ಶರೀಫರ ಹಾಡಿನ ಪೂರ್ತಿಪಾಠ ಹೀಗಿದೆ:
ಬಿದ್ದೀಯಬೆ ಮುದುಕಿ
ನೀ ದಿನ ಹೋದಾಕಿ ಬಲು ಜೋಕಿ
ಬಿದ್ದೀಯಬೆ ಮುದುಕಿ ||ಪ||
ಸದ್ಯಕಿದು ಹುಲಗೂರ ಸಂತಿ
ಗದ್ದಲದೊಳಗ ಯಾಕ ನಿಂತಿ
ಬಿದ್ದು ಒದ್ದಾಡಿದರ ಎಬ್ಬಿಸುವರಿಲ್ಲಾ
ಬುದ್ಧಿಗೇಡಿ ಮುದುಕಿ ನೀನು
ಬಿದ್ದೀಯಬೆ ಮುದುಕಿ ||೧||
ಬುಟ್ಟಿಯೊಳು ಪಟ್ಟೇವನಿಟ್ಟಿ
ಉಟ್ಟರದನ ಚೀಲ ಜೋಕಿ
ಕೆಟ್ಟ ಗಂಟಿಚೌಡೇರ ಬಂದು
ಕತ್ತರಿಸಿಕೊಂಡು ಹೋದಾರ ಮುದುಕಿ
ಬಿದ್ದೀಯಬೆ ಮುದುಕಿ ||೨||
ಶಿಶುನಾಳಧೀಶನ ಮುಂದೆ
ಕೊಸರಿ ಕೊಸರಿ ಹೋಗದಿರು
ಹಸನವಿಲ್ಲ ಹರೆಯವು ಮೀರಿದ
ಪಿಸುರು ಪಿಚ್ಚುಗಣ್ಣಿನ ಮುದುಕಿ
ಬಿದ್ದೀಯಬೆ ಮುದುಕಿ ||೩||
ಶರೀಫರು ೧೯ನೆಯ ಶತಮಾನದ ಹಳ್ಳಿಗಾಡಿನಲ್ಲಿ ಬೆಳೆದವರು.
ಅದಾಗಲೇ, ಧಾರವಾಡದ ಸುತ್ತಮುತ್ತಲಿನ ಪ್ರದೇಶವೆಲ್ಲ ಬ್ರಿಟಿಶರ ಆಡಳಿತಕ್ಕೆ ಒಳಪಟ್ಟಿತ್ತು.
ಹತ್ತಿಯ ಗಿರಣಿ, ರೇಲವೇ ಮೊದಲಾದ ಆಧುನಿಕ ಯಾಂತ್ರಿಕ ಸೌಕರ್ಯಗಳು ಆಗತಾನೇ ಪ್ರಾರಂಭವಾಗಿದ್ದವು.
ಶರೀಫರು ಮುಲ್ಕಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಕೆಲಕಾಲ ಶಾಲಾ ಶಿಕ್ಷಕರಾಗಿ ಕೆಲಸ ಮಾಡಿದರು.
ಆದರೆ ಇವರ ಮನೋಧೋರಣೆಗೆ ನೌಕರಿಯು ಒಗ್ಗದ ವಿಷಯವಾಗಿತ್ತು.
ಅದನ್ನೂ ಬಿಟ್ಟುಕೊಟ್ಟು,ಹಳ್ಳಿ ಹಳ್ಳಿ ತಿರುಗುತ್ತ, ಪಾರಮಾರ್ಥಿಕ ಚಿಂತನೆಯಲ್ಲಿಯೇ ಕಾಲ ಕಳೆಯತೊಡಗಿದರು.
ನಿಷ್ಠುರ ಸ್ವಭಾವದ ಶರೀಫರು ತಮಗೆ ಸರಿಕಾಣದ ಯಾವುದನ್ನು ಕಂಡರೂ ತಕ್ಷಣವೇ ಟೀಕಿಸುತ್ತಿದ್ದರು.
