Friday, May 30, 2008

ಕನ್ನರು, ಕರರು, ಶಿರರು, ಬಂಕರು, ಅಂಕರು

ಕನ್ನ ಜನಾಂಗದಿಂದಲೇ, ಈ ನಾಡಿಗೆ ಕಂನಾಡು (=ಕರ್ನಾಟಕ) ಎನ್ನುವ ಹೆಸರು ಬಂದಿತು; ಇವರ ನುಡಿಯೇ ಕಂನುಡಿ ಎಂದು ಕೀರ್ತಿಶೇಷ ಶಂ. ಬಾ. ಜೋಶಿಯವರು ಸಿದ್ಧ ಮಾಡಿದ್ದಾರೆ. ‘ಕನ್ನ’ ಪದದಿಂದ ಪ್ರಾರಂಭವಾಗುವ ೧೬೯ ಸ್ಥಳನಾಮಗಳು ಕರ್ನಾಟಕದಲ್ಲಿವೆ. ಥಟ್ಟನೆ ನೆನಪಾಗುವದು ‘ಕನ್ನಂಬಾಡಿ’. ಇತರ ಕೆಲವು ಉದಾಹರಣೆಗಳೆಂದರೆ: ಕಣಕುಂಬಿ, ಕಣಗಲಿ, ಕಣಸೋಗಿ, ಕಣ್ಣಾಟ, ಕನ್ನೂರು, ಕನವಳ್ಳಿ, ಕನಮಡಿ, ಕನ್ನಡಗಿ, ಕನ್ನಸಂದ್ರ, ಖನಗಾವಿ, ಖನ್ನೂರು, ಖನಟ್ಟಿ, ಖನಪೇಠ ಇತ್ಯಾದಿ. ಕರ್ನಾಟಕದ ಹೊರಗೆ, ಮಹಾರಾಷ್ಟ್ರದಲ್ಲಿಯೂ ಸಹ ಕನ್ನಡ, ಕಾನ್ಹೇರಿ ಮೊದಲಾದ ಊರುಗಳಿವೆ.

ಶ್ರೀ ಶ್ರೀನಿವಾಸ ಕಟ್ಟಿಯವರು ಒಂದು ಸ್ವಾರಸ್ಯಕರ ಸಂಗತಿಯನ್ನು ತಿಳಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಕನ್ನಡ ಎನ್ನುವ ಊರಿದೆ. ಇಲ್ಲಿಯ ಮೂಲನಿವಾಸಿಗಳು ಕನ್ನಡವನ್ನು ಮಾತನಾಡುತ್ತಾರೆ. ಆದರೆ, ಅತ್ಯಂತ ಹಿಂದುಳಿದ ಸ್ಥಿತಿಯಲ್ಲಿ ಇರುವ ಈ ಸಮುದಾಯಕ್ಕೆ, ತಾವಾಡುವ ಕನ್ನಡ ಭಾಷೆಯು ಒಂದು ರಾಜ್ಯಭಾಷೆ ಎನ್ನುವದೇ ತಿಳಿಯದು!

ವರಕವಿ ಬೇಂದ್ರೆಯವರು ತಮ್ಮ ಒಂದು ಕವನದಲ್ಲಿ
“ ಕನ್ನಡ ನುಡಿದಿತು ಕನ್ನಡಹಕ್ಕಿ, ಕನ್ನಡವೆಂದಿತು ಆ ಗೋದೆ,
ಕಾವೇರಿಯು ತಂಪಾಯಿತು, ಕನ್ನಡ ಗಾಳಿಯು ಉಸಿರಿತು ಈ ಬೋಧೆ ”
ಎಂದು ಹೇಳುವಾಗ, ಅವರು ಗೋದಾವರಿಯ ದಂಡೆಯ ಮೇಲಿರುವ ಈ ‘ಕನ್ನಡ’ ಗ್ರಾಮವನ್ನು refer ಮಾಡಿದ್ದಾರೆ.

