ಬೇಂದ್ರೆಯವರು ತಮ್ಮ ಕೆಲವು ಕವನಗಳಲ್ಲಿ ಕಾವ್ಯವು ಸೃಷ್ಟಿಗೊಳ್ಳುವ ವಿಧಾನವನ್ನೇ ಕಡೆದಿದ್ದಾರೆ. ಉದಾಹರಣೆಗೆ ಅವರ ’ಗರಿ’ ಕವನಸಂಕಲನದಲ್ಲಿಯ ಕೊನೆಯ ಕವನ ’ಗರಿ’ಯನ್ನೇ ನೋಡಿರಿ:
“ಎಲ್ಲೆಕಟ್ಟು ಇಲ್ಲದಾ
ಬಾನಬಟ್ಟೆಯಲ್ಲಿದೊ
ಎಂsದೆಂದು ಹಾರುವೀ
ಹಕ್ಕಿ-ಗಾಳಿ ಸಾಗಿದೆ”
’ಕವಿಯ ಕಾವ್ಯಪಕ್ಷಿಯು ಮನೋಆಕಾಶದಲ್ಲಿ ಹಾರುತ್ತಿರುವಾಗ ಉದುರಿದ ಗರಿಗಳೇ ತಮ್ಮ ಕವನಗಳು’ ಎಂದು ಬೇಂದ್ರೆ ಹೇಳುತ್ತಾರೆ. “ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ” ಇದೂ ಸಹ ’ಗರಿ’ ಕವನಸಂಕಲನದಲ್ಲಿಯ ಒಂದು ಕವನ. ಈ ಕವನದ ಶೀರ್ಷಿಕೆ: ಭಾವಗೀತೆ.
ಕವಿಕುಲಗುರು ಕಾಳಿದಾಸನು ಬರೆದ ’ಅಭಿಜ್ಞಾನ ಶಾಕುಂತಲಮ್’ ನಾಟಕದಲ್ಲಿ, ನಾಯಕ ಹಾಗು ನಾಯಕಿಯರ ಭೇಟಿಯಾಗುವದೇ ಭೃಂಗದ ನಿಮಿತ್ತವಾಗಿ. ಮಹಾರಾಜಾ ದುಷ್ಯಂತನು ಮೃಗಯಾವಿಹಾರಕ್ಕಾಗಿ ಕಾಡಿಗೆ ತೆರಳಿರುತ್ತಾನೆ. ಅಲ್ಲಿ ಕಣ್ವ ಋಷಿಗಳ ಆಶ್ರಮವಿರುತ್ತದೆ. ಮಲ್ಲಿಗೆ ಬಳ್ಳಿಗೆ ನೀರುಣಿಸಲು ಬಂದ ಶಕುಂತಲೆಯನ್ನು ದುಂಬಿಯೊಂದು ಕಾಡತೊಡಗುತ್ತದೆ. ಆ ಅಸಹಾಯಕ ಸುಕುಮಾರ ಬಾಲೆಯು ದುಂಬಿಯನ್ನು ನಿವಾರಿಸುವ ವ್ಯರ್ಥ ಯತ್ನದಲ್ಲಿದ್ದಾಗ, ದುಷ್ಯಂತನು ಅವಳಿಗೆ ಸಹಾಯಹಸ್ತ ಚಾಚುತ್ತಾನೆ. ಮುಂದಿನ ಕತೆ ಎಲ್ಲರಿಗೂ ಗೊತ್ತಿದ್ದದ್ದೇ.
ಈ ರೀತಿಯಾಗಿ ಕಾಳಿದಾಸನ ಕಲ್ಪನೆ ಭೃಂಗದ ಬೆನ್ನೇರಿ, ವಿಶ್ವಮಾನ್ಯವಾದ ಒಮ್ದು ಶ್ರೇಷ್ಠ ನಾಟಕವನ್ನು ನಿರ್ಮಿಸಿತು. ಬೇಂದ್ರೆಯವರ ಕಲ್ಪನೆಗಳೂ ಸಹ ಅವರ ಮನದಲ್ಲಿ ಅಮೂರ್ತ ರೂಪದಿಂದ ಮೂರ್ತರೂಪಕ್ಕೆ ಕಾವ್ಯವಾಗಿ ಪರಿಣಮಿಸುತ್ತಿದ್ದವು. ಈ process ಅನ್ನೇ ಬೇಂದ್ರೆ ತಮ್ಮ “ಭಾವಗೀತೆ” ಕವನದಲ್ಲಿ ಬಣ್ಣಿಸಿದ್ದಾರೆ.
“ಭಾವಗೀತೆ”
“ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ”
ಮಸೆದ ಗಾಳಿ ಪಕ್ಕ ಪಡೆಯುತಿತ್ತು ಸಹಜ ಪ್ರಾಸಾ
ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..
ಏನು ಏನು? ಜೇನು ಜೇನು? ಎನೆ ಗುಂಗುಂ ಗಾನಾ
ಓಂಕಾರದ ಶಂಖನಾದಕಿಂತ ಕಿಂಚಿದೂನಾ
ಕವಿಯ ಏಕತಾನ ಕವನದಂತೆ ನಾದಲೀನಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..
ಒಡಲ ನೂಲಿನಿಂದ ನೇಯುವಂತೆ ಜೇಡ ಜಾಲಾ
ತನ್ನ ದೈವರೇಷೆ ಬರೆಯುವಂತೆ ತಾನೆ ಭಾಲಾ
ಉಸಿರಿನಿಂದ ಹುದುಕುವಂತೆ ತನ್ನ ಬಾಳ ಮೇಲಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..