ತಮ್ಮ ಸಮಕಾಲೀನರಾದ ನವಲಗುಂದದ ಅಜಾತ ನಾಗಲಿಂಗಸ್ವಾಮಿಗಳು ಪಲ್ಲಕ್ಕಿಯಲ್ಲಿ ಕುಳಿತು ಹೋಗುತ್ತಿದ್ದಾಗ,
“ ಒಂದು ಹೆಣಕೆ ಎರಡು ಹೆಣವು ದಣಿವುದ್ಯಾತಕೆ
ನಾಗಲಿಂಗಯೋಗಿ ತಾನು ತಿರುಗುವದ್ಯಾತಕೆ”
ಎಂದು ಛೇಡಿಸಿದ್ದರು.
ಶರೀಫರ ಹಾಡುಗಳೂ ಸಹ ಹಳ್ಳಿಗರ ಹಾಡುಗಳೇ.
ಅದರಲ್ಲಿ ಶಿಷ್ಟಭಾಷೆಯ ಬಳಕೆ ಇಲ್ಲ.
ಸಹಜಸ್ಫೂರ್ತಿಯಿಂದ, ಹೃದಯದಿಂದ ಹೊರಹೊಮ್ಮಿದ ಹಾಡುಗಳು ಇವು.
ಅನೇಕ ವೇಳೆ ತಮ್ಮ ಕಣ್ಣೆದುರಿನಲ್ಲಿ ಕಂಡ ಘಟನೆಯಿಂದ ಈ ಹಾಡುಗಳು ಪ್ರೇರಿತವಾಗಿವೆ.
ಅಂತಹ ಹಾಡುಗಳಲ್ಲಿ ಒಂದು : “ಬಿದ್ದೀಯಬೆ ಮುದುಕಿ”.
ಹುಲಗೂರು ಇದು ಶಿಗ್ಗಾವಿ ತಾಲೂಕಿನಲ್ಲಿರುವ ಒಂದು ಹಳ್ಳಿ.
ಹಜರತ್ ಶಾ ಖಾದರಿ ಎನ್ನುವ ಸಂತರ ಗೋರಿ ಇಲ್ಲಿದ್ದು ಇದು ಮುಸಲ್ಮಾನರಿಗೆ ಯಾತ್ರಾ ಸ್ಥಳವಾಗಿದೆ.
ಪ್ರತಿ ರವಿವಾರ ಈ ಹಳ್ಳಿಯಲ್ಲಿ ಸಂತೆ ನಡೆಯುತ್ತಿತ್ತು.
ಇಂತಹ ಒಂದು ಸಂತೆಯಲ್ಲಿ ಶರೀಫರು ಒಬ್ಬ ಮುದುಕಿಯನ್ನು ನೋಡುತ್ತಾರೆ.
ವಯಸ್ಸಿಗೆ ಸಹಜವಾದ ಪಕ್ವತೆಯನ್ನು ತೋರದ ರೀತಿಯಲ್ಲಿ ಆ ಮುದುಕಿ ವ್ಯವಹರಿಸುವದನ್ನು ಕಂಡು ಶರೀಫರಿಗೆ ಬೇಸರವಾಗಿರಬಹುದು.
ಆಗ ಶರೀಫರು ಮುದುಕಿಗೆ ಎಚ್ಚರ ಕೊಡುವ ಧಾಟಿಯಲ್ಲಿ ಹಾಡುತ್ತಾರೆ:
“ಬಿದ್ದೀಯಬೇ ಮುದುಕಿ
ನೀ ದಿನ ಹೋದಾಕಿ ಬಲು ಜೋಕಿ!”
“ನೀನು ವಯಸ್ಸಾದ ಮುದುಕಿ, ನೀನು ಬಿದ್ದರೆ ಒಳ್ಳೆ ಪೆಟ್ಟು ತಿನ್ನುತ್ತೀ.
