Friday, April 25, 2008

ಏಲಾಗೀತ....ದ.ರಾ.ೇಂದ್ರೆ

ಏಲಾಗೀತಕವನವು ಬೇಂದ್ರೆಯವರ ಗಂಗಾವತರಣಕವನಸಂಕಲನದಲ್ಲಿ ಸೇರ್ಪಡೆಯಾಗಿದೆ. ಕವನದ ಪೂರ್ತಿಪಾಠ ಹೀಗಿದೆ:

ಏಲಾವನ ಲವಲೀಬನ ಲವಂಗ ಬನಗಳಲಿs
ನಾಗಲತಾ ಸಂಕುಲ ಬನವಾಸಿಯ ಜನಗಳಲಿsss
ಲೀಲಾಂದೋಲಿತ ದೋಲಾ ಲಲನಾ ಮಣಿಗಳಲಿss | ಏಲಾವನ

ಏಲಾಪದ ಲೀಲಾಪದ ಆಲಾಪದ ಸರಣಿs
ಸಖಸಖಿಯರ ಮೇಳಾಪದೆ ತೆರೆದಿರೆ ಎದೆ ಭರಣಿs
ಆಲಿಸುತಿವೆ ಮಾಲಿಸುತಿವೆ ಹರಿಣದ ಜತೆ ಹರಿಣಿs | ಏಲಾವನ

ಙಂ ಞಣನಮಾ, ಅಂ ಜ್ಞ ಓಂ, ಜಂ ಸಂ ಶಂ ಎಂಬಾ
ಅಂಬಾಗರೆವುದು ವಾಣಿಯ ವೀಣೆಯು ಬಾಯ್ತುಂಬಾ
ಬಾ ಅಮ್ಮಾ ಅಮ್ಮಾ ಬಾ ಬಾರೇ ಜಗದಂಬಾ. | ಏಲಾವನ

ಉಸಿರುಸಿರಲಿ ಸರಿವರಿದೂ ಊದೂದುತ ನಲಿದು
ದನಿಯೆ ನದಿಯೊಲು ಚಲಿಸಿತು ಕೊಂಕೊಂಕೆನೆ ಒಲೆದು
ಅಲೆಯಾಯಿತು ಬಲೆಯಾಯಿತು ಜಗದಗಲಕೆ ಸೆಲೆದು. | ಏಲಾವನ

ಕಿನ್ನರಕಿನ್ನರಿ ಮಿಥುನವು ಅರೆಅರೆ ಮೈಗೂಡಿ
ನುಡಿಯಲಿ ಹುದುಗಿದ ಹುರುಳೊಳು ಹದುಳದೊಳೊಡಮೂಡಿ
ನಾಲಿಗೆ ನಾಡಿಯನಾಡಿಸಿ ಸ್ವರಮೂರ್ತಿಯ ಮಾಡಿ. | ಏಲಾವನ

ನರಗಳಲಿಂಗಿಂಗೀ ನರನಾಳದೆ ತಂಗಿs
ಲಾಸ್ಯದಿ ಹಾಸ್ಯವ ಮಿಂಚಿಸಿ ಪರಶಿವನರ್ಧಾಂಗಿss
ತಾಲದಿ ಕಾಲವ ಸೊಲ್ಲಿಸುವಂತಿದೆ ಈ ಭಂಗಿss. | ಏಲಾವನ

ನೆಲೆಗೆಡಿಸುವ ವಾಸನೆಗಳ ಎದೆಬೀಜವ ಸೀಳಿ
ರತಿರಮಣನ ನಿಜಜನಕನ ಎದೆಯಾಳವನಾಳಿ
ಹೃದಯಾಕೂತಿಯ ಅನುಪಮ ಲಾವಣ್ಯವ ತಾಳಿ. | ಏಲಾವನ

ಸ್ವಾದದ ನಾದದ ಮೋದದ ಒಳಬಸಿರನೆ ಬಗೆದು
ಹುಂಕಾರದ ಒಳನೂಲನು ಮೆಲ್ಲನೆ ಹೊರದೆಗೆದು
ಶಬ್ದಕೆ ಹಾಸಿಗೆಯಾಗಿಹ ತನಿಮೌನದಿ ಮುಗಿದು. | ಏಲಾವನ

ಯಾಳದ ಜತಿ, ಏಳೆಯ ಗತಿ ಏಳೇಳೇಳೆಂದು
ಎಬ್ಬಿಸಿ, ಮಬ್ಬನು ಚೆದರಿಸಿ ಬಾಳ್ ಬಾಳ್ ಬಾಳೆಂದು
ತಂತಿಯ ತಾಳಕೆ ಮಿಡಿದಿರೆ, ಎಲ್ಲಾಯಿತು ಒಂದು. | ಏಲಾವನ

ಏಳೆಯ ಬಸಿರೊಳು ಮಲಗಿದ ಯಾವುದೊ ಗತಿ ಚಿತ್ರ
ದನಿ ಪಡೆದಿತು, ತಿಳಿದೆದ್ದಿತು ಕಣ್ಬಡೆದು ವಿಚಿತ್ರ
ಆಕ್ಷಣವನು ಈಕ್ಷಣವನು ಮಾಡಿತು ಸುಪವಿತ್ರ. | ಏಲಾವನ
……………………………………………………..

ಕಾವ್ಯೋದ್ಯೋಗವು ಅನೇಕ ಕವಿಗಳಿಗೆ ಶಬ್ದ-ಯೋಗ ; ಆದರೆ ಬೇಂದ್ರೆಯವರಿಗೆ ಅದು ನಾದ-ಯೋಗ. ನವ್ಯಕವಿಗಳಿಗಂತೂ ಅದು ಒಂದು intellectual exercise. ಶ್ರೀ ಏ.ಕೆ ರಾಮಾನುಜನ್ ಅವರು ಬರೆದ ಕವಿತೆಯ ಈ ಸಾಲುಗಳು ಇಂತಹ ಧೋರಣೆಗೆ ಒಳ್ಳೆಯ ಉದಾಹರಣೆ ಆಗಿವೆ:

ಕವಿತೆ ಬರೆಯುವದು ಕಷ್ಟವೆ, ಸ್ವಾಮಿ?
ಬರೆಯದಿರುವದೆ ಕಷ್ಟ.