ತಿರುಗತಿತ್ತು ತನ್ನ ಸುತ್ತ ಮೂಕಭಾವ ಯಂತ್ರಾ
ಗರ್ಭಗುಡಿಯ ಗರ್ಭದಲ್ಲಿ ಪಡಿನುಡಿಯುವ ಮಂತ್ರಾ
ಮೂಡಿ ಮೂಡಿ ಮುಳುಗಿ ಮುಳುಗಿ ಮೊಳಗುವೊಲು ಸ್ವತಂತ್ರಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..
ಎಲ್ಲೆಲ್ಲೂ ಸೃಷ್ಟಿದೇವಿಗಿಟ್ಟ ಧೂಪ ಧೂಮಾ
ಲಹರಿ ಲಹರಿ ಕಂಪಬಳ್ಳಿ; ಚಿತ್ತರಂಗ ಭೂಮಾ
ದಾಂಗುಡಿಗಳ ಬಿಡುತಲಿತ್ತು, ಅರಳಲಿತ್ತು, ಪ್ರೇಮಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..
ವಜ್ರಮುಖವ ಚಾಚಿ ಮುತ್ತತಿತ್ತು ಹೂವ ಹೂವಾ
ನೀರ ಹೀರಿ ಹಾರತಿತ್ತು ನೀರಸವಾ ಜಾವಾ
ಅಯ್ಯೊ ನೋವೆ! ಅಹಹ ಸಾವೆ! ವಿಫಲ ಸಫಲ ಜೀವಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..
ಗಾಳಿಯೊಡನೆ ತಿಳ್ಳಿಯಾಡುತದರ ಓಟಾ
ದಿಕ್ತಟಗಳ ಹಾಯುತಿತ್ತು; ಅದರ ಬಿದಿಗೆ ನೋಟಾ
ನಕ್ಕ ನಗುವ ಚಿಕ್ಕೆಯೊಡನೆ ಬೆಳೆಸತಿತ್ತು ಕೂಟಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..
ಅಂತು ಇಂತು ಪ್ರಾಣತಂತು ಹೆಣೆಯುತಿತ್ತು ಬಾಳಾ
ಅಲ್ಲು ಇಲ್ಲು ಚೆಲುವು ನಿಂತು ಹಾಕತಿತ್ತು ತಾಳಾ
’ಬಂತೆಲ್ಲಿಗೆ?’ ಕೇಳುತಿದ್ದನೀಯಂತ ಕಾಳಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..
ಮಾತು ಮಾತು ಮಥಿಸಿ ಬಂದ ನಾದದ ನವನೀತಾ
ಹಿಗ್ಗ ಬೀರಿ ಹಿಗ್ಗಲಿತ್ತು ತನ್ನ ತಾನೆ ಪ್ರೀತಾ
ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗೀತಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..
ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸಾ
ಮಸೆದ ಗಾಳಿ ಪಕ್ಕ ಪಡೆಯುತಿತ್ತು ಸಹಜ ಪ್ರಾಸಾ
ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..
ಇಂಗ್ಲಿಶ್ ಕವಿಯೊಬ್ಬನು ಕಾವ್ಯಸೃಷ್ಟಿಯನ್ನು “One percent inspiration and ninetynine percent perspiration” ಎಂದು ವರ್ಣಿಸಿದ್ದಾನೆ. ಆದರೆ ಬೇಂದ್ರೆಯವರಿಗೆ ಕಾವ್ಯಸೃಷ್ಟಿ ಉಸಿರಾಟದಷ್ಟೆ ಸಹಜ. ಅವರ ಮನೋರಂಗದಲ್ಲಿ ಕಲ್ಪನೆಗಳು ತೇಲಾಡುತ್ತಿರುತ್ತವೆ.
(“ತೇಲಾಡುವಾಗ ಮನಸು
ಮೇಲಾಡತಾವ ಕನಸು” ನೆನಪಿಸಿಕೊಳ್ಳಿರಿ.)
ಅವರ ಬತ್ತಳಿಕೆಯಲ್ಲಿ ಪದಗಳ ಬಾಣಗಳು ಅಕ್ಷಯವಾಗಿವೆ. ಪ್ರಾಸಕ್ಕಾಗಿ ಅವರು ತಡಕಾಡಲೇ ಬೇಕಿಲ್ಲ. ಇದೆಲ್ಲಕ್ಕೂ ಮೇಲಾಗಿ, ಅವರ ಕವನಗಳು ನಾದದ ಗುಂಗು ಹಿಡಿದು ಹೋಗುತ್ತವೆ.
ಈ ಕವನದ ಮೊದಲ ನುಡಿಯನ್ನೇ ತೆಗೆದುಕೊಳ್ಳಿರಿ:
“ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ”
ಮಸೆದ ಗಾಳಿ ಪಕ್ಕ ಪಡೆಯುತಿತ್ತು ಸಹಜ ಪ್ರಾಸಾ
ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..
ಕವಿಕುಲಗುರು ಕಾಳಿದಾಸನ ಕಲ್ಪನೆಯನ್ನೇ ಬಳಸಿಕೊಂಡು, ಆ ಭೃಂಗವನ್ನು ಕವಿಯ ಮನಸ್ಸಿಗೆ ಹೋಲಿಸಿ, ಕಲ್ಪನೆಯ ಚೆಲ್ಲಾಟವನ್ನು ಬೇಂದ್ರೆ ಬಣ್ಣಿಸುತ್ತಾರೆ. ಭೃಂಗದ ಪಕ್ಕಗಳ ಚಲನೆಯಿಂದ ಗಾಳಿಯಲ್ಲಿ ಉಂಟಾಗುವ ಸಹಜ ಚಲನೆಯನ್ನೇ ಬೇಂದ್ರೆ ಪ್ರಾಸಕ್ಕೆ ಹೋಲಿಸುತ್ತಾರೆ. ಈ ಸಂದರ್ಭದಲ್ಲಿ ಕವಿಯ ಮನಸ್ಸಿನಲ್ಲಿ ಕಾವ್ಯಕನ್ನಿಕೆಯ ಮಂದಹಾಸವು ಮಿಂಚಿ ಮಾಯವಾಗುತ್ತದೆ. ಅಂದರೆ ಕವಿಗೆ ಕಾವ್ಯದ ಹೊಳವು ತೋರುತ್ತದೆ.