ಏಕೆ ಇಂತಹ ಅಸಹಜ ಹಾರಾಟ ನಿನ್ನದು?
ಮನೆಯಲ್ಲಿ ಕೂಡುವದನ್ನು ಬಿಟ್ಟು ಈ ಸಂತೆಗೆ ಏಕೆ ಬಂದೆ?
ಈ ಗದ್ದಲದಲ್ಲಿ ನೀನು ಬಿದ್ದರೆ ನಿನ್ನನ್ನು ಕೇಳುವವರು ಯಾರೂ ಇಲ್ಲ.
ಎಂತಹ ಬುದ್ಧಿಗೇಡಿ ಮುದುಕಿಯಾಗಿರುವೆ ನೀನು” ಎಂದು ಶರೀಫರು ಅವಳನ್ನು ಬೈಯುತ್ತಾರೆ.
“ಸದ್ಯಕಿದು ಹುಲಗೂರ ಸಂತಿ
ಗದ್ದಲದೊಳಗ ಯಾಕ ನಿಂತಿ
ಬಿದ್ದು ಒದ್ದಾಡಿದರ ಎಬ್ಬಿಸುವರಿಲ್ಲಾ
ಬುದ್ಧಿಗೇಡಿ ಮುದುಕಿ ನೀನು
ಬಿದ್ದೀಯಬೆ ಮುದುಕಿ”
ಈ ಮುದುಕಿಯು ಬಲು ಒಯ್ಯಾರದ ಮುದುಕಿ.
ತನ್ನ ಬುಟ್ಟಿಯಲ್ಲಿ ಜರದ ಪಟ್ಟೆಯ ಸೀರೆಯನ್ನು ಇಟ್ಟುಕೊಂಡು ಬಂದಿದ್ದಾಳೆ.
(ಪಟ್ಟಿ ಎಂದರೆ ರೇಶಮೆ ಸೀರೆ ಎನ್ನುವ ಅರ್ಥವೂ ಇದೆ.)
ಸಂತೆಯಲ್ಲಿ ನೆರೆದವರ ಎದುರಿಗೆ ತನ್ನ ಪಟ್ಟೆಯ ಸೀರೆಯನ್ನು ಉಟ್ಟುಗೊಂಡು ಜಂಭ ಪಡಬೇಕೆನ್ನುವದು ಅವಳ ಆಸೆ.
ಆದರೆ ಇವಳು ಸೀರೆಯನ್ನು ತೆಗೆಯುವ ಹೊತ್ತಿನಲ್ಲಿ ಗಂಟಿಚೌಡೇರು (=ಗಂಟುಕಳ್ಳರು) ಇವಳ ಚೀಲವನ್ನೇ ಕತ್ತರಿಸಬಹುದಲ್ಲ!
ಅದಕ್ಕಾಗಿಯೇ ಶರೀಫರು ಎಚ್ಚರಿಕೆ ನೀಡುತ್ತಾರೆ:
“ಬುಟ್ಟಿಯೊಳು ಪಟ್ಟೇವನಿಟ್ಟಿ
ಉಟ್ಟರದನ ಚೀಲ ಜೋಕಿ
ಕೆಟ್ಟ ಗಂಟಿಚೌಡೇರ ಬಂದು
ಕತ್ತರಿಸಿಕೊಂಡು ಹೋದಾರ ಮುದುಕಿ”
ಶರೀಫರು ಸಂತೆಯ ರೂಪಕವನ್ನು ಸಂಸಾರಕ್ಕೆ ಹೋಲಿಸುತ್ತ , ಈ ಸಂಸಾರಕ್ಕೆ ಬಂದ ಎಲ್ಲ ಜೀವಿಗಳಿಗೂ ಎಚ್ಚರಿಕೆ ನೀಡುತ್ತಿದ್ದಾರೆ.
ಸಂತೆಯಲ್ಲಿ ಹೇಗೊ, ಹಾಗೆಯೇ ಸಂಸಾರದಲ್ಲೂ ಸಹ, ಜೀವಿಯು ಎಚ್ಚರದಿಂದ ಇರಬೇಕು.