ಉತ್ತರ ಮಹಾರಾಷ್ಟ್ರ, ಗುಜರಾತ ಹಾಗು ರಾಜಸ್ಥಾನವನ್ನು ಒಳಗೊಂಡ ಒಂದು ಪ್ರದೇಶಕ್ಕೆ ಒಂದು ಕಾಲದಲ್ಲಿ
“ ಖಾನದೇಶ “ ಎಂದು ಕರೆಯಲಾಗುತ್ತಿತ್ತು. ಈ ಹೆಸರು ಯಾವದೇ “ಖಾನ್” ನಿಂದಾಗಿ ಬಂದಿದ್ದಲ್ಲ.
‘ಕನ್ನದೇಶ’ ವೇ, ‘ಆರೇ’ರ ಬಾಯಿಯಲ್ಲಿ ‘ಖಾನದೇಶ’ವಾಯಿತು. “ಕನ್ನ”ರು “ಖನ್ನಾ” ಆದರು. ಆದುದರಿಂದ, ಕೆಲವು ವರ್ಷಗಳ ಹಿಂದಿನ superstar ‘ರಾಜೇಶ ಖನ್ನಾ’ ನಿಜವಾಗಿಯೂ ‘ರಾಜೇಶ ಕನ್ನ’, ಅಂದರೆ ಕನ್ನಡಿಗ! ಕನ್ನಡಿಗರೆಲ್ಲರೂ ಇದಕ್ಕಾಗಿ ಹೆಮ್ಮೆಪಟ್ಟುಕೊಳ್ಳಬೇಕೊ ಅಥವಾ ಕನ್ನಡಿಗರ metamorphosisಗಾಗಿ ಮರಗಬೇಕೊ?—ಕನ್ನೇಶ್ವರನೇ ಹೇಳಬೇಕು!

ಅಷ್ಟೇಕೆ, ಯಾವ ದೇವನಿಗೆ ಭಾರತೀಯರೆಲ್ಲರೂ “ತಮ್ ವಂದೇ ಜಗದ್ಗುರುಮ್ ” ಎಂದು ಪೂಜಿಸುತ್ತಾರೊ, ಆ ಕೃಷ್ಣನೇ ‘ಕನ್ಹೈಯಾ(=ಕನ್ನಯ್ಯಾ)’ ಅಂದರೆ ಕನ್ನಡಿಗನಲ್ಲವೇ!
(ಮಲೆನಾಡಿನಲ್ಲಿ ಹಿಂದುಳಿದ ಸಮುದಾಯದ ವ್ಯಕ್ತಿಗಳ ಹೆಸರು ‘ಕನ್ನೇಗೌಡ’ ಇತ್ಯಾದಿಯಾಗಿ ಇರುವದನ್ನು ಗಮನಿಸಿ.)
ಅನೇಕ ಆರ್ಯಭಾಷೆಗಳಲ್ಲಿ ಕನ್ನಡ ಪದಗಳು ಸಿಗುತ್ತವೆ. ಉದಾಹರಣೆಗೆ ಮರಾಠಿಯಲ್ಲಿ ಇರುವ ‘ಚಾಂಗಲಾ(=ಒಳ್ಳೆಯವನು)’ ಈ ಪದದ ಮೂಲವಾದ ಚಾಂಗು ಪದವು ಕನ್ನಡ ಪದ. ಇಂದಿಗೂ ಚಾಂಗದೇವನು ಮಹಾರಾಷ್ಟ್ರದಲ್ಲಿ ಆರಾಧಿಸಲ್ಪಡುತ್ತಿರುವ ಒಬ್ಬ ಯೋಗಿಯಾಗಿದ್ದಾನೆ. ಆದರೆ ಸದ್ಯಕ್ಕೆ ಕನ್ನಡದಿಂದಲೇ ಈ ಶಬ್ದ ಮರೆಯಾಗಿದ್ದರಿಂದ, ಚಾಂಗು ಇದು ಮರಾಠಿ ಪದವೆನ್ನುವ ಭ್ರಮೆಯಲ್ಲಿ ಕನ್ನಡಿಗರಿದ್ದಾರೆ.