ಈಗ ಎರಡನೆಯ ನುಡಿಯನ್ನು ನೋಡಿರಿ:
ಏನು ಏನು? ಜೇನು ಜೇನು? ಎನೆ ಗುಂಗುಂ ಗಾನಾ
ಓಂಕಾರದ ಶಂಖನಾದಕಿಂತ ಕಿಂಚಿದೂನಾ
ಕವಿಯ ಏಕತಾನ ಕವನದಂತೆ ನಾದಲೀನಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..
ಈ ಮಂದಹಾಸದ ಮಿಂಚನ್ನು ಬೇಂದ್ರೆಯವರು ಹಿಡಿಯಲು ಹೋಗುವದು ನಾದದ ಜಾಡಿನ ಬೆನ್ನತ್ತಿ. ಜೇನು ಹುಳವು ಗುಂಯ್ ಗುಂಯ್ ನಾದವನ್ನು ಮಾಡುತ್ತ ಪರಾಗವನ್ನು ಹುಡುಕುವಂತೆ, ಬೇಂದ್ರೆಯವರೂ ಸಹ ನಾದದ ಹಿಂದೆ ಹೊರಡುತ್ತಾರೆ. ಈ ನಾದವು ಓಂಕಾರದ ಶಂಖನಾದಕ್ಕಿಂತ ತುಸುವೇ ಕಡಿಮೆಯದು. ಏಕೆಂದರೆ ಓಂಕಾರದ ಶಂಖನಾದವು ಪಾರಲೌಕಿಕ. ಈ ನಾದವು ಎಷ್ಟೆಂದರೂ ಲೌಕಿಕವೇ. ಆದರೆ ಈ ನಾದವು ಒಂದೇ ಗುಂಗಿನಲ್ಲಿ ಲೀನವಾಗಿದೆ. ಇಲ್ಲಿ ಕವಿಯ ಏಕತಾನದಂತೆ ಅಂದರೆ monotonous ಎನ್ನುವ ಅರ್ಥವಿಲ್ಲ; ಆದರೆ ಒಂದೇ ಗುಂಗಿನ ನಾದ ಎನ್ನುವ ಅರ್ಥವಿದೆ.
ಈಗ ಮೂರನೆಯ ನುಡಿಯನ್ನು ನೋಡಿರಿ:
ಒಡಲ ನೂಲಿನಿಂದ ನೇಯುವಂತೆ ಜೇಡ ಜಾಲಾ
ತನ್ನ ದೈವರೇಷೆ ಬರೆಯುವಂತೆ ತಾನೆ ಭಾಲಾ
ಉಸಿರಿನಿಂದ ಹುದುಕುವಂತೆ ತನ್ನ ಬಾಳ ಮೇಲಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..
ಕಾವ್ಯದ ಮೂಲವಸ್ತು ಕವಿಯ ಮನದಲ್ಲೇ ಇರುವಂಥಾದ್ದು. ಉದಾಹರಣೆಗೆ ಪ್ರೇಮ, ಭಕ್ತಿ, ವಾತ್ಸಲ್ಯ ಇತ್ಯಾದಿ. ಜೇಡರ ಹುಳು ತನ್ನ ಮೈಯಿಂದಲೇ ಎಳೆಗಳನ್ನು ತೆಗೆದು ಬಲೆ ಹೆಣೆಯುವಂತೆ, ಕವಿ ತನ್ನ ಮನದಲ್ಲಿ ಇರುವ ಭಾವನೆಗಳಿಂದಲೇ ಕವನವನ್ನು ಹೆಣೆಯುತ್ತಾನೆ. ಆದರೆ ಈ ಕಾವ್ಯದ ಹಣೆಬರಹವನ್ನು ಬರೆಯುವವರು ಯಾರು?
ಸ್ವತಃ ಕವಿತೆಯೇ ತನ್ನ ಭಾಲದ(=ಹಣೆಯ) ಮೇಲಿನ ರೇಖೆಯನ್ನು ಬರೆದುಕೊಳ್ಳುವದು. ನಂತರದಲ್ಲಿ ತನ್ನ ಬಾಳಿನ ಮೇಲಾ(=ಜಾತ್ರೆ, ಪ್ರಪಂಚ)ವನ್ನು ಸಹ ಅದು ತಾನೇ ಹುಡುಕುತ್ತ ಹೋಗುವದು. ಇದರರ್ಥ ಕವನವು ಭಾವಪೂರ್ಣವಾಗಿದ್ದರೆ, ಯಶಸ್ವಿಯಾಗುವದು, ಬಾಳುವದು. ಇಲ್ಲವಾದರೆ………………..!
ಈಗ ನಾಲ್ಕನೆಯ ನುಡಿಯನ್ನು ನೋಡಿರಿ:
ತಿರುಗತಿತ್ತು ತನ್ನ ಸುತ್ತ ಮೂಕಭಾವ ಯಂತ್ರಾ
ಗರ್ಭಗುಡಿಯ ಗರ್ಭದಲ್ಲಿ ಪಡಿನುಡಿಯುವ ಮಂತ್ರಾ
ಮೂಡಿ ಮೂಡಿ ಮುಳುಗಿ ಮುಳುಗಿ ಮೊಳಗುವೊಲು ಸ್ವತಂತ್ರಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..
