Tuesday, April 15, 2008

`ಜೋಗಿ'....ದ.ರಾ.ಬೇಂದ್ರೆ.

ಬೇಂದ್ರೆಯವರ ಗಂಗಾವತರಣಕವನಸಂಕಲನವು ೧೯೫೧ರಲ್ಲಿ ಪ್ರಕಟವಾಯಿತು. ಈ ಸಂಕಲನದಲ್ಲಿರುವಜೋಗಿಕವನವು ಅಧ್ಯಾತ್ಮ ಸಾಧಕನ ಸಾಧನಾಪಥದಲ್ಲಿಯ ಒಂದು ವಿಶೇಷ ಘಟ್ಟದಲ್ಲಿ, ಆತನ ಮನೋಸ್ಥಿತಿಯನ್ನು ವರ್ಣಿಸುವ ಕವಿತೆಯಾಗಿದೆ.

ಬೇಂದ್ರೆಯವರ ತಾಯಿಯೂ ಸಹ ಗುರೂಪದೇಶ ಪಡೆದವರು. ಈ ಕವನವನ್ನು ಅವರ ಬಗೆಗೆ ಬರೆಯಲಾಗಿದೆ ಎಂದು ಸ್ವತಃ ಬೇಂದ್ರೆಯವರೇ ಹೇಳಿದ್ದಾರೆ. ಆದರೆ ಯಾವುದೇ ಸಾಧಕನ ಜೀವನದಲ್ಲಿಯೂ ಇಲ್ಲಿ ವರ್ಣಿಸಲಾದಂತಹ ಘಟ್ಟ ಬರಬಹುದು.

ಕವನದ ಪೂರ್ತಿಪಾಠವನ್ನು ಕೆಳಗೆ ಕೊಡಲಾಗಿದೆ:

ಊರ ತುದಿಯ ಆ ಮೂರ ಬಟ್ಟೆ ಮುಗಿದಲ್ಲಿ ಕೊಳ್ಳವೆಲ್ಲಿ
ಹಳ್ಳ ಅಲ್ಲಿ ಹರಿದಲ್ಲಿ, ತುಡುಗು-ದನ ತೊಂಡು ಮೇಯುವಲ್ಲಿ
ದಿಕ್ಕು ತಪ್ಪತಾರ ತಪ್ಪಿ ಹೊಕ್ಕರs ಕಕ್ಕಾವಿಕ್ಕಿಯಾಗಿ
ಇರುಳು ಅಂತನs ಹಗಲs ಗೂಗತಾವ ಅಲ್ಲಿ ಜೋಡಗೂಗಿ.

ಅದನ ದಾಟಿ ಆ ಮಸಣವಾಟಿ, ಎಡಕಾಗಿ ಅದರ ಆಚಿ
ಕಾಮ ತನ್ನ ಹಚ್ಚಂಗಿ ಹಾಸಿಧಾಂಗೆಲ್ಲಿ ನೀರ ಪಾಚಿ
ಹೊಚ್ಚಿ ಹೊಂಡವನು ಮೆಚ್ಚ ಮಾಡತಾವೊ ಕಂಡ ಕಣ್ಣುಗಳಿಗೆ.
ಪಾಚಿ ಸರಿಸಿದಾಗ ಕಪ್ಪು ನೀರು ಕರಿತಾವ ಒಳಗ ಬಳಿಗೆ.

ಅದರ ಮುಂದ ಗವಿಗುಡ್ಡ ಅಡ್ಡ ಬರತsದ ನಮ್ಮ ಬಲಕ
ಅತ್ತತ್ತ ಹರುಹಿ ಹತ್ತೊತ್ತಿ ಬಂದ ಕಾಳಮ್ಮಗಿರುವ ಹೊಲಕ
ಆ ಹೊಲದ ನಟ್ಟ ನಡುವಿರುವ ಹುಣಸಿಮರ ಏರಿ ನೋಡಿದಾಗ
ಹತ್ತ ಗಿಡದ ಗುಂಪೊಂದು ಕಾಣತದ ಸಣ್ಣ ಏರಿ ಮ್ಯಾಗ.

ಅಲ್ಲಿ ತೊಗಲಬಾವಲೀ ಚೀರತಾವ ಭರತಿ ಹಗಲಿನೊಳಗ
ಹಿಂಡು ಪಾರಿವಾಳ ಹೊಕ್ಕ ಹೊರಡತಾವ ಮತ್ತ ಒಳಗ ಹೊರಗ
ಅಲ್ಲಿ ಹಬ್ಬಿ ಹರುಹ್ಯsದ ಬೇವಿಗೇ ಸುತ್ತ ಅಮೃತಬಳ್ಳಿ
ಹಾಲ ಸುರವತಾವ ಆಲ ಅಲ್ಲಿ ಅಲ್ಲಾಡತಾವ ಅಳ್ಳಿ.

ಅತ್ತಿ ಗಿಡಕ ಹತ್ಯಾವ ಹಲಸಿನ್ಹಂಗ ಬುಡುಕು ಕೆಂಪು ಹಣ್ಣು
ಜೇನು ತುಂಬಿ ತೊಟಗುಟ್ಟತಾವ ಅದ ಬಯಸತಾವ ಕಣ್ಣು
ಈ ತೋಪಿನ್ಯಾಗ ಬೆಳೆದsದ ಹ್ಯಾಂಗೋ ಮೂಲ್ಯಾಗ ತಪ್ಪಿ ಮಾವು
ಅದರಡಿಗೆ ಹುತ್ತ ಅದರಾಗ ಐತೆ ಒಂದೇಳ ಹೆಡೆಯ ಹಾವು.

ಆ ಮಾವಿನೊಳಗ ಈ ಸುಗ್ಗಿಯೊಳಗ ಬಂದsದ ಕೋಗಿಲೊಂದು
ತನ್ನ ಜೋಡಿ ಕರೆಧಾಂಗ ಕರಿತsದ ನನ್ನ ಬಾರs ಅಂದು
ಕೂಗೇ ಕೂಗತದ ಕೂಗೇ ಕೂಗತsದ ಗಿರಣಿ ಕರೆಯೊ ಹಾಂಗ
ತೆರಪು ಇಲ್ಲ ಒಂದಳತಿ ಕೂಗತsದ ಬ್ಯಾಸರಿಲ್ಲಧಾಂಗ.

ತಿಳಿಯದಾವದೋ ಕಂಪು ಎಳೀತsದ ತುಂಬಿ ಹುಚ್ಚು ಆಗಿ
ಎಚ್ಚರಿಲ್ಲದs ಎತ್ತೊ ತಿರಗತಾವ ದಿಕ್ಕು ತೋರದಾಗಿ
ಬಂತು ಸುಗ್ಗಿ ಬಂದsದ ಸುಗ್ಗಿ ಬರತsದ ಸುಗ್ಗಿ ಎಂದು
ಕುಹೂ ಅನ್ನತದ ಕುಹೂ ಅನ್ನತದ ಕುಹುಕ್ಕುಹೂ ಅಂದು.

ತಾರ ಪಂಚಮದಾಗ ಕೋಗಿಲಾ ಕೂಗತsದೊ ಜೋಗಿ
ಯಾವ ಬಣ್ಣ ಅದಕಾವ ಕಣ್ಣು ನಾ ನೋಡಲೇನು ಹೋಗಿ?
ತೋಟವೆಲ್ಲ ಹೂವಾಗಿ ನಿಂತು ತೊಂಗೆಲ್ಲ ಗೊಂಚಲಾಗಿ
ಪಾಡು ಆಗತಾವ, ಹಣ್ಣು ಆಗತಾವ ಅದರ ಲಯಕೆ ತೂಗಿ.

ಮುಂಜಾವತೊಟ್ಟು ಇರು ಹಂಗು ಬಿಟ್ಟು ಬರಿ ಹಾಂಗ ತೂಗತsದೋ
ತಲಿ ಕಾವಿನೊಳಗ ಇಮ್ಮಾವಿನೊಳಗ ಬಿಸಿಗಾಲ ನೂಗತsದೋ
ಕೊಳಲ ನುಡಿಸಿಧಾಂಗ ಕುಹೂಹುಹೂಹೂ ಉಲಿತsದೊ ಜೋಗಿ
ಬೇರೆ ಕೆಲಸದಾಗ ಮನಸು ತೊಡಗದೊ ನೋಡಲೇನು ಹೋಗಿ?

ಬಂದೆ ಜೋಗಿ ಬಾ, ಬಾರೊ ಜೋಗಿ ಬಾ, ಏನು ಹೊತ್ತು ಬಂದಿ
ನೀನೆ ಹೇಳಿದಾ ನಾಮ ಜಪಿಸುವಾಗ ಬಂತೊ ಸುಗ್ಗಿ ಸಂಧಿ.
ತಲೆಯ ಯಾವುದೊ ನಾಡಿಯೊಳಗ ಸುರುವಾತು ಸುಗ್ಗಿ ಸೊಲ್ಲು
ಮುಂದೆ ಕೇಳಿದರ ಅದs ತುಂಬಿತೋ ಮೂಲೆ ಮೂಲೆಯಲ್ಲು.

ಗುಡಿಗೆ ನಾನು ಹೊರಟಾಗ ಕರೀತದ ಕುಹುಕ್ಕುಹೂ ಎಂದು
ಮನದ ಜಪದ ನಡುನಡುವೆ ನಡೀssದ ಓಂ ಕುಹೂ ಎಂದು
ಕನಸಿನೊಳಗ ನಾ ಸ್ವರಾ ಕೇಳಿ ಮಾಮರಾ ಆಗತೇನೊ
ಅಂತ ಭ್ರಮಾ ಆಗ್ಯsದ ಮನಕ ನೀ ಬಂದೆ ಜೋಗಿ ಏನೋ!