ಕನ್ನ ಸಮುದಾಯದಂತೆ, ಐತಿಹಾಸಿಕವಾದ ಮತ್ತೊಂದು ಸಮುದಾಯವೆಂದರೆ ‘ಕರ’ ಎನ್ನುವ ಸಮುದಾಯ. ರಾಮಾಯಣದಲ್ಲಿ ಶ್ರೀರಾಮಚಂದ್ರನಿಂದ ಹತರಾದ ರಾಕ್ಷಸರು ಖರ ಹಾಗು ದೂಷಣರು. ಇಲ್ಲಿ ಖರ ಎಂದರೆ ‘ಕರ’ ಸಮುದಾಯಕ್ಕೆ ಸೇರಿದ ವ್ಯಕ್ತಿ. ಪಶ್ಚಿಮ ಬಂಗಾಲದಲ್ಲಿರುವ ಪ್ರಸಿದ್ಧ ಪಟ್ಟಣ ಖರಗಪುರವು ಈ ಕರ ಸಮುದಾಯದ ಒಂದು ಕಾಲದ ವಾಸಸ್ಥಾನ.

ಕರ ಪದದಿಂದ ಪ್ರಾರಂಭವಾಗುವ ೭೭ ಗ್ರಾಮಗಳು ಹಾಗು ಗರ ಪದದಿಂದ ಪ್ರಾರಂಭವಾಗುವ ೨೮ ಗ್ರಾಮಗಳು, ಒಟ್ಟಿನಲ್ಲಿ ೧೦೫ ಗ್ರಾಮಗಳು ಕರ್ನಾಟಕದಲ್ಲಿವೆ. ಉದಾಹರಣೆಗಳು: ಕರಗುಪ್ಪಿ, ಕರಜಗಿ, ಕರಮಡಿ, ಕರಹರಿ, ಕರಬೈಲು, ಕರಗೂರು, ಕರಗೋಡು, ಕರಸುಳ್ಳಿ, ಕರಚಖೇಡ, ಕರಂಬಾಳ, ಕರಗಾವಿ, ಗರಗ,ಗರಗದಕಟ್ಟೆ, ಗರಗದಪಲ್ಲಿ ಇತ್ಯಾದಿ.

ಕರ್ನಾಟಕದ ಹೊರಗೆ, ಮಹಾರಾಷ್ಟ್ರದಲ್ಲಿ ಕರ್ಹಾಡ(=ಕರಹಾಡ), ಕರ್ಜತ್ತ(=ಕರಜತ್ತ) ಮೊದಲಾದ ಪಟ್ಟಣಗಳಿವೆ.
ಅಷ್ಟೇಕೆ, ಕೊಲ್ಲಾಪುರದ(=ಕೋಲಾಪುರದ), ದೇವಿ ಮಹಾಲಕ್ಷ್ಮಿಗೆ “ ಕರವೀರ ನಿವಾಸಿನಿ” ಎಂದೇ ಕರೆಯಲಾಗುತ್ತಿದೆ.

ಕರ್ನಾಟಕದಲ್ಲಿಯೂ ಸಹ ಕರ ಹಾಗೂ ಕರಕ ಈ ಪದಗಳ ಸಂಬಂಧಿಪದಗಳು ಸಿಗುತ್ತವೆ. ಉದಾಹರಣೆಗೆ: ಕರಕರೆಡ್ಡಿ, ಕರಕಗೋಳ ಇತ್ಯಾದಿ. ಕರಕ ಪದವೇ ಮಾರ್ಪಟ್ಟು ಖರಗವಾಗಿ, ತನ್ನಂತರ “ ಖರ್ಗೆ ” ಆಗಿದೆ. ಕರ್ನಾಟಕದ ಮಾಜಿ ಮಂತ್ರಿ ಖರ್ಗೆಯವರು ಮೂಲತಃ “ಕರಕ”ರು. ಆರೇರ ಬಾಯಿಯಲ್ಲಿ ಅವರು ಖರ್ಗೆ ಆದರು. ಅದರಂತೆ ಈ ಕರಕರು “ಗರಗ” ಸಹ ಆಗಿ ಮಾರ್ಪಟ್ಟಿದ್ದಾರೆ. ಧಾರವಾಡದ ಹತ್ತಿರ ಗರಗ ಎನ್ನುವ ಹಳ್ಳಿಯಿದ್ದು ಅದು ಮೂಲತಃ ಕರಕವೇ ಆಗಿದೆ. ತನ್ನಂತರ ಈ ಗರಗ ಪದದಿಂದ ಘಾರಗಿ ಎನ್ನುವ ಪದ ಉತ್ಪನ್ನವಾಯಿತು. ಘಾರಗಿ ಎನ್ನುವ ಅಡ್ಡ ಹೆಸರಿನ ಅನೇಕರು ಕರ್ನಾಟಕದಲ್ಲಿದ್ದಾರೆ.