ಕಲ್ಪನೆಯ ಗರ್ಭದಲ್ಲಿ ಕವನ ಮೂಡುತ್ತಿರುವಾಗ ಕವಿ ಏನು ಮಾಡುತ್ತಿರುತ್ತಾನೆ? ಅವನೊಬ್ಬ ಮೂಕಭಾವದ ಯಂತ್ರ. ಕವಿಯ ಮನಸ್ಸಿನ ಗರ್ಭಗುಡಿಯಲ್ಲಿ ಕಾವ್ಯದ ಮಂತ್ರಪಠಣ ನಡೆಯುತ್ತಿದ್ದಾಗ, ಕವಿ ಅದನ್ನು ಗ್ರಹಿಸಲು ಸಿದ್ಧನಾಗಿ ನಿಲ್ಲಬೇಕಷ್ಟೆ. ಇಲ್ಲಿ ವರಕವಿಗಳಿಗೂ ನರಕವಿಗಳಿಗೂ ಇರುವ ಅಂತರವನ್ನು ನಾವು ಲಕ್ಷದಲ್ಲಿಟ್ಟುಕೊಳ್ಳಬೇಕು. ತಮ್ಮ ಕವನಗಳನ್ನು ಅಂಬಿಕಾತನಯದತ್ತ ಕೇಳಿಸಿಕೊಳ್ಳುತ್ತಾನೆ, ಬೇಂದ್ರೆ ಮಾಸ್ತರ ಅದನ್ನು ಬರೆದುಕೊಳ್ಳುತ್ತಾರೆ ಎನ್ನುತ್ತಾರೆ ಬೇಂದ್ರೆಯವರು. ಕುಮಾರವ್ಯಾಸನೂ ಸಹ ತಾನು ಕೇವಲ ಲಿಪಿಕಾರ ಎಂದುಕೊಂಡದ್ದನ್ನು ಗಮನಿಸಬೇಕು.
ಇನ್ನು ಐದನೆಯ ನುಡಿಯನ್ನು ನೋಡಿರಿ:
ಎಲ್ಲೆಲ್ಲೂ ಸೃಷ್ಟಿದೇವಿಗಿಟ್ಟ ಧೂಪ ಧೂಮಾ
ಲಹರಿ ಲಹರಿ ಕಂಪಬಳ್ಳಿ; ಚಿತ್ತರಂಗ ಭೂಮಾ
ದಾಂಗುಡಿಗಳ ಬಿಡುತಲಿತ್ತು, ಅರಳಲಿತ್ತು, ಪ್ರೇಮಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..
ಕವನವು ಕೊನೆಗೊಮ್ಮೆ ಜೀವ ತಳೆದಾಗ ಅದು ಎಲ್ಲೆಲ್ಲೂ ಹರ್ಷದ ವಾತಾವರಣವನ್ನು ಸೃಜಿಸುತ್ತದೆ. ಹೂಬಳ್ಳಿಗಳೆಲ್ಲ ಕಂಪು ಸೂಸುತ್ತವೆ. ಚಿತ್ತವೆಂಬ ರಂಗವು ವಿಶಾಲವಾಗುತ್ತದೆ, ಮಹತ್ತಾಗುತ್ತದೆ, ಅಲ್ಲಿ ಪ್ರೇಮಭಾವನೆಯು ತುಂಬುತ್ತದೆ.
ಆದರೆ, ದುಂಬಿ ಮುತ್ತಿಟ್ಟು ಹೋದ ಹೂವಿನ ಸ್ಥಿತಿ? ಅದನ್ನು ಆರನೆಯ ನುಡಿಯಲ್ಲಿ ನೋಡಬಹುದು:
ವಜ್ರಮುಖವ ಚಾಚಿ ಮುತ್ತತಿತ್ತು ಹೂವ ಹೂವಾ
ನೀರ ಹೀರಿ ಹಾರತಿತ್ತು ನೀರಸವಾ ಜಾವಾ
ಅಯ್ಯೊ ನೋವೆ! ಅಹಹ ಸಾವೆ! ವಿಫಲ ಸಫಲ ಜೀವಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..
ಹೂವು ತನ್ನಲ್ಲಿಯ ಮಕರಂದವನ್ನು ದುಂಬಿಗೆ ಕೊಟ್ಟಂತೆ, ಕವಿಯೂ ಸಹ ತನ್ನ ಮನಸ್ಸಿನಲ್ಲಿದ್ದ ಮೂಲವಸ್ತುಗಳನ್ನು ಕಲ್ಪನೆಯ ದುಂಬಿಗೆ ಕೊಟ್ಟಿರುತ್ತಾನೆ. ಈಗ ದುಂಬಿ ಹಾರಿ ಹೋಗಿದೆ. ಪರಾಗಸ್ಪರ್ಷದಿಂದ ಕಾವ್ಯಶಿಶು ಜನಿಸಿದೆ. ಆದರೆ ಕವಿ ಬರಿದಾಗಿದ್ದಾನೆ. ಅವನ ಸಾಫಲ್ಯ ಅವನ ಎದುರಿಗಿದೆ. ಆದರೆ ಅವನ ಬಾಳಿಗೀಗ ಕೊನೆ ಬಂದಿತೆನ್ನುವ ಭಾವನೆಯಲ್ಲಿ ಆತ ವೈಫಲ್ಯವನ್ನೂ ಅನುಭವಿಸುತ್ತಿದ್ದಾನೆ.
ಇತ್ತ ಈ ಕಲ್ಪನಾಭೃಂಗವೇನು ಮಾಡುತ್ತಿದೆ. ಅದನ್ನು ನೋಡಲು ಏಳನೆಯ ನುಡಿಯನ್ನು ನೋಡಬೇಕು:
ಗಾಳಿಯೊಡನೆ ತಿಳ್ಳಿಯಾಡುತದರ ಓಟಾ
ದಿಕ್ತಟಗಳ ಹಾಯುತಿತ್ತು; ಅದರ ಬಿದಿಗೆ ನೋಟಾ
ನಕ್ಕ ನಗುವ ಚಿಕ್ಕೆಯೊಡನೆ ಬೆಳೆಸತಿತ್ತು ಕೂಟಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..