ಇಲ್ಲಿ ಜಾರಿ ಬಿದ್ದರೆ ಎಬ್ಬಿಸಲು ಯಾರೂ ಸಹಾಯ ಮಾಡುವದಿಲ್ಲ.
ಪೂರ್ವಜನ್ಮದ ಪುಣ್ಯದಿಂದಾಗಿ(= ತಲೆಯ ಮೇಲಿನ ಬುಟ್ಟಿ), ಈ ಜನ್ಮದಲ್ಲಿ ಇವಳಿಗೆ ಒಂದಿಷ್ಟು ಭೋಗ (=ಪಟ್ಟೆ ಸೀರೆ) ದೊರಕಿದೆ.
ಆದರೆ, ಇಳಿವಯಸ್ಸಾದರೂ ಸಹ ಸಂಸಾರದಲ್ಲಿಯೇ ಮಗ್ನರಾಗಿ, ತನ್ನ ದೊಡ್ಡಸ್ತಿಕೆಯನ್ನೇ ಮೆರೆಯುತ್ತ ಹೋದರೆ, ತಮ್ಮಲ್ಲಿರುವ ಈ ಜನ್ಮದ ಯತ್ಕಿಂಚಿತ್ ಪುಣ್ಯಬಲವೂ(=ಕೈಯಲ್ಲಿಯ ಚೀಲ) ಸಹ ಗಂಟುಕಳ್ಳರ(=ಪುಣ್ಯದಿಂದ ದೊರೆಯುವ ಫಲಗಳು) ಮೂಲಕ ಮಾಯವಾಗುವದು.
ಅದಕ್ಕಾಗಿ, ಮನಸ್ಸನ್ನು ದೇವರಲ್ಲಿ ಇಡಬೇಕೆ ಹೊರತು ಸಂಸಾರದ ವಾಸನೆಗಳಲ್ಲಿ ಅಲ್ಲ.
ಇದನ್ನು ತಿಳಿಯದ ಜೀವಿಯು ಪಿಸರುಗಣ್ಣಿನ, ಪಿಚ್ಚುಗಣ್ಣಿನ ಮುದುಕಿ ಇದ್ದಂತೆ.
ಅವಳಿಗೆ ಹಸನಾದ(=clear) ದೃಷ್ಟಿಯು ಇಲ್ಲ.
ಅಲ್ಲದೆ, ಸಾಧನೆಯನ್ನು ಕೈಕೊಳ್ಳುವ ವಯಸ್ಸೂ ಸಹ ಉಳಿದಿಲ್ಲ.
ಆದುದರಿಂದ, ಮನಸ್ಸನ್ನು ದೇವರ ಕಡೆಗೆ ತಿರುಗಿಸಿ ಜನ್ಮ ಸಾರ್ಥಕ ಮಾಡಿಕೊಳ್ಳುವದೇ ಲೇಸು.
“ಶಿಶುನಾಳಧೀಶನ ಮುಂದೆ
ಕೊಸರಿ ಕೊಸರಿ ಹೋಗದಿರು
ಹಸನವಿಲ್ಲ ಹರೆಯವು ಮೀರಿದ
ಪಿಸುರು ಪಿಚ್ಚುಗಣ್ಣಿನ ಮುದುಕಿ
ಬಿದ್ದೀಯಬೇ ಮುದುಕಿ ||”
ಮುದುಕಿಯ ರೂಪಕದಿಂದ ಶರೀಫರು ನಮಗೆಲ್ಲರಿಗೂ ಎಚ್ಚರಿಕೆಯನ್ನು ನೀಡುತ್ತಿದ್ದಾರೆ.