ಕರ್ನಾಟಕದ ಹೊರಗೂ ಸಹ ಇಂತಹ ಅನೇಕ ಸ್ಥಳಗಳಿದ್ದು, ಆ ಸ್ಥಳಗಳು ಈ ಆದಿವಾಸಿಗಳ ಒಂದು ಕಾಲದ ನಿವಾಸಗಳೇ ಆಗಿದ್ದವು. ಆರೇರ(=ಆರ್ಯರ) ವಿರುದ್ಧ ನಡೆದ ಹೋರಾಟದಲ್ಲಿ ಸೋತು ಹೋದ ಈ ಸಮುದಾಯಗಳು, ಆರ್ಯಭಾಷೆಯನ್ನು , ಆರ್ಯಸಂಸ್ಕೃತಿಯನ್ನು ಅನುಸರಿಸುವದು, ನಕಲು ಮಾಡುವದು ಅನಿವಾರ್ಯವಾಗಿತ್ತು. ಆದರೆ, ಆರ್ಯರೂ ಸಹ ಅನಾರ್ಯ ಸಂಸ್ಕೃತಿಯ philosophyಯನ್ನು, ಅನೇಕ ರೂಢಿಗಳನ್ನು assimilate ಮಾಡಿಕೊಂಡರು. (ಇದನ್ನೇ ಶಂ.ಬಾ. ಜೋಶಿಯವರು ತಮ್ಮ ಗ್ರಂಥಗಳಲ್ಲಿ ತೋರಿಸಿದ್ದಾರೆ). ಅನೇಕ ಕನ್ನಡ ಪದಗಳನ್ನು ಸಂಸ್ಕೃತವು ಸ್ವೀಕರಿಸಿದೆ. (ಶಂ. ಬಾ. ಜೋಶಿಯವರು ಇಂತಹ ಅನೇಕ ಪದಗಳನ್ನು ತೋರಿಸಿದ್ದಾರೆ. ಉದಾಹರಣೆಗೆ ಕರ ಎನ್ನುವ ಸಂಸ್ಕೃತ ಪದ ಹಾಗು ಪಟ ಎನ್ನುವ ಕನ್ನಡ ಪದಗಳ ಜೋಡಣೆಯಿಂದ ಕರ್ಪಟ(=ಹತ್ತಿ) ಎನ್ನುವ ಪದ ರೂಪಿತವಾಗಿದೆ. ಕರ್ಪಟ=ಕಪಡಾ=ಅರಿವೆ).

ಅರ್ಯ ಸಮುದಾಯಗಳ ಒತ್ತಡ ಹೆಚ್ಚಿದಂತೆ, ಕನ್ನ, ಕರ ಮೊದಲಾದ ಅನೇಕ ಮೂಲ ಸಮುದಾಯಗಳು ದಕ್ಷಿಣಕ್ಕೆ ಗುಳೇ ಹೋದವು. ಭಾಷೆಯಲ್ಲಿ , ಹೆಸರಿನಲ್ಲಿ ತಮ್ಮ ಮೂಲಸ್ವರೂಪವನ್ನು ಉಳಿಸಿಕೊಂಡವು. ಚಲಿಸದೇ ಅಲ್ಲಿಯೇ ಉಳಿದಂತಹ ಜನಭಾಗಗಳು, ಶರಣಾಗತರಾದ ಸಮುದಾಯಗಳು ಆರ್ಯೀಕರಣವನ್ನು ಒಪ್ಪಿಕೊಂಡವು.