ಈ ಭೃಂಗವು ಗಾಳಿಯೊಡನೆ ತಿಳ್ಳಿ (=ಒಂದು ಗ್ರಾಮೀಣ ಆಟ) ಆಡುತ್ತ, ಆಡುತ್ತ , ಓಡುತ್ತ, ಓಡುತ್ತ ದಿಕ್ತಟಗಳನ್ನೇ ಹಾಯುತ್ತಿದೆ. (“ಎಲ್ಲೆಕಟ್ಟು ಇಲ್ಲದಾ ಬಾನಬಟ್ಟೆಯಲ್ಲಿದೊ” ಸಾಲನ್ನು ನೆನೆಪಿಸಿಕೊಳ್ಳಬಹುದು). ಅದರ ಬಿದಿಗೆ ಚಂದ್ರಮನ ನೋಟವು ನಕ್ಕು ನಗುವ ಚಿಕ್ಕೆಯನ್ನು (=twinkling star) ಕೂಟಕ್ಕೆ ಕರೆಯುತ್ತಿದೆ(=wooing).
ಆದರೆ, ಇದು ನಿರಂತರವೆ? ಬೇಂದ್ರೆ ಎಂಟನೆಯ ನುಡಿಯಲ್ಲಿ ಏನು ಹೇಳುತ್ತಾರೆನ್ನುವದನ್ನು ನೋಡೋಣ:
ಅಂತು ಇಂತು ಪ್ರಾಣತಂತು ಹೆಣೆಯುತಿತ್ತು ಬಾಳಾ
ಅಲ್ಲು ಇಲ್ಲು ಚೆಲುವು ನಿಂತು ಹಾಕತಿತ್ತು ತಾಳಾ
’ಬಂತೆಲ್ಲಿಗೆ?’ ಕೇಳುತಿದ್ದನೀಯನಂತ ಕಾಳಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..
ಕಾವ್ಯದ ಪ್ರಾಣತಂತು ಈ ರೀತಿಯಾಗಿ ತನ್ನ ಬಾಳನ್ನು ಹೆಣೆಯುತ್ತಿತ್ತು. ಚೆಲುವೂ ಸಹ ಅದಕ್ಕೆ ತಾಳ ಹಾಕುತ್ತಿತ್ತು. ಆದರೆ, ಅನಂತನಾದ ಕಾಲನು ಇವರಿಗೆ ಕೇಳುವ ಪ್ರಶ್ನೆ: “ಬಂತೆಲ್ಲಿಗೆ?” ಅರ್ಥಾತ್, ನಿಮ್ಮ ಕಾಲ ಮುಗಿಯಬಂತು! ಬಾಳಿನಲ್ಲಿ, ಸಂಸಾರದಲ್ಲಿ ಯಾವುದೂ ಸ್ಥಿರವಲ್ಲ. ಶಂಕರಾಚಾರ್ಯರು ಹೇಳುವಂತೆ: ಕಾಲೋ ಜಗದ್ಭಕ್ಷಕಃ.
ಆದರೆ, ಇದಕ್ಕೆ ನಾವು ಹೆದರಿಕೊಳ್ಳಬೇಕೆ? ಸಾವಿಗೆ ಮುಖಾಮುಖಿಯಾಗಿರುವದು ಯಾವದು?—ಹುಟ್ಟು. ಕವನದ ಒಂಬತ್ತನೆಯ ನುಡಿಯನ್ನು ನೋಡಿರಿ:
ಮಾತು ಮಾತು ಮಥಿಸಿ ಬಂದ ನಾದದ ನವನೀತಾ
ಹಿಗ್ಗ ಬೀರಿ ಹಿಗ್ಗಲಿತ್ತು ತನ್ನ ತಾನೆ ಪ್ರೀತಾ
ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗೀತಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ…………..
ಮಾತು ಅಂದರೆ ವಾಕ್. ಈ ವಾಕ್ಕನ್ನು ಕಡೆದಾಗ ಜನಿಸಿದ್ದು ಈ ನಾದದ ಬೆಣ್ಣೆ(=ನವನೀತ). ಇದೇ ಈಗ ಜನಿಸಿದ ಈ ಸದ್ಯೋಜಾತ ಶಿಶುವು ನಿರುದ್ದಿಶ್ಯವಾಗಿ ಹಿಗ್ಗುತ್ತದೆ;ಜೊತೆಗೆ ಹಿಗ್ಗನ್ನು ಬೀರುತ್ತದೆ. ಅಲ್ಲದೆ ಹಿಗ್ಗುತ್ತದೆ(=ವಿಕಸನಗೊಳ್ಳುತ್ತದೆ). ತನ್ನಲ್ಲಿಯೇ ಪ್ರೀತಿಯನ್ನು ತುಂಬಿಕೊಂಡಿದೆ. ಇದರ ಪ್ರೀತಿಗೆ, ಇದರ ಆಟಕ್ಕೆ ಯಾವುದೇ ಅರ್ಥ(=ಉದ್ದೇಶ) ಬೇಕಾಗಿಲ್ಲ, ಯಾವುದೇ ಸ್ವಾರ್ಥ ಇದಕಿಲ್ಲ. ಭಾವಗೀತೆ ಎಂದರೆ ಹಿಗಿರಬೇಕು.