Saturday, November 29, 2008
Subscribe to:
Post Comments (Atom)
20 comments:
ಸುನಾಥ ಕಾಕಾ,
ಎಂದಿನಂತೆ ಎದುರಿಗೆ ಸರಳವಾಗಿ ಕಾಣುವ ತುಂಬಾ ಅರ್ಥಗರ್ಭಿತ ಕವನವನ್ನು ಸುಲಭವಾಗಿ ವಿಶ್ಲೇಷಿಸಿದ್ದೀರಿ.
ಬಹಳ ಇಷ್ಟವಾಯಿತು.
ನಾವೆಲ್ಲರೂ ಹುಲಗೂರು ಸಂತೆಗೆ ಬಂದ ಮುದುಕ-ಮುದುಕಿಯರೆ ! ಪಟ್ಟೆ ಸೀರೆ ಉಡುವಾಸೆ, ಜನರಿಗೆ ತೋರಿಸುವಾಸೆ, ಕಳೆದೀತೆಂಬ ಭಯದಿಂದ ಉಡದೇ ಬುಟ್ಟಿಯಲ್ಲಟ್ಟದ್ದು! ಉಡುವ ವಯಸ್ಸು ಹೋಗಿದೆ, ಆದರೂ ಉಟ್ಟು ಮೆರೆಯುವಾಸೆ. ಮುದಕಿ ಜೀವ, ಸೀರೆ, ಸಂತೆ, ಐಹಿಕ ಪ್ರಪಂಚ., ಗಂಟಿಚೌಡೆಯರು ಅರಿಷಡ್ವರ್ಗ, ಬುಟ್ಟಿ ಮನಸ್ಸು, ಶಿಸುನಾಳಾಧೀಶ ಪರಮಾತ್ಮ. ಸೀರೆ, ಸಂತೆಯ ಮೋಹ ಬಿಟ್ತರೆ, ಶಿಶುನಾಳಾಧೀಶನ ಕೃಪೆ.
ಬಹಳ ಮಾರ್ಮಿಕವಾಗಿದೆ. ಶರೀಫರ ಅಂತರ್ಧ್ವನಿ ಅರಿಯುವದು ಅತೀ ಸುಲಭೆ ಎನಿಸಿದರೂ ತುಂಬಾ ಕಷ್ಟ.
ಈ ಗೀತೆಯನ್ನು ಸುಮಾರಾಗಿ ಹೀಗೇ ಅರ್ಥೈಸಿಕೊಂಡಿದ್ದೆ. ಆದರೂ ನೀವು ಹೇಳಿದಾಗ ಇನ್ನೂ ಸೊಗಸಾಗಿದೆ ಅನ್ನಿಸ್ತು, ಕಾಕಾ. ಮತ್ತೆ ವಂದನೆಗಳು.
ಧನ್ಯವಾದಗಳು ಸುನಾಥ್ ಅವರೆ.
ನನ್ನ ಮನವಿಯನ್ನು ಇಷ್ಟು ಬೇಗ ಪರಿಗಣಿಸಿ ಪದ್ಯವನ್ನು ಅರ್ಥೈಸಿದ್ದಕ್ಕೆ ಧನ್ಯವಾದಗಳು.
ಚಿತ್ರಾ, ಕಟ್ಟಿಯವರೆ, ಜ್ಯೋತಿ, ಚಂದ್ರಕಾಂತ,
ಶರೀಫರ ಹಾಡುಗಳನ್ನು ಓದುವದು ಹಾಗೂ ಅರಿತುಕೊಳ್ಳುವದರಲ್ಲಿ ಸುಖವಿದೆ, ಅಲ್ಲವೆ?
ಇಂತಹ ಎಚ್ಚರಿಕೆಯ ಗಂಟೆಗೆ ಶರೀಫರಿಗೆ ಹಾಗು ಅದರ ಅರ್ಥವನ್ನು ತಿಳಿಸಿದ ಅಂಕಲ್ ಗೆ ವಂದನೆಗಳು
ಸುಖವೆ ? ಪರಮಸುಖವಿದೆ ! !
ಜಯಶಂಕರ, anonymus,
ಧನ್ಯವಾದಗಳು.