ಭಾರತದ ತುಂಬೆಲ್ಲ ದೊರೆಯುವ ಇಂತಹ ಮತ್ತೊಂದು ಜನಾಂಗ ಸೂಚಕ ಸ್ಥಳನಾಮವೆಂದರೆ “ ಶಿರ ”. ಕರ್ನಾಟಕದಲ್ಲಿ ಇಂತಹ ೯೯ ಊರುಗಳಿವೆ. ಉದಾಹರಣೆಗಳು: ಶಿರಸಿ, ಶಿರಾಳ, ಶಿರೋಳ, ಶಿರಹಟ್ಟಿ, ಶಿರಸಂಗಿ, ಶಿರಗುಪ್ಪಿ, ಶಿರಕೋಳ, ಶಿರಗುಂಜಿ, ಶಿರಗೋಡ, ಶಿರಡಾ, ಶಿರಡಿ, ಶಿರಡೋಣ, ಶಿರನಾಳ, ಶಿರಪಟ್ಣ, ಶಿರಬಡಗಿ, ಶಿರಡನಹಳ್ಳಿ, ಶಿರಗೂರ, ಶಿರಾ ಇತ್ಯಾದಿ.

ಉತ್ತರ ಪ್ರದೇಶದಲ್ಲಿ ಚಂಡೌಲ ಜಿಲ್ಲೆಯಲ್ಲಿ ಸಹ ಸಿರಸಿ ಎನ್ನುವ ಒಂದು ಊರಿದೆ. ಆಂಧ್ರಪ್ರದೇಶದಲ್ಲಿ ಸಿರಸಿಲ್ಲ ಎನ್ನುವ ಗ್ರಾಮವಿದೆ. ಮಹಾರಾಷ್ಟ್ರದಲ್ಲಿ ಇರುವ ಶಿರಡಿ ಗ್ರಾಮವಂತೂ ಅಲ್ಲಿ ಆಗಿ ಹೋದ ಸಾಯಿಬಾಬಾರಿಂದಾಗಿ ತುಂಬಾ ಪ್ರಸಿದ್ಧವಾಗಿದೆ. ಮಹಾರಾಷ್ಟ್ರದಲ್ಲಿ ಶಿರಪುಂಜಿ ಎನ್ನುವ ಊರಿದೆ. ಆಸಾಮಿನಲ್ಲಿರುವ ಚಿರಾಪುಂಜಿಯು ಮೂಲತಃ ಶಿರಾಪುಂಜಿಯೆ?—ಎನ್ನುವ ಅನುಮಾನ ಹುಟ್ಟುತ್ತದೆ. ಆದರೆ ಚಿರಾಪುಂಜಿಯ ಮೂಲ ಹೆಸರು ಬೇರೆಯೇ ಆಗಿದ್ದು, ಬ್ರಿಟಿಶ್ ಆಡಳಿತದ ಕಾಲದಲ್ಲಿ ಆ ಗ್ರಾಮಕ್ಕೆ ಚಿರಾಪುಂಜಿ ಎನ್ನುವ ಹೆಸರು ಬಂದಿರುವದರಿಂದ, ಈ ವಿಷಯದಲ್ಲಿ, ಹೆಚ್ಚಿನ ಮಾಹಿತಿ ದೊರೆಯದೆ ಏನನ್ನೂ ಹೇಳಲಾಗುವದಿಲ್ಲ.

ಕರ್ನಾಟಕದಲ್ಲಿ ಇರುವ ೯೯ ಗ್ರಾಮಗಳಲ್ಲಿ ಅತಿ ಹೆಚ್ಚಿನ ಶಿರಸೂಚಕ ಗ್ರಾಮಗಳು ಉತ್ತರ ಕನ್ನಡ ಜಿಲ್ಲೆಯಲ್ಲಿವೆ. (೧೬). ಅನಂತರದ ಸ್ಥಾನ ದೊರೆಯುವದು ಬೆಳಗಾವಿ ಜಿಲ್ಲೆಗೆ. (೧೫).