ಯಾವ ಸ್ವರಾ ಇದು ಯಾವ ಕೋಗಿಲಾ ಯಾವ ಮರವೊ ಏನೋ
ಯಾಕ ಹಿಂಗ ಅಸರಂತ ಕೂಗತದ ಏನು ಇದಕೆ ಬ್ಯಾನ್ಯೊ
ಸುತ್ತು ಗುಡ್ಡ ನುಗ್ಗಾಗಿ ಹೋದವೋ ಓಗೊಟ್ಟು ಇದಕs
ಬಿಸಿಲು ಕುಣಿದು ಬೆವತsದ ಈಗ ಬಂದsದ ಮಳಿಯ ಹದಕs.

ಈ ಕವನ ಪ್ರಾರಂಭವಾಗುವದು ಊರ ಹೊರವಲಯದ ಕಾಡಿನ ವರ್ಣನೆಯಿಂದ.

ಊರ ತುದಿಯ ಆ ಮೂರ ಬಟ್ಟೆ ಮುಗಿದಲ್ಲಿ ಕೊಳ್ಳವೆಲ್ಲಿ
ಹಳ್ಳ ಅಲ್ಲಿ ಹರಿದಲ್ಲಿ, ತುಡುಗು-ದನ ತೊಂಡು ಮೇಯುವಲ್ಲಿ
ದಿಕ್ಕು ತಪ್ಪತಾರ ತಪ್ಪಿ ಹೊಕ್ಕರs ಕಕ್ಕಾವಿಕ್ಕಿಯಾಗಿ
ಇರುಳು ಅಂತನs ಹಗಲs ಗೂಗತಾವ ಅಲ್ಲಿ ಜೋಡಗೂಗಿ.

ವಸ್ತುತಃ ಇದು ಆ ಕಾಲದಲ್ಲಿ ಧಾರವಾಡದ ಆಗ್ನೇಯ ದಿಕ್ಕಿನ ಕಾಡಿನಲ್ಲಿದ್ದ ಸೋಮೇಶ್ವರ ಗುಡಿಗೆ ಹೋಗುವ ದಾರಿಯ ವರ್ಣನೆ. (ಈ ಪ್ರದೇಶದಲ್ಲಿ ಈಗ ಭವ್ಯವಾದ ಶ್ರೀ ಧರ್ಮಸ್ಥಳ ಮಂಜುನಾಥ ತಾಂತ್ರಿಕ ಮಹಾವಿದ್ಯಾಲಯತಲೆ ಎತ್ತಿ ನಿಂತಿದೆ.) ಧಾರವಾಡದಲ್ಲಿಯ ಕಾಮನಕಟ್ಟಿಯಿಂದ ಕಾಲುದಾರಿಯಲ್ಲಿ ಸಾಗಿದಾಗ, ಹುಬ್ಬಳ್ಳಿಗೆ ಹೋಗುವ ರಸ್ತೆ, ಕಲಘಟಗಿಗೆ ಹೋಗುವ ರಸ್ತೆ ಹಾಗು ಸೋಮೇಶ್ವರಕ್ಕೆ ಟಿಸಿಲು ಒಡೆಯುವ ದಾರಿ ಈ ರೀತಿಯಾಗಿ ಮೂರು ದಾರಿಗಳು (=ಬಟ್ಟೆಗಳು) ಸಿಗುವವು. ಇವು ಮುಗಿಯುವಲ್ಲಿ ಅತ್ತಿಕೊಳ್ಳವೆಂಬ ಕೊಳ್ಳವು ಪ್ರಾರಂಭವಾಗುತ್ತದೆ. ಅಲ್ಲಿ ಶಾಲ್ಮಲಾ ನದಿ ಗುಪ್ತಗಾಮಿನಿಯಾಗಿ ಹರಿದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಬೇಡ್ತಿ ಹಳ್ಳ ಹಾಗು ಗಂಗಾವಳಿ ನದಿ ಎಂದು ಕರೆಯಿಸಿಕೊಳ್ಳುತ್ತಾಳೆ. ಗೌಳಿ ಜನರು ದನ ಮೇಯಿಸಲೆಂದು ಈ ಇಲ್ಲಿಯವರೆಗೆ ಬರುತ್ತಿದ್ದರು. ಆದರೆ ಅದೇ ಅವರ ಸೀಮಾಂತವಾಗಿತ್ತು! ಅಲ್ಲಿಂದ ಮುಂದೆ ಹೋದರೆ, ’ದಿಕ್ಕು ತಪ್ಪತಾರ ತಪ್ಪಿ ಹೊಕ್ಕರs ಕಕ್ಕಾವಿಕ್ಕಿಯಾಗಿ’. ಅಲ್ಲಿರುವ ಕಾಡಿನಲ್ಲಿ ಹಗಲಿನಲ್ಲಿಯೂ ಸಹ ಸೂರ್ಯಕಿರಣಗಳಿಗೆ ಪ್ರವೇಶ ಸಿಗುತ್ತಿರಲಿಲ್ಲ. ಅಲ್ಲಿ ದಿನವೂ ಸಹ ರಾತ್ರಿಯಂತೆ ಭಾಸವಾಗುತ್ತದೆ. ಹೀಗಾಗಿ ಅಲ್ಲಿ ಹಗಲಿನಲ್ಲಿಯೂ ಸಹ ಗೂಗಿಗಳು ಕೂಗುತ್ತವೆ.

ಇದು ಕೇವಲ ನಿಸರ್ಗವರ್ಣನೆಯಾಗಿರದೆ, ಸಾಧಕನ ಯೋಗಸಾಧನೆಯ ಪ್ರಾರಂಭಾವಸ್ಥೆಯನ್ನು ಸೂಚಿಸುವ ವರ್ಣನೆಯೂ ಆಗಿದೆ. ಇಲ್ಲಿ ಬರುವ ಪ್ರತಿಮೆಗಳೆಲ್ಲ ಅಧ್ಯಾತ್ಮಿಕ ಪ್ರತಿಮೆಗಳೇ. ಮೂರು ಬಟ್ಟೆ ಎಂದರೆ ಮೂರು ಅವಸ್ಥೆಗಳು: ಜಾಗೃತ, ಸುಷುಪ್ತ, ಸ್ವಪ್ನಾವಸ್ಥೆ ಎಂದು ಭಾವಿಸಬಹುದು. ಈ ಮೂರು ಅವಸ್ಥೆಗಳನ್ನು ದಾಟಿ, ಮುಂದಿನ ಅವಸ್ಥೆಯಲ್ಲಿ ಹೋಗುವ ಸಾಧಕನು, ಗುರುವಿನ ಸಹಾಯವಿಲ್ಲದಿದ್ದಾಗ ಕಕ್ಕಾವಿಕ್ಕಿಯಾಗುತ್ತಾನೆ. ಅಲ್ಲಿ ತುಡುಗು ದನ ಅಂದರೆ ಮರೆಮಾಚಿ ಮುನ್ನುಗ್ಗುವ ಇಂದ್ರಿಯಗಳು, ತೊಂಡು ಮೇಯುವಲ್ಲಿ ಅಂದರೆ, ಎಷ್ಟು ಪ್ರಯತ್ನಿಸಿದರೂ ನಿಯಂತ್ರಣಕ್ಕೆ ಬರದೆ ವಿಷಯಭೋಗದಲ್ಲಿ ತೊಡುಗುತ್ತವೆ. ಇರುಳಲ್ಲಿ ಕೂಗಬೇಕಾದ ಜೋಡುಗೂಗಿಗಳು ಅಲ್ಲಿ ಹಗಲೇ ಗೂಗುತ್ತವೆ.

ಈಗ ಭಗವದ್ಗೀತೆಯಲ್ಲಿ ಬರುವ ಸಾಲುಗಳನ್ನು ನೆನಪಿಸಿಕೊಳ್ಳಿ: ಯಾ ನಿಶಾ ಸರ್ವಭೂತಾನಾಮ್, ತಸ್ಯಾಮ್ ಜಾಗರ್ತಿ ಸಂಯಮೀ’. ಪ್ರಾಪಂಚಿಕ ಸುಖದಲ್ಲೇ ಮುಳುಗಿರುವ ಲೌಕಿಕ ವ್ಯಕ್ತಿಯ ಹಗಲು ಸಾಧಕನಿಗೆ ರಾತ್ರಿಯಾಗಿರುತ್ತದೆ. ಆತನನ್ನು ಎಚ್ಚರಿಸಲು ಎರಡು ಗೂಗಿಗಳು ಕೂಗುತ್ತಿವೆ. ಇದು ‘ವಿಶೇಷ ಕೂಗು’ ಆಗಿರುವದರಿಂದ ಬೇಂದ್ರೆಯವರು ‘ಗೂಗುತ್ತಿವೆ’ ಎನ್ನುವ ಪದವನ್ನು ಸೃಷ್ಟಿಸಿದ್ದಾರೆ. ಜೋಡು ಗೂಗಿಗಳು ಉಪನಿಷತ್ತಿನಲ್ಲಿ ಬರುವ ಜೋಡುಹಕ್ಕಿಗಳಾಗಿವೆ. ಒಂದು ಹಕ್ಕಿಯು ಪ್ರೇಯಸ್ಸನ್ನು ಬಯಸುವ ಸ್ವ-ಆತ್ಮವಾದರೆ, ಮತ್ತೊಂದು ಹಕ್ಕಿಯು ಶ್ರೇಯಸ್ಸನ್ನು ಸೂಚಿಸುವ ಪರಮಾತ್ಮವಾಗಿದೆ.