ಸುನಾಥ ಗುರುಗಳ: ಶರೀಫರ ಪದಗಳ ವಿಶ್ಲೇಷಣೆ ಭಾಳ ಛೋಲೊ ಮಾಡ್ಲಿಕತ್ತೀರಿ!
ಗೇಯ ಪದ್ಯಗಳ ಬಗ್ಗೆ ನನ್ನದು ಒಂದು ತಕರಾರು ಅದ. ನನ್ನಂಥ ಅನೇಕರು ಹಾಡುಗಳ ಮಾಧುರ್ಯ ಆನಂದಿಸುವಾಗ ಪದ್ಯದ ಕಡೆ ಗಮನ ಕಡಿಮಿ ಇರತದ. ಹಿಂಗಾಗಿ ಅನೇಕ ಸಲ ಹಾಡು ಪ್ರಾಮುಖ್ಯಕ್ಕ ಬಂದು ಅದರ ಹಿಂದಿನ ಪದ್ಯ ಹಿಂದ ಬೀಳತದ. ನೀವು ಅಂಥ ಅನೇಕ ಪದ್ಯಗಳ ಬಗ್ಗೆ ನಿಮ್ಮ ಬ್ಲಾಗ್ನಾಗ ಮಾತಾಡಿ ನನ್ನಂಥವರಿಗೆ ಅನುಕೂಲ ಮಾಡಿಕೊಡ್ತೀರಿ. ಥ್ಯಾಂಕ್ಸ್!
ಚಕೋರ,
ನೀವು ಹೇಳೋದು ಖರೆ ಅದ. ಒಂದು ಗುಣದ ಕಡೆ ಲಕ್ಷ ಹೋದಾಗ, ಮತ್ತೊಂದು ಗುಣದ ನೆನಪು ಸಹಸಾ ಆಗೂದುಲ್ಲ.
ಸಮಯವಿದ್ದರೆ ನನ್ನ ಬ್ಲಾಗಿನಲ್ಲಿ ಹಾಕಿರುವ ಬೇಡಿಕೆ ಪರಿಶೀಲಿಸುತ್ತೀರಾ?
ಕಾಕಾ,
ಪ್ರಸ್ತುತ ಸ್ಥಿತಿಗೆ ಕನ್ನಡಿ ಹಿಡಿವಂತಿದೆ ಶರೀಫರ ಈ ಹಾಡು. ಧರ್ಮದ ಹೆಸರಿನಲ್ಲಿ ಅಧರ್ಮವನ್ನೇ ಮಾಡುತ್ತಾ ಬೀಗುತ್ತಾ, ನಾನೇ ಭಗವಂತ ಎಂದೇ ತಿಳಿದು ಮೆರೆಯುತ್ತಿರುವ ಕೆಲವು ಮೂರ್ಖರಿಂದಾಗಿ ಇಂದು ಅದೆಷ್ಟೋ ಮುಗ್ಧಜೀವಿಗಳು ಬಲಿಯಾಗುತ್ತಾರೆ. ಎಲ್ಲ ಕ್ರೌರ್ಯಕ್ಕೂ ಮನುಷ್ಯನ ಅಹಂಕಾರವೇ ಕಾರಣ ಅಲ್ಲವೇ?
ತುಂಬಾ ಸರಳವಾಗಿ ಅರ್ಥೈಸಿಕೊಟ್ಟಿರುವುದಕ್ಕೆ ತುಂಬಾ ಧನ್ಯವಾದಗಳು.
ತೇಜಸ್ವಿನಿ,
ಇದೀಗ ಅಸಲ್ ಬಾತ್!
Super meaning, thank you respected sir.
ಧನ್ಯವಾದಗಳು, Anonymus!
ಧನ್ಯವಾದಗಳು ಸರ್
ನಿಮಗೂ ಧನ್ಯವಾದಗಳು, Unknown.
Nice. Thanks
Thank you. madam!
👌
Post a Comment