ ಎರಡೂ ಹೊಮ್ಮುತ್ತವೆ, ಅಲ್ಲವೆ?
-ಕಾಕಾ
ಕಟ್ಟಿಯವರೆ,
ಸರಿಯಾಗಿ ಹೇಳಿದಿರಿ. ಕುಮಾರವ್ಯಾಸ ಹಾಗು ಅಂಬಿಕಾತನಯದತ್ತ ಇವರೀರ್ವರೇ ಕನ್ನಡದ ಆಡುನುಡಿಯ ಪೂರ್ಣ ಸಾಮರ್ಥ್ಯವನ್ನು ಬಳಸಿಕೊಂಡವರು.
ಸುನಾಥರೇ, ಯುಗಾದಿಗೆ ಹೋಳಿಗೆ ಊಟವನ್ನೇ ಬಡಿಸಿದಿರಿ. ನಿಮ್ಮೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ನಮಗೂ ನಿಮಗೂ ಅಂಟಿದ ಆತ್ಮೀಯತೆಯ ನಂಟು ಹೊಸ ವರ್ಷದಲ್ಲೂ ಮುಂದುವರೆಯಲಿ ಎಂದು ಹಾರೈಸುತ್ತೇನೆ.
"ಸಲ್ಲಾಪ "ದ ಎಲ್ಲಾ ಅತಿಥಿಗಳಿಗೂ ನನ್ನ ಶುಭಾಶಯಗಳು.
ಧನ್ಯವಾದ, ತ್ರಿವೇಣಿಯವರೆ.
ತುಳಸಿವನದಲ್ಲಿ ನೀವು ನಿತ್ಯವೂ ಹಯಗ್ರೀವವನ್ನೆ ಉಣಿಸುತ್ತಿದ್ದೀರಿ!
ನಿಮಗೂ ಸಹ ಯುಗಾದಿಯ ಶುಭಾಶಯಗಳು.
ನಾಕುತಂತಿಯ ಕಣ್ಣರಳು ಒಂದು ಸಲವಲ್ಲ, 5-6 ಸಲ ಓದಿದೆ. ಓದಿದಾಗೊಮ್ಮೆ, ಸಂತೋಷ. ಅದನ್ನು ವರ್ಣಿಸುವದು ಅಸಾಧ್ಯ.ಬ್ರಹ್ಮಾನಂದವೆಂದರೆ ಇದೇ ಏನೋ ?
ಬೇಂದ್ರೆಯವರ ಸಮಗ್ರ ಸಂಪುಟದ ವಿಷಯ ಸೌ.ಅರುಣಾ ಹೇಳಿದರು. ಬೇಂದ್ರೆಯವರ ಸಾಹಿತ್ಯಕ್ಕೆ ಬೆಲೆ ಕಟ್ಟುವದು ಹುಚ್ಚುತನ. ಆದರೆ, ನನ್ನ ಕೊಳ್ಳುವ ಶಕ್ತಿಯೇ ಕಡಿಮೆ. ಹೀಗಾಗಿ, ಸಮಗ್ರ ಸಂಪುಟದ ಆಶೆ ನನಗೆ ಆಕಾಶ ಕುಸುಮ. ಈ ಮೊದಲು ಮುದ್ರಣವಾದ ಅವರ ಕವನ ಸಂಗ್ರಹಗಳು ಲಭ್ಯವಿಲ್ಲವೆ ? ನನ್ನ ಹತ್ತರ ಈಗ ಇರುವದು `ಮೇಘದೂತ' ಒಂದೇ . ಇನ್ನೂ 5-6 ( ಸಖಿಗೀತ, ನವಿಲುಗರಿ, ಗಂಗಾವತರಣ ಮುಂ) ಇದ್ದವು. ಎಲ್ಲಿ ಹೋದವೋ, ಯಾರು ಒಯ್ದರೋ, ದೇವರೇ ಬಲ್ಲ. ವಿಚಾರಿಸಿ ತಿಳಿಸಿ.
ಕಟ್ಟಿಯವರೆ,
ಬೇಂದ್ರೆಯವರ ಮೊದಲಿನ ಕವನಸಂಗ್ರಹಗಳು ಲಭ್ಯವಿವೆ. ನಿಮಗೆ ವಿವರ ತಿಳಿಸುವೆ.
ಸುನಾಥ್,
ಬೇಂದ್ರೆಯ ಈ ಪದ್ಯ ನನ್ನ ತಲೆ ತಿನ್ನುತ್ತಿತ್ತು. ನೀವು ಪದ ಪದಗಳನ್ನು ಬಿಡಿಸಿ ಯುಗಾದಿಗೆ ಮೃಸ್ಟಾನ್ನ ಭೋಜನ ಮಾಡಿಸಿದ್ದೀರಿ. ನಿಮ್ಮ ಬ್ಲಾಗಿಗೆ ದಾರಿ ಕಾಯುತ್ತ ಕೂಡುತ್ತಿರುವೆ.
ಕೇಶವ
ಧನ್ಯವಾದಗಳು, ಕೇಶವ.
ಬೇಂದ್ರೆ ಗೀತೆಗಳು ನಮ್ಮೆಲ್ಲರ ಸಂತೋಷಕ್ಕಾಗಿಯೇ ಇವೆ:
"ಕೂಡಿ ಓದಿ ಕೂಡಾಡಿ ಕೂಡಿ ಅರಿಯೋಣ ಕೂಡಿ ಕೂಡಿ
ಕೂಡಿ ತಿಂದು ಕೂಡುಂಡು ಕುಡಿದು ದುಡಿಯೋಣ ಕೂಡಿ ಕೂಡಿ
ಕೂಡಿ ನಡೆದು ಒಡಗೂಡಿ ಪಡೆದು ನುಡಿ ಹೇಳಿ ಕೇಳಿ ಕೂಡಿ
ಕೂಡಿ ಬೆಳೆದು ಬೆಳಗೋಣ ದೇವರೊಲು ಕೂಡಿ ಕೂಡಿ ಕೂಡಿ."
(’ಗಂಗಾವತರಣ’ ಕವನಸಂಗ್ರಹದ ಕೊನೆಯಲ್ಲಿ ಕೊಟ್ಟ
ಪ್ರಾರ್ಥನೆ.)
ಹಳೆಯ ಮುದ್ರಣದ ಬೇಂದ್ರೆಯವರ ಕವನಸಂಗ್ರಹಗಳು ಲಭ್ಯವಿದ್ದರೆ, ವಿವರವಾಗಿ ತಿಳಿಸಿ. ಕಾತುರದಿಂದ ನಿಮ್ಮ ುತ್ತರದ ದಾರಿ ಕಾಯುತ್ತಿರುವೆ.
ಭ್ರಂಗದಾ ಬೆನ್ನೇರಿ ಬಂತು ಕಲ್ಪನಾ ವಿಲಾಸ...ಬೇಂದ್ರೆಯವರ ೀ ಹಾಡಿನ ಬಗ್ಗೆ ಬರೆಯಿರಿ ಪ್ಲೀಸ್..;-)
ಖಂಡಿತವಾಗಿಯೂ ಬರೆಯುವೆ, ಅರುಣ!
Thank you Sunaath for the explanation!!
ಧನ್ಯವಾದಗಳು,Unknown ಮಹಾಶಯರೆ!
Post a Comment