ಇದರ ಮುಂದಿನ ನುಡಿಯಲ್ಲಿ ಭೀತಿ ಹುಟ್ಟಿಸುವ ನಿಸರ್ಗ ವರ್ಣನೆಯಿದೆ.

ಅದನ ದಾಟಿ ಆ ಮಸಣವಾಟಿ, ಎಡಕಾಗಿ ಅದರ ಆಚಿ
ಕಾಮ ತನ್ನ ಹಚ್ಚಂಗಿ ಹಾಸಿಧಾಂಗೆಲ್ಲಿ ನೀರ ಪಾಚಿ
ಹೊಚ್ಚಿ ಹೊಂಡವನು ಮೆಚ್ಚ ಮಾಡತಾವೊ ಕಂಡ ಕಣ್ಣುಗಳಿಗೆ.
ಪಾಚಿ ಸರಿಸಿದಾಗ ಕಪ್ಪು ನೀರು ಕರಿತಾವ ಒಳಗ ಬಳಿಗೆ.

ಇಲ್ಲಿ ಸಾಧಕನಿಗೆ ಮೊದಲು ಸಿಗುವದು ಸ್ಮಶಾನಭೂಮಿ. ಅಲ್ಲಿ ಆತನು ತನ್ನ ವಿಷಯವಾಸನೆಗಳನ್ನು ಸುಟ್ಟು ಮುಂದುವರಿಯಬೇಕು. ಆದರೆ ಕಾಮ ಇಲ್ಲಿ ತನ್ನ ಹಚ್ಚಂಗಿ(=ಹಸಿರು ಅಂಗಿ)ಯನ್ನು ಹಾಸಿ ನೀರ ಹೊಂಡಗಳನ್ನು ಮುಚ್ಚಿಹಾಕಿದ್ದಾನೆ. ಆದುದರಿಂದ ಈ ನೀರಹೊಂಡ ಕಣ್ಣಿಗೆ ರಮಣೀಯವಾಗಿ ಕಾಣುವದು. ಹಾಗೆಂದು ತೃಷಿತರು(=ವಿಷಯಾಸಕ್ತರು) ನೀರು ಕುಡಿಯಲು ಮುಂದುವರೆದರೆ, ಅವರನ್ನು ಈ ಕಪ್ಪು ನೀರಿನ ಪಾತಾಳವು ಮಾಯೆಯಿಂದ ಒಳಗೆ ಸೆಳೆದುಕೊಳ್ಳುವದು.

ಈ ‘ಬಲೆ’ಯನ್ನು ದಾಟಿ ಸಾಧಕನು ಮುಂದುವರೆದರೆ, ಅಲ್ಲಿ ಅವನಿಗೆ ಕ್ಷೇತ್ರದೇವತೆಗೆ(=ಕಾಳಮ್ಮನಿಗೆ) ಬಿಟ್ಟ ಹೊಲವೊಂದು ಕಾಣಿಸುವದು. (ದೇಹವೇ ಒಂದು ಕ್ಷೇತ್ರ.) ಅಲ್ಲಿರುವ ಕೈಮರವನ್ನು ಹತ್ತಿ ನೋಡಿದರೆ, ಅವನಿಗೆ ಭಯಂಕರವಾದ ನೋಟವೊಂದು ಕಾಣುವದು.

ಅದರ ಮುಂದ ಗವಿಗುಡ್ಡ ಅಡ್ಡ ಬರತsದ ನಮ್ಮ ಬಲಕ
ಅತ್ತತ್ತ ಹರುಹಿ ಹತ್ತೊತ್ತಿ ಬಂದ ಕಾಳಮ್ಮಗಿರುವ ಹೊಲಕ
ಆ ಹೊಲದ ನಟ್ಟ ನಡುವಿರುವ ಹುಣಸಿಮರ ಏರಿ ನೋಡಿದಾಗ
ಹತ್ತ ಗಿಡದ ಗುಂಪೊಂದು ಕಾಣತದ ಸಣ್ಣ ಏರಿ ಮ್ಯಾಗ.

ಈ ಹತ್ತು ಗಿಡಗಳ ಗುಂಪೆಂದರೆ ಪಂಚ ಕರ್ಮೇಂದ್ರಿಯಗಳ ಹಾಗು ಪಂಚ ಜ್ಞಾನೇಂದ್ರಿಯಗಳ ಸಮೂಹ. ಈ ಇಂದ್ರಿಯಸಂಕುಲವೇ ನಮ್ಮನ್ನು ಕೊನೆಯಿಲ್ಲದ ಸಂಸಾರದಲ್ಲಿ ಸಿಲುಕಿಸುವ ತಂತ್ರ. ಅಲ್ಲಿ ಅವನಿಗೆ ಮೃತ್ಯು ಹಾಗು ಜೀವನಗಳ ಸಂಕೇತಗಳಾದ ತೊಗಲಬಾವಲಿ ಹಾಗೂ ಪಾರಿವಾಳಗಳ ಎಡಬಿಡದ ಗಮನಾಗಮನ ಕಾಣುತ್ತದೆ.

ಅಲ್ಲಿ ತೊಗಲಬಾವಲೀ ಚೀರತಾವ ಭರತಿ ಹಗಲಿನೊಳಗ
ಹಿಂಡು ಪಾರಿವಾಳ ಹೊಕ್ಕ ಹೊರಡತಾವ ಮತ್ತ ಒಳಗ ಹೊರಗ
ಅಲ್ಲಿ ಹಬ್ಬಿ ಹರುಹ್ಯsದ ಬೇವಿಗೇ ಸುತ್ತ ಅಮೃತಬಳ್ಳಿ
ಹಾಲ ಸುರವತಾವ ಆಲ ಅಲ್ಲಿ ಅಲ್ಲಾಡತಾವ ಅಳ್ಳಿ.

ಆಲದ ಮರವೆಂದರೆ ಜ್ಞಾನೋದಯವನ್ನು ಸಂಕೇತಿಸುವ ಮರ. ಆಲದ ಮರದ ಕೆಳಗೆ ಬುದ್ಧನಿಗೆ ಜ್ಞಾನೋದಯವಾಯಿತು. ಅದು ಸುರಿಸುವ ಹಾಲು ಜೀವನಕ್ಷೀರ. ಆದರೆ ಅರಳಿ ಮರದಲ್ಲಿ ಬ್ರಹ್ಮರಾಕ್ಷಸವಿರುವದೆಂಬುದು ಪೌರಾಣಿಕ ಪ್ರತೀತಿ. ಜೊತೆಜೊತೆಗೇ ಸಂಸಾರವನ್ನು ಪ್ರತಿನಿಧಿಸುವ ಬೇವಿನ ಮರ ಹಾಗು ಅತ್ತಿ ಮರಗಳು ಅಲ್ಲಿ ಕಾಣಿಸುತ್ತವೆ. ಬೇವಿನ ಮರದ ಹಣ್ಣು ಕಹಿಯಾದರೂ ಅದರ ಸುತ್ತಲೂ ಹಬ್ಬಿರುವದು ಅಮೃತದ ಬಳ್ಳಿ.

ಅತ್ತಿ ಗಿಡಕ ಹತ್ಯಾವ ಹಲಸಿನ್ಹಂಗ ಬುಡುಕು ಕೆಂಪು ಹಣ್ಣು
ಜೇನು ತುಂಬಿ ತೊಟಗುಟ್ಟತಾವ ಅದ ಬಯಸತಾವ ಕಣ್ಣು

ಹಲಸಿನ ಮರಕ್ಕೆ ಕೈಗೆ ಸಿಲುಕುವ ಎತ್ತರದಲ್ಲಿಯೇ ಹಣ್ಣುಗಳು ಬಿಡುವಂತೆ, ಇಲ್ಲಿರುವ ಅತ್ತಿಯ ಮರಕ್ಕೂ ಸಹ ಕೈಗೆಟುಕುವಂತೆ, ಬುಡದಲ್ಲಿಯೇ ಮನಸ್ಸು ಸೆಳೆಯುವ ಹಣ್ಣುಗಳಾಗಿವೆ. (ಆದರೆ ಅತ್ತಿಯ ಹಣ್ಣುಗಳು ನೋಡಲಿಕ್ಕಷ್ಟೇ ಚಂದ, ತಿನ್ನಲು ಅಲ್ಲ.) ಅಲ್ಲಿ ಜೇನು ತುಂಬಿ ತೊಟ್ಟಿಕ್ಕುತ್ತಿರುತ್ತದೆ. ಅದನ್ನು ಸವಿಯುವ ಬಯಕೆಯನ್ನು ತಪ್ಪಿಸುವದು ಸಾಧಕನಿಗೆ ಸಾಧ್ಯವಾದೀತೆ?

ಈ ಸಂದರ್ಭದಲ್ಲಿ ಇದೇ ಅರ್ಥವನ್ನು ಸೂಚಿಸುವ ಸಾಮತಿಯೊಂದನ್ನು ನೆನಪಿಸಿಕೊಳ್ಳಬಹುದು. ಸಂಸಾರದಲ್ಲಿ ಸಿಲುಕಿದ ಮನುಷ್ಯನೆಂದರೆ, ಹಾಳು ಬಾವಿಯಲ್ಲಿರುವ ಮುಳ್ಳಿನ ಮರಕ್ಕೆ ಜೋತಾಡುತ್ತ, ಮುಳ್ಳಿನ ಕೊನೆಯಿಂದ ತೊಟಕುವ ಜೇನಹನಿಯನ್ನು ತಿನ್ನಲು ಬಯಸುವ ಮನುಷ್ಯನಂತೆ. ಈ ಮರದ ಟೊಂಗೆಗೆ ಹಾವು ಸುತ್ತಿಕೊಂಡಿದೆಯಂತೆ ಹಾಗು ಬಾವಿಯ ಕೆಳಗೆ ಹುಲಿ ಬಾಯಿ ತೆಗೆದುಕೊಂಡು ನಿಂತಿದೆಯಂತೆ.