ಕವಿತೆ ಇವರಿಗೆ ಕೇವಲ ಬರೆಯುವವಸ್ತುವಾಗಿದೆ. ಬೇಂದ್ರೆಯವರ ಮನಸ್ಸಿನಲ್ಲಿ ಕವನವು ಬಹುತೇಕವಾಗಿ ನಾದರೂಪದಿಂದ ಮೂಡುತ್ತಿತ್ತು ಎನ್ನುವ ಮಾತನ್ನು ಅವರು ತಮ್ಮ ಅನೇಕ ಕವನಗಳಲ್ಲಿ ವ್ಯಕ್ತಪಡಿಸಿದ್ದಾರೆ. ಉದಾಹರಣೆಗೆ ಗಂಗಾವತರಣಕವನಸಂಕಲನದಲ್ಲಿಯ ’ “ಗಾಳಿಗಡಲಿನಲ್ಲಿಕವನದ ಮೊದಲ ನುಡಿಯನ್ನು ನೋಡಿರಿ:

ಗಾಳಿಗಡಲಿನಲ್ಲಿ ತೇಲಿ ಬರುತಲಿಹವು ನಾದಾ
ಭಂಡವಾಳದಂತೆ ತುಂಬಿ ವಿವಿಧ ಭಾವ ಮೋದಾ
ಯಾವ ಗೆಳೆಯ ಗುರುವಿನಿಂದ ಬಂದಿತೋ ಪ್ರಸಾದಾ
ಎನುವೆ ಹೈ ಹಸಾದಾ|

ಏಲಾಗೀತ ಸಹ ಕಾವ್ಯ-ಸೃಷ್ಟಿಯನ್ನು ವರ್ಣಿಸುವ ಒಂದು ಅದ್ಭುತವಾದ ಕವನವಾಗಿದೆ. ಕವನ ಪ್ರಾರಂಭವಾಗುವದು ಬನವಾಸಿಯ ವರ್ಣನೆಯಿಂದ. ಈ ಕವನಕ್ಕೆ ಬನವಾಸಿಯದೇನು ನಂಟು ಎನ್ನುವ ಪ್ರಶ್ನೆ ಬರಬಹುದು. ಏಲಾಗೀತವು ಎಲ್ಲಿಯೋ ಹುಟ್ಟುವಂತಹ ಕವನವಲ್ಲ. ಈ ಗೀತೆಗೆ ಮನೋಹರವಾದ ನಿಸರ್ಗ ಹಾಗು ಅಷ್ಟೇ ಧೀಮಂತರಾದ ಜನರು ಬೇಕು. ಇವರು ವನವಾಸಿ ಜನರು ಅನ್ನುವ ಒಂದು ಅರ್ಥಸಾಧ್ಯತೆ ಇದೆ. ಆದರೆ ಎಲೆ, ಲವಂಗ ಮೊದಲಾದ ಪದಾರ್ಥಗಳು ಬೆಳೆಯುವ ದೇಶವೆಂದರೆ ಘಟ್ಟದ ಪ್ರದೇಶವಾದ ಬನವಾಸಿ ಹಾಗು ನಮ್ಮ ಬನವಾಸಿಯಲ್ಲಿರುವ ಜನರು ‘ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪಿಗಳ್ಗಾರವಾದ ಮಾನಸರ್’ ಎಂದು ಕನ್ನಡದ ಆದಿಕವಿ ಪಂಪ ಪ್ರಮಾಣಪತ್ರವನ್ನೆ ಕೊಟ್ಟಿದ್ದಾನೆ. ಇನ್ನು ‘ಏಲಾಗೀತ’ವೆಂದರೆ ಏಲಾವನದಲ್ಲಿ ಹುಟ್ಟುವ ಗೀತ ಎನ್ನುವ ಅರ್ಥವನ್ನು ಕೊಡುವಂತೆಯೇ, ‘ಏಲಾ’ ಛಂದಸ್ಸಿನಲ್ಲಿ ಹುಟ್ಟಿದ ಗೀತ ಎನ್ನುವ ಅರ್ಥವನ್ನೂ ಸೂಚಿಸುತ್ತದೆ.

 ಏಲಾಗೀತಕವನದ ಮೊದಲನೆಯ ನುಡಿಯನ್ನು ನೋಡಿರಿ:

ಏಲಾವನ ಲವಲೀಬನ ಲವಂಗ ಬನಗಳಲಿs
ನಾಗಲತಾ ಸಂಕುಲ ಬನವಾಸಿಯ ಜನಗಳಲಿsss
ಲೀಲಾಂದೋಲಿತ ದೋಲಾ ಲಲನಾ ಮಣಿಗಳಲಿss | ಏಲಾವನ

ಏಲಾ ಅಂದರೆ ಏಲಕ್ಕಿ.  ಲವಲೀವನ ಅಂದರೆ ಅರೆನೆಲ್ಲಿಯ ವನ; ಲವಂಗವಂತೂ ನಮಗೆಲ್ಲರಿಗೂ ಗೊತ್ತಿದ್ದದ್ದೆ. ನಾಗಲತೆ ಅಂದರೆ ಒಂದು ಜಾತಿಯ ವೀಳ್ಯದೆಲೆ.

ಇಂತಹ ಸಸ್ಯಗಳಿಂದ ತುಂಬಿರುವ ಬನವಾಸಿಯ ತೋಟಗಳಲ್ಲಿ ಹೆಣ್ಣು ಮಕ್ಕಳು ಉಯ್ಯಾಲೆಗಳಲ್ಲಿ (=ದೋಲಾ) ನಿರಾಯಾಸ ಕ್ರಮದಲ್ಲಿ (=ಲೀಲಾಂದೋಲಿತ), ತಮ್ಮನ್ನು ತೂಗಿಕೊಳ್ಳುತ್ತ, ಗೆಳೆಯ, ಗೆಳೆತಿಯರ ಜೊತೆಗೆ ಹಾಡುತ್ತ ಕಾಲ ಕಳೆಯುವರು. ಗೆಳೆಯ- ಗೆಳತಿಯರ ಗೀತಾಲಾಪನೆಯ ವರ್ಣನೆ ಈ ಮುಂದಿನ ನುಡಿಯಲ್ಲಿದೆ:

ಏಲಾಪದ ಲೀಲಾಪದ ಆಲಾಪದ ಸರಣಿs
ಸಖಸಖಿಯರ ಮೇಳಾಪದೆ ತೆರೆದಿರೆ ಎದೆ ಭರಣಿs
ಆಲಿಸುತಿವೆ ಮಾಲಿಸುತಿವೆ ಹರಿಣದ ಜತೆ ಹರಿಣಿs | ಏಲಾವನ

ಸಖ ಸಖಿಯರು ಜೊತೆಗೂಡಿ (=ಮೇಳಾಪಿಸಿ), ಪರಸ್ಪರ ಸ್ನೇಹದಲ್ಲಿ ಅವರು ಮುಕ್ತಮನಸ್ಕರಾದಾಗ (=ತೆರೆದಿರೆ ಎದೆ ಭರಣಿ), ಹಾಡುವ ಗೀತೆಗಳನ್ನು ಗಂಡು ಹಾಗು ಹೆಣ್ಣು ಚಿಗರೆಗಳು ಆಲಿಸುತ್ತ ಹಾಗು ಪರಸ್ಪರರನ್ನು ತಿಕ್ಕುತ್ತ (ಮಾಲಿಸು=bend), ಆನಂದಭರಿತವಾಗಿ ನಿಂತುಕೊಂಡಿವೆ. ಅಂದರೆ ಉಪವನಗಳಲ್ಲಿ ಗೆಳೆಯ ಗೆಳತಿಯರು ತೂಗಿಕೊಳ್ಳುತ್ತ, ಸುಖ ಸಂತೋಷದಲ್ಲಿ ಗೀತೆಗಳನ್ನು ಹಾಡುತ್ತಿದ್ದರೆ, ಮೃಗಗಳೂ ಸಹ ಈ ಗೀತೆಗಳನ್ನು ಕೇಳುತ್ತಿವೆ. ಅಷ್ಟು ಸಮ್ಮೋಹಕವಾದ ಗಾಯನವಿದು. ಅಂತಹ ಯಾವ ಗೀತೆ ಅಥವಾ ಸಂಗೀತವಿರಬಹುದು ಇದು ಎನ್ನುವ ಪ್ರಶ್ನೆಗೆ ಉತ್ತರ ಈ ನುಡಿಯ ಮೊದಲ ಸಾಲಿನಲ್ಲಿಯೇ ಇದೆ: ಏಲಾಪದ ಲೀಲಾಪದ ಆಲಾಪದ ಸರಣಿs”

ಏಲಾಪದಅಂದರೆ ಏನು? ಏಲಾಪದ= ಏಲಾ+ಪದ. ಕನ್ನಡದಲ್ಲಿ ಏಲಾ ಅನ್ನುವ ತ್ರಿಪದಿ ವರ್ಗದ ಒಂದು ಛಂದಸ್ಸಿದೆ. ಆ ಛಂದಸ್ಸಿನ, ತ್ರಿಪದಿವರ್ಗದ ಗೀತೆಗಳನ್ನು ಸಹಜ ಸರಳತೆಯಿಂದ (=ಲೀಲಾ-ಪದ) ಇವರು ಆಲಾಪಿಸುತ್ತಿದ್ದಾರೆ. ಗೀತೆಗಳು ಸಹಜವಾಗಿ ನಿರಾಯಾಸವಾಗಿ ಬರುತ್ತಿರುವದರಿಂದ ಅವು ಲೀಲಾ-ಪದಗಳ ಸರಣಿಯಾಗಿವೆ.

ಮೃಗಗಳನ್ನು ಸಹ ಮೈಮರೆಸುವಂತಹ ಈ ಸಂಗೀತವು ಕೇವಲ ಮಾನುಷಿಕ ಸಂಗೀತವಾಗಿರಲಾರದು. ಈ ಸಂಗೀತದ ಮೂಲವು ದೇವಿ ಸರಸ್ವತಿಯ ವೀಣೆಯಲ್ಲಿದೆ :

ಙಂ ಞಣನಮಾ, ಅಂ ಜ್ಞ ಓಂ, ಜಂ ಸಂ ಶಂ ಎಂಬಾ
ಅಂಬಾಗರೆವುದು ವಾಣಿಯ ವೀಣೆಯು ಬಾಯ್ತುಂಬಾ
ಬಾ ಅಮ್ಮಾ ಅಮ್ಮಾ ಬಾ ಬಾರೇ ಜಗದಂಬಾ. | ಏಲಾವನ

ಈ ವೀಣೆಯ ಧ್ವನಿಯನ್ನು ನೋಡಿರಿ (ಅಥವಾ ಕೇಳಿರಿ): ಙಂ ಞ ಣ ನ ಮಾ, ಅಂ ಜ್ಞ ಓಂ, ಜಂ ಸಂ ಶಂ”.

ಙಂ ಞ ಣ ನ ಮಾಇವು ವರ್ಗೀಯ ವ್ಯಂಜನಗಳ ಕೊನೆಯ ಅನುನಾಸಿಕಗಳು. ‘ಓಂ, ಜಂ, ಸಂ, ಶಂ’ ಇವು
ಮಂತ್ರಾಕ್ಷರಗಳು. ವೀಣೆಯ ನಾದವನ್ನು ಕೇಳಿದಾಗ ಈ ಅನುನಾಸಿಕಗಳ ಅನುಭವವಾಗುತ್ತದೆ. ಇವುಗಳಿಂದಲೇ ಸಪ್ತಸ್ವರಗಳು ಹುಟ್ಟಿವೆ. ಆದುದರಿಂದಲೇ ಸಂಗೀತಕ್ಕೆ ಗಂಧರ್ವ ಕಲೆ ಎಂದು ಕರೆಯಲಾಗುತ್ತದೆ.

ಬಾಯ್ತುಂಬಾ ಅಂಬಾ, ಜಗದಂಬಾ, ಬಾ ಅಮ್ಮಾಎಂದು ಕರುವು ತನ್ನ ತಾಯಿಯನ್ನು ಕರೆಯುವಂತೆ ಈ ವೀಣೆಯು ಸ್ಫುರಿಸುತ್ತಿದೆ. ಅಂದರೆ ಇದು ದೈವಿಕವಾದ ಸಂಗೀತ. ಏಲಾವನದಲ್ಲಿ ಹಾಡಿಕೊಳ್ಳುತ್ತಿರುವ ಈ ತರುಣ ತರುಣಿಯರ ಸಂಗೀತವು ದೇವಿ ಸರಸ್ವತಿಯ ವೀಣಾನಾದದಂತೆ ದೈವಿಕ ಹಾಗು ಮಧುರವಾಗಿದೆ.  ಇದರಲ್ಲಿ ಸಂಪೂರ್ಣ ವಿಶ್ವದ ಬಗೆಗೆ ಪ್ರೀತಿ ತುಂಬಿದೆ. ಈ ಪ್ರೀತಿಯ ಸ್ವರ ಇಡೀ ವಿಶ್ವವನ್ನೆ ವ್ಯಾಪಿಸುವ ಪರಿಯನ್ನು ಬೇಂದ್ರೆ ಮುಂದಿನ ನುಡಿಯಲ್ಲಿ ವರ್ಣಿಸಿದ್ದಾರೆ:

ಉಸಿರುಸಿರಲಿ ಸರಿವರಿದೂ ಊದೂದುತ ನಲಿದು
ದನಿಯೆ ನದಿಯೊಲು ಚಲಿಸಿತು ಕೊಂಕೊಂಕೆನೆ ಒಲೆದು
ಅಲೆಯಾಯಿತು ಬಲೆಯಾಯಿತು ಜಗದಗಲಕೆ ಸೆಲೆದು. | ಏಲಾವನ

ಸರಸ್ವತಿಯ ಸಂಗೀತದಂತಿರುವ, ಈ ಸಖ ಸಖಿಯರ ಗೀತೆಯ  ದನಿಯೇ ಸೆಲೆಯೊಡೆದು (=ಹೊರಹೊಮ್ಮಿ)ನದಿಯಾಯಿತು ! (ಬೇಂದ್ರೆಯವರು ಪದಗಳೊಡನೆ ಆಟವಾಡುವ ರೀತಿಯಿದು. ಇಂತಹ ಮತ್ತೊಂದು ಉದಾಹರಣೆ: ದೇವಕಾಮವೆ ಕಾಮದೇವನಾಗಿ’). ನಾದದ ಈ ನದಿ ಬನವಾಸಿಯ ಘಟ್ಟಪ್ರದೇಶದಲ್ಲಿ ವಕ್ರವಾಗಿಯೇ (=ಕೊಂಕೊಂಕೆನೆ) ಹರಿಯಬೇಕಲ್ಲವೆ? ಹಾಗೆ ಹರಿಯುತ್ತಲೆ, ಅದು ಅಲೆಯಾಯಿತು ಹಾಗು ಇಡೀ ವಿಶ್ವವನ್ನೇ ಸೆರೆ ಹಿಡಿಯುವ ಬಲೆಯಾಯಿತು !

ಇಂತಹ ದೈವೀ ಸಂಗೀತವನ್ನು ಮನುಷ್ಯರು ಹಾಡುವದು ಸಾಧ್ಯವೆ? ಕಿನ್ನರ ಲೋಕದಲ್ಲಿರುವ ಕಿನ್ನರಕಿನ್ನರಿ ಮಿಥುನವೇ ಬನವಾಸಿಯಲ್ಲಿಯ ಗೆಳೆಯ-ಗೆಳೆತಿಯರಿಂದ ಈ ಸ್ವರವನ್ನು ಹೊರಡಿಸುತ್ತಿದೆ. ಕಿನ್ನರ ಹಾಗು ಕಿನ್ನರಿ ಈ ಪದಗಳನ್ನು ಬೇಂದ್ರೆಯವರು ಜೊಡಿಸಿಯೇ ಬರೆದಿದ್ದಾರೆ ಎನ್ನುವದನ್ನು ಗಮನಿಸಬೇಕು. ಅಶ್ವದೇಹ ಹಾಗು ಮನುಷ್ಯಮುಖವುಳ್ಳ ಈ ಕಿನ್ನರಎನ್ನುವ ಜೀವಿ ಒಂದು ರೀತಿಯಲ್ಲಿ ಅರ್ಧನಾರೀ ನಟೇಶ್ವರ. ಏಕೆಂದರೆ ಕಿನ್ನರ ಹಾಗು ಕಿನ್ನರಿ ಬೆಸೆದುಕೊಂಡಿರುತ್ತಾರೆ ಎನ್ನುವದು ಪೌರಾಣಿಕ ಆಖ್ಯಾನ. (=ಅರೆ ಅರೆ ಮೈಗೂಡಿ). ಅವರು ನಾಲಿಗೆಯ ನಾಡಿಯನ್ನು (=ಸೂಕ್ಷ್ಮದೇಹದ ನಾಲಿಗೆಯನ್ನು) ಆಡಿಸಿ, ಸ್ವರದ ಮೂರ್ತಿಯನ್ನು ನಿರ್ಮಿಸುತ್ತಾರೆ. {ದೈವೀ ವೀಣೆಯಲ್ಲಿಂದ ಹೊಮ್ಮಿದ ಪರಾ(=ಅನುಭವದ ಆಚೆಗಿನ) ನಾದವು ಕಿನ್ನರಮಿಥುನದಿಂದ ಹೊಮ್ಮುವಾಗ ಪಶ್ಯಂತೀ(=ಕಾಣಬಹುದಾದ) ನಾದವಾಗುತ್ತದೆ.} ಈ ಸ್ವರಮೂರ್ತಿ ಹೇಗಿರುವದೆಂದರೆ ನುಡಿಯಲ್ಲಿ ಹುದುಗಿದ ಹುರುಳಿನಂತೆ’.

ಕಿನ್ನರಕಿನ್ನರಿ ಮಿಥುನವು ಅರೆಅರೆ ಮೈಗೂಡಿ
ನುಡಿಯಲಿ ಹುದುಗಿದ ಹುರುಳೊಳು ಹದುಳದೊಳೊಡಮೂಡಿ
ನಾಲಿಗೆ ನಾಡಿಯನಾಡಿಸಿ ಸ್ವರಮೂರ್ತಿಯ ಮಾಡಿ. | ಏಲಾವನ

ಬೇಂದ್ರೆಯವರು ಇಲ್ಲಿ ಮತ್ತೊಂದು ವಿಷಯವನ್ನು ಈಗ ಸೇರಿಸಿದ್ದಾರೆ. ಸ್ವರಮೂರ್ತಿಯಂದರೆ ಒಂದು ಶರೀರ ತಾನೆ? ಈ ಶರೀರಕ್ಕೆ ಹಾಗು ಅದರ ಜೀವಕ್ಕೆ (= ಹುರುಳಿಗೆ =ಅರ್ಥಕ್ಕೆ) ಇರುವದು ಅನ್ಯೋನ್ಯ ಸಂಬಂಧ. ಅದು ಬಹು ಚೆನ್ನಾಗಿ (=ಹದುಳದೊಳು) ಅಭಿವ್ಯಕ್ತವಾಗುತ್ತಿದೆ (=ಒಡಮೂಡಿ). ಕವಿ ಕಾಳಿದಾಸನು ತನ್ನ ರಘುವಂಶ ಎನ್ನುವ ಕಾವ್ಯಕ್ಕೆ ಒಂದು ಆರಂಭದ ಪದ್ಯವನ್ನು ಬರೆದಿದ್ದಾನೆ. ಅದು ನಾಂದೀದ್ಯವೂ ಹೌದು; ಲಕ್ಷಣಕಾವ್ಯವೂ ಹೌದು.   ಅದು ಹೀಗಿದೆ:
ವಾಗರ್ಥಾವಿವ ಸಂಪೃಕ್ತೌ ವಾಗರ್ಥಪ್ರತಿಪತ್ತಯೆ
ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ”.

ಈ ಶ್ಲೋಕದಲ್ಲಿರುವ ವಾಗರ್ಥಾವಿವ ಸಂಪೃಕ್ತೌಇದನ್ನು ಬೇಂದ್ರೆಯವರು ನುಡಿಯಲಿ ಹುದುಗಿದ ಹುರುಳು” ಎಂದು ಕನ್ನಡಿಸಿದ್ದಾರೆ.
 
 .

ನಾಲಿಗೆಯ ನಾಡಿಯಲ್ಲಿ ಹುಟ್ಟಿದ ಈ ಸ್ವರವು ನರನರಗಳಲಿ ಪೂರ್ಣವಾಗಿ ಇಂಗಿ, ನರಗಳ ನಾಳದಲ್ಲಿ ಸ್ಥಾಯಿಯಾಗುವದೆಂದು (=ತಂಗು) ಬೇಂದ್ರೆ ಮುಂದಿನ ನುಡಿಯಲ್ಲಿ ಹೇಳುತ್ತಾರೆ:

ನರಗಳಲಿಂಗಿಂಗೀ ನರನಾಳದೆ ತಂಗಿs
ಲಾಸ್ಯದಿ ಹಾಸ್ಯವ ಮಿಂಚಿಸಿ ಪರಶಿವನರ್ಧಾಂಗಿss
ತಾಲದಿ ಕಾಲವ ಸೊಲ್ಲಿಸುವಂತಿದೆ ಈ ಭಂಗಿss. | ಏಲಾವನ

ಈ ಸ್ವರವು ನಾಡಿಗಳಲ್ಲಿ ಸಂಚರಿಸುವ ಭಂಗಿಯು ಹೇಗಿದೆಯೆಂದರೆ:
ಲಾಸ್ಯದಿ ಹಾಸ್ಯವ ಮಿಂಚಿಸಿ ಪರಶಿವನರ್ಧಾಂಗಿss
ತಾಲದಿ ಕಾಲವ ಸೊಲ್ಲಿಸುವಂತಿದೆ ಈ ಭಂಗಿss.”

ಪರಶಿವನ ನೃತ್ಯಕ್ಕೆ ತಾಂಡವ ನೃತ್ಯಎನ್ನುತ್ತಾರೆ. ಪಾರ್ವತಿಯದು ಲಾಸ್ಯ ನೃತ್ಯ’, ಅಂದರೆ ಸುಕೋಮಲ ನೃತ್ಯ. ಈ ಲಾಸ್ಯದಲ್ಲಿ ಹಾಸ್ಯವನ್ನು ಅಂದರೆ ಆಹ್ಲಾದದ ನಗುವನ್ನು ಮಿಂಚಿಸಿದಂತೆ ಹಾಗು ಕಾಲವೇ ತಾಲವನ್ನು ಹಾಕುತ್ತಿರುವಂತೆ ( ಸೊಲ್ಲಿಸು=ಧ್ವನಿಗೈಯು), ಈ ಸ್ವರಸಂಚಾರದಿಂದ ಭಾಸವಾಗುತ್ತಿದೆ.

ಇಂತಹ ದೈವಿಕ ಸಂಗೀತದ ಸ್ವರಸಂಚಾರದ ಪರಿಣಾಮವನ್ನು ಹೇಳಬೇಕಷ್ಟೆ. ಅದು ಮುಂದಿನ ನುಡಿಯಲ್ಲಿದೆ:

ನೆಲೆಗೆಡಿಸುವ ವಾಸನೆಗಳ ಎದೆಬೀಜವ ಸೀಳಿ
ರತಿರಮಣನ ನಿಜಜನಕನ ಎದೆಯಾಳವನಾಳಿ
ಹೃದಯಾಕೂತಿಯ ಅನುಪಮ ಲಾವಣ್ಯವ ತಾಳಿ. | ಏಲಾವನ

ನೆಲೆಯನ್ನು ಅಂದರೆ ಮನುಷ್ಯನ ಅಂತರಂಗವನ್ನು ಕೆಡಿಸುವಂತಹ ವಾಸನೆಗಳ (=ಕಾಮ, ಕ್ರೋಧ ಇತ್ಯಾದಿ) ಹುಟ್ಟನ್ನು ಸೀಳಿ ಒಗೆಯುವದು ಈ ದೈವಿ ಸಂಗೀತದ ಮೊದಲ ಪರಿಣಾಮ. ಅದರ ನಂತರ, ರತಿರಮಣನ ಅಂದರೆ ಕಾಮದೇವನ ತಂದೆಯಾದ ವಿಷ್ಣುವಿನ (=ನಿಜಜನಕನ) ಎದೆಯ ಆಳವನ್ನು ಆಳುವದು ಅಂದರೆ ಆ ವಿಶ್ವಚೈತನ್ಯನಲ್ಲಿ ಭಕ್ತಿಯನ್ನು ಹುಟ್ಟಿಸುವದು ಇದರ ಮುಂದಿನ ಪರಿಣಾಮ. ಇದು ಸಾಧಿಸಿದಾಗ ಹೃದಯಾಕೂತಿಯು ಅನುಪಮ ಲಾವಣ್ಯವನ್ನು ತಾಳುವದು. ಆಕೂತಿ ಎಂದರೆ ಉದ್ದೇಶ. ಹೃದಯಾಕೂತಿ ಎಂದರೆ ಅಂತರಂಗದ ಹಂಬಲ. ಋಗ್ವೇದದಲ್ಲಿ ಈ ರೀತಿಯಾಗಿ ಹೇಳಲಾಗಿದೆ:

ಸಮಾನೀವ ಆಕೂತಿ ಸಮಾನಾ ಹೃದಯಾನಿವ” (=ನಿಮ್ಮ ಉದ್ದೇಶಗಳು ಒಂದೇ ಆಗಿರಲಿ, ನಿಮ್ಮ ಮನಸ್ಸು ಒಂದುಗೂಡಿರಲಿ).

ಆಕೂತಿಪದಕ್ಕೆ ಮತ್ತೂ ಒಂದು ಅರ್ಥವಿದೆ:
ಆಕೂತಿ ಇವಳು ಸ್ವಯಂಭೂ ಮನು ಹಾಗು ಶತರೂಪಾ ಇವರ ಮಗಳು; ರುಚಿಪ್ರಜಾಪತಿಯನ್ನು ಮದುವೆಯಾದವಳು. ಇವರೆಲ್ಲ ದೇವರಿಂದ ಆದಿಷ್ಟರಾಗಿ ಪ್ರಜೋತ್ಪತ್ತಿಯನ್ನು ಮಾಡುವವರು ತಾನೆ? ಆ ಪ್ರಕಾರವಾಗಿ ಈ ಸಂಗೀತವೂ ಸಹ ದೇವೋದ್ದೇಶಕ್ಕಾಗಿ ಅನುಪಮ ಲಾವಣ್ಯವನ್ನು ತಳೆದಿದೆ.

ಸೂಕ್ಷ್ಮ ಶರೀರದಲ್ಲಿರುವ ಈ ಸುಮಧುರ ನಾದ ಹೊರಬರಬೇಕಲ್ಲವೆ? (ಅನಾಹತ ಚಕ್ರದಲ್ಲಿರುವದು ಪರಾ ನಾದ. ಅದು ಪಶ್ಯಂತಿಯಾಗಿ ಬದಲಾಗಿ, ಕೊನೆಗೆ ವೈಖರೀ ರೂಪದಲ್ಲಿ ಹೊರಬರುವದು.) ಅದನ್ನು ಹೇಗೆ ಸಾವಧಾನವಾಗಿ ಹೊರಗೆಳೆಯಬೇಕೆಂದು ಮುಂದಿನ ನುಡಿಯಲ್ಲಿ ಬೇಂದ್ರೆ ವರ್ಣಿಸುತ್ತಾರೆ:

ಸ್ವಾದದ ನಾದದ ಮೋದದ ಒಳಬಸಿರನೆ ಬಗೆದು
ಹುಂಕಾರದ ಒಳನೂಲನು ಮೆಲ್ಲನೆ ಹೊರದೆಗೆದು
ಶಬ್ದಕೆ ಹಾಸಿಗೆಯಾಗಿಹ ತನಿಮೌನದಿ ಮುಗಿದು. | ಏಲಾವನ

ಸ್ವಾದಪೂರ್ಣವಾದ ನಾದದ ಸಂತೋಷದ ಗರ್ಭವನ್ನು ಬಗೆದು, ಅದರಲ್ಲಿರುವ ಹುಂಕಾರವನ್ನು ನೂಲಿನಂತೆ ಎಳೆಯಬೇಕು. ತಕಲಿಯಿಂದ ಅಥವಾ ರಾಟಿಯಿಂದ ನೂಲು ತೆಗೆದ ಅಭ್ಯಾಸ ಬಹುಶಃ ನಮಗಾರಿಗೂ ಇರಲಿಕ್ಕಿಲ್ಲ. ಹಾಗಾದರೆ, ರಾಟಿಯಿಂದ ನೂಲು ತೆಗೆಯುತ್ತಿರುವ ಮಹಾತ್ಮಾ ಗಾಂಧೀಜಿಯವರ ಚಿತ್ರವನ್ನು ನೋಡಿರಿ. ನೂಲು ತೆಗೆಯುವದರಲ್ಲಿ ಅವರು ತನ್ಮಯರಾಗಿರುವದನ್ನು ಕಾಣುವಿರಿ. ಅಂತಹ ತನ್ಮಯತೆ ಹಾಗು ತಾಳ್ಮೆಯಿಂದ ಈ ಸ್ವರದ ಒಳನೂಲನ್ನು ಮೆಲ್ಲನೆ ಹೊರತೆಗೆಯಬೇಕಾಗುತ್ತದೆ. ಆ ಸ್ವರವು ಕೊನೆಗೊಳ್ಳುವದುತನಿಮೌನದಲ್ಲಿ’ (=sweet silence). ಈ ತನಿಮೌನವೇ ಮುಂದೆ ಮೂಡುವ ಶಬ್ದಕ್ಕೆ ಹಾಸಿಗೆ.

(ಈ ಸಂದರ್ಭದಲ್ಲಿ ಬೇಂದ್ರೆಯವರು ತಮ್ಮ ಅತ್ಯಂತ ಪ್ರೀತಿಯ ಗೆಳೆಯರಾದ ಮಧುರಚೆನ್ನರನ್ನು (=ಹಲಸಂಗಿ ಚೆನ್ನಮಲ್ಲಪ್ಪನವರನ್ನು) ಉದ್ದೇಶಿಸಿ ಬರೆದ ಕವನವೊಂದನ್ನು ನೆನಸಿಕೊಳ್ಳಬಹುದು:

ಮಾತಾಡೊ ಮಾತಾಡೊ ಲಿಂಗವೇ |ನೀ|
ಮಾತಾಡಲೊಲ್ಲೇಕೊ ಲಿಂಗವೇ ||
ಮಾತಿನ ತಾಯಾದ ಮೌನದ ಬಸುರಲಿ |
ಹೂತೆಯೊ ಹೇ ಚೆನ್ನಲಿಂಗವೇ .” )

ಆದುದರಿಂದ ಈ ತನಿಮೌನದ ಶಯ್ಯೆಯಲ್ಲಿ ಪವಡಿಸಿರುವ ಗೀತೆಯನ್ನು ಏಳಿಸುವದು ಹೇಗೆ? ಆ ಕ್ರಿಯೆ ಮುಂದಿನ ನುಡಿಯಲ್ಲಿದೆ:

ಯಾಳದ ಜತಿ, ಏಳೆಯ ಗತಿ ಏಳೇಳೇಳೆಂದು
ಎಬ್ಬಿಸಿ, ಮಬ್ಬನು ಚೆದರಿಸಿ ಬಾಳ್ ಬಾಳ್ ಬಾಳೆಂದು
ತಂತಿಯ ತಾಳಕೆ ಮಿಡಿದಿರೆ, ಎಲ್ಲಾಯಿತು ಒಂದು. | ಏಲಾವನ

ಯಾಳಅಂದರೆ ಒಂದು ಬಗೆಯ ವಾದ್ಯ. ಈ ವಾದ್ಯದ ಜೊತೆಗೆ ಏಳೆಯ ಅಂದರೆ ಈ ತ್ರಿಪದಿ ಛಂದಸ್ಸಿನ ಗೀತೆಯ ಗತಿಯನ್ನು ಸೇರಿಸುವದು ಒಂದು ಅರ್ಥ. ಸಂಗೀತದಲ್ಲಿ ಜತಿಎನ್ನುವದಕ್ಕೆ ಒಂದು ವಿಶಿಷ್ಟ ಅರ್ಥವಿದೆ. ಆ ಜತಿಯಲ್ಲಿ ಏಳಾ ಛಂದಸ್ಸಿನ ಗತಿಯನ್ನು (=ಸಂಚಲನ ವೇಗವನ್ನು) ಸೇರಿಸುವದು ಇನ್ನೊಂದು ಅರ್ಥ. ಈ ಜತಿ-ಗತಿ ಸೇರಿದಾಗ , ಅದು ಹೇಳುವದು : ಏಳ್, ಏಳ್ ಎಂದು. ಅಲ್ಲದೆ ಇದು ಸಪ್ತಸ್ವರಗಳನ್ನೂ ಸೂಚಿಸಬಹುದು. ಈ ರೀತಿಯಾಗಿ ಸ್ವರಗಳನ್ನು ಎಬ್ಬಿಸಿ, ಕೇಳುಗರ ಮಬ್ಬನ್ನು ಚೆದುರಿಸಿ, ಅವರಿಗೆ ಬಾಳ್ ಎನ್ನುವ ಒಸಗೆಯನ್ನು ಕೊಡುವದು ಈ ಏಲಾಗೀತೆ. ಈ ಸಂದೇಶದೊಡನೆ, ಈ ಗೀತೆ ಈ ರೀತಿಯಾಗಿ ಹೊಮ್ಮುತ್ತಿರಲು ಎಲ್ಲಾಯಿತು ಒಂದು” ! ಅಂದರೆ, ಬನವಾಸಿಯ ಗೆಳೆಯ ಗೆಳೆತಿಯರು, ಅಲ್ಲಿಯ ಹರಿಣ ಮಿಥುನಗಳು, ಕಿನ್ನರ ಲೋಕದ ಕಿನ್ನರಕಿನ್ನರಿಯರು ,ದೇವಲೋಕದಲ್ಲಿರುವ ಸರಸ್ವತಿಯ ವೀಣೆ, ವೀಣಾನಾದ , ನಾದದ ಸುಖ ಎಲ್ಲವೂ ಒಂದಾದವು ಎನ್ನುತ್ತಾರೆ ಬೇಂದ್ರೆ. (Where music and moonlight and feeling are one...Shelly)

ಕೊನೆಯ ನುಡಿ ಹೀಗಿದೆ:

ಏಳೆಯ ಬಸಿರೊಳು ಮಲಗಿದ ಯಾವುದೊ ಗತಿ ಚಿತ್ರ
ದನಿ ಪಡೆದಿತು, ತಿಳಿದೆದ್ದಿತು ಕಣ್ಬಡೆದು ವಿಚಿತ್ರ
ಆಕ್ಷಣವನು ಈಕ್ಷಣವನು ಮಾಡಿತು ಸುಪವಿತ್ರ. | ಏಲಾವನ

ಈ ರೀತಿಯಾಗಿ ಏಲಾಛಂದಸ್ಸಿನ ಬಗೆಗಿರುವ ಗೀತೆಯೊಂದು ಬೇಂದ್ರೆಯವರ ಮನದಲ್ಲಿ ಮೂಡಿ ದನಿ ಪಡೆದು, ಕಣ್ಣು ಪಡೆದು ಕವನವಾಗಿದ್ದು ಒಂದು ವಿಚಿತ್ರ ಅನುಭವವೆನ್ನುತ್ತಾರೆ ಬೇಂದ್ರೆ.

‘ಏಲಾ’ ಇದು ಪೂರ್ವಕನ್ನಡದಲ್ಲಿರುವ ಒಂದು ದ್ವಿಪದಿ ಛಂದಸ್ಸು. ಮರಾಠಿಯ ‘ಓವೀ’ ಛಂದಸ್ಸಿಗೂ ಇದೇ ಮೂಲವಾಗಿದೆ. ಈ ಛಂದಸ್ಸು ನಂತರದಲ್ಲಿ ಕನ್ನಡದ ತ್ರಿಪದಿಗೆ ತಾಯಿಯಾಯಿತು ಎಂದು ಹೇಳುತ್ತಾರೆ.
ಕನ್ನಡದ ಒಂದು ಛಂದಸ್ಸನ್ನು ಧ್ಯಾನಿಸಿ, ಅದರ ನಾದವನ್ನು ಮನದಲ್ಲಿ ಅನುಭವಿಸಿ, ವರಕವಿಗಳು ಒಂದು ಗೀತೆಗೆ ಜನ್ಮ ನೀಡಿದ್ದಾರೆ. ಈ ಅನುಭವವು ತಮ್ಮಲ್ಲಿ ಪವಿತ್ರ ಭಾವನೆಯನ್ನು ಮೂಡಿಸಿತು ಎಂದು ಬೇಂದ್ರೆ ಹೇಳುತ್ತಾರೆ.
ಆಶ್ಚರ್ಯವಲ್ಲ ; ನಾದ-ಕಾವ್ಯ-ಯೋಗಿಗೆ ನಾದವೇ ಅನುಭಾವವಾಗುತ್ತದೆ.

15 comments:

Unknown said...

ಸುನಾಥರೆ,
ನೀವು ಬೇಂದ್ರೆಯವರ ಕವನಗಳ ಬಗೆಗೆ ಬರೆಯುತ್ತಿರುವ ವಿಸ್ತಾರವಾದ ವಿವರಣೆಗಳನ್ನು ಓದಿತ್ತಿರುವೆ. ನನಗೆನಿಸುವದು ಏನೆಂದರೆ:-h ಸ್ವಚ್ಛಂದವಾಗಿ ಕವನವನ್ನು ಹಾಡಿಕೊಳ್ಳುತ್ತಿರುವಾಗ ಸಿಗುವ ಸುಖವು ಹೆಚ್ಚಿನದು.
ನಿಮ್ಮ intellectual exercises ಓದುವಾಗ ಈ ಸಹಜ ಸುಖ ಮಾಯವಾಗಿ ಬಿಡುತ್ತದೆ, ಅಲ್ಲವೆ?

Unknown said...

ಸುನಾಥ,
ನನ್ನ ಅನಿಸಿಕೆ ಏನೇ ಇರಲಿ, ನಿಮ್ಮ ವಿವರಣೆಯಂತೂ ತರ್ಕಬದ್ಧವಾಗಿದೆ. ನನಗೆ ಮೆಚ್ಚಿಗೆಯಾಯಿತು. ಬೇಂದ್ರೆಯವರ 'ಏಲಾಗೀತ'ಅದ್ಭುತವಾಗಿದೆ, ಅವರ ಇತರ ಕವನಗಳಂತೆ.

sunaath said...

ಧನ್ಯವಾದಗಳು, ವನಮಾಲಾ. Intellectual exercise ಮಾಡುತ್ತಿರುವದು ರಸಗ್ರಹಣದ ಸಲುವಾಗಿ, ಅಲ್ಲವೆ? ಈ ರಸಗ್ರಹಣದ ನಂತರ ನೀವು ಕವನವನ್ನು ಸ್ವಚ್ಛಂದವಾಗಿ ಹಾಡಿಕೊಂಡರೆ, ನಿಮಗೆ ಇನ್ನೂ ಹೆಚ್ಚಿನ ಸುಖ ಸಿಕ್ಕೀತು, ಅಲ್ಲವೆ?

ಸುಪ್ತದೀಪ್ತಿ suptadeepti said...

ಕಾಕಾ, ಕವನಗಳನ್ನು ಹಾಡಿಕೊಳ್ಳುವವರು ಗೀತೆಯ ಭಾವಾರ್ಥಗಳ ಬಗ್ಗೆ ಆಡಿದ ಮಾತುಗಳನ್ನು ಕೇಳಿದ್ದೇನೆ. ಅದೇಕೋ ಅವರಿಗೆಲ್ಲ ಗೀತೆಗಳ ನಾದ, ಗೇಯತೆ ಆತ್ಮೀಯವಾಗಿರುತ್ತದೆ, ಭಾವವಲ್ಲ. ಇಲ್ಲಿ ವನಮಾಲಾ ಅವರನ್ನು ಟೀಕೆ ಮಾಡ್ತಿಲ್ಲ (ಹಾಗನ್ನಿಸಿದರೆ ಕ್ಷಮಿಸಿ, ನನ್ನ ಉದ್ದೇಶ ಅದಲ್ಲ). ಆದರೆ ಅವರ ಅಭಿಪ್ರಾಯವನ್ನು ಇನ್ನೂ ಇತರ ಹಾಡುಗಾರರ ಮಾತಲ್ಲಿ ಕೇಳಿದ್ದೇನೆ, ಅಷ್ಟೇ. ಹಾಡನ್ನು ಕವನವಾಗಿಯೂ, ಗೀತೆಯಾಗಿಯೂ ಮೆಚ್ಚುವವರು ಇದ್ದಾರೆ, ಆದ್ರೆ ವಿರಳ.

ರಸಗ್ರಹಣ ಒಂದು intellectual exercise? ಈ ಮಾತು ಮಾತ್ರ ನನಗೇಕೋ ರುಚಿಸಲಿಲ್ಲ (ಅದು ನನ್ನ ವೈಯಕ್ತಿಕ ಅಭಿಪ್ರಾಯ, ಇರಲಿ). ಇಷ್ಟು ಸೊಗಸಾಗಿ, ಅತ್ಯಂತ ತಾಳ್ಮೆ-ಜಾಣ್ಮೆಯಿಂದ, ಕವನಗಳನ್ನು ವಿಶ್ಲೇಷಿಸಿ- ಹಲಸಿನ ಹಣ್ಣನ್ನು ಕತ್ತರಿಸಿ ತೊಳೆ ಬಿಡಿಸಿ ಕೊಟ್ಟಂತೆ- ರಸಪೂರ್ಣವಾಗಿ ಬಡಿಸಿದರೆ ಆಸ್ವಾದಿಸಲು ನಾನು ತಯಾರಿದ್ದೇನೆ. ಅದಕ್ಕಾಗಿ ನಿಮಗೆ ಸದಾ ಋಣಿಯಾಗಿರುತ್ತೇನೆ.

Shubhada said...

ತುಂಬಾ ಧನ್ಯವಾದ ಕಾಕಾ... ಈ ಕವನದ ಕೇವಲ ೪ ನುಡಿಗಳನ್ನು ಮಾತ್ರ ನಮಗೆ ರಾಗ ಹಾಕಿ ಕಲಿಸಿಕೊಟ್ಟಿದ್ದರು. ಕೇವಲ ಅದರ ರಾಗದಿಂದ ಮಾತ್ರ ಆಕರ್ಷಿತಳಾಗಿದ್ದ ನಾನು ಈಗ ಅರ್ಥ ತಿಳಿದ ನಂತರ ಅದರ ಭಾವದಿಂದಲೂ ತುಂಬ ಆಕರ್ಷಿತಳಾಗುತ್ತಿದ್ದೇನೆ. ನನ್ನ ಪ್ರಕಾರ, ಕವನದ ಅರ್ಥ ತಿಳಿಯದೇ ಹಾಡುವ ಸುಖಕ್ಕಿಂತ, ಭಾವಾರ್ಥ ತಿಳಿದ ನಂತರ ಭಾವಪೂರ್ಣವಾಗಿ ಹಾಡುವಾಗ ಆಗುವ ರೋಮಾಂಚನ, ಅನುಭೂತಿ ತುಂಬ ಹೆಚ್ಚಿನದು. ಹಾಗಾಗಿ ನಿಮ್ಮ ಬರಹಗಳು ನನಗಂತೂ ತುಂಬ ತುಂಬ ಉಪಕಾರಿ. ಎಂದಿನಂತೆ ಹಾರ್ದಿಕ ಧನ್ಯವಾದಗಳು ನಿಮಗೆ ಕಾಕಾ.

Shriniwas M Katti said...

ನಮಸ್ಕಾರಗಳು.
ಇಂದೇ ಬೆಳಗಾವಿಗೆ ಮರಳಿದೆ. ಸಪ್ನಾದಲ್ಲಿ ಬೇಂದ್ರೆಯವರ ಉತ್ತರಾಯಣ, ಸಖಿಗೀತ,ನಮನ ಮತ್ತು ಮುಗಿಲಮಲ್ಲಿಗೆ ತೆಗೆದುಕೊಂಡು ಬಂದೆ. ಜೊತೆಗೆ ರನ್ನನ ಗದಾಯುದ್ದವೂ (ಸಂಪಾದಕರು: ತೀ.ನಂ.ಶ್ರೀಕಂಠಯ್ಯ) ದೊರೆಯಿತು. ಸಲ್ಲಾಪದಲ್ಲಿಯ ಎಲ್ಲ ಬರಹಗಳನ್ನೂ ಇಂದು-ನಾಳೆ ಓದುವೆ. ನಂತರ ಬರೆಯುವೆ.

sunaath said...

ಜ್ಯೋತಿ,
ಚರ್ಚೆ ಸ್ವಾರಸ್ಯಕರವಾಗಿದೆ. ವನಮಾಲಾರ ಇಷ್ಟದ ಬಗೆಗೆ ನಾನು
ವ್ಯಾಖ್ಯಾನಿಸಲಾರೆ. ಲೋಕೋ ಭಿನ್ನರುಚಿ:.
ನಿನಗೆ ಇಷ್ಟವಾಯ್ತಲ್ಲ, ಅಷ್ಟೇ ನನಗೆ ಸಾಕು. ಧನ್ಯವಾದಗಳು
-ಕಾಕಾ

sunaath said...

ಶುಭದಾ,

"ಕೂಡಿ ಓದಿ ಕೂಡಾಡಿ ಕೂಡಿ ಅರಿಯೋಣ ಕೂಡಿ ಕೂಡಿ
ಕೂಡಿ ತಿಂದು ಕೂಡುಂಡು ಕುಡಿದು ದುಡಿಯೋಣ ಕೂಡಿ ಕೂಡಿ
ಕೂಡಿ ನಡೆದು ಒಡಗೂಡಿ ಪಡೆದು ನುಡಿ ಹೇಳಿ ಕೇಳಿ ಕೂಡಿ
ಕೂಡಿ ಬೆಳೆದು ಬೆಳಗೋಣ ದೇವರೊಲು ಕೂಡಿ ಕೂಡಿ ಕೂಡಿ"

(ಬೇಂದ್ರೆಯವರ ’ಗಂಗಾವತರಣ’ ಕವನಸಂಕಲನದ ಕೊನೆಯ
ಪದ್ಯ.)
-ಕಾಕಾ

08-08 said...

👍

sunaath said...

ಧನ್ಯವಾದಗಳು, ಚಂದ್ರಶೇಖರರೆ.

AK said...

ಬೇಂದ್ರೆ ಅವರ ಸಾಕಷ್ಟು ಕವನಗಳ ಭಾವಾರ್ಥ ತಿಳಿದುಕೊಳ್ಳಬೇಕೆಂದಿರುವೆ. ಸಹಾಯ ಮಾಡುವಿರಾ? ನಿಮ್ಮ ವಿಶ್ಲೇಷಣೆ ಇಷ್ಟವಾಯಿತು. ಧನ್ಯವಾದಗಳು

sunaath said...

AKಯವರೆ, ನಾನು ಯಾವ ರೀತಿಯಲ್ಲಿ ನಿಮಗೆ ಸಹಾಯ ಮಾಡಬಹುದು?

ಸಶೇಷ said...

ನಮಸ್ಕಾರ ಸುನಾಥ ಅವರೆ,
ನಾನು ನಿಮ್ಮ ವ್ಯಾಖ್ಯಾನಗಳನ್ನು ಓದಿ ಪ್ರಭಾವಿತನಾಗಿದ್ದೇನೆ.
ನಿಮ್ಮನ್ನು ಸಂಪರ್ಕಿಸುವ ಬಗೆ ಹೇಗೆ?

sunaath said...

ನಮಸ್ಕಾರ ಸಶೇಷರೆ. ನೀವು ಈ E-mailಗೆ ಬರೆಯಬಹುದು: sunaath@gmail.com

sunaath said...

ಪ್ರಿಯ ಶೇಷಾದ್ರಿಯವರೆ,
ನಿಮ್ಮ ವೆಬ್ ಸೈಟಿಗೆ ಹೋದ ಮೇಲೆ ನೀವು ಯಾರು ಎನ್ನುವುದು ತಿಳಿಯಿತು. ನಿಮ್ಮ ‘ಭಾರತ ಸ್ಟೋರ್ಸ್’ ಚಿತ್ರವು ನಾನು ನೋಡಿ, ಮೆಚ್ಚಿಕೊಂಡ ಚಿತ್ರವಾಗಿದೆ. ನಿಮ್ಮ ಎಲ್ಲ ಚಿತ್ರಗಳನ್ನು ನೋಡಲು ನನಗೆ ಸಾಧ್ಯವಾಗಿಲ್ಲ. ಏಕೆಂದರೆ, ಈ ಚಿತ್ರಗಳು ಟೀವಿಯಲ್ಲಿ ಬಂದಾಗ ಮಾತ್ರ ನಾನು ನೋಡಬಹುದು! ನೀವು ಉತ್ತಮ ಚಿತ್ರದಿಗ್ದರ್ಶಕರಾಗಿದ್ದೀರಿ. ಒಳ್ಳೆಯ ಲೇಖಕರೂ ಹೌದು. ನಿಮಗೆ ಅಭಿನಂದನೆಗಳು. ನಿಮಗೆ ಶುಭಾಶಯಗಳು.
-ಸುದೀಂದ್ರ ದೇಶಪಾಂಡೆ
(sunaath@gmail.com)