ಕೊನೆಯ ನುಡಿಯಲ್ಲಿ ಬೇಂದ್ರೆ ಮೊದಲಿನ ನುಡಿಯನ್ನು ಮತ್ತೆ ಬರೆದಿದ್ದಾರೆ. ಭಾವಗೀತೆಯ ಕಲ್ಪನಾವಿಲಾಸವು ಯಾವ ರೀತಿಯಲ್ಲಿ ಕವಿಯನ್ನು, ಓದುಗರನ್ನು ಉಲ್ಲಾಸಗೊಳಿಸುವದು ಎಂದು ತಿಳಿಸುತ್ತಾರೆ. ನಿಜವಾಗಲೂ ಅವರ ಕವನಗಳು ಭೃಂಗದ ಬೆನ್ನೇರಿ ಸಾಗುವದಲ್ಲದೆ, ಓದುಗರನ್ನೂ ಸಹ ಕರೆದೊಯ್ಯುವವು.
Friday, April 11, 2008
Subscribe to:
Post Comments (Atom)
23 comments:
ಬೇಂದ್ರೆಯವರಿಗೆ ಲೌಕಿಕ ಮತ್ತು ಪಾರಲೌಕಿಕ ಬೇರೆ-ಬೇರೆ ಇಲ್ಲ. ಅವರ ಕಾವ್ಯದಲ್ಲಿ ಲೌಕಿಕದಲ್ಲಿ ಪಾರಲೌಕಿಕ ಎಲ್ಲೆಲ್ಲಿಯೂ ಇದೆ. ಆದ್ದರಿಂದಲೇ ಅವರ ಸೃಜನಾ ಶಕ್ತಿ ಅದ್ಭುತವಾಗಿದೆ. ಕುವೆಂಪು ಹೇಳುವಂತೆ, "ಪಂಪ ತನ್ನ ಕಾವ್ಯ ಸೃಜನ ಶಕ್ತಿಯನ್ನು ಪ್ರಕಟಿಸಲು `ವಿಕ್ರಮಾರ್ಜುನ ವಿಜಯ' ಬರೆದು, ಭಕ್ತಿಯನ್ನು ಪ್ರಕಟಿಸಲು`ಪುರಾಣ' ಬರೆದದ್ದರಿಂದ ಅವನ ಸೃಜನ ಶಕ್ತಿ ವಿಭಜನವಾಯಿತು. ಆದರೆ, ಇವೆರಡೂ ಶಕ್ತಿ ಏಕೀಭವಿಸಿ ತನ್ನ ಭಗವದ್ಭಕ್ತಿಯನ್ನು ಕಾವ್ಯಶಕ್ತಿಯ ಮೂಲಕ ಪ್ರಕಟಪಡಿಸಿದ್ದರಿಂದ `ಕುಮಾರವ್ಯಾಸ' ಅದ್ಭುತ. ಅಂತೆಯೇ `ಅಂಬಿಕಾತನಯದತ್ತ' ಅವರ ಯಾವ ಪದ್ಯವನ್ನೇ ಓದಿ, ಲೌಕಿಕವೆಂದು ಹೊರದೃಷ್ಟಿಗೆ ತೋರಿದರೂ, ಹಿಂಜುತ್ತಾ ಹೋದಂತೆ, ಪಾರಲೌಕಿಕದ "ನಾದ" ಕೇಳಿಸುವದು. ಓಂಕಾರ ಕಿವಿಯಲ್ಲಿ ಗುಣಿಗುಣಿಸುವದು. ಆದ್ದರಿಂದ ಈ ಬೇಂದ್ರೆ ಅತ್ಯದ್ಭುತ. ಶಬ್ದಗಳಿಂದ ಬೇಂದ್ರೆ ಕಾವ್ಯ ವರ್ಣಿಸುವದು, ಅಂಗೈಯಲ್ಲಿ ಸಾಗರ ಹಿಡಿದಂತೆ. ಬೇಂದ್ರೆಯವರನ್ನು ಓದಿ, ತಿಳಿದು, ಆ ಬ್ರಹ್ಮಾನಂದವನ್ನು ಅನುಭವಿಸಬೇಕು. ನೀವು ಅನುಭವಿಸಿದ್ದನ್ನು ನಮಗೂ ಹನಿ-ಹನಿಯಾಗಿ ಹಂಚುತ್ತಿದ್ದೀರಿ. ಕೃತಜ್ಞತೆಗಳು.
ಅದ್ಭುತವಾಗಿ ಬೇಂದ್ರೆ ಕಾವ್ಯದ ಲಕ್ಷಣವನ್ನು ವಿವರಿಸಿದಿರಿ,ಕಟ್ಟಿಯವರೆ. ನೀವಂದಂತೆ, ಈ ಸಾಗರವನ್ನು honey ಹನಿಯಾಗಿಯೇ ಕುಡಿಯಬೇಕು.
"ಈ ಸಾಗರವನ್ನು honey ಹನಿಯಾಗಿಯೇ ಕುಡಿಯಬೇಕು."--
ಒಂದೊಂದೇ ಗೀತೆಗಳನ್ನು honeyಹನಿಯಾಗಿಯೇ ನಮಗೆಲ್ಲ ಉಣಬಡಿಸುತ್ತಿದ್ದೀರಿ; ನಿಮಗೆ ನನ್ನ ಪ್ರೀತಿಯ honeyಹನಿಗಳು, ಕಾಕಾ.
ಈ ಭಾವಗೀತದ ವಿವರಣೆ ಕೊನೆಯ ಚರಣಕ್ಕಷ್ಟೇ ಸೀಮಿತವಾಗಿಸಿ, ಇಡೀ ಪದ್ಯದ ಸಾರಾಂಶ ಅದು ಎನ್ನುವಂತೆ ಬರೆದ ವ್ಯಾಖ್ಯಾನ ಓದಿದ್ದೆ. ಇಂದೀಗ ಅದೂ ಹಿಗ್ಗಿದೆ.
ಧನ್ಯವಾದ, ಮತ್ತೆ, ಮತ್ತೊಮ್ಮೆ.