ಬಂಕ ಸೂಚಕ ೧೭ ಸ್ಥಳನಾಮಗಳು ಮಾತ್ರ ಕರ್ನಾಟಕದಲ್ಲಿವೆ. ಉದಾಹರಣೆಗಳು: ಬಂಕನಕಟ್ಟೆ, ಬಂಕನಹಳ್ಳಿ, ಬಂಕನಾಳ, ಬಂಕನೇರಿ, ಬಂಕಸಾನ, ಬಂಕಾಪುರ, ಬಂಗಣೆ, ಬಂಗವಾಡಿ ಇತ್ಯಾದಿ. ಅದಾಗ್ಯೂ ಈ ಜನಾಂಗಕ್ಕೆ ಬಹಳ ಮಹತ್ವವಿದೆ. ಪಶ್ಚಿಮ ಬಂಗಾಲದಲ್ಲಿ ಮಲ್ಲರ ರಾಜಧಾನಿಯಾದ ಬಿಷ್ಣುಪುರ ಇರುವದು ಬಂಕೂರು ಎನ್ನುವ ಜಿಲ್ಲೆಯಲ್ಲಿ. ಬಂಕೂರು ಎಂದರೆ ಬಂಕರ ಊರು. ಅಂದ ಮೇಲೆ ಬಂಗಾಲ ಎನ್ನುವದು ಬಂಕಾಲ ಅರ್ಥಾತ್ ಬಂಕರ ಹಾಳ ಎನ್ನುವ ಪದದಿಂದ ಬಂದಿರುವದು ಸಹಜವಾಗಿದೆ. ಪೌರಾಣಿಕ ಕಾಲದಲ್ಲಿ ಇಡೀ ಬಂಗಾಲವೇ(=ಪಶ್ಚಿಮ ಬಂಗಾಲ+ಬಂಗ್ಲಾ ದೇಶ) ಈ ಬಂಕರ ಪ್ರದೇಶವಾಗಿದ್ದು, ಆರ್ಯರ ಆಕ್ರಮಣದ ನಂತರ ಅರ್ಯೀಕರಣಗೊಂಡಿತು. ಹೀಗಾಗಿ ಬಂಗ ದೇಶವು ವಂಗ ದೇಶವಾಗಿ ಮಾರ್ಪಾಡುಗೊಂಡಿತು.

ಬಂಕ ಪದದಿಂದ ವಂಗ ಪದ ಬಂದಂತೆಯೇ, ಅಂಕ ಪದದಿಂದ ಅಂಗ ಪದ ಹುಟ್ಟಿಕೊಂಡಿತು. ಮಹಾಭಾರತದಲ್ಲಿ ಬರುವ ಅಂಗದೇಶಕ್ಕೆ ಕರ್ಣನು ರಾಜನಾಗಿದ್ದನು. ಅಂಕ ಪದದಿಂದ ಪ್ರಾರಂಭವಾಗುವ ೬೯ ಊರುಗಳು ಕರ್ನಾಟಕದಲ್ಲಿವೆ. ಉದಾಹರಣೆಗೆ: ಅಂಕೋಲಾ, ಅಂಕಲಗಿ, ಅಂಕನಳ್ಳಿ, ಅಂಕನಾಥಪುರ, ಅಂಕಲಿ, ಅಂಕಾಪುರ, ಅಂಕತಟ್ಟಿ ಇತ್ಯಾದಿ. ಓಡಿಸಾ ರಾಜ್ಯದಲ್ಲಿ ಅಂಗುಲ ಎನ್ನುವ ಪಟ್ಟಣವಿದೆ. ಅಂಗಜನ ಹೆಸರಿನ ಮೂರು ಹಳ್ಳಿಗಳು ಕರ್ನಾಟಕದಲ್ಲಿವೆ. ಅಂಗಜನೆಂದರೆ ವಾನರ ರಾಜನಾದ ವಾಲಿಯ ಮಗನು ಎನ್ನುವದನ್ನು ಗಮನಿಸಬೇಕು.

ಈ ರೀತಿಯಾಗಿ ಭಾರತದ ತುಂಬೆಲ್ಲ ಹರಡಿದ ಅಥವಾ ಚಲಿಸಿದ ಮೂಲಜನಾಂಗಗಳ ಮಾಹಿತಿಯು ಈ ಸ್ಥಳನಾಮಗಳ ಮೂಲಕ ಲಭ್ಯವಾಗುತ್ತದೆ.

8 comments:

hamsanandi said...

ಕನ್ನ ದಿಂದ ಆರಂಭವಾಗುವ ಇನ್ನಷ್ಟು ಊರು/ಕೇರಿಗಳು ಇವೆ: ಕಣಗಾಲ್ (ಪುಟ್ಟಣ್ಣರ ಊರು, ಕನ್ನೇಗೌಡನ ಕೊಪ್ಪಲು (ಮೈಸೂರಿನ ಸರಸ್ವತಿಪುರಂ ನ ಹಳೆಯ ಹೆಸರು)ಮುಂತಾಗಿ.

sunaath said...

ಹಂಸಾನಂದಿಯವರೆ,
ಹೆಚ್ಚಿನ ಮಾಹಿತಿಗಾಗಿ ಧನ್ಯವಾದಗಳು. ಕರ್ನಾಟಕದಲ್ಲಿ ಇರುವ ಸ್ಥಳನಾಮಗಳು ಮಾತ್ರ ನನಗೆ ಲಭ್ಯವಿದ್ದು, ಅವುಗಳಲ್ಲೂ ಸಹ ಅನೇಕ ಸ್ಥಳನಾಮಗಳು ನನ್ನಲ್ಲಿ ಇಲ್ಲ. ಕರ್ನಾಟಕದ ಹೊರಗೂ ಸಹ ಈ ಜನಾಂಗಗಳ, ಈ ಸಮುದಾಯಗಳ ಅನೇಕ ಸ್ಥಳನಾಮಗಳು ಇರಬಹುದು. ಆ ಸ್ಥಳನಾಮಗಳೂ ಸಹ ನಮಗೆ ಲಭ್ಯವಾಗುವಂತಿದ್ದರೆ, ಈ ಆದಿ ಸಮುದಾಯಗಳ ಸಂಫೂರ್ಣ ಚಿತ್ರಣ ದೊರೆಯುತ್ತಿತ್ತು. ಈಗ ಇಷ್ಟಕ್ಕೆ ತೃಪ್ತಿ ಪಡಬೇಕಾಗಿದೆ.

Anonymous said...

Registration- Seminar on the occasion of kannadasaahithya.com 8th year Celebration

Dear blogger,

On the occasion of 8th year celebration of Kannada saahithya.

com we are arranging one day seminar at Christ college.

As seats are limited interested participants are requested to

register at below link.

Please note Registration is compulsory to attend the seminar.

If time permits informal bloggers meet will be held at the same venue after the seminar.

For further details and registration click on below link.

http://saadhaara.com/events/index/english

http://saadhaara.com/events/index/kannada



Please do come and forward the same to your like minded friends

-kannadasaahithya.com balaga

sunaath said...

ರವಿ,Thanx.

Shriniwas M Katti said...

I happened to see a village indication board KANNADAGAON while travelling from Balaghat to Jabalpur in MP. Out of curiocity, I went to that village and met the Panchayat Chairman. To my surprise, he talked to me in Kannada and told me that all the people in Kannadagaon speak Kannada. But the Kannada language is highly influenced by Hindi. They have surnames like Kiranagi, Muddanna, etc. Later my friend GA KInhal.IFS who was based at Balaghat at that time as DFO, also visited the place several times.

sunaath said...

ಕಟ್ಟಿಯವರೆ,
ಮಾಹಿತಿಗಾಗಿ ಧನ್ಯವಾದಗಳು.

Unknown said...

ಶಂ.ಬಾ.ಜೋಶಿಯವರು ಹೇಳಿದ ಹಾಗೆ ಕನ್ನಡ ಬಾಶೆಯ ಹೆಸರಲ್ಲ ಕನ್ನಡನಾಡು ಎನ್ನುವಲ್ಲಿ ದ್ವಿರುಕ್ತಿ ದೋಶವಿದೆ.

ಕನ್ನಡ - ಕನ್ನರ ನಾಡು- ಕಂನಾಡು-ಕಂನಾಟ-ಕರ್ಣಾಟ(ಸಂಸ್ಕೃತ)-ಕರ್ನಾಟ-ಕಾನಡಿ(ಮರಾಟಿ)-ಕರುನಾಡು(ತಮಿಳಿನಲ್ಲಿ) ಎಲ್ಲ ಒಂದೆ.

’ಕನ್ನ’ವೆಂಬ ಜನಾಂಗದ ನಾಡೇ ಕನ್ನಡ.
ಕವಿರಾಜಮಾರ್ಗದಲ್ಲಿ ಕೂಡ ಈ ದೇಶದ ಹೆಸರು ’ಕನ್ನಡ’ ಅಂತಾನೆ ಇದೆ ಹೊರತು ’ಕರ್ನಾಟ’/’ಕರ್ಣಾಟ’ವಲ್ಲ.

’ಕನ್ನ’ರಿಗೆ ಜೋಶಿಯವರು ಹೇಳಿರುವ ನಿಷ್ಪತ್ತಿ ಚೆನ್ನಾಗಿದೆ.
ಕಳ್ಳ=> ಕಣ್ಣ = ಕನ್ನ

ಅತಿ ಪ್ರಾಚೀನ ಕಾಲದಲ್ಲಿ ಕನ್ನರೇ ’ಕಳ್ಳ’ರಾಗಿದ್ದರು. ಇಲ್ಲಿ ’ಕಳ್ಳ’ ತಪ್ಪಾದ ಅರ್ಥ ತಿಳಿಯಬೇಕಿಲ್ಲ.

ಕಳ್ ಎಂದರೆ ದ್ರಾವಿಡ್ ಬಾಶೆಗಳಲ್ಲೆಲ್ಲಾ ’ಹಾಲು’ ಎಂಬ ಅರ್ಥ ವಿದೆ. ಇದರ ಪಳೆಯುಳಿಕೆ ಇನ್ನು ನಮ್ಮ ಬಾಯಲ್ಲಿದೆ. ’ಕಳ್ಳಿ’ಗಿಡ ಅಂದರೆ ಹಾಲು ಉಳ್ಳ ಗಿಡ

ಅಂದರೆ ಕನ್ನಡಿಗರು ಅಂದರೆ ಕನ್ನರು ’ಹಾಲುಮತದವರು’. ದನ ಕಾಯುವುದು -ಹಾಲು ಕರೆಯುವುದು ಇವರೊ ಮೊದಲ ಕಸುಬು. ಆಮೇಲೆ ಉಳುಮೆ/ಸಾಗುವಳಿ ಮಾಡಿ ಒಕ್ಕಲಿಗರಾದರು. ರಟ್ಟಕೂಟರ ಲಾಂಚನದಲ್ಲಿ ಕೂಡ ’ನೇಗಿಲು’ಇರುವುದಕ್ಕೆ ಇದೆ ಕಾರಣ.

ಗೋವಳ--> ಗೌಳ---> ಗೌಡ...
ನಾಡಗೌಡ(ದೇಶಮುಕ).

ಇಂದಿಗೂ ಮಯ್ಸೂರು ಹೊಳಲಿನಲ್ಲಿರುವ ’ಕನ್ನೇಗೌಡನ ಕೊಪ್ಪಲಿನಲ್ಲಿರುವ’ ಹೆಚ್ಚು ಜನರು ಹಸು ಸಾಕುವುದು ಮತ್ತು ಹಾಲು ಕರೆಯುವುದು- ಇದನ್ನೆ ನೆಚ್ಚಿಕೊಂಡಿದ್ದಾರೆ.

ಕನ್ನೇಗೌಡ, ಕನ್ನಪ್ಪ(ಕಲ್ಲಪ್ಪ), ಕನ್ನಯ್ಯ(ಕಲ್ಲಯ್ಯ),ಕಲ್ಲೇಶ ಇವು ಹಲವು ಮಂದಿಯ ಸಾಮಾನ್ಯ ಕನ್ನಡಿಗರ ಹೆಸರುಗಳು.

ಇಂದಿಗೂ ಹಲವು ಹಳ್ಳಿ ಹೆಂಗಸರ ನಾಲಿಗೆಯಲ್ಲಿ ’ಜನ್ಮ’ -> ಜಲ್ಮ ಆದ ಹಾಗೆ, ಕನ್ನ --> ಕಲ್ಲ ಆಗಿರುವುದನ್ನ ಊಹಿಸಬಹುದು.

ಕನ್ನ- ಕನ್ನಡಿಗರ ನಾಡು ಆದ ಹಾಗೆ
ಕಮ್ಮ - ಕಮ್ಮರ ನಾಡು( ತೆಲುಗು)

PaLa said...

ಒಳ್ಳೇ ಮಾಹಿತಿಭರಿತ ಲೇಖನ..ಅಂತೆಯೇ ಪೂರಕವಾದ ಕಾಮೆಂಟುಗಳು.. ಜೋಶಿಯವರ ಪರಿಚಯಕ್ಕೆ ವಂದನೆಗಳು