ಇಂತಹ ಒಂದು ಭಯಾನಕ ತೋಪಿನ ಮೂಲೆಯಲ್ಲಿ ಒಂದು ಮಾವಿನ ಮರ ಬೆಳೆದು ನಿಂತಿದೆ. ಈ ಮಾವಿನ ಮರವನ್ನು ಕಂಡು ಸಾಧಕನಿಗೆ ಅಚ್ಚರಿಯಾಗುತ್ತದೆ.

ಈ ತೋಪಿನ್ಯಾಗ ಬೆಳೆದsದ ಹ್ಯಾಂಗೋ ಮೂಲ್ಯಾಗ ತಪ್ಪಿ ಮಾವು
ಅದರಡಿಗೆ ಹುತ್ತ ಅದರಾಗ ಐತೆ ಒಂದೇಳ ಹೆಡೆಯ ಹಾವು.

ಇಲ್ಲಿಯವರೆಗಿನ ಭಯಾನಕ ನೋಟ ಈಗ ಬದಲಾಗುತ್ತದೆ. ಈ ಮಾವಿನ ಮರ ಮನಸ್ಸಿಗೆ ಚೈತನ್ಯ ಕೊಡುವ ಪರಮಾರ್ಥದ ಸಂಕೇತವಾಗಿದೆ. ಇದರ ಅಡಿಯಲ್ಲಿರುವದು ಏಳು ಹೆಡೆಯ ಹಾವು (=ಕುಂಡಲಿನಿ ಶಕ್ತಿ.)

(ಟಿಪ್ಪಣಿ: ವಿಷಯಾಂತರವಾದರೂ ಸಹ ಇಲ್ಲಿ ಒಂದು ಮಾತನ್ನು ಹೇಳಲೇ ಬೇಕು. ಭಾರತೀಯ ಸಂಪ್ರದಾಯವು ಸರ್ಪವನ್ನು ಮೂಲಾಧಾರದಲ್ಲಿ ನಿದ್ರಿಸುತ್ತಿರುವ ಕುಂಡಲಿನಿ ಶಕ್ತಿಗೆ ಹೋಲಿಸುತ್ತ ಬಂದಿದೆ. ಆದರೆ, ಈ ಹೋಲಿಕೆಗೆ ತದ್ವಿರುದ್ಧವಾದ ಹೋಲಿಕೆಯನ್ನು ನೀಡಿದವರು ನಮ್ಮವರೇ ಆದ ಬಸವೇಶ್ವರರು. ಇವರ ವಚನವು ಧೈರ್ಯ ಹಾಗು ಕಲ್ಪನಾಶಕ್ತಿಯ ಉಚ್ಚ ಉದಾಹರಣೆಯಾಗಿದೆ: ಹುತ್ತವ ಬಡಿದರೆ ಹಾವು ಸಾಯಬಲ್ಲುದೆ ಅಯ್ಯಾ?”

ಭಾರತೀಯ ಸಂಪ್ರದಾಯಕ್ಕೆ ವಿರುದ್ಧವಾಗಿ ಮೊದಲ ಬಾರಿಗೆ, ಹಾವನ್ನು ಕಾಮನೆಗಳ ಪ್ರತೀಕವಾಗಿ (Freudian Lust ಆಗಿ) ಬಸವಣ್ಣನವರು ವರ್ಣಿಸಿದರು. ಹುತ್ತವೆಂದರೆ ದೇಹ. ಕೇವಲ ದೇಹದಂಡನೆಯಿಂದ ಕಾಮವನ್ನು ಗೆಲ್ಲುವದು ಅಸಾಧ್ಯ ಎನ್ನುತ್ತಾರೆ ಬಸವಣ್ಣನವರು).

ಕೋಗಿಲೆ ಕನ್ನಡದ ಅನುಭಾವಿಗಳಿಗೆ ನೆಚ್ಚಿನ ಪ್ರತಿಮೆ. ಕೋಗಿಲೆ ಹಾಡುವದೇ ಮಾವಿನ ಮರದಲ್ಲಿ. ನಿಜಗುಣಿ ಶಿವಯೋಗಿಗಳು ಕೋಗಿಲೆಯನ್ನು ಮನಸ್ಸಿಗೆ ಹೋಲಿಸಿ ಬರೆದ ಗೀತೆ ಹೀಗಿದೆ:
ಕೋಗಿಲೆ, ಚೆಲ್ವ ಕೋಗಿಲೆ,
ಮುದ್ದು ಕೋಗಿಲೆ, ಜಾಣ ಕೋಗಿಲೆ .
ಬೇಂದ್ರೆಯವರೂ ಸಹ ಇದೇ ಪಲ್ಲವನ್ನು ಬಳಸಿ, ಇದೇ ಧಾಟಿಯಲ್ಲಿ ಕವನವೊಂದನ್ನು ರಚಿಸಿದ್ದಾರೆ. (’ಗರಿಕವನಸಂಕಲನ). ನಿಜಗುಣಿ ಶಿವಯೋಗಿಗಳ ಈ ಗೀತೆ ಬೇಂದ್ರೆಯವರ ಕೋಗಿಲೆಕವನಕ್ಕೆ ರೂಪದರ್ಶಿಯಾಗಿದೆ.

ನಿಜಗುಣಿ ಶಿವಯೋಗಿಗಳು ರಚಿಸಿದ ಮತ್ತೊಂದು ಗೀತೆಯಲ್ಲಿ ಬರುವ ಮಾಮರ ಹಾಗು ಕೋಗಿಲೆ ಇವು, ಬೇಂದ್ರೆಯವರ ಜೋಗಿಕವನದಲ್ಲಿರುವ ಮಾಮರ ಹಾಗು ಕೋಗಿಲೆಗೆ ಪ್ರತಿಮಾದರ್ಶಿಗಳಾಗಿವೆ ಎನ್ನಬಹುದು. ನಿಜಗುಣಿ ಶಿವಯೋಗಿಗಳ ಆ ಗೀತೆಯ ಕೆಲವು ಸಾಲು ಈ ರೀತಿಯಾಗಿವೆ:

ಸುಳಿವ ಸರಸ್ವತಿ ಗಂಗೆ ಯಮುನೆಯೆಂದೆಂಬ ನದಿ-
ಗಳ ನಡುವೆ ಚೌಕ ಮಧ್ಯದಲಿ| ಕೋಗಿಲೆ||
ನಳನಳಿಸಿ ಬೆಳೆದು ಬೆಳಗುವ ಬಿಂದುವೆಂಬನಿದು
ದಳೆವ ಮಾಮರದ ಮೇಲಿರ್ದು| ಕೋಗಿಲೆ||)

ಈ ಮಾವಿನ ಮರದ ಮೇಲೆ ಕೋಗಿಲೆಯೊಂದು ಬಂದು ಕೂತಿದೆ. ಕೋಗಿಲೆ ಮಾವಿನ ಮರಕ್ಕೆ ಬರುವದು ಸುಗ್ಗಿಯ ವಸಂತ ಕಾಲದಲ್ಲಿ ಮಾತ್ರ. ಕೋಗಿಲೆಯ ಪ್ರತಿಮೆ ಏನನ್ನು ಸೂಚಿಸುತ್ತದೆ? ಇದು ದೈವಿ ಚೈತನ್ಯದ ಪ್ರತೀಕ; ಸಾಧಕನ ಆಧ್ಯಾತ್ಮಿಕ ಸುಗ್ಗಿಯ ಕಾಲದ ಸೂಚನೆಯಾಗಿ ಈ ಕೋಗಿಲೆ ಬಂದಿದೆ. (ಸಾಧಕನಿಗೆ ಈಗಲೇ ಇದರ ಸ್ಪಷ್ಟ ಕಲ್ಪನೆ ಇಲ್ಲ.) ಹಾಗು ಈ ಸಾಧಕನನ್ನು ತನ್ನ ಜೋಡಿಹಕ್ಕಿಯನ್ನು ಕರೆದಂತೆ ಈ ಕೋಗಿಲೆ ಕರೆಯುತ್ತಿದೆ. (ತನ್ನ ಜೋಡಿ ಕರೆಧಾಂಗ ಕರಿತsದ ನನ್ನ ಬಾರs ಅಂದು’). ಇದರ ದನಿ ಎಷ್ಟು ಜೋರಾಗಿದೆಯೆಂದರೆ ಅದು ಗಿರಣಿಯ ದನಿಯಂತಿದೆ. (ವಿದ್ಯುತ್ ಗಿರಣಿಗಳು ಬರುವದಕ್ಕೂ ಮೊದಲು ಇದ್ದ ಗಿರಣಿಗಳು ಕಲ್ಲಿದ್ದಲನ್ನು ಬಳಸುತ್ತಿದ್ದವು. ಅವು ಪ್ರಾರಂಭವಾಗುವಾಗ ಬಹಳ ಹೊತ್ತಿನವರೆಗೆ ಜೋರಾದ ಸೀಟಿಯನ್ನು ಹೊಡೆಯುತ್ತಿದ್ದವು.)

ಈ ಕೋಗಿಲೆ ಸಾಧಕನನ್ನು ಕರೆಯುವದನ್ನು ನಿಲ್ಲಿಸುತ್ತಲೇ ಇಲ್ಲ(=ತೆರಪು ಇಲ್ಲ ಒಂದಳತಿ ಕೂಗತs’).

ಆ ಮಾವಿನೊಳಗ ಈ ಸುಗ್ಗಿಯೊಳಗ ಬಂದsದ ಕೋಗಿಲೊಂದು
ತನ್ನ ಜೋಡಿ ಕರೆಧಾಂಗ ಕರಿತsದ ನನ್ನ ಬಾರs ಅಂದು
ಕೂಗೇ ಕೂಗತದ ಕೂಗೇ ಕೂಗತsದ ಗಿರಣಿ ಕರೆಯೊ ಹಾಂಗ
ತೆರಪು ಇಲ್ಲ ಒಂದಳತಿ ಕೂಗತsದ ಬ್ಯಾಸರಿಲ್ಲಧಾಂಗ.

ಇನ್ನು ಸಾಧಕನ ಮನೋಸ್ಥಿತಿ ಹೇಗಿದೆ?

ತಿಳಿಯದಾವದೋ ಕಂಪು ಎಳೀತsದ ತುಂಬಿ ಹುಚ್ಚು ಆಗಿ
ಎಚ್ಚರಿಲ್ಲದs ಎತ್ತೊ ತಿರಗತಾವ ದಿಕ್ಕು ತೋರದಾಗಿ
ಬಂತು ಸುಗ್ಗಿ ಬಂದsದ ಸುಗ್ಗಿ ಬರತsದ ಸುಗ್ಗಿ ಎಂದು
ಕುಹೂ ಅನ್ನತದ ಕುಹೂ ಅನ್ನತದ ಕುಹುಕ್ಕುಹೂ ಅಂದು.

ತುಂಬಿಯನ್ನು ಹುಚ್ಚು ಮಾಡುವಂತಹ ಕಂಪು ವಾತಾವರಣದಲ್ಲಿ ತುಂಬಿದೆ. ಅದು ಎಂತಹ ಕಂಪು ಅನ್ನುವದು ಸಾಧಕನಿಗೆ ತಿಳಿಯದು. ಇಲ್ಲಿಯವರೆಗೂ ಅವನು ಅಂತಹ ಕಂಪನ್ನು ಮೂಸಿಲ್ಲ. ಅವನಿಗೆ ಎಚ್ಚರ ತಪ್ಪಿದಂತಾಗಿದೆ, ದಿಕ್ಕು ತೋರದಂತಾಗಿದೆ. ಅದರ ಜೊತೆಗೇ ಕೋಗಿಲೆಯ ಹಾಡು ಬೇರೆ: ಬಂತು ಸುಗ್ಗಿ, ಬಂದsದ ಸುಗ್ಗಿ, ಬರತsದ ಸುಗ್ಗಿಎಂದು.

ಅಂದರೆ ಇಂತಹ ಸುಗ್ಗಿ ಈ ಮೊದಲೂ ಬಂದಿತ್ತು, ಈಗ ಇಲ್ಲಿ ಬಂದಿದೆ ಹಾಗೂ ಭವಿಷ್ಯದಲ್ಲೂ ಬರುವದು ಎಂದು ಈ ಕೋಗಿಲೆಯ ಕರೆ ಸೂಚಿಸುತ್ತಿದೆ. (ಅರ್ಥಾತ್, ಸುಗ್ಗಿಯೇ ನಿರಂತರ; ಸಂಸಾರವೆಂಬ ಬವಣೆ ತಾತ್ಪೂರ್ತಿಕ. ಈ ಮಾತು ಸಾಧಕನಿಗೆ ನಿಸ್ಸಂಶಯವಾಗಿ ಹೊಳೆದಿದೆ.)

ಈಗ ಮೊದಲ ಬಾರಿ ಸಾಧಕನು ತನ್ನ ಗುರುವಿನ(=ಜೋಗಿಯ) ನೆರವನ್ನು ಬಯಸುತ್ತಾನೆ. ಅವನಿಗೆ ತಾರ ಪಂಚಮದಲ್ಲಿ ಕರೆ ನೀಡುತ್ತಿರುವ ಈ ಕೋಗಿಲೆಯನ್ನು ನೋಡಬಹುದೊ, ಬೇಡವೊ ಎನ್ನುವ ಅನುಮಾನವಿದೆ. ಸಾಧಕನಿಗೆ ಸಿದ್ಧಿಗಳು ಬರುವ ಕಾಲ ಗಂಡಾಂತರದ ಕಾಲ. ಅವು ಅವನ ಹಾದಿಯನ್ನು ತಪ್ಪಿಸಬಹುದು, ಅಥವಾ ಉನ್ನತಿಗೆ ಕರೆದೊಯ್ಯಬಹುದು. ಈ ಕೋಗಿಲೆಯ ಸ್ವರಕ್ಕೆ ಸೋತು, ಅದರಲ್ಲಿ ಲಯವಾಗಿ (ಸಾಧಕನ ಮನಸ್ಸೆಂಬ) ತೋಟವೆಲ್ಲ ಹೂವಾಗಿದೆ, ಹಣ್ಣಾಗಿದೆ. ಬೇರೆ ಕೆಲಸದಲ್ಲಿ ಸಾಧಕನಿಗೆ ಮನಸ್ಸು ತೊಡಗದಂತಾಗಿದೆ. ಕೊಳಲು ನುಡಿಸಿಧಾಂಗ ಕೋಗಿಲೆ ಉಲಿಯುತ್ತದೆ ಎಂದು ಹೇಳುವಲ್ಲಿ, ಈ ಕೋಗಿಲೆಯು ದೈವಿ ಚೈತನ್ಯವೆನ್ನುವ ಸೂಚನೆಯನ್ನು ಬೇಂದ್ರೆ ನೀಡುತ್ತಿದ್ದಾರೆ.

ತಾರ ಪಂಚಮದಾಗ ಕೋಗಿಲಾ ಕೂಗತsದೊ ಜೋಗಿ
ಯಾವ ಬಣ್ಣ ಅದಕಾವ ಕಣ್ಣು ನಾ ನೋಡಲೇನು ಹೋಗಿ?
ತೋಟವೆಲ್ಲ ಹೂವಾಗಿ ನಿಂತು ತೊಂಗೆಲ್ಲ ಗೊಂಚಲಾಗಿ
ಪಾಡು ಆಗತಾವ, ಹಣ್ಣು ಆಗತಾವ ಅದರ ಲಯಕೆ ತೂಗಿ.

ಇನ್ನು ಕೋಗಿಲೆಯ ಸ್ಥಿತಿ? ಸಾಧಕನನ್ನು ಕರೆಯುವ ಭರದಲ್ಲಿ ಅದು ಮುಂಜಾವತೊಟ್ಟನ್ನು ಅಂದರೆ ಮುಂಜಾವಿನಲ್ಲಿ ಮೂಡುವ ನೀರತೊಟ್ಟನ್ನು, ಅರ್ಥಾತ್ ಇಬ್ಬನಿಯನ್ನು ಕುಡಿಯುವದನ್ನು (--ಇದು ಕವಿ ಸಮಯ--) ಬಿಟ್ಟುಕೊಟ್ಟು, ತನ್ನ ಕರೆಯ ಸ್ವರವನ್ನು ತೂಗುತ್ತಿದೆ. (ಉಯ್ಯಾಲೆಯಾಡುತ್ತಿರುವ ಸ್ವರ! Pulsating Tune ಎನ್ನಬಹುದೆ?)

ಮುಂಜಾವತೊಟ್ಟು ಇರು ಹಂಗು ಬಿಟ್ಟು ಬರಿ ಹಾಂಗ ತೂಗತsದೋ
ತಲಿ ಕಾವಿನೊಳಗ ಇಮ್ಮಾವಿನೊಳಗ ಬಿಸಿಗಾಲ ನೂಗತsದೋ
ಕೊಳಲ ನುಡಿಸಿಧಾಂಗ ಕುಹೂಹುಹೂಹೂ ಉಲಿತsದೊ ಜೋಗಿ
ಬೇರೆ ಕೆಲಸದಾಗ ಮನಸು ತೊಡಗದೊ ನೋಡಲೇನು ಹೋಗಿ?”

ಸಿಹಿಯಾದ ಮಾವಿನ ಹಣ್ಣು(ಇಮ್ಮಾವು=ಇನಿದು ಮಾವು) ಅಲ್ಲಿದ್ದರೂ ಸಹ ಅದು ತನ್ನ ತಲೆಯ ಕಾವಿನಲ್ಲಿಯೇ (=ತನ್ನ ಉದ್ದೇಶದಲ್ಲಿಯೇ ಲಕ್ಷವಿಟ್ಟು), ಬಿಸಿಲು ಕಾಲವನ್ನು (ಅಂದರೆ ವಸಂತ ಮಾಸವನ್ನು) ಕಳೆಯುತ್ತಿದೆ.

ಈ ಸಮಯದಲ್ಲಿ ತನ್ನ ಶಿಷ್ಯನಿಗೆ ಆಲಂಬನ ನೀಡಲು ಗುರು ಬಂದಿದ್ದಾನೆ. (ಬಂದೆ ಜೋಗಿ ಬಾ, ಬಾರೊ ಜೋಗಿ ಬಾ, ಏನು ಹೊತ್ತು ಬಂದಿ). ಅರ್ಥಾತ್ ಅತಿ ಒಳ್ಳೆ ಸಮಯದಲ್ಲಿ ಬಂದಿ.( ‘ಏನು ಹೊತ್ತು ಬಂದಿ’ ಎಂದರೆ ಏನನ್ನು ಹೊತ್ತುಕೊಂಡಿ ಬಂದಿರುವೆ ಎನ್ನುವ ಅರ್ಥವೂ ಆಗುತ್ತದೆ. ಅಂದರೆ ಈ ಶಿಷ್ಯನಿಗಾಗಿ, ‘ಗುರುವೆ, ಏನನ್ನು ಕೊಡಲು ತಂದಿರುವೆ’ ಎನ್ನುವ ಅರ್ಥವೂ ಇಲ್ಲಿದೆ.)

ನೀನು ಉಪದೇಶಿಸಿದ ನಾಮವನ್ನು ಜಪಿಸುವಾಗ ಈ ಸುಗ್ಗಿ ಪ್ರಾರಂಭವಾಗಿದೆ. ತಲೆಯ ಯಾವುದೊ ನಾಡಿಯಲ್ಲಿ ನಾಮದ ಈ ನಾದ ತುಂಬಿ ಮೈಯ ಮೂಲೆ ಮೂಲೆಯನ್ನು ಇದು ಈಗ ವ್ಯಾಪಿಸಿದೆ. ಅರ್ಥಾತ್, ಸಾಧಕನ ಮನಸ್ಸೇ ತೋಟ; ಅಲ್ಲಿಯೇ ದೈವಿ ಸುಗ್ಗಿ ಪ್ರಾರಂಭವಾಗಿದೆ. ಅದರ ಸೂಚನೆಯಾಗಿ ಕೋಗಿಲೆ ಬಂದಿದೆ. ಅದರ ದನಿಯು ಸಾಧಕನ ಮನಸ್ಸನ್ನೆಲ್ಲ ತುಂಬಿ ಬಿಟ್ಟಿದೆ. (ಬೇಂದ್ರೆಯವರ ಮತ್ತೊಂದು ಕವನವನ್ನು ನೆನಪಿಸಿಕೊಳ್ಳಿರಿ:
ತುಮ್ ತುಮ್ ತುಮ್ ತುಮ್ ತುಮ್ ತುಮ್ ತುಮ್ ತುಮ್ ತುಂಬಿ ಬಂದಿತ್ತs”)

ಬಂದೆ ಜೋಗಿ ಬಾ, ಬಾರೊ ಜೋಗಿ ಬಾ, ಏನು ಹೊತ್ತು ಬಂದಿ
ನೀನೆ ಹೇಳಿದಾ ನಾಮ ಜಪಿಸುವಾಗ ಬಂತೊ ಸುಗ್ಗಿ ಸಂಧಿ.
ತಲೆಯ ಯಾವುದೊ ನಾಡಿಯೊಳಗ ಸುರುವಾತು ಸುಗ್ಗಿ ಸೊಲ್ಲು
ಮುಂದೆ ಕೇಳಿದರ ಅದs ತುಂಬಿತೋ ಮೂಲೆ ಮೂಲೆಯಲ್ಲು.

ಬೇಂದ್ರೆಯವರು ಯೋಗಶಾಸ್ತ್ರದ ಅಭ್ಯಾಸಿಗಳು. ಇಡಾ, ಪಿಂಗಲಾ ಮತ್ತು ಸುಷುಮ್ನಾ ನಾಡಿಗಳಲ್ಲಿ ಶಕ್ತಿಸಂಚಲನೆಯಾಗುವದನ್ನು ಬಲ್ಲವರು. ಅವರು ಗುರು ನೆನೆದರೆಎನ್ನುವ ತಮ್ಮ ಕವಿತೆಯೊಂದರಲ್ಲಿ ಈ ಶಕ್ತಿ ಸಂಚಲನೆಯನ್ನು ಅಮೃತಾನಾಡಿಯ ಸೂತ್ರಕೆ ಕುಣಿಯುವ ನಿನ್ನಡಿಗೊಎಂದು ಬಣ್ಣಿಸಿದ್ದಾರೆ.

ಸಾಧಕ ಪ್ರಾಪಂಚಿಕ ಮೋಹಕ್ಕಾಗಲೀ, ಸಿದ್ಧಿಗಳ ಹಿಂದೆ ಆಗಲೀ ಬಿದ್ದವನಲ್ಲ. ಅವನಿಗೆ ಕೋಗಿಲೆಯ ಪರಮಾರ್ಥ ಸ್ವರೂಪ ತಿಳಿದಿದೆ. ಅಂತಲೇ, “ಗುಡಿಗೆ ನಾನು ಹೊರಟಾಗ ಕರೀತದ ಕುಹುಕ್ಕುಹೂ ಎಂದು, ಮನದ ಜಪದ ನಡುನಡುವೆ ನಡೀssದ ಓಂ ಕುಹೂ ಎಂದುಎಂದು ಸಾಧಕ ಹೇಳುತ್ತಾನೆ. ಈ ಕೋಗಿಲೆಯ ಆವಾಸಸ್ಥಾನವಾಗಲು ತಾನೇ ಮಾಮರವಾಗಿ ಬಿಡುವೆನೇನೊ ಎಂದು ಸಾಧಕನಿಗೆ ಭಾಸವಾಗುತ್ತದೆ. ಈ ತನ್ನ ಭ್ರಮೆಯ ಸಂದರ್ಭದಲ್ಲಿ ತನಗೆ ದಾರಿ ತೋರಬಲ್ಲವನಾದ ಗುರು ಬಂದಿರುವದು ಸಾಧಕನನ್ನು ನಿರಾಳನನ್ನಾಗಿ ಮಾಡಿದೆ.

ಗುಡಿಗೆ ನಾನು ಹೊರಟಾಗ ಕರೀತದ ಕುಹುಕ್ಕುಹೂ ಎಂದು
ಮನದ ಜಪದ ನಡುನಡುವೆ ನಡೀssದ ಓಂ ಕುಹೂ ಎಂದು
ಕನಸಿನೊಳಗ ನಾ ಸ್ವರಾ ಕೇಳಿ ಮಾಮರಾ ಆಗತೇನೊ
ಅಂತ ಭ್ರಮಾ ಆಗ್ಯsದ ಮನಕ ನೀ ಬಂದೆ ಜೋಗಿ ಏನೋ!

ಅಂತೆಯೇ, ತನ್ನ ಸಂಶಯವನ್ನು ಗುರುವಿನ ಮುಂದಿಟ್ಟು ಸಾಧಕ ಬೆಳಕನ್ನು ಬಯಸುತ್ತಾನೆ. ತನ್ನನ್ನು ಸೆಳೆಯುತ್ತಿರುವ ಈ ಕೋಗಿಲೆ ಪರಮಾರ್ಥ ಸಾಧನೆಗೆ ಸಹಾಯಕವಾಗಿದೆಯೆ? ತನ್ನನ್ನು ಇದು ಯಾಕೆ ಬಿಡದಂತೆ ಕರೆಯುತ್ತಿದೆ. ಯಾವ ಬಾಧೆ(=ಬ್ಯಾನಿ) ಇದನ್ನು ಈ ರೀತಿಯಾಗಿ ಪೀಡಿಸುತ್ತಿದೆ? ಇವು ಸಾಧಕನನ್ನು ಕೊರೆಯುತ್ತಿರುವ ವಿಚಾರಗಳು. ಇದರ ಕರೆಯನ್ನು ಕೇಳಿ ಸುತ್ತಲಿನ ಗುಡ್ಡಗಳು ನುಗ್ಗಾಗಿ ಹೋದವು; ಅಂದರೆ, ಪ್ರಕೃತಿಯು ಕೋಗಿಲೆಯ ದನಿಗೆ ಸ್ಪಂದಿಸುತ್ತದೆ ಎಂದರ್ಥ.

ಯಾವ ಸ್ವರಾ ಇದು ಯಾವ ಕೋಗಿಲಾ ಯಾವ ಮರವೊ ಏನೋ
ಯಾಕ ಹಿಂಗ ಅಸರಂತ ಕೂಗತದ ಏನು ಇದಕೆ ಬ್ಯಾನ್ಯೊ
ಸುತ್ತು ಗುಡ್ಡ ನುಗ್ಗಾಗಿ ಹೋದವೋ ಓಗೊಟ್ಟು ಇದಕs
ಬಿಸಿಲು ಕುಣಿದು ಬೆವತsದ ಈಗ ಬಂದsದ ಮಳಿಯ ಹದಕs.”


ಇಂತಹ ಎಲ್ಲ ಭ್ರಮೆಗಳ ನಡುವೆಯೂ ಸಾಧಕನ ಮನಸ್ಸಿನಲ್ಲಿ ಒಂದು ಸಂಗತಿ ನಿಚ್ಚಳವಾಗಿ ಕಾಣುತ್ತದೆ. ಅದಕ್ಕೆಂತಲೇ ಆತ ಹೇಳುತ್ತಾನೆ: ಬಿಸಿಲು ಕುಣಿದು ಬೆವತsದ ಈಗ ಬಂದsದ ಮಳಿಯ ಹದಕs’.

ಭೂಮಿಯು ಮಳೆಯನ್ನು ಪಡೆಯಲು ಹದವಾಗಿದೆ. ಅದರಂತೆ ತನ್ನ ಮನೋಭೂಮಿಕೆ ಸಹ ಮುಂದಿನ ಸಾಧನೆಗಾಗಿ ಹದವಾಗಿದೆ.

ಕವನ ಇಲ್ಲಿಗೆ ಮುಕ್ತಾಯವಾಗುತ್ತದೆ. ಸಾಧಕನು ಬಹುಶಃ ತನ್ನ ಸಾಧನಾಪಥದಲ್ಲಿ ಮುಂದುವರೆಯುವಬಹುದೆಂದು ಭಾಸವಾಗುತ್ತದೆ.

ಈ ಕವನದಲ್ಲಿ ಮೂರು ಭಾಗಗಳಿರುವದನ್ನು ಕಾಣಬಹುದು. ಮೊದಲನೆಯ ಭಾಗದಲ್ಲಿ ಸಾಧಕನಿಗೆ ಎದುರಾಗುವ ಭಯಂಕರ ಆಮಿಶಗಳು. (ಬುದ್ಧನ ಕತೆಗಳಲ್ಲಿಯೂ ಸಹ, ಆತನು ಜ್ಞಾನೋದಯದ ಸಮಯದಲ್ಲಿ ಮಾರನೊಡನೆ ಹೋರಾಡಿದ ವರ್ಣನೆ ಬರುತ್ತದೆ). ಇದು ಸಾಧಕನ ತೊಳಲಾಟದ ಕಾಲವೂ ಹೌದು. ಆತನಿನ್ನೂ ಕತ್ತಲೆಯಲ್ಲಿಯೇ ಇದ್ದಾನೆ. ಎರಡನೆಯ ಭಾಗದಲ್ಲಿ ಕೋಗಿಲೆಯ ಆಗಮನದಿಂದಾಗುವ ಬದಲಾಗುವ ವಾತಾವರಣ. ಮೂರನೆಯ ಭಾಗದಲ್ಲಿ ಸಾಧಕನ ತಿಳಿಯಾಗುತ್ತಿರುವ ಮನಸ್ಸು. ಈ ಅಲೌಕಿಕ ವ್ಯಾಪಾರವರ್ಣನೆಯನ್ನು, ಬೇಂದ್ರೆ ಲೌಕಿಕ ಪ್ರತಿಮೆಗಳ ಮೂಲಕ ಸಮರ್ಥವಾಗಿ ಚಿತ್ರಿಸಿದ್ದಾರೆ. ಇಷ್ಟು ದಟ್ಟವಾದ ವಾತಾವರಣದ ಸೃಷ್ಟಿಯನ್ನು ಮಾಡಿದ ಕವಿತೆಗಳು ವಿರಳ. ಬಹುಶ: ಬೇಂದ್ರೆಯವರದೇ ಇನ್ನೆರಡು ಕವಿತೆಗಳು (ಸಣ್ಣ ಸೋಮವಾರಹಾಗು ದೇಮವ್ವನ ಮೆರವಣಿಗೆ’) ಇಂತಹ ಯಶ ಪಡೆದ ಕವಿತೆಗಳು.

ಬೇಂದ್ರೆಯವರು ಈ ಕವಿತೆಗೆ ಜೋಗಿಎನ್ನುವ ಶೀರ್ಷಿಕೆಯನ್ನು  ಕೊಟ್ಟಿದ್ದಾರೆ. ವಾಸ್ತವವಾಗಿ, ಜೋಗಿ ಇಲ್ಲಿ ಅಪ್ರತ್ಯಕ್ಷನಾಗಿ ಇದ್ದಾನೆ. ಸಾಧಕನ ತಳಮಳ, ಕೋಗಿಲೆಯ ಮೋಹಕ ಕರೆ, ಕೋಗಿಲೆಯ ಬಗೆಗೆ ಅವನಿಗೆ ಇರುವ ಪ್ರಾಥಮಿಕ ಸಂಶಯ ಹಾಗು ತನ್ನಂತರದ ಭರವಸೆ ಇವೇ ಈ ಕವನದಲ್ಲಿಯ ಪ್ರತ್ಯಕ್ಷ ವಿಷಯಗಳು.

ಜೋಗಿ ಇಲ್ಲದಿದ್ದರೆ, ಇವು ಯಾವೂ ಇರುತ್ತಲೆ ಇರಲಿಲ್ಲ; ಸಾಧಕನಿಗೆ ಜೋಗಿ ಕೊಟ್ಟ ನಾಮದೀಕ್ಷೆಯಿಂದಲೇ ಇದೆಲ್ಲ ಪ್ರಾರಂಭವಾಯಿತು. ಸಾಧಕನು  ಸಾಧನಾಪಥದಲ್ಲಿ ತೊಳಲಾಡುತ್ತಿರುವಾಗ, ಜೋಗಿ (=ಯೋಗಿ) ಅಂದರೆ ಗುರು ಬಂದು ಸಾಧಕನ ಕೈಹಿಡಿದು ಮುನ್ನಡೆಯಿಸಬೇಕು ಎನ್ನುವ ಕಾರಣಕ್ಕಾಗಿ ಈ ಶೀರ್ಷಿಕೆಯನ್ನು ಕೊಡಲಾಗಿದೆ.

21 comments:

Shriniwas M Katti said...

ಈ ಮೊದಲೆ ಹೇಳಿದ್ದೆನಲ್ಲ, ಬೇಂದ್ರೆ ಕಾವ್ಯ ಹೊರದೃಷ್ಟಿಗೆ ಲೌಕಿಕ. ಒಳಗಣ್ಣು ತೆರೆದರೆ ಎಲ್ಲವೂ ಅಧ್ಯಾತ್ಮ, ಅಲೌಕಿಕ. ಅವರ ಪ್ರತಿಮೆಗಳು ನವನೂತನ. ನೀವು ಬೇಂದ್ರೆಯವರನ್ನು ಅರ್ಥೌಸುವದು ಇನ್ನೂ ನೂತನ. ಇದನ್ನೆಲ್ಲ ನಿಮಗೆ ಯಾರು, ಎಲ್ಲಿ ಕಲಿಸಿದರು ? ಸರತ್ಕಲ್ಲಿನಲ್ಲಿಯಂತೂ ಅಲ್ಲ. ಅಲ್ಲಿ ನಿಮ್ಮ ಜೊತೆಗೆ ಓದಿದ ನನ್ನ ಇಬ್ಬರು ಮಿತ್ರರು ಬೇಂದ್ರೆಯವರ ಕುರಿತು ಮಾತೇ ಆಡುವದಿಲ್ಲ !! ಹೇಗೆ ಕಲಿತಿರಿ ? ನಿಮಗೆ ಬೇಂದ್ರೆ ಸಿಕ್ಕಿದ್ದು ಯಾವಾಗ ? ಕಾಲೇಜಿನಲ್ಲಿರುವಾಗಲೆ ಅಥವಾ ವೃತ್ತಿ ನಿವೃತ್ತಿಯಾದಮೇಲೆಯೆ ? ನಿಮ್ಮ ಸಾಧನೆ ದೊಡ್ಡದು."ಜೋಗಿ"ಯನ್ನು ಇನ್ನೊಂದೆರಡು ಸಲ ಓದಿ ಮತ್ತೆ ಬರೆಯುವೆ.

bhadra said...

ಈ ಕವನವು, ವರ್ಣನೆ ಇಲ್ಲದಿದ್ದರೆ ಅರ್ಥ ಆಗುವುದು ಕಷ್ಟ ಎಂದೆನಿಸುತ್ತಿದೆ. ಕವನವನ್ನು ಮೂರು ಭಾಗವನ್ನಾಗಿ ತಿಳಿಯಪಡಿಸಿದ್ದೀರಿ. ಅದನ್ನು ಓಂಕಾರ ಸ್ವರೂಪ ಎಂದೂ ಕರೆಯಬಹುದು ಅಲ್ವೇ ಸಾರ್. ಅ+ಉ+ಮ=ಓಂ = ಬ್ರಹ್ಮ - ಉಗಮಕಾರಕ, ವಿಷ್ಣು - ವರ್ಧಕ, ಶಿವ - ನಾಶಕ, ಎಂದೂ ತಿಳಿಯಬಹುದಲ್ಲವೇ. ಇಂತಹ ಕ್ಲಿಷ್ಟವಾದುದನ್ನು ತಿಳಿಗನ್ನಡದಲ್ಲಿ ಕಾಕಾ ನಿರೂಪಿಸಿದ್ದರೆ, ಅದರ ಒಳ ಮರ್ಮವನ್ನು ಬಾಳೆಯಹಣ್ಣನ್ನು ಸುಲಿದುಕೊಟ್ಟಂತೆ ನಮಗಿತ್ತಿಹಿರಿ. ನಮೋ ನಮಃ.

ಆತ್ಮ ಚಿರಾಯು
ಅದಕಿಲ್ಲ ಸಾವು ನೋವಿನ ಅಂಟು
ಆತ್ಮ ಅಪರಂಜಿ
ಲವಲೇಶ ಕಲುಷಿತವಲ್ಲದ ಚಿನ್ನ

ಕಬ್ಬಿಣಕ್ಕೆ ತಗುಲುವುದು ತುಕ್ಕು
ದೇಹಕೆ ಬರುವುದು ಸುಕ್ಕು
ಜಡ ವಸ್ತುಗಳೂ ಕುಗ್ಗುವುದು
ಹಿಗ್ಗು ಕುಗ್ಗು ಅಗೋಚರವಿದು

ಒಮ್ಮೆ ವಾಮನ ಬೇಂದ್ರೆಯವರಿಗೆ ಜೀವನದ ಅರಿವನ್ನು ಸುಲಭದಲ್ಲಿ ತಿಳಿಸಲು, ಮಂಡಕ್ಕಿಯನ್ನು ಹಿಡಿಯಲ್ಲಿ ತೆಗೆದುಕೊಂಡು, ನದಿಗೆ ಎಸೆದು ತೋರಿಸಿದರಂತೆ. ಅದರ ಬಗ್ಗೆ ಹೆಚ್ಚಿನ ವಿಷಯ ತಿಳಿಸಿಕೊಡುವಿರಾ ಸಾರ್.

ಗುರುದೇವ ದಯಾ ಕರೊ ದೀನ ಜನೆ

ಸುಪ್ತದೀಪ್ತಿ suptadeepti said...

ಈ ಕವನದ ಬಗ್ಗೆ ಓದಿರಲಿಲ್ಲ, ಇದೇ ಮೊದಲು. ಇಂಥ ವಿವರಣೆ ಇನ್ನೆಲ್ಲೂ ಸಿಗಲಾರದೇನೋ! ಈ ಪದ್ಯದಲ್ಲಿನ ಲೌಕಿಕ-ಅಲೌಕಿಕಗಳ ಒಳಾರ್ಥ ತಿಳಿಯಲು ಬೇಕಾದ ತಿಳುವಳಿಕೆ ನನಗಿಲ್ಲ, ಇನ್ನೂ ಬಂದಿಲ್ಲ. ನೀವು ವಿವರಿಸಿದ ಮೇಲೆ, "ಹೌದಲ್ಲ!" ಅಂತನ್ನಿಸಿದ್ದು ಮಾತ್ರ ನಿಜ.

ಎಂದಿನಂತೆ, ಮತ್ತೆ ಮತ್ತೆ, ಧನ್ಯವಾದಗಳು ಕಾಕಾ.

sunaath said...

ಶ್ರೀನಿವಾಸ ಕಟ್ಟಿಯವರೆ,
ಜೋಗಿಯ ಬಗೆಗಿನ ನಿಮ್ಮ ಹೆಚ್ಚಿನ ಸ್ಪಂದನವನ್ನು ನಿರೀಕ್ಷಿಸುತ್ತಿರುತ್ತೇನೆ.

sunaath said...

ಶ್ರೀನಿವಾಸರೆ,
ನಿಮ್ಮ ಸ್ಪಂದನವನ್ನೂ ಸುಂದರವಾದ ಕವನದ ರೂಪದಲ್ಲಿಯೇ ಕೊಟ್ಟಿರುವಿರಲ್ಲ!ಧನ್ಯವಾದಗಳು.
ಬೇಂದ್ರೆ ಹಾಗು ಅವರ ಪುತ್ರನ ನಡುವೆ ನಡೆದ ಮಂಡಕ್ಕಿ ಕತೆ ನನಗೆ ತಿಳಿಯದು.

sunaath said...

ಜ್ಯೋತಿ,
ಧನ್ಯವಾದಗಳು. ಆದರೆ ಲೌಕಿಕ-ಅಲೌಕಿಕ ಒಳಾರ್ಥ ಇವು ನಿನಗೆ ತಿಳಿದಿರಲಿಲ್ಲ ಎಂದು ಹೇಳಿದರೆ ನಾನು ನಂಬುವವನಲ್ಲ. ಸುಂದರವಾದ ಕವಿತೆಗಳನ್ನು ಬರೆಯುವ ನಿನಗೆ ತಿಳಿಯಲಾರದ್ದು ಏನಿದೆ? ಕಾಕಾನ ಕಾಲೆಳೆಯುತ್ತಿದ್ದೀ, ಅಲ್ಲವೆ?
-ಕಾಕಾ

Anonymous said...

ಅಬ್ಬಾ!! ಈ ಜೋಗಿ ಅಪ್ರತಿಮ! ನಿಲುಕದ ನಕ್ಷತ್ರ!

ಸುನಾಥ ಕಾಕಾ, ನಿಮ್ಮನ್ನು ಮತ್ತು ಕಟ್ಟಿಯವರನ್ನು ಮಾತಿಗೆ ಹಚ್ಚಿ ನಾವು ಸುಮ್ಮನೆ ಬೇಂದ್ರೆ ಕಥೆ ಕೇಳ್ತಾ ಕೂಡೋಣ ಅನ್ನಿಸ್ತಿದೆ.

Shriniwas M Katti said...

ಸೌ ಅರುಣಾ ಇಂದು ಬೆಳಿಗ್ಗೆ ಗರಿ, ನಾದಲೀಲೆ,ನಾಕುತಂತಿ ಮತ್ತು ಗಂಗಾವತರಣ ತಲುಪಿಸಿದರು. ನಾಲ್ಕೂ ಕವನಸಂಕಲನಗಳನ್ನು "ಕಾಣಿಕೆ" ಮಾಡಿದ್ದೀರಲ್ಲಾ? ಮನಸಿಗೆ ಸಂಕೋಚವೆನಿಸಿತು. "ಕೃತಜ್ಞತೆಗಳು" ಎಂದು ಹೇಳುವದು ತುಂಬ ನಾಟಕೀಯ - ನೀರಸ ಎನಿಸುತ್ತದೆ. ಆದರೂ, ತುಂಬ ಕೃತಜ್ಞತೆಗಳು.

ಸುಪ್ತದೀಪ್ತಿ suptadeepti said...

ಕಾಕಾ, ನಿಮ್ಮ ಕಾಲೆಳೆಯುವ ಉದ್ಧಟತನ ಮಾಡಲಾರೆ. ನಿಮ್ಮ ಕಾಲುತೊಳೆದು ನಮಿಸಬಲ್ಲೆ. ತಿಳಿದಿರುವವರ ಮುಂದೆ ನನಗೆ ತಿಳಿಯದ್ದನ್ನು ಒಪ್ಪಿಕೊಂಡೆ, ಅಷ್ಟೇ.

sunaath said...

ತ್ರಿವೇಣಿ,
ಬೇಂದ್ರೆ-ತೋಟದ ತುಂಬೆಲ್ಲಾ ಹೂವೇ ಹೂವು. ಈ ಹೂಗಳ ಕಂಪನ್ನು ಆಸ್ವಾದಿಸುತ್ತ ಆನಂದಿಸೋಣ.
-ಸುನಾಥ ಕಾಕಾ

sunaath said...

ಕಟ್ಟಿಯವರೆ,
ಇದು ಗೆಳೆತನದ ಕೊಡುಗೆ ಅಷ್ಟೆ!

sunaath said...

ಜ್ಯೋತಿ,
ನೀನು ವಯಸ್ಸಿನಿಂದ ಇನ್ನೂ ಚಿಕ್ಕವಳಿರುವದರಿಂದ, ಆಧ್ಯಾತ್ಮಿಕ
ಪ್ರತಿಮೆಗಳು ಈಗಲೇ ಅರ್ಥವಾಗಲಿಕ್ಕಿಲ್ಲ. ಆದರೆ ನಿನ್ನಲ್ಲಿ ಆ ಪ್ರತಿಭೆ ಇದೆ ಎನ್ನುವ ಉದ್ದೇಶದಿಂದ ಹಾಗೆಂದನಷ್ಟೆ.
-ಕಾಕಾ

Shriniwas M Katti said...

ಇನ್ನು 8 ದಿನ ಸಲ್ಲಾಪದ ಸಂಪರ್ಕವಿಲ್ಲ. ನಾನು ಬೆಂಗಳೂರಿನಿಂದ 27ಕ್ಕೆ ಬರುವೆ. ಬಂದನಂತರವೇ ಸಲ್ಲಾಪ ಸಂಪರ್ಕಿಸುವೆ. ಬರುವದರಲ್ಲಿ ಎರಡು ಪ್ರಬಂಧಗಳಾದರೂ ಇದ್ದೇಇರುತ್ತವೆಂಬ ನಂಬಿಕೆ.

Mahantesh said...

chennagidi sir...nanu I kavanada bagge na kaMda Bendre J.V yavaru matte bharosadhankerige (Kurthkoti)nalli odidde...averdakkinta vishalavagi vivaraNe maadiddare..dhanyawad....

ಸೋಮಶೇಖರ ಹುಲ್ಮನಿ said...

thanks a lot for explanation

sunaath said...

ಹುಲ್ಮನಿಯವರೆ,
ನಿಮಗೂ ಧನ್ಯವಾದಗಳು.

Anonymous said...

superb! Nimmmanna ondu sari betti aagabeku.... Ade neeriksheyalli...
Rajesh

sunaath said...

ಪ್ರಿಯ ರಾಜೇಶ,
I too wait for that moment.

Eccentric v____one said...

Thanks a lot sir.ur explanation is beautiful.Helped me a lot.

sunaath said...

Thank you, Sir, Eccentric v_one!

Anonymous said...

ಅದ್ಭುತವಾದ ವಿವರಣೆ. ಕೀರ್ತಿನಾಥ ಕುರ್ತುಕೋಟೆಯವರ (ಶ್ರಾವಣ ಪ್ರತಿಭೆ) ವಿವರಣೆ ಕೇವಲ ಲೌಕಿಕ ದೃಷ್ಟಿಕೋನದಿಂದ ಕೂಡಿದ್ದು ಒಂದು ಭಯಾನಕ ದೃಶ್ಯದ ವಿವರಣೆ ಈ ಕವನ ಎಂಬಂತಿದೆ. ಬೇಂದ್ರೆಯವರ ಅಧ್ಯಾತ್ಮ ಸಾಧನೆಯ ಅರಿವಿದ್ದ ನನಗೆ ಈ ಕವಿತೆಗೆ ಆಧ್ಯಾತ್ಮಿಕ ಅರ್ಥ ಇರಬೇಕೆನ್ನಿಸಿ (“ಓಂಕುಹೂ” ನಲ್ಲಿ ಸುಳಿವಿದೆ) ಅಂತರ್ಜಾಲದಲ್ಲಿ ಹುಡುಕಿದಾಗ ನಿಮ್ಮ ಬ್ಲಾಗ್ ಸಿಕ್ಕಿತು. ತುಂಬಾ ಧನ್ಯವಾದಗಳು🙏🏻