ಆಸಕ್ತಿಯಿಂದ ಆಸ್ವಾದಿಸುತ್ತಿರುವ ನಿನಗೇ ನಾನು ಧನ್ಯವಾದ ಹೇಳಬೇಕು, ಜ್ಯೋತಿ."ಭಾವಗೀತೆ" ಎನ್ನುವ ಈ ಕವನ "ನಾದಲೀಲೆ" ಎನ್ನುವ ಸಂಕಲನದಲ್ಲಿ ೧೯೩೮ರಲ್ಲಿ ಪ್ರಕಟವಾಗಿದೆ.ನಾನು ಇದು "ಗರಿ" ಸಂಕಲನದಲ್ಲಿ ಪ್ರಕಟವಾಗಿದೆ ಎಂದು ತಪ್ಪಾಗಿ ಬರೆದಿದ್ದಕ್ಕೆ ವಿಷಾದಿಸುತ್ತೇನೆ. ೭೦ ವರ್ಷಗಳ ನಂತರವೂ ಕನ್ನಡ ಓದುಗರನ್ನು ಮಂತ್ರಮುಗ್ಧರನ್ನಾಗಿ ಮಾಡುವ ಶಕ್ತಿ ಬೇಂದ್ರೆಯವರ ಕಾವ್ಯಕ್ಕಿದೆಯೆಂದರೆ, ವಿಸ್ಮಯವಾಗುತ್ತದೆ.
ಉತ್ತಮ ಕಾವ್ಯ ಕಾಲಾತೀತವಾದದ್ದು. ಸಾವಿರ-ಸಾವಿರ ವರ್ಷಗಳಾದರೂ, ವೇದವ್ಯಾಸರ ಮಹಾಭಾರತ ನಿತ್ಯ ನೂತನವೇ ! ಪಂಪ, ಕುಮಾರವ್ಯಾಸ, ರನ್ನ, ಮುದ್ದಣ ಮುಂತಾದವರ ಕಾವ್ಯಗಳು ನೂರಾರು ವರ್ಷವಾದರೂ ಇನ್ನೂ ಒದುತ್ತೇವೆ. ಆಸ್ವಾದಿಸುತ್ತೇವೆ. `ಅಂಬಿಕಾತನಯದತ್ತ' ಕಾವ್ಯವೂ ತನ್ನ ಗುಣದಿಂದ ಅಜರಾಮರ, ನಿತ್ಯ ನೂತನ !!!
ಶ್ರೀಯುತ ಕಟ್ಟಿಯವರ ಅಭಿಮತಕ್ಕೆ ನನ್ನ ಸಹಮತ.
ನಾದಲೀಲೆ, ಗರಿ, ಸಖೀಗೀತ, ಮೇಘದೂತ... ಇವೆಲ್ಲವೂ ಇವೆ ನನ್ನ ಗ್ರಂಥಭಂಡಾರದಲ್ಲಿ [[ಮಣಿಪಾಲದ ಮನೆಯಲ್ಲಿ. "ಅಲ್ಲಿದೆ ನಮ್ಮ ಮನೆ, ಇಲ್ಲಿರುವೆ..." ಅಂತ ಇಲ್ಲಿ ಕೂತಿದ್ದೇವೆ, ಸದಾ ಮಣ್ಣಿಗೆ ಕಾತರಿಸುತ್ತಾ!!]]. ಆದರೆ, ಸಂಕಲನದ ಹೆಸರು ಅತ್ತಿತ್ತ ಆಗಿದ್ದಕ್ಕೆ, ಕಾಕಾ, ನೀವು ಅಷ್ಟೊಂದು ವಿಷಾದಿಸಬೇಕಿಲ್ಲ. ಇಂಥಾ ಔತಣದಲ್ಲಿ ಗೊಜ್ಜು ಅನ್ನುವುದನ್ನು ಬಜ್ಜಿ ಅಂದರೆ (ನನಗಂತೂ) ಅಂಥ ವ್ಯತ್ಯಾಸವೇನಾಗೋಲ್ಲ, ಬಿಡಿ.
ನಿಜ ಕಟ್ಟಿಯವರೆ,
ಶ್ರೇಷ್ಠ ಕಾವ್ಯ ಕಾಲಾತೀತವಾದದ್ದು. ಕುಮಾರವ್ಯಾಸನನ್ನು ಓದಿ ಆನಂದಿಸುವಂತೆಯೇ, ಬೇಂದ್ರೆಯವರನ್ನೂ ಸಹ ಕನ್ನಡಿಗರು ಓದುತ್ತಲೇ, ಆನಂದಿಸುತ್ತಲೇ ಇರುತ್ತಾರೆ.
ಜ್ಯೋತಿ, ನಾನು ಗೊಜ್ಜಿಗೆ ಬಜ್ಜಿ ಎಂದರೂ ನಿನ್ನ ಆಕ್ಷೇಪಣೆ ಇಲ್ಲವಷ್ಟೆ! ಕಾಕಾನ ಅರಳು-ಮರಳನ್ನು put up ಮಾಡಿಕೊಳ್ಳುವಿ ತಾನೆ. ಧನ್ಯವಾದಗಳು.
-ಸುನಾಥ ಕಾಕಾ
ಸುಪ್ತದೀಪ್ತಿಯವರಿಗೆ,
ತಮ್ಮ ಸಹಮತಕ್ಕೆ ಧನ್ಯವಾದಗಳು.
ಬೇಂದ್ರೆ ಕಾಕಾರ ಕೃತಿಗಳಿಗೆ ಕನ್ನಡಿ ಹಿಡಿಯುತ್ತಿರುವವರಿಗೆ ವಂದನೆಗಳು
ಸಂಗ್ರಹಯೋಗ್ಯ ಬ್ಲಾಗು :)
सजन रे झूट मत बोलो
खुदा के पास जाना है
न हाथी है न घॊडा है
वहां पैदल ही जाना है
ಭೃಂಗದ ಬೆನ್ನೇರಿ ಬಂತು .. ಎಮ್.ಎಸ್. ಶೀಲಾ ಬಹಳ ಚೆನ್ನಾಗಿ ಹಾಡಿದ್ದಾರೆ. ಬೇಂದ್ರೆಯವರಿಗೂ ಭೃಂಗಕ್ಕೂ ಆತ್ಮೀಯ ನಂಟು . ಬೇಂದ್ರೆಯವರ ಇನ್ನೊಂದು ಕವಿತೆಯೂ ಇದೆ ಅಲ್ಲವೇ? ಬಾ ಭೃಂಗವೇ.. ವಿರಾಗಿಯಂದದಿ ಚರಿಸುವೆ ನೀನೇಕೆ? ಕಂಪಿನ ಕರೆಯಿದು ಸರಾಗವಾಗಿರೆ ಬೇರೆಯ ಕರೆ ಬೇಕೆ? ಸುನಾಥ ಕಾಕಾರಲ್ಲಿ ಈ ಕವನಕ್ಕೆ ನನ್ನ ಮನವಿ ಇದೆ.
ಕಾಕಾ, ನಿಜಕ್ಕೂ ಅದ್ಭುತ ವಿವರಣೆ. ಓದುತ್ತಾ ಹೋದಂತೆ ನನಗೆ ರೋಮಾಂಚನವಾಗುತ್ತಿತ್ತು. ನಿಜಕ್ಕೂ ಕವನವೊಂದರ ಅರ್ಥ ತಿಳಿದಾಗ ಆಗುವ ಆನಂದ ಅವರ್ಣನೀಯ :-) ಬೇಂದ್ರೆಯಜ್ಜನಿಗೆ ನಮನ. ನಿಮಗೆ ಅನಂತ ಧನ್ಯವಾದಗಳು.
ನಮ್ಮ ಸರ್ ಒಬ್ಬರು ಹಿಂದೊಮ್ಮೆ ಬೇಂದ್ರೆಯವರ ಹಾಡೊಂದಕ್ಕೆ ರಾಗ ಹಾಕಿ ಹೇಳಿಕೊಟ್ಟಿದ್ದರು. ‘ಏಲಾವನ ಲವಲೀವನ ಲವಂಗ ಬನಗಳಲಿ...’ ಅಂತ ಆರಂಭವಾಗುವ ಹಾಡು. ನನಗೆ ಸ್ವಲ್ಪವೂ ಅರ್ಥವಾಗಿಲ್ಲ:-) ಆ ಕವನದ ಬಗ್ಗೆ ಬರೆಯುತ್ತೀರಾ?
ಧನ್ಯವಾದಗಳು, ಶ್ರೀನಿವಾಸ.
झूठ बॊलता हूं ।
मगर जरा जरा।
ತ್ರಿವೇಣಿಯವರೆ,
ಖಂಡಿತವಾಗಿಯೂ ಬೇಂದ್ರೆಯವರ ಭೃಂಗದ ಬೆನ್ನು ಹತ್ತಿ ಹೋಗೋಣ!
ಶುಭದಾ,
ಏಲಾವನ, ಲವಲೀವನಗಳಲ್ಲಿ ಖುಶಿಯಿಂದ ಸಂಚರಿಸೋಣವಂತೆ!
-ಕಾಕಾ
ಧನ್ಯವಾದಗಳು
ಧನ್ಯವಾದಗಳು, ನಾಗೇಶರೆ.
ಇತ್ತೀಚೆಗೆ ಬೇಂದ್ರೆ ಕವನಗಳನ್ನು ತಿಳಿಯುವ ಅವಕಾಶ ಒದಗಿದೆ. ಈ ಕವನವಂತೂ ಕಷ್ಟ ಅರ್ಥ ಮಾಡಿಕೊಳ್ಳುವುದು. ನಿಮ್ಮ ಬರಹ ಓದಿ ಎಲ್ಲೋ ನನ್ನ ಅಲ್ಪಮತಿಗೆ ನಿಲುಕುವಷ್ಟು ಅರ್ಥ ಮಾಡಿಕೊಂಡಿದ್ದೇನೆ. ಇನ್ನೂ ಹೆಚ್ಚು ಬರಹಗಳನ್ನು ಇಲ್ಲಿ ಓದಬೇಕಿದೆ. ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು 🙏
ರಶ್ಮಿಯವರೆ,
ಬೇಂದ್ರೆಯವರ ಕವನಗಳು ನೋಡುವುದಕ್ಕೆ ಸರಳ. ಒಳಗೆ ಇಳಿದಂತೆ, ಸಮುದ್ರದಂತೆ ಅಗಾಧ ಆಳ. ನನ್ನಿಂದ ನಿಮಗೆ ಯತ್ಕಿಂಚಿತ್ ನೆರವು ಲಭಿಸಿದ್ದರೆ, ನಾನು ಕೃತಾರ್ಥ!
ಧನ್ಯವಾದಗಳು. ಈ ಭಾವಗೀತೆಗೆ ಆಡಿಯೋ (collected from internet) https://raocollectionssongs.blogspot.com/2021/10/bhrungadaada-mele-bantu-kalpana-vilasa.html
ಸುರೇಶ ಕುಲಕರ್ಣಿಯವರೆ, ಧನ್ಯವಾದಗಳು. ನಿಮ್ಮ blogಗೆ ಹೋಗಿ ನೋಡಿದೆ. ಸಂತೋಷವಾಯಿತು. ಅದ್ಭುತವಾದ ಕಾರ್ಯವನ್ನು ಮಾಡುತ್ತಿರುವಿರಿ!
Excellent explanation
ಧನ್ಯವಾದಗಳು, Anonymous!
Post